ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಪವಿತ್ರಾತ್ಮಕ್ಕೆ ವಿರುದ್ಧವಾಗಿ ಪಾಪಮಾಡಿದ್ದೀರೋ?

ನೀವು ಪವಿತ್ರಾತ್ಮಕ್ಕೆ ವಿರುದ್ಧವಾಗಿ ಪಾಪಮಾಡಿದ್ದೀರೋ?

ನೀವು ಪವಿತ್ರಾತ್ಮಕ್ಕೆ ವಿರುದ್ಧವಾಗಿ ಪಾಪಮಾಡಿದ್ದೀರೋ?

“ಮರಣಕರವಾದ ಪಾಪವುಂಟು.”—1 ಯೋಹಾನ 5:16.

“ನಾನು ಪವಿತ್ರಾತ್ಮಕ್ಕೆ ವಿರುದ್ಧವಾಗಿ ಪಾಪ ಮಾಡಿದ್ದೇನೆಂಬ ಯೋಚನೆ ಸದಾ ನನ್ನನ್ನು ಪೀಡಿಸುತ್ತಿತ್ತು” ಎಂದು ಬರೆದಳು ಜರ್ಮನಿಯ ಒಬ್ಬಾಕೆ ಸ್ತ್ರೀ. ಅವಳು ದೇವರನ್ನು ಸೇವಿಸುತ್ತಿದ್ದರೂ ಅಂಥ ಭಾವನೆ ಅವಳನ್ನು ಕಾಡಿಸುತ್ತಾ ಇತ್ತು. ಹಾಗಾದರೆ, ಒಬ್ಬ ಕ್ರೈಸ್ತನು ದೇವರ ಪವಿತ್ರಾತ್ಮ ಇಲ್ಲವೆ ಕ್ರಿಯಾಶೀಲ ಶಕ್ತಿಯ ವಿರುದ್ಧ ಪಾಪಮಾಡಬಲ್ಲನೊ?

2 ಹೌದು, ಕ್ರೈಸ್ತನೊಬ್ಬನು ಯೆಹೋವನ ಪವಿತ್ರಾತ್ಮದ ವಿರುದ್ಧ ಪಾಪ ಮಾಡಸಾಧ್ಯವಿದೆ. ಯೇಸು ಹೇಳಿದ್ದು: “ಮನುಷ್ಯರು ಮಾಡುವ ಪ್ರತಿಯೊಂದು ಪಾಪಕ್ಕೂ ದೂಷಣೆಗೂ ಕ್ಷಮಾಪಣೆ ಉಂಟಾಗುವದು; ಆದರೆ ಪವಿತ್ರಾತ್ಮದೂಷಣೆಗೆ ಕ್ಷಮಾಪಣೆಯಿಲ್ಲ.” (ಮತ್ತಾಯ 12:31) ನಮಗೆ ಈ ಎಚ್ಚರಿಕೆ ಕೊಡಲ್ಪಟ್ಟಿದೆ: ‘ಸತ್ಯದ ಪರಿಜ್ಞಾನವನ್ನು ನಾವು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಇರುವದಿಲ್ಲ; ಅತ್ಯಂತ ಭಯದಿಂದ ಎದುರುನೋಡತಕ್ಕ ನ್ಯಾಯತೀರ್ಪು ನಮ್ಮ ಮುಂದೆ ಇದೆ.’ (ಇಬ್ರಿಯ 10:26, 27) ಮಾತ್ರವಲ್ಲ, ಅಪೊಸ್ತಲ ಯೋಹಾನನು ಬರೆದುದು: “ಮರಣಕರವಾದ ಪಾಪವುಂಟು.” (1 ಯೋಹಾನ 5:16) ಆದರೆ ತಾನೊಂದು ‘ಮರಣಕರವಾದ ಪಾಪವನ್ನು’ ಮಾಡಿದ್ದೇನೆಂದು ನಿರ್ಣಯಿಸುವುದು ಗುರುತರವಾಗಿ ಪಾಪಮಾಡಿದವನಿಗೆ ಬಿಡಲ್ಪಟ್ಟಿದೆಯೆ?

ಪಶ್ಚಾತ್ತಾಪದಿಂದ ಕ್ಷಮಾಪಣೆ

3 ತಪ್ಪಿತಸ್ಥರ ಅಂತಿಮ ನ್ಯಾಯಾಧೀಶನು ಯೆಹೋವನೇ. ಹೌದು, ಆತನಿಗೆ ನಾವೆಲ್ಲರೂ ಲೆಕ್ಕವನ್ನೊಪ್ಪಿಸಬೇಕಾಗಿದೆ ಮತ್ತು ಆತನು ಸದಾ ನ್ಯಾಯವಾಗಿರುವುದನ್ನೇ ಮಾಡುತ್ತಾನೆ. (ಆದಿಕಾಂಡ 18:25; ರೋಮಾಪುರ 14:12) ನಾವು ಅಕ್ಷಮ್ಯವಾಗಿರುವ ಪಾಪವನ್ನು ಮಾಡಿದ್ದೇವೊ ಎಂದು ನಿರ್ಧರಿಸುವವನು ಮತ್ತು ನಮ್ಮಿಂದ ತನ್ನ ಆತ್ಮವನ್ನು ತೆಗೆದುಬಿಡುವವನು ಯೆಹೋವನೇ. (ಕೀರ್ತನೆ 51:11) ಆದರೂ, ನಾವು ಮಾಡಿರುವ ಪಾಪಕ್ಕಾಗಿ ಅತಿಯಾಗಿ ದುಃಖಿಸುತ್ತಿರುವಲ್ಲಿ ನಾವು ನಿಜವಾಗಿಯೂ ಪಶ್ಚಾತ್ತಾಪ ಪಟ್ಟಿರುವುದು ತೀರ ಸಂಭಾವ್ಯ. ಹಾಗಾದರೆ ನಿಜ ಪಶ್ಚಾತ್ತಾಪವೆಂದರೇನು?

4 ಪಶ್ಚಾತ್ತಾಪ ಪಡುವುದೆಂದರೆ ನಾವು ಈ ಹಿಂದೆ ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಪಾಪದ ಕುರಿತು ನಮ್ಮ ಮನೋಭಾವವನ್ನು ಬದಲಾಯಿಸುವುದು ಎಂದರ್ಥ. ಅಂದರೆ ನಮಗೆ ದುಃಖದ ಅಥವಾ ವಿಷಾದದ ಅನಿಸಿಕೆಯಾಗುವುದರಿಂದ ನಾವು ಆ ಪಾಪಮಾರ್ಗದಿಂದ ತಿರುಗುತ್ತೇವೆ ಎಂದು ಇದು ಅರ್ಥೈಸುತ್ತದೆ. ನಾವು ಗುರುತರವಾದ ಪಾಪವನ್ನು ಮಾಡಿದ ಮೇಲೆ ನಿಜವಾಗಿಯೂ ಪಶ್ಚಾತ್ತಾಪ ಪಟ್ಟಿದ್ದೇವೆ ಎಂದು ತೋರಿಸಲು ಹೆಜ್ಜೆಗಳನ್ನು ತೆಗೆದುಕೊಂಡಿರುವುದಾದರೆ ಕೀರ್ತನೆಗಾರನ ಈ ಮಾತುಗಳಿಂದ ಸಾಂತ್ವನವನ್ನು ಪಡೆಯಬಲ್ಲೆವು: “ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ. ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ. ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.”—ಕೀರ್ತನೆ 103:10-14.

5 ಅಪೊಸ್ತಲ ಯೋಹಾನನ ಈ ಮಾತುಗಳೂ ಸಾಂತ್ವನದಾಯಕವಾಗಿವೆ: “ನಾವು ಸತ್ಯಕ್ಕೆ ಸೇರಿದವರೆಂಬದು ಇದರಿಂದಲೇ ನಮಗೆ ತಿಳಿಯುತ್ತದೆ. ಮತ್ತು ನಮ್ಮ ಹೃದಯವು ಯಾವ ವಿಷಯದಲ್ಲಿಯಾದರೂ ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೂ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆಂದು ನಾವು ತಿಳಿದು ದೇವರ ಸಮಕ್ಷಮದಲ್ಲಿ ನಮ್ಮ ಹೃದಯವನ್ನು ಸಮಾಧಾನಪಡಿಸುವೆವು. ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ನಿರ್ಣಯಿಸದಿದ್ದರೆ ನಮಗೆ ದೇವರ ವಿಷಯದಲ್ಲಿ ಧೈರ್ಯವುಂಟು. ಮತ್ತು ನಾವು ಆತನ ಆಜ್ಞೆಗಳನ್ನು ಕೈಕೊಂಡು ಆತನ ಎಣಿಕೆಯಲ್ಲಿ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡುವವರಾಗಿರುವದರಿಂದ ಏನು ಬೇಡಿಕೊಂಡರೂ ಆತನಿಂದ ಹೊಂದುವೆವು.”—1 ಯೋಹಾನ 3:19-22.

6 ನಾವು ಸಹೋದರ ಪ್ರೀತಿಯನ್ನು ಪ್ರದರ್ಶಿಸುವುದರಿಂದಲೂ ಪಾಪ ಮಾಡುವುದನ್ನು ಪರಿಪಾಠ ಮಾಡದೆ ಇರುವುದರಿಂದಲೂ ‘ನಾವು ಸತ್ಯಕ್ಕೆ ಸೇರಿದವರೆಂದು ನಮಗೆ ತಿಳಿದಿದೆ.’ (ಕೀರ್ತನೆ 119:11) ಯಾವುದೊ ಕಾರಣಕ್ಕಾಗಿ ನಾವು ದೋಷಿಗಳೆಂದು ಖಂಡಿಸಲ್ಪಡುತ್ತಿರುವುದಾದರೆ, “ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆಂದು” ನೆನಪಿಸಿಕೊಳ್ಳಬೇಕು. ಯೆಹೋವನು ನಮ್ಮನ್ನು ಕರುಣಿಸುತ್ತಾನೆ, ಏಕೆಂದರೆ ನಮ್ಮ “ನಿಷ್ಕಪಟವಾದ ಸಹೋದರ ಸ್ನೇಹ,” ಪಾಪದ ವಿರುದ್ಧ ನಮ್ಮ ಹೋರಾಟ ಮತ್ತು ಆತನ ಚಿತ್ತವನ್ನು ಮಾಡಲಿಕ್ಕಾಗಿ ನಾವು ಪಡುವ ಪ್ರಯಾಸದ ಬಗ್ಗೆ ಆತನು ಬಲ್ಲವನಾಗಿದ್ದಾನೆ. (1 ಪೇತ್ರ 1:22) ನಾವು ಯೆಹೋವನಲ್ಲಿ ಭರವಸೆಯಿಟ್ಟು, ಸಹೋದರ ಪ್ರೀತಿಯನ್ನು ಪ್ರದರ್ಶಿಸಿ, ಉದ್ದೇಶಪೂರ್ವಕವಾಗಿ ಪಾಪ ಮಾಡುತ್ತಿದ್ದೇವೆಂಬ ಅಪಾರಾಧ ಪ್ರಜ್ಞೆ ಹೊಂದಿರದಿದ್ದರೆ ನಮ್ಮ ಹೃದಯ ನಮ್ಮನ್ನು ‘ದೋಷಿಗಳೆಂದು ನಿರ್ಣಯಿಸುವುದಿಲ್ಲ.’ ಆಗ ನಾವು ದೇವರೊಂದಿಗೆ ಪ್ರಾರ್ಥನೆಯಲ್ಲಿ ಹಿಂಜರಿಕೆಯಿಲ್ಲದೆ ‘ಧೈರ್ಯದಿಂದ’ ಮಾತಾಡುವೆವು ಮತ್ತು ಆತನ ಆಜ್ಞೆಗಳನ್ನು ಪಾಲಿಸುವ ಕಾರಣ ಆತನು ನಮಗೆ ಉತ್ತರ ಕೊಡುವನು.

ಪವಿತ್ರಾತ್ಮಕ್ಕೆ ವಿರುದ್ಧ ಪಾಪ ಮಾಡಿದವರು

7 ಕ್ಷಮಾಪಣೆ ಇಲ್ಲದ ಪಾಪಗಳಾವುವು? ಈ ಪ್ರಶ್ನೆಗೆ ಉತ್ತರ ಪಡೆಯಲು ನಾವು ಕೆಲವು ಬೈಬಲ್‌ ಉದಾಹರಣೆಗಳನ್ನು ಪರಿಗಣಿಸೋಣ. ಇವು, ನಮ್ಮ ಗುರುತರವಾದ ದೋಷಗಳ ನಿಮಿತ್ತ ನಾವು ಪಶ್ಚಾತ್ತಾಪ ಪಟ್ಟಿರುವುದಾದರೂ ತೀರ ವ್ಯಥೆಗೀಡಾಗಿರುವಲ್ಲಿ ನಮಗೆ ಸಾಂತ್ವನ ನೀಡಬೇಕು. ಒಬ್ಬನ ಪಾಪವು ಕ್ಷಮಾರ್ಹವೋ ಅಲ್ಲವೋ ಎಂದು ನಿರ್ಧರಿಸಲ್ಪಡುವುದು ಅವನು ಯಾವ ರೀತಿಯ ಪಾಪವನ್ನು ಮಾಡಿದ್ದಾನೆ ಎಂಬುದರ ಮೇಲೆ ಮಾತ್ರವಲ್ಲ, ಆ ಪಾಪವನ್ನು ಮಾಡುವಾಗ ಅವನಿಗಿದ್ದ ಉದ್ದೇಶ, ಹೃದಯದ ಸ್ಥಿತಿ ಮತ್ತು ಎಷ್ಟರ ಮಟ್ಟಿಗೆ ಅವನು ಬೇಕುಬೇಕೆಂದು ಅದರಲ್ಲಿ ಒಳಗೂಡಿದನು ಎಂಬ ವಿಷಯಗಳ ಮೇಲೆಯೂ ಹೊಂದಿಕೊಂಡಿದೆ. ಇದನ್ನು ಸಹ ಈ ಲೇಖನದಲ್ಲಿ ನಾವು ನೋಡಲಿದ್ದೇವೆ.

8 ಯೇಸು ಕ್ರಿಸ್ತನನ್ನು ದ್ವೇಷ ಬುದ್ಧಿಯಿಂದ ವಿರೋಧಿಸಿದ ಒಂದನೆಯ ಶತಮಾನದ ಯೆಹೂದಿ ಧಾರ್ಮಿಕ ಮುಖಂಡರು ಪವಿತ್ರಾತ್ಮದ ವಿರುದ್ಧವಾಗಿ ಪಾಪಮಾಡುತ್ತಿದ್ದರು. ಯೆಹೋವನನ್ನು ಮಹಿಮೆಪಡಿಸಿದ ಅದ್ಭುತಗಳನ್ನು ಯೇಸು ಮಾಡಿದಾಗ ಅವನಲ್ಲಿ ದೇವರಾತ್ಮ ಕಾರ್ಯನಡಿಸುತ್ತಿದ್ದದನ್ನು ಅವರು ಕಣ್ಣಾರೆ ಕಂಡರು. ಆದರೂ ಕ್ರಿಸ್ತನ ಆ ವಿರೋಧಿಗಳು ಈ ಶಕ್ತಿಯನ್ನು ಪಿಶಾಚನಾದ ಸೈತಾನನದ್ದೆಂದು ಹೇಳಿದರು. ಯೇಸುವಿಗನುಸಾರ, ದೇವರ ಪವಿತ್ರಾತ್ಮದ ವಿರುದ್ಧ ಹೀಗೆ ದೂಷಣೆ ಮಾಡಿದವರು “ಇಹದಲ್ಲಾಗಲಿ ಪರದಲ್ಲಾಗಲಿ” ಕ್ಷಮಾಪಣೆಯಿಲ್ಲದ ಪಾಪವನ್ನು ಮಾಡುವವರಾಗಿದ್ದರು.—ಮತ್ತಾಯ 12:22-32.

9 ದೂಷಣೆ ಎಂದರೆ ಹೆಸರು ಕೆಡಿಸುವ, ಹಾನಿಕರವಾದ ಇಲ್ಲವೆ ನಿಂದಿಸುವ ಮಾತು ಎಂದು ಅರ್ಥ. ದೇವರಾತ್ಮದ ಮೂಲನು ಯೆಹೋವನಾಗಿರುವುದರಿಂದ ಆತನ ಆತ್ಮದ ವಿರುದ್ಧ ಮಾತಾಡುವುದು ಆತನಿಗೆ ವಿರುದ್ಧವಾಗಿ ಮಾತಾಡುವುದಕ್ಕೆ ಸಮಾನವಾಗಿರುತ್ತದೆ. ಆ ರೀತಿಯ ಮಾತುಗಳನ್ನು ಒಬ್ಬನು ಪಶ್ಚಾತ್ತಾಪರಹಿತವಾಗಿ ನುಡಿಯುವುದು ಅಕ್ಷಮ್ಯವಾಗಿದೆ. ಅಂಥ ಪಾಪದ ಕುರಿತು ಯೇಸು ನುಡಿದ ಮಾತುಗಳು, ದೇವರ ಪವಿತ್ರಾತ್ಮದ ಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿರೋಧಿಸುವವರಿಗೆ ಅವನು ಸೂಚಿಸುತ್ತಿದ್ದಾನೆಂದು ತೋರಿಸುತ್ತವೆ. ಯೆಹೋವನ ಆತ್ಮವು ಯೇಸುವಿನಲ್ಲಿ ಕಾರ್ಯನಡೆಸುತ್ತಿದ್ದರೂ ಅವನ ವಿರೋಧಿಗಳು ಆ ಶಕ್ತಿ ಪಿಶಾಚನದ್ದೆಂದು ಹೇಳಿದ್ದರಿಂದ ಅವರು ಆ ಆತ್ಮದ ವಿರುದ್ಧ ಪಾಪಕರವಾಗಿ ದೂಷಣೆ ಮಾಡಿದರು. ಈ ಕಾರಣದಿಂದ ಯೇಸು ತಿಳಿಯಪಡಿಸಿದ್ದು: ‘ಪವಿತ್ರಾತ್ಮವನ್ನು ದೂಷಿಸಿದವನು ಎಂದಿಗೂ ಕ್ಷಮಾಪಣೆ ಹೊಂದನು; ಅವನು ಶಾಶ್ವತ ಪಾಪದೊಳಗೆ ಸೇರಿದವನಾದನು.’—ಮಾರ್ಕ 3:20-29.

10 ಇಸ್ಕರಿಯೋತ ಯೂದನ ವಿಚಾರವನ್ನೂ ಪರಿಗಣಿಸಿರಿ. ಅವನು ತನ್ನ ವಶದಲ್ಲಿದ್ದ ಹಣದ ಚೀಲದಿಂದ ಕದಿಯುತ್ತ, ಅಪ್ರಾಮಾಣಿಕವಾದ ಮಾರ್ಗವನ್ನು ಅನುಸರಿಸಿದನು. (ಯೋಹಾನ 12:5, 6) ಯೂದನು ಆ ಬಳಿಕ ಯೆಹೂದಿ ಅಧಿಕಾರಿಗಳ ಬಳಿ ಹೋಗಿ 30 ಬೆಳ್ಳೀನಾಣ್ಯಗಳಿಗೆ ಯೇಸುವನ್ನು ಹಿಡಿದು ಕೊಡಲು ಏರ್ಪಡಿಸಿದನು. ದ್ರೋಹ ಬಗೆದ ಮೇಲೆ ಯೂದನು ಪರಿತಾಪ ಪಟ್ಟನೆಂಬುದು ನಿಜ, ಆದರೆ ಅವನು ತನ್ನ ಉದ್ದೇಶಪೂರ್ವಕವಾದ ಪಾಪಕ್ಕೆ ಪಶ್ಚಾತ್ತಾಪಪಡಲಿಲ್ಲ. ಈ ಪರಿಣಾಮವಾಗಿ, ಯೂದನು ಪುನರುತ್ಥಾನಕ್ಕೆ ಯೋಗ್ಯನಾಗಿರುವುದಿಲ್ಲ. ಆದುದರಿಂದ ಯೇಸು ಅವನನ್ನು “ನಾಶಕ್ಕೆ ಗುರಿಯಾದ ಆ ಮನುಷ್ಯ” ಎಂದು ಕರೆದನು.—ಯೋಹಾನ 17:12; ಮತ್ತಾಯ 26:14-16.

ಪವಿತ್ರಾತ್ಮಕ್ಕೆ ವಿರುದ್ಧ ಪಾಪ ಮಾಡದಿದ್ದವರು

11 ಕೆಲವೊಮ್ಮೆ, ತಮ್ಮ ಗುರುತರ ಪಾಪವನ್ನು ನಿವೇದನೆಮಾಡಿ ಸಭಾಹಿರಿಯರಿಂದ ಆಧ್ಯಾತ್ಮಿಕ ನೆರವನ್ನು ಪಡೆದ ಕ್ರೈಸ್ತರು, ತಾವು ಈ ಹಿಂದೆ ದೇವರ ನಿಯಮವನ್ನು ಮುರಿದ್ದದನ್ನು ಚಿಂತಿಸುತ್ತಾ ಇನ್ನೂ ಸಂಕಟ ಪಡುತ್ತಿರಬಹುದು. (ಯಾಕೋಬ 5:14) ಒಂದುವೇಳೆ ನಾವು ವ್ಯಕ್ತಿಪರವಾಗಿ ಹಾಗೆ ಮನನೊಂದು ಕುಗ್ಗಿಹೋಗಿರುವಲ್ಲಿ, ಪಾಪ ಕ್ಷಮಾಪಣೆ ಪಡೆದಿರುವವರ ಕುರಿತು ಬೈಬಲ್‌ ಏನು ಹೇಳುತ್ತದೆಂಬುದನ್ನು ಪರಿಗಣಿಸುವುದರಿಂದ ಖಂಡಿತ ಪ್ರಯೋಜನ ಪಡೆಯುವೆವು.

12 ರಾಜ ದಾವೀದನು ಊರೀಯನ ಹೆಂಡತಿಯಾದ ಬತ್ಷೆಬೆಯ ಸಂಬಂಧದಲ್ಲಿ ಗಂಭೀರ ಪಾಪವನ್ನು ಮಾಡಿದನು. ಬಹು ಸುಂದರಿಯಾದ ಈ ವಿವಾಹಿತ ಸ್ತ್ರೀ ಸ್ನಾನ ಮಾಡುವುದನ್ನು ದಾವೀದನು ಮಾಳಿಗೆ ಮೇಲೆ ತಿರುಗಾಡುತ್ತಿರುವಾಗ ಕಂಡು ಆಕೆಯನ್ನು ತನ್ನ ಅರಮನೆಗೆ ಕರತರಿಸಿ, ಆಕೆಯೊಂದಿಗೆ ಸಂಭೋಗವನ್ನು ಮಾಡಿದನು. ತದನಂತರ ಆಕೆ ಗರ್ಭಿಣಿಯಾಗಿದ್ದಾಳೆಂಬ ಸುದ್ದಿ ತಿಳಿದುಬಂದಾಗ, ಅವನು ಆ ವ್ಯಭಿಚಾರವನ್ನು ಮುಚ್ಚಿ ಹಾಕಲಿಕ್ಕಾಗಿ ಆಕೆಯ ಗಂಡನಾದ ಊರೀಯನು ಆಕೆಯೊಂದಿಗೆ ಮಲಗುವಂತೆ ಹಂಚಿಕೆ ಹೂಡಿದನು. ಆ ಸಂಚು ವಿಫಲಗೊಂಡಾಗ, ಊರೀಯನು ಯುದ್ಧದಲ್ಲಿ ಕೊಲ್ಲಲ್ಪಡುವಂತೆ ಏರ್ಪಡಿಸಿದನು. ಆ ಬಳಿಕ ಬತ್ಷೆಬೆ ದಾವೀದನ ಹೆಂಡತಿಯಾದಳು ಮತ್ತು ಒಂದು ಮಗುವನ್ನೂ ಹಡೆದಳು. ಆದರೆ ಆ ಮಗು ಸತ್ತಿತು.—2 ಸಮುವೇಲ 11:1-27.

13 ದಾವೀದ ಮತ್ತು ಬತ್ಷೆಬೆಯ ಈ ಸಂಗತಿಯನ್ನು ಯೆಹೋವನೇ ನಿರ್ವಹಿಸಿದನು. ಆತನು ಪ್ರಾಯಶಃ ದಾವೀದನ ಪಶ್ಚಾತ್ತಾಪ, ಅವನೊಂದಿಗೆ ಮಾಡಿದ ರಾಜ್ಯದ ಒಡಂಬಡಿಕೆ, ಮುಂತಾದ ವಿಷಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತ ಅವನನ್ನು ಕ್ಷಮಿಸಿದನು. (2 ಸಮುವೇಲ 7:11-16; 12:7-14) ಬತ್ಷೆಬೆಯೂ ಪಶ್ಚಾತಾಪಪಟ್ಟಳೆಂದು ವ್ಯಕ್ತವಾಗುತ್ತದೆ, ಏಕೆಂದರೆ ಆಕೆ ರಾಜ ಸೊಲೊಮೋನನ ತಾಯಿಯೂ ಯೇಸು ಕ್ರಿಸ್ತನ ಪೂರ್ವಜೆಯೂ ಆದಳು. (ಮತ್ತಾಯ 1:1, 6, 16) ಆದುದರಿಂದ, ನಾವು ಪಾಪ ಮಾಡಿರುವಲ್ಲಿ ಯೆಹೋವನು ನಮ್ಮ ಪಶ್ಚಾತ್ತಾಪಪೂರ್ಣ ಮನೋಭಾವವನ್ನು ಲಕ್ಷಿಸುತ್ತಾನೆಂಬುದನ್ನು ಜ್ಞಾಪಿಸಿಕೊಳ್ಳುವುದು ಒಳ್ಳೆಯದು.

14 ಯೆಹೋವನು ಎಷ್ಟು ಧಾರಾಳವಾಗಿ ಕ್ಷಮಿಸುತ್ತಾನೆ ಎಂಬುದು ಯೆಹೂದದ ರಾಜ ಮನಸ್ಸೆಯ ವಿಷಯದಲ್ಲಿಯೂ ಚಿತ್ರಿಸಲ್ಪಟ್ಟಿದೆ. ಅವನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು. ಬಾಳನಿಗೆ ಬಲಿಪೀಠಗಳನ್ನು ನಿರ್ಮಿಸಿ, ‘ನಕ್ಷತ್ರಮಂಡಲವನ್ನು’ ಆರಾಧಿಸಿದನು. ಅಷ್ಟಲ್ಲದೆ, ದೇವಾಲಯದ ಎರಡು ಪ್ರಾಕಾರಗಳಲ್ಲಿ ಸುಳ್ಳು ದೇವತೆಗಳಿಗೆ ಯಜ್ಞವೇದಿಗಳನ್ನು ಕಟ್ಟಿಸಿದನು. ಅವನು ತನ್ನ ಪುತ್ರರನ್ನೂ ಆಹುತಿಕೊಟ್ಟನು. ಪ್ರೇತಾರಾಧನೆಗಳನ್ನು ಪ್ರೋತ್ಸಾಹಿಸಿನು. ಯೆಹೂದ ಮತ್ತು ಯೆರೂಸಲೇಮಿನ ಜನರು ‘ಯೆಹೋವನಿಂದ ನಾಶಹೊಂದಿದ ಅನ್ಯಜನಾಂಗಗಳಿಗಿಂತಲೂ ದುಷ್ಟರಾಗುವಂತೆ’ ಮಾಡಿದನು. ದೇವರ ಪ್ರವಾದಿಗಳು ಕೊಟ್ಟ ಎಚ್ಚರಿಕೆಗಳನ್ನು ಸಹ ಅಲಕ್ಷಿಸಿದನು. ಕೊನೆಗೆ, ಅಶ್ಶೂರದ ರಾಜನು ಮನಸ್ಸೆಯನ್ನು ಸೆರೆ ಹೊಯ್ದನು. ಆದರೆ ಸೆರೆಯಲ್ಲಿದ್ದಾಗ ಮನಸ್ಸೆಯು ಪಶ್ಚಾತ್ತಾಪಪಟ್ಟನು ಮತ್ತು ದೈನ್ಯದಿಂದ ದೇವರಿಗೆ ಪ್ರಾರ್ಥಿಸುತ್ತಾ ಇದ್ದನು. ಆಗ ದೇವರು ಅವನನ್ನು ಕ್ಷಮಿಸಿದನು. ಮಾತ್ರವಲ್ಲ, ತಿರುಗಿ ಯೆರೂಸಲೇಮಿಗೆ ಬರಮಾಡಿ ಅವನಿಗೆ ಅರಸುತನವನ್ನು ಕೊಟ್ಟನು. ಅಲ್ಲಿ ಅವನು ಸತ್ಯಾರಾಧನೆಯನ್ನು ಪ್ರವರ್ಧಿಸಿದನು.—2 ಪೂರ್ವಕಾಲವೃತ್ತಾಂತ 33:2-17.

15 ಶತಮಾನಗಳ ಬಳಿಕ, ಅಪೊಸ್ತಲ ಪೇತ್ರನು ಯೇಸುವನ್ನು ಅಲ್ಲಗಳೆಯುವ ಮೂಲಕ ಘೋರವಾದ ಪಾಪವನ್ನು ಮಾಡಿದನು. (ಮಾರ್ಕ 14:30, 66-72) ಆದರೂ, ಯೆಹೋವನು ಪೇತ್ರನನ್ನು “ಹೇರಳವಾಗಿ” ಕ್ಷಮಿಸಿದನು. (ಯೆಶಾಯ 55:7, NIBV) ಏಕೆ? ಏಕೆಂದರೆ ಪೇತ್ರನು ನಿಜವಾಗಿಯೂ ಪಶ್ಚಾತ್ತಾಪ ಪಟ್ಟಿದ್ದನು. (ಲೂಕ 22:62) ದೇವರ ಈ ಕ್ಷಮಾಪಣೆಯ ರುಜುವಾತು 50 ದಿನಗಳ ಬಳಿಕ ಸ್ಪಷ್ಟವಾಗಿ ತೋರಿಬಂತು. ಆ ಪಂಚಾಶತ್ತಮ ದಿನದಲ್ಲಿ ಪೇತ್ರನಿಗೆ ಯೇಸುವಿನ ಕುರಿತಾಗಿ ಧೈರ್ಯಶೀಲ ಸಾಕ್ಷಿಯನ್ನು ಕೊಡುವ ವಿಶೇಷ ಅವಕಾಶ ದೊರೆಯಿತು. (ಅ. ಕೃತ್ಯಗಳು 2:14-36) ಹಾಗಾದರೆ ಇಂದು ನಿಜವಾಗಿಯೂ ಪಶ್ಚಾತ್ತಾಪಪಡುವ ಕ್ರೈಸ್ತರನ್ನು ದೇವರು ಕ್ಷಮಿಸುವುದಿಲ್ಲವೆಂದು ನಂಬಲು ಯಾವುದೇ ಕಾರಣವಿದೆಯೇ? ಕೀರ್ತನೆಗಾರನು ಹಾಡಿದ್ದು: ‘ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು? ನೀನು ಪಾಪವನ್ನು ಕ್ಷಮಿಸುವವನು.’—ಕೀರ್ತನೆ 130:3, 4.

ಪಾಪದ ಕುರಿತ ಕಳವಳವನ್ನು ತಗ್ಗಿಸುವುದು

16 ಈ ಮೇಲಿನ ಉದಾಹರಣೆಗಳು, ನಾವು ಪವಿತ್ರಾತ್ಮಕ್ಕೆ ವಿರುದ್ಧವಾಗಿ ಪಾಪ ಮಾಡಿದ್ದೇವೆಂಬ ಕಳವಳವನ್ನು ತಗ್ಗಿಸಲು ಸಹಾಯ ಮಾಡಬೇಕು. ಪಶ್ಚಾತ್ತಾಪಪಟ್ಟಿರುವ ಪಾಪಿಗಳನ್ನು ಯೆಹೋವನು ನಿಶ್ಚಯವಾಗಿ ಕ್ಷಮಿಸುತ್ತಾನೆಂದು ಅವು ತೋರಿಸುತ್ತವೆ. ಅತಿ ಪ್ರಧಾನವಾದದ್ದು ದೇವರಿಗೆ ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವುದೇ. ನಾವು ಪಾಪ ಮಾಡಿರುವಲ್ಲಿ ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞ, ಯೆಹೋವನ ಕರುಣೆ, ನಮ್ಮ ಪಿತ್ರಾರ್ಜಿತ ಅಪರಿಪೂರ್ಣತೆ ಮತ್ತು ನಮ್ಮ ನಂಬಿಗಸ್ತಿಕೆಯ ದಾಖಲೆ—ಇವುಗಳ ಆಧಾರದ ಮೇರೆಗೆ ಕ್ಷಮಾಪಣೆಯನ್ನು ಬೇಡಿಕೊಳ್ಳಬಲ್ಲೆವು. ಯೆಹೋವನ ಅಪಾರ ಕೃಪೆಯನ್ನು ಬಲ್ಲವರಾದ ನಾವು, ನಮಗೆ ಕ್ಷಮಾಪಣೆ ದೊರೆಯುವುದು ಎಂಬ ಪೂರ್ಣ ಭರವಸೆಯಿಂದ ಅದಕ್ಕಾಗಿ ಕೇಳಿಕೊಳ್ಳಬಲ್ಲೆವು.—ಎಫೆಸ 1:7.

17 ನಾವು ಪಾಪಮಾಡಿದ್ದು, ಅದು ನಮ್ಮನ್ನು ಆಧ್ಯಾತ್ಮಿಕವಾಗಿ ಬಲಹೀನಗೊಳಿಸಿರುವುದರಿಂದ ಪ್ರಾರ್ಥಿಸಲು ಅಶಕ್ತರಾಗಿರುವಲ್ಲಿ ಏನು ಮಾಡಬಹುದು? ಈ ಸಂಬಂಧದಲ್ಲಿ, ಶಿಷ್ಯ ಯಾಕೋಬನು ಬರೆದುದು: “[ಅಂಥ ವ್ಯಕ್ತಿ] ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು [ಯೆಹೋವನ] ಹೆಸರಿನಿಂದ ಅವನಿಗೆ ಎಣ್ಣೆಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ. ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವದು; [ಯೆಹೋವನು] ಅವನನ್ನು ಎಬ್ಬಿಸುವನು; ಮತ್ತು ಪಾಪಮಾಡಿದವನಾಗಿದ್ದರೆ ಅದು ಪರಿಹಾರವಾಗುವದು.”—ಯಾಕೋಬ 5:14, 15.

18 ತಪ್ಪಿತಸ್ಥನೊಬ್ಬನು ಆ ಸಮಯದಲ್ಲಿ ಪಶ್ಚಾತ್ತಾಪ ಪಟ್ಟಿರದ ಕಾರಣ ಸಭೆಯಿಂದ ಬಹಿಷ್ಕೃತನಾದರೂ ಅವನ ಪಾಪ ಅಕ್ಷಮ್ಯವೆಂದೇನಲ್ಲ. ಕೊರಿಂಥದಲ್ಲಿ ಬಹಿಷ್ಕೃತನಾದ ಅಭಿಷಿಕ್ತ ತಪ್ಪಿತಸ್ಥನೊಬ್ಬನ ಬಗ್ಗೆ ಪೌಲನು ಬರೆದುದು: “ಇಂಥವನಿಗೆ ನಿಮ್ಮಲ್ಲಿ ಹೆಚ್ಚಾದ ಜನರಿಂದುಂಟಾದ ಆ ಶಿಕ್ಷೆಯೇ ಸಾಕು. ಇನ್ನೂ ಅವನನ್ನು ಶಿಕ್ಷಿಸದೆ ಮನ್ನಿಸಿರಿ, ಸಂತೈಸಿರಿ; ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿಹೋದಾನು.” (2 ಕೊರಿಂಥ 2:6-8; 1 ಕೊರಿಂಥ 5:1-5) ಆದರೆ, ತಪ್ಪಿತಸ್ಥರು ಆಧ್ಯಾತ್ಮಿಕವಾಗಿ ಪುನಸ್ಸ್ಥಾಪಿಸಲ್ಪಡಬೇಕಾದರೆ ಕ್ರೈಸ್ತ ಹಿರಿಯರು ಕೊಡುವ ಬೈಬಲ್‌ ಆಧಾರಿತ ಆಧ್ಯಾತ್ಮಿಕ ನೆರವನ್ನು ಅಂಗೀಕರಿಸಬೇಕು ಮತ್ತು ನಿಜ ಪಶ್ಚಾತ್ತಾಪದ ರುಜುವಾತನ್ನು ಕೊಡಬೇಕು. ತಮ್ಮ “ಮನಸ್ಸು ದೇವರ ಕಡೆಗೆ ತಿರುಗಿತೆಂಬದನ್ನು ತಕ್ಕ ಫಲಗಳಿಂದ” ತೋರಿಸಲೇಬೇಕು.—ಲೂಕ 3:8.

19 ನಾವು ಪವಿತ್ರಾತ್ಮಕ್ಕೆ ವಿರುದ್ಧವಾಗಿ ಪಾಪಮಾಡಿದ್ದೇವೆಂಬ ಅನಿಸಿಕೆ ಬರಲು ಕಾರಣವೇನಾಗಿರಬಹುದು? ಮಿತಿಮೀರಿದ ಪಾಪಪ್ರಜ್ಞೆ ಇಲ್ಲವೆ ಶಾರೀರಿಕ ದೌರ್ಬಲ್ಯ ಇದಕ್ಕೆ ಕಾರಣವಾಗಿರಬಹುದು. ಪ್ರಾಯಶಃ ಇಂಥ ಸಂದರ್ಭದಲ್ಲಿ ಪ್ರಾರ್ಥನೆ ಮತ್ತು ಹೆಚ್ಚಿನ ವಿಶ್ರಾಂತಿ ಸಹಾಯಕರ. ವಿಶೇಷವಾಗಿ ಸೈತಾನನು ನಮ್ಮನ್ನು ನಿರುತ್ತೇಜನಗೊಳಿಸಿ ನಾವು ದೇವರ ಸೇವೆಯನ್ನು ನಿಲ್ಲಿಸಿಬಿಡುವಂತೆ ಮಾಡಲು ಅವಕಾಶ ಕೊಡಲೇಬಾರದು. ಯೆಹೋವನು ದುಷ್ಟರ ಮರಣದಲ್ಲಿ ಲೇಶವಾದರೂ ಸಂತೋಷಿಸದಿರುವಾಗ ತನ್ನ ಸೇವಕರಲ್ಲಿ ಯಾರನ್ನಾದರೂ ಕಳಕೊಳ್ಳುವುದರಲ್ಲಿ ಸಂತೋಷ ಪಡುತ್ತಾನೋ? ನಿಶ್ಚಯವಾಗಿಯೂ ಇಲ್ಲ. ಆದಕಾರಣ, ನಾವು ಪವಿತ್ರಾತ್ಮದ ವಿರುದ್ಧ ಪಾಪಮಾಡಿದ್ದೇವೆಂದು ಭಯಪಡುವಲ್ಲಿ ದೇವರ ವಾಕ್ಯದಿಂದ ನಮ್ಮನ್ನು ಪೋಷಿಸಿಕೊಳ್ಳುತ್ತ ಇರಬೇಕು. ಉದಾಹರಣೆಗೆ ಕೀರ್ತನೆಗಳಂಥ ಭಾಗಗಳನ್ನು ಓದುವುದು ಸಾಂತ್ವನದಾಯಕ. ಸಭಾಕೂಟಗಳಲ್ಲಿ ಉಪಸ್ಥಿತರಾಗುತ್ತ ಮತ್ತು ರಾಜ್ಯ ಸಾರುವ ಕೆಲಸದಲ್ಲಿ ಭಾಗಿಗಳಾಗುತ್ತ ಮುಂದುವರಿಯುವುದೂ ಅಗತ್ಯ. ಹಾಗೆ ಮಾಡುವುದು ನಾವು ‘ನಂಬಿಕೆಯಲ್ಲಿ ಸ್ವಸ್ಥರಾಗಿರುವಂತೆ’ ಮತ್ತು ಅಕ್ಷಮ್ಯ ಪಾಪವನ್ನು ಮಾಡಿರಬಹುದೆಂಬ ಕಳವಳದಿಂದ ಮುಕ್ತರಾಗುವಂತೆ ನಮಗೆ ಸಹಾಯಮಾಡುವುದು.—ತೀತ 2:2.

20 ಪವಿತ್ರಾತ್ಮದ ವಿರುದ್ಧ ಪಾಪಮಾಡಿದ್ದೇನೆಂಬ ಹೆದರಿಕೆ ಇರುವ ಯಾವನೂ ಹೀಗೆ ಕೇಳಿಕೊಳ್ಳಬಹುದು: ‘ನಾನು ಪವಿತ್ರಾತ್ಮದ ವಿರುದ್ಧ ದೂಷಣೆ ಮಾಡಿದ್ದೇನೋ? ನನ್ನ ಪಾಪಕ್ಕಾಗಿ ನಾನು ನಿಜವಾಗಿಯೂ ಪಶ್ಚಾತ್ತಾಪ ಪಟ್ಟಿದ್ದೇನೋ? ನನಗೆ ದೇವರ ಕ್ಷಮಾಪಣೆಯಲ್ಲಿ ನಂಬಿಕೆ ಇದೆಯೋ? ನಾನು ಆಧ್ಯಾತ್ಮಿಕ ಬೆಳಕನ್ನೇ ಧಿಕ್ಕರಿಸಿರುವ ಧರ್ಮಭ್ರಷ್ಟನಾಗಿದೆನೋ?’ ಇಂಥ ವ್ಯಕ್ತಿಗಳು ತಾವು ದೇವರ ಪವಿತ್ರಾತ್ಮದ ವಿರುದ್ಧ ದೂಷಣೆ ಮಾಡಿರುವುದಿಲ್ಲವೆಂದೂ ಧರ್ಮಭ್ರಷ್ಟರಾಗಿರುವುದಿಲ್ಲವೆಂದೂ ಗ್ರಹಿಸಿಕೊಳ್ಳುವುದು ತೀರ ಸಂಭಾವ್ಯ. ಅವರು ಪಶ್ಚಾತ್ತಾಪ ಪಟ್ಟಿರುತ್ತಾರೆ ಹಾಗೂ ಯೆಹೋವನ ಕ್ಷಮೆಯಲ್ಲಿ ಅವರಿಗೆ ದೃಢವಾದ ನಂಬಿಕೆಯಿದೆ. ಹಾಗಿರುವಲ್ಲಿ, ಅವರು ಯೆಹೋವನ ಪವಿತ್ರಾತ್ಮದ ವಿರುದ್ಧ ಪಾಪಮಾಡಿರುವುದಿಲ್ಲ.

21 ನಾವು ಪವಿತ್ರಾತ್ಮಕ್ಕೆ ವಿರುದ್ಧವಾಗಿ ಪಾಪಮಾಡಿರುವುದಿಲ್ಲ ಎಂದು ದೃಢಪಡಿಸಿಕೊಳ್ಳುವುದು ಎಷ್ಟೊಂದು ಆಶೀರ್ವಾದಪ್ರದ! ಮುಂದಿನ ಲೇಖನದಲ್ಲಿ ಪವಿತ್ರಾತ್ಮಕ್ಕೆ ಸಂಬಂಧಪಟ್ಟ ಇತರ ಪ್ರಶ್ನೆಗಳನ್ನು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ನಾವು ಹೀಗೆ ಕೇಳಿಕೊಳ್ಳಬಹುದು: ‘ನಾನು ದೇವರ ಪವಿತ್ರಾತ್ಮದಿಂದ ನಿಜವಾಗಿಯೂ ನಡೆಸಲ್ಪಡುತ್ತಿದ್ದೇನೋ? ಅದರ ಫಲಗಳು ನನ್ನ ಜೀವನದಲ್ಲಿ ತೋರಿಬರುತ್ತವೆಯೇ?’ (w07 7/15)

ನಿಮ್ಮ ಉತ್ತರವೇನು?

• ಪವಿತ್ರಾತ್ಮದ ವಿರುದ್ಧ ಪಾಪಮಾಡುವ ಸಾಧ್ಯತೆ ಇದೆಯೆಂದು ನಾವು ಏಕೆ ಹೇಳಬಲ್ಲೆವು?

• ಪಶ್ಚಾತ್ತಾಪ ಪಡುವುದೆಂದರೆ ಅರ್ಥವೇನು?

• ಯೇಸು ಭೂಮಿಯ ಮೇಲಿದ್ದಾಗ ಯಾರು ಪವಿತ್ರಾತ್ಮದ ವಿರುದ್ಧ ಪಾಪಮಾಡಿದರು?

• ಅಕ್ಷಮ್ಯ ಪಾಪವನ್ನು ಮಾಡಿರುವ ಅನಿಸಿಕೆಯಿಂದ ಬರುವ ಕಳವಳವನ್ನು ಹೇಗೆ ಹೋಗಲಾಡಿಸಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

1, 2. ದೇವರ ಪವಿತ್ರಾತ್ಮಕ್ಕೆ ವಿರುದ್ಧವಾಗಿ ಪಾಪಮಾಡುವುದು ಸಾಧ್ಯವೆಂದು ನಾವು ಹೇಗೆ ತಿಳಿಯುತ್ತೇವೆ?

3. ನಾವು ಮಾಡಿರುವ ಪಾಪಕ್ಕಾಗಿ ಅತಿಯಾಗಿ ದುಃಖಪಡುತ್ತಿರುವಲ್ಲಿ, ಯಾವುದು ನಿಜವಾಗಿರುವುದು ಸಂಭಾವ್ಯ?

4. (ಎ) ಪಶ್ಚಾತ್ತಾಪ ಪಡುವುದರ ಅರ್ಥವೇನು? (ಬಿ) ಕೀರ್ತನೆ 103:10-14ರ ಮಾತುಗಳು ಅತಿ ಸಾಂತ್ವನದಾಯಕವಾಗಿವೆ ಏಕೆ?

5, 6. ಒಂದನೇ ಯೋಹಾನ 3:19-22ರ ಸಾರಾಂಶವನ್ನು ಕೊಡಿರಿ ಮತ್ತು ಅಪೊಸ್ತಲನ ಮಾತುಗಳ ಅರ್ಥವನ್ನು ವಿವರಿಸಿರಿ.

7. ಒಂದು ಪಾಪವು ಕ್ಷಮಾರ್ಹವೋ ಅಲ್ಲವೋ ಎಂಬುದನ್ನು ಯಾವ ವಿಷಯಗಳು ನಿರ್ಧರಿಸುತ್ತವೆ?

8. ಒಂದನೆಯ ಶತಮಾನದ ಕೆಲವು ಯೆಹೂದಿ ಧಾರ್ಮಿಕ ಮುಖಂಡರು ಹೇಗೆ ಪವಿತ್ರಾತ್ಮದ ವಿರುದ್ಧವಾಗಿ ಪಾಪಮಾಡಿದರು?

9. ದೂಷಣೆ ಎಂದರೇನು ಮತ್ತು ಯೇಸು ಆ ವಿಷಯದಲ್ಲಿ ಏನಂದನು?

10. ಯೇಸು ಯೂದನನ್ನು “ನಾಶಕ್ಕೆ ಗುರಿಯಾದ ಆ ಮನುಷ್ಯ” ಎಂದು ಕರೆದದ್ದೇಕೆ?

11-13. ಬತ್ಷೆಬೆಯ ಸಂಬಂಧದಲ್ಲಿ ರಾಜ ದಾವೀದನು ಹೇಗೆ ಪಾಪ ಮಾಡಿದನು ಮತ್ತು ದೇವರು ಅವರೊಂದಿಗೆ ವ್ಯವಹರಿಸಿದ ರೀತಿಯಿಂದ ನಾವು ಯಾವ ಸಾಂತ್ವನವನ್ನು ಪಡೆಯಬಹುದು?

14. ಯೆಹೋವನು ಎಷ್ಟು ಧಾರಾಳವಾಗಿ ಕ್ಷಮಿಸುತ್ತಾನೆ ಎಂಬುದು ರಾಜ ಮನಸ್ಸೆಯ ವಿಷಯದಲ್ಲಿ ಹೇಗೆ ಚಿತ್ರಿಸಲ್ಪಟ್ಟಿದೆ?

15. ಅಪೊಸ್ತಲ ಪೇತ್ರನ ಜೀವನದಲ್ಲಿ ನಡೆದ ಯಾವ ಸಂಭವವು ಯೆಹೋವನು “ಹೇರಳವಾಗಿ” ಕ್ಷಮಿಸುತ್ತಾನೆಂದು ತೋರಿಸುತ್ತದೆ?

16. ನಾವು ಏನು ಮಾಡುವಲ್ಲಿ ದೇವರು ನಮಗೆ ಕ್ಷಮಾಪಣೆಯನ್ನು ಒದಗಿಸುತ್ತಾನೆ?

17. ನಾವು ಪಾಪಮಾಡಿದ್ದು ಆಧ್ಯಾತ್ಮಿಕ ಸಹಾಯ ಬೇಕಾಗಿರುವಲ್ಲಿ ಏನು ಮಾಡಬೇಕು?

18. ಒಬ್ಬನು ಸಭೆಯಿಂದ ಬಹಿಷ್ಕೃತನಾದರೂ ಅವನ ಪಾಪ ಅಕ್ಷಮ್ಯವಾಗಬೇಕೆಂದಿಲ್ಲವೇಕೆ?

19. ನಾವು ‘ನಂಬಿಕೆಯಲ್ಲಿ ಸ್ವಸ್ಥರಾಗಿರುವಂತೆ’ ಯಾವುದು ಸಹಾಯ ಮಾಡಬಲ್ಲದು?

20. ತಾನು ಪವಿತ್ರಾತ್ಮದ ವಿರುದ್ಧ ಪಾಪಮಾಡಿರುವುದಿಲ್ಲವೆಂದು ತಿಳಿಯಲು ಯಾವ ತಾರ್ಕಿಕ ಪ್ರಶ್ನೆಗಳು ಒಬ್ಬನಿಗೆ ಸಹಾಯಮಾಡಬಹುದು?

21. ಮುಂದಿನ ಲೇಖನ ಯಾವ ಪ್ರಶ್ನೆಗಳನ್ನು ಉತ್ತರಿಸುವುದು?