ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಭಾಷೆ ಹಲವು ಐಕ್ಯಗೊಳಿಸಿದ್ದು ಒಲವು”

“ಭಾಷೆ ಹಲವು ಐಕ್ಯಗೊಳಿಸಿದ್ದು ಒಲವು”

“ಭಾಷೆ ಹಲವು ಐಕ್ಯಗೊಳಿಸಿದ್ದು ಒಲವು”

ಬಿಡುಗಡೆ. ವಿಮೋಚನೆ. ರಕ್ಷಣೆ. ಶತಮಾನಗಳಿಂದ ಜನರು ಜೀವನದ ಹೊರೆಗಳು ಹಾಗೂ ಚಿಂತೆಗಳಿಂದ ಉಪಶಮನಕ್ಕಾಗಿ ಹಾತೊರೆದಿದ್ದಾರೆ. ನಾವು ಜೀವನದ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಲ್ಲೆವು? ಇವುಗಳಿಂದ ಎಂದಾದರೂ ಬಿಡುಗಡೆ ಸಿಗುವುದೋ? ಸಿಗುವುದಾದರೆ, ಹೇಗೆ?

ಇದು, 2006ರ ಮೇ ತಿಂಗಳಲ್ಲಿ ಆರಂಭವಾದ, ಯೆಹೋವನ ಸಾಕ್ಷಿಗಳ ಮೂರು ದಿನಗಳ, “ಬಿಡುಗಡೆಯು ಸಮೀಪವಿದೆ!” ಎಂಬ ಜಿಲ್ಲಾ ಅಧಿವೇಶನಗಳ ಮುಖ್ಯವಿಷಯವಾಗಿತ್ತು.

ಇವುಗಳಲ್ಲಿ ಒಂಬತ್ತು ಅಧಿವೇಶನಗಳು 2006ರ ಜುಲೈ ಮತ್ತು ಆಗಸ್ಟ್‌ ತಿಂಗಳುಗಳಲ್ಲಿ ನಡೆದವು ಮತ್ತು ಬೇರೆಬೇರೆ ದೇಶಗಳಿಂದ ಸಾವಿರಾರು ಪ್ರತಿನಿಧಿಗಳು ಹಾಜರಾದರು. ಇವುಗಳು ನಡೆದಂಥ ಸ್ಥಳಗಳು, ಝೆಕ್‌ ಗಣರಾಜ್ಯದ ರಾಜಧಾನಿ ಪ್ರಾಗ್‌, ಸ್ಲೊವಾಕಿಯದ ರಾಜಧಾನಿ ಬ್ರಾಟಿಸ್ಲಾವಾ, ಪೋಲೆಂಡಿನ ಕೊರ್ಜೊವ್‌ ಮತ್ತು ಪೋಸ್ನಾನ್‌ * ಹಾಗೂ ಜರ್ಮನಿಯ ಡಾರ್ಟ್‌ಮಂಡ್‌, ಫ್ರಾಂಕ್‌ಫರ್ಟ್‌, ಹ್ಯಾಂಬರ್ಗ್‌, ಲೀಬ್‌ ಝಿಗ್‌ ಮತ್ತು ಮ್ಯೂನಿಚ್‌ ಎಂಬ ಐದು ನಗರಗಳಾಗಿದ್ದವು. ಈ ಅಧಿವೇಶನಗಳ ಒಟ್ಟು ಹಾಜರಿಯು 3,13,000ಕ್ಕಿಂತಲೂ ಹೆಚ್ಚಾಗಿತ್ತು.

ಈ ಅಧಿವೇಶನಗಳಲ್ಲಿ ಯಾವ ವಾತಾವರಣವಿತ್ತು? ಈ ಅಧಿವೇಶನಗಳಿಗೆ ವಾರ್ತಾಮಾಧ್ಯಮದವರಿಂದ ಯಾವ ಪ್ರಚಾರ ಸಿಕ್ಕಿತು? ಮತ್ತು ಈ ಅಧಿವೇಶನಗಳ ಬಳಿಕ ಹಾಜರಾದವರಿಗೆ ಹೇಗನಿಸಿತು?

ಸಿದ್ಧತೆಗಳು

ಅವಿಸ್ಮರಣೀಯ ಆಧ್ಯಾತ್ಮಿಕ ಸಂದರ್ಭಗಳಾಗಲಿದ್ದ ಈ ಅಧಿವೇಶನಗಳಿಗಾಗಿ ಸಂದರ್ಶಕರು ಹಾಗೂ ಸ್ಥಳಿಕ ಸಾಕ್ಷಿಗಳು ಕಾತರದಿಂದ ಎದುರುನೋಡುತ್ತಿದ್ದರು. ಅಧಿವೇಶನದ ಪ್ರತಿನಿಧಿಗಳಿಗಾಗಿ ವಸತಿಸೌಕರ್ಯವನ್ನು ಏರ್ಪಡಿಸುವುದೇ ಒಂದು ದೊಡ್ಡ ಕೆಲಸವಾಗಿತ್ತು. ಉದಾಹರಣೆಗಾಗಿ ಪೋಲಿಷ್‌ ಸಾಕ್ಷಿಗಳು ಕೊರ್ಜೊವ್‌ ಅಧಿವೇಶನಕ್ಕಾಗಿ ಪೂರ್ವ ಯೂರೋಪಿನಿಂದ ಬರಲಿದ್ದ ಬಹುಮಟ್ಟಿಗೆ 13,000 ಅತಿಥಿಗಳಿಗಾಗಿ ತಮ್ಮ ಮನೆಗಳಲ್ಲಿ ವಸತಿ ನೀಡಲು ಸಿದ್ಧರಿದ್ದರು. ಈ ಅಧಿವೇಶನಕ್ಕೆ ಅರ್ಮೇನಿಯಾ, ಯುಕ್ರೇನ್‌, ಉಜ್ಬೆಕಿಸ್ಥಾನ್‌, ಎಸ್ಟೊನಿಯಾ, ಕಝಕಿಸ್ತಾನ್‌, ಕಿರ್ಗಿಝ್‌ಸ್ತಾನ್‌, ಜಾರ್ಜಿಯಾ, ತಜಿಕಿಸ್ತಾನ, ತುರ್ಕ್‌ಮೆನಿಸ್ತಾನ್‌, ಬೆಲಾರಸ್‌, ಮೊಲ್ಡೊವಾ, ಯುನೈಟೆಡ್‌ ಸ್ಟೇಟ್ಸ್‌, ರಷ್ಯ, ಲಿಥುವೇನಿಯಾ ಹಾಗೂ ಲ್ಯಾಟ್ವಿಯಾದಿಂದ ಪ್ರತಿನಿಧಿಗಳು ಬಂದರು.

ಅನೇಕರಿಗೆ ಹಲವಾರು ತಿಂಗಳುಗಳ ಮುಂಚೆಯೇ ತಮ್ಮ ಪ್ರವಾಸಕ್ಕಾಗಿ ತಯಾರಿಗಳನ್ನು ಮಾಡಬೇಕಾಯಿತು. ಉದಾಹರಣೆಗಾಗಿ, ಜಪಾನಿನ ಈಶಾನ್ಯಕ್ಕಿರುವ ರಷ್ಯದ ಪರ್ಯಾಯ ದ್ವೀಪವಾದ ಕಮ್‌ಛಟ್ಕಾದಲ್ಲಿ ಪೂರ್ಣ ಸಮಯದ ಶುಶ್ರೂಷಕಿಯಾದ ಟಾಟ್ಯಾನ ಎಂಬವಳು ಒಂದು ವರ್ಷದ ಹಿಂದೆಯೇ ಹಣ ಕೂಡಿಸಿಡಲಾರಂಭಿಸಿದಳು. ಅವಳು 10,500 ಕಿಲೊಮೀಟರ್‌ ದೂರದ ಪ್ರಯಾಣ ಮಾಡಬೇಕಿತ್ತು. ಮೊದಲು ಅವಳು ಐದು ತಾಸುಗಳ ವರೆಗೆ ಪ್ಲೇನ್‌ನಲ್ಲಿ ಪ್ರಯಾಣಿಸಿ, ನಂತರ ಹತ್ತಿರಹತ್ತಿರ ಮೂರು ದಿನಗಳ ರೈಲ್‌ ಪ್ರಯಾಣಮಾಡಿ, ಕೊನೆಗೆ ಬಸ್‌ನಲ್ಲಿ 30 ತಾಸುಗಳ ಪ್ರಯಾಣಮಾಡಿ ಕೊರ್ಜೊವ್‌ ತಲಪಿದಳು.

ಅಧಿವೇಶನ-ಪೂರ್ವ ಕೆಲಸಕ್ಕಾಗಿ ಸಾವಿರಾರು ಜನರು ಸ್ವಯಂಸೇವಕರಾಗಿ ಕೆಲಸಮಾಡಿ, ಆ ಸ್ಟೇಡಿಯಮ್‌ಗಳು ಹಾಗೂ ಅವುಗಳ ಸುತ್ತುಗಟ್ಟುಗಳೂ ಆರಾಧನೆಗಾಗಿ ಕೂಡಿಬರಲು ಯೋಗ್ಯವಾದ ಸ್ಥಳಗಳನ್ನಾಗಿ ಮಾಡಿದರು. (ಧರ್ಮೋಪದೇಶಕಾಂಡ 23:14) ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ, ಲೀಬ್‌ ಝಿಗ್‌ನ ಸ್ಥಳಿಕ ಸಾಕ್ಷಿಗಳು ಅಧಿವೇಶನಕ್ಕಾಗಿ ಉಪಯೋಗಿಸಲಿದ್ದ ಸ್ಟೇಡಿಯಮನ್ನು ಅತ್ಯುತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಿ, ಅಧಿವೇಶನದ ನಂತರವೂ ಹಾಗೆ ಮಾಡುವುದಾಗಿ ಮಾತುಕೊಟ್ಟರು. ಅವರ ಕೆಲಸವನ್ನು ನೋಡಿದ ಸ್ಟೇಡಿಯಮ್‌ ಅಧಿಕಾರಿಗಳು, ಸ್ವಚ್ಛಗೊಳಿಸುವಿಕೆಯ ಖರ್ಚುಗಳಿಗಾಗಿ ಬಾಡಿಗೆಯ ಕಾಂಟ್ರ್ಯಾಕ್ಟ್‌ ಪತ್ರದಲ್ಲಿ ನಿಗದಿಪಡಿಸಿದ ದೊಡ್ಡ ಮೊತ್ತದ ಹಣವನ್ನು ರದ್ದುಗೊಳಿಸಿದರು.

ಆಮಂತ್ರಣಗಳು

ಲೋಕವ್ಯಾಪಕವಾಗಿ ಸಭೆಗಳು, “ಬಿಡುಗಡೆಯು ಸಮೀಪವಿದೆ!” ಜಿಲ್ಲಾ ಅಧಿವೇಶನಗಳಿಗಾಗಿ ವ್ಯಾಪಕ ಪ್ರಚಾರವನ್ನು ಕೊಟ್ಟವು. ವಿಶೇಷ ಅಧಿವೇಶನಗಳಿಗೆ ಹಾಜರಾಗಲಿದ್ದವರಂತೂ ಈ ಕಾರ್ಯಾಚರಣೆಯಲ್ಲಿ ಬಲು ಹುರುಪಿನಿಂದ ತೊಡಗಿದರು. ಅಧಿವೇಶನವು ಆರಂಭವಾಗಲಿದ್ದ ಹಿಂದಿನ ದಿನದ ಸಾಯಂಕಾಲ ಬಹಳ ಹೊತ್ತಿನ ವರೆಗೆ ಅವರು ಅಧಿವೇಶನದ ಬಗ್ಗೆ ಸಾರ್ವಜನಿಕರಿಗೆ ತಿಳಿಯಪಡಿಸಿದರು. ಅವರ ಹುರುಪಿಗೆ ಒಳ್ಳೇ ಪ್ರತಿಫಲ ಸಿಕ್ಕಿತೊ?

ಬೋಗ್ಡಾನ್‌ ಎಂಬ ಹೆಸರಿನ ಪೋಲಿಷ್‌ ಸಾಕ್ಷಿಯೊಬ್ಬರು ಒಬ್ಬ ವೃದ್ಧನನ್ನು ಭೇಟಿಯಾದರು. ಅಧಿವೇಶನಕ್ಕೆ ಬರಲು ತಮಗೆ ಮನಸ್ಸಿದೆ ಆದರೆ 120 ಕಿಲೊಮೀಟರ್‌ ದೂರದಲ್ಲಿರುವ ಕೊರ್ಜೊವ್‌ ವರೆಗೆ ಪ್ರಯಾಣಿಸಲು ತನ್ನ ಕಿರುಮೊತ್ತದ ಪಿಂಚಣಿ ಸಾಲದೆಂದು ಅವರು ಹೇಳಿದರು. ಆದರೆ ಸ್ಥಳಿಕ ಸಭೆಯು ಬಾಡಿಗೆಗೆ ತೆಗೆದುಕೊಂಡಿದ್ದ ಬಸ್‌ನಲ್ಲಿ ಒಂದು ಖಾಲಿ ಸೀಟು ಉಳಿದಿತ್ತು. ಬೊಗ್ಡಾನ್‌ ತಿಳಿಸುವುದು: “ಅವರು ಬೆಳಗ್ಗೆ ಐದುವರೆಗೆ ನಾವು ಹೊರಡುವ ಸ್ಥಳಕ್ಕೆ ಬರುವಲ್ಲಿ, ಹಣಕೊಡದೆ ನಮ್ಮೊಂದಿಗೆ ಪ್ರಯಾಣಿಸಬಹುದೆಂದು ನಾವು ಆ ವೃದ್ಧ ವ್ಯಕ್ತಿಗೆ ಹೇಳಿದೆವು.” ಅವರು ಆ ಆಮಂತ್ರಣವನ್ನು ಸ್ವೀಕರಿಸಿ ಅಧಿವೇಶನಕ್ಕೆ ಹಾಜರಾದರು. ತದನಂತರ ಅವರು ಸಹೋದರರಿಗೆ ಒಂದು ಪತ್ರದಲ್ಲಿ ಬರೆದದ್ದು: “ಈ ಅಧಿವೇಶನಕ್ಕೆ ಹಾಜರಾದ ಬಳಿಕ ನಾನೊಬ್ಬ ಒಳ್ಳೇ ವ್ಯಕ್ತಿಯಾಗಬೇಕೆಂದು ದೃಢನಿಶ್ಚಯಮಾಡಿದ್ದೇನೆ.”

ಪ್ರಾಗ್‌ನಲ್ಲಿ, ಅಧಿವೇಶನಕ್ಕಾಗಿ ಬಂದಿದ್ದ ಬ್ರಿಟನಿನ ಪ್ರತಿನಿಧಿಗಳು ಉಳಿದುಕೊಂಡಿದ್ದ ಹೋಟೇಲಲ್ಲೇ ತಂಗಿದ್ದ ವ್ಯಕ್ತಿಯೊಬ್ಬನು ತಾನು ಅಂದಿನ ಕಾರ್ಯಕ್ರಮಕ್ಕೆ ಹಾಜರಾದೆನೆಂದು ಅವರಿಗೆ ಆ ಸಾಯಂಕಾಲ ಹೇಳಿದನು. ಅವನು ಹಾಜರಾಗುವಂತೆ ಮಾಡಿದ್ದು ಯಾವುದು? ಆ ವ್ಯಕ್ತಿ ಹೇಳಿದ್ದೇನೆಂದರೆ, ಆ ನಗರದ ಬೀದಿಗಳಲ್ಲಿ ತಾನು ಹತ್ತು ಪ್ರಚಾರಕರಿಂದ ಆಮಂತ್ರಣಗಳನ್ನು ಪಡೆದ ಬಳಿಕ ಅಧಿವೇಶನಕ್ಕೆ ಹೋಗಲೇಬೇಕೆಂದು ಮನಸ್ಸಾಯಿತಂತೆ! ಅಧಿವೇಶನದಿಂದಾಗಿ ಅವನು ತುಂಬ ಪ್ರಭಾವಿತನಾದನು ಮತ್ತು ಇನ್ನೂ ಹೆಚ್ಚನ್ನು ಕಲಿಯಲು ಉತ್ಸುಕನಾಗಿದ್ದನು.​—⁠1 ತಿಮೊಥೆಯ 2:​3, 4.

ಪೌಷ್ಠಿಕ ಆಧ್ಯಾತ್ಮಿಕ ಕಾರ್ಯಕ್ರಮ

ಈ ಅಧಿವೇಶನ ಕಾರ್ಯಕ್ರಮದಲ್ಲಿ, ವಿಭಿನ್ನ ಸಮಸ್ಯೆಗಳನ್ನು ಹೇಗೆ ನಿಭಾಯಿಸುವುದೆಂಬುದನ್ನು ಚರ್ಚಿಸಲಾಯಿತು. ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಹುದು ಇಲ್ಲವೇ ತಾಳಿಕೊಳ್ಳಬಹುದೆಂಬುದನ್ನು ನೇರವಾದ ಶಾಸ್ತ್ರಾಧಾರಿತ ಸಲಹೆಯು ವಿವರಿಸಿತು.

ವೃದ್ಧಾಪ್ಯ, ಅನಾರೋಗ್ಯ, ಮರಣದಿಂದಾಗಿ ಪ್ರಿಯ ವ್ಯಕ್ತಿಗಳ ಅಗಲಿಕೆ, ಇಲ್ಲವೇ ಬೇರೆ ವೈಯಕ್ತಿಕ ಸಮಸ್ಯೆಗಳಿಂದ ಬಾಧಿತರಾದ ವ್ಯಕ್ತಿಗಳು ಜೀವನದ ಕುರಿತು ತಮ್ಮ ಹೊರನೋಟವನ್ನು ಉಜ್ವಲಗೊಳಿಸುವಂತೆ ಸಹಾಯಮಾಡಲು ಬೈಬಲಿನಿಂದ ಉತ್ತೇಜನ ಪಡೆದರು. (ಕೀರ್ತನೆ 72:​12-14) ದಂಪತಿಗಳು ಮತ್ತು ಹೆತ್ತವರಿಗೆ, ಸಂತೋಷಭರಿತ ವಿವಾಹಜೀವನವನ್ನು ಆನಂದಿಸುವುದು ಹೇಗೆ ಹಾಗೂ ಮಕ್ಕಳನ್ನು ಯಶಸ್ವಿ ರೀತಿಯಲ್ಲಿ ಬೆಳೆಸುವುದು ಹೇಗೆಂಬುದರ ಕುರಿತಾಗಿ ಬೈಬಲ್‌ ಸಲಹೆ ಕೊಡಲ್ಪಟ್ಟಿತ್ತು. (ಪ್ರಸಂಗಿ 4:12; ಎಫೆಸ 5:​22, 25; ಕೊಲೊಸ್ಸೆ 3:21) ಶಾಲೆಯಲ್ಲಿ ಅಹಿತಕರ ಸಮಾನಸ್ಥರ ಒತ್ತಡಕ್ಕೆ ಒಡ್ಡಲ್ಪಟ್ಟಿರುವ ಆದರೆ ಮನೆ ಹಾಗೂ ಸಭೆಯಲ್ಲಿ ದೇವರ ವಾಕ್ಯದ ವಿವೇಕಯುತ ಸಲಹೆಯನ್ನು ಪಡೆಯುತ್ತಿರುವ ಯುವ ಕ್ರೈಸ್ತರಿಗೆ, ಸಾಮಾಜಿಕ ಒತ್ತಡಗಳನ್ನು ನಿಭಾಯಿಸುವುದು ಹೇಗೆ ಮತ್ತು “ಯೌವನದ ಇಚ್ಛೆಗಳಿಗೆ ದೂರವಾಗಿ”ರುವುದು ಹೇಗೆಂಬುದರ ಕುರಿತು ಪ್ರಾಯೋಗಿಕ ಸಲಹೆ ಸಿಕ್ಕಿತು.​—⁠2 ತಿಮೊಥೆಯ 2:⁠22.

ನಿಜವಾದ ಅಂತಾರಾಷ್ಟ್ರೀಯ ಸಹೋದರತ್ವ

ಯೆಹೋವನ ಸಾಕ್ಷಿಗಳು ತಮ್ಮ ಕೂಟಗಳಲ್ಲಿ ಯಾವಾಗಲೂ ಉತ್ತಮ ಶಾಸ್ತ್ರಾಧಾರಿತ ಮಾರ್ಗದರ್ಶನವನ್ನು ಪಡೆಯುತ್ತಾರೆ. (2 ತಿಮೊಥೆಯ 3:16) ಆದರೆ ಈ ಅಧಿವೇಶನಗಳು, ಅಂತಾರಾಷ್ಟ್ರೀಯ ಅಧಿವೇಶನಗಳಾಗಿದ್ದ ಕಾರಣ ಭಿನ್ನವಾಗಿದ್ದವು. ಈ ಎಲ್ಲ ವಿಶೇಷ ಅಧಿವೇಶನಗಳು ಒಂದೇ ರೀತಿಯ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಹಲವಾರು ಭಾಷೆಗಳಲ್ಲಿ ಪ್ರಸ್ತುತಪಡಿಸಿದವು. ಪ್ರತಿದಿನ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರು ಕೊಟ್ಟ ಭಾಷಣಗಳು ಮತ್ತು ಇತರ ದೇಶಗಳ ಕುರಿತಾಗಿ ನೀಡಿದ ವರದಿಗಳಿಂದಾಗಿ ಕಾರ್ಯಕ್ರಮವು ಹೆಚ್ಚು ಸ್ವಾರಸ್ಯಕರವಾಗಿತ್ತು. ಈ ಭಾಷಣಗಳು ಹಾಗೂ ವರದಿಗಳನ್ನು ಉಪಸ್ಥಿತರಿದ್ದ ಭಿನ್ನ ಭಾಷಾ ಗುಂಪುಗಳ ಪ್ರಯೋಜನಾರ್ಥವಾಗಿ ಭಾಷಾಂತರಿಸಲಾಯಿತು.

ಪ್ರತಿನಿಧಿಗಳು, ಇತರ ದೇಶಗಳಿಂದ ಬಂದಿರುವ ತಮ್ಮ ಸಹೋದರಸಹೋದರಿಯರನ್ನು ಭೇಟಿಯಾಗಲು ಉತ್ಸುಕರಾಗಿದ್ದರು. “ಭಾಷೆಗಳು ಭಿನ್ನಭಿನ್ನವಾಗಿದ್ದರೂ ಅವುಗಳಿಂದಾಗಿ ನಿಜವಾಗಿ ಯಾವುದೇ ಸಮಸ್ಯೆಗಳೇಳಲಿಲ್ಲ. ಅದಕ್ಕೆ ಬದಲಾಗಿ, ಅದು ಈ ಸಂದರ್ಭದ ಆನಂದವನ್ನು ಇನ್ನಷ್ಟು ಹೆಚ್ಚಿಸಿತು. ಅತಿಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಹಿನ್ನಲೆಯವರಾಗಿದ್ದರೂ, ಎಲ್ಲರೂ ಒಂದೇ ನಂಬಿಕೆಯಲ್ಲಿ ಐಕ್ಯರಾಗಿದ್ದರು” ಎಂದು ಒಬ್ಬ ಪ್ರತಿನಿಧಿ ಹೇಳಿದನು. ಮ್ಯೂನಿಚ್‌ ಅಧಿವೇಶನಕ್ಕೆ ಹಾಜರಾದವರು ಇದನ್ನೇ ಹೀಗೆ ಹೇಳಿದರು: “ಭಾಷೆ ಹಲವು ಐಕ್ಯಗೊಳಿಸಿದ್ದು ಒಲವು.” ಹಾಜರಾದವರ ದೇಶ ಮತ್ತು ಭಾಷೆಯು ಯಾವುದೇ ಆಗಿದ್ದರೂ, ತಾವು ನಿಜವಾದ ಸ್ನೇಹಿತರ ಮಧ್ಯೆ, ಆಧ್ಯಾತ್ಮಿಕ ಸಹೋದರಸಹೋದರಿಯರ ಮಧ್ಯೆ ಇದ್ದೇವೆಂದು ಅವರಿಗನಿಸಿತು.​—⁠ಜೆಕರ್ಯ 8:⁠23.

ಉಪಕಾರದ ಅಭಿವ್ಯಕ್ತಿಗಳು

ಪೋಲೆಂಡಿನ ಅಧಿವೇಶನಗಳ ಸಮಯದಲ್ಲಿದ್ದ ಹವಾಮಾನವು, ಪ್ರತಿನಿಧಿಗಳ ಮನೋಭಾವ ಹಾಗೂ ತಾಳ್ಮೆಯನ್ನು ಪರೀಕ್ಷೆಗೊಡ್ಡಿತು. ಹೆಚ್ಚಿನಾಂಶ ಇಡೀ ಅಧಿವೇಶನದಾದ್ಯಂತ ಮಳೆ ಸುರಿಯುತ್ತಾ ಇತ್ತು ಮಾತ್ರವಲ್ಲದೆ ತುಂಬ ಚಳಿಯೂ ಇತ್ತು ಅಂದರೆ ತಾಪಮಾನವು 14 ಡಿಗ್ರಿ ಸೆಲ್ಸಿಯಸ್‌ ಆಗಿತ್ತು. ಯುನೈಟೆಡ್‌ ಸ್ಟೇಟ್ಸ್‌ನಿಂದ ಬಂದಿದ್ದ ಸಹೋದರನೊಬ್ಬನು ಹೇಳಿದ್ದು: “ನಾನು ಈ ವರೆಗೆ ಹಾಜರಾಗಿರುವ ಯಾವುದೇ ಅಧಿವೇಶನದಲ್ಲಿ ಹವಾಮಾನ ಇಷ್ಟು ಪ್ರತಿಕೂಲವಾಗಿರಲಿಲ್ಲ ಮತ್ತು ತಾಪಮಾನವು ಇಷ್ಟು ಕಡಿಮೆ ಆಗಿರಲಿಲ್ಲ. ನನಗೆ ಅಧಿವೇಶನದ ಕಾರ್ಯಕ್ರಮವನ್ನು ಹೆಚ್ಚು ಅರ್ಥಮಾಡಿಕೊಳ್ಳಲಾಗಲಿಲ್ಲ. ಆದರೆ ಆ ಅಧಿವೇಶನದಲ್ಲಿದ್ದ ಅಮೋಘವಾದ ಅಂತಾರಾಷ್ಟ್ರೀಯ ವಾತಾವರಣ, ವಿಸ್ಮಯಕರ ಆತ್ಮ ಹಾಗೂ ನಮಗೆ ತೋರಿಸಲಾದ ಅಪೂರ್ವ ಅತಿಥಿಸತ್ಕಾರವು ಎಲ್ಲ ಅನಾನುಕೂಲತೆಯನ್ನು ಸರಿದೂಗಿಸಿತು. ಈ ಅಧಿವೇಶನ ಅವಿಸ್ಮರಣೀಯವಾಗಿತ್ತು!”

ಪೋಲಿಷ್‌ ಭಾಷೆಯನ್ನಾಡುವ ಅಧಿವೇಶನಗಾರರಿಗೆ ಅವಿಸ್ಮರಣೀಯವಾದ ಇನ್ನೊಂದು ವಿಷಯವು, ಪೋಲಿಷ್‌ ಭಾಷೆಯಲ್ಲಿ ಶಾಸ್ತ್ರಗಳ ಒಳನೋಟ * ಎಂಬ ಪ್ರಕಾಶನದ ಬಿಡುಗಡೆಯ ಕುರಿತಾದ ಪ್ರಕಟನೆಯೇ ಆಗಿತ್ತು. ಆ ಚಳಿ ಹಾಗೂ ಮಳೆಯಲ್ಲಿ ತಾಳಿಕೊಂಡದ್ದಕ್ಕಾಗಿ ಇದೆಂಥ ಅದ್ಭುತ ಬಹುಮಾನ! “ಬಿಡುಗಡೆಯು ಸಮೀಪವಿದೆ!” ಎಂಬ ಅಧಿವೇಶನಗಳಲ್ಲಿ, ಯೆಹೋವನ ದಿನವನ್ನು ಮನಸ್ಸಿನಲ್ಲಿಟ್ಟವರಾಗಿ ಜೀವಿಸಿರಿ* ಎಂಬ ಹೊಸ ಪ್ರಕಾಶನದ ಬಿಡುಗಡೆಯೂ ತುಂಬ ಹರ್ಷವನ್ನು ತಂದಿತು.

ಹಾಜರಾದ ಅನೇಕರು ಇನ್ನೂ ಹಲವಾರು ಕಾರಣಗಳಿಗೋಸ್ಕರ ಆ ಅಧಿವೇಶನವನ್ನು ಎಂದಿಗೂ ಮರೆಯದಿರುವರು. ಬೇರೆ ದೇಶದಿಂದ ಬಂದಿದ್ದ ಪ್ರತಿನಿಧಿಗಳ ಒಂದು ಬಸ್‌ ಗುಂಪಿನವರೊಂದಿಗಿರಲು ಸ್ವಯಂಸೇವಕರಾಗಿ ಮುಂದೆಬಂದ ಕ್ರಿಸ್ಟೀನಾ ಎಂಬ ಝೆಕ್‌ ಸಹೋದರಿ ಜ್ಞಾಪಿಸಿಕೊಳ್ಳುವುದು: “ನಾವು ಬೀಳ್ಕೊಡುತ್ತಿದ್ದಾಗ ಒಬ್ಬ ಸಹೋದರಿಯು ನನ್ನನ್ನು ಪಕ್ಕಕ್ಕೆ ಕರಕೊಂಡು, ತಬ್ಬಿಕೊಂಡು ಹೇಳಿದ್ದು: ‘ನನ್ನನ್ನು ತುಂಬ ಅಕ್ಕರೆಯಿಂದ ನೋಡಿಕೊಂಡಿದ್ದೀರಿ! ನಾವು ಕೂತುಕೊಂಡಿದ್ದಲ್ಲಿಗೇ ನಮಗೆ ಊಟ ಮತ್ತು ಕುಡಿಯುವ ನೀರನ್ನೂ ತಂದುಕೊಟ್ಟಿರಿ. ನಿಮ್ಮ ಸ್ವತ್ಯಾಗದ ಪ್ರೀತಿಗಾಗಿ ತುಂಬ ಉಪಕಾರಗಳು.’” ಈ ಸಹೋದರಿಯು, ವಿದೇಶದಿಂದ ಬಂದ ಪ್ರತಿನಿಧಿಗಳ ಮಧ್ಯಾಹ್ನದೂಟಕ್ಕಾಗಿ ಮಾಡಲಾಗಿದ್ದ ಏರ್ಪಾಡಿನ ಕುರಿತಾಗಿ ಹೇಳುತ್ತಿದ್ದರು. ಒಬ್ಬ ಸಹೋದರರು ವಿವರಿಸಿದ್ದು: “ಈ ಕೆಲಸದಲ್ಲಿ ನಮಗೆ ಯಾವ ಅನುಭವವೂ ಇರಲಿಲ್ಲ. ಪ್ರತಿದಿನ ಸುಮಾರು 6,500 ಮಧ್ಯಾಹ್ನದೂಟಗಳನ್ನು ಪ್ರತಿನಿಧಿಗಳಿಗೆ ತಲಪಿಸಬೇಕಾಗಿತ್ತು. ಮಕ್ಕಳು ಸೇರಿ, ಅನೇಕರು ಸಹಾಯಮಾಡಲು ಸ್ವಯಂಸೇವಕರಾಗಿ ಮುಂದೆ ಬಂದದ್ದನ್ನು ನೋಡುವುದು ಮನಮುಟ್ಟುವ ದೃಶ್ಯವಾಗಿತ್ತು.”

ಅಧಿವೇಶನಕ್ಕಾಗಿ ಯುಕ್ರೇನಿನಿಂದ ಕೊರ್ಜೊವ್‌ಗೆ ಪ್ರಯಾಣಿಸಿದ ಒಬ್ಬ ಸಹೋದರಿ ಅಂದದ್ದು: “ನಮ್ಮ ಜೊತೆ ವಿಶ್ವಾಸಿಗಳು ತೋರಿಸಿದ ಪ್ರೀತಿ, ಆರೈಕೆ ಹಾಗೂ ಉದಾರತೆಯಿಂದ ನಮ್ಮ ಹೃದಯ ತುಂಬಿ ಬರುತ್ತದೆ. ಉಪಕಾರ ಹೇಳಲು ನಮಗೆ ಮಾತೇ ಸಾಲದು.” ಫಿನ್‌ಲೆಂಡ್‌ನಿಂದ ಬಂದಿದ್ದ ಎಂಟು ವರ್ಷ ಪ್ರಾಯದ ಆನ್ನಿಕಾ ಎಂಬವಳು, ಯೆಹೋವನ ಸಾಕ್ಷಿಗಳ ಪೋಲೆಂಡಿನ ಬ್ರಾಂಚ್‌ ಆಫೀಸಿಗೆ ಹೀಗೆ ಪತ್ರ ಬರೆದಳು: “ಈ ಅಧಿವೇಶನವು ನಾನು ಊಹಿಸಿದ್ದಕ್ಕಿಂತಲೂ ಎಷ್ಟೋ ಹೆಚ್ಚು ಅದ್ಭುತವಾಗಿತ್ತು. ಯೆಹೋವನ ಸಂಘಟನೆಯ ಭಾಗವಾಗಿರುವುದಕ್ಕಿಂತ ಮಿಗಿಲಾದದ್ದೇನೂ ಇಲ್ಲ! ಇದರಿಂದಾಗಿ ನಮಗೆ ಇಡೀ ಲೋಕದಲ್ಲಿ ಸ್ನೇಹಿತರಿರುತ್ತಾರೆ.”​—⁠ಕೀರ್ತನೆ 133:⁠1.

ಪ್ರೇಕ್ಷಕರ ಹೇಳಿಕೆಗಳು

ಅಧಿವೇಶನಗಳ ಮುಂಚೆ ಕೆಲವು ಪ್ರತಿನಿಧಿಗಳಿಗಾಗಿ ಪ್ರೇಕ್ಷಣೀಯ ಸ್ಥಳಗಳ ಪ್ರವಾಸಗಳನ್ನು ಏರ್ಪಡಿಸಲಾಯಿತು. ಬವೇರಿಯದ ಗ್ರಾಮ ಪ್ರದೇಶದಲ್ಲಿ, ಸಂದರ್ಶಕರು ದಾರಿಯಲ್ಲಿದ್ದ ರಾಜ್ಯ ಸಭಾಗೃಹಗಳನ್ನು ನೋಡಲು ಇಳಿದಾಗ ಸ್ಥಳಿಕ ಸಾಕ್ಷಿಗಳು ಅವರನ್ನು ಸ್ವಾಗತಿಸಿದರು. ಸಹೋದರ ಪ್ರೀತಿಯ ಈ ಅಭಿವ್ಯಕ್ತಿಯಿಂದಾಗಿ, ಯೆಹೋವನ ಸಾಕ್ಷಿಯಾಗಿಲ್ಲದ ಒಬ್ಬ ಗೈಡ್‌ ತುಂಬ ಪ್ರಭಾವಿತಳಾದಳು. ಅವಳ ಪ್ರವಾಸ ತಂಡದಲ್ಲಿದ್ದ ಒಬ್ಬ ಅಧಿವೇಶನ-ಪ್ರತಿನಿಧಿ ಹೇಳಿದ್ದು: “ಬಸ್ಸಿನಲ್ಲಿ ನಾವು ಹೋಟೇಲಿಗೆ ಹಿಂದಿರುಗುತ್ತಿದ್ದಾಗ ಆ ಗೈಡ್‌ ಹೇಳಿದ್ದೇನೆಂದರೆ ನಾವು ಬೇರೆ ಪ್ರವಾಸ ತಂಡದವರಿಗಿಂತ ತೀರ ಭಿನ್ನರಾಗಿದ್ದೆವು. ನಮ್ಮ ಉಡುಪು ಸಭ್ಯವಾಗಿತ್ತು ಮತ್ತು ಗುಂಪಿನಲ್ಲಿ ಮುಂದಾಳತ್ವ ವಹಿಸುತ್ತಿದ್ದವರೊಂದಿಗೆ ಎಲ್ಲರೂ ಸಹಕರಿಸುತ್ತಿದ್ದರು. ನಮ್ಮ ಮಧ್ಯೆ ಬೈಗುಳದ ಮಾತುಗಳೂ ಇರಲಿಲ್ಲ, ಗಲಿಬಿಲಿಯೂ ಇರಲಿಲ್ಲ. ಅಪರಿಚಿತರು ಇಷ್ಟು ಬೇಗ ಒಳ್ಳೇ ಸ್ನೇಹಿತರಾಗುವುದನ್ನು ನೋಡಿ ಅವಳು ಚಕಿತಳಾದಳು.”

ಪ್ರಾಗ್‌ ಅಧಿವೇಶನದಲ್ಲಿ ವಾರ್ತಾ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದ ಒಬ್ಬ ಸಹೋದರನು ಹೇಳಿದ್ದು: “ಭಾನುವಾರ ಬೆಳಗ್ಗೆ, ಅಧಿವೇಶನದ ಸ್ಥಳಕ್ಕೆ ನೇಮಿಸಲ್ಪಟ್ಟ ಪೊಲೀಸರ ಮೇಲಧಿಕಾರಿಯು ನಮ್ಮನ್ನು ಭೇಟಿಯಾದರು. ಅಧಿವೇಶನ ಸ್ಥಳದಾದ್ಯಂತ ಇದ್ದ ಪ್ರಶಾಂತತೆಯನ್ನು ನೋಡಿ, ತನಗಿಲ್ಲಿ ಏನೂ ಕೆಲಸವಿಲ್ಲವೆಂದು ಅವರು ಹೇಳಿದರು. ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ಸುತ್ತಲಿನ ನಿವಾಸಿಗಳು ಅವರ ಬಳಿ ವಿಚಾರಿಸಿದ್ದರೆಂದು ಅವರು ಹೇಳಿದರು. ಇದು ಯೆಹೋವನ ಸಾಕ್ಷಿಗಳ ಕಾರ್ಯಕ್ರಮ ಎಂದವರು ಉತ್ತರಿಸಿದಾಗ ಹೆಚ್ಚಿನವರು ಮೂಗು ತಿರುವಿದರೆಂದು ಆ ಅಧಿಕಾರಿ ಹೇಳಿದರು. ಆದರೆ ಅವರು ಆ ಜನರಿಗೆ, ‘ಒಂದುವೇಳೆ ಎಲ್ಲಾ ಜನರು ಸ್ವಲ್ಪಮಟ್ಟಿಗಾದರೂ ಯೆಹೋವನ ಸಾಕ್ಷಿಗಳಂತೆ ನಡೆದುಕೊಳ್ಳುತ್ತಿದ್ದರೆ, ಪೊಲೀಸರ ಆವಶ್ಯಕತೆಯೇ ಇರುತ್ತಿರಲಿಲ್ಲ’ ಎಂದು ಹೇಳಿದರಂತೆ.”

ಅನೇಕರು ಈಗಾಗಲೇ ಬಿಡುಗಡೆಹೊಂದಿದ್ದಾರೆ!

ದೇವರ ವಾಕ್ಯವಾದ ಬೈಬಲ್‌ ವಿಭಿನ್ನ ಸಂಸ್ಕೃತಿಗಳ ನಡುವೆ ಒಂದು ಸೇತುವೆಯಂತಿದ್ದು, ಕ್ರೈಸ್ತರನ್ನು ಶಾಂತಿ ಹಾಗೂ ಐಕ್ಯದಲ್ಲಿ ಒಂದುಗೂಡಿಸುತ್ತದೆ. (ರೋಮಾಪುರ 14:19; ಎಫೆಸ 4:​22-24; ಫಿಲಿಪ್ಪಿ 4:⁠7) ಇದನ್ನು, “ಬಿಡುಗಡೆಯು ಸಮೀಪವಿದೆ!” ಎಂಬ ವಿಶೇಷ ಅಧಿವೇಶನಗಳು ಸಾಬೀತುಪಡಿಸಿದವು. ಈ ಲೋಕವನ್ನು ಬಾಧಿಸುತ್ತಿರುವ ಅನೇಕ ಪಿಡುಗುಗಳಿಂದ ಯೆಹೋವನ ಸಾಕ್ಷಿಗಳು ಈಗಾಗಲೇ ಬಿಡುಗಡೆಹೊಂದಿದ್ದಾರೆ. ಅಸಹನೆ, ಹಿಂಸಾಭಾವ, ವರ್ಣಬೇಧ ನೀತಿ ಎಂಬವು ಸಮಾಜದ ಅನಿಷ್ಟಗಳಲ್ಲಿ ಕೇವಲ ಕೆಲವಾಗಿವೆ. ಆದರೆ ಇವುಗಳೆಲ್ಲವೂ ಅವರ ಮಧ್ಯದಿಂದ ಸಂಪೂರ್ಣವಾಗಿ ಅಳಿಸಿಹಾಕಲ್ಪಟ್ಟಿವೆ. ಇಡೀ ಲೋಕವು ಇಂಥ ಸಮಸ್ಯೆಗಳಿಂದ ಮುಕ್ತವಾಗಿರುವ ಸಮಯಕ್ಕಾಗಿ ಅವರು ಎದುರುನೋಡುತ್ತಾರೆ.

ಈ ಅಧಿವೇಶನಗಳಿಗೆ ಹಾಜರಾದವರು, ಬೇರೆ ದೇಶ ಹಾಗೂ ಸಂಸ್ಕೃತಿಗಳಿಂದ ಬಂದಿರುವ ಸಾಕ್ಷಿಗಳ ಮಧ್ಯೆ ಇರುವ ಐಕ್ಯವನ್ನು ಪ್ರತ್ಯಕ್ಷವಾಗಿ ಅನುಭವಿಸಿದರು. ಈ ಅಧಿವೇಶನಗಳು ಕೊನೆಗೊಂಡಾಗ ಅವರ ಐಕ್ಯವು ತುಂಬ ಸ್ಪಷ್ಟವಾಗಿ ತೋರಿಬಂತು. ಎಲ್ಲರೂ ಚಪ್ಪಾಳೆ ಹೊಡೆಯುತ್ತಿದ್ದರು, ತಾವು ಮಾಡಿದ ಹೊಸ ಸ್ನೇಹಿತರನ್ನು ಅಪ್ಪಿಕೊಳ್ಳುತ್ತಿದ್ದರು ಮತ್ತು ಕೊನೆಯ ಫೋಟೋಗಳನ್ನು ತೆಗೆಯುತ್ತಿದ್ದರು. (1 ಕೊರಿಂಥ 1:10; 1 ಪೇತ್ರ 2:17) ಎಲ್ಲ ಕಷ್ಟಗಳು ಹಾಗೂ ಚಿಂತೆಗಳಿಂದ ಬಿಡುಗಡೆಯು ಹತ್ತಿರವಿದೆಯೆಂಬ ಮನವರಿಕೆ ಹಾಗೂ ಸಂತೋಷದಿಂದ ಅಧಿವೇಶನಕ್ಕೆ ಹಾಜರಾದವರೆಲ್ಲರೂ ತಮ್ಮ ಮನೆಗಳಿಗೂ ಸಭೆಗಳಿಗೂ ಹಿಂದೆರಳಿದರು. ಅವರಲ್ಲಿ, ದೇವರ ‘ಜೀವದಾಯಕ ವಾಕ್ಯದ’ ಮೇಲೆ ಭದ್ರವಾದ ಹಿಡಿತವನ್ನು ಕಾಪಾಡಿಕೊಳ್ಳಬೇಕೆಂಬ ನವೀಕೃತ ದೃಢನಿಶ್ಚಯವಿತ್ತು.​—⁠ಫಿಲಿಪ್ಪಿ 2:​15, 16. (w07 7/1)

[ಪಾದಟಿಪ್ಪಣಿಗಳು]

^ ಪ್ಯಾರ. 4 ಕಾರ್ಯಕ್ರಮದಲ್ಲಿ ಸಂದರ್ಶಕ ಭಾಷಣಕಾರರ ಭಾಗಗಳನ್ನು ಪೋಲೆಂಡಿನಾದ್ಯಂತ ಇತರ ಆರು ಅಧಿವೇಶನ ನಿವೇಶನಗಳಿಗೆ ಮತ್ತು ಸ್ಲೊವಾಕಿಯದಲ್ಲಿನ ಒಂದು ನಿವೇಶನಕ್ಕೆ ಫೋನ್‌ ಮೂಲಕ ರವಾನಿಸಲಾಯಿತು.

^ ಪ್ಯಾರ. 22 ಕನ್ನಡದಲ್ಲಿ ಲಭ್ಯವಿಲ್ಲ.

[ಪುಟ 10ರಲ್ಲಿರುವ ಚೌಕ/ಚಿತ್ರ]

ಭಾಷೆಗಳು ಇಪ್ಪತ್ತಾರಾದರೂ ಮಾತು ಒಂದೇ

ಎಲ್ಲ ಒಂಬತ್ತು ಅಧಿವೇಶನಗಳಲ್ಲಿ ಕಾರ್ಯಕ್ರಮವನ್ನು ಸ್ಥಳಿಕ ಭಾಷೆಯಲ್ಲಿ ಪ್ರಸ್ತುತಪಡಿಸಲಾಯಿತು. ಜರ್ಮನಿಯಲ್ಲಿನ ಅಧಿವೇಶನಗಳಲ್ಲಿ ಭಾಷಣಗಳನ್ನು ಇನ್ನಿತರ 18 ಭಾಷೆಗಳಲ್ಲಿಯೂ ನೀಡಲಾಯಿತು. ಡಾರ್ಟ್‌ಮಂಡ್‌ನಲ್ಲಿ: ಆ್ಯರಬಿಕ್‌, ಫಾರ್ಸಿ, ಪೋರ್ಚುಗೀಸ್‌, ಸ್ಪ್ಯಾನಿಷ್‌ ಹಾಗೂ ರಷ್ಯನ್‌ ಭಾಷೆಗಳು; ಫ್ರಾಂಕ್‌ಫರ್ಟ್‌ನಲ್ಲಿ: ಇಂಗ್ಲಿಷ್‌, ಫ್ರೆಂಚ್‌, ಹಾಗೂ ಸರ್ಬಿಯನ್‌/ಕ್ರೋಏಷ್ಯನ್‌; ಹ್ಯಾಂಬರ್ಗ್‌ನಲ್ಲಿ: ಡ್ಯಾನಿಷ್‌, ಡಚ್‌, ಸ್ವೀಡಿಷ್‌, ಮತ್ತು ತಮಿಳು; ಲೀಬ್‌ ಝಿಗ್‌ನಲ್ಲಿ: ಚೈನೀಸ್‌, ಪೋಲಿಷ್‌, ಮತ್ತು ಟರ್ಕಿಷ್‌; ಮ್ಯೂನಿಚ್‌ನಲ್ಲಿ: ಗ್ರೀಕ್‌, ಇಟ್ಯಾಲಿಯನ್‌ ಹಾಗೂ ಜರ್ಮನ್‌ ಸಂಕೇತ ಭಾಷೆಯಲ್ಲಿ ಭಾಷಣಗಳನ್ನು ಕೊಡಲಾಯಿತು. ಪ್ರಾಗ್‌ ಅಧಿವೇಶನದಲ್ಲಿ ಎಲ್ಲ ಭಾಷಣಗಳನ್ನು ಝೆಕ್‌, ಇಂಗ್ಲಿಷ್‌ ಹಾಗೂ ರಷ್ಯನ್‌ ಭಾಷೆಗಳಲ್ಲಿ ನೀಡಲಾಯಿತು. ಬ್ರಾಟಿಸ್ಲಾವಾದಲ್ಲಿ ಕಾರ್ಯಕ್ರಮವು ಇಂಗ್ಲಿಷ್‌, ಸ್ಲೊವಾಕ್‌, ಸ್ಲೊವಾಕ್‌ ಸನ್ನೆ ಭಾಷೆ ಹಾಗೂ ಹಂಗೇರಿಯನ್‌ ಭಾಷೆಗಳಲ್ಲಿ ಪ್ರಸ್ತುತಪಡಿಸಲಾಯಿತು. ಕೊರ್ಜೊವ್‌ನಲ್ಲಿ ಪೋಲಿಷ್‌, ರಷ್ಯನ್‌, ಯುಕ್ರೇನಿಯನ್‌, ಹಾಗೂ ಪೋಲಿಷ್‌ ಸಂಕೇತ ಭಾಷೆಗಳನ್ನು ಬಳಸಲಾಯಿತು. ಪೋಸ್ನಾನ್‌ನಲ್ಲಿ ಪೋಲಿಷ್‌ ಹಾಗೂ ಫಿನ್ನಿಷ್‌ ಭಾಷೆಗಳಿದ್ದವು.

ಒಟ್ಟು ಇಪ್ಪತ್ತಾರು ಭಾಷೆಗಳು! ನಿಜವಾಗಿಯೂ ಅಧಿವೇಶನಕಾರರ ಭಾಷೆ ಹಲವು ಇದ್ದರೂ ಅವರನ್ನು ಐಕ್ಯಗೊಳಿಸಿದ್ದು ಒಲವು.

[ಪುಟ 9ರಲ್ಲಿರುವ ಚಿತ್ರ]

ಫ್ರಾಂಕ್‌ಫರ್ಟ್‌ನಲ್ಲಿ ಕ್ರೋಏಷಿಯದ ಪ್ರತಿನಿಧಿಗಳು, ತಮ್ಮ ಸ್ವಂತ ಭಾಷೆಯಲ್ಲಿ “ನೂತನ ಲೋಕ ಭಾಷಾಂತರ”ವನ್ನು ಪಡೆದಾಗ ಹರ್ಷಿಸಿದರು