ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ”

“ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ”

“ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ”

“ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.”—ಲೂಕ 12:15.

ಹಣ, ಆಸ್ತಿಪಾಸ್ತಿ, ಪ್ರತಿಷ್ಠೆ, ಕೈತುಂಬ ಸಂಬಳ ತರುವ ಕೆಲಸ, ಕುಟುಂಬ ಮುಂತಾದ ಕೆಲವು ವಿಷಯಗಳು ಯಶಸ್ಸಿನ ಸಂಕೇತ ಅಥವಾ ಸುಭದ್ರ ಭವಿಷ್ಯದ ತಳಪಾಯವೆಂದು ಹೆಚ್ಚಿನ ಜನರು ನೆನಸುತ್ತಾರೆ. ಧನಿಕ ಹಾಗೂ ಬಡ ದೇಶಗಳಲ್ಲಿನ ಹೆಚ್ಚಿನ ಜನರ ಅಭಿರುಚಿಗಳು ಮತ್ತು ಬೆನ್ನಟ್ಟುವಿಕೆಗಳು ಪ್ರಾಪಂಚಿಕ ಲಾಭ ಹಾಗೂ ಯಶಸ್ಸಿನ ಮೇಲೆ ಕೇಂದ್ರಿತವಾಗಿವೆ. ಆಧ್ಯಾತ್ಮಿಕ ವಿಷಯಗಳಲ್ಲಿ ಅವರಿಗೆ ಒಂದುವೇಳೆ ಸ್ವಲ್ಪ ಅಭಿರುಚಿ ಇದ್ದರೂ, ಅದು ಶೀಘ್ರಗತಿಯಲ್ಲಿ ಕಡಿಮೆಯಾಗುತ್ತಾ ಇದೆ.

2 ಇದು ಬೈಬಲ್‌ ಮುಂತಿಳಿಸಿದಂತೆಯೇ ಇದೆ. ಅದು ಹೇಳುವುದು: “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ . . . ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು.” (2 ತಿಮೊಥೆಯ 3:1-5) ಸತ್ಯ ಕ್ರೈಸ್ತರು ಇಂಥ ಜನರ ನಡುವೆ ಯಾವಾಗಲೂ ಜೀವಿಸುತ್ತಿರುವುದರಿಂದ ಆ ರೀತಿಯ ಆಲೋಚನೆ ಮತ್ತು ಜೀವನಶೈಲಿಯನ್ನು ಅನುಸರಿಸುವ ಒತ್ತಡಕ್ಕೆ ಸದಾ ಒಳಗಾಗುತ್ತಾರೆ. ಹೀಗಿರಲಾಗಿ, ಲೋಕವು ‘ನಮ್ಮನ್ನು ಅದರ ಅಚ್ಚಿನೊಳಗೆ ತುರುಕಿಸುವಂತೆ’ ಮಾಡುತ್ತಿರುವ ಪ್ರಯತ್ನಗಳನ್ನು ಎದುರಿಸಲು ನಮಗೆ ಯಾವುದು ನೆರವಾಗಬಲ್ಲದು?—ರೋಮಾಪುರ 12:2, ದಿ ನ್ಯೂ ಟೆಸ್ಟಮೆಂಟ್‌ ಇನ್‌ ಮಾಡರ್ನ್‌ ಇಂಗ್ಲಿಷ್‌, ಜೆ. ಬಿ. ಫಿಲಿಪ್ಸ್‌ರಿಂದ.

3 ಈ ವಿಷಯದ ಕುರಿತು ನಮ್ಮ “ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ” ಯೇಸು ಕ್ರಿಸ್ತನು ನಮಗೆ ಬಲವಾದ ಪಾಠಗಳನ್ನು ಕಲಿಸಿದನು. (ಇಬ್ರಿಯ 12:2) ಒಂದು ಸಂದರ್ಭದಲ್ಲಿ ಯೇಸು ಒಂದು ಗುಂಪಿನೊಂದಿಗೆ ಆಧ್ಯಾತ್ಮಿಕವಾಗಿ ಅಧಿಕ ತಿಳಿವಳಿಕೆಯನ್ನು ನೀಡುವ ಕೆಲವು ವಿಷಯಗಳ ಕುರಿತು ಮಾತಾಡುತ್ತಿದ್ದನು. ಚರ್ಚೆ ನಡೆಯುತ್ತಿದ್ದಾಗ ಒಬ್ಬ ಮನುಷ್ಯನು ಮಧ್ಯೆ ಮಾತಾಡುತ್ತಾ, “ಬೋಧಕನೇ, ತಂದೆಯ ಆಸ್ತಿಯನ್ನು ನನಗೆ ಪಾಲುಮಾಡಿಕೊಡುವಂತೆ ನನ್ನ ಅಣ್ಣನಿಗೆ ಹೇಳು” ಎಂದು ವಿನಂತಿಸಿದನು. ಪ್ರತ್ಯುತ್ತರವಾಗಿ ಯೇಸು ಆ ವ್ಯಕ್ತಿಗೆ ಮತ್ತು ಕಿವಿಗೊಡುತ್ತಿದ್ದ ಎಲ್ಲರಿಗೆ ಗಂಭೀರವಾದ ಕೆಲವು ಬುದ್ಧಿವಾದಗಳನ್ನಿತ್ತನು. ಲೋಭದ ವಿರುದ್ಧವಾಗಿ ಯೇಸು ಪ್ರಬಲವಾದ ಎಚ್ಚರಿಕೆಯನ್ನು ಕೊಟ್ಟನು ಮಾತ್ರವಲ್ಲ ಒಂದು ವಿಚಾರಪ್ರೇರಕ ದೃಷ್ಟಾಂತವನ್ನು ಸಹ ಕೊಟ್ಟು ಆ ಎಚ್ಚರಿಕೆಯನ್ನು ಇನ್ನಷ್ಟು ಬಲಪಡಿಸಿದನು. ಆ ಸಂದರ್ಭದಲ್ಲಿ ಯೇಸು ಹೇಳಿದ ವಿಷಯಕ್ಕೆ ನಾವು ಗಂಭೀರ ಗಮನ ಕೊಟ್ಟು ನಮ್ಮ ಸ್ವಂತ ಜೀವನದಲ್ಲಿ ಅದನ್ನು ಅನ್ವಯಿಸುವ ಮೂಲಕ ಹೇಗೆ ಪ್ರಯೋಜನ ಹೊಂದಬಲ್ಲೆವು ಎಂದು ನೋಡುವುದು ನಮಗೆ ಒಳ್ಳೇದು.—ಲೂಕ 12:13-21.

ಅನುಚಿತವಾದ ಒಂದು ವಿನಂತಿ

4 ಆ ಮನುಷ್ಯನು ಮಧ್ಯೆ ಮಾತಾಡುವ ಮುಂಚೆ, ಯೇಸು ತನ್ನ ಶಿಷ್ಯರಿಗೆ ಹಾಗೂ ಇತರರಿಗೆ ಕಪಟತನದ ವಿಷಯದಲ್ಲಿ ಜಾಗರೂಕರಾಗಿರುವ, ಜನರ ಮುಂದೆ ತಮ್ಮನ್ನು ಮನುಷ್ಯಕುಮಾರನವರೆಂದು ಒಪ್ಪಿಕೊಳ್ಳಲು ಧೈರ್ಯದಿಂದಿರುವ ಮತ್ತು ಪವಿತ್ರಾತ್ಮದ ಸಹಾಯವನ್ನು ಪಡೆದುಕೊಳ್ಳುವ ಕುರಿತು ಮಾತಾಡುತ್ತಿದ್ದನು. (ಲೂಕ 12:1-12) ಶಿಷ್ಯರು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದ್ದ ಮಹತ್ವದ ವಿಷಯಗಳು ಇವಾಗಿದ್ದವು ನಿಶ್ಚಯ. ಅಂಥ ಒಂದು ವಿಚಾರ ಪ್ರೇರಕ ಚರ್ಚೆಯ ನಡುವೆ ಆ ವ್ಯಕ್ತಿ ಥಟ್ಟನೆ ಅಡ್ಡಬಂದು, ಐಹಿಕ ಆಸ್ತಿಪಾಸ್ತಿಯ ಕುರಿತ ತನ್ನ ಕೌಟುಂಬಿಕ ವಿವಾದವನ್ನು ಪರಿಹರಿಸುವಂತೆ ಯೇಸುವನ್ನು ವಿನಂತಿಸಿದ್ದನು. ಆದಾಗ್ಯೂ, ಈ ಘಟನೆಯಿಂದ ನಾವು ಕಲಿಯಬಲ್ಲ ಪ್ರಾಮುಖ್ಯವಾದ ಪಾಠವೊಂದಿದೆ.

5 “ಒಬ್ಬ ವ್ಯಕ್ತಿಯು ಒಂದು ಧಾರ್ಮಿಕ ಉಪದೇಶವನ್ನು ಆಲಿಸುತ್ತಿರುವಾಗ ಮನಸ್ಸಿನಲ್ಲಿ ಏನನ್ನು ಯೋಚಿಸುತ್ತಾನೋ ಅದರಿಂದ ಅವನ ಗುಣಲಕ್ಷಣವು ತಿಳಿದುಬರುತ್ತದೆ” ಎಂದು ಹೇಳಲಾಗುತ್ತದೆ. ಯೇಸು ಗಂಭೀರವಾದ ಆಧ್ಯಾತ್ಮಿಕ ವಿಷಯಗಳ ಕುರಿತು ಮಾತಾಡುತ್ತಿದ್ದಾಗ ಈ ಮನುಷ್ಯನಾದರೋ ನಿರ್ದಿಷ್ಟ ಆರ್ಥಿಕ ಲಾಭ ಗಳಿಸುವುದು ಹೇಗೆಂಬುದರ ಕುರಿತು ಬಹುಶಃ ಯೋಚಿಸುತ್ತಿದ್ದನು. ಆ ಆಸ್ತಿಗೆ ಬಾಧ್ಯಸ್ಥನಾಗುವ ಸಂಬಂಧದಲ್ಲಿ ದೂರುಕೊಡಲು ಅವನಿಗೆ ನ್ಯಾಯಸಮ್ಮತ ಆಧಾರವಿತ್ತೋ ಇಲ್ಲವೋ ಎಂಬುದು ಹೇಳಲ್ಪಟ್ಟಿಲ್ಲ. ಯೇಸುವಿಗಿದ್ದ ಅಧಿಕಾರ ಮತ್ತು ಮಾನವ ವ್ಯವಹಾರಗಳ ಒಳ್ಳೇ ತೀರ್ಪುಗಾರನೆಂಬ ಖ್ಯಾತಿಯನ್ನು ಆ ವ್ಯಕ್ತಿ ತನ್ನ ಲಾಭಕ್ಕಾಗಿ ಉಪಯೋಗಿಸಲು ಪ್ರಯತ್ನಿಸುತ್ತಿದ್ದಿರಬಹುದು. (ಯೆಶಾಯ 11:3, 4; ಮತ್ತಾಯ 22:16) ಕಾರಣವು ಏನೇ ಆಗಿರಲಿ, ಅವನ ಹೃದಯದಾಳದಲ್ಲಿ ಒಂದು ಸಮಸ್ಯೆಯಿತ್ತೆಂದು ಅವನ ವಿನಂತಿಯು ಪ್ರಕಟಪಡಿಸಿತು. ಅದೇನೆಂದರೆ, ಆಧ್ಯಾತ್ಮಿಕ ವಿಷಯಗಳಲ್ಲಿ ಗಣ್ಯತೆಯ ಗಂಭೀರ ಕೊರತೆಯೇ. ಇದು ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಲು ಒಂದು ಉತ್ತಮವಾದ ಕಾರಣವಾಗಿದೆ ಅಲ್ಲವೇ? ಉದಾಹರಣೆಗೆ, ಕ್ರೈಸ್ತ ಕೂಟಗಳಲ್ಲಿ ನಮ್ಮ ಮನಸ್ಸನ್ನು ಗೊತ್ತುಗುರಿಯಿಲ್ಲದೆ ಅಲೆಯುವಂತೆ ಬಿಡುವುದು ಇಲ್ಲವೇ ಕೂಟದ ನಂತರ ಮಾಡಲಿರುವ ಕೆಲಸಗಳ ಕುರಿತು ಯೋಚಿಸುತ್ತಾ ಇರುವುದು ಬಹು ಸುಲಭ. ಅದರ ಬದಲು, ಕೂಟಗಳಲ್ಲಿ ಹೇಳಲ್ಪಡುವ ವಿಷಯಗಳಿಗೆ ನಾವು ಗಮನಕೊಟ್ಟು ಕೇಳಬೇಕು ಮತ್ತು ವೈಯಕ್ತಿಕ ಅನ್ವಯಗಳನ್ನು ಮಾಡುವ ವಿಧಾನಗಳ ಕುರಿತು ಯೋಚಿಸುತ್ತಿರಬೇಕು. ಈ ಮೂಲಕ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರೊಂದಿಗೆ ಮತ್ತು ನಮ್ಮ ಜೊತೆ ಕ್ರೈಸ್ತರೊಂದಿಗೆ ನಮ್ಮ ಸಂಬಂಧವನ್ನು ನಾವು ಉತ್ತಮಗೊಳಿಸಬಲ್ಲೆವು.—ಕೀರ್ತನೆ 22:22; ಮಾರ್ಕ 4:24.

6 ಆ ವಿನಂತಿಯನ್ನು ಮಾಡಲು ಆ ಮನುಷ್ಯನನ್ನು ಏನೇ ಪ್ರೇರಿಸಿರಲಿ ಯೇಸು ಅವನು ವಿನಂತಿಸಿದ ಪ್ರಕಾರ ಕ್ರಿಯೆಗೈಯಲು ಒಪ್ಪಲಿಲ್ಲ. ಬದಲಿಗೆ ಯೇಸು, “ಎಲಾ ಮನುಷ್ಯ, ನನ್ನನ್ನು ನಿಮಗೆ ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇಮಿಸಿದವರಾರು?” ಎಂದು ಕೇಳಿದನು. (ಲೂಕ 12:14) ಹಾಗೆ ಕೇಳಿದ್ದರಲ್ಲಿ ಯೇಸು ಜನರಿಗೆ ಚೆನ್ನಾಗಿ ಪರಿಚಯವಿದ್ದ ಒಂದು ವಿಷಯವನ್ನು ಸೂಚಿಸುತ್ತಿದ್ದನು. ಅದೇನೆಂದರೆ ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಅಂಥ ವಿಷಯಗಳ ಕುರಿತು ನ್ಯಾಯವಿಚಾರಿಸುವುದಕ್ಕಾಗಿ ಎಲ್ಲಾ ಊರುಗಳಲ್ಲಿ ನ್ಯಾಯಾಧಿಪತಿಗಳನ್ನು ನೇಮಿಸಲಾಗಿತ್ತು. (ಧರ್ಮೋಪದೇಶಕಾಂಡ 16:18-20; 21:15-17; ರೂತ 4:1, 2) ಇನ್ನೊಂದು ಕಡೆ ಯೇಸುವಾದರೋ ಹೆಚ್ಚು ಪ್ರಾಮುಖ್ಯವಾದ ಕೆಲಸದಲ್ಲಿ ಅಂದರೆ, ರಾಜ್ಯ ಸತ್ಯಕ್ಕೆ ಸಾಕ್ಷಿಕೊಡುವ ಮತ್ತು ಜನರಿಗೆ ದೇವರ ಚಿತ್ತವನ್ನು ಕಲಿಸುವ ವಿಷಯಗಳಲ್ಲಿ ಚಿಂತಿತನಾಗಿದ್ದನು. (ಯೋಹಾನ 18:37) ಯೇಸುವಿನ ಮಾದರಿಯನ್ನು ಅನುಸರಿಸುತ್ತಾ, ಸರ್ವಸಾಮಾನ್ಯ ಸಮಸ್ಯೆಗಳಿಂದ ಅಪಕರ್ಷಿತರಾಗದೆ ನಮ್ಮ ಸಮಯ ಮತ್ತು ಶಕ್ತಿಯನ್ನು ಸುವಾರ್ತೆ ಸಾರಲು ಮತ್ತು “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ” ಮಾಡಲು ನಾವು ಉಪಯೋಗಿಸುತ್ತೇವೆ.—ಮತ್ತಾಯ 24:14; 28:19.

ಲೋಭಕ್ಕೆ ಬಲಿಯಾಗದಂತೆ ಎಚ್ಚರಿಕೆಯಿಂದಿರಿ

7 ಯೇಸು ಹೃದಯದಾಳದ ಹೇತುಗಳನ್ನು ಗ್ರಹಿಸಲು ಶಕ್ತನಾಗಿದ್ದನು. ಆದ್ದರಿಂದ ಒಂದು ವೈಯಕ್ತಿಕ ವಿಷಯದಲ್ಲಿ ತಲೆಹಾಕಲು ಹೇಳಿದ ಆ ಮನುಷ್ಯನ ವಿನಂತಿಯಲ್ಲಿ ಒಂದು ಗಂಭೀರ ವಿಷಯವು ಒಳಗೂಡಿತ್ತೆಂದು ಯೇಸು ಅರಿತುಕೊಂಡನು. ಆದುದರಿಂದ ಆ ವಿನಂತಿಯ ಪ್ರಕಾರ ಕ್ರಿಯೆಗೈಯಲು ಪೂರ್ತಿಯಾಗಿ ನಿರಾಕರಿಸುವ ಬದಲಿಗೆ ವಿಷಯದ ಹಿಂದಿದ್ದ ಪ್ರಮುಖ ಹೇತುವನ್ನು ಗುರುತಿಸುತ್ತಾ ಯೇಸು ಅಂದದ್ದು: “ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.”—ಲೂಕ 12:15.

8 ಲೋಭ ಎಂದರೆ ಕೇವಲ ಹಣವನ್ನು ಅಥವಾ ನಿರ್ದಿಷ್ಟ ವಿಷಯಗಳನ್ನು ಬಯಸುವುದಕ್ಕಿಂತ ಹೆಚ್ಚಿನದ್ದಾಗಿದೆ. ಇವುಗಳಿಗೆ ಅದರದರ ಯೋಗ್ಯ ಉಪಯೋಗ ಮತ್ತು ಉದ್ದೇಶವಿರುತ್ತದಲ್ಲಾ. ಒಂದು ಶಬ್ದಕೋಶಕ್ಕನುಸಾರ, “ಐಶ್ವರ್ಯಕ್ಕಾಗಿ ಅಥವಾ ಸ್ವತ್ತುಗಳಿಗಾಗಿ ಇಲ್ಲವೆ ಪರರ ಸ್ವತ್ತುಗಳಿಗಾಗಿ ಅತ್ಯಾಶೆ ಪಡುವುದೇ” ಲೋಭವಾಗಿದೆ. ತಮಗಾಗಿ ವಸ್ತುಗಳನ್ನು ಪಡೆದುಕೊಳ್ಳುವುದರಲ್ಲಿ, ಅದರಲ್ಲೂ ಪರರ ವಸ್ತುಗಳು ತಮ್ಮದಾಗಬೇಕೆಂಬ ತಣಿಸಲಾರದ ದುರಾಶೆಯು ಅದಾಗಿದೆ. ತನಗೆ ಅವು ಅಗತ್ಯವಿರಲಿ ಇಲ್ಲದಿರಲಿ ಹಾಗೂ ಇತರರ ಮೇಲೆ ಅದು ಯಾವ ಪರಿಣಾಮವನ್ನೇ ಬೀರಲಿ ಆ ಸ್ವತ್ತುಗಳು ಕೇವಲ ತನ್ನದಾಗಬೇಕೆಂಬ ಆಶೆ ಅದಾಗಿದೆ. ಲೋಭಿಯಾದ ವ್ಯಕ್ತಿ ತಾನು ಉತ್ಕಟವಾಗಿ ಆಶಿಸುವ ವಿಷಯವು ತನ್ನ ಆಲೋಚನೆ ಮತ್ತು ಕ್ರಿಯೆಗಳನ್ನು ಎಷ್ಟು ಪ್ರಭಾವಿಸುವಂತೆ ಬಿಡುತ್ತಾನೆಂದರೆ ಅದು ಮೂಲತಃ ಅವನ ದೇವರಾಗಿ ಬಿಡುತ್ತದೆ. ಲೋಭಿಯಾದ ಮನುಷ್ಯನನ್ನು ಅಪೊಸ್ತಲ ಪೌಲನು ವಿಗ್ರಹಾರಾಧಕನಿಗೆ ಸರಿಹೋಲಿಸಿದ್ದನ್ನು ನೆನಪಿಸಿಕೊಳ್ಳಿರಿ. ಅಂಥವನಿಗೆ ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೇ ಇಲ್ಲ.—ಎಫೆಸ 5:5; ಕೊಲೊಸ್ಸೆ 3:5.

9 ಯೇಸು, ‘ಎಲ್ಲಾ ಲೋಭದ’ ವಿರುದ್ಧ ಎಚ್ಚರಿಕೆಯನ್ನಿತ್ತದ್ದು ನಿಜವಾಗಿ ಕುತೂಹಲಕರ. ಲೋಭವು ಬೇರೆ ಬೇರೆ ವಿಧಗಳಲ್ಲಿ ತೋರಿಬರುತ್ತದೆ. ಅವುಗಳಲ್ಲಿ ಕೆಲವನ್ನು ದಶಾಜ್ಞೆಗಳ ಕೊನೆಯ ಆಜ್ಞೆಯು ನಮೂದಿಸುತ್ತಾ ಹೀಗಂದಿತು: “ಮತ್ತೊಬ್ಬನ ಮನೆಯನ್ನು ಆಶಿಸಬಾರದು; ಮತ್ತೊಬ್ಬನ ಹೆಂಡತಿ ಗಂಡಾಳು ಹೆಣ್ಣಾಳು ಎತ್ತು ಕತ್ತೆ ಮುಂತಾದ ಯಾವದನ್ನೂ ಆಶಿಸಬಾರದು.” (ವಿಮೋಚನಕಾಂಡ 20:17) ಒಂದಲ್ಲ ಒಂದು ವಿಧದ ಲೋಭದ ಕಾರಣ ಗಂಭೀರ ಪಾಪದೊಳಗೆ ಸಿಲುಕಿಬಿದ್ದ ವ್ಯಕ್ತಿಗಳ ಅನೇಕ ಉದಾಹರಣೆಗಳು ಬೈಬಲ್‌ನಲ್ಲಿವೆ. ಪರರಿಗೆ ಸೇರಿದ್ದ ವಿಷಯಗಳಿಗಾಗಿ ಆಶೆಪಟ್ಟವರಲ್ಲಿ ಸೈತಾನನೇ ಮೊದಲಿಗನು. ಕೇವಲ ಯೆಹೋವನಿಗೆ ಮಾತ್ರವೇ ಸಲ್ಲಬೇಕಾಗಿದ್ದ ಪ್ರಭಾವ, ಮಾನ ಮತ್ತು ಅಧಿಕಾರಗಳನ್ನು ಅವನು ಆಶಿಸಿದನು. (ಪ್ರಕಟನೆ 4:11) ಹವ್ವಳು ಒಳ್ಳೇದರ ಮತ್ತು ಕೆಟ್ಟದ್ದರ ಕುರಿತ ಸ್ವನಿರ್ಣಯವನ್ನು ಮಾಡಿಕೊಳ್ಳುವ ಹಕ್ಕು ತನ್ನದಾಗುವಂತೆ ಆಶೆಪಟ್ಟಳು. ಆದರೆ ಆ ವಿಷಯದಲ್ಲಿ ಮೋಸಗೊಳಿಸಲ್ಪಟ್ಟು ಇಡೀ ಮಾನವಕುಲವನ್ನೇ ಪಾಪ ಮತ್ತು ಮರಣದ ಅಧೋಗತಿಗೆ ಇಳಿಸಿದಳಲ್ಲಾ. (ಆದಿಕಾಂಡ 3:4-7) ದೆವ್ವಗಳು ದೇವದೂತರಾಗಿದ್ದರು. ಆದರೂ ಅತೃಪ್ತರಾಗಿ ತಮಗೆ ಯಾವುದಕ್ಕೆ ಹಕ್ಕಿರಲಿಲ್ಲವೋ ಅದನ್ನು ಆಶಿಸಿದವರಾಗಿ “ತಮ್ಮ ದೊರೆತನವನ್ನು ಕಾಪಾಡದೆ ತಮಗೆ ತಕ್ಕ ವಾಸಸ್ಥಾನವನ್ನು” ಬಿಟ್ಟುಬಿಟ್ಟರು. (ಯೂದ 6; ಆದಿಕಾಂಡ 6:2) ಬಿಳಾಮ, ಆಕಾನ, ಗೇಹಜಿ ಮತ್ತು ಇಸ್ಕರಿಯೋತ ಯೂದನ ಕುರಿತಾಗಿಯೂ ಯೋಚಿಸಿರಿ. ಅವರು ತಮ್ಮ ಜೀವನದಲ್ಲಿ ಸಂತೃಪ್ತಿಯಿಂದಿರುವ ಬದಲಿಗೆ ಪ್ರಾಪಂಚಿಕ ಸ್ವತ್ತುಗಳಿಗಾಗಿ ಹಂಬಲಿಸಿ ತಣಿಸಲಾಗದ ದುರಾಶೆಗೆ ತಮ್ಮನ್ನು ಬಿಟ್ಟುಕೊಟ್ಟರು. ಇದು ಅವರನ್ನು ತಮ್ಮ ಜವಾಬ್ದಾರಿಯುತ ಸ್ಥಾನವನ್ನು ದುರುಪಯೋಗಿಸುವಂತೆ ಸೆಳೆದು ವಿನಾಶ ಮತ್ತು ಧ್ವಂಸಕ್ಕೆ ನಡೆಸಿತು.

10 ಲೋಭದ ವಿರುದ್ಧವಾದ ಎಚ್ಚರಿಕೆಯನ್ನಿತ್ತ ತನ್ನ ಪೀಠಿಕಾ ಮಾತಿನಲ್ಲಿ “ಕಾಪಾಡಿಕೊಳ್ಳಿರಿ” ಅಥವಾ ‘ನಿಮ್ಮ ಕಣ್ಣುಗಳನ್ನು ತೆರೆದಿಡಿರಿ’ (NW) ಎಂದು ಯೇಸು ಹೇಳಿದ್ದು ಅದೆಷ್ಟು ತಕ್ಕದಾಗಿದೆ! ಏಕೆ? ಏಕೆಂದರೆ ಬೇರೊಬ್ಬನನ್ನು ಅತ್ಯಾಸೆಯ ಅಥವಾ ಲೋಭಿ ವ್ಯಕ್ತಿಯನ್ನಾಗಿ ನೋಡುವುದು ಬಹು ಸುಲಭ. ಆದರೆ ತಾವೇ ಲೋಭಿಗಳೆಂದು ಒಪ್ಪಿಕೊಳ್ಳುವುದು ಬಹಳ ಕಷ್ಟ. ಆದಾಗ್ಯೂ “ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ” ಎಂದು ಅಪೊಸ್ತಲ ಪೌಲನು ತಿಳಿಸಿದನು. (1 ತಿಮೊಥೆಯ 6:9, 10) ಶಿಷ್ಯ ಯಾಕೋಬನು ದುರಾಶೆಯ ಕುರಿತು ವಿವರಿಸುತ್ತಾ, ಅದು “ಬಸುರಾಗಿ ಪಾಪವನ್ನು ಹೆರುತ್ತದೆ” ಎಂದು ಹೇಳುತ್ತಾನೆ. (ಯಾಕೋಬ 1:15) ಯೇಸುವಿನ ಬುದ್ಧಿವಾದಕ್ಕೆ ಹೊಂದಿಕೆಯಲ್ಲಿ ನಾವು ‘ನಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಳ್ಳುವುದು’ ಬೇರೆಯವರು ಲೋಭಿಗಳೋ ಅಲ್ಲವೋ ಎಂದು ತೀರ್ಪುಮಾಡಲಿಕ್ಕಾಗಿ ಅಲ್ಲ, ಬದಲಿಗೆ ನಮ್ಮ ಹೃದಯದ ಅಪೇಕ್ಷೆಗಳೇನು ಎಂದು ನಮ್ಮನ್ನು ನಾವೇ ಪರೀಕ್ಷಿಸಲಿಕ್ಕಾಗಿಯೇ. ಆಗ ನಾವು ‘ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಮ್ಮನ್ನು ಕಾಪಾಡಿಕೊಳ್ಳುತ್ತೇವೆ.’

ಸಮೃದ್ಧಿಯ ಜೀವನ

11 ಲೋಭದ ವಿರುದ್ಧ ನಾವು ಏಕೆ ನಮ್ಮನ್ನು ಕಾಪಾಡಿಕೊಳ್ಳಬೇಕೆಂಬುದಕ್ಕೆ ಇನ್ನೊಂದು ಕಾರಣವೂ ಇದೆ. ಅನಂತರ ಯೇಸು ಏನಂದನು ಎಂಬುದನ್ನು ಗಮನಿಸಿರಿ: “ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.” (ಲೂಕ 12:15) ನಮ್ಮ ಈ ಪ್ರಾಪಂಚಿಕತೆಯ ಯುಗದಲ್ಲಿ ಇದು ನಾವು ನಿಜವಾಗಿಯೂ ಗಮನಕೊಡತಕ್ಕ ವಿಷಯವಾಗಿದೆ. ಏಕೆಂದರೆ ಇಂದು ಜನರು ಸಮೃದ್ಧಿ ಮತ್ತು ಹಣದಿಂದಲೇ ಸಂತೋಷ ಹಾಗೂ ಯಶಸ್ಸು ಸಾಧ್ಯ ಎನ್ನುತ್ತಾರೆ. ಆದರೆ ಯೇಸು ಹೇಳುತ್ತಿದ್ದ ವಿಷಯವೇನೆಂದರೆ ಒಬ್ಬನಲ್ಲಿ ಎಷ್ಟೇ ಸಿರಿಸಂಪತ್ತುಗಳಿರಲಿ, ನಿಜವಾಗಿಯೂ ಸಂತೃಪ್ತಿಕರ ಮತ್ತು ಅರ್ಥಭರಿತ ಜೀವನವು ಅದರಿಂದ ಪ್ರಾಪ್ತಿಸುವುದೂ ಇಲ್ಲ ಅದರ ಮೇಲೆ ಹೊಂದಿಕೊಂಡಿರುವುದೂ ಇಲ್ಲ.

12 ಕೆಲವರಾದರೋ ಇದನ್ನು ಒಪ್ಪದೆ ಇರಬಹುದು. ಲೌಕಿಕ ಐಶ್ವರ್ಯಗಳು ಜೀವನವನ್ನು ಹೆಚ್ಚು ಆರಾಮಕರ ಮತ್ತು ಆನಂದಕರವನ್ನಾಗಿ ಮಾಡುತ್ತಾ ಬದುಕನ್ನು ಹೆಚ್ಚು ಸಾರ್ಥಕಗೊಳಿಸುತ್ತದೆ ಎಂದು ಅವರು ತರ್ಕಿಸಬಹುದು. ಆದಕಾರಣ ತಾವು ಬಯಸುವಂಥ ಸಕಲ ಐಹಿಕ ವಸ್ತುಗಳನ್ನು ಮತ್ತು ಚಿತ್ರವಿಚಿತ್ರ ಹೊಸ ಹೊಸ ಗ್ಯಾಜಿಟ್‌ಗಳನ್ನು ಖರೀದಿಸಲು ಸಾಧ್ಯಗೊಳಿಸುವ ಉದ್ಯೋಗಗಳಿಗೆ ತಮ್ಮನ್ನು ಪೂರ್ತಿ ಮೀಸಲಾಗಿಡುತ್ತಾರೆ. ಇದು ಒಂದು ಆರಾಮದ ಹಾಗೂ ಸುಖದ ಜೀವನವನ್ನು ತರುವುದೆಂದು ಅವರೆಣಿಕೆ. ಆದರೆ ಹಾಗೆ ಎಣಿಸುವುದರಿಂದ, ಯೇಸು ತಿಳಿಸುತ್ತಿದ್ದ ವಿಷಯವನ್ನು ಅರ್ಥಮಾಡಿಕೊಳ್ಳಲು ಅವರು ತಪ್ಪುತ್ತಿದ್ದಾರೆ.

13 ಸಮೃದ್ಧ ಜೀವನವನ್ನು ಹೊಂದಿರುವುದು ಸರಿಯೋ ತಪ್ಪೋ ಎಂಬುದರ ಮೇಲೆ ಯೇಸು ಇಲ್ಲಿ ಗಮನ ಕೇಂದ್ರೀಕರಿಸಲಿಲ್ಲ. ಬದಲಿಗೆ “ಒಬ್ಬನಿಗೆ ಎಷ್ಟೇ ಆಸ್ತಿಯಿದ್ದರೂ” ಅಂದರೆ ಅವನು ಈವಾಗಲೇ ಹೊಂದಿರುವ ಸ್ವತ್ತುಗಳು ಎಷ್ಟಿದ್ದರೂ ಅವು ಅವನಿಗೆ ಜೀವವನ್ನು ಕೊಡಲಾರವು ಎಂದು ಅವನು ಒತ್ತಿಹೇಳುತ್ತಿದ್ದನು. ಈ ವಿಷಯದಲ್ಲಿ ನಮಗೆಲ್ಲರಿಗೂ ಗೊತ್ತಿದೆ ಏನಂದರೆ ಜೀವಿಸಲಿಕ್ಕಾಗಿ ಅಥವಾ ಜೀವನಾಧಾರಕ್ಕಾಗಿ ಹೆಚ್ಚೇನೂ ಅಗತ್ಯವಿಲ್ಲ. ಬೇಕಾಗಿರುವುದು ಸ್ವಲ್ಪ ಆಹಾರ, ಬಟ್ಟೆಬರೆ ಮತ್ತು ತಲೆಯಿಡಲು ಸ್ವಲ್ಪ ಸ್ಥಳ ಅಷ್ಟೆತಾನೇ. ಐಶ್ವರ್ಯವಂತರು ಇವನ್ನು ಸಮೃದ್ಧವಾಗಿ ಹೊಂದಿರುತ್ತಾರೆ ಮತ್ತು ಬಡವರಿಗೆ ತಮ್ಮ ಅಗತ್ಯತೆಗಳನ್ನು ಪಡೆಯಲು ಬಹಳ ಶ್ರಮಿಸಬೇಕಾಗುತ್ತದೆ. ಆದರೆ ಧನಿಕರ ಮತ್ತು ಬಡವರ ನಡುವೆ ಇರುವ ಯಾವುದೇ ವ್ಯತ್ಯಾಸವು ಅವಸಾನ ಕಾಲದಲ್ಲಿ ಮಾತ್ರ ಸರಿಸಮಾನವಾಗುತ್ತದೆ, ಏಕೆಂದರೆ ಮರಣದಲ್ಲಿ ಎಲ್ಲವೂ ಅಳಿದುಹೋಗುತ್ತದೆ. (ಪ್ರಸಂಗಿ 9:5, 6) ಆದುದರಿಂದ ಜೀವನಕ್ಕೆ ಉದ್ದೇಶವೂ ಮೌಲ್ಯವೂ ಇರಬೇಕಾದರೆ, ಅದರಲ್ಲಿ ಒಬ್ಬನು ಗಳಿಸಬಲ್ಲ ಅಥವಾ ಹೊಂದಿರಬಲ್ಲ ಸಿರಿಸಂಪತ್ತು ಮಾತ್ರ ಕೂಡಿರಲಾರದು ಮತ್ತು ಕೂಡಿರಬಾರದು ಸಹ. ಯೇಸು ಯಾವ ರೀತಿಯ ಜೀವನದ ಕುರಿತು ಮಾತಾಡುತ್ತಿದ್ದನು ಎಂದು ನಾವು ಪರೀಕ್ಷಿಸುವಾಗ ಈ ವಿಚಾರವು ಇನ್ನಷ್ಟು ಸ್ಪಷ್ಟವಾಗುತ್ತದೆ.

14 “ಒಬ್ಬನಿಗೆ ಎಷ್ಟೇ ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ” ಎಂದು ಯೇಸು ಹೇಳಿದಾಗ, ಲೂಕನ ಸುವಾರ್ತೆಯಲ್ಲಿ ‘ಜೀವ’ ಎಂಬ ಶಬ್ದಕ್ಕೆ ಉಪಯೋಗಿಸಲ್ಪಟ್ಟ ಗ್ರೀಕ್‌ ಶಬ್ದವು ಜೋ (zo-e) ಎಂದಾಗಿದೆ. ಈ ಶಬ್ದವು ಒಬ್ಬನ ಜೀವನಕ್ರಮ ಅಥವಾ ಜೀವನಶೈಲಿಗೆ ಸೂಚಿಸುವುದಿಲ್ಲ ಬದಲಾಗಿ ಸಂಪೂರ್ಣ ಅರ್ಥದಲ್ಲಿ ಸ್ವತಃ ಜೀವಕ್ಕೇ ಸೂಚಿಸುತ್ತದೆ. * ನಾವು ಧನಿಕರಾಗಿರಲಿ ಬಡವರಾಗಿರಲಿ ಸುಖಭೋಗದ ಜೀವನ ನಡಿಸಲಿ ಇಲ್ಲವೇ ಬಹಳ ಕಷ್ಟದಿಂದ ಹೊಟ್ಟೆಹೊರೆಯುತ್ತಿರಲಿ, ನಾವು ಇನ್ನೆಷ್ಟುಕಾಲ ಬದುಕಬಹುದು ಅಥವಾ ನಾಳೆ ಇದ್ದೇವೋ ಇಲ್ಲವೋ ಎಂಬುದು ನಮ್ಮ ಹತೋಟಿಯಲ್ಲಿಲ್ಲ ಎಂದು ಯೇಸು ಹೇಳುತ್ತಿದ್ದನು. ತನ್ನ ಪರ್ವತ ಪ್ರಸಂಗದಲ್ಲಿ ಅವನಂದದ್ದು: “ಚಿಂತೆಮಾಡಿಮಾಡಿ ಒಂದು ಮೊಳ ಉದ್ದಬೆಳೆಯುವದು [ಮೂಲಭಾಷೆ: ನಿಮ್ಮ ಆಯುಷ್ಯಕ್ಕೆ ಕೂಡಿಸುವುದು] ನಿಮ್ಮಲ್ಲಿ ಯಾರಿಂದಾದೀತು?” (ಮತ್ತಾಯ 6:27) “ಜೀವದ ಬುಗ್ಗೆ” ಯೆಹೋವನೊಬ್ಬನೇ ಎಂಬುದಾಗಿ ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ ಮತ್ತು ಆತನೊಬ್ಬನೇ ತನ್ನ ನಂಬಿಗಸ್ತರಿಗೆ “ವಾಸ್ತವವಾದ ಜೀವ” ಅಥವಾ “ನಿತ್ಯಜೀವ”ವನ್ನು ಅಂದರೆ ಅಂತ್ಯವಿಲ್ಲದ ಜೀವವನ್ನು ಭೂಮಿಯಲ್ಲಾಗಲಿ ಪರಲೋಕದಲ್ಲಾಗಲಿ ಕೊಡಬಲ್ಲನು.—ಕೀರ್ತನೆ 36:9; 1 ತಿಮೊಥೆಯ 6:12, 19.

15 ಜೀವನದ ಕುರಿತು ಜನರಿಗೆ ಒಂದು ವಕ್ರವಾದ ಅಥವಾ ಡೊಂಕಾದ ನೋಟವಿರುವುದು ಎಷ್ಟು ಸುಲಭವೆಂದು ಯೇಸುವಿನ ಮಾತುಗಳು ತೋರಿಸುತ್ತವೆ. ಧನಿಕರಾಗಿರಲಿ ಬಡವರಾಗಿರಲಿ ಮನುಷ್ಯರೆಲ್ಲರು ಅಪರಿಪೂರ್ಣರೂ ಮರಣಾಧೀನರೂ ಆಗಿದ್ದಾರೆ. ಪುರಾತನ ಕಾಲದ ಮೋಶೆಯು ಅವಲೋಕಿಸಿದ್ದು: “ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು. ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.” (ಕೀರ್ತನೆ 90:10; ಯೋಬ 14:1, 2; 1 ಪೇತ್ರ 1:24) ಈ ಕಾರಣದಿಂದಾಗಿ ದೇವರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಬೆಳೆಸಿಕೊಳ್ಳದ ಜನರು, ಅಪೊಸ್ತಲ ಪೌಲನಿಂದ ಸೂಚಿಸಲ್ಪಟ್ಟ ಈ ಮನೋವೃತ್ತಿಯನ್ನು ಸ್ವೀಕರಿಸುತ್ತಾರೆ. ಅದೇನಂದರೆ “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.” (1 ಕೊರಿಂಥ 15:32) ಇನ್ನು ಕೆಲವರು ಜೀವವು ನಶ್ವರವೂ ಅಸ್ಥಿರವೂ ಆಗಿದೆಯೆಂದು ಎಣಿಸುತ್ತಾ ಪ್ರಾಪಂಚಿಕ ಧನಸಂಪತ್ತಿನಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಐಹಿಕವಾದ ಅನೇಕಾನೇಕ ದೃಶ್ಯ ಸ್ವತ್ತುಗಳು ಜೀವನವನ್ನು ಹೇಗಾದರೂ ಹೆಚ್ಚು ಭದ್ರಗೊಳಿಸುತ್ತವೆಂದು ಬಹುಶಃ ಅವರೆಣಿಕೆ. ಹೀಗೆ ಅವರು ಐಶ್ವರ್ಯವನ್ನು ಮತ್ತು ಆಸ್ತಿಪಾಸ್ತಿಗಳನ್ನು ಒಟ್ಟುಗೂಡಿಸಲಿಕ್ಕಾಗಿ ತುದಿಮೊದಲಿಲ್ಲದೆ ದುಡಿಯುತ್ತಾ ಅವುಗಳಿಂದ ಭದ್ರತೆ ಮತ್ತು ಸಂತೋಷ ಸಾಧ್ಯವೆಂದು ತಪ್ಪಾಗಿ ಎಣಿಸುತ್ತಾರೆ.—ಕೀರ್ತನೆ 49:6, 11, 12.

ಒಂದು ಸುಭದ್ರ ಭವಿಷ್ಯ

16 ಆಹಾರ, ಬಟ್ಟೆಬರೆ, ಮನೆಮಾರು ಮತ್ತು ಇತರ ಸುಖಸಾಧನಗಳನ್ನು ಸಮೃದ್ಧವಾಗಿ ಹೊಂದಿರುವ ಒಂದು ಉನ್ನತ ಮಟ್ಟದ ಜೀವನಶೈಲಿಯು ಹೆಚ್ಚು ಆರಾಮಕರ ಬದುಕುಬಾಳಿಗೆ ನೆರವಾಗಬಲ್ಲದು ಅಥವಾ ಉತ್ತಮ ಔಷಧೋಪಚಾರಕ್ಕೆ ದಾರಿಮಾಡಿ ಒಬ್ಬನ ಆಯುಷ್ಯವನ್ನು ಹೆಚ್ಚಿಸಲೂಬಹುದು. ಆದರೂ ಅಂಥ ಜೀವನವು ನಿಜವಾಗಿಯೂ ಅಧಿಕ ಅರ್ಥಭರಿತವೂ ಅಧಿಕ ಸುಭದ್ರವೂ ಆಗಿರುತ್ತದೋ? ಜೀವನದ ನಿಜ ಸಾರ್ಥಕತೆಯು ಒಬ್ಬನ ಆಯುಷ್ಯಮಾನದಿಂದಾಗಲಿ ಅವನು ಹೊಂದಿರುವ ಅಥವಾ ಬಳಸುವ ವಸ್ತುಗಳಿಂದಾಗಲಿ ಅಳೆಯಲ್ಪಡುವುದಿಲ್ಲ. ಅಂಥ ವಿಷಯಗಳ ಮೇಲೆ ಅತಿಯಾದ ಭರವಸೆಯಿಡುವ ಅಪಾಯದ ಕುರಿತು ಅಪೊಸ್ತಲ ಪೌಲನು ತಿಳಿಸಿದನು. ತಿಮೊಥೆಯನಿಗೆ ಅವನು ಬರೆದದ್ದು: “ಇಹಲೋಕದ ವಿಷಯದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂತಲೂ . . . ಅವರಿಗೆ ಆಜ್ಞಾಪಿಸು.”—1 ತಿಮೊಥೆಯ 6:17.

17 ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡುವುದು ಅವಿವೇಕತನ ಏಕೆಂದರೆ ಅದು “ಅಸ್ಥಿರ”ವಾದದ್ದಾಗಿದೆ. ನಮ್ಮ ಮೂಲಪಿತೃವಾದ ಯೋಬನು ತುಂಬ ಐಶ್ವರ್ಯವಂತನಾಗಿದ್ದನು. ಆದರೆ ಅನಿರೀಕ್ಷಿತವಾಗಿ ವಿಪತ್ತುಗಳು ಹೊಡೆದಾಗ ಅವನ ಐಶ್ವರ್ಯವು ಅವನ ಸಹಾಯಕ್ಕೆ ಬರಲಿಲ್ಲ. ಥಟ್ಟನೇ ಅವೆಲ್ಲವು ಮಾಯವಾಗಿ ಹೋದವಲ್ಲಾ. ಆ ಕಷ್ಟಸಂಕಟಗಳಲ್ಲೆಲ್ಲಾ ಅವನನ್ನು ಕಾಪಾಡಿ ಉಳಿಸಿದ್ದು ದೇವರೊಂದಿಗಿನ ಅವನ ದೃಢವಾದ ಸಂಬಂಧವೇ ಹೊರತು ಬೇರೇನಲ್ಲ. (ಯೋಬ 1:1, 3, 20-22) ಅಬ್ರಹಾಮನಿಗೆ ಹೇರಳವಾದ ಐಹಿಕ ಸಂಪತ್ತಿತ್ತು. ಆದರೆ ಯೆಹೋವನಿಂದ ಬಂದ ಕಷ್ಟದ ನೇಮಕವನ್ನು ಸ್ವೀಕರಿಸುವದರಿಂದ ಅದು ತನ್ನನ್ನು ತಡೆಯುವಂತೆ ಅಬ್ರಹಾಮನು ಬಿಡಲಿಲ್ಲ. ಅದಕ್ಕಾಗಿ “ಅನೇಕ ಜನಾಂಗಗಳಿಗೆ ಮೂಲಪಿತೃ”ವಾಗುವ ಆಶೀರ್ವಾದವನ್ನು ಅವನು ಪಡೆದನು. (ಆದಿಕಾಂಡ 12:1, 4; 17:4-6) ಇವು ಮತ್ತು ಬೇರೆ ಇತರ ಮಾದರಿಗಳು ನಮ್ಮ ಅನುಕರಣೆಗೆ ಅರ್ಹವಾಗಿವೆ. ಯುವಕರಾಗಿರಲಿ ವೃದ್ಧರಾಗಿರಲಿ, ನಮ್ಮ ಜೀವನದಲ್ಲಿ ಯಾವುದು ನಿಜವಾಗಿ ಪ್ರಾಮುಖ್ಯ ಮತ್ತು ಯಾವುದರ ಮೇಲೆ ನಾವು ನಮ್ಮ ನಿರೀಕ್ಷೆಯನ್ನಿಡಬೇಕು ಎಂದು ನಾವು ನಮ್ಮನ್ನೇ ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ.—ಎಫೆಸ 5:10; ಫಿಲಿಪ್ಪಿ 1:10.

18 ಲೋಭದ ಕುರಿತು ಮತ್ತು ಜೀವನದ ಯೋಗ್ಯ ನೋಟದ ಕುರಿತು ಯೇಸು ಹೇಳಿದ ಆ ಕೆಲವು ಮಾತುಗಳು ಗಮನಾರ್ಹವೂ ಬೋಧಪ್ರದವೂ ಆಗಿರುತ್ತವೆ ನಿಶ್ಚಯ. ಆದರೂ ಯೇಸುವಿನ ಮನಸ್ಸಿನಲ್ಲಿ ಇನ್ನೂ ಹೆಚ್ಚಿನ ಕೆಲವು ಉಪದೇಶಗಳಿದ್ದವು. ಆದುದರಿಂದ ಅವನು ಮುಂದುವರಿಸುತ್ತಾ ಒಬ್ಬ ವಿವೇಚನೆಯಿಲ್ಲದ ಐಶ್ವರ್ಯವಂತನ ಕುರಿತ ಒಂದು ವಿಚಾರ ಪ್ರೇರಕ ಸಾಮ್ಯ ಅಥವಾ ದೃಷ್ಟಾಂತವನ್ನು ತಿಳಿಸಿದನು. ಆ ದೃಷ್ಟಾಂತವು ಇಂದು ನಮ್ಮ ಜೀವನಕ್ಕೆ ಹೇಗೆ ಅನ್ವಯಿಸುತ್ತದೆ ಮತ್ತು ನಾವು ಅದರಿಂದ ಏನು ಕಲಿಯಬಲ್ಲೆವು? ಮುಂದಿನ ಲೇಖನವು ಉತ್ತರಗಳನ್ನು ಕೊಡುವುದು. (w07 8/1)

[ಪಾದಟಿಪ್ಪಣಿ]

^ ಪ್ಯಾರ. 19 “ಜೀವ” ಎಂಬುದಾಗಿ ಭಾಷಾಂತರಿಸಲ್ಪಟ್ಟ ಇನ್ನೊಂದು ಗ್ರೀಕ್‌ ಪದವು ಬೈಓಸ್‌ ಎಂದಾಗಿದೆ. “ಬೈಆಗ್ರಫಿ” (ಜೀವನ ಚರಿತ್ರೆ) “ಬೈಆಲಜಿ” (ಜೀವವಿಜ್ಞಾನ) ಎಂಬಂಥ ಇಂಗ್ಲಿಷ್‌ ಪದಗಳು ಇದರಿಂದಲೇ ಬಂದವುಗಳು. ವೈನ್ಸ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ಓಲ್ಡ್‌ ಆ್ಯಂಡ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ಗೆ ಅನುಸಾರವಾಗಿ ಬೈಓಸ್‌ ಪದವು “ಜೀವಾವಧಿ ಅಥವಾ ಜೀವಮಾನ,” “ಜೀವನ ರೀತಿ” ಮತ್ತು “ಜೀವನಾಧಾರ”ಕ್ಕೆ ಸೂಚಿಸುತ್ತದೆ.

ನಿಮ್ಮ ಉತ್ತರವೇನು?

• ಗುಂಪಿನಲ್ಲಿದ್ದ ಮನುಷ್ಯನೊಬ್ಬನ ವಿನಂತಿಗೆ ಪ್ರತಿಕ್ರಿಯಿಸಲು ಯೇಸು ನಿರಾಕರಿಸಿದ್ದು ನಮಗೇನನ್ನು ಕಲಿಸುತ್ತದೆ?

• ಲೋಭದ ವಿರುದ್ಧ ನಾವು ಎಚ್ಚರಿಕೆಯಿಂದಿರಬೇಕು ಏಕೆ, ಮತ್ತು ನಾವು ಅದನ್ನು ಹೇಗೆ ಮಾಡಬಲ್ಲೆವು?

• ಪ್ರಾಪಂಚಿಕ ಸಂಪತ್ತುಗಳು ಜೀವಾಧಾರವಲ್ಲವೇಕೆ?

• ಜೀವನವನ್ನು ಯಾವುದು ನಿಜವಾಗಿ ಸಾರ್ಥಕ ಮತ್ತು ಭದ್ರವನ್ನಾಗಿ ಮಾಡಬಲ್ಲದು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಇಂದು ಜನರ ಅಭಿರುಚಿಗಳು ಮತ್ತು ಬೆನ್ನಟ್ಟುವಿಕೆಗಳ ಕುರಿತು ನೀವೇನನ್ನು ಅವಲೋಕಿಸಿದ್ದೀರಿ? (ಬಿ) ಅಂಥ ಮನೋಭಾವಗಳು ನಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು?

3. ಯೇಸು ಕೊಟ್ಟ ಯಾವ ಬುದ್ಧಿವಾದವನ್ನು ನಾವೀಗ ಪರಿಗಣಿಸುವೆವು?

4. ಯೇಸು ಮಾತಾಡುತ್ತಿದ್ದಾಗ ಆ ವ್ಯಕ್ತಿ ಅಡ್ಡಬಂದದ್ದು ಏಕೆ ಅನುಚಿತವಾಗಿತ್ತು?

5. ಆ ಮನುಷ್ಯನ ವಿನಂತಿಯು ಅವನ ವಿಷಯದಲ್ಲಿ ಏನನ್ನು ಪ್ರಕಟಪಡಿಸಿತು?

6. ಆ ಮನುಷ್ಯನು ವಿನಂತಿಸಿದ ಪ್ರಕಾರ ಯೇಸು ಕ್ರಿಯೆಗೈಯಲು ಒಪ್ಪಲಿಲ್ಲವೇಕೆ?

7. ಯಾವ ಸೂಕ್ಷ್ಮ ದೃಷ್ಟಿಯ ಅವಲೋಕನೆಯನ್ನು ಯೇಸು ಮಾಡಿದನು?

8. ಲೋಭ ಎಂದರೇನು, ಮತ್ತು ಅದು ಯಾವುದಕ್ಕೆ ನಡೆಸಬಲ್ಲದು?

9. ಲೋಭವು ಯಾವ ವಿವಿಧ ರೀತಿಯಲ್ಲಿ ತೋರಿಬರಬಲ್ಲದು? ಕೆಲವು ಉದಾಹರಣೆಗಳನ್ನು ಕೊಡಿ.

10. ಯೇಸು ಬುದ್ಧಿಹೇಳಿದ ಪ್ರಕಾರ ನಾವು ಹೇಗೆ ‘ನಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಳ್ಳಬೇಕು’?

11, 12. (ಎ) ಲೋಭದ ವಿರುದ್ಧ ಯೇಸು ಯಾವ ಎಚ್ಚರಿಕೆಯನ್ನು ಕೊಟ್ಟನು? (ಬಿ) ಯೇಸುವಿನ ಎಚ್ಚರಿಕೆಗೆ ಕಿವಿಗೊಡುವ ಅಗತ್ಯವು ನಮಗಿದೆ ಏಕೆ?

13. ಜೀವನ ಮತ್ತು ಸಿರಿಸಂಪತ್ತುಗಳ ಸಮತೂಕದ ದೃಷ್ಟಿಕೋನವು ಯಾವುದು?

14. ಬೈಬಲ್‌ ವೃತ್ತಾಂತದಲ್ಲಿ ಕಂಡುಬರುವ “ಜೀವ” ಎಂಬ ಶಬ್ದದಿಂದ ನಾವೇನನ್ನು ಕಲಿಯಬಲ್ಲೆವು?

15. ಅನೇಕರು ಭೌತಿಕ ಸ್ವತ್ತುಗಳ ಮೇಲೆ ತಮ್ಮ ಭರವಸೆಯನ್ನು ಇಡುವುದು ಯಾಕೆ?

16. ಜೀವನದ ನಿಜ ಸಾರ್ಥಕತೆಯು ಯಾವುದರ ಮೇಲೆ ಆಧಾರಿಸಿರುವುದಿಲ್ಲ?

17, 18. (ಎ) ಪ್ರಾಪಂಚಿಕ ಸಂಪತ್ತಿನ ಸಂಬಂಧದಲ್ಲಿ ಯಾವ ಎದ್ದುಕಾಣುವ ಮಾದರಿಗಳು ನಮ್ಮ ಅನುಕರಣೆಗೆ ಅರ್ಹವಾಗಿವೆ? (ಬಿ) ಮುಂದಿನ ಲೇಖನದಲ್ಲಿ ಯೇಸುವಿನ ಯಾವ ಸಾಮ್ಯವನ್ನು ಚರ್ಚಿಸಲಾಗುವುದು?