ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಷ್ಯರನ್ನಾಗಿ ಮಾಡಲು ನೆರವಾಗಬಲ್ಲ ಗುಣಗಳನ್ನು ಬೆಳೆಸಿಕೊಳ್ಳಿರಿ

ಶಿಷ್ಯರನ್ನಾಗಿ ಮಾಡಲು ನೆರವಾಗಬಲ್ಲ ಗುಣಗಳನ್ನು ಬೆಳೆಸಿಕೊಳ್ಳಿರಿ

ಶಿಷ್ಯರನ್ನಾಗಿ ಮಾಡಲು ನೆರವಾಗಬಲ್ಲ ಗುಣಗಳನ್ನು ಬೆಳೆಸಿಕೊಳ್ಳಿರಿ

“ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.”—ಮತ್ತಾಯ 28:19.

ಯೆಹೋವನ ಸೇವಕರು ಆತನ ಚಿತ್ತವನ್ನು ಮಾಡಲು ತಮಗೆ ನೆರವಾಗಬಲ್ಲ ಕೌಶಲಗಳನ್ನು ಮತ್ತು ಮನೋಭಾವಗಳನ್ನು ಕೆಲವೊಮ್ಮೆ ಬೆಳೆಸಿಕೊಳ್ಳಬೇಕಾಗಿದೆ. ದೃಷ್ಟಾಂತಕ್ಕಾಗಿ, ದೇವರಾಜ್ಞೆಯ ಮೇರೆಗೆ ಅಬ್ರಹಾಮ ಸಾರರು ಸಮೃದ್ಧವಾದ ಊರ್‌ ಪಟ್ಟಣವನ್ನು ಬಿಟ್ಟು ಹೋದಾಗ, ಡೇರೆಗಳಲ್ಲಿ ತಂಗಲಿಕ್ಕಾಗಿ ಅಗತ್ಯವಿದ್ದ ಗುಣಗಳನ್ನು ಮತ್ತು ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಯಿತು. (ಇಬ್ರಿಯ 11:8, 9, 15) ಇಸ್ರಾಯೇಲ್ಯರನ್ನು ವಾಗ್ದತ್ತ ದೇಶದೊಳಗೆ ನಡಿಸಲಿಕ್ಕಾಗಿ ಯೆಹೋಶುವನಿಗೆ ಧೈರ್ಯ, ಯೆಹೋವನಲ್ಲಿ ಭರವಸೆ ಮತ್ತು ಧರ್ಮಶಾಸ್ತ್ರದ ಜ್ಞಾನವು ಇರಬೇಕಿತ್ತು. (ಯೆಹೋಶುವ 1:7-9) ಬೆಚಲೇಲ ಮತ್ತು ಒಹೋಲಿಯಾಬ ಎಂಬ ಪುರುಷರಲ್ಲಿ ಈ ಮೊದಲೇ ಇದ್ದ ಯಾವುವೇ ಕೌಶಲಗಳು ದೇವರ ಆತ್ಮದ ಸಹಾಯದಿಂದ ಹೆಚ್ಚು ಉತ್ತಮವಾದವು ನಿಶ್ಚಯ. ಆ ಮೂಲಕ ಗುಡಾರಕಟ್ಟುವ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸವನ್ನು ಯಶಸ್ವಿಯಾಗಿ ಮಾಡುವಂತೆ ಮತ್ತು ಮೇಲ್ವಿಚಾರ ನಡೆಸುವಂತೆ ಅವರು ಶಕ್ತರಾದರು.—ವಿಮೋಚನಕಾಂಡ 31:1-11.

2 ಶತಮಾನಗಳ ನಂತರ ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಈ ಆಜ್ಞೆಯನ್ನು ಕೊಟ್ಟನು: “ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಇಂಥ ಒಂದು ಮಹತ್ತಾದ ಕೆಲಸವನ್ನು ಮಾಡುವ ಮಹಾ ಅವಕಾಶವನ್ನು ಹಿಂದೆಂದಿಗೂ ಜನರಿಗೆ ನೀಡಲಾಗಿರಲಿಲ್ಲ. ಶಿಷ್ಯರನ್ನಾಗಿ ಮಾಡುವ ಈ ಕೆಲಸಕ್ಕಾಗಿ ಯಾವ ಗುಣಗಳು ಬೇಕಾಗಿವೆ? ಅಂಥ ಗುಣಗಳನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು?

ದೇವರನ್ನು ಆಳವಾಗಿ ಪ್ರೀತಿಸಿರಿ

3 ಜನರನ್ನು ಗೋಚರಿಸಿ ಅವರೊಂದಿಗೆ ಮಾತಾಡಲು ಹಾಗೂ ಸತ್ಯ ದೇವರನ್ನು ಆರಾಧಿಸುವಂತೆ ಅವರನ್ನು ಒಡಂಬಡಿಸಲು ನಮಗೆ ದೇವರ ಮೇಲೆ ಆಳವಾದ ಪ್ರೀತಿಯು ಇರುವುದು ಆವಶ್ಯಕ. ಇಸ್ರಾಯೇಲ್ಯರು ದೇವರ ಆಜ್ಞೆಗಳಿಗೆ ಪೂರ್ಣಹೃದಯದಿಂದ ವಿಧೇಯರಾಗುವ ಮೂಲಕ, ಸ್ವೀಕಾರಯೋಗ್ಯವಾದ ಯಜ್ಞಗಳನ್ನು ಅರ್ಪಿಸುವ ಮೂಲಕ ಮತ್ತು ಗೀತೆಗಳಿಂದ ಆತನನ್ನು ಹಾಡಿಹರಸುವ ಮೂಲಕ ದೇವರಲ್ಲಿ ತಮಗಿದ್ದ ಪ್ರೀತಿಯನ್ನು ರುಜುಪಡಿಸಸಾಧ್ಯವಿತ್ತು. (ಧರ್ಮೋಪದೇಶಕಾಂಡ 10:12, 13; 30:19, 20; ಕೀರ್ತನೆ 21:13; 96:1, 2; 138:5) ಶಿಷ್ಯರನ್ನಾಗಿ ಮಾಡುವವರಾದ ನಾವು ಸಹ ದೇವರ ನಿಯಮವನ್ನು ಪಾಲಿಸುತ್ತೇವೆ ಮಾತ್ರವಲ್ಲ ದೇವರ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ಇತರರಿಗೆ ತಿಳಿಸುವ ಮೂಲಕ ಯೆಹೋವನ ಮೇಲಿರುವ ಪ್ರೀತಿಯನ್ನು ಸಹ ವ್ಯಕ್ತಪಡಿಸುತ್ತೇವೆ. ನಮ್ಮ ದೇವದತ್ತ ನಿರೀಕ್ಷೆಯ ಕುರಿತು ಜನರಿಗೆ ಮನಃಪೂರ್ವಕವಾಗಿ ತಿಳಿಸಲು ಯೋಗ್ಯವಾದ ಮಾತುಗಳನ್ನು ಆಯ್ದುಕೊಳ್ಳುತ್ತಾ ಬಹು ನಿಶ್ಚಯದಿಂದ ನಾವು ಮಾತಾಡಬೇಕಾದ ಅಗತ್ಯವಿದೆ.—1 ಥೆಸಲೊನೀಕ 1:5; 1 ಪೇತ್ರ 3:15.

4 ಯೇಸುವಿಗೆ ಯೆಹೋವನಲ್ಲಿ ಆಳವಾದ ಪ್ರೀತಿ ಇದ್ದ ಕಾರಣ ದೇವರ ಉದ್ದೇಶಗಳ ಕುರಿತು, ಆತನ ರಾಜ್ಯದ ಕುರಿತು ಮತ್ತು ಸತ್ಯಾರಾಧನೆಯ ಕುರಿತು ಮಾತಾಡುವುದರಲ್ಲಿ ಯೇಸು ಮಹಾ ಸಂತೋಷವನ್ನು ಕಂಡುಕೊಂಡನು. (ಲೂಕ 8:1; ಯೋಹಾನ 4:23, 24, 31) ವಾಸ್ತವದಲ್ಲಿ ಯೇಸುವಂದದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:34) ಕೀರ್ತನೆಗಾರನು ಹೇಳಿದ ಈ ಮುಂದಿನ ಮಾತುಗಳು ಯೇಸುವಿಗೆ ಅನ್ವಯಿಸುತ್ತವೆ: ‘ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ. ನೀನು ನೀತಿಯನ್ನು ಸಾಧಿಸಿದ ಶುಭಸಮಾಚಾರವನ್ನು ಧಾರಾಳವಾಗಿ ಮಹಾಸಭೆಯಲ್ಲಿ ಪ್ರಕಟಿಸಿದೆನು; ಯೆಹೋವನೇ, ನೀನೇ ಬಲ್ಲೆ.’—ಕೀರ್ತನೆ 40:8, 9; ಇಬ್ರಿಯ 10:7-10.

5 ಇತ್ತೀಚೆಗೆ ಸತ್ಯವನ್ನು ಕಲಿತಿರುವ ಹೊಸಬರು ದೇವರಲ್ಲಿಟ್ಟ ಪ್ರೀತಿಯಿಂದ ಪ್ರೇರಿತರಾಗಿ ಕೆಲವೊಮ್ಮೆ ಯೆಹೋವನ ಮತ್ತು ಆತನ ರಾಜ್ಯದ ಕುರಿತು ಎಷ್ಟೊಂದು ನಿಶ್ಚಿತಾಭಿಪ್ರಾಯದಿಂದ ಮಾತಾಡುತ್ತಾರೆಂದರೆ, ಶಾಸ್ತ್ರಗ್ರಂಥವನ್ನು ಪರೀಕ್ಷಿಸುವಂತೆ ಇತರರನ್ನು ಒಡಂಬಡಿಸುವುದರಲ್ಲಿ ಅವರು ತುಂಬ ಪರಿಣಾಮಕಾರಿ ಆಗಿದ್ದಾರೆ. (ಯೋಹಾನ 1:41) ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಭಾಗವಹಿಸಲು ನಮ್ಮನ್ನು ಪ್ರೇರೇಪಿಸುವ ಮುಖ್ಯ ಗುಣವು ಯಾವುದೆಂದರೆ ದೇವರಲ್ಲಿ ನಮಗಿರುವ ಪ್ರೀತಿಯೇ. ಆದುದರಿಂದ ಆತನ ವಾಕ್ಯವನ್ನು ಕ್ರಮವಾಗಿ ಓದುವ ಮತ್ತು ಧ್ಯಾನಿಸುವ ಮೂಲಕ ನಾವು ಆ ಪ್ರೀತಿಯನ್ನು ಜೀವಂತವಾಗಿ ಇರಿಸೋಣ.—1 ತಿಮೊಥೆಯ 4:6, 15; ಪ್ರಕಟಣೆ 2:4.

6 ಯೇಸು ಕ್ರಿಸ್ತನನ್ನು ಒಬ್ಬ ಉತ್ಸಾಹಿ ಬೋಧಕನನ್ನಾಗಿ ಮಾಡಲು ಸಹಾಯಮಾಡಿದ್ದು ಯೆಹೋವನಲ್ಲಿ ಅವನಿಗಿದ್ದ ಪ್ರೀತಿಯೇ ಎಂಬದು ಖಂಡಿತ. ಆದರೆ ರಾಜ್ಯದ ಘೋಷಕನಾದ ಅವನ ಸಾಫಲ್ಯಕ್ಕೆ ಅದು ಒಂದೇ ಕಾರಣವಲ್ಲ. ಹಾಗಾದರೆ ಶಿಷ್ಯರನ್ನಾಗಿ ಮಾಡುವುದರಲ್ಲಿ ಯೇಸುವನ್ನು ಯಶಸ್ವಿಯನ್ನಾಗಿ ಮಾಡಿದ ಇನ್ನೊಂದು ಗುಣವು ಯಾವುದು?

ಜನರ ಕಡೆಗೆ ಪ್ರೀತಿಯ ಚಿಂತನೆ ತೋರಿಸಿರಿ

7 ಯೇಸು ಜನರ ಕುರಿತು ಚಿಂತಿಸಿದನು ಮತ್ತು ಅವರಲ್ಲಿ ತೀವ್ರಾಸಕ್ತಿಯನ್ನು ತೋರಿಸಿದನು. ದೇವರ ಕುಶಲ “ಶಿಲ್ಪಿ”ಯಾಗಿದ್ದ ತನ್ನ ಮಾನವ ಪೂರ್ವ ಅಸ್ತಿತ್ವದಲ್ಲೂ, ಮನುಷ್ಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವನು ಹರ್ಷಿಸಿದ್ದನು. (ಜ್ಞಾನೋಕ್ತಿ 8:30, 31) ಯೇಸು ಭೂಮಿಯಲ್ಲಿ ಮನುಷ್ಯನಾಗಿದ್ದಾಗ ತನ್ನ ಬಳಿಗೆ ಬಂದ ಜನರಿಗೆ ಚೈತನ್ಯವನ್ನು ನೀಡುತ್ತಾ ಅವರಿಗೆ ಕನಿಕರ ತೋರಿಸಿದನು. (ಮತ್ತಾಯ 11:28-30) ಯೆಹೋವನ ಸ್ವಂತ ಪ್ರೀತಿ ಮತ್ತು ಕನಿಕರವನ್ನು ಯೇಸು ಪ್ರತಿಫಲಿಸಿದನು, ಮತ್ತು ಇದು ಒಬ್ಬನೇ ಸತ್ಯ ದೇವರ ಆರಾಧನೆಗೆ ಜನರನ್ನು ಆಕರ್ಷಿಸಿತು. ಎಲ್ಲಾ ವಿಧದ ಜನರು ಯೇಸುವಿಗೆ ಕಿವಿಗೊಟ್ಟರು ಯಾಕೆಂದರೆ ಅವನು ಅವರಿಗಾಗಿ ಮತ್ತು ಅವರ ಪರಿಸ್ಥಿತಿಗಳಿಗಾಗಿ ಚಿಂತೆ ತೋರಿಸಿದನು.—ಲೂಕ 7:36-50; 18:15-17; 19:1-10.

8 ನಿತ್ಯಜೀವಕ್ಕೆ ಬಾಧ್ಯನಾಗಬೇಕಾದರೆ ಏನು ಮಾಡಬೇಕೆಂದು ಒಬ್ಬ ಮನುಷ್ಯನು ಯೇಸುವನ್ನು ಕೇಳಲಾಗಿ “ಯೇಸು ಅವನನ್ನು ದೃಷ್ಟಿಸಿನೋಡಿ ಪ್ರೀತಿಸಿ”ದನು ಎಂದು ಬೈಬಲು ಹೇಳುತ್ತದೆ. (ಮಾರ್ಕ 10:17-21) ಬೇಥಾನ್ಯದಲ್ಲಿ ಯೇಸುವಿನಿಂದ ಕಲಿಸಲ್ಪಟ್ಟ ಕೆಲವು ವ್ಯಕ್ತಿಗಳ ಕುರಿತು ನಾವು ಓದುವುದು: “ಮಾರ್ಥಳಲ್ಲಿಯೂ ಆಕೆಯ ತಂಗಿಯಲ್ಲಿಯೂ ಲಾಜರನಲ್ಲಿಯೂ ಯೇಸುವಿಗೆ ಪ್ರೀತಿ ಇತ್ತು.” (ಯೋಹಾನ 11:1, 5) ಯೇಸು ಜನರ ಕುರಿತು ಎಷ್ಟು ಆಳವಾಗಿ ಚಿಂತಿಸಿದ್ದನೆಂದರೆ ತನ್ನ ದಣಿವನ್ನು ಕೂಡ ಲಕ್ಷಿಸದೆ ಅವರಿಗೆ ಉಪದೇಶಮಾಡಿದನು. (ಮಾರ್ಕ 6:30-34) ಸತ್ಯಾರಾಧನೆಗೆ ಜನರನ್ನು ಆಕರ್ಷಿಸುವುದರಲ್ಲಿ ಯೇಸುವನ್ನು ಬೇರೆ ಯಾರಿಗಿಂತಲೂ ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡಿದ್ದು ಜೊತೆ ಮಾನವರಲ್ಲಿ ಅವನಿಗಿದ್ದ ಆಳವಾದ ಮತ್ತು ಪ್ರೀತಿಯುತ ಪರಿಗಣನೆಯೇ.

9 ಅಪೊಸ್ತಲ ಪೌಲನು ಸಹ ತಾನು ಸಾರಿದ್ದ ಜನರ ಕಡೆಗೆ ಆಳವಾದ ಚಿಂತೆಯನ್ನು ತೋರಿಸಿದ್ದನು. ಉದಾಹರಣೆಗೆ, ಥೆಸಲೊನೀಕದಲ್ಲಿ ಕ್ರೈಸ್ತರಾಗಿದ್ದವರಿಗೆ ಅವನಂದದ್ದು: “ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು.” ಪೌಲನ ಪ್ರೀತಿಯ ಪ್ರಯತ್ನಗಳ ಫಲಿತಾಂಶವಾಗಿ ಥೆಸಲೊನೀಕದಲ್ಲಿದ್ದ ಕೆಲವರು ‘ವಿಗ್ರಹಗಳನ್ನು ಬಿಟ್ಟುಬಿಟ್ಟು ಜೀವವುಳ್ಳ ದೇವರ ಕಡೆಗೆ ತಿರುಗಿಕೊಂಡರು.’ (1 ಥೆಸಲೊನೀಕ 1:9; 2:8) ಯೇಸು ಮತ್ತು ಪೌಲರಂತೆ ನಮಗೆ ಜನರ ಕಡೆಗೆ ನಿಜವಾದ ಚಿಂತೆ ಇರುವಲ್ಲಿ, “ನಿತ್ಯಜೀವಕ್ಕೆ ನೇಮಿಸಲ್ಪಟ್ಟವರೆಲ್ಲರ” ಹೃದಯಕ್ಕೆ ಸುವಾರ್ತೆಯು ಮುಟ್ಟುವುದನ್ನು ಕಾಣುವ ಸಂತೋಷ ನಮಗೂ ಇರಬಲ್ಲದು.—ಅ. ಕೃತ್ಯಗಳು 13:48.

ಸ್ವತ್ಯಾಗದ ಆತ್ಮವನ್ನು ತೋರಿಸಿರಿ

10 ಪರಿಣಾಮಕಾರಿ ಶಿಷ್ಯ-ರಚಕರಲ್ಲಿ ಸ್ವತ್ಯಾಗದ ಆತ್ಮವಿದೆ. ಧನಸಂಪತ್ತನ್ನು ಗಳಿಸುವುದೇ ಅತಿ ಮಹತ್ವದೆಂದು ಅವರು ವೀಕ್ಷಿಸುವುದಿಲ್ಲ ನಿಶ್ಚಯ. ವಾಸ್ತವದಲ್ಲಿ ಯೇಸು ತನ್ನ ಶಿಷ್ಯರಿಗೆ “ಧನವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ” ಎಂದು ಹೇಳಿದನು. ಶಿಷ್ಯರು ಇದನ್ನು ಕೇಳಿ ಬೆರಗಾದರು, ಆದರೆ ಅವನು ತಿರಿಗಿ ಅವರಿಗೆ ಹೇಳಿದ್ದು: “ಮಕ್ಕಳಿರಾ, ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ. ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜೀಕಣ್ಣಿನಲ್ಲಿ ನುಗ್ಗಿಹೋಗುವದು ಸುಲಭ.” (ಮಾರ್ಕ 10:23-25) ಶಿಷ್ಯರನ್ನಾಗಿ ಮಾಡುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಯೇಸು ತನ್ನ ಶಿಷ್ಯರಿಗೆ ಒಂದು ನೆಟ್ಟಗಿನ ಸರಳ ಜೀವನ ರೀತಿಯನ್ನು ಶಿಫಾರಸ್ಸು ಮಾಡಿದನು. (ಮತ್ತಾಯ 6:22-24, 33) ಸ್ವತ್ಯಾಗದ ಆತ್ಮವು ಶಿಷ್ಯರನ್ನಾಗಿ ಮಾಡುವುದಕ್ಕೆ ನಮಗೆ ಸಹಾಯಮಾಡುತ್ತದೆ ಏಕೆ?

11 ಯೇಸು ಆಜ್ಞಾಪಿಸಿದ್ದನ್ನೆಲ್ಲಾ ಕಲಿಸುವುದಕ್ಕೆ ಬಹಳಷ್ಟು ಪ್ರಯತ್ನದ ಅಗತ್ಯವಿದೆ. ಶಿಷ್ಯರನ್ನಾಗಿ ಮಾಡಲು ಬಯಸುವ ಕ್ರೈಸ್ತನು ಒಬ್ಬ ಆಸಕ್ತ ವ್ಯಕ್ತಿಯೊಂದಿಗೆ ಪ್ರತಿವಾರ ಬೈಬಲಧ್ಯಯನವನ್ನು ನಡೆಸಲು ಶ್ರಮಿಸುತ್ತಾನೆ. ಕೆಲವು ರಾಜ್ಯ ಘೋಷಕರು ಪ್ರಾಮಾಣಿಕ ಜನರನ್ನು ಕಂಡುಕೊಳ್ಳುವ ಸಂದರ್ಭಗಳನ್ನು ಹೆಚ್ಚಿಸಲು ತಮ್ಮ ಪೂರ್ಣಸಮಯದ ಉದ್ಯೋಗವನ್ನು ಅಂಶಕಾಲಿಕಕ್ಕೆ ಬದಲಾಯಿಸಿದ್ದಾರೆ. ಇತರ ಸಾವಿರಾರು ಮಂದಿ ಕ್ರೈಸ್ತರು ತಮ್ಮ ಕ್ಷೇತ್ರದ ಇತರ ಭಾಷೆಯ ಜನರನ್ನು ಸಂಪರ್ಕಿಸಲಿಕ್ಕಾಗಿ ಇನ್ನೊಂದು ಹೊಸ ಭಾಷೆಯನ್ನು ಕಲಿತಿದ್ದಾರೆ. ಶಿಷ್ಯ-ರಚಕರಾದ ಇತರರು ಕೊಯ್ಲಿನ ಕೆಲಸದಲ್ಲಿ ಪೂರ್ಣವಾಗಿ ಭಾಗವಹಿಸಲಿಕ್ಕಾಗಿ ತಮ್ಮ ಮನೆ ಬಿಟ್ಟು ಇನ್ನೊಂದು ಕ್ಷೇತ್ರಕ್ಕೆ ಅಥವಾ ಇನ್ನೊಂದು ದೇಶಕ್ಕೆ ಹೋಗಿರುತ್ತಾರೆ. (ಮತ್ತಾಯ 9:37, 38) ಇವೆಲ್ಲವುಗಳನ್ನು ಮಾಡಲು ಸ್ವತ್ಯಾಗದ ಆತ್ಮ ಅವಶ್ಯ. ಆದರೆ ಶಿಷ್ಯ-ರಚಕರಾಗಿರುವುದರಲ್ಲಿ ಒಬ್ಬನು ಪರಿಣಾಮಕಾರಿಯಾಗಲು ಇನ್ನೂ ಹೆಚ್ಚಿನದ್ದು ಬೇಕು.

ಕಾಲ ವ್ಯರ್ಥಮಾಡದೆ ತಾಳ್ಮೆಯಿಂದಿರಿ

12 ಶಿಷ್ಯರನ್ನಾಗಿ ಮಾಡಲು ನಮಗೆ ಸಹಾಯಕರವಾದ ಇನ್ನೊಂದು ಗುಣವು ತಾಳ್ಮೆಯೇ. ನಮ್ಮ ಕ್ರೈಸ್ತ ಸಂದೇಶವು ತುರ್ತು ಕ್ರಿಯೆಯನ್ನು ಕೇಳಿಕೊಳ್ಳುತ್ತದಾದರೂ, ಶಿಷ್ಯರನ್ನಾಗಿ ಮಾಡುವುದಕ್ಕೆ ಬಹಳಷ್ಟು ಸಮಯ ಬೇಕು ಮತ್ತು ತಾಳ್ಮೆಯೂ ಆವಶ್ಯಕ. (1 ಕೊರಿಂಥ 7:29) ತನ್ನ ಮಲತಮ್ಮನಾದ ಯಾಕೋಬನು ಬೇಗನೆ ಶಿಷ್ಯನಾಗದೆ ಇದ್ದದಕ್ಕಾಗಿ ಯೇಸು ತಾಳ್ಮೆಗೆಡಲಿಲ್ಲ. ಯೇಸುವಿನ ಸಾರುವ ಚಟುವಟಿಕೆಯ ಬಗ್ಗೆ ಯಾಕೋಬನು ಚಿರಪರಿಚಿತನಾಗಿದ್ದನೆಂದು ತೋರಿದರೂ ಯಾವುದೋ ವಿಷಯವು ಒಂದು ಕಾಲಾವಧಿಯ ತನಕ ಅವನನ್ನು ಶಿಷ್ಯನಾಗುವುದರಿಂದ ತಡೆದಿತ್ತು. (ಯೋಹಾನ 7:5) ಆದರೂ ಕ್ರಿಸ್ತನ ಮರಣ ಮತ್ತು ಸಾ.ಶ. 33ರ ಪಂಚಾಶತ್ತಮದ ನಡುವಣ ಅಲ್ಪಾವಧಿಯಲ್ಲಿ ಯಾಕೋಬನು ಆತನ ಶಿಷ್ಯನಾದನೆಂದು ತಿಳಿದುಬರುತ್ತದೆ ಯಾಕಂದರೆ ಅವನು ತನ್ನ ತಾಯಿ, ತಮ್ಮಂದಿರು ಮತ್ತು ಅಪೊಸ್ತಲರೊಂದಿಗೆ ಪ್ರಾರ್ಥನೆಗಾಗಿ ಕೂಡಿಬಂದಿದ್ದನೆಂದು ಶಾಸ್ತ್ರಗ್ರಂಥವು ಸೂಚಿಸುತ್ತದೆ. (ಅ. ಕೃತ್ಯಗಳು 1:13, 14) ತದನಂತರ ಯಾಕೋಬನು ಉತ್ತಮ ಆಧ್ಯಾತ್ಮಿಕ ಪ್ರಗತಿ ಮಾಡುತ್ತಾ ಕ್ರೈಸ್ತ ಸಭೆಯಲ್ಲಿ ಭಾರವಾದ ಜವಾಬ್ದಾರಿಗಳನ್ನು ವಹಿಸಿದನು.—ಅ. ಕೃತ್ಯಗಳು 15:13; 1 ಕೊರಿಂಥ 15:7.

13 ವ್ಯವಸಾಯಗಾರರಂತೆ, ಕ್ರೈಸ್ತರು ಹೆಚ್ಚಾಗಿ ನಿಧಾನವಾಗಿ ಬೆಳೆಯುವಂಥವುಗಳನ್ನು ಕೃಷಿಮಾಡುತ್ತಾರೆ. ಹೇಗಂದರೆ ದೇವರ ವಾಕ್ಯದ ತಿಳಿವಳಿಕೆ, ಯೆಹೋವನಲ್ಲಿ ಪ್ರೀತಿ ಮತ್ತು ಕ್ರಿಸ್ತಸದೃಶ ಆತ್ಮವನ್ನು ಬೆಳೆಸುವುದು ನಿಧಾನಗತಿಯ ಕೆಲಸವಾಗಿರಲಾಗಿ ಅದಕ್ಕೆ ತಾಳ್ಮೆಬೇಕು. ಯಾಕೋಬನು ಬರೆದದ್ದು: “ಸಹೋದರರೇ, ಕರ್ತನು ಪ್ರತ್ಯಕ್ಷನಾಗುವ ತನಕ ದೀರ್ಘಶಾಂತಿ [“ತಾಳ್ಮೆ” NW]ಯಿಂದಿರಿ. ವ್ಯವಸಾಯಗಾರನನ್ನು ನೋಡಿರಿ; ಅವನು ಭೂಮಿಯ ಬೆಲೆಯುಳ್ಳ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು. ನೀವೂ ದೀರ್ಘಶಾಂತಿಯಿಂದಿರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಕರ್ತನ ಪ್ರತ್ಯಕ್ಷತೆಯು ಹತ್ತಿರವಾಯಿತು.” (ಯಾಕೋಬ 5:7, 8) ‘ಕರ್ತನ ಪ್ರತ್ಯಕ್ಷತೆಯ ತನಕ ತಾಳ್ಮೆಯಿಂದಿರುವಂತೆ’ ಯಾಕೋಬನು ಜೊತೆ ವಿಶ್ವಾಸಿಗಳನ್ನು ಪ್ರೇರೇಪಿಸುತ್ತಿದ್ದನು. ಶಿಷ್ಯರಿಗೆ ಯಾವುದಾದರೊಂದು ವಿಷಯವು ತಿಳಿಯದಿದ್ದಾಗ ಯೇಸು ತಾಳ್ಮೆಯಿಂದ ವಿವರಿಸಿದನು ಇಲ್ಲವೇ ದೃಷ್ಟಾಂತಿಸಿ ಹೇಳಿದನು. (ಮತ್ತಾಯ 13:10-23; ಲೂಕ 19:11; 21:7; ಅ. ಕೃತ್ಯಗಳು 1:6-8) ಕರ್ತನು ಈಗ ಪ್ರತ್ಯಕ್ಷನಾಗಿ ಇರುವುದರಿಂದ ಶಿಷ್ಯರನ್ನಾಗಿ ಮಾಡುವ ನಮ್ಮ ಪ್ರಯತ್ನದಲ್ಲಿ ತಾಳ್ಮೆ ತೋರಿಸುವ ತದ್ರೀತಿಯ ಅಗತ್ಯವಿದೆ. ನಮ್ಮ ದಿನಗಳಲ್ಲಿ ಕ್ರಿಸ್ತನ ಹಿಂಬಾಲಕರಾಗುವವರಿಗೆ ತಾಳ್ಮೆಯಿಂದ ಕೂಡಿದ ಉಪದೇಶವು ಆವಶ್ಯಕ.—ಯೋಹಾನ 14:9.

14 ನಾವು ತಾಳ್ಮೆಯಿಂದ ಇದ್ದರು ಕೂಡ, ಬೈಬಲಧ್ಯಯನ ಆರಂಭಿಸುವ ಹೆಚ್ಚಿನವರಲ್ಲಿ ವಾಕ್ಯವೆಂಬ ಬೀಜವು ಫಲ ಫಲಿಸುವುದಿಲ್ಲ. (ಮತ್ತಾಯ 13:18-23) ಆದುದರಿಂದ ಅವರಿಗೆ ನೆರವಾಗಲು ನ್ಯಾಯೋಚಿತ ಪ್ರಯತ್ನಗಳನ್ನು ಮಾಡಿಯಾದ ಮೇಲೆ, ಅಂಥ ವ್ಯಕ್ತಿಗಳೊಂದಿಗೆ ಸಮಯ ಕಳೆಯುವುದನ್ನು ನಿಲ್ಲಿಸಿ ಬೈಬಲ್‌ ಸತ್ಯವನ್ನು ಹೆಚ್ಚು ಮಾನ್ಯಮಾಡಬಹುದಾದ ಜನರಿಗಾಗಿ ಹುಡುಕುವುದು ವಿವೇಕಪ್ರದ. (ಪ್ರಸಂಗಿ 3:1, 6) ಬೈಬಲ್‌ ಸತ್ಯವನ್ನು ಗಣ್ಯಮಾಡುವವರಿಗೆ ಸಹ ತಮ್ಮ ದೃಷ್ಟಿಕೋನ, ಮನೋಭಾವ ಮತ್ತು ಜೀವನದ ಆದ್ಯತೆಗಳನ್ನು ಬದಲಾಯಿಸಲು ಹೆಚ್ಚು ವ್ಯಾಪಕವಾದ ಸಹಾಯವು ಬೇಕಾದೀತು ನಿಶ್ಚಯ. ಆದುದರಿಂದ ಒಂದು ಯೋಗ್ಯ ಮನೋಭಾವವನ್ನು ಬೆಳೆಸಿಕೊಳ್ಳಲು ಕಷ್ಟಪಡುತ್ತಿದ್ದ ತನ್ನ ಶಿಷ್ಯರೊಂದಿಗೆ ಯೇಸು ತಾಳ್ಮೆಯಿಂದ ಇದ್ದಂತೆ ನಾವೂ ತಾಳ್ಮೆತೋರಿಸುತ್ತೇವೆ.—ಮಾರ್ಕ 9:33-37; 10:35-45.

ಬೋಧಿಸುವ ಕಲೆಯನ್ನು ಬೆಳೆಸಿಕೊಳ್ಳಿ

15 ದೇವರಲ್ಲಿ ಪ್ರೀತಿ, ಜನರ ಕಡೆಗೆ ಚಿಂತೆ, ಸ್ವತ್ಯಾಗದ ಆತ್ಮ ಮತ್ತು ತಾಳ್ಮೆಯು ಶಿಷ್ಯರನ್ನಾಗಿ ಮಾಡುವುದರಲ್ಲಿ ಸಫಲರಾಗಲು ಪ್ರಾಮುಖ್ಯ ಅಂಶಗಳಾಗಿವೆ. ಬೋಧಿಸುವ ಕೌಶಲಗಳನ್ನು ಸಹ ಬೆಳೆಸಿಕೊಳ್ಳುವ ಅಗತ್ಯವಿದೆ ಯಾಕಂದರೆ ವಿಷಯಗಳನ್ನು ಸ್ಪಷ್ಟವಾಗಿಯೂ ಸರಳವಾಗಿಯೂ ವಿವರಿಸುವಂತೆ ಅವು ನಮ್ಮನ್ನು ಶಕ್ತರಾಗಿಸುತ್ತವೆ. ದೃಷ್ಟಾಂತಕ್ಕಾಗಿ, ಮಹಾ ಬೋಧಕನಾದ ಯೇಸು ಕ್ರಿಸ್ತನ ಅನೇಕ ಹೇಳಿಕೆಗಳು ಅತಿ ಪರಿಣಾಮಕಾರಿಯಾದದ್ದು ಅವುಗಳ ಸರಳತೆಯ ಕಾರಣದಿಂದಲೇ. ಯೇಸುವಿನ ಅಂಥ ಸರಳವಾದ ಈ ಹೇಳಿಕೆಗಳು ನಿಮಗೆ ನೆನಪಿರಬಹುದು: “ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ.” “ದೇವರ ವಸ್ತುವನ್ನು ನಾಯಿಗಳಿಗೆ ಹಾಕಬೇಡಿರಿ.” “ಜ್ಞಾನವು ತನ್ನ ಕೆಲಸಗಳಿಂದ ಜ್ಞಾನವೇ ಎಂದು ಗೊತ್ತಾಗುವದು.” “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.” (ಮತ್ತಾಯ 6:20; 7:6; 11:19; 22:21) ಯೇಸು ಕೇವಲ ಚಿಕ್ಕ ಚಿಕ್ಕ ಹೇಳಿಕೆಗಳನ್ನು ಮಾತ್ರವೇ ಕೊಡಲಿಲ್ಲ ನಿಶ್ಚಯ. ವಿಷಯಗಳನ್ನು ವಿವರಿಸುವುದು ಸೂಕ್ತವಾಗಿದ್ದಲ್ಲಿ ಅವನ್ನು ಸ್ಪಷ್ಟವಾಗಿಯೂ ಸರಳವಾಗಿಯೂ ವಿವರಿಸಿ ಹೇಳಿದನು. ಯೇಸುವಿನ ಈ ಬೋಧನಾ ಶೈಲಿಯನ್ನು ನೀವು ಹೇಗೆ ಅನುಕರಿಸಬಹುದು?

16 ಸರಳತೆ ಮತ್ತು ಸ್ಪಷ್ಟತೆಯಿಂದ ಬೋಧಿಸಲಿಕ್ಕಾಗಿ ಪ್ರಧಾನ ಕೀಲಿಕೈಯು ಜಾಗರೂಕತೆಯ ತಯಾರಿಯೇ. ತಯಾರಿಮಾಡದ ಪ್ರಚಾರಕನು ಮಾತಾಳಿಯಾಗುತ್ತಾನೆ. ಅವನು ವಿಷಯದ ಕುರಿತು ತನಗೆ ತಿಳಿದಿರುವುದೆಲ್ಲವನ್ನೂ ಹೇಳಿಬಿಡುತ್ತಾನೆ. ಅತಿಯಾಗಿ ಮಾತಾಡುವ ಮೂಲಕ ಮುಖ್ಯವಿಷಯಗಳನ್ನು ಅಸ್ಪಷ್ಟಗೊಳಿಸುತ್ತಾನೆ. ಇದಕ್ಕೆ ಪ್ರತಿಹೋಲಿಕೆಯಲ್ಲಿ, ಚೆನ್ನಾಗಿ ತಯಾರಿಸಿದ ಶುಶ್ರೂಷಕನಾದರೋ ತಾನು ಬೋಧಿಸುತ್ತಿರುವ ವ್ಯಕ್ತಿಯ ಕುರಿತು ಯೋಚಿಸುತ್ತಾನೆ, ಕಲಿಸುತ್ತಿರುವ ವಿಷಯದ ಕುರಿತು ಧ್ಯಾನಿಸುತ್ತಾನೆ ಮತ್ತು ಬೇಕಾದಷ್ಟೇ ವಿಷಯವನ್ನು ವಿವೇಚಿಸಿ ಸ್ಪಷ್ಟವಾಗಿ ಸಾದರಪಡಿಸುತ್ತಾನೆ. (ಜ್ಞಾನೋಕ್ತಿ 15:28; 1 ಕೊರಿಂಥ 2:1, 2) ವಿದ್ಯಾರ್ಥಿಯು ಈವಾಗಲೇ ಎಷ್ಟನ್ನು ತಿಳಿದಿದ್ದಾನೆ ಮತ್ತು ಅಧ್ಯಯನದ ಸಮಯದಲ್ಲಿ ಯಾವ ಅಂಶಗಳನ್ನು ಒತ್ತಿಹೇಳಬೇಕು ಎಂಬುದನ್ನು ಅವನು ಮನಸ್ಸಿನಲ್ಲಿಡುತ್ತಾನೆ. ಶುಶ್ರೂಷಕನಿಗೆ ವಿಷಯದ ಕುರಿತು ಅನೇಕ ಆಸಕ್ತಿಕರ ಅಂಶಗಳು ತಿಳಿದಿರಬಹುದು. ಆದರೆ ಅನಗತ್ಯ ಮಾಹಿತಿಯನ್ನು ಸೇರಿಸದೇ ಇರುವುದರಿಂದ ವಿಷಯದ ಸ್ಪಷ್ಟತೆ ಸಿಗುತ್ತದೆ.

17 ಯೇಸು ಜನರಿಗೆ ಕಲಿಸುವಾಗ ನಿಜತ್ವಗಳನ್ನು ಕೇವಲ ತಿಳಿಸಿಬಿಡುವ ಬದಲಾಗಿ ವಿವೇಚಿಸಲು ಸಹ ಸಹಾಯಮಾಡಿದನು. ಉದಾಹರಣೆಗೆ, ಒಂದು ಸಂದರ್ಭದಲ್ಲಿ ಅವನು ಕೇಳಿದ್ದು: “ಸೀಮೋನಾ, ನಿನಗೆ ಹೇಗೆ ತೋರುತ್ತದೆ? ಭೂಲೋಕದ ಅರಸರು ಸುಂಕವನ್ನಾಗಲಿ ಮಂಡೇತೆರಿಗೆಯನ್ನಾಗಲಿ ಯಾರಿಂದ ತೆಗೆದುಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ ಬೇರೆಯವರಿಂದಲೋ?” (ಮತ್ತಾಯ 17:25) ಮನೆ ಬೈಬಲ್‌ ಅಧ್ಯಯನದಲ್ಲಿ ಸತ್ಯವನ್ನು ವಿವರಿಸುವಾಗ ಕೆಲವೊಮ್ಮೆ ನಾವೆಷ್ಟು ತಲ್ಲೀನರಾಗಬಹುದೆಂದರೆ ವಿದ್ಯಾರ್ಥಿಯು ತನ್ನನ್ನು ವ್ಯಕ್ತಪಡಿಸಿಕೊಳ್ಳುವಂತೆ ಅಥವಾ ವಿಷಯವನ್ನು ವಿವರಿಸುವಂತೆ ಅವಕಾಶ ಕೊಡಲು ನಮಗೆ ಸ್ವನಿಯಂತ್ರಣ ಬೇಕಾಗುತ್ತದೆ. ಪ್ರಶ್ನೆಗಳ ಸುರಿಮಳೆಯಿಂದ ನಾವು ಜನರ ಬಾಯಿಮುಚ್ಚಿಸಬಾರದು. ಬದಲಿಗೆ ಜಾಣ್ಮೆ, ತಕ್ಕದಾದ ದೃಷ್ಟಾಂತಗಳು ಮತ್ತು ವಿಚಾರಪ್ರೇರಕ ಪ್ರಶ್ನೆಗಳನ್ನು ಬಳಸುವುದಾದರೆ, ನಮ್ಮ ಬೈಬಲ್‌ ಸಾಹಿತ್ಯಗಳಲ್ಲಿ ನೀಡಲಾದ ಶಾಸ್ತ್ರಾಧಾರಿತ ಅಂಶಗಳನ್ನು ಅವರು ತಿಳಿದುಕೊಳ್ಳುವಂತೆ ನೆರವಾಗಬಲ್ಲೆವು.

18 ‘ಬೋಧಿಸುವ ಕಲೆಯ’ ಕುರಿತಾಗಿಯೂ ಶಾಸ್ತ್ರಗ್ರಂಥವು ತಿಳಿಸುತ್ತದೆ. (2 ತಿಮೊಥೆಯ 4:2, NW; ತೀತ 1:9) ನಿಜತ್ವಗಳನ್ನು ಕೇವಲ ಬಾಯಿಪಾಠ ಮಾಡಲು ಒಬ್ಬನಿಗೆ ನೆರವಾಗುವುದಕ್ಕಿಂತ ಎಷ್ಟೋ ಹೆಚ್ಚಿನದ್ದು ಅಂಥ ಬೋಧನಾ ಸಾಮರ್ಥ್ಯದಲ್ಲಿ ಕೂಡಿರುತ್ತದೆ. ಸತ್ಯ ಮತ್ತು ಸುಳ್ಳು, ಒಳ್ಳೆಯದು ಮತ್ತು ಕೆಟ್ಟದು ಹಾಗೂ ವಿವೇಕ ಮತ್ತು ಅವಿವೇಕತನದ ನಡುವೆ ಇರುವ ಬೇಧವನ್ನು ತಿಳಿದುಕೊಳ್ಳಲು ಬೈಬಲ್‌ ವಿದ್ಯಾರ್ಥಿಗೆ ನಾವು ಸಹಾಯಮಾಡಲು ಪ್ರಯತ್ನಿಸಬೇಕು. ನಾವಿದನ್ನು ಮಾಡುತ್ತಾ ವ್ಯಕ್ತಿಯ ಹೃದಯದಲ್ಲಿ ಯೆಹೋವನಿಗಾಗಿ ಪ್ರೀತಿಯನ್ನು ಬೆಳೆಸಲು ಪ್ರಯತ್ನಿಸುವಾಗ, ಯೆಹೋವನಿಗೇಕೆ ವಿಧೇಯನಾಗಬೇಕು ಎಂಬುದನ್ನು ಅವನು ಅರಿತುಕೊಳ್ಳಲು ಶಕ್ತನಾಗಬಹುದು.

ಶಿಷ್ಯರನ್ನಾಗಿ ಮಾಡುವುದರಲ್ಲಿ ಹುರುಪಿನಿಂದ ಪಾಲಿಗರಾಗಿರಿ

19 ಕ್ರೈಸ್ತ ಸಭೆಯು ಶಿಷ್ಯರನ್ನಾಗಿ ಮಾಡುವ ಒಂದು ಸಂಘಟನೆಯಾಗಿದೆ. ಹೊಸಬನೊಬ್ಬನು ಶಿಷ್ಯನಾಗುವಾಗ, ಅವನನ್ನು ಮೊದಲಾಗಿ ಭೇಟಿಮಾಡಿ ಅವನಿಗೆ ಬೈಬಲನ್ನು ಬೋಧಿಸಿದ ಯೆಹೋವನ ಸಾಕ್ಷಿಯು ಮಾತ್ರವೇ ಹರ್ಷಿಸುವುದಿಲ್ಲ. ಉದಾಹರಣೆಗೆ, ಕಳೆದುಹೋದ ಮಗುವನ್ನು ಪತ್ತೆಹಚ್ಚಲು ಜನರು ಪತ್ತೆ-ತಂಡವನ್ನು ಏರ್ಪಡಿಸುವಾಗ, ತಂಡದ ಕೇವಲ ಒಬ್ಬ ಸದಸ್ಯನು ಆ ಮಗುವನ್ನು ಕಂಡುಹಿಡಿದಾನು. ಆದರೆ ಹೆತ್ತವರೊಂದಿಗೆ ಆ ಮಗುವಿನ ಪುನರ್‌-ಮಿಲನವಾಗುವಾಗ, ಆ ಪತ್ತೆಯಲ್ಲಿ ಒಳಗೂಡಿದ ಪ್ರತಿಯೊಬ್ಬರೂ ಸಂತೋಷಿಸುತ್ತಾರಲ್ಲಾ. (ಲೂಕ 15:6, 7) ತದ್ರೀತಿ, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಇಡೀ ಸಭೆಯೇ ಒಳಗೂಡಿರುತ್ತದೆ. ಯೇಸುವಿನ ಶಿಷ್ಯರಾಗಬಹುದಾದ ಜನರಿಗಾಗಿ ಹುಡುಕುವುದರಲ್ಲಿ ಕ್ರೈಸ್ತರೆಲ್ಲರು ಭಾಗವಹಿಸುತ್ತಾರೆ. ಮತ್ತು ಒಬ್ಬ ಹೊಸಬನು ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಹಾಜರಾಗಲು ಆರಂಭಿಸುವಾಗ, ಅಲ್ಲಿರುವ ಪ್ರತಿಯೊಬ್ಬ ಕ್ರೈಸ್ತನು ಸತ್ಯಾರಾಧನೆಗಾಗಿ ಆ ವ್ಯಕ್ತಿಯ ಗಣ್ಯತೆಯನ್ನು ಕಟ್ಟಲು ನೆರವಾಗುತ್ತಾನೆ. (1 ಕೊರಿಂಥ 14:24, 25) ಹೀಗೆ ಪ್ರತಿ ವರ್ಷ ಸಾವಿರಾರು ಜನರು ಹೊಸ ಶಿಷ್ಯರಾಗುವಾಗ ಎಲ್ಲಾ ಕ್ರೈಸ್ತರು ಹರ್ಷಿಸಬಲ್ಲರು.

20 ನಂಬಿಗಸ್ತ ಕ್ರೈಸ್ತರಲ್ಲಿ ಅನೇಕರು ಯೆಹೋವನ ಮತ್ತು ಸತ್ಯಾರಾಧನೆಯ ಕುರಿತಾಗಿ ಯಾರಿಗಾದರೂ ಕಲಿಸಲು ನಿಜವಾಗಿ ಸಂತೋಷಿಸುವರೆಂಬುದು ನಿಶ್ಚಯ. ಆದರೆ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದಾಗ್ಯೂ ಅದು ಅವರಿಗೆ ಶಕ್ಯವಾಗಿರಲಿಕ್ಕಿಲ್ಲ. ನಿಮ್ಮ ಪರಿಸ್ಥಿತಿಯೂ ಆ ರೀತಿ ಇರುವುದಾದರೆ ಯೆಹೋವನಿಗಾಗಿ ನಿಮ್ಮ ಪ್ರೀತಿಯನ್ನು ಬಲಪಡಿಸಿಕೊಳ್ಳುತ್ತಾ ಇರಿ, ಜನರ ಕಡೆಗೆ ಚಿಂತೆಯನ್ನು ತೋರಿಸಿರಿ, ಸ್ವತ್ಯಾಗ ಮಾಡುತ್ತಿರ್ರಿ, ತಾಳ್ಮೆಯನ್ನು ತೋರಿಸಿರಿ ಮತ್ತು ಬೋಧನಾ ಕೌಶಲಗಳನ್ನು ಉತ್ತಮಗೊಳಿಸಲು ಪ್ರಯತ್ನಿಸಿರಿ. ಎಲ್ಲದಕ್ಕಿಂತಲೂ ಹೆಚ್ಚಾಗಿ ಸತ್ಯವನ್ನು ಬೋಧಿಸುವ ನಿಮ್ಮ ಅಪೇಕ್ಷೆಯನ್ನು ದೇವರಿಗೆ ಪ್ರಾರ್ಥನೆಯಲ್ಲಿ ತಿಳಿಸಿರಿ. (ಪ್ರಸಂಗಿ 11:1) ಯೆಹೋವನ ಸೇವೆಯಲ್ಲಿ ನೀವು ಮಾಡುವ ಪ್ರತಿಯೊಂದು ವಿಷಯವು ಆತನನ್ನು ಮಹಿಮೆಪಡಿಸುವಂಥ ಆ ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ನೆರವಾಗುತ್ತದೆ ಎಂಬುದರಲ್ಲಿ ಸಾಂತ್ವನ ಪಡೆದುಕೊಳ್ಳಿರಿ. (w07 11/15)

ವಿವರಿಸಬಲ್ಲಿರೋ?

• ಶಿಷ್ಯರನ್ನಾಗಿ ಮಾಡುವುದು ದೇವರಲ್ಲಿ ನಮಗಿರುವ ಪ್ರೀತಿಯನ್ನು ಪರೀಕ್ಷಿಸುತ್ತದೆ ಏಕೆ?

• ಶಿಷ್ಯರನ್ನಾಗಿ ಮಾಡುವವರಿಗೆ ಯಾವ ಗುಣಗಳು ಅಗತ್ಯವಾಗಿ ಬೇಕು?

• ‘ಬೋಧಿಸುವ ಕಲೆಯಲ್ಲಿ’ ಏನೆಲ್ಲಾ ಒಳಗೂಡಿದೆ?

[ಅಧ್ಯಯನ ಪ್ರಶ್ನೆಗಳು]

1. ಪೂರ್ವಕಾಲದ ದೇವರ ಸೇವಕರಲ್ಲಿ ಕೆಲವರಿಗೆ ಯಾವ ಕೌಶಲಗಳು ಮತ್ತು ಮನೋಭಾವಗಳು ಬೇಕಾಗಿದ್ದವು?

2. ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಸಂಬಂಧಿಸಿದ ಯಾವ ಪ್ರಶ್ನೆಗಳನ್ನು ನಾವೀಗ ಚರ್ಚಿಸುವೆವು?

3. ಶಿಷ್ಯರನ್ನಾಗಿ ಮಾಡುವ ಆಜ್ಞೆಯು ನಮಗೆ ಯಾವ ಸಂದರ್ಭವನ್ನು ಕೊಡುತ್ತದೆ?

4. ಯೆಹೋವನ ಕುರಿತು ಜನರಿಗೆ ಬೋಧಿಸಲು ಯೇಸು ಸಂತೋಷಪಟ್ಟದ್ದು ಏಕೆ?

5, 6. ಶಿಷ್ಯರನ್ನಾಗಿ ಮಾಡುವವರಿಗೆ ಯಾವ ಮುಖ್ಯ ಗುಣದ ಅಗತ್ಯವಿದೆ?

7, 8. ಯೇಸು ಜನರನ್ನು ಹೇಗೆ ವೀಕ್ಷಿಸಿದನು?

9. ಶಿಷ್ಯ-ರಚಕನಾದ ಪೌಲನಲ್ಲಿ ಯಾವ ಮನೋಭಾವವಿತ್ತು?

10, 11. ನಾವು ಶಿಷ್ಯರನ್ನಾಗಿ ಮಾಡಲು ಪ್ರಯತ್ನಿಸುವಾಗ ಸ್ವತ್ಯಾಗದ ಆತ್ಮ ಬೇಕಾಗಿದೆ ಏಕೆ?

12, 13. ಶಿಷ್ಯರನ್ನಾಗಿ ಮಾಡುವುದರಲ್ಲಿ ತಾಳ್ಮೆಯು ಅಷ್ಟು ಮಹತ್ವದ್ದೇಕೆ?

14. ತಾಳ್ಮೆಯಿಂದ ಇದ್ದರು ಕೂಡ, ಶಿಷ್ಯ-ರಚಕರಾದ ನಾವು ನಮ್ಮ ಸಮಯವನ್ನು ಹೇಗೆ ವಿವೇಕದಿಂದ ಉಪಯೋಗಿಸಬಲ್ಲೆವು?

15, 16. ನಾವು ಶಿಷ್ಯರನ್ನಾಗಿ ಮಾಡುವಾಗ ಸರಳತೆ ಮತ್ತು ಒಳ್ಳೇ ತಯಾರಿಯು ಏಕೆ ಪ್ರಾಮುಖ್ಯ?

17. ಶಾಸ್ತ್ರವಚನಗಳನ್ನು ವಿವೇಚಿಸಿ ತಿಳಿಯುವಂತೆ ನಾವು ಜನರಿಗೆ ಹೇಗೆ ನೆರವಾಗಬಲ್ಲೆವು?

18. ‘ಬೋಧಿಸುವ ಕಲೆಯನ್ನು’ ಬೆಳೆಸಿಕೊಳ್ಳುವುದರಲ್ಲಿ ಏನು ಒಳಗೂಡಿದೆ?

19. ಶಿಷ್ಯರನ್ನಾಗಿ ಮಾಡುವುದರಲ್ಲಿ ಎಲ್ಲಾ ಕ್ರೈಸ್ತರು ನೆರವಾಗುವುದು ಹೇಗೆ?

20. ಇತರರಿಗೆ ಬೈಬಲ್‌ ಸತ್ಯವನ್ನು ಬೋಧಿಸಲು ಬಯಸುವುದಾದರೆ ನೀವೇನು ಮಾಡಬೇಕು?

[ಪುಟ 21ರಲ್ಲಿರುವ ಚಿತ್ರ]

ಶಿಷ್ಯರನ್ನಾಗಿ ಮಾಡುವ ಮೂಲಕ ಕ್ರೈಸ್ತರು, ದೇವರಲ್ಲಿ ತಮಗಿರುವ ಆಳವಾದ ಪ್ರೀತಿಯನ್ನು ತೋರಿಸುತ್ತಾರೆ

[ಪುಟ 23ರಲ್ಲಿರುವ ಚಿತ್ರ]

ಶಿಷ್ಯರನ್ನಾಗಿ ಮಾಡುವವರು ಇತರರಲ್ಲಿ ಏಕೆ ಆಸಕ್ತರಾಗಿರಬೇಕು?

[ಪುಟ 24ರಲ್ಲಿರುವ ಚಿತ್ರ]

ಶಿಷ್ಯರನ್ನಾಗಿ ಮಾಡುವವರಲ್ಲಿ ಇರಬೇಕಾದ ಗುಣಗಳಲ್ಲಿ ಕೆಲವು ಯಾವುವು?

[ಪುಟ 25ರಲ್ಲಿರುವ ಚಿತ್ರ]

ಶಿಷ್ಯರನ್ನಾಗಿ ಮಾಡುವುದರ ಉತ್ತಮ ಫಲಿತಾಂಶಗಳನ್ನು ಕಾಣಲು ಎಲ್ಲಾ ಕ್ರೈಸ್ತರು ಸಂತೋಷಿಸುತ್ತಾರೆ