ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾಳಿನ ದಿನದ ಮೇಲೆ ಕಣ್ಣಿಟ್ಟು ಜೀವಿಸಿರಿ

ನಾಳಿನ ದಿನದ ಮೇಲೆ ಕಣ್ಣಿಟ್ಟು ಜೀವಿಸಿರಿ

ನಾಳಿನ ದಿನದ ಮೇಲೆ ಕಣ್ಣಿಟ್ಟು ಜೀವಿಸಿರಿ

“ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ.” ಇದು, ಯೇಸು ಕ್ರಿಸ್ತನು ಗಲಿಲಾಯದ ಪರ್ವತವೊಂದರಲ್ಲಿ ಕೊಟ್ಟ ಪ್ರಸಿದ್ಧ ಪ್ರಸಂಗದಲ್ಲಿ ಹೇಳಿದ ಮಾತು. ಅವನು ಮುಂದುವರಿಸಿ ಹೇಳಿದ್ದು: “ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು.”—ಮತ್ತಾಯ 6:34.

ಈ ಮಾತುಗಳ ಅರ್ಥವೇನೆಂದು ನೀವು ನೆನಸುತ್ತೀರಿ? ಇವತ್ತಿಗಾಗಿ ಮಾತ್ರ ಬದುಕಿ, ನಾಳಿನ ಬಗ್ಗೆ ಯೋಚಿಸಲೇಬಾರದೆಂದೋ? ಇದು ಯೇಸು ಮತ್ತು ಅವನ ಹಿಂಬಾಲಕರು ನಂಬುತ್ತಿದ್ದ ವಿಷಯದೊಂದಿಗೆ ನಿಜವಾಗಿ ಹೊಂದಿಕೆಯಲ್ಲಿದೆಯೋ?

“ಚಿಂತೆಮಾಡಬೇಡಿರಿ”

ಮತ್ತಾಯ 6:25-32ರಲ್ಲಿರುವಂಥ ಯೇಸುವಿನ ಮಾತುಗಳನ್ನು ಸ್ವತಃ ನೀವೇ ಪೂರ್ಣವಾಗಿ ಓದಿನೋಡಿರಿ. ಅದರಲ್ಲಿ ಭಾಗಶಃ ಅವನು ಹೀಗಂದನು: “ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ . . . ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; . . . ಚಿಂತೆಮಾಡಿಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು? ಇದಲ್ಲದೆ ನೀವು ಉಡುಪಿನ ವಿಷಯದಲ್ಲಿ ಚಿಂತೆಮಾಡುವದೇಕೆ? ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ, ಅವು ದುಡಿಯುವದಿಲ್ಲ, ನೂಲುವದಿಲ್ಲ; . . . ಹೀಗಿರುವದರಿಂದ—ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ.”

ಯೇಸು ತನ್ನ ಪ್ರಸಂಗದ ಈ ಭಾಗವನ್ನು ಬುದ್ಧಿವಾದದ ಎರಡು ಮಾತುಗಳೊಂದಿಗೆ ಕೊನೆಗೊಳಿಸಿದನು. ಮೊದಲನೆಯದ್ದು: “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” ಎರಡನೆಯದ್ದು: “ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.”—ಮತ್ತಾಯ 6:33, 34.

ನಿಮಗೇನು ಬೇಕೆಂಬುದು ನಿಮ್ಮ ತಂದೆಗೆ ತಿಳಿದಿದೆ

ಯೇಸು ಇಲ್ಲಿ ತನ್ನ ಶಿಷ್ಯರಲ್ಲಿ ರೈತರನ್ನೂ ಸೇರಿಸಿ ‘ಬಿತ್ತುವ, ಕೊಯ್ಯುವ ಅಥವಾ ಕಣಜಗಳಲ್ಲಿ ತುಂಬಿಸಿಟ್ಟುಕೊಳ್ಳುವ’ ಕೆಲಸವನ್ನು ಇಲ್ಲವೇ ಅವರಿಗೆ ಅಗತ್ಯವಿದ್ದ ಬಟ್ಟೆಗಾಗಿ ‘ದುಡಿಯುವ, ನೂಲುವ’ ಕೆಲಸವನ್ನು ಮಾಡಬಾರದೆಂದು ಹೇಳುತ್ತಿದ್ದನೋ? (ಜ್ಞಾನೋಕ್ತಿ 21:5; 24:30-34; ಪ್ರಸಂಗಿ 11:4) ಖಂಡಿತವಾಗಿಯೂ ಇಲ್ಲ. ಕೆಲಸಮಾಡುವುದನ್ನು ನಿಲ್ಲಿಸುವಲ್ಲಿ ಅವರು ‘ಸುಗ್ಗಿಯಲ್ಲಿ ಬೇಡುವ’ ಗತಿ ಬರುತ್ತಿತ್ತು ಖಂಡಿತ. ಅವರಿಗೆ ಉಣ್ಣಲಿಕ್ಕೆ ಆಹಾರವಾಗಲಿ, ತೊಡಲಿಕ್ಕೆ ಬಟ್ಟೆಯಾಗಲಿ ಇರುತ್ತಿರಲಿಲ್ಲ.—ಜ್ಞಾನೋಕ್ತಿ 20:4, NIBV.

ಚಿಂತೆಯ ಕುರಿತೇನು? ತನಗೆ ಕಿವಿಗೊಡುವವರಿಗೆ ಚಿಂತೆಗಳೇ ಇರುವುದಿಲ್ಲವೆಂದು ಯೇಸುವಿನ ಅರ್ಥವಾಗಿತ್ತೋ? ಅದು ಅವಾಸ್ತವಿಕ. ಯೇಸು ಬಂಧಿಸಲ್ಪಟ್ಟ ರಾತ್ರಿಯಂದು ಗಾಢವಾದ ಭಾವನಾತ್ಮಕ ಸಂಕಟ ಹಾಗೂ ಚಿಂತೆಯನ್ನು ಸ್ವತಃ ಅನುಭವಿಸಿದನಲ್ಲಾ.—ಲೂಕ 22:44.

ಯೇಸು ಒಂದು ಮೂಲಭೂತ ಸತ್ಯವನ್ನು ತಿಳಿಸುತ್ತಿದ್ದನು ಅಷ್ಟೇ. ಅದೇನೆಂದರೆ, ನಿಮಗಿರುವ ಯಾವುದೇ ಸಮಸ್ಯೆಗಳನ್ನು ವಿಪರೀತ ಚಿಂತೆಮಾಡುವುದರಿಂದ ಬಗೆಹರಿಸಲಾಗದು. ಉದಾಹರಣೆಗಾಗಿ ಚಿಂತೆಯು ನಿಮಗೆ ಹೆಚ್ಚು ಕಾಲ ಜೀವಿಸುವಂತೆ ಸಹಾಯಮಾಡದು. ಯೇಸು ಕೇಳಿದ್ದು: “ಚಿಂತೆಮಾಡಿಮಾಡಿ ಆಯುಸ್ಸು ಹೆಚ್ಚುಮಾಡಿಕೊಳ್ಳುವದು ಯಾರಿಂದಾದೀತು?” (ಮತ್ತಾಯ 6:27, BSI ಪಾದಟಿಪ್ಪಣಿ) ಅದಕ್ಕೆ ಬದಲಾಗಿ ದೀರ್ಘಕಾಲದ ತೀವ್ರ ಚಿಂತೆಯು ನಿಮ್ಮ ಜೀವನಾಯುಷ್ಯವನ್ನು ಕಡಿಮೆಗೊಳಿಸುವ ಸಾಧ್ಯತೆ ಹೆಚ್ಚು.

ಯೇಸುವಿನ ಬುದ್ಧಿವಾದದ ವ್ಯವಹಾರ್ಯತೆ ಗಮನಾರ್ಹ. ನಾವು ಯಾವುದರ ಬಗ್ಗೆ ಚಿಂತಿಸುತ್ತೇವೊ ಅವುಗಳಲ್ಲಿ ಹೆಚ್ಚಿನವು ಸಂಭವಿಸುವುದೇ ಇಲ್ಲ. ಬ್ರಿಟಿಷ್‌ ರಾಜನೀತಿಜ್ಞ ವಿನ್ಸ್‌ಟನ್‌ ಚರ್ಚಿಲ್‌ ಇದನ್ನು IIನೇ ಲೋಕ ಯುದ್ಧದ ಕರಾಳ ದಿನಗಳಲ್ಲಿ ಗ್ರಹಿಸಿದರು. ಆ ಕಾಲದಲ್ಲಿ ಅವರಿಗಿದ್ದ ಕೆಲವೊಂದು ಚಿಂತೆಗಳ ಕುರಿತು ಅವರು ಬರೆದುದು: “ಅವುಗಳ ಕುರಿತಾಗಿ ನಾನೀಗ ನೆನಸುವಾಗ ನನಗೆ ವೃದ್ಧರೊಬ್ಬರ ಕಥೆ ಜ್ಞಾಪಕಕ್ಕೆ ಬರುತ್ತದೆ. ಅವರು ತಮ್ಮ ಮರಣಶಯ್ಯೆಯಲ್ಲಿದ್ದಾಗ ಹೇಳಿದ್ದು: ‘ನನ್ನ ಜೀವನದಲ್ಲಿ ತುಂಬ ಕಷ್ಟಗಳಿದ್ದವು; ಆದರೆ ಇವುಗಳಲ್ಲಿ ಹೆಚ್ಚಿನವು ಬರಲೇ ಇಲ್ಲ.’” ಆದುದರಿಂದ ಆಯಾ ದಿನವನ್ನು ಆಯಾ ದಿನಕ್ಕೆ ತಕ್ಕಂತೆ ನಿಭಾಯಿಸುವುದೇ ಬುದ್ಧಿವಂತಿಕೆ. ಇದು ವಿಶೇಷವಾಗಿ, ನಾವು ಎದುರಿಸುವಂಥ ಒತ್ತಡಗಳೂ ಸಮಸ್ಯೆಗಳೂ ನಮ್ಮಲ್ಲಿ ಅತೀವ ಚಿಂತೆಯನ್ನು ಹುಟ್ಟಿಸಸಾಧ್ಯವಿರುವಾಗ ಸತ್ಯವಾಗಿದೆ.

‘ಮೊದಲು ದೇವರ ರಾಜ್ಯಕ್ಕಾಗಿ ತವಕಪಡಿರಿ’

ವಾಸ್ತವದಲ್ಲಿ, ಯೇಸುವಿಗೆ ತನ್ನ ಕೇಳುಗರ ಶಾರೀರಿಕ ಹಾಗೂ ಭಾವನಾತ್ಮಕ ಕ್ಷೇಮಕ್ಕಿಂತ ಹೆಚ್ಚಿನದ್ದು ಮನಸ್ಸಿನಲ್ಲಿತ್ತು. ಜೀವನಾವಶ್ಯಕತೆಗಳ ಚಿಂತೆ, ಹಾಗೂ ಸೊತ್ತು ಮತ್ತು ಭೋಗಗಳಿಗಾಗಿ ತೀವ್ರ ಆಶೆಯು ಹೆಚ್ಚು ಉತ್ತಮವಾದ ವಿಷಯಗಳ ಸ್ಥಾನವನ್ನು ಆಕ್ರಮಿಸಬಲ್ಲದೆಂದು ಅವನಿಗೆ ತಿಳಿದಿತ್ತು. (ಫಿಲಿಪ್ಪಿ 1:10) ‘ಜೀವನಾವಶ್ಯಕತೆಗಳನ್ನು ಪಡೆದುಕೊಳ್ಳುವುದಕ್ಕಿಂತ ಹೆಚ್ಚು ಪ್ರಾಮುಖ್ಯವಾದದ್ದು ಬೇರೇನಿದೆ?’ ಎಂದು ನೀವು ಯೋಚಿಸಬಹುದು. ಇದಕ್ಕೆ ಉತ್ತರ: ನಮ್ಮ ದೇವರ ಆರಾಧನೆಯೊಂದಿಗೆ ಸಂಬಂಧಪಟ್ಟ ಆಧ್ಯಾತ್ಮಿಕ ವಿಷಯಗಳೇ. ಯೇಸು ಒತ್ತಿಹೇಳಿದಂತೆ ನಮ್ಮ ಜೀವನದಲ್ಲಿ ಪ್ರಮುಖ ವಿಷಯವು, ‘ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡುವುದೇ’ ಆಗಿರಬೇಕು.—ಮತ್ತಾಯ 6:33.

ಯೇಸುವಿನ ದಿನದಲ್ಲಿ ಅನೇಕ ಜನರು ಭೌತಿಕ ಸೊತ್ತುಗಳಿಗಾಗಿ ತವಕಪಡುತ್ತಿದ್ದರು. ಐಶ್ವರ್ಯವನ್ನು ಕೂಡಿಹಾಕುವುದೇ ಅವರ ಪ್ರಮುಖ ಆದ್ಯತೆಯಾಗಿತ್ತು. ಆದರೆ ಯೇಸು ತನ್ನ ಕೇಳುಗರಿಗೆ ಒಂದು ಭಿನ್ನ ನೋಟವನ್ನಿಡುವಂತೆ ಪ್ರೇರಿಸಿದನು. ದೇವರ ಸಮರ್ಪಿತ ಜನಾಂಗಕ್ಕೆ ಸೇರಿದವರಾದ ಅವರ ‘ಕರ್ತವ್ಯವು, ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳುವುದೇ’ ಆಗಿತ್ತು.—ಪ್ರಸಂಗಿ 12:13.

‘ಪ್ರಪಂಚದ ಚಿಂತೆಯೂ ಐಶ್ವರ್ಯವೂ’ ಅಂದರೆ ಭೌತಿಕ ವಿಷಯಗಳಲ್ಲೇ ಮಗ್ನರಾಗಿರುವುದು ಅವನ ಕೇಳುಗರನ್ನು ಆಧ್ಯಾತ್ಮಿಕವಾಗಿ ನಾಶಮಾಡಸಾಧ್ಯವಿತ್ತು. (ಮತ್ತಾಯ 13:22) ಅಪೊಸ್ತಲ ಪೌಲನು ಬರೆದುದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ.” (1 ತಿಮೊಥೆಯ 6:9) ಅವರಿಗೇನು ಬೇಕೆಂಬುದು ಅವರ ಸ್ವರ್ಗೀಯ ತಂದೆಗೆ ತಿಳಿದಿದೆ ಎಂದು ನೆನಪುಹುಟ್ಟಿಸುವ ಮೂಲಕ ಐಶ್ವರ್ಯದ ‘ಉರ್ಲಿನಿಂದ’ ತಪ್ಪಿಸಲು ಯೇಸು ತನ್ನ ಹಿಂಬಾಲಕರಿಗೆ ಸಹಾಯಮಾಡಿದನು. ದೇವರು “ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು” ಹೇಗೆ ನೋಡಿಕೊಳ್ಳುತ್ತಾನೋ ಹಾಗೆಯೇ ಅವರ ಪರಾಮರಿಕೆಯನ್ನೂ ಮಾಡುವನು. (ಮತ್ತಾಯ 6:26, 32) ಚಿಂತೆಯಲ್ಲಿ ಮುಳುಗಿಹೋಗುವ ಬದಲು ಅವರು ತಮ್ಮಿಂದ ಸಾಧ್ಯವಿರುವಷ್ಟೆಲ್ಲವನ್ನು ಮಾಡಿ, ಉಳಿದದ್ದನ್ನು ಭರವಸೆಯಿಂದ ಯೆಹೋವನ ಹಸ್ತಗಳಲ್ಲಿ ಬಿಡಸಾಧ್ಯವಿತ್ತು.—ಫಿಲಿಪ್ಪಿ 4:6, 7.

“ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು” ಎಂದು ಯೇಸು ಹೇಳಿದಾಗ, ನಾಳೆ ಏನಾಗಬಹುದೊ ಎಂಬ ಅನುಚಿತ ಚಿಂತೆ ನಮ್ಮ ಇಂದಿನ ಸಮಸ್ಯೆಗಳನ್ನು ಹೆಚ್ಚಿಸುವಂತೆ ಬಿಡಬಾರದೆಂದು ಹೇಳುತ್ತಿದ್ದನು ಅಷ್ಟೇ. ಅವನ ಮಾತುಗಳನ್ನು ಇನ್ನೊಂದು ಬೈಬಲ್‌ ಭಾಷಾಂತರದಲ್ಲಿ ಹೀಗೆ ಕೊಡಲಾಗಿದೆ: “ನಾಳೆಯ ವಿಷಯವಾಗಿ ಚಿಂತಿಸಬೇಡಿರಿ; ನಾಳೆಯ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವುದು. ಆ ದಿನದ ಪಾಡು ಆ ದಿನಕ್ಕೆ ಸಾಕು!”—ಮತ್ತಾಯ 6:34, NIBV.

“ನಿನ್ನ ರಾಜ್ಯವು ಬರಲಿ”

ನಾಳಿನ ಬಗ್ಗೆ ಅನಾವಶ್ಯಕವಾಗಿ ಚಿಂತಿಸದೆ ಇರುವುದಕ್ಕೂ ನಾಳಿನ ದಿನವನ್ನು ಸಂಪೂರ್ಣವಾಗಿ ಅಲಕ್ಷಿಸುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಯೇಸು ತನ್ನ ಶಿಷ್ಯರಿಗೆ ನಾಳಿನ ದಿನವನ್ನು ಅಲಕ್ಷಿಸುವ ಬದಲಿಗೆ ಭವಿಷ್ಯದ ಕುರಿತು ತೀವ್ರಾಸಕ್ತಿ ತೋರಿಸುವಂತೆ ಉತ್ತೇಜಿಸಿದನು. ಅವರು ಅನುದಿನದ ಆಹಾರ ಅಂದರೆ ಸದ್ಯದ ಅಗತ್ಯಗಳಿಗಾಗಿ ಪ್ರಾರ್ಥಿಸುವಂತೆ ಕಲಿಸಿದನು ಮತ್ತು ಇದು ಸೂಕ್ತವಾಗಿತ್ತು. ಆದರೆ ಮೊದಲು ಅವರು, ಭವಿಷ್ಯದಲ್ಲಿ ನಡೆಯುವ ವಿಷಯಗಳಿಗಾಗಿ ಅಂದರೆ ದೇವರ ರಾಜ್ಯ ಬರಬೇಕೆಂದೂ ಭೂಮಿಯ ಮೇಲೆ ಆತನ ಚಿತ್ತ ನೆರವೇರಬೇಕೆಂದೂ ಪ್ರಾರ್ಥಿಸಬೇಕಿತ್ತು.—ಮತ್ತಾಯ 6:9-11.

ನಾವು ನೋಹನ ದಿನದ ಜನರಂತಿರಬಾರದು. ಅವರು “ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ” ಇರುವುದರಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ ನಡೆಯಲಿದ್ದ ನಾಶನದ ಕಡೆಗೆ ಗಮನಕೊಡಲಿಲ್ಲ. ಇದರ ಫಲಿತಾಂಶ ಏನಾಯಿತು? “ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡು” ಹೋಯಿತು. (ಮತ್ತಾಯ 24:36-42) ನಾವು ನಾಳಿನ ದಿನದ ಮೇಲೆ ಕಣ್ಣಿಟ್ಟು ಜೀವಿಸಬೇಕೆಂದು ನೆನಪುಹುಟ್ಟಿಸಲಿಕ್ಕಾಗಿ ಅಪೊಸ್ತಲ ಪೇತ್ರನು ಆ ಐತಿಹಾಸಿಕ ಘಟನೆಯನ್ನು ಬಳಸಿದನು. ಅವನು ಬರೆದದ್ದು: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.”—2 ಪೇತ್ರ 3:5-7, 11, 12.

ಪರಲೋಕದಲ್ಲಿ ಗಂಟುಮಾಡಿಟ್ಟುಕೊಳ್ಳಿ

ಹೌದು, ನಾವು ಯೆಹೋವನ ದಿನವನ್ನು “ಎದುರುನೋಡುತ್ತಾ” ಇರೋಣ. ಹೀಗೆ ಮಾಡುವುದು, ನಮ್ಮ ಸಮಯ, ಶಕ್ತಿ, ಪ್ರತಿಭೆ, ಸಂಪನ್ಮೂಲ ಹಾಗೂ ಸಾಮರ್ಥ್ಯಗಳನ್ನು ಉಪಯೋಗಿಸುವ ವಿಧವನ್ನು ಬಹಳಷ್ಟು ಪ್ರಭಾವಿಸುವುದು. ಲೌಕಿಕ ವಿಷಯಗಳಾದ ಜೀವನಾವಶ್ಯಕತೆಗಳು ಅಥವಾ ಸುಖಭೋಗಗಳ ಬೆನ್ನಟ್ಟುವಿಕೆಯಲ್ಲಿ ನಾವು ಮುಳುಗಿಹೋಗಬಾರದು. ಹಾಗೆ ಮಾಡುವಲ್ಲಿ ‘ದೈವಭಕ್ತಿಯನ್ನು’ ಪ್ರತಿಬಿಂಬಿಸುವ ಕೃತ್ಯಗಳಿಗಾಗಿ ನಮಗೆ ಸಮಯವೇ ಇಲ್ಲದಂತಾಗುವುದು. ಕೇವಲ ಇವತ್ತಿನ ಮೇಲೆ ಗಮನ ಕೇಂದ್ರೀಕರಿಸುವುದು ತಕ್ಷಣವೇ ಪ್ರಯೋಜನಗಳನ್ನು ತರುತ್ತಿರುವಂತೆ ತೋರಬಹುದಾದರೂ ಆ ಪ್ರಯೋಜನಗಳು ಕೇವಲ ತಾತ್ಕಾಲಿಕವಾಗಿರುವವು. ಆದುದರಿಂದ, ಭೂಮಿಯ ಮೇಲೆ ಅಲ್ಲ ಬದಲಾಗಿ “ಪರಲೋಕದಲ್ಲಿ ಗಂಟುಮಾಡಿ ಇಟ್ಟು”ಕೊಳ್ಳುವುದು ಹೆಚ್ಚು ಬುದ್ಧಿವಂತಿಕೆಯ ಸಂಗತಿಯಾಗಿದೆ.—ಮತ್ತಾಯ 6:19, 20.

ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಯೋಜನೆಗಳನ್ನು ಮಾಡಿದ ಒಬ್ಬ ವ್ಯಕ್ತಿಯ ಕುರಿತ ದೃಷ್ಟಾಂತದಲ್ಲಿ ಯೇಸು ಈ ಅಂಶವನ್ನು ಒತ್ತಿಹೇಳಿದನು. ಅವನ ಆ ಯೋಜನೆಗಳಲ್ಲಿ ದೇವರ ಪ್ರಸ್ತಾಪವೇ ಇರಲಿಲ್ಲ. ಅವನ ಜಮೀನು ತುಂಬ ಫಲವತ್ತಾಗಿತ್ತು. ಆದುದರಿಂದ ಅವನು ತನ್ನ ಕಣಜಗಳನ್ನು ಕೀಳಿಸಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸಿ, ಆರಾಮದ ಜೀವನ ನಡೆಸುತ್ತಾ ವಿಶ್ರಮಿಸಿ, ಊಟಮಾಡಿ, ಕುಡಿದು, ಸುಖಪಡುವ ಯೋಜನೆಮಾಡಿದನು. ಆದರೆ ಏನಾಯಿತು? ತನ್ನ ಪರಿಶ್ರಮದ ಫಲವನ್ನು ಉಣ್ಣುವ ಮುಂಚೆಯೇ ಅವನು ಸತ್ತುಹೋದನು. ಇದಕ್ಕಿಂತಲೂ ಕೆಟ್ಟ ಸಂಗತಿಯೇನೆಂದರೆ ಅವನು ದೇವರೊಂದಿಗೆ ಒಂದು ಸಂಬಂಧವನ್ನು ಬೆಸೆದಿರಲೇ ಇಲ್ಲ. ಯೇಸು ಕೊನೆಯಲ್ಲಿ ಹೇಳಿದ್ದು: “ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ.”—ಲೂಕ 12:15-21; ಜ್ಞಾನೋಕ್ತಿ 19:21.

ನೀವೇನು ಮಾಡಬಲ್ಲಿರಿ?

ಯೇಸು ವರ್ಣಿಸಿದ ವ್ಯಕ್ತಿ ಮಾಡಿದಂಥ ತಪ್ಪನ್ನು ನೀವು ಮಾಡಬೇಡಿ. ನಾಳೆಗಾಗಿ ದೇವರು ಏನನ್ನು ಉದ್ದೇಶಿಸಿದ್ದಾನೆ ಎಂಬುದನ್ನು ತಿಳಿದುಕೊಂಡು, ಅದನ್ನು ಜೀವನದ ಕೇಂದ್ರಬಿಂದುವಾಗಿ ಮಾಡಿರಿ. ತಾನೇನು ಮಾಡಲಿರುವೆನೆಂಬುದರ ಕುರಿತು ದೇವರು ಮನುಷ್ಯರನ್ನು ಕತ್ತಲೆಯಲ್ಲಿಟ್ಟಿಲ್ಲ. “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು” ಎಂದು ಪ್ರಾಚೀನಕಾಲದ ಪ್ರವಾದಿ ಆಮೋಸನು ಬರೆದನು. (ಆಮೋಸ 3:7) ಯೆಹೋವನು ತನ್ನ ಪ್ರವಾದಿಗಳ ಮೂಲಕ ಏನನ್ನು ಪ್ರಕಟಪಡಿಸಿದ್ದಾನೊ ಅದು ಆತನ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿ ನಿಮಗೆ ಈಗ ಲಭ್ಯವಿದೆ.—2 ತಿಮೊಥೆಯ 3:16, 17.

ಬೈಬಲು ಪ್ರಕಟಪಡಿಸುವಂಥ ಒಂದು ಸಂಗತಿಯೇನೆಂದರೆ, ನಿಕಟ ಭವಿಷ್ಯದಲ್ಲಿ ಇಡೀ ಭೂಮಿಯನ್ನು ಅಭೂತಪೂರ್ವ ಮಟ್ಟದಲ್ಲಿ ಏನೊ ಬಾಧಿಸಲಿದೆ. ಯೇಸು ಹೇಳಿದ್ದು: “ಅಂಥ [ಮಹಾ] ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನೂ ಮೇಲೆಯೂ ಆಗುವದಿಲ್ಲ.” (ಮತ್ತಾಯ 24:21) ಯಾವ ಮಾನವನೂ ಆ ಘಟನೆಯನ್ನು ತಡೆಗಟ್ಟಲಾರನು. ಸತ್ಯಾರಾಧಕರಿಗಂತೂ ಅದನ್ನು ತಡೆಗಟ್ಟಲಿಕ್ಕಾಗಿ ಯಾವ ಕಾರಣವೇ ಇಲ್ಲ. ಏಕೆ? ಏಕೆಂದರೆ ಈ ಘಟನೆಯು ಭೂಮಿಯಿಂದ ಎಲ್ಲ ದುಷ್ಟತನವನ್ನು ತೊಲಗಿಸಿ ‘ನೂತನ ಆಕಾಶಮಂಡಲವನ್ನು’ ಮತ್ತು ‘ನೂತನ ಭೂಮಂಡಲವನ್ನು’ ತರುವುದು. ಇದರರ್ಥ ಒಂದು ಹೊಸ ಸ್ವರ್ಗೀಯ ಸರಕಾರ ಮತ್ತು ಒಂದು ಹೊಸ ಭೂಸಮಾಜ ಇರುವುದು. ಆ ಹೊಸ ಲೋಕದಲ್ಲಿ ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”—ಪ್ರಕಟನೆ 21:1-4.

ಆದುದರಿಂದ ಸಮಯ ಮಾಡಿಕೊಂಡು ಈ ಘಟನೆಯ ಬಗ್ಗೆ ಬೈಬಲ್‌ ಏನು ಹೇಳುತ್ತದೆಂಬುದನ್ನು ಪರೀಕ್ಷಿಸುವುದು ವಿವೇಕಯುತವಲ್ಲವೋ? ಅದಕ್ಕಾಗಿ ನಿಮಗೆ ಸಹಾಯ ಬೇಕೋ? ಯೆಹೋವನ ಸಾಕ್ಷಿಗಳನ್ನು ಕೇಳಿರಿ ಇಲ್ಲವೇ ಈ ಪತ್ರಿಕೆಯ ಪ್ರಕಾಶಕರಿಗೆ ಪತ್ರ ಬರೆಯಿರಿ. ಇವತ್ತಿಗಾಗಿ ಮಾತ್ರವಲ್ಲ ಸುಂದರವಾದ ನಾಳೆಗಾಗಿಯೂ ಜೀವಿಸಿರಿ. (w07 10/15)

[ಪುಟ 5ರಲ್ಲಿರುವ ಚಿತ್ರಗಳು]

“ಚಿಂತೆ ಮಾಡಬೇಡಿರಿ . . . ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು”