ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೇವಲ ಇವತ್ತಿಗಾಗಿ ಜೀವಿಸಿದರೆ ಸಾಕೋ?

ಕೇವಲ ಇವತ್ತಿಗಾಗಿ ಜೀವಿಸಿದರೆ ಸಾಕೋ?

ಕೇವಲ ಇವತ್ತಿಗಾಗಿ ಜೀವಿಸಿದರೆ ಸಾಕೋ?

“ನಾನು ಭವಿಷ್ಯದ ಕುರಿತಾಗಿ ಯೋಚಿಸುವುದೇ ಇಲ್ಲ. ಏಕೆಂದರೆ ಅದು ನೆನಸುವುದರೊಳಗೆ ಬಂದುಬಿಡುತ್ತದೆ.” ಈ ಮಾತುಗಳನ್ನು ನುಡಿದವರು ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೈನ್‌. ಇಂದೂ ಅನೇಕ ಜನರು ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. “ನಾಳಿನ ಚಿಂತೆ ಏಕೆ?” ಎಂದವರು ಹೇಳುತ್ತಾರೆ. ಅಥವಾ, “ಏನು ಮಾಡುತ್ತಾ ಇದ್ದೀರೊ ಅದನ್ನೇ ಮಾಡುತ್ತಾ ಇರಿ,” “ಇವತ್ತಿನದ್ದನ್ನು ಇವತ್ತು ನೋಡೋಣ,” “ನಾಳಿನ ಚಿಂತೆ ಬೇಡ” ಎಂದೂ ಜನರು ಹೇಳುವುದನ್ನು ನೀವು ಕೇಳಿರಬಹುದು.

ಈ ಸರ್ವಸಾಮಾನ್ಯ ಮನೋಭಾವವು ಹೊಸತೇನಲ್ಲ. ಪ್ರಾಚೀನಕಾಲದ ಎಪಿಕೂರಿಯರ ಧ್ಯೇಯಮಂತ್ರವೂ ಇದೇ ಆಗಿತ್ತು: “ತಿಂದು, ಕುಡಿದು, ಮಜಾ ಮಾಡು. ಬೇರೇನೂ ಮುಖ್ಯವಲ್ಲ.” ಅಪೊಸ್ತಲ ಪೌಲನ ಕೆಲವು ಸಮಕಾಲೀನರಿಗೂ ಇದೇ ರೀತಿಯ ನೋಟವಿತ್ತು: “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.” (1 ಕೊರಿಂಥ 15:32) ಈ ಅಲ್ಪಕಾಲಿಕ ಜೀವನವಲ್ಲದೆ ಬೇರೇನೂ ಇಲ್ಲವೆಂದು ಅವರು ನಂಬುತ್ತಿದ್ದರು. ಆದುದರಿಂದ ಈ ಜೀವನವನ್ನು ಪೂರ್ತಿಯಾಗಿ ಆನಂದಿಸಿಯೇ ತೀರಬೇಕೆಂಬ ವಿಚಾರವನ್ನು ಅವರು ಪ್ರವರ್ಧಿಸಿದರು.

ಆದರೆ ಭೂಮಿಯಲ್ಲಿರುವ ಲಕ್ಷಾಂತರ ನಿವಾಸಿಗಳಿಗೆ ಈ ಜೀವನವನ್ನು ಪೂರ್ತಿಯಾಗಿ ಆನಂದಿಸುವುದೆಂದರೆ, ಸುಖಭೋಗದ ಬೆನ್ನಟ್ಟುವಿಕೆಯಂತೂ ಖಂಡಿತ ಅಲ್ಲ. ಇಂದಿನ ಕಷ್ಟಕರ ಪರಿಸ್ಥಿತಿಗಳಿಂದಾಗಿ ಅನೇಕರಿಗೆ ಪ್ರತಿಯೊಂದು ದಿನವನ್ನು ತಳ್ಳುವುದೇ ಸತತವಾದ, ವ್ಯಥೆ ತುಂಬಿದ ಹೋರಾಟ. ಹೀಗಿರುವುದರಿಂದ ಅವರು ಭವಿಷ್ಯದ ಕುರಿತಾಗಿ ಏಕೆ ಯೋಚಿಸಬೇಕು? ಹೇಗೂ ‘ನಾಳಿನ’ ದಿನವು ತಾಳಲಾಗದಷ್ಟು ಕರಾಳವೂ ಆಶಾಹೀನವೂ ಆಗಿರುವುದಲ್ಲವೋ?

ನಾಳೆಗಾಗಿ ಯೋಜಿಸಬೇಕೋ?

ಹಾಯಾಗಿ ಜೀವಿಸುವವರಿಗೂ ನಾಳೆಗಾಗಿ ಯೋಜನೆಮಾಡುವುದು ವ್ಯರ್ಥವೆಂದನಿಸುತ್ತದೆ. “ಸುಮ್ಮನೆ ಯಾಕೆ?” ಎಂದವರು ಕೇಳಬಹುದು. ಯೋಜನೆಮಾಡಿದವರಿಗೇ ಎಷ್ಟೋ ಸಲ ನಿರಾಶೆಯಾದದ್ದುಂಟು ಎಂದು ಕೆಲವರು ತರ್ಕಿಸುತ್ತಾರೆ. ಪುರಾತನಕಾಲದ ಮೂಲಪಿತೃ ಯೋಬನಿಗೂ ಹೀಗೆ ಆಯಿತು. ಅವನ ಹಾಗೂ ಅವನ ಕುಟುಂಬದ ಸಂತೋಷಕರ ಭವಿಷ್ಯಕ್ಕಾಗಿ ಅವನು ಮಾಡಿದ್ದ ಯೋಜನೆಗಳೆಲ್ಲವೂ ‘ಭಂಗವಾಗುವುದನ್ನು’ ನೋಡಿ ಅವನಿಗೆ ಬಹಳಷ್ಟು ಸಂಕಟವಾಯಿತು.—ಯೋಬ 17:11; ಪ್ರಸಂಗಿ 9:11.

ಸ್ಕಾಟ್‌ಲಂಡ್‌ನ ಕವಿ ರಾಬರ್ಟ್‌ ಬರ್ನ್ಸ್‌ ಎಂಬವರು ನಮ್ಮ ಅವಸ್ಥೆಯನ್ನು ಒಂದು ಹೊಲದ-ಇಲಿಗೆ ಹೋಲಿಸುತ್ತಾರೆ. ನೇಗಿಲ ಅಲಗಿನಿಂದ ಆ ಇಲಿಯ ಬಿಲವನ್ನು ಬರ್ನ್ಸ್‌ ತಿಳಿಯದೆ ಕೆಡವಿಬಿಟ್ಟರು. ತನ್ನ ಪ್ರಪಂಚವೇ ಅಡಿಮೇಲಾದದ್ದನ್ನು ನೋಡಿ ಆ ಇಲಿ ಜೀವ ಬಚಾವಿಗಾಗಿ ಓಡಿಹೋಯಿತು. ಆಗ ಆ ಕವಿಯ ಮನಸ್ಸಿಗೆ ಈ ಯೋಚನೆ ಬಂತು: ‘ನಾವು ಚೆನ್ನಾಗಿ ಮಾಡಿದಂಥ ಯೋಜನೆಗಳು ನಮ್ಮ ಹತೋಟಿಯಲ್ಲಿಲ್ಲದ ಘಟನೆಗಳಿಂದ ಸಂಪೂರ್ಣವಾಗಿ ನೆಲಕಚ್ಚುವಾಗ ನಾವು ಸಹ ಹೀಗೆಯೇ ಎಷ್ಟೋ ಸಲ ನಿಸ್ಸಹಾಯಕರಾಗುತ್ತೇವಲ್ಲಾ.’

ಹಾಗಾದರೆ ಭವಿಷ್ಯಕ್ಕಾಗಿ ಯೋಜಿಸುವುದು ವ್ಯರ್ಥವೆಂದು ಇದರರ್ಥವೋ? ವಾಸ್ತವಾಂಶವೇನೆಂದರೆ, ಸರಿಯಾದ ಯೋಜನೆಗಳನ್ನು ಮಾಡದಿರುವಾಗ ಫಲಿತಾಂಶಗಳು ಧ್ವಂಸಕರವಾಗಿರುತ್ತವೆ. ಇದನ್ನು, ಚಂಡಮಾರುತಗಳು ಇಲ್ಲವೇ ಬೇರಾವುದೇ ನೈಸರ್ಗಿಕ ವಿಪತ್ತುಗಳು ಸಂಭವಿಸುವಾಗ ನೋಡಬಹುದು. ಉದಾಹರಣೆಗೆ ಕಟ್ರೀನಾ ಚಂಡಮಾರುತವನ್ನು ತೆಗೆದುಕೊಳ್ಳಿ. ಅದನ್ನು ಯಾರೂ ತಡೆಗಟ್ಟಸಾಧ್ಯವಿರಲಿಲ್ಲ ಎಂಬುದು ಒಪ್ಪತಕ್ಕದ್ದೇ. ಆದರೆ ಮುಂದಾಲೋಚಿಸಿ ಯೋಜನೆಗಳನ್ನು ಮಾಡಿದ್ದಲ್ಲಿ, ಆ ನಗರ ಮತ್ತು ಅದರ ನಿವಾಸಿಗಳಿಗಾದ ನಷ್ಟಗಳು ಕಡಿಮೆಯಾಗುತ್ತಿತ್ತಲ್ಲವೇ?

ನೀವೇನು ನೆನಸುತ್ತೀರಿ? ನಾಳಿನ ದಿನದ ಪರಿವೇ ಇಲ್ಲದೆ ಕೇವಲ ಇವತ್ತಿಗಾಗಿ ಬದುಕುವುದು ತರ್ಕಸಂಗತವೋ? ಈ ವಿಷಯದ ಕುರಿತು ಮುಂದಿನ ಲೇಖನ ಏನು ಹೇಳಲಿದೆ ಎಂಬುದನ್ನು ಪರಿಗಣಿಸಿರಿ. (w07 10/15)

[ಪುಟ 3ರಲ್ಲಿರುವ ಚಿತ್ರಗಳು]

“ತಿಂದು, ಕುಡಿದು, ಮಜಾ ಮಾಡು. ಬೇರೇನು ಮುಖ್ಯವಲ್ಲ”