ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅರ್ಥಪೂರ್ಣ ಜೀವನವೊಂದು ಸಾಧ್ಯ!

ಅರ್ಥಪೂರ್ಣ ಜೀವನವೊಂದು ಸಾಧ್ಯ!

ಅರ್ಥಪೂರ್ಣ ಜೀವನವೊಂದು ಸಾಧ್ಯ!

ಅನೇಕ ಜನರು ಹಣಕ್ಕಾಗಿಯೂ ಅದರಿಂದ ಸಿಗುವ ಸುಖಭೋಗಗಳಿಗಾಗಿಯೂ ಜೀವಿಸುತ್ತಾರೆ. ಕೆಲವು ಜನರು ಲೋಕದಲ್ಲೊಂದು ಹೆಸರು ಗಳಿಸಬೇಕೆಂಬ ಉದ್ದೇಶದಿಂದ ಬದುಕುತ್ತಾರೆ. ಇತರರು ತಮ್ಮ ಕಲಾಪ್ರಾವೀಣ್ಯದಲ್ಲಿ ಪರಿಪೂರ್ಣತೆಯನ್ನು ಸಾಧಿಸಲಿಕ್ಕಾಗಿ ಜೀವಿಸುತ್ತಾರೆ. ಪರೋಪಕಾರ ಮಾಡುವುದನ್ನೇ ಧ್ಯೇಯವಾಗಿಟ್ಟುಕೊಂಡು ಬದುಕುವ ಇನ್ನಿತರರೂ ಇದ್ದಾರೆ. ಆದರೆ ಹೆಚ್ಚಿನ ಜನರಿಗೆ, ತಾವು ಯಾಕೆ ಮತ್ತು ಯಾವುದಕ್ಕಾಗಿ ಬದುಕುತ್ತಿದ್ದೇವೆ ಎಂಬುದೇ ಗೊತ್ತಿಲ್ಲ.

ನಿಮ್ಮ ಕುರಿತೇನು? ನೀವೇಕೆ ಇಲ್ಲಿ ಬದುಕುತ್ತಿದ್ದೀರಿ ಎಂಬುದರ ಕುರಿತು ಗಂಭೀರವಾಗಿ ಯೋಚಿಸಿದ್ದೀರೋ? ಜನರ ಸಾಧನೆಗಳು ಅವರಿಗೆ ನಿಜವಾದ ಸಾರ್ಥಕತೆ ಮತ್ತು ಸಂತೃಪ್ತಿಯ ಭಾವನೆಯನ್ನು ಕೊಟ್ಟಿದೆಯೋ ಎಂಬುದನ್ನು ತಿಳಿಯಲಿಕ್ಕಾಗಿ ಅವರು ಬೆನ್ನಟ್ಟಿಹೋಗುವ ಕೆಲವೊಂದು ಸಾಮಾನ್ಯ ಗುರಿಗಳನ್ನು ನಾವೇಕೆ ಪರಿಗಣಿಸಿ ನೋಡಬಾರದು? ಜೀವನವನ್ನು ಅರ್ಥಪೂರ್ಣವನ್ನಾಗಿ ಮಾಡುವುದು ಯಾವುದು?

ಹಣ ಮತ್ತು ಸುಖಭೋಗಕ್ಕೆ ಅವುಗಳದ್ದೇ ಆದ ಸ್ಥಾನವಿದೆ

ಪ್ರಸಂಗಿ 7:12ರಲ್ಲಿ ಬೈಬಲ್‌ ತಿಳಿಸುವುದು: “ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ; ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.” ಹೌದು, ಹಣದಿಂದ ಪ್ರಯೋಜನವಿದೆ. ಬದುಕಲು ನಿಮಗೆ ಹಣ ಅತ್ಯಗತ್ಯ. ಅದರಲ್ಲೂ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮಗಿರುವುದಾದರೆ ಹಣ ಬೇಕೇ ಬೇಕು.—1 ತಿಮೊಥೆಯ 5:8.

ಹಣದಿಂದ ಸಿಗಬಲ್ಲ ಕೆಲವು ಸುಖಸಂತೋಷಗಳಾದರೂ ಇಲ್ಲದಿರುವಲ್ಲಿ ಜೀವನದಲ್ಲಿ ಯಾವ ಅರ್ಥವಿದೆ? ಕ್ರೈಸ್ತತ್ವದ ಸ್ಥಾಪಕನಾದ ಯೇಸು ಕ್ರಿಸ್ತನು ತನಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ ಎಂದು ಒಪ್ಪಿಕೊಂಡನಾದರೂ, ಅನೇಕ ವೇಳೆ ಅತ್ಯುತ್ತಮ ಆಹಾರ ಮತ್ತು ದ್ರಾಕ್ಷಾಮದ್ಯ ಸೇವಿಸುವುದರಲ್ಲಿ ಆನಂದಿಸಿದನು. ಮಾತ್ರವಲ್ಲ, ದುಬಾರಿ ವಸ್ತ್ರ ಧರಿಸುವುದರಿಂದಲೂ ದೂರವಿರಲಿಲ್ಲ.—ಮತ್ತಾಯ 8:20; ಯೋಹಾನ 2:1-11; 19:23, 24.

ಹಾಗಿದ್ದರೂ, ಯೇಸುವಿನ ಜೀವನದ ಮುಖ್ಯ ಗುರಿ ಸುಖಭೋಗಗಳ ಬೆನ್ನಟ್ಟುವಿಕೆಯಾಗಿರಲಿಲ್ಲ. ಅವನು ಸ್ಪಷ್ಟ ಹಾಗೂ ಯೋಗ್ಯ ಆದ್ಯತೆಗಳನ್ನು ಇಟ್ಟಿದ್ದನು. “ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ” ಎಂದು ಯೇಸು ಒಮ್ಮೆ ಹೇಳಿದನು. ಅನಂತರ, ಅವನು ಭಾರಿ ಫಸಲು ಬೆಳೆಸಿದ ಒಬ್ಬ ಐಶ್ವರ್ಯವಂತನ ದೃಷ್ಟಾಂತವನ್ನು ಉಲ್ಲೇಖಿಸಿದನು. ಆ ಐಶ್ವರ್ಯವಂತನು ತನ್ನೊಳಗೆ ತರ್ಕಿಸುತ್ತಾ, “ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲವಲ್ಲಾ . . . ನನ್ನ ಕಣಜಗಳನ್ನು ಕೀಳಿಸಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ತುಂಬಿಟ್ಟು ನನ್ನ ಜೀವಾತ್ಮಕ್ಕೆ—ಜೀವವೇ, ಅನೇಕ ವರುಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಿದ್ದದೆ; ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು” ಎಂದು ಹೇಳುತ್ತಾನೆ. ಈ ಮನುಷ್ಯನ ಆಲೋಚನೆಯಲ್ಲಿ ಇದ್ದ ತಪ್ಪೇನು? ಆ ದೃಷ್ಟಾಂತವು ಮುಂದುವರಿಯುವುದು: “ದೇವರು [ಆ ಐಶ್ವರ್ಯವಂತನಿಗೆ]—ಬುದ್ಧಿಹೀನನು ನೀನು! ಈ ಹೊತ್ತು ರಾತ್ರಿ ನಿನ್ನ ಪ್ರಾಣವನ್ನು ನಿನ್ನ ಕಡೆಯಿಂದ ಕೇಳುವರು; ಆಗ ನೀನು ಸಿದ್ಧಮಾಡಿಟ್ಟಿರುವದು ಯಾರಿಗಾಗುವದು ಎಂದು ಹೇಳಿದನು.” ಆ ಮನುಷ್ಯನು ಬೆಳೆಯನ್ನು ಕಣಜಗಳಲ್ಲಿ ತುಂಬಿಸಿಟ್ಟರೂ, ಸಾಯುವಾಗ ತಾನು ಕೂಡಿಟ್ಟ ಐಶ್ವರ್ಯವನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ದೃಷ್ಟಾಂತದ ಸಮಾಪ್ತಿಯಲ್ಲಿ ಯೇಸು ತನ್ನ ಕೇಳುಗರಿಗೆ ಈ ಪಾಠವನ್ನು ಕಲಿಸಿದನು: “ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ.”—ಲೂಕ 12:13-21.

ಹೌದು, ನಮಗೆ ಕೊಂಚ ಹಣ ಆವಶ್ಯಕ ಮತ್ತು ಸುಖಸಂತೋಷವೂ ಬೇಕು. ಆದರೆ, ನಮ್ಮ ಬದುಕಿನಲ್ಲಿ ಹಣ ಮತ್ತು ಸುಖಭೋಗವೇ ಸರ್ವಸ್ವವಲ್ಲ. ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗುವುದು ಅಂದರೆ ದೇವಾನುಗ್ರಹವನ್ನು ಪಡೆದುಕೊಳ್ಳುವಂಥ ರೀತಿಯಲ್ಲಿ ಬದುಕುವುದೇ ಎಲ್ಲಕ್ಕಿಂತಲೂ ಹೆಚ್ಚು ಪ್ರಾಮುಖ್ಯ.

ಹೆಸರು ಗಳಿಸುವುದು ಪ್ರಾಮುಖ್ಯವೋ?

ಅನೇಕ ಜನರು ಒಂದು ದೊಡ್ಡ ಹೆಸರು ಮಾಡಬೇಕೆಂದು ಜೀವಿಸುತ್ತಾರೆ. ಹೆಸರು ಗಳಿಸುವುದು, ಇತರರು ತಮ್ಮನ್ನು ಸ್ಮರಿಸಬೇಕು ಎಂದು ಬಯಸುವುದು ತಪ್ಪೇನೂ ಅಲ್ಲ. ಏಕೆಂದರೆ, “ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಜನನದಿನಕ್ಕಿಂತ ಮರಣದಿನ ಮೇಲು” ಎಂದು ಬೈಬಲ್‌ ತಿಳಿಸುತ್ತದೆ.—ಪ್ರಸಂಗಿ 7:1.

ಒಬ್ಬ ವ್ಯಕ್ತಿಯ ಜೀವನ ಚರಿತ್ರೆ ಒಂದರ್ಥದಲ್ಲಿ ಬರೆಯಲ್ಪಡುವುದು ಅವನ ಮರಣದ ದಿನದಲ್ಲಿಯೇ ಎಂದು ಹೇಳಬಹುದು. ಅವನು ಸತ್ಕಾರ್ಯಗಳನ್ನು ಮಾಡಿರುವುದಾದರೆ, ಅವನ ಮರಣದಿನವು ಅವನ ಜನನದಿನಕ್ಕಿಂತ ಎಷ್ಟೋ ಮೇಲಾಗಿರುವುದು. ಏಕೆಂದರೆ, ಅವನ ಜೀವನರೀತಿಯು ಜನ್ಮದಿನದಲ್ಲಿ ಇನ್ನೂ ನಿರ್ಧಾರವಾಗಿರುವುದಿಲ್ಲ.

ಪ್ರಸಂಗಿ ಪುಸ್ತಕದ ಬರಹಗಾರನು ಅರಸ ಸೊಲೊಮೋನನು. ಸೊಲೊಮೋನನ ಮಲಸಹೋದರನಾದ ಅಬ್ಷಾಲೋಮನು ತನಗೊಂದು ಹೆಸರು ಮಾಡಿಕೊಳ್ಳಬೇಕೆಂದು ಬಯಸಿದನು. ಆದರೆ ಅವನು ಯಾರ ಮೂಲಕ ಮುಂದಿನ ತಲೆಮಾರಿಗೆ ತನ್ನ ಹೆಸರನ್ನು ದಾಟಿಸಸಾಧ್ಯವಿತ್ತೋ ಆ ಮೂರು ಮಂದಿ ಗಂಡುಮಕ್ಕಳು ಪ್ರಾಯಶಃ ಯುವಕರಾಗಿರುವಾಗಲೇ ಮರಣ ಹೊಂದಿದರು. ಅಬ್ಷಾಲೋಮನು ಏನು ಮಾಡಿದನು? “ಅಬ್ಷಾಲೋಮನು . . . ತನ್ನ ಹೆಸರನ್ನುಳಿಸುವ ಮಗನಿಲ್ಲದ್ದರಿಂದ ಒಂದು ಕಲ್ಲಿನ ಕಂಬವನ್ನು ತರಿಸಿ ಅದನ್ನು ಅರಸನ ತಗ್ಗಿನಲ್ಲಿ ತನ್ನ ಜ್ಞಾಪಕಾರ್ಥವಾಗಿ ನಿಲ್ಲಿಸಿ ಅದಕ್ಕೆ ತನ್ನ ಹೆಸರನ್ನಿಟ್ಟನು” ಎಂದು ಬೈಬಲ್‌ ಹೇಳುತ್ತದೆ. (2 ಸಮುವೇಲ 14:27; 18:18) ಆ ಕಲ್ಲಿನ ಕಂಬದ ಅವಶೇಷ ಇನ್ನೂ ದೊರೆತ್ತಿಲ್ಲ. ಅಬ್ಷಾಲೋಮನ ಕುರಿತಾದರೂ ಏನು? ತನ್ನ ತಂದೆಯಾದ ದಾವೀದನ ಸಿಂಹಾಸನವನ್ನು ಕಿತ್ತುಕೊಳ್ಳಲು ಪಿತೂರಿ ನಡೆಸಿದ ಕುಪ್ರಸಿದ್ಧ ದಂಗೆಕೋರನಾಗಿ ಅವನು ಬೈಬಲ್‌ ವಿದ್ಯಾರ್ಥಿಗಳಿಗೆ ಪರಿಚಿತನಾಗಿದ್ದಾನೆ.

ಅನೇಕರು ಇಂದು ತಮ್ಮ ಸಾಧನೆಗಳಿಂದ ಹೆಸರುವಾಸಿಯಾಗಲು ಪ್ರಯತ್ನಿಸುತ್ತಾರೆ. ಕಾಲಕ್ಕೆ ತಕ್ಕಂತೆ ತಮ್ಮ ಅಭಿರುಚಿಗಳನ್ನು ಬದಲಾಯಿಸುವ ಜನರ ದೃಷ್ಟಿಯಲ್ಲಿ ಅವರು ಕೀರ್ತಿ ಪಡೆಯಲು ಶ್ರಮಿಸುತ್ತಾರೆ. ಆದರೆ, ಅಂಥ ಕೀರ್ತಿಗೆ ಏನಾಗುತ್ತದೆ? ದ ಕಲ್ಚರ್‌ ಆಫ್‌ ನಾರ್ಸಿಸಿಸಮ್‌ ಎಂಬ ಪುಸ್ತಕದಲ್ಲಿ ಕ್ರಿಸ್ಟಫರ್‌ ಲಾಷ್‌ ಎಂಬವರು ಬರೆದದು: “ನಮ್ಮ ಸಮಯದಲ್ಲಿ, ವ್ಯಕ್ತಿಯೊಬ್ಬನ ಯಶಸ್ಸನ್ನು ಮುಖ್ಯವಾಗಿ ಯೌವನ, ಸೌಂದರ್ಯ ಮತ್ತು ನವೀನತೆ ಇವುಗಳಿಂದ ಅಳೆಯಲಾಗುತ್ತದೆ. ಕೀರ್ತಿ ಎಂಬುದು ಹಿಂದೆಂದಿಗಿಂತಲೂ ವೇಗವಾಗಿ ಕಣ್ಮರೆಯಾಗುತ್ತಿದೆ. ಪ್ರಸಿದ್ಧಿಗೆ ಬರುವವರು ಅದನ್ನು ಕಳೆದುಕೊಳ್ಳುತ್ತೇವಲ್ಲ ಎಂದು ಯಾವಾಗಲೂ ಕೊರಗುತ್ತಿರುತ್ತಾರೆ.” ಇದರ ಫಲಿತಾಂಶವಾಗಿ, ಅನೇಕ ಹೆಸರಾಂತ ವ್ಯಕ್ತಿಗಳು ಅಮಲೌಷಧ ಹಾಗೂ ಮದ್ಯಕ್ಕೆ ಮರೆಹೋಗುತ್ತಾರೆ ಮತ್ತು ಅನೇಕ ವೇಳೆ ತಮ್ಮ ಜೀವನವನ್ನು ಕೊನೆಗಾಣಿಸುತ್ತಾರೆ. ಆದುದರಿಂದ, ಕೀರ್ತಿಯನ್ನು ಬೆನ್ನಟ್ಟಿಹೋಗುವುದು ನಿರರ್ಥಕವೇ ಸರಿ.

ಹಾಗಾದರೆ, ನಾವು ಯಾರ ದೃಷ್ಟಿಯಲ್ಲಿ ಒಂದು ಒಳ್ಳೆಯ ಹೆಸರು ಗಳಿಸಬೇಕು? ಯೆಹೋವನು ತನ್ನ ನಿಯಮವನ್ನು ಪಾಲಿಸಿದ ಜನರ ಕುರಿತು ಪ್ರವಾದಿ ಯೆಶಾಯನ ಮೂಲಕ ತಿಳಿಸಿದ್ದು: “ನನ್ನ ಪ್ರಾಕಾರಗಳೊಳಗೆ ನನ್ನ ಆಲಯದಲ್ಲಿ ಅವರ ಜ್ಞಾಪಕಾರ್ಥವಾಗಿ ಶಿಲೆಯನ್ನಿಟ್ಟು . . . ಹೆಸರುವಾಸಿಯನ್ನು ದಯಪಾಲಿಸುವೆನು; ಹೌದು, ಎಂದಿಗೂ ಅಳಿಯದ ಶಾಶ್ವತನಾಮವನ್ನು ಅನುಗ್ರಹಿಸುವೆನು.” (ಯೆಶಾಯ 56:4, 5) ದೇವರಿಗೆ ಮೆಚ್ಚಿಕೆಯಾಗಿರುವವರು ಆತನಿಗೆ ವಿಧೇಯರಾಗುವ ಕಾರಣ ‘ಜ್ಞಾಪಿಸಿ’ಕೊಳ್ಳಲ್ಪಡುವರು ಹಾಗೂ ‘ಹೆಸರನ್ನು’ ಹೊಂದುವರು. ಅವರು ಎಂದಿಗೂ ಅಳಿದುಹೋಗದಂತೆ ದೇವರು ಅವರ ಹೆಸರನ್ನು ‘ಶಾಶ್ವತವಾಗಿ’ ನೆನಪಿಸಿಕೊಳ್ಳುವನು. ಈ ರೀತಿಯ ಹೆಸರನ್ನೇ ಅಂದರೆ ನಮ್ಮ ಸೃಷ್ಟಿಕರ್ತನ ದೃಷ್ಟಿಯಲ್ಲಿ ಉತ್ತಮವಾಗಿರುವ ಹೆಸರನ್ನು ನಾವು ಗಳಿಸಬೇಕೆಂದು ಬೈಬಲ್‌ ಉತ್ತೇಜಿಸುತ್ತದೆ.

ಯೆಶಾಯನು ಮೇಲಿನ ಪ್ರವಾದನೆಯನ್ನು ಹೇಳಿದಾಗ ನಂಬಿಗಸ್ತ ಜನರು ಭೂಪರದೈಸಿನಲ್ಲಿ ನಿತ್ಯಜೀವವನ್ನು ಪಡೆಯುವ ಸಮಯದ ಕುರಿತು ಮಾತಾಡುತ್ತಿದ್ದನು. ಪರದೈಸಿನಲ್ಲಿನ “ನಿತ್ಯಜೀವ” ಎಂಬುದು “ವಾಸ್ತವವಾದ ಜೀವ”ವಾಗಿದೆ. ಅದು ದೇವರು ಮಾನವರನ್ನು ಸೃಷ್ಟಿಸಿದಾಗ ಅವರಿಗಾಗಿ ಉದ್ದೇಶಿಸಿದ ಜೀವನವಾಗಿದೆ. (1 ತಿಮೊಥೆಯ 6:12, 18) ಹಾಗಾದರೆ, ಅತೃಪ್ತಿಯಿಂದ ಸ್ವಲ್ಪ ಕಾಲ ಬದುಕುವ ಬದಲಿಗೆ ನಿತ್ಯಜೀವವನ್ನು ಪಡೆಯುವುದಕ್ಕಾಗಿ ನಾವು ಶ್ರಮಿಸಬೇಕಲ್ಲವೆ?

ಕಲಾತ್ಮಕ ಅಥವಾ ಪರೋಪಕಾರ ಭಾವದ ಬೆನ್ನಟ್ಟುವಿಕೆ ಸಾಲದು

ಅನೇಕ ಕಲಾವಿದರಿಗೆ ತಮ್ಮ ಕಲೆಯಲ್ಲಿ ಪಕ್ವತೆಯೆಂದೆಣಿಸುವ ಮಜಲನ್ನು ತಲಪಲಿಕ್ಕಾಗಿ ಇನ್ನಷ್ಟು ಕುಶಲರಾಗುವ ಆಕಾಂಕ್ಷೆ ಇದೆ. ಆದರೆ ಅದಕ್ಕಾಗಿ ಈಗಿರುವ ಜೀವನವು ತುಂಬಾ ಕ್ಷಣಿಕವಾಗಿದೆ. ಹಿಂದಿನ ಲೇಖನದಲ್ಲಿ ತಿಳಿಸಲಾದ ಹೀಡೆಓ ತನ್ನ 90ನೇ ವಯಸ್ಸಿನಲ್ಲೂ ಕಲಾಕೌಶಲಗಳನ್ನು ಉತ್ತಮಗೊಳಿಸಲು ಶ್ರಮಿಸಿದನು. ಕಲಾವಿದನೊಬ್ಬನು ತನ್ನ ಕೃತಿಗಳಲ್ಲಿ ಆನಂದಪಡುವಷ್ಟು ಪರಿಣತನಾದರು ಸಹ ಅಷ್ಟರಲ್ಲಿ ಅವನಿಗೆ ವಯಸ್ಸಾಗಿ, ಯೌವನಸ್ಥನಾಗಿದ್ದಾಗ ಮಾಡಿದಷ್ಟು ಕೆಲಸವನ್ನು ಮಾಡಲು ಅವನು ಅಶಕ್ತನಾಗಬಹುದು. ಆದರೆ ಅವನು ಅನಂತಕಾಲ ಜೀವಿಸುವುದಾದರೆ ಆಗೇನು? ಅವನು ತನ್ನ ಕಲೆಯಲ್ಲಿ ಪಾರಂಗತನಾಗುವ ಎಲ್ಲ ಸಾಧ್ಯತೆಗಳ ಕುರಿತು ಯೋಚಿಸಿರಿ!

ಪರೋಪಕಾರ ಮಾಡುವುದನ್ನೇ ಧ್ಯೇಯವಾಗಿ ಇಟ್ಟುಕೊಳ್ಳವುದರ ಕುರಿತೇನು? ಒಬ್ಬನು ಬಡಬಗ್ಗರಿಗೆ ಕಾಳಜಿ ತೋರಿಸುವುದು ಮತ್ತು ನಿರ್ಗತಿಕರಿಗೆ ನೆರವು ನೀಡಲಿಕ್ಕಾಗಿ ತನ್ನ ಸ್ವತ್ತುಗಳನ್ನು ಉಪಯೋಗಿಸುವುದು ಶ್ಲಾಘನೀಯವೇ. “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಎಂದು ಬೈಬಲ್‌ ಹೇಳುತ್ತದೆ. (ಅ. ಕೃತ್ಯಗಳು 20:35) ಪರರ ಹಿತಕ್ಷೇಮಕ್ಕೆ ಕಾಳಜಿ ತೋರಿಸುವುದು ತೃಪ್ತಿಕರ ನಿಜ. ಆದರೆ, ಇದಕ್ಕಾಗಿ ಒಬ್ಬ ಮನುಷ್ಯನು ತನ್ನ ಜೀವನವನ್ನೇ ಮುಡಿಪಾಗಿಟ್ಟರೂ ಎಷ್ಟನ್ನು ಸಾಧಿಸಬಲ್ಲನು? ಇತರರ ಕಷ್ಟಸಂಕಟಗಳನ್ನು ನಿವಾರಿಸಲು ನಾವೇನೇ ಮಾಡಿದರೂ ಅದು ಕೊಂಚವೇ. ಏಕೆಂದರೆ, ಬೃಹತ್‌ ಪ್ರಮಾಣದ ಭೌತಿಕ ವಿಷಯಗಳಿಂದಲೂ ತೃಪ್ತಿಪಡಿಸಲಾಗದ ಒಂದು ಮೂಲಭೂತ ಆವಶ್ಯಕತೆಯಿದೆ. ಅದನ್ನು ಹೆಚ್ಚಿನ ಜನರು ಕಡೆಗಣಿಸಿದ್ದಾರೆ. ಆ ಆವಶ್ಯಕತೆ ಏನಾಗಿದೆ?

ಅನಿವಾರ್ಯವಾಗಿ ಪೂರೈಸಲೇಬೇಕಾಗಿರುವ ಒಂದು ಅಂತರ್ಗತ ಆವಶ್ಯಕತೆ

ಎಲ್ಲರಲ್ಲೂ ಅಂತರ್ಗತವಾಗಿರುವ ಒಂದು ಮೂಲಭೂತ ಆವಶ್ಯಕತೆಯ ಕುರಿತು ಯೇಸು ತನ್ನ ಪರ್ವತ ಪ್ರಸಂಗದಲ್ಲಿ ತಿಳಿಸಿದನು. ಅವನು ಹೇಳಿದ್ದು: “ತಮ್ಮ ಆಧ್ಯಾತ್ಮಿಕ ಆವಶ್ಯಕತೆಯ ಪ್ರಜ್ಞೆಯಿಂದಿರುವವರು ಸಂತೋಷಿತರು, ಪರಲೋಕರಾಜ್ಯವು ಅವರದು.” (ಮತ್ತಾಯ 5:3, NW) ಹಾಗಾದರೆ, ಬೈಬಲಿಗನುಸಾರ ನಿಜ ಸಂತೋಷವು ಆಸ್ತಿಪಾಸ್ತಿ, ಕೀರ್ತಿ, ಕಲಾಪ್ರಾವೀಣ್ಯ ಅಥವಾ ಪರೋಪಕಾರ ಇತ್ಯಾದಿಗಳ ಬೆನ್ನಟ್ಟುವಿಕೆಯ ಮೇಲೆ ಅವಲಂಬಿಸಿಲ್ಲ. ಬದಲಾಗಿ ನಮ್ಮ ಆಧ್ಯಾತ್ಮಿಕ ಆವಶ್ಯಕತೆಯ ಮೇಲೆ ಅಂದರೆ ದೇವರನ್ನು ಆರಾಧಿಸುವ ನಮ್ಮ ಬಯಕೆಯನ್ನು ತೃಪ್ತಿಪಡಿಸುವುದರ ಮೇಲೆ ಹೊಂದಿಕೊಂಡಿದೆ.

ಸೃಷ್ಟಿಕರ್ತನನ್ನು ಅರಿಯದವರು ಆತನನ್ನು ಹುಡುಕುವಂತೆ ಅಪೊಸ್ತಲ ಪೌಲನು ಪ್ರೋತ್ಸಾಹಿಸಿದನು. ಅವನು ಹೇಳಿದ್ದು: “[ದೇವರು] ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ ಅವರವರು ಇರತಕ್ಕ ಕಾಲಗಳನ್ನೂ ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ವಾಸಮಾಡಿಸಿ ಒಂದು ವೇಳೆ ಅವರು ತಡವಾಡಿ ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ. ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ, ಇರುತ್ತೇವೆ.”—ಅ. ಕೃತ್ಯಗಳು 17:26-28.

ಸತ್ಯದೇವರನ್ನು ಆರಾಧಿಸುವ ಅಂತರ್ಗತ ಬಯಕೆಯನ್ನು ತಣಿಸುವುದೇ ಬದುಕಿನಲ್ಲಿ ನಿಜ ಸಂತೋಷವನ್ನು ಕಂಡುಕೊಳ್ಳಲಿಕ್ಕಿರುವ ಕೀಲಿಕೈಯಾಗಿದೆ. ನಮ್ಮ ಆಧ್ಯಾತ್ಮಿಕ ಆವಶ್ಯಕತೆಯನ್ನು ಪೂರೈಸುವುದು “ವಾಸ್ತವವಾದ ಜೀವದ” ಪ್ರತೀಕ್ಷೆಯನ್ನು ಕೊಡುತ್ತದೆ. ಥೆರೆಸ್ಸ ಎಂಬವಳ ಉದಾಹರಣೆಯನ್ನು ಪರಿಗಣಿಸಿರಿ. ಅವಳು ತನ್ನ ದೇಶದ ಟೆಲಿವಿಷನ್‌ ಕಾರ್ಯಕ್ರಮಗಳಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಿದಳು. ಏಕೆಂದರೆ, ಅವಳು ತನ್ನದೇ ಆದ ಒಂದು ತಾಸಿನ ಟಿವಿ ಧಾರಾವಾಹಿಯಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ ಆಫ್ರಿಕ-ಅಮೆರಿಕಾದ ಪ್ರಪ್ರಥಮ ತಾರೆಯಾಗಿದ್ದಳು. ಆದರೂ, ಸ್ವಲ್ಪದರಲ್ಲೇ ಅವಳು ಅದೆಲ್ಲದ್ದಕ್ಕೆ ವಿದಾಯ ಹೇಳಿದಳು. ಏಕೆ? ಅವಳು ಹೇಳಿದ್ದು: “ದೇವರ ವಾಕ್ಯದ ಮಾರ್ಗದರ್ಶನಗಳನ್ನು ಪಾಲಿಸುವ ಮೂಲಕ ಮಾತ್ರ ಅತ್ಯುತ್ತಮ ಜೀವನ ನಡೆಸಸಾಧ್ಯ ಎಂದು ನನಗೆ ಮನವರಿಕೆಯಾಗಿದೆ.” ಲೈಂಗಿಕತೆ ಮತ್ತು ಹಿಂಸಾಚಾರವನ್ನು ವೈಭವಕ್ಕೇರಿಸುವ ಟಿವಿ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ದೇವರೊಂದಿಗಿನ ತನ್ನ ಸಂಬಂಧವನ್ನು ಅಪಾಯಕ್ಕೊಡ್ಡಲು ಥೆರೆಸ್ಸ ಬಯಸಲಿಲ್ಲ. ಅವಳು ಕಿರುತೆರೆಯಿಂದ ಜನರಿಗೆ ಕಣ್ಮರೆಯಾದಳು ನಿಜ. ಆದರೆ, ನಿಜವಾಗಿಯೂ ಸಂತೃಪ್ತಿಕರ ಜೀವನವನ್ನು ಪಡೆದುಕೊಂಡಳು. ಏಕೆಂದರೆ, ಅವಳು ದೇವರ ರಾಜ್ಯದ ಸುವಾರ್ತೆ ಸಾರುವ ಪೂರ್ಣ ಸಮಯದ ಸೌವಾರ್ತಿಕಳಾಗಿ ಸೇವೆಸಲ್ಲಿಸಿದಳು. ಹೀಗೆ, ಇತರರು ದೇವರೊಂದಿಗೆ ಆಪ್ತ ಸಂಬಂಧವನ್ನು ಹೊಂದುವಂತೆ ನೆರವು ನೀಡಲು ಪ್ರಯತ್ನಿಸಿದಳು.

ನಟನೆಯನ್ನು ತ್ಯಜಿಸಲು ಥೆರೆಸ್ಸ ಮಾಡಿದ ನಿರ್ಣಯದ ಕುರಿತು ಆಕೆಯ ಹಳೆಯ ಮಿತ್ರನೊಬ್ಬನು ಹೇಳಿದ್ದು: “ನನ್ನ ಅಭಿಪ್ರಾಯದ ಪ್ರಕಾರ ಅವಳ ಮುಂದೆ ಉಜ್ವಲ ಭವಿಷ್ಯವಿತ್ತು. ಅದನ್ನು ಆಕೆ ಕಿತ್ತೆಸೆದದ್ದನ್ನು ನನ್ನಿಂದ ನೋಡಲಾಗಲಿಲ್ಲ, ನನ್ನ ಎದೆಯೊಡೆದು ಹೋಯಿತು. ಆದರೆ ಆಕೆ ಹೆಚ್ಚು ಮಹತ್ವವಾದುದನ್ನು ಮತ್ತು ಅಧಿಕ ತೃಪ್ತಿಕೊಡುವಂಥದ್ದನ್ನು ಕಂಡುಕೊಂಡಳೆಂಬುದರಲ್ಲಿ ಸಂಶಯವೇ ಇಲ್ಲ.” ತರುವಾಯ ಥೆರೆಸ್ಸ ಮೃತಪಟ್ಟಳು. ಅವಳ ಮರಣದ ಬಳಿಕ ಅದೇ ಮಿತ್ರನು ಅವಳ ಕುರಿತು ಹೇಳಿದ್ದು: “ಅವಳು ಸದಾ ಸಂತೋಷದಿಂದ ಇದ್ದಳು. ಜೀವನದಲ್ಲಿ ನಾವೆಲ್ಲಾ ಬಯಸುವುದು ಇದೇ ತಾನೇ. ನಮ್ಮಲ್ಲಿ ಎಷ್ಟು ಮಂದಿ ನಿಜವಾಗಿಯೂ ಸಂತೋಷವಾಗಿದ್ದೇವೆ ಎಂದು ಹೇಳಸಾಧ್ಯವಿದೆ?” ಯಾರು ತಮ್ಮ ಜೀವನದಲ್ಲಿ ದೇವರೊಂದಿಗಿರುವ ಸಂಬಂಧಕ್ಕೆ ಪ್ರಮುಖ ಸ್ಥಾನವನ್ನು ಕೊಡುತ್ತಾರೋ ಅಂಥವರನ್ನು ಮರಣವು ಕಬಳಿಸಿದರೂ, ರಾಜ್ಯದಾಳಿಕೆಯಲ್ಲಿ ಅವರಿಗೆ ಪುನರುತ್ಥಾನವಾಗುವ ಅದ್ಭುತ ನಿರೀಕ್ಷೆಯಿದೆ.—ಯೋಹಾನ 5:28, 29.

ಸೃಷ್ಟಿಕರ್ತನು ಈ ಭೂಮಿಗಾಗಿ ಮತ್ತು ಇಲ್ಲಿರುವ ಮಾನವರಿಗಾಗಿ ಒಂದು ಉದ್ದೇಶವನ್ನಿಟ್ಟಿದ್ದಾನೆ. ನೀವು ಆ ಉದ್ದೇಶವನ್ನು ಅರ್ಥಮಾಡಿಕೊಂಡು, ಭೂಪರದೈಸಿನಲ್ಲಿ ನಿತ್ಯಜೀವವನ್ನು ಆನಂದಿಸಬೇಕೆಂಬುದು ಆತನ ಇಚ್ಛೆಯಾಗಿದೆ. (ಕೀರ್ತನೆ 37:10, 11, 29) ಭೂಮ್ಯಾಕಾಶಗಳ ನಿರ್ಮಾಣಿಕನಾದ ಯೆಹೋವನ ಕುರಿತು ಮತ್ತು ಆತನು ನಿಮಗಾಗಿ ಇಟ್ಟಿರುವ ಉದ್ದೇಶದ ಕುರಿತು ಹೆಚ್ಚನ್ನು ತಿಳಿದುಕೊಳ್ಳುವ ಸಮಯ ಇದೇ ಆಗಿದೆ. ಆ ಜ್ಞಾನವನ್ನು ಪಡೆದುಕೊಳ್ಳಲಿಕ್ಕಾಗಿ ನಿಮಗೆ ನೆರವು ನೀಡಲು ನಿಮ್ಮ ಪ್ರದೇಶದಲ್ಲಿರುವ ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ. ದಯವಿಟ್ಟು ಅವರನ್ನು ಸಂಪರ್ಕಸಿರಿ. ಇಲ್ಲವೆ, ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ. (w07 11/15)

[ಪುಟ 5ರಲ್ಲಿರುವ ಚಿತ್ರ]

ಯೇಸು ತಿಳಿಸಿದ ದೃಷ್ಟಾಂತದಲ್ಲಿದ್ದ ಐಶ್ವರ್ಯವಂತನ ಆಲೋಚನೆಯಲ್ಲಿ ತಪ್ಪೇನಾಗಿತ್ತು?

[ಪುಟ 7ರಲ್ಲಿರುವ ಚಿತ್ರ]

ಭೂಪರದೈಸಿನಲ್ಲಿ ನಿತ್ಯಜೀವವನ್ನು ಆನಂದಿಸಲು ನಿಮಗಿಷ್ಟವಿದೆಯೋ?