ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಜೀವನದ ಉದ್ದೇಶವೇನು?

ನಿಮ್ಮ ಜೀವನದ ಉದ್ದೇಶವೇನು?

ನಿಮ್ಮ ಜೀವನದ ಉದ್ದೇಶವೇನು?

ಕೆನೀ ಎಂಬವನು ಹೆಸರಾಂತ ದಳ್ಳಾಳಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದನು. ಅವನು ದುಬಾರಿಯಾದ ವಿದೇಶಿ ಕಾರಿನಲ್ಲಿ ಓಡಾಡುತ್ತಿದ್ದನು. ದೊಡ್ಡ ನಗರವೊಂದರ ಶ್ರೀಮಂತ ಬಡಾವಣೆಯ ಬಹು ಮಹಡಿ ಕಟ್ಟಡದಲ್ಲಿ ಅವನಿಗೆ ಸ್ವಂತ ಅಪಾರ್ಟ್‌ಮಂಟ್‌ ಇತ್ತು. ಅವನು ಒಬ್ಬ ಅನುಭವಿ ಸ್ಕೈಡೈವರ್‌ ಸಹ ಆಗಿದ್ದನು ಮತ್ತು ಸಾವಿರಾರು ಅಡಿ ಎತ್ತರದಿಂದ ಧುಮುಕಿ ವೇಗವಾಗಿ ನೆಲೆದೆಡಗೆ ಬೀಳುವುದರಲ್ಲಿ ಥ್ರಿಲ್‌ ಅನುಭವಿಸುತ್ತಿದ್ದನು. ಆದರೆ, ಇವೆಲ್ಲವೂ ಅವನಿಗೆ ಸಂತೃಪ್ತ ಬದುಕನ್ನು ಕೊಟ್ಟಿತೋ? ದ ವಾಲ್‌ ಸ್ಟ್ರೀಟ್‌ ಜರ್ನಲ್‌ ಎಂಬ ವಾರ್ತಾಪತ್ರಿಕೆಗನುಸಾರ ಅವನು ಹೇಳಿದ್ದು: “ನನಗೀಗ 45 ವರ್ಷ. ನನಗೊಂದು ನಿಜ ಭವಿಷ್ಯವಿಲ್ಲ . . . ನನ್ನ ಬದುಕಿಗೆ ಅರ್ಥವೇ ಇಲ್ಲ.”

ಎಲನ್‌ ಎಂಬವಳು ಒಬ್ಬ ನಿಪುಣ ಐಸ್‌ಸ್ಕೇಟರ್‌ ಆಗಲು ತುಂಬಾ ಪರಿಶ್ರಮಪಟ್ಟಳು. ಕೊನೆಗೂ ಆಕೆ ಹೆಸರಾಂತ ಐಸ್‌ಸ್ಕೇಟರ್‌ ಎಂಬ ಕೀರ್ತಿ ಶಿಖರವನ್ನೇರಿದಳು. ತಾನು ಬಯಸಿದ ಪ್ರಸಿದ್ಧಿಯೇನೋ ಎಲನ್‌ಗೆ ದೊರಕಿತು. ಆದರೆ ಆಕೆ ವ್ಯಥೆಯಿಂದ ಹೇಳಿದ್ದು: “ನಾನು ಇಷ್ಟೆಲ್ಲ ಸಾಧಿಸಿದರೂ ಸಂತೋಷವೆಂಬುದು ಎಲ್ಲಿದೆ? ಕೇವಲ ಒಂಟಿತನದ ಕೊರಗು ನನ್ನನ್ನು ಕಾಡುತ್ತಿದೆ. ಕೊನೆಗೊಂದು ದಿನ ನಾನು ಮುದುಕಿಯಾಗುತ್ತೇನೆ. ನನಗೆ ಬೇಕಾದಷ್ಟು ಹಣವಿದ್ದರೂ, ಹಣವೇ ನನಗೆ ಸರ್ವಸ್ವವಾಗಿದ್ದರೆ ನನ್ನ ಬದುಕು ಶೂನ್ಯವಷ್ಟೇ.”

ಬಣ್ಣಗಳಲ್ಲಿ ವಿಶಿಷ್ಟ ಭಾವಮೂಡಿಸುವ ಜನಪ್ರಿಯ ಚಿತ್ರಕಾರ ಹೀಡೆಓ ಚಿತ್ರಕಲೆಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದನು. ಅವನು ತನ್ನ ಕಲಾಕೃತಿಗಳನ್ನು ಎಂದಿಗೂ ಮಾರಾಟಮಾಡಿರಲಿಲ್ಲ. ಅದು ತನ್ನ ಕಲಾಭಿಮಾನಕ್ಕೆ ಧಕ್ಕೆ ತರುವುದೆಂದು ಅವನು ಭಾವಿಸಿದನು. ಅವನ ಜೀವನದ ಅಂತಿಮ ಘಟ್ಟದಲ್ಲಿ ಅವನು ತನ್ನ ಹೆಚ್ಚಿನ ಕಲಾಕೃತಿಗಳನ್ನು ಒಂದು ಮ್ಯೂಸಿಯಮ್‌ಗೆ ಕೊಡುಗೆಯಾಗಿ ನೀಡಿದನು. ಆಗ ಅವನಿಗೆ 98 ವರ್ಷವಾಗಿತ್ತು. ಹೀಡೆಓ ಕಲೆಗಾಗಿ ತನ್ನ ಜೀವನವನ್ನೇ ಸವೆಸಿದನಾದರೂ ಸಂತೃಪ್ತನಾಗಿರಲಿಲ್ಲ. ತನ್ನ ಕಲೆಯನ್ನು ಪರಿಪೂರ್ಣತೆಗೆ ತರುವುದು ತನ್ನಿಂದ ಎಂದಿಗೂ ಸಾಧ್ಯವಿಲ್ಲವೆಂಬ ಯೋಚನೆ ಅವನನ್ನು ಸದಾ ಕಾಡುತ್ತಿತ್ತು.

ಇನ್ನು ಕೆಲವು ಜನರು ಪರೋಪಕಾರ ಮಾಡುವುದರಲ್ಲೇ ನಿರತರಾಗಿರುತ್ತಾರೆ. ಉದಾಹರಣೆಗೆ, ಹಾಲಿವುಡ್‌ ಚಿತ್ರರಂಗದ ಕಾರ್ಯನಿರ್ವಾಹಕನೊಬ್ಬನನ್ನು ತೆಗೆದುಕೊಳ್ಳಿರಿ. ಅವನು ಅಮೆರಿಕಾದ ಅತಿ ದೊಡ್ಡ ಚಿತ್ರ ನಿರ್ಮಾಣ ಕಂಪನಿಯ ಉಪಾಧ್ಯಕ್ಷನಾಗಿದ್ದನು. ಅವನು ಪ್ರಸಿದ್ಧ ಜನರೊಂದಿಗೆ ಒಡನಾಟ ಇಟ್ಟುಕೊಂಡಿದ್ದನು ಮತ್ತು ಸಿರಿವಂತರ ವಸತಿ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಒಮ್ಮೆ ಅವನು ರಜಾದಿನಗಳನ್ನು ಕಳೆಯಲಿಕ್ಕಾಗಿ ಕ್ಯಾಂಬೋಡಿಯ ದೇಶಕ್ಕೆ ಹೋದನು. ಅಲ್ಲಿನ ಪನಾಮ್‌ ಪೆನ್‌ನ ಹೋಟೆಲೊಂದರಲ್ಲಿ ಊಟಮಾಡುತ್ತಿದ್ದಾಗ ಹುಡುಗಿಯೊಬ್ಬಳು ಭಿಕ್ಷೆಬೇಡುತ್ತಾ ಅವನ ಬಳಿ ಬಂದಳು. ಅವನು ಆಕೆಗೆ ಒಂದು ಡಾಲರ್‌ ಹಣ ಮತ್ತು ಕುಡಿಯಲು ಸಾಫ್ಟ್‌ಡ್ರಿಂಕ್‌ ಕೊಟ್ಟನು. ಇದರಿಂದ ಆ ಹುಡುಗಿ ತೃಪ್ತಿಗೊಂಡಳು. ಆದರೆ, ಅವಳು ಮರುದಿನ ರಾತ್ರಿ ಮತ್ತೆ ಭಿಕ್ಷೆಬೇಡುತ್ತಾ ಅವನ ಬಳಿ ಬಂದಳು. ಒಂದು ಹೊತ್ತು ಭಿಕ್ಷೆಹಾಕುವುದಕ್ಕಿಂತ ಎಷ್ಟೋ ಹೆಚ್ಚಿನ ಸಹಾಯದ ಅಗತ್ಯವಿದೆಯೆಂದು ಆಗ ಅವನಿಗೆ ಅರ್ಥವಾಯಿತು.

ಒಂದು ವರ್ಷದ ಬಳಿಕ ಈ ಕಾರ್ಯನಿರ್ವಾಹಕನು ತನ್ನ ವೃತ್ತಿಯನ್ನು ಬದಲಾಯಿಸಲು ನಿರ್ಧರಿಸಿದನು. ಅವನು ಚಿತ್ರೋದ್ಯಮವನ್ನು ಬಿಟ್ಟು ಕ್ಯಾಂಬೋಡಿಯಾದ ಬಡ ಜನರಿಗೆ ಸಹಾಯಮಾಡಲು ಆರಂಭಿಸಿದನು. ಅದಕ್ಕಾಗಿ ವಸತಿ, ಊಟ ಮತ್ತು ವಿದ್ಯಾಭ್ಯಾಸವನ್ನು ಒದಗಿಸುವ ಶಾಲೆಯೊಂದನ್ನು ತೆರೆದನು. ಆದರೂ ಅವನು ತನ್ನಲ್ಲಿ ಸಂಘರ್ಷಿಸುತ್ತಿರುವ ಭಾವನೆಗಳೊಂದಿಗೆ ಹೋರಾಡುತ್ತಾ ಇರಬೇಕಾಯಿತು. ಒಂದು ಕಡೆ ತಾನು ಸಾಧಿಸಿದ ವಿಷಯಗಳಿಂದ ಸಂತೋಷ ಮತ್ತು ಸಂತೃಪ್ತಿ ಸಿಕ್ಕಿದರೆ ಇನ್ನೊಂದು ಕಡೆ ತಾನು ಎದುರಿಸಲೇ ಬೇಕಾದ ರಾಶಿರಾಶಿ ಸಮಸ್ಯೆಗಳಿಂದಾಗಿ ನಿರಾಶೆ ಮತ್ತು ಆಶಾಭಂಗ ಅವನನ್ನು ಕಾಡುತ್ತಿತ್ತು.

ಈ ಮೇಲೆ ತಿಳಿಸಿರುವ ನಾಲ್ಕು ವ್ಯಕ್ತಿಗಳು ಸಹ ತಮ್ಮ ಜೀವನದಲ್ಲಿ ಏನು ಸಾಧಿಸಬೇಕೆಂದು ತಮಗೆ ತಿಳಿದಿರುವುದಾಗಿ ಭಾವಿಸಿದರು. ಆದರೆ, ಪರಿಶ್ರಮಪಟ್ಟು ಕೊನೆಗೆ ಆ ಗುರಿ ತಲಪಿದ ಮೇಲೆಯೂ ಅವರು ಸಂತೋಷದಿಂದಿರಲಿಲ್ಲ. ನೀವೇನನ್ನು ಸಾಧಿಸಲಿಕ್ಕಾಗಿ ಜೀವಿಸುತ್ತಿದ್ದೀರಿ? ನಿಮ್ಮ ಜೀವನದಲ್ಲಿ ಯಾವುದಕ್ಕೆ ಪ್ರಾಧಾನ್ಯ ಕೊಡುತ್ತೀರಿ? ನಿಮ್ಮ ಈಗಿನ ಜೀವನ ರೀತಿಯಿಂದಾಗಿ ಮುಂದೆ ನೀವು ವಿಷಾದಿಸುವುದಿಲ್ಲ ಎಂಬ ಖಾತ್ರಿ ನಿಮಗಿದೆಯೋ? (w07 11/15)