ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾನಿಯೇಲ ಪುಸ್ತಕದ ಮುಖ್ಯಾಂಶಗಳು

ದಾನಿಯೇಲ ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ದಾನಿಯೇಲ ಪುಸ್ತಕದ ಮುಖ್ಯಾಂಶಗಳು

“ದಾನಿಯೇಲ ಪುಸ್ತಕವು ಬೈಬಲಿನ ಅತ್ಯಂತ ಕೌತುಕಭರಿತ ಪುಸ್ತಕಗಳಲ್ಲಿ ಒಂದು. ಅದರ ಪುಟಗಳಲ್ಲಿ ಶಾಶ್ವತ ಸತ್ಯಗಳು ತುಂಬಿವೆ” ಎಂದು ಹೋಲ್ಮನ್‌ ಇಲಸ್ಟ್ರೇಟೆಡ್‌ ಬೈಬಲ್‌ ಡಿಕ್ಷನೆರಿ ತಿಳಿಸುತ್ತದೆ. ದಾನಿಯೇಲನ ವೃತ್ತಾಂತವು ಸಾ.ಶ.ಪೂ. 618ರಲ್ಲಿ ಆರಂಭಗೊಳ್ಳುತ್ತದೆ. ಆ ವರ್ಷದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಮುತ್ತಿಗೆ ಹಾಕಿ ‘ಇಸ್ರಾಯೇಲ್ಯರ ಕೆಲವು ಯುವಕರನ್ನು’ ಸೆರೆಯಾಳುಗಳಾಗಿ ಬಾಬೆಲಿಗೆ ಒಯ್ಯುತ್ತಾನೆ. (ದಾನಿಯೇಲ 1:1-4) ಅವರಲ್ಲಿ ಯುವ ದಾನಿಯೇಲನೂ ಒಬ್ಬನು. ಪ್ರಾಯಶಃ ಅವನು ಇನ್ನೂ ತನ್ನ ಹರೆಯದಲ್ಲೇ ಇದ್ದಾನೆ. ದಾನಿಯೇಲ ಪುಸ್ತಕವು ಸಮಾಪ್ತಿಗೊಳ್ಳುವಾಗ ದಾನಿಯೇಲನು ಇನ್ನೂ ಬಾಬೆಲಿನಲ್ಲೇ ಇದ್ದಾನೆ. ಈಗ ಸುಮಾರು 100 ವರ್ಷದವನಾದ ದಾನಿಯೇಲನು ದೇವರ ವಾಗ್ದಾನವನ್ನು ಪಡೆಯುತ್ತಾನೆ: “ನೀನು ದೀರ್ಘನಿದ್ರೆಯನ್ನು ಹೊಂದಿ ಯುಗದಸಮಾಪ್ತಿಯಲ್ಲಿ ಎದ್ದು ನಿನಗಾಗುವ ಸ್ವಾಸ್ತ್ಯದೊಳಗೆ ನಿಲ್ಲುವಿ.”—ದಾನಿಯೇಲ 12:13.

ದಾನಿಯೇಲ ಪುಸ್ತಕದ ಮೊದಲ ಭಾಗವನ್ನು ಬೇರೊಬ್ಬನು ಬರೆದಿದ್ದಾನೊ ಎಂಬ ಶೈಲಿಯಲ್ಲಿ ಅಂದರೆ ಪ್ರಥಮ ಪುರುಷ ಕಾಲಾನುಕ್ರಮದಲ್ಲಿ ಸಾದರಪಡಿಸಲಾಗಿದೆ. ಕೊನೆಯ ಭಾಗವನ್ನು ‘ನನಗೆ,’ ‘ನಾನು’ ಎಂಬ ಉತ್ತಮ ಪುರುಷ ಶೈಲಿಯಲ್ಲಿ ಪ್ರಸ್ತುತಪಡಿಸಲಾಗಿದೆ. ದಾನಿಯೇಲನು ಬರೆದ ಈ ಪುಸ್ತಕದಲ್ಲಿ ಲೋಕಶಕ್ತಿಗಳ ಏಳುಬೀಳುಗಳು, ಮೆಸ್ಸೀಯನ ಬರುವಿಕೆಯ ಸಮಯ ಮತ್ತು ನಮ್ಮ ದಿನಗಳಲ್ಲಾಗುವ ಘಟನೆಗಳ ಪ್ರವಾದನೆಗಳು ಅಡಕವಾಗಿವೆ. * ವೃದ್ಧನಾದ ಈ ಪ್ರವಾದಿಯು ತನ್ನ ದೀರ್ಘಕಾಲದ ಬದುಕಿಗೆ ಹಿನ್ನೋಟಬೀರಿ ಕೆಲವೊಂದು ಘಟನೆಗಳನ್ನು ಕಥನಾ ರೂಪದಲ್ಲಿ ಹೇಳುತ್ತಾನೆ. ಇದು, ಸಮಗ್ರತೆಯುಳ್ಳ ದೇವಭಕ್ತ ಸ್ತ್ರೀಪುರುಷರಾಗುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತದೆ. ದಾನಿಯೇಲನ ಸಂದೇಶವು ಸಜೀವವಾಗಿದ್ದು ಕಾರ್ಯಸಾಧಕವಾಗಿದೆ.—ಇಬ್ರಿಯ 4:12.

ಕಾಲಾನುಕ್ರಮದ ವೃತ್ತಾಂತವು ನಮಗೇನನ್ನು ಕಲಿಸುತ್ತದೆ?

(ದಾನಿಯೇಲ 1:1-6:28)

ಸಮಯವು ಸಾ.ಶ.ಪೂ. 617 ಆಗಿದೆ. ದಾನಿಯೇಲನೂ ಅವನ ಮೂವರು ಯುವ ಸ್ನೇಹಿತರಾದ ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ ಬಾಬೆಲಿನ ಆಸ್ಥಾನದಲ್ಲಿದ್ದಾರೆ. ಅಲ್ಲಿ ಮೂರು ವರ್ಷಗಳ ತರಬೇತಿನಾದ್ಯಂತ ಈ ಯುವಕರು ಯೆಹೋವನಿಗೆ ಸಮಗ್ರತೆಯುಳ್ಳವರಾಗಿ ಉಳಿಯುತ್ತಾರೆ. ಸುಮಾರು ಎಂಟು ವರ್ಷಗಳ ತರುವಾಯ ರಾಜ ನೆಬೂಕದ್ನೆಚ್ಚರನು ತಬ್ಬಿಬ್ಬುಗೊಳಿಸುವ ಒಂದು ಕನಸನ್ನು ಕಾಣುತ್ತಾನೆ. ದಾನಿಯೇಲನು ಆ ಕನಸನ್ನೂ ಅದರ ಅರ್ಥವನ್ನೂ ವಿವರಿಸಿ ಹೇಳುತ್ತಾನೆ. ಯೆಹೋವನೇ “ದೇವಾಧಿದೇವನೂ ರಾಜರ ಒಡೆಯನೂ ರಹಸ್ಯಗಳನ್ನು ವ್ಯಕ್ತಗೊಳಿಸುವವನೂ ಆಗಿದ್ದಾನೆ” ಎಂದು ರಾಜನು ಮಾನ್ಯಮಾಡುತ್ತಾನೆ. (ದಾನಿಯೇಲ 2:47) ಆದರೆ ಈ ಪಾಠವನ್ನು ಸ್ವಲ್ಪ ಸಮಯದೊಳಗೇ ನೆಬೂಕದ್ನೆಚ್ಚರನು ಮರೆತಂತೆ ಕಾಣುತ್ತದೆ. ದಾನಿಯೇಲನ ಮೂವರು ಸ್ನೇಹಿತರು ಒಂದು ಬೃಹದಾಕಾರದ ಬಂಗಾರದ ಪ್ರತಿಮೆಗೆ ಅಡ್ಡಬೀಳಲು ನಿರಾಕರಿಸುವಾಗ ರಾಜನ ಅಪ್ಪಣೆಯ ಮೇರೆಗೆ ಅವರನ್ನು ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲಾಗುತ್ತದೆ. ಆ ಮೂವರನ್ನು ಸತ್ಯ ದೇವರು ರಕ್ಷಿಸುತ್ತಾನೆ ಮತ್ತು “ಹೀಗೆ ಉದ್ಧರಿಸಲು ಸಮರ್ಥನಾದ ಇನ್ನಾವ ದೇವರೂ ಇಲ್ಲ” ಎಂದು ನೆಬೂಕದ್ನೆಚ್ಚರನು ಒಪ್ಪಿಕೊಳ್ಳಲೇಬೇಕಾಗುತ್ತದೆ.—ದಾನಿಯೇಲ 3:29.

ನೆಬೂಕದ್ನೆಚ್ಚರನಿಗೆ ಇನ್ನೊಂದು ಅರ್ಥಪೂರ್ಣ ಕನಸು ಬೀಳುತ್ತದೆ. ಅದರಲ್ಲಿ, ಹೆಮ್ಮರವೊಂದನ್ನು ಅವನು ನೋಡುತ್ತಾನೆ. ಅದನ್ನು ಕಡಿದುಹಾಕಿ ಮುಂದೆ ಚಿಗುರದಂತೆ ಬಿಡಲಾಗಿದೆ. ದಾನಿಯೇಲನು ಆ ಕನಸಿನ ಅರ್ಥವನ್ನು ಬಿಡಿಸಿ ಹೇಳುತ್ತಾನೆ. ಈ ಕನಸು ಭಾಗಶಃ ನೆರವೇರಿದ್ದು, ನೆಬೂಕದ್ನೆಚ್ಚರನು ಹುಚ್ಚನಾಗಿ ತದನಂತರ ಸ್ವಸ್ಥನಾದಾಗಲೇ. ಅನೇಕ ದಶಕಗಳ ನಂತರ ರಾಜ ಬೇಲ್ಶಚ್ಚರನು ತನ್ನ ರಾಜ್ಯದ ಮುಖಂಡರನ್ನು ಕರೆಸಿ ಔತಣಮಾಡಿ, ಯೆಹೋವನ ಆಲಯದಿಂದ ಸೂರೆಮಾಡಲಾಗಿದ್ದ ಪಾತ್ರೆಗಳನ್ನು ಹೀನಾಯಕರವಾಗಿ ಬಳಸುತ್ತಾನೆ. ಅದೇ ರಾತ್ರಿ ಬೇಲ್ಶಚ್ಚರನ ಕೊಲೆಯಾಗುತ್ತದೆ ಮತ್ತು ರಾಜ್ಯವು ಮೇದ್ಯನಾದ ದಾರ್ಯಾವೆಷನ ವಶವಾಗುತ್ತದೆ. (ದಾನಿಯೇಲ 5:30, 31) ದಾರ್ಯಾವೆಷನ ಆಳ್ವಿಕೆಯ ಸಮಯದಲ್ಲಿ ದಾನಿಯೇಲನ ಪ್ರಾಯ 90 ವರ್ಷಕ್ಕಿಂತಲೂ ಹೆಚ್ಚಾಗಿದೆ. ಈ ಸಮಯದಲ್ಲಿ ಅಸೂಯೆಪಡುತ್ತಿರುವ ಅಧಿಕಾರಿಗಳ ಕೊಲೆ ಸಂಚಿಗೆ ಅವನು ಗುರಿಯಾಗುತ್ತಾನೆ. ಆದರೆ ಯೆಹೋವನು ಅವನನ್ನು “ಸಿಂಹಗಳ” ಬಾಯಿಂದ ತಪ್ಪಿಸುತ್ತಾನೆ.—ದಾನಿಯೇಲ 6:27.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:11-15—ನಾಲ್ಕು ಯೆಹೂದಿ ಯುವಕರು ಪುಷ್ಟರಾಗಿ ಕಾಣಿಸಿಕೊಳ್ಳಲು ಕಾಯಿಪಲ್ಯಗಳ ಪಥ್ಯೆ ಕಾರಣವಾಗಿತ್ತೇ? ಅದು ಕಾರಣವಾಗಿರಲಿಲ್ಲ. ಯಾವುದೇ ಪಥ್ಯವು ಬರೀ ಹತ್ತು ದಿನಗಳಲ್ಲಿ ಅಂಥ ಎದ್ದುಕಾಣುವ ಬದಲಾವಣೆಗಳನ್ನು ತರಸಾಧ್ಯವಿಲ್ಲ. ಆ ಹೀಬ್ರು ಯುವಕರಲ್ಲಾದ ಬದಲಾವಣೆಯಿಂದಾಗಿ ಬಂದಂಥ ಕೀರ್ತಿಯು ಅವರನ್ನು ಆಶೀರ್ವದಿಸಿದ ಯೆಹೋವನಿಗೆ ಸಲ್ಲತಕ್ಕದ್ದು. ಆತನು ಅವರನ್ನು ಹೀಗೆ ಆಶೀರ್ವದಿಸಿದ್ದು ಅವರು ಆತನ ಮೇಲೆ ಭರವಸೆಯನ್ನಿಟ್ಟಿದ್ದ ಕಾರಣದಿಂದಲೇ.—ಜ್ಞಾನೋಕ್ತಿ 10:22.

2:1—ನೆಬೂಕದ್ನೆಚ್ಚರನು ಅದ್ಭುತ ಪ್ರತಿಮೆಯ ಕುರಿತ ಕನಸನ್ನು ಕಂಡದ್ದು ಯಾವಾಗ? ಅದು ‘ನೆಬೂಕದ್ನೆಚ್ಚರನ ಆಳಿಕೆಯ ಎರಡನೆಯ ವರುಷದಲ್ಲಿ’ ಸಂಭವಿಸಿತ್ತೆಂದು ವೃತ್ತಾಂತ ಸೂಚಿಸುತ್ತದೆ. ಅವನು ಸಾ.ಶ.ಪೂ. 624ರಲ್ಲಿ ಬಾಬೆಲಿನ ರಾಜನಾದನು. ಹೀಗೆ, ಅವನ ಆಳ್ವಿಕೆಯ ಎರಡನೆಯ ವರ್ಷವು ಸಾ.ಶ.ಪೂ. 623 ಆಗಿದ್ದು, ಇದು ಅವನು ಯೆಹೂದವನ್ನು ಆಕ್ರಮಣಮಾಡಿದ ಹಲವಾರು ವರ್ಷಗಳ ಮುಂಚೆಯೇ ಆಗಿತ್ತು. ಆ ಸಮಯದಲ್ಲಿ ದಾನಿಯೇಲನು ಕನಸಿನ ಅರ್ಥಹೇಳಲು ಬಾಬೆಲಿನಲ್ಲಿರಲಿಲ್ಲ. ಆದುದರಿಂದ ಸಮಂಜಸವಾಗಿಯೇ, ಬಾಬೆಲಿನ ಅರಸನು ಯೆರೂಸಲೇಮನ್ನು ನಾಶಮಾಡಿ ಹೀಗೆ ಲೋಕ-ಸಾಮ್ರಾಟನಾದ ವರ್ಷದಿಂದ ಅಂದರೆ ಸಾ.ಶ.ಪೂ. 607ರಿಂದ ಈ ‘ಎರಡನೆಯ ವರುಷವನ್ನು’ ಎಣಿಸಲಾಗುತ್ತದೆ.

2:32, 39—ಬೆಳ್ಳಿಯ ರಾಜ್ಯವು ಅಪರಂಜಿಯ ತಲೆಗಿಂತ ಮತ್ತು ತಾಮ್ರದ ರಾಜ್ಯವು ಬೆಳ್ಳಿಯ ರಾಜ್ಯಕ್ಕಿಂತ ಕನಿಷ್ಠ ಆಗಿದ್ದದ್ದು ಹೇಗೆ? ಪ್ರತಿಮೆಯ ತಾಮ್ರದ ಭಾಗದಿಂದ ಪ್ರತಿನಿಧಿಸಲಾದ ಮೇದ್ಯ-ಪಾರಸೀಯ ಸಾಮ್ರಾಜ್ಯವು ಅಪರಂಜಿಯ ತಲೆಯಾಗಿದ್ದ ಬಾಬೆಲ್‌ ಸಾಮ್ರಾಜ್ಯಕ್ಕಿಂತ ಕನಿಷ್ಠವಾಗಿತ್ತು ಹೇಗೆಂದರೆ, ಯೆಹೂದವನ್ನು ಕೆಳಗುರುಳಿಸುವ ವಿಶೇಷ ಹಿರಿಮೆ ಬಾಬೆಲಿಗೆ ಸಿಕ್ಕಿತ್ತೇ ಹೊರತು ಮೇದ್ಯ-ಪಾರಸೀಯ ಸಾಮ್ರಾಜ್ಯಕ್ಕಲ್ಲ. ಗ್ರೀಸ್‌ ತದನಂತರದ ಲೋಕ ಸಾಮ್ರಾಜ್ಯವಾಯಿತು. ಅದು ತಾಮ್ರದಿಂದ ಪ್ರತಿನಿಧಿಸಲಾಗಿತ್ತು. ತಾಮ್ರವು ಬೆಳ್ಳಿಗಿಂತ ಕನಿಷ್ಠವಾಗಿರುವಂತೆಯೇ ಗ್ರೀಸ್‌ ಲೋಕಶಕ್ತಿಯು ಮೇದ್ಯ-ಪಾರಸೀಯ ಲೋಕಶಕ್ತಿಗಿಂತ ಇನ್ನೂ ಕನಿಷ್ಠವಾಗಿತ್ತು. ಹೇಗೆಂದರೆ, ಗ್ರೀಸ್‌ ಸಾಮ್ರಾಜ್ಯದ ಪ್ರಭಾವವು ಹೆಚ್ಚು ವ್ಯಾಪಕವಾಗಿ ಹರಡಿತ್ತಾದರೂ ಮೇದ್ಯ-ಪಾರಸೀಯ ಸಾಮ್ರಾಜ್ಯದಂತೆ ಸೆರೆಯಲ್ಲಿದ್ದ ದೇವಜನರನ್ನು ಬಿಡಿಸಿತರುವ ವಿಶೇಷ ಗೌರವ ಅದಕ್ಕೆ ಸಿಗಲಿಲ್ಲ.

4:8, 9—ಸ್ವತಃ ದಾನಿಯೇಲನೇ ಒಬ್ಬ ಜೋಯಿಸನಾಗಿದ್ದನೋ? ಇಲ್ಲ. ‘ಜೋಯಿಸರಲ್ಲಿ ಪ್ರಧಾನನು’ ಎಂಬ ಅಭಿವ್ಯಕ್ತಿಯು ‘ಬಾಬೆಲಿನ ವಿದ್ವಾಂಸರ ಸಕಲ ಮುಖ್ಯಸ್ಥರ ಮುಖ್ಯಸ್ಥನಾಗಿದ್ದ’ ದಾನಿಯೇಲನ ಸ್ಥಾನವನ್ನು ಸೂಚಿಸುತ್ತದೆ ಅಷ್ಟೇ.—ದಾನಿಯೇಲ 2:48.

4:10, 11, 20-22—ನೆಬೂಕದ್ನೆಚ್ಚರನು ಕನಸಿನಲ್ಲಿ ಕಂಡ ಭಾರೀ ವೃಕ್ಷವು ಯಾವುದನ್ನು ಸಂಕೇತಿಸುತ್ತದೆ? ಮೂಲತಃ ಆ ವೃಕ್ಷವು ಒಂದು ಲೋಕಶಕ್ತಿಯ ದೊರೆಯಾಗಿದ್ದ ನೆಬೂಕದ್ನೆಚ್ಚರನನ್ನು ಸಂಕೇತಿಸಿತು. ಆದರೆ ಕನಸಿನಲ್ಲಿ ಸೂಚಿಸಲ್ಪಟ್ಟ ಆಳ್ವಿಕೆಯು ‘ಲೋಕದ ಕಟ್ಟಕಡೆಗೂ ವ್ಯಾಪಿಸಿರುವ’ ಕಾರಣ ಅದು ಹೆಚ್ಚಿನದ್ದೇನನ್ನೊ ಸೂಚಿಸುತ್ತದೆ. ದಾನಿಯೇಲ 4:17 ಈ ಕನಸನ್ನು ‘ಪರಾತ್ಪರನು’ ಮಾನವಕುಲದ ಮೇಲೆ ನಡೆಸುವ ರಾಜ್ಯಾಳಿಕೆಯೊಂದಿಗೆ ಜೋಡಿಸುತ್ತದೆ. ಹಾಗಾದರೆ ಆ ವೃಕ್ಷವು, ಯೆಹೋವನ ವಿಶ್ವ ಪರಮಾಧಿಕಾರವನ್ನು ಅದರಲ್ಲೂ ವಿಶೇಷವಾಗಿ, ಭೂಮಿಗೆ ಸಂಬಂಧಪಟ್ಟ ಅಧಿಕಾರವನ್ನು ಪ್ರತಿನಿಧಿಸಿತು. ಆದ್ದರಿಂದಲೇ ಈ ವೃಕ್ಷ-ಕನಸಿಗೆ ಎರಡು ನೆರವೇರಿಕೆಗಳಿವೆ—ನೆಬೂಕದ್ನೆಚ್ಚರನ ರಾಜ್ಯಾಳಿಕೆ ಮತ್ತು ಯೆಹೋವನ ಪರಮಾಧಿಕಾರ.

4:16, 23, 25, 32, 33—“ಏಳು ಕಾಲಗಳು” (BSI ಪಾದಟಿಪ್ಪಣಿ) ಎಷ್ಟು ಉದ್ದವಾಗಿದ್ದವು? ರಾಜ ನೆಬೂಕದ್ನೆಚ್ಚರನ ತೋರಿಕೆಯಲ್ಲಾದ ಎಲ್ಲ ಬದಲಾವಣೆಗಳಿಗೆ ತಗಲಿದ “ಏಳು ಕಾಲಗಳು” ಅಕ್ಷರಾರ್ಥ ಏಳು ದಿನಗಳಿಗಿಂತ ಹೆಚ್ಚು ಉದ್ದವಾಗಿರಬೇಕಿತ್ತು. ಅವನ ವಿಷಯದಲ್ಲಿ ಈ ಕಾಲಗಳು, ಪ್ರತಿ ವರ್ಷದಲ್ಲಿ 360 ದಿನಗಳಿರುವ ಇಲ್ಲವೆ ಒಟ್ಟು 2,520 ದಿನಗಳಿರುವ ಏಳು ವರ್ಷಗಳನ್ನು ಸೂಚಿಸಿತು. ಮಹಾ ನೆರವೇರಿಕೆಯಲ್ಲಿ “ಏಳು ಕಾಲಗಳು” 2,520 ವರ್ಷಗಳಾಗಿವೆ. (ಯೆಹೆಜ್ಕೇಲ 4:6, 7) ಅವು ಸಾ.ಶ.ಪೂ. 607ರಲ್ಲಾದ ಯೆರೂಸಲೇಮಿನ ನಾಶನದಿಂದ ಆರಂಭಿಸಿ ಯೇಸು ಸ್ವರ್ಗೀಯ ರಾಜನಾಗಿ ಸಾ.ಶ. 1914ರಲ್ಲಿ ಸಿಂಹಾಸನಾರೂಢನಾದಾಗ ಕೊನೆಗೊಂಡವು.—ಲೂಕ 21:24.

6:6-10—ಯೆಹೋವನಿಗೆ ಪ್ರಾರ್ಥಿಸುವಾಗ ಯಾವುದೇ ನಿರ್ದಿಷ್ಟ ಭಂಗಿಯ ಅಗತ್ಯವಿಲ್ಲದಿರುವ ಕಾರಣ, ದಾನಿಯೇಲನು 30 ದಿನಗಳ ವರೆಗೆ ಗುಪ್ತರೀತಿಯಲ್ಲಿ ಪ್ರಾರ್ಥನೆಮಾಡುವುದು ವಿವೇಕಯುತ ಆಗಿರುತ್ತಿತ್ತಲ್ಲವೇ? ದಾನಿಯೇಲನು ದಿನಕ್ಕೆ ಮೂರಾವರ್ತಿ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದನೆಂಬ ಸಂಗತಿ ಎಲ್ಲರಿಗೆ ತಿಳಿದಿತ್ತು. ಅದಕ್ಕಾಗಿಯೇ ಸಂಚುಗಾರರು, ಪ್ರಾರ್ಥನೆಯನ್ನು ನಿಷೇಧಿಸುವ ರಾಜಾಜ್ಞೆಯ ಉಪಾಯವನ್ನು ಹೂಡಿದರು. ಪ್ರಾರ್ಥನೆ ಮಾಡುವ ನಿಯತಕ್ರಮದಲ್ಲಿ ದಾನಿಯೇಲನು ಯಾವುದೇ ಬದಲಾವಣೆಗಳನ್ನು ಮಾಡುತ್ತಿದ್ದಲ್ಲಿ, ಅವನು ರಾಜಿಮಾಡಿಕೊಂಡಿದ್ದಾನೆಂದು ಇತರರು ನೆನಸುತ್ತಿದ್ದರು. ಅಲ್ಲದೆ, ಯೆಹೋವನಿಗೆ ತನ್ನ ಅನನ್ಯ ಭಕ್ತಿಯನ್ನು ಕೊಡಲು ಅವನು ತಪ್ಪಿಹೋದನೆಂಬುದನ್ನು ಇದು ಸೂಚಿಸಸಾಧ್ಯವಿತ್ತು.

ನಮಗಾಗಿರುವ ಪಾಠಗಳು:

1:3-8. ದಾನಿಯೇಲನು ಮತ್ತು ಅವನ ಸಂಗಡಿಗರು ಯೆಹೋವನಿಗೆ ನಿಷ್ಠರಾಗಿ ಉಳಿಯಲು ಮಾಡಿದ ದೃಢಸಂಕಲ್ಪವು, ಅವರು ತಮ್ಮ ಹೆತ್ತವರಿಂದ ಪಡೆದಿರಬಹುದಾದ ತರಬೇತಿಯ ಮಹತ್ವವನ್ನು ಒತ್ತಿಹೇಳುತ್ತದೆ. ದೇವಭಕ್ತ ಹೆತ್ತವರು ಆಧ್ಯಾತ್ಮಿಕ ಅಭಿರುಚಿಗಳಿಗೆ ತಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಟ್ಟು ಅವರ ಮಕ್ಕಳಿಗೆ ಅದನ್ನೇ ಕಲಿಸಿಕೊಡಬೇಕು. ಹೀಗೆ ಮಾಡಿದರೆ ಅವರ ಮಕ್ಕಳು ಶಾಲೆ ಅಥವಾ ಬೇರೆ ಕಡೆಗಳಿಂದ ಬರುವ ಯಾವುದೇ ಶೋಧನೆ ಮತ್ತು ಒತ್ತಡಗಳನ್ನು ಪ್ರತಿರೋಧಿಸುವುದು ಹೆಚ್ಚು ಸಂಭವನೀಯ.

1:10-12. “ಕಂಚುಕಿಯರ ಅಧ್ಯಕ್ಷನು” ರಾಜನಿಗೆ ಏಕೆ ಭಯಪಟ್ಟನು ಎಂದು ದಾನಿಯೇಲನಿಗೆ ಅರ್ಥವಾಯಿತು ಮತ್ತು ಅವನೊಂದಿಗೆ ಬಿನ್ನಹಿಸುವುದನ್ನು ಬಿಟ್ಟುಬಿಟ್ಟನು. ಆದರೂ ತದನಂತರ ದಾನಿಯೇಲನು ಪ್ರಾಯಶಃ ಹೆಚ್ಚು ಜವಾಬ್ದಾರಿಯುತ ಸ್ಥಾನದಲ್ಲಿದ್ದ ‘ವಿಚಾರಕನಲ್ಲಿಗೆ’ ಹೋದನು. ಕಷ್ಟಕರ ಸನ್ನಿವೇಶಗಳನ್ನು ನಿಭಾಯಿಸುವಾಗ ನಾವು ತದ್ರೀತಿಯ ಒಳನೋಟ, ತಿಳಿವಳಿಕೆ ಮತ್ತು ವಿವೇಕದಿಂದ ಕಾರ್ಯವೆಸಗಬೇಕು.

2:29, 30. ದಾನಿಯೇಲನಂತೆ, ಯೆಹೋವನ ಆಧ್ಯಾತ್ಮಿಕ ಒದಗಿಸುವಿಕೆಗಳಿಂದಾಗಿ ನಾವು ಗಳಿಸಿದ ಸಕಲ ಜ್ಞಾನ, ಗುಣಗಳು ಮತ್ತು ಸಾಮರ್ಥ್ಯಗಳಿಗೆ ಪೂರ್ಣ ಕೀರ್ತಿಯನ್ನು ನಾವು ಆತನಿಗೆ ಕೊಡಬೇಕು.

3:16-18. ಮೂವರು ಹೀಬ್ರು ಯುವಕರು ಹಿಂದಿನ ಬಾರಿ ತಮ್ಮ ಪಥ್ಯದ ಕುರಿತು ರಾಜಿಮಾಡಿಕೊಳ್ಳಲು ಸಿದ್ಧರಾಗಿದ್ದರೆಂದು ತೋರಿಸಿಕೊಟ್ಟಿದ್ದಲ್ಲಿ ಅವರು ಈಗ ಇಂಥ ದೃಢವಾದ ನಿಲುವನ್ನು ತೆಗೆದುಕೊಳ್ಳುತ್ತಿರಲಿಲ್ಲ. ನಾವು ಸಹ ‘ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿರಲು’ ಶ್ರಮಿಸಬೇಕು.—1 ತಿಮೊಥೆಯ 3:11.

4:24-27. ರಾಜನಾಗಿದ್ದ ನೆಬೂಕದ್ನೆಚ್ಚರನಿಗೆ ಏನಾಗಲಿತ್ತು ಮತ್ತು ಅವನ ‘ನೆಮ್ಮದಿಯ ಕಾಲವು ಹೆಚ್ಚಾಗಲು’ ಅವನೇನು ಮಾಡಬೇಕು ಎಂಬುದನ್ನು ಹೇಳಿದಾಗ ದಾನಿಯೇಲನು ನಂಬಿಕೆ ಮತ್ತು ಧೈರ್ಯ ತೋರಿಸಿದನು. ಅದೇ ರೀತಿ ದೇವರ ಪ್ರತಿಕೂಲ ತೀರ್ಪನ್ನು ಒಳಗೊಂಡಿರುವ ರಾಜ್ಯ ಸಂದೇಶವನ್ನು ಪ್ರಚುರಪಡಿಸಲು ದಾನಿಯೇಲನಲ್ಲಿದ್ದ ಅದೇ ನಂಬಿಕೆ ಮತ್ತು ಧೈರ್ಯವು ನಮಗೆ ಅಗತ್ಯ.

5:30, 31. ‘ಬಾಬೆಲಿನ ರಾಜನ ವಿರುದ್ಧವಾದ ಪದ್ಯ’ ಅಥವಾ ದೈವೋಕ್ತಿಯು ನೆರವೇರಿತು. (ಯೆಶಾಯ 14:3, 4, 12-15) ಬಾಬೆಲ್‌ ರಾಜವಂಶಕ್ಕಿದ್ದ ಅಹಂಕಾರವು ಪಿಶಾಚನಾದ ಸೈತಾನನಲ್ಲಿದೆ. ಅವನೂ ಹೀನಾಯಕರ ಕೊನೆ ಕಾಣುವನು.—ದಾನಿಯೇಲ 4:30; 5:2-4, 23.

ದಾನಿಯೇಲನ ದರ್ಶನಗಳು ಏನನ್ನು ಪ್ರಕಟಿಸುತ್ತವೆ?

(ದಾನಿಯೇಲ 7:1-12:13)

ದಾನಿಯೇಲನು ಸಾ.ಶ.ಪೂ. 553ರಲ್ಲಿ ತನ್ನ ಮೊದಲ ಕನಸು-ದರ್ಶನವನ್ನು ಪಡೆಯುವಾಗ 70ರ ಪ್ರಾಯವನ್ನು ದಾಟಿರುತ್ತಾನೆ. ಅವನ ಕಾಲದಿಂದ ಹಿಡಿದು ನಮ್ಮ ಕಾಲದವರೆಗೆ ಒಂದರ ನಂತರ ಒಂದು ಬರುವ ಲೋಕಶಕ್ತಿಗಳನ್ನು ಚಿತ್ರಿಸುವ ನಾಲ್ಕು ಕಾಡುಮೃಗಗಳನ್ನು ಅವನು ನೋಡುತ್ತಾನೆ. ಸ್ವರ್ಗದ ದೃಶ್ಯವಿರುವ ಒಂದು ದರ್ಶನದಲ್ಲಿ ‘ಮನುಷ್ಯಕುಮಾರನಂತಿರುವವನಿಗೆ’ ‘ಅಂತ್ಯವಿಲ್ಲದ ಆಳಿಕೆ’ ಕೊಡಲಾಗುವುದನ್ನು ದಾನಿಯೇಲನು ಕಾಣುತ್ತಾನೆ. (ದಾನಿಯೇಲ 7:13, 14) ಎರಡು ವರ್ಷಗಳ ತರುವಾಯ ದಾನಿಯೇಲನು ಮೇದ್ಯ-ಪಾರಸೀಯ, ಗ್ರೀಸ್‌ ಮತ್ತು “ಕಠಿಣಮುಖ” ಇರುವ ಒಬ್ಬ ರಾಜನ ದರ್ಶನವನ್ನು ನೋಡುತ್ತಾನೆ.—ದಾನಿಯೇಲ 8:23.

ಸಮಯವು ಸಾ.ಶ.ಪೂ. 539 ಆಗಿದೆ. ಬಾಬೆಲ್‌ ಪತನಗೊಂಡಿದೆ. ಈಗ ಮೇದ್ಯನಾದ ದಾರ್ಯಾವೇಷನು ಕಸ್ದೀಯ ರಾಜ್ಯದ ದೊರೆಯಾಗಿದ್ದಾನೆ. ದಾನಿಯೇಲನು ತನ್ನ ಸ್ವದೇಶದ ಪುನಃಸ್ಥಾಪನೆಯ ಕುರಿತು ಯೆಹೋವನಿಗೆ ಪ್ರಾರ್ಥಿಸುತ್ತಾನೆ. ಅವನು ಪ್ರಾರ್ಥಿಸುತ್ತಿರುವಾಗಲೇ, ಯೆಹೋವನು ಬರಲಿರುವ ಮೆಸ್ಸೀಯನ ಕುರಿತು ಅವನಿಗೆ “ಜ್ಞಾನಬೋಧೆ ಮಾಡುವದಕ್ಕೆ” ಗಬ್ರಿಯೇಲ್‌ ದೂತನನ್ನು ಕಳುಹಿಸುತ್ತಾನೆ. (ದಾನಿಯೇಲ 9:20-25) ಸಮಯ ದಾಟುತ್ತಾ ಸಾ.ಶ.ಪೂ. 536/535ಕ್ಕೆ ತಲಪಿದೆ. ಜನಶೇಷವು ಯೆರೂಸಲೇಮಿಗೆ ಹಿಂತಿರುಗಿ ಬಂದಿದೆಯಾದರೂ ಆಲಯದ ನಿರ್ಮಾಣ ಕೆಲಸಕ್ಕೆ ವಿರೋಧವಿದೆ. ಇದು ದಾನಿಯೇಲನ ಚಿಂತೆಗೆ ಕಾರಣವಾಗಿದೆ. ಅವನು ಆ ಕುರಿತು ಎಡೆಬಿಡದೆ ಯೆಹೋವನಿಗೆ ಪ್ರಾರ್ಥಿಸುತ್ತಾನೆ ಮತ್ತು ಉನ್ನತ ಅಧಿಕಾರವುಳ್ಳ ಒಬ್ಬ ದೂತನನ್ನು ದೇವರು ಅವನ ಬಳಿ ಕಳುಹಿಸಿಕೊಡುತ್ತಾನೆ. ಈ ದೂತನು ದಾನಿಯೇಲನನ್ನು ಬಲಪಡಿಸಿ ಪ್ರೋತ್ಸಾಹಿಸುತ್ತಾನೆ. ಬಳಿಕ ಆ ದೇವದೂತನು ಉತ್ತರದ ಹಾಗೂ ದಕ್ಷಿಣದ ರಾಜರು ಪರಮಾಧಿಕಾರಕ್ಕಾಗಿ ನಡೆಸುವ ಹೋರಾಟದ ಕುರಿತು ವಿವರಗಳನ್ನು ಕೊಡುತ್ತಾನೆ. ಇಬ್ಬರು ರಾಜರ ನಡುವಿನ ಘರ್ಷಣೆಯು ಮಹಾ ಅಲೆಕ್ಸಾಂಡರನ ರಾಜ್ಯವು ಅವನ ನಾಲ್ಕು ಸೇನಾಧಿಕಾರಿಗಳ ನಡುವೆ ವಿಭಾಗವಾಗುವಂದಿನಿಂದ ಮಹಾ ಪ್ರಭುವಾದ ಮೀಕಾಯೇಲನು “ಏಳುವ” ವರೆಗೆ ಮುಂದುವರಿಯುವುದು.—ದಾನಿಯೇಲ 12:1.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

8:9—“ಅಂದಚಂದದ ದೇಶ” ಯಾವುದನ್ನು ಚಿತ್ರಿಸುತ್ತದೆ? ಇಲ್ಲಿ ಸೂಚಿಸಲಾಗಿರುವ “ಅಂದಚಂದದ ದೇಶ,” ಆ್ಯಂಗ್ಲೊ-ಅಮೆರಿಕನ್‌ ಲೋಕಶಕ್ತಿಯು ಆಳುತ್ತಿರುವ ಸಮಯದಲ್ಲಿ ಅಭಿಷಿಕ್ತ ಕ್ರೈಸ್ತರ ಐಹಿಕ ಸನ್ನಿವೇಶವನ್ನು ಸಂಕೇತಿಸುತ್ತದೆ.

8:25—“ಪ್ರಭುಗಳ ಪ್ರಭು” ಯಾರಾಗಿದ್ದಾನೆ? “ಪ್ರಭು” ಎಂದು ಭಾಷಾಂತರಿಸಲ್ಪಟ್ಟಿರುವ ಸಾರ್‌ ಎಂಬ ಹೀಬ್ರು ಪದವು, “ಪ್ರಧಾನ” ಅಥವಾ “ಶಿರಸ್ಸು” ಎಂಬ ಅರ್ಥಕೊಡುತ್ತದೆ. “ಪ್ರಭುಗಳ ಪ್ರಭು” ಎಂಬ ಬಿರುದು, ಸಂಪೂರ್ಣವಾಗಿ ಯೆಹೋವ ದೇವರಿಗೆ ಮಾತ್ರ ಅನ್ವಯಿಸುತ್ತದೆ. ಆತನು ‘ಮುಖ್ಯ ಪ್ರಭುಗಳಲ್ಲಿ ಒಬ್ಬನಾದ ಮೀಕಾಯೇಲನನ್ನು’ ಸೇರಿಸಿ ಎಲ್ಲ ದೇವದೂತ ಪ್ರಭುಗಳ ಪ್ರಧಾನನಾಗಿದ್ದಾನೆ.—ದಾನಿಯೇಲ 10:13, NIBV.

9:21—ದಾನಿಯೇಲನು ದೇವದೂತನಾದ ಗಬ್ರಿಯೇಲನನ್ನು “ಪುರುಷ”ನೆಂದು ಏಕೆ ಸೂಚಿಸಿ ಮಾತಾಡುತ್ತಾನೆ? ಗಬ್ರಿಯೇಲನು ಹಿಂದಿನ ಒಂದು ದರ್ಶನದಲ್ಲಿ ದಾನಿಯೇಲನಿಗೆ ಮನುಷ್ಯರೂಪದಲ್ಲಿ ಕಾಣಿಸಿಕೊಂಡಿದ್ದರಿಂದಲೇ ಆಗಿರಬೇಕು.—ದಾನಿಯೇಲ 8:15-17.

9:27—ಯಾವ ಒಡಂಬಡಿಕೆಯನ್ನು 70 ವಾರವರ್ಷಗಳ ಕೊನೆಯವರೆಗೆ ಅಂದರೆ ಸಾ.ಶ. 36ರ ವರೆಗೆ ‘ಜಾರಿಯಲ್ಲಿಡಲಾಯಿತು’ (NW)? ಸಾ.ಶ. 33ರಲ್ಲಿ ಯೇಸುವನ್ನು ಕಂಭಕ್ಕೇರಿಸಿದಾಗ ನಿಯಮದೊಡಂಬಡಿಕೆ ರದ್ದಾಯಿತು. ಹಾಗಿದ್ದರೂ ಅಬ್ರಹಾಮನ ಒಡಂಬಡಿಕೆಯನ್ನು ಸಾ.ಶ. 36ರ ತನಕ ಮಾಂಸಿಕ ಇಸ್ರಾಯೇಲ್ಯರೆಡೆಗೆ ಜಾರಿಯಲ್ಲಿಡುವ ಮೂಲಕ ಯೆಹೋವನು ಯೆಹೂದ್ಯರಿಗೆ, ಅವರು ಅಬ್ರಹಾಮನ ವಂಶಜರಾದ ಕಾರಣ ವಿಶೇಷ ಅನುಗ್ರಹದ ಹೆಚ್ಚಿನ ಸಮಯಾವಧಿಯನ್ನು ಕೊಟ್ಟನು. ‘ದೇವರ ಇಸ್ರಾಯೇಲಿನ’ ವಿಷಯದಲ್ಲಿ ಅಬ್ರಹಾಮನ ಒಡಂಬಡಿಕೆಯು ಈಗಲೂ ಜಾರಿಯಲ್ಲಿದೆ.—ಗಲಾತ್ಯ 3:7-9, 14-18, 29; 6:16.

ನಮಗಾಗಿರುವ ಪಾಠಗಳು:

9:1-23; 10:11. ದಾನಿಯೇಲನು ದೀನನು, ದೇವಭಕ್ತಿಯುಳ್ಳವನು, ಅಧ್ಯಯನ ಮಾಡುವುದರಲ್ಲಿ ನಿಷ್ಠನು ಮತ್ತು ಪ್ರಾರ್ಥನೆ ಮಾಡುವುದರಲ್ಲಿ ನಿರತನಾಗಿದ್ದರಿಂದ ‘ಅತಿಪ್ರಿಯನೆನಿಸಿಕೊಂಡನು.’ ಕೊನೆಯುಸಿರಿನ ವರೆಗೂ ದೇವರಿಗೆ ನಂಬಿಗಸ್ತನಾಗಿ ಉಳಿಯಲು ಅವನಿಗೆ ಈ ಸುಗುಣಗಳೇ ಸಹಾಯ ಮಾಡಿದವು. ದಾನಿಯೇಲನ ಮಾದರಿಯನ್ನು ಅನುಸರಿಸಲು ನಾವು ದೃಢಮನಸ್ಸು ಮಾಡೋಣ.

9:17-19. “ನೀತಿಯು ವಾಸವಾಗಿರುವ” ದೇವರ ನೂತನ ಲೋಕದ ಬರೋಣಕ್ಕಾಗಿ ನಾವು ಪ್ರಾರ್ಥಿಸುವಾಗ ಸಹ ನಮ್ಮ ಮುಖ್ಯ ಚಿಂತೆಯು ನಮ್ಮ ವೈಯಕ್ತಿಕ ಕಷ್ಟತೊಂದರೆಗಳ ಕುರಿತಾಗಿರದೆ ಯೆಹೋವನ ಹೆಸರಿನ ಪವಿತ್ರೀಕರಣ ಮತ್ತು ಆತನ ಪರಮಾಧಿಕಾರದ ನಿರ್ದೋಷೀಕರಣದ ಕುರಿತೇ ಆಗಿರಬೇಕಲ್ಲವೇ?—2 ಪೇತ್ರ 3:13.

10:9-11, 18, 19. ದಾನಿಯೇಲನ ಬಳಿಗೆ ಬಂದ ದೇವದೂತನನ್ನು ಅನುಕರಿಸುತ್ತಾ ನಾವು ಸಹ ಒಬ್ಬರಿಗೊಬ್ಬರು ನೆರವನ್ನು ನೀಡಬೇಕು ಮತ್ತು ಸಾಂತ್ವನಕರ ನುಡಿಗಳಿಂದ ಪ್ರೋತ್ಸಾಹಿಸಿ ಬಲಗೊಳಿಸಬೇಕು.

12:3. ಕಡೇ ದಿವಸಗಳಲ್ಲಿ “ಜ್ಞಾನಿಗಳು” ಇಲ್ಲವೇ ಒಳನೋಟವಿರುವ ಅಭಿಷಿಕ್ತ ಕ್ರೈಸ್ತರು “ಜ್ಯೋತಿರ್ಮಂಡಲಗಳಂತೆ” ಹೊಳೆಯುತ್ತಾರೆ ಮತ್ತು ‘ಬೇರೆ ಕುರಿಗಳ’ “ಮಹಾ ಸಮೂಹ”ದವರನ್ನು ಸೇರಿಸಿ ಅನೇಕರನ್ನು ‘ಸದ್ಧರ್ಮಿಗಳನ್ನಾಗಿ ಮಾಡಿದ್ದಾರೆ.’ (ಫಿಲಿಪ್ಪಿ 2:16; ಪ್ರಕಟನೆ 7:9; ಯೋಹಾನ 10:16) ಸಹಸ್ರ ವರ್ಷಗಳ ಆಳ್ವಿಕೆಯಲ್ಲಿ ಅಭಿಷಿಕ್ತರು ಕ್ರಿಸ್ತನೊಂದಿಗೆ ಜೊತೆಗೂಡಿ ಭೂಮಿಯ ವಿಧೇಯ ಮಾನವರಿಗೆ ವಿಮೋಚನಾ ಮೌಲ್ಯದ ಪ್ರಯೋಜನಗಳನ್ನು ನೀಡುವಾಗ ಅವರು ಸಂಪೂರ್ಣ ಅರ್ಥದಲ್ಲಿ “ನಕ್ಷತ್ರಗಳ ಹಾಗೆ ಹೊಳೆಯುವರು.” “ಬೇರೆ ಕುರಿಗಳು” ಎಲ್ಲ ವಿಧಗಳಲ್ಲಿ ತಮ್ಮ ಪೂರ್ಣಹೃದಯದ ಬೆಂಬಲಕೊಡುತ್ತಾ ಅಭಿಷಿಕ್ತರಿಗೆ ನಿಷ್ಠೆಯಿಂದ ಅಂಟಿಕೊಂಡಿರಬೇಕು.

ಯೆಹೋವನು ‘ತನ್ನ ಭಕ್ತರನ್ನು ಆಶೀರ್ವದಿಸುವನು’

ನಾವು ಆರಾಧಿಸುವ ದೇವರ ಬಗ್ಗೆ ದಾನಿಯೇಲ ಪುಸ್ತಕವು ನಮಗೇನನ್ನು ಕಲಿಸುತ್ತದೆ? ಅದರಲ್ಲಿರುವ, ಈಗಾಗಲೇ ನೆರವೇರಿದ ಮತ್ತು ಮುಂದಕ್ಕೆ ನೆರವೇರಲಿರುವ ಪ್ರವಾದನೆಗಳನ್ನು ಪರಿಗಣಿಸಿರಿ. ಯೆಹೋವನು ತನ್ನ ಮಾತನ್ನು ನೆರವೇರಿಸುವಾತನು ಎಂಬುದನ್ನು ಅವು ಎಷ್ಟು ನೈಜವಾಗಿ ವಿವರಿಸುತ್ತವೆ!—ಯೆಶಾಯ 55:11.

ದಾನಿಯೇಲ ಪುಸ್ತಕದ ಕಥನಾ ಭಾಗವು ನಮ್ಮ ದೇವರ ಬಗ್ಗೆ ಏನನ್ನು ಕಲಿಸುತ್ತದೆ? ಬಾಬೆಲಿನ ಆಸ್ಥಾನದ ಜೀವನಶೈಲಿಗೆ ಒಗ್ಗಿಕೊಳ್ಳಲು ನಿರಾಕರಿಸಿದ ಆ ನಾಲ್ಕು ಹೀಬ್ರು ಯುವಕರು “ಜ್ಞಾನವಿವೇಕಗಳನ್ನು” ಮತ್ತು ಒಳನೋಟವನ್ನು ಪಡೆದರು. (ದಾನಿಯೇಲ 1:17) ಸತ್ಯ ದೇವರು ತನ್ನ ದೂತನನ್ನು ಕಳುಹಿಸಿ ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋರನ್ನು ಧಗಧಗನೆ ಉರಿಯುತ್ತಿರುವ ಆವಿಗೆಯೊಳಗಿಂದ ರಕ್ಷಿಸಿದನು. ದಾನಿಯೇಲನನ್ನು ಸಿಂಹದ ಗವಿಯಿಂದ ವಿಮೋಚಿಸಲಾಯಿತು. ಯೆಹೋವನು ತನ್ನಲ್ಲಿ ‘ಭರವಸವಿಡುವವರ ಸಹಾಯಕನೂ ಗುರಾಣಿಯೂ’ ಆಗಿದ್ದಾನೆ ಮತ್ತು ‘ತನ್ನ ಭಕ್ತರನ್ನು ಅವನು ಆಶೀರ್ವದಿಸುತ್ತಾನೆ.’—ಕೀರ್ತನೆ 115:9, 13. (w07 9/1)

[ಪಾದಟಿಪ್ಪಣಿ]

^ ಪ್ಯಾರ. 4 ದಾನಿಯೇಲ ಪುಸ್ತಕವನ್ನು ವಚನ ವಚನವಾಗಿ ಪರಿಶೀಲಿಸಲು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲಾದ ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಎಂಬ ಪುಸ್ತಕವನ್ನು ನೋಡಿ.

[ಪುಟ 20ರಲ್ಲಿರುವ ಚಿತ್ರ]

ದಾನಿಯೇಲನು ‘ಅತಿಪ್ರಿಯನೆನಿಸಿಕೊಂಡದ್ದು’ ಏಕೆ?