ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ನಿಮ್ಮನ್ನು ಗಮನಿಸುತ್ತಿದ್ದಾನೋ?

ದೇವರು ನಿಮ್ಮನ್ನು ಗಮನಿಸುತ್ತಿದ್ದಾನೋ?

ದೇವರು ನಿಮ್ಮನ್ನು ಗಮನಿಸುತ್ತಿದ್ದಾನೋ?

ಕುಶಲ ಸೃಷ್ಟಿಕರ್ತನಾದ ಯೆಹೋವನಿಗೆ ನೋಡುವ ಸಾಮರ್ಥ್ಯವಿದೆಯೋ? ಖಂಡಿತವಾಗಿಯೂ ಇದೆ! ಇದನ್ನು ಬೈಬಲ್‌ ಸರಳವಾಗಿ ಹೀಗೆ ಸಮರ್ಥಿಸುತ್ತದೆ: “ಕಣ್ಣುಕೊಟ್ಟವನು ನೋಡನೋ?” (ಕೀರ್ತನೆ 94:9) ಯೆಹೋವನ ದೃಷ್ಟಿಯು ಯಾವುದೇ ಮಾನವನಿಗಿಂತಲೂ ಎಷ್ಟೋ ಮಿಗಿಲಾದದ್ದಾಗಿದೆ. ಆತನು ನಮ್ಮ ಹೊರತೋರಿಕೆಯನ್ನು ನೋಡುವುದು ಮಾತ್ರವಲ್ಲ, “ಹೃದಯಗಳನ್ನು ಶೋಧಿಸುವವನು” ಮತ್ತು “ಪರೀಕ್ಷಿಸುವನು” ಆಗಿದ್ದಾನೆ. (ಜ್ಞಾನೋಕ್ತಿ 17:3; 21:2) ಹೌದು, ಆತನಿಗೆ ನಮ್ಮ ಆಲೋಚನೆ, ಉದ್ದೇಶ ಮತ್ತು ಅಂತರಾಳದ ಇಚ್ಛೆಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯವಿದೆ.

ನಾವು ಜೀವನದಲ್ಲಿ ಎದುರಿಸಬಹುದಾದ ಕಷ್ಟಗಳೇನೆಂದು ಯೆಹೋವನಿಗೆ ತಿಳಿದಿದೆ ಮತ್ತು ಈ ವಿಷಯದಲ್ಲಿ ನಾವು ಮಾಡುವ ವಿನಂತಿಗಳಿಗೆ ಆತನು ಉತ್ತರ ಕೊಡುತ್ತಾನೆ. ಈ ಕುರಿತು ಕೀರ್ತನೆಗಾರನು ಬರೆದದ್ದು: “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ. . . . ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” (ಕೀರ್ತನೆ 34:15, 18) ನಮ್ಮ ಪರಿಸ್ಥಿತಿಗಳನ್ನು ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ನಾವು ಮನದಾಳದಿಂದ ಮಾಡಿದ ಪ್ರಾರ್ಥನೆಗಳನ್ನು ಆತನು ಉತ್ತರಿಸುತ್ತಾನೆ ಎಂದು ತಿಳಿಯುವುದು ಎಷ್ಟೊಂದು ನೆಮ್ಮದಿಯ ವಿಷಯ!

ರಹಸ್ಯವಾಗಿ ಮಾಡಿದ ವಿಷಯಗಳನ್ನು ಕೂಡ ಯೆಹೋವನು ಬಲ್ಲನು. ಹೌದು, “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ.” (ಇಬ್ರಿಯ 4:13) ಆದುದರಿಂದ ನಾವು ಒಳ್ಳೆದನ್ನೇ ಮಾಡಲಿ ಅಥವಾ ಕೆಟ್ಟದ್ದನ್ನೇ ಮಾಡಲಿ, ಅವೆಲ್ಲವನ್ನು ದೇವರು ಗಮನಿಸುತ್ತಾನೆ. (ಜ್ಞಾನೋಕ್ತಿ 15:3) ಉದಾಹರಣೆಗೆ, “ನೋಹನಿಗೆ ಯೆಹೋವನ ದಯವು ದೊರಕಿತು” ಮತ್ತು “ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು” ಎಂದು ಆದಿಕಾಂಡ 6:8, 9 ತಿಳಿಸುತ್ತದೆ. ನಿಜ, ನೋಹನು ಯೆಹೋವನಿಗೆ ವಿಧೇಯನಾಗಿದ್ದು ಆತನ ನೀತಿಯ ಮೂಲತತ್ತ್ವಗಳನ್ನು ಪಾಲಿಸಿದ್ದರಿಂದ ದೇವರ ದಯೆಯನ್ನು ಮತ್ತು ಆಶೀರ್ವಾದವನ್ನು ಗಳಿಸಿಕೊಂಡನು. (ಆದಿಕಾಂಡ 6:22) ಆದರೆ ಇದಕ್ಕೆ ವ್ಯತಿರಿಕ್ತವಾಗಿ, ನೋಹನ ದಿನದಲ್ಲಿದ್ದ ಜನರು ಹಿಂಸಕರೂ ನೀತಿಭ್ರಷ್ಟರೂ ಆಗಿದ್ದರು. ದೇವರು ಈ ಪರಿಸ್ಥಿತಿಗೆ ಕಣ್ಮುಚ್ಚಿಕೊಂಡಿರಲಿಲ್ಲ. ‘ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿರುವದನ್ನೂ ಯೆಹೋವನು ನೋಡಿದನು.’ ಕೊನೆಗೆ ಯೆಹೋವನು ಆ ದುಷ್ಟಜನರಿಗೆ ನಾಶನವನ್ನು ತಂದನು. ಆದರೆ ನೋಹ ಮತ್ತವನ ಕುಟುಂಬವನ್ನು ಕಾಪಾಡಿ ಉಳಿಸಿದನು.—ಆದಿಕಾಂಡ 6:5; 7:23.

ಯೆಹೋವನು ನಿಮ್ಮನ್ನು ಮೆಚ್ಚಿಕೆಯಿಂದ ನೋಡುವನೋ? ವಾಸ್ತವದಲ್ಲಿ, “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.” (2 ಪೂರ್ವಕಾಲವೃತ್ತಾಂತ 16:9) ಪುನಃ ಆತನು ಬಲು ಬೇಗನೆ ಈ ಭೂಮಿಯಿಂದ ಎಲ್ಲ ದುಷ್ಟರನ್ನು ನಿರ್ಮೂಲಗೊಳಿಸುವನು ಮತ್ತು ದೀನಮನಸ್ಸುಳ್ಳವರನ್ನು ರಕ್ಷಿಸುವನು.—ಕೀರ್ತನೆ 37:10, 11. (w07 8/1)