ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನದಲ್ಲಿ ಅರ್ಥಪೂರ್ಣ ಉದ್ದೇಶವನ್ನು ಅನುಸರಿಸುವುದು

ಜೀವನದಲ್ಲಿ ಅರ್ಥಪೂರ್ಣ ಉದ್ದೇಶವನ್ನು ಅನುಸರಿಸುವುದು

ಜೀವನದಲ್ಲಿ ಅರ್ಥಪೂರ್ಣ ಉದ್ದೇಶವನ್ನು ಅನುಸರಿಸುವುದು

“ಶ್ವಾಸವಿರುವದೆಲ್ಲವೂ ಯೆಹೋವನನ್ನು ಸ್ತುತಿಸಲಿ.”—ಕೀರ್ತನೆ 150:6.

“ನಾನೊಬ್ಬ ಡಾಕ್ಟರನಾಗಲಿಕ್ಕಾಗಿ ಓದಿದೆ ಏಕೆಂದರೆ ನನ್ನ ಬದುಕನ್ನು ಜನಸೇವೆಗೆ ಮುಡಿಪಾಗಿರಿಸಬೇಕೆಂದಿದ್ದೆ. ಡಾಕ್ಟರನಾಗುವದರಿಂದ ಸಿಗುವ ಅಂತಸ್ತು ಹಾಗೂ ಸಂಪತ್ತಿನಿಂದಲೂ ನಾನು ಸಂತೋಷದಿಂದಿರುವೆ ಎಂದೆಣಿಸಿದೆ. ಆದರೆ ಒಬ್ಬ ಡಾಕ್ಟರನು ಮಾಡಬಲ್ಲ ಸಹಾಯ ಎಷ್ಟು ಅಲ್ಪವೆಂಬುದು ನನಗೆ ಅರಿವಾಗುತ್ತಾ ಹೋದಂತೆ ನನ್ನ ಭ್ರಮೆ ನಿವಾರಣೆಯಾಯಿತು. ತದನಂತರ ನಾನು ಕಲಾಶಾಸ್ತ್ರವನ್ನು ಕೈಗೆತ್ತಿಕೊಂಡೆ. ಆದರೆ ನನ್ನ ಕಲಾಕೃತಿಗಳಿಂದ ಬೇರೆಯವರಿಗೆ ಅಷ್ಟೇನೂ ಪ್ರಯೋಜನವಾಗಲಿಲ್ಲ. ಇದು ಕೇವಲ ನನ್ನ ಸಂತೋಷಕ್ಕಾಗಿದ್ದರಿಂದ ನಾನೊಬ್ಬ ಸ್ವಾರ್ಥಿಯೆಂದು ನನಗನಿಸಿತು. ತದನಂತರ ನಾನೊಬ್ಬ ಶಿಕ್ಷಕನಾದೆ. ಆದರೆ ನಾನು ವಾಸ್ತವಾಂಶಗಳನ್ನು ಕೇವಲ ಕಲಿಸಬಹುದಿತ್ತೇ ಹೊರತು ನಿಜ ಸಂತೋಷಕ್ಕಾಗಿ ಮಾರ್ಗದರ್ಶನ ಕೊಡಲಾರೆ ಎಂದು ತಿಳಿಯಲು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ.” ಇವು ಕೊರಿಯದಲ್ಲಿ ಹುಟ್ಟಿಬೆಳೆದ ಸೆಂಗ್‌ ಜಿನ್‌ ಎಂಬವನ ಮಾತುಗಳು. * ಅನೇಕರಂತೆ ಅವನು ಸಹ ಜೀವನದಲ್ಲಿ ಒಂದು ಅರ್ಥಪೂರ್ಣ ಉದ್ದೇಶಕ್ಕಾಗಿ ಹುಡುಕುತ್ತಿದ್ದನು.

2 ಜೀವನದಲ್ಲಿ ಒಂದು ನಿಜ ಉದ್ದೇಶವಿರುವುದು ಬದುಕಲು ಕಾರಣ ಕೊಡುತ್ತದೆ, ಸ್ಪಷ್ಟ ಗುರಿ ಕೊಡುತ್ತದೆ ಮತ್ತು ನಮ್ಮೆಲ್ಲ ಪ್ರಯತ್ನಗಳನ್ನು ಕೇಂದ್ರೀಕರಿಸಲು ಒಂದು ವಿಷಯವನ್ನು ನೀಡುತ್ತದೆ. ಆದರೆ ಅಂಥ ಉದ್ದೇಶ ಮನುಷ್ಯರಿಗೆ ನಿಜವಾಗಿ ಇರಬಲ್ಲದೋ? ಹೌದು! ದೇವರು ನಮ್ಮನ್ನು ಈ ಭೂಮಿಯಲ್ಲಿ ಒಂದು ಒಳ್ಳೇ ಉದ್ದೇಶಕ್ಕಾಗಿಯೇ ಇಟ್ಟಿದ್ದನೆಂದು ನಮಗೆ ಕೊಡಲಾಗಿರುವ ಬುದ್ಧಿಶಕ್ತಿ, ಮನಸ್ಸಾಕ್ಷಿ ಮತ್ತು ವಿವೇಚಿಸುವ ಸಾಮರ್ಥ್ಯ ಸೂಚಿಸುತ್ತದೆ. ಆದುದರಿಂದ ಸೃಷ್ಟಿಕರ್ತನ ಉದ್ದೇಶಕ್ಕೆ ಹೊಂದಿಕೆಯಲ್ಲಿ ಜೀವಿಸಿದರೆ ಮಾತ್ರ ನಾವು ನಮ್ಮ ಜೀವನದ ನಿಜ ಉದ್ದೇಶವನ್ನು ಕಂಡುಹಿಡಿದು ಪೂರೈಸಬಲ್ಲೆವು.

3 ನಮಗಾಗಿರುವ ದೇವರ ಉದ್ದೇಶದಲ್ಲಿ ಅನೇಕ ವಿಷಯಗಳು ಒಳಗೂಡಿವೆಯೆಂದು ಬೈಬಲ್‌ ಪ್ರಕಟಪಡಿಸುತ್ತದೆ. ಉದಾಹರಣೆಗಾಗಿ, ದೇವರು ನಮ್ಮನ್ನು ರಚಿಸಿದಂಥ ಅದ್ಭುತ ರೀತಿಯು ನಿಜವಾಗಿಯೂ ಆತನ ನಿಸ್ವಾರ್ಥ ಪ್ರೀತಿಯ ಅಭಿವ್ಯಕ್ತಿಯಾಗಿದೆ. (ಕೀರ್ತನೆ 40:5; 139:14) ಆದಕಾರಣ ದೇವರ ಉದ್ದೇಶಕ್ಕನುಸಾರ ಜೀವಿಸುವುದೆಂದರೆ, ನಾವು ದೇವರಂತೆಯೇ ಇತರರನ್ನು ನಿಸ್ವಾರ್ಥವಾಗಿ ಪ್ರೀತಿಸಬೇಕೆಂದರ್ಥ. (1 ಯೋಹಾನ 4:7-11) ದೇವರ ಪ್ರೀತಿಭರಿತ ಉದ್ದೇಶಕ್ಕೆ ಹೊಂದಿಕೆಯಲ್ಲಿ ಜೀವಿಸಲು ಸಹಾಯಮಾಡುವ ಆತನ ನಿರ್ದೇಶನಗಳನ್ನು ನಾವು ಪಾಲಿಸಬೇಕೆಂಬುದೂ ಇದರರ್ಥವಾಗಿದೆ.—ಪ್ರಸಂಗಿ 12:13; 1 ಯೋಹಾನ 5:3.

4 ಮಾನವರು ಸಂತೋಷದಿಂದ ಮತ್ತು ಪರಸ್ಪರರೊಂದಿಗೆ ಹಾಗೂ ಬೇರೆಲ್ಲ ಸೃಷ್ಟಿಯೊಂದಿಗೆ ಸಮಾಧಾನದಿಂದ ಬದುಕಬೇಕೆಂಬುದೂ ದೇವರ ಉದ್ದೇಶವಾಗಿದೆ. (ಆದಿಕಾಂಡ 1:26; 2:15) ಆದರೆ ನಾವು ಸಂತೋಷದಿಂದಲೂ ಸುರಕ್ಷೆಯಿಂದಲೂ ಮನಶ್ಶಾಂತಿಯಿಂದಲೂ ಇರಬೇಕಾದರೆ ಏನು ಅಗತ್ಯ? ಒಂದು ಮಗು, ಹೆತ್ತವರು ಹತ್ತಿರದಲ್ಲಿರುವಾಗ ಸಂತೋಷವಾಗಿರುತ್ತದೆ ಮತ್ತು ತಾನು ಸುರಕ್ಷಿತನೆಂಬ ಅನಿಸಿಕೆ ಅದಕ್ಕಿರುತ್ತದೆ. ಅದೇ ರೀತಿಯಲ್ಲಿ, ನಮಗೆ ಜೀವನದಲ್ಲಿ ನಿಜ ಅರ್ಥ ಹಾಗೂ ಉದ್ದೇಶ ಇರಬೇಕಾದರೆ ನಮ್ಮ ಸ್ವರ್ಗೀಯ ತಂದೆಯೊಂದಿಗೆ ನಮಗೆ ಹತ್ತಿರದ ಸಂಬಂಧ ಇರಬೇಕು. (ಇಬ್ರಿಯ 12:9) ಈ ಸಂಬಂಧವನ್ನು ಸಾಧ್ಯಗೊಳಿಸಲಿಕ್ಕಾಗಿ ನಾವಾತನ ಸಮೀಪಕ್ಕೆ ಬರುವಂತೆ ದೇವರು ಬಿಡುತ್ತಾನೆ ಮತ್ತು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆ. (ಯಾಕೋಬ 4:8; 1 ಯೋಹಾನ 5:14, 15) ನಾವು ನಂಬಿಕೆಯಲ್ಲಿ ‘ದೇವರೊಂದಿಗೆ ನಡೆದು’ಕೊಂಡು ಆತನ ಸ್ನೇಹಿತರಾದರೆ ನಮ್ಮ ಸ್ವರ್ಗೀಯ ತಂದೆಯಾದ ಆತನಿಗೆ ಸ್ತುತಿ ಹಾಗೂ ಆನಂದವನ್ನು ತರಬಲ್ಲೆವು. (ಆದಿಕಾಂಡ 6:9; ಜ್ಞಾನೋಕ್ತಿ 23:15, 16; ಯಾಕೋಬ 2:23) ಇದು, ಒಬ್ಬ ವ್ಯಕ್ತಿಯು ಅನುಸರಿಸಬಹುದಾದ ಉತ್ಕೃಷ್ಟ ಉದ್ದೇಶವಾಗಿದೆ. ಆದುದರಿಂದ ಕೀರ್ತನೆಗಾರನು ಬರೆದುದು: “ಶ್ವಾಸವಿರುವದೆಲ್ಲವೂ ಯೆಹೋವನನ್ನು ಸ್ತುತಿಸಲಿ.”—ಕೀರ್ತನೆ 150:6.

ಜೀವನದಲ್ಲಿ ನಿಮ್ಮ ಉದ್ದೇಶವೇನು?

5 ನಮ್ಮನ್ನೂ ನಮ್ಮ ಕುಟುಂಬಗಳನ್ನೂ ನಾವು ಉತ್ತಮವಾಗಿ ಪರಾಮರಿಸಬೇಕೆಂಬುದು ನಮಗಾಗಿ ದೇವರ ಉದ್ದೇಶದ ಒಂದು ಭಾಗವಾಗಿದೆ. ಇದರಲ್ಲಿ ಶಾರೀರಿಕ ಹಾಗೂ ಆಧ್ಯಾತ್ಮಿಕ ಅಗತ್ಯಗಳೆರಡನ್ನೂ ಪೂರೈಸುವುದು ಸೇರಿದೆ. ಆದರೆ ಇದನ್ನು ಮಾಡುವಾಗ ಸಮತೋಲನ ಅಗತ್ಯ. ಏಕೆಂದರೆ ಲೌಕಿಕ ಅಭಿರುಚಿಗಳು ಮತ್ತು ಚಿಂತೆಗಳು, ಹೆಚ್ಚು ಪ್ರಾಮುಖ್ಯವಾಗಿರುವ ಆಧ್ಯಾತ್ಮಿಕ ಅಭಿರುಚಿಗಳನ್ನು ಹಿಂದಕ್ಕೆ ತಳ್ಳಬಾರದು. (ಮತ್ತಾಯ 4:4; 6:33) ವಿಷಾದಕರ ಸಂಗತಿಯೇನೆಂದರೆ ಅನೇಕ ಜನರು ಭೌತಿಕ ವಸ್ತುಗಳ ಶೇಖರಣೆಯನ್ನೇ ತಮ್ಮ ಬದುಕಿನ ಕೇಂದ್ರಬಿಂದುವಾಗಿ ಮಾಡುತ್ತಾರೆ. ಆದರೆ ನಮ್ಮೆಲ್ಲ ಅಗತ್ಯಗಳನ್ನು ಕೇವಲ ಭೌತಿಕ ವಸ್ತುಗಳಿಂದ ಪೂರೈಸಲು ಪ್ರಯತ್ನಿಸುವುದು ಅವಿವೇಕತನ. ಏಷ್ಯಾದ ಕೋಟ್ಯಧೀಶ್ವರರ ಕುರಿತಾಗಿ ಇತ್ತೀಚೆಗೆ ನಡೆಸಲ್ಪಟ್ಟ ಸಮೀಕ್ಷೆಯು ಪ್ರಕಟಿಸುವುದೇನೆಂದರೆ ತಮ್ಮ “ಐಶ್ವರ್ಯದಿಂದಾಗಿ ಅವರಿಗೆ ಸಾಮಾಜಿಕ ಅಂತಸ್ತು ಹಾಗೂ ಸಾಧನೆಯ ಪ್ರಜ್ಞೆಯಿದ್ದರೂ” ಅವರಲ್ಲಿ ಅನೇಕರಿಗೆ “ಅಭದ್ರತೆ ಮತ್ತು ಕಳವಳದ ಭಾವನೆಯಿದೆ.”—ಪ್ರಸಂಗಿ 5:11.

6 ‘ಐಶ್ವರ್ಯದಿಂದುಂಟಾಗುವ ಮೋಸದ’ ಕುರಿತಾಗಿ ಯೇಸು ಮಾತಾಡಿದನು. (ಮಾರ್ಕ 4:19) ಐಶ್ವರ್ಯವು ಮೋಸಕರವಾಗಿದೆ ಹೇಗೆ? ಅದು ಸಂತೋಷ ಕೊಡುತ್ತದೆಂಬಂತೆ ತೋರಿದರೂ ಅದು ನಿಜವಾಗಿ ಸಂತೋಷಕೊಡುವುದಿಲ್ಲ. ಜ್ಞಾನಿ ರಾಜ ಸೊಲೊಮೋನನು ಹೇಳಿದ್ದು: “ಹಣವನ್ನು ಪ್ರೀತಿಸುವವರಿಗೆ ಎಂದಿಗೂ ಸಾಕಷ್ಟು ಹಣ ದೊರೆಯದು.” (ಪ್ರಸಂಗಿ 5:10, NIBV) ಆದರೆ ಭೌತಿಕ ಗುರಿಗಳನ್ನು ತಲಪಲು ಪ್ರಯತ್ನಿಸಿ, ಅದೇ ಸಮಯದಲ್ಲಿ ದೇವರಿಗೆ ಪೂರ್ಣಪ್ರಾಣದ ಸೇವೆಸಲ್ಲಿಸಲು ಸಾಧ್ಯವಿದೆಯೋ? ಇಲ್ಲ. ಯೇಸು ವಿವರಿಸಿದ್ದು: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.” ಯೇಸು ತನ್ನ ಹಿಂಬಾಲಕರಿಗೆ ಭೂಮಿಯಲ್ಲಿ ಭೌತಿಕ ಐಶ್ವರ್ಯವನ್ನು ಶೇಖರಿಸಲು ಪ್ರೇರಿಸಲಿಲ್ಲ. ಬದಲಾಗಿ, “ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ” ಎಂದು ಉತ್ತೇಜಿಸಿದನು. ಇದರರ್ಥ, ‘ನೀವು ಬೇಡಿಕೊಳ್ಳುವದಕ್ಕಿಂತ ಮುಂಚೆಯೇ ನಿಮಗೆ ಏನೇನು ಅಗತ್ಯವೆಂಬದು ತಿಳಿದಿರುವ’ ದೇವರೊಂದಿಗೆ ಒಂದು ಒಳ್ಳೇ ಹೆಸರನ್ನು ಮಾಡಬೇಕು.—ಮತ್ತಾಯ 6:8, 19-25.

7 ತನ್ನ ಜೊತೆ ಕೆಲಸಗಾರನಾದ ತಿಮೊಥೆಯನಿಗೆ ಬರೆಯುವಾಗ ಅಪೊಸ್ತಲ ಪೌಲನು ಈ ವಿಷಯದಲ್ಲಿ ಒಂದಿಷ್ಟು ಬಲವಾದ ಸಲಹೆಕೊಟ್ಟನು. ಅವನು ತಿಮೊಥೆಯನಿಗಂದದ್ದು: “ಇಹಲೋಕ ವಿಷಯದಲ್ಲಿ ಐಶ್ವರ್ಯವುಳ್ಳವರು . . . ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂತಲೂ ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ ಅವರು . . . ದಾನಧರ್ಮಗಳನ್ನು ಮಾಡುವವರೂ ಪರೋಪಕಾರಮಾಡುವವರೂ ಆಗಿದ್ದು ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂತಲೂ ಅವರಿಗೆ ಆಜ್ಞಾಪಿಸು.”—1 ತಿಮೊಥೆಯ 6:17-19.

‘ವಾಸ್ತವವಾದ ಜೀವ’ ಅಂದರೇನು?

8 ಸುಖಭೋಗವುಳ್ಳ ಜೀವನವೇ ತೃಪ್ತಿಕರ ಜೀವನವೆಂದು ಹೆಚ್ಚಿನ ಜನರು ನೆನಸುತ್ತಾರೆ. ಒಂದು ಏಷ್ಯನ್‌ ವಾರ್ತಾಪತ್ರಿಕೆಯು ಹೇಳಿದ್ದು: “ಚಲನಚಿತ್ರ ಅಥವಾ ಟಿವಿ ನೋಡುವವರು ತಾವು ನೋಡುವ ವಿಷಯಗಳನ್ನೇ ಆಶಿಸುತ್ತಾರೆ ಮತ್ತು ಅವುಗಳನ್ನು ಹೊಂದುವುದರ ಬಗ್ಗೆ ಕನಸುಕಾಣುತ್ತಾರೆ.” ಐಶ್ವರ್ಯ ಹಾಗೂ ಅಂತಸ್ತನ್ನು ಗಿಟ್ಟಿಸಿಕೊಳ್ಳುವುದನ್ನು ಅನೇಕರು ತಮ್ಮ ಜೀವನದ ಮುಖ್ಯ ಉದ್ದೇಶವನ್ನಾಗಿ ಮಾಡುತ್ತಾರೆ. ಇಂಥ ವಿಷಯಗಳನ್ನು ಬೆನ್ನಟ್ಟುವಾಗ ಅನೇಕರು ತಮ್ಮ ಯೌವನ, ಆರೋಗ್ಯ, ಕುಟುಂಬ ಜೀವನ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ತ್ಯಜಿಸಿಬಿಡುತ್ತಾರೆ. ಸಮೂಹ ಮಾಧ್ಯಮವು ಬಿತ್ತರಿಸುವ ಚಿತ್ರಣಗಳು ಈ ‘ಪ್ರಪಂಚದ ಆತ್ಮದ’ ಪ್ರತಿಬಿಂಬವಾಗಿವೆ ಎಂಬುದರ ಕುರಿತು ಹೆಚ್ಚಿನವರು ಯೋಚಿಸುವುದಿಲ್ಲ. ಈ ಆತ್ಮ ಅಂದರೆ ಪ್ರಬಲವಾದ ಯೋಚನಾಧಾಟಿಯು, ಲೋಕದ ಕೋಟಿಗಟ್ಟಲೆ ಜನರಲ್ಲಿ ಅಧಿಕಾಂಶ ಮಂದಿಯನ್ನು ಪ್ರಭಾವಿಸುತ್ತಾ ದೇವರ ಉದ್ದೇಶಕ್ಕೆ ವಿರುದ್ಧವಾಗಿ ಕ್ರಿಯೆಗೈಯುವಂತೆ ಪ್ರೇರಿಸುತ್ತದೆ. (1 ಕೊರಿಂಥ 2:12; ಎಫೆಸ 2:2) ಆದುದರಿಂದಲೇ ಲೋಕದಲ್ಲಿ ಇಂದು ಇಷ್ಟೊಂದು ಅಸಂತೋಷಿತ ಜನರಿರುವುದು ಅಚ್ಚರಿಯ ಸಂಗತಿಯೇನಲ್ಲ!—ಜ್ಞಾನೋಕ್ತಿ 18:11; 23:4, 5.

9 ಬೇರೆಯವರ ಹಿತಕ್ಷೇಮಕ್ಕಾಗಿ ನಿಸ್ವಾರ್ಥಭಾವದಿಂದ ದುಡಿಯುತ್ತಾ ಹಸಿವೆ, ಅಸ್ವಸ್ಥತೆ ಮತ್ತು ಅನ್ಯಾಯವನ್ನು ಅಳಿಸಿಹಾಕಲು ಪ್ರಯತ್ನಿಸುವವರ ಕುರಿತೇನು? ಅವರ ಶ್ಲಾಘನೀಯ, ಸ್ವತ್ಯಾಗದ ಪ್ರಯತ್ನಗಳು ಬಹಳಷ್ಟು ಒಳಿತನ್ನು ಸಾಧಿಸುತ್ತವೆ. ಆದರೆ ಅವರು ಈ ಎಲ್ಲ ಸರ್ವೋತ್ತಮ ಪ್ರಯತ್ನಗಳನ್ನು ಮಾಡಿದರೂ ಈ ವಿಷಯಗಳ ವ್ಯವಸ್ಥೆಯನ್ನು ನ್ಯಾಯವಾದ, ಒಳ್ಳೆಯ ವ್ಯವಸ್ಥೆಯಾಗಿ ಎಂದಿಗೂ ಬದಲಾಯಿಸಲಾರರು. ಯಾಕೆ? ಯಾಕೆಂದರೆ, ವಾಸ್ತವದಲ್ಲಿ “ಲೋಕವೆಲ್ಲವೂ ಕೆಡುಕ”ನಾದ ಸೈತಾನನ “ವಶದಲ್ಲಿ ಬಿದ್ದಿದೆ” ಮತ್ತು ಈ ವ್ಯವಸ್ಥೆ ಬದಲಾಗುವುದು ಅವನಿಗೆ ಇಷ್ಟವಿಲ್ಲ.—1 ಯೋಹಾನ 5:19.

10 ಒಬ್ಬ ವ್ಯಕ್ತಿಗೆ ಈ ಸದ್ಯದ ಜೀವನ ಬಿಟ್ಟರೆ ಬೇರೇನೂ ನಿರೀಕ್ಷೆ ಇಲ್ಲದಿರುವಲ್ಲಿ ಅದೆಷ್ಟು ದುಃಖದ ಸಂಗತಿ! “ಈ ಜೀವಮಾನಕಾಲದ ಪೂರ್ತಿಗೆ ನಾವು ಕ್ರಿಸ್ತನಲ್ಲಿ ನಿರೀಕ್ಷೆಯಿಟ್ಟುಕೊಂಡದ್ದೇ ಹೊರತು ಮತ್ತೇನೂ ಇಲ್ಲದಿದ್ದರೆ ಎಲ್ಲಾ ಮನುಷ್ಯರಲ್ಲಿಯೂ ನಿರ್ಭಾಗ್ಯರೇ ಸರಿ” ಎಂದು ಪೌಲನು ಬರೆದನು. ಜೀವನವು ಇಷ್ಟೇ ಎಂದು ನಂಬುವ ಜನರ ಮನೋಭಾವ, “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ” ಎಂದಾಗಿದೆ. (1 ಕೊರಿಂಥ 15:19, 32) ಆದರೆ ವಾಸ್ತವವೇನೆಂದರೆ ಸದ್ಯದ ಜೀವನವಲ್ಲದೆ ನಮಗೆ ಒಂದು ಒಳ್ಳೇ ಭವಿಷ್ಯವೂ ಇದೆ. “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಆ ಸಮಯದಲ್ಲಿ ಕ್ರೈಸ್ತರು ‘ವಾಸ್ತವವಾದ ಜೀವ’ ಅಂದರೆ ಪರಿಪೂರ್ಣ ಸ್ಥಿತಿಯಲ್ಲಿ ‘ನಿತ್ಯ ಜೀವವನ್ನು’ ಸ್ವರ್ಗದಲ್ಲಿ ಇಲ್ಲವೇ ದೇವರ ರಾಜ್ಯ-ಸರ್ಕಾರದ ಪ್ರೀತಿಭರಿತ ಆಳ್ವಿಕೆಯಡಿ ಈ ಭೂಮಿಯಲ್ಲಿ ಆನಂದಿಸಬಲ್ಲರು!—1 ತಿಮೊಥೆಯ 6:12.

11 ಮಾನವಕುಲದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಸಂಪೂರ್ಣ ಯಶಸ್ಸು ಕೇವಲ ದೇವರ ರಾಜ್ಯಕ್ಕೆ ಸಿಗುವುದು. ಆದುದರಿಂದ ಆ ರಾಜ್ಯದ ಅಭಿರುಚಿಗಳನ್ನು ಪ್ರವರ್ಧಿಸಲಿಕ್ಕಾಗಿ ಶ್ರಮಿಸುವುದು ಒಬ್ಬ ವ್ಯಕ್ತಿ ಮಾಡಬಹುದಾದ ಅತ್ಯಂತ ಉದ್ದೇಶಭರಿತ ಕಾರ್ಯ ಆಗಿದೆ. (ಯೋಹಾನ 4:34) ಆ ಕೆಲಸದಲ್ಲಿ ತೊಡಗಿರುವಾಗ ನಮ್ಮ ಸ್ವರ್ಗೀಯ ತಂದೆಯೊಂದಿಗೆ ನಮಗೊಂದು ಉತ್ತಮ ಸಂಬಂಧವಿರುತ್ತದೆ. ಅಷ್ಟುಮಾತ್ರವಲ್ಲದೆ, ಜೀವನದಲ್ಲಿ ಇದೇ ಉದ್ದೇಶವನ್ನು ಅನುಸರಿಸುತ್ತಿರುವ ಲಕ್ಷಾಂತರ ಆಧ್ಯಾತ್ಮಿಕ ಸಹೋದರ ಸಹೋದರಿಯರ ಜೊತೆಯಲ್ಲಿ ಸೇವೆಸಲ್ಲಿಸುವ ಆನಂದವೂ ನಮಗಿರುತ್ತದೆ.

ಯೋಗ್ಯ ತ್ಯಾಗಗಳನ್ನು ಮಾಡುವುದು

12 ಸದ್ಯದ ಲೋಕ ಮತ್ತು ‘ಅದರ ಆಶೆಯೂ ಗತಿಸಿಹೋಗುತ್ತಿದೆ’ ಎಂದು ಬೈಬಲ್‌ ಹೇಳುತ್ತದೆ. ಸೈತಾನನ ಲೋಕದ ಯಾವುದೇ ಭಾಗ, ಅದರ ಕೀರ್ತಿ ಮತ್ತು ಧನಸಂಪತ್ತು ಸಹ ನಾಶನದಿಂದ ಪಾರಾಗದು. “ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:15-17) ಸದ್ಯದ ವ್ಯವಸ್ಥೆಯ ಅಸ್ಥಿರ ಐಶ್ವರ್ಯ, ಕ್ಷಣಿಕ ಕೀರ್ತಿ ಮತ್ತು ವ್ಯರ್ಥ ಭೋಗಗಳಿಗೆ ವ್ಯತಿರಿಕ್ತವಾಗಿ ದೇವರ ರಾಜ್ಯದಾಳಿಕೆಯ ಕೆಳಗಿನ “ವಾಸ್ತವವಾದ ಜೀವ” ಅಂದರೆ ನಿತ್ಯಜೀವ ಶಾಶ್ವತವಾದದ್ದು. ಆದುದರಿಂದ ಅದಕ್ಕೋಸ್ಕರ ತ್ಯಾಗಗಳನ್ನು ಮಾಡುವುದು ಸಾರ್ಥಕ. ಆದರೆ ನಾವು ಮಾಡುವ ತ್ಯಾಗಗಳು ಯೋಗ್ಯವಾದದ್ದಾಗಿರಬೇಕು.

13 ಹೆನ್ರಿ ಮತ್ತು ಸೂಸನ್‌ ಎಂಬವರನ್ನು ಪರಿಗಣಿಸಿರಿ. ದೇವರ ರಾಜ್ಯವನ್ನು ತಮ್ಮ ಜೀವನದಲ್ಲಿ ಪ್ರಥಮವಾಗಿಡುವ ಎಲ್ಲರಿಗೆ ಆತನ ಸಹಾಯ ಸಿಗುವುದೆಂಬ ವಾಗ್ದಾನದಲ್ಲಿ ಅವರಿಗೆ ಪೂರ್ಣ ನಂಬಿಕೆಯಿದೆ. (ಮತ್ತಾಯ 6:33) ತಮ್ಮ ಇಬ್ಬರು ಪುತ್ರಿಯರೊಂದಿಗೆ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಸಮಯವನ್ನು ಕಳೆಯಲು ಸಾಧ್ಯವಾಗುವಂತೆ ಅವರಲ್ಲಿ ಕೇವಲ ಒಬ್ಬರೇ ಉದ್ಯೋಗಮಾಡಲು ನಿರ್ಣಯಿಸಿದರು. ಆದುದರಿಂದ ಅವರು ಕಡಿಮೆ ಬೆಲೆಯ ಮನೆಯೊಂದರಲ್ಲಿ ವಾಸಿಸಲು ಆಯ್ಕೆಮಾಡಿದರು. (ಇಬ್ರಿಯ 13:15, 16) ಅವರ ಹಿತಚಿಂತಕಳಾದ ಸ್ನೇಹಿತೆಯೊಬ್ಬಳಿಗೆ ಅವರು ಏಕೆ ಈ ಆಯ್ಕೆಮಾಡಿದರೆಂದು ಅರ್ಥವಾಗಲಿಲ್ಲ. ಅವಳು ಸೂಸನ್‌ಗೆ ಅಂದದ್ದು: “ನೋಡು ಸೂಸನ್‌, ನೀವು ಇದಕ್ಕಿಂತಲೂ ಒಳ್ಳೇ ಮನೆಯಲ್ಲಿ ವಾಸಿಸಬೇಕಾದರೆ ಏನಾದರೂ ತ್ಯಾಗಮಾಡಲೇಬೇಕು.” ಆದರೆ ಯೆಹೋವನನ್ನು ಪ್ರಥಮವಾಗಿಟ್ಟರೆ ‘ಈಗಲೂ ಮುಂದೆಯೂ ಜೀವ ವಾಗ್ದಾನ ಉಂಟು’ ಎಂದು ಹೆನ್ರಿ ಮತ್ತು ಸೂಸನ್‌ಗೆ ತಿಳಿದಿತ್ತು. (1 ತಿಮೊಥೆಯ 4:8; ತೀತ 2:12) ಅವರ ಪುತ್ರಿಯರು ದೊಡ್ಡವರಾಗಿ ಹುರುಪಿನ ಪೂರ್ಣ ಸಮಯದ ಸೌವಾರ್ತಿಕರಾದರು. ಕುಟುಂಬವಾಗಿ ಅವರಿಗೆ ಯಾವುದೇ ಕೊರತೆಯಾಗಲಿಲ್ಲ. ಬದಲಿಗೆ ಅವರು ‘ವಾಸ್ತವವಾದ ಜೀವವನ್ನು’ ತಮ್ಮ ಜೀವನೋದ್ದೇಶವಾಗಿ ಮಾಡಿದ್ದರಿಂದ ಬಹಳಷ್ಟು ಪ್ರಯೋಜನ ಹೊಂದಿದರು.—ಫಿಲಿಪ್ಪಿ 3:8; 1 ತಿಮೊಥೆಯ 6:6-8.

‘ಲೋಕವನ್ನು ಪೂರ್ಣವಾಗಿ ಅನುಭೋಗಿಸದಿರ್ರಿ’

14 ಆದರೆ ನಮ್ಮ ನಿಜ ಉದ್ದೇಶವನ್ನು ಮರೆತು, ‘ವಾಸ್ತವವಾದ ಜೀವದ’ ಮೇಲೆ ನಮ್ಮ ಹಿಡಿತವನ್ನು ಸಡಿಲಗೊಳಿಸುವಲ್ಲಿ ನಾವು ‘ಚಿಂತೆ ಐಶ್ವರ್ಯ ಭೋಗಗಳಿಂದ ಅದುಮಿಸಲ್ಪಡುವ’ ಅಪಾಯವಿದೆ ಖಂಡಿತ. (ಲೂಕ 8:14, NIBV) ಲಂಗುಲಗಾಮಿಲ್ಲದ ಆಸೆಗಳು ಹಾಗೂ “ಜೀವನದ ಚಿಂತೆಗಳು” ನಾವು ಈ ವಿಷಯಗಳ ವ್ಯವಸ್ಥೆಯಲ್ಲಿ ಮುಳುಗಿಹೋಗುವಂತೆ ಮಾಡಬಲ್ಲವು. (ಲೂಕ 21:34, NIBV) ದುಃಖದ ಸಂಗತಿಯೇನೆಂದರೆ ಕೆಲವರು ಐಶ್ವರ್ಯವಂತರಾಗಬೇಕೆಂಬ ಪ್ರಚಲಿತ ಉನ್ಮಾದಕ್ಕೊಳಗಾಗಿ, ‘ನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಂಡಿದ್ದಾರೆ.’ ಅವರು ಯೆಹೋವನೊಂದಿಗಿನ ತಮ್ಮ ಅಮೂಲ್ಯ ಸಂಬಂಧವನ್ನೂ ಕಳೆದುಕೊಂಡಿದ್ದಾರೆ. ‘ನಿತ್ಯಜೀವದ’ ಮೇಲಿನ ಹಿಡಿತವನ್ನು ಬಲವಾಗಿರಿಸದೇ ಇದ್ದದಕ್ಕಾಗಿ ತೆರಬೇಕಾದ ಬೆಲೆ ಎಷ್ಟು ದೊಡ್ಡದು!—1 ತಿಮೊಥೆಯ 6:9, 10, 12; ಜ್ಞಾನೋಕ್ತಿ 28:20.

15 “ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು” ಎಂದು ಪೌಲನು ಸಲಹೆಕೊಟ್ಟನು. (1 ಕೊರಿಂಥ 7:31) ಕೀತ್‌ ಮತ್ತು ಬೋನಿ ಎಂಬವರು ಈ ಸಲಹೆಗೆ ಕಿವಿಗೊಟ್ಟರು. “ನಾನೊಬ್ಬ ಯೆಹೋವನ ಸಾಕ್ಷಿಯಾದಾಗ ನನ್ನ ದಂತವೈದ್ಯ ಶಿಕ್ಷಣವು ಇನ್ನೇನು ಮುಗಿಯುವುದರಲ್ಲಿತ್ತು” ಎಂದು ಕೀತ್‌ ಹೇಳುತ್ತಾನೆ. “ನನ್ನ ಮುಂದೆ ಒಂದು ಆಯ್ಕೆ ಇತ್ತು. ನಾನು ಅನೇಕ ರೋಗಿಗಳಿಗೆ ಚಿಕಿತ್ಸೆನೀಡಿ ತುಂಬ ಹಣಮಾಡಬಹುದಿತ್ತು. ಆದರೆ ಇದರಿಂದ ನನ್ನ ಆಧ್ಯಾತ್ಮಿಕ ಜೀವನಕ್ಕೆ ಅಡ್ಡಿಯಾಗುತ್ತಿತ್ತು. ಆದುದರಿಂದ ನಾನು ಕೆಲವೇ ರೋಗಿಗಳಿಗೆ ಚಿಕಿತ್ಸೆನೀಡುವ ಆಯ್ಕೆಮಾಡಿದೆ. ಹೀಗೆ, ಕ್ರಮೇಣ ಐದು ಪುತ್ರಿಯರಿದ್ದ ನಮ್ಮ ಕುಟುಂಬದ ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಹಿತಕ್ಷೇಮಕ್ಕಾಗಿ ನನ್ನ ಬಳಿ ಹೆಚ್ಚು ಸಮಯ ಇರುತ್ತಿತ್ತು. ನಮ್ಮಲ್ಲಿ ಹೆಚ್ಚು ಹಣವಿದ್ದ ಸಮಯಗಳು ವಿರಳವಾಗಿದ್ದರೂ ಮಿತವಾಗಿ ಖರ್ಚುಮಾಡುವುದನ್ನು ಕಲಿತುಕೊಂಡೆವು. ಹೀಗೆ, ನಮಗೆ ಅಗತ್ಯವಿದ್ದದ್ದೆಲ್ಲವೂ ಯಾವಾಗಲೂ ದೊರೆಯುತ್ತಿತ್ತು. ನಮ್ಮ ಕುಟುಂಬ ಜೀವನವು ಆತ್ಮೀಯವೂ, ಬೆಚ್ಚಗೂ, ಆನಂದಭರಿತವೂ ಆಗಿತ್ತು. ಕೊನೆಯಲ್ಲಿ ನಾವೆಲ್ಲರೂ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದೆವು. ಈಗ ನಮ್ಮ ಪುತ್ರಿಯರು ಮದುವೆಯಾಗಿ ಸುಖವಾಗಿದ್ದಾರೆ. ಅವರಲ್ಲಿ ಮೂವರಿಗೆ ಮಕ್ಕಳಿದ್ದಾರೆ. ಅವರ ಕುಟುಂಬಗಳೂ ಸಂತೋಷದಿಂದಿವೆ ಯಾಕೆಂದರೆ ಅವರು ಸಹ ಯೆಹೋವನ ಉದ್ದೇಶವನ್ನು ಪ್ರಥಮವಾಗಿಡುವುದನ್ನು ಮುಂದುವರಿಸಿದ್ದಾರೆ.”

ನಿಮ್ಮ ಜೀವನದಲ್ಲಿ ದೇವರ ಉದ್ದೇಶವನ್ನು ಪ್ರಥಮವಾಗಿಡುವುದು

16 ದೇವರ ಉದ್ದೇಶಕ್ಕಾಗಿ ಜೀವಿಸಿದವರ ಹಾಗೂ ಜೀವಿಸದೇ ಇದ್ದವರ ಉದಾಹರಣೆಗಳನ್ನು ಬೈಬಲ್‌ ಸಾದರಪಡಿಸುತ್ತದೆ. ಇಂಥ ಉದಾಹರಣೆಗಳಿಂದ ಕಲಿಯಬಹುದಾದ ಪಾಠಗಳು ಎಲ್ಲ ವಯಸ್ಸಿನ, ಸಂಸ್ಕೃತಿಗಳ ಮತ್ತು ಪರಿಸ್ಥಿತಿಗಳ ಜನರಿಗೆ ಅನ್ವಯವಾಗುತ್ತವೆ. (ರೋಮಾಪುರ 15:4; 1 ಕೊರಿಂಥ 10:6, 11) ನಿಮ್ರೋದನು ದೊಡ್ಡ ದೊಡ್ಡ ಪಟ್ಟಣಗಳನ್ನು ಕಟ್ಟಿದನಾದರೂ, ಅದು ಯೆಹೋವನಿಗೆ ವಿರುದ್ಧವಾಗಿತ್ತು. (ಆದಿಕಾಂಡ 10:8, 9) ಇನ್ನೊಂದು ಬದಿಯಲ್ಲಿ, ಅನೇಕರು ಒಳ್ಳೇ ಮಾದರಿಗಳಾಗಿದ್ದರು. ದೃಷ್ಟಾಂತಕ್ಕಾಗಿ ಮೋಶೆಯು, ಐಗುಪ್ತದ ಕುಲೀನ ವ್ಯಕ್ತಿಯಾಗಿ ತನ್ನ ಸ್ಥಾನವನ್ನು ಕಾಪಾಡಿಕೊಳ್ಳುವುದನ್ನು ತನ್ನ ಜೀವನದ ಉದ್ದೇಶವನ್ನಾಗಿ ಮಾಡಲಿಲ್ಲ. ಬದಲಿಗೆ ತನ್ನ ಆಧ್ಯಾತ್ಮಿಕ ಸುಯೋಗಗಳನ್ನು ‘ಐಗುಪ್ತದೇಶದ ಸರ್ವೈಶ್ವರ್ಯಕ್ಕಿಂತಲೂ’ ಹೆಚ್ಚೆಂದು ಪರಿಗಣಿಸಿದನು. (ಇಬ್ರಿಯ 11:26) ವೈದ್ಯನಾದ ಲೂಕನು, ಪೌಲ ಹಾಗೂ ಇತರರಿಗೆ ಅವರ ಅಸ್ವಸ್ಥಗಳನ್ನು ಉಪಶಮನಮಾಡಲು ನೆರವುನೀಡಿದ್ದಿರಬಹುದು. ಆದರೆ ಲೂಕನ ಅತ್ಯಂತ ಶ್ರೇಷ್ಠ ಕೊಡುಗೆಯು ಅವನೊಬ್ಬ ಸೌವಾರ್ತಿಕನು ಮತ್ತು ಬೈಬಲ್‌ ಲೇಖಕನಾಗಿದ್ದದ್ದೇ ಆಗಿತ್ತು. ಪೌಲನು, ಒಬ್ಬ ವಕೀಲನಾಗಿ ಅಲ್ಲ ಬದಲಾಗಿ ಒಬ್ಬ ಮಿಷನೆರಿಯಾಗಿ, “ಅನ್ಯಜನರಿಗೆ ಅಪೊಸ್ತಲ”ನೆಂದು ಪ್ರಸಿದ್ಧನಾಗಿದ್ದಾನೆ.—ರೋಮಾಪುರ 11:13.

17 ದಾವೀದನನ್ನು ಮುಖ್ಯವಾಗಿ ಒಬ್ಬ ಮಿಲಿಟರಿ ಸೇನಾಪತಿಯಾಗಿ, ಸಂಗೀತಗಾರನಾಗಿ, ಗೀತರಚಕನಾಗಿ ಅಲ್ಲ ಬದಲಾಗಿ ‘ದೇವರಿಗೆ ಒಪ್ಪುವ ಪುರುಷ’ನಾಗಿ ಸ್ಮರಿಸಲಾಗುತ್ತದೆ. (1 ಸಮುವೇಲ 13:14) ದಾನಿಯೇಲನು ಬಾಬೆಲಿನ ಸರ್ಕಾರಿ ಅಧಿಕಾರಿ ಆಗಿದ್ದರಿಂದಲ್ಲ ಬದಲಾಗಿ ಯೆಹೋವನ ನಿಷ್ಠಾವಂತ ಪ್ರವಾದಿಯಾಗಿ ಸೇವೆಸಲ್ಲಿಸಿದ ಕಾರಣವೇ ನಮಗೆ ಅವನ ಬಗ್ಗೆ ತಿಳಿದಿದೆ. ನಾವು ಎಸ್ತೇರಳನ್ನು ಪರ್ಷಿಯದ ರಾಣಿಯಾಗಿ ಅಲ್ಲ ಬದಲಾಗಿ ಧೈರ್ಯ ಹಾಗೂ ನಂಬಿಕೆಯ ಉದಾಹರಣೆಯಾಗಿ ತಿಳಿದಿದ್ದೇವೆ. ಪೇತ್ರ, ಆಂದ್ರೆಯ ಹಾಗೂ ಯಾಕೋಬಯೋಹಾನರನ್ನು ನುರಿತ ಬೆಸ್ತರಾಗಿ ಅಲ್ಲ ಬದಲಾಗಿ ಯೇಸುವಿನ ಅಪೊಸ್ತಲರಾಗಿ ತಿಳಿದುಕೊಂಡಿದ್ದೇವೆ. ಮತ್ತು ಸ್ವತಃ ಯೇಸುವನ್ನು “ಬಡಗಿ” ಆಗಿ ಅಲ್ಲ ಬದಲಾಗಿ “ಕ್ರಿಸ್ತ”ನೆಂದು ಜ್ಞಾಪಿಸಿಕೊಳ್ಳುತ್ತೇವೆ. (ಮಾರ್ಕ 6:3; ಮತ್ತಾಯ 16:16) ಇವರೆಲ್ಲರಿಗೆ ತಮ್ಮ ಪ್ರತಿಭೆ, ಸೊತ್ತು ಇಲ್ಲವೇ ಅಂತಸ್ತು ಜೀವನದ ಕೇಂದ್ರಭಾಗ ಆಗಿರಲಿಲ್ಲ. ಏಕೆಂದರೆ ದೇವರ ಸೇವೆಯೇ ತಮ್ಮ ಜೀವನದ ಕೇಂದ್ರಭಾಗವಾಗಿರಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿತ್ತು. ತಮಗಿರಬಹುದಾದ ಅತಿ ಯೋಗ್ಯ ಹಾಗೂ ಅತ್ಯಂತ ಪ್ರತಿಫಲದಾಯಕ ಉದ್ದೇಶವು ದೇವಭಯವುಳ್ಳ ಪುರುಷ ಇಲ್ಲವೆ ಸ್ತ್ರೀಯರಾಗಿರುವುದೇ ಎಂದು ಅವರಿಗೆ ತಿಳಿದಿತ್ತು.

18 ಆರಂಭದಲ್ಲಿ ತಿಳಿಸಲಾಗಿರುವ ಸೆಂಗ್‌ ಜಿನ್‌ಗೂ ಆ ವಿಷಯ ತಿಳಿಯಿತು. “ನನ್ನ ಎಲ್ಲ ಶಕ್ತಿಯನ್ನು ಔಷಧಶಾಸ್ತ್ರಕ್ಕೆ, ಕಲಾಶಾಸ್ತ್ರಕ್ಕೆ ಇಲ್ಲವೆ ಐಹಿಕ ಶಿಕ್ಷಕನಾಗಿರಲು ಮೀಸಲಾಗಿಡುವ ಬದಲು ದೇವರಿಗೆ ಮಾಡಿರುವ ಸಮರ್ಪಣೆಗೆ ಹೊಂದಿಕೆಯಲ್ಲಿ ನನ್ನ ಜೀವನವನ್ನು ಬಳಸುವ ದೃಢಸಂಕಲ್ಪ ಮಾಡಿದೆ” ಎಂದು ಅವನು ವಿವರಿಸುತ್ತಾನೆ. “ನಾನೀಗ ಬೈಬಲ್‌ ಬೋಧಕರ ಹೆಚ್ಚಿನ ಅಗತ್ಯವಿರುವ ಸ್ಥಳದಲ್ಲಿ ಸೇವೆಸಲ್ಲಿಸುತ್ತಾ ಜನರಿಗೆ ನಿತ್ಯಜೀವದ ಹಾದಿಗೆ ಬರುವಂತೆ ಸಹಾಯಮಾಡುತ್ತಿದ್ದೇನೆ. ಪೂರ್ಣ ಸಮಯದ ಶುಶ್ರೂಷಕನಾಗಿರುವುದು ಒಂದು ದೊಡ್ಡ ಪಂಥಾಹ್ವಾನಲ್ಲವೆಂದು ನಾನು ನೆನಸುತ್ತಿದ್ದೆ. ಆದರೆ ವಾಸ್ತವದಲ್ಲಿ ಈಗ ನನ್ನ ಜೀವನವು ಹಿಂದೆಂದಿಗಿಂತಲೂ ಹೆಚ್ಚು ಪಂಥಾಹ್ವಾನಭರಿತವಾಗಿದೆ. ಏಕೆಂದರೆ ನನ್ನ ವ್ಯಕ್ತಿತ್ವವನ್ನು ಮತ್ತು ಭಿನ್ನಭಿನ್ನ ಸಂಸ್ಕೃತಿಗಳ ಜನರಿಗೆ ಕಲಿಸುವ ನನ್ನ ಸಾಮರ್ಥ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುತ್ತಿದ್ದೇನೆ. ಯೆಹೋವನ ಉದ್ದೇಶವನ್ನು ನಮ್ಮ ಉದ್ದೇಶವನ್ನಾಗಿ ಮಾಡುವುದೇ ಏಕೈಕ ಅರ್ಥಪೂರ್ಣ ಜೀವನಮಾರ್ಗವೆಂಬುದು ನನಗೀಗ ತಿಳಿಯುತ್ತಿದೆ.”

19 ಕ್ರೈಸ್ತರಾದ ನಮಗೆ ಜೀವರಕ್ಷಕ ಜ್ಞಾನ ಹಾಗೂ ರಕ್ಷಣೆಯ ನಿರೀಕ್ಷೆ ಕೊಡಲ್ಪಟ್ಟಿದೆ. (ಯೋಹಾನ 17:3) ಹೀಗಿರುವುದರಿಂದ ನಾವು ‘ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳ’ದಿರೋಣ. (2 ಕೊರಿಂಥ 6:1) ಅದಕ್ಕೆ ಬದಲಾಗಿ, ನಾವು ನಮ್ಮ ಬದುಕಿನ ಅಮೂಲ್ಯ ದಿನಗಳು ಹಾಗೂ ವರ್ಷಗಳನ್ನು ಯೆಹೋವನ ಸ್ತುತಿಗಾಗಿ ಉಪಯೋಗಿಸೋಣ. ಇಂದು ನಿಜ ಸಂತೋಷವನ್ನು ತರುವ ಮತ್ತು ನಿತ್ಯಜೀವಕ್ಕೆ ನಡೆಸುವಂಥ ಜ್ಞಾನವನ್ನು ಹಬ್ಬಿಸೋಣ. ಹೀಗೆ ಮಾಡುವುದರ ಮೂಲಕ ನಾವು ಯೇಸುವಿನ ಈ ಮಾತುಗಳ ಸತ್ಯವನ್ನು ಅನುಭವಿಸುವೆವು: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಇಲ್ಲವೇ ಸಂತೋಷ. (ಅ. ಕೃತ್ಯಗಳು 20:35) ಆಗ ನಮಗೆ ಜೀವನದಲ್ಲಿ ನಿಜ ಉದ್ದೇಶ ಲಭಿಸಿರುವುದು. (w07 10/1)

[ಪಾದಟಿಪ್ಪಣಿ]

^ ಪ್ಯಾರ. 3 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

ನೀವು ವಿವರಿಸಬಲ್ಲಿರೋ?

• ನಮಗೆ ಜೀವನದಲ್ಲಿರಬಹುದಾದ ಉತ್ಕೃಷ್ಟ ಉದ್ದೇಶ ಯಾವುದು?

• ಭೌತಿಕ ವಿಷಯಗಳಿಗಾಗಿ ಜೀವಿಸುವುದು ಏಕೆ ಅವಿವೇಕತನವಾಗಿದೆ?

• ದೇವರು ವಾಗ್ದಾನಿಸುವಂಥ ‘ವಾಸ್ತವವಾದ ಜೀವ’ ಯಾವುದು?

• ದೇವರ ಉದ್ದೇಶಕ್ಕಾಗಿ ನಮ್ಮ ಜೀವನವನ್ನು ಹೇಗೆ ಉಪಯೋಗಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1. ಒಬ್ಬ ಯುವ ಪುರುಷನು ಜೀವನೋದ್ದೇಶಕ್ಕಾಗಿ ನಡೆಸಿದ ಅನ್ವೇಷಣೆಯನ್ನು ವರ್ಣಿಸಿರಿ.

2. (ಎ) ಜೀವನದಲ್ಲಿ ಒಂದು ಉದ್ದೇಶವಿರುವುದರ ಅರ್ಥವೇನು? (ಬಿ) ನಮ್ಮನ್ನು ಭೂಮಿಯಲ್ಲಿ ಇಟ್ಟದ್ದಕ್ಕಾಗಿ ಸೃಷ್ಟಿಕರ್ತನಿಗೊಂದು ಉದ್ದೇಶವಿತ್ತೆಂದು ಹೇಗೆ ತಿಳಿದುಬರುತ್ತದೆ?

3. ಮಾನವರಿಗಾಗಿರುವ ದೇವರ ಉದ್ದೇಶದಲ್ಲಿ ಏನು ಒಳಗೂಡಿದೆ?

4. (ಎ) ಜೀವನದಲ್ಲಿ ನಿಜ ಉದ್ದೇಶವನ್ನು ಹೊಂದಲಿಕ್ಕಾಗಿ ಏನು ಅಗತ್ಯ? (ಬಿ) ಒಬ್ಬ ವ್ಯಕ್ತಿ ಅನುಸರಿಸಬಹುದಾದ ಉತ್ಕೃಷ್ಟ ಉದ್ದೇಶ ಯಾವುದು?

5. ಭೌತಿಕ ಅಭಿರುಚಿಗಳನ್ನು ಪ್ರಥಮವಾಗಿಡುವುದು ಅವಿವೇಕತನವೇಕೆ?

6. ಐಶ್ವರ್ಯವನ್ನು ಬೆನ್ನಟ್ಟುವುದರ ಕುರಿತಾಗಿ ಯೇಸು ಯಾವ ಸಲಹೆ ಕೊಟ್ಟನು?

7. ‘ವಾಸ್ತವವಾದ ಜೀವವನ್ನು’ ನಾವು ಹೇಗೆ ಹೊಂದಬಹುದು?

8. (ಎ) ಅನೇಕರು ಐಶ್ವರ್ಯ ಹಾಗೂ ಅಂತಸ್ತನ್ನು ಬೆನ್ನಟ್ಟುವುದೇಕೆ? (ಬಿ) ಇಂಥವರು ಏನನ್ನು ಗ್ರಹಿಸಲು ತಪ್ಪುತ್ತಾರೆ?

9. ಮಾನವರು ಏನನ್ನು ಎಂದಿಗೂ ಸಾಧಿಸಲಾರರು, ಮತ್ತು ಯಾಕೆ?

10. ನಂಬಿಗಸ್ತ ಜನರು ಯಾವಾಗ ‘ವಾಸ್ತವವಾದ ಜೀವವನ್ನು’ ಆನಂದಿಸುವರು?

11. ದೇವರ ರಾಜ್ಯದ ಅಭಿರುಚಿಗಳನ್ನು ಪ್ರವರ್ಧಿಸಲು ಶ್ರಮಿಸುವುದು ಉದ್ದೇಶಭರಿತ ಕಾರ್ಯವಾಗಿದೆ ಏಕೆ?

12. ಸದ್ಯದ ವ್ಯವಸ್ಥೆಯಲ್ಲಿನ ಜೀವನಕ್ಕೂ ‘ವಾಸ್ತವವಾದ ಜೀವಕ್ಕೂ’ ಇರುವ ವ್ಯತ್ಯಾಸವನ್ನು ತಿಳಿಸಿರಿ.

13. ಒಂದು ದಂಪತಿ ಯೋಗ್ಯ ತ್ಯಾಗಗಳನ್ನು ಮಾಡಿದ್ದು ಹೇಗೆ?

14. ನಮ್ಮ ಜೀವನದ ನಿಜ ಉದ್ದೇಶವನ್ನು ಮರೆತುಬಿಡುವುದು ಯಾವ ದುರಂತಗಳಿಗೆ ನಡೆಸಸಾಧ್ಯವಿದೆ?

15. ಒಂದು ಕುಟುಂಬವು ‘ಲೋಕವನ್ನು ಪೂರ್ಣವಾಗಿ ಅನುಭೋಗಿಸದಿರುವುದರಿಂದ’ ಹೇಗೆ ಪ್ರಯೋಜನ ಹೊಂದಿತು?

16, 17. ಬೈಬಲು ಯಾವ ಪ್ರತಿಭಾವಂತ ವ್ಯಕ್ತಿಗಳ ಉದಾಹರಣೆಗಳನ್ನು ಕೊಡುತ್ತದೆ, ಮತ್ತು ಇವರನ್ನು ಯಾವುದಕ್ಕಾಗಿ ಸ್ಮರಿಸಲಾಗುತ್ತದೆ?

18. ಒಬ್ಬ ಯುವ ಕ್ರೈಸ್ತ ಪುರುಷನು ತನ್ನ ಜೀವನವನ್ನು ಹೇಗೆ ಉಪಯೋಗಿಸಲು ನಿರ್ಣಯಿಸಿದನು, ಮತ್ತು ಅವನಿಗೇನು ತಿಳಿದುಬಂತು?

19. ನಮಗೆ ಜೀವನದಲ್ಲಿ ನಿಜ ಉದ್ದೇಶ ಹೇಗೆ ಲಭಿಸುವುದು?

[ಪುಟ 21ರಲ್ಲಿರುವ ಚಿತ್ರಗಳು]

ಕ್ರೈಸ್ತರು ಯೋಗ್ಯ ತ್ಯಾಗಗಳನ್ನು ಮಾಡಬೇಕು