ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಚನೆಯನ್ನು ಮೆಚ್ಚಿರಿ ರಚಕನನ್ನು ತಿಳಿಯಿರಿ

ರಚನೆಯನ್ನು ಮೆಚ್ಚಿರಿ ರಚಕನನ್ನು ತಿಳಿಯಿರಿ

ರಚನೆಯನ್ನು ಮೆಚ್ಚಿರಿ ರಚಕನನ್ನು ತಿಳಿಯಿರಿ

ಇಟಲಿಯ ಮೈಕಲಾಂಜೆಲೊ ಎಂಬ ಚಿತ್ರಕಾರ ಹಾಗೂ ಶಿಲ್ಪಿಯ ಕುರಿತಾಗಿ ನೀವು ಕೇಳಿರಬಹುದು. ಅವನ ಮೂಲ ಕಲಾಕೃತಿಗಳಲ್ಲಿ ಒಂದನ್ನೂ ನೀವು ನೋಡಿರಲಿಕ್ಕಿಲ್ಲ. ಆದರೂ, ಈ ಮೇಧಾವಿಯನ್ನು “ಅದ್ಭುತ ಹಾಗೂ ಸರಿಸಾಟಿಯಿಲ್ಲದ ಕಲಾವಿದ” ಎಂದು ಕರೆದ ಕಲಾ ಇತಿಹಾಸಗಾರನೊಬ್ಬನ ಮಾತಿಗೆ ನೀವು ಖಂಡಿತ ತಲೆದೂಗಿಸುವಿರಿ. ಮೈಕಲಾಂಜೆಲೋವಿನ ಪ್ರತಿಭೆಗಳನ್ನು ಯಾರೂ ಅಲ್ಲಗಳೆಯಲಾರರು. ಅವನ ಕಲಾಕೃತಿಯನ್ನು ಹಾಡಿಹೊಗಳಿ ಅದೇ ಸಮಯದಲ್ಲಿ ಅವನೊಬ್ಬ ಅದ್ಭುತ ಚಿತ್ರಕಾರನೆಂದು ಒಪ್ಪಿಕೊಳ್ಳದಿರಲು ಯಾರಿಗಾದರೂ ಸಾಧ್ಯವೇ?

ಈಗ, ಈ ಭೂಮಿಯಲ್ಲಿ ನಮ್ಮ ಸುತ್ತಲೂ ಇರುವಂಥ, ವಿಸ್ಮಯಕರ ಜಟಿಲತೆ ಹಾಗೂ ವೈವಿಧ್ಯತೆಯುಳ್ಳ ಜೀವರಾಶಿಯ ಕುರಿತಾಗಿ ಸ್ವಲ್ಪ ಯೋಚಿಸಿ. ಜೀವವಿಜ್ಞಾನದ ಪ್ರೊಫೆಸರನೊಬ್ಬನು ಸೂಕ್ತವಾಗಿಯೇ ಹೀಗೆ ಹೇಳಿರುವುದನ್ನು ದ ನ್ಯೂ ಯಾರ್ಕ್‌ ಟೈಮ್ಸ್‌ ಉಲ್ಲೇಖಿಸಿತು: “ಜೀವಶಾಸ್ತ್ರದಲ್ಲಿ ರಚನಾವ್ಯವಸ್ಥೆಯ ಸಾಕ್ಷ್ಯಗಳು ಕಂಡುಬರುತ್ತವೆ.” ಅವನು ಕೂಡಿಸಿ ಹೇಳಿದ್ದು: “ಜೀವರಾಶಿಯಲ್ಲಿ ತೋರಿಬರುವ ರಚನಾವ್ಯವಸ್ಥೆಯು ನಮ್ಮನ್ನು ಬೆರಗುಗೊಳಿಸುತ್ತದೆ.” ಆದರೆ ರಚನೆಯನ್ನು ಮೆಚ್ಚಿ, ರಚಕನನ್ನು ಅಂಗೀಕರಿಸದಿರುವುದು ನ್ಯಾಯವೋ?

ಅಪೊಸ್ತಲ ಪೌಲನು ತನ್ನ ಸುತ್ತಲೂ ಇದ್ದ ವಿಷಯಗಳನ್ನು ಸೂಕ್ಷ್ಮವಾಗಿ ಅವಲೋಕಿಸುವವನಾಗಿದ್ದನು. ‘ಸೃಷ್ಟಿಕರ್ತನನ್ನು ಪೂಜಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವಿಸುವವರ’ ಕುರಿತಾಗಿ ಅವನು ಮಾತಾಡಿದನು. (ರೋಮಾಪುರ 1:25) ಎಲ್ಲೆಡೆಯೂ ವ್ಯಾಪಿಸಿರುವ ವಿಕಾಸವಾದದ ವಿಚಾರಗಳಿಂದ ಪ್ರಭಾವಿತರಾದ ಕೆಲವರು ಒಂದು ಮಾತನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ ಇಲ್ಲವೆ ತಪ್ಪುತ್ತಾರೆ. ಅದೇನೆಂದರೆ, ವಿಶ್ವದಲ್ಲಿನ ರಚನಾವ್ಯವಸ್ಥೆಯು ಖಂಡಿತವಾಗಿ ಒಬ್ಬ ರಚಕನಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಆದರೆ ವಿಕಾಸವಾದವು ನಿಜವಾಗಿಯೂ ವೈಜ್ಞಾನಿಕವಾಗಿದೆಯೋ? ದ ನ್ಯೂ ಯಾರ್ಕ್‌ ಟೈಮ್ಸ್‌ ಪ್ರಸ್ತುತಪಡಿಸಿದ ವಿಯೆನ್ನಾದ ಕ್ಯಾಥೊಲಿಕ್‌ ಆರ್ಚ್‌ಬಿಷಪ್‌ ಶಾನ್‌ಬರ್ನ್‌ರ ಈ ತೀರ್ಮಾನವನ್ನು ಗಮನಿಸಿ: “ಜೀವಶಾಸ್ತ್ರದಲ್ಲಿರುವ ರಚನಾವ್ಯವಸ್ಥೆಯ ಪ್ರಬಲವಾದ ರುಜುವಾತನ್ನು ನಿರಾಕರಿಸುವ ಇಲ್ಲವೆ ಕಡೆಗಣಿಸುವಂಥ ಯಾವುದೇ ವಾದವು ಕೇವಲ ಕಲ್ಪನಾಶಾಸ್ತ್ರವಾಗಿದೆಯೇ ಹೊರತು ವಿಜ್ಞಾನವಲ್ಲ.”

ವಿಜ್ಞಾನದ ಅಂತ್ಯವೋ?

ಒಬ್ಬ ಸೃಷ್ಟಿಕರ್ತನಿದ್ದಾನೆಂಬ ಪುರಾವೆಯನ್ನು ಸ್ವೀಕರಿಸಿದರೆ “ಸಂಶೋಧನೆಯೇ ಅಂತ್ಯಗೊಳ್ಳುವುದು” ಎಂಬ ಅಭಿಪ್ರಾಯವುಳ್ಳವರೂ ಇದ್ದಾರೆ. ನ್ಯೂ ಸೈಯಂಟಿಸ್ಟ್‌ ಎಂಬ ಪತ್ರಿಕೆಯಲ್ಲಿನ ಒಂದು ಲೇಖನವು ಆ ಭಯವನ್ನು ವ್ಯಕ್ತಪಡಿಸುತ್ತಾ ವಾದಿಸಿದ್ದೇನೆಂದರೆ “ಹೊಸ ಕಂಡುಹಿಡಿತಗಳನ್ನು ಮಾಡಲು ವಿಜ್ಞಾನಕ್ಕಿರುವ ಅಪರಿಮಿತ ಸಾಧ್ಯತೆಗಳು ಕೊನೆಗೊಳ್ಳುವವು. ಏಕೆಂದರೆ ಎಲ್ಲದಕ್ಕೂ, ‘ರಚಕನು ಮಾಡಿದನು’ ಎಂಬ ಅಬೇಧ್ಯ ಗೋಡೆಯು ಅಡ್ಡಬರುವುದು.” ಈ ರೀತಿ ಭಯಪಡಲು ಸಕಾರಣವಿದೆಯೋ? ಖಂಡಿತವಾಗಿಯೂ ಇಲ್ಲ. ವಾಸ್ತವದಲ್ಲಿ ಇದಕ್ಕೆ ವಿರುದ್ಧವಾದದ್ದು ಸತ್ಯವಾಗಿದೆ. ಹೇಗೆ?

ವಾಸ್ತವದಲ್ಲಿ, ವಿಶ್ವ ಹಾಗೂ ಭೂಮಿ ಮೇಲಿನ ಜೀವರಾಶಿಗೆ ಉದ್ದೇಶವಿಲ್ಲದ ಆಕಸ್ಮಿಕ ಘಟನೆ ಹಾಗೂ ತದನಂತರದ ವಿಕಾಸವೇ ಕಾರಣವೆಂದು ಒಪ್ಪಿಕೊಂಡರೆ, ಒಂದು ಅರ್ಥಪೂರ್ಣ ವಿವರಣೆಯನ್ನು ಪಡೆಯಲು ಪ್ರಯತ್ನಿಸುವುದನ್ನು ತೊರೆದಂತಾಗುತ್ತದೆ. ಇನ್ನೊಂದು ಬದಿಯಲ್ಲಿ, ನಮ್ಮ ಸುತ್ತಲೂ ನಾವು ನೋಡುವ ವಿಷಯಗಳಿಗೆ ಒಬ್ಬ ಬುದ್ಧಿವಂತ ಸೃಷ್ಟಿಕರ್ತನು ಕಾರಣನೆಂದು ಒಪ್ಪಿಕೊಂಡರೆ, ಭೌತವಿಶ್ವದಲ್ಲಿ ಪ್ರಕಟವಾಗುತ್ತಿರುವ ಆತನ ಬುದ್ಧಿವಂತಿಕೆಯ ಸ್ವರೂಪವನ್ನೂ ಅನ್ವಯವನ್ನೂ ನಾವು ಪರಿಶೋಧಿಸುವಂತೆ ನಡೆಸಬಲ್ಲದು. ಇದನ್ನು ಪರಿಗಣಿಸಿ: “ಮೋನಾಲೀಸಾ” ಎಂಬ ಕೃತಿಯ ಕಲಾವಿದನು ಲಿಯೊನಾರ್ಡೊ ಡಾ ವಿಂಚಿ ಆಗಿದ್ದನೆಂದು ಕಲಾ ಇತಿಹಾಸಗಾರರಿಗೆ ತಿಳಿದಿದೆಯಾದರೂ, ಅವನು ಬಳಸಿದ ವಿಧಾನ ಹಾಗೂ ಸಾಮಗ್ರಿಗಳು ಯಾವವೆಂದು ಪರಿಶೋಧಿಸುವುದರಿಂದ ಅದು ಅವರನ್ನು ತಡೆದುಹಿಡಿಯಲಿಲ್ಲ. ಅದೇ ರೀತಿಯಲ್ಲಿ ಒಬ್ಬ ರಚಕನು ಇದ್ದಾನೆಂದು ಒಪ್ಪಿಕೊಳ್ಳುವುದು, ನಾವು ಆತನ ರಚನೆಗಳು ಮತ್ತು ಸೃಷ್ಟಿಯ ವಿವರ ಹಾಗೂ ಜಟಿಲತೆಯನ್ನು ಶೋಧಿಸುವುದರಿಂದ ನಮ್ಮನ್ನು ತಡೆಯುವುದಿಲ್ಲ.

ಹೆಚ್ಚಿನ ಸಂಶೋಧನೆಯನ್ನು ಕುಂಠಿತಗೊಳಿಸುವ ಬದಲು, ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವಂತೆ ಬೈಬಲ್‌ ಉತ್ತೇಜಿಸುತ್ತದೆ. ಪ್ರಾಚೀನಕಾಲದ ರಾಜ ದಾವೀದನು, ಕುಶಲತೆಯಿಂದ ನಿರ್ಮಿಸಲಾಗಿರುವ ತನ್ನ ದೇಹರಚನೆಯ ಕುರಿತಾಗಿ ಗಾಢವಾಗಿ ಯೋಚಿಸಿದನು. ಆದ್ದರಿಂದಲೇ ಅವನಂದದ್ದು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.” (ಕೀರ್ತನೆ 139:14) ಅಲ್ಲದೆ, ಪೂರ್ವಜನಾದ ಯೋಬನಿಗೆ ಸೃಷ್ಟಿಕರ್ತನೇ ಹೀಗೆ ಕೇಳಿದನೆಂದು ಬೈಬಲ್‌ ತಿಳಿಸುತ್ತದೆ: “ಭೂವಿಸ್ತಾರವನ್ನು ಗ್ರಹಿಸಿದ್ದೀಯೋ?” (ಯೋಬ 38:18) ಇಲ್ಲಿ ಪರಿಶೋಧನೆಗೆ ಅಡ್ಡಿಮಾಡುವ ವಿಷಯವೇ ಇಲ್ಲ ಅಲ್ಲವೇ? ಅದರ ಬದಲು, ವಿಶ್ವದ ಮಹಾ ರಚಕನು ನಾವಾತನ ಕೈಕೆಲಸವನ್ನು ಪರಿಶೋಧಿಸುವಂತೆ ಆಮಂತ್ರಿಸುತ್ತಿದ್ದಾನೆ. ಪ್ರವಾದಿ ಯೆಶಾಯನು ಸಹ ಬರೆದಿಟ್ಟಂಥ ಆಮಂತ್ರಣವನ್ನು ಪರಿಗಣಿಸಿರಿ. ಇದು, ನಮ್ಮ ಸುತ್ತಲೂ ಇರುವ ಸೃಷ್ಟಿಗೆ ಕಾರಣನಾಗಿರುವಾತನ ಕುರಿತ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುವಂತೆ ಹೇಳುತ್ತದೆ: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು?” ಹೌದು, ಯೆಶಾಯ 40:26ರ ಈ ಮಾತುಗಳು, ಐನ್‌ಸ್ಟೈನರ ಸುಪ್ರಸಿದ್ಧ E=mc2 ಸೂತ್ರಕ್ಕೆ ಹೊಂದಿಕೆಯಲ್ಲಿರುವ ವಾಸ್ತವಾಂಶವನ್ನು ತಿಳಿಸುತ್ತದೆ. ಈ ವಿಶ್ವವು, ಕ್ರಿಯಾತ್ಮಕ ಶಕ್ತಿಯ ಮೂಲನಿಂದ ರಚಿಸಲ್ಪಟ್ಟಿತ್ತೆಂಬುದೇ ಆ ವಾಸ್ತವಾಂಶವಾಗಿದೆ.

ಸೃಷ್ಟಿಯ ಕುರಿತಾದ ಪ್ರಶ್ನೆಗಳಿಗೆ ಉತ್ತರಗಳು ಯಾವಾಗಲೂ ಸಿದ್ಧವಾಗಿ ಲಭ್ಯವಿರುವುದಿಲ್ಲ ಎಂಬ ಮಾತು ಒಪ್ಪತಕ್ಕದ್ದೇ. ಇದರ ಆಂಶಿಕ ಕಾರಣ, ನಮ್ಮ ತಿಳಿವಳಿಕೆಯ ಶಕ್ತಿ ಸೀಮಿತವಾಗಿದೆ ಮತ್ತು ನಾವು ಜೀವಿಸುತ್ತಿರುವ ಲೋಕದ ಕುರಿತ ನಮ್ಮ ಗ್ರಹಿಕೆಯು ಅಪೂರ್ಣವಾಗಿದೆ. ಯೋಬನಿಗೆ ಇದು ತಿಳಿದಿತ್ತು. ಯಾರ ನಿರ್ದೇಶನದ ಮೇರೆಗೆ ಭೂಗೋಳವು ಅಂತರಾಳದಲ್ಲಿ ಯಾವುದೇ ಆಧಾರವಿಲ್ಲದೆ ತೂಗುತ್ತಿದೆಯೊ ಮತ್ತು ಜಲಭರಿತ ಮೇಘಗಳು ಭೂಮಿಯ ಮೇಲೆ ತೂಗಾಡುತ್ತಿವೆಯೊ ಆ ಸೃಷ್ಟಿಕರ್ತನನ್ನು ಯೋಬನು ಸ್ತುತಿಸಿದನು. (ಯೋಬ 26:7-9) ಆದರೆ, ಈ ಎಲ್ಲ ಅದ್ಭುತಗಳು ‘ಸೃಷ್ಟಿಕರ್ತನ ಮಾರ್ಗಗಳ ಕಟ್ಟಕಡೆ’ ಇಲ್ಲವೆ ಅಂಚುಗಳಾಗಿವೆಯೆಂದು ಯೋಬನು ಗ್ರಹಿಸಿದನು. (ಯೋಬ 26:14) ಯೋಬನಿಗೆ ತನ್ನ ಸುತ್ತಲಿನ ಲೋಕದ ಕುರಿತಾಗಿ ಇನ್ನೂ ಹೆಚ್ಚನ್ನು ಕಲಿಯಲು ಮನಸ್ಸಿತ್ತೆಂಬುದರಲ್ಲಿ ಅನುಮಾನವೇ ಇಲ್ಲ. ದಾವೀದನು ತನ್ನ ಇತಿಮಿತಿಗಳನ್ನು ಒಪ್ಪಿಕೊಳ್ಳುತ್ತಾ ಬರೆದುದು: “ಇಂಥ ಜ್ಞಾನವು ನನಗೆ ಬಹು ಆಶ್ಚರ್ಯವಾಗಿದೆ; ಅದು ಉನ್ನತವಾದದ್ದು, ನನಗೆ ನಿಲುಕುವದಿಲ್ಲ.”—ಕೀರ್ತನೆ 139:6.

ಸೃಷ್ಟಿಕರ್ತನ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ವೈಜ್ಞಾನಿಕ ಪ್ರಗತಿಗೆ ಅಡ್ಡಿಯಾಗಿರುವುದಿಲ್ಲ. ಭೌತಿಕ ಹಾಗೂ ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚು ಸಮಗ್ರವಾದ ಜ್ಞಾನಾನ್ವೇಷಣೆಯು ಅಪರಿಮಿತವಾದದ್ದು ಮತ್ತು ನಿತ್ಯಕ್ಕೂ ಮುಂದುವರಿಯುವಂಥದ್ದು ಆಗಿದೆ ನಿಜ. ಅಪಾರ ಜ್ಞಾನಕ್ಕಾಗಿ ಪ್ರಸಿದ್ಧನಾಗಿದ್ದ ಒಬ್ಬ ಪ್ರಾಚೀನ ಅರಸನು ದೀನತೆಯಿಂದ ಬರೆದುದು: “ಆತನು [ದೇವರು] ಮನುಷ್ಯನ ಮನಸ್ಸಿನಲ್ಲಿ ಅನಂತಕಾಲದ ಯೋಚನೆಗಳನ್ನು ಇಟ್ಟಿದ್ದಾನೆ; ಆದರೂ ದೇವರು ಆದಿಯಿಂದಲೂ ಅಂತ್ಯದ ವರೆಗೆ ಮಾಡಿರುವ ಕೆಲಸವನ್ನು ಮನುಷ್ಯನು ಗ್ರಹಿಸಲಾರನು.”—ಪ್ರಸಂಗಿ 3:11, ಹೋಲಿ ಬೈಬಲ್‌​—⁠ನ್ಯೂ ಲೈಫ್‌ ವರ್ಷನ್‌.

“ತೆರಪುಗಳನ್ನು ತುಂಬಿಸಲಿಕ್ಕಾಗಿ ದೇವರು?”

ಸಾಬೀತುಪಡಿಸಬಹುದಾದ ವೈಜ್ಞಾನಿಕ ವಿವರಣೆ ಇಲ್ಲದಿರುವಾಗ, ದೇವರನ್ನು “ಒಂದು ಪರಿಹಾರವಾಗಿ” ಒದಗಿಸುತ್ತಾ ಇಚ್ಛಾನುಸಾರ ಬಳಸಲಾಗುತ್ತದೆ ಎಂದು ಕೆಲವರು ಆಕ್ಷೇಪಿಸುತ್ತಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಕೆಲವೊಂದು ವಿಷಯಗಳನ್ನು ಮನುಷ್ಯನಿಗೆ ತರ್ಕಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ವಿವರಿಸಲು ಆಗದೇ ಇರುವಾಗ, “ದೇವರು” ಎಂಬುದು ಜಾದೂ ಪದವಾಗಿಬಿಡುತ್ತದೆ. ಹೀಗೆ ‘ತೆರಪುಗಳನ್ನು ತುಂಬಿಸಲಿಕ್ಕಾಗಿ’ ದೇವರನ್ನು ಬಳಸಲಾಗುತ್ತದೆ. ಆದರೆ ಈ ತೆರಪುಗಳೇನು? ನಮ್ಮ ಜ್ಞಾನದಲ್ಲಿ ಇರುವ ಚಿಕ್ಕಪುಟ್ಟ, ಕ್ಷುಲ್ಲಕ ತೆರಪುಗಳೋ? ಅಲ್ಲ. ಅವು, ವಿಕಾಸವಾದವು ವಿವರಿಸಲು ಅಶಕ್ತವಾಗಿರುವ ಜೀವಶಾಸ್ತ್ರದ ಅಂಶಗಳಲ್ಲಿನ ಮೂಲಭೂತ ತೆರಪುಗಳಾಗಿದ್ದು, ಡಾರ್ವಿನನ ವಿಕಾಸವಾದದ ನಂಬಲರ್ಹತೆಯ ಬಗ್ಗೆ ಇರುವ ಅತಿ ದೊಡ್ಡ ಕಂದಕಗಳಾಗಿವೆ. ನ್ಯಾಯವಾಗಿ ಹೇಳಬೇಕಾದರೆ, ಪರಿಣಾಮಕಾರಿ ರೀತಿಯಲ್ಲಿ ಬೆಂಬಲಿಸಲಾಗದಂಥ ಪ್ರತಿಪಾದನೆಗಳ ಮೇಲೆ ಅವಲಂಬಿಸುವ ವಿಕಾಸವಾದಿಗಳು ಡಾರ್ವಿನನ ವಾದವನ್ನೇ ತೆರಪುಗಳನ್ನು ತುಂಬಿಸಲಿಕ್ಕಾಗಿರುವ ತಮ್ಮ ದೇವರನ್ನಾಗಿ ಮಾಡುತ್ತಿದ್ದಾರೆ.

ಬೈಬಲ್‌ ಸೃಷ್ಟಿಕರ್ತನನ್ನು ಕೇವಲ ‘ತೆರಪುಗಳನ್ನು ತುಂಬಿಸಲಿಕ್ಕಾಗಿರುವ ದೇವರಾಗಿ’ ಪ್ರಸ್ತುತಪಡಿಸುವುದಿಲ್ಲ. ಬದಲಾಗಿ, ಅವನ ಚಟುವಟಿಕೆಯು ಸೃಷ್ಟಿಕಾರ್ಯದ ಎಲ್ಲ ಹಂತಗಳು, ಭಾಗಗಳು ಮತ್ತು ವಿವರಗಳನ್ನು ವ್ಯಾಪಿಸುತ್ತದೆ. ಯೆಹೋವನ ಸಕಲ ಸೃಷ್ಟಿಕಾರಕ ಚಟುವಟಿಕೆಯನ್ನು ಕೀರ್ತನೆಗಾರನು ಹೀಗೆ ಒತ್ತಿಹೇಳಿದನು: “ಎಲ್ಲ ಜೀವದ ಮೂಲನೂ ನೀನೇ; ನಿನ್ನ ಬೆಳಕಿನಿಂದಾಗಿ ನಾವು ಬೆಳಕನ್ನು ನೋಡುತ್ತೇವೆ.” (ಕೀರ್ತನೆ 36:9, ಟುಡೇಸ್‌ ಇಂಗ್ಲಿಷ್‌ ವರ್ಷನ್‌) ‘ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿದಾತನು’ ಎಂದು ಆತನ ಬಗ್ಗೆ ಸೂಕ್ತವಾಗಿ ವರ್ಣಿಸಲಾಗಿದೆ. (ಅ. ಕೃತ್ಯಗಳು 4:24; 14:15; 17:24) ಸಕಾರಣದಿಂದಲೇ, ಪ್ರಥಮ ಶತಮಾನದ ಒಬ್ಬ ಬೋಧಕನು ಬರೆದದ್ದೇನೆಂದರೆ ‘ಸಮಸ್ತವನ್ನು ಸೃಷ್ಟಿಸಿದ’ವನು ದೇವರೇ.—ಎಫೆಸ 3:9.

ಅಲ್ಲದೆ, ದೇವರು “ಖಗೋಳದ ಕಟ್ಟಳೆಗಳನ್ನು” ಸ್ಥಾಪಿಸಿದನು. ಇವು ಭೌತದ್ರವ್ಯ ಹಾಗೂ ಶಕ್ತಿಯನ್ನು ನಿಯಂತ್ರಿಸುವ ನಿಯಮಗಳಾಗಿವೆ ಮತ್ತು ಇವುಗಳ ಬಗ್ಗೆ ವಿಜ್ಞಾನಿಗಳು ಈಗಲೂ ಅಧ್ಯಯನಮಾಡುತ್ತಿದ್ದಾರೆ. (ಯೋಬ 38:33) ಆತನ ರಚನಾವ್ಯವಸ್ಥೆಯು ಸಮಗ್ರವೂ ಉದ್ದೇಶಭರಿತವೂ ಆಗಿದ್ದು, ಈ ಭೂಮಿ ವೈವಿಧ್ಯಮಯ ಜೀವಿಗಳಿಂದ ತುಂಬಿರಬೇಕೆಂಬ ಆತನ ಉದ್ದೇಶವನ್ನು ಪೂರೈಸುತ್ತದೆ.

ರಚನಾವ್ಯವಸ್ಥೆ ಮತ್ತು ಸಹಜ ಜ್ಞಾನ

ಕೊನೆಯಲ್ಲಿ, ಸಹಜ ಜ್ಞಾನದ ಪ್ರಶ್ನೆಯನ್ನು ನಮಗೆ ಪರಿಗಣಿಸಲಿಕ್ಕಿದೆ. ವಿವಿಧ ವೈಜ್ಞಾನಿಕ ವಾದಗಳ ಸಮಂಜಸತೆಯ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾ ವಿಜ್ಞಾನದ ಲೇಖಕನಾದ ಜಾನ್‌ ಹಾರ್ಗನ್‌ ಹೇಳಿದ್ದು: “ಪುರಾವೆಯು ಅನಿಶ್ಚಿತವಾಗಿರುವಾಗ, ಸಹಜ ಜ್ಞಾನವು ನಮ್ಮನ್ನು ಮಾರ್ಗದರ್ಶಿಸುವಂತೆ ಬಿಡಲು ನಾವು ನಾಚಿಕೆಪಡಬಾರದು.”

ಜೀವವು ಉದ್ದೇಶರಹಿತ ಆಕಸ್ಮಿಕ ಘಟನೆಯಿಂದ ಇಲ್ಲವೇ ಕುರುಡುಶಕ್ತಿಗಳಿಂದ ಬಂತೆಂದು ಹೇಳುವುದು ನಿಜವಾಗಿ ಅರ್ಥಪೂರ್ಣವೋ? ವಿಕಾಸವಾದವು ವ್ಯಾಪಕವಾಗಿ ಜನಪ್ರಿಯವಾಗಿದ್ದರೂ, ಒಬ್ಬ ಬುದ್ಧಿವಂತ ಸೃಷ್ಟಿಕರ್ತನಿದ್ದಾನೆಂದು ವಿಜ್ಞಾನಿಗಳ ಜೊತೆಗೆ ಅನೇಕ ಬುದ್ಧಿವಂತರಿಗೆ ಮನದಟ್ಟಾಗಿದೆ. ವಿಜ್ಞಾನದ ಒಬ್ಬ ಪ್ರೊಫೆಸರರು ಹೇಳಿದ್ದೇನೆಂದರೆ ಜನಸಾಮಾನ್ಯರಲ್ಲಿ “ಹೆಚ್ಚಿನವರು ಜೀವರಾಶಿಯನ್ನು ನಿರ್ಮಿಸಲಾಗಿತ್ತೆಂದು ನೆನಸುತ್ತಾರೆ ಮತ್ತು ಇದು ಸ್ಪಷ್ಟವಾಗಿ ತೋರಿಬರುತ್ತಿದೆ.” ಆದರೆ ಜನರು ಹೀಗೆ ನಂಬುವುದೇಕೆ? ಅಪೊಸ್ತಲ ಪೌಲನ ಈ ಹೇಳಿಕೆಯನ್ನು ಹೆಚ್ಚಿನವರು ಒಪ್ಪುವರು: “ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು.” (ಇಬ್ರಿಯ 3:4) ತದನಂತರ ಪೌಲನು ಮುಂದುವರಿಸುತ್ತಾ ಈ ತರ್ಕಸಂಗತ ತೀರ್ಮಾನವನ್ನು ತಿಳಿಸುತ್ತಾನೆ: “ಸಮಸ್ತವನ್ನು ಕಟ್ಟಿದಾತನು ದೇವರೇ.” ಬೈಬಲಿನ ದೃಷ್ಟಿಕೋನಕ್ಕನುಸಾರ, ಒಂದು ಮನೆಗಾಗಿ ಒಬ್ಬ ವಿನ್ಯಾಸಕ ಹಾಗೂ ಕಟ್ಟುವವನು ಇರಲೇಬೇಕೆಂದು ಒಪ್ಪಿಕೊಂಡು, ಜಟಿಲವಾದ ಒಂದು ಜೀವಕೋಶವಾದರೊ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂತೆಂದು ಹೇಳುವುದು ಅರ್ಥವಿಲ್ಲದ ಮಾತು.

ಒಬ್ಬ ರಚಕನು ಮತ್ತು ಸೃಷ್ಟಿಕರ್ತನು ಇದ್ದಾನೆಂಬ ಮಾತನ್ನು ತಿರಸ್ಕರಿಸುವವರ ಕುರಿತಾಗಿ ಬೈಬಲ್‌ ಹೀಗನ್ನುತ್ತದೆ: “ದುರ್ಮತಿಗಳು—ದೇವರಿಲ್ಲವೆಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ.” (ಕೀರ್ತನೆ 14:1) ದೇವರಿದ್ದಾನೆಂದು ಇನ್ನೂ ಮನವರಿಕೆಯಾಗದವರನ್ನು ಕೀರ್ತನೆಗಾರನು ಇಲ್ಲಿ ಗದರಿಸುತ್ತಾನೆ. ಒಬ್ಬ ವ್ಯಕ್ತಿಯು, ವಿಷಯಗಳನ್ನು ಮುಕ್ತಮನಸ್ಸಿನಿಂದ ನೋಡುವ ಬದಲು ತನ್ನ ವೈಯಕ್ತಿಕ ದೃಷ್ಟಿಕೋನದಿಂದ ನೋಡುತ್ತಿರಬಹುದು. ಇನ್ನೊಂದು ಬದಿಯಲ್ಲಿ, ಒಬ್ಬ ಬುದ್ಧಿವಂತ, ವಿವೇಚನಾಭರಿತ ವ್ಯಕ್ತಿಯಾದರೊ ಸೃಷ್ಟಿಕರ್ತನ ಅಸ್ತಿತ್ವವನ್ನು ದೀನತೆಯಿಂದ ಒಪ್ಪಿಕೊಳ್ಳುತ್ತಾನೆ.—ಯೆಶಾಯ 45:18.

ಅನೇಕ ಚಿಂತನಾಶೀಲ ವ್ಯಕ್ತಿಗಳಿಗೆ, ಒಬ್ಬ ಸರ್ವೋಚ್ಚ ರಚಕನಿದ್ದಾನೆಂದು ಬೆಂಬಲಿಸುವ ಪುರಾವೆಗಳು ಸ್ಫಟಿಕದಷ್ಟು ಸ್ಪಷ್ಟವಾಗಿವೆ.

ನೀವು ರಚಕನ ಬಗ್ಗೆ ತಿಳಿದುಕೊಳ್ಳಬಹುದು

ನಾವು ರಚಿಸಲ್ಪಟ್ಟಿದ್ದೇವೆಂದು ನಮಗನಿಸುತ್ತಿರುವಲ್ಲಿ ಪ್ರಶ್ನೆಯೇನೆಂದರೆ, ನಾವು ಯಾವುದಕ್ಕೋಸ್ಕರ ರಚಿಸಲ್ಪಟ್ಟಿದ್ದೇವೆ? ನಮ್ಮ ಜೀವನದ ಉದ್ದೇಶವೇನು? ಕೇವಲ ವಿಜ್ಞಾನವೊಂದೇ ಇಂಥ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ಕೊಡಲಾರದು. ಆದರೆ ಈ ಮೂಲಭೂತ ವಿಷಯಗಳ ಬಗ್ಗೆ ಮನಗಾಣಿಸುವಂಥ ಹಾಗೂ ತೃಪ್ತಿದಾಯಕ ಉತ್ತರಗಳು ಅಗತ್ಯ. ಈ ಸಂಬಂಧದಲ್ಲಿ, ಬೈಬಲ್‌ ತುಂಬ ಉಪಯುಕ್ತವಾಗಿರಬಲ್ಲದು. ಅದು ಯೆಹೋವನನ್ನು ಸೃಷ್ಟಿಕರ್ತನೆಂದು ಮಾತ್ರವಲ್ಲ ಉದ್ದೇಶಕರ್ತನೆಂದೂ ಗುರುತಿಸುತ್ತದೆ. ಆತನು ಮಾಡುವ ಎಲ್ಲದ್ದಕ್ಕೂ ದೃಢವಾದ ಕಾರಣಗಳಿವೆ. ಮಾನವಕುಲಕ್ಕಾಗಿ ದೇವರ ಉದ್ದೇಶವೇನೆಂದು ತಿಳಿಯಪಡಿಸುತ್ತಾ ಬೈಬಲ್‌ ನಮಗೆ ನಿರೀಕ್ಷೆ ಹಾಗೂ ಒಂದು ಉತ್ತಮ ಭವಿಷ್ಯವನ್ನು ನೀಡುತ್ತದೆ.

ಆದರೆ, ಯೆಹೋವನು ಯಾರು? ಅವನೆಂಥ ದೇವರಾಗಿದ್ದಾನೆ? ನಮ್ಮ ಕುಶಲ ರಚಕನನ್ನು ಒಬ್ಬ ನಿಜ ವ್ಯಕ್ತಿಯಾಗಿ ತಿಳಿದುಕೊಳ್ಳುವಂತೆ ಯೆಹೋವನ ಸಾಕ್ಷಿಗಳು ನಿಮಗೆ ಕರೆಗೊಡುತ್ತಾರೆ. ನೀವು ಆತನ ಹೆಸರು, ಗುಣಗಳು ಮತ್ತು ಮಾನವರೊಂದಿಗಿನ ಆತನ ವ್ಯವಹಾರಗಳ ಕುರಿತಾಗಿ ಕಲಿಯಬಲ್ಲಿರಿ. ಆತನು ಮಾಡಿದ ಅಮೋಘ ರಚನಾವ್ಯವಸ್ಥೆಯನ್ನು ನೋಡಿ ನಾವು ಕೇವಲ ಮೆಚ್ಚುಗೆ ವ್ಯಕ್ತಪಡಿಸಬೇಕು ಮಾತ್ರವಲ್ಲ ಆತನನ್ನು ರಚಕನಾಗಿ ಏಕೆ ಮಹಿಮೆಪಡಿಸಲೂಬೇಕು ಎಂಬುದನ್ನು ಆತನ ವಾಕ್ಯವಾದ ಬೈಬಲಿನಲ್ಲಿ ನೀವು ನೋಡುವಿರಿ.—ಕೀರ್ತನೆ 86:12; ಪ್ರಕಟನೆ 4:11. (w07 8/15)

[ಪುಟ 4ರಲ್ಲಿರುವ ಚಿತ್ರ]

ಮೈಕಲಾಂಜೆಲೊ

[ಪುಟ 5ರಲ್ಲಿರುವ ಚಿತ್ರಗಳು]

ರಚಕನಿದ್ದಾನೆಂದು ನಂಬುವುದು ನಿಜ ವಿಜ್ಞಾನಕ್ಕೆ ಹೊಂದಿಕೆಯಲ್ಲಿದೆ

[ಪುಟ 6ರಲ್ಲಿರುವ ಚಿತ್ರ]

ವೈವಿಧ್ಯತೆ ಹಾಗೂ ಮಾರ್ಪಾಟುಗಳು, ಚಾತುರ್ಯಭರಿತ ರಚನೆಯಲ್ಲಿರುವ ವೈವಿಧ್ಯತೆಗೆ ಪುರಾವೆಗಳಾಗಿವೆ

[ಪುಟ 7ರಲ್ಲಿರುವ ಚಿತ್ರಗಳು]

ರಚನಾವ್ಯವಸ್ಥೆಗೆ ಒಬ್ಬ ರಚಕನು ಇರಲೇಬೇಕು