ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೆಜ್ಕೇಲ ಪುಸ್ತಕದ ಮುಖ್ಯಾಂಶಗಳು—II

ಯೆಹೆಜ್ಕೇಲ ಪುಸ್ತಕದ ಮುಖ್ಯಾಂಶಗಳು—II

ಯೆಹೋವನ ವಾಕ್ಯವು ಸಜೀವವಾದದ್ದು

ಯೆಹೆಜ್ಕೇಲ ಪುಸ್ತಕದ ಮುಖ್ಯಾಂಶಗಳು—II

ಸಮಯ: ಸಾ.ಶ.ಪೂ. 609ರ ಡಿಸೆಂಬರ್‌ ತಿಂಗಳು. ಬಾಬೆಲಿನ ಅರಸನು ಯೆರೂಸಲೇಮಿನ ಮೇಲೆ ತನ್ನ ಅಂತಿಮ ಮುತ್ತಿಗೆಯನ್ನು ಆರಂಭಿಸಿದ್ದಾನೆ. ಬಾಬೆಲಿನ ಸೆರೆಯಲ್ಲಿದ್ದವರಿಗೆ ಯೆಹೆಜ್ಕೇಲನ ಸಂದೇಶದ ಈವರೆಗಿನ ಒಂದು ಮುಖ್ಯ ವಿಷಯವು, ಅವರ ಪ್ರಿಯ ನಗರವಾದ ಯೆರೂಸಲೇಮಿನ ಸೋಲು ಹಾಗೂ ನಾಶನದ ಕುರಿತಾಗಿತ್ತು. ಈಗಲಾದರೊ ಯೆಹೆಜ್ಕೇಲನ ಪ್ರವಾದನೆಗಳ ಮುಖ್ಯ ವಿಷಯವು ಬದಲಾಗುತ್ತದೆ. ಈಗ ಅದು, ದೇವಜನರಿಗಾಗುವ ವಿಪತ್ತನ್ನು ನೋಡಿ ಹರ್ಷಿಸಲಿರುವ ವಿಧರ್ಮಿ ಜನಾಂಗಗಳಿಗೆ ಸಂಭವಿಸಲಿದ್ದ ದುರವಸ್ಥೆಯ ಕುರಿತಾಗಿದೆ. 18 ತಿಂಗಳುಗಳ ಬಳಿಕ ಯೆರೂಸಲೇಮ್‌ ಸೋಲಿಸಲ್ಪಡಲಿದ್ದಾಗ, ಯೆಹೆಜ್ಕೇಲನ ಸಂದೇಶ ಹೊಸ ತಿರುಳನ್ನು ಪಡೆಯುತ್ತದೆ; ಸತ್ಯಾರಾಧನೆಯ ಮಹಿಮಾನ್ವಿತ ಪುನಃಸ್ಥಾಪನೆಯೇ ಅದು.

ಯೆಹೆಜ್ಕೇಲ 25:1–48:35​ರಲ್ಲಿ, ಇಸ್ರಾಯೇಲಿನ ಸುತ್ತಲಿರುವ ಜನಾಂಗಗಳ ಕುರಿತ ಪ್ರವಾದನೆಗಳು ಮತ್ತು ದೇವಜನರ ಬಿಡುಗಡೆಯ ಕುರಿತ ಪ್ರವಾದನೆಗಳು ಇವೆ. * ಈ ಭಾಗವು, ಕಾಲಾನುಕ್ರಮವಾಗಿಯೂ ವಿಷಯಾನುಕ್ರಮವಾಗಿಯೂ ಇದೆ. ಆದರೆ ಯೆಹೆಜ್ಕೇಲ 29:17-20ರ ನಾಲ್ಕು ವಚನಗಳು ಮಾತ್ರ ಕಾಲಾನುಕ್ರಮದಲ್ಲಿರದೆ ಕೇವಲ ಐಗುಪ್ತದ ವಿರುದ್ಧವಾಗಿರುವ ಪ್ರವಾದನೆಯೊಂದಿಗೆ ಸಂಬಂಧಿಸುತ್ತವೆ. ಯೆಹೆಜ್ಕೇಲನ ಪುಸ್ತಕವು ಪ್ರೇರಿತ ಶಾಸ್ತ್ರಗಳ ಭಾಗವಾಗಿದ್ದು ‘ಸಜೀವವಾದ ಮತ್ತು ಕಾರ್ಯಸಾಧಕವಾದ’ ಸಂದೇಶವೊಂದನ್ನು ಹೊಂದಿದೆ.—ಇಬ್ರಿಯ 4:12.

‘ಈ ದೇಶವು ಏದೆನ್‌ ಉದ್ಯಾನದಂತೆ ಕಳಕಳಿಸುವುದು’

(ಯೆಹೆಜ್ಕೇಲ 25:1-39:29)

ಯೆರೂಸಲೇಮಿನ ನಾಶನಕ್ಕೆ ಅಮ್ಮೋನ್‌, ಮೋವಾಬ್‌, ಎದೋಮ್‌, ಫಿಲಿಷ್ಟಿಯ, ತೂರ್‌ ಮತ್ತು ಚೀದೋನಿನವರು ತೋರಿಸಲಿರುವ ಪ್ರತಿಕ್ರಿಯೆಯನ್ನು ಮುನ್ನೋಡಿ ಯೆಹೋವನು ಯೆಹೆಜ್ಕೇಲನ ಮೂಲಕ ಈ ಜನಾಂಗಗಳ ವಿರುದ್ಧ ಪ್ರವಾದಿಸುತ್ತಾನೆ. ಐಗುಪ್ತವು ಸೂರೆಗೈಯಲ್ಪಡಲಿದೆ. ‘ಐಗುಪ್ತದ ಅರಸನಾದ ಫರೋಹ ಮತ್ತು ಅವನ ಪ್ರಜೆಗಳು’ “ಬಾಬೆಲಿನ ಅರಸನ ಖಡ್ಗ”ದಿಂದ ಕಡಿಯಲ್ಪಡುವ ದೇವದಾರು ಮರಕ್ಕೆ ಹೋಲಿಸಲ್ಪಟ್ಟಿದ್ದಾರೆ.—ಯೆಹೆಜ್ಕೇಲ 31:2, 3, 12; 32:11, 12.

ಸಾ.ಶ.ಪೂ. 607ರಲ್ಲಾದ ಯೆರೂಸಲೇಮಿನ ನಾಶನದ ಸುಮಾರು ಆರು ತಿಂಗಳ ಬಳಿಕ, ಅಲ್ಲಿಂದ ಪಲಾಯನಗೈದ ಒಬ್ಬನು ಯೆಹೆಜ್ಕೇಲನಿಗೆ, “ಪಟ್ಟಣವು ಶತ್ರುವಶವಾಯಿತು” ಎಂದು ವರದಿಸಿದನು. ಆ ಬಳಿಕ ಪ್ರವಾದಿಯು ಇನ್ನು ಮುಂದೆ ಸೆರೆವಾಸಿಗಳಿಗೆ ‘ಮೂಕನಾಗಿ’ ಉಳಿಯುವುದಿಲ್ಲ. (ಯೆಹೆಜ್ಕೇಲ 33:21, 22) ಅವನಿಗೆ ಪುನಃಸ್ಥಾಪನೆಯ ಪ್ರವಾದನೆಗಳನ್ನು ತಿಳಿಸಲಿಕ್ಕಿದೆ. ಯೆಹೋವನು ‘ಹಿಂಡನ್ನು ಕಾಯಲಿಕ್ಕೆ ಒಬ್ಬನೇ ಕುರುಬನನ್ನು, ತನ್ನ ಸೇವಕನಾದ ದಾವೀದನನ್ನು ಏರ್ಪಡಿಸುವನು.’ (ಯೆಹೆಜ್ಕೇಲ 34:23) ಎದೋಮ್‌ ಧ್ವಂಸವಾಗಲಿರುವುದು ಆದರೆ ಅದರಾಚೆಗಿರುವ ಯೆಹೂದವು, ‘ಏದೆನ್‌ ಉದ್ಯಾನದಂತೆ ಕಳಕಳಿಸಲಿರುವುದು.’ (ಯೆಹೆಜ್ಕೇಲ 36:35) ಪುನಃಸ್ಥಾಪಿಸಲ್ಪಟ್ಟ ಜನರನ್ನು “ಗೋಗನ” ಆಕ್ರಮಣದಿಂದ ಸಂರಕ್ಷಿಸುವನೆಂದು ಯೆಹೋವನು ಮಾತುಕೊಡುತ್ತಾನೆ.—ಯೆಹೆಜ್ಕೇಲ 38:2.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

29:8-12—ಐಗುಪ್ತ ದೇಶವು 40 ವರ್ಷಗಳ ತನಕ ಹಾಳುಪಾಳಾದದ್ದು ಯಾವಾಗ? ಸಾ.ಶ.ಪೂ. 607ರಲ್ಲಾದ ಯೆರೂಸಲೇಮಿನ ನಾಶನದ ಬಳಿಕ, ಯೆಹೂದದ ಜನಶೇಷವು ಯೆರೆಮೀಯನ ಎಚ್ಚರಿಕೆಯ ಹೊರತಾಗಿಯೂ ಐಗುಪ್ತಕ್ಕೆ ಓಡಿಹೋಯಿತು. (ಯೆರೆಮೀಯ 24:1, 8-10; 42:7-22) ಆದರೂ ಅವರಿಗೆ ಬಾಬೆಲಿನವರಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಏಕೆಂದರೆ ರಾಜ ನೆಬೂಕದ್ನೆಚ್ಚರನು ಐಗುಪ್ತದ ವಿರುದ್ಧವಾಗಿ ಬಂದು ಅದನ್ನು ಸೋಲಿಸಿಬಿಟ್ಟನು. ಈ ವಿಜಯವನ್ನು ಹಿಂಬಾಲಿಸಿ ಐಗುಪ್ತವು 40 ವರ್ಷಗಳ ವರೆಗೆ ಹಾಳುಪಾಳಾಗಿದ್ದಿರಬೇಕು. ಈ ಸ್ಥಿತಿಯ ಕುರಿತು ಐಹಿಕ ಇತಿಹಾಸವು ಯಾವುದೇ ಪುರಾವೆಗಳನ್ನು ನೀಡದಿದ್ದರೂ, ಯೆಹೋವನು ಪ್ರವಾದನೆಗಳನ್ನು ನೆರವೇರಿಸುವಾತನಾಗಿರುವ ಕಾರಣ ಅದು ಖಂಡಿತವಾಗಿ ಸಂಭವಿಸಿರಲೇಬೇಕೆಂದು ನಾವು ನಿಶ್ಚಯದಿಂದ ಹೇಳಬಲ್ಲೆವು.—ಯೆಶಾಯ 55:11.

29:18—‘ಪ್ರತಿಯೊಬ್ಬನ ತಲೆ ಬೋಳಾಗಿದ್ದು ಮತ್ತು ಪ್ರತಿಯೊಬ್ಬನ ಹೆಗಲು ಕಾಯಿಕಟ್ಟಿದ್ದು’ ಹೇಗೆ? ಒಳನಾಡಿನ ತೂರ್‌ ನಗರಿಗೆ ಹಾಕಲಾದ ಮುತ್ತಿಗೆ ಎಷ್ಟು ಉಗ್ರ ಹಾಗೂ ಶ್ರಮಭರಿತವಾಗಿತ್ತೆಂದರೆ, ನೆಬೂಕದ್ನೆಚ್ಚರನ ಸೈನಿಕರು ಧರಿಸಿದ ಶಿರಸ್ತ್ರಾಣಗಳು ಅವರ ತಲೆಗಳನ್ನು ಉಜ್ಜುತ್ತಿದ್ದ ಕಾರಣ ಅವು ಬೋಳಾದವು. ಅಲ್ಲದೆ, ಬುರುಜು ಹಾಗೂ ಕೊತ್ತಲುಗಳನ್ನು ಕಟ್ಟಲು ಬೇಕಾದ ಸಾಮಗ್ರಿಗಳನ್ನು ಸತತವಾಗಿ ಹೊತ್ತು ಅವರ ಹೆಗಲುಗಳು ಕಾಯಿಕಟ್ಟಿದ್ದವು ಅಂದರೆ ಸವೆದುಹೋಗಿದ್ದವು.—ಯೆಹೆಜ್ಕೇಲ 26:7-12.

ನಮಗಾಗಿರುವ ಪಾಠಗಳು:

29:19, 20. ಒಳನಾಡಿನ ತೂರಿನಲ್ಲಿದ್ದ ಜನರು ತಮ್ಮಲ್ಲಿದ್ದ ಬಹುತೇಕ ಸಂಪತ್ತಿನೊಂದಿಗೆ ತಮ್ಮ ದ್ವೀಪನಗರಿಗೆ ಪಲಾಯನಗೈದರು. ಇದರಿಂದಾಗಿ ರಾಜ ನೆಬೂಕದ್ನೆಚ್ಚರನಿಗೆ ಕೊಳ್ಳೆಹೊಡೆಯಲು ಹೆಚ್ಚೇನೂ ಸಿಗಲಿಲ್ಲ. ನೆಬೂಕದ್ನೆಚ್ಚರನು ಒಬ್ಬ ಅಹಂಕಾರಿಯಾದ ಸ್ವಾರ್ಥಮಗ್ನ ವಿಧರ್ಮಿ ದೊರೆಯಾಗಿದ್ದರೂ ಅವನು ಸಲ್ಲಿಸಿದ ಸೇವೆಗೆ ಪ್ರತಿಯಾಗಿ ಯೆಹೋವನು ಐಗುಪ್ತವನ್ನು “ಅವನ ಸೈನ್ಯಕ್ಕೆ ಸಂಬಳ”ವಾಗಿ ಕೊಟ್ಟನು. ನಮಗೋಸ್ಕರ ಸೇವೆ ಸಲ್ಲಿಸುತ್ತಿರುವ ಸರಕಾರಗಳಿಗೆ ತೆರಿಗೆ ಕೊಡುವ ಮೂಲಕ ಸತ್ಯದೇವರನ್ನು ನಾವು ಅನುಸರಿಸಬೇಕಲ್ಲವೇ? ಐಹಿಕ ಅಧಿಕಾರಿಗಳು ನಡೆದುಕೊಳ್ಳುವ ರೀತಿಯಾಗಲಿ ಆ ತೆರಿಗೆಯನ್ನು ಬಳಸುವ ವಿಧವಾಗಲಿ, ತೆರಿಗೆ ಕಟ್ಟದಿರಲು ನಮಗೆ ಯಾವುದೇ ಕಾರಣ ಕೊಡುವುದಿಲ್ಲ.—ರೋಮಾಪುರ 13:4-7.

33:7-9. ಆಧುನಿಕ ದಿನದ ಕಾವಲುಗಾರ ವರ್ಗವಾಗಿರುವ ಅಭಿಷಿಕ್ತ ಉಳಿಕೆಯವರು ಮತ್ತು ಅವರ ಸಂಗಾತಿಗಳು ರಾಜ್ಯದ ಸುವಾರ್ತೆಯನ್ನು ಎಲ್ಲ ಸಮಯದಲ್ಲಿ ಸಾರುತ್ತಾ, ಬರಲಿರುವ ‘ಮಹಾಸಂಕಟದ’ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಾ ಇರಬೇಕು.—ಮತ್ತಾಯ 24:20, 21.

33:10-20. ಕೆಟ್ಟ ಮಾರ್ಗಗಳನ್ನು ತೊರೆದು ದೇವರು ಏನನ್ನು ಅಪೇಕ್ಷಿಸುತ್ತಾನೊ ಅದಕ್ಕೆ ವಿಧೇಯರಾಗುವುದರ ಮೇಲೆ ನಮ್ಮ ರಕ್ಷಣೆಯು ಅವಲಂಬಿಸಿದೆ. ಹೌದು, ಯೆಹೋವನ ಮಾರ್ಗವು ಅಂದರೆ ‘ಕ್ರಮವು ಸಮವಾಗಿದೆ.

36:20, 21. ಇಸ್ರಾಯೇಲ್ಯರು “ಯೆಹೋವನ ಪ್ರಜೆ”ಯಾಗಿದ್ದರು. ಆದರೆ ತಮ್ಮ ಹೆಸರಿಗನುಸಾರ ಜೀವಿಸದೆ ಇದ್ದ ಕಾರಣ ಅವರು ದೇವರ ಹೆಸರನ್ನು ಜನಾಂಗಗಳ ಮಧ್ಯೆ ಅಪಕೀರ್ತಿಗೆ ಗುರಿಮಾಡಿದರು. ನಾವು ಎಂದಿಗೂ ಯೆಹೋವನ ನಾಮಮಾತ್ರದ ಆರಾಧಕರಾಗಿರಬಾರದು.

36:25, 37, 38. ನಾವು ಇಂದು ಆನಂದಿಸುವ ಆಧ್ಯಾತ್ಮಿಕ ಪರದೈಸವು ‘ಮೀಸಲಾದ ಮಂದೆಯಿಂದ’ ಅಂದರೆ, ಪವಿತ್ರ ಜನರ ಮಂದೆಯಿಂದ ತುಂಬಿಕೊಂಡಿದೆ. ಆದುದರಿಂದ ಅದನ್ನು ಶುದ್ಧವಾಗಿಡಲು ನಾವು ಪ್ರಯಾಸಪಡಬೇಕು.

38:1-23. ಮಾಗೋಗ್‌ ದೇಶದ ಗೋಗನ ಆಕ್ರಮಣದಿಂದ ಯೆಹೋವನು ತನ್ನ ಜನರನ್ನು ರಕ್ಷಿಸುವನು ಎಂದು ತಿಳಿಯುವುದು ಎಷ್ಟು ಭರವಸದಾಯಕವಾಗಿದೆ! ಗೋಗ್‌ ಎಂಬ ಹೆಸರು, “ಇಹಲೋಕಾಧಿಪತಿ” ಆಗಿರುವ ಪಿಶಾಚನಾದ ಸೈತಾನನಿಗೆ ಸ್ವರ್ಗದಿಂದ ಹೊರಗಟ್ಟಿದ ನಂತರ ಕೊಟ್ಟಂಥ ಹೆಸರಾಗಿದೆ. ಮಾಗೋಗ್‌ ದೇಶವು, ಸೈತಾನನು ಮತ್ತು ಅವನ ದೆವ್ವಗಳು ಎಲ್ಲಿಗೆ ನಿರ್ಬಂಧಿಸಲ್ಪಟ್ಟಿದ್ದಾರೊ ಆ ಭೂಪರಿಸರವನ್ನು ಸೂಚಿಸುತ್ತದೆ.—ಯೋಹಾನ 12:31; ಪ್ರಕಟನೆ 12:7-12.

“ನಾನು ನಿನಗೆ ತೋರಿಸುವದನ್ನೆಲ್ಲಾ ಮನಸ್ಸಿಟ್ಟು ತಿಳಿದುಕೋ”

(ಯೆಹೆಜ್ಕೇಲ 40:1-48:35)

ಯೆರೂಸಲೇಮ್‌ ಪಟ್ಟಣವು ಕೆಡವಲ್ಪಟ್ಟ ಹದಿನಾಲ್ಕನೆಯ ವರ್ಷ ಅದಾಗಿದೆ. (ಯೆಹೆಜ್ಕೇಲ 40:1) ಇಸ್ರಾಯೇಲ್ಯರು ಸೆರೆಯಲ್ಲಿ ಇನ್ನೂ ಐವತ್ತಾರು ವರ್ಷಗಳನ್ನು ಕಳೆಯಬೇಕು. (ಯೆರೆಮೀಯ 29:10) ಯೆಹೆಜ್ಕೇಲನಿಗೆ ಈಗ ಸುಮಾರು 50 ವರ್ಷ. ಒಂದು ದರ್ಶನದಲ್ಲಿ ಅವನನ್ನು ಇಸ್ರಾಯೇಲ್‌ ದೇಶಕ್ಕೆ ಕೊಂಡೊಯ್ಯಲಾಗುತ್ತದೆ. ಅವನಿಗೆ ಹೀಗೆ ಹೇಳಲಾಯಿತು: “ನರಪುತ್ರನೇ, ನೀನು ಕಣ್ಣಿಟ್ಟು ನೋಡು, ಕಿವಿಗೊಟ್ಟು ಕೇಳು; ನಾನು ನಿನಗೆ ತೋರಿಸುವದನ್ನೆಲ್ಲಾ ಮನಸ್ಸಿಟ್ಟು ತಿಳಿದುಕೋ.” (ಯೆಹೆಜ್ಕೇಲ 40:2-4) ಒಂದು ನೂತನ ದೇವಾಲಯದ ದರ್ಶನವನ್ನು ಪಡೆದಾಗ ಯೆಹೆಜ್ಕೇಲನು ಎಷ್ಟು ಪುಳಕಿತನಾಗಿರಬೇಕು!

ಯೆಹೆಜ್ಕೇಲನು ನೋಡುವ ಮಹಿಮಾನ್ವಿತ ದೇವಾಲಯದಲ್ಲಿ 6 ಹೆಬ್ಬಾಗಿಲುಗಳು, 30 ಪಾಕಶಾಲೆಗಳು, ಪವಿತ್ರಸ್ಥಾನ, ಅತಿ ಪವಿತ್ರಸ್ಥಾನ, ಒಂದು ಮರದವೇದಿ ಮತ್ತು ಸರ್ವಾಂಗಹೋಮಗಳ ಅರ್ಪಣೆಗಾಗಿ ಒಂದು ಯಜ್ಞವೇದಿ ಇತ್ತು. ದೇವಾಲಯದಿಂದ ‘ಹೊರಟ’ ನೀರಿನ ಪ್ರವಾಹವು ಮುಂದೆ ಸಾಗುತ್ತಾ ಒಂದು ತೊರೆಯಾಗುತ್ತದೆ. (ಯೆಹೆಜ್ಕೇಲ 47:1) ಆಯಾ ಕುಲಗಳಿಗೆ ದೇಶವನ್ನು ಪಾಲುಮಾಡುವುದರ ಕುರಿತ ದರ್ಶನವನ್ನು ಸಹ ಯೆಹೆಜ್ಕೇಲನು ಕಾಣುತ್ತಾನೆ. ಪ್ರತಿ ಭಾಗವು ಪೂರ್ವದಿಂದ ಪಶ್ಚಿಮದ ವರೆಗೆ ಅಡ್ಡವಾಗಿ ವ್ಯಾಪಿಸಿತ್ತು. ಯೆಹೂದ ಹಾಗೂ ಬೆನ್ಯಾಮೀನ್ಯರಿಗೆ ಸೇರಿದ ಭಾಗಗಳ ಮಧ್ಯದಲ್ಲಿ ಆಡಳಿತಕ್ಕೆ ಮೀಸಲಾದ ಒಂದು ತುಕಡಿ ಪ್ರದೇಶವಿತ್ತು. ಈ ಪ್ರದೇಶದಲ್ಲಿ “ಯೆಹೋವನ ಪವಿತ್ರಾಲಯ” ಮತ್ತು ಯೆಹೋವಶಾಮ್ಮಾ ಎಂಬ ಹೆಸರಿನ “ಕ್ಷೇತ್ರ” ನೆಲೆಸಿತ್ತು.—ಯೆಹೆಜ್ಕೇಲ 48:9, 10, 15, 35, BSI ರೆಫರನ್ಸ್‌ ಎಡಿಷನ್‌ ಪಾದಟಿಪ್ಪಣಿ.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

40:3–47:12—ಯೆಹೆಜ್ಕೇಲನ ದರ್ಶನದ ದೇವಾಲಯವು ಯಾವುದನ್ನು ಸೂಚಿಸುತ್ತದೆ? ಯೆಹೆಜ್ಕೇಲನು ಕಂಡ ಬೃಹದಾಕಾರದ ದೇವಾಲಯವನ್ನು ವಾಸ್ತವದಲ್ಲಿ ಎಂದೂ ಕಟ್ಟಲಾಗಲಿಲ್ಲ. ಅದು ದೇವರ ಆಧ್ಯಾತ್ಮಿಕ ಆಲಯವನ್ನು ಅಂದರೆ, ನಮ್ಮ ದಿನದಲ್ಲಿ ಶುದ್ಧಾರಾಧನೆಗಾಗಿರುವ ಆಲಯದಂಥ ಏರ್ಪಾಡನ್ನು ಚಿತ್ರಿಸಿತು. (ಯೆಹೆಜ್ಕೇಲ 40:2; ಮೀಕ 4:1; ಇಬ್ರಿಯ 8:2; 9:23, 24) ಆಲಯ ದರ್ಶನವು, ಯಾಜಕವರ್ಗ ಪರಿಷ್ಕರಿಸಲ್ಪಡುವಾಗ ಅಂದರೆ “ಕಡೇ ದಿವಸಗಳಲ್ಲಿ” ನೆರವೇರುತ್ತದೆ. (2 ತಿಮೊಥೆಯ 3:1; ಯೆಹೆಜ್ಕೇಲ 44:10-16; ಮಲಾಕಿಯ 3:1-3) ಹಾಗಿದ್ದರೂ ಅದರ ಅಂತಿಮ ನೆರವೇರಿಕೆಯು ಪರದೈಸಿನಲ್ಲಾಗುವುದು. ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆಯ ಸಮಯದಲ್ಲಾಗುವುದು. ಆಗ ನೀತಿವಂತ ಮಾನವರಿಗೆ ಆ ಆಲಯದ ಏರ್ಪಾಡಿನ ಪೂರ್ಣ ಪ್ರಯೋಜನಗಳು ಲಭಿಸುವವು. ಹಾಗಿದ್ದರೂ ದೇವಾಲಯದ ದರ್ಶನವು ಸೆರೆಯಲ್ಲಿದ್ದ ಯೆಹೂದ್ಯರಿಗೆ ಈ ಆಶ್ವಾಸನೆ ಕೊಟ್ಟಿತು: ಸತ್ಯಾರಾಧನೆ ಪುನಃಸ್ಥಾಪಿಸಲ್ಪಡುವುದು ಮತ್ತು ಪ್ರತಿಯೊಂದು ಯೆಹೂದಿ ಕುಟುಂಬಕ್ಕೆ ದೇಶದ ಒಂದು ಪಾಲು ಸಿಗುವುದು.

40:3–43:17—ದೇವಾಲಯದ ಅಳೆಯುವಿಕೆ ಏನನ್ನು ಸೂಚಿಸುತ್ತದೆ? ದೇವಾಲಯದ ಅಳೆಯುವಿಕೆಯು ಸತ್ಯಾರಾಧನೆಯ ಕುರಿತ ಯೆಹೋವನ ವಾಗ್ದಾನವು ಖಂಡಿತವಾಗಿ ನೆರವೇರುವುದು ಎಂಬುದಕ್ಕೆ ಒಂದು ಸೂಚನೆಯಾಗಿದೆ.

43:2-4, 7, 9—ಆಲಯದಿಂದ ತೆಗೆಯಲ್ಪಡಬೇಕಾದ ‘ಅರಸರ ಶವಗಳು’ ಏನಾಗಿದ್ದವು? ಆ ಶವಗಳು ಪ್ರಾಯಶಃ ವಿಗ್ರಹಗಳನ್ನು ಸೂಚಿಸಿದವು. ಯೆರೂಸಲೇಮಿನ ರಾಜರು ಮತ್ತು ಅವರ ಪ್ರಜೆಗಳು ದೇವಾಲಯದಲ್ಲಿ ವಿಗ್ರಹಗಳನ್ನಿಡುವ ಮೂಲಕ ಅದನ್ನು ಹೊಲೆಮಾಡಿದರು. ಹೀಗೆ, ಅವರು ಆ ವಿಗ್ರಹಗಳನ್ನು ತಮ್ಮ ಅರಸರನ್ನಾಗಿ ಮಾಡಿಕೊಂಡರು.

43:13-20—ಯೆಹೆಜ್ಕೇಲನು ದರ್ಶನದಲ್ಲಿ ಕಂಡ ಯಜ್ಞವೇದಿಯು ಯಾವುದರ ಸಂಕೇತವಾಗಿದೆ? ಸಾಂಕೇತಿಕ ಯಜ್ಞವೇದಿಯು ಯೇಸುವಿನ ವಿಮೋಚನಾ ಯಜ್ಞದ ಸಂಬಂಧವಾದ ದೇವರ ಚಿತ್ತವನ್ನು ಪ್ರತಿನಿಧಿಸುತ್ತದೆ. ವಿಮೋಚನಾ ಮೌಲ್ಯದ ಈ ಏರ್ಪಾಡಿನಿಂದಾಗಿ ದೇವರು ಅಭಿಷಿಕ್ತರನ್ನು ನೀತಿವಂತರೆಂದು ಎಣಿಸುತ್ತಾನೆ ಮತ್ತು “ಮಹಾ ಸಮೂಹ”ದವರನ್ನು ಶುದ್ಧರೂ ನಿರ್ಮಲರೂ ಆಗಿ ನೋಡುತ್ತಾನೆ. (ಪ್ರಕಟನೆ 7:9-14; ರೋಮಾಪುರ 5:1, 2) ಪ್ರಾಯಶಃ ಈ ಕಾರಣದಿಂದಲೇ ಸೊಲೊಮೋನನ ದೇವಾಲಯದಲ್ಲಿ ಯಾಜಕರು ತೊಳೆದುಕೊಳ್ಳಲು ಬಳಸುತ್ತಿದ್ದ “ಸಮುದ್ರವೆನಿಸಿಕೊಳ್ಳುವ ಒಂದು ಎರಕದ ಪಾತ್ರೆ,” ಯೆಹೆಜ್ಕೇಲನ ದಾರ್ಶನಿಕ ಆಲಯದಲ್ಲಿ ಇಲ್ಲ.—1 ಅರಸುಗಳು 7:23-26.

44:10-16—ಯಾಜಕ ವರ್ಗವು ಯಾರನ್ನು ಪ್ರತಿನಿಧಿಸುತ್ತದೆ? ಯಾಜಕ ವರ್ಗವು ನಮ್ಮ ದಿನದ ಅಭಿಷಿಕ್ತ ಕ್ರೈಸ್ತರ ಗುಂಪನ್ನು ಮುಂಚಿತ್ರಿಸುತ್ತದೆ. 1918ರಲ್ಲಿ ಯೆಹೋವನು ತನ್ನ ಆಧ್ಯಾತ್ಮಿಕ ಆಲಯದಲ್ಲಿ “ಶೋಧಿಸುವ ಅಕ್ಕಸಾಲಿಗನಂತೆ” ಕುಳಿತುಕೊಂಡಾಗ ಅಭಿಷಿಕ್ತರ ಶುದ್ಧೀಕರಣವು ನಡೆಯಿತು. (ಮಲಾಕಿಯ 3:1-5) ಶುದ್ಧರಾಗಿದ್ದವರು ಅಥವಾ ಪಶ್ಚಾತ್ತಾಪಪಟ್ಟವರು ತಮಗಿದ್ದ ಅದ್ವಿತೀಯ ಸೇವೆಯಲ್ಲಿ ಮುಂದುವರಿಯಬಹುದಾಗಿತ್ತು. ‘ಪ್ರಪಂಚದ ದೋಷವು ಹತ್ತದಂತೆ’ ಅವರು ತದನಂತರವೂ ಶ್ರಮಪಡಬೇಕಾಗಿತ್ತು ಮತ್ತು ಹೀಗೆ ಯಾಜಕರಲ್ಲದ ಕುಲಗಳಿಂದ ಪ್ರತಿನಿಧಿಸಲ್ಪಟ್ಟ “ಮಹಾ ಸಮೂಹ”ದವರಿಗೆ ಅವರು ಮಾದರಿಗಳಾಗುತ್ತಾರೆ.—ಯಾಕೋಬ 1:27; ಪ್ರಕಟನೆ 7:9, 10.

45:1; 47:13–48:29—“ದೇಶ” ಮತ್ತು ಅದರ ಪಾಲು ಮಾಡುವಿಕೆ ಏನನ್ನು ಪ್ರತಿನಿಧಿಸುತ್ತದೆ? ದೇಶವು ದೇವಜನರ ಚಟುವಟಿಕೆಯ ಕ್ಷೇತ್ರವನ್ನು ಪ್ರತಿನಿಧಿಸುತ್ತದೆ. ಯೆಹೋವನ ಆರಾಧಕನೊಬ್ಬನು ಎಲ್ಲಿಯೇ ಇರಲಿ, ಅವನು ಎಷ್ಟರ ವರೆಗೆ ಸತ್ಯಾರಾಧನೆಯಲ್ಲಿ ಮುಂದುವರಿಯುತ್ತಾನೊ ಆ ವರೆಗೆ ಅವನು ಪುನಃಸ್ಥಾಪಿತ ದೇಶದಲ್ಲಿರುತ್ತಾನೆ. ನೂತನ ಲೋಕದಲ್ಲಿ, ಪ್ರತಿಯೊಬ್ಬ ನಂಬಿಗಸ್ತ ವ್ಯಕ್ತಿಯು ಭೂಮಿಯನ್ನು ಬಾಧ್ಯತೆಯಾಗಿ ಪಡೆದುಕೊಳ್ಳುವಾಗ ದೇಶದ ಪಾಲು ಮಾಡುವಿಕೆಯ ಅಂತಿಮ ನೆರವೇರಿಕೆ ಆಗುವುದು.—ಯೆಶಾಯ 65:17, 21.

45:7, 16—ಜನರು ಯಾಜಕವರ್ಗಕ್ಕೆ ಹಾಗೂ ಪ್ರಭುವಿಗೆ ಸಮರ್ಪಿಸತಕ್ಕ ಕಾಣಿಕೆ ಏನನ್ನು ಚಿತ್ರಿಸುತ್ತದೆ? ಆಧ್ಯಾತ್ಮಿಕ ಆಲಯದಲ್ಲಿ ಇದು, ಮುಖ್ಯವಾಗಿ ಆಧ್ಯಾತ್ಮಿಕ ಬೆಂಬಲಕ್ಕೆ, ಅಂದರೆ ನೆರವು ನೀಡುವುದನ್ನು ಮತ್ತು ಸಹಕರಿಸುವ ಮನೋಭಾವವನ್ನು ಸೂಚಿಸುತ್ತದೆ.

47:1-5—ಯೆಹೆಜ್ಕೇಲನು ದರ್ಶನದಲ್ಲಿ ಕಂಡ ನದಿಯ ನೀರು ಯಾವುದನ್ನು ಚಿತ್ರಿಸುತ್ತದೆ? ಜೀವಕ್ಕಾಗಿ ಯೆಹೋವನು ಮಾಡಿರುವ ಆಧ್ಯಾತ್ಮಿಕ ಒದಗಿಸುವಿಕೆಗಳನ್ನು ಆ ನೀರು ಚಿತ್ರಿಸುತ್ತದೆ. ಇದರಲ್ಲಿ ಯೇಸು ಕ್ರಿಸ್ತನ ವಿಮೋಚನಾ ಯಜ್ಞ ಮತ್ತು ಬೈಬಲಿನಲ್ಲಿರುವ ದೇವಜ್ಞಾನವು ಸೇರಿದೆ. (ಯೆರೆಮೀಯ 2:13; ಯೋಹಾನ 4:7-26; ಎಫೆಸ 5:25-27) ಸತ್ಯಾರಾಧನೆಯನ್ನು ಸ್ವೀಕರಿಸುವ ಹೊಸಬರು ಒಳ ಸೇರುವಾಗ ಅವರಿಗೆ ಸಾಕಾಗುವಷ್ಟು ನೀರನ್ನು ಹೊಂದುತ್ತಾ ಈ ನದಿಯು ಹೆಚ್ಚೆಚ್ಚು ಆಳವಾಗುತ್ತಾ ಹೋಗುತ್ತದೆ. (ಯೆಶಾಯ 60:22) ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ಆ ನದಿಯು ಶಕ್ತಿಯುತ ಜೀವಜಲದಿಂದ ತುಂಬಿ ಹರಿಯುವುದು. ಆಗ ತೆರೆಯಲಾಗುವ ‘ಪುಸ್ತಕಗಳಿಂದ’ ದೊರಕುವ ಹೆಚ್ಚಿನ ತಿಳಿವಳಿಕೆ ಸಹ ಆ ನೀರಿನ ಭಾಗವಾಗಲಿದೆ.—ಪ್ರಕಟನೆ 20:12; 22:1, 2.

47:12—ಫಲವೃಕ್ಷಗಳು ಏನನ್ನು ಸೂಚಿಸುತ್ತವೆ? ಸಾಂಕೇತಿಕ ಮರಗಳು, ಮಾನವಕುಲವನ್ನು ಪರಿಪೂರ್ಣತೆಗೆ ಪುನಃಸ್ಥಾಪಿಸಲು ಸಾಧ್ಯಗೊಳಿಸುವ ದೇವರ ಆಧ್ಯಾತ್ಮಿಕ ಏರ್ಪಾಡುಗಳನ್ನು ಚಿತ್ರಿಸುತ್ತವೆ.

48:15-19, 30-35, (BSI ರೆಫರೆನ್ಸ್‌ ಎಡಿಷನ್‌ ಪಾದಟಿಪ್ಪಣಿ)—ಯೆಹೆಜ್ಕೇಲನು ದರ್ಶನದಲ್ಲಿ ಕಂಡ ರಾಜಧಾನಿ ಅಥವಾ ಪಟ್ಟಣ ಏನನ್ನು ಪ್ರತಿನಿಧಿಸುತ್ತದೆ? ‘ಪ್ರತ್ಯೇಕಿಸಲ್ಪಟ್ಟ’ ದೇಶದಲ್ಲಿ “ಯೆಹೋವಶಾಮ್ಮಾ” ನೆಲೆಸಿರುವುದು ತಾನೇ, ಅದು ಭೂಮಿಗೆ ಸಂಬಂಧಪಟ್ಟ ಯಾವುದನ್ನೊ ಪ್ರತಿನಿಧಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ರಾಜಧಾನಿ ಅಥವಾ ಪಟ್ಟಣವು ನೀತಿಭರಿತ ‘ನೂತನಭೂಮಂಡಲದ’ ಭಾಗವಾಗಲಿರುವ ಜನರಿಗೆ ಪ್ರಯೋಜನ ತರುವ ಭೂಸಂಬಂಧಿತ ಆಡಳಿತವನ್ನು ಸೂಚಿಸುವಂತೆ ತೋರುತ್ತದೆ. (2 ಪೇತ್ರ 3:13) ಪ್ರತಿ ದಿಕ್ಕಿನಲ್ಲಿರುವ ಬಾಗಿಲುಗಳು ರಾಜಧಾನಿ ಅಥವಾ ಪಟ್ಟಣವನ್ನು ಯಾವುದೇ ಸಮಯದಲ್ಲಿ ಪ್ರವೇಶಿಸಸಾಧ್ಯವಿದೆ ಎಂಬುದನ್ನು ತೋರಿಸುತ್ತದೆ. ದೇವಜನರಲ್ಲಿರುವ ಮೇಲ್ವಿಚಾರಕರು ಸಹ ಯಾವುದೇ ಸಮಯದಲ್ಲಿ ಸುಲಭವಾಗಿ ಸಮೀಪಿಸುವಷ್ಟು ಸ್ನೇಹಶೀಲರಾಗಿರಬೇಕು.

ನಮಗಾಗಿರುವ ಪಾಠಗಳು:

40:14, 16, 22, 26. ದೇವಾಲಯದ ಪ್ರವೇಶದ್ವಾರಗಳ ಗೋಡೆಗಳ ಮೇಲೆ ಕೆತ್ತಲ್ಪಟ್ಟಿರುವ ಖರ್ಜೂರ ವೃಕ್ಷಗಳು, ನೈತಿಕವಾಗಿ ನೆಟ್ಟನೆಯ ನಿಲುವುಳ್ಳವರಿಗೆ ಮಾತ್ರ ಆ ಆಲಯಕ್ಕೆ ಪ್ರವೇಶ ದೊರಕುವುದೆಂಬುದನ್ನು ತೋರಿಸುತ್ತವೆ. (ಕೀರ್ತನೆ 92:12) ನಾವು ನೀತಿವಂತರು ಅಂದರೆ ನೆಟ್ಟನೆಯ ನಿಲುವುಳ್ಳವರಾಗಿರುವುದಾದರೆ ಮಾತ್ರ ಯೆಹೋವನು ನಮ್ಮ ಆರಾಧನೆಯನ್ನು ಅಂಗೀಕರಿಸುತ್ತಾನೆಂಬುದನ್ನು ಇದು ನಮಗೆ ಕಲಿಸುತ್ತದೆ.

44:23. ಆಧುನಿಕ ದಿನದ ಯಾಜಕವರ್ಗವು ಒದಗಿಸುವ ಸೇವೆಗಳಿಗೆ ನಾವೆಷ್ಟು ಕೃತಜ್ಞರಾಗಿದ್ದೇವೆ! “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಸಮಯಕ್ಕೆ ಸರಿಯಾಗಿ ಆಧ್ಯಾತ್ಮಿಕ ಆಹಾರವನ್ನು ಒದಗಿಸುವುದರಲ್ಲಿ ಮುಂದಾಳತ್ವ ವಹಿಸುತ್ತದೆ. ಇದರಿಂದಾಗಿ ಯೆಹೋವನ ದೃಷ್ಟಿಯಲ್ಲಿ ಶುದ್ಧಾಶುದ್ಧದ ನಡುವಿನ ವ್ಯತ್ಯಾಸವನ್ನು ನಾವು ಗ್ರಹಿಸಲು ಸಹಾಯವಾಗುತ್ತದೆ.—ಮತ್ತಾಯ 24:45.

47:9, 11. ಸಾಂಕೇತಿಕ ನೀರಿನ ಮುಖ್ಯ ಭಾಗವಾಗಿರುವ ಜ್ಞಾನವು, ನಮ್ಮ ಸಮಯದಲ್ಲಿ ವಿಸ್ಮಯಕಾರಿ ವಾಸಿಮಾಡುವಿಕೆಯನ್ನು ಸಾಧಿಸಿದೆ. ಎಲ್ಲೆಲ್ಲಿ ಜನರು ಅದನ್ನು ಸೇವಿಸುತ್ತಾರೊ ಅಲ್ಲೆಲ್ಲ ಅವರು ಆಧ್ಯಾತ್ಮಿಕವಾಗಿ ಜೀವಂತರಾಗುತ್ತಾರೆ. (ಯೋಹಾನ 17:3) ಇನ್ನೊಂದೆಡೆ ಜೀವದಾಯಕ ನೀರನ್ನು ನಿರಾಕರಿಸುವವರು ‘ಉಪ್ಪಿನ ಗಣಿಯಾಗುವರು’ ಅಂದರೆ ಶಾಶ್ವತ ನಾಶನ ಹೊಂದುವರು. ಹಾಗಾಗಿ, ನಾವು ‘ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವರಾಗಿರುವುದು’ ಎಷ್ಟು ಅತ್ಯಗತ್ಯ!—2 ತಿಮೊಥೆಯ 2:15.

“ನನ್ನ ಮಹಾನ್‌ ನಾಮವನ್ನು ಪವಿತ್ರೀಕರಿಸುವೆನು”

ದಾವೀದನ ವಂಶದ ಕೊನೆಯ ರಾಜನನ್ನು ಉಚ್ಚಾಟಿಸಿದ ನಂತರ, ರಾಜತ್ವಕ್ಕೆ ‘ಬಾಧ್ಯನಾದವನು ಬರುವದರೊಳಗೆ’ ಸತ್ಯದೇವರು ದೀರ್ಘಸಮಯ ದಾಟುವಂತೆ ಬಿಟ್ಟನು. ಹಾಗಿದ್ದರೂ ದಾವೀದನೊಂದಿಗೆ ಮಾಡಿದ ಒಡಂಬಡಿಕೆಯನ್ನು ದೇವರು ತೊರೆದುಬಿಡಲಿಲ್ಲ. (ಯೆಹೆಜ್ಕೇಲ 21:27; 2 ಸಮುವೇಲ 7:11-16) ಯೆಹೆಜ್ಕೇಲನ ಪ್ರವಾದನೆಯು, ‘ಕುರುಬನೂ ರಾಜನೂ’ ಆಗಲಿರುವ ‘ನನ್ನ ಸೇವಕನಾದ ದಾವೀದನ’ ಕುರಿತು ಮಾತಾಡುತ್ತದೆ. (ಯೆಹೆಜ್ಕೇಲ 34:23, 24; 37:22, 24, 25) ರಾಜ್ಯಾಧಿಕಾರದಲ್ಲಿರುವ ಯೇಸು ಕ್ರಿಸ್ತನೇ ಈತನು. (ಪ್ರಕಟನೆ 11:15) ಮೆಸ್ಸೀಯ ರಾಜ್ಯದ ಮೂಲಕ ಯೆಹೋವನು ತನ್ನ ‘ಮಹಾನ್‌ ನಾಮವನ್ನು ಪವಿತ್ರೀಕರಿಸುವನು.’—ಯೆಹೆಜ್ಕೇಲ 36:23, NW.

ಯೆಹೋವನ ನಾಮವನ್ನು ಹೊಲೆಮಾಡುವವರು ಶೀಘ್ರದಲ್ಲೇ ನಾಶವಾಗಲಿರುವರು. ಆದರೆ ಯೆಹೋವನನ್ನು ಅಂಗೀಕಾರಾರ್ಹ ರೀತಿಯಲ್ಲಿ ಆರಾಧಿಸುವ ಮೂಲಕ ಆತನ ನಾಮವನ್ನು ಪವಿತ್ರೀಕರಿಸುವ ಜನರು ನಿತ್ಯಜೀವ ಪಡೆಯುವರು. ನಮ್ಮ ದಿನಗಳಲ್ಲಿ ಸಮೃದ್ಧವಾಗಿ ಹರಿಯುತ್ತಿರುವ ಜೀವಜಲದ ಪೂರ್ಣ ಪ್ರಯೋಜನವನ್ನು ತೆಗೆದುಕೊಳ್ಳೋಣ ಮತ್ತು ಸತ್ಯಾರಾಧನೆಯನ್ನು ನಮ್ಮ ಜೀವನದ ಕೇಂದ್ರಬಿಂದುವಾಗಿ ಮಾಡೋಣ. (w07 8/1)

[ಪಾದಟಿಪ್ಪಣಿ]

^ ಪ್ಯಾರ. 4 ಯೆಹೆಜ್ಕೇಲ 1:1–24:27ರ ವಿವರಣೆಗಾಗಿ, 2007 ಜುಲೈ 1ರ ಕಾವಲಿನಬುರುಜುವಿನಲ್ಲಿ “ಯೆಹೆಜ್ಕೇಲ ಪುಸ್ತಕದ ಮುಖ್ಯಾಂಶಗಳು—I” ಲೇಖನ ನೋಡಿರಿ.

[ಪುಟ 9ರಲ್ಲಿರುವ ಚಿತ್ರ]

ಯೆಹೆಜ್ಕೇಲನ ದರ್ಶನದ ಮಹಿಮಾನ್ವಿತ ದೇವಾಲಯ

[ಪುಟ 10ರಲ್ಲಿರುವ ಚಿತ್ರ]

ಯೆಹೆಜ್ಕೇಲನ ದರ್ಶನದ ಜೀವಜಲದ ನದಿಯು ಏನನ್ನು ಸೂಚಿಸುತ್ತದೆ?

[ಕೃಪೆ]

Pictorial Archive (Near Eastern History) Est.