ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮನಸ್ಸಾಕ್ಷಿಗೆ ಸ್ಪಂದಿಸುವುದು

ನಿಮ್ಮ ಮನಸ್ಸಾಕ್ಷಿಗೆ ಸ್ಪಂದಿಸುವುದು

ನಿಮ್ಮ ಮನಸ್ಸಾಕ್ಷಿಗೆ ಸ್ಪಂದಿಸುವುದು

“ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಮಲಿನವಾದವರಿಗೂ ನಂಬಿಕೆಯಿಲ್ಲದವರಿಗೂ ಯಾವದೂ ಶುದ್ಧವಲ್ಲ.”—ತೀತ 1:15.

ಅಪೊಸ್ತಲ ಪೌಲನು ತನ್ನ ಮೂರು ಮಿಷನೆರಿ ಸಂಚಾರಗಳನ್ನು ಮುಗಿಸಿದ ನಂತರ ದಸ್ತಗಿರಿ ಮಾಡಲ್ಪಟ್ಟು ಕೊನೆಗೆ ರೋಮಿಗೆ ಕಳುಹಿಸಲ್ಪಟ್ಟನು. ಅಲ್ಲಿ ಅವನನ್ನು ಎರಡು ವರ್ಷಗಳ ವರೆಗೆ ಸೆರೆಯಲ್ಲಿರಿಸಲಾಯಿತು. ಬಿಡುಗಡೆಯಾದ ನಂತರ ಅವನೇನು ಮಾಡಿದನು? ಸ್ವಲ್ಪ ಸಮಯದ ಬಳಿಕ ಅವನು ತೀತನೊಂದಿಗೆ ಕ್ರೇತ ದ್ವೀಪವನ್ನು ಸಂದರ್ಶಿಸಿದನು. ತದನಂತರ ಅವನು ತೀತನಿಗೆ ಬರೆದುದು: “ನೀನು ಕ್ರೇತದ್ವೀಪದಲ್ಲಿ ಇನ್ನೂ ಕ್ರಮಕ್ಕೆ ಬಾರದಿರುವ ಕಾರ್ಯಗಳನ್ನು ಕ್ರಮಪಡಿಸಿ ಪಟ್ಟಣಪಟ್ಟಣಗಳಲ್ಲೂ ಸಭೆಯ ಹಿರಿಯರನ್ನು ನೇಮಿಸಬೇಕೆಂದು ನಾನು ನಿನಗೆ ಅಪ್ಪಣೆಕೊಟ್ಟು ನಿನ್ನನ್ನು ಅಲ್ಲೇ ಬಿಟ್ಟು ಬಂದೆನಲ್ಲಾ.” (ತೀತ 1:5) ತೀತನು ಈ ನೇಮಕವನ್ನು ಪೂರೈಸುವಾಗ ಯಾರೊಂದಿಗೆ ವ್ಯವಹರಿಸಲಿದ್ದನೊ ಅವರು, ಸರಿಯಾಗಿ ಕೆಲಸಮಾಡುತ್ತಿದ್ದ ಇಲ್ಲವೇ ಸರಿಯಾಗಿ ಕೆಲಸಮಾಡದಿದ್ದ ಮನಸ್ಸಾಕ್ಷಿಗಳುಳ್ಳ ಜನರಾಗಿದ್ದರು.

2 ಪೌಲನು ತೀತನಿಗೆ ಸಭಾ ಹಿರಿಯರ ಅರ್ಹತೆಗಳ ಕುರಿತಾಗಿ ಸಲಹೆಗಳನ್ನು ಕೊಟ್ಟನು. ತದನಂತರ, “ಅಧಿಕಾರಕ್ಕೆ ಒಳಗಾಗದ” ಮತ್ತು “ನೀಚಲಾಭವನ್ನು ಹೊಂದುವದಕ್ಕಾಗಿ ಮಾಡಬಾರದ ಉಪದೇಶವನ್ನು ಮಾಡಿ ಕುಟುಂಬಕುಟುಂಬಗಳನ್ನೇ ಹಾಳುಮಾಡು”ತ್ತಿದ್ದವರು ಇದ್ದಾರೆಂಬುದನ್ನು ಹೇಳಿದನು. ಅವರನ್ನು “ಕಠಿಣವಾಗಿ ಖಂಡಿಸು”ವಂತೆ ತೀತನಿಗೆ ತಿಳಿಸಿದನು. (ತೀತ 1:10-14; 1 ತಿಮೊಥೆಯ 4:7) ಅಂಥವರ ಬುದ್ಧಿಯೂ ಮನಸ್ಸಾಕ್ಷಿಯೂ ‘ಮಲಿನವಾಗಿದೆ’ ಎಂದು ಪೌಲನು ಹೇಳಿದನು. ಅವನು ಇಲ್ಲಿ ಉಪಯೋಗಿಸಿದ ಪದವು, ಕಲೆಯಾಗುವುದು ಎಂಬ ಅರ್ಥವುಳ್ಳದ್ದಾಗಿದೆ. ಇದು, ಒಂದು ಸುಂದರ ಬಟ್ಟೆಯ ಮೇಲೆ ಬಣ್ಣಬಿದ್ದಾಗ ಆಗುವ ಕಲೆಯಂತಿರುತ್ತದೆ. (ತೀತ 1:15) ಆ ಪುರುಷರಲ್ಲಿ ಕೆಲವರು ಯೆಹೂದಿ ಹಿನ್ನೆಲೆಯವರಾಗಿದ್ದಿರಬಹುದು. ಆದುದರಿಂದ ಅವರು “ಸುನ್ನತಿಯವರು” ಅಂದರೆ ಸುನ್ನತಿಯಾಗಬೇಕೆಂದು ಹೇಳುವವರಾಗಿದ್ದರು. ಇದೇ ಹೊರನೋಟವುಳ್ಳ ಪುರುಷರು ಇಂದು ಸಭೆಗಳನ್ನು ಕೆಡಿಸುವುದಿಲ್ಲವಾದರೂ, ಪೌಲನು ತೀತನಿಗೆ ಕೊಟ್ಟ ಸಲಹೆಯಿಂದ ನಾವು ಮನಸ್ಸಾಕ್ಷಿಯ ಬಗ್ಗೆ ಬಹಳಷ್ಟನ್ನು ಕಲಿಯಬಲ್ಲೆವು.

ಮಲಿನ ಮನಸ್ಸಾಕ್ಷಿಯುಳ್ಳವರು

3 ಪೌಲನು ಮನಸ್ಸಾಕ್ಷಿಯ ಕುರಿತಾಗಿ ಹೇಳಿದಂಥ ಸನ್ನಿವೇಶವನ್ನು ಗಮನಿಸಿರಿ. “ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಮಲಿನವಾದವರಿಗೂ ನಂಬಿಕೆಯಿಲ್ಲದವರಿಗೂ ಯಾವದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಎರಡೂ ಮಲಿನವಾಗಿವೆ. ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ . . . ದೇವರನ್ನು ಅರಿಯೆವೆಂದು ತಮ್ಮ ಕಾರ್ಯಗಳಿಂದಲೇ ಹೇಳಿದಂತಾಯಿತು.” ಆದುದರಿಂದ ಆ ಕಾಲದಲ್ಲಿದ್ದ ಕೆಲವರು “ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ” ಬದಲಾವಣೆಗಳನ್ನು ಮಾಡಬೇಕಿತ್ತು ಎಂಬುದು ಸ್ಪಷ್ಟ. (ತೀತ 1:13, 15, 16) ಶುದ್ಧ-ಅಶುದ್ಧದ ನಡುವಣ ಬೇಧವನ್ನು ತಿಳಿಯುವ ವಿಷಯದಲ್ಲಿ ಅವರಿಗೆ ಸಮಸ್ಯೆಯಿತ್ತು ಮತ್ತು ಇದಕ್ಕೆ ಕಾರಣ ಅವರ ಮಲಿನಗೊಂಡ ಮನಸ್ಸಾಕ್ಷಿ ಆಗಿತ್ತು.

4 ಹತ್ತಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಕ್ರೈಸ್ತ ಆಡಳಿತ ಮಂಡಲಿಯು, ಸತ್ಯಾರಾಧಕನಾಗಲಿಕ್ಕಾಗಿ ಒಬ್ಬನಿಗೆ ಸುನ್ನತಿಯ ಅಗತ್ಯವಿಲ್ಲವೆಂದು ತೀರ್ಮಾನಿಸಿತು ಮತ್ತು ಇದನ್ನು ಎಲ್ಲ ಸಭೆಗಳಿಗೆ ತಿಳಿಸಿತು. (ಅ. ಕೃತ್ಯಗಳು 15:1, 2, 19-29) ಆದರೂ, ಕ್ರೇತದಲ್ಲಿದ್ದ ಕೆಲವರು “ಸುನ್ನತಿಯವರು” ಆಗಿದ್ದರು ಅಂದರೆ ಸುನ್ನತಿ ಆಗಲೇಬೇಕೆಂದು ಹೇಳುತ್ತಿದ್ದರು. ಈ ವ್ಯಕ್ತಿಗಳು “ಮಾಡಬಾರದ ಉಪದೇಶವನ್ನು ಮಾಡಿ” ಆಡಳಿತ ಮಂಡಲಿಯ ಮಾತುಗಳನ್ನು ಬಹಿರಂಗವಾಗಿ ತಿರಸ್ಕರಿಸಿದರು. (ತೀತ 1:10, 11) ವಕ್ರ ಯೋಚನಾಧಾಟಿಯಿಂದಾಗಿ ಅವರು ಆಹಾರ ಹಾಗೂ ವಿಧಿಬದ್ಧ ಶುಚಿತ್ವದ ಕುರಿತ ಧರ್ಮಶಾಸ್ತ್ರದ ಕಟ್ಟಳೆಗಳನ್ನು ಪ್ರವರ್ಧಿಸುತ್ತಿದ್ದಿರಬಹುದು. ಯೇಸುವಿನ ದಿನದಲ್ಲಿದ್ದ ಶಾಸ್ತ್ರಿಫರಿಸಾಯರಂತೆಯೇ ಇವರು ಧರ್ಮಶಾಸ್ತ್ರ ಹೇಳುತ್ತಿದ್ದ ವಿಷಯಗಳಿಗೆ ಕೂಡಿಸಿ, ಯೆಹೂದಿ ಕಟ್ಟುಕಥೆಗಳನ್ನೂ ಮಾನವರ ನಿಯಮಗಳನ್ನೂ ಪ್ರವರ್ಧಿಸುತ್ತಿದ್ದಿರಬಹುದು.—ಮಾರ್ಕ 7:2, 3, 5, 15; 1 ತಿಮೊಥೆಯ 4:3.

5 ಇಂಥ ಯೋಚನಾಧಾಟಿಯು ಅವರ ನಿರ್ಣಯಿಸುವ ಶಕ್ತಿ ಹಾಗೂ ನೈತಿಕ ಪ್ರಜ್ಞೆ ಅಂದರೆ ಮನಸ್ಸಾಕ್ಷಿಯ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು. ಪೌಲನು ಬರೆದುದು: “ಮಲಿನವಾದವರಿಗೂ ನಂಬಿಕೆಯಿಲ್ಲದವರಿಗೂ ಯಾವದೂ ಶುದ್ಧವಲ್ಲ.” ಅವರ ಮನಸ್ಸಾಕ್ಷಿ ಎಷ್ಟು ತಿರುಚಲ್ಪಟ್ಟಿತ್ತು ಎಂದರೆ, ಅದು ಇನ್ನು ಮುಂದೆ ಅವರ ಕೃತ್ಯಗಳ ಮತ್ತು ಮೌಲ್ಯಮಾಪನಗಳ ಬಗ್ಗೆ ಒಂದು ಭರವಸಾರ್ಹ ಮಾರ್ಗದರ್ಶಿಯಾಗಿರಲು ಸಾಧ್ಯವಿರಲಿಲ್ಲ. ಅಲ್ಲದೆ ಅವರು ಜೊತೆ ಕ್ರೈಸ್ತರ ವೈಯಕ್ತಿಕ ವಿಷಯಗಳು ಅಂದರೆ ಇಬ್ಬರು ಕ್ರೈಸ್ತರು ಭಿನ್ನಭಿನ್ನವಾದ ರೀತಿಯಲ್ಲಿ ನಿರ್ಣಯಿಸಬಹುದಾದಂಥ ವಿಷಯಗಳ ಕುರಿತೂ ಟೀಕಿಸುತ್ತಿದ್ದರು. ಈ ರೀತಿಯಲ್ಲಿ ಆ ಕ್ರೇತದ ಕ್ರೈಸ್ತರು ನಿಜವಾಗಿಯೂ ಶುದ್ಧವಾದದ್ದನ್ನು ಅಶುದ್ಧವೆಂದು ಪರಿಗಣಿಸುತ್ತಿದ್ದರು. (ರೋಮಾಪುರ 14:17; ಕೊಲೊಸ್ಸೆ 2:16) ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಿದ್ದರೂ ತಮ್ಮ ಕಾರ್ಯಗಳಿಂದ ಅದನ್ನು ಅಲ್ಲಗಳೆಯುತ್ತಿದ್ದರು.—ತೀತ 1:16.

‘ಶುದ್ಧರಿಗೆ ಶುದ್ಧವೇ’

6 ಪೌಲನು ತೀತನಿಗೆ ಏನು ಬರೆದನೋ ಅದರಿಂದ ನಮಗೆ ಹೇಗೆ ಪ್ರಯೋಜನವಾಗುವುದು? ಈ ಹೇಳಿಕೆಯಲ್ಲಿರುವ ವೈದೃಶ್ಯವನ್ನು ಗಮನಿಸಿರಿ: “ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಮಲಿನವಾದವರಿಗೂ ನಂಬಿಕೆಯಿಲ್ಲದವರಿಗೂ ಯಾವದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಎರಡೂ ಮಲಿನವಾಗಿವೆ.” (ತೀತ 1:15) ನೈತಿಕವಾಗಿ ಶುದ್ಧನಾಗಿರುವ ಕ್ರೈಸ್ತನೊಬ್ಬನಿಗೆ ಎಲ್ಲವೂ ಶುದ್ಧ ಹಾಗೂ ಸ್ವೀಕರಣೀಯವಾಗಿದೆ ಎಂದು ಪೌಲನು ಹೇಳುತ್ತಿರಲಿಲ್ಲ ಖಂಡಿತ. ಇದನ್ನು ನಾವು ನಿಶ್ಚಯವಾಗಿ ಹೇಳಬಹುದು ಏಕೆಂದರೆ ಅವನೇ ಬರೆದ ಇನ್ನೊಂದು ಪತ್ರದಲ್ಲಿ ಜಾರತ್ವ, ವಿಗ್ರಹಾರಾಧನೆ, ಮಾಟ ಮುಂತಾದವುಗಳನ್ನು ಮಾಡುವವನು ‘ದೇವರ ರಾಜ್ಯಕ್ಕೆ ಬಾಧ್ಯನಾಗುವುದಿಲ್ಲವೆಂದು’ ಅವನು ಸ್ಪಷ್ಟವಾಗಿ ತಿಳಿಸಿದ್ದನು. (ಗಲಾತ್ಯ 5:19-21) ಹೀಗಿರುವುದರಿಂದ ಅವನು ಎರಡು ವಿಧದ ಜನರ ಕುರಿತಾಗಿ ಅಂದರೆ ನೈತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಶುದ್ಧರಾದ ಮತ್ತು ಶುದ್ಧರಾಗಿರದ ಜನರ ಕುರಿತಾಗಿ ಒಂದು ಸರ್ವಸಾಮಾನ್ಯ ಸತ್ಯವನ್ನು ತಿಳಿಸುತ್ತಿದ್ದನೆಂಬ ತೀರ್ಮಾನಕ್ಕೆ ನಾವು ಬರಬಲ್ಲೆವು.

7 ಒಬ್ಬ ಯಥಾರ್ಥ ಕ್ರೈಸ್ತನು ದೂರವಿರಿಸಬೇಕಾದ ಸಂಗತಿಗಳಲ್ಲಿ, ಬೈಬಲು ನಿರ್ದಿಷ್ಟವಾಗಿ ನಿಷೇಧಿಸುವಂಥವುಗಳು ಮಾತ್ರ ಸೇರಿರುವುದಿಲ್ಲ. ಉದಾಹರಣೆಗೆ, ಈ ನೇರ ಹೇಳಿಕೆಯನ್ನು ಪರಿಗಣಿಸಿರಿ: “ದಾಂಪತ್ಯವು ಮಾನ್ಯವಾದದ್ದೆಂದು ಎಲ್ಲರೂ ಎಣಿಸಬೇಕು; ಗಂಡಹೆಂಡರ ಸಂಬಂಧವು ನಿಷ್ಕಳಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.” (ಇಬ್ರಿಯ 13:4) ಅಕ್ರೈಸ್ತರು ಮತ್ತು ಬೈಬಲ್‌ ಕುರಿತು ಏನೂ ಅರಿಯದವರು ಸಹ, ಈ ವಚನ ಹಾದರವನ್ನು ನಿಷೇಧಿಸುತ್ತದೆಂಬ ಸರಿಯಾದ ತೀರ್ಮಾನಕ್ಕೆ ಬರುವರು. ಬೈಬಲಿನ ಈ ವಚನ ಹಾಗೂ ಇತರ ವಚನಗಳಿಂದ ಸ್ಪಷ್ಟವಾಗಿರುವ ಸಂಗತಿಯೇನೆಂದರೆ ಒಬ್ಬ ವಿವಾಹಿತ ಪುರುಷ ಅಥವಾ ಸ್ತ್ರೀ ತನ್ನ ಕಾನೂನುಬದ್ಧ ವಿವಾಹ ಸಂಗಾತಿಯಲ್ಲದ ಬೇರೆ ಯಾರೊಂದಿಗೂ ಲೈಂಗಿಕ ಸಂಬಂಧ ಇಡುವುದನ್ನು ಖಂಡಿಸುತ್ತದೆ. ಆದರೆ ಇಬ್ಬರು ಅವಿವಾಹಿತರು ಮೌಖಿಕ ಲೈಂಗಿಕತೆಯಲ್ಲಿ ತೊಡಗುವುದರ ಕುರಿತೇನು? ಅದು ಲೈಂಗಿಕ ಸಂಭೋಗವಲ್ಲದ ಕಾರಣ ಅದರಿಂದ ಏನೂ ಹಾನಿಯಿಲ್ಲವೆಂದು ಅನೇಕ ಹದಿವಯಸ್ಕರು ಹೇಳಿಕೊಳ್ಳುತ್ತಾರೆ. ಕ್ರೈಸ್ತನೊಬ್ಬನು ಈ ಮೌಖಿಕ ಲೈಂಗಿಕತೆಯನ್ನು ಶುದ್ಧವೆಂದು ದೃಷ್ಟಿಸಬಲ್ಲನೋ?

8 ದೇವರು ವ್ಯಭಿಚಾರವನ್ನೂ ಜಾರತ್ವವನ್ನೂ (ಗ್ರೀಕ್‌ನಲ್ಲಿ ಪೋರ್ನಿಯ) ಅಸಮ್ಮತಿಸುತ್ತಾನೆಂದು ಇಬ್ರಿಯ 13:4 ಮತ್ತು 1 ಕೊರಿಂಥ 6:9ರಂಥ ವಚನಗಳು ಸ್ಥಾಪಿಸುತ್ತವೆ. ಜಾರತ್ವದಲ್ಲಿ ಏನೆಲ್ಲ ಒಳಗೂಡಿದೆ? ಜಾರತ್ವದ ಗ್ರೀಕ್‌ ಪದವು, ಅಶ್ಲೀಲ ಉದ್ದೇಶದಿಂದ ಜನನಾಂಗಗಳ ಸ್ವಾಭಾವಿಕ ಇಲ್ಲವೇ ವಿಕೃತ ಉಪಯೋಗವನ್ನು ಸೂಚಿಸುತ್ತದೆ. ಇದರಲ್ಲಿ, ಶಾಸ್ತ್ರಾಧಾರಿತ ವಿವಾಹದ ಹೊರಗಿನ ಎಲ್ಲ ರೀತಿಯ ಅಕ್ರಮ ಲೈಂಗಿಕ ಸಂಬಂಧಗಳು ಒಳಗೂಡಿವೆ. ಆದುದರಿಂದ ಜಾರತ್ವದಲ್ಲಿ ಮೌಖಿಕ ಲೈಂಗಿಕತೆಯೂ ಸೇರಿರುತ್ತದೆ; ಇದು ವಾಸ್ತವಾಂಶ. ಆದರೆ ಲೋಕದಲ್ಲಿ ಅನೇಕ ಹದಿವಯಸ್ಕರಿಗೆ ಮೌಖಿಕ ಲೈಂಗಿಕತೆಯು ತಪ್ಪಲ್ಲವೆಂದು ಹೇಳಲಾಗಿದೆ ಇಲ್ಲವೇ ಸ್ವತಃ ಅವರೇ ಈ ತೀರ್ಮಾನಕ್ಕೆ ಬಂದಿರುತ್ತಾರೆ. ಆದರೆ ಸತ್ಯ ಕ್ರೈಸ್ತರು ತಮ್ಮ ಯೋಚನಾಧಾಟಿ ಹಾಗೂ ಕ್ರಿಯೆಗಳನ್ನು ‘ಬರೀ ಮಾತಿನವರೂ ಮೋಸಗಾರರೂ’ ಆಗಿರುವವರ ಅಭಿಪ್ರಾಯಗಳು ಮಾರ್ಗದರ್ಶಿಸುವಂತೆ ಬಿಡುವುದಿಲ್ಲ. (ತೀತ 1:10) ಅವರು ಪವಿತ್ರ ಶಾಸ್ತ್ರಗಳ ಉಚ್ಚ ಮಟ್ಟಕ್ಕೆ ಅಂಟಿಕೊಳ್ಳುತ್ತಾರೆ. ಮೌಖಿಕ ಲೈಂಗಿಕತೆಯನ್ನು ಸಮರ್ಥಿಸಲಿಕ್ಕಾಗಿ ನೆವಗಳನ್ನು ಹುಡುಕುವುದರ ಬದಲು ಬೈಬಲಿಗನುಸಾರ ಅದು ಜಾರತ್ವ ಅಂದರೆ ಪೋರ್ನಿಯ ಆಗಿದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಇದಕ್ಕನುಸಾರ ತಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸುತ್ತಾರೆ. *ಅ. ಕೃತ್ಯಗಳು 21:25; 1 ಕೊರಿಂಥ 6:18; ಎಫೆಸ 5:3.

ಭಿನ್ನ ಮನಸ್ಸಾಕ್ಷಿಗಳು, ಭಿನ್ನ ನಿರ್ಣಯಗಳು

9 “ಶುದ್ಧರಿಗೆ ಎಲ್ಲವೂ ಶುದ್ಧವೇ” ಎಂದು ಪೌಲನು ಹೇಳಿದ್ದು ಯಾವ ಅರ್ಥದಲ್ಲಿ? ತಮ್ಮ ಯೋಚನಾಧಾಟಿಯನ್ನೂ ನೈತಿಕ ಪ್ರಜ್ಞೆಯನ್ನೂ ದೇವರ ಪ್ರೇರಿತ ವಾಕ್ಯದಲ್ಲಿ ಕಂಡುಬರುವ ಮಟ್ಟಗಳಿಗೆ ಹೊಂದಿಕೆಯಲ್ಲಿ ತಂದಿದ್ದ ಕ್ರೈಸ್ತರಿಗೆ ಪೌಲನು ಸೂಚಿಸುತ್ತಿದ್ದನು. ಇಂಥ ಕ್ರೈಸ್ತರು, ದೇವರು ನೇರವಾಗಿ ಖಂಡಿಸದಂಥ ವಿಷಯಗಳಲ್ಲಿ ವಿಶ್ವಾಸಿಗಳಿಗೆ ಭಿನ್ನಭಿನ್ನ ಅಭಿಪ್ರಾಯಗಳಿರಲು ಎಡೆಯಿದೆ ಎಂಬುದನ್ನು ಗ್ರಹಿಸುತ್ತಾರೆ. ಆದುದರಿಂದ ಟೀಕಿಸುವ ಬದಲು, ದೇವರು ಯಾವುದನ್ನು ಖಂಡಿಸುವುದಿಲ್ಲವೊ ಅದನ್ನು ಅವರು ‘ಶುದ್ಧ’ವೆಂದು ಅಂಗೀಕರಿಸುತ್ತಾರೆ. ಬೈಬಲ್‌ ಯಾವುದರ ಬಗ್ಗೆ ನಿರ್ದಿಷ್ಟ ನಿರ್ದೇಶನ ಕೊಡುವುದಿಲ್ಲವೊ, ಜೀವನದ ಆ ವಿಷಯಗಳ ಕುರಿತು ಎಲ್ಲರೂ ಸರಿಸಮಾನವಾಗಿ ಯೋಚಿಸುವಂತೆ ಅವರು ನಿರೀಕ್ಷಿಸುವುದಿಲ್ಲ. ಇದು ಹೇಗೆಂಬುದನ್ನು ಉದಾಹರಣೆಗಳ ಮೂಲಕ ನೋಡೋಣ.

10 ಅನೇಕ ಕುಟುಂಬಗಳಲ್ಲಿ ಗಂಡ ಅಥವಾ ಹೆಂಡತಿ ಇವರಲ್ಲಿ ಕೇವಲ ಒಬ್ಬರೇ ಕ್ರೈಸ್ತರಾಗಿರುತ್ತಾರೆ. (1 ಪೇತ್ರ 3:1; 4:3) ಇದರಿಂದಾಗಿ ಹಲವಾರು ಸವಾಲುಗಳೇಳಬಹುದು. ಉದಾಹರಣೆಗೆ ಹೆಂಡತಿ ಕ್ರೈಸ್ತಳಾಗಿದ್ದು ಗಂಡನು ವಿಶ್ವಾಸಿಯಲ್ಲದ ಕುಟುಂಬದಲ್ಲಿ ಸಂಬಂಧಿಕರೊಬ್ಬರ ಮದುವೆ ಇಲ್ಲವೆ ಶವಸಂಸ್ಕಾರ ಇದೆಯೆಂದು ಇಟ್ಟುಕೊಳ್ಳಿ. ಗಂಡನ ಸಂಬಂಧಿಗಳಲ್ಲಿ ಒಬ್ಬರ ಮದುವೆ ಚರ್ಚ್‌ನಲ್ಲಿ ನಡೆಯಲಿದೆ. (ಅಥವಾ ಅವನ ಸಂಬಂಧಿಕ, ಬಹುಶಃ ತಂದೆ ಇಲ್ಲವೇ ತಾಯಿಯ ಶವಸಂಸ್ಕಾರ ಚರ್ಚ್‌ನಲ್ಲಿ ನಡೆಯಲಿದೆ) ಹೆಂಡತಿ ತನ್ನೊಂದಿಗೆ ಬರಬೇಕೆಂದು ಗಂಡನು ಹೇಳುತ್ತಾನೆ. ಆಗ ಆಕೆಯ ಮನಸ್ಸಾಕ್ಷಿ ಏನು ಹೇಳುತ್ತದೆ? ಅವಳೇನು ಮಾಡುವಳು? ಈ ಮುಂದಿನ ಎರಡು ಸಾಧ್ಯತೆಗಳನ್ನು ಊಹಿಸಿಕೊಳ್ಳಿ.

11 ಲೋವಿ ಎಂಬವಳು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲನ್ನು ಬಿಟ್ಟು ಬನ್ನಿರಿ’ ಎಂಬ ಗಂಭೀರವಾದ ಬೈಬಲ್‌ ಆಜ್ಞೆಯ ಕುರಿತಾಗಿ ಯೋಚಿಸುತ್ತಾಳೆ. (ಪ್ರಕಟನೆ 18:2, 4) ಹಿಂದೆ ಅವಳು ಈ ಮದುವೆ ನಡೆಯಲಿರುವ ಅದೇ ಚರ್ಚಿನ ಸದಸ್ಯೆ ಆಗಿದ್ದಳು. ಆದುದರಿಂದ ಇಂಥ ಸಮಾರಂಭಗಳ ಸಮಯದಲ್ಲಿ ಹಾಜರಿದ್ದವರೆಲ್ಲರೂ ಧಾರ್ಮಿಕ ಪ್ರಾರ್ಥನೆ, ಹಾಡು ಇಲ್ಲವೇ ನಿರ್ದಿಷ್ಟ ಭಂಗಿ ಹಾಗೂ ಸನ್ನೆಗಳಲ್ಲಿ ಜೊತೆಗೂಡಬೇಕಾಗುತ್ತದೆಂದು ಅವಳಿಗೆ ತಿಳಿದಿದೆ. ಇದರಲ್ಲಿ ಭಾಗವಹಿಸಬಾರದೆಂದು ಅವಳು ದೃಢಸಂಕಲ್ಪ ಮಾಡುತ್ತಾಳೆ. ಒತ್ತಡಕ್ಕೊಳಗಾಗಿ ತನ್ನ ಸಮಗ್ರತೆಯನ್ನು ಮುರಿಯುವ ಸಂದರ್ಭ ಬಂದೀತೆಂದು ಅವಳು ಅಲ್ಲಿಗೆ ಹೋಗಲೂ ಬಯಸುವುದಿಲ್ಲ. ಬೈಬಲ್‌ ಹೇಳುವಂತೆ ಶಿರಸ್ಸಾಗಿರುವ ಗಂಡನ ಬಗ್ಗೆ ಲೋವಿಗೆ ಗೌರವವಿದೆ ಮತ್ತು ಅವನೊಂದಿಗೆ ಸಹಕರಿಸಲು ಬಯಸುತ್ತಾಳೆ, ಆದರೆ ಅದೇ ಸಮಯದಲ್ಲಿ ಶಾಸ್ತ್ರಾಧಾರಿತ ಮೂಲತತ್ತ್ವಗಳ ವಿಷಯದಲ್ಲಿ ರಾಜಿಮಾಡಿಕೊಳ್ಳಲು ಆಕೆ ಸಿದ್ಧಳಿಲ್ಲ. (ಅ. ಕೃತ್ಯಗಳು 5:29) ಆದುದರಿಂದ ಸಮಯೋಚಿತ ಜಾಣ್ಮೆಯಿಂದ ಮಾತಾಡುತ್ತಾ, ಅವನು ಅಲ್ಲಿ ಹೋದರೂ ತಾನು ಬರಲಾರೆ ಎಂದು ವಿವರಿಸುತ್ತಾಳೆ. ಒಂದುವೇಳೆ ತಾನು ಬಂದು ಅಲ್ಲಿ ನಡೆಯುವ ಯಾವುದೇ ವಿಧಿಯಲ್ಲಿ ಪಾಲ್ಗೊಳ್ಳದಿದ್ದರೆ ಅವನು ಪೇಚಾಟಪಟ್ಟಾನು ಎಂದು ಅವಳು ಹೇಳಬಹುದು. ಹೀಗೆ ತಾನು ಬರದೇ ಇದ್ದರೆ ಅವನಿಗೆ ಒಳ್ಳೇದ್ದೆಂದು ವಿವರಿಸಬಹುದು. ಈ ನಿರ್ಣಯದಿಂದಾಗಿ ಅವಳ ಮನಸ್ಸಾಕ್ಷಿ ಶುದ್ಧವಾಗಿ ಉಳಿಯುತ್ತದೆ.

12 ರೂತ್‌ ಎಂಬವಳು ಸಹ ಅಂಥದ್ದೇ ಸಂದಿಗ್ಧ ಸ್ಥಿತಿಯಲ್ಲಿದ್ದಾಳೆ. ಅವಳಿಗೆ ತನ್ನ ಗಂಡನ ಬಗ್ಗೆ ಗೌರವವಿದೆ, ದೇವರಿಗೆ ನಿಷ್ಠಾವಂತಳು ಆಗಿರಲು ದೃಢಸಂಕಲ್ಪ ಮಾಡಿದ್ದಾಳೆ ಮತ್ತು ತನ್ನ ಬೈಬಲ್‌-ಶಿಕ್ಷಿತ ಮನಸ್ಸಾಕ್ಷಿಗೆ ಸ್ಪಂದಿಸುತ್ತಾಳೆ. ಲೋವಿ ಪರಿಗಣಿಸಿದ ಅಂಶಗಳ ಕುರಿತು ಯೋಚಿಸಿದ ನಂತರ ರೂತಳು, 2002ರ ಕಾವಲಿನಬುರುಜು, ಮೇ 15ನೇ ಸಂಚಿಕೆಯ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನವನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುತ್ತಾಳೆ. ಅವಳು ಜ್ಞಾಪಿಸಿಕೊಳ್ಳುವ ಸಂಗತಿಯೇನೆಂದರೆ, ಆ ಮೂರು ಮಂದಿ ಇಬ್ರಿಯ ಯುವಕರು, ವಿಗ್ರಹಾರಾಧನೆ ನಡೆಯಲಿದ್ದ ಸ್ಥಳದಲ್ಲಿರಬೇಕೆಂಬ ಅಪ್ಪಣೆಗೆ ವಿಧೇಯತೆ ತೋರಿಸಿದ್ದರು. ಆದರೆ ಅಲ್ಲಿ ನಡೆದ ವಿಗ್ರಹಾರಾಧನೆಯಲ್ಲಿ ಪಾಲ್ಗೊಳ್ಳದೇ ಇರುವ ಮೂಲಕ ಅವರು ತಮ್ಮ ಸಮಗ್ರತೆ ಕಾಪಾಡಿಕೊಂಡಿದ್ದರು. (ದಾನಿಯೇಲ 3:15-18) ಆದುದರಿಂದ ಅವಳು ತನ್ನ ಗಂಡನೊಂದಿಗೆ ಹೋಗಲು ಆದರೆ ಯಾವುದೇ ಧಾರ್ಮಿಕ ಕ್ರಿಯೆಯಲ್ಲಿ ಭಾಗವಹಿಸದಿರಲು ನಿರ್ಣಯಿಸುತ್ತಾಳೆ. ಇದನ್ನು ಅವಳು ತನ್ನ ಮನಸ್ಸಾಕ್ಷಿಗೆ ಹೊಂದಿಕೆಯಲ್ಲಿ ಮಾಡುತ್ತಾಳೆ. ತನ್ನ ಮನಸ್ಸಾಕ್ಷಿ ಏನನ್ನು ಮಾಡುವಂತೆ ಅನುಮತಿಸುತ್ತದೆ ಮತ್ತು ತಾನೇನು ಮಾಡಲಾರೆ ಎಂಬುದನ್ನು ಅವಳು ತನ್ನ ಗಂಡನಿಗೆ ಸಮಯೋಚಿತ ಜಾಣ್ಮೆಯಿಂದ ಸ್ಪಷ್ಟವಾಗಿ ತಿಳಿಸುತ್ತಾಳೆ. ಸತ್ಯಾರಾಧನೆ ಹಾಗೂ ಸುಳ್ಳಾರಾಧನೆಯ ನಡುವಿನ ವ್ಯತ್ಯಾಸವನ್ನು ಅವನು ಎಂದಾದರೊಂದು ದಿನ ನೋಡಶಕ್ತನಾಗಲಿ ಎಂದವಳು ಹಾರೈಸುತ್ತಾಳೆ.—ಅ. ಕೃತ್ಯಗಳು 24:16.

13 ಇಬ್ಬರು ಕ್ರೈಸ್ತರು ಒಂದೇ ವಿಷಯದ ಬಗ್ಗೆ ಬೇರೆ ಬೇರೆ ತೀರ್ಮಾನಗಳನ್ನು ಮಾಡುವುದರ ಅರ್ಥ, ಒಬ್ಬ ವ್ಯಕ್ತಿ ಏನೇ ಮಾಡಲಿ ಅದು ಪ್ರಾಮುಖ್ಯವಲ್ಲ ಅಥವಾ ಇವರಿಬ್ಬರಲ್ಲಿ ಒಬ್ಬರ ಮನಸ್ಸಾಕ್ಷಿ ದುರ್ಬಲವಾಗಿದೆ ಎಂದಾಗಿದೆಯೋ? ಇಲ್ಲ. ಲೋವಿಗೆ ಈ ಹಿಂದೆ ಚರ್ಚ್‌ ಸಂಸ್ಕಾರಗಳಲ್ಲಿನ ಸಂಗೀತ ಹಾಗೂ ಅಲಂಕಾರ-ಸಜ್ಜುಗಳ ವಿಷಯದಲ್ಲಿ ಆಗಿರುವ ಅನುಭವದಿಂದ ಅಲ್ಲಿಗೆ ಹೋಗುವುದೇ ತನಗೆ ಅಪಾಯಕಾರಿ ಎಂದು ಅನಿಸೀತು. ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಈ ಹಿಂದೆ ತನ್ನ ಗಂಡನು ಹಾಕಿರುವ ಒತ್ತಡವು ಅವಳ ಮನಸ್ಸಾಕ್ಷಿಯನ್ನು ಪ್ರಭಾವಿಸೀತು. ಆದುದರಿಂದ ತಾನು ಮಾಡಿರುವ ನಿರ್ಣಯವು ತನಗೆ ಅತ್ಯುತ್ತಮ ಎಂದು ಅವಳಿಗೆ ಪೂರ್ತಿ ಮನವರಿಕೆ ಆಗಿರುತ್ತದೆ.

14 ಆದರೆ ರೂತಳು ಮಾಡಿದ ನಿರ್ಣಯವು ತಪ್ಪೋ? ಇದರ ಬಗ್ಗೆ ಬೇರೆಯವರು ತೀರ್ಪು ಮಾಡಬಾರದು. ಮದುವೆ ಅಥವಾ ಶವಸಂಸ್ಕಾರಕ್ಕೆ ಹೋದರೂ ಯಾವುದೇ ಧಾರ್ಮಿಕ ಕ್ರಿಯೆಯಲ್ಲಿ ಭಾಗವಹಿಸದೆ ಇರಲು ಅವಳು ಆಯ್ಕೆಮಾಡಿದ್ದನ್ನು ಯಾರೂ ಖಂಡಿಸಬಾರದು. ನಿರ್ದಿಷ್ಟ ಆಹಾರಗಳನ್ನು ತಿನ್ನಬೇಕೋ ಬಾರದೋ ಎಂಬ ವೈಯಕ್ತಿಕ ನಿರ್ಣಯಗಳ ಕುರಿತು ಪೌಲನು ಕೊಟ್ಟ ಈ ಸಲಹೆಯನ್ನು ಮನಸ್ಸಿನಲ್ಲಿಡಿರಿ: “ತಿನ್ನುವವನು ತಿನ್ನದವನನ್ನು ಹೀನೈಸಬಾರದು; ತಿನ್ನದವನು ತಿನ್ನುವವನನ್ನು ದೋಷಿಯೆಂದು ಎಣಿಸಬಾರದು. . . . ಅವನು ನಿರ್ದೋಷಿಯಾಗಿ ನಿಂತರೂ ದೋಷಿಯಾಗಿ ಬಿದ್ದರೂ ಅದು ಅವನ ಯಜಮಾನನಿಗೇ ಸೇರಿದ್ದು. ಅವನು ನಿರ್ದೋಷಿಯಾಗಿ ನಿಲ್ಲಿಸಲ್ಪಡುವನು; ಅವನನ್ನು ನಿಲ್ಲಿಸುವದಕ್ಕೆ ಕರ್ತನು ಶಕ್ತನಾಗಿದ್ದಾನೆ.” (ರೋಮಾಪುರ 14:3, 4) ಬೇರೊಬ್ಬ ಕ್ರೈಸ್ತನು ತನ್ನ ಶಿಕ್ಷಿತ ಮನಸ್ಸಾಕ್ಷಿಯ ನಿರ್ದೇಶನವನ್ನು ಅಲಕ್ಷಿಸುವಂತೆ ಯಥಾರ್ಥನಾದ ಯಾವ ಕ್ರೈಸ್ತನೂ ಉತ್ತೇಜಿಸುವುದಿಲ್ಲ. ಏಕೆಂದರೆ ಹಾಗೆ ಅಲಕ್ಷಿಸುವುದು, ಜೀವರಕ್ಷಕ ಸಂದೇಶವನ್ನು ಕೊಡಬಲ್ಲ ವಾಣಿಗೆ ಕಿವಿಗೊಡದಿರುವ ಹಾಗಿರುವುದು.

15 ಇದೇ ಸನ್ನಿವೇಶದಲ್ಲಿ ಆ ಇಬ್ಬರು ಕ್ರೈಸ್ತರು ಇನ್ನೂ ಹೆಚ್ಚಿನ ಅಂಶಗಳನ್ನು ಪರಿಗಣಿಸಬೇಕು. ಇದರಲ್ಲಿ ಒಂದು, ಅವರ ನಿರ್ಣಯವು ಇತರರ ಮೇಲೆ ಬೀರುವ ಪರಿಣಾಮವೇ ಆಗಿದೆ. ಪೌಲನು ನಮಗೆ ಬುದ್ಧಿವಾದಕೊಟ್ಟದ್ದು: “ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ ಎಡತಡೆಯನ್ನಾಗಲಿ ಹಾಕಬಾರದೆಂದು ತೀರ್ಮಾನಿಸಿಕೊಳ್ಳಿರಿ.” (ರೋಮಾಪುರ 14:13) ಲೋವಿಗೆ, ಇಂಥ ಸನ್ನಿವೇಶಗಳು ಈ ಹಿಂದೆ ಸಭೆಯಲ್ಲಿ ಇಲ್ಲವೇ ತನ್ನ ಕುಟುಂಬದಲ್ಲಿ ಬಹಳಷ್ಟು ತೊಂದರೆಯನ್ನು ಉಂಟುಮಾಡಿವೆಯೆಂದು ಗೊತ್ತಿರಬಹುದು. ಅಲ್ಲದೆ, ಈಗ ತಾನೇನು ಮಾಡುವೆನೊ ಅದು ತನ್ನ ಮಕ್ಕಳ ಮೇಲೆ ಬಹು ದೊಡ್ಡ ಪರಿಣಾಮಬೀರಬಹುದು. ಆದರೆ ಇದಕ್ಕೆ ವಿರುದ್ಧವಾಗಿ ರೂತಳಿಗೆ, ಇದೇ ರೀತಿಯ ನಿರ್ಣಯಗಳಿಂದಾಗಿ ತನ್ನ ಸಭೆಯಲ್ಲಾಗಲಿ ಸಮುದಾಯದಲ್ಲಾಗಲಿ ಯಾವುದೇ ತೊಂದರೆಯಾಗಿಲ್ಲವೆಂದು ತಿಳಿದಿರಬಹುದು. ಈ ಇಬ್ಬರೂ ಸ್ತ್ರೀಯರು ಮತ್ತು ನಾವೆಲ್ಲರೂ ಗ್ರಹಿಸಬೇಕಾದ ಒಂದು ವಿಷಯವೇನೆಂದರೆ ಸರಿಯಾದ ತರಬೇತಿಹೊಂದಿರುವ ಮನಸ್ಸಾಕ್ಷಿಯು, ಒಬ್ಬನು ತನ್ನ ನಿರ್ಣಯಗಳು ಇತರರ ಮೇಲೆ ಬೀರುವ ಪರಿಣಾಮದ ಕುರಿತು ಸೂಕ್ಷ್ಮಸಂವೇದಿಯಾಗಿರುವಂತೆ ಮಾಡುತ್ತದೆ. ಯೇಸು ಹೇಳಿದ್ದು: “ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯಾದರೆ ಅಂಥವನ ಕೊರಳಿಗೆ ಬೀಸುವ ಕಲ್ಲು ಕಟ್ಟಿ ಅವನನ್ನು ಆಳವಾದ ಸಮುದ್ರದಲ್ಲಿ ಮುಣುಗಿಸಿಬಿಡುವದು ಅವನಿಗೆ ಹಿತವಾಗುವದು.” (ಮತ್ತಾಯ 18:6) ಒಬ್ಬ ವ್ಯಕ್ತಿ, ತಾನು ಇತರರಿಗೆ ಅಡ್ಡಿಯಾಗುವೆನೆಂಬ ವಿಷಯವನ್ನು ಅಲಕ್ಷಿಸುವಲ್ಲಿ ಅವನ ಮನಸ್ಸಾಕ್ಷಿ ಮಲಿನವಾಗಬಲ್ಲದು. ಕ್ರೇತದಲ್ಲಿದ್ದ ಕೆಲವು ಕ್ರೈಸ್ತರಿಗೆ ಹೀಗೆಯೇ ಆಯಿತು.

16 ಒಬ್ಬ ಕ್ರೈಸ್ತನ ಆಧ್ಯಾತ್ಮಿಕ ಬೆಳವಣಿಗೆಯು ಮುಂದುವರಿಯುತ್ತಾ ಇರಬೇಕು. ಜೊತೆಗೆ, ತನ್ನ ಮನಸ್ಸಾಕ್ಷಿಗೆ ಕಿವಿಗೊಟ್ಟು ಅದಕ್ಕೆ ಸ್ಪಂದಿಸುವುದರಲ್ಲಿ ಅವನು ಪ್ರಗತಿ ಮಾಡುತ್ತಾ ಇರಬೇಕು. ಇತ್ತೀಚೆಗೆ ದೀಕ್ಷಾಸ್ನಾನಹೊಂದಿದ ಮಾರ್ಕ್‌ನನ್ನು ತೆಗೆದುಕೊಳ್ಳಿ. ಅವನು ಈ ಹಿಂದೆ ಭಾಗವಹಿಸುತ್ತಿದ್ದ ಅಶಾಸ್ತ್ರೀಯ ಆಚರಣೆಗಳಿಂದ, ಬಹುಶಃ ವಿಗ್ರಹಾರಾಧನೆ ಇಲ್ಲವೇ ರಕ್ತದಿಂದ ದೂರವಿರುವಂತೆ ಅವನ ಮನಸ್ಸಾಕ್ಷಿ ಹೇಳುತ್ತದೆ. (ಅ. ಕೃತ್ಯಗಳು 21:25) ವಾಸ್ತವದಲ್ಲಿ ಅವನು ಈಗ, ದೇವರು ನಿಷೇಧಿಸುತ್ತಿರುವ ಸಂಗತಿಗಳಿಗೆ ಸ್ವಲ್ಪವಾದರೂ ಹೋಲಿಕೆಯಿದ್ದಂತೆ ಕಾಣುವ ವಿಷಯದಿಂದ ಸಹ ಕಟ್ಟೆಚ್ಚರಿಕೆಯಿಂದ ದೂರವಿರುತ್ತಾನೆ. ಆದರೆ ತಾನು ಸ್ವೀಕಾರಯೋಗ್ಯ ಎಂದೆಣಿಸುವಂಥ ವಿಷಯಗಳಿಂದ, ಉದಾಹರಣೆಗೆ ನಿರ್ದಿಷ್ಟ ಟೆಲಿವಿಷನ್‌ ಕಾರ್ಯಕ್ರಮಗಳಿಂದ ಕೆಲವು ಕ್ರೈಸ್ತರು ಏಕೆ ದೂರವಿರುತ್ತಾರೆಂದು ಅವನಿಗೆ ಅರ್ಥವಾಗುವುದಿಲ್ಲ.

17 ಕಟ್ಟಕಡೆಗೆ ಮಾರ್ಕನು ಜ್ಞಾನದಲ್ಲಿ ಅಭಿವೃದ್ಧಿಯಾಗುತ್ತಾ ದೇವರಿಗೆ ಇನ್ನಷ್ಟು ಸಮೀಪವಾಗುತ್ತಾನೆ. (ಕೊಲೊಸ್ಸೆ 1:9, 10) ಇದರ ಪರಿಣಾಮವೇನು? ಅವನ ಅಂತರ್ವಾಣಿಗೆ ಸಾಕಷ್ಟು ತರಬೇತಿ ದೊರಕುತ್ತದೆ. ಈಗ ಮಾರ್ಕನಲ್ಲಿ, ತನ್ನ ಮನಸ್ಸಾಕ್ಷಿಗೆ ಕಿವಿಗೊಡುವ ಮತ್ತು ಶಾಸ್ತ್ರಾಧಾರಿತ ಮೂಲತತ್ತ್ವಗಳನ್ನು ತುಂಬ ಜಾಗ್ರತೆಯಿಂದ ಪರಿಗಣಿಸುವ ಪ್ರವೃತ್ತಿ ಹೆಚ್ಚಾಗಿದೆ. ದೇವರು ಏನನ್ನು ನಿಷೇಧಿಸುತ್ತಾನೋ ಅದಕ್ಕೆ ಸ್ವಲ್ಪ ಹೋಲಿಕೆಯಿದೆಯೆಂದು ಅವನು ದೂರವಿಡುತ್ತಿದ್ದ ವಿಷಯಗಳು ವಾಸ್ತವದಲ್ಲಿ ದೇವರ ಯೋಚನಾಧಾಟಿಗೆ ವಿರುದ್ಧವಲ್ಲವೆಂದು ಅವನಿಗೆ ತಿಳಿದುಬರುತ್ತದೆ. ಅಷ್ಟುಮಾತ್ರವಲ್ಲದೆ ಮಾರ್ಕನು ಈಗ ಬೈಬಲ್‌ ಮೂಲತತ್ತ್ವಗಳಿಗೆ ಹೆಚ್ಚು ಹೊಂದಿಕೊಳ್ಳಲು ಮತ್ತು ಚೆನ್ನಾಗಿ ತರಬೇತಿಹೊಂದಿರುವ ತನ್ನ ಮನಸ್ಸಾಕ್ಷಿಗೆ ಸ್ಪಂದಿಸಲು ಸಿದ್ಧಮನಸ್ಕನಾಗಿದ್ದಾನೆ. ಆದುದರಿಂದ, ಅವನು ಈ ಹಿಂದೆ ಯೋಗ್ಯವೆಂದು ಎಣಿಸುತ್ತಿದ್ದ ಕಾರ್ಯಕ್ರಮಗಳನ್ನು ನೋಡದಂತೆ ಈಗ ಅವನ ಮನಸ್ಸಾಕ್ಷಿಯು ಪ್ರಚೋದಿಸುತ್ತದೆ. ಹೌದು, ಅವನ ಮನಸ್ಸಾಕ್ಷಿಯು ಈಗ ಪರಿಷ್ಕೃತಗೊಂಡಿದೆ.—ಕೀರ್ತನೆ 37:31.

18 ಹೆಚ್ಚಿನ ಸಭೆಗಳಲ್ಲಿ ಕ್ರೈಸ್ತ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿರುವ ವ್ಯಕ್ತಿಗಳಿದ್ದಾರೆ. ಕೆಲವರು ನಂಬಿಕೆಯಲ್ಲಿ ಹೊಸಬರಾಗಿದ್ದಾರೆ. ಅವರ ಮನಸ್ಸಾಕ್ಷಿ ಕೆಲವೊಂದು ವಿಷಯಗಳ ಕುರಿತು ಬಹುಮಟ್ಟಿಗೆ ಮೌನವಾಗಿರಬಹುದು, ಆದರೆ ಇತರ ವಿಷಯಗಳ ಕುರಿತು ಗಟ್ಟಿಯಾಗಿ ಮಾತಾಡುತ್ತದೆ. ಯೆಹೋವನ ನಿರ್ದೇಶನಕ್ಕೆ ಹೊಂದಿಕೊಳ್ಳಲು ಮತ್ತು ತಮ್ಮ ಶಿಕ್ಷಿತ ಮನಸ್ಸಾಕ್ಷಿಗೆ ಸ್ಪಂದಿಸಲು ಇಂಥವರಿಗೆ ಸಮಯ ಹಾಗೂ ಸಹಾಯದ ಅಗತ್ಯವಿರಬಹುದು. (ಎಫೆಸ 4:14, 15) ಸಂತೋಷದ ಸಂಗತಿಯೇನೆಂದರೆ ಅದೇ ಸಭೆಗಳಲ್ಲಿ, ಆಳವಾದ ಜ್ಞಾನವುಳ್ಳ, ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದರಲ್ಲಿ ಅನುಭವವುಳ್ಳ ಹಾಗೂ ದೇವರ ಯೋಚನಾಧಾಟಿಗೆ ಬಹಳಷ್ಟು ಹೊಂದಿಕೆಯಲ್ಲಿರುವ ಮನಸ್ಸಾಕ್ಷಿಯುಳ್ಳ ಅನೇಕರು ಇರಬಹುದು. ಕರ್ತನಿಗೆ ಮೆಚ್ಚಿಕೆಯಾದ ವಿಷಯಗಳನ್ನು ನೈತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ “ಶುದ್ಧ”ವೆಂದು ಪರಿಗಣಿಸುವ ಆ ‘ಶುದ್ಧರೊಂದಿಗೆ’ ಸಹವಸಿಸುವುದು ಎಷ್ಟು ಆನಂದದ ಸಂಗತಿ! (ಎಫೆಸ 5:10) ಆ ಹಂತದ ವರೆಗೆ ಬೆಳೆದು, ಸತ್ಯದ ನಿಷ್ಕೃಷ್ಟ ಜ್ಞಾನ ಹಾಗೂ ದೈವಭಕ್ತಿಗೆ ಹೊಂದಿಕೆಯಲ್ಲಿರುವ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವ ಗುರಿ ನಮ್ಮೆಲ್ಲರಿಗಿರಲಿ.—ತೀತ 1:1. (w07 10/15)

[ಪಾದಟಿಪ್ಪಣಿ]

^ ಪ್ಯಾರ. 12 ಇಸವಿ 1983ರ ಮಾರ್ಚ್‌ 15ನೇ ಕಾವಲಿನಬುರುಜು ಸಂಚಿಕೆಯ ಪುಟ 30-1, ವಿವಾಹಿತರ ಪರಿಗಣನೆಗಾಗಿ ವಿಷಯಗಳನ್ನು ಪ್ರಸ್ತುತಪಡಿಸಿದೆ.

ನಿಮ್ಮ ಉತ್ತರವೇನು?

• ಕ್ರೇತದಲ್ಲಿದ್ದ ಕ್ರೈಸ್ತರಲ್ಲಿ ಕೆಲವರ ಮನಸ್ಸಾಕ್ಷಿಗಳು ಏಕೆ ಮಲಿನಗೊಂಡಿದ್ದವು?

• ಸೂಕ್ಷ್ಮಸಂವೇದಿ ಮನಸ್ಸಾಕ್ಷಿಗಳಿರುವ ಇಬ್ಬರು ಕ್ರೈಸ್ತರು ಭಿನ್ನ ಭಿನ್ನ ನಿರ್ಣಯಗಳನ್ನು ಮಾಡುವುದು ಹೇಗೆ?

• ಸಮಯ ದಾಟಿದಂತೆ ನಮ್ಮ ಮನಸ್ಸಾಕ್ಷಿಗೆ ಏನಾಗಬೇಕು?

[ಅಧ್ಯಯನ ಪ್ರಶ್ನೆಗಳು]

1. ಪೌಲನು ಕ್ರೇತದಲ್ಲಿದ್ದ ಸಭೆಗಳೊಂದಿಗೆ ಹೇಗೆ ಒಳಗೂಡಿದ್ದನು?

2. ಕ್ರೇತ ದ್ವೀಪದಲ್ಲಿ ತೀತನು ಯಾವ ಸಮಸ್ಯೆಯನ್ನು ನಿಭಾಯಿಸಬೇಕಿತ್ತು?

3. ಪೌಲನು ಮನಸ್ಸಾಕ್ಷಿಯ ಬಗ್ಗೆ ತೀತನಿಗೆ ಏನು ಬರೆದನು?

4, 5. ಸಭೆಗಳಲ್ಲಿದ್ದ ಕೆಲವರಲ್ಲಿ ಯಾವ ನ್ಯೂನತೆ ಇತ್ತು, ಮತ್ತು ಇದು ಅವರನ್ನು ಹೇಗೆ ಬಾಧಿಸಿತು?

6. ಪೌಲನು ಯಾವ ಎರಡು ವಿಧದ ಜನರ ಕುರಿತಾಗಿ ತಿಳಿಸಿದನು?

7. ಇಬ್ರಿಯ 13:4 ಯಾವುದನ್ನು ತಪ್ಪೆಂದು ಸ್ಪಷ್ಟವಾಗಿ ಹೇಳುತ್ತದೆ, ಆದರೆ ಯಾವ ಪ್ರಶ್ನೆ ಏಳಬಹುದು?

8. ಮೌಖಿಕ ಲೈಂಗಿಕತೆಯ ವಿಷಯದಲ್ಲಿ ಸತ್ಯ ಕ್ರೈಸ್ತರು ಲೋಕದ ಜನರಿಂದ ಹೇಗೆ ಭಿನ್ನರಾಗಿದ್ದಾರೆ?

9. “ಎಲ್ಲವೂ ಶುದ್ಧವೇ” ಆಗಿರುವುದಾದರೆ ಮನಸ್ಸಾಕ್ಷಿಯ ಪಾತ್ರವೇನು?

10. ಮದುವೆ (ಇಲ್ಲವೆ ಶವಸಂಸ್ಕಾರ) ಹೇಗೆ ಒಂದು ಸವಾಲಾಗಿ ಪರಿಣಮಿಸಬಹುದು?

11. ಒಬ್ಬ ಕ್ರೈಸ್ತ ಪತ್ನಿ ಒಂದು ಚರ್ಚ್‌ ಮದುವೆಯನ್ನು ಹಾಜರಾಗುವುದರ ಕುರಿತು ಹೇಗೆ ವಿವೇಚಿಸುತ್ತಾಳೆ ಮತ್ತು ಯಾವ ತೀರ್ಮಾನಕ್ಕೆ ಬರುತ್ತಾಳೆಂಬುದನ್ನು ವಿವರಿಸಿರಿ.

12. ಒಬ್ಬ ವ್ಯಕ್ತಿಯು ಚರ್ಚ್‌ನಲ್ಲಿ ನಡೆಯಲಿರುವ ಮದುವೆಗೆ ಹೋಗುವುದರ ಬಗ್ಗೆ ಹೇಗೆ ವಿವೇಚಿಸಿ ಪ್ರತಿಕ್ರಿಯಿಸಬಹುದು?

13. ಇಬ್ಬರು ಕ್ರೈಸ್ತರು ಬೇರೆ ಬೇರೆ ತೀರ್ಮಾನ ಮಾಡುವಾಗ ನಾವೇಕೆ ವಿಚಲಿತರಾಗಬಾರದು?

14. ವೈಯಕ್ತಿಕ ನಿರ್ಣಯ ಮಾಡುವ ವಿಷಯಗಳ ಕುರಿತಾಗಿ ಕ್ರೈಸ್ತರು ಏನನ್ನು ಮನಸ್ಸಿನಲ್ಲಿಡತಕ್ಕದ್ದು?

15. ಇತರರ ಮನಸ್ಸಾಕ್ಷಿ ಹಾಗೂ ಭಾವನೆಗಳನ್ನು ಏಕೆ ಗಂಭೀರವಾಗಿ ಪರಿಗಣಿಸಬೇಕು?

16. ಕಾಲ ದಾಟಿದಂತೆ ನಾವು ಒಬ್ಬ ಕ್ರೈಸ್ತನಲ್ಲಿ ಯಾವ ಬದಲಾವಣೆಗಳನ್ನು ನಿರೀಕ್ಷಿಸಬಲ್ಲೆವು?

17. ಸಮಯ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯು ಕ್ರೈಸ್ತನೊಬ್ಬನ ಮನಸ್ಸಾಕ್ಷಿ ಹಾಗೂ ನಿರ್ಣಯಗಳನ್ನು ಹೇಗೆ ಪ್ರಭಾವಿಸಬಲ್ಲದೆಂದು ದೃಷ್ಟಾಂತಿಸಿರಿ.

18. ನಮಗೆ ಆನಂದಿಸಲು ಯಾವ ಕಾರಣವಿದೆ?

[ಪುಟ 13ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸಿಸಿಲಿ

ಗ್ರೀಸ್‌

ಕ್ರೇತ

ಏ ಷ್ಯಾ ಮೈ ನ ರ್‌

ಕುಪ್ರ

ಮೆ ಡಿ ಟ ರೇ ನಿ ಯ ನ್‌ ಸ ಮು ದ್ರ