ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ದೇವರ ಅಗಾಧವಾದ ವಿಷಯಗಳನ್ನು” ಪರಿಶೋಧಿಸುವುದು

“ದೇವರ ಅಗಾಧವಾದ ವಿಷಯಗಳನ್ನು” ಪರಿಶೋಧಿಸುವುದು

“ದೇವರ ಅಗಾಧವಾದ ವಿಷಯಗಳನ್ನು” ಪರಿಶೋಧಿಸುವುದು

‘ಆ ಆತ್ಮವು ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸುತ್ತದೆ.’—1 ಕೊರಿಂಥ 2:10.

ನಾವು ಮೊದಲಾಗಿ ಸತ್ಯವನ್ನು ಕಲಿತಾಗ ನಮಗಾದ ಅಪಾರ ಸಂತೋಷವನ್ನು ಕ್ರೈಸ್ತ ಸಭೆಯಲ್ಲಿರುವ ನಮ್ಮಲ್ಲಿ ಹೆಚ್ಚಿನವರು ನೆನಪಿಗೆ ತರಬಲ್ಲೆವು. ಯೆಹೋವನ ನಾಮವು ಏಕೆ ಮಹತ್ವವುಳ್ಳದ್ದು, ಆತನು ಕಷ್ಟಸಂಕಟಕ್ಕೆ ಅವಕಾಶ ಕೊಡುವುದೇಕೆ, ಕೆಲವು ಜನರು ಸ್ವರ್ಗಕ್ಕೆ ಹೋಗುವುದೇಕೆ ಮತ್ತು ನಂಬಿಗಸ್ತರಾದ ಸಾಮಾನ್ಯ ಜನತೆಗೆ ಭವಿಷ್ಯತ್ತಿನಲ್ಲೇನು ಕಾದಿದೆ ಎಂಬುದನ್ನು ನಾವು ಕಲಿತೆವು. ಅದಕ್ಕೆ ಮೊದಲೇ ನಾವು ಬೈಬಲನ್ನು ಪರೀಕ್ಷಿಸಿದ್ದಿರಬಹುದು ಆದರೆ ಈ ವಿಷಯಗಳು ಮಾನವಕುಲದ ಹೆಚ್ಚಿನವರಿಗೆ ಹೇಗೋ ಹಾಗೆಯೇ ನಮಗೂ ಮರೆಯಾಗಿದ್ದವು. ನೀರಿನ ಮೇಲಿನಿಂದ ಹವಳದ ದಿಬ್ಬವನ್ನು ಜಾಗರೂಕತೆಯಿಂದ ಇಣಿಕಿನೋಡುವ ಒಬ್ಬ ಮನುಷ್ಯನಂತೆ ನಾವಿದ್ದೆವು. ಸಾಧನೋಪಕರಣಗಳ ಸಹಾಯವಿಲ್ಲದಿದ್ದರೆ ಮೇಲ್ಮೈಯ ಕೆಳಗಿರುವ ಸುಂದರವಾದ ಜೀವಿಗಳು ಅವನಿಗೆ ಕಾಣಿಸುವುದಿಲ್ಲ. ಆದರೆ ಮುಳುಗು ಕನ್ನಡಕ ಅಥವಾ ಗಾಜು ತಳಕಟ್ಟಿನ ದೋಣಿಯ ಸಹಾಯದಿಂದ ಅವನು ಉಜ್ವಲ ಬಣ್ಣಗಳಿಂದ ಮಿರುಗುವ ಹವಳಗಳು, ಮೀನು, ಸಸ್ಯವನ್ನು ಹೋಲುವ ಕಡಲ ಜೀವಿಗಳು ಮತ್ತು ಇತರ ಸ್ತಬ್ಧಗೊಳಿಸುವ ಜೀವಿಗಳನ್ನು ಮೊತ್ತಮೊದಲ ಬಾರಿ ಕಾಣುವಾಗ ಅವನು ಪುಳಕಿತಗೊಳ್ಳುತ್ತಾನೆ. ಅದೇ ರೀತಿಯಲ್ಲಿ ಬೈಬಲನ್ನು ತಿಳಿದುಕೊಳ್ಳಲು ಯಾರೊ ಒಬ್ಬರು ನಮಗೆ ಸಹಾಯ ಮಾಡಲಾರಂಭಿಸಿದಾಗ ನಮಗೆ ಮೊತ್ತಮೊದಲ ಬಾರಿ “ದೇವರ ಅಗಾಧವಾದ ವಿಷಯಗಳ” ನಸುನೋಟವು ಸಿಕ್ಕಿತು.—1 ಕೊರಿಂಥ 2:8-10.

2 ಬೈಬಲ್‌ ಸತ್ಯದ ಕೇವಲ ಒಂದು ನಸುನೋಟದಿಂದ ನಮಗೆ ತೃಪ್ತಿಯಾಗಬೇಕೋ? “ದೇವರ ಅಗಾಧವಾದ ವಿಷಯಗಳು” ಎಂಬ ಹೇಳಿಕೆಯಲ್ಲಿ, ಪವಿತ್ರಾತ್ಮದ ಮೂಲಕ ಕ್ರೈಸ್ತರಿಗೆ ಪ್ರಕಟಿಸಲಾದ ಆದರೆ ಬೇರೆಯವರಿಗೆ ಮರೆಯಾಗಿರುವ ದೇವರ ವಿವೇಕದ ತಿಳಿವಳಿಕೆಯು ಕೂಡಿರುತ್ತದೆ. (1 ಕೊರಿಂಥ 2:7) ದೇವರ ವಿವೇಕವು ನಮ್ಮ ಸಂತೋಷಕ್ಕಾಗಿ ಎಷ್ಟು ಅಪರಿಮಿತವಾದ ಪರಿಶೋಧನೆಯ ಕ್ಷೇತ್ರವನ್ನು ಒದಗಿಸುತ್ತದೆ! ದೇವರ ವಿವೇಕದ ಮಾರ್ಗಗಳ ಕುರಿತ ಪ್ರತಿಯೊಂದು ಸಂಗತಿಯನ್ನು ನಾವೆಂದೂ ತಿಳಿಯೆವು ನಿಜ. ಆದರೆ ನಾವು ದೇವರ “ಅಗಾಧವಾದ ವಿಷಯಗಳನ್ನು” ಪರಿಶೋಧಿಸುವುದನ್ನು ಬಿಡದೆ ಮುಂದುವರಿಸುವಲ್ಲಿ, ಪ್ರಾಥಮಿಕ ಬೈಬಲ್‌ ಬೋಧನೆಗಳನ್ನು ಮೊದಲಾಗಿ ಕಲಿತಾಗ ಅನುಭವಿಸಿದ ಸಂತೋಷವು ನಮ್ಮೊಂದಿಗೆ ಸದಾಕಾಲ ಉಳಿಯಬಲ್ಲದು.

3 ಆ “ಅಗಾಧವಾದ ವಿಷಯಗಳನ್ನು” ನಾವು ಏಕೆ ಅರ್ಥಮಾಡಿಕೊಳ್ಳುವ ಅಗತ್ಯವಿದೆ? ನಾವು ಯಾವುದರಲ್ಲಿ ವಿಶ್ವಾಸವಿಡುತ್ತೇವೊ ಅದನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲ ಅದರಲ್ಲಿ ಏಕೆ ವಿಶ್ವಾಸವಿಡುತ್ತೇವೆಂದೂ ನಮಗೆ ತಿಳಿದಿರಬೇಕು. ನಮ್ಮ ವಿಶ್ವಾಸಗಳಿಗಿರುವ ಆಧಾರವನ್ನು ತಿಳಿದುಕೊಳ್ಳುವುದರಿಂದ ನಮ್ಮ ನಂಬಿಕೆ ಮತ್ತು ಭರವಸೆಯು ಬಲಗೊಳ್ಳುವುದು. ನಮ್ಮ “ತರ್ಕ ಶಕ್ತಿಯನ್ನು” ಉಪಯೋಗಿಸಿ “ಉತ್ತಮವಾದ, ಮೆಚ್ಚುಗೆಯಾಗಿರುವಂಥ ಮತ್ತು ಪರಿಪೂರ್ಣವಾದ ದೇವರ ಚಿತ್ತ”ವೇನೆಂಬದನ್ನು ನಮಗೆ ನಾವೇ ಸಾಬೀತುಪಡಿಸುವಂತೆ ದೇವರ ವಾಕ್ಯವು ನಮಗೆ ತಿಳಿಸುತ್ತದೆ. (ರೋಮಾಪುರ 12:1, 2, NIBV) ಒಂದು ನಿರ್ದಿಷ್ಟ ರೀತಿಯಲ್ಲಿ ಜೀವಿಸುವಂತೆ ಯೆಹೋವನು ನಮ್ಮನ್ನೇಕೆ ಕೇಳಿಕೊಳ್ಳುತ್ತಾನೆಂದು ಅರ್ಥಮಾಡಿಕೊಳ್ಳುವುದರಿಂದ ಆತನಿಗೆ ವಿಧೇಯರಾಗುವ ನಮ್ಮ ನಿರ್ಧಾರವು ಬಲಗೊಳ್ಳುತ್ತದೆ. ಆದುದರಿಂದ “ಅಗಾಧವಾದ ವಿಷಯಗಳ” ಕುರಿತಾದ ಜ್ಞಾನವು, ಕೆಟ್ಟ ಕೃತ್ಯಗಳನ್ನು ನಡಿಸಲು ಬರುವ ಶೋಧನೆಗಳನ್ನು ಎದುರಿಸುವುದಕ್ಕೆ ನಮಗೆ ಬಲವನ್ನು ಕೊಡಬಲ್ಲದು ಮತ್ತು “ಸತ್ಕ್ರಿಯೆಗಳಲ್ಲಿ ಆಸಕ್ತ”ರಾಗಿರುವಂತೆ ನಮ್ಮನ್ನು ಪ್ರೇರೇಪಿಸಬಲ್ಲದು.—ತೀತ 2:14.

4 ಅಗಾಧವಾದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅಧ್ಯಯನವು ಆವಶ್ಯಕ. ಆದರೂ ಕೇವಲ ಮೇಲುಮೇಲಿನ ವಾಚನವು ಅಧ್ಯಯನವಲ್ಲ. ಮಾಹಿತಿಯನ್ನು ಜಾಗರೂಕತೆಯಿಂದ ಪರೀಕ್ಷಿಸಿ, ನಾವು ಈ ಮೊದಲೇ ತಿಳಿದಿರುವ ವಿಷಯಗಳ ಮಾದರಿಗೆ ಅಧ್ಯಯನದ ವಿಷಯ ಹೇಗೆ ಸರಿಹೊಂದುತ್ತದೆ ಎಂದು ನೋಡುವುದು ಅದರಲ್ಲಿ ಸೇರಿದೆ. (2 ತಿಮೊಥೆಯ 1:13) ಹೇಳಲ್ಪಟ್ಟಿರುವ ವಿಷಯಗಳಿಗೆ ಕೊಡಲಾದ ಆಧಾರಗಳನ್ನು ಮನಸಾರೆ ಗ್ರಹಿಸಿಕೊಳ್ಳುವುದನ್ನು ಅದು ಅವಶ್ಯಪಡಿಸುತ್ತದೆ. ನಾವು ಕಲಿಯುವ ವಿಷಯಗಳನ್ನು ವಿವೇಕಯುತ ನಿರ್ಣಯ ಮಾಡಲಿಕ್ಕಾಗಿ ಹಾಗೂ ಇತರರಿಗೆ ಸಹಾಯನೀಡಲಿಕ್ಕಾಗಿ ಹೇಗೆ ಉಪಯೋಗಿಸಬಹುದೆಂದು ಧ್ಯಾನಿಸುವುದು ಸಹ ಬೈಬಲಧ್ಯಯನದಲ್ಲಿ ಕೂಡಿರಬೇಕು. ಅದಲ್ಲದೆ, “ಪವಿತ್ರ ಗ್ರಂಥವೆಲ್ಲವೂ ದೇವರಿಂದ ಪ್ರೇರಿತವಾದದ್ದು” ಆಗಿರುವುದರಿಂದ ನಮ್ಮ ಅಧ್ಯಯನದಲ್ಲಿ ‘ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತು’ ಸೇರಿರತಕ್ಕದ್ದು. (2 ತಿಮೊಥೆಯ 3:16, 17, NIBV; ಮತ್ತಾಯ 4:4) ಹೀಗೆ ಬೈಬಲ್‌ ಅಧ್ಯಯನಕ್ಕೆ ಶ್ರಮಶೀಲ ಪ್ರಯತ್ನವು ಅತ್ಯಗತ್ಯ! ಆದರೆ ಅದು ಉಲ್ಲಾಸಕರವೂ ಆಗಿರಬಲ್ಲದು. ಅಲ್ಲದೆ, “ದೇವರ ಅಗಾಧವಾದ ವಿಷಯಗಳನ್ನು” ಅರ್ಥಮಾಡಿಕೊಳ್ಳುವುದು ತೀರ ಕಷ್ಟಕರವೂ ಅಲ್ಲ.

ಯೆಹೋವನು ದೀನರಿಗೆ ತಿಳಿವಳಿಕೆ ಕೊಡುತ್ತಾನೆ

5 ಶಾಲಾ ವ್ಯಾಸಂಗದಲ್ಲಿ ನೀವು ಅತಿಶಯಿಸದಿದ್ದರೂ ಮತ್ತು ಅಧ್ಯಯನದ ರೂಢಿಯು ನಿಮಗಿರದಿದ್ದರೂ “ದೇವರ ಅಗಾಧವಾದ ವಿಷಯಗಳು” ನಿಮ್ಮ ನಿಲುಕಿಗೆ ಮೀರಿದ್ದು ಎಂದು ನೀವು ಊಹಿಸಬಾರದು. ಯೇಸುವಿನ ಭೂಶುಶ್ರೂಷೆಯ ಸಮಯದಲ್ಲಿ ಯೆಹೋವನು ತನ್ನ ಉದ್ದೇಶದ ತಿಳಿವಳಿಕೆಯನ್ನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಪ್ರಕಟಿಸದೆ ತನ್ನ ಸೇವಕನಿಂದ ಕಲಿಸಲ್ಪಡಲು ಸಾಕಷ್ಟು ದೀನರಾಗಿದ್ದ ಅನಕ್ಷರಸ್ಥ ಹಾಗೂ ಸಾಮಾನ್ಯ ಜನರಿಗೆ ಪ್ರಕಟಪಡಿಸಿದನು. ಶಾಲಾ ಶಿಕ್ಷಣ ಪಡೆದವರಿಗೆ ಹೋಲಿಕೆಯಲ್ಲಿ ಅವರು ಕೇವಲ ಬಾಲಕರಂತಿದ್ದರು. (ಮತ್ತಾಯ 11:25; ಅ. ಕೃತ್ಯಗಳು 4:13) “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥ” ವಿಷಯಗಳ ಕುರಿತು ಅಪೊಸ್ತಲ ಪೌಲನು ತನ್ನ ಜೊತೆ ವಿಶ್ವಾಸಿಗಳಿಗೆ ಬರೆದದ್ದು: ‘ನಮಗಾದರೋ ದೇವರು ತನ್ನ ಆತ್ಮದ ಮೂಲಕ ಅದನ್ನು ಪ್ರಕಟಿಸಿದನು. ಆ ಆತ್ಮವು ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸುತ್ತದೆ.’—1 ಕೊರಿಂಥ 2:9, 10.

6 ದೇವರ ಆತ್ಮವು “ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ” ಹೇಗೆ ಪರಿಶೋಧಿಸುತ್ತದೆ? ಹೇಗಂದರೆ, ಪ್ರತಿಯೊಬ್ಬ ಕ್ರೈಸ್ತನಿಗೆ ಪ್ರತ್ಯೇಕವಾಗಿ ಸತ್ಯದ ಒಂದು ವೈಯಕ್ತಿಕ ಪ್ರಕಟನೆಯನ್ನು ಕೊಡುವ ಬದಲಾಗಿ ಯೆಹೋವನು ತನ್ನ ಆತ್ಮದ ಮೂಲಕ ತನ್ನ ಸಂಘಟನೆಯನ್ನು ಮಾರ್ಗದರ್ಶಿಸುತ್ತಾನೆ. ಈ ಸಂಘಟನೆಯು ದೇವರ ಐಕ್ಯ ಜನರಿಗೆ ಬೈಬಲಿನ ತಿಳಿವಳಿಕೆಯನ್ನು ಒದಗಿಸುತ್ತದೆ. (ಅ. ಕೃತ್ಯಗಳು 20:28; ಎಫೆಸ 4:3-6) ಹೀಗೆ ಲೋಕದಾದ್ಯಂತ ಎಲ್ಲಾ ಸಭೆಗಳು ಏಕರೂಪದ ಬೈಬಲ್‌ ಅಧ್ಯಯನ ಕಾರ್ಯಕ್ರಮವನ್ನು ಆನಂದಿಸುತ್ತವೆ. ವರ್ಷಗಳ ನಿರ್ದಿಷ್ಟ ಕಾಲಾವಧಿಯಲ್ಲಿ ಬೈಬಲ್‌ ಬೋಧನೆಗಳ ಸಂಪೂರ್ಣ ಶ್ರೇಣಿಯನ್ನು ಸಭೆಗಳು ಆವರಿಸುತ್ತವೆ. “ದೇವರ ಅಗಾಧವಾದ ವಿಷಯಗಳನ್ನು” ಅರ್ಥಮಾಡಿಕೊಳ್ಳಲು ಬೇಕಾದ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಜನರಿಗೆ ನೆರವಾಗಲು ಪವಿತ್ರಾತ್ಮವು ಸಭೆಯ ಮೂಲಕ ಕಾರ್ಯನಡಿಸುತ್ತದೆ.—ಅ. ಕೃತ್ಯಗಳು 5:32.

‘ದೇವರ ಅಗಾಧವಾದ ವಿಷಯಗಳಲ್ಲಿ’ ಏನೆಲ್ಲಾ ಸೇರಿದೆ?

7 “ಅಗಾಧವಾದ ವಿಷಯಗಳು” ಬಹಳ ಕಷ್ಟದ ವಿಷಯಗಳಾಗಿರಲೇಬೇಕೆಂದು ನಾವು ನೆನಸಬಾರದು. ‘ದೇವರ ಅಗಾಧವಾದ ವಿಷಯಗಳ’ ಜ್ಞಾನವು ಹೆಚ್ಚಿನ ಜನರಿಗೆ ಮರೆಯಾಗಿರುವುದು ದೇವರ ವಿವೇಕವನ್ನು ಗಳಿಸುವುದು ತೀರ ಕಷ್ಟವಾಗಿರುವ ಕಾರಣದಿಂದಲ್ಲ. ಬದಲಿಗೆ ಯೆಹೋವನು ತನ್ನ ಸಂಘಟನೆಯ ಮೂಲಕ ಒದಗಿಸುವ ಸಹಾಯವನ್ನು ತಿರಸ್ಕರಿಸುವಂತೆ ಸೈತಾನನು ಜನರನ್ನು ಮೋಸಗೊಳಿಸುತ್ತಿರುವ ಕಾರಣದಿಂದಲೇ.—2 ಕೊರಿಂಥ 4:3, 4.

8 ಪೌಲನು ಎಫೆಸದವರಿಗೆ ಬರೆದ ಪತ್ರದ ಮೂರನೆಯ ಅಧ್ಯಾಯವು “ದೇವರ ಅಗಾಧವಾದ ವಿಷಯಗಳಲ್ಲಿ” ಅನೇಕ ಸತ್ಯಗಳು, ಉದಾಹರಣೆಗೆ ವಾಗ್ದತ್ತ ಸಂತಾನದ ಗುರುತು, ಸ್ವರ್ಗೀಯ ನಿರೀಕ್ಷೆಯುಳ್ಳ ಜನರನ್ನು ಮಾನವಕುಲದಿಂದ ಆರಿಸಿಕೊಂಡದ್ದು ಮತ್ತು ಮೆಸ್ಸೀಯನ ರಾಜ್ಯವೇ ಮುಂತಾದವುಗಳು ಸೇರಿವೆ ಎಂದು ತೋರಿಸುತ್ತದೆ. ಇವುಗಳನ್ನು ಯೆಹೋವನ ಜನರಲ್ಲಿ ಹೆಚ್ಚಿನವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಪೌಲನು ಬರೆದದ್ದು: “ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ. ಅದು ಯಾವದಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿರುವವರಾಗಿ ಯೆಹೂದ್ಯರೊಂದಿಗೆ ಬಾಧ್ಯರೂ ಒಂದೇ ದೇಹದೊಳಗಣ ಅಂಗಗಳೂ . . . ಆಗಿದ್ದಾರೆಂಬದೇ.” ಅಲ್ಲದೆ, “ದೇವರಲ್ಲಿ ಆದಿಯಿಂದ ಮರೆಯಾಗಿದ್ದ ಮರ್ಮವು ಪ್ರಕಟವಾಗುವ ವಿಧ ಎಂಥದೆಂದು ತಿಳಿಸುವ” ನೇಮಕವು ತನಗೆ ಕೊಡಲ್ಪಟ್ಟಿತ್ತೆಂದೂ ಪೌಲನು ಹೇಳಿದನು.—ಎಫೆಸ 3:5-9.

9 ಪೌಲನು ದೇವರ ಚಿತ್ತವನ್ನು ವಿವರಿಸುತ್ತಾ “ದೇವರು [ತನ್ನ] ನಾನಾ ವಿಧವಾದ ಜ್ಞಾನವು ಪರಲೋಕದಲ್ಲಿ . . . ಕ್ರೈಸ್ತ ಸಭೆಯ ಮೂಲಕ ಗೊತ್ತಾಗಬೇಕೆಂಬದನ್ನು” ಸಹ ಉದ್ದೇಶಿಸಿದ್ದನು ಎಂದು ತಿಳಿಸುತ್ತಾನೆ. (ಎಫೆಸ 3:10) ಕ್ರೈಸ್ತ ಸಭೆಯೊಂದಿಗೆ ಯೆಹೋವನು ಮಾಡುವ ವಿವೇಕಯುತ ವ್ಯವಹಾರಗಳನ್ನು ಅವಲೋಕಿಸುವ ಮತ್ತು ತಿಳಿದುಕೊಳ್ಳುವ ಮೂಲಕ ದೇವದೂತರು ಪ್ರಯೋಜನ ಪಡೆಯುತ್ತಾರೆ. ದೇವದೂತರು ಸಹ ಆಸಕ್ತಿತೋರಿಸುವ ವಿಷಯಗಳನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗಿರುವುದು ಎಂಥ ಸದವಕಾಶ! (1 ಪೇತ್ರ 1:10-12) ನಾವು ಕ್ರೈಸ್ತ ನಂಬಿಕೆಯ “ಅಗಲ ಉದ್ದ ಎತ್ತರ ಆಳ ಎಷ್ಟೆಂಬದನ್ನು ದೇವಜನರೆಲ್ಲರೊಂದಿಗೆ ಗ್ರಹಿಸಲು” ಶ್ರಮಿಸಬೇಕೆಂದು ಪೌಲನು ಅನಂತರ ತಿಳಿಸುತ್ತಾನೆ. (ಎಫೆಸ 3:11, 18) ಆದುದರಿಂದ ನಾವೀಗ ನಮ್ಮ ಗ್ರಹಿಕೆಯನ್ನು ವಿಶಾಲಗೊಳಿಸಬಲ್ಲ ಅಗಾಧವಾದ ವಿಷಯಗಳ ಕೆಲವು ಉದಾಹರಣೆಗಳನ್ನು ಗಮನಿಸೋಣ.

ಅಗಾಧವಾದ ವಿಷಯಗಳ ಉದಾಹರಣೆಗಳು

10ಆದಿಕಾಂಡ 3:15ರಲ್ಲಿ ಸೂಚಿಸಲಾದ ದೇವರ ಸ್ವರ್ಗೀಯ ‘ಸ್ತ್ರೀಯ ಸಂತಾನದ’ ಪ್ರಧಾನ ಭಾಗವು ಯೇಸುವಾಗಿದ್ದಾನೆಂದು ನಮಗೆ ಗೊತ್ತಿದೆ. ಆದರೆ ನಮ್ಮ ತಿಳಿವಳಿಕೆಯನ್ನು ವಿಶಾಲಗೊಳಿಸಲಿಕ್ಕಾಗಿ ನಾವು ಹೀಗೆ ಕೇಳಬಹುದು: ‘ಯೇಸು ವಾಗ್ದತ್ತ ಸಂತಾನವಾದದ್ದು ಯಾವಾಗ? ಅವನ ಮಾನವಪೂರ್ವ ಅಸ್ತಿತ್ವದ ಸಮಯದಲ್ಲೋ, ಮಾನವನಾಗಿ ಜನಿಸಿದಾಗಲೋ, ಅವನ ದೀಕ್ಷಾಸ್ನಾನದ ಸಮಯದಲ್ಲೋ ಅಥವಾ ಅವನು ಪುನರುತ್ಥಾನಗೊಳಿಸಲ್ಪಟ್ಟಾಗಲೋ?’

11 ಪ್ರವಾದನೆಯಲ್ಲಿ ದೇವರ “ಸ್ತ್ರೀ”ಯಾಗಿ ಸೂಚಿಸಲಾದ ಆತನ ಸಂಘಟನೆಯ ಸ್ವರ್ಗೀಯ ಭಾಗವು ಸರ್ಪದ ತಲೆಯನ್ನು ಜಜ್ಜಲಿರುವ ಒಂದು ಸಂತಾನವನ್ನು ಹುಟ್ಟಿಸುವುದು ಎಂದು ದೇವರು ವಾಗ್ದಾನಿಸಿದ್ದನು. ಆದರೆ ಸಾವಿರಾರು ವರ್ಷಗಳು ಕಳೆದುಹೋದರೂ ಸೈತಾನನನ್ನೂ ಅವನ ಕೃತ್ಯಗಳನ್ನೂ ನಾಶಮಾಡಶಕ್ತವಾದ ಯಾವ ಸಂತಾನವನ್ನೂ ದೇವರ ಸ್ತ್ರೀಯು ಹುಟ್ಟಿಸಲಿಲ್ಲ. ಫಲಿತಾಂಶವಾಗಿ ಯೆಶಾಯನ ಪ್ರವಾದನೆಯು ಅವಳನ್ನು “ಬಂಜೆ” ಮತ್ತು ‘ಮನನೊಂದವಳು’ ಎಂದು ಕರೆಯುತ್ತದೆ. (ಯೆಶಾಯ 54:1, 5, 6) ಕಟ್ಟಕಡೆಗೆ ಬೇತ್ಲೆಹೇಮಿನಲ್ಲಿ ಯೇಸುವಿನ ಜನನವಾಯಿತು. ಆದರೆ ಅವನ ದೀಕ್ಷಾಸ್ನಾನದ ಬಳಿಕ ದೇವರ ಆಧ್ಯಾತ್ಮಿಕ ಪುತ್ರನಾಗುವುದಕ್ಕಾಗಿ ದೇವರಾತ್ಮದಿಂದ ಜನಿತನಾದಾಗ ಮಾತ್ರವೇ ‘ಈತನು ನನ್ನ ಮಗನು’ ಎಂದು ಯೆಹೋವನು ಪ್ರಕಟವಾಗಿ ಹೇಳಿದನು. (ಮತ್ತಾಯ 3:17; ಯೋಹಾನ 3:3) ಹೀಗೆ ಆ ಸ್ತ್ರೀಯ ‘ಸಂತಾನದ’ ಪ್ರಧಾನ ಭಾಗವಾದಾತನು ಕೊನೆಗೂ ತನ್ನನ್ನು ತೋರಿಸಿಕೊಂಡನು. ತದನಂತರ ಯೇಸುವಿನ ಹಿಂಬಾಲಕರು ಸಹ ದೇವರ ಪವಿತ್ರಾತ್ಮದಿಂದ ಅಭಿಷೇಕಿತರೂ ಜನಿತರೂ ಆದರು. ಅಷ್ಟುಕಾಲದ ತನಕ ‘ಹೆರದವಳಾಗಿದ್ದ’ ಯೆಹೋವನ “ಸ್ತ್ರೀ” ಈಗ ಕಟ್ಟಕಡೆಗೆ ‘ಹರ್ಷಧ್ವನಿಗೈಯಲು’ ಶಕ್ತಳಾದಳು.—ಯೆಶಾಯ 54:1; ಗಲಾತ್ಯ 3:29.

12 ನಮಗೆ ಪ್ರಕಟಿಸಲ್ಪಟ್ಟ ಅಗಾಧವಾದ ವಿಷಯಗಳ ಎರಡನೆಯ ಉದಾಹರಣೆಯು, ಮಾನವಕುಲದಿಂದ 1,44,000 ಮಂದಿಯನ್ನು ಆರಿಸಿಕೊಳ್ಳುವ ದೇವರ ಉದ್ದೇಶದ ಕುರಿತಾಗಿದೆ. (ಪ್ರಕಟನೆ 14:1, 4) ಯಾವುದೇ ನಿರ್ದಿಷ್ಟ ಸಮಯದಲ್ಲಿ ಭೂಮಿಯ ಮೇಲೆ ಜೀವಿಸುವ ಎಲ್ಲ ಅಭಿಷಿಕ್ತರು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗಿರುತ್ತಾರೆಂಬ ಬೋಧನೆಯನ್ನು ನಾವು ಸ್ವೀಕರಿಸುತ್ತೇವೆ. ಈ ಆಳು ತನ್ನ ಮನೆಯವರಿಗೆ ಹೊತ್ತು ಹೊತ್ತಿಗೆ “ಆಹಾರ” ಒದಗಿಸುತ್ತಾನೆಂದು ಯೇಸು ತಾನೇ ಹೇಳಿದ್ದಾನೆ. (ಮತ್ತಾಯ 24:45) ಆದರೆ ಈ ತಿಳಿವಳಿಕೆಯು ಸರಿಯೆಂಬುದಾಗಿ ಯಾವ ಬೈಬಲ್‌ ವಚನಗಳು ರುಜುಪಡಿಸುತ್ತವೆ? ಯೇಸುವು ಅದನ್ನು ಒಂದು ಸಾಮಾನ್ಯ ಅರ್ಥದಲ್ಲಿ ಅಂದರೆ ಕ್ರೈಸ್ತ ಸಹೋದರರನ್ನು ಆಧ್ಯಾತ್ಮಿಕ ಆಹಾರದಿಂದ ಬಲಪಡಿಸುವ ಯಾವನೇ ಒಬ್ಬ ಕ್ರೈಸ್ತನಿಗೆ ಸೂಚಿಸಿ ಹೇಳಿರಬಹುದೋ?

13 ದೇವರು ಇಸ್ರಾಯೇಲ್‌ ಜನಾಂಗಕ್ಕೆ ಹೇಳಿದ್ದು: “ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು.” (ಯೆಶಾಯ 43:10) ಆದರೆ ಆ ಜನಾಂಗವನ್ನು ತನ್ನ ಸೇವಕನಾಗಿರುವುದರಿಂದ ದೇವರು ತ್ಯಜಿಸಿಬಿಟ್ಟಿದ್ದಾನೆಂದು ಸಾ.ಶ. 33ನೇ ವರ್ಷದ ನೈಸಾನ್‌ 11ರಂದು ಯೇಸು ಇಸ್ರಾಯೇಲ್ಯ ಮುಖಂಡರಿಗೆ ತಿಳಿಸಿದನು. ಆತನಂದದ್ದು: “ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು.” ಜನರ ಗುಂಪಿಗೆ ಯೇಸು ಅಂದದ್ದು: “ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.” (ಮತ್ತಾಯ 21:43; 23:38) ಯೆಹೋವನ ಸೇವಕನಾಗಿದ್ದ ಇಸ್ರಾಯೇಲ್‌ ಜನಾಂಗ ನಂಬಿಗಸ್ತನೂ ಆಗಿರಲಿಲ್ಲ ವಿವೇಕಿಯೂ ಆಗಿರಲಿಲ್ಲ. (ಯೆಶಾಯ 29:13, 14) ತರುವಾಯ ಅದೇ ದಿನದಲ್ಲಿ ಯೇಸು ಕೇಳಿದ್ದು: “ಹಾಗಾದರೆ . . . ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯಾರು?” ಬೇರೆ ಮಾತಿನಲ್ಲಿ ಅವನು ಕೇಳುತ್ತಿದ್ದದ್ದು: ‘ದೇವರ ನಂಬಿಗಸ್ತ ಆಳಾಗಿ ಇಸ್ರಾಯೇಲಿನ ಸ್ಥಾನವನ್ನು ವಿವೇಕಿಯಾದ ಯಾವ ಜನಾಂಗವು ತೆಗೆದುಕೊಳ್ಳುವುದು?’ ಅಪೊಸ್ತಲ ಪೇತ್ರನು ಅಭಿಷಿಕ್ತ ಕ್ರೈಸ್ತ ಸಭೆಗೆ ಉದ್ದೇಶಿಸಿ ಮಾತಾಡಿದಾಗ ಇದಕ್ಕೆ ಉತ್ತರವನ್ನು ಕೊಟ್ಟದ್ದು: “ನೀವು . . . ಪರಿಶುದ್ದ ಜನಾಂಗವೂ ದೇವರ ಜನರೂ ಆಗಿದ್ದೀರಿ.” (1 ಪೇತ್ರ 1:4; 2:9, NIBV) ಆ ಆಧ್ಯಾತ್ಮಿಕ ಜನಾಂಗವಾದ ‘ದೇವರ ಇಸ್ರಾಯೇಲು’ ಯೆಹೋವನ ಹೊಸ ಆಳಾಗಿ ಪರಿಣಮಿಸಿತು. (ಗಲಾತ್ಯ 6:16) ಪುರಾತನ ಇಸ್ರಾಯೇಲಿನ ಎಲ್ಲಾ ಸದಸ್ಯರನ್ನು ಹೇಗೆ ಒಬ್ಬ “ಸೇವಕನು” ಎಂದು ಕರೆಯಲಾಯಿತೋ ಹಾಗೆಯೇ ಒಂದು ನಿರ್ದಿಷ್ಟ ಸಮಯದಲ್ಲಿ ಭೂಮಿಯಲ್ಲಿರುವ ಎಲ್ಲ ಅಭಿಷಿಕ್ತ ಕ್ರೈಸ್ತರು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗುತ್ತಾರೆ. ದೇವರ ಆಳಿನ ಮೂಲಕ “ಆಹಾರ” ಪಡೆಯುವುದು ನಮಗೆ ಎಂಥ ಸದವಕಾಶ!

ವೈಯಕ್ತಿಕ ಅಧ್ಯಯನವು ಆನಂದಕರವಾಗಿರಬಲ್ಲದು

14 ದೇವರ ವಾಕ್ಯದ ಹೊಸ ತಿಳುವಳಿಕೆಯು ನಮಗೆ ಪ್ರಕಟಿಸಲ್ಪಡುವಾಗ, ಅದು ನಮ್ಮ ನಂಬಿಕೆಯನ್ನು ಬಲಗೊಳಿಸುವ ಕಾರಣಕ್ಕಾಗಿ ನಾವು ಸಂತೋಷಪಡುವುದಿಲ್ಲವೇ? ನಿಶ್ಚಯವಾಗಿಯೂ. ಆದುದರಿಂದಲೇ ಕೇವಲ ಬೈಬಲ್‌ ವಾಚನಕ್ಕಿಂತಲೂ ಹೆಚ್ಚಾಗಿ ಬೈಬಲ್‌ ಅಧ್ಯಯನವು ಅಷ್ಟೊಂದು ಆನಂದಕರ. ಹೀಗಿರಲಾಗಿ ಕ್ರೈಸ್ತ ಸಾಹಿತ್ಯಗಳನ್ನು ನೀವು ಓದುವಾಗ ನಿಮ್ಮನ್ನು ಕೇಳಿಕೊಳ್ಳಿರಿ: ‘ಈ ವಿಷಯದ ಕುರಿತು ಹಿಂದೆ ನನಗಿದ್ದ ತಿಳುವಳಿಕೆಗೆ ಇಲ್ಲಿ ಕೊಡಲಾಗಿರುವ ಹೊಸ ವಿವರಣೆ ಹೇಗೆ ಸರಿಹೋಲುತ್ತದೆ? ಈ ಲೇಖನದಲ್ಲಿ ನೀಡಲಾಗಿರುವ ತೀರ್ಮಾನಗಳಿಗೆ ಅಧಿಕ ಆಧಾರಕೊಡಲು ಯಾವ ಹೆಚ್ಚಿನ ಬೈಬಲ್‌ ವಚನಗಳನ್ನು ಅಥವಾ ತರ್ಕಗಳನ್ನು ನಾನು ಕೂಡಿಸಬಹುದು?’ ಅಧಿಕ ಸಂಶೋಧನೆ ಮಾಡುವ ಅವಶ್ಯವಿದ್ದಲ್ಲಿ, ನೀವು ಉತ್ತರಪಡೆಯಲು ಬಯಸುವ ಪ್ರಶ್ನೆಯನ್ನು ಬರೆದಿಟ್ಟು ಅದನ್ನು ಮುಂದಿನ ಅಧ್ಯಯನ-ಯೋಜನೆಯ ವಿಷಯವನ್ನಾಗಿ ಮಾಡಿರಿ.

15 ಯಾವ ಅಧ್ಯಯನ ಯೋಜನೆಗಳು ನಿಮಗೆ ಹೊಸ ಒಳನೋಟದ ಆನಂದವನ್ನು ಕೊಡಬಹುದು? ಮಾನವಕುಲದ ಪ್ರಯೋಜನಕ್ಕಾಗಿ ದೇವರು ಮಾಡಿರುವ ವಿವಿಧ ಒಡಂಬಡಿಕೆಗಳಂಥ ಆಳವಾದ ಅಧ್ಯಯನ-ಯೋಜನೆಗಳು ನಮ್ಮ ತಿಳುವಳಿಕೆಯನ್ನು ಹೆಚ್ಚಿಸಬಹುದು. ಯೇಸು ಕ್ರಿಸ್ತನ ಕುರಿತು ಹೇಳಲ್ಪಟ್ಟ ಪ್ರವಾದನೆಗಳನ್ನು ಅಥವಾ ಬೈಬಲಿನ ಪ್ರವಾದನಾ ಪುಸ್ತಕಗಳಲ್ಲೊಂದನ್ನು ವಚನ-ವಚನವಾಗಿ ಅಧ್ಯಯನ ಮಾಡುವ ಮೂಲಕ ನೀವು ನಿಮ್ಮ ನಂಬಿಕೆಯನ್ನು ಬಲಗೊಳಿಸಸಾಧ್ಯವಿದೆ. ಯೆಹೋವನ ಸಾಕ್ಷಿಗಳ ಆಧುನಿಕ ಇತಿಹಾಸದ ಕುರಿತ ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಎಂಬ ಪುಸ್ತಕವು ನಿಮ್ಮ ಭಾಷೆಯಲ್ಲಿ ಲಭ್ಯವಿದ್ದಲ್ಲಿ ಅದರ ಪರಿಶೀಲನೆ ಸಹ ನಂಬಿಕೆ ವೃದ್ಧಿಮಾಡುತ್ತದೆ. * ಮತ್ತು ಕಾವಲಿನಬುರುಜು ಪತ್ರಿಕೆಯಲ್ಲಿ ಈ ಹಿಂದೆ ಪ್ರಕಟವಾದ “ವಾಚಕರಿಂದ ಪ್ರಶ್ನೆಗಳು” ಇದರ ಪರಿಶೀಲನೆ ಸಹ ನಿರ್ದಿಷ್ಟ ಶಾಸ್ತ್ರವಚನಗಳ ಸ್ಪಷ್ಟವಾದ ತಿಳಿವಳಿಕೆಗೆ ನಿಮ್ಮನ್ನು ನಡಿಸುವುದು ನಿಶ್ಚಯ. ನೀಡಲಾದ ತೀರ್ಮಾನಗಳನ್ನು ಮುಟ್ಟಲು ಬಳಸಲಾದ ಶಾಸ್ತ್ರಾಧಾರಿತ ತರ್ಕಗಳ ಕಡೆಗೆ ವಿಶೇಷ ಗಮನಕೊಡಿರಿ. ಇದು ನಿಮ್ಮ “ಜ್ಞಾನೇಂದ್ರಿಯಗಳನ್ನು” ತರಬೇತಿಗೊಳಿಸಿ ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳಲು ನೆರವಾಗುವುದು. (ಇಬ್ರಿಯ 5:14) ಅಧ್ಯಯನ ಮಾಡುವಾಗ ನಿಮ್ಮ ಸ್ವಂತ ಬೈಬಲಿನಲ್ಲಿ ಅಥವಾ ಕಾಗದದಲ್ಲಿ ಟಿಪ್ಪಣಿಮಾಡಿರಿ. ಹೀಗೆ ನಿಮ್ಮ ಅಧ್ಯಯನವು ನಿಮಗೂ ನೀವು ಸಹಾಯ ಮಾಡಶಕ್ತರಾದವರಿಗೂ ಬಾಳುವ ಪ್ರಯೋಜನವನ್ನು ತರುವುದು.

ಬೈಬಲ್‌ ಅಧ್ಯಯನವನ್ನು ಆನಂದಿಸಲು ಎಳೆಯರಿಗೆ ನೆರವಾಗಿರಿ

16 ಹೆತ್ತವರು ತಮ್ಮ ಮಕ್ಕಳ ಆಧ್ಯಾತ್ಮಿಕ ರುಚಿಯನ್ನು ಹುಟ್ಟಿಸಲು ಬಹಳಷ್ಟನ್ನು ಮಾಡಬಲ್ಲರು. ಅಗಾಧವಾದ ವಿಷಯಗಳನ್ನು ತಿಳಿದುಕೊಳ್ಳಲು ಮಕ್ಕಳಿಗೆ ತೀರ ಕಷ್ಟವೆಂದು ನೆನಸಬೇಡಿ. ಕುಟುಂಬ ಬೈಬಲಧ್ಯಯನಕ್ಕಾಗಿ ತಯಾರಿಯಲ್ಲಿ ಒಂದು ವಿಷಯದ ಕುರಿತು ಸಂಶೋಧನೆಮಾಡಲು ನೀವು ಎಳೆಯರಿಗೆ ನೇಮಿಸುವಲ್ಲಿ, ಅವರು ಆ ವಿಷಯದ ಕುರಿತು ಏನು ಕಲಿತರೆಂದು ಅಧ್ಯಯನದ ಸಮಯದಲ್ಲಿ ಕೇಳಬಹುದು. ಎಳೆಯರು ತಮ್ಮ ನಂಬಿಕೆಯನ್ನು ಸಮರ್ಥಿಸುವುದು ಹೇಗೆಂದು ಕಲಿಯುವಂತೆ ಮತ್ತು ತಮಗೆ ಕಲಿಸಲಾಗಿರುವ ವಿಷಯಗಳು ಸತ್ಯವೆಂದು ರುಜುಪಡಿಸುವಂತೆ ಸಹಾಯಮಾಡಲು ಕುಟುಂಬ ಅಧ್ಯಯನದಲ್ಲಿ ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನೂ ಸೇರಿಸಬಹುದು. ಅದಲ್ಲದೆ ಬೈಬಲ್‌ ಭೂವಿವರವನ್ನು ಕಲಿಸಲು ಮತ್ತು ನಿಮ್ಮ ವಾರದ ಬೈಬಲ್‌ ವಾಚನದಲ್ಲಿ ಆವರಿಸುವ ವಿಷಯಗಳನ್ನು ಸ್ಪಷ್ಟಪಡಿಸಲು “ಒಳ್ಳೆಯ ದೇಶವನ್ನು ನೋಡಿ” ಎಂಬ ಬ್ರೋಷರನ್ನು ನೀವು ಉಪಯೋಗಿಸಬಹುದು. *

17 ವೈಯಕ್ತಿಕ ಬೈಬಲ್‌ ಅಧ್ಯಯನ-ಯೋಜನೆಗಳು ಚಿತ್ತಾಕರ್ಷಕವೂ ನಂಬಿಕೆವರ್ಧಕವೂ ಆಗಿರಬಲ್ಲವಾದರೂ ನಿಮ್ಮ ಸಭಾಕೂಟಗಳ ತಯಾರಿಗೆ ಅವು ಅಡ್ಡಬರದಂತೆ ಜಾಗ್ರತೆವಹಿಸಬೇಕು. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಯೆಹೋವನು ನಮಗೆ ಬೋಧಿಸುವ ಇನ್ನೊಂದು ವಿಧಾನವೇ ಕೂಟಗಳು. ಆದರೂ ಅಧಿಕ ಸಂಶೋಧನೆಯಿಂದಾಗಿ ಕೂಟಗಳಲ್ಲಿ ಅಂದರೆ ಸಭಾ ಪುಸ್ತಕಭ್ಯಾಸ ಅಥವಾ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಬೈಬಲ್‌ ವಾಚನದ ಮುಖ್ಯಾಂಶಗಳಲ್ಲಿ ಅರ್ಥಭರಿತ ಹೇಳಿಕೆಗಳನ್ನು ಕೊಡುವಂತೆ ನಿಮಗೆ ಸಹಾಯ ಸಿಗಬಹುದು.

18 ದೇವರ ವಾಕ್ಯದ ಆಳವಾದ ವೈಯಕ್ತಿಕ ಅಧ್ಯಯನವು ಯೆಹೋವನಿಗೆ ಹತ್ತಿರವಾಗುವಂತೆ ನಿಮಗೆ ಸಹಾಯ ಮಾಡಬಲ್ಲದು. ಅಂಥ ಅಧ್ಯಯನದ ಮೌಲ್ಯವನ್ನು ತೋರಿಸುತ್ತಾ ಬೈಬಲು ಅನ್ನುವುದು: “ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ; ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.” (ಪ್ರಸಂಗಿ 7:12) ಆದುದರಿಂದ ಆಧ್ಯಾತ್ಮಿಕ ವಿಷಯಗಳ ತಿಳಿವಳಿಕೆಯನ್ನು ಆಳಗೊಳಿಸಲು ಮಾಡಬೇಕಾದ ಪ್ರಯತ್ನವು ಸಾರ್ಥಕ. ಯಾರು ಪರಿಶೋಧಿಸುತ್ತಾ ಇರುತ್ತಾರೊ ಅವರಿಗೆ ಬೈಬಲ್‌ ವಾಗ್ದಾನಿಸುವುದು: “ಆಗ ನೀನು . . . ದೈವಜ್ಞಾನವನ್ನು ಪಡೆದುಕೊಳ್ಳುವಿ.”—ಜ್ಞಾನೋಕ್ತಿ 2:4, 5. (w07 11/1)

[ಪಾದಟಿಪ್ಪಣಿಗಳು]

^ ಪ್ಯಾರ. 21 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 23 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

ನೀವು ವಿವರಿಸಬಲ್ಲಿರೋ?

• “ದೇವರ ಅಗಾಧವಾದ ವಿಷಯಗಳು” ಯಾವುವು?

• ಅಗಾಧವಾದ ವಿಷಯಗಳ ನಮ್ಮ ಅಧ್ಯಯನವು ಎಂದೂ ಅಂತ್ಯಗೊಳ್ಳಬಾರದೇಕೆ?

• ‘ದೇವರ ಅಗಾಧವಾದ ವಿಷಯಗಳನ್ನು’ ತಿಳಿದುಕೊಳ್ಳುವ ಸಂತೋಷವು ಕ್ರೈಸ್ತರೆಲ್ಲರಿಗೂ ತೆರೆದಿದೆ ಏಕೆ?

• ‘ದೇವರ ಅಗಾಧವಾದ ವಿಷಯಗಳಿಂದ’ ನೀವು ಹೇಗೆ ಹೆಚ್ಚು ಪೂರ್ಣವಾಗಿ ಪ್ರಯೋಜನ ಪಡೆಯಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

1. ಹೊಸ ಬೈಬಲ್‌ ವಿದ್ಯಾರ್ಥಿಗಳನ್ನು ಹರ್ಷಭರಿತರನ್ನಾಗಿ ಮಾಡುವಂಥ ಕೆಲವು ಬೈಬಲ್‌ ಸತ್ಯಗಳು ಯಾವುವು?

2. ದೇವರ ವಾಕ್ಯದ ಕಲಿಯುವಿಕೆಯಿಂದ ಸಿಗುವ ಸಂತೋಷವು ನಮ್ಮೊಂದಿಗೆ ಸದಾಕಾಲ ಇರಬಲ್ಲದೇಕೆ?

3. ನಮ್ಮ ವಿಶ್ವಾಸಗಳಿಗಿರುವ ಆಧಾರವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವ ಅಗತ್ಯ ನಮಗಿದೆಯೇಕೆ?

4. ಬೈಬಲ್‌ ಅಧ್ಯಯನದಲ್ಲಿ ಏನೆಲ್ಲಾ ಒಳಗೂಡಿದೆ?

5. “ದೇವರ ಅಗಾಧವಾದ ವಿಷಯಗಳನ್ನು” ಯಾರು ಅರ್ಥಮಾಡಿಕೊಳ್ಳಬಲ್ಲರು?

6. ಒಂದನೇ ಕೊರಿಂಥ 2:10ರ ಅರ್ಥವೇನು?

7. “ದೇವರ ಅಗಾಧವಾದ ವಿಷಯಗಳು” ಹೆಚ್ಚಿನ ಜನರಿಗೆ ಯಾಕೆ ಅರ್ಥವಾಗುವುದಿಲ್ಲ?

8. ಪೌಲನು ಎಫೆಸದವರಿಗೆ ಬರೆದ ಪತ್ರದ ಮೂರನೆಯ ಅಧ್ಯಾಯದಲ್ಲಿ ಯಾವ ಅಗಾಧವಾದ ವಿಷಯಗಳಿಗೆ ಸೂಚಿಸಿದನು?

9. “ದೇವರ ಅಗಾಧವಾದ ವಿಷಯಗಳನ್ನು” ಅರ್ಥಮಾಡಿಕೊಳ್ಳುವುದು ಒಂದು ಸೌಭಾಗ್ಯವಾಗಿದೆ ಏಕೆ?

10, 11. ಬೈಬಲಿಗನುಸಾರ ಯೇಸುವು ದೇವರ ಸ್ವರ್ಗೀಯ ‘ಸ್ತ್ರೀಯ ಸಂತಾನದ’ ಪ್ರಧಾನ ಭಾಗವಾದದ್ದು ಯಾವಾಗ?

12, 13. ಭೂಮಿಯಲ್ಲಿರುವ ಎಲ್ಲಾ ಅಭಿಷಿಕ್ತ ಕ್ರೈಸ್ತರು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗಿರುತ್ತಾರೆಂದು ಬೈಬಲಿನ ಯಾವ ವಚನಗಳು ತೋರಿಸುತ್ತವೆ?

14. ಕೇವಲ ಬೈಬಲ್‌ ವಾಚನಕ್ಕಿಂತಲೂ ಬೈಬಲಿನ ಅಧ್ಯಯನವು ಹೆಚ್ಚು ಆನಂದಕರವೇಕೆ?

15. ಯಾವ ಅಧ್ಯಯನ-ಯೋಜನೆಗಳು ಆನಂದಕರವಾಗಿರಬಲ್ಲವು, ಮತ್ತು ಅವು ಹೇಗೆ ಬಾಳುವ ಪ್ರಯೋಜನವನ್ನು ತರಶಕ್ತವು?

16. ಎಳೆಯರು ಬೈಬಲಧ್ಯಯನವನ್ನು ಆನಂದಿಸುವಂತೆ ನೀವು ಹೇಗೆ ಸಹಾಯಮಾಡಬಹುದು?

17. ನಮ್ಮ ವೈಯಕ್ತಿಕ ಬೈಬಲ್‌ ಅಧ್ಯಯನ-ಯೋಜನೆಗಳಲ್ಲಿ ನಾವು ಸಮಚಿತ್ತದಿಂದಿರುವ ಅಗತ್ಯವಿದೆ ಏಕೆ?

18. “ದೇವರ ಅಗಾಧವಾದ ವಿಷಯಗಳನ್ನು” ಅಧ್ಯಯನ ಮಾಡುವುದಕ್ಕೆ ಅವಶ್ಯವಾದ ಪ್ರಯತ್ನ ಸಾರ್ಥಕವೇಕೆ?