ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಗ್ಗಾಯ ಮತ್ತು ಜೆಕರ್ಯ ಪುಸ್ತಕಗಳ ಮುಖ್ಯಾಂಶಗಳು

ಹಗ್ಗಾಯ ಮತ್ತು ಜೆಕರ್ಯ ಪುಸ್ತಕಗಳ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಹಗ್ಗಾಯ ಮತ್ತು ಜೆಕರ್ಯ ಪುಸ್ತಕಗಳ ಮುಖ್ಯಾಂಶಗಳು

ಇಸವಿ ಸಾ.ಶ.ಪೂ. 520 ಆಗಿತ್ತು. ಬಾಬೆಲಿನ ಸೆರೆಯಿಂದ ಹಿಂತಿರುಗಿ ಬಂದ ಯೆಹೂದ್ಯರು ಯೆರೂಸಲೇಮಿನಲ್ಲಿ ಯೆಹೋವನ ಆಲಯದ ಅಸ್ತಿವಾರ ಹಾಕಿ ಹದಿನಾರು ವರ್ಷಗಳಾಗಿದ್ದವು. ಹಾಗಿದ್ದರೂ ಆಲಯವು ಪೂರ್ತಿಗೊಂಡಿರಲಿಲ್ಲ ಮತ್ತು ಕಟ್ಟುವ ಕೆಲಸದ ಮೇಲೆ ನಿಷೇಧವಿತ್ತು. ಯೆಹೋವನು ತನ್ನ ವಾಕ್ಯವನ್ನು ತಿಳಿಸಲು ಪ್ರವಾದಿ ಹಗ್ಗಾಯನನ್ನು ಮತ್ತು ಎರಡು ತಿಂಗಳ ತರುವಾಯ ಪ್ರವಾದಿ ಜೆಕರ್ಯನನ್ನು ನೇಮಿಸಿದನು.

ಹಗ್ಗಾಯ ಮತ್ತು ಜೆಕರ್ಯರ ಧ್ಯೇಯವು ಒಂದೇ; ಆಲಯದ ಪುನರ್‌ನಿರ್ಮಾಣ ಕೆಲಸವನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳುವಂತೆ ಜನರನ್ನು ಹುರಿದುಂಬಿಸುವುದೇ. ಈ ಪ್ರವಾದಿಗಳ ಪ್ರಯತ್ನ ಯಶಸ್ಸು ಕಂಡಿತು ಮತ್ತು ಐದು ವರ್ಷಗಳಲ್ಲೇ ಆಲಯದ ಕೆಲಸವು ಪೂರ್ಣಗೊಂಡಿತು. ಹಗ್ಗಾಯ ಮತ್ತು ಜೆಕರ್ಯರು ತಿಳಿಯಪಡಿಸಿದ ವಿಷಯವನ್ನು ಅವರ ಹೆಸರುಳ್ಳ ಬೈಬಲ್‌ ಪುಸ್ತಕಗಳಲ್ಲಿ ಬರೆಯಲಾಗಿದೆ. ಹಗ್ಗಾಯ ಪುಸ್ತಕವನ್ನು ಸಾ.ಶ.ಪೂ. 520ರಲ್ಲಿ ಮತ್ತು ಜೆಕರ್ಯ ಪುಸ್ತಕವನ್ನು ಸಾ.ಶ.ಪೂ. 518ರಲ್ಲಿ ಬರೆದು ಮುಗಿಸಲಾಗಿತ್ತು. ಆ ಪ್ರವಾದಿಗಳಂತೆ ನಮಗೂ ಒಂದು ದೇವದತ್ತ ನಿಯೋಗವಿದೆ. ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಈ ನಿಯೋಗವನ್ನು ಪ್ರಸ್ತುತ ವಿಷಯ ವ್ಯವಸ್ಥೆಯು ಅಂತ್ಯಗೊಳ್ಳುವ ಮುಂಚೆ ನಾವು ಪೂರ್ಣಗೊಳಿಸಬೇಕಾಗಿದೆ. ಹಗ್ಗಾಯ ಮತ್ತು ಜೆಕರ್ಯ ಪುಸ್ತಕಗಳಿಂದ ಯಾವ ಉತ್ತೇಜನವನ್ನು ಪಡೆಯಬಹುದು ಎಂಬದನ್ನು ನಾವು ನೋಡೋಣ.

“ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ”

(ಹಗ್ಗಾಯ 1:1-2:23)

ಹಗ್ಗಾಯನು 112 ದಿನಗಳಲ್ಲಿ ನಾಲ್ಕು ಪ್ರಚೋದನೀಯ ಸಂದೇಶಗಳನ್ನು ನೀಡಿದನು. ಮೊದಲನೆಯದು: “ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ. ಮಲೆನಾಡಿಗೆ ಹೋಗಿ ಮರವನ್ನು ತಂದು ನನ್ನ ಆಲಯವನ್ನು ಕಟ್ಟಿರಿ; ನಾನು ಅದಕ್ಕೆ ಮೆಚ್ಚಿ ನನ್ನ ಪ್ರಭಾವವನ್ನು ಅಲ್ಲಿ ಪ್ರಕಾಶಗೊಳಿಸುವೆನು; ಇದು ಯೆಹೋವನ ನುಡಿ.” (ಹಗ್ಗಾಯ 1:7, 8) ಜನರು ಈ ಸಂದೇಶಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಿದರು. ಎರಡನೆಯ ಸಂದೇಶದಲ್ಲಿ ಯೆಹೋವನ ಈ ವಾಗ್ದಾನ ಇತ್ತು: “ಈ ಆಲಯವನ್ನು ವೈಭವದಿಂದ ತುಂಬಿಸುವೆನು.”—ಹಗ್ಗಾಯ 2:7.

ಮೂರನೆಯ ಸಂದೇಶದ ಪ್ರಕಾರ, ಆಲಯದ ಪುನರ್‌ನಿರ್ಮಾಣ ಕೆಲಸವನ್ನು ಅವರು ನಿರ್ಲಕ್ಷಿಸಿದ ಕಾರಣ, ‘ಪ್ರಜೆಯು ಮತ್ತು ಅವರು ಕೈ ಹಾಕುವ ಎಲ್ಲಾ ಕೆಲಸವು’ ಯೆಹೋವನಿಗೆ ಅಶುದ್ಧವಾಗಿದೆ. ಹಾಗಿದ್ದರೂ, ದುರಸ್ತಿಯ ಕೆಲಸವು ಆರಂಭವಾಗುವಾಗ ಯೆಹೋವನು ಅವರನ್ನು ‘ಆಶೀರ್ವದಿಸುತ್ತಾನೆ.’ ನಾಲ್ಕನೆಯ ಸಂದೇಶದ ಮೇರೆಗೆ ಯೆಹೋವನು ‘ಜನಾಂಗಗಳ ಸಂಸ್ಥಾನಬಲವನ್ನು ಧ್ವಂಸಗೊಳಿಸಿ’ ದೇಶಾಧಿಪತಿಯಾದ ಜೆರುಬ್ಬಾಬೆಲನನ್ನು “ಮುದ್ರೆಯುಂಗರವಾಗಿ” ಇರಿಸುವನು.—ಹಗ್ಗಾಯ 2:14, 19, 22, 23.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:6—ದ್ರಾಕ್ಷಾಮದ್ಯ “ಕುಡಿಯುತ್ತೀರಿ, ಆನಂದವಾಗದು” ಎಂಬುದರ ಅರ್ಥವೇನು? ಇದು ದ್ರಾಕ್ಷಾಮದ್ಯದ ಅಭಾವವನ್ನು ಸೂಚಿಸುತ್ತದೆ ಅಷ್ಟೇ. ಯೆಹೋವನ ಆಶೀರ್ವಾದ ಕೊರತೆಯಿಂದಾಗಿ ದ್ರಾಕ್ಷಾಮದ್ಯವು ಸಾಕಷ್ಟು ಧಾರಾಳವಾಗಿ ಲಭಿಸದು ಮತ್ತು ಹೀಗೆ ಕುಡಿಯುವುದರಿಂದ ಯಾವ ಆನಂದವೂ ಸಿಗದು.

2:6, 7, 21, 22—ಯಾರು ಇಲ್ಲವೆ ಯಾವುದು ಜನಾಂಗಗಳನ್ನು ನಡುಗಿಸುತ್ತದೆ ಮತ್ತು ಇದರ ಪರಿಣಾಮವೇನು? ಲೋಕವ್ಯಾಪಕವಾಗಿ ರಾಜ್ಯ ಸಂದೇಶವನ್ನು ಸಾರುವ ಮೂಲಕ ಯೆಹೋವನು ‘ಸಕಲಜನಾಂಗಗಳನ್ನು ನಡುಗಿಸುತ್ತಾನೆ.’ ಅಲ್ಲದೆ, ಸಾರುವ ಕೆಲಸದಿಂದಾಗಿ “ಸಮಸ್ತಜನಾಂಗಗಳ ಇಷ್ಟವಸ್ತುಗಳು” ಬಂದು ಸೇರುವಾಗ ಯೆಹೋವನ ಆಲಯವು ವೈಭವದಿಂದ ತುಂಬುವುದು. ತಕ್ಕ ಸಮಯದಲ್ಲಿ, “ಸೇನಾಧೀಶ್ವರ ಯೆಹೋವನು” “ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಒಣನೆಲವನ್ನೂ” ಅದುರಿಸುವನು ಮತ್ತು ಪರಿಣಾಮವಾಗಿ ಪ್ರಸಕ್ತ ದುಷ್ಟ ವಿಷಯಗಳ ಇಡೀ ವ್ಯವಸ್ಥೆ ಇಲ್ಲವಾಗುವುದು.—ಇಬ್ರಿಯ 12:26, 27.

2:9—ಯಾವೆಲ್ಲಾ ವಿಧಗಳಲ್ಲಿ ‘ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಲಿತ್ತು’? ಕನಿಷ್ಠಪಕ್ಷ ಮೂರು ವಿಧಗಳಲ್ಲಿ: ಆಲಯ ಅಸ್ತಿತ್ವದಲ್ಲಿರುವ ವರ್ಷಗಳು, ಅಲ್ಲಿ ಯಾರು ಬೋಧಿಸಲಿರುವನು ಮತ್ತು ಯೆಹೋವನನ್ನು ಆರಾಧಿಸಲೆಂದು ಅಲ್ಲಿಗೆ ಯಾರು ಬರುವರು ಎಂಬ ವಿಷಯದಲ್ಲಿ. ಸೊಲೊಮೋನನು ಕಟ್ಟಿದ ಭವ್ಯ ಆಲಯವು ಸಾ.ಶ.ಪೂ. 1027ರಿಂದ ಸಾ.ಶ.ಪೂ. 607ರ ವರೆಗೆ ಅಂದರೆ 420 ವರ್ಷ ಕಾಲ ಆರಾಧನಾ ಸ್ಥಳವಾಗಿ ಇತ್ತು. ಆದರೂ “ಮುಂದಿನ” ಆಲಯವು ಪೂರ್ಣಗೊಂಡ ವರ್ಷವಾದ ಸಾ.ಶ.ಪೂ. 515ರಿಂದ ಸಾ.ಶ. 70ರಲ್ಲಾದ ಅದರ ನಾಶನದ ವರೆಗೆ ಅಂದರೆ 580ಕ್ಕಿಂತ ಹೆಚ್ಚಿನ ವರ್ಷಗಳ ವರೆಗೆ ಬಳಕೆಯಲ್ಲಿತ್ತು. ಅಷ್ಟುಮಾತ್ರವಲ್ಲದೆ ಮೆಸ್ಸೀಯನಾದ ಯೇಸು ಕ್ರಿಸ್ತನು “ಮುಂದಿನ” ಆಲಯದಲ್ಲಿ ಬೋಧಿಸಿದನು ಮತ್ತು ದೇವರನ್ನು ಆರಾಧಿಸಲು ಇಲ್ಲಿಗೆ ಬಂದ ಜನರು “ಹಿಂದಿನ” ಆಲಯಕ್ಕೆ ಹೋದವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರು.—ಅ. ಕೃತ್ಯಗಳು 2:1-11.

ನಮಗಾಗಿರುವ ಪಾಠಗಳು:

1:2-4. ಸಾರುವ ಕೆಲಸಕ್ಕೆ ಬರುವ ವಿರೋಧದಿಂದಾಗಿ ನಾವು ನಮ್ಮ ಆದ್ಯತೆಗಳನ್ನು ಬದಲಾಯಿಸಿಕೊಂಡು ನಮ್ಮ ಸ್ವಂತ ಅಭಿರುಚಿಗಳ ಹಿಂದೆ ಬೀಳದೆ ‘ಮೊದಲು ದೇವರ ರಾಜ್ಯಕ್ಕಾಗಿ ತವಕಪಡಬೇಕು.’—ಮತ್ತಾಯ 6:33.

1:5, 7. ‘ನಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳುವುದು’ ಅಂದರೆ ನಾವು ಜೀವಿಸುವ ರೀತಿ ದೇವರೊಂದಿಗಿನ ನಮ್ಮ ಸಂಬಂಧವನ್ನು ಹೇಗೆ ಪ್ರಭಾವಿಸುತ್ತದೆ ಎಂಬದನ್ನು ಪರ್ಯಾಲೋಚಿಸುವುದು ಜಾಣತನ.

1:6, 9-11; 2:14-17. ಹಗ್ಗಾಯನ ದಿನದ ಯೆಹೂದ್ಯರು ವೈಯಕ್ತಿಕ ಅಭಿರುಚಿಗಳಿಗಾಗಿ ತುಂಬ ಕಷ್ಟಪಟ್ಟು ದುಡಿದರು. ಆದರೂ ಅವರ ಪರಿಶ್ರಮದ ಫಲವು ಅವರಿಗೆ ಸಿಗುತ್ತಿರಲಿಲ್ಲ. ಅವರು ಆಲಯವನ್ನು ನಿರ್ಲಕ್ಷಿಸಿದ್ದರಿಂದ ದೇವರ ಆಶೀರ್ವಾದವು ಅವರಿಗೆ ಸಿಗಲಿಲ್ಲ. ಆಧ್ಯಾತ್ಮಿಕ ಚಟುವಟಿಕೆಗಳಿಗೆ ಆದ್ಯತೆ ಕೊಟ್ಟು ನಮ್ಮ ಪೂರ್ಣ ಪ್ರಾಣದ ಸೇವೆಯನ್ನು ಯೆಹೋವನಿಗೆ ಸಲ್ಲಿಸಬೇಕು. ಭೌತಿಕವಾಗಿ ನಮ್ಮ ಬಳಿ ಕೊಂಚವಿರಲಿ ಹೆಚ್ಚೇ ಇರಲಿ, “ಯೆಹೋವನ ಆಶೀರ್ವಾದವು ಭಾಗ್ಯದಾಯಕ” ಆಗಿರುತ್ತದೆ ಎಂಬದನ್ನು ನಾವು ಮರೆಯಬಾರದು.—ಜ್ಞಾನೋಕ್ತಿ 10:22.

2:15, 18. ಯೆಹೂದ್ಯರು ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳುವಂತೆ ಯೆಹೋವನು ಉತ್ತೇಜಿಸಿದ್ದರ ಅರ್ಥ ಅವರು ಹಿಂದೆ ತೋರಿಸಿದ ನಿರ್ಲಕ್ಷ್ಯವನ್ನು ಮನಸ್ಸಿಗೆ ತರಬೇಕೆಂದಲ್ಲ. ಬದಲಿಗೆ ಪುನರ್‌ನಿರ್ಮಾಣ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಪ್ರೋತ್ಸಾಹಿಸಿದನು. ತದ್ರೀತಿಯಲ್ಲಿ ನಮ್ಮ ಗಮನವನ್ನು ಗತವಿಷಯಗಳ ಮೇಲಿಡದೆ ಮುಂದೆನೋಡುತ್ತಾ ಯೆಹೋವನ ಆರಾಧನೆಯ ಮೇಲೆ ಕೇಂದ್ರೀಕರಿಸಬೇಕು.

“ಬಲದಿಂದಲ್ಲ, ನನ್ನ ಆತ್ಮದಿಂದಲೇ”

(ಜೆಕರ್ಯ 1:1-14:21)

ಯೆಹೋವನ “ಕಡೆಗೆ ಪುನಃ ತಿರುಗಿರಿ” ಎಂಬ ಕರೆಯನ್ನು ಯೆಹೂದ್ಯರಿಗೆ ಕೊಡುವ ಮೂಲಕ ಜೆಕರ್ಯನು ತನ್ನ ಪ್ರವಾದನಾ ಕಾರ್ಯಗಳನ್ನು ಆರಂಭಿಸುತ್ತಾನೆ. (ಜೆಕರ್ಯ 1:3) ಆಲಯವನ್ನು ಪುನಃ ಕಟ್ಟುವ ಕೆಲಸಕ್ಕೆ ದೇವರ ಬೆಂಬಲವಿದೆ ಎಂಬದನ್ನು ಅವನು ಕಾಣಲಿರುವ ಎಂಟು ದರ್ಶನಗಳು ಖಚಿತಪಡಿಸುತ್ತವೆ. (“ಜೆಕರ್ಯನಿಗೆ ದೊರೆತ ಎಂಟು ಗೂಢಾರ್ಥಕ ದರ್ಶನಗಳು” ಎಂಬ ಚೌಕ ನೋಡಿ.) ಆಲಯ ಕಟ್ಟುವ ಕೆಲಸವು “ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ [ಯೆಹೋವನ] ಆತ್ಮದಿಂದಲೇ” ಪೂರ್ಣಗೊಳ್ಳುವುದು. (ಜೆಕರ್ಯ 4:6) ಮೊಳಿಕೆ ಎಂಬ ಹೆಸರಿನ ಪುರುಷನು “ಯೆಹೋವನ ಆಲಯವನ್ನು ಕಟ್ಟಿಸುವನು” ಮತ್ತು ಅವನು ಯೆಹೋವನ ‘ಸಿಂಹಾಸನದಲ್ಲಿ ಯಾಜಕನಾಗಿ ಕೂಡ್ರುವನು.’—ಜೆಕರ್ಯ 6:12, 13.

ಯೆರೂಸಲೇಮಿನ ನಾಶನವನ್ನು ಉಪವಾಸ ಹಿಡಿದು ಸ್ಮರಿಸುವ ಬಗ್ಗೆ ಯಾಜಕರೊಂದಿಗೆ ವಿಚಾರಿಸಲು ಬೇತೇಲಿನವರು ಪ್ರತಿನಿಧಿಗಳ ಒಂದು ತಂಡವನ್ನು ಕಳುಹಿಸಿದರು. ಯೆರೂಸಲೇಮಿಗೆ ಸಂಭವಿಸಿದ ವಿಪತ್ತನ್ನು ನೆನಸುತ್ತಾ ಮೊದಲ ನಾಲ್ಕು ತಿಂಗಳುಗಳ ಉಪವಾಸ ಮಾಡುತ್ತಿರುವಾಗಲೇ ಅವರ ರೋದನೆಯು ‘ವಿಶೇಷವಾದ ಹಬ್ಬಗಳಾಗಿ ಹರ್ಷೋಲ್ಲಾಸವಾಗಿ’ ಮಾರ್ಪಡುವುದೆಂದು ಯೆಹೋವನು ಜೆಕರ್ಯನಿಗೆ ತಿಳಿಸುತ್ತಾನೆ. (ಜೆಕರ್ಯ 7:2; 8:19) ತದನಂತರದ ಎರಡು ದೈವೋಕ್ತಿಗಳಲ್ಲಿ ಜನಾಂಗಗಳ ಹಾಗೂ ಸುಳ್ಳು ಪ್ರವಾದಿಗಳ ವಿರುದ್ಧ ತೀರ್ಪು, ಮೆಸ್ಸೀಯ ಸಂಬಂಧಿತ ಪ್ರವಾದನೆಗಳು ಮತ್ತು ದೇವಜನರ ಪುನಃಸ್ಥಾಪನೆಯ ಸಂದೇಶವು ಅಡಕವಾಗಿದೆ.—ಜೆಕರ್ಯ 9:1; 12:1.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

2:1—ಮನುಷ್ಯನೊಬ್ಬನು ಯೆರೂಸಲೇಮನ್ನು ನೂಲಿನಿಂದ ಅಳತೆ ಮಾಡಿದ್ದು ಏಕೆ? ಇದು ಪಟ್ಟಣದ ಸುತ್ತಲೂ ಭದ್ರವಾದ ಗೋಡೆ ಕಟ್ಟುವುದನ್ನು ಸೂಚಿಸಿದ್ದಿರಬೇಕು. ಯೆರೂಸಲೇಮ್‌ ವಿಸ್ತಾರಗೊಳ್ಳಲಿದೆ ಮತ್ತು ಯೆಹೋವನಿಂದ ಭದ್ರತೆ ಪಡೆಯಲಿದೆ ಎಂದು ದೇವದೂತನು ಆ ಮನುಷ್ಯನಿಗೆ ತಿಳಿಸುತ್ತಾನೆ.—ಜೆಕರ್ಯ 2:3-5.

6:11-13—ಮಹಾ ಯಾಜಕನಾದ ಯೆಹೋಶುವನ ತಲೆಯ ಮೇಲೆ ಕಿರೀಟವನ್ನು ಇಟ್ಟದ್ದರಿಂದ ಅವನು ರಾಜ-ಯಾಜಕನಾದನೋ? ಇಲ್ಲ. ಯೆಹೋಶುವನು ದಾವೀದನ ರಾಜವಂಶದಲ್ಲಿ ಜನಿಸಿರಲಿಲ್ಲ. ಕಿರೀಟವನ್ನು ಧರಿಸುವ ಮೂಲಕ ಅವನೊಬ್ಬ ಪ್ರವಾದನಾತ್ಮಕ ರೂಪದ ಮೆಸ್ಸೀಯನಾದನು. (ಇಬ್ರಿಯ 6:20) ‘ಮೊಳಿಕೆಯ’ ಕುರಿತ ಪ್ರವಾದನೆಯು ಸ್ವರ್ಗೀಯ ಸಂಬಂಧಿತ ರಾಜ-ಯಾಜಕನಾದ ಯೇಸು ಕ್ರಿಸ್ತನಲ್ಲಿ ನೆರವೇರುತ್ತದೆ. (ಯೆರೆಮೀಯ 23:5) ಆಲಯದ ಕಟ್ಟುವ ಕೆಲಸದಲ್ಲಿ ಹಿಂತೆರಳಿದ ಯೆಹೂದ್ಯರಿಗೆ ಯೆಹೋಶುವನು ಮಹಾ ಯಾಜಕನಾಗಿದ್ದ ಪ್ರಕಾರ ಯೆಹೋವನ ಆಧ್ಯಾತ್ಮಿಕ ಆಲಯದಲ್ಲಿ ನಡೆಯುವ ಸತ್ಯಾರಾಧನೆಗೆ ಯೇಸು ಮಹಾ ಯಾಜಕನಾಗಿದ್ದಾನೆ.

8:1-23—ಈ ವಚನಗಳಲ್ಲಿರುವ ಹತ್ತು ದೈವೋಕ್ತಿಗಳು ಯಾವಾಗ ನೆರವೇರಿದವು? ಪ್ರತಿಯೊಂದು ದೈವೋಕ್ತಿಯು, “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ” ಎಂಬ ಮಾತುಗಳಿಂದ ಆರಂಭಗೊಳ್ಳುತ್ತದೆ. ದೇವರು ತನ್ನ ಜನರಿಗೆ ಕೊಡುವ ಶಾಂತಿಯ ಭರವಸೆ ಅದಾಗಿದೆ. ಇದರಲ್ಲಿ ಕೆಲವು ದೈವೋಕ್ತಿಗಳು ಸಾ.ಶ.ಪೂ. 6ನೇ ಶತಮಾನದಲ್ಲಿ ನೆರವೇರಿದವು. ಆದರೆ ಅವೆಲ್ಲವೂ ಸಾ.ಶ. 1919ರಂದಿನಿಂದ ನೆರವೇರಿದವು ಇಲ್ಲವೇ ಈಗ ನೆರವೇರುತ್ತಾ ಇವೆ. *

8:3—ಯೆರೂಸಲೇಮನ್ನು “ಸುವ್ರತನಗರಿ” ಎಂದು ಏಕೆ ಕರೆಯಲಾಗಿದೆ? ಸಾ.ಶ.ಪೂ. 607ರಲ್ಲಾದ ನಾಶನದ ಮೊದಲು ಯೆರೂಸಲೇಮ್‌ “ಹಿಂಸಕನಗರಿ” ಆಗಿತ್ತು. ಏಕೆಂದರೆ ಭ್ರಷ್ಟ ಪ್ರವಾದಿಗಳು, ಯಾಜಕರು ಹಾಗೂ ಅಪನಂಬಿಗಸ್ತ ಜನರಿಂದ ಅದು ತುಂಬಿತ್ತು. (ಚೆಫನ್ಯ 3:1; ಯೆರೆಮೀಯ 6:13; 7:29-34) ಆದರೆ ಆಲಯದ ಪುನರ್‌ನಿರ್ಮಾಣವಾಗಿ ಜನರು ಯೆಹೋವನನ್ನೇ ಆರಾಧಿಸಲು ಸಂಕಲ್ಪಿಸಿದಾಗ ಶುದ್ಧಾರಾಧನೆಯ ಸತ್ಯಗಳನ್ನು ಜನರು ಯೆರೂಸಲೇಮಿನಲ್ಲಿ ಮಾತಾಡಲಿದ್ದರು ಮತ್ತು ಅದು “ಸುವ್ರತನಗರಿ” ಎಂದು ಕರೆಯಲ್ಪಡಲಿತ್ತು.

11:7-14—ಜೆಕರ್ಯನು “ಕನಿಕರ” ಮತ್ತು ‘ಒಗ್ಗಟ್ಟು’ ಎಂದು ಕರೆಯಲಾಗುವ ಎರಡು ಕೋಲುಗಳನ್ನು ಕತ್ತರಿಸಿಬಿಡುವುದು ಏನನ್ನು ಸೂಚಿಸುತ್ತದೆ? ಜೆಕರ್ಯನನ್ನು ‘ಕೊಯ್ಗುರಿಗಳ ಮಂದೆಯನ್ನು ಮೇಯಿಸುವವನಾಗಿ’ ಚಿತ್ರಿಸಲಾಗಿದೆ. ಈ ಮಂದೆಯು ಮುಖಂಡರಿಂದ ದುರುಪಚರಿಸಲ್ಪಟ್ಟು ಕೊಯ್ಯಲು ಸಿದ್ಧವಾಗಿರುವ ಕುರಿಗಳಂಥ ಜನರಿಂದ ಕೂಡಿದೆ. ಕುರುಬನ ಈ ಪಾತ್ರದಲ್ಲಿ ಚೆಕರ್ಯನು, ದೇವರೊಂದಿಗೆ ಒಡಂಬಡಿಕೆ ಮಾಡಿರುವ ಜನರಿಗೋಸ್ಕರ ಕಳುಹಿಸಲಾದ ಆದರೆ ಜನರಿಂದ ತಿರಸ್ಕರಿಸಲ್ಪಟ್ಟ ಯೇಸು ಕ್ರಿಸ್ತನನ್ನು ಮುಂಚಿತ್ರಿಸಿದನು. ದೇವರು ಯೆಹೂದ್ಯರೊಂದಿಗೆ ಮಾಡಿದ್ದ ನಿಯಮದ ಒಡಂಬಡಿಕೆಯನ್ನು ಅಂತ್ಯಗೊಳಿಸುವನು ಮತ್ತು ಇನ್ನು ಮೇಲೆ ಅವರನ್ನು ಕನಿಕರದಿಂದ ಉಪಚರಿಸನು ಎಂಬುದೇ ‘ಕನಿಕರವನ್ನು’ ಕತ್ತರಿಸುವುದರ ಸಾಂಕೇತಿಕ ಅರ್ಥವಾಗಿತ್ತು. ಯೆಹೂದ ಮತ್ತು ಇಸ್ರಾಯೇಲಿನ ನಡುವಿದ್ದ ಸಹೋದರತ್ವದ ದೇವಪ್ರಭುತ್ವಾತ್ಮಕ ಬಂಧವು ಕಡಿದುಹೋಗುವುದು ಎಂಬುದೇ ‘ಒಗ್ಗಟ್ಟನ್ನು’ ಕತ್ತರಿಸುವುದರ ಅರ್ಥವಾಗಿತ್ತು.

12:11—“ಮೆಗಿದ್ದೋವಿನ ತಗ್ಗಿನೊಳಗೆ ಹದದ್‌ರಿಮ್ಮೋನಿನಲ್ಲಿ ಗೋಳಾಟ” ಎಂದರೇನು? ‘ಮೆಗಿದ್ದೋವಿನ ತಗ್ಗಿನಲ್ಲಿ’ ಯೆಹೂದದ ಅರಸನಾದ ಯೋಷೀಯನು ಐಗುಪ್ತದ ಅರಸನಾದ ಫರೋಹ ನೆಕೋವನೊಂದಿಗಿನ ಯುದ್ಧದಲ್ಲಿ ಸತ್ತನು. ಅವನ ಸಾವಿಗಾಗಿ ಜನರು ಹಲವಾರು ವರ್ಷಗಳವರೆಗೆ ‘ಶೋಕಗೀತಗಳನ್ನು’ ಹಾಡಿದ್ದರು. (2 ಪೂರ್ವಕಾಲವೃತ್ತಾಂತ 35:25) ಹಾಗಾಗಿ ‘ಹದದ್‌ರಿಮ್ಮೋನಿನಲ್ಲಿ ಗೋಳಾಟವು’ ಯೋಷೀಯನ ಮರಣದ ಶೋಕವನ್ನು ಸೂಚಿಸಿರಬಹುದು.

ನಮಗಾಗಿರುವ ಪಾಠಗಳು:

1:2-6; 7:11-14. ಪಶ್ಚಾತ್ತಾಪಪಟ್ಟು ತಿದ್ದುಪಾಟನ್ನು ಅಂಗೀಕರಿಸಿ ಪೂರ್ಣ ಪ್ರಾಣದಿಂದ ಯೆಹೋವನನ್ನು ಆರಾಧಿಸಿ ಆತನ ಕಡೆಗೆ ಪುನಃ ಹಿಂತಿರುಗಿದರೆ ಆತನಿಗೆ ಸಂತೋಷವಾಗುತ್ತದೆ ಮತ್ತು ಅಂಥ ಜನರ ಕಡೆಗೆ ಆತನು ತಿರುಗುತ್ತಾನೆ. ಇನ್ನೊಂದು ಬದಿಯಲ್ಲಿ, ಯೆಹೋವನ ಸಂದೇಶವನ್ನು ‘ಗಮನಿಸಲೊಲ್ಲದೆ ಹೆಗಲುಕೊಡದೆ, ಕೇಳಬಾರದೆಂದು ಕಿವಿಮಂದಮಾಡಿಕೊಂಡವರು’ ಸಹಾಯಕ್ಕಾಗಿ ಬೇಡಿದರೆ ಆತನು ಪ್ರತಿಕ್ರಿಯೆ ತೋರಿಸನು.

4:6, 7. ಆಲಯದ ಪುನರ್‌ನಿರ್ಮಾಣವನ್ನು ಯಶಸ್ವಿಯಾಗಿ ಪೂರ್ತಿಗೊಳಿಸುವುದರಲ್ಲಿ ಯೆಹೋವನ ಆತ್ಮವು ಜಯಿಸಲಾಗದ ಯಾವುದೇ ಅಡ್ಡಿತಡೆಗಳಿರಲಿಲ್ಲ. ಯೆಹೋವನಲ್ಲಿ ನಂಬಿಕೆಯನ್ನಿಡುವ ಮೂಲಕ ಆತನಿಗೆ ನಾವು ಸಲ್ಲಿಸುವ ಸೇವೆಯಲ್ಲಿ ಯಾವುದೇ ಸಮಸ್ಯೆಗಳು ಎದ್ದರೂ ನಾವು ಅವುಗಳನ್ನು ಜಯಿಸಬಹುದು.—ಮತ್ತಾಯ 17:20.

4:10. ಯೆಹೋವನ ಉಸ್ತುವಾರಿಯಿಂದಾಗಿ ಜೆರುಬ್ಬಾಬೆಲನು ಆಲಯವನ್ನು ದೇವರ ಉಚ್ಚ ಮಟ್ಟಗಳಿಗನುಸಾರ ಪೂರ್ಣಗೊಳಿಸಿದನು. ಯೆಹೋವನು ಬಯಸುವಂತೆಯೇ ಜೀವಿಸುವುದು ಅಪರಿಪೂರ್ಣ ಮಾನವರಿಗೆ ತೀರ ಕಷ್ಟಕರವೇನಲ್ಲ.

7:8-10; 8:16, 17. ದೇವರ ಕೃಪೆಗೆ ಪಾತ್ರರಾಗಲು ನಾವು ನ್ಯಾಯದಿಂದ ನಡೆದುಕೊಳ್ಳಬೇಕು, ಪ್ರೀತಿಯನ್ನು ತೋರಿಸಬೇಕು, ಕರುಣೆ ಪ್ರದರ್ಶಿಸಬೇಕು ಮತ್ತು ಪರಸ್ಪರರ ಸಂಗಡ ಸತ್ಯವನ್ನೇ ಆಡಬೇಕು.

8:9-13. ಯೆಹೋವನು ನಮಗೆ ನೇಮಿಸಿರುವ ಕೆಲಸವನ್ನು ಮಾಡಲು ‘ನಮ್ಮ ಕೈಗಳು ಬಲಗೊಂಡಿರುವಾಗ’ ಆತನು ನಮ್ಮನ್ನು ಆಶೀರ್ವದಿಸುತ್ತಾನೆ. ಈ ಆಶೀರ್ವಾದಗಳಲ್ಲಿ ಶಾಂತಿ, ಭದ್ರತೆ ಮತ್ತು ಆಧ್ಯಾತ್ಮಿಕ ಪ್ರಗತಿ ಸೇರಿದೆ.

12:6. ಯೆಹೋವನ ಜನರಲ್ಲಿ ಮೇಲ್ವಿಚಾರಕ ಸ್ಥಾನದಲ್ಲಿರುವವರು ‘ಪಂಜಿನಂತೆ’ ತುಂಬ ಹುರುಪುಳ್ಳವರಾಗಿರಬೇಕು.

13:3. ಸತ್ಯದೇವರಿಗೆ ಮತ್ತು ಆತನ ಸಂಘಟನೆಗೆ ನಮ್ಮ ನಿಷ್ಠೆಯು ಯಾವನೇ ಮಾನವನಿಗೆ—ಅವರು ಎಷ್ಟೇ ಆಪ್ತರಾಗಿರಲಿ—ತೋರಿಸುವ ನಿಷ್ಠೆಗಿಂತ ಹೆಚ್ಚಾಗಿರಬೇಕು.

13:8, 9. ಯೆಹೋವನು ತಿರಸ್ಕರಿಸಿದ ಧರ್ಮಭ್ರಷ್ಟರು ದೇಶದ ಅಧಿಕ ಸಂಖ್ಯಾತರಾಗಿದ್ದರು ಅಂದರೆ ಮೂರರಲ್ಲಿ ಎರಡು ಭಾಗದಷ್ಟಿದ್ದರು. ಮೂರನೆಯ ಭಾಗದವರು ಬೆಂಕಿಯಲ್ಲೊ ಎಂಬಂತೆ ಪರಿಷ್ಕರಿಸಲ್ಪಟ್ಟರು. ನಮ್ಮ ದಿನಗಳಲ್ಲಿ ಕ್ರೈಸ್ತರೆಂದು ಹೇಳಿಕೊಳ್ಳುವ ಅಧಿಕಾಂಶ ಜನರು ಕ್ರೈಸ್ತಪ್ರಪಂಚಕ್ಕೆ ಸೇರಿದವರಾಗಿದ್ದಾರೆ ಮತ್ತು ಇವರನ್ನು ಯೆಹೋವನು ತಿರಸ್ಕರಿಸಿದ್ದಾನೆ. ಕೇವಲ ಒಂದು ಚಿಕ್ಕ ಸಂಖ್ಯೆ, ಅಂದರೆ ಅಭಿಷಿಕ್ತ ಕ್ರೈಸ್ತರು ಯೆಹೋವನ ‘ಹೆಸರೆತ್ತಿದ್ದಾರೆ’ ಮತ್ತು ಪರಿಷ್ಕರಣೆಗಾಗಿ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ಅವರು ಮತ್ತು ಅವರ ಜೊತೆ ವಿಶ್ವಾಸಿಗಳು, ತಾವು ಕೇವಲ ನಾಮಮಾತ್ರದ ಯೆಹೋವನ ಸಾಕ್ಷಿಗಳಲ್ಲ ಎಂದು ರುಜುಪಡಿಸಿದ್ದಾರೆ.

ಹುರುಪಿನ ಕ್ರಿಯೆಗೆ ಪ್ರಚೋದಿತರು

ಹಗ್ಗಾಯ ಮತ್ತು ಜೆಕರ್ಯರು ಘೋಷಿಸಿದ ವಿಷಯವು ಇಂದು ನಮ್ಮನ್ನು ಹೇಗೆ ತಟ್ಟುತ್ತದೆ? ಅವರ ಸಂದೇಶವು ಆಲಯದ ಪುನರ್‌ನಿರ್ಮಾಣ ಕೆಲಸಕ್ಕೆ ಗಮನಕೊಡುವಂತೆ ಯೆಹೂದ್ಯರನ್ನು ಪ್ರೇರಿಸಿದ್ದ ಕುರಿತು ನಾವು ಪರ್ಯಾಲೋಚಿಸುವಾಗ, ನಾವು ಸಹ ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳುವಂತೆ ಅದು ನಮ್ಮನ್ನು ಪ್ರಚೋದಿಸುವುದಿಲ್ಲವೇ?

ಮೆಸ್ಸೀಯನು “ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ,” ಆತನನ್ನು ‘ಮೂವತ್ತು ತೊಲ ಬೆಳ್ಳಿಗೆ’ ಮಾರಲಾಗುವುದು, ‘ಹೊಡೆಯಲಾಗುವುದು’ ಮತ್ತು ಆತನ “ಕುರಿಗಳು ಚದರಿಹೋಗುವವು” ಎಂದು ಜೆಕರ್ಯನು ಮುಂತಿಳಿಸಿದನು. (ಜೆಕರ್ಯ 9:9; 11:12; 13:7) ಮೆಸ್ಸೀಯನ ಕುರಿತಾದ ಜೆಕರ್ಯನ ಇಂಥ ಪ್ರವಾದನೆಗಳ ನೆರವೇರಿಕೆಯ ಬಗ್ಗೆ ಧ್ಯಾನಿಸುವುದು ನಮ್ಮ ನಂಬಿಕೆಯನ್ನು ಎಷ್ಟೊಂದು ಪ್ರಭಾವಿಸುತ್ತದೆ! (ಮತ್ತಾಯ 21:1-9; 26:31, 56; 27:3-10) ಯೆಹೋವನ ವಾಕ್ಯದಲ್ಲಿ ಮತ್ತು ರಕ್ಷಣೆಗಾಗಿ ಅವನು ಮಾಡಿರುವ ಏರ್ಪಾಡುಗಳಲ್ಲಿ ನಮಗಿರುವ ಭರವಸೆಯು ಬಲಗೊಳ್ಳುತ್ತದೆ.—ಇಬ್ರಿಯ 4:12. (w07 12/1)

[ಪಾದಟಿಪ್ಪಣಿ]

^ ಪ್ಯಾರ. 25 ಇಸವಿ 1996, ಜನವರಿ 1ರ ಕಾವಲಿನಬುರುಜು ಪತ್ರಿಕೆಯ 9-22 ಪುಟಗಳನ್ನು ನೋಡಿ.

[ಪುಟ 15ರಲ್ಲಿರುವ ಚೌಕ]

ಜೆಕರ್ಯನಿಗೆ ದೊರೆತ ಎಂಟು ಗೂಢಾರ್ಥಕ ದರ್ಶನಗಳು

1:8-17: ಆಲಯದ ಕೆಲಸ ಖಂಡಿತವಾಗಿ ಪೂರ್ತಿಗೊಳ್ಳುವುದು ಮತ್ತು ಯೆರೂಸಲೇಮ್‌ ಹಾಗೂ ಯೆಹೂದದ ಇತರ ಪಟ್ಟಣಗಳು ಆಶೀರ್ವದಿಸಲ್ಪಡುವವು ಎಂಬ ಖಾತರಿ ಕೊಡುತ್ತದೆ.

1:18-21: ‘ಯೆಹೂದವನ್ನು ಚದರಿಸಿದ ನಾಲ್ಕು ಕೊಂಬುಗಳು’ ಅಥವಾ ಯೆಹೋವನ ಆರಾಧನೆಯನ್ನು ವಿರೋಧಿಸಿದ ಎಲ್ಲ ಸರ್ಕಾರಗಳು ಮಣ್ಣುಮುಕ್ಕುವವೆಂಬ ವಾಗ್ದಾನ ಕೊಡುತ್ತದೆ.

2:1-13: ಯೆರೂಸಲೇಮ್‌ ವಿಸ್ತಾರಗೊಳ್ಳುವುದು ಮತ್ತು ಯೆಹೋವನು ಅದಕ್ಕೆ ‘ಸುತ್ತುಮುತ್ತಲು ಅಗ್ನಿಪ್ರಾಕಾರವನ್ನು’ ಅಥವಾ ಆತನು ಅದಕ್ಕೆ ಸಂರಕ್ಷಕನಾಗಿ ಇರುವನೆಂಬದನ್ನು ಸೂಚಿಸುತ್ತದೆ.

3:1-10: ಆಲಯದ ಕೆಲಸವನ್ನು ವಿರೋಧಿಸುವುದರಲ್ಲಿ ಸೈತಾನನೂ ಸೇರಿದ್ದನು ಮತ್ತು ಮಹಾ ಯಾಜಕನಾದ ಯೆಹೋಶುವನ ದೋಷವನ್ನು ತೊಲಗಿಸಲಾಗಿದೆ ಎಂಬದನ್ನು ತೋರಿಸುತ್ತದೆ.

4:1-14: ಪರ್ವತದಂತಿರುವ ಎಡರುಗಳು ನೆಲಸಮವಾಗುವವು ಮತ್ತು ದೇಶಾಧಿಪತಿಯಾದ ಜೆರುಬ್ಬಾಬೆಲನು ಆಲಯವನ್ನು ಕಟ್ಟಿ ಪೂರ್ಣಗೊಳಿಸುವನೆಂಬ ಆಶ್ವಾಸನೆ ಕೊಡುತ್ತದೆ.

5:1-4: ಶಿಕ್ಷೆಯನ್ನು ತಪ್ಪಿಸಿಕೊಂಡ ದುಷ್ಟರಿಗೆ ಶಾಪ ವಿಧಿಸುತ್ತದೆ.

5:5-11: ದುಷ್ಟತನದ ಅಂತ್ಯವನ್ನು ಮುಂತಿಳಿಸುತ್ತದೆ.

6:1-8: ದೇವದೂತರ ಮೇಲ್ವಿಚಾರಣೆ ಮತ್ತು ಸಂರಕ್ಷಣೆಯ ಭರವಸೆ ಕೊಡುತ್ತದೆ.

[ಪುಟ 12ರಲ್ಲಿರುವ ಚಿತ್ರ]

ಹಗ್ಗಾಯ ಮತ್ತು ಜೆಕರ್ಯರ ಸಂದೇಶಗಳ ಧ್ಯೇಯವೇನಾಗಿತ್ತು?

[ಪುಟ 14ರಲ್ಲಿರುವ ಚಿತ್ರ]

ಮೇಲ್ವಿಚಾರಕರು ‘ಪಂಜು’ಗಳಂತೆ ಇರುವುದು ಹೇಗೆ?