ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕರುಣೆಯನ್ನು ಅಭ್ಯಾಸಿಸಿರಿ—ಹೇಗೆ?

ಕರುಣೆಯನ್ನು ಅಭ್ಯಾಸಿಸಿರಿ—ಹೇಗೆ?

ಕರುಣೆಯನ್ನು ಅಭ್ಯಾಸಿಸಿರಿ—ಹೇಗೆ?

“ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.”—ಗಲಾತ್ಯ 6:10.

ಧರ್ಮೋಪದೇಶಕನೊಬ್ಬನು ಯೇಸುವಿನೊಂದಿಗೆ ಮಾತಾಡುತ್ತಿದ್ದ ಸಮಯದಲ್ಲಿ “ನನ್ನ ನೆರೆಯವನು ಯಾರು?” ಎಂದು ಆತನನ್ನು ಪ್ರಶ್ನಿಸಿದನು. ಪ್ರತ್ಯುತ್ತರವಾಗಿ ಯೇಸು ಅವನಿಗೆ ಈ ಕೆಳಗಿನ ಸಾಮ್ಯವನ್ನು ತಿಳಿಸುತ್ತಾ ಅಂದದ್ದು: “ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನಿಂದ ಘಟ್ಟಾ ಇಳಿದು ಯೆರಿಕೋವಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು ಗಾಯವಾಗುವಷ್ಟು ಹೊಡೆದು ಅವನನ್ನು ಅರೆಜೀವಮಾಡಿ ಬಿಟ್ಟುಹೋದರು. ಆಗ ಹೇಗೋ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ವಾರೆಯಾಗಿ ಹೋದನು. ಅದೇ ರೀತಿಯಲ್ಲಿ ಒಬ್ಬ ಲೇವಿಯನೂ ಆ ಸ್ಥಳಕ್ಕೆ ಬಂದು ಅವನನ್ನು ಕಂಡು ವಾರೆಯಾಗಿ ಹೋದನು. ಆದರೆ ಒಬ್ಬ ಸಮಾರ್ಯದವನು ಪ್ರಯಾಣಮಾಡುತ್ತಾ ಅವನಿದ್ದಲ್ಲಿಗೆ ಬಂದು ಅವನನ್ನು ಕಂಡು ಕನಿಕರಿಸಿ ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಲ್ಲಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಕಟ್ಟಿ ತನ್ನ ಸ್ವಂತ ವಾಹನದ ಮೇಲೆ ಹತ್ತಿಸಿಕೊಂಡು ಚತ್ರಕ್ಕೆ ಕರಕೊಂಡು ಹೋಗಿ ಅವನನ್ನು ಆರೈಕೆಮಾಡಿದನು. ಮರುದಿನ ಅವನು ಎರಡು ಹಣಗಳನ್ನು ತೆಗೆದು ಚತ್ರದವನಿಗೆ ಕೊಟ್ಟು—ಇವನನ್ನು ಆರೈಕೆಮಾಡು; ಇದಕ್ಕಿಂತ ಹೆಚ್ಚಾಗಿ ಏನಾದರೂ ವೆಚ್ಚಮಾಡಿದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು ಅಂದನು. ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು ಎಂದು ಕೇಳಿದ್ದಕ್ಕೆ ಆ ಧರ್ಮೋಪದೇಶಕನು—ಅವನಿಗೆ ದಯತೋರಿಸಿದವನೇ ಅಂದನು.”—ಲೂಕ 10:25, 29-37ಎ.

2 ಆ ಗಾಯಗೊಂಡ ಮನುಷ್ಯನನ್ನು ಸಮಾರ್ಯದವನು ಆರೈಕೆ ಮಾಡಿದ ರೀತಿಯು ನಿಜ ಕರುಣೆ ಎಂದರೇನು ಎಂಬುದನ್ನು ಎಷ್ಟು ಸ್ಪಷ್ಟವಾಗಿ ಚಿತ್ರಿಸುತ್ತದೆ! ದಯೆ ಅಥವಾ ಕನಿಕರದಿಂದ ಪ್ರಚೋದಿತನಾದ ಆ ಸಮಾರ್ಯದವನು ಗಾಯಗೊಂಡ ಆ ವ್ಯಕ್ತಿಯ ಉಪಶಮನಕ್ಕಾಗಿ ಕ್ರಿಯೆಗೈದನು. ಅಷ್ಟಲ್ಲದೆ, ಆರೈಕೆಯ ಅಗತ್ಯವಿದ್ದ ಆ ಮನುಷ್ಯನು ಪರಕೀಯನಾದಾಗ್ಯೂ ಸಮಾರ್ಯದವನು ಅವನಿಗೆ ದಯೆತೋರಿಸಿದನು. ರಾಷ್ಟ್ರೀಯ, ಧಾರ್ಮಿಕ ಅಥವಾ ಸಾಂಸ್ಕೃತಿಕ ತಡೆಗಟ್ಟುಗಳಿಂದ ಕರುಣೆಯು ನಿರ್ಬಂಧಿಸಲ್ಪಡುವುದಿಲ್ಲ. ಕರುಣೆಯುಳ್ಳ ಆ ಸಮಾರ್ಯದವನ ದೃಷ್ಟಾಂತವನ್ನು ಕೊಟ್ಟಾದ ಮೇಲೆ ಯೇಸು ತನ್ನನ್ನು ಪ್ರಶ್ನಿಸಿದವನಿಗೆ ಸಲಹೆನೀಡಿದ್ದು: “ಹೋಗು, ನೀನೂ ಅದರಂತೆ ಮಾಡು.” (ಲೂಕ 10:37ಬಿ) ನಾವು ಕೂಡ ಆ ಸಲಹೆಯನ್ನು ಪಾಲಿಸುತ್ತಾ ಇತರರಿಗೆ ಕರುಣೆತೋರಿಸಲು ಪ್ರಯಾಸಪಡಬಹುದು. ಆದರೆ ಹೇಗೆ? ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಹೇಗೆ ಕರುಣೆಯನ್ನು ಅಭ್ಯಾಸಿಸಬಲ್ಲೆವು?

‘ಒಬ್ಬ ಸಹೋದರನಿಗೆ ಬಟ್ಟೆಯೂ ಇಲ್ಲದಿರುವಾಗ’

3 “ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ” ಎಂದನು ಅಪೊಸ್ತಲ ಪೌಲನು. (ಗಲಾತ್ಯ 6:10) ಆದುದರಿಂದ ನಂಬಿಕೆಯಲ್ಲಿ ಒಂದೇ ಮನೆಯವರಂತಿರುವವರ ಕಡೆಗೆ ನಾವು ಕರುಣೆಯುಳ್ಳ ಕ್ರಿಯೆಗಳಲ್ಲಿ ಸಮೃದ್ಧರಾಗಿರುವುದು ಹೇಗೆ ಎಂಬುದನ್ನು ಮೊದಲಾಗಿ ಪರಿಗಣಿಸೋಣ.

4 ಸತ್ಯ ಕ್ರೈಸ್ತರು ಒಬ್ಬರಿಗೊಬ್ಬರು ಕರುಣೆತೋರಿಸುವಂತೆ ಬುದ್ಧಿಹೇಳುತ್ತಾ ಶಿಷ್ಯ ಯಾಕೋಬನು ಬರೆದದ್ದು: “ಕರುಣೆತೋರಿಸದೆ ಇರುವವನಿಗೆ ನ್ಯಾಯತೀರ್ಮಾನದಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ.” (ಯಾಕೋಬ 2:13) ಈ ಪ್ರೇರಿತ ಮಾತುಗಳ ಪೂರ್ವಾಪರವು ನಾವು ಕರುಣೆಯನ್ನು ಅಭ್ಯಾಸಿಸುವ ಕೆಲವು ವಿಧಾನಗಳನ್ನು ತಿಳಿಸುತ್ತದೆ. ಉದಾಹರಣೆಗಾಗಿ ಯಾಕೋಬ 1:27ರಲ್ಲಿ ನಾವು ಓದುವುದು: “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ.” ಯಾಕೋಬ 2:15, 16 ಹೇಳುವುದು: “ಒಬ್ಬ ಸಹೋದರನಿಗೆ ಇಲ್ಲವೇ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದೆ ಇರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದದ್ದನ್ನು ಕೊಡದೆ—ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆ ತುಂಬಿಸಿಕೊಳ್ಳಿ ಎಂದು ಬರೀ ಮಾತು ಹೇಳಿದರೆ ಪ್ರಯೋಜನವೇನು?”

5 ಇತರರ ಕಡೆಗೆ ಚಿಂತೆಯನ್ನು ತೋರಿಸುವುದು ಮತ್ತು ಕೊರತೆಯಲ್ಲಿರುವವರಿಗೆ ಸಹಾಯಮಾಡುವುದು ನಿಜ ಧರ್ಮದ ಗುಣಲಕ್ಷಣವಾಗಿದೆ. ‘ಚಿಂತೆ ಮಾಡಬೇಡಿ, ಎಲ್ಲವೂ ಸರಿಹೋಗುವುದು’ ಎಂದು ಕೇವಲ ಮಾತಿನಿಂದ ಸಂತೈಸುವುದು ನಮ್ಮ ಆರಾಧನಾ ರೀತಿಯಲ್ಲ. ಬದಲಿಗೆ ಕೊರತೆಯಲ್ಲಿರುವವರ ಪರವಾಗಿ ಕ್ರಿಯೆಗೈಯುವಂತೆ ಕೋಮಲ ಕನಿಕರವು ನಮ್ಮನ್ನು ಪ್ರೇರಿಸುತ್ತದೆ. (1 ಯೋಹಾನ 3:17, 18) ಹೌದು, ಅಸ್ವಸ್ಥ ವ್ಯಕ್ತಿಗಾಗಿ ಒಂದು ಊಟ ತಯಾರಿಸಿ ಕೊಡುವುದು, ಒಬ್ಬ ವೃದ್ಧ ವ್ಯಕ್ತಿಗೆ ಮನೆಗೆಲಸದಲ್ಲಿ ನೆರವಾಗುವುದು, ಕ್ರೈಸ್ತ ಕೂಟಗಳಿಗೆ ಹೋಗಲು ಅಗತ್ಯವಿದ್ದವರಿಗೆ ವಾಹನಾದಿಗಳನ್ನು ಒದಗಿಸುವುದು ಮತ್ತು ಬಿಗಿಮುಷ್ಟಿಯ ಜಿಪುಣರಾಗಿರದೆ ಕೊರತೆಯಲ್ಲಿರುವವರಿಗೆ ಉದಾರವಾಗಿ ನೆರವಾಗುವುದೇ ಮುಂತಾದ ಕರುಣೆಯ ಕ್ರಿಯೆಗಳಲ್ಲಿ ನಾವು ಸಮೃದ್ಧರಾಗಿರಬೇಕು.—ಧರ್ಮೋಪದೇಶಕಾಂಡ 15:7-10.

6 ವೃದ್ಧಿಯಾಗುತ್ತಿರುವ ಕ್ರೈಸ್ತ ಸಭೆಯ ಸದಸ್ಯರಿಗೆ ಭೌತಿಕ ಸಹಾಯವನ್ನು ಮಾಡುವುದು ಪ್ರಾಮುಖ್ಯವಾದರೂ ಅವರಿಗೆ ಆಧ್ಯಾತ್ಮಿಕ ಸಹಾಯವನ್ನು ಕೊಡುವುದು ಇನ್ನೂ ಹೆಚ್ಚು ಪ್ರಾಮುಖ್ಯವಾಗಿದೆ. “ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ” ಎಂಬ ಬುದ್ಧಿವಾದವನ್ನು ನಮಗೆ ಕೊಡಲಾಗಿದೆಯಲ್ಲಾ. (1 ಥೆಸಲೊನೀಕ 5:14) “ವೃದ್ಧ ಸ್ತ್ರೀಯರು . . . ಸದ್ಬೋಧನೆ ಹೇಳುವವರೂ” ಆಗಿರಬೇಕೆಂದು ಪ್ರೋತ್ಸಾಹಿಸಲಾಗಿದೆ. (ತೀತ 2:3) ಕ್ರೈಸ್ತ ಮೇಲ್ವಿಚಾರಕರ ಕುರಿತು ಬೈಬಲು ಹೇಳುವುದು: “[ಪ್ರತಿಯೊಬ್ಬನು] ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಇರುವನು.”—ಯೆಶಾಯ 32:2.

7 ಒಂದನೆಯ ಶತಮಾನದ ಸಭೆಗಳು ವಿಧವೆಯರಿಗೆ, ಅನಾಥರಿಗೆ ಮತ್ತು ಸ್ಥಳಿಕವಾಗಿ ಸಹಾಯ ಹಾಗೂ ಪ್ರೋತ್ಸಾಹದ ಅಗತ್ಯವಿರುವವರಿಗೆ ಸಹಾಯಕೊಟ್ಟವು ಮಾತ್ರವಲ್ಲದೆ ಬೇರೆ ಸ್ಥಳಗಳಲ್ಲಿದ್ದ ವಿಶ್ವಾಸಿಗಳಿಗಾಗಿಯೂ ಕೆಲವೊಮ್ಮೆ ಪರಿಹಾರ ಕ್ರಮಗಳನ್ನು ಏರ್ಪಡಿಸಿದವು. ಉದಾಹರಣೆಗಾಗಿ, ಪ್ರವಾದಿಯಾದ ಅಗಬನು “ಲೋಕಕ್ಕೆಲ್ಲಾ ದೊಡ್ಡ ಕ್ಷಾಮವು ಬರುವುದು” ಎಂದು ಪ್ರವಾದಿಸಿದಾಗ, ಸಿರಿಯಾದ ಅಂತಿಯೋಕ್ಯದಲ್ಲಿದ್ದ ಶಿಷ್ಯರಲ್ಲಿ “ಪ್ರತಿಯೊಬ್ಬರು ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮತಮ್ಮ ಶಕ್ತ್ಯನುಸಾರ ದ್ರವ್ಯ ಸಹಾಯ ಮಾಡಬೇಕೆಂದು ನಿಶ್ಚಯಿಸಿಕೊಂಡರು.” ಆ ಸಹಾಯವನ್ನು “ಬಾರ್ನಬ ಸೌಲರ ಕೈಯಿಂದ” ಅಲ್ಲಿರುವ ಹಿರಿಯರಿಗೆ ಕಳುಹಿಸಲಾಯಿತು. (ಅ. ಕೃತ್ಯಗಳು 11:28-30) ಇಂದಿನ ಕುರಿತೇನು? ಬಿರುಗಾಳಿ, ಭೂಕಂಪ ಅಥವಾ ಸುನಾಮಿಗಳಂಥ ನೈಸರ್ಗಿಕ ವಿಪತ್ತುಗಳಿಂದ ಬಾಧಿಸಲ್ಪಟ್ಟಿರಬಹುದಾದ ನಮ್ಮ ಸಹೋದರರ ಪರಾಮರಿಕೆಗಾಗಿ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಪರಿಹಾರ ಕಮಿಟಿಗಳನ್ನು ಏರ್ಪಡಿಸಿರುತ್ತದೆ. (ಮತ್ತಾಯ 24:45) ಈ ಏರ್ಪಾಡಿಗೆ ಸಹಕಾರವನ್ನು ತೋರಿಸುತ್ತಾ ನಮ್ಮ ಸಮಯ, ಪ್ರಯತ್ನ ಮತ್ತು ಸಂಪನ್ಮೂಲಗಳನ್ನು ಕಾಣಿಕೆಯಾಗಿ ಕೊಡಲು ನಾವಾಗಿಯೇ ಮುಂದೆಬರುವುದು ಕರುಣೆಯನ್ನು ತೋರಿಸುವ ಉತ್ತಮ ವಿಧಾನವಾಗಿದೆ.

‘ನೀವು ಪಕ್ಷಪಾತ ತೋರಿಸುವವರಾಗಿದ್ದರೆ’

8 ಕರುಣೆಗೆ ಮತ್ತು ಪ್ರೀತಿ ಎಂಬ “ರಾಜಾಜ್ಞೆಗೆ” ವಿರುದ್ಧವಾಗಿರುವ ಒಂದು ಗುಣಲಕ್ಷಣದ ಕುರಿತು ಎಚ್ಚರಿಸುತ್ತಾ ಯಾಕೋಬನು ಬರೆದದ್ದು: “ಪಕ್ಷಪಾತ ತೋರಿಸುವವರಾಗಿದ್ದರೆ ನೀವು ಪಾಪಮಾಡುವವರಾಗಿದ್ದು ಅಪರಾಧಿಗಳೆಂದು ಧರ್ಮಶಾಸ್ತ್ರದಿಂದ ತೀರ್ಮಾನಿಸಲ್ಪಡುತ್ತೀರಿ.” (ಯಾಕೋಬ 2:8, 9) ಶ್ರೀಮಂತರು ಅಥವಾ ಪ್ರಮುಖ ವ್ಯಕ್ತಿಗಳಾಗಿರುವ ಕಾರಣ ಒಬ್ಬರಿಗೆ ಅನುಚಿತ ದಯೆಯನ್ನು ತೋರಿಸುವುದು ನಮ್ಮನ್ನು “ಬಡವನ ಮೊರೆಗೆ” ಕಡಿಮೆ ಪ್ರತಿಕ್ರಿಯೆ ತೋರಿಸುವವರನ್ನಾಗಿ ಮಾಡಬಲ್ಲದು. (ಜ್ಞಾನೋಕ್ತಿ 21:13) ಪಕ್ಷಪಾತವು ನಮ್ಮನ್ನು ಕರುಣೆ ತೋರಿಸುವುದರಿಂದ ತಡೆಯುತ್ತದೆ. ಇತರರನ್ನು ನಿಷ್ಪಕ್ಷಪಾತದಿಂದ ಉಪಚರಿಸುವ ಮೂಲಕವಾದರೋ ನಾವು ಕರುಣೆಯನ್ನು ಅಭ್ಯಾಸಿಸುತ್ತೇವೆ.

9 ನಿಷ್ಪಕ್ಷಪಾತಿಗಳಾಗಿ ಇರಬೇಕೆಂಬುದರ ಅರ್ಥವು ಯಾರಿಗಾದರೂ ವಿಶೇಷ ಪರಿಗಣನೆಯನ್ನು ನಾವು ತೋರಿಸಲೇ ಬಾರದು ಎಂದಾಗುತ್ತದೋ? ಖಂಡಿತವಾಗಿಯೂ ಇಲ್ಲ. ಅಪೊಸ್ತಲ ಪೌಲನು ತನ್ನ ಜೊತೆಕೆಲಸಗಾರನಾದ ಎಪಫ್ರೊದೀತನ ಕುರಿತು ಫಿಲಿಪ್ಪಿಯದ ಕ್ರೈಸ್ತರಿಗೆ ಬರೆದದ್ದು: “ಅಂಥವರನ್ನು ಮಾನ್ಯರೆಂದೆಣಿಸಿರಿ.” ಯಾಕೆ? ಯಾಕೆಂದರೆ “ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕಡಿಮೆಯಾದದ್ದನ್ನು ಪೂರ್ತಿಮಾಡುವದಕ್ಕಾಗಿ ಅವನು ಜೀವದ ಆಶೆಯನ್ನು ಲಕ್ಷ್ಯಮಾಡದೆ ಕ್ರಿಸ್ತನ ಕೆಲಸದ ನಿಮಿತ್ತ ಸಾಯುವ ಹಾಗಿದ್ದನೆಂದು ನೀವು ತಿಳಿದು . . . ಸೇರಿಸಿಕೊಳ್ಳಿರಿ.” (ಫಿಲಿಪ್ಪಿ 2:25, 29, 30) ಎಪಫ್ರೊದೀತನು ಮಾಡಿದ ಆ ನಂಬಿಗಸ್ತ ಸೇವೆಯು ವಿಶೇಷವಾದ ಮನ್ನಣೆಗೆ ಅರ್ಹವಾಗಿತ್ತು. ಅದಲ್ಲದೆ, 1 ತಿಮೊಥೆಯ 5:17ರಲ್ಲಿ ನಾವು ಓದುವುದು: “ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು, ಅವರೊಳಗೆ ವಿಶೇಷವಾಗಿ ಪ್ರಸಂಗದಲ್ಲಿಯೂ ಉಪದೇಶದಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು.” ಉತ್ತಮವಾದ ಆಧ್ಯಾತ್ಮಿಕ ಗುಣಗಳು ಸಹ ಮನ್ನಣೆಗೆ ಅರ್ಹವಾಗಿವೆ. ಅಂಥ ಪರಿಗಣನೆಯನ್ನು ತೋರಿಸುವುದು ಪಕ್ಷಪಾತವಾಗಿರುವುದಿಲ್ಲ.

‘ಮೇಲಣಿಂದ ಬರುವ ವಿವೇಕವು ಕರುಣೆಯಿಂದ ತುಂಬಿರುವಂಥದು’

10 ನಾಲಿಗೆಯ ಕುರಿತಾಗಿ ಶಿಷ್ಯ ಯಾಕೋಬನು ಹೇಳಿದ್ದು: “ನಾಲಿಗೆ . . . ಸುಮ್ಮನಿರಲಾರದ ಕೆಡುಕಾಗಿದೆ; ಮರಣಕರವಾದ ವಿಷದಿಂದ ತುಂಬಿ ಇದೆ. ನಾಲಿಗೆಯಿಂದ ತಂದೆಯಾದ ಕರ್ತನನ್ನು ಕೊಂಡಾಡುತ್ತೇವೆ; ಅದರಿಂದಲೇ ದೇವರ ಹೋಲಿಕೆಗೆ ಸರಿಯಾಗಿ ಉಂಟುಮಾಡಲ್ಪಟ್ಟ ಮನುಷ್ಯರನ್ನು ಶಪಿಸುತ್ತೇವೆ. ಅದೇ ಬಾಯಿಂದ ಸ್ತುತಿ ಶಾಪ ಎರಡೂ ಬರುತ್ತವೆ.” ಈ ಪೂರ್ವಾಪರದಲ್ಲಿ ಯಾಕೋಬನು ಕೂಡಿಸಿದ್ದು: “ತೀಕ್ಷ್ಣವಾದ ಮತ್ಸರವೂ ಪಕ್ಷಭೇದವೂ ನಿಮ್ಮ ಹೃದಯದೊಳಗೆ ಇರುವಲ್ಲಿ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ. ಅದು ಮೇಲಣಿಂದ ಬಂದ ಜ್ಞಾನವಲ್ಲ; ಅದು ಭೂಸಂಬಂಧವಾದದ್ದು, ಪ್ರಾಕೃತಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು. ಮತ್ಸರವೂ ಪಕ್ಷಭೇದವೂ ಇರುವ ಕಡೆ ಗಲಿಬಿಲಿಯೂ ಸಕಲವಿಧ ನೀಚಕೃತ್ಯಗಳೂ ಇರುವವು. ಆದರೆ ಮೇಲಣಿಂದ ಬರುವ ಜ್ಞಾನವು [ವಿವೇಕವು] ಮೊದಲು ಪರಿಶುದ್ಧವಾದದ್ದು, ಆ ಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದು, ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿರುವಂಥದು ಆಗಿದೆ; ಅದರಲ್ಲಿ ಚಂಚಲವೂ ಕಪಟವೂ ಇಲ್ಲ.”—ಯಾಕೋಬ 3:8-10ಎ, 14-17.

11 ಆದುದರಿಂದ ನಾಲಿಗೆಯನ್ನು ನಾವು ಉಪಯೋಗಿಸುವ ರೀತಿಯು, ನಮ್ಮಲ್ಲಿ ‘ಕರುಣೆ ತುಂಬಿರುವಂಥ’ ವಿವೇಕವು ಇದೆಯೋ ಇಲ್ಲವೋ ಎಂಬುದನ್ನು ಸೂಚಿಸುತ್ತದೆ. ನಾವು ಮತ್ಸರದಿಂದಾಗಲಿ ಪಕ್ಷಭೇದದಿಂದಾಗಲಿ ಹೊಗಳಿಕೊಳ್ಳುವವರೂ ಸುಳ್ಳಾಡುವವರೂ ಅಥವಾ ಹಾನಿಕರವಾದ ಹರಟೆಮಾತನ್ನು ಹಬ್ಬಿಸುವವರೂ ಆಗಿದ್ದರೆ ಆಗೇನು? ಕೀರ್ತನೆ 94:4 ಹೇಳುವುದು: “ಕೆಡುಕರೆಲ್ಲರು ಉಬ್ಬಿಕೊಂಡು ಅಹಂಕಾರವನ್ನು ಕಕ್ಕುತ್ತಾರೆ.” ಹಾನಿಕರವಾದ ಹರಟೆಮಾತು ನಿರಪರಾಧಿಯಾದ ಸಜ್ಜನನೊಬ್ಬನ ಒಳ್ಳೇ ಹೆಸರನ್ನು ಎಷ್ಟು ಬೇಗನೆ ಕೆಡಿಸಿಹಾಕಬಲ್ಲದು! (ಕೀರ್ತನೆ 64:2-4) ಅಷ್ಟಲ್ಲದೆ ‘ಅಸತ್ಯವನ್ನೇ ಆಡುವ ಸುಳ್ಳುಸಾಕ್ಷಿಯು’ ಮಾಡಸಾಧ್ಯವಿರುವ ಅಪಾರ ಹಾನಿಯ ಕುರಿತಾಗಿ ತುಸು ಯೋಚಿಸಿರಿ. (ಜ್ಞಾನೋಕ್ತಿ 14:5; 1 ಅರಸು 21:7-13) ನಾಲಿಗೆಯ ದುರುಪಯೋಗದ ಬಗ್ಗೆ ಚರ್ಚಿಸಿದ ಬಳಿಕ ಯಾಕೋಬನು ಹೇಳುವುದು: “ನನ್ನ ಸಹೋದರರೇ, ಹೀಗಿರುವದು ಯೋಗ್ಯವಲ್ಲ.” (ಯಾಕೋಬ 3:10ಬಿ) ನಾವು ನಮ್ಮ ನಾಲಿಗೆಯನ್ನು ಶುದ್ಧವೂ ಸಮಾಧಾನಕರವೂ ನ್ಯಾಯಸಮ್ಮತವೂ ಆದ ರೀತಿಯಲ್ಲಿ ಉಪಯೋಗಿಸುವಂತೆ ನಿಜ ಕರುಣೆಯು ಅವಶ್ಯಪಡಿಸುತ್ತದೆ. ಯೇಸು ಅಂದದ್ದು: “ನಾನು ನಿಮಗೆ ಹೇಳುವದೇನಂದರೆ ಮನುಷ್ಯರು ಸುಮ್ಮನೆ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರಕೊಡಬೇಕು.” (ಮತ್ತಾಯ 12:36) ನಮ್ಮ ನಾಲಿಗೆಯ ಉಪಯೋಗದಲ್ಲಿ ನಾವು ಕರುಣೆಯುಳ್ಳವರಾಗಿರುವುದು ಅದೆಷ್ಟು ಮಹತ್ವವುಳ್ಳದ್ದಾಗಿದೆ!

“ಮನುಷ್ಯರ ಪಾಪಗಳನ್ನು ಕ್ಷಮಿಸಿರಿ”

12 ಯೇಸುವಿನ ಈ ಕೆಳಗಿನ ಸಾಮ್ಯವು ನಾವು ಕರುಣೆ ತೋರಿಸಬೇಕಾದ ಇನ್ನೊಂದು ವಿಧವನ್ನು ತೋರಿಸುತ್ತದೆ. ಒಬ್ಬ ಸೇವಕನು ತನ್ನ ಒಡೆಯನಾಗಿದ್ದ ಒಬ್ಬ ಅರಸನಿಗೆ 6,00,00,000 ದಿನಾರಿ ಸಾಲಸಲ್ಲಿಸಬೇಕಾಗಿತ್ತು. ಸಾಲ ತೀರಿಸಲು ಅವನಲ್ಲಿ ಏನೂ ಇಲ್ಲದಿರಲಾಗಿ ಆ ಸೇವಕನು ತನಗೆ ಕರುಣೆ ತೋರಿಸುವಂತೆ ಒಡೆಯನನ್ನು ಬೇಡಿಕೊಂಡನು. ಆಗ ಒಡೆಯನು “ಕನಿಕರಪಟ್ಟು” ಸೇವಕನ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು. ಆದರೆ ಆ ಸೇವಕನು ಹೊರಗೆ ಹೋದಾಗ ತನಗೆ ಕೇವಲ ನೂರು ದಿನಾರಿ ಕೊಡಬೇಕಾಗಿದ್ದ ತನ್ನ ಜೊತೆ ಸೇವಕನನ್ನು ಕಂಡು ಅವನು ಸಾಲತೀರಿಸದೆ ಹೋದಕಾರಣ ಅವನನ್ನು ಕರುಣೆಯಿಲ್ಲದೆ ಹೊಡೆದು ಸೆರೆಮನೆಗೆ ಹಾಕಿಸಿದನು. ನಡೆದ ಸಂಗತಿಯೆಲ್ಲ ಒಡೆಯನಿಗೆ ತಿಳಿದುಬಂದಾಗ ಅವನು ತಾನು ಕ್ಷಮಿಸಿದ್ದ ಸೇವಕನನ್ನು ಕರೇಕಳುಹಿಸಿ, “ಎಲಾ ನೀಚನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ಆ ಸಾಲವನ್ನೆಲ್ಲಾ ನಾನು ಬಿಟ್ಟುಬಿಟ್ಟೆನಲ್ಲಾ; ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೇಸೇವಕನನ್ನು ಕರುಣಿಸಬಾರದಾಗಿತ್ತೇ” ಎಂದು ಹೇಳಿ ಆ ಒಡೆಯನು ಅವನನ್ನು ಸೆರೆಮನೆಯ ಅಧಿಕಾರಿಗಳ ಕೈಗೆ ಒಪ್ಪಿಸಿದನು. ಯೇಸು ತನ್ನ ಸಾಮ್ಯವನ್ನು ಮುಗಿಸುತ್ತಾ ಅಂದದ್ದು: “ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನಿಗೆ ಮನಃಪೂರ್ವಕವಾಗಿ ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು.”—ಮತ್ತಾಯ 18:23-35.

13 ಬೇರೆಯವರನ್ನು ಕ್ಷಮಿಸಲು ಸಿದ್ಧಮನಸ್ಸನ್ನು ತೋರಿಸುವುದು ಕರುಣೆಯಲ್ಲಿ ಸೇರಿರುತ್ತದೆ ಎಂಬುದನ್ನು ಮೇಲೆ ತಿಳಿಸಿದ ಸಾಮ್ಯವು ಎಷ್ಟು ಬಲವತ್ತಾಗಿ ತೋರಿಸುತ್ತದೆ! ನಮ್ಮ ಪಾಪಗಳ ಬಹು ದೊಡ್ಡ ಸಾಲವನ್ನು ಯೆಹೋವನು ಕ್ಷಮಿಸಿದ್ದಾನಲ್ಲಾ. ಹಾಗಿರುವಾಗ ನಾವು ಸಹ “ಜನರ ತಪ್ಪುಗಳನ್ನು ಕ್ಷಮಿಸ”ಬೇಡವೇ? (ಮತ್ತಾಯ 6:14, 15) ಯೇಸು ಆ ಕರುಣಾರಹಿತ ಸೇವಕನ ಕುರಿತ ಸಾಮ್ಯವನ್ನು ತಿಳಿಸುವ ಮುಂಚೆ, ಪೇತ್ರನು ಅವನನ್ನು ಕೇಳಿದ್ದು: “ಸ್ವಾಮೀ, ನನ್ನ ಸಹೋದರನು ನನಗೆ ತಪ್ಪುಮಾಡುತ್ತಾ ಬಂದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು? ಏಳು ಸಾರಿಯೋ?” ಯೇಸು ಉತ್ತರಿಸಿದ್ದು: “ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.” (ಮತ್ತಾಯ 18:21, 22) ಹೌದು, ಕರುಣೆಯುಳ್ಳ ವ್ಯಕ್ತಿಯು “ಏಳೆಪ್ಪತ್ತು ಸಾರಿ” ಕ್ಷಮಿಸಲು ಸಿದ್ಧನಾಗಿರುತ್ತಾನೆ ಅಂದರೆ ಅವನು ತೋರಿಸುವ ಕ್ಷಮೆಗೆ ಮಿತಿಯಿಲ್ಲ.

14 ಕರುಣೆಯನ್ನು ಪ್ರದರ್ಶಿಸುವ ಇನ್ನೊಂದು ವಿಧವನ್ನು ತೋರಿಸುತ್ತಾ ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಅಂದದ್ದು: “ತೀರ್ಪುಮಾಡ ಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು; . . . ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ? ನೀನು ನಿನ್ನ ಸಹೋದರನಿಗೆ—ನಿನ್ನ ಕಣ್ಣಿನೊಳಗಿಂದ ರವೆಯನ್ನು ತೆಗೆಯುತ್ತೇನೆ ಬಾ ಎಂದು ಹೇಳುವದು ಹೇಗೆ? ನಿನ್ನ ಕಣ್ಣಿನಲ್ಲಿ ತೊಲೆಯದೆಯಲ್ಲಾ.” (ಮತ್ತಾಯ 7:1-4) ಆದುದರಿಂದ ಇತರರ ಕುಂದುಕೊರತೆಗಳ ಕುರಿತು ಅವರನ್ನು ಕಟುವಾಗಿ ಟೀಕಿಸದೆ ಅಥವಾ ಅವರಿಗೆ ತೀರ್ಪುಮಾಡದೆ ಅವುಗಳನ್ನು ಸಹಿಸಿಕೊಳ್ಳುವ ಮೂಲಕ ನಾವು ದಿನದಿನವೂ ಕರುಣೆಯನ್ನು ಅಭ್ಯಾಸಿಸಬಲ್ಲೆವು.

“ಎಲ್ಲರಿಗೆ ಒಳ್ಳೇದನ್ನು ಮಾಡೋಣ”

15 ಬೈಬಲಿನ ಯಾಕೋಬ ಪುಸ್ತಕವು ಜೊತೆವಿಶ್ವಾಸಿಗಳ ನಡುವೆ ಕರುಣೆ ತೋರಿಸುವುದನ್ನು ಒತ್ತಿಹೇಳುತ್ತದಾದರೂ, ಕರುಣೆಯ ಕೃತ್ಯಗಳು ಕ್ರೈಸ್ತ ಸಭೆಯ ಒಳಗಿದ್ದವರಿಗೆ ಮಾತ್ರ ಸೀಮಿತವಾಗಿವೆ ಎಂದು ಇದರ ಅರ್ಥವಲ್ಲ. “ಯೆಹೋವನು ಸರ್ವೋಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ” ಎಂದು ಕೀರ್ತನೆ 145:9 ಹೇಳುತ್ತದೆ. ಆದದರಿಂದ “ಆತನನ್ನು ಅನುಸರಿಸುವವರಾಗಿರಿ” ಮತ್ತು “ಎಲ್ಲರಿಗೆ ಒಳ್ಳೇದನ್ನು” ಮಾಡಿರಿ ಎಂಬ ಬುದ್ಧಿವಾದವು ನಮಗೆ ಕೊಡಲಾಗಿದೆ. (ಎಫೆಸ 5:1; ಗಲಾತ್ಯ 6:10) ನಾವು “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ” ಪ್ರೀತಿಸುವುದಿಲ್ಲವಾದರೂ ಲೋಕದಲ್ಲಿರುವ ಜನರ ಅಗತ್ಯತೆಗಳಿಗೆ ಸ್ಪಂದಿಸುತ್ತೇವೆ.—1 ಯೋಹಾನ 2:15.

16 ‘ಮುಂಗಾಣಲಾಗದ ಘಟನೆಗಳಿಗೆ’ ಅಥವಾ ವಿಪತ್ಕಾರಕ ಸನ್ನಿವೇಶಗಳಿಗೆ ಬಲಿಯಾದವರಿಗೆ ಕ್ರೈಸ್ತರಾದ ನಾವು ನಮ್ಮಿಂದ ಕೈಲಾಗುವ ಯಾವುದೇ ಸಹಾಯವನ್ನು ಮಾಡಲು ಹಿಂಜರಿಯುವುದಿಲ್ಲ ಖಂಡಿತ. (ಪ್ರಸಂಗಿ 9:11, NW) ಆದರೆ ನಾವೇನು ಮಾಡಬಲ್ಲೆವು ಮತ್ತು ಎಷ್ಟನ್ನು ಮಾಡಬಲ್ಲೆವು ಎಂಬುದು ನಮ್ಮ ಪರಿಸ್ಥಿತಿಗಳ ಮೇಲೆ ಹೊಂದಿಕೊಂಡಿದೆ. (ಜ್ಞಾನೋಕ್ತಿ 3:27) ಪೀಡಿತರಾದ ಇತರರಿಗೆ ಭೌತಿಕ ಸಹಾಯವನ್ನು ನೀಡುವಾಗ, ಸತ್ಕಾರ್ಯವಾಗಿ ತೋರುವ ಕ್ರಿಯೆಯು ಅವರಲ್ಲಿ ಮೈಗಳ್ಳತನವನ್ನು ಪ್ರವರ್ಧಿಸದಂತೆ ನಾವು ಜಾಗರೂಕತೆಯಿಂದಿರಬೇಕು. (ಜ್ಞಾನೋಕ್ತಿ 20:1, 4; 2 ಥೆಸಲೊನೀಕ 3:10-12) ಆದಕಾರಣ, ಒಂದು ನಿಜ ಕರುಣಾಕೃತ್ಯವು, ಕನಿಕರ ಅಥವಾ ಅನುಕಂಪವೆಂಬ ಕೋಮಲ ಭಾವನೆಗಳೊಂದಿಗೆ ಯೋಗ್ಯ ವಿವೇಚನೆಯನ್ನೂ ಕೂಡಿಸುವ ಒಂದು ಪ್ರತಿಕ್ರಿಯೆಯಾಗಿದೆ.

17 ಕ್ರೈಸ್ತ ಸಭೆಯ ಹೊರಗಿನ ಜನರಿಗೆ ಕರುಣೆಯನ್ನು ತೋರಿಸುವ ಅತ್ಯುತ್ತಮ ವಿಧವು ಅವರೊಂದಿಗೆ ಬೈಬಲ್‌ ಸತ್ಯವನ್ನು ಹಂಚಿಕೊಳ್ಳುವುದೇ. ಯಾಕೆ? ಯಾಕೆಂದರೆ ಮಾನವಕುಲದ ಹೆಚ್ಚಿನ ಜನರು ಇಂದು ಆಧ್ಯಾತ್ಮಿಕ ಕತ್ತಲೆಯಲ್ಲಿ ತಡಕಾಡುತ್ತಿದ್ದಾರೆ. ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಯಾವ ದಾರಿಯೂ ತೋರುತ್ತಿಲ್ಲ ಮಾತ್ರವಲ್ಲ ಭವಿಷ್ಯತ್ತಿಗಾಗಿ ಯಾವುದೇ ನಿಜ ನಿರೀಕ್ಷೆಯೂ ಅವರಿಗಿಲ್ಲ. ಆದುದರಿಂದ ಹೆಚ್ಚಿನ ಜನರು ‘ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರೆ.’ (ಮತ್ತಾಯ 9:36) ದೇವರ ವಾಕ್ಯದ ಸಂದೇಶವು ‘ಅವರ ಕಾಲಿಗೆ ದೀಪ’ ಆಗಿದ್ದು ಜೀವನದ ಸಮಸ್ಯೆಗಳನ್ನು ನಿಭಾಯಿಸಲಿಕ್ಕೆ ಅವರಿಗೆ ನೆರವಾಗಬಲ್ಲದು. ಅದು ‘ಅವರ ಹಾದಿಗೆ ಬೆಳಕೂ’ ಆಗಿರಬಲ್ಲದು ಹೇಗಂದರೆ ಭವಿಷ್ಯತ್ತಿಗಾಗಿ ದೇವರ ಉದ್ದೇಶವನ್ನು ಮುಂತಿಳಿಸುತ್ತಾ ಒಂದು ಭವ್ಯ ನಿರೀಕ್ಷೆಗಾಗಿ ಬೈಬಲ್‌ ಅವರಿಗೆ ಆಧಾರವನ್ನು ಕೊಡುತ್ತದೆ. (ಕೀರ್ತನೆ 119:105) ಆ ಆಶ್ಚರ್ಯಕರ ಸತ್ಯ ಸಂದೇಶವನ್ನು ತೀವ್ರ ಅಗತ್ಯವಿರುವ ಜನರಿಗೆ ತಿಳಿಸುವುದು ಎಂಥ ಸುಯೋಗವಾಗಿದೆ! “ಮಹಾ ಸಂಕಟದ” ಆಗಮನವು ಈಗ ಬಹು ಹತ್ತಿರವಾಗಿರುವುದರಿಂದ, ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವಿಕೆಯ ಕೆಲಸದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಸಮಯವು ಇದೇ. (ಮತ್ತಾಯ 24:3-8, 21, 22, 36-41; 28:19, 20) ಇದರಷ್ಟು ಪ್ರಾಮುಖ್ಯವಾದ ಕರುಣಾ ಕಾರ್ಯವು ಬೇರೊಂದಿಲ್ಲ.

“ಒಳಗಿರುವಂಥದ್ದನ್ನು ದಾನಾಕೊಡಿರಿ”

18 “ಒಳಗಿರುವಂಥದನ್ನು ದಾನಾಕೊಡಿರಿ [ಮೂಲ: ಕರುಣಾದಾನವಾಗಿ ಕೊಡಿರಿ]” ಎಂದು ಯೇಸು ಹೇಳಿದನು. (ಲೂಕ 11:41) ಒಂದು ಸತ್ಕ್ರಿಯೆಯು ನಿಜ ಕರುಣೆಯ ಕೃತ್ಯವಾಗಿರಬೇಕಾದರೆ ಅದು ನಮ್ಮ ಒಳಗಿನಿಂದ ಬರುವ ಕೊಡುಗೆ ಆಗಿರಬೇಕು ಅಂದರೆ ಪ್ರೀತಿಯುಳ್ಳ ಸಂತೋಷದ ಹೃದಯದಿಂದ ಅದು ಹೊರಹೊಮ್ಮಬೇಕು. (2 ಕೊರಿಂಥ 9:7) ನಿರ್ದಯತೆ, ಸ್ವಾರ್ಥಭಾವ ಹಾಗೂ ಇತರರ ಕಷ್ಟಾನುಭವ ಮತ್ತು ಸಮಸ್ಯೆಗಳ ಬಗ್ಗೆ ಸಾಮಾನ್ಯವಾಗಿ ಯಾವ ಪರಿವೆಯೂ ಇಲ್ಲದ ಲೋಕದಲ್ಲಿ ಅಂಥ ಕರುಣೆಯು ಎಷ್ಟು ಚೈತನ್ಯದಾಯಕ!

19 ಆದುದರಿಂದ ನಮ್ಮ ಜೀವನದಲ್ಲಿ ಕರುಣೆಯನ್ನು ಹೆಚ್ಚೆಚ್ಚಾಗಿ ತೋರಿಸಲು ಕಾರ್ಯನಡಿಸೋಣ. ನಾವೆಷ್ಟು ಹೆಚ್ಚು ಕರುಣೆಯನ್ನು ತೋರಿಸುತ್ತೇವೊ ಅಷ್ಟು ಹೆಚ್ಚು ದೇವರನ್ನು ಅನುಸರಿಸುವವರಾಗುತ್ತೇವೆ. ಇದು ನಿಜವಾಗಿಯೂ ಒಂದು ಅರ್ಥಭರಿತವೂ ಸಂತೃಪ್ತಿಕರವೂ ಆದ ಜೀವನವನ್ನು ನಡಿಸುವಂತೆ ನಮಗೆ ಸಹಾಯಮಾಡುತ್ತದೆ.—ಮತ್ತಾಯ 5:7. (w07 9/15)

ನೀವೇನನ್ನು ಕಲಿತಿರಿ?

• ಜೊತೆವಿಶ್ವಾಸಿಗಳಿಗೆ ಕರುಣೆದೋರುವುದು ಯಾಕೆ ವಿಶೇಷ ಮಹತ್ವದ್ದಾಗಿದೆ?

• ಕ್ರೈಸ್ತ ಸಭೆಯ ಒಳಗೆ ಕರುಣೆಯನ್ನು ನಾವು ಹೇಗೆ ಅಭ್ಯಾಸಿಸಬಲ್ಲೆವು?

• ಸಭೆಯ ಹೊರಗಿನ ಜನರಿಗೆ ಒಳ್ಳೇದನ್ನು ಮಾಡಲು ನಾವು ಹೇಗೆ ಕಾರ್ಯನಡಿಸಬಹುದು?

[ಅಧ್ಯಯನ ಪ್ರಶ್ನೆಗಳು]

1, 2. ಸಮಾರ್ಯದವನ ಸಾಮ್ಯವು ಕರುಣೆಯ ಕುರಿತು ನಮಗೆ ಏನನ್ನು ಕಲಿಸುತ್ತದೆ?

3, 4. ಕ್ರೈಸ್ತ ಸಭೆಯ ಒಳಗೆ ಕರುಣೆಯನ್ನು ಅಭ್ಯಾಸಿಸುವುದರ ಕುರಿತು ನಾವು ವಿಶೇಷ ಗಮನಕೊಡಬೇಕು ಏಕೆ?

5, 6. ಸ್ಥಳಿಕ ಸಭೆಯೊಂದಿಗೆ ಸಹವಾಸಿಸುವಾಗ ಕರುಣೆಯ ಕ್ರಿಯೆಗಳಲ್ಲಿ ನಾವು ಹೇಗೆ ಸಮೃದ್ಧರಾಗಿರಬಹುದು?

7. ಕರುಣೆಯನ್ನು ತೋರಿಸುವ ಕುರಿತು ಸಿರಿಯದ ಅಂತಿಯೋಕ್ಯದಲ್ಲಿದ್ದ ಶಿಷ್ಯರಿಂದ ನಾವೇನನ್ನು ಕಲಿಯುತ್ತೇವೆ?

8. ಪಕ್ಷಪಾತವು ಕರುಣೆಯ ವಿರುದ್ಧವಾಗಿ ಹೇಗೆ ಕಾರ್ಯನಡಿಸುತ್ತದೆ?

9. ಅರ್ಹರಾಗಿರುವವರಿಗೆ ವಿಶೇಷವಾದ ಪರಿಗಣನೆಯನ್ನು ತೋರಿಸುವುದು ತಪ್ಪಲ್ಲವೇಕೆ?

10. ನಮ್ಮ ನಾಲಿಗೆಯನ್ನು ನಾವು ಹತೋಟಿಯಲ್ಲಿಡಬೇಕು ಯಾಕೆ?

11. ನಾಲಿಗೆಯನ್ನು ಉಪಯೋಗಿಸುವುದರಲ್ಲಿ ನಾವು ಹೇಗೆ ಕರುಣೆಯುಳ್ಳವರಾಗಿರಬಲ್ಲೆವು?

12, 13. (ಎ) ತನ್ನ ಒಡೆಯನಿಗೆ ದೊಡ್ಡ ಸಾಲವನ್ನು ತೀರಿಸಬೇಕಾಗಿದ್ದ ಸೇವಕನ ಸಾಮ್ಯದಿಂದ ಕರುಣೆಯ ಕುರಿತು ನಾವೇನನ್ನು ಕಲಿಯುತ್ತೇವೆ? (ಬಿ) ನಮ್ಮ ಸಹೋದರನನ್ನು “ಏಳೆಪ್ಪತ್ತು ಸಾರಿ” ಕ್ಷಮಿಸುವುದರ ಅರ್ಥವೇನು?

14. ಮತ್ತಾಯ 7:1-4ಕ್ಕೆ ಅನುಸಾರವಾಗಿ ಕರುಣೆಯನ್ನು ನಾವು ದಿನದಿನವೂ ಹೇಗೆ ಅಭ್ಯಾಸಿಸಬಹುದು?

15. ಕರುಣೆಯ ಕೃತ್ಯಗಳು ಜೊತೆವಿಶ್ವಾಸಿಗಳಿಗೆ ಮಾತ್ರ ಸೀಮಿತವಾಗಿಲ್ಲವೇಕೆ?

16. ನಾವು ಇತರರಿಗೆ ಕರುಣೆಯನ್ನು ತೋರಿಸುವ ವಿಧವನ್ನು ಯಾವ ವಿಷಯಗಳು ಪ್ರಭಾವಿಸುತ್ತವೆ?

17. ಕ್ರೈಸ್ತ ಸಭೆಯ ಹೊರಗಿನ ಜನರಿಗೆ ಕರುಣೆಯನ್ನು ತೋರಿಸುವ ಅತ್ಯುತ್ತಮ ವಿಧವು ಯಾವುದು?

18, 19. ನಮ್ಮ ಜೀವನದಲ್ಲಿ ಕರುಣೆಯನ್ನು ಹೆಚ್ಚೆಚ್ಚಾಗಿ ತೋರಿಸಲು ನಾವು ಏಕೆ ಕಾರ್ಯನಡಿಸಬೇಕು?

[ಪುಟ 13ರಲ್ಲಿರುವ ಚಿತ್ರ]

ಸಮಾರ್ಯದವನು ಕರುಣೆಯಿಂದ ಕ್ರಿಯೆಗೈದನು

[ಪುಟ 16ರಲ್ಲಿರುವ ಚಿತ್ರಗಳು]

ಕ್ರೈಸ್ತರು ಕರುಣೆಯುಳ್ಳ ಕ್ರಿಯೆಗಳಲ್ಲಿ ಸಮೃದ್ಧರಾಗಿರುತ್ತಾರೆ