“ಬೆಳ್ಳಿಯೆಲ್ಲಾ ನನ್ನದು ಬಂಗಾರವೆಲ್ಲಾ ನನ್ನದು”
“ಬೆಳ್ಳಿಯೆಲ್ಲಾ ನನ್ನದು ಬಂಗಾರವೆಲ್ಲಾ ನನ್ನದು”
ಪಾರಸಿಯ ರಾಜ ಕೋರೆಷನು ಸಾ.ಶ.ಪೂ. 6ನೇ ಶತಮಾನದಲ್ಲಿ ದೇವಜನರನ್ನು ಬಾಬೆಲಿನ ಸೆರೆಯಿಂದ ಬಿಡಿಸಿದನು. ಯೆರೂಸಲೇಮಿನಲ್ಲಿ ಹಾಳಾಗಿ ಬಿದ್ದಿದ್ದ ಯೆಹೋವನ ಆಲಯವನ್ನು ಪುನಃ ಕಟ್ಟಲು ಅವರಲ್ಲಿ ಸಾವಿರಾರು ಮಂದಿ ಅಲ್ಲಿಗೆ ಹಿಂತೆರಳಿದರು. ಹೀಗೆ ಬಂದವರ ಆರ್ಥಿಕ ಸ್ಥಿತಿ ಅಸ್ಥಿರವಾಗಿತ್ತು. ಅಲ್ಲದೆ, ವೈರಿಗಳಾಗಿದ್ದ ನೆರೆಯವರು ಆ ಪುನರ್ನಿರ್ಮಾಣ ಕೆಲಸವನ್ನು ವಿರೋಧಿಸಿದರು. ಹಾಗಾಗಿ ಕಟ್ಟುವ ಕೆಲಸಮಾಡುತ್ತಿದ್ದ ಕೆಲವರು, ಆ ಬೃಹತ್ ಯೋಜನೆಯು ಪೂರ್ತಿಗೊಳ್ಳುವುದೊ ಎಂಬ ಶಂಕೆ ವ್ಯಕ್ತಪಡಿಸಿದರು.
ಆಲಯವನ್ನು ಕಟ್ಟುವವರೊಂದಿಗೆ ತಾನಿದ್ದೇನೆಂದು ಯೆಹೋವನು ಪ್ರವಾದಿ ಹಗ್ಗಾಯನ ಮೂಲಕ ಪುನರಾಶ್ವಾಸನೆ ಕೊಡುತ್ತಾ ಅಂದದ್ದು: “ಸಕಲಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ವೈಭವದಿಂದ ತುಂಬಿಸುವೆನು.” ಕಟ್ಟುವವರ ಆರ್ಥಿಕ ಚಿಂತೆಗಳನ್ನು ನಿವಾರಿಸಲು ಹಗ್ಗಾಯನು ಈ ಸಂದೇಶ ಕೊಡುತ್ತಾನೆ: “ಬೆಳ್ಳಿಯೆಲ್ಲಾ ನನ್ನದು ಬಂಗಾರವೆಲ್ಲಾ ನನ್ನದು; ಇದು ಸೇನಾಧೀಶ್ವರ ಯೆಹೋವನ ನುಡಿ.” (ಹಗ್ಗಾಯ 2:7-9) ಹಗ್ಗಾಯನು ಈ ಉತ್ತೇಜನೀಯ ಮಾತುಗಳನ್ನಾಡಿದ ಐದು ವರ್ಷಗಳಲ್ಲೇ ಆಲಯದ ಕಟ್ಟುವ ಕೆಲಸವು ಪೂರ್ಣಗೊಂಡಿತು.—ಎಜ್ರ 6:13-15.
ಆಧುನಿಕ ದಿನದ ಯೆಹೋವನ ಸೇವಕರು ಸಹ ಆತನ ಆರಾಧನೆಗೆ ಸಂಬಂಧಪಟ್ಟ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಹಗ್ಗಾಯನ ಮಾತುಗಳು ಪ್ರಚೋದಿಸಿವೆ. ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವು 1879ರಲ್ಲಿ, ಝಯನ್ಸ್ ವಾಚ್ ಟವರ್ ಆ್ಯಂಡ್ ಹೆರಾಲ್ಡ್ ಆಫ್ ಕ್ರೈಸ್ಟ್ಸ್ ಪ್ರೆಸನ್ಸ್ ಎಂದು ಆಗ ಜ್ಞಾತವಾಗಿದ್ದ ಕಾವಲಿನಬುರುಜು ಪತ್ರಿಕೆಯನ್ನು ಪ್ರಕಾಶಿಸಲಾರಂಭಿಸಿದಾಗ ಈ ಹೇಳಿಕೆ ಮಾಡಿತು: “‘ಝಯನ್ಸ್ ವಾಚ್ ಟವರ್’ ಪತ್ರಿಕೆಗೆ ಯೆಹೋವನೇ ಬೆಂಬಲ ಆಗಿದ್ದಾನೆಂದು ನಾವು ನಂಬುತ್ತೇವೆ. ಹೀಗಿರುವಾಗ ಅದು ಮನುಷ್ಯರಿಂದ ಹಣ ಸಹಾಯವನ್ನು ಬೇಡುವುದೂ ಇಲ್ಲ, ಅದಕ್ಕಾಗಿ ಮನವಿ ಮಾಡುವುದೂ ಇಲ್ಲ. ‘ಬೆಳ್ಳಿಯೆಲ್ಲಾ ನನ್ನದು ಬಂಗಾರವೆಲ್ಲಾ ನನ್ನದು’ ಎನ್ನುವಾತನು ಅಗತ್ಯವಿರುವ ಆರ್ಥಿಕ ನೆರವನ್ನು ದಯಪಾಲಿಸದೆ ಇದ್ದರೆ, ಈ ಪ್ರಕಾಶನದ ಮುದ್ರಣವನ್ನು ನಿಲ್ಲಿಸಬೇಕಾದ ಸಮಯವದು ಎಂದು ನಾವು ತಿಳಿಯುವೆವು.”
ಕಾವಲಿನಬುರುಜು ಪತ್ರಿಕೆಯ ಮುದ್ರಣವು ಎಂದೂ ನಿಂತುಹೋಗಿಲ್ಲ. ಕೇವಲ ಇಂಗ್ಲಿಷ್ ಭಾಷೆಯೊಂದರಲ್ಲೇ ಅದರ ಮೊದಲ ಸಂಚಿಕೆಯ 6,000 ಪ್ರತಿಗಳನ್ನು ಮುದ್ರಿಸಲಾಯಿತು. ಇಂದು ಅದರ ಪ್ರತಿ ಸಂಚಿಕೆಯ ಸರಾಸರಿ ಮುದ್ರಣವು 2,85,78,000 ಆಗಿದ್ದು 161 ಭಾಷೆಗಳಲ್ಲಿ ಅದು ಲಭ್ಯವಿದೆ. * ಕಾವಲಿನಬುರುಜು ಪತ್ರಿಕೆಯ ಜೊತೆ ಪತ್ರಿಕೆಯಾದ ಎಚ್ಚರ!ದ ಸರಾಸರಿ 3,42,67,000 ಪ್ರತಿಗಳನ್ನು 81 ಭಾಷೆಗಳಲ್ಲಿ ಮುದ್ರಿಸಲಾಗುತ್ತದೆ.
ಯೆಹೋವ ದೇವರನ್ನು ವಿಶ್ವದ ಪರಮಾಧಿಕಾರಿ ಪ್ರಭುವಾಗಿ ಮಹಿಮೆಪಡಿಸುವುದು ಮತ್ತು ಆತನ ರಾಜ್ಯದ ಸುವಾರ್ತೆಯನ್ನು ಪ್ರಕಟಿಸುವುದು ಕಾವಲಿನಬುರುಜು ಪತ್ರಿಕೆಯ ಉದ್ದೇಶವಾಗಿದೆ. ಇದೇ ಉದ್ದೇಶ ಹೊಂದಿರುವ ಅನೇಕ ಯೋಜನೆಗಳನ್ನು ಯೆಹೋವನ ಸಾಕ್ಷಿಗಳು ಕೈಗೆತ್ತಿಕೊಂಡಿದ್ದಾರೆ. (ಮತ್ತಾಯ 24:14; ಪ್ರಕಟನೆ 4:11) ಇಂದು ಸಾಕ್ಷಿಗಳಲ್ಲಿರುವ ನಿಶ್ಚಿತಾಭಿಪ್ರಾಯವು 1879ರಲ್ಲಿ ಈ ಪತ್ರಿಕೆಯು ವ್ಯಕ್ತಪಡಿಸಿದ ಅಭಿಪ್ರಾಯದಂತೆಯೇ ಇದೆ. ತಮ್ಮ ಕೆಲಸವನ್ನು ದೇವರು ಬೆಂಬಲಿಸುತ್ತಾನೆ ಮತ್ತು ಆತನ ಒಪ್ಪಿಗೆಯಿರುವ ಯೋಜನೆಗಳಿಗೆ ಆರ್ಥಿಕ ಬೆಂಬಲವು ಖಂಡಿತವಾಗಿ ಲಭ್ಯವಾಗುವುದು ಎಂಬದನ್ನು ಅವರು ನಂಬುತ್ತಾರೆ. ಆದರೆ ವ್ಯಾವಹಾರಿಕವಾಗಿ ನೋಡುವುದಾದರೆ ಯೆಹೋವನ ಸಾಕ್ಷಿಗಳ ಕಾರ್ಯಕಲಾಪಗಳಿಗೆ ಬೇಕಾದ ಹಣ ಎಲ್ಲಿಂದ ಬರುತ್ತದೆ? ಮತ್ತು ಸುವಾರ್ತೆಯನ್ನು ಲೋಕವ್ಯಾಪಕವಾಗಿ ಸಾರಲು ಅವರು ಯಾವ ರೀತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ?
ಕೆಲಸಕ್ಕೆ ಹಣ ಎಲ್ಲಿಂದ ಬರುತ್ತದೆ?
ಯೆಹೋವನ ಸಾಕ್ಷಿಗಳು ಸಾರ್ವಜನಿಕ ಶುಶ್ರೂಷೆಯಲ್ಲಿ ತೊಡಗಿರುವಾಗ “ಇದಕ್ಕಾಗಿ ನಿಮಗೆ ಸಂಬಳ ಸಿಗುತ್ತದೆಯೇ?” ಎಂದು ಅನೇಕರು ಅವರಿಗೆ ಕೇಳುವುದುಂಟು. ಉತ್ತರವು “ಇಲ್ಲ” ಎಂದಾಗಿದೆ. ಅವರಿಗೆ ಸಂಬಳ ಸಿಗುವುದಿಲ್ಲ. ಈ ಸೌವಾರ್ತಿಕರು ಬೇರೆಯವರೊಂದಿಗೆ ಯೆಹೋವನ ಹಾಗೂ ಉತ್ತಮ ಭವಿಷ್ಯತ್ತಿನ ಬೈಬಲ್ ವಾಗ್ದಾನದ ಕುರಿತು ಮಾತಾಡುತ್ತಾ ಹಲವಾರು ತಾಸುಗಳನ್ನು ವ್ಯಯಿಸಿ ಹೀಗೆ ತಮ್ಮ ಸಮಯವನ್ನು ಉಚಿತವಾಗಿ ನೀಡುತ್ತಾರೆ. ಹೀಗೆ ಮಾಡಲು ಅವರಲ್ಲಿರುವ ಕೃತಜ್ಞತಾಭಾವವೇ ಪ್ರಚೋದಿಸುತ್ತದೆ. ದೇವರು ತಮಗೆ ಮಾಡಿರುವ ಸಂಗತಿಗಳಿಗಾಗಿ ಮತ್ತು ಸುವಾರ್ತೆಯ ಸಂದೇಶವು ತಮ್ಮ ಸ್ವಂತ ಜೀವನ ಹಾಗೂ ಹೊರನೋಟವನ್ನು ಬಹಳಷ್ಟು ಪ್ರಭಾವಿಸಿದಕ್ಕಾಗಿ ಅವರು ಆಭಾರಿಗಳಾಗಿದ್ದಾರೆ. ಅದಕ್ಕೋಸ್ಕರವೇ ಈ ಒಳ್ಳೇ ಸಂಗತಿಗಳನ್ನು ಇತರರೊಂದಿಗೆ ಅವರು ಹಂಚಲು ಅಪೇಕ್ಷಿಸುತ್ತಾರೆ. ಹೀಗೆ ಮಾಡುವ ಮೂಲಕ, “ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ” ಎಂದು ಯೇಸು ಕೊಟ್ಟ ಮೂಲತತ್ತ್ವವನ್ನು ಅವರು ಅನುಸರಿಸುತ್ತಾರೆ. (ಮತ್ತಾಯ 10:8) ಹೌದು, ಯೆಹೋವನ ಮತ್ತು ಯೇಸುವಿನ ಸಾಕ್ಷಿಗಳಾಗುವ ಬಯಕೆಯು, ತಮ್ಮ ನಂಬಿಕೆಗಳನ್ನು ಜನರೊಂದಿಗೆ ಹಂಚಲು ಸ್ವಂತ ಹಣ ಹಾಕುವಂತೆ ಅವರನ್ನು ಪ್ರೇರೇಪಿಸುತ್ತದೆ. ಸಮೀಪದಲ್ಲಿರುವವರಿಗೆ ಮಾತ್ರವಲ್ಲ ಅತಿ ದೂರ ನೆಲೆಸಿರುವವರಿಗೂ ಅವರು ಸಂದೇಶವನ್ನು ತಲಪಿಸುತ್ತಾರೆ.—ಯೆಶಾಯ 43:10; ಅ. ಕೃತ್ಯಗಳು 1:8.
ಈ ಸಾರುವ ಕೆಲಸದ ವ್ಯಾಪ್ತಿಗೆ ಮತ್ತು ಅದನ್ನು ಪೂರೈಸಲು ಅಗತ್ಯವಾದ ಸಾಧನಗಳಾದ ಪ್ರಿಂಟರಿಗಳು, ಆಫೀಸುಗಳು, ಸಮ್ಮೇಳನ ಭವನಗಳು, ಮಿಷನೆರಿ ಗೃಹಗಳು ಮತ್ತು ಇನ್ನಿತರ ವಿಷಯಗಳಿಗೆ
ದೊಡ್ಡ ಮೊತ್ತದ ಹಣ ಅಗತ್ಯ. ಈ ಹಣ ಎಲ್ಲಿಂದ ಬರುತ್ತದೆ? ಇವುಗಳಿಗೆಲ್ಲ ಬೇಕಾದ ಆರ್ಥಿಕ ಬೆಂಬಲವು ಸ್ವಯಂಪ್ರೇರಿತ ಕಾಣಿಕೆಗಳಿಂದ ಬರುತ್ತದೆ. ಸಭಾ ಸದಸ್ಯರು ಹಣಕೊಟ್ಟು ಸಂಸ್ಥೆಯ ಕಾರ್ಯಕಲಾಪಗಳನ್ನು ಬೆಂಬಲಿಸಬೇಕೆಂದು ಯೆಹೋವನ ಸಾಕ್ಷಿಗಳು ಅವಶ್ಯಪಡಿಸುವುದೂ ಇಲ್ಲ, ತಾವು ವಿತರಿಸುವ ಪ್ರಕಾಶನಗಳಿಗೆ ತಗಲಿದ ಖರ್ಚುಗಳನ್ನು ಕೇಳಿಕೊಳ್ಳುವುದೂ ಇಲ್ಲ. ತಮ್ಮ ಶೈಕ್ಷಣಿಕ ಕೆಲಸವನ್ನು ಬೆಂಬಲಿಸಲಿಕ್ಕಾಗಿ ಯಾರಾದರು ದಾನ ಕೊಡಲು ಮುಂದೆಬರುವುದಾದರೆ ಸಾಕ್ಷಿಗಳು ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ. ನಾವೀಗ, ಸುವಾರ್ತೆಯನ್ನು ಲೋಕವ್ಯಾಪಕವಾಗಿ ಸಾರಲಿಕ್ಕಾಗಿ ಮಾಡಲಾಗುವ ಪ್ರಯತ್ನಗಳ ಒಂದು ಅಂಶವಾದ ಭಾಷಾಂತರದಲ್ಲಿ ಏನೆಲ್ಲ ಒಳಗೂಡಿದೆ ಎಂಬದನ್ನು ಪರಿಗಣಿಸೋಣ.437 ಭಾಷೆಗಳಲ್ಲಿ ಪ್ರಕಾಶನಗಳು
ದಶಕಗಳಿಂದ ಯೆಹೋವನ ಸಾಕ್ಷಿಗಳ ಪ್ರಕಾಶನಗಳು ಲೋಕದಲ್ಲಿ ಅತಿ ವ್ಯಾಪಕವಾಗಿ ಭಾಷಾಂತರಿಸಲ್ಪಟ್ಟ ಪ್ರಕಾಶನಗಳಲ್ಲಿ ಒಂದಾಗಿವೆ. ಟ್ರ್ಯಾಕ್ಟ್‌ಗಳು, ಬ್ರೋಷರ್‌ಗಳು, ಪತ್ರಿಕೆಗಳು ಮತ್ತು ಪುಸ್ತಕಗಳು 437 ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿವೆ. ಸುವಾರ್ತೆ ಸಾರುವ ಇತರ ಚಟುವಟಿಕೆಗಳಂತೆಯೇ ಭಾಷಾಂತರಕ್ಕೂ ಬಹಳಷ್ಟು ಸಂಪನ್ಮೂಲಗಳ ಅಗತ್ಯವಿದೆ. ಭಾಷಾಂತರದ ಕೆಲಸದಲ್ಲಿ ಏನೆಲ್ಲ ಒಳಗೂಡಿದೆ?
ಯೆಹೋವನ ಸಾಕ್ಷಿಗಳ ಪ್ರಕಾಶನಗಳ ಸಂಪಾದಕರು ಆಂಗ್ಲ ಭಾಷೆಯ ಲೇಖನವೊಂದನ್ನು ಪೂರ್ತಿಗೊಳಿಸಿದ ಬಳಿಕ ಅದನ್ನು ಭೂಸುತ್ತಲಿರುವ ತರಬೇತಿ ಹೊಂದಿರುವ ಭಾಷಾಂತರಕಾರರ ತಂಡಗಳಿಗೆ ಕಂಪ್ಯೂಟರ್ ಮೂಲಕ ಲಭ್ಯಗೊಳಿಸಲಾಗುತ್ತದೆ. ಪ್ರತಿ ಭಾಷಾಂತರ ತಂಡವು ಆಯಾ ಭಾಷೆಯ ಪ್ರಕಾಶನಗಳ ಜವಾಬ್ದಾರಿ ವಹಿಸುತ್ತದೆ. ನಿರ್ವಹಿಸಲಾಗುವ ಭಾಷಾಂತರ ಯೋಜನೆಗಳ ಸಂಖ್ಯೆ ಹಾಗೂ ಭಾಷಾಂತರ ಮಾಡಲಾಗುವ ಭಾಷೆಯ ಜಟಿಲತೆಯ ಮೇಲೆ ಆಧರಿಸಿ ಈ ತಂಡಗಳು 5-25 ಸದಸ್ಯರಿಂದ ಕೂಡಿರಬಹುದು.
ಭಾಷಾಂತರಿಸಲ್ಪಟ್ಟ ವಿಷಯವನ್ನು ಪರೀಕ್ಷಿಸಿ ತಿದ್ದಲಾಗುತ್ತದೆ. ಇದರ ಉದ್ದೇಶ, ಮೂಲ ಭಾಷೆಯಲ್ಲಿರುವ ವಿಚಾರಗಳನ್ನು ಆದಷ್ಟು ನಿಷ್ಕೃಷ್ಟವೂ ಸ್ಪಷ್ಟವೂ ಆಗಿ ತಿಳಿಯಪಡಿಸುವುದೇ ಆಗಿದೆ.
ಹೀಗೆ ಮಾಡುವಾಗ ಅನೇಕ ಸವಾಲುಗಳು ಎದುರಾಗುತ್ತವೆ. ವಿಶಿಷ್ಟ ಶಬ್ದಭಂಡಾರವುಳ್ಳ ಲೇಖನವನ್ನು ಭಾಷಾಂತರ ಮಾಡುವಾಗ ಆ ಲೇಖನ ನಿಷ್ಕೃಷ್ಟವಾಗಿದೆ ಎಂಬದನ್ನು ಖಚಿತಪಡಿಸಿಕೊಳ್ಳಲು ಭಾಷಾಂತರಕಾರರಿಗೆ ಮತ್ತು ತಿದ್ದುವವರಿಗೆ ಮೂಲ ಭಾಷೆಯಲ್ಲಿಯೂ (ಇಂಗ್ಲಿಷ್ ಅಥವಾ ಫ್ರೆಂಚ್, ರಷ್ಯನ್ ಯಾ ಸ್ಪ್ಯಾನಿಷ್) ಭಾಷಾಂತರ ಮಾಡುವ ಭಾಷೆಯಲ್ಲಿಯೂ (ಉದ್ದಿಷ್ಟ ಭಾಷೆಯಲ್ಲಿ) ಆಳವಾದ ಸಂಶೋಧನೆ ಮಾಡಬೇಕಾದೀತು. ಉದಾಹರಣೆಗೆ ಎಚ್ಚರ! ಪತ್ರಿಕೆಯ ಲೇಖನವೊಂದು ತಾಂತ್ರಿಕ ಅಥವಾ ಐತಿಹಾಸಿಕ ವಿಷಯದ ಕುರಿತಾಗಿರುವಾಗ, ಭಾಷಾಂತರಕಾರರಿಗೆ ಆಳವಾದ ಸಂಶೋಧನೆ ಮಾಡಬೇಕಾಗುತ್ತದೆ.ಅನೇಕ ಭಾಷಾಂತರಕಾರರು ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸ್‌ಗಳಲ್ಲಿ ಪೂರ್ಣ-ಕಾಲಿಕ ಇಲ್ಲವೆ ಅಂಶ-ಕಾಲಿಕವಾಗಿ ಕೆಲಸಮಾಡುತ್ತಾರೆ. ಇನ್ನಿತರರು ತಾವು ಭಾಷಾಂತರ ಮಾಡುವ ಭಾಷೆಯು ಆಡಲ್ಪಡುವ ಪ್ರದೇಶಗಳಲ್ಲೇ ಇದ್ದು ಕೆಲಸಮಾಡುತ್ತಾರೆ. ಭಾಷಾಂತರಕಾರರಿಗೆ ತಾವು ಮಾಡುತ್ತಿರುವ ಕೆಲಸಕ್ಕಾಗಿ ಸಂಬಳ ಸಿಗುವುದಿಲ್ಲ. ಪೂರ್ಣ-ಕಾಲಿಕ ಭಾಷಾಂತರಕಾರರಿಗೆ ವಸತಿ, ಆಹಾರ ಮತ್ತು ತಮ್ಮ ಮೂಲಭೂತ ಆವಶ್ಯಕತೆಗಳನ್ನು ನೀಗಿಸಲು ಸ್ವಲ್ಪ ಹಣವನ್ನು ಕೊಡಲಾಗುತ್ತದೆ. ಲೋಕವ್ಯಾಪಕವಾಗಿ ಸುಮಾರು 2,800 ಸಾಕ್ಷಿಗಳು ಭಾಷಾಂತರಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯದಲ್ಲಿ ಯೆಹೋವನ ಸಾಕ್ಷಿಗಳ 98 ಬ್ರಾಂಚ್‌ಗಳು ಅಲ್ಲೇ ಇರುವ ಭಾಷಾಂತರ ತಂಡಗಳ ಇಲ್ಲವೆ ಬೇರೆ ಕಡೆಗಳಲ್ಲಿರುವ ಭಾಷಾಂತರ ತಂಡಗಳ ಮೇಲುಸ್ತುವಾರಿ ವಹಿಸುತ್ತವೆ. ಉದಾಹರಣೆಗಾಗಿ, ರಷ್ಯಾದ ಬ್ರಾಂಚ್ ಆಫೀಸ್ 230ಕ್ಕಿಂತ ಹೆಚ್ಚಿನ ಪೂರ್ಣ-ಕಾಲಿಕ ಯಾ ಅಂಶ-ಕಾಲಿಕ ಭಾಷಾಂತರಕಾರರ ಉಸ್ತುವಾರಿ ವಹಿಸುತ್ತದೆ. ಇವರು 30ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಭಾಷಾಂತರ ಮಾಡುತ್ತಾರೆ. ಇವುಗಳಲ್ಲಿ ಹೆಚ್ಚು ಪರಿಚಿತವಾಗಿರದ ಕೆಲವು ಪ್ರಾದೇಶಿಕ ಭಾಷೆಗಳಾದ ಚುವಾಶ್, ಆಸೀಶನ್ ಮತ್ತು ಉಯಿಘುರ್‌ದಂಥ ಭಾಷೆಗಳೂ ಸೇರಿವೆ.
ಭಾಷಾಂತರದ ಗುಣಮಟ್ಟವನ್ನು ಉತ್ತಮಗೊಳಿಸುವುದು
ಇನ್ನೊಂದು ಭಾಷೆಯನ್ನು ಕಲಿಯಲು ಯತ್ನಿಸಿರುವ ಒಬ್ಬ ವ್ಯಕ್ತಿಗೆ ತಿಳಿದಿರುವಂತೆಯೇ ಜಟಿಲ ವಿಚಾರಗಳನ್ನು ನಿಷ್ಕೃಷ್ಟವಾಗಿ ಭಾಷಾಂತರ ಮಾಡುವುದು ಸುಲಭವೇನಲ್ಲ. ಭಾಷಾಂತರ ಮಾಡುವ ಉದ್ದೇಶವು ವಾಸ್ತವಾಂಶಗಳನ್ನು ಮತ್ತು ವಿಚಾರಗಳನ್ನು ನಿಷ್ಕೃಷ್ಟವಾಗಿ ಮತ್ತು ಅದೇ ವೇಳೆ ಓದುವವರಿಗೆ ಸಹಜವೆನಿಸುವಂತೆ ಅಂದರೆ ಅದನ್ನು ಮೂಲತಃ ತಮ್ಮ ಭಾಷೆಯಲ್ಲೇ ಬರೆಯಲಾಗಿದೆಯೊ ಎಂಬ ಅನಿಸಿಕೆಬರುವ ರೀತಿಯಲ್ಲಿ ನಿರೂಪಿಸುವುದು ಆಗಿದೆ. ಇದನ್ನು ಸಾಧಿಸುವುದು ಒಂದು ಕಲೆ. ಹೊಸ ಭಾಷಾಂತರಕಾರರು
ನಿಪುಣರಾಗಲು ಹಲವಾರು ವರ್ಷಗಳು ತಗಲಬಹುದು ಮತ್ತು ಇದಕ್ಕಾಗಿ ಯೆಹೋವನ ಸಾಕ್ಷಿಗಳು ಅವರಿಗೆ ಸೂಕ್ತ ಶೈಕ್ಷಣಿಕ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುತ್ತಾರೆ. ನಿಪುಣ ಸಹೋದರರು ಕೆಲವೊಮ್ಮೆ ತಂಡಗಳಿಗೆ ಸಂದರ್ಶನನೀಡಿ ಭಾಷಾಂತರ ಕೌಶಲಗಳನ್ನು ಉತ್ತಮಗೊಳಿಸಲು ಮತ್ತು ಕಂಪ್ಯೂಟರ್‌ನ ವಿವಿಧ ಪ್ರೋಗ್ರಾಮ್‌ಗಳನ್ನು ಉಪಯೋಗಿಸಲು ಭಾಷಾಂತರಕಾರರಿಗೆ ನೆರವು ನೀಡುತ್ತಾರೆ.ಈ ತರಬೇತಿ ಯೋಜನೆಯಿಂದ ಉತ್ತಮ ಫಲಿತಾಂಶಗಳು ಫಲಿಸುತ್ತಿವೆ. ದೃಷ್ಟಾಂತಕ್ಕೆ ಯೆಹೋವನ ಸಾಕ್ಷಿಗಳ ನಿಕರಾಗ್ವ ಬ್ರಾಂಚ್ ಆಫೀಸ್ ವರದಿಸುವುದು: “ಮೊತ್ತಮೊದಲ ಬಾರಿಗೆ ಮಿಸ್ಕಿಟೊ ಭಾಷೆಯ ನಮ್ಮ ಭಾಷಾಂತರಕಾರರಿಗೆ ಮೆಕ್ಸಿಕೊ ಬ್ರಾಂಚ್‌ನ ಒಬ್ಬ ಸಹೋದರನಿಂದ ಭಾಷಾಂತರ ಕಲೆ ಹಾಗೂ ವಿಧಾನಗಳ ಕುರಿತು ತರಬೇತಿ ಸಿಕ್ಕಿತು. ಇದರಿಂದಾಗಿ ನಮ್ಮ ಭಾಷಾಂತರಕಾರರು ತಮ್ಮ ನೇಮಕವನ್ನು ಚೆನ್ನಾಗಿ ನಿರ್ವಹಿಸಶಕ್ತರಾಗಿದ್ದಾರೆ. ಭಾಷಾಂತರದ ಗುಣಮಟ್ಟವು ಗಮನಾರ್ಹ ರೀತಿಯಲ್ಲಿ ಉತ್ತಮಗೊಂಡಿದೆ.”
ಹೃದಯಸ್ಪರ್ಶಿಸುವ ಮಾತುಗಳು
ಬೈಬಲ್ ಮತ್ತು ಬೈಬಲಾಧರಿತ ಪ್ರಕಾಶನಗಳನ್ನು ಜನರ ಮಾತೃಭಾಷೆಗೆ ಭಾಷಾಂತರಿಸಲಾಗುವುದು ಅವರ ಹೃದಯವನ್ನು ಸ್ಪರ್ಶಿಸುವ ಉದ್ದೇಶದಿಂದಲೇ. ಮತ್ತು ಇದೇ ಸಂಭವಿಸುತ್ತಿದೆ. ಇಸವಿ 2006ರಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ನೂತನ ಲೋಕ ಭಾಷಾಂತರ ಬಲ್ಗೇರಿಯನ್ ಭಾಷೆಯಲ್ಲಿ ಬಿಡುಗಡೆಯಾದಾಗ ಬಲ್ಗೇರಿಯದ ಯೆಹೋವನ ಸಾಕ್ಷಿಗಳು ಪುಳಕಿತರಾದರು. ಅನೇಕರು ಅದಕ್ಕಾಗಿ ಕೃತಜ್ಞತಾ ಮಾತುಗಳನ್ನು ವ್ಯಕ್ತಪಡಿಸಿದ್ದಾರೆಂದು ಬಲ್ಗೇರಿಯದ ಬ್ರಾಂಚ್ ಆಫೀಸ್ ವರದಿಸುತ್ತದೆ. ‘‘ಈಗ ಬೈಬಲ್ ಮನಸ್ಸನ್ನು ಮಾತ್ರವಲ್ಲ ಹೃದಯವನ್ನೂ ಸ್ಪರ್ಶಿಸುತ್ತದೆ” ಎಂದು ಸಭಾ ಸದಸ್ಯರು ಹೇಳುತ್ತಾರೆ. ಸೋಫಿಯದಲ್ಲಿ ವಾಸವಾಗಿರುವ ಒಬ್ಬ ವೃದ್ಧನು ಹೇಳಿದ್ದು: “ನಾನು ಅನೇಕ ವರ್ಷಗಳಿಂದ ಬೈಬಲ್ ಓದುತ್ತಾ ಇದ್ದೇನೆ ಆದರೆ ಅರ್ಥಮಾಡಿಕೊಳ್ಳಲು ಇಷ್ಟೊಂದು ಸುಲಭವಾಗಿದ್ದು ನೆಟ್ಟಗೆ ಹೃದಯಕ್ಕೆ ಮುಟ್ಟುವ ಭಾಷಾಂತರವನ್ನು ನಾನು ಎಂದೂ ಓದಿದ್ದಿಲ್ಲ.” ತದ್ರೀತಿಯಲ್ಲಿ ಅಲ್ಬೇನಿಯನ್ ಭಾಷೆಯಲ್ಲಿ ಸಂಪೂರ್ಣ ನೂತನ ಲೋಕ ಭಾಷಾಂತರದ ತನ್ನ ಪ್ರತಿಯನ್ನು ಪಡೆದ ಬಳಿಕ ಅಲ್ಬೇನಿಯದ ಸ್ಥಳೀಯ ಸಾಕ್ಷಿಯೊಬ್ಬಳು ಹೇಳಿದ್ದು: “ಅಲ್ಬೇನಿಯನ್ ಭಾಷೆಯಲ್ಲಿ ದೇವರ ವಾಕ್ಯವು ಕೇಳಲೆಷ್ಟು ಇಂಪಾಗಿದೆ! ಯೆಹೋವನು ನಮ್ಮ ಸ್ವಂತ ಭಾಷೆಯಲ್ಲಿ ನಮ್ಮೊಂದಿಗೆ ಮಾತಾಡುವಂಥದ್ದು ನಮಗೆ ಸಿಕ್ಕಿದ ಮಹಾ ಸದವಕಾಶವೇ ಸರಿ!”
ಒಂದು ಭಾಷಾಂತರ ತಂಡಕ್ಕೆ ಇಡೀ ಬೈಬಲನ್ನು ಭಾಷಾಂತರಮಾಡಿ ಮುಗಿಸಲು ಹಲವಾರು ವರ್ಷಗಳು ತಗಲುವುದು ನಿಜ. ಆದರೆ ಅದರ ಫಲಿತಾಂಶವಾಗಿ ಲಕ್ಷಾಂತರ ಜನರು ಮೊದಲ ಬಾರಿಗೆ ದೇವರ ವಾಕ್ಯವನ್ನು ನಿಜವಾಗಿಯೂ ಗ್ರಹಿಸಶಕ್ತರಾಗುವಾಗ, ಎಲ್ಲಾ ಪ್ರಯಾಸವು ಸಾರ್ಥಕವೆಂದು ನಿಮಗನಿಸುವುದಿಲ್ಲವೇ?
“ನಾವು ದೇವರ ಜೊತೆಕೆಲಸದವರು”
ಸುವಾರ್ತೆಯನ್ನು ಪರಿಣಾಮಕಾರಿಯಾಗಿ ಸಾರಲು ಅವಶ್ಯವಾಗಿರುವ ಅನೇಕ ಚಟುವಟಿಕೆಗಳಲ್ಲಿ ಭಾಷಾಂತರವು ಕೇವಲ ಒಂದಾಗಿದೆ. ಬೈಬಲಾಧರಿತ ಪ್ರಕಾಶನಗಳಲ್ಲಿರುವ ಮಾಹಿತಿಯನ್ನು ತಯಾರಿಸಲು, ಮುದ್ರಿಸಲು, ರವಾನಿಸಲು ಹಾಗೂ ಯೆಹೋವನ ಸಾಕ್ಷಿಗಳ ಬ್ರಾಂಚ್‌ಗಳಿಗೆ, ಸರ್ಕಿಟ್‌ಗಳಿಗೆ ಮತ್ತು ಸಭೆಗಳಿಗೆ ಸಂಬಂಧಪಟ್ಟ ಇತರ ಕಾರ್ಯಕಲಾಪಗಳನ್ನು ನಿರ್ವಹಿಸಲು ಬಹಳಷ್ಟು ಶ್ರಮೆ ಹಾಗೂ ಹಣ ಬೇಕಾಗುತ್ತದೆ. ಹಾಗಿದ್ದರೂ ದೇವಜನರು “ಸಂತೋಷದಿಂದ ತಾವಾಗಿಯೇ” ಬಂದು ಈ ಕೆಲಸಕ್ಕಾಗಿ ತಮ್ಮನ್ನು ಕೊಟ್ಟುಕೊಳ್ಳುತ್ತಾರೆ. (ಕೀರ್ತನೆ 110:3) ಕಾಣಿಕೆ ಕೊಡುವುದನ್ನು ಅವರು ಒಂದು ಸದವಕಾಶವೆಂದೆಣಿಸುತ್ತಾರೆ ಮತ್ತು ಈ ಮೂಲಕ ಯೆಹೋವನು ತಮ್ಮನ್ನು ಆತನ “ಜೊತೆಕೆಲಸದವರು” ಎಂದು ಪರಿಗಣಿಸುವುದು ತಮಗೆ ದೊರಕಿರುವ ಒಂದು ಗೌರವವೆಂದೆಣಿಸುತ್ತಾರೆ.—1 ಕೊರಿಂಥ 3:5-9.
“ಬೆಳ್ಳಿಯೆಲ್ಲಾ ನನ್ನದು ಬಂಗಾರವೆಲ್ಲಾ ನನ್ನದು” ಎಂದು ಹೇಳುವಾತನು ತನ್ನ ಕೆಲಸವನ್ನು ಸಾಧಿಸಲು ನಮ್ಮ ಆರ್ಥಿಕ ಬೆಂಬಲದ ಮೇಲೆ ಆತುಕೊಳ್ಳುವುದಿಲ್ಲ ಎಂಬುದು ನಿಜ. ಆದಾಗ್ಯೂ, “ಎಲ್ಲಾ ಜನಾಂಗಗಳಿಗೆ” ಜೀವರಕ್ಷಕ ಸತ್ಯಗಳನ್ನು ಸಾರುವುದಕ್ಕಾಗಿ ಕಾಣಿಕೆಗಳನ್ನು ನೀಡುವ ವಿಶೇಷ ಅವಕಾಶವನ್ನು ತನ್ನ ಸೇವಕರಿಗೆ ಕೊಟ್ಟಿದ್ದಾನೆ. ಹೀಗೆ ತನ್ನ ಹೆಸರನ್ನು ಪವಿತ್ರೀಕರಿಸುವ ಕೆಲಸದಲ್ಲಿ ಭಾಗವಹಿಸುವ ಸಂದರ್ಭವನ್ನೀಯುವ ಮೂಲಕ ಯೆಹೋವನು ಅವರನ್ನು ಘನಪಡಿಸಿದ್ದಾನೆ. (ಮತ್ತಾಯ 24:14; 28:19, 20) ಇನ್ನೆಂದಿಗೂ ಪುನರಾವರ್ತಿಸಲಾಗದ ಈ ಕೆಲಸಕ್ಕೆ ಬೆಂಬಲ ಕೊಡಬೇಕೆಂದು ನಿಮಗೆ ಅನಿಸುವುದಿಲ್ಲವೇ? (w07 11/1)
[ಪಾದಟಿಪ್ಪಣಿ]
^ ಪ್ಯಾರ. 5 ಭಾಷೆಗಳ ಪಟ್ಟಿಯನ್ನು ಈ ಪತ್ರಿಕೆಯ 2ನೇ ಪುಟದಲ್ಲಿ ನೋಡಿರಿ.
[ಪುಟ 22ರಲ್ಲಿರುವ ಚೌಕ]
“ನಾವು ಗಂಭೀರವಾಗಿ ಯೋಚಿಸುವಂತೆ ಅವು ಮಾಡುತ್ತವೆ”
ಕ್ಯಾಮರೂನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸ್‌ಗೆ 14ರ ಹರೆಯದ ಬಾಲಕಿಯೊಬ್ಬಳು ಬರೆದದ್ದು: “ಈ ವರ್ಷ ಶಾಲೆಗಾಗಿ ಬೇಕಾದ ಎಲ್ಲ ಸಾಮಗ್ರಿಗಳನ್ನು ತಂದಮೇಲೆ ಕಳೆದ ವರ್ಷದ ಎರಡು ಪಠ್ಯಪುಸ್ತಕಗಳನ್ನು ಮಾರಿ ನಾನು 2,500 ಫ್ರ್ಯಾಂಕ್‌ಗಳನ್ನು [ಅಮೆರಿಕದ 5 ಡಾಲರ್] ಪಡೆದೆ. ಈ ಮೊತ್ತವನ್ನು ಮತ್ತು ಅದಕ್ಕೆ ಕೂಡಿಸಿ ನಾನು ಉಳಿಸಿಟ್ಟ 910 ಫ್ರ್ಯಾಂಕ್‌ಗಳನ್ನು [ಅಮೆರಿಕದ 1.82 ಡಾಲರ್] ಕಾಣಿಕೆಯಾಗಿ ನೀಡುತ್ತಿದ್ದೇನೆ. ನೀವು ಮಾಡುವ ಒಳ್ಳೇ ಕೆಲಸವನ್ನು ನಾನು ಬೆಂಬಲಿಸಬಯಸುತ್ತೇನೆ. ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳಿಗಾಗಿ ತುಂಬ ಉಪಕಾರ. ನಾವು ಗಂಭೀರವಾಗಿ ಯೋಚಿಸುವಂತೆ ಅವು ಮಾಡುತ್ತವೆ.”
[ಪುಟ 22ರಲ್ಲಿರುವ ಚೌಕ/ಚಿತ್ರ]
ವಿಶೇಷ ಕಾಣಿಕೆ
ಚೀಯೊಪಾಸ್ ಎಂಬ ರಾಜ್ಯದಲ್ಲಿ ವಾಸಿಸುತ್ತಿರುವ 6 ವರ್ಷದ ಬಾಲಕ ಮಾನ್ವೆಲ್ ಮೆಕ್ಸಿಕೊದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸ್‌ಗೆ ಕೃತಜ್ಞತೆಯ ಪತ್ರವೊಂದನ್ನು ಬರೆದನು. ಅವನಿಗೆ ಬರೆಯಲು ಇನ್ನೂ ಬರದಿದ್ದ ಕಾರಣ ಗೆಳೆಯನೊಬ್ಬನು ಅವನಿಗೋಸ್ಕರ ಈ ಪತ್ರವನ್ನು ಬರೆದನು. ಮಾನ್ವೆಲ್ ಹೇಳುವುದು: “ನನ್ನ ಅಜ್ಜಿ ನನಗೊಂದು ಹಂದಿಯನ್ನು ಕೊಟ್ಟಳು. ಅದು ಮರಿಗಳನ್ನು ಹಾಕಿದಾಗ, ಅವುಗಳಲ್ಲಿ ಮುದ್ದಾದ ಮರಿಯನ್ನು ಆರಿಸಿ, ನನ್ನ ಸಭೆಯಲ್ಲಿರುವ ಸಹೋದರರ ಸಹಾಯದಿಂದ ಅದನ್ನು ಬೆಳೆಸಿದೆ. ಆ ಹಂದಿಯನ್ನು ಮಾರಿ ಅದರಿಂದ ಬಂದ ಹಣವನ್ನು ಪ್ರೀತಿಯ ಕಾಣಿಕೆಯಾಗಿ ಕಳುಹಿಸುತ್ತಿದ್ದೇನೆ. ಹಂದಿಯ ತೂಕ 100 ಕೆ.ಜಿ. ಆಗಿತ್ತು. ಅದಕ್ಕೆ ಸಿಕ್ಕಿದ ಹಣ 1,250 ಪೇಸೊ [ಅಮೆರಿಕದ 110 ಡಾಲರ್]. ದಯವಿಟ್ಟು ಈ ಹಣವನ್ನು ಯೆಹೋವನಿಗಾಗಿ ಉಪಯೋಗಿಸಿ.”
[ಪುಟ 23ರಲ್ಲಿರುವ ಚೌಕ]
‘ಇದನ್ನು ಬೈಬಲ್ ಭಾಷಾಂತರಿಸಲು ಬಳಸಿರಿ’
ಯೂಕ್ರೇನಿನಲ್ಲಿ ಯೆಹೋವನ ಸಾಕ್ಷಿಗಳ 2005ರ ಜಿಲ್ಲಾ ಅಧಿವೇಶನದಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ನೂತನ ಲೋಕ ಭಾಷಾಂತರವನ್ನು ಯೂಕ್ರೇನ್ ಭಾಷೆಯಲ್ಲಿ ಬಿಡುಗಡೆಮಾಡಲಾಯಿತು. ಮರುದಿನ ಅಧಿವೇಶನ ಸ್ಥಳದಲ್ಲಿದ್ದ ಕಾಣಿಕೆ ಪೆಟ್ಟಿಗೆಯೊಂದರಲ್ಲಿ ಈ ಚೀಟಿ ಸಿಕ್ಕಿತು: “ನನಗೀಗ ಒಂಬತ್ತು ವರ್ಷ. ಗ್ರೀಕ್ ಶಾಸ್ತ್ರಗಳಿಗಾಗಿ ನಿಮಗೆ ತುಂಬ ಉಪಕಾರ. ಬಸ್ಸಿನಲ್ಲಿ ಶಾಲೆಗೆ ಹೋಗಲು ನನ್ನ ತಾಯಿ ನನಗೆ ಮತ್ತು ನನ್ನ ತಮ್ಮನಿಗೆ ಈ ಹಣ ಕೊಟ್ಟಿದ್ದಳು. ಆದರೆ ಮಳೆಯಿರದ ಸಮಯ ನಾವು ಶಾಲೆಗೆ ನಡೆದುಕೊಂಡೇ ಹೋಗುವ ಮೂಲಕ ಈ 50 ಹ್ರಿವ್‌ನ್ಯಗಳನ್ನು [ಅಮೆರಿಕದ 10 ಡಾಲರ್] ಉಳಿಸಿಟ್ಟೆವು. ಯೂಕ್ರೇನಿಯನ್ ಭಾಷೆಯಲ್ಲಿ ಸಂಪೂರ್ಣ ಬೈಬಲನ್ನು ಭಾಷಾಂತರ ಮಾಡಲು ನೀವು ಈ ಹಣವನ್ನು ಬಳಸಬೇಕೆಂಬುದು ನನ್ನ ಮತ್ತು ನನ್ನ ತಮ್ಮನ ಆಸೆ.”
[ಪುಟ 20, 21ರಲ್ಲಿರುವ ಚೌಕ]
ಕೆಲವರು ದಾನಕೊಡುವ ವಿಧಗಳು
ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು
ಅನೇಕರು, “ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು—ಮತ್ತಾಯ 24:14” ಎಂದು ಗುರುತುಮಾಡಲ್ಪಟ್ಟಿರುವ ಕಾಣಿಕೆ ಪೆಟ್ಟಿಗೆಗಳಲ್ಲಿ ತಾವು ಹಾಕಲು ಬಯಸುವ ಹಣದ ಮೊತ್ತವನ್ನು ಬದಿಗಿರಿಸುತ್ತಾರೆ ಅಥವಾ ಬಜೆಟ್ ಮಾಡುತ್ತಾರೆ.
ಪ್ರತಿ ತಿಂಗಳಲ್ಲಿ ಸಭೆಗಳು ಈ ಮೊತ್ತವನ್ನು ತಮ್ಮ ದೇಶದ ಕೆಲಸವನ್ನು ನೋಡಿಕೊಳ್ಳುತ್ತಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಕಳುಹಿಸುತ್ತವೆ. ಸ್ವಯಂಪ್ರೇರಿತರಾಗಿ ಹಣವನ್ನು ದಾನವಾಗಿ ಕೊಡಬಯಸುವವರೂ ನೇರವಾಗಿ ಅದನ್ನು ಈ ಆಫೀಸುಗಳಿಗೆ ಕಳುಹಿಸಬಹುದು. ಬ್ರಾಂಚ್ ಆಫೀಸುಗಳ ವಿಳಾಸಗಳನ್ನು ಈ ಪತ್ರಿಕೆಯ 2ನೇ ಪುಟದಲ್ಲಿ ಕೊಡಲಾಗಿದೆ. ಚೆಕ್‌ಗಳನ್ನು “ವಾಚ್‌ಟವರ್”ಗೆ ಸಂದಾಯವಾಗಬೇಕೆಂದು ಗುರುತಿಸಬೇಕು. ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಇದು ನೇರವಾಗಿ ಕೊಟ್ಟಿರುವ ಕೊಡುಗೆ ಎಂದು ಹೇಳುವ ಸಂಕ್ಷಿಪ್ತ ಪತ್ರ ಇಂತಹ ಕಾಣಿಕೆಗಳೊಂದಿಗೆ ಜೊತೆಗೂಡಿರಬೇಕು.
ಷರತ್ತುಬದ್ಧ ದಾನದ ಏರ್ಪಾಡು *
ಹಣವನ್ನು ಲೋಕವ್ಯಾಪಕವಾಗಿ ಉಪಯೋಗಿಸಲಾಗುವಂತೆ ಅದನ್ನು ವಾಚ್ ಟವರ್ ಸಂಸ್ಥೆಯ ಬಳಿ ಇಡಬಹುದು. ಆದರೆ, ಹಣವನ್ನು ವಿನಂತಿಸಲಾಗುವಾಗ ಅದನ್ನು ಹಿಂದಿರುಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಿಮ್ಮ ದೇಶದ ಬ್ರಾಂಚ್ ಆಫೀಸನ್ನು ಸಂಪರ್ಕಿಸಿರಿ.
ಚ್ಯಾರಿಟಬಲ್ ಯೋಜನೆ *
ನೇರವಾದ ಹಣದ ಕೊಡುಗೆಗಳೊಂದಿಗೆ, ಲೋಕವ್ಯಾಪಕ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಕಾಣಿಕೆಕೊಡುವ ವಿಧಾನಗಳಿವೆ. ಈ ಕೆಳಗಿನ ವಿಧಾನಗಳು ಅದರಲ್ಲಿ ಒಳಗೂಡಿವೆ:
ವಿಮೆ: ವಾಚ್‌ಟವರ್ ಸೊಸೈಟಿ ಅನ್ನು ಒಂದು ಜೀವ ವಿಮಾ ಪಾಲಿಸಿ ಇಲ್ಲವೆ ನಿವೃತ್ತಿ/ಪಿಂಚಣಿ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.
ಬ್ಯಾಂಕ್ ಖಾತೆಗಳು: ಬ್ಯಾಂಕ್ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು, ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳಿಕ ಬ್ಯಾಂಕ್ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ವಾಚ್‌ಟವರ್ ಸೊಸೈಟಿಯೊಂದಿಗೆ ಇಟ್ಟುಕೊಳ್ಳಬಹುದು ಅಥವಾ ದಾನಿಯು ಮರಣಹೊಂದುವಲ್ಲಿ ಅವು ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು.
ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್ ಹಾಗೂ ಬಾಂಡ್‌ಗಳನ್ನು ನೇರವಾದ ಕೊಡುಗೆಯಾಗಿ ವಾಚ್‌ಟವರ್ ಸೊಸೈಟಿಗೆ ದಾನಮಾಡಬಹುದು.
ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಕೊಡುಗೆಯಾಗಿ ದಾನಮಾಡಬಹುದು, ಇಲ್ಲವೆ ವಾಸದ ಮನೆಯಿರುವ ಆಸ್ತಿಯಾಗಿರುವಲ್ಲಿ ದಾನಿಯು ಜೀವದಿಂದಿರುವ ವರೆಗೂ ಅದರಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ದಾನಕೊಡುವ ಕರಾರುಪತ್ರವನ್ನು ತಯಾರಿಸುವ ಮೊದಲು ನಿಮ್ಮ ದೇಶದ ಬ್ರಾಂಚ್ ಆಫೀಸನ್ನು ಸಂಪರ್ಕಿಸಿರಿ.
ವರ್ಷಾಶನ ದಾನ: ವರ್ಷಾಶನ ದಾನದ ಏರ್ಪಾಡು ಅಂದರೆ ಒಬ್ಬನು ತನ್ನಲ್ಲಿರುವ ಹಣವನ್ನು ಅಥವಾ ಬಂಡವಾಳ ಪತ್ರಗಳನ್ನು ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲಾಗುವ ಒಂದು ನೇಮಿತ ಸಂಸ್ಥೆಗೆ ವರ್ಗಾಯಿಸುತ್ತಾನೆ. ಇದಕ್ಕೆ ಪ್ರತಿಯಾಗಿ, ದಾನಿಯು ಅಥವಾ ಅವನಿಂದ ನೇಮಿಸಲ್ಪಟ್ಟವನು ತನ್ನ ಜೀವಮಾನದಾದ್ಯಂತ ಪ್ರತಿ ವರುಷ ನಿರ್ದಿಷ್ಟ ವಾರ್ಷಿಕ ವೇತನವನ್ನು ಪಡೆಯುತ್ತಾನೆ. ಅಷ್ಟುಮಾತ್ರವಲ್ಲದೆ, ವರ್ಷಾಶನ ದಾನವು ಸ್ಥಾಪಿತವಾದ ವರುಷ ದಾನಿಗೆ ವರಮಾನ ತೆರಿಗೆಯಲ್ಲಿ ಕಡಿತ ಸಿಗುತ್ತದೆ.
ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣವನ್ನು ವಾಚ್‌ಟವರ್ ಸೊಸೈಟಿಗೆ ಕಾನೂನುಬದ್ಧವಾಗಿ ಉಯಿಲು ಬರೆಯಬಹುದು. ಅಥವಾ ವಾಚ್‌ಟವರ್ ಸೊಸೈಟಿಯನ್ನು ಒಂದು ಟ್ರಸ್ಟ್ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಕೆಲವು ದೇಶಗಳಲ್ಲಿ, ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನವನ್ನು ನೀಡುವಂಥ ಟ್ರಸ್ಟ್, ನಿರ್ದಿಷ್ಟ ತೆರಿಗೆ ವಿನಾಯಿತಿಗಳನ್ನು ನೀಡಬಹುದು.
“ಚ್ಯಾರಿಟಬಲ್ ಯೋಜನೆ” ಎಂಬ ಪದ ಸೂಚಿಸುವಂತೆ, ಈ ರೀತಿಯ ದಾನಗಳು ದಾನಿಯು ಸ್ವಲ್ಪ ಯೋಜನೆಯನ್ನು ಮಾಡುವಂತೆ ಅಗತ್ಯಪಡಿಸುತ್ತವೆ. ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ಯಾವುದೇ ರೀತಿಯ ಚ್ಯಾರಿಟಬಲ್ ಯೋಜನೆಯಿಂದ ಪ್ರಯೋಜನವಾಗುವಂತೆ ಬಯಸುವ ವ್ಯಕ್ತಿಗಳಿಗೆ ನೆರವು ನೀಡಲು, ಲೋಕವ್ಯಾಪಕ ರಾಜ್ಯ ಸೇವೆಯನ್ನು ಬೆಂಬಲಿಸಲು ಚ್ಯಾರಿಟಬಲ್ ಯೋಜನೆ ಎಂಬ ಬ್ರೋಷರ್ ಅನ್ನು ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ತಯಾರಿಸಲಾಗಿದೆ. * ಈಗ ಅಥವಾ ಅಂತಿಮ ಉಯಿಲಿನ ಮೂಲಕ ಕೊಡುಗೆಗಳನ್ನು ನೀಡಬಹುದಾದ ವಿವಿಧ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಲಿಕ್ಕಾಗಿ ಈ ಬ್ರೋಷರನ್ನು ತಯಾರಿಸಲಾಗಿದೆ. ಬ್ರೋಷರನ್ನು ಓದಿದ ಮತ್ತು ತಮ್ಮ ಸ್ವಂತ ಕಾನೂನು ಇಲ್ಲವೆ ತೆರಿಗೆ ಸಲಹೆಗಾರರೊಂದಿಗೆ ಚರ್ಚಿಸಿದ ಬಳಿಕ ಅನೇಕರು, ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಧಾರ್ಮಿಕ ಹಾಗೂ ಮಾನವೋಪಕಾರಿ ಚಟುವಟಿಕೆಗಳಿಗೆ ಬೆಂಬಲ ನೀಡಲು ಶಕ್ತರಾಗಿದ್ದಾರೆ ಮತ್ತು ಅದೇ ಸಮಯದಲ್ಲಿ ಈ ರೀತಿಯಾಗಿ ಮಾಡುವ ಮೂಲಕ ತಮ್ಮ ತೆರಿಗೆ ಪ್ರಯೋಜನಗಳನ್ನು ಸಹ ಹೆಚ್ಚಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ, ಪತ್ರ ಅಥವಾ ಫೋನಿನ ಮೂಲಕ ಕೆಳಗೆ ನೀಡಲ್ಪಟ್ಟಿರುವ ವಿಳಾಸದಲ್ಲಿ ಯೆಹೋವನ ಸಾಕ್ಷಿಗಳನ್ನು ಅಥವಾ ನಿಮ್ಮ ದೇಶದಲ್ಲಿ ಯೆಹೋವನ ಸಾಕ್ಷಿಗಳ ಕೆಲಸವನ್ನು ನೋಡಿಕೊಳ್ಳುವ ಆಫೀಸನ್ನು ನೀವು ಸಂಪರ್ಕಿಸಬಹುದು.
Jehovah’s Witnesses,
Post Box 6440,
Yelahanka,
Bangalore 560 064,
Karnataka.
Telephone: (080) 28468072
[ಪಾದಟಿಪ್ಪಣಿಗಳು]
^ ಪ್ಯಾರ. 40 ಭಾರತಕ್ಕೆ ಅನ್ವಯಿಸುವುದಿಲ್ಲ.
^ ಪ್ಯಾರ. 42 ಗಮನಿಸಿ: ತೆರಿಗೆಯ ವಿಧಿನಿಯಮಗಳು ವಿಭಿನ್ನ ದೇಶಗಳಲ್ಲಿ ವಿಭಿನ್ನವಾಗಿರಬಲ್ಲವು. ನಿಮ್ಮ ಅಕೌಂಟೆಂಟ್ ಅಥವಾ ವಕೀಲನೊಂದಿಗೆ ಮಾತಾಡಿ ತೆರಿಗೆ ನಿಯಮಗಳು ಮತ್ತು ಯೋಜನೆಯ ಬಗ್ಗೆ ತಿಳಿದುಕೊಳ್ಳಿರಿ. ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುಂಚೆ ದಯವಿಟ್ಟು ಸ್ಥಳೀಯ ಬ್ರಾಂಚ್ ಆಫೀಸನ್ನು ಸಹ ಸಂಪರ್ಕಿಸಿರಿ.
^ ಪ್ಯಾರ. 50 ಭಾರತದಲ್ಲಿ ಲಭ್ಯವಿಲ್ಲ.