ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ತಮ್ಮ ಬದುಕನ್ನು ಸಮೃದ್ಧಗೊಳಿಸಿದರು ನೀವೂ ಮಾಡಸಾಧ್ಯವೋ?

ಅವರು ತಮ್ಮ ಬದುಕನ್ನು ಸಮೃದ್ಧಗೊಳಿಸಿದರು ನೀವೂ ಮಾಡಸಾಧ್ಯವೋ?

ಅವರು ತಮ್ಮ ಬದುಕನ್ನು ಸಮೃದ್ಧಗೊಳಿಸಿದರು ನೀವೂ ಮಾಡಸಾಧ್ಯವೋ?

ಕೆನಡದ ಮಾರ್ಕ್‌ ಎಂಬ ಸಹೋದರನು ಬಾಹ್ಯಾಕಾಶ ಸಂಸ್ಥೆಗಳಿಗಾಗಿ ರೋಬಾಟ್‌ನಂಥ ಸಂಕೀರ್ಣ ಉಪಕರಣಗಳನ್ನು ತಯಾರಿಸುವ ಕಂಪೆನಿಯೊಂದರಲ್ಲಿ ಉದ್ಯೋಗಸ್ಥನಾಗಿದ್ದನು. ಅವನು ಅಲ್ಲಿ ಪಾರ್ಟ್‌-ಟೈಮ್‌ ಕೆಲಸಮಾಡುತ್ತಾ ರೆಗ್ಯುಲರ್‌ ಪಯನೀಯರ್‌ ಸೇವೆಯನ್ನೂ ಮಾಡುತ್ತಿದ್ದನು. ಹೀಗಿರುವಾಗ ಒಮ್ಮೆ, ಮಾರ್ಕ್‌ನ ಸುಪರ್‌ವೈಸರ್‌ ಅವನಿಗೆ ಕೆಲಸದಲ್ಲಿ ಬಡತಿ ಕೊಟ್ಟನು. ದಿನವಿಡೀ ಕೆಲಸಮಾಡಿ ಎಷ್ಟೋ ಹೆಚ್ಚು ಸಂಬಳ ಪಡೆಯುವ ಸುವರ್ಣಾವಕಾಶ ಈಗ ಅವನ ಮುಂದಿತ್ತು. ಮಾರ್ಕ್‌ ಈ ಬಡತಿಯನ್ನು ಸ್ವೀಕರಿಸಿದನೋ?

ಫಿಲಿಪ್ಪೀನ್ಸ್‌ನ ಏಮೀ ಎಂಬ ಸಹೋದರಿ ತನ್ನ ವಿದ್ಯಾಭ್ಯಾಸದೊಂದಿಗೆ ರೆಗ್ಯುಲರ್‌ ಪಯನೀಯರ್‌ ಸೇವೆಯನ್ನೂ ಮಾಡುತ್ತಿದ್ದಳು. ಓದು ಮುಗಿಸಿದಾಗ ಕೈತುಂಬ ಹಣ ಬರುವ ಉದ್ಯೋಗ ಅವಳಿಗೆ ಸಿಕ್ಕಿತು. ಆದರೆ ಅವಳಲ್ಲಿ ದಿನವಿಡೀ ಕೆಲಸಮಾಡಬೇಕಾಗಿತ್ತು. ಏಮೀ ಆ ಉದ್ಯೋಗಕ್ಕೆ ಸೇರಲು ಸಿದ್ಧಳಿದ್ದಳೋ?

ಮಾರ್ಕ್‌ ಮತ್ತು ಏಮೀ ವಿಭಿನ್ನ ನಿರ್ಣಯಗಳನ್ನು ಮಾಡಿದರು. ಅವರ ನಿರ್ಣಯಗಳ ಪರಿಣಾಮಗಳು, ಪುರಾತನ ಕೊರಿಂಥದ ಕ್ರೈಸ್ತರಿಗೆ ದೊರೆತ ಬುದ್ಧಿವಾದಕ್ಕೆ ಕಿವಿಗೊಡುವುದು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಅಪೊಸ್ತಲ ಪೌಲನು ಬರೆದದ್ದು: ‘ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆ ಇರಬೇಕು.’—1 ಕೊರಿಂ. 7:29-31.

ಲೋಕವನ್ನು ಬಳಸಿರಿ, ಪೂರ್ಣವಾಗಿಯಲ್ಲ

ಮಾರ್ಕ್‌ ಮತ್ತು ಏಮೀಗೆ ಏನಾಯಿತೆಂದು ನೋಡುವ ಮುನ್ನ ಪೌಲನು ಕೊರಿಂಥದವರಿಗೆ ಬರೆದ ತನ್ನ ಪತ್ರದಲ್ಲಿ ಬಳಸಿದ “ಲೋಕ” (ಅಥವಾ ಗ್ರೀಕ್‌ನಲ್ಲಿ ಕಾಸ್ಮೊಸ್‌) ಎಂಬ ಪದದ ಅರ್ಥವನ್ನು ನಾವು ಚುಟುಕಾಗಿ ಪರಿಗಣಿಸೋಣ. ಇಲ್ಲಿ ಬಳಸಿರುವ ಕಾಸ್ಮೊಸ್‌, ನಾವು ಜೀವಿಸುತ್ತಿರುವ ಲೋಕವ್ಯವಸ್ಥೆ ಅಂದರೆ ಇಡೀ ಮಾನವ ಸಮಾಜವನ್ನು ಸೂಚಿಸುತ್ತದೆ. ಅದರಲ್ಲಿ ಊಟ, ಬಟ್ಟೆ, ವಸತಿಯಂಥ ದಿನನಿತ್ಯದ ಸಾಮಾನ್ಯ ವಿಷಯಗಳೂ ಸೇರಿವೆ. ದೈನಂದಿನದ ಇಂಥ ಅಗತ್ಯತೆಗಳನ್ನು ಪೂರೈಸಲಿಕ್ಕಾಗಿ ನಮ್ಮಲ್ಲಿ ಹೆಚ್ಚಿನವರು ಕೆಲಸಕ್ಕೆ ಹೋಗಬೇಕಾಗುತ್ತದೆ. ಹೌದು, ನಮ್ಮನ್ನು ಮತ್ತು ನಮ್ಮ ಪರಿವಾರವನ್ನು ನೋಡಿಕೊಳ್ಳುವ ಶಾಸ್ತ್ರೀಯ ಜವಾಬ್ದಾರಿಯನ್ನು ಪೂರೈಸಲು ನಾವು ಲೋಕವನ್ನು ಅನುಭೋಗಿಸುವುದು ಇಲ್ಲವೆ ಬಳಸುವುದು ಅನಿರ್ವಾಯ. (1 ತಿಮೊ. 5:8) ಆದರೆ ಅದೇ ವೇಳೆ, “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ” ಎಂದು ನಮಗೆ ತಿಳಿದಿದೆ. (1 ಯೋಹಾ. 2:17) ಆದಕಾರಣ ನಾವು ಲೋಕವನ್ನು “ಪರಿಪೂರ್ಣವಾಗಿ” ಅಲ್ಲ ಬದಲಿಗೆ ಅಗತ್ಯವಿದ್ದಷ್ಟೇ ಬಳಸುತ್ತೇವೆ.—1 ಕೊರಿಂ. 7:31.

ಬೈಬಲಿನ ಈ ಬುದ್ಧಿವಾದದಿಂದ ಪ್ರಚೋದಿತರಾದ ಹಲವಾರು ಸಹೋದರ ಸಹೋದರಿಯರು ಲೋಕವನ್ನು ಆದಷ್ಟು ಕಡಿಮೆ ಬಳಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ತಮ್ಮ ಸನ್ನಿವೇಶಗಳನ್ನು ಮರುಪರಿಶೀಲಿಸಿದ್ದಾರೆ, ಪೂರ್ಣಸಮಯದ ಉದ್ಯೋಗ ಬಿಟ್ಟು ಪಾರ್ಟ್‌-ಟೈಮ್‌ ಕೆಲಸಮಾಡುವ ನಿರ್ಧಾರ ಮಾಡಿದ್ದಾರೆ ಮತ್ತು ಸರಳ ಜೀವನ ನಡೆಸಿದ್ದಾರೆ. ಈ ಹೊಂದಾಣಿಕೆಗಳನ್ನು ಮಾಡಿದ ಬಳಿಕ ಅವರ ಬಾಳು ನಿಜವಾಗಿಯೂ ಸಮೃದ್ಧಗೊಂಡಿದ್ದನ್ನು ಅವರು ಕಂಡುಕೊಂಡರು. ಏಕೆಂದರೆ ತಮ್ಮ ಕುಟುಂಬದೊಂದಿಗೆ ಮತ್ತು ಯೆಹೋವನ ಸೇವೆಯಲ್ಲಿ ಹೆಚ್ಚು ಸಮಯವನ್ನು ಕಳೆಯಲು ಅವರಿಗೆ ಸಾಧ್ಯವಾಯಿತು. ಅಲ್ಲದೆ ಅವರ ಸರಳ ಜೀವನಶೈಲಿಯು ಲೋಕದ ಮೇಲೆ ಆತುಕೊಳ್ಳುವುದಕ್ಕಿಂತ ಯೆಹೋವನ ಮೇಲೆ ಹೆಚ್ಚೆಚ್ಚಾಗಿ ಆತುಕೊಳ್ಳುವಂತೆ ಮಾಡಿತು. ದೇವರ ರಾಜ್ಯದ ಅಭಿರುಚಿಗಳನ್ನು ವರ್ಧಿಸಲು ನೀವು ಸಹ ನಿಮ್ಮ ಜೀವನವನ್ನು ಸರಳಗೊಳಿಸಲು ಸಾಧ್ಯವೇ?—ಮತ್ತಾ. 6:19-24, 33.

“ಹಿಂದೆಂದಿಗಿಂತಲೂ ನಾವು ಯೆಹೋವನಿಗೆ ಹೆಚ್ಚು ಆಪ್ತರಾಗಿದ್ದೇವೆ”

ಆರಂಭದಲ್ಲಿ ತಿಳಿಸಲಾದ ಮಾರ್ಕ್‌, ಲೋಕವನ್ನು “ಪರಿಪೂರ್ಣವಾಗಿ” ಬಳಸಬಾರದೆಂಬ ಬೈಬಲ್‌ ಸಲಹೆಗೆ ಕಿವಿಗೊಟ್ಟನು. ಅವನು ತನಗೆ ಸಿಕ್ಕಿದ ಲಾಭದಾಯಕ ಬಡತಿಯನ್ನು ನಿರಾಕರಿಸಿದನು. ಕೆಲವು ದಿನಗಳ ಬಳಿಕ ಮತ್ತೆ ಮಾರ್ಕ್‌ನ ಸುಪರ್‌ವೈಸರ್‌ ಆ ಹೊಸ ಹುದ್ದೆಯನ್ನು ಸ್ವೀಕರಿಸುವಂತೆ ಅವನನ್ನು ಒತ್ತಾಯಿಸುತ್ತಾ ಮೊದಲು ತಿಳಿಸಿದ್ದಕ್ಕಿಂತ ಹೆಚ್ಚಿನ ಸಂಬಳದ ಆಮಿಷ ಒಡ್ಡಿದನು. ಮಾರ್ಕ್‌ ಅನ್ನುವುದು: “ಅದು ನನಗೊಂದು ಪರೀಕ್ಷೆಯಾಗಿತ್ತು. ಆದರೆ ಈ ಬಾರಿಯೂ ನಾನು ಬಡತಿಯನ್ನು ನಿರಾಕರಿಸಿದೆ.” ತನ್ನ ಈ ನಿರ್ಧಾರಕ್ಕೆ ಕಾರಣವನ್ನು ವಿವರಿಸುತ್ತಾ ಅವನು ಹೇಳುವುದು: “ನಾನು ಮತ್ತು ನನ್ನ ಹೆಂಡತಿ ಪೌಲಾ, ನಮ್ಮ ಜೀವನವನ್ನು ಆದಷ್ಟು ಪೂರ್ಣವಾಗಿ ಯೆಹೋವನ ಸೇವೆಗೆ ಮೀಸಲಿಡಬೇಕೆಂದು ಬಯಸಿದ್ದೆವು. ಆದುದರಿಂದ ನಮ್ಮ ಜೀವನಶೈಲಿಯನ್ನು ಸರಳಗೊಳಿಸಲು ನಾವು ದೃಢಮನಸ್ಸು ಮಾಡಿದೆವು. ನಮ್ಮ ಈ ಗುರಿ ಮುಟ್ಟಲು ವಿವೇಕವನ್ನು ಅನುಗ್ರಹಿಸುವಂತೆ ಯೆಹೋವನಿಗೆ ಪ್ರಾರ್ಥಿಸಿದೆವು. ಅಲ್ಲದೆ ಯೆಹೋವನ ಸೇವೆಯನ್ನು ಅಧಿಕಗೊಳಿಸಲು ನಾವು ಎಂದಿನಿಂದ ಆರಂಭಿಸಬೇಕೆಂದು ಒಂದು ನಿರ್ದಿಷ್ಟ ತಾರೀಖನ್ನು ಗೊತ್ತುಪಡಿಸಿದೆವು.”

ಪೌಲಾ ಹೇಳುವುದು: “ನಾನು ಆಸ್ಪತ್ರೆಯೊಂದರಲ್ಲಿ ಸೆಕ್ರೆಟರಿಯಾಗಿ ವಾರಕ್ಕೆ ಮೂರು ದಿನ ಕೆಲಸಮಾಡುತ್ತಿದ್ದೆ. ಸಂಬಳವೂ ಸಾಕಾಗುವಷ್ಟಿತ್ತು. ಅಲ್ಲದೆ ನಾನು ರೆಗ್ಯುಲರ್‌ ಪಯನೀಯರ್‌ ಸೇವೆಯನ್ನೂ ಮಾಡುತ್ತಿದ್ದೆ. ಹಾಗಿದ್ದರೂ ಹೆಚ್ಚು ರಾಜ್ಯ ಘೋಷಕರ ಅಗತ್ಯವಿದ್ದಲ್ಲಿಗೆ ಹೋಗಿ ಯೆಹೋವನ ಸೇವೆಮಾಡಲು ನನ್ನ ಗಂಡನಿಗಿದ್ದ ಬಯಕೆ ನನಗೂ ಇತ್ತು. ಆದರೆ ನಾನು ರಾಜಿನಾಮೆಯನ್ನು ಕೊಟ್ಟಾಗ, ಎಗ್‌ಸೆಕ್ಯುಟಿವ್‌ ಸೆಕ್ರೆಟರಿ ಹುದ್ದೆಗೆ ಒಬ್ಬರು ಬೇಕಾಗಿದ್ದಾರೆಂದೂ ಆ ಉನ್ನತ ಹುದ್ದೆಗೆ ನಾನು ಅರ್ಹಳಾಗಿದ್ದೇನೆಂದೂ ಸುಪರ್‌ವೈಸರ್‌ ಹೇಳಿದರು. ನಾನು ಕೆಲಸಮಾಡುತ್ತಿದ್ದ ಆ ಆಸ್ಪತ್ರೆಯಲ್ಲಿ ಸೆಕ್ರೆಟರಿ ಸಿಬ್ಬಂದಿಗಳಲ್ಲೇ ಅತಿ ಹೆಚ್ಚು ವೇತನದ ಹುದ್ದೆ ಅದಾಗಿತ್ತು. ಆದರೆ ನಾನು ಮಾತ್ರ ರಾಜಿನಾಮೆಕೊಡುವ ನನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ಆ ಉನ್ನತ ಹುದ್ದೆಗೆ ನಾನೇಕೆ ಅರ್ಜಿಹಾಕಲಿಲ್ಲವೆಂಬ ಕಾರಣವನ್ನು ಸುಪರ್‌ವೈಸರ್‌ಗೆ ವಿವರಿಸಿದಾಗ ಅವರು ನನ್ನ ನಂಬಿಕೆಯನ್ನು ಮೆಚ್ಚಿ ಪ್ರಶಂಸಿಸಿದರು.”

ಅದಾದ ಸ್ವಲ್ಪದರಲ್ಲೇ ಮಾರ್ಕ್‌ ಮತ್ತು ಪೌಲಾರಿಗೆ ಕೆನಡದ ಏಕಾಂತ ಪ್ರದೇಶದಲ್ಲಿದ್ದ ಚಿಕ್ಕ ಸಭೆಯೊಂದರಲ್ಲಿ ವಿಶೇಷ ಪಯನೀಯರರಾಗಿ ಸೇವೆಮಾಡುವ ನೇಮಕ ಸಿಕ್ಕಿತು. ಅವರು ಅಲ್ಲಿಗೆ ಹೋಗಿದ್ದರ ಫಲಿತಾಂಶವಾದರೂ ಏನು? ಮಾರ್ಕ್‌ ತಿಳಿಸುವುದು: “ನನ್ನ ಕೆಲಸವು ಜೀವನದ ಅರ್ಧದಷ್ಟು ಸಮಯ ಆರ್ಥಿಕ ಸುಭದ್ರತೆಯನ್ನು ಒದಗಿಸಿತ್ತು. ಆ ಕೆಲಸವನ್ನು ಬಿಟ್ಟಾಗ ನನಗೆ ತುಂಬ ಭಯವಾಯಿತು. ಆದರೆ ಯೆಹೋವನು ನಮ್ಮ ಶುಶ್ರೂಷೆಯನ್ನು ಹರಸಿದನು. ದೇವರ ಇಚ್ಛೆಯನ್ನು ಮಾಡುವಂತೆ ಇತರರಿಗೆ ನೆರವು ನೀಡುವುದರಿಂದ ಸಿಗುವ ಪರಮಾನಂದವನ್ನು ನಾವು ಸವಿಯುತ್ತಿದ್ದೇವೆ. ಅಲ್ಲದೆ, ಪೂರ್ಣಸಮಯದ ಸೇವೆಯಿಂದ ನಮ್ಮ ದಾಂಪತ್ಯ ಜೀವನವೂ ಸಮೃದ್ಧಗೊಂಡಿದೆ. ನಮ್ಮ ಸಂಭಾಷಣೆಯು ನಿಜವಾಗಿಯೂ ಪ್ರಾಮುಖ್ಯವಾಗಿರುವ ಆಧ್ಯಾತ್ಮಿಕ ವಿಷಯಗಳ ಕುರಿತಾಗಿರುತ್ತದೆ. ಹಿಂದೆಂದಿಗಿಂತಲೂ ನಾವು ಯೆಹೋವನಿಗೆ ಹೆಚ್ಚು ಆಪ್ತರಾಗಿದ್ದೇವೆ.” (ಅ. ಕೃ. 20:35) ಪೌಲಾ ಹೇಳುವುದು: “ನಿಮ್ಮ ಕೆಲಸವನ್ನು ಮತ್ತು ಸುದೀರ್ಘಕಾಲದಿಂದ ನೀವು ವಾಸವಾಗಿದ್ದ ಮನೆಯ ಸವಲತ್ತುಗಳನ್ನೆಲ್ಲ ಬಿಟ್ಟು ಬರುವಾಗ, ನಿಮ್ಮೆಲ್ಲ ಭರವಸೆಯನ್ನು ನೀವು ಯೆಹೋವನ ಮೇಲಿಡಬೇಕಾಗುತ್ತದೆ. ನಾವು ಅದನ್ನೇ ಮಾಡಿದೆವು ಮತ್ತು ಯೆಹೋವನು ನಮ್ಮನ್ನು ಆಶೀರ್ವದಿಸಿದನು. ನಮ್ಮ ಹೊಸ ಸಭೆಯಲ್ಲಿರುವ ಪ್ರಿಯ ಸಹೋದರ ಸಹೋದರಿಯರು ತೋರಿಸಿದ ಪ್ರೀತಿ ಅಷ್ಟಿಷ್ಟಲ್ಲ. ನಾವು ಅವರಿಗೆ ಬೇಕಾಗಿದ್ದೇವೆಂಬ ಅನಿಸಿಕೆಯನ್ನು ಅವರು ನಮ್ಮಲ್ಲಿ ಮೂಡಿಸಿದರು. ಹಿಂದೆ ಕೆಲಸದಲ್ಲಿ ವ್ಯಯಿಸುತ್ತಿದ್ದ ನನ್ನ ಶಕ್ತಿಸಾಮಾರ್ಥ್ಯವನ್ನೆಲ್ಲ ಈಗ ಜನರಿಗೆ ಆಧ್ಯಾತ್ಮಿಕವಾಗಿ ಸಹಾಯಮಾಡಲು ಬಳಸುತ್ತಿದ್ದೇನೆ. ಈ ನೇಮಕವನ್ನು ಪೂರೈಸುವಾಗ ಸಂತೋಷವು ಉಕ್ಕಿಬರುತ್ತಿದೆ.”

ಬೇಕಾದಷ್ಟಿದ್ದರೂ ನೆಮ್ಮದಿಯಿಲ್ಲ’

ಹಿಂದೆ ತಿಳಿಸಲಾದ ಏಮೀ ತೀರ ಭಿನ್ನವಾದ ನಿರ್ಣಯವನ್ನು ತೆಗೆದುಕೊಂಡಳು. ತನಗೆ ಸಿಕ್ಕಿದ ಲಾಭದಾಯಕ ಪೂರ್ಣಸಮಯದ ಉದ್ಯೋಗವನ್ನು ಅವಳು ಸ್ವೀಕರಿಸಿದಳು. ಏಮೀ ಹೇಳುವುದು: “ಕೆಲಸ ಸಿಕ್ಕಿದ ಮೊದಲ ವರ್ಷ ಶುಶ್ರೂಷೆಯಲ್ಲಿನ ನನ್ನ ಹುರುಪು ಹಚ್ಚುಹಸುರಾಗಿತ್ತು. ಆದರೆ ರಾಜ್ಯಾಭಿರುಚಿಗಳ ಮೇಲಿದ್ದ ನನ್ನ ನೋಟವು ಮೆಲ್ಲಮೆಲ್ಲನೆ ವೃತ್ತಿ ಜೀವನದಲ್ಲಿ ಅಭಿವೃದ್ಧಿಯೆತ್ತರಕ್ಕೇರುವುದರ ಕಡೆಗೆ ತಿರುಗಿತು. ಉನ್ನತ ಹುದ್ದೆಯ ಆಕರ್ಷಕ ಅವಕಾಶಗಳು ಒದಗಿಬಂದವು. ನನ್ನ ಎಲ್ಲ ಬಲಸಾಮಾರ್ಥ್ಯವನ್ನು ಬಡತಿಯ ಏಣಿ ಏರುವುದರಲ್ಲೇ ಬಳಸಲಾರಂಭಿಸಿದೆ. ಉದ್ಯೋಗದಲ್ಲಿ ನನಗೆ ಜವಾಬ್ದಾರಿಗಳು ಹೆಚ್ಚಿದಂತೆ ಶುಶ್ರೂಷೆಯಲ್ಲಿ ನಾನು ಕಳೆಯುವ ಸಮಯವು ಕಡಿಮೆ ಕಡಿಮೆಯಾಗುತ್ತಾ ಬಂತು. ಕೊನೆಗೆ ಸೇವೆಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟೆ.”

ಆ ಸಮಯವನ್ನು ನೆನಸುತ್ತಾ ಏಮೀ ಹೇಳುವುದು: “ನನ್ನಲ್ಲಿ ಹಣ ಬೇಕಾದಷ್ಟಿತ್ತು. ವೃತ್ತಿಪರ ಸ್ಥಾನಮಾನದಿಂದ ಬಂದ ಪ್ರತಿಷ್ಠೆಯು ನನಗೆ ಮುದನೀಡಿತು. ಅನೇಕ ಸ್ಥಳಗಳಿಗೆ ಹೋಗುವ ಅವಕಾಶ ಸಿಕ್ಕಿತು. ಆದರೆ ಒಂದಿಷ್ಟೂ ನೆಮ್ಮದಿಯಿರಲ್ಲಿಲ್ಲ. ಹಣವಿದ್ದರೂ ನನ್ನ ಸಮಸ್ಯೆಗಳಿಗೆ ಕೊನೆ ಇರಲಿಲ್ಲ. ಇದಕ್ಕೆಲ್ಲಾ ಕಾರಣವೇನೆಂದು ಆಲೋಚಿಸತೊಡಗಿದೆ. ಕೊನೆಗೂ ನನಗೆ ಮನವರಿಕೆಯಾಯಿತು, ಈ ಲೋಕದಲ್ಲಿ ವೃತ್ತಿಯೊಂದನ್ನು ಬೆನ್ನಟ್ಟಲು ಹೋಗಿ ‘ಕ್ರಿಸ್ತನಂಬಿಕೆಯನ್ನು ಬಿಟ್ಟು’ಬಿಡುವಷ್ಟು ದುಸ್ಥಿತಿಗೆ ನಾನು ತಲಪಿದ್ದೆ. ಇದರ ಪರಿಣಾಮವಾಗಿ ದೇವರ ವಾಕ್ಯ ಹೇಳುವಂತೆಯೇ ನಾನು ‘ಅನೇಕ ವೇದನೆಗಳಿಂದ’ ತಿವಿಸಿಕೊಳ್ಳತ್ತಿದ್ದೆ.”—1 ತಿಮೊ. 6:10.

ಏಮೀ ಏನು ಮಾಡಿದಳು? ಅವಳು ಹೇಳುವುದು: “ಆಧ್ಯಾತ್ಮಿಕವಾಗಿ ಸ್ವಸ್ಥಳಾಗಲು ನಾನು ಹಿರಿಯರ ಸಹಾಯ ಕೇಳಿದೆ ಮತ್ತು ಕೂಟಗಳಿಗೆ ಹಾಜರಾಗಲು ಆರಂಭಿಸಿದೆ. ರಾಜ್ಯಗೀತೆಯೊಂದನ್ನು ಹಾಡುವಾಗಲಂತೂ ದುಃಖ ತಾಳಲಾರದೆ ನಾನು ಅತ್ತುಬಿಟ್ಟೆ. ಪಯನೀಯರಳಾಗಿ ಆ ಐದು ವರ್ಷ ಕೊಯ್ಲಿನ ಕೆಲಸದಲ್ಲಿ ಭಾಗವಹಿಸುತ್ತಿದ್ದಾಗ ನನ್ನಲ್ಲಿ ಹೆಚ್ಚೇನು ಹಣವಿರದಿದ್ದರೂ ನನಗೆಷ್ಟು ನೆಮ್ಮದಿಯಿತ್ತೆಂದು ನೆನಪಿಸಿಕೊಂಡೆ. ಹಣದ ಹಿಂದೆ ಬಿದ್ದು ಸಮಯ ಪೋಲುಮಾಡುವುದನ್ನು ಬಿಟ್ಟು ರಾಜ್ಯಾಭಿರುಚಿಗಳನ್ನು ಪ್ರಥಮ ಸ್ಥಾನದಲ್ಲಿಡಬೇಕೆಂದು ನನಗೆ ತಿಳಿಯಿತು. ನನ್ನ ವೃತ್ತಿಯಲ್ಲಿ ಹಿಂಬಡತಿಯನ್ನು ತೆಗೆದುಕೊಂಡೆ ಮತ್ತು ಸಂಬಳವು ಅರ್ಧಕರ್ಧ ಕಡಿಮೆಯಾಯಿತು. ನಾನು ಮತ್ತೊಮ್ಮೆ ಸಾರುವ ಕೆಲಸವನ್ನು ಪ್ರಾರಂಭಿಸಿದೆ.” ಏಮೀ ಸಂತೋಷದಿಂದ ಉದ್ಗರಿಸುವುದು: “ಕೆಲವು ವರ್ಷ ಪಯನೀಯರಳಾಗಿದ್ದಾಗ ನನಗೆ ಆನಂದ ಇತ್ತು. ಈಗ ಮತ್ತೆ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ನನಗೆ ನೆಮ್ಮದಿಯಿದೆ. ಆದರೆ ಈ ಲೋಕದಲ್ಲಿ ಹೆಚ್ಚಿನ ಸಮಯವನ್ನು ಕೆಲಸಮಾಡಲು ಕಳೆಯುತ್ತಿದ್ದಾಗ ಎಂದೂ ಇಂಥ ನೆಮ್ಮದಿಯನ್ನು ಅನುಭವಿಸಿರಲಿಲ್ಲ.”

ನಿಮ್ಮ ಪರಿಸ್ಥಿತಿಗಳನ್ನು ಹೊಂದಿಸಿಕೊಂಡು ಜೀವನವನ್ನು ಸರಳಗೊಳಿಸಲು ನಿಮಗೆ ಸಾಧ್ಯವೋ? ಸಿಗುವ ಸಮಯವನ್ನೆಲ್ಲ ರಾಜ್ಯಾಭಿರುಚಿಗಳ ಪ್ರವರ್ದನೆಗಾಗಿ ಬಳಸಿದರೆ ನಿಮ್ಮ ಬದುಕನ್ನು ನೀವೂ ಸಮೃದ್ಧಗೊಳಿಸಬಲ್ಲಿರಿ.—ಜ್ಞಾನೋ. 10:22.

[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಿಮ್ಮ ಪರಿಸ್ಥಿತಿಗಳನ್ನು ಹೊಂದಿಸಿಕೊಂಡು ಜೀವನವನ್ನು ಸರಳಗೊಳಿಸಲು ನಿಮಗೆ ಸಾಧ್ಯವೋ?

[ಪುಟ 19ರಲ್ಲಿರುವ ಚೌಕ/ಚಿತ್ರ]

“ಇಷ್ಟರಲ್ಲೇ ಅದು ನನಗೆ ಬಲು ಇಷ್ಟವಾಯಿತು!”

ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಕ್ರೈಸ್ತ ಹಿರಿಯನಾಗಿರುವ ಡೇವಿಡ್‌, ತನ್ನ ಹೆಂಡತಿ ಮಕ್ಕಳಂತೆ ತಾನೂ ಪೂರ್ಣ ಸಮಯದ ಸೇವೆ ಮಾಡಬಯಸಿದ. ಅದಕ್ಕಾಗಿ ತಾನು ಕೆಲಸಮಾಡುತ್ತಿದ್ದ ಕಂಪೆನಿಯಲ್ಲಿಯೇ ಪಾರ್ಟ್‌-ಟೈಮ್‌ ನೌಕರಿಯನ್ನು ಪಡಕೊಂಡು ರೆಗ್ಯುಲರ್‌ ಪಯನೀಯರ್‌ ಸೇವೆಯನ್ನು ಆರಂಭಿಸಿದ. ಈ ಹೊಂದಾಣಿಕೆಯಿಂದ ಅವನ ಬದುಕು ಸಮೃದ್ಧಗೊಂಡಿತೇ? ಕೆಲವು ತಿಂಗಳ ಬಳಿಕ ಡೇವಿಡ್‌ ತನ್ನ ಗೆಳಯನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದು: “ಒಬ್ಬನು ತನ್ನ ಕುಟುಂಬದೊಂದಿಗೆ ಜೊತೆಗೂಡಿ ಯೆಹೋವನ ಸೇವೆಯನ್ನು ಸಂಪೂರ್ಣವಾಗಿ ಮಾಡುವುದರಲ್ಲಿ ಪಡಕೊಳ್ಳುವ ಸಂತೃಪ್ತಿ ಅವನಿಗೆ ಬೇರಾವುದರಲ್ಲೂ ಸಿಗದು. ಪಯನೀಯರ್‌ ಸೇವೆಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯವಾದರೂ ಹಿಡಿಯಬಹುದೆಂದು ನಾನು ಅಂದುಕೊಂಡಿದ್ದೆ. ಆದರೆ ಇಷ್ಟರಲ್ಲೇ ಅದು ನನಗೆ ಬಲು ಇಷ್ಟವಾಯಿತು! ಅದೆಷ್ಟೋ ಚೇತೋಹಾರಿಯಾಗಿದೆ.”

[ಪುಟ 18ರಲ್ಲಿರುವ ಚಿತ್ರ]

ಮಾರ್ಕ್‌ ಮತ್ತು ಪೌಲಾ ಶುಶ್ರೂಷೆಯಲ್ಲಿ