ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋವೇಲ ಹಾಗೂ ಆಮೋಸ ಪುಸ್ತಕಗಳ ಮುಖ್ಯಾಂಶಗಳು

ಯೋವೇಲ ಹಾಗೂ ಆಮೋಸ ಪುಸ್ತಕಗಳ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಯೋವೇಲ ಹಾಗೂ ಆಮೋಸ ಪುಸ್ತಕಗಳ ಮುಖ್ಯಾಂಶಗಳು

“ಪೆತೂವೇಲನ ಮಗನಾದ ಯೋವೇಲ” ಎಂದಷ್ಟೇ ಮಾಹಿತಿಯನ್ನು ಈ ಪ್ರವಾದಿಯು ತನ್ನ ಕುರಿತು ಕೊಡುತ್ತಾನೆ. (ಯೋವೇಲ 1:1) ತನ್ನ ಹೆಸರಿನ ಪುಸ್ತಕದಲ್ಲಿ ಯೋವೇಲನು ತನ್ನ ಸಂದೇಶವನ್ನು ಬಿಟ್ಟು ಬೇರೆ ವಿಷಯಗಳ ಬಗ್ಗೆ ಹೆಚ್ಚೇನನ್ನೂ ಹೇಳುವುದಿಲ್ಲ. ಆದುದರಿಂದ ಅವನು ಪ್ರವಾದನೆ ಮಾಡಿದ ಸಮಯ ಯಾವುದೆಂದು ಖಚಿತವಾಗಿ ಹೇಳಲಾಗುವುದಿಲ್ಲ. ಅದು ಸುಮಾರು ಸಾ.ಶ.ಪೂ. 820 ಅಂದರೆ ಉಜ್ಜೀಯನು ಯೆಹೂದದ ರಾಜನಾಗಿ ಒಂಬತ್ತು ವರ್ಷಗಳ ಬಳಿಕ ಆಗಿದ್ದಿರಬೇಕು ಎಂದು ಅಂದಾಜಿಗೆ ಹೇಳಬಹುದು. ಯೋವೇಲನಿಗೆ ತನ್ನ ಕುರಿತು ತಿಳಿಸಲು ಏಕೆ ಅಷ್ಟು ಸಂಕೋಚ? ಪ್ರಾಯಶಃ ಅವನು ಸಂದೇಶವಾಹಕನಾದ ತನಗಲ್ಲ ಬದಲಿಗೆ ಸಂದೇಶಕ್ಕೆ ಹೆಚ್ಚಿನ ಒತ್ತನ್ನು ನೀಡಬಯಸುತ್ತಾನೆ.

ಅಲ್ಲದೆ, ಉಜ್ಜೀಯನ ದಿನಗಳಲ್ಲಿ “ಗೊಲ್ಲನು, ಅತ್ತಿಹಣ್ಣು ಕೀಳುವವನು” ಆದ ಯೆಹೂದದ ನಿವಾಸಿಯಾದ ಆಮೋಸನಿಗೂ ಪ್ರವಾದಿಯ ನೇಮಕ ಸಿಗುತ್ತದೆ. (ಆಮೋಸ 7:14) ಯೋವೇಲನು ಯೆಹೂದದಲ್ಲಿ ಪ್ರವಾದಿಸುವಾಗ ಆಮೋಸನನ್ನು ಉತ್ತರದ ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯಕ್ಕೆ ಕಳುಹಿಸಲಾಗುತ್ತದೆ. ಆಮೋಸನು ಯೆಹೂದಕ್ಕೆ ಹಿಂತೆರಳಿದ ಬಳಿಕ ಅಂದರೆ ಸಾ.ಶ.ಪೂ. 804ರ ಸುಮಾರಿಗೆ ಈ ಪುಸ್ತಕವನ್ನು ಬರೆದು ಮುಗಿಸಲಾಯಿತು. ಅದನ್ನು ಸರಳವಾಗಿ ಬರೆಯಲಾಗಿರುವುದಾದರೂ ಅದರ ಶೈಲಿ ಕಣ್ಣಿಗೆ ಕಟ್ಟುವಂಥದ್ದು!

“ಅಯ್ಯೋ, ದಿನವೇ!”—ಏಕೆ?

(ಯೋವೇಲ 1:1-3:21)

ದರ್ಶನದಲ್ಲಿ ಯೋವೇಲನು ಚೂರಿಮಿಡತೆ, ಗುಂಪುಮಿಡತೆ ಮತ್ತು ದೊಡ್ಡಮಿಡತೆಗಳ ದಾಳಿಯನ್ನು ನೋಡುತ್ತಾನೆ. ಈ ದಾಳಿಕಾರ ಮಿಡತೆಗಳನ್ನು “ಪ್ರಬಲವಾದ ದೊಡ್ಡ ದಂಡು” ಎಂದೂ ‘ಶೂರರು’ ಎಂದೂ ಸಂಬೋಧಿಸಲಾಗಿದೆ. (ಯೋವೇಲ 1:4; 2:2-7) “ಅಯ್ಯೋ, ದಿನವೇ!” ಎಂದು ಯೋವೇಲನು ನಿಟ್ಟುಸಿರುಬಿಡುತ್ತಾನೆ ಏಕೆಂದರೆ, ‘ಯೆಹೋವನ ದಿನವು ಸಮೀಪಿಸಿತು; ಅದು ಸರ್ವಶಕ್ತನಿಂದ ನಾಶನದಿನವಾಗಿಯೇ ಬರುವದು.’ (ಯೋವೇಲ 1:15) ಚೀಯೋನಿನ ನಿವಾಸಿಗಳಿಗೆ ಯೆಹೋವನು, ‘ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಳ್ಳಿರಿ’ ಎಂಬ ಬುದ್ಧಿವಾದ ಕೊಡುತ್ತಾನೆ. ಅವರು ತಿರುಗಿಕೊಂಡಲ್ಲಿ ಯೆಹೋವನು “ತನ್ನ ಜನರನ್ನು ಕರುಣಿಸಿ” “ಬಡಗಣ ದಂಡನ್ನು” ಅಂದರೆ ಆ ಮಿಡತೆಗಳನ್ನು ಅಲ್ಲಿಂದ ದೂರ ತೊಲಗಿಸುವನು. ಯೆಹೋವನ ಮಹಾ ದಿನವು ಬರುವ ಮುಂಚೆ ಆತನು ‘ಎಲ್ಲಾ ಮನುಷ್ಯರ ಮೇಲೆ ತನ್ನ ಆತ್ಮವನ್ನು ಸುರಿಸುವನು’ ಮತ್ತು ‘ಭೂಮ್ಯಾಕಾಶಗಳಲ್ಲಿ ಉತ್ಪಾತಗಳನ್ನು ಉಂಟುಮಾಡುವನು.’—ಯೋವೇಲ 2:12, 18-20, 28-31.

“ನಿಮ್ಮ ಗುಳಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನಾಗಿಯೂ ಕುಡುಗೋಲುಗಳನ್ನು ಬರ್ಜಿಗಳನ್ನಾಗಿಯೂ ಮಾಡಿ” ಯುದ್ಧಕ್ಕೆ ಸನ್ನದ್ಧರಾಗಿರಿ ಎಂದು ಜನಾಂಗಗಳಿಗೆ ಆಹ್ವಾನಿಸಲಾಗಿದೆ. “ಯೆಹೋಷಾಫಾಟನ ನ್ಯಾಯತೀರ್ಪಿನ ತಗ್ಗಿಗೆ” (Bsi ಪಾದಟಿಪ್ಪಣಿ) ಬರುವಂತೆ ಅವರಿಗೆ ಅಪ್ಪಣೆಕೊಡಲಾಗಿದೆ. ಅಲ್ಲಿ ಅವರಿಗೆ ತೀರ್ಪುಮಾಡಿ ಅವರನ್ನು ನಾಶಮಾಡಲಾಗುವುದು. “ಆದರೆ ಯೆಹೂದವು ಸದಾ ಜನಭರಿತವಾಗಿರುವದು.”—ಯೋವೇಲ 3:10, 12, 20.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:15; 2:1, 11, 31; 3:14—“ಯೆಹೋವನ ದಿನ” ಅಂದರೇನು? ಯೆಹೋವನ ದಿನವು ಆತನು ತನ್ನ ವೈರಿಗಳ ಮೇಲೆ ನ್ಯಾಯತೀರ್ಪನ್ನು ತರುವ ಸಮಯವಾಗಿದ್ದು ವೈರಿಗಳಿಗೆ ನಾಶನ ಮತ್ತು ನಿಜ ಆರಾಧಕರಿಗೆ ರಕ್ಷಣೆಯನ್ನು ಸೂಚಿಸುತ್ತದೆ. ಉದಾಹರಣೆಗೆ, ಸಾ.ಶ.ಪೂ. 539ರಲ್ಲಿ ಪುರಾತನ ಬಾಬೆಲನ್ನು ಮೇದ್ಯ-ಪಾರಸಿಯರು ಸೋಲಿಸಿದಾಗ ಅಂಥದ್ದೇ ದಿನ ಎರಗಿತ್ತು. (ಯೆಶಾಯ 13:1, 6) ಇನ್ನೊಂದು “ಯೆಹೋವನ ದಿನ” ಹತ್ತಿರವಾಗಿದೆ. ಆಗ ಆತನು ತನ್ನ ನ್ಯಾಯತೀರ್ಪನ್ನು ಸುಳ್ಳು ಧರ್ಮಗಳ ಲೋಕ ಸಾಮ್ರಾಜ್ಯವಾದ ‘ಮಹಾ ಬಾಬೆಲ್‌’ ಮೇಲೆ ಜಾರಿಗೆತರುವನು.—ಪ್ರಕಟನೆ 18:1-4, 21.

2:1-10, 28—ಮಿಡತೆ ದಾಳಿಯ ಕುರಿತ ಪ್ರವಾದನೆಯು ಹೇಗೆ ನೆರವೇರಿದೆ? ಯೋವೇಲನ ಪುಸ್ತಕವು ವಿವರಿಸಿದಷ್ಟು ಪ್ರಮಾಣದ ಮಿಡತೆಗಳು ಕಾನಾನ್‌ ದೇಶವನ್ನು ದಾಳಿಮಾಡಿದ್ದರ ಬಗ್ಗೆ ಬೈಬಲಿನಲ್ಲಿ ಯಾವ ದಾಖಲೆಯೂ ಇಲ್ಲ. ಆದುದರಿಂದ ಯೋವೇಲನು ವರ್ಣಿಸಿದ ದಾಳಿಯು ಸಾ.ಶ. 33ರಲ್ಲಿ ನಡೆದಂಥ ಘಟನೆಯ ಪ್ರವಾದನಾರೂಪವಾಗಿತ್ತು ಎಂಬುದು ಸುವ್ಯಕ್ತ. ಆ ವರ್ಷದಲ್ಲಿ ಯೆಹೋವನು, ಕ್ರಿಸ್ತನ ಆರಂಭದ ಶಿಷ್ಯರ ಮೇಲೆ ಪವಿತ್ರಾತ್ಮವನ್ನು ಸುರಿಸಿದನು ಮತ್ತು ಅವರು ಆಗ ಸಾರಲಾರಂಭಿಸಿದ ಸಂದೇಶವು ಸುಳ್ಳು ಧರ್ಮದ ಮುಖಂಡರನ್ನು ಪೀಡಿಸಿತು. (ಅ. ಕೃತ್ಯಗಳು 2:1, 14-21; 5:27-33) ಇಂದು ತದ್ರೀತಿಯ ಕೆಲಸದಲ್ಲಿ ಭಾಗಿಗಳಾಗುವುದು ನಮ್ಮ ಭಾಗ್ಯವೇ ಸರಿ!

2:32—‘ಯೆಹೋವನ ನಾಮವನ್ನು ಹೇಳಿಕೊಳ್ಳುವುದು’ ಏನನ್ನು ಸೂಚಿಸುತ್ತದೆ? ದೇವರ ಹೆಸರನ್ನು ಹೇಳಿಕೊಳ್ಳುವುದರ ಅರ್ಥ ಆ ಹೆಸರನ್ನು ತಿಳಿದಿರುವುದು, ಅದಕ್ಕೆ ಗಾಢ ಗೌರವ ತೋರಿಸುವುದು ಮತ್ತು ಆ ಹೆಸರನ್ನು ಹೊಂದಿದವನನ್ನು ನೆಚ್ಚಿಕೊಂಡು ಆತನ ಮೇಲೆ ಭರವಸೆಯಿಡುವುದು ಆಗಿದೆ.—ರೋಮಾಪುರ 10:13, 14.

3:14—‘ತೀರ್ಪಿನ ತಗ್ಗು’ ಅಂದರೇನು? ಅದು ದೇವರು ತನ್ನ ನ್ಯಾಯತೀರ್ಪನ್ನು ವಿಧಿಸುವ ಸಾಂಕೇತಿಕ ಸ್ಥಳವಾಗಿದೆ. ಯೆಹೂದದ ಅರಸನಾದ ಯೆಹೋಷಾಫಾಟನ ಹೆಸರಿನ ಅರ್ಥ “ಯೆಹೋವನು ನ್ಯಾಯಾಧೀಶನು” ಎಂದಾಗಿದೆ. ಈ ರಾಜನ ದಿನಗಳಲ್ಲಿ ಯೆಹೋವನು ಸುತ್ತಲಿನ ಜನಾಂಗಗಳ ಮಿಲಿಟರಿ ಪಡೆಗಳಲ್ಲಿ ಗಲಿಬಿಲಿಯನ್ನುಂಟುಮಾಡುವ ಮೂಲಕ ಯೆಹೂದವನ್ನು ಸಂರಕ್ಷಿಸಿದನು. ಇದು ನಡೆದಂಥ ಸ್ಥಳವನ್ನು “ಯೆಹೋಷಾಫಾಟನ ತಗ್ಗು” (Bsi ರೆಫರೆನ್ಸ್‌ ಬೈಬಲ್‌ ಪಾದಟಿಪ್ಪಣಿ) ಎಂದೂ ಕರೆಯಲಾಗಿದೆ. (ಯೋವೇಲ 3:2, 12) ಅದು ನಮ್ಮ ದಿನಗಳಲ್ಲಿ, ಜನಾಂಗಗಳು ತೊಟ್ಟಿಯಲ್ಲಿರುವ ದ್ರಾಕ್ಷೆಗಳಂತೆ ತುಳಿಯಲ್ಪಡುವ ಸಾಂಕೇತಿಕ ನಿವೇಶನವನ್ನು ಸೂಚಿಸುತ್ತದೆ.—ಪ್ರಕಟನೆ 19:15.

ನಮಗಾಗಿರುವ ಪಾಠಗಳು:

1:13, 14. ರಕ್ಷಣೆ ಪಡೆಯಲು ಯಥಾರ್ಥವಾಗಿ ಪಶ್ಚಾತ್ತಾಪಪಡುವ ಮತ್ತು ಯೆಹೋವನೇ ಸತ್ಯ ದೇವರು ಎಂದು ಅಂಗೀಕರಿಸುವ ಅಗತ್ಯವಿದೆ.

2:12, 13. ಯಥಾರ್ಥವಾದ ಪಶ್ಚಾತ್ತಾಪವು ಹೃತ್ಪೂರ್ವಕವಾಗಿರಬೇಕು. ಅದರಲ್ಲಿ ಹೊರತೋರಿಕೆಗಾಗಿ “ಬಟ್ಟೆಗಳನ್ನಲ್ಲ,” ಬದಲಾಗಿ ಆಂತರಿಕವಾಗಿ ‘ಹೃದಯಗಳನ್ನು ಹರಿದುಕೊಳ್ಳುವುದು’ ಸೇರಿದೆ.

2:28-32. ‘ಯೆಹೋವನ ನಾಮವನ್ನು ಹೇಳಿಕೊಳ್ಳುವವರು’ ಮಾತ್ರ ಆತನ ‘ಭಯಂಕರವಾದ ಮಹಾದಿನದಂದು’ “ರಕ್ಷಣೆ” ಹೊಂದುವರು. ಯೆಹೋವನು ತನ್ನ ಆತ್ಮವನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸಿ ದೊಡ್ಡವರೂ ಚಿಕ್ಕವರೂ ಗಂಡಸರೂ ಹೆಂಗಸರೂ ಪ್ರವಾದಿಸುವ ಅಂದರೆ, “ದೇವರ ಮಹತ್ತುಗಳ ವಿಷಯವಾಗಿ” ಪ್ರಚುರಪಡಿಸುವ ಕೆಲಸದಲ್ಲಿ ಭಾಗವಹಿಸುವಂತೆ ಅವಕಾಶಕೊಟ್ಟಿರುವುದಕ್ಕಾಗಿ ನಾವೆಷ್ಟು ಆಭಾರಿಗಳು! (ಅ. ಕೃತ್ಯಗಳು 2:11) ಯೆಹೋವನ ದಿನವು ಸಮೀಪಿಸುತ್ತಿರುವಂತೆ ‘ಪರಿಶುದ್ಧವಾದ ನಡವಳಿಕೆಯಲ್ಲಿಯೂ ಭಕ್ತಿಯಲ್ಲಿಯೂ’ ನಾವು ಸಮೃದ್ಧರಾಗಬೇಕಲ್ಲವೇ?—2 ಪೇತ್ರ 3:10-12.

3:4-8, 19. ದೇವರು ಆಯ್ದುಕೊಂಡಿದ್ದ ಜನರಿಗೆ ಕೇಡುಮಾಡಿದಕ್ಕಾಗಿ ಯೆಹೂದದ ಸುತ್ತಲಿನ ಜನಾಂಗದವರಿಗೆ ದಂಡನೆಯಾಗುವುದು ಎಂದು ಯೋವೇಲನು ಪ್ರವಾದಿಸಿದನು. ಈ ಪ್ರವಾದನಾ ಮಾತುಗಳಿಗೆ ಸರಿಯಾಗಿ ಮುಖ್ಯ ಭೂಭಾಗದಲ್ಲಿದ್ದ ತೂರ್‌ ಪಟ್ಟಣವನ್ನು ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ನಾಶಮಾಡಿದನು. ತದನಂತರ, ತೂರಿನ ದ್ವೀಪ ಪಟ್ಟಣವನ್ನು ಮಹಾ ಅಲೆಗ್ಸಾಂಡರನು ಸೋಲಿಸಿದಾಗ ಸಾವಿರಾರು ಯೋಧರನ್ನು ಮತ್ತು ಗಣ್ಯ ವ್ಯಕ್ತಿಗಳನ್ನು ಕೊಲ್ಲಲಾಯಿತು ಹಾಗೂ 30,000 ನಿವಾಸಿಗಳನ್ನು ದಾಸತ್ವಕ್ಕೆ ಮಾರಲಾಯಿತು. ಫಿಲಿಷ್ಟಿಯರು ಸಹ ಅಲೆಗ್ಸಾಂಡರ್‌ ಮತ್ತು ಅವನ ಉತ್ತರಾಧಿಕಾರಿಗಳಿಂದ ಅಂಥದ್ದೇ ಪಾಡನ್ನು ಅನುಭವಿಸಿದರು. ಸಾ.ಶ.ಪೂ. ನಾಲ್ಕನೇ ಶತಮಾನದೊಳಗೆ ಎದೋಮ್‌ ಹಾಳಾಗಿ ಬಿದ್ದಿತ್ತು. (ಮಲಾಕಿಯ 1:3) ಈ ನೆರವೇರಿದ ಪ್ರವಾದನೆಗಳು, ಯೆಹೋವನು ವಾಗ್ದಾನಗಳನ್ನು ನೆರವೇರಿಸುವಾತನೆಂಬ ನಮ್ಮ ನಂಬಿಕೆಯನ್ನು ಬಲಗೊಳಿಸುತ್ತವೆ. ಇಂದು ತನ್ನ ಆರಾಧಕರನ್ನು ಹಿಂಸಿಸುವ ಜನಾಂಗಗಳೊಂದಿಗೆ ಯೆಹೋವನು ಮುಂದೆ ಹೇಗೆ ನಡೆದುಕೊಳ್ಳಲಿದ್ದಾನೆ ಎಂಬುದನ್ನೂ ಇದು ತೋರಿಸುತ್ತದೆ.

3:16-21. ‘ಭೂಮ್ಯಾಕಾಶಗಳು ನಡುಗುವವು’ ಮತ್ತು ಜನಾಂಗಗಳು ಯೆಹೋವನ ಪ್ರತಿಕೂಲ ತೀರ್ಪುಗಳನ್ನು ಅನುಭವಿಸುವವು. “ಆದರೆ ಯೆಹೋವನು ತನ್ನ ಜನರಿಗೆ ಆಶ್ರಯ” ಆಗಿದ್ದು ಅವರಿಗೆ ಪರದೈಸಿಕ ಪರಿಸ್ಥಿತಿಗಳಲ್ಲಿ ಜೀವವನ್ನು ದಯಪಾಲಿಸುವನು. ದುಷ್ಟ ಲೋಕಕ್ಕೆ ನ್ಯಾಯತೀರ್ಪನ್ನು ಜಾರಿಗೊಳಿಸುವ ಆತನ ದಿನವು ಸನ್ನಿಹದಲ್ಲಿರುವಾಗ ಆತನ ಸಮೀಪವೇ ಇರಲು ನಾವು ದೃಢಮನಸ್ಸನ್ನು ಮಾಡಬೇಕಲ್ಲವೇ?

“ನಿನ್ನ ದೇವರ ಬರುವಿಕೆಗೆ ನಿನ್ನನ್ನು ಸಿದ್ಧಮಾಡಿಕೋ”

(ಆಮೋಸ 1:1-9:15)

ಇಸ್ರಾಯೇಲಿನ ಸುತ್ತಲಿರುವ ವೈರಿ ಜನಾಂಗಗಳಿಗೆ ಮಾತ್ರವಲ್ಲ ಯೆಹೂದ ಮತ್ತು ಇಸ್ರಾಯೇಲಿಗೂ ಆಮೋಸನ ಬಳಿ ಸಂದೇಶವಿದೆ. ದೇವರ ಜನರೊಂದಿಗೆ ಕಠೋರವಾಗಿ ವ್ಯವಹರಿಸಿದ್ದಕ್ಕಾಗಿ ಸಿರಿಯ, ಫಿಲಿಷ್ಟಿಯ, ತೂರ್‌, ಎದೋಮ್‌ ಮತ್ತು ಮೋವಾಬಿಗೆ ನಾಶನ ಕಾದಿದೆ. ಮತ್ತು “ಯೆಹೋವನ ಧರ್ಮೋಪದೇಶವನ್ನು ನಿರಾಕರಿಸಿ”ದಕ್ಕಾಗಿ ಯೆಹೂದದ ನಿವಾಸಿಗಳಿಗೆ ನಾಶನ ಕಾದಿದೆ. (ಆಮೋಸ 2:4) ಹತ್ತು ಕುಲದ ಇಸ್ರಾಯೇಲ್‌ ರಾಜ್ಯದ ಕುರಿತೇನು? ಅದರ ಪಾಪಗಳಲ್ಲಿ, ದುರಾಸೆಯಿಂದ ಬಡವರ ಮೇಲೆ ನಡೆಸುವ ದಬ್ಬಾಳಿಕೆ, ಅನೈತಿಕತೆ ಮತ್ತು ದೇವರ ಪ್ರವಾದಿಗಳಿಗೆ ಅಗೌರವದ ಉಪಚಾರ ಸೇರಿವೆ. ಯೆಹೋವನು, ‘ಬೇತೇಲಿನ ಯಜ್ಞವೇದಿಗಳಿಗಾಗಿ ಮುಯ್ಯಿತೀರಿಸುವನು’ ಮತ್ತು ‘ಚಳಿಗಾಲದ ಅರಮನೆಯನ್ನೂ ಬೇಸಿಗೆಯ ಅರಮನೆಯನ್ನೂ ಹೊಡೆದುಹಾಕುವನು’ ಎಂದು ಆಮೋಸನು ಎಚ್ಚರಿಸುತ್ತಾನೆ.—ಆಮೋಸ 3:14, 15.

ಅನೇಕ ಸಲ ಶಿಕ್ಷಿಸಲ್ಪಟ್ಟರೂ ವಿಗ್ರಹಾರಾಧಕ ಇಸ್ರಾಯೇಲ್ಯರು ಮೊಂಡರಾಗಿಯೇ ಉಳಿಯುತ್ತಾರೆ. ಆಮೋಸನು ಅವರಿಗೆ, “ನಿನ್ನ ದೇವರ ಬರುವಿಕೆಗೆ ನಿನ್ನನ್ನು ಸಿದ್ಧಮಾಡಿಕೋ” ಎಂದು ಹೇಳುತ್ತಾನೆ. (ಆಮೋಸ 4:12) ಯೆಹೋವನ ದಿನವು ಇಸ್ರಾಯೇಲ್ಯರಿಗೆ “ದಮಸ್ಕದ ಆಚೆ” ಅಂದರೆ ಅಶ್ಶೂರ್ಯಕ್ಕೆ “ಸೆರೆಗೆ” ಹೋಗುವ ದಿನವಾಗಿರುವುದು. (ಆಮೋಸ 5:27) ಬೇತೇಲಿನ ಯಾಜಕನೊಬ್ಬನಿಂದ ಆಮೋಸನು ವಿರೋಧವನ್ನು ಎದುರಿಸುತ್ತಾನೆ ಆದರೆ ಅವನು ಹೆದರುವುದಿಲ್ಲ. ಯೆಹೋವನು ಆಮೋಸನಿಗನ್ನುವುದು: “ಇಸ್ರಾಯೇಲೆಂಬ ನನ್ನ ಜನರಿಗೆ ಕಡೆಗಾಲವು ಮಾಗುತ್ತಾ ಬಂದಿದೆ; ಇನ್ನು ಅವರನ್ನು ಕಂಡುಕಾಣದ ಹಾಗಿರೆನು.” (ಆಮೋಸ 8:2) ಯೆಹೋವನ ತೀರ್ಪುಗಳಿಂದ ಮರೆಯಾಗಿರಲು ಪಾತಾಳವಾಗಲಿ ಎತ್ತರದ ಬೆಟ್ಟಗಳಾಗಲಿ ಅವರಿಗೆ ಸಹಾಯಮಾಡಲಾರವು. (ಆಮೋಸ 9:2, 3) ಹಾಗಿದ್ದರೂ ಪುನಃಸ್ಥಾಪನೆಯ ವಾಗ್ದಾನವಿದೆ. “ನಾನು ನನ್ನ ಜನರಾದ ಇಸ್ರಾಯೇಲ್ಯರ ದುರವಸ್ಥೆಯನ್ನು ತಪ್ಪಿಸುವೆನು; ಅವರು ಹಾಳುಬಿದ್ದ ಪಟ್ಟಣಗಳನ್ನು ಪುನಃ ಕಟ್ಟಿ ಅವುಗಳಲ್ಲಿ ವಾಸಿಸುವರು; ದ್ರಾಕ್ಷೆಯ ತೋಟಗಳನ್ನು ಮಾಡಿಕೊಂಡು ಅವುಗಳ ದ್ರಾಕ್ಷಾರಸವನ್ನು ಕುಡಿಯುವರು; ಫಲವೃಕ್ಷಗಳನ್ನು ಬೆಳೆಯಿಸಿ ಅವುಗಳ ಹಣ್ಣುಗಳನ್ನು ತಿನ್ನುವರು” ಎಂದು ಯೆಹೋವನು ಹೇಳುತ್ತಾನೆ.—ಆಮೋಸ 9:14.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

4:1—‘ಬಾಷಾನಿನ ಆಕಳುಗಳು’ ಯಾರನ್ನು ಸೂಚಿಸುತ್ತವೆ? ಗಲಿಲಾಯ ಸಮುದ್ರದ ಪೂರ್ವಕ್ಕಿರುವ ಬಾಷಾನಿನ ಎತ್ತರವಾದ ಪ್ರಸ್ಥಭೂಮಿಯು ಒಳ್ಳೇ ಜಾತಿಯ ಪ್ರಾಣಿಗಳಿಗೆ ಹೆಸರಾಂತವಾಗಿತ್ತು. ಇವುಗಳಲ್ಲಿ ಆಕಳುಗಳು ಸೇರಿದ್ದವು. ಈ ಪ್ರದೇಶದಲ್ಲಿರುವ ಸಮೃದ್ಧ ಹುಲ್ಲುಗಾವಲುಗಳು ಇದಕ್ಕೆ ಕಾರಣ. ಸುಖಭೋಗಗಳನ್ನು ಪ್ರೀತಿಸುವ ಸಮಾರ್ಯದ ಸ್ತ್ರೀಯರನ್ನು ಆಮೋಸನು ಬಾಷಾನಿನ ಆಕಳುಗಳಿಗೆ ಹೋಲಿಸುತ್ತಾನೆ. ಈ ಸ್ತ್ರೀಯರು ತಮಗಿದ್ದ ಐಶ್ವರ್ಯದ ತೃಷೆಯನ್ನು ತಣಿಸುವ ಸಲುವಾಗಿ ಬಡವರಿಗೆ ಮೋಸಮಾಡುವಂತೆ ತಮ್ಮ ‘ಪತಿಗಳನ್ನು’ ದಬಾಯಿಸುತ್ತಿದ್ದರೆಂಬುದು ನಿಸ್ಸಂದೇಹ.

4:6—‘ನಿಮ್ಮ ಹಲ್ಲಿಗೆ ಏನೂ ಸಿಕ್ಕದಂತೆ ಮಾಡು’ ಎಂಬ ಅಭಿವ್ಯಕ್ತಿಯ ಅರ್ಥವೇನು? “ಅನ್ನದ ಕೊರತೆ” ಎಂಬ ವಾಕ್ಸರಣಿಯೊಂದಿಗೆ ಉಪಯೋಗಿಸಲ್ಪಡುವ ಈ ಅಭಿವ್ಯಕ್ತಿ, ಆಹಾರದ ಕೊರತೆಯಿಂದಾಗಿ ಹಲ್ಲುಗಳಿಗೆ ಏನೂ ಸಿಗದಿರುವ ಬರಗಾಲದ ಸಮಯವನ್ನು ಸೂಚಿಸಬಹುದು.

5:5—ಇಸ್ರಾಯೇಲ್‌ ಯಾವ ಅರ್ಥದಲ್ಲಿ ‘ಬೇತೇಲನ್ನು ಆಶ್ರಯಿಸಬಾರದಿತ್ತು?’ ಯಾರೊಬ್ಬಾಮನು ಬೇತೇಲಿನಲ್ಲಿ ಬಸವನ ಆರಾಧನೆಯನ್ನು ಸ್ಥಾಪಿಸಿದ್ದನು. ಅಂದಿನಿಂದ ಆ ಪಟ್ಟಣವು ಸುಳ್ಳಾರಾಧನೆಯ ಕೇಂದ್ರವಾಗಿತ್ತು. ಗಿಲ್ಗಾಲ್‌ ಮತ್ತು ಬೇರ್ಷೆಬ ಸಹ ಧರ್ಮಭ್ರಷ್ಟ ಆರಾಧನೆಯ ನಿವೇಶನಗಳಾಗಿದ್ದಿರಬೇಕು. ಮುಂತಿಳಿಸಿದ ವಿಪತ್ತನ್ನು ತಪ್ಪಿಸಿಕೊಳ್ಳಲು ಇಸ್ರಾಯೇಲ್ಯರು ಇಂಥ ಸ್ಥಳಗಳಿಗೆ ಧಾರ್ಮಿಕ ಯಾತ್ರೆ ಬೆಳೆಸುವುದನ್ನು ನಿಲ್ಲಿಸಿ ಯೆಹೋವನನ್ನು ಹುಡುಕಲು ಆರಂಭಿಸಬೇಕಾಗಿತ್ತು.

7:1—‘ರಾಜಾದಾಯದ ಹುಲ್ಲು’ ಯಾವುದನ್ನು ಸೂಚಿಸುತ್ತದೆ? ಇದು, ಪ್ರಾಯಶಃ ರಾಜನು ತನ್ನ ರಾಹುತರನ್ನು ಮತ್ತು ಪ್ರಾಣಿಗಳನ್ನು ನೋಡಿಕೊಳ್ಳಲು ಹೊರಿಸಿದ ತೆರಿಗೆಯನ್ನು ಸೂಚಿಸುತ್ತದೆ. ಈ ತೆರಿಗೆಯನ್ನು “ಪೈರು ಸೊಂಪಾಗುವದಕ್ಕೆ ಆರಂಭ”ದಲ್ಲಿ ಕಟ್ಟಬೇಕಿತ್ತು. ತದನಂತರ ಜನರು ಸುಗ್ಗಿಮಾಡಬಹುದಿತ್ತು. ಆದರೆ ಅವರು ಹಾಗೆ ಮಾಡುವ ಮೊದಲೇ ಮಿಡತೆಗಳ ದೊಡ್ಡ ದಂಡು ಬಂದು ಅವರ ಬೆಳೆಗಳನ್ನೂ ಇತರ ಕಾಯಿಪಲ್ಯಗಳನ್ನೂ ಧ್ವಂಸಮಾಡಿತು.

8:1, 2—“ಮಾಗಿದ ಹಣ್ಣಿನ ಪುಟ್ಟಿ” ಏನನ್ನು ಸೂಚಿಸಿತು? ಯೆಹೋವನ ದಿನವು ಹತ್ತಿರವಾಗಿದೆ ಎಂದು ಅದು ಸೂಚಿಸಿತು. ಮಾಗಿದ ಹಣ್ಣನ್ನು ಕೊಯ್ಲಿನ ಕೊನೆಭಾಗದಲ್ಲಿ ಅಂದರೆ ಕೃಷಿ ವರ್ಷದ ಅಂತ್ಯ ಭಾಗದಲ್ಲಿ ಕೀಳಲಾಗುತ್ತದೆ. ಯೆಹೋವನು “ಮಾಗಿದ ಹಣ್ಣಿನ ಪುಟ್ಟಿ”ಯನ್ನು ಆಮೋಸನಿಗೆ ಕಾಣುವಂತೆ ಮಾಡಿದಾಗ ಇಸ್ರಾಯೇಲಿನ ಅಂತ್ಯವು ಹತ್ತಿರವಾಗಿತ್ತೆಂದು ಅದು ಸೂಚಿಸಿತು. ಆದುದರಿಂದಲೇ ದೇವರು ಆಮೋಸನಿಗೆ ಹೇಳಿದ್ದು: “ನನ್ನ ಜನರಿಗೆ ಕಡೆಗಾಲವು ಮಾಗುತ್ತಾ ಬಂದಿದೆ; ಇನ್ನು ಅವರನ್ನು ಕಂಡುಕಾಣದ ಹಾಗಿರೆನು.”

ನಮಗಾಗಿರುವ ಪಾಠಗಳು:

1:3, 6, 9, 11, 13; 2:1, 4, 6. ಯೆಹೋವನು ಇಸ್ರಾಯೇಲ್‌, ಯೆಹೂದ ಮತ್ತು ಅವುಗಳ ಸುತ್ತಲಿನ ಆರು ಜನಾಂಗಗಳ ಮೇಲೆ ಕುಪಿತನಾಗಿ ಹೇಳುವುದು: “ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ.” ಯೆಹೋವನ ನ್ಯಾಯತೀರ್ಪುಗಳನ್ನು ತಪ್ಪಿಸುವುದು ಅಸಾಧ್ಯ.—ಆಮೋಸ 9:2-5.

2:12. ಶ್ರಮಿಸುವ ಪಯನೀಯರರು, ಸಂಚರಣಾ ಮೇಲ್ವಿಚಾರಕರು, ಮಿಷನೆರಿಗಳು ಅಥವಾ ಬೆತೆಲ್‌ ಕುಟುಂಬದ ಸದಸ್ಯರು ತಮ್ಮ ಪೂರ್ಣ ಸಮಯದ ಸೇವೆಯನ್ನು ತೊರೆದು ‘ಸಹಜ ಜೀವನ’ ಎಂದು ಕರೆಯಲಾಗುವ ಜೀವನವನ್ನು ನಡೆಸಲಿಕ್ಕಾಗಿ ಉತ್ತೇಜಿಸುವ ಮೂಲಕ ನಾವು ಅವರನ್ನು ನಿರುತ್ಸಾಹಗೊಳಿಸಬಾರದು. ಬದಲಿಗೆ ಅವರು ತಮ್ಮ ಒಳ್ಳೇ ಕೆಲಸವನ್ನು ಮುಂದುವರಿಸಲು ನಾವು ಪ್ರೋತ್ಸಾಹಿಸಬೇಕು.

3:8. ಸಿಂಹಗರ್ಜನೆಯು ಭಯಹುಟ್ಟಿಸುವ ಹಾಗೆಯೇ, “ಹೋಗಿ ನನ್ನ ಜನರಾದ ಇಸ್ರಾಯೇಲ್ಯರಿಗೆ ಪ್ರವಾದನೆಮಾಡು” ಎಂಬ ಯೆಹೋವನ ಮಾತನ್ನು ಕೇಳಿಸಿಕೊಂಡಾಗ ಆಮೋಸನಲ್ಲಿ ಸಾರುವ ಅಪೇಕ್ಷೆ ಹುಟ್ಟಿತು. (ಆಮೋಸ 7:15) ರಾಜ್ಯ ಸಂದೇಶವನ್ನು ಹುರುಪಿನಿಂದ ಸಾರಲು ದೈವಿಕ ಭಯವು ನಮ್ಮನ್ನು ಪ್ರಚೋದಿಸಬೇಕು.

3:13-15; 5:11. ಐಶ್ವರ್ಯವಂತರು ಮತ್ತು ಈ ಕಾರಣದಿಂದ ಅನಾಸಕ್ತರೂ ಆಗಿದ್ದ ಜನರಿಗೆ “ಎಚ್ಚರಿಕೆ ಹೇಳಲು” ಬಡ ಗೊಲ್ಲನಾದ ಆಮೋಸನಿಗೆ ಸಾಧ್ಯವಾದದ್ದು ಯೆಹೋವನ ಸಹಾಯದಿಂದಲೇ. ತದ್ರೀತಿಯಲ್ಲಿ ನಮ್ಮ ಟೆರಿಟೊರಿ ಎಷ್ಟೇ ಕಷ್ಟಕರವಾಗಿದ್ದರೂ ರಾಜ್ಯ ಸಂದೇಶವನ್ನು ಪ್ರಚುರಪಡಿಸಲು ಯೆಹೋವನು ನಮ್ಮನ್ನು ಸಜ್ಜುಗೊಳಿಸಬಲ್ಲನು.

4:6-11; 5:4, 6, 14. ಯೆಹೋವನ ಕಡೆಗೆ ‘ಹಿಂತಿರುಗಲು’ ಇಸ್ರಾಯೇಲ್ಯರು ಮತ್ತೆ ಮತ್ತೆ ತಪ್ಪಿಬಿದ್ದರೂ ಯೆಹೋವನು ಅವರಿಗೆ ಹೇಳಿದ್ದು: “ನನ್ನನ್ನೇ ಆಶ್ರಯಿಸಿ ಬದುಕಿಕೊಳ್ಳಿರಿ.” ಈ ದುಷ್ಟ ವ್ಯವಸ್ಥೆ ಮುಂದುವರಿಯಲು ಯೆಹೋವನು ಬಿಡುವವರೆಗೆ ಆತನ ಕಡೆಗೆ ತಿರುಗಿಕೊಳ್ಳುವಂತೆ ನಾವು ಜನರನ್ನು ಪ್ರಚೋದಿಸಬೇಕು.

5:18, 19. ಸಿದ್ಧರಾಗಿರದೆ ‘ಯೆಹೋವನ ದಿನವನ್ನು ನಿರೀಕ್ಷಿಸಿಕೊಂಡಿರುವುದು’ ಮೂರ್ಖತನ. ಹೀಗೆ ಮಾಡುವ ವ್ಯಕ್ತಿಯ ಸನ್ನಿವೇಶವು ಸಿಂಹದಿಂದ ಓಡಿಹೋಗುವಾಗ ಕರಡಿ ಎದುರಾಗಿ ಅಲ್ಲಿಂದ ತಪ್ಪಿಸಿಕೊಳ್ಳಲೆಂದು ಹೋಗುವಾಗ ಹಾವು ಕಚ್ಚುವುದಕ್ಕೆ ಸಮಾನ. ನಾವು ಆಧ್ಯಾತ್ಮಿಕವಾಗಿ “ಎಚ್ಚರವಾಗಿ” ಸಿದ್ಧರಾಗಿದ್ದರೆ ಅದು ವಿವೇಕಪ್ರದ.—ಲೂಕ 21:36.

7:12-17. ದೇವರ ಸಂದೇಶವನ್ನು ನಾವು ನಿರ್ಭೀತರೂ ಧೀರರೂ ಆಗಿ ಪ್ರಚುರಪಡಿಸಬೇಕು.

9:7-10. ಅಪನಂಬಿಗಸ್ತ ಇಸ್ರಾಯೇಲ್ಯರು ನಂಬಿಗಸ್ತರಾಗಿದ್ದ ಮೂಲಪಿತೃಗಳ ಮತ್ತು ದೇವರು ಆಯ್ದುಕೊಂಡ ಜನರಾಗಿ ಐಗುಪ್ತದಿಂದ ಪಾರಾದವರ ವಂಶಜರಾಗಿದ್ದರೂ ಅವರು ಕೂಷ್ಯರಂತೆ ದೇವರ ಮುಂದೆ ಕೆಟ್ಟ ನಿಲುವನ್ನು ಹೊಂದಿದರು. ನಿಷ್ಪಕ್ಷಪಾತದ ದೇವರೊಂದಿಗೆ ಅಂಗೀಕೃತ ನಿಲುವನ್ನು ಪಡೆದುಕೊಳ್ಳುವುದು ನಿರ್ದಿಷ್ಟ ಕುಟುಂಬದಲ್ಲಿ ಹುಟ್ಟುವುದರ ಮೇಲೆ ಅಲ್ಲ ಬದಲಿಗೆ ‘ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವುದರ’ ಮೇಲೆ ಅವಲಂಬಿಸಿದೆ.—ಅ. ಕೃತ್ಯಗಳು 10:34, 35.

ನಾವು ಮಾಡಬೇಕಾದದ್ದೇನು?

ಸೈತಾನನ ಲೋಕಕ್ಕೆ ದೈವಿಕ ನ್ಯಾಯತೀರ್ಪನ್ನು ಜಾರಿಗೊಳಿಸುವ ದಿನವು ಹತ್ತಿರವಾಗಿದೆ. ದೇವರು ತನ್ನ ಆರಾಧಕರ ಮೇಲೆ ತನ್ನ ಆತ್ಮವನ್ನು ಸುರಿಸಿ, ಮುಂಬರುವ ತನ್ನ ದಿನದ ಕುರಿತು ಅವರು ಮಾನವಕುಲದವರನ್ನು ಎಚ್ಚರಿಸುವಂತೆ ಸಜ್ಜುಗೊಳಿಸಿದ್ದಾನೆ. ಇತರರು ಯೆಹೋವನ ಕುರಿತು ತಿಳಿದು, ಆತನ ‘ನಾಮವನ್ನು ಹೇಳಿಕೊಳ್ಳುವಂತೆ’ ಸಹಾಯಮಾಡುವುದರಲ್ಲಿ ನಾವು ಪೂರ್ಣವಾಗಿ ಪಾಲ್ಗೊಳ್ಳಬೇಕಲ್ಲವೇ?—ಯೋವೇಲ 2:31, 32.

“ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೇದನ್ನು ಪ್ರೀತಿಸಿರಿ, ಚಾವಡಿಯಲ್ಲಿ ನ್ಯಾಯವನ್ನು ಸ್ಥಾಪಿಸಿರಿ” ಎಂದು ಆಮೋಸನು ಬುದ್ಧಿಹೇಳುತ್ತಾನೆ. (ಆಮೋಸ 5:15) ಯೆಹೋವನ ದಿನ ಹತ್ತಿರವಾದಂತೆ ದೇವರ ಸನ್ನಿಹಕ್ಕೆ ಸರಿಯುವುದು ಮತ್ತು ದುಷ್ಟ ಲೋಕದಿಂದ ಹಾಗೂ ಅದರ ಭ್ರಷ್ಟ ಒಡನಾಟಗಳಿಂದ ನಮ್ಮನ್ನು ಪ್ರತ್ಯೇಕವಾಗಿರಿಸುವುದು ವಿವೇಕದ ಮಾರ್ಗವಾಗಿದೆ. ಇದನ್ನು ಮಾಡಲು ಎಂಥ ಸಮಯೋಚಿತ ಪಾಠಗಳನ್ನು ನಾವು ಯೋವೇಲ ಮತ್ತು ಆಮೋಸ ಎಂಬ ಬೈಬಲ್‌ ಪುಸ್ತಕಗಳಿಂದ ಕಲಿಯಬಲ್ಲೆವು!—ಇಬ್ರಿಯ 4:12. (w07 10/1)