ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತೀರೋ?’

ನೀವು ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತೀರೋ?’

ನೀವು ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತೀರೋ?’

‘ಪವಿತ್ರಾತ್ಮವನ್ನು ಅನುಸರಿಸಿ ನಡೆದುಕೊಳ್ಳಿರಿ [“ನಡೆಯುತ್ತಾ ಇರ್ರಿ,” NW]; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವುದಿಲ್ಲ.’—ಗಲಾತ್ಯ 5:16.

ಯೆಹೋವನ ಪವಿತ್ರಾತ್ಮಕ್ಕೆ ವಿರುದ್ಧವಾಗಿ ನಾವೆಲ್ಲಾದರೂ ಪಾಪಮಾಡಿ ಬಿಡುವೆವೊ ಎಂಬ ಭಯವನ್ನು ತೊಲಗಿಸುವ ಒಂದು ಮಾರ್ಗವಿದೆ. ಅದು ಅಪೊಸ್ತಲ ಪೌಲನು ಹೇಳಿದ್ದನ್ನು ಮಾಡುವುದೇ. ಅವನಂದದ್ದು: ‘ಪವಿತ್ರಾತ್ಮವನ್ನು ಅನುಸರಿಸಿ ನಡೆದುಕೊಳ್ಳಿರಿ [“ನಡೆಯುತ್ತಾ ಇರ್ರಿ,” NW]; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವುದಿಲ್ಲ.’ (ಗಲಾತ್ಯ 5:16) ಹೌದು, ದೇವರಾತ್ಮವು ನಮ್ಮನ್ನು ನಡೆಸುವಂತೆ ನಾವು ಬಿಡುವಲ್ಲಿ, ಅಯೋಗ್ಯವಾದ ಶಾರೀರಿಕ ಅಭಿಲಾಷೆಗಳು ನಮ್ಮನ್ನು ಸೋಲಿಸವು.—ರೋಮಾಪುರ 8:2-10.

2 ನಾವು ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ ಇರುವಲ್ಲಿ,’ ಯೆಹೋವನಿಗೆ ವಿಧೇಯರಾಗುವಂತೆ ಆತನ ಕ್ರಿಯಾಶೀಲ ಶಕ್ತಿಯು ನಮ್ಮನ್ನು ಪ್ರಚೋದಿಸುವುದು. ಇದರಿಂದ ನಾವು ನಮ್ಮ ಶುಶ್ರೂಷೆಯಲ್ಲಿ, ಸಭೆಯಲ್ಲಿ, ಮನೆಯಲ್ಲಿ ಮತ್ತು ಬೇರೆ ಕಡೆಗಳಲ್ಲಿ ದೈವಿಕ ಗುಣಗಳನ್ನು ಪ್ರದರ್ಶಿಸುವೆವು. ದೇವರಾತ್ಮದ ಫಲಗಳು ನಮ್ಮ ವಿವಾಹಸಂಗಾತಿ, ಮಕ್ಕಳು, ನಮ್ಮ ಜೊತೆವಿಶ್ವಾಸಿಗಳು ಮತ್ತು ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ಸ್ಪಷ್ಟವಾಗಿ ತೋರಿಬರುವವು.

3 “ಆತ್ಮಸಂಬಂಧವಾಗಿ” ಬದುಕುವುದು ಪಾಪವನ್ನು ತೊರೆಯುವಂತೆ ಸಹ ನಮ್ಮನ್ನು ಶಕ್ತರನ್ನಾಗಿಸುತ್ತದೆ. (1 ಪೇತ್ರ 4:1-6) ನಾವು ಆ ಆತ್ಮದ ಪ್ರಭಾವದಡಿಯಲ್ಲಿ ಇರುವುದಾದರೆ, ಖಂಡಿತವಾಗಿಯೂ ಅಕ್ಷಮ್ಯವಾದ ಪಾಪವನ್ನು ಮಾಡೆವು. ನಾವು ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತ ಇರುವುದಾದರೆ ಬೇರೆ ಯಾವ ಉತ್ತಮ ವಿಧಗಳಲ್ಲಿ ಪ್ರಭಾವಿಸಲ್ಪಡುವೆವು?

ದೇವರಿಗೂ ಕ್ರಿಸ್ತನಿಗೂ ನಿಕಟವಾಗಿರಿ

4 ನಾವು ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಿರುವ ಕಾರಣ ದೇವರೊಂದಿಗೆ ಮತ್ತು ಆತನ ಪುತ್ರನೊಂದಿಗೆ ಆಪ್ತ ಸಂಬಂಧವನ್ನು ಕಾಪಾಡಿಕೊಳ್ಳಬಲ್ಲೆವು. ಪವಿತ್ರಾತ್ಮದಿಂದುಂಟಾಗುವ ವರಗಳ ಕುರಿತು ಪೌಲನು ಬರೆಯುವಾಗ ಕೊರಿಂಥದ ಜೊತೆವಿಶ್ವಾಸಿಗಳಿಗೆ ಹೇಳಿದ್ದು: ‘ನಾನು ನಿಮಗೆ [ಹಿಂದೆ ವಿಗ್ರಹಾರಾಧಕರಾಗಿದ್ದವರಿಗೆ] ತಿಳಿಸುವದನ್ನು ಕೇಳಿರಿ; ದೇವರಾತ್ಮದ ಪ್ರೇರಣೆಯಿಂದ ಮಾತಾಡುವ ಯಾವ ಮನುಷ್ಯನಾದರೂ ಯೇಸುವನ್ನು ಶಾಪಗ್ರಸ್ತನೆಂದು ಹೇಳುವದಿಲ್ಲ, ಮತ್ತು ಪವಿತ್ರಾತ್ಮದ ಪ್ರೇರಣೆಯಿಂದಲೇ ಹೊರತು ಯಾವ ಮನುಷ್ಯನಾದರೂ ಯೇಸುವನ್ನು ಕರ್ತನೆಂದು ಹೇಳಲಾರನು.’ (1 ಕೊರಿಂಥ 12:1-3) ಯೇಸುವಿನ ಮೇಲೆ ಶಾಪ ಹೊರಿಸುವಂತೆ ಜನರನ್ನು ಪ್ರೇರಿಸುವ ಯಾವುದೇ ಆತ್ಮದ ಮೂಲನು ಪಿಶಾಚನಾದ ಸೈತಾನನೇ. ಆದರೆ ಪವಿತ್ರಾತ್ಮವನ್ನು ಅನುಸರಿಸಿ ನಡೆಯುವ ಕ್ರೈಸ್ತರಾದ ನಮಗಾದರೋ ಯೆಹೋವನು ಕ್ರಿಸ್ತನನ್ನು ಸತ್ತವರಿಂದ ಎಬ್ಬಿಸಿ, ಅವನನ್ನು ಇತರ ಎಲ್ಲ ಸೃಷ್ಟಿಗಿಂತ ಉನ್ನತನಾಗಿ ಮಾಡಿದ್ದಾನೆಂಬ ಖಾತರಿಯಿದೆ. (ಫಿಲಿಪ್ಪಿ 2:5-11) ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಮಗೆ ನಂಬಿಕೆಯಿದೆ. ದೇವರು ನಮ್ಮ ಮೇಲೆ ನೇಮಿಸಿರುವ ಕರ್ತನು ಯೇಸು ಕ್ರಿಸ್ತನೇ ಎಂದು ನಾವು ಒಪ್ಪಿಕೊಳ್ಳುತ್ತೇವೆ.

5 ಸಾ.ಶ. ಪ್ರಥಮ ಶತಮಾನದಲ್ಲಿ ಕ್ರೈಸ್ತರೆಂದು ಹೇಳಿಕೊಂಡ ಕೆಲವರು ಯೇಸು ಮನುಷ್ಯನಾಗಿ ಬಂದಿರುವುದನ್ನು ಅಲ್ಲಗಳೆದರು. (2 ಯೋಹಾನ 7-11) ಕೆಲವರು ಆ ಸುಳ್ಳು ಬೋಧನೆಯನ್ನು ಅಂಗೀಕರಿಸಿದ್ದರಿಂದ ಮೆಸ್ಸೀಯನಾದ ಯೇಸುವಿನ ಕುರಿತ ಸತ್ಯ ಬೋಧನೆಗಳನ್ನು ತಳ್ಳಿಹಾಕಿದರು. (ಮಾರ್ಕ 1:9-11; ಯೋಹಾನ 1:1, 14) ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದು ಅಂಥ ಧರ್ಮಭ್ರಷ್ಟತೆಗೆ ನಾವು ಬಲಿಯಾಗುವುದನ್ನು ತಡೆಯುತ್ತದೆ. ನಾವು ಆಧ್ಯಾತ್ಮಿಕವಾಗಿ ಎಚ್ಚರವಾಗಿರುವುದರಿಂದ ಮಾತ್ರವೇ ಯೆಹೋವನ ಅಪಾರ ಕೃಪೆಯನ್ನು ಪಡೆಯುತ್ತ ‘ಸತ್ಯವನ್ನನುಸರಿಸಿ ನಡೆಯುವೆವು.’ (3 ಯೋಹಾನ 3, 4) ಆದುದರಿಂದ ನಾವು ನಮ್ಮ ಸ್ವರ್ಗೀಯ ತಂದೆಯೊಂದಿಗೆ ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳಲಿಕ್ಕಾಗಿ ಸಕಲ ಧರ್ಮಭ್ರಷ್ಟತೆಯನ್ನು ತಳ್ಳಿಹಾಕಲು ದೃಢಚಿತ್ತರಾಗಿರೋಣ.

6 ಪೌಲನು ಜಾರತ್ವ ಮತ್ತು ಸಡಿಲು ನಡತೆಗಳಂಥ ‘ಶರೀರಭಾವದ ಕರ್ಮಗಳ’ ಪಟ್ಟಿಯಲ್ಲಿ ಧರ್ಮಭ್ರಷ್ಟ ವಿಗ್ರಹಾರಾಧನೆ ಮತ್ತು ಭಿನ್ನಮತಗಳನ್ನು ಸೇರಿಸಿದನು. ಅವನು ವಿವರಿಸಿದ್ದು: “ಕ್ರಿಸ್ತಯೇಸುವಿನವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ ಸ್ವೇಚ್ಛಾಭಿಲಾಷೆ ಸಹಿತ ಶೂಲಕ್ಕೆ ಹಾಕಿದವರು. ನಾವು ಆತ್ಮದಿಂದ ಜೀವಿಸುತ್ತಿರಲಾಗಿ ಆತ್ಮವನ್ನನುಸರಿಸಿ ನಡೆಯೋಣ.” (ಗಲಾತ್ಯ 5:19-21, 24, 25, NW) ಪವಿತ್ರಾತ್ಮಕ್ಕನುಸಾರ ಜೀವಿಸಿ ನಡೆಯುವವರಲ್ಲಿ ದೇವರ ಕ್ರಿಯಾಶೀಲ ಶಕ್ತಿಯು ಯಾವ ಗುಣಗಳನ್ನು ಉಂಟುಮಾಡುತ್ತದೆ? ಪೌಲನು ಬರೆದುದು: ‘ದೇವರಾತ್ಮದಿಂದ ಉಂಟಾಗುವ ಫಲವೇನಂದರೆ—ಪ್ರೀತಿ ಸಂತೋಷ [“ಆನಂದ,” NW] ಸಮಾಧಾನ [“ಶಾಂತಿ,” NW] ದೀರ್ಘಶಾಂತಿ [“ದೀರ್ಘಸಹನೆ,” NW] ದಯೆ ಉಪಕಾರ [“ಒಳ್ಳೇತನ,” NW] ನಂಬಿಕೆ ಸಾಧುತ್ವ [“ಸೌಮ್ಯತೆ,” NW] ಶಮೆದಮೆ [“ಆತ್ಮನಿಯಂತ್ರಣ,” NW] ಇಂಥವುಗಳೇ.’ (ಗಲಾತ್ಯ 5:22, 23) ನಾವೀಗ ದೇವರಾತ್ಮದ ಫಲದ ಈ ಗುಣಗಳನ್ನು ಪರಿಗಣಿಸೋಣ.

‘ಒಬ್ಬರನ್ನೊಬ್ಬರು ಪ್ರೀತಿಸುತ್ತಿರಿ’

7 ದೇವರಾತ್ಮದ ಒಂದು ಫಲವಾಗಿರುವ ಪ್ರೀತಿಯಲ್ಲಿ ಅನೇಕ ಬಾರಿ ಇತರರ ಕಡೆಗಿನ ಗಾಢವಾದ ಮಮತೆ, ನಿಸ್ವಾರ್ಥ ಚಿಂತೆ ಮತ್ತು ಅವರೊಂದಿಗಿನ ಆಪ್ತಸಂಬಂಧ ಒಳಗೂಡಿರುತ್ತದೆ. “ದೇವರು ಪ್ರೀತಿಸ್ವರೂಪಿ” ಎಂದು ಬೈಬಲ್‌ ಹೇಳುವುದು ಆತನು ಆ ಗುಣದ ಸಾಕಾರರೂಪವಾಗಿರುವ ಕಾರಣದಿಂದಲೇ. ಮಾನವಕುಲಕ್ಕಾಗಿ ದೇವರು ಮತ್ತು ಆತನ ಪುತ್ರನು ತೋರಿಸಿದ ಮಹಾ ಪ್ರೀತಿಯನ್ನು ಯೇಸು ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದಿಂದ ದೃಷ್ಟಾಂತಿಸಲಾಗಿದೆ. (1 ಯೋಹಾನ 4:8; ಯೋಹಾನ 3:16; 15:13; ರೋಮಾಪುರ 5:8) ಯೇಸುವಿನ ಹಿಂಬಾಲಕರಾದ ನಾವು ಒಬ್ಬರ ಮೇಲೆ ಒಬ್ಬರಿಗಿರುವ ನಮ್ಮ ಪ್ರೀತಿಯಿಂದ ಗುರುತಿಸಲ್ಪಡುತ್ತೇವೆ. (ಯೋಹಾನ 13:34, 35) ವಾಸ್ತವವೇನಂದರೆ, “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ” ಆಜ್ಞೆ ನಮಗಿದೆ. (1 ಯೋಹಾನ 3:23) ಪ್ರೀತಿ ಬಹು ತಾಳ್ಮೆಯುಳ್ಳದ್ದು ಮತ್ತು ದಯೆಯುಳ್ಳದ್ದೆಂದು ಪೌಲನು ಹೇಳುತ್ತಾನೆ. ಅದು ಹೊಟ್ಟೆಕಿಚ್ಚುಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ, ಮರ್ಯಾದೆಗೆಟ್ಟು ನಡೆಯುವುದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ. ಪ್ರೀತಿಯು ಸಿಟ್ಟುಗೊಳ್ಳುವದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದೂ ಇಲ್ಲ. ಪ್ರೀತಿ ಅನ್ಯಾಯವನ್ನು ನೋಡಿ ಸಂತೋಷಪಡದೆ ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ. ಪ್ರೀತಿ ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, ನಂಬುತ್ತದೆ, ನಿರೀಕ್ಷಿಸುತ್ತದೆ ಮತ್ತು ಸಹಿಸಿಕೊಳ್ಳುತ್ತದೆ. ಅಷ್ಟುಮಾತ್ರಲ್ಲದೆ, ಅದು ಎಂದಿಗೂ ಬಿದ್ದುಹೋಗುವುದಿಲ್ಲ.—1 ಕೊರಿಂಥ 13:4-8.

8 ದೇವರಾತ್ಮವು ನಮ್ಮೊಳಗೆ ಪ್ರೀತಿಯನ್ನು ಫಲಿಸುವಂತೆ ನಾವು ಬಿಡುವಲ್ಲಿ ಆ ಗುಣವು ದೇವರೊಂದಿಗೆ ಮತ್ತು ನೆರೆಯವರೊಂದಿಗೆ ನಮಗಿರುವ ಸಂಬಂಧದಲ್ಲಿ ಕಂಡುಬರುವುದು. (ಮತ್ತಾಯ 22:37-39) ಅಪೊಸ್ತಲ ಯೋಹಾನನು ಬರೆದುದು: “ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ. ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ, ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ.” (1 ಯೋಹಾನ 3:14, 15) ಇಸ್ರಾಯೇಲಿನ ಆಶ್ರಯನಗರದಲ್ಲಿ ಕೊಲೆಗಾರನೊಬ್ಬನಿಗೆ ಆಶ್ರಯವು ಸಿಗುತ್ತಿದ್ದದ್ದು ಅವನು ತಾನು ಕೊಂದವನನ್ನು ದ್ವೇಷಿಸದಿದ್ದಲ್ಲಿ ಮಾತ್ರವೇ ಆಗಿತ್ತು. (ಧರ್ಮೋಪದೇಶಕಾಂಡ 19:4, 11-13) ನಾವು ದೇವರಾತ್ಮದಿಂದ ನಡೆಸಲ್ಪಡುವಲ್ಲಿ, ದೇವರಿಗೂ ಜೊತೆಆರಾಧಕರಿಗೂ ಮತ್ತು ಇತರರಿಗೂ ಪ್ರೀತಿಯನ್ನು ತೋರಿಸುವೆವು.

“ಯೆಹೋವನ ಆನಂದವೇ ನಿಮ್ಮ ಆಶ್ರಯ”

9 ಆನಂದವು ಮಹಾ ಸಂತೋಷದ ಒಂದು ಸ್ಥಿತಿಯಾಗಿದೆ. ಯೆಹೋವನು “ಸಂತೋಷದ ದೇವರು.” (1 ತಿಮೊಥೆಯ 1:11, NW; ಕೀರ್ತನೆ 104:31) ಆತನ ಪುತ್ರನು ತನ್ನ ತಂದೆಯ ಚಿತ್ತವನ್ನು ಮಾಡಲು ಸಂತೋಷಿಸುತ್ತಾನೆ. (ಕೀರ್ತನೆ 40:8; ಇಬ್ರಿಯ 10:7-9) ಮತ್ತು “ಯೆಹೋವನ ಆನಂದವೇ [ನಮ್ಮ] ಆಶ್ರಯ.”—ನೆಹೆಮೀಯ 8:10.

10 ದೇವದತ್ತ ಆನಂದವು ಕಷ್ಟ, ಶೋಕ ಅಥವಾ ಹಿಂಸೆಯ ಸಮಯದಲ್ಲಿಯೂ ದೈವಿಕ ಚಿತ್ತವನ್ನು ಮಾಡುವಾಗ ನಮಗೆ ಗಾಢವಾದ ತೃಪ್ತಿಯನ್ನು ತರುತ್ತದೆ. “ದೈವಜ್ಞಾನವು” ನಮಗೆ ಅದೆಂಥ ಸಂತೋಷವನ್ನು ತರುತ್ತದೆ! (ಜ್ಞಾನೋಕ್ತಿ 2:1-5) ದೇವರೊಂದಿಗೆ ನಮಗಿರುವ ಆನಂದಪೂರ್ಣ ಸಂಬಂಧವು ನಿಷ್ಕೃಷ್ಟ ಜ್ಞಾನದ ಮೇಲೆ, ಆತನಲ್ಲಿ ಮತ್ತು ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಮಗಿರುವ ನಂಬಿಕೆಯ ಮೇಲೆ ಆಧಾರಿತವಾಗಿದೆ. (1 ಯೋಹಾನ 2:1, 2) ನಾವು ಅಂತರಾಷ್ಟ್ರೀಯವಾಗಿರುವ ಏಕಮಾತ್ರ ನಿಜ ಸಹೋದರತ್ವದ ಭಾಗವಾಗಿರುವುದು ಆನಂದದ ಇನ್ನೊಂದು ಮೂಲವಾಗಿದೆ. (ಚೆಫನ್ಯ 3:9; ಹಗ್ಗಾಯ 2:7) ನಮಗಿರುವ ರಾಜ್ಯ ನಿರೀಕ್ಷೆ ಮತ್ತು ಸುವಾರ್ತೆಯನ್ನು ಸಾರುವ ಮಹಾ ಸದವಕಾಶವು ನಮ್ಮನ್ನು ಆನಂದಭರಿತರನ್ನಾಗಿ ಮಾಡುತ್ತದೆ. (ಮತ್ತಾಯ 6:9, 10; 24:14) ನಿತ್ಯಜೀವದ ಪ್ರತೀಕ್ಷೆ ಕೂಡ ನಮಗೆ ಆನಂದವನ್ನು ತರುತ್ತದೆ. (ಯೋಹಾನ 17:3) ನಮಗೆ ಇಂಥ ಮಹಾ ನಿರೀಕ್ಷೆಯಿರುವುದರಿಂದ ನಾವು “ಬಹಳ ಆನಂದದಿಂದಿರಬೇಕು.”—ಧರ್ಮೋಪದೇಶಕಾಂಡ 16:15.

ಶಾಂತಿಶೀಲರೂ ದೀರ್ಘಸಹನೆಯುಳ್ಳವರೂ ಆಗಿರಿ

11 ದೇವರಾತ್ಮದ ಇನ್ನೊಂದು ಫಲವಾದ ಶಾಂತಿಯು ನೆಮ್ಮದಿಯ ಸ್ಥಿತಿ ಮತ್ತು ಕಳವಳದಿಂದ ಮುಕ್ತವಾಗಿರುವುದಾಗಿದೆ. ನಮ್ಮ ಸ್ವರ್ಗೀಯ ಪಿತನು ಶಾಂತಿಯ ದೇವರಾಗಿದ್ದಾನೆ. ಯೆಹೋವನು “ತನ್ನ ಪ್ರಜೆಗೆ ಸುಕ್ಷೇಮವನ್ನು [“ಶಾಂತಿಯನ್ನು,” NW] ದಯಪಾಲಿಸುವನು” ಎಂಬ ಆಶ್ವಾಸನೆ ನಮಗೆ ಕೊಡಲ್ಪಟ್ಟಿದೆ. (ಕೀರ್ತನೆ 29:11; 1 ಕೊರಿಂಥ 14:33) ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ.” (ಯೋಹಾನ 14:27) ಆ ಶಾಂತಿಯು ಅವನ ಶಿಷ್ಯರಿಗೆ ಹೇಗೆ ಸಹಾಯ ನೀಡಲಿತ್ತು?

12 ಯೇಸು ತನ್ನ ಶಿಷ್ಯರಿಗೆ ಕೊಟ್ಟ ಶಾಂತಿಯು ಅವರ ಹೃದಮನಗಳನ್ನು ಪ್ರಶಾಂತವಾಗಿರಿಸಿ ಅವರ ಭಯವನ್ನು ಕುಂದಿಸಿತು. ವಿಶೇಷವಾಗಿ ಅವರು ವಾಗ್ದಾನಿತ ಪವಿತ್ರಾತ್ಮವನ್ನು ಪಡೆದಾಗಲಂತೂ ಆ ಶಾಂತಿ ಅವರಲ್ಲಿತ್ತು. (ಯೋಹಾನ 14:26) ಆ ಪವಿತ್ರಾತ್ಮದ ಪ್ರಭಾವದಡಿಯಲ್ಲಿ ಮತ್ತು ನಮ್ಮ ಇಂದಿನ ಪ್ರಾರ್ಥನೆಗಳಿಗೆ ಉತ್ತರವಾಗಿ ನಾವು “ದೇವಶಾಂತಿ”ಯನ್ನು ಅನುಭವಿಸುತ್ತೇವೆ. ಇದು ನಮ್ಮ ಹೃದಮನಗಳನ್ನು ಪ್ರಶಾಂತವಾಗಿರಿಸುತ್ತದೆ. (ಫಿಲಿಪ್ಪಿ 4:6, 7) ಅಲ್ಲದೆ, ಯೆಹೋವನ ಆತ್ಮವು ನಾವು ನಮ್ಮ ಜೊತೆವಿಶ್ವಾಸಿಗಳೊಂದಿಗೆ ಹಾಗೂ ಇತರರೊಂದಿಗೆ ಸಮಾಧಾನಚಿತ್ತರೂ ಶಾಂತಶೀಲರೂ ಆಗಿರುವಂತೆ ಸಹಾಯ ಮಾಡುತ್ತದೆ.—ರೋಮಾಪುರ 12;18; 1 ಥೆಸಲೊನೀಕ 5:13.

13 ದೀರ್ಘಸಹನೆಯು ಶಾಂತಿಶೀಲತೆಗೆ ಸಂಬಂಧಿಸಿದ ಗುಣವಾಗಿದೆ. ಏಕೆಂದರೆ ಅದು ಕೋಪವೆಬ್ಬಿಸಲ್ಪಟ್ಟಾಗ ಅಥವಾ ಯಾವುದೋ ತಪ್ಪು ಸಂಭವಿಸಿದಾಗ ಪರಿಸ್ಥಿತಿಯು ಸುಧಾರಣೆಗೊಳ್ಳುವುದೆಂಬ ನಿರೀಕ್ಷೆಯಿಂದ ಸಹಿಸಿಕೊಳ್ಳುತ್ತಾ ತಾಳ್ಮೆಯಿಂದಿರುವುದನ್ನು ಅರ್ಥೈಸುತ್ತದೆ. ದೇವರು ದೀರ್ಘಸಹನೆಯುಳ್ಳಾತನು. (ರೋಮಾಪುರ 9:22-24) ಯೇಸುವೂ ಈ ಗುಣವನ್ನು ಪ್ರದರ್ಶಿಸುತ್ತಾನೆ. ಅವನ ಈ ಗುಣದ ಅಭಿವ್ಯಕ್ತಿಯಿಂದ ನಾವು ಸಹ ಪ್ರಯೋಜನ ಪಡೆದುಕೊಳ್ಳಬಲ್ಲೆವು. ಏಕೆಂದರೆ ಪೌಲನು ಬರೆದದು: “ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ ತನ್ನ ದೀರ್ಘಶಾಂತಿಯ [“ದೀರ್ಘಸಹನೆಯ,” NW] ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸು ಮುಖ್ಯಪಾಪಿಯಾದ ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು [“ದೀರ್ಘಸಹನೆಯನ್ನು,” NW] ತೋರ್ಪಡಿಸಿದನು.”—1 ತಿಮೊಥೆಯ 1:16.

14 ಈ ದೀರ್ಘಸಹನೆಯ ಗುಣವು, ಯಾರಾದರೂ ನಿರ್ದಯೆ ಇಲ್ಲವೆ ನಿರ್ಲಕ್ಷ್ಯದಿಂದ ಏನನ್ನಾದರೂ ಹೇಳಿಬಿಡುವಲ್ಲಿ ಅಥವಾ ಮಾಡುವಲ್ಲಿ ನಾವು ತಾಳಿಕೊಳ್ಳುವಂತೆ ಸಹಾಯಮಾಡುತ್ತದೆ. ಪೌಲನು ಜೊತೆಕ್ರೈಸ್ತರಿಗೆ, “ಎಲ್ಲರೊಂದಿಗೂ ದೀರ್ಘಸಹನೆಯಿಂದಿರಿ” ಎಂದು ಪ್ರೋತ್ಸಾಹಿಸಿದನು. (1 ಥೆಸಲೊನೀಕ 5:14, NW) ನಾವೆಲ್ಲರೂ ಅಪರಿಪೂರ್ಣರಾಗಿದ್ದು ತಪ್ಪುಗಳನ್ನು ಮಾಡುವುದರಿಂದ ಜನರು ನಮ್ಮೊಂದಿಗೆ ತಾಳ್ಮೆಯಿಂದಿರುವಂತೆಯೂ ಅವರೊಂದಿಗಿನ ವ್ಯವಹಾರಗಳಲ್ಲಿ ನಾವು ತಪ್ಪುಮಾಡುವಾಗ ದೀರ್ಘಸಹನೆ ಉಳ್ಳವರಾಗಿರುವಂತೆಯೂ ಬಯಸುತ್ತೇವೆಂಬುದು ಖಂಡಿತ. ಆದುದರಿಂದ ನಾವು ‘ಆನಂದಪೂರ್ವಕವಾದ ದೀರ್ಘಸಹನೆಯನ್ನು’ ತೋರಿಸಲು ಶ್ರಮಪಡೋಣ.—ಕೊಲೊಸ್ಸೆ 1:9-12, NW.

ದಯೆ ಮತ್ತು ಒಳ್ಳೇತನವನ್ನು ಪ್ರದರ್ಶಿಸಿ

15 ನಾವು ಸ್ನೇಹಪರ ಮತ್ತು ಸಹಾಯಕರವಾದ ನಡೆನುಡಿಗಳ ಮೂಲಕ ಇತರರಲ್ಲಿ ಆಸಕ್ತಿಯನ್ನು ತೋರಿಸುವಾಗ ದಯೆಯು ಪ್ರದರ್ಶಿಸಲ್ಪಡುತ್ತದೆ. ಯೆಹೋವನು ಮತ್ತು ಆತನ ಪುತ್ರನು—ಇವರಿಬ್ಬರೂ ದಯಾಪರರು. (ರೋಮಾಪುರ 2:4; 1 ಪೇತ್ರ 2:2) ಆದುದರಿಂದ ದೇವರ ಮತ್ತು ಕ್ರಿಸ್ತನ ಸೇವಕರಿಂದ ದಯಾಭಾವವು ನಿರೀಕ್ಷಿಸಲ್ಪಡುತ್ತದೆ. (ಕೊಲೊಸ್ಸೆ 3:12) ದೇವರೊಂದಿಗೆ ವೈಯಕ್ತಿಕ ಸಂಬಂಧವಿಲ್ಲದವರೂ “ಅಸಾಧಾರಣವಾದ [ಮಾನವೀಯ] ದಯೆ”ಯನ್ನು ತೋರಿಸಿದ್ದಾರೆ. (ಅ. ಕೃತ್ಯಗಳು 27:3; 28:2, NIBV) ಹಾಗಾದರೆ, ನಾವು ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ ಇರುವುದಾದರೆ’ ದಯೆಯನ್ನು ತೋರಿಸಬಲ್ಲೆವೆಂಬುದು ನಿಶ್ಚಯ.

16 ಒಬ್ಬನ ಮನನೋಯಿಸುವ ಮಾತುಗಳಿಂದ ಇಲ್ಲವೆ ನಿರ್ಲಕ್ಷ್ಯದ ಕೃತ್ಯಗಳಿಂದ ನಮಗೆ ಸಿಟ್ಟುಬರಲು ಕಾರಣವಿದ್ದರೂ ನಾವು ದಯೆಯನ್ನು ತೋರಿಸಬಲ್ಲೆವು. ಪೌಲನು ಹೇಳಿದ್ದು: “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಸೈತಾನನಿಗೆ ಅವಕಾಶಕೊಡಬೇಡಿರಿ. . . . ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ [‘ದಯೆಯುಳ್ಳವರಾಗಿಯೂ,’ NIBV] ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ.” (ಎಫೆಸ 4:26, 27, 32; 5:1) ಕಷ್ಟಗಳನ್ನು ಅನುಭವಿಸುತ್ತಿರುವವರಿಗೆ ನಾವು ದಯೆಯನ್ನು ತೋರಿಸುವುದು ವಿಶೇಷವಾಗಿ ಸೂಕ್ತವಾಗಿದೆ. ಆದರೆ ಒಬ್ಬನು ‘ಉಪಕಾರ, ನೀತಿ ಮತ್ತು ಸತ್ಯ’ ಮಾರ್ಗವನ್ನು ತೊರೆಯುವ ಅಪಾಯದಲ್ಲಿರುವಾಗ ಅವನಿಗೆ ನೋವಾಗುವುದೆಂಬ ಕಾರಣಕ್ಕಾಗಿ ಶಾಸ್ತ್ರೀಯ ಸಲಹೆಯನ್ನು ಕೊಡಲು ತಪ್ಪುವ ಕ್ರೈಸ್ತ ಹಿರಿಯನು ದಯೆಯನ್ನು ತೋರಿಸುವವನಾಗುವುದಿಲ್ಲ.—ಎಫೆಸ 5:9.

17 ಒಳ್ಳೇತನವೆಂದರೆ ಸದ್ಗುಣ, ನೈತಿಕ ಮೇಲ್ಮೆ ಅಥವಾ ಒಳ್ಳೆಯವರಾಗಿರುವ ಗುಣ ಇಲ್ಲವೆ ಸ್ಥಿತಿ ಎಂದರ್ಥ. ದೇವರು ಪರಮಾರ್ಥದಲ್ಲಿ ಒಳ್ಳೆಯವನು. (ಕೀರ್ತನೆ 100:5; 106:1) ಯೇಸು ಸದ್ಗುಣಿಯಾಗಿದ್ದು ನೈತಿಕ ಮೇಲ್ಮೆ ಉಳ್ಳವನಾಗಿದ್ದಾನೆ. ಆದರೂ, “ಒಳ್ಳೇ ಬೋಧಕನೇ” ಎಂದು ಕರೆಯಲ್ಪಟ್ಟಾಗ, ‘ಒಳ್ಳೆಯವನು’ ಎಂಬ ಆ ಬಿರುದನ್ನು ಅವನು ಅಂಗೀಕರಿಸಲಿಲ್ಲ. (ಮಾರ್ಕ 10:17, 18) ಏಕೆಂದರೆ ತಾನಲ್ಲ, ದೇವರೊಬ್ಬನೇ ಒಳ್ಳೇತನದ ಪರಮಶ್ರೇಷ್ಠ ಮಾದರಿ ಎಂದು ಅವನು ಒಪ್ಪಿಕೊಂಡನು.

18 ಒಳ್ಳೆಯದನ್ನು ಮಾಡಲು ನಮಗಿರುವ ಸಾಮರ್ಥ್ಯವನ್ನು ಬಾಧ್ಯತೆಯಾಗಿ ಬಂದಿರುವ ಪಾಪವು ತಡೆದು ಹಿಡಿಯುತ್ತದೆ. (ರೋಮಾಪುರ 5:12) ಆದರೂ, ‘ಒಳ್ಳೇತನವನ್ನು ನಮಗೆ ಕಲಿಸು’ ಎಂದು ನಾವು ದೇವರಿಗೆ ಪ್ರಾರ್ಥಿಸುವಲ್ಲಿ, ನಾವು ಈ ಗುಣವನ್ನು ತೋರಿಸಬಲ್ಲೆವು. (ಕೀರ್ತನೆ 119:66, NW) ಪೌಲನು ರೋಮ್‌ನ ಜೊತೆವಿಶ್ವಾಸಿಗಳಿಗೆ ಹೇಳಿದ್ದು: “ನನ್ನ ಸಹೋದರರೇ, ನೀವಂತೂ ಒಳ್ಳೇತನದಿಂದ ಭರಿತರಾಗಿಯೂ ಸಕಲ ಜ್ಞಾನದಿಂದ ತುಂಬಿದವರಾಗಿಯೂ . . . ಇದ್ದೀರಿ.” (ರೋಮಾಪುರ 15:14) ಕ್ರೈಸ್ತ ಮೇಲ್ವಿಚಾರಕನು ‘ಒಳ್ಳೇದನ್ನು ಪ್ರೀತಿಸುವವನು’ ಆಗಿರಬೇಕು. (ತೀತ 1:7, 8) ನಾವು ದೇವರಾತ್ಮದಿಂದ ನಡೆಸಲ್ಪಡುವಲ್ಲಿ ಒಳ್ಳೇತನಕ್ಕೆ ಪ್ರಸಿದ್ಧರಾಗುವೆವು. ಯೆಹೋವನು ಅದನ್ನು ‘ನಮ್ಮ ಹಿತಕ್ಕಾಗಿ’ ಅಂದರೆ ಒಳ್ಳೇದಕ್ಕಾಗಿ ‘ನೆನಪು’ ಮಾಡಿಕೊಳ್ಳುವನು.—ನೆಹೆಮೀಯ 5:19; 13:31.

“ನಿಷ್ಕಪಟವಾದ ನಂಬಿಕೆ”

19 ದೇವರಾತ್ಮದ ಫಲದ ಭಾಗವಾಗಿರುವ ನಂಬಿಕೆಯು, “ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ.” (ಇಬ್ರಿಯ 11:1) ನಮಗೆ ನಂಬಿಕೆಯಿರುವಲ್ಲಿ ಯೆಹೋವನು ವಾಗ್ದಾನಿಸಿರುವ ಸಕಲವೂ ನೆರವೇರುವುದೆಂಬ ನಿಶ್ಚಯತೆ ನಮ್ಮಲ್ಲಿರುತ್ತದೆ. ಅದೃಶ್ಯವಾಗಿರುವ ನಿಜತ್ವಗಳ ಮನಗಾಣಿಸುವ ರುಜುವಾತು ಎಷ್ಟು ಶಕ್ತಿಯುತವಾಗಿರುತ್ತದೆಂದರೆ, ನಂಬಿಕೆಯು ಆ ರುಜುವಾತಿಗೆ ಸಮಾನವಾಗಿದೆ ಎಂದು ಹೇಳಲಾಗುತ್ತದೆ. ಉದಾಹರಣೆಗೆ, ಸೃಷ್ಟಿ ವಸ್ತುಗಳ ಅಸ್ತಿತ್ವವು ಒಬ್ಬ ಸೃಷ್ಟಿಕರ್ತನಿದ್ದಾನೆಂದು ನಮಗೆ ಮನಗಾಣಿಸುತ್ತದೆ. ನಾವು ಪವಿತ್ರಾತ್ಮಕ್ಕೆ ಅನುಸಾರವಾಗಿ ನಡೆಯುತ್ತ ಇರುವಲ್ಲಿ ಆ ವಿಧದ ನಂಬಿಕೆಯನ್ನೇ ಪ್ರದರ್ಶಿಸುವೆವು.

20 ನಂಬಿಕೆಯ ಕೊರತೆಯು ನಮಗೆ ಸುಲಭವಾಗಿ “ಹತ್ತಿಕೊಳ್ಳುವ ಪಾಪ” ಆಗಿರುತ್ತದೆ. (ಇಬ್ರಿಯ 12:1) ನಮ್ಮ ನಂಬಿಕೆಯನ್ನು ನಾಶಪಡಿಸಬಲ್ಲ ಶರೀರಭಾವದ ಕೃತ್ಯಗಳಿಂದ, ಪ್ರಾಪಂಚಿಕತೆಯಿಂದ ಮತ್ತು ಸುಳ್ಳು ಬೋಧನೆಗಳಿಂದ ದೂರವಿರಬೇಕಾದರೆ ನಾವು ದೇವರಾತ್ಮದ ಮೇಲೆ ಹೊಂದಿಕೊಳ್ಳುವುದು ಅಗತ್ಯ. (ಕೊಲೊಸ್ಸೆ 2:8; 1 ತಿಮೊಥೆಯ 6:9, 10; 2 ತಿಮೊಥೆಯ 4:3-5) ಯೆಹೋವನ ಆಧುನಿಕ ದಿನದ ಸೇವಕರಲ್ಲಿ ದೇವರಾತ್ಮವು, ಬೈಬಲ್‌ನಲ್ಲಿ ದಾಖಲಾಗಿರುವ ಕ್ರೈಸ್ತಪೂರ್ವ ಹಾಗೂ ಇನ್ನಿತರ ಸಾಕ್ಷಿಗಳಲ್ಲಿದ್ದಂಥ ನಂಬಿಕೆಯನ್ನು ಹುಟ್ಟಿಸುತ್ತದೆ. (ಇಬ್ರಿಯ 11:2-40) ಹೀಗೆ ನಮ್ಮ ಸ್ವಂತ “ನಿಷ್ಕಪಟವಾದ ನಂಬಿಕೆ” ಇತರರ ನಂಬಿಕೆಯನ್ನು ಬಲಪಡಿಸಬಲ್ಲದು.—1 ತಿಮೊಥೆಯ 1:5; ಇಬ್ರಿಯ 13:7.

ಸೌಮ್ಯತೆ ಮತ್ತು ಆತ್ಮನಿಯಂತ್ರಣವನ್ನು ತೋರಿಸಿರಿ

21 ಸೌಮ್ಯತೆ ಎಂದರೆ ಸ್ವಭಾವದಲ್ಲಿ ಮತ್ತು ವರ್ತನೆಯಲ್ಲಿ ಕೋಮಲತೆ ಎಂದರ್ಥ. ದೇವರ ಗುಣಗಳಲ್ಲಿ ಒಂದು ಸೌಮ್ಯಭಾವವಾಗಿದೆ. ಇದು ನಮಗೆ ಗೊತ್ತಾಗುವುದು ಹೇಗೆಂದರೆ ಸೌಮ್ಯ ಸ್ವಭಾವದವನಾಗಿದ್ದ ಯೇಸು ಯೆಹೋವನ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ತೋರ್ಪಡಿಸಿದನು. (ಮತ್ತಾಯ 11:28-30; ಯೋಹಾನ 1:18; 5:19) ಹಾಗಾದರೆ ದೇವರ ಸೇವಕರಾದ ನಮ್ಮಿಂದ ಏನನ್ನು ಕೇಳಿಕೊಳ್ಳಲಾಗುತ್ತದೆ?

22 ಕ್ರೈಸ್ತರಾಗಿರುವ ನಾವು “ಎಲ್ಲಾ ಮನುಷ್ಯರಿಗೆ ಪೂರ್ಣಸಾಧುಗುಣವನ್ನು [“ಸೌಮ್ಯಗುಣವನ್ನು,” NW]” ತೋರಿಸುವಂತೆ ನಿರೀಕ್ಷಿಸಲಾಗುತ್ತದೆ. (ತೀತ 3:2) ನಮ್ಮ ಶುಶ್ರೂಷೆಯಲ್ಲಿ ನಾವು ಸೌಮ್ಯತೆಯನ್ನು ಪ್ರದರ್ಶಿಸುತ್ತೇವೆ. ಆಧ್ಯಾತ್ಮಿಕ ಅರ್ಹತೆಗಳಿರುವವರು ತಪ್ಪಿತಸ್ಥ ಕ್ರೈಸ್ತನನ್ನು “ಸೌಮ್ಯಭಾವ”ದಿಂದ ತಿದ್ದಿ ಸರಿಪಡಿಸುವಂತೆ ಸಲಹೆ ನೀಡಲಾಗಿದೆ. (ಗಲಾತ್ಯ 6:1, NW) ನಾವೆಲ್ಲರೂ “ಪೂರ್ಣ ವಿನಯ ಮತ್ತು ಸೌಮ್ಯತೆ”ಯನ್ನು ತೋರಿಸುವುದರಿಂದ ಕ್ರೈಸ್ತ ಐಕ್ಯ ಮತ್ತು ಶಾಂತಿಗೆ ನೆರವಾಗಬಲ್ಲೆವು. (ಎಫೆಸ 4:1-3, NW) ನಾವು ಹೊಂದಿಕೆಯಿಂದ ಪವಿತ್ರಾತ್ಮವನ್ನು ಅನುಸರಿಸಿ ನಡೆದು ಆತ್ಮನಿಯಂತ್ರಣವನ್ನು ಕಾಪಾಡಿಕೊಳ್ಳುವಲ್ಲಿ ಸೌಮ್ಯತೆಯನ್ನು ಪ್ರದರ್ಶಿಸಬಲ್ಲೆವು.

23 ಆತ್ಮನಿಯಂತ್ರಣವು ಯೋಚನೆ, ನಡೆ, ನುಡಿಗಳನ್ನು ನಾವು ನಿಯಂತ್ರಿಸುವಂತೆ ಸಾಧ್ಯಮಾಡುತ್ತದೆ. ಯೆರೂಸಲೇಮನ್ನು ನಾಶಪಡಿಸಿದ ಬಾಬೆಲಿನವರೊಂದಿಗೆ ಯೆಹೋವನು ವ್ಯವಹರಿಸುವಾಗ ಯಾವಾಗಲೂ ತನ್ನನ್ನು “ಬಿಗಿ” ಹಿಡಿದುಕೊಂಡಿದ್ದನು ಅಂದರೆ ಆತ್ಮನಿಯಂತ್ರಣವನ್ನು ತೋರಿಸಿದನು. (ಯೆಶಾಯ 42:14) ಆತನ ಪುತ್ರನು ತನ್ನ ಕಷ್ಟಾನುಭವದ ಕಾಲದಲ್ಲಿ ಆತ್ಮನಿಯಂತ್ರಣವನ್ನು ತೋರಿಸಿ ನಮಗೆ ‘ಮಾದರಿಯನ್ನಿಟ್ಟನು.’ ಅಪೊಸ್ತಲ ಪೇತ್ರನು ಜೊತೆಕ್ರೈಸ್ತರಿಗೆ ಅವರು “ಜ್ಞಾನಕ್ಕೆ ದಮೆಯನ್ನು [“ಆತ್ಮನಿಯಂತ್ರಣವನ್ನು,” NW]” ಸೇರಿಸಬೇಕೆಂದು ಸಲಹೆ ನೀಡಿದನು.—1 ಪೇತ್ರ 2:21-23; 2 ಪೇತ್ರ 1:5-8.

24 ಕ್ರೈಸ್ತ ಹಿರಿಯರು ಆತ್ಮನಿಯಂತ್ರಣ ಉಳ್ಳವರಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ. (ತೀತ 1:7, 8) ವಾಸ್ತವವಾಗಿ, ಪವಿತ್ರಾತ್ಮದಿಂದ ನಡೆಸಲ್ಪಡುವ ಎಲ್ಲರೂ ಆತ್ಮನಿಯಂತ್ರಣವನ್ನು ತೋರಿಸಬಲ್ಲರು. ಹೀಗೆ ಅನೈತಿಕತೆ, ಬಂಡುಮಾತು ಇಲ್ಲವೆ ಯೆಹೋವನನ್ನು ಅಸಂತೋಷ ಪಡಿಸುವ ಎಲ್ಲವನ್ನೂ ತೊರೆದುಬಿಡುವರು. ದೇವರಾತ್ಮವು ನಮ್ಮಲ್ಲಿ ಆತ್ಮನಿಯಂತ್ರಣವನ್ನು ಹುಟ್ಟಿಸುವಂತೆ ನಾವು ಬಿಡುವಲ್ಲಿ, ಇದು ಇತರರಿಗೆ ನಮ್ಮ ದೈವಿಕ ಮಾತುಕತೆ ಮತ್ತು ನಡತೆಗಳಿಂದ ವ್ಯಕ್ತವಾಗುವುದು.

ಸದಾ ಪವಿತ್ರಾತ್ಮವನ್ನು ಅನುಸರಿಸಿ ನಡೆಯಿರಿ

25 ನಾವು ಪವಿತ್ರಾತ್ಮವನ್ನು ಅನುಸರಿಸಿ ನಡೆಯುವಲ್ಲಿ ಹುರುಪಿನ ರಾಜ್ಯಘೋಷಕರಾಗುವೆವು. (ಅ. ಕೃತ್ಯಗಳು 18:24-26) ನಾವು ಮೆಚ್ಚಿನ ಒಡನಾಡಿಗಳಾಗಿರುವೆವು. ವಿಶೇಷವಾಗಿ, ದೇವಭಕ್ತಿಯ ಜನರು ನಮ್ಮ ಸಹವಾಸದಲ್ಲಿ ಸಂತೋಷಿಸುವರು. ಪವಿತ್ರಾತ್ಮದಿಂದ ನಡೆಸಲ್ಪಟ್ಟವರಂತೆ ನಾವು ಕೂಡ ನಮ್ಮ ಜೊತೆಆರಾಧಕರಿಗೆ ಆಧ್ಯಾತ್ಮಿಕ ಪ್ರೋತ್ಸಾಹನೆಯ ಚಿಲುಮೆಯಾಗಿರುವೆವು. (ಫಿಲಿಪ್ಪಿ 2:1-4) ಎಲ್ಲ ಕ್ರೈಸ್ತರೂ ಬಯಸುವುದು ಇದನ್ನೇ ಅಲ್ಲವೇ?

26 ಸೈತಾನನ ಹಿಡಿತದಲ್ಲಿರುವ ಈ ಲೋಕದಲ್ಲಿ ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದು ಅಷ್ಟೊಂದು ಸುಲಭವಲ್ಲ. (1 ಯೋಹಾನ 5:19) ಹಾಗಿದ್ದರೂ, ಲಕ್ಷಾಂತರ ಜನರು ಇಂದು ಹಾಗೆ ನಡೆಯುತ್ತಿದ್ದಾರೆ. ನಾವು ಪೂರ್ಣಹೃದಯದಿಂದ ಯೆಹೋವನಲ್ಲಿ ಭರವಸೆ ಇಡುವಲ್ಲಿ ಈಗ ಜೀವನದಲ್ಲಿ ಸಂತೋಷಿಸುವೆವು. ಮಾತ್ರವಲ್ಲ, ಪವಿತ್ರಾತ್ಮವನ್ನು ಪ್ರೀತಿಪೂರ್ವಕವಾಗಿ ಒದಗಿಸಿದಾತನ ನೀತಿಯ ಮಾರ್ಗಗಳಲ್ಲಿ ಸದಾಕಾಲ ನಡೆಯುವೆವು.—ಕೀರ್ತನೆ 128:1; ಜ್ಞಾನೋಕ್ತಿ 3:5, 6. (w07 7/15)

ನಿಮ್ಮ ಉತ್ತರವೇನು?

• ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದು,’ ದೇವರ ಮತ್ತು ಆತನ ಪುತ್ರನೊಂದಿಗಿರುವ ನಮ್ಮ ಸಂಬಂಧವನ್ನು ಹೇಗೆ ಪ್ರಭಾವಿಸುತ್ತದೆ?

• ದೇವರಾತ್ಮದ ಫಲದಲ್ಲಿ ಯಾವ ಗುಣಗಳು ಸೇರಿವೆ?

• ದೇವರಾತ್ಮದ ಫಲವನ್ನು ತೋರಿಸುವ ಕೆಲವು ವಿಧಗಳಾವುವು?

• ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದು ನಮ್ಮ ಪ್ರಸ್ತುತ ಜೀವಿತ ಮತ್ತು ಭಾವೀ ಪ್ರತೀಕ್ಷೆಗಳನ್ನು ಹೇಗೆ ಪ್ರಭಾವಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

1. ಪವಿತ್ರಾತ್ಮದ ವಿರುದ್ಧ ಪಾಪಮಾಡುವ ಬಗ್ಗೆ ನಮಗಿರುವ ಭಯವನ್ನು ಹೇಗೆ ತೊಲಗಿಸಸಾಧ್ಯವಿದೆ?

2, 3. ನಾವು ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ ಇರುವಲ್ಲಿ, ಹೇಗೆ ಪ್ರಭಾವಿಸಲ್ಪಡುವೆವು?

4, 5. ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದು ನಾವು ಯೇಸುವನ್ನು ವೀಕ್ಷಿಸುವ ವಿಧದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

6. ಪವಿತ್ರಾತ್ಮವನ್ನು ಅನುಸರಿಸಿ ನಡೆಯುವವರಲ್ಲಿ ದೇವರಾತ್ಮವು ಯಾವ ಗುಣಗಳನ್ನು ಉಂಟುಮಾಡುತ್ತದೆ?

7. ಪ್ರೀತಿ ಎಂದರೇನು ಮತ್ತು ಅದರ ಕೆಲವು ಲಕ್ಷಣಗಳಾವುವು?

8. ನಮ್ಮ ಜೊತೆಆರಾಧಕರಿಗೆ ನಾವು ಏಕೆ ಪ್ರೀತಿಯನ್ನು ತೋರಿಸಬೇಕು?

9, 10. ಆನಂದವೆಂದರೇನು ಮತ್ತು ಆನಂದಿತರಾಗಿರಲು ಕೆಲವು ಕಾರಣಗಳು ಯಾವುವು?

11, 12 (ಎ) ಶಾಂತಿಯ ಅರ್ಥವನ್ನು ತಿಳಿಸಿರಿ? (ಬಿ) ದೇವಶಾಂತಿಯು ನಮ್ಮ ಮೇಲೆ ಯಾವ ಪ್ರಭಾವವನ್ನು ಬೀರುತ್ತದೆ?

13, 14. ದೀರ್ಘಸಹನೆ ಎಂದರೇನು ಮತ್ತು ನಾವು ಅದನ್ನು ಏಕೆ ಪ್ರದರ್ಶಿಸಬೇಕು?

15. ದಯೆಯ ಅರ್ಥ ನಿರೂಪಿಸಿರಿ ಮತ್ತು ಅದರ ದೃಷ್ಟಾಂತಗಳನ್ನು ಕೊಡಿರಿ.

16. ದಯೆ ತೋರಿಸುವಂತೆ ನಮ್ಮನ್ನು ಪ್ರಚೋದಿಸಬೇಕಾದ ಕೆಲವು ಸ್ಥಿತಿಗತಿಗಳಾವುವು?

17, 18. ಒಳ್ಳೇತನದ ಅರ್ಥವನ್ನು ಹೇಗೆ ನಿರೂಪಿಸಲಾಗಿದೆ ಮತ್ತು ನಮ್ಮ ಜೀವನದಲ್ಲಿ ಈ ಗುಣ ಯಾವ ಪಾತ್ರವನ್ನು ವಹಿಸಬೇಕು?

19. ಇಬ್ರಿಯ 11:1ರ ಹೊಂದಿಕೆಯಲ್ಲಿ ನಂಬಿಕೆಯ ಅರ್ಥವನ್ನು ನಿರೂಪಿಸಿರಿ.

20. ನಮಗೆ ಸುಲಭವಾಗಿ “ಹತ್ತಿಕೊಳ್ಳುವ ಪಾಪ” ಯಾವುದು ಮತ್ತು ನಾವು ಅದರಿಂದಲೂ ಶರೀರಭಾವದ ಕೃತ್ಯಗಳಿಂದಲೂ ಹೇಗೆ ದೂರವಿರಬಲ್ಲೆವು?

21, 22. ಸೌಮ್ಯತೆಯ ಅರ್ಥವನ್ನು ಹೇಗೆ ನಿರೂಪಿಸಲಾಗಿದೆ ಮತ್ತು ನಾವು ಅದನ್ನು ಏಕೆ ತೋರಿಸಬೇಕು?

23, 24. ಆತ್ಮನಿಯಂತ್ರಣವೆಂದರೇನು ಮತ್ತು ಇದು ನಮಗೆ ಹೇಗೆ ಸಹಾಯಮಾಡುತ್ತದೆ?

25, 26. ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದು ನಮ್ಮ ಪ್ರಸ್ತುತ ಸಂಬಂಧಗಳನ್ನು ಮತ್ತು ಭಾವೀ ಪ್ರತೀಕ್ಷೆಗಳನ್ನು ಹೇಗೆ ಪ್ರಭಾವಿಸುವುದು?