ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೆಹೋವನ ಸಾಕ್ಷಿಗಳಲ್ಲದ ಸಂಬಂಧಿಕರ ಇಲ್ಲವೇ ಪರಿಚಯಸ್ಥರ ಮದುವೆಗೆ ಸಾಕ್ಷಿಯೊಬ್ಬನು ಹೋಗುವುದು ಯೋಗ್ಯವೋ?

ಮದುವೆಗಳು ಸಂತೋಷ-ಸಂಭ್ರಮದ ಸಂದರ್ಭಗಳಾಗಿರುವುದರಿಂದ ಕ್ರೈಸ್ತನೊಬ್ಬನು ಆ ಆನಂದದಲ್ಲಿ ಪಾಲ್ಗೊಳ್ಳಲು ಇಷ್ಟಪಡುವುದು ಒಪ್ಪತಕ್ಕದ್ದೇ. ಚಿಕ್ಕವರ ವಿಷಯದಲ್ಲಿ ನೋಡುವುದಾದರೆ, ಅಂತಿಮ ನಿರ್ಣಯ ತೆಗೆದುಕೊಳ್ಳುವ ಹಕ್ಕು ಅವರ ಹೆತ್ತವರಿಗೆ ಇಲ್ಲವೇ ಪಾಲಕರಿಗೆ ಇರುವುದರಿಂದ ಚಿಕ್ಕವರು ಅವರಿಗೆ ವಿಧೇಯರಾಗಬೇಕು. (ಎಫೆಸ 6:1-3) ಆದರೆ ಯೆಹೋವನ ಸಾಕ್ಷಿಯಲ್ಲದ ಗಂಡನು, ಸಾಕ್ಷಿಯಾದ ತನ್ನ ಹೆಂಡತಿಗೆ ಚರ್ಚ್‌ನಲ್ಲಿ ನಡೆಯುವ ಒಂದು ಮದುವೆಗೆ ಬರುವಂತೆ ಹೇಳುವಲ್ಲಿ ಆಗೇನು? ಅವಳು ಆ ಮದುವೆಗೆ ಕೇವಲ ಪ್ರೇಕ್ಷಕಳಾಗಿ ಹೋಗುವಂತೆ ಅವಳ ಮನಸ್ಸಾಕ್ಷಿ ಅನುಮತಿಸಬಹುದು; ಆದರೆ ಅಲ್ಲಿನ ಯಾವುದೇ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳದೇ ಇರಲು ಅವಳು ದೃಢನಿರ್ಧಾರ ಮಾಡಿಯಾಳು.

ಒಂದು ಮದುವೆಗೆ ಹಾಜರಾಗಬೇಕೋ ಇಲ್ಲವೋ ಎಂಬುದು ಪ್ರತಿಯೊಬ್ಬರ ವೈಯಕ್ತಿಕ ನಿರ್ಣಯವಾಗಿದೆ ನಿಜ. ಆದರೆ ಸಾಕ್ಷಿಯಲ್ಲದ ವ್ಯಕ್ತಿಯ ಮದುವೆಗೆ ಹಾಜರಾಗುವ ವಿಷಯದಲ್ಲಿ ನಿರ್ಣಯ ತೆಗೆದುಕೊಳ್ಳುವಾಗ ಪ್ರತಿಯೊಬ್ಬ ಕ್ರೈಸ್ತನು ತಾನು ಯೆಹೋವನಿಗೆ ಲೆಕ್ಕ ಕೊಡಬೇಕು ಎಂಬ ಅರಿವುಳ್ಳವನಾಗಿದ್ದು, ಹಲವಾರು ಶಾಸ್ತ್ರಾಧಾರಿತ ಮೂಲತತ್ತ್ವಗಳನ್ನು ಪರಿಗಣಿಸತಕ್ಕದ್ದು.

ದೇವರ ಮೆಚ್ಚಿಕೆಯನ್ನು ಪಡೆಯಬೇಕೆಂಬುದೇ ಕ್ರೈಸ್ತನೊಬ್ಬನ ಪ್ರಧಾನ ಅಪೇಕ್ಷೆಯಾಗಿರಬೇಕು. ಯೇಸು ಹೇಳಿದ್ದು: “ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು.” (ಯೋಹಾನ 4:24) ಆದುದರಿಂದ ಯೆಹೋವನ ಸಾಕ್ಷಿಗಳು ಬೈಬಲ್‌ ಸತ್ಯಕ್ಕೆ ವಿರುದ್ಧವಾಗಿರುವ ಪ್ರಾರ್ಥನೆಗಳು ಹಾಗೂ ವಿಧಿಸಂಸ್ಕಾರಗಳಂಥ ಇತರ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ.—2 ಕೊರಿಂಥ 6:14-17.

ಕ್ರೈಸ್ತನೊಬ್ಬನು ತಾನು ಮಾಡುವ ನಿರ್ಣಯವು ಬೇರೆಯವರ ಮೇಲೂ ಪ್ರಭಾವಬೀರಬಲ್ಲದೆಂಬ ವಿಷಯವನ್ನು ಮಾನ್ಯಮಾಡುತ್ತಾನೆ. ನೀವು ಒಂದುವೇಳೆ ಮದುವೆಗೆ ಹೋಗಿ ಅಲ್ಲಿನ ಎಲ್ಲ ಆಚರಣೆಗಳಲ್ಲಿ ಪೂರ್ಣವಾಗಿ ಪಾಲ್ಗೊಳ್ಳದೆ ಇರುವುದನ್ನು ನೋಡಿ ನಿಮ್ಮ ಸಂಬಂಧಿಕರು ಕೋಪಗೊಳ್ಳುವರೋ? ಅಲ್ಲದೆ ನೀವು ಗಣನೆಗೆ ತೆಗೆದುಕೊಳ್ಳಬೇಕಾದ ಇನ್ನೊಂದು ಸಂಗತಿಯೇನೆಂದರೆ, ಅದು ಜೊತೆ ವಿಶ್ವಾಸಿಗಳ ಮೇಲೆ ಯಾವ ಪರಿಣಾಮ ಬೀರಬಹುದೆಂದೇ. (ರೋಮಾಪುರ 14:13) ಸಾಕ್ಷಿಯಲ್ಲದ ವ್ಯಕ್ತಿಯ ಮದುವೆಗೆ ಹೋಗುವುದು ತಪ್ಪಲ್ಲವೆಂದು ನಿಮಗೂ ನಿಮ್ಮ ಕುಟುಂಬ ಸದಸ್ಯರಿಗೂ ಅನಿಸಬಹುದು. ಆದರೆ ಅದು ನಿಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೋ? ಅದು ಕೆಲವರ ಮನಸ್ಸಾಕ್ಷಿಗಳನ್ನು ಘಾಸಿಗೊಳಿಸಬಹುದೋ?

ಸಾಕ್ಷಿಗಳಲ್ಲದ ಸಂಬಂಧಿಕರ ಮದುವೆ ಸಮಾರಂಭಗಳಲ್ಲಿ ನೀವು ಮುಜುಗರ ಮತ್ತು ಕಷ್ಟಕ್ಕೀಡಾಗುವ ಸಂದರ್ಭಗಳೇಳಬಹುದು. ನಿಮಗೆ ವಧೂ-ಸಖಿ ಅಥವಾ ವರ-ಸಖ ಆಗುವಂತೆ ಕೇಳಲಾಗುವಲ್ಲಿ ಏನು ಮಾಡುವಿರಿ? ಅಥವಾ ಸಾಕ್ಷಿಯಲ್ಲದ ನಿಮ್ಮ ಪತಿ ಇಲ್ಲವೇ ಪತ್ನಿ ನೀವು ಮದುವೆಯ ಎಲ್ಲ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳಬೇಕೆಂದು ಹೇಳುವಲ್ಲಿ ಆಗೇನು? ಒಬ್ಬ ನ್ಯಾಯಾಧೀಶನು ಇಲ್ಲವೇ ಸರಕಾರಿ ಅಧಿಕಾರಿ ನಡೆಸುವ ಸಿವಿಲ್‌ ಮದುವೆ ಅದಾಗಿದ್ದರೆ ಅದಕ್ಕೆ ಹಾಜರಾಗುವುದರಲ್ಲಿ ಆ ಕಾನೂನುಬದ್ಧ ಕ್ರಮಕ್ಕೆ ಸಾಕ್ಷಿಗಳಾಗಿರುವುದನ್ನು ಬಿಟ್ಟು ಬೇರೇನೂ ಮಾಡಲು ಇರಲಿಕ್ಕಿಲ್ಲ.

ಆದರೆ ಮದುವೆಯು ಒಂದು ಧಾರ್ಮಿಕ ಆರಾಧನಾ ಕಟ್ಟಡದಲ್ಲಿ ನಡೆಯುತ್ತಿರುವಲ್ಲಿ ಅಥವಾ ಅದನ್ನು ಒಬ್ಬ ಪುರೋಹಿತನು ನಡೆಸುತ್ತಿರುವಲ್ಲಿ ನಿಮಗೆ ಹೆಚ್ಚಿನ ತೊಂದರೆಗಳೇಳಬಹುದು. ನಿಮ್ಮ ಬೈಬಲ್‌-ಶಿಕ್ಷಿತ ಮನಸ್ಸಾಕ್ಷಿಯ ಮಾತನ್ನು ಪಾಲಿಸಲು ಮತ್ತು ನಿಮ್ಮ ಧಾರ್ಮಿಕ ನಿಶ್ಚಿತಾಭಿಪ್ರಾಯಗಳನ್ನು ರಾಜಿಮಾಡಿಕೊಳ್ಳದಿರಲು ಇಲ್ಲವೇ ಮದುವೆ ಮನೆಯ ಸಂಬಂಧಿಕರನ್ನು ಪೇಚಾಟಕ್ಕೀಡುಮಾಡುವ ಸನ್ನಿವೇಶವನ್ನು ತಪ್ಪಿಸಲು ನೀವು ಮದುವೆಗೆ ಹೋಗದಿರುವ ನಿರ್ಣಯಮಾಡಬಹುದು. (ಜ್ಞಾನೋಕ್ತಿ 22:3) ನಿಮಗೂ ನಿಮ್ಮ ಕುಟುಂಬಕ್ಕೂ ಹೆಚ್ಚಿನ ಮಾನಸಿಕ-ಒತ್ತಡವನ್ನು ತಪ್ಪಿಸಲಿಕ್ಕಾಗಿ ನಿಮ್ಮ ಬೈಬಲಾಧರಿತ ನಿಶ್ಚಿತಾಭಿಪ್ರಾಯಗಳನ್ನು ಅವರಿಗೆ ಮುಂಚಿತವಾಗಿಯೇ ವಿವರಿಸುತ್ತಾ, ನೀವು ಯಾವುದರಲ್ಲಿ ಎಷ್ಟರ ಮಟ್ಟಿಗೆ ಪಾಲ್ಗೊಳ್ಳುವಿರಿ ಇಲ್ಲವೇ ನೀವು ಬೇರೇನಾದರೂ ಮಾಡಬಹುದೋ ಎಂದು ತಿಳಿಸಬಹುದು.

ಎಲ್ಲ ಅಂಶಗಳನ್ನು ಜಾಗ್ರತೆಯಿಂದ ತೂಗಿನೋಡಿದ ಬಳಿಕ, ಸಾಕ್ಷಿಗಳಲ್ಲದ ವ್ಯಕ್ತಿಗಳ ಮದುವೆಗೆ ಹೋಗುವುದು ತಪ್ಪಲ್ಲವೆಂದು ಕೆಲವು ಕ್ರೈಸ್ತರು ತೀರ್ಮಾನಿಸಬಹುದು. ಆದರೆ ಅಲ್ಲಿ ಹೋದರೆ ದೇವರ ಮೂಲತತ್ತ್ವಗಳನ್ನು ರಾಜಿಮಾಡಿಕೊಳ್ಳುವ ಶೋಧನೆಗೊಳಗಾದೇನು ಎಂದು ಒಬ್ಬ ಕ್ರೈಸ್ತನಿಗೆ ಅನಿಸುವಲ್ಲಿ, ಒಳಿತಿಗಿಂತ ಹಾನಿಯೇ ಜಾಸ್ತಿ ಎಂಬ ತೀರ್ಮಾನಕ್ಕೆ ಅವನು ಬರಬಹುದು. ಮದುವೆಗೆ ಹೋಗದೆ ತದನಂತರದ ಸಮಾರಂಭಕ್ಕೆ ಒಬ್ಬ ಆಮಂತ್ರಿತ ಅತಿಥಿಯಾಗಿ ಹೋಗಲು ಅವನು ನಿರ್ಣಯಿಸುವಲ್ಲಿ ‘ಎಲ್ಲವನ್ನೂ ದೇವರ ಘನತೆಗಾಗಿ ಮಾಡುವ’ ದೃಢಸಂಕಲ್ಪ ಅವನಿಗಿರಬೇಕು. (1 ಕೊರಿಂಥ 10:31) ಅಂಥ ನಿರ್ಣಯಗಳನ್ನು ಮಾಡುವಾಗ ಪ್ರತಿಯೊಬ್ಬನು ಜವಾಬ್ದಾರಿಯ “ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾತ್ಯ 6:5) ಆದ್ದರಿಂದ ನೀವು ಯಾವುದೇ ನಿರ್ಣಯ ಮಾಡಿದರೂ ಯೆಹೋವ ದೇವರ ಮುಂದೆ ಒಂದು ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದು ಅತ್ಯಾವಶ್ಯಕವೆಂಬುದನ್ನು ನೆನಪಿನಲ್ಲಿಡಿ. (w07 11/15)