ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ‘ದೇವರ ವಿಷಯಗಳಲ್ಲಿ ಐಶ್ವರ್ಯವಂತರೋ?’

ನೀವು ‘ದೇವರ ವಿಷಯಗಳಲ್ಲಿ ಐಶ್ವರ್ಯವಂತರೋ?’

ನೀವು ‘ದೇವರ ವಿಷಯಗಳಲ್ಲಿ ಐಶ್ವರ್ಯವಂತರೋ?’

“ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ.”—ಲೂಕ 12:21.

ನಿಧಿ ಅನ್ವೇಷಣೆಯು ಕೇವಲ ಮಕ್ಕಳು ಆಡಬಯಸುವ ಒಂದು ಆಟವಲ್ಲ. ಅನೇಕ ದೇಶಗಳಲ್ಲಿ ಮತ್ತು ಅನೇಕರ ಜೀವಮಾನಗಳಲ್ಲಿ ಸಹ ಈ ಅನ್ವೇಷಣೆಯು ಪದೇ ಪದೇ ನಡೆಯುತ್ತದೆ. ಉದಾಹರಣೆಗಾಗಿ 19ನೇ ಶತಮಾನದಲ್ಲಿ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ಕೆನಡಾ ಮತ್ತು ಅಮೆರಿಕದಲ್ಲಿ ನಡೆದ ಚಿನ್ನಕ್ಕಾಗಿ-ನುಗ್ಗಾಟವು ದೂರ ದೂರ ದೇಶಗಳಿಂದ ಜನರನ್ನು ಆಕರ್ಷಿಸಿತ್ತು. ಅವರು ತಮ್ಮ ಮನೆಯನ್ನೂ ಹೆಂಡತಿಮಕ್ಕಳನ್ನೂ ಬಿಟ್ಟು ಅಪರಿಚಿತ ಮತ್ತು ಆಶ್ರಯಶೂನ್ಯ ದೇಶಗಳಿಗೆ ಹೋಗಿ ಹೊನ್ನಿನ ಅನ್ವೇಷಣೆ ಮಾಡಲು ಸಿದ್ಧರಿದ್ದರು. ಹೌದು, ಅನೇಕ ಜನರು ತಮ್ಮ ಹೃದಯವು ಆಶಿಸುವ ಸಂಪತ್ತನ್ನು ಗಳಿಸುವುದಕ್ಕಾಗಿ ಉಗ್ರ ಅಪಾಯಗಳನ್ನೂ ಅಪಾರ ತ್ಯಾಗಗಳನ್ನೂ ಮಾಡುವುದಕ್ಕೆ ಸದಾ ಸಿದ್ಧರಾಗಿದ್ದಾರೆ.

2 ಇಂದು ಹೆಚ್ಚಿನ ಜನರು ಒಂದು ಅಕ್ಷರಾರ್ಥ ನಿಧಿ ಅನ್ವೇಷಣೆಯಲ್ಲಿ ಪಾಲಿಗರಾಗದಿದ್ದರೂ, ತಮ್ಮ ಜೀವನೋಪಾಯಕ್ಕಾಗಿ ಅವರು ಶ್ರಮಪಟ್ಟು ದುಡಿಯಬೇಕಾಗಿದೆ. ಸದ್ಯದ ವಿಷಯ ವ್ಯವಸ್ಥೆಯಲ್ಲಿ ಅದನ್ನು ಮಾಡುವುದು ಕಷ್ಟಕರವೂ ಜಬರದಸ್ತವೂ ಭಾರವಾದ ಹೊರೆಯೂ ಆಗಿರಬಲ್ಲದು. ಕೇವಲ ಆಹಾರ, ವಸ್ತ್ರ ಮತ್ತು ಮನೆಗಾಗಿ ದುಡಿಯುವುದರಲ್ಲಿ ತಲ್ಲೀನರಾಗುವುದು ಎಷ್ಟು ಸುಲಭವೆಂದರೆ ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು ಅಲಕ್ಷಿಸಲಾಗುತ್ತದೆ ಇಲ್ಲವೇ ಮರೆತೇ ಬಿಡಲಾಗುತ್ತದೆ. (ರೋಮಾಪುರ 14:17) ಈ ಮಾನವ ಪ್ರವೃತ್ತಿಯನ್ನು ನಿಖರವಾಗಿ ವರ್ಣಿಸಿದಂತಹ ಒಂದು ದೃಷ್ಟಾಂತವನ್ನು ಅಥವಾ ಸಾಮ್ಯವನ್ನು ಯೇಸು ನಮಗೆ ಕೊಟ್ಟನು. ಅದು ಲೂಕ 12:16-21ರಲ್ಲಿ ಕಂಡುಬರುತ್ತದೆ.

3 ಯೇಸು ಈ ದೃಷ್ಟಾಂತವನ್ನು ಲೋಭದ ವಿರುದ್ಧವಾಗಿ ಎಚ್ಚರದಿಂದಿರುವ ಅಗತ್ಯದ ಕುರಿತು ತಿಳಿಸಿದ ಅದೇ ಸಂದರ್ಭದಲ್ಲಿ ಕೊಟ್ಟನು. ನಾವದನ್ನು ಸ್ವಲ್ಪ ವಿವರವಾಗಿ ಹಿಂದಿನ ಲೇಖನದಲ್ಲಿ ಚರ್ಚಿಸಿದ್ದೇವೆ. ಲೋಭದ ಕುರಿತು ಎಚ್ಚರಿಕೆಯನ್ನು ಕೊಟ್ಟಾದ ಮೇಲೆ ಯೇಸು ಒಬ್ಬ ಐಶ್ವರ್ಯವಂತನ ಕುರಿತಾಗಿ ಮಾತಾಡಿದನು. ಈ ಐಶ್ವರ್ಯವಂತನ ಕಣಜಗಳು ಅವನಲ್ಲಿ ಈಮೊದಲೇ ಇದ್ದ ಸಕಲ ಸರಕುಗಳಿಂದ ತುಂಬಿಹೋಗಿದ್ದವಾದರೂ ಅವನಿಗೆ ತೃಪ್ತಿಯಿರಲಿಲ್ಲ. ಆದುದರಿಂದ ಅವನು ಇನ್ನಷ್ಟು ಹೆಚ್ಚು ಸರಕುಗಳನ್ನು ಕೂಡಿಸಿಡಲಿಕ್ಕಾಗಿ ತನ್ನ ಕಣಜಗಳನ್ನು ಕೀಳಿಸಿ ಅವುಗಳಿಗಿಂತ ದೊಡ್ಡದಾದ ಕಣಜಗಳನ್ನು ಕಟ್ಟಿಸುತ್ತಾನೆ. ತಾನೀಗ ಆರಾಮವಾಗಿ ಸುಖಭೋಗದ ಜೀವನವನ್ನು ನಡಿಸಲು ಸಿದ್ಧನೆಂದು ಅವನು ನೆನಸುತ್ತಿರುವಾಗಲೇ, ‘ನೀನು ಸಾಯುವ ಗಳಿಗೆ ಬಂದಿದೆ, ನಿನಗಾಗಿ ಕೂಡಿಸಿಟ್ಟಿರುವ ಸಕಲವಸ್ತುಗಳೂ ಬೇರೊಬ್ಬನ ಪಾಲಾಗುವುವು’ ಎಂದು ದೇವರು ತಿಳಿಸುತ್ತಾನೆ. ಸಾಮ್ಯವನ್ನು ಕೊನೆಗೊಳಿಸುತ್ತಾ ಯೇಸು ಅಂದದ್ದು: “ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ.” (ಲೂಕ 12:21) ಈ ಸಾಮ್ಯದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? ಆ ಪಾಠವನ್ನು ನಾವು ನಮ್ಮ ಸ್ವಂತ ಜೀವನಕ್ಕೆ ಹೇಗೆ ಅನ್ವಯಿಸಸಾಧ್ಯವಿದೆ?

ಆ ಮನುಷ್ಯನಿಗಿದ್ದ ಸಮಸ್ಯೆ

4 ಯೇಸು ಕೊಟ್ಟ ಆ ದೃಷ್ಟಾಂತವು ಸುಪರಿಚಿತವಾದದ್ದೇ ಆಗಿದೆ. ಯೇಸು ಆ ಕಥೆಯನ್ನು, “ಒಬ್ಬಾನೊಬ್ಬ ಐಶ್ವರ್ಯವಂತನ ಭೂಮಿಯು ಚೆನ್ನಾಗಿ ಬೆಳೆಯಿತು” ಎಂದು ಮಾತ್ರ ಹೇಳಿ ಆರಂಭಿಸಿದ್ದನ್ನು ನಾವು ಗಮನಿಸುತ್ತೇವೆ. ಆ ಮನುಷ್ಯನು ತನ್ನ ಐಶ್ವರ್ಯವನ್ನು ಇತರರಿಗೆ ಮೋಸಮಾಡಿಯಾಗಲಿ ಅಕ್ರಮ ವ್ಯವಹಾರಗಳಿಂದಾಗಲಿ ಗಳಿಸಿದ್ದನೆಂದು ಯೇಸು ಹೇಳಲಿಲ್ಲ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಅವನನ್ನು ಒಬ್ಬ ಕೆಟ್ಟ ಮನುಷ್ಯನಾಗಿ ಚಿತ್ರಿಸಲಿಲ್ಲ. ಸಾಮ್ಯದಲ್ಲಿ ತಿಳಿಸಲ್ಪಟ್ಟ ಆ ಮನುಷ್ಯನು ಕಷ್ಟಪಟ್ಟು ದುಡಿದಿದ್ದ ವ್ಯಕ್ತಿಯೆಂದು ಯೇಸುವಿನ ಮಾತುಗಳಿಂದ ನಾವು ನ್ಯಾಯಸಮ್ಮತವಾಗಿ ನೆನಸಬಹುದು. ಪ್ರಾಯಶಃ ಅವನು ತನ್ನ ಕುಟುಂಬದ ಸುಕ್ಷೇಮವನ್ನು ಮನಸ್ಸಿನಲ್ಲಿಟ್ಟವನಾಗಿ ಭವಿಷ್ಯತ್ತಿಗಾಗಿ ಯೋಜಿಸಿ ಕೂಡಿಸಿಟ್ಟಿರಬಹುದು. ಹೀಗೆ ಐಹಿಕ ದೃಷ್ಟಿಯಲ್ಲಿ ನೋಡುವುದಾದರೆ, ತನ್ನ ಕರ್ತವ್ಯಗಳನ್ನು ಗಂಭೀರವಾಗಿ ತೆಗೆದುಕೊಂಡ ಒಬ್ಬ ಶ್ರಮಜೀವಿ ವ್ಯಕ್ತಿಯನ್ನು ಅವನು ಪ್ರತಿನಿಧಿಸಿದ್ದನು ಎನ್ನಬಹುದು.

5 ವಿಷಯವು ಹೇಗೆಯೇ ಇರಲಿ, ಸಾಮ್ಯದಲ್ಲಿನ ಆ ಮನುಷ್ಯನನ್ನು ಯೇಸು ಐಶ್ವರ್ಯವಂತನೆಂದು ಕರೆದದ್ದು ಮಾತ್ರ ನಿಜ. ಅಂದರೆ ಅವನು ಈ ಮೊದಲೇ ಹೇರಳವಾದ ಲೌಕಿಕ ಸರಕುಗಳನ್ನು ಹೊಂದಿದ್ದ ಮನುಷ್ಯನಾಗಿದ್ದನು. ಆದರೂ ಯೇಸು ತಿಳಿಸಿದ ಪ್ರಕಾರ ಆ ಐಶ್ವರ್ಯವಂತನಿಗೆ ಒಂದು ಸಮಸ್ಯೆಯಿತ್ತು. ಅವನ ಭೂಮಿಯು ಅವನು ನಿರೀಕ್ಷಿಸಿದ್ದಕ್ಕಿಂತಲೂ ಎಷ್ಟೋ ಹೆಚ್ಚು ಬೆಳೆಯನ್ನು ಅಂದರೆ ಅವನ ಅಗತ್ಯಕ್ಕಿಂತಲೂ ಹೆಚ್ಚಾದ ಅಥವಾ ತುಂಬಿಡುವುದಕ್ಕೆ ಸ್ಥಳವಿಲ್ಲದಷ್ಟು ಬೆಳೆಯನ್ನು ಉತ್ಪಾದಿಸಿತು. ಅವನು ಏನು ಮಾಡಬೇಕಾಗಿತ್ತು?

6 ಇಂದು ಯೆಹೋವನ ಸೇವಕರಲ್ಲಿ ಅನೇಕರು ಹೆಚ್ಚುಕಡಿಮೆ ಆ ಐಶ್ವರ್ಯವಂತನಿಗೆ ಇದ್ದಂತಹ ಸನ್ನಿವೇಶಗಳನ್ನೇ ಎದುರಿಸುತ್ತಾರೆ. ನಿಜ ಕ್ರೈಸ್ತರು ತಮ್ಮ ಕೆಲಸದಲ್ಲಿ ಪ್ರಾಮಾಣಿಕರೂ ಕಾರ್ಯನಿರತರೂ ನ್ಯಾಯನಿಷ್ಠರೂ ಆಗಿರಲು ಪ್ರಯಾಸಪಡುತ್ತಾರೆ ನಿಜ. (ಕೊಲೊಸ್ಸೆ 3:22, 23) ಅವರು ಉದ್ಯೋಗಸ್ಥರಾಗಿರಲಿ ಇಲ್ಲವೆ ಸ್ವಂತ ಬಿಸ್‌ನೆಸ್‌ ಉಳ್ಳವರಾಗಿರಲಿ, ತಮ್ಮ ಕೆಲಸದಲ್ಲಿ ಹೆಚ್ಚಾಗಿ ಏಳಿಗೆಯನ್ನು ಹೊಂದುತ್ತಿದ್ದಾರೆ, ಅತಿಶಯ ಯಶಸ್ಸನ್ನೂ ಪಡೆಯುತ್ತಾರೆ. ಹುದ್ದೆಯಲ್ಲಿ ಬಡತಿ ಅಥವಾ ಹೊಸ ಬಿಸ್‌ನೆಸ್‌ ಅವಕಾಶಗಳು ಬರುವಾಗ ಒಂದು ನಿರ್ಣಯವನ್ನು ಮಾಡುವ ಸನ್ನಿವೇಶವನ್ನು ಅವರು ಎದುರಿಸುತ್ತಾರೆ. ಅವರು ಬಡತಿಯನ್ನು ಸ್ವೀಕರಿಸಿ ಹೆಚ್ಚು ಹಣಮಾಡಬೇಕೋ? ತದ್ರೀತಿಯಲ್ಲಿ, ಅನೇಕ ಸಾಕ್ಷಿ ಯುವಜನರು ಶಾಲಾ ವ್ಯಾಸಂಗದಲ್ಲಿ ಅತಿಶಯಿಸುತ್ತಾರೆ. ಫಲಿತಾಂಶವಾಗಿ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಪಾರಿತೋಷಕಗಳು ಅಥವಾ ಸ್ಕಾಲರ್‌ಷಿಪ್‌ಗಳು ಅವರಿಗೆ ನೀಡಲ್ಪಡಬಹುದು. ಹಾಗಿರುವಲ್ಲಿ ಅವರು ಹೆಚ್ಚಿನವರಂತೆ ಮುಂದೆ ಹೋಗಿ ಆ ನೀಡಿಕೆಗಳನ್ನು ಸ್ವೀಕರಿಸಬೇಕೋ?

7 ನಾವೀಗ ಯೇಸುವಿನ ದೃಷ್ಟಾಂತಕ್ಕೆ ಹಿಂತಿರುಗೋಣ. ಆ ಐಶ್ವರ್ಯವಂತನ ಭೂಮಿಯು ಕೂಡಿಸಿಡಲು ಸ್ಥಳವಿಲ್ಲದಷ್ಟು ಸಮೃದ್ಧವಾದ ಬೆಳೆಯನ್ನು ಉತ್ಪಾದಿಸಿದಾಗ ಅವನೇನು ಮಾಡಿದನು? ತನ್ನಲ್ಲಿ ಈ ಮೊದಲೇ ಇದ್ದ ಕಣಜಗಳನ್ನು ಕೆಡವಿಹಾಕಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿ ಸಕಲ ಹೆಚ್ಚುವರಿ ದವಸಧಾನ್ಯ ಮತ್ತು ಸರಕುಗಳನ್ನು ಅವುಗಳಲ್ಲಿ ಕೂಡಿಸಿಡಲು ನಿರ್ಣಯಿಸಿದನು. ಪ್ರಾಯಶಃ ಅವನ ಈ ನಿರ್ಣಯವು ಅವನಿಗೆ ಎಂಥ ಸುರಕ್ಷೆಯ ಮತ್ತು ಸಂತೃಪ್ತಿಯ ಭಾವನೆಯನ್ನು ಕೊಟ್ಟಿದ್ದಿರಬಹುದೆಂದರೆ ಅವನು ತನ್ನಷ್ಟಕ್ಕೇ ನೆನಸಿದ್ದು: “ನನ್ನ ಜೀವಾತ್ಮಕ್ಕೆ—ಜೀವವೇ, ಅನೇಕ ವರುಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಿದ್ದದೆ; ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು.”—ಲೂಕ 12:19.

ಏಕೆ “ಬುದ್ಧಿಹೀನನು”?

8 ಆದರೂ ಯೇಸು ಹೇಳಿದ ಪ್ರಕಾರ ಆ ಐಶ್ವರ್ಯವಂತನ ಯೋಜನೆಯು ಕೇವಲ ಹುಸಿ ಸುರಕ್ಷಾ ಭಾವವನ್ನು ನೀಡಿತ್ತು. ಅದೆಷ್ಟು ವ್ಯಾವಹಾರಿಕವೆಂದು ಕಾಣುತ್ತಿತ್ತಾದರೂ ಅದು ಒಂದು ಅತಿ ಮಹತ್ವದ ಅಂಶವಾದ ದೇವರ ಚಿತ್ತವನ್ನು ಬಿಟ್ಟುಬಿಟ್ಟಿತ್ತು. ಆ ಮನುಷ್ಯನು ಕೇವಲ ತನ್ನ ಕುರಿತಾಗಿಯೇ ಆಲೋಚಿಸುತ್ತಿದ್ದನು. ಅವನು ಆಸಕ್ತನಾಗಿದ್ದದ್ದು ಕೇವಲ ತಿಂದು ಕುಡಿದು ವಿಶ್ರಾಂತಿ ತೆಗೆದುಕೊಂಡು ಸುಖಪಡೆಯುವುದು ಹೇಗೆಂಬುದರಲ್ಲೇ. ‘ಬೇಕಾದಷ್ಟು ಸರಕುಗಳನ್ನು’ ಹೊಂದಿರುವ ಕಾರಣ ತಾನೂ “ಅನೇಕ ವರುಷ”ಗಳ ತನಕ ಜೀವಿಸಸಾಧ್ಯವೆಂದು ಅವನು ನೆನಸಿದನು. ಆದರೆ ಶೋಚನೀಯವಾಗಿ ವಿಷಯಗಳು ಆ ರೀತಿ ಸಂಭವಿಸಲಿಲ್ಲ. “ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ” ಎಂದು ಯೇಸು ಆರಂಭದಲ್ಲಿ ಹೇಳಿದ್ದಂತೆಯೇ ಅದಾಯಿತು. (ಲೂಕ 12:15) ಯಾವುದಕ್ಕಾಗಿ ಅವನು ಕಷ್ಟಪಟ್ಟು ದುಡಿದಿದ್ದನೋ ಅವೆಲ್ಲವು ಅದೇ ರಾತ್ರಿಯಲ್ಲಿ ಹಠಾತ್ತನೇ ಕೊನೆಗೊಂಡವು ಯಾಕೆಂದರೆ ದೇವರು ಅವನಿಗಂದದ್ದು: “ಬುದ್ಧಿಹೀನನು ನೀನು! ಈ ಹೊತ್ತು ರಾತ್ರಿ ನಿನ್ನ ಪ್ರಾಣವನ್ನು ನಿನ್ನ ಕಡೆಯಿಂದ ಕೇಳುವರು; ಆಗ ನೀನು ಸಿದ್ಧಮಾಡಿಟ್ಟಿರುವದು ಯಾರಿಗಾಗುವದು?”—ಲೂಕ 12:20.

9 ಇಲ್ಲಿ ನಾವು ಯೇಸುವಿನ ದೃಷ್ಟಾಂತದ ಅತಿ ಪ್ರಾಮುಖ್ಯ ಭಾಗಕ್ಕೆ ಬರುತ್ತೇವೆ. ಆ ಮನುಷ್ಯನನ್ನು ದೇವರು ಬುದ್ಧಿಹೀನನೆಂದು ಕರೆದನು. ದಿ ಎಕ್ಸೆಜೆಟಿಕಲ್‌ ಡಿಕ್ಷನೆರಿ ಆಫ್‌ ನ್ಯೂ ಟೆಸ್ಟಮೆಂಟ್‌ ವಿವರಿಸುವುದೇನಂದರೆ ಇಲ್ಲಿ ಉಪಯೋಗಿಸಲ್ಪಟ್ಟ ಗ್ರೀಕ್‌ ಶಬ್ದದ ಪದರೂಪಗಳು “ಯಾವಾಗಲೂ ತಿಳುವಳಿಕೆಯ ಕೊರತೆಯನ್ನು ಸೂಚಿಸುತ್ತವೆ.” ಈ ಸಾಮ್ಯದಲ್ಲಿ, “ಧನಿಕರು ಭವಿಷ್ಯತ್ತಿಗಾಗಿ ಮಾಡುವ ಯೋಜನೆಗಳ ವ್ಯರ್ಥತೆಯನ್ನು ಬಯಲುಪಡಿಸಲು” ದೇವರು ಈ ಶಬ್ದಗಳನ್ನು ಉಪಯೋಗಿಸಿದನೆಂದು ಆ ಶಬ್ದಕೋಶ ಅವಲೋಕಿಸುತ್ತದೆ. ಆ ಶಬ್ದಗಳು ಬುದ್ಧಿಶಕ್ತಿಯಿಲ್ಲದ ವ್ಯಕ್ತಿಗೆ ಸೂಚಿಸುವುದಿಲ್ಲ, ಬದಲಿಗೆ “ದೇವರನ್ನು ಅವಲಂಬಿಸುವ ಆವಶ್ಯಕತೆಯನ್ನು ನಿರಾಕರಿಸುವವನಿಗೆ ಸೂಚಿಸುತ್ತವೆ.” ಆ ಐಶ್ವರ್ಯವಂತನನ್ನು ಯೇಸು ವರ್ಣಿಸಿದ ರೀತಿಯು ತದನಂತರ ಏಷ್ಯಾ ಮೈನರ್‌ನ ಲವೊದಿಕೀಯದಲ್ಲಿದ್ದ ಒಂದನೆಯ ಶತಕದ ಕ್ರೈಸ್ತ ಸಭೆಗೆ ಹೇಳಿದ ಸಂಗತಿಯನ್ನು ನಮ್ಮ ಮನಸ್ಸಿಗೆ ತರುತ್ತದೆ. ಅವನಂದದ್ದು: “ನೀನು ನನ್ನ ವಿಷಯದಲ್ಲಿ—ನಾನು ಐಶ್ವರ್ಯವಂತನು, ಸಂಪನ್ನನು, ಒಂದರಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ; ಆದರೆ ನೀನು ಕೇವಲ ದುರವಸ್ಥೆಯಲ್ಲಿ ಬಿದ್ದಿರುವಂಥವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬಟ್ಟೆಯಿಲ್ಲದವನು ಆಗಿರುವದನ್ನು ತಿಳಿಯದೆ ಇದ್ದೀ.”—ಪ್ರಕಟನೆ 3:17.

10 ಇದರಲ್ಲಿರುವ ಪಾಠವನ್ನು ನಾವು ತುಸು ಧ್ಯಾನಿಸುವುದು ಒಳ್ಳೆಯದು. ಆ ಸಾಮ್ಯದಲ್ಲಿನ ಮನುಷ್ಯನಂತೆ ನಾವು ಕೂಡ ಇರಸಾಧ್ಯವಿದ್ದೀತೊ? ‘ಬೇಕಾದಷ್ಟು ಸರಕುಗಳನ್ನು’ ಶೇಖರಿಸಲು ನಾವು ಕಷ್ಟಪಟ್ಟು ದುಡಿಯುತ್ತೇವಾದರೂ “ಅನೇಕ ವರ್ಷ”ಗಳನ್ನು ಗಳಿಸುವ ಭವಿಷ್ಯತ್ತಿನ ಪ್ರತೀಕ್ಷೆಯನ್ನು ಹೊಂದಲು ಆವಶ್ಯವಾದದ್ದನ್ನು ಮಾಡಲು ತಪ್ಪುತ್ತೇವೊ? (ಯೋಹಾನ 3:16; 17:3) ಬೈಬಲ್‌ ಅನ್ನುವುದು: “ಧನವು ಕೋಪದ ದಿನದಲ್ಲಿ ವ್ಯರ್ಥ,” ಹಾಗೂ “ಧನವನ್ನೇ ನಂಬಿದವನು ಬಿದ್ದುಹೋಗುವನು.” (ಜ್ಞಾನೋಕ್ತಿ 11:4, 28) ಆದುದರಿಂದಲೇ ಆ ಸಾಮ್ಯಕ್ಕೆ ಯೇಸು ಈ ಕೊನೆಯ ಬುದ್ಧಿವಾದವನ್ನು ಕೂಡಿಸಿದನು: “ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ.”—ಲೂಕ 12:21.

11 “ಅವನಂತೆಯೇ ಇದ್ದಾನೆ” ಎಂದು ಯೇಸು ಹೇಳಿದಾಗ, ಸಾಮ್ಯದಲ್ಲಿನ ಆ ಐಶ್ವರ್ಯವಂತನಿಗೆ ಏನು ಸಂಭವಿಸಿತೋ ಅದು, ತಮ್ಮ ನಿರೀಕ್ಷೆ ಮತ್ತು ಭದ್ರತೆಯನ್ನು ಅಂದರೆ ತಮ್ಮ ಜೀವನವನ್ನೇ ಸಂಪೂರ್ಣವಾಗಿ ಲೌಕಿಕ ಸ್ವತ್ತುಗಳ ಮೇಲೆ ಕಟ್ಟುವವರಿಗೂ ಸಂಭವಿಸುವುದೆಂದು ಸೂಚಿಸುತ್ತಿದ್ದನು. ‘ತನಗೋಸ್ಕರ ದ್ರವ್ಯವನ್ನಿಟ್ಟುಕೊಳ್ಳುವುದರಲ್ಲಿ’ ತಪ್ಪೇನಿಲ್ಲ ಆದರೆ “ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ” ಇರುವುದೇ ದೊಡ್ಡ ತಪ್ಪು. ಶಿಷ್ಯ ಯಾಕೋಬನು ತದ್ರೀತಿಯ ಎಚ್ಚರಿಕೆಯನ್ನು ಕೊಡುತ್ತಾ ಬರೆದುದು: “ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರುಷವಿದ್ದು ವ್ಯಾಪಾರವನ್ನು ಮಾಡಿ ಲಾಭವನ್ನು ಸಂಪಾದಿಸುತ್ತೇವೆ ಅನ್ನುವವರೇ ಕೇಳಿರಿ. ನಾಳೆ ಏನಾಗುವದೋ ನಿಮಗೆ ತಿಳಿಯದು.” ಹಾಗಾದರೆ ಅವರೇನು ಮಾಡಬೇಕು? “ನೀವು ಅಂಥ ಮಾತನ್ನು ಬಿಟ್ಟು ದೇವರ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು ಎಂದು ಹೇಳಬೇಕು.” (ಯಾಕೋಬ 4:13-15) ಒಬ್ಬನು ಎಷ್ಟೇ ಐಶ್ವರ್ಯವಂತನಾಗಿರಲಿ ಅಥವಾ ಅವನಲ್ಲಿ ಎಷ್ಟೇ ಆಸ್ತಿಪಾಸ್ತಿಗಳಿರಲಿ, ಅವನು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗಿ ಇರದಿದ್ದಲ್ಲಿ ಅವೆಲ್ಲವು ವ್ಯರ್ಥವೇ ವ್ಯರ್ಥ. ಹಾಗಾದರೆ ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗಿರುವುದರ ಅರ್ಥವೇನು?

ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗಿರುವುದು

12 ಯೇಸು ತನ್ನ ಹೇಳಿಕೆಯಲ್ಲಿ, ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗಿರುವುದು ಮತ್ತು ತನಗೋಸ್ಕರ ದ್ರವ್ಯವನ್ನಿಟ್ಟುಕೊಳ್ಳುವುದು ಅಥವಾ ತನ್ನನ್ನು ಲೌಕಿಕ ರೀತಿಯಲ್ಲಿ ಧನವಂತನಾಗಿ ಮಾಡಿಕೊಳ್ಳುವುದರ ನಡುವಿನ ವ್ಯತ್ಯಾಸವನ್ನು ತಿಳಿಸುತ್ತಾನೆ. ಹೀಗೆ ಯೇಸು ಹೇಳುತ್ತಿದ್ದದ್ದು ಐಹಿಕ ಐಶ್ವರ್ಯಗಳ ಒಟ್ಟುಗೂಡಿಸುವಿಕೆ ಅಥವಾ ನಮ್ಮಲ್ಲಿರುವ ಲೌಕಿಕ ಸ್ವತ್ತುಗಳಲ್ಲಿ ತೃಪ್ತಿಯೇ ನಮ್ಮ ಜೀವನದ ಮುಖ್ಯ ಚಿಂತೆಯಾಗಿರಬಾರದು ಎಂಬುದನ್ನೇ. ಬದಲಿಗೆ ನಾವು ನಮ್ಮ ಸಂಪನ್ಮೂಲಗಳನ್ನು ಯೆಹೋವನೊಂದಿಗೆ ನಮ್ಮ ಸಂಬಂಧವನ್ನು ಉತ್ತಮಗೊಳಿಸುವಂಥ ಹಾಗೂ ಬಲಪಡಿಸುವಂಥ ರೀತಿಯಲ್ಲಿ ಉಪಯೋಗಿಸಬೇಕು. ಹೀಗೆ ಮಾಡುವುದರಿಂದ ನಾವು ಖಂಡಿತವಾಗಿಯೂ ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗುವೆವು. ಏಕೆ? ಏಕೆಂದರೆ ಆತನಿಂದ ಬರುವ ಅನೇಕ ಆಶೀರ್ವಾದಗಳಿಗೆ ಅದು ದಾರಿ ತೆರೆಯುವುದು. ಬೈಬಲ್‌ ಅನ್ನುವುದು: “ಯೆಹೋವನ ಆಶೀರ್ವಾದವು ಐಶ್ವರ್ಯವನ್ನುಂಟುಮಾಡುವುದು. ಅದರೊಂದಿಗೆ ಅವನು ಯಾವ ದುಃಖವನ್ನೂ ಸೇರಿಸುವದಿಲ್ಲ.”—ಜ್ಞಾನೋಕ್ತಿ 10:22, NIBV.

13 ಯೆಹೋವನು ತನ್ನ ಜನರಿಗೆ ಆಶೀರ್ವಾದವನ್ನು ಅನುಗ್ರಹಿಸುವಾಗ ಅವರಿಗೆ ಯಾವಾಗಲೂ ಅತ್ಯುತ್ತಮವಾದುದ್ದನ್ನೇ ಕೊಡುತ್ತಾನೆ. (ಯಾಕೋಬ 1:17) ಉದಾಹರಣೆಗಾಗಿ, ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ನಿವಾಸಸ್ಥಾನವು “ಹಾಲೂ ಜೇನೂ ಹರಿಯುವ ದೇಶ”ವಾಗಿತ್ತು. ಐಗುಪ್ತ ದೇಶವು ಸಹ ಅದೇ ರೀತಿಯಾಗಿ ವರ್ಣಿಸಲ್ಪಟ್ಟಿತ್ತಾದರೂ, ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟಂಥ ದೇಶವು ಕಡಿಮೆಪಕ್ಷ ಒಂದು ಪ್ರಾಮುಖ್ಯ ವಿಷಯದಲ್ಲಿ ಭಿನ್ನವಾಗಿತ್ತು. “ಅದು ನಿಮ್ಮ ದೇವರಾದ ಯೆಹೋವನು ಪರಾಂಬರಿಸುವ ದೇಶ” ಎಂದು ಮೋಶೆ ಇಸ್ರಾಯೇಲ್ಯರಿಗೆ ಹೇಳಿದ್ದನು. ಬೇರೊಂದು ಮಾತಿನಲ್ಲಿ ಹೇಳುವುದಾದರೆ, ಯೆಹೋವನು ಅವರ ಪರಾಮರಿಕೆ ಮಾಡಲಿದ್ದ ಕಾರಣ ಅವರು ಸಮೃದ್ಧಿಯನ್ನು ಹೊಂದಲಿದ್ದರು. ಇಸ್ರಾಯೇಲ್ಯರು ಎಷ್ಟರ ತನಕ ಯೆಹೋವನಿಗೆ ನಂಬಿಗಸ್ತರಾಗಿ ಉಳಿದರೋ ಅಷ್ಟರ ತನಕ ಆತನು ಅವರನ್ನು ಹೇರಳವಾಗಿ ಆಶೀರ್ವದಿಸಿದನು. ಮತ್ತು ಅವರು ತಮ್ಮ ಸುತ್ತಲಿದ್ದ ಜನಾಂಗಗಳಿಗಿಂತ ಉತ್ಕೃಷ್ಟವೆಂದು ಕಂಡುಬಂದ ಜೀವನಶೈಲಿಯಲ್ಲಿ ಆನಂದಿಸಿದ್ದರು. ಹೌದು, “ಐಶ್ವರ್ಯವನ್ನುಂಟುಮಾಡುವುದು” ಯೆಹೋವನ ಆಶೀರ್ವಾದವೇ ಎಂಬುದು ನಿಶ್ಚಯ!—ಅರಣ್ಯಕಾಂಡ 16:13; ಧರ್ಮೋಪದೇಶಕಾಂಡ 4:5-8; 11:8-15.

14 “ದೇವರ ವಿಷಯಗಳಲ್ಲಿ ಐಶ್ವರ್ಯವಂತ” ಎಂಬ ಅಭಿವ್ಯಕ್ತಿಯು “ದೇವರ ನೋಟದಲ್ಲಿ ಐಶ್ವರ್ಯವಂತ” (ಟುಡೇಸ್‌ ಇಂಗ್ಲಿಷ್‌ ವರ್ಷನ್‌) ಅಥವಾ “ದೇವರ ದೃಷ್ಟಿಯಲ್ಲಿ ಐಶ್ವರ್ಯವಂತ” (ದಿ ನ್ಯೂ ಟೆಸ್ಟಮೆಂಟ್‌ ಇನ್‌ ಮಾಡರ್ನ್‌ ಇಂಗ್ಲಿಷ್‌, ಜೆ. ಬಿ. ಫಿಲಿಪ್ಸ್‌ರಿಂ ) ಎಂಬದಾಗಿಯೂ ಭಾಷಾಂತರಿಸಲ್ಪಟ್ಟಿದೆ. ಯಾರು ಭೌತಿಕವಾಗಿ ಧನವಂತರೊ ಅವರು ಬೇರೆಯವರ ದೃಷ್ಟಿಯಲ್ಲಿ ತಾವು ಹೇಗೆ ಕಂಡುಬರುತ್ತೇವೋ ಎಂಬ ವಿಷಯದಲ್ಲಿ ಸಾಮಾನ್ಯವಾಗಿ ಚಿಂತಿಸುತ್ತಾರೆ. ಇದು ಹೆಚ್ಚಾಗಿ ಅವರ ಜೀವನಶೈಲಿಯಿಂದ ಆಗಾಗ್ಯೆ ತೋರಿಬರುತ್ತದೆ. ಬೈಬಲ್‌ ಯಾವುದನ್ನು “ಬದುಕುಬಾಳಿನ ಡಂಬ” ಎಂದು ಕರೆಯುತ್ತದೋ ಅದರ ಮೂಲಕ ಜನರ ಮೇಲೆ ಪರಿಣಾಮಬೀರಲು ಅವರು ಬಯಸುತ್ತಾರೆ. (1 ಯೋಹಾನ 2:16) ತದ್ವಿರುದ್ಧವಾಗಿ, ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗಿರುವವರು ದೇವರ ಅನುಗ್ರಹ, ಒಪ್ಪಿಗೆ, ಮತ್ತು ಅಪಾರ ಕೃಪೆಯನ್ನು ಹೇರಳವಾಗಿ ಪಡೆಯುತ್ತಾರೆ ಮತ್ತು ಅವರಿಗೆ ಆತನೊಂದಿಗೆ ಹೃತ್ಪೂರ್ವಕ ವೈಯಕ್ತಿಕ ಸಂಬಂಧವಿರುತ್ತದೆ. ಅಂಥ ಒಂದು ಅಮೂಲ್ಯ ಸ್ಥಿತಿಯಲ್ಲಿರುವುದು ನಿಶ್ಚಯವಾಗಿಯೂ ಯಾವುದೇ ಪ್ರಾಪಂಚಿಕ ಐಶ್ವರ್ಯಗಳು ಕೊಡಬಲ್ಲದ್ದಕ್ಕಿಂತ ಹೆಚ್ಚಿನದಾದ ಸಂತೋಷ ಮತ್ತು ಭದ್ರತೆಯನ್ನು ಅವರಿಗೆ ಕೊಡುತ್ತದೆ. (ಯೆಶಾಯ 40:11) ಈಗ ಉಳಿದಿರುವ ಪ್ರಶ್ನೆಯು, ದೇವರ ದೃಷ್ಟಿಯಲ್ಲಿ ಐಶ್ವರ್ಯವಂತರಾಗಿರ ಬೇಕಾದರೆ ನಾವೇನು ಮಾಡಬೇಕು ಎಂಬದೇ.

ದೇವರ ದೃಷ್ಟಿಯಲ್ಲಿ ಐಶ್ವರ್ಯವಂತರು

15 ಯೇಸುವಿನ ದೃಷ್ಟಾಂತದಲ್ಲಿನ ಆ ಮನುಷ್ಯನು ತನ್ನನ್ನು ಧನಿಕನನ್ನಾಗಿ ಮಾಡಿಕೊಳ್ಳುವುದಕ್ಕಾಗಿ ಮಾತ್ರವೇ ಕಷ್ಟಪಟ್ಟು ದುಡಿದನು ಮತ್ತು ಹೀಗೆ ಬುದ್ಧಿಹೀನನೆಂದು ಕರೆಯಲ್ಪಟ್ಟನು. ಆದುದರಿಂದ ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗಿರಲು ನಾವು ಕಷ್ಟಪಟ್ಟು ದುಡಿಯಬೇಕು ಮತ್ತು ದೇವರ ದೃಷ್ಟಿಯಲ್ಲಿ ನಿಜವಾಗಿಯೂ ಬೆಲೆಯುಳ್ಳ ಮತ್ತು ಯೋಗ್ಯವಾದ ಚಟುವಟಿಕೆಗಳಲ್ಲಿ ಪೂರ್ಣವಾಗಿ ಪಾಲಿಗರಾಗಬೇಕು. ಅವುಗಳಲ್ಲಿ ಯೇಸು ಆಜ್ಞಾಪಿಸಿದ ಈ ವಿಷಯ ಸೇರಿದೆ: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.” (ಮತ್ತಾಯ 28:19) ನಾವು ನಮ್ಮ ಸಮಯ, ಶಕ್ತಿ ಮತ್ತು ಸಾಮರ್ಥ್ಯಗಳನ್ನು ಸ್ವಸುಖ ಸಾಧನೆಗಾಗಿ ಅಲ್ಲ, ರಾಜ್ಯ-ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವಿಕೆಗಾಗಿ ಉಪಯೋಗಿಸಬೇಕು. ಆಗ ಅದು ಒಂದು ಬಂಡವಾಳ ಹೂಡುವುದಕ್ಕೆ ಸಮಾನವಾಗಿರುತ್ತದೆ. ಈ ಕೆಳಗಿನ ಅನುಭವಗಳು ತೋರಿಸುವ ಪ್ರಕಾರ, ಯಾರು ಹಾಗೆ ಮಾಡಿದ್ದಾರೋ ಅವರು ಹೇರಳವಾದ ಆಧ್ಯಾತ್ಮಿಕ ಲಾಭಾಂಶಗಳನ್ನು ಕೊಯ್ದಿದ್ದಾರೆ.—ಜ್ಞಾನೋಕ್ತಿ 19:17.

16 ಪೌರಾತ್ಯ ದೇಶವೊಂದರಲ್ಲಿನ ಕ್ರೈಸ್ತನೊಬ್ಬನ ಅನುಭವವನ್ನು ಪರಿಗಣಿಸಿರಿ. ಕಂಪ್ಯೂಟರ್‌ ಟೆಕ್ನೀಷಿಯನ್‌ ಆಗಿದ್ದ ಅವನಿಗೆ ಒಳ್ಳೇ ವೇತನದ ಕೆಲಸವಿತ್ತು. ಆದರೆ ಅವನ ಕೆಲಸವು ಬಹುತೇಕ ಅವನ ಎಲ್ಲಾ ಸಮಯವನ್ನು ನುಂಗಿಬಿಡುತ್ತಿತ್ತಾದ್ದರಿಂದ ಆಧ್ಯಾತ್ಮಿಕವಾಗಿ ಬಡಕಲಾದ ಅನಿಸಿಕೆಯು ಅವನಿಗಾಯಿತು. ಹೀಗೆ ತನ್ನ ಕೆಲಸದಲ್ಲಿ ಮುಂದೊತ್ತಲು ಪ್ರಯತ್ನಿಸುವ ಬದಲಾಗಿ ಅದನ್ನು ಬಿಟ್ಟುಬಿಟ್ಟು, ಆಧ್ಯಾತ್ಮಿಕ ಅಗತ್ಯಗಳಿಗಾಗಿ ಮತ್ತು ಜವಾಬ್ದಾರಿಗಳಿಗಾಗಿ ಹೆಚ್ಚು ಸಮಯ ದೊರೆಯುವಂತೆ ಬೇರೊಂದು ಬಿಸ್‌ನೆಸ್‌ ಅನ್ನು ಅವನು ಆರಂಭಿಸಿದನು. ಅದು ಯಾವುದೆಂದರೆ ಐಸ್‌ಕ್ರೀಮ್‌ ತಯಾರಿಸಿ ದಾರಿಬದಿಯಲ್ಲಿ ಮಾರಾಟ ಮಾಡುವುದೇ. ಅವನ ಮುಂಚಿನ ಸಹೋದ್ಯೋಗಿಗಳು ಇದನ್ನು ಕಂಡು ಅವನಿಗೆ ಗೇಲಿಮಾಡಿದರೂ ಫಲಿತಾಂಶವೇನಾಯಿತು? ಅವನಂದದ್ದು: “ಈಗ ನನ್ನ ಆರ್ಥಿಕ ಆದಾಯವು ಕಂಪ್ಯೂಟರ್‌ ಕೆಲಸಕ್ಕಿಂತ ಹೆಚ್ಚಾಗಿದೆ. ನನ್ನ ಹಿಂದಿನ ಕೆಲಸದಲ್ಲಿ ನನಗಿದ್ದ ಒತ್ತಡ ಮತ್ತು ಚಿಂತೆ ಈಗ ಇಲ್ಲದಿರುವುದರಿಂದ ನಾನು ಹೆಚ್ಚು ಸಂತೋಷಿತನು. ಎಲ್ಲದಕ್ಕಿಂತಲೂ ಮಿಗಿಲಾಗಿ ನಾನು ಈಗ ಯೆಹೋವನಿಗೆ ಹೆಚ್ಚು ಹತ್ತಿರವಾಗಿದ್ದೇನೆ.” ಆ ಬದಲಾವಣೆಯು ಈ ಕ್ರೈಸ್ತನನ್ನು ಪೂರ್ಣಸಮಯದ ಶುಶ್ರೂಷೆಯನ್ನು ಪ್ರಾರಂಭಿಸುವಂತೆ ಸಾಧ್ಯಮಾಡಿತು ಮತ್ತು ಅವನೀಗ ತನ್ನ ದೇಶದಲ್ಲಿನ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಸೇವೆಮಾಡುತ್ತಿದ್ದಾನೆ. ಯೆಹೋವನ ಆಶೀರ್ವಾದವು ನಿಶ್ಚಯವಾಗಿಯೂ ನಮ್ಮನ್ನು ‘ಐಶ್ವರ್ಯವಂತರನ್ನಾಗಿ’ ಮಾಡುತ್ತದೆ.

17 ಇನ್ನೊಂದು ಅನುಭವವು ಒಬ್ಬಾಕೆ ಮಹಿಳೆಯದ್ದಾಗಿದೆ. ಶಿಕ್ಷಣವು ಅತ್ಯಂತ ಮೌಲ್ಯವುಳ್ಳದೆಂದು ಎಣಿಸಿದ ಕುಟುಂಬವೊಂದರಲ್ಲಿ ಆಕೆ ಬೆಳೆದಳು. ಅವಳು ಫ್ರಾನ್ಸ್‌, ಮೆಕ್ಸಿಕೋ ಮತ್ತು ಸ್ವಿಟ್ಸರ್‌ಲೆಂಡ್‌ ವಿಶ್ವವಿದ್ಯಾನಿಲಯಗಳಲ್ಲಿ ಕಲಿತಳು ಮತ್ತು ಭರವಸದಾಯಕ ವೃತ್ತಿಯ ಉತ್ತಮ ಪ್ರತೀಕ್ಷೆ ಅವಳಿಗಿತ್ತು. ಅವಳಂದದ್ದು: “ಯಶಸ್ಸು ನನ್ನನ್ನು ಒಲಿದಿತ್ತು. ಸುಪ್ರತಿಷ್ಠೆ ಮತ್ತು ಸುಅವಕಾಶಗಳು ನನಗೆ ದೊರೆತವು. ಆದರೆ ನನ್ನ ಹೃದಯವು ಬರಿದಾಗಿತ್ತು, ಆಳವಾದ ಅಸಂತೃಪ್ತಿಯು ನನ್ನನ್ನು ಕಾಡುತ್ತಿತ್ತು.” ಅನಂತರ ಯೆಹೋವನ ಕುರಿತು ಅವಳು ಕಲಿತಳು. ಬಳಿಕ ಅವಳಂದದ್ದು: “ಆಧ್ಯಾತ್ಮಿಕವಾಗಿ ನಾನು ಪ್ರಗತಿಮಾಡಿದಷ್ಟಕ್ಕೆ ಯೆಹೋವನನ್ನು ಮೆಚ್ಚಿಸುವ ಹಾಗೂ ಆತನು ಮಾಡಿದ್ದ ಉಪಕಾರಕ್ಕೆ ತುಸುವಾದರೂ ಕೃತಜ್ಞತೆ ತೋರಿಸುವ ಬಲವಾದ ಅಪೇಕ್ಷೆ ನನ್ನಲ್ಲಿ ಮೂಡಿತು. ಅದು ನನಗೆ ಪೂರ್ಣಸಮಯ ದೇವರ ಸೇವೆಮಾಡುವ ಮಾರ್ಗವನ್ನು ಸ್ಪಷ್ಟವಾಗಿ ಕಾಣುವಂತೆ ಸಾಧ್ಯಮಾಡಿತು.” ಅವಳು ತನ್ನ ಐಹಿಕ ಕೆಲಸಕ್ಕೆ ರಾಜೀನಾಮೆ ಕೊಟ್ಟಳು ಮತ್ತು ಬೇಗನೆ ದೀಕ್ಷಾಸ್ನಾನ ಪಡೆದುಕೊಂಡಳು. ಕಳೆದ 20 ವರ್ಷಗಳಿಂದ ಅವಳು ಸಂತೋಷದಿಂದ ಪೂರ್ಣಸಮಯದ ಸೇವೆ ಮಾಡುತ್ತಿದ್ದಾಳೆ. “ನನ್ನ ಪ್ರತಿಭೆಗಳನ್ನು ನಾನು ವ್ಯರ್ಥಗೊಳಿಸಿದೆನೆಂದು ಕೆಲವರು ನೆನಸುತ್ತಾರೆ. ಆದರೆ ನಾನು ಸಂತೋಷಿತಳೆಂದು ಒಪ್ಪುತ್ತಾರೆ ಹಾಗೂ ನನ್ನ ಜೀವನಕ್ಕೆ ಆಧಾರವಾಗಿರುವ ಮೂಲತತ್ತ್ವಗಳನ್ನು ಅವರು ಮೆಚ್ಚುತ್ತಾರೆ. ಯೆಹೋವನ ಅನುಗ್ರಹವನ್ನು ಗಳಿಸಲಿಕ್ಕಾಗಿ ದೀನಳಾಗಿರುವಂತೆ ಸಹಾಯಕ್ಕಾಗಿ ನಾನು ಅನುದಿನವೂ ಆತನಿಗೆ ಪ್ರಾರ್ಥಿಸುತ್ತೇನೆ.”

18 ಅಪೊಸ್ತಲ ಪೌಲನಾಗಿ ಪರಿಣಮಿಸಿದ ಸೌಲನ ಮುಂದೆ ಒಂದು ಭರವಸದಾಯಕ ವೃತ್ತಿಯಿತ್ತು. ಆದರೂ ಅವನು ಅನಂತರ ಬರೆದದ್ದು: “ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವದೇ ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ.” (ಫಿಲಿಪ್ಪಿ 3:7, 8) ಕ್ರಿಸ್ತನ ಮೂಲಕವಾಗಿ ಪೌಲನು ಗಳಿಸಿದ ಐಶ್ವರ್ಯವು ಲೋಕವು ಅವನಿಗೆ ನೀಡಸಾಧ್ಯವಿದ್ದ ಯಾವುದೇ ವಿಷಯಕ್ಕಿಂತ ಅತಿಶ್ರೇಷ್ಠವಾಗಿತ್ತು. ತದ್ರೀತಿಯಲ್ಲಿ, ಯಾವುದೇ ಸ್ವಾರ್ಥ ಹೆಬ್ಬಯಕೆಗಳನ್ನು ತ್ಯಜಿಸುವ ಮೂಲಕ ಮತ್ತು ದೇವಭಕ್ತಿಯ ಜೀವನವನ್ನು ಬೆನ್ನಟ್ಟುವ ಮೂಲಕ, ನಾವು ಸಹ ದೇವರ ದೃಷ್ಟಿಯಲ್ಲಿ ಐಶ್ವರ್ಯವಂತ ಜೀವನವನ್ನು ಆನಂದಿಸಬಲ್ಲೆವು. ದೇವರ ವಾಕ್ಯವು ನಮಗೆ ಆಶ್ವಾಸನೆ ಕೊಡುವುದು: “ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ.”—ಜ್ಞಾನೋಕ್ತಿ 22:4. (w07 8/1)

ನೀವು ವಿವರಿಸಬಲ್ಲಿರೋ?

• ಯೇಸುವಿನ ಸಾಮ್ಯದಲ್ಲಿನ ಮನುಷ್ಯನಿಗೆ ಯಾವ ಸಮಸ್ಯೆಯಿತ್ತು?

• ಸಾಮ್ಯದಲ್ಲಿನ ಮನುಷ್ಯನನ್ನು ಬುದ್ಧಿಹೀನನೆಂದು ಏಕೆ ಕರೆಯಲಾಯಿತು?

• ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗಿರುವುದು ಎಂದರೇನು?

• ದೇವರ ವಿಷಯಗಳಲ್ಲಿ ನಾವು ಹೇಗೆ ಐಶ್ವರ್ಯವಂತರಾಗಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಯಾವುದಕ್ಕಾಗಿ ಮಹಾ ತ್ಯಾಗಗಳನ್ನು ಮಾಡಲು ಜನರು ಸಿದ್ಧರಾಗಿದ್ದರು? (ಬಿ) ಯಾವ ಕಷ್ಟವನ್ನು ಮತ್ತು ಅಪಾಯವನ್ನು ಕ್ರೈಸ್ತರು ಎದುರಿಸಲೇ ಬೇಕು?

3. ಲೂಕ 12:16-21ರಲ್ಲಿ ದಾಖಲೆಯಾದ ಯೇಸುವಿನ ದೃಷ್ಟಾಂತವನ್ನು ಸಂಕ್ಷೇಪವಾಗಿ ತಿಳಿಸಿರಿ.

4. ಯೇಸುವಿನ ಸಾಮ್ಯದಲ್ಲಿನ ಮನುಷ್ಯನು ಯಾವ ರೀತಿಯ ವ್ಯಕ್ತಿಯಾಗಿದ್ದನೆಂದು ನಾವು ಹೇಳಸಾಧ್ಯವಿದೆ?

5. ಯೇಸುವಿನ ಸಾಮ್ಯದಲ್ಲಿನ ಮನುಷ್ಯನಿಗೆ ಯಾವ ಸಮಸ್ಯೆ ಎದುರಾಗುತ್ತದೆ?

6. ದೇವರ ಸೇವಕರಲ್ಲಿ ಅನೇಕರು ಯಾವ ಆಯ್ಕೆಗಳನ್ನು ಇಂದು ಎದುರಿಸುತ್ತಾರೆ?

7. ಯೇಸುವಿನ ಸಾಮ್ಯದಲ್ಲಿನ ಆ ಮನುಷ್ಯನು ತನ್ನ ಸಮಸ್ಯೆಯನ್ನು ಹೇಗೆ ನಿಭಾಯಿಸಿದನು?

8. ಯೇಸುವಿನ ಸಾಮ್ಯದಲ್ಲಿನ ಮನುಷ್ಯನು ಯಾವ ಮಹತ್ವದ ಅಂಶವನ್ನು ನಿರ್ಲಕ್ಷಿಸಿದನು?

9. ಸಾಮ್ಯದಲ್ಲಿನ ಆ ಮನುಷ್ಯನನ್ನು ಬುದ್ಧಿಹೀನನೆಂದು ಏಕೆ ಕರೆಯಲಾಯಿತು?

10. ‘ಬೇಕಾದಷ್ಟು ಸರಕುಗಳನ್ನು’ ಹೊಂದಿರುವುದು “ಅನೇಕ ವರುಷ”ಗಳನ್ನು ಗಳಿಸುವ ಪ್ರತೀಕ್ಷೆಗೆ ಗ್ಯಾರಂಟಿಯಲ್ಲವೇಕೆ?

11. ಒಬ್ಬನು ತನ್ನ ನಿರೀಕ್ಷೆ ಮತ್ತು ಭದ್ರತೆಯನ್ನು ಲೌಕಿಕ ಸ್ವತ್ತುಗಳ ಮೇಲೆ ಕಟ್ಟುವುದು ಏಕೆ ವ್ಯರ್ಥವಾಗಿದೆ?

12. ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗಲು ನಾವೇನನ್ನು ಮಾಡಬೇಕು?

13. ಯೆಹೋವನ ಆಶೀರ್ವಾದವು “ಐಶ್ವರ್ಯವನ್ನುಂಟುಮಾಡುವುದು” ಹೇಗೆ?

14. ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗಿರುವವರು ಏನನ್ನು ಅನುಭವಿಸುತ್ತಾರೆ?

15. ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗಿರುವುದಕ್ಕಾಗಿ ನಾವೇನನ್ನು ಮಾಡಬೇಕು?

16, 17. ದೇವರ ದೃಷ್ಟಿಯಲ್ಲಿ ಒಬ್ಬನನ್ನು ಐಶ್ವರ್ಯವಂತನಾಗಿ ಮಾಡುವ ಜೀವನ ಮಾರ್ಗವನ್ನು ತೋರಿಸಲು ಯಾವ ಅನುಭವಗಳನ್ನು ನೀವು ತಿಳಿಸಬಲ್ಲಿರಿ?

18. ಪೌಲನಂತೆ ನಾವೂ ದೇವರ ವಿಷಯಗಳಲ್ಲಿ ಹೇಗೆ ಐಶ್ವರ್ಯವಂತರಾಗಿರಬಲ್ಲೆವು?