ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಅಂತರ್ವಾಣಿಗೆ ಕಿವಿಗೊಡಿರಿ

ನಿಮ್ಮ ಅಂತರ್ವಾಣಿಗೆ ಕಿವಿಗೊಡಿರಿ

ನಿಮ್ಮ ಅಂತರ್ವಾಣಿಗೆ ಕಿವಿಗೊಡಿರಿ

‘ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆಯುತ್ತಾರೆ.’—ರೋಮಾಪುರ 2:14, NIBV.

ಸು ರಂಗ ರೈಲುಮಾರ್ಗದ ಪ್ಲ್ಯಾಟ್‌ಫಾರ್ಮ್‌ ಮೇಲೆ ನಿಂತಿದ್ದ 20 ವರ್ಷ ಪ್ರಾಯದ ಯುವಕನೊಬ್ಬನು ತಟ್ಟನೆ ಮೂರ್ಛೆಹೋಗಿ ರೈಲುಕಂಬಿಗಳ ಮೇಲೆ ಬಿದ್ದನು. ಪಕ್ಕದಲ್ಲಿದ್ದ ಒಬ್ಬನು ಇದನ್ನು ನೋಡಿ ತನ್ನೊಂದಿಗಿದ್ದ ಇಬ್ಬರು ಪುತ್ರಿಯರನ್ನು ಅಲ್ಲೇ ಬಿಟ್ಟು ಕೆಳಗೆ ಹಾರಿ ಆ ಯುವಕನನ್ನು ಕಂಬಿಗಳ ಮಧ್ಯೆ ಇದ್ದ ನಾಲೆಗೆ ಎಳೆದುಹಾಕುವ ಮೂಲಕ ಬಚಾವುಮಾಡಿದನು. ಮೇಲಿಂದ ಹಾದುಹೋದ ರೈಲು ಕರ್ಕಶ ಶಬ್ದಮಾಡುತ್ತಾ ಸ್ವಲ್ಪ ಮುಂದಕ್ಕೆ ಹೋಗಿ ನಿಂತುಬಿಟ್ಟಿತು. ಕೆಲವರು ಈ ವ್ಯಕ್ತಿಯನ್ನು ‘ಹೀರೊ’ ಎಂದು ಕರೆದರು. ಆದರೆ ಅವನು ಹೇಳಿದ್ದು: “ಯಾವುದು ಸರಿಯೋ ಅದನ್ನೇ ಮಾಡಬೇಕು. ನಾನಿದನ್ನು ಪ್ರಶಂಸೆ ಅಥವಾ ಮನ್ನಣೆಗಾಗಿ ಮಾಡಲಿಲ್ಲ, ದಯೆಯಿಂದ ಮಾಡಿದೆ ಅಷ್ಟೇ.”

2 ಇತರರಿಗೆ ಸಹಾಯಮಾಡಲು ತಮ್ಮ ಪ್ರಾಣವನ್ನೇ ಅಪಾಯಕ್ಕೊಡ್ಡಿದ ಒಬ್ಬರ ಕುರಿತಾಗಿ ನಿಮಗೂ ತಿಳಿದಿರಬಹುದು. IIನೇ ಲೋಕ ಯುದ್ಧದ ಸಮಯದಲ್ಲಿ ಅನೇಕರು ಅಪರಿಚಿತರ ಜೀವವನ್ನು ಉಳಿಸಲಿಕ್ಕಾಗಿ ಅವರನ್ನು ಬಚ್ಚಿಟ್ಟರು. ಸಿಸಿಲಿ ದೇಶದ ಮಾಲ್ಟ ದ್ವೀಪದ ಬಳಿ ಅಪೊಸ್ತಲ ಪೌಲನೂ ಇನ್ನಿತರ 275 ಮಂದಿಯೂ ಹಡಗೊಡೆತದಲ್ಲಿ ಸಿಲುಕಿದ ಸಂದರ್ಭವನ್ನು ನೆನಪಿಗೆ ತನ್ನಿ. ಸ್ಥಳಿಕ ಜನರು ಆ ಅಪರಿಚಿತರಿಗೆ ನೆರವುನೀಡುತ್ತಾ “ಅಸಾಧಾರಣವಾದ ದಯೆತೋರಿಸಿದರು.” (ಅ. ಕೃತ್ಯಗಳು 27:27–28:2, NIBV) ಅಥವಾ ಅರಾಮ್ಯರ ಸೆರೆಗೆ ಸಿಕ್ಕಿದ್ದ ಇಸ್ರಾಯೇಲ್ಯ ಹುಡುಗಿಯ ಕುರಿತಾಗಿಯೂ ಯೋಚಿಸಿ. ಅವಳು ತನ್ನ ಜೀವವನ್ನು ಅಪಾಯಕ್ಕೆ ಒಡ್ಡಿರಲಿಕ್ಕಿಲ್ಲವಾದರೂ ತನ್ನ ಅರಾಮ್ಯ ಧಣಿಗಾಗಿ ದಯಾಪರ ಚಿಂತೆ ತೋರಿಸಿದಳಲ್ಲವೇ? (2 ಅರಸು 5:1-4) ಕರುಣೆಯುಳ್ಳ ಸಮಾರ್ಯದವನ ಕುರಿತ ಯೇಸುವಿನ ಸುಪ್ರಸಿದ್ಧ ಸಾಮ್ಯವನ್ನೂ ನೆನಪಿಸಿರಿ. ಒಬ್ಬ ಯಾಜಕನು ಮತ್ತು ಒಬ್ಬ ಲೇವ್ಯನು, ಅರೆಜೀವ ಸ್ಥಿತಿಯಲ್ಲಿ ಬಿದ್ದಿದ್ದ ತಮ್ಮ ಜೊತೆ ಯೆಹೂದ್ಯನೊಬ್ಬನನ್ನು ನೋಡಿಯೂ ನೋಡದ ಹಾಗೆ ಹಾದುಹೋದರೂ ಒಬ್ಬ ಸಮಾರ್ಯದವನು ಅವನಿಗೆ ಸಹಾಯ ಮಾಡಲು ವಿಶೇಷ ಶ್ರಮವಹಿಸಿದನು. ಈ ಸಾಮ್ಯವು ಶತಮಾನಗಳಾದ್ಯಂತ ಅನೇಕ ಸಂಸ್ಕೃತಿಗಳ ಜನರ ಹೃದಯವನ್ನು ಸ್ಪರ್ಶಿಸಿದೆ.—ಲೂಕ 10:29-37.

3 ನಾವು ಜೀವಿಸುತ್ತಿರುವ ‘ಕಠಿನಕಾಲಗಳಲ್ಲಿ’ ಅನೇಕ ಜನರು “ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ” ಆಗಿದ್ದಾರೆಂಬುದು ನಿಜ. (2 ತಿಮೊಥೆಯ 3:1-3) ಆದರೂ ಪರೋಪಕಾರ ಮಾಡುವ ಜನರೂ ಇದ್ದಾರಲ್ಲವೇ? ಬಹುಶಃ ನಮಗೇ ಯಾರಾದರೂ ಅಂಥ ಉಪಕಾರ ಮಾಡಿರಬಹುದು. ವೈಯಕ್ತಿಕ ನಷ್ಟವನ್ನು ಲೆಕ್ಕಿಸದೆ ಇತರರಿಗೆ ಸಹಾಯಮಾಡಬೇಕೆಂಬ ಸ್ವಭಾವವು ಮಾನವರಲ್ಲಿ ಎಷ್ಟು ಸಾಮಾನ್ಯವಾಗಿದೆ ಎಂದರೆ ಕೆಲವರು ಅದನ್ನು ‘ಮಾನವೀಯತೆ’ ಎಂದು ಕರೆಯುತ್ತಾರೆ.

4 ವೈಯಕ್ತಿಕ ನಷ್ಟವಾದರೂ ಸರಿ, ಸಹಾಯಮಾಡಬೇಕೆಂಬ ಸಿದ್ಧಮನಸ್ಸನ್ನು ಎಲ್ಲ ಜಾತಿಗಳಲ್ಲೂ ಸಂಸ್ಕೃತಿಗಳಲ್ಲೂ ನೋಡಬಹುದು. ಇದು, ವಿಕಾಸವಾದದ “ಉಳಿಯುವ ಸಾಮರ್ಥ್ಯ ಉಳ್ಳವೇ ಉಳಿಯುತ್ತವೆ” ಎಂಬ ಸಿದ್ಧಾಂತಕ್ಕನುಸಾರ ಮನುಷ್ಯನು ವಿಕಾಸಗೊಂಡು ಅಸ್ತಿತ್ವಕ್ಕೆ ಬರಲಿಲ್ಲವೆಂದು ತೋರಿಸುತ್ತದೆ. ಮನುಷ್ಯರ ಡಿ.ಎನ್‌.ಎ.ಯ ಸಂಕೇತಾರ್ಥವನ್ನು ಬಿಡಿಸಲು ಅಮೆರಿಕದ ಸರ್ಕಾರವು ಮಾಡಿದ ಪ್ರಯತ್ನದಲ್ಲಿ ಮುಂದಾಳತ್ವವಹಿಸಿದ ಫ್ರಾನ್ಸಿಸ್‌ ಎಸ್‌. ಕಾಲಿನ್ಸ್‌ ಎಂಬ ತಳಿ-ವಿಜ್ಞಾನಿ ಹೇಳಿದ್ದು: “ಮಾನವರಲ್ಲಿರುವ ಪರಹಿತ-ಸಾಧನೆ ಎಂಬ ನಿಸ್ವಾರ್ಥ ಗುಣವು ವಿಕಾಸವಾದಿಗಳಿಗೆ ಒಂದು ದೊಡ್ಡ ಸವಾಲಾಗಿಬಿಟ್ಟಿದೆ. . . . ಈ ಗುಣವು, ತಮ್ಮನ್ನೇ ಉಳಿಸಿಕೊಳ್ಳಬೇಕೆಂಬ ಉದ್ದೇಶವುಳ್ಳ ಸ್ವಾರ್ಥಭರಿತ ವಂಶವಾಹಿಗಳಿಂದ ಬಂತೆಂಬ ಕಾರಣ ಕೊಡಲಾಗುವುದಿಲ್ಲ.” ಅವನು ಇದನ್ನೂ ಹೇಳಿದನು: “ತಮ್ಮ ಗುಂಪಿಗೆ ಸೇರಿರದ ಮತ್ತು ತಮ್ಮ ನಡುವೆ ಯಾವ ಸರಿಸಮಾನತೆಯೂ ಇಲ್ಲದವರಿಗೆ ಸಹಾಯ ಮಾಡಲಿಕ್ಕಾಗಿ ತಮ್ಮನ್ನೇ ತ್ಯಾಗಮಾಡಿಕೊಳ್ಳುವ ಕೆಲವು ಜನರಿದ್ದಾರೆ. . . . ಈ ಗುಣಕ್ಕೆ ಕಾರಣವೇನೆಂಬುದನ್ನು ಡಾರ್ವಿನನ ವಾದವು ವಿವರಿಸಲು ಶಕ್ತವಾಗಿಲ್ಲ ಎಂದು ತೋರುತ್ತದೆ.”

“ಮನಸ್ಸಾಕ್ಷಿಯ ವಾಣಿ”

5 ಮಾನವರಲ್ಲಿರುವ ಈ ಪರಹಿತ-ಸಾಧನೆ ಎಂಬ ಸ್ವಭಾವದ ಒಂದು ಅಂಶಕ್ಕೆ ಡಾಕ್ಟರ್‌ ಕಾಲಿನ್ಸ್‌ ಗಮನಸೆಳೆಯುತ್ತಾನೆ: ‘ನಮಗೆ ಪ್ರತಿಫಲವಾಗಿ ಏನೂ ಸಿಗದಿದ್ದರೂ ಇತರರಿಗೆ ಸಹಾಯ ಮಾಡಬೇಕೆಂದು ಹೇಳುವ ಮನಸ್ಸಾಕ್ಷಿಯ ವಾಣಿ ಇದಾಗಿದೆ.’ * ಅವನು ಬಳಸಿರುವ “ಮನಸ್ಸಾಕ್ಷಿ” ಎಂಬ ಪದವು ಅಪೊಸ್ತಲ ಪೌಲನು ಒತ್ತಿಹೇಳಿದ ಈ ವಾಸ್ತವಾಂಶವನ್ನು ಮನಸ್ಸಿಗೆ ತರುತ್ತದೆ: “ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆಯುವಾಗ ಅವರಿಗೆ ಧರ್ಮಶಾಸ್ತ್ರವಿಲ್ಲದಿದ್ದರೂ ಅವರ ಅಂತರಂಗವೇ ಧರ್ಮಶಾಸ್ತ್ರವಾಗಿದೆ; ಅವರು ತಮ್ಮ ನಡತೆಯಿಂದಲೇ ಧರ್ಮಶಾಸ್ತ್ರವು ತಮ್ಮ ಹೃದಯದಲ್ಲಿ ಬರೆದಿದೆ ಎಂಬದನ್ನು ತೋರಿಸುತ್ತಾರೆ. ಅವರ ಯೋಚನೆಗಳು ಒಂದಕ್ಕೊಂದು ಇದು ತಪ್ಪು ಅಥವಾ ತಪ್ಪಲ್ಲ ಎಂಬುದನ್ನು ಸೂಚಿಸುತ್ತವೆ.”—ರೋಮಾಪುರ 2:14, 15, NIBV.

6 ರೋಮಾಪುರದವರಿಗೆ ಬರೆದ ಪತ್ರದಲ್ಲಿ ಪೌಲನು ತಿಳಿಸಿದ್ದೇನೆಂದರೆ, ಮಾನವರು ದೇವರಿಗೆ ಲೆಕ್ಕಕೊಡಬೇಕು ಏಕೆಂದರೆ ದೇವರ ಅಸ್ತಿತ್ವ ಹಾಗೂ ಗುಣಲಕ್ಷಣಗಳು “ಜಗದುತ್ಪತ್ತಿ ಮೊದಲುಗೊಂಡು” ನಾವು ನೋಡುವಂಥ ವಿಷಯಗಳಲ್ಲಿ ಕಾಣಬರುತ್ತವೆ. (ರೋಮಾಪುರ 1:18-20; ಕೀರ್ತನೆ 19:1-4) ಅನೇಕರು ತಮ್ಮ ಸೃಷ್ಟಿಕರ್ತನನ್ನು ಅಲಕ್ಷಿಸಿ ನೈತಿಕವಾಗಿ ತಪ್ಪಾದ ಜೀವನಶೈಲಿಯನ್ನು ನಡೆಸುತ್ತಾರೆಂಬುದು ನಿಜ. ಆದರೂ ದೇವರ ಚಿತ್ತವೇನೆಂದರೆ ಮಾನವರು ತನ್ನ ನೀತಿಯನ್ನು ಒಪ್ಪಿಕೊಂಡು ತಪ್ಪು ಕೃತ್ಯಗಳ ವಿಷಯದಲ್ಲಿ ಪಶ್ಚಾತ್ತಾಪಪಡಬೇಕೆಂದೇ. (ರೋಮಾಪುರ 1:22–2:6) ಇದನ್ನು ಮಾಡಲು ಯೆಹೂದ್ಯರಿಗೆ ಅತಿ ಬಲವಾದ ಕಾರಣವಿತ್ತು ಏಕೆಂದರೆ ದೇವರ ನಿಯಮಗಳನ್ನು ಮೋಶೆಯ ಮೂಲಕ ಅವರಿಗೆ ಕೊಡಲಾಗಿತ್ತು. ಆದರೆ ಯಾರ ಬಳಿ ‘ದೈವೋಕ್ತಿಗಳು’ ಇರಲಿಲ್ಲವೊ ಆ ಜನಾಂಗಗಳು ಸಹ ದೇವರು ಅಸ್ತಿತ್ವದಲ್ಲಿದ್ದಾನೆ ಎಂಬುದನ್ನು ಅಂಗೀಕರಿಸಬೇಕಿತ್ತು.—ರೋಮಾಪುರ 2:8-13; 3:2.

7 ಎಲ್ಲರಿಗೂ ಒಳ್ಳೇದರ ಮತ್ತು ಕೆಟ್ಟದರ ಆಂತರಿಕ ಪ್ರಜ್ಞೆಯಿರುವುದೇ, ಅವರು ದೇವರನ್ನು ಅಂಗೀಕರಿಸಿ ಆತನಿಗನುಸಾರ ಜೀವಿಸಬೇಕೆಂಬುದಕ್ಕೆ ಒಂದು ಬಲವಾದ ಕಾರಣವಾಗಿದೆ. ನಮಗೊಂದು ಮನಸ್ಸಾಕ್ಷಿ ಇದೆ ಎಂಬದಕ್ಕೆ ನಮ್ಮಲ್ಲಿರುವ ನ್ಯಾಯ-ಪ್ರಜ್ಞೆ ಸೂಚನೆಯಾಗಿದೆ. ಹೀಗೆ ಚಿತ್ರಿಸಿಕೊಳ್ಳಿ: ಕೆಲವು ಪುಟಾಣಿಗಳು ಉಯ್ಯಾಲೆಯಲ್ಲಿ ಕೂತುಕೊಳ್ಳುವ ತಮ್ಮ ಸರದಿಗಾಗಿ ಕಾಯುತ್ತಾ ಸಾಲಾಗಿ ನಿಂತಿದ್ದಾರೆ. ಆಗ, ಹಿಂದೆ ಇದ್ದ ಒಬ್ಬನು ಎಲ್ಲರಿಗಿಂತ ಮುಂದೆ ಹೋಗಿ ನಿಲ್ಲುತ್ತಾನೆ. ಕೂಡಲೇ ಅವರಲ್ಲಿ ಹೆಚ್ಚಿನ ಮಕ್ಕಳು ಈ ಅನ್ಯಾಯವನ್ನು ಸಹಿಸದೆ ಕೂಗಾಡುತ್ತಾರೆ. ಈಗ ನಿಮ್ಮನ್ನೇ ಹೀಗೆ ಕೇಳಿ: ‘ಮಕ್ಕಳು ಸಹ ತಾವಾಗಿಯೇ ನ್ಯಾಯ-ಪ್ರಜ್ಞೆಯನ್ನು ವ್ಯಕ್ತಪಡಿಸುವುದಕ್ಕೆ ಕಾರಣವೇನು?’ ಇದು ಅವರಲ್ಲಿರುವ ನೈತಿಕ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ. ಪೌಲನು ಬರೆದುದು: “ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆಯುವಾಗ ಅವರಿಗೆ ಧರ್ಮಶಾಸ್ತ್ರವಿಲ್ಲದಿದ್ದರೂ ಅವರ ಅಂತರಂಗವೇ ಧರ್ಮಶಾಸ್ತ್ರವಾಗಿದೆ.” ಇಲ್ಲಿ, “ಒಂದುವೇಳೆ” ಜನರು ಹಾಗೆ ನಡೆದರೆ ಎಂದು ಹೇಳುತ್ತಾ ಇದು ತೀರ ಅಪರೂಪವಾಗಿ ನಡೆಯುತ್ತದೆಂದು ಪೌಲನು ಸೂಚಿಸುತ್ತಿರಲಿಲ್ಲ. ಅದಕ್ಕೆ ಬದಲಾಗಿ, “ನಡೆಯುವಾಗ” ಎಂಬ ಖಚಿತಮಾತನ್ನು ಹೇಳುವ ಮೂಲಕ ಇದು ಅನೇಕಾನೇಕ ಸಲ ನಡೆಯುತ್ತದೆಂದು ಸೂಚಿಸಿದನು. “ಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆಯು”ತ್ತಾರೆ. ಇದರರ್ಥ ನಾವು ಲಿಖಿತ ಧರ್ಮಶಾಸ್ತ್ರದಲ್ಲಿ ಓದಿ ಅದಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುವ ಸಂಗತಿಗಳನ್ನು ಜನರು ತಮ್ಮ ಆಂತರಿಕ ನೈತಿಕ ಪ್ರಜ್ಞೆಯಿಂದಲೇ ಪ್ರಚೋದಿತರಾಗಿ ಮಾಡುತ್ತಾರೆ.

8 ಈ ನೈತಿಕ ಪ್ರಜ್ಞೆಯು ಅನೇಕ ದೇಶಗಳ ಜನರಲ್ಲಿ ಕಂಡುಬರುತ್ತಿದೆ. ಬಾಬೆಲಿನವರು, ಐಗುಪ್ತದವರು, ಗ್ರೀಕರು ಹಾಗೂ ಆಸ್ಟ್ರೇಲಿಯದ ಆದಿವಾಸಿಗಳು ಮತ್ತು ಅಮೆರಿಕನ್‌ ಮೂಲನಿವಾಸಿಗಳ ಮಟ್ಟಗಳಲ್ಲಿ “ದಬ್ಬಾಳಿಕೆ, ಕೊಲೆ, ಮೋಸ, ಸುಳ್ಳನ್ನು ಖಂಡಿಸುವ ಮಾತುಗಳು ಹಾಗೂ ವೃದ್ಧರಿಗೆ, ಎಳೆಯರಿಗೆ ಮತ್ತು ದುರ್ಬಲರಿಗೆ ದಯೆ ತೋರಿಸಬೇಕೆಂಬ ಆಜ್ಞೆಗಳು” ಒಳಗೂಡಿವೆ ಎಂದು ಕೇಂಬ್ರಿಡ್ಜ್‌ನ ಪ್ರೊಫೆಸರರೊಬ್ಬರು ಹೇಳಿದರು. ಮತ್ತು ಡಾಕ್ಟರ್‌ ಕಾಲಿನ್ಸ್‌ ಬರೆದುದು: “ಸರಿತಪ್ಪಿನ ಕಲ್ಪನೆಯು ಮಾನವಜಾತಿಯ ಎಲ್ಲ ಸದಸ್ಯರಲ್ಲಿ ಸರ್ವಸಾಮಾನ್ಯವಾಗಿರುವಂತೆ ತೋರುತ್ತದೆ.” ಇದು ನಿಮಗೆ ರೋಮಾಪುರ 2:14ನ್ನು ನೆನಪಿಗೆ ತರುತ್ತದಲ್ಲವೋ?

ನಿಮ್ಮ ಮನಸ್ಸಾಕ್ಷಿ ಹೇಗೆ ಕೆಲಸಮಾಡುತ್ತದೆ?

9 ನಿಮ್ಮ ಕೃತ್ಯಗಳನ್ನು ತೂಗಿನೋಡುವ ಆಂತರಿಕ ಸಾಮರ್ಥ್ಯವೇ ಮನಸ್ಸಾಕ್ಷಿ ಆಗಿದೆ ಎಂದು ಬೈಬಲ್‌ ತೋರಿಸುತ್ತದೆ. ಇದು, ನೀವು ಮಾಡುತ್ತಿರುವ ಕೆಲಸವು ಸರಿಯೋ ತಪ್ಪೋ ಎಂಬುದನ್ನು ಹೇಳುವ ನಿಮ್ಮೊಳಗಿನ ಒಂದು ಸ್ವರದಂತಿದೆ. ಪೌಲನು ತನ್ನ ಈ ಅಂತರ್ವಾಣಿಯ ಕುರಿತಾಗಿ ಹೇಳಿದ್ದು: “ನನ್ನ ಮನಸ್ಸಾಕ್ಷಿಯು ಇದನ್ನು ಪವಿತ್ರಾತ್ಮದಲ್ಲಿ ಖಚಿತಪಡಿಸುತ್ತದೆ.” (ರೋಮಾಪುರ 9:1, NIBV) ಉದಾಹರಣೆಗಾಗಿ, ಸರಿ ಮತ್ತು ತಪ್ಪಿನ ಕುರಿತಾದ ಒಂದು ಆಯ್ಕೆಯನ್ನು ನೀವು ಪರಿಗಣಿಸುತ್ತಿರುವಾಗ, ಈ ವಾಣಿ ಮುಂಚೆಯೇ ಮಾತಾಡಬಹುದು. ನೀವು ಮುಂದೆ ಮಾಡಲಿರುವ ಒಂದು ಕೆಲಸವನ್ನು ತೂಗಿನೋಡಿ, ಅದನ್ನು ಮಾಡಿದರೆ ನಿಮಗೆ ಹೇಗನಿಸುವುದು ಎಂಬುದನ್ನು ನಿಮ್ಮ ಮನಸ್ಸಾಕ್ಷಿ ಸೂಚಿಸಬಹುದು.

10 ಸರ್ವಸಾಮಾನ್ಯವಾಗಿ, ನಿಮ್ಮ ಮನಸ್ಸಾಕ್ಷಿಯು ನೀವು ಒಂದು ಕೆಲಸವನ್ನು ಮಾಡಿದ ನಂತರವೇ ಮಾತಾಡುತ್ತದೆ. ಉದಾಹರಣೆಗೆ, ದಾವೀದನು ರಾಜ ಸೌಲನಿಂದ ಪಲಾಯನಗೈಯುತ್ತಿದ್ದ ಸಮಯದಲ್ಲಿ ಅವನಿಗೆ ದೇವರ ಅಭಿಷಿಕ್ತ ರಾಜನ ಕಡೆಗೆ ಅಗೌರವದ ಕೃತ್ಯವನ್ನೆಸಗುವ ಅವಕಾಶಸಿಕ್ಕಿತು ಮತ್ತು ಅವನು ಹಾಗೆಯೇ ಮಾಡಿದನು. ಆದರೆ ತದನಂತರ “ಅವನ ಮನಸ್ಸಾಕ್ಷಿಯು ಅವನನ್ನು ಹಂಗಿಸತೊಡಗಿತು.” (1 ಸಮುವೇಲ 24:1-5; ಕೀರ್ತನೆ 32:3, 5) ಅವನಂತೆಯೇ ನಾವೆಲ್ಲರೂ ಮನಸ್ಸಾಕ್ಷಿಯ ಚುಚ್ಚನ್ನು ಅನುಭವಿಸಿದ್ದೇವೆ. ನಾವು ಯಾವುದೋ ತಪ್ಪು ಮಾಡಿದ ನಂತರ ಅದರ ಬಗ್ಗೆ ನಮಗೆ ಕಸಿವಿಸಿಯಾಗಿದ್ದಿರಬಹುದು ಅಥವಾ ನೆಮ್ಮದಿಗೆಟ್ಟಿದ್ದಿರಬಹುದು. ತೆರಿಗೆಗಳನ್ನು ಕಟ್ಟದಿದ್ದ ಕೆಲವರ ಮನಸ್ಸಾಕ್ಷಿ ಅವರನ್ನು ಎಷ್ಟು ಕಾಡಿಸಿತೆಂದರೆ ಅವರು ಆ ತೆರಿಗೆಗಳನ್ನು ಅನಂತರ ಕಟ್ಟಿಯೇ ಬಿಟ್ಟರು. ವ್ಯಭಿಚಾರಗೈದಿರುವ ಬಗ್ಗೆ ತಮ್ಮ ವಿವಾಹಸಂಗಾತಿಗೆ ತಪ್ಪೊಪ್ಪಿಕೊಳ್ಳಲು ಇತರರು ಪ್ರಚೋದಿಸಲ್ಪಟ್ಟಿದ್ದಾರೆ. (ಇಬ್ರಿಯ 13:4) ಹೀಗೆ ಒಬ್ಬ ವ್ಯಕ್ತಿ ತನ್ನ ಮನಸ್ಸಾಕ್ಷಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವಾಗ ತೃಪ್ತಿ ಹಾಗೂ ನೆಮ್ಮದಿ ಲಭಿಸುವುದು.

11 ಹಾಗಾದರೆ ಕೇವಲ ನಮ್ಮ ‘ಮನಸ್ಸಾಕ್ಷಿಯು ನಮ್ಮ ಮಾರ್ಗದರ್ಶಿ’ ಆಗಿರುವಂತೆ ಬಿಡಬಹುದೋ? ನಮ್ಮ ಮನಸ್ಸಾಕ್ಷಿಗೆ ಕಿವಿಗೊಡುವುದು ಒಳ್ಳೇದೇ. ಆದರೆ ಅದರ ವಾಣಿಯು ನಮ್ಮನ್ನು ಗಂಭೀರ ರೀತಿಯಲ್ಲಿ ತಪ್ಪುದಾರಿಗೂ ಎಳೆದೀತು. ಹೌದು, “ನಮ್ಮ ಆಂತರ್ಯವು” ನಮ್ಮನ್ನು ತಪ್ಪಾಗಿ ಮಾರ್ಗದರ್ಶಿಸಬಹುದು. (2 ಕೊರಿಂಥ 4:16) ಒಂದು ಉದಾಹರಣೆಯನ್ನು ಪರಿಗಣಿಸಿರಿ. ಬೈಬಲ್‌ ನಮಗೆ ಸ್ತೆಫನನೆಂಬವನ ಕುರಿತು ಹೇಳುತ್ತದೆ. ಅವನು ದೇವಭಕ್ತನೂ ಯೇಸುವಿನ ಹಿಂಬಾಲಕನೂ ಆಗಿದ್ದು, “ದೇವರ ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿ”ದ್ದನು. ಕೆಲವು ಮಂದಿ ಯೆಹೂದ್ಯರು ಸ್ತೆಫನನನ್ನು ಯೆರೂಸಲೇಮಿನಿಂದ ಹೊರಗೆಹಾಕಿ ಕಲ್ಲೆಸೆದು ಕೊಂದರು. ಸೌಲನು (ತದನಂತರ ಅಪೊಸ್ತಲ ಪೌಲನಾದವನು) ಹತ್ತಿರದಲ್ಲೇ ನಿಂತುಕೊಂಡು, “ಅವನ ಕೊಲೆಗೆ ಸಮ್ಮತಿಸುವವನಾಗಿದ್ದನು.” ತಮ್ಮ ಕೃತ್ಯವು ಸರಿಯಾದದ್ದೆಂದು ಆ ಯೆಹೂದ್ಯರಿಗೆ ಎಷ್ಟು ದೃಢ ಮನವರಿಕೆ ಇತ್ತೆಂದರೆ ಅವರ ಮನಸ್ಸಾಕ್ಷಿ ಅವರನ್ನು ಕಾಡಲೇ ಇಲ್ಲವೆಂದು ತೋರುತ್ತದೆ. ಇದು ಸೌಲನ ವಿಷಯದಲ್ಲೂ ಸತ್ಯವಾಗಿದ್ದಿರಬಹುದು ಏಕೆಂದರೆ ತದನಂತರ ಅವನು ಸಹ “ಕರ್ತನ ಶಿಷ್ಯರ ಮೇಲೆ ರೌದ್ರನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಆಶೆಪಡುತ್ತಾ” ಇದ್ದನು. ಹಾಗಾದರೆ ಆ ಸಮಯದಲ್ಲಿ ಅವನ ಮನಸ್ಸಾಕ್ಷಿಯು ಸರಿಯಾದದ್ದನ್ನು ತಿಳಿಸುತ್ತಿರಲಿಲ್ಲ ಎಂಬುದು ಸ್ಪಷ್ಟ.—ಅ. ಕೃತ್ಯಗಳು 6:8; 7:57–8:1; 9:1.

12 ಸೌಲನ ಮನಸ್ಸಾಕ್ಷಿಯನ್ನು ಯಾವುದು ಪ್ರಭಾವಿಸಿದ್ದಿರಬಹುದು? ಇತರರೊಂದಿಗಿನ ಅವನ ನಿಕಟ ಸಂಪರ್ಕವು ಒಂದು ಕಾರಣ ಆಗಿದ್ದಿರಬಹುದು. ನಮ್ಮಲ್ಲಿ ಎಷ್ಟೋ ಜನರು ಫೋನಿನಲ್ಲಿ ಮಾತಾಡಿದಾಗ ಒಬ್ಬ ವ್ಯಕ್ತಿಯ ಸ್ವರ ಅವನ ತಂದೆಯಂತೆಯೇ ಕೇಳಿಸುವುದನ್ನು ಗಮನಿಸಿದ್ದೇವೆ. ಆ ಸ್ವರ ಅವನಿಗೆ ಸ್ವಲ್ಪಮಟ್ಟಿಗೆ ತಂದೆಯಿಂದ ಬಂದಿರಬಹುದು. ಅಲ್ಲದೆ, ತನ್ನ ತಂದೆಯ ಮಾತಾಡುವ ಶೈಲಿಯಿಂದಲೂ ಅವನು ಪ್ರಭಾವಿತನಾದಾನು. ಅದೇ ರೀತಿಯಲ್ಲಿ ಸೌಲನು ಸಹ, ಯೇಸುವನ್ನು ದ್ವೇಷಿಸಿ ಅವನ ಬೋಧನೆಗಳನ್ನು ವಿರೋಧಿಸುತ್ತಿದ್ದವರೊಂದಿಗೆ ಇಟ್ಟ ನಿಕಟ ಸಂಪರ್ಕದಿಂದ ಪ್ರಭಾವಿತನಾಗಿದ್ದಿರಬಹುದು. (ಯೋಹಾನ 11:47-50; 18:14; ಅ. ಕೃತ್ಯಗಳು 5:27, 28, 33) ಸೌಲನ ಈ ಒಡನಾಡಿಗಳು ಅವನ ಅಂತರ್ವಾಣಿಯನ್ನು ಅಂದರೆ ಮನಸ್ಸಾಕ್ಷಿಯನ್ನು ಪ್ರಭಾವಿಸಿದ್ದಿರಬಹುದು.

13 ಒಂದು ನಿರ್ದಿಷ್ಟ ಪರಿಸರವು ಒಬ್ಬ ವ್ಯಕ್ತಿಯ ಭಾಷೆ ಅಥವಾ ಉಚ್ಚಾರಣಾಶೈಲಿಯನ್ನು ಪ್ರಭಾವಿಸುವಂತೆಯೇ ಒಬ್ಬನ ಮನಸ್ಸಾಕ್ಷಿಯು ಅವನು ವಾಸಿಸುತ್ತಿರುವ ಸ್ಥಳದ ಸಂಸ್ಕೃತಿ ಹಾಗೂ ಪರಿಸರದಿಂದಲೂ ಪ್ರಭಾವಿಸಲ್ಪಡಬಹುದು. (ಮತ್ತಾಯ 26:73) ಇದು ಪುರಾತನಕಾಲದ ಅಶ್ಶೂರದವರೊಂದಿಗೆ ನಡೆದಿದ್ದಿರಬೇಕು. ಮಿಲಿಟರಿ ಶಕ್ತಿಗಾಗಿ ಅವರು ಖ್ಯಾತರಾಗಿದ್ದರು ಮತ್ತು ಅವರ ಕೆತ್ತನೆಯ ಫಲಕಗಳು ಅವರು ಸೆರೆಯಾಳುಗಳಿಗೆ ಚಿತ್ರಹಿಂಸೆ ಕೊಡುವುದನ್ನು ತೋರಿಸುತ್ತವೆ. (ನಹೂಮ 2:11, 12; 3:1) ಯೋನನ ದಿನದ ನಿನೆವೆಯ ನಿವಾಸಿಗಳನ್ನು “ಎಡಗೈ ಬಲಗೈ ತಿಳಿಯದ”ವರು ಎಂದು ವರ್ಣಿಸಲಾಗಿದೆ. ಇದರರ್ಥ ದೇವರ ದೃಷ್ಟಿಕೋನಕ್ಕನುಸಾರ ಯಾವುದು ಸರಿ ಯಾವುದು ತಪ್ಪೆಂಬುದನ್ನು ತೀರ್ಮಾನಿಸಲು ಅವರಿಗೆ ಯಾವುದೇ ಯೋಗ್ಯ ಮಟ್ಟವಿರಲಿಲ್ಲ. ಇಂಥ ಪರಿಸರವು ನಿನೆವೆಯಲ್ಲಿ ಬೆಳೆಯುತ್ತಿದ್ದ ಒಬ್ಬ ವ್ಯಕ್ತಿಯ ಮನಸ್ಸಾಕ್ಷಿಯನ್ನು ಹೇಗೆ ಪ್ರಭಾವಿಸಿದ್ದಿರಬಹುದೆಂದು ಊಹಿಸಿರಿ! (ಯೋನ 3:4, 5; 4:11) ಅದೇ ರೀತಿಯಲ್ಲಿ ಇಂದು ಒಬ್ಬ ವ್ಯಕ್ತಿಯ ಮನಸ್ಸಾಕ್ಷಿಯನ್ನು ಅವನ ಸುತ್ತಲಿರುವವರ ಮನೋಭಾವವು ಪ್ರಭಾವಿಸಬಲ್ಲದು.

ಅಂತರ್ವಾಣಿಯನ್ನು ಉತ್ತಮಗೊಳಿಸುವುದು ಹೇಗೆ?

14 ಯೆಹೋವನು ಆದಾಮಹವ್ವರಿಗೆ ಮನಸ್ಸಾಕ್ಷಿಯೆಂಬ ಕೊಡುಗೆಯನ್ನು ಕೊಟ್ಟನು. ಅವರಿಂದ ನಾವು ಮನಸ್ಸಾಕ್ಷಿಯನ್ನು ಬಾಧ್ಯತೆಯಾಗಿ ಪಡೆದೆವು. ಮನುಷ್ಯರು ದೇವರ ಸ್ವರೂಪದಲ್ಲಿ ರಚಿಸಲ್ಪಟ್ಟಿದ್ದಾರೆಂದು ಆದಿಕಾಂಡ 1:27 ಹೇಳುತ್ತದೆ. ಇದರರ್ಥ ದೇವರಿಗೆ ದೈಹಿಕ ರೂಪವಿದೆ ಎಂದಲ್ಲ, ಏಕೆಂದರೆ ಆತನು ಆತ್ಮಜೀವಿ ಮತ್ತು ನಾವು ಮಾಂಸಿಕ ದೇಹಿಗಳಾಗಿದ್ದೇವೆ. ನಾವು ದೇವರ ಸ್ವರೂಪದಲ್ಲಿದ್ದೇವೆ ಎಂದರೆ ನಮ್ಮಲ್ಲಿ ಆತನ ಗುಣಗಳಿವೆ ಎಂದರ್ಥ. ಇದರಲ್ಲಿ, ಒಳ್ಳೇದರ ಮತ್ತು ಕೆಟ್ಟದ್ದರ ಕುರಿತ ಪ್ರಜ್ಞೆ ಸೇರಿರುತ್ತದೆ ಮತ್ತು ಈ ಪ್ರಜ್ಞೆಯು ನಮ್ಮ ಮನಸ್ಸಾಕ್ಷಿ ಕೆಲಸಮಾಡುವ ವಿಧದಲ್ಲಿ ತೋರಿಬರುತ್ತದೆ. ಈ ವಾಸ್ತವಾಂಶವು, ನಮ್ಮ ಮನಸ್ಸಾಕ್ಷಿಯನ್ನು ಬಲಪಡಿಸಿ ಇನ್ನಷ್ಟು ಭರವಸಾರ್ಹವನ್ನಾಗಿ ಮಾಡುವ ಒಂದು ವಿಧಾನವನ್ನು ತಿಳಿಸುತ್ತದೆ. ಅದೇನೆಂದರೆ, ನಾವು ಸೃಷ್ಟಿಕರ್ತನ ಕುರಿತಾಗಿ ಹೆಚ್ಚನ್ನು ಕಲಿತು ಆತನಿಗೆ ಹೆಚ್ಚು ಸಮೀಪ ಬರುವುದೇ.

15 ಬೈಬಲ್‌ ತೋರಿಸುವುದೇನೆಂದರೆ ಯೆಹೋವನು ನಮ್ಮ ಜೀವದಾತನಾಗಿರುವುದರಿಂದ ನಮ್ಮೆಲ್ಲರ ತಂದೆಯೋಪಾದಿ ಇದ್ದಾನೆ. (ಯೆಶಾಯ 64:8) ಸ್ವರ್ಗದಲ್ಲಾಗಲಿ, ಭೂಪರದೈಸಿನಲ್ಲಾಗಲಿ ಜೀವಿಸುವ ನಿರೀಕ್ಷೆಯುಳ್ಳ ನಂಬಿಗಸ್ತ ಕ್ರೈಸ್ತರು ದೇವರನ್ನು ತಂದೆಯೆಂದು ಸಂಬೋಧಿಸಬಹುದು. (ಮತ್ತಾಯ 6:10) ನಾವು ನಮ್ಮ ತಂದೆಗೆ ಹೆಚ್ಚೆಚ್ಚು ನಿಕಟವಾಗಲು ಮತ್ತು ಹೀಗೆ ಆತನ ದೃಷ್ಟಿಕೋನಗಳು ಹಾಗೂ ಮಟ್ಟಗಳನ್ನು ಕಲಿಯಲು ಅಪೇಕ್ಷಿಸಬೇಕು. (ಯಾಕೋಬ 4:8) ಅನೇಕರಿಗೆ ಇದನ್ನು ಮಾಡುವ ಆಸಕ್ತಿ ಇಲ್ಲ. ಯೇಸು ಯಾರಿಗೆ ಹೀಗಂದನೊ ಆ ಯೆಹೂದ್ಯರಂತೆ ಅವರಿದ್ದಾರೆ: “ನೀವು ಎಂದಾದರೂ ಆತನ ಧ್ವನಿಯನ್ನು ಕೇಳಿದ್ದೂ ಇಲ್ಲ, ಆತನ ರೂಪವನ್ನು ನೋಡಿದ್ದೂ ಇಲ್ಲ, ಆತನ ವಾಕ್ಯವು ನಿಮ್ಮಲ್ಲಿ ನೆಲೆಗೊಂಡದ್ದೂ ಇಲ್ಲ.” (ಯೋಹಾನ 5:37, 38) ನಾವು ನೇರವಾಗಿ ದೇವರ ವಾಣಿಯನ್ನು ಕೇಳಿದ್ದಿಲ್ಲ. ಆದರೂ ಆತನ ಮಾತುಗಳು ಆತನ ವಾಕ್ಯದಲ್ಲಿವೆ ಮತ್ತು ಹೀಗೆ ನಾವು ಆತನಂತೆಯೇ ಆಗಲು ಮತ್ತು ಭಾವಿಸಲು ಶಕ್ತರಾಗಿದ್ದೇವೆ.

16 ಇದನ್ನು, ಪೋಟೀಫರನ ಮನೆಯಲ್ಲಿ ಯೋಸೇಫನ ಕುರಿತ ಘಟನೆ ತೋರಿಸುತ್ತದೆ. ಪೋಟೀಫರನ ಹೆಂಡತಿಯು ಯೋಸೇಫನನ್ನು ತನ್ನ ಮೋಹಪಾಶಕ್ಕೆ ಸಿಕ್ಕಿಸಲು ಪ್ರಯತ್ನಿಸಿದಳು. ಆ ಕಾಲದಲ್ಲಿ ಯಾವುದೇ ಬೈಬಲ್‌ ಪುಸ್ತಕ ಮತ್ತು ದಶಾಜ್ಞೆಗಳು ಇರದಿದ್ದರೂ, “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಯೋಸೇಫನು ಪ್ರತಿಕ್ರಿಯಿಸಿದನು. (ಆದಿಕಾಂಡ 39:9) ಅವನು ಈ ರೀತಿಯಲ್ಲಿ ಪ್ರತಿಕ್ರಿಯಿಸಿದ್ದು ಕೇವಲ ತನ್ನ ಕುಟುಂಬದವರನ್ನು ಸಂತೋಷಪಡಿಸಲಿಕ್ಕಲ್ಲ ಏಕೆಂದರೆ ಅವರು ಬಹು ದೂರದಲ್ಲಿದ್ದರು. ಅವನು ಮುಖ್ಯವಾಗಿ ದೇವರನ್ನು ಸಂತೋಷಪಡಿಸಲು ಬಯಸಿದನು. ಯೋಸೇಫನಿಗೆ ವಿವಾಹದ ಕುರಿತಾದ ದೇವರ ಮಟ್ಟವು ತಿಳಿದಿತ್ತು. ಅದೇನೆಂದರೆ ಒಬ್ಬ ಗಂಡನಿಗೆ ಒಬ್ಬಳೇ ಹೆಂಡತಿಯಿರಬೇಕು, ಅವರಿಬ್ಬರೂ “ಒಂದೇ ಶರೀರ” ಆಗಿದ್ದಾರೆ. ಅಲ್ಲದೆ, ಯೋಸೇಫನು ಅಬೀಮೆಲೇಕನ ಕುರಿತಾಗಿಯೂ ಕೇಳಿದ್ದಿರಬಹುದು. ರೆಬ್ಬೆಕ್ಕಳು ವಿವಾಹಿತಳೆಂದು ಅಬೀಮೆಲೇಕನಿಗೆ ತಿಳಿದುಬಂದಾಗ, ಅವಳನ್ನು ತನ್ನವಳನ್ನಾಗಿ ಮಾಡುವುದು ತಪ್ಪೆಂದೂ ಅದು ಅವನ ಜನರ ಮೇಲೆ ದೋಷಪರಾಧವನ್ನು ತರುತ್ತದೆಂದೂ ಅವನಿಗನಿಸಿತು. ಈ ಘಟನೆಯ ಫಲಿತಾಂಶವನ್ನು ಯೆಹೋವನು ಹರಸಿದನು ಮತ್ತು ಹೀಗೆ ವ್ಯಭಿಚಾರದ ಬಗ್ಗೆ ತನ್ನ ನೋಟವೇನೆಂದು ತೋರಿಸಿದನು. ಯೋಸೇಫನಿಗೆ ಇದೆಲ್ಲದ್ದರ ಬಗ್ಗೆ ಇದ್ದ ಮಾಹಿತಿಯು, ಅವನು ಬಾಧ್ಯತೆಯಾಗಿ ಪಡೆದಿದ್ದ ಮನಸ್ಸಾಕ್ಷಿಯ ಪ್ರೇರಣೆಗಳಿಗೆ ಹೆಚ್ಚು ಬಲಕೊಟ್ಟು ಲೈಂಗಿಕ ಅನೈತಿಕತೆಯನ್ನು ತ್ಯಜಿಸುವಂತೆ ಅವನನ್ನು ಪ್ರಚೋದಿಸಿತು.—ಆದಿಕಾಂಡ 2:24; 12:17-19; 20:1-18; 26:6-14.

17 ನಿಜ, ನಾವಿಂದು ಯೋಸೇಫನಿಗಿಂತಲೂ ಉತ್ತಮ ಸನ್ನಿವೇಶದಲ್ಲಿದ್ದೇವೆ. ನಮ್ಮ ಬಳಿ ಇಡೀ ಬೈಬಲಿದೆ. ಅದರಿಂದ ನಾವು ನಮ್ಮ ತಂದೆಯ ಯೋಚನೆ ಹಾಗೂ ಭಾವನೆ, ಅಲ್ಲದೆ ಆತನೇನನ್ನು ಮೆಚ್ಚುತ್ತಾನೆ ಮತ್ತು ಏನನ್ನು ನಿಷೇಧಿಸುತ್ತಾನೆಂಬುದನ್ನು ಕಲಿಯಬಲ್ಲೆವು. ನಾವು ದೇವರ ವಾಕ್ಯದಲ್ಲಿ ಎಷ್ಟು ತಲ್ಲೀನರಾಗುತ್ತೇವೊ ಅಷ್ಟೇ ಹೆಚ್ಚು ದೇವರಿಗೆ ನಿಕಟರಾಗಬಲ್ಲೆವು ಮತ್ತು ಆತನಂತಾಗಬಲ್ಲೆವು. ನಾವು ಹಾಗೆ ಮಾಡುವಾಗ, ನಮ್ಮ ಮನಸ್ಸಾಕ್ಷಿ ಹೇಳುವ ಮಾತುಗಳು ನಮ್ಮ ತಂದೆಯ ಯೋಚನಾಧಾಟಿಯನ್ನು ಅಧಿಕ ನಿಕಟವಾಗಿ ಹೋಲುವವು. ಅವು ಆತನ ಚಿತ್ತಕ್ಕೆ ಹೆಚ್ಚೆಚ್ಚು ಹೊಂದಿಕೆಯಲ್ಲಿರುವವು.—ಎಫೆಸ 5:1-5.

18 ನಮ್ಮ ಮನಸ್ಸಾಕ್ಷಿಯ ಮೇಲೆ ನಮ್ಮ ಸುತ್ತಲಿನ ಪರಿಸರವು ಬೀರಿರುವ ಪ್ರಭಾವದ ಕುರಿತೇನು? ನಾವು ನಮ್ಮ ಸಂಬಂಧಿಕರ ಯೋಚನಾಧಾಟಿ ಹಾಗೂ ಕೃತ್ಯಗಳಿಂದ ಮತ್ತು ಬೆಳೆದುಬಂದಿರುವ ಪರಿಸರದಿಂದ ಪ್ರಭಾವಿತರಾಗಿರಬಹುದು. ಹೀಗಿರುವುದರಿಂದ ನಮ್ಮ ಮನಸ್ಸಾಕ್ಷಿಯ ದನಿಯಡಗಿರಬಹುದು ಇಲ್ಲವೇ ತಿರುಚಲ್ಪಟ್ಟಿರಬಹುದು. ಅದು, ನಮ್ಮ ಸುತ್ತಲಿರುವವರ “ಉಚ್ಚಾರಣಾಶೈಲಿ”ಯಲ್ಲಿ ಮಾತಾಡಿದ್ದಿರಬಹುದು. ನಾವು ನಮ್ಮ ಗತಚರಿತ್ರೆಯನ್ನು ಬದಲಾಯಿಸಲಾರೆವು ನಿಜ, ಆದರೆ ನಮ್ಮ ಮನಸ್ಸಾಕ್ಷಿಯ ಮೇಲೆ ಉತ್ತಮ ಪ್ರಭಾವಬೀರಬಲ್ಲ ಒಡನಾಡಿಗಳನ್ನು ಹಾಗೂ ಪರಿಸರವನ್ನು ಆಯ್ಕೆಮಾಡಲು ದೃಢಸಂಕಲ್ಪದಿಂದಿರಬಲ್ಲೆವು. ಒಂದು ಮುಖ್ಯ ಹೆಜ್ಜೆಯು, ತಮ್ಮ ತಂದೆಯಂತಾಗಲು ದೀರ್ಘಕಾಲದಿಂದ ಪ್ರಯತ್ನಿಸುತ್ತಿರುವ ದೇವಭಕ್ತ ಕ್ರೈಸ್ತರೊಂದಿಗೆ ಕ್ರಮವಾಗಿ ಸಹವಸಿಸುವುದೇ ಆಗಿದೆ. ಇದನ್ನು ಮಾಡಲಿಕ್ಕಾಗಿ ಸಭಾ ಕೂಟಗಳು ಅಂದರೆ ಕೂಟಗಳ ಮುಂಚೆ ಹಾಗೂ ಅನಂತರದ ಸಹವಾಸವು ಉತ್ಕೃಷ್ಟ ಅವಕಾಶಗಳನ್ನು ಕೊಡುತ್ತವೆ. ನಾವು ಜೊತೆ ಕ್ರೈಸ್ತರ ಬೈಬಲಾಧರಿತ ಯೋಚನಾಧಾಟಿ ಹಾಗೂ ಪ್ರತಿಕ್ರಿಯೆಗಳನ್ನು ಗಮನಿಸಬಹುದು. ಅಲ್ಲದೆ ಅವರ ಮನಸ್ಸಾಕ್ಷಿ ದೇವರ ದೃಷ್ಟಿಕೋನಗಳನ್ನೂ ಮಾರ್ಗಗಳನ್ನೂ ಪ್ರತಿಧ್ವನಿಸುವಾಗ ಅದಕ್ಕೆ ಕಿವಿಗೊಡಲು ಅವರಿಗಿರುವ ಸಿದ್ಧಮನಸ್ಸನ್ನೂ ಗಮನಿಸಬಹುದು. ಸಮಯಾನಂತರ ನಾವು ನಮ್ಮ ಸ್ವಂತ ಮನಸ್ಸಾಕ್ಷಿಯನ್ನು ಬೈಬಲ್‌ ತತ್ವಗಳಿಗೆ ಹೊಂದಿಕೆಯಲ್ಲಿ ತರುವಂತೆ ಮತ್ತು ದೇವರ ಸ್ವರೂಪವನ್ನು ಹೆಚ್ಚು ಉತ್ತಮವಾಗಿ ಪ್ರತಿಬಿಂಬಿಸುವಂತೆ ಇದು ಸಹಾಯ ಮಾಡುವುದು. ನಮ್ಮ ಅಂತರ್ವಾಣಿಯನ್ನು ನಮ್ಮ ತಂದೆಯ ಮೂಲತತ್ತ್ವಗಳಿಗೆ ತಕ್ಕಂತೆ ಹೊಂದಿಸಿಕೊಳ್ಳುವಾಗ ಮತ್ತು ಅದನ್ನು ಜೊತೆ ಕ್ರೈಸ್ತರ ಒಳ್ಳೇ ಪ್ರಭಾವಕ್ಕೆ ಒಳಪಡಿಸುವಾಗ, ನಮ್ಮ ಮನಸ್ಸಾಕ್ಷಿಯು ಹೆಚ್ಚು ಭರವಸಾರ್ಹವಾಗಿರುವುದು ಮತ್ತು ನಾವದಕ್ಕೆ ಕಿವಿಗೊಡಲು ಹೆಚ್ಚು ಮನಸ್ಸುಳ್ಳವರಾಗಿರುವೆವು.—ಯೆಶಾಯ 30:21.

19 ಹಾಗಿದ್ದರೂ ಕೆಲವರು ತಮ್ಮ ಮನಸ್ಸಾಕ್ಷಿಗೆ ಪ್ರತಿಸ್ಪಂದಿಸಲು ಪ್ರತಿದಿನ ಪ್ರಯಾಸಪಡುತ್ತಾರೆ. ಮುಂದಿನ ಲೇಖನವು, ಕ್ರೈಸ್ತರು ಎದುರಿಸಿರುವಂಥ ಕೆಲವೊಂದು ಸನ್ನಿವೇಶಗಳನ್ನು ಪರಿಗಣಿಸುವುದು. ಇಂಥ ಸನ್ನಿವೇಶಗಳನ್ನು ಪರಿಶೀಲಿಸುವ ಮೂಲಕ ಮನಸ್ಸಾಕ್ಷಿಯ ಪಾತ್ರವೇನು, ಇಬ್ಬರು ವ್ಯಕ್ತಿಗಳ ಮನಸ್ಸಾಕ್ಷಿಗಳು ಏಕೆ ಭಿನ್ನಭಿನ್ನವಾಗಿ ಪ್ರತಿಕ್ರಿಯಿಸಬಹುದು ಮತ್ತು ನಾವು ಅದರ ವಾಣಿಗೆ ಹೇಗೆ ಹೆಚ್ಚೆಚ್ಚಾಗಿ ಪ್ರತಿಕ್ರಿಯಿಸಬಲ್ಲೆವು ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ನೋಡಬಹುದು.—ಇಬ್ರಿಯ 6:11, 12. (w07 10/15)

[ಪಾದಟಿಪ್ಪಣಿ]

^ ಪ್ಯಾರ. 8 ಅದೇ ರೀತಿಯಲ್ಲಿ ಹಾರ್ವಡ್‌ ಯುನಿವರ್ಸಿಟಿಯಲ್ಲಿ ಖಗೋಳಶಾಸ್ತ್ರದ ಸಂಶೋಧನಾ ಪ್ರೊಫೆಸರರಾಗಿರುವ ಓವೆನ್‌ ಗಿಂಗ್ರಿಚ್‌ ಬರೆದುದು: “ಪರಹಿತ-ಸಾಧನೆ ಎಂಬ ಗುಣವು ಒಂದು ಸವಾಲನ್ನು ಒಡ್ಡುತ್ತದೆ . . . ಪ್ರಾಣಿ ಜಗತ್ತನ್ನು ಅವಲೋಕಿಸುವುದರಿಂದ ಇದಕ್ಕೆ ವೈಜ್ಞಾನಿಕ ಉತ್ತರವು ದೊರೆಯಲಾರದು. ಇದಕ್ಕೆ ಹೆಚ್ಚು ಮನಗಾಣಿಸುವಂಥ ಉತ್ತರವು ಸಂಪೂರ್ಣವಾಗಿ ಬೇರೆಯಾದ ಇನ್ನೊಂದು ಕ್ಷೇತ್ರದಿಂದ ಸಿಗಬಹುದು ಮತ್ತು ಅದು ಮನಸ್ಸಾಕ್ಷಿಯನ್ನು ಸೇರಿಸಿ ಮಾನವೀಯತೆಯಂಥ ದೇವದತ್ತ ಗುಣಗಳಿಗೆ ಸಂಬಂಧಿಸಿರಬಹುದು.”

ನೀವೇನು ಕಲಿತಿರಿ?

• ಸರಿತಪ್ಪಿನ ಪ್ರಜ್ಞೆ ಇಲ್ಲವೇ ಮನಸ್ಸಾಕ್ಷಿಯು ಎಲ್ಲಾ ಸಂಸ್ಕೃತಿಗಳ ಜನರಲ್ಲಿರುವುದು ಏಕೆ?

• ನಮ್ಮ ಮನಸ್ಸಾಕ್ಷಿ ಮಾತ್ರವೇ ನಮ್ಮ ಮಾರ್ಗದರ್ಶಿ ಆಗಿರುವಂತೆ ಬಿಡುವುದರ ಕುರಿತು ನಾವೇಕೆ ಎಚ್ಚರಿಕೆಯಿಂದಿರಬೇಕು?

• ನಮ್ಮ ಅಂತರ್ವಾಣಿಯನ್ನು ನಾವು ಉತ್ತಮಗೊಳಿಸಬಹುದಾದ ಕೆಲವು ವಿಧಗಳಾವವು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಅನೇಕರು ಬೇರೆಯವರ ಮೇಲಿನ ಕಾಳಜಿಯಿಂದ ಹೇಗೆ ಕ್ರಿಯೆಗೈದಿದ್ದಾರೆ? (ಬಿ) ಯಾವ ಶಾಸ್ತ್ರಾಧಾರಿತ ಉದಾಹರಣೆಗಳು ಇತರರಿಗಾಗಿರುವ ಕಾಳಜಿಯನ್ನು ಎತ್ತಿತೋರಿಸುತ್ತವೆ?

3, 4. ಅನೇಕರಲ್ಲಿರುವ ಪರಹಿತ-ಸಾಧನೆಯ ಭಾವನೆಗಳು ವಿಕಾಸವಾದದ ಬಗ್ಗೆ ಏನು ತಿಳಿಸುತ್ತವೆ?

5. ಜನರಲ್ಲಿ ಅನೇಕವೇಳೆ ಏನನ್ನು ಗಮನಿಸಲಾಗಿದೆ?

6. ಎಲ್ಲಾ ಜನರು ಸೃಷ್ಟಿಕರ್ತನಿಗೆ ಏಕೆ ಲೆಕ್ಕಕೊಡಬೇಕು?

7, 8. ನ್ಯಾಯ-ಪ್ರಜ್ಞೆಯು ಎಷ್ಟು ಸಾಮಾನ್ಯವಾಗಿದೆ, ಮತ್ತು ಇದು ಏನನ್ನು ಸೂಚಿಸುತ್ತದೆ?

9. ಮನಸ್ಸಾಕ್ಷಿ ಅಂದರೇನು, ಮತ್ತು ನೀವು ಕ್ರಿಯೆಗೈಯುವ ಮುಂಚೆ ಅದು ನಿಮಗೆ ಹೇಗೆ ಸಹಾಯ ಮಾಡಬಹುದು?

10. ಮನಸ್ಸಾಕ್ಷಿ ಅನೇಕವೇಳೆ ಹೇಗೆ ಕೆಲಸಮಾಡುತ್ತದೆ?

11. ಕೇವಲ ನಿಮ್ಮ ‘ಮನಸ್ಸಾಕ್ಷಿ ನಿಮ್ಮ ಮಾರ್ಗದರ್ಶಿ ಆಗಿರುವಂತೆ’ ಬಿಡುವುದು ಏಕೆ ಅಪಾಯಕಾರಿಯಾದೀತು? ದೃಷ್ಟಾಂತಿಸಿರಿ.

12. ನಮ್ಮ ಮನಸ್ಸಾಕ್ಷಿಯು ಪ್ರಭಾವಿಸಲ್ಪಡಬಹುದಾದ ಒಂದು ವಿಧ ಯಾವುದು?

13. ಸುತ್ತಲಿನ ಪರಿಸರವು ಒಬ್ಬ ವ್ಯಕ್ತಿಯ ಮನಸ್ಸಾಕ್ಷಿಯನ್ನು ಹೇಗೆ ಪ್ರಭಾವಿಸಬಹುದು?

14. ನಮ್ಮ ಮನಸ್ಸಾಕ್ಷಿಯು ಆದಿಕಾಂಡ 1:27ರ ಮಾತುಗಳನ್ನು ಹೇಗೆ ಪ್ರತಿಬಿಂಬಿಸುತ್ತದೆ?

15. ನಮ್ಮ ತಂದೆಯ ಕುರಿತು ತಿಳಿದುಕೊಳ್ಳುವುದರಿಂದ ನಾವು ಪ್ರಯೋಜನ ಪಡೆಯುವ ಒಂದು ವಿಧ ಯಾವುದು?

16. ನಮ್ಮ ಮನಸ್ಸಾಕ್ಷಿಯನ್ನು ತರಬೇತಿಗೊಳಿಸುವ ಮತ್ತು ಅದಕ್ಕೆ ಸ್ಪಂದಿಸುವುದರ ಬಗ್ಗೆ ಯೋಸೇಫನ ಕುರಿತ ಘಟನೆ ಏನನ್ನು ತೋರಿಸುತ್ತದೆ?

17. ನಮ್ಮ ತಂದೆಯಂತಾಗಲು ಮಾಡುವ ಪ್ರಯತ್ನದಲ್ಲಿ ನಾವು ಯೋಸೇಫನಿಗಿಂತಲೂ ಉತ್ತಮ ಸನ್ನಿವೇಶದಲ್ಲಿದ್ದೇವೆ ಹೇಗೆ?

18. ಗತಕಾಲದ ಪ್ರಭಾವಗಳು ಯಾವುದೇ ಇರಲಿ ನಮ್ಮ ಮನಸ್ಸಾಕ್ಷಿಯ ಭರವಸಾರ್ಹತೆಯನ್ನು ಹೆಚ್ಚಿಸಲು ನಾವೀಗ ಏನು ಮಾಡಬಲ್ಲೆವು?

19. ಮನಸ್ಸಾಕ್ಷಿಯ ಯಾವ ಅಂಶಗಳಿಗೆ ಗಮನಕೊಡುವುದು ಸೂಕ್ತ?

[ಪುಟ 8ರಲ್ಲಿರುವ ಚಿತ್ರ]

ನಮ್ಮ ಮನಸ್ಸಾಕ್ಷಿಯನ್ನು ನಾವು ತರಬೇತಿಗೊಳಿಸಬಹುದು