ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತರು ಗೋದಿಯಂತೆ ತೂರಲ್ಪಡುವಾಗ

ಕ್ರೈಸ್ತರು ಗೋದಿಯಂತೆ ತೂರಲ್ಪಡುವಾಗ

ಕ್ರೈಸ್ತರು ಗೋದಿಯಂತೆ ತೂರಲ್ಪಡುವಾಗ

ಯೇಸು ತನ್ನ ಮರಣಕ್ಕೆ ಸ್ವಲ್ಪ ಮುಂಚೆ ಶಿಷ್ಯರನ್ನು ಎಚ್ಚರಿಸಿದ್ದು: “ಇಗೋ: ಸೈತಾನನು ನಿಮ್ಮನ್ನು ಗೋದಿಯಂತೆ ತೂರಬೇಕೆಂದು ಅಪ್ಪಣೆ ಕೇಳಿದ್ದಾನೆ.” (ಲೂಕ 22:31, NIBV) ಯೇಸು ಅದನ್ನು ಹೇಳಿದ್ದು ಯಾವ ಅರ್ಥದಲ್ಲಿ?

ಯೇಸುವಿನ ದಿನಗಳಲ್ಲಿ, ಗೋದಿ ಪೈರಿನ ಕಟಾವಿಗಾಗಿ ಬಹಳಷ್ಟು ಸಮಯ ಹಾಗೂ ಪರಿಶ್ರಮ ಬೇಕಾಗುತ್ತಿತ್ತು. ಕೊಯ್ಯುವವರು ಮೊದಲಾಗಿ ಹೊಲದಿಂದ ಗೋದಿಯ ದಂಟುಗಳನ್ನು ಒಟ್ಟುಗೂಡಿಸುತ್ತಿದ್ದರು. ಅನಂತರ ಅದನ್ನು ತುಂಡು ತುಂಡು ಮಾಡಲು ಗಟ್ಟಿಯಾದ ಮೇಲ್ಮೈ ಮೇಲೆ ಬಡಿಯಲಾಗುತ್ತಿತ್ತು ಇಲ್ಲವೇ ಹೊಲದ ಪ್ರಾಣಿಗಳನ್ನು ಬಳಸಿ ಅದರ ಮೇಲೆ ತೆನೆಬಡಿಯುವ ಜಾರುಬಂಡಿಯನ್ನು ಎಳೆಯಲಾಗುತ್ತಿತ್ತು. ಈ ಪ್ರಕ್ರಿಯೆಯು ಕಾಳನ್ನು ದಂಟು ಮತ್ತು ಹೊಟ್ಟಿನಿಂದ ಬೇರ್ಪಡಿಸುತ್ತಿತ್ತು. ಆಮೇಲೆ ರೈತರು ಕಾಳು, ದಂಟು ಮತ್ತು ಹೊಟ್ಟಿನ ಈ ಮಿಶ್ರಣವನ್ನು ಗಾಳಿಗೆ ತೂರುತ್ತಿದ್ದರು. ಆಗ ಕಾಳುಗಳು ಅಥವಾ ಧಾನ್ಯವು ತೆನೆಬಡಿಯುವ ನೆಲಕ್ಕೆ ಬೀಳುತ್ತಿತ್ತು, ಆದರೆ ದಂಟು ಮತ್ತು ಹೊಟ್ಟನ್ನು ಗಾಳಿ ಹೊಡೆದುಕೊಂಡು ಹೋಗುತ್ತಿತ್ತು. ಕೊನೆಯಲ್ಲಿ ಕಾಳುಗಳಿಂದ ಅನಾವಶ್ಯಕ ಪದಾರ್ಥಗಳನ್ನು ಜಾಗರೂಕತೆಯಿಂದ ಪ್ರತ್ಯೇಕಿಸಲಾಗುತ್ತಿತ್ತು.

ಯೇಸುವಿನ ಮಾತುಗಳಿಗೆ ಹೊಂದಿಕೆಯಲ್ಲಿ, ಸೈತಾನನು ಯೇಸುವಿನ ಶಿಷ್ಯರ ವಿರುದ್ಧ ಸತತ ಆಕ್ರಮಣ ಮಾಡಿದನು ಮತ್ತು ಇಂದು ನಮ್ಮ ಮೇಲೂ ಆಕ್ರಮಣ ಮಾಡುತ್ತಾನೆ. (ಎಫೆ. 6:11) ನಾವು ಜೀವನದಲ್ಲಿ ಎದುರಿಸುವ ಪ್ರತಿಯೊಂದು ತೊಂದರೆಯನ್ನು ಸೈತಾನನೇ ನೇರವಾಗಿ ತಂದೊಡ್ಡುವುದಿಲ್ಲ ನಿಜ. (ಪ್ರಸಂ. 9:11) ಆದರೂ ನಮ್ಮ ಸಮಗ್ರತೆಯನ್ನು ಮುರಿಯಲು ಸೈತಾನನು ತನ್ನಿಂದ ಸಾಧ್ಯವಿರುವ ಯಾವುದೇ ಸಾಧನವನ್ನು ಬಳಸಲು ಕಾತುರನಾಗಿದ್ದಾನೆ. ಉದಾಹರಣೆಗೆ ಪ್ರಾಪಂಚಿಕ ಜೀವನಶೈಲಿಯನ್ನು ಬೆನ್ನಟ್ಟುವಂತೆ, ಅಹಿತಕರ ಮನೋರಂಜನೆಯನ್ನು ಆಯ್ಕೆ ಮಾಡುವಂತೆ ಅಥವಾ ಅನೈತಿಕ ಲೈಂಗಿಕ ನಡತೆಯಲ್ಲಿ ಒಳಗೂಡುವಂತೆ ಆತನು ನಮ್ಮನ್ನು ಪ್ರಲೋಭಿಸಬಹುದು. ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರದಲ್ಲಿ ಈ ಲೋಕವು ನೀಡುವ ಅವಕಾಶಗಳನ್ನು ಪೂರ್ಣವಾಗಿ ಬೆನ್ನಟ್ಟುವಂತೆ ಒತ್ತಡ ಹೇರಲು ಶಾಲೆಯ ಅಥವಾ ಉದ್ಯೋಗದ ಸ್ಥಳದಲ್ಲಿನ ಒಡನಾಡಿಗಳು ಮತ್ತು ನಮ್ಮ ಅವಿಶ್ವಾಸಿ ಸಂಬಂಧಿಕರನ್ನು ಸಹ ಅವನು ಬಳಸಬಹುದು. ಇದಲ್ಲದೆ ದೇವರೊಂದಿಗಿನ ನಮ್ಮ ಸಮಗ್ರತೆಯನ್ನು ಮುರಿಯುವ ಪ್ರಯತ್ನದಲ್ಲಿ ಸೈತಾನನು ನೇರವಾದ ಹಿಂಸೆಯನ್ನೂ ತರಬಹುದು. ಖಂಡಿತವಾಗಿಯೂ ನಮ್ಮನ್ನು ಸಾಂಕೇತಿಕ ಅರ್ಥದಲ್ಲಿ ತೂರಲು ಸೈತಾನನು ಇನ್ನೂ ಅನೇಕ ವಿಧಾನಗಳನ್ನು ಉಪಯೋಗಿಸುತ್ತಾನೆ.

ನಾವು ಈ ಬಲಾಢ್ಯ ಶತ್ರುವಿನ ವಿರುದ್ಧ ಹೇಗೆ ನಿಲ್ಲಬಲ್ಲೆವು? ಸ್ವಂತ ಬಲದಿಂದ ನಾವು ಹಾಗೆ ನಿಲ್ಲಲಾರೆವು. ಸೈತಾನನು ನಮಗಿಂತಲೂ ಬಲಶಾಲಿಯಾಗಿದ್ದಾನೆ. ಆದಾಗ್ಯೂ, ಸೈತಾನನಿಗಿಂತ ಯೆಹೋವನಿಗೆ ಅಪರಿಮಿತ ಬಲವಿದೆ ಎಂಬುದು ನಮಗೆ ತಿಳಿದಿದೆ. ಯೆಹೋವನಲ್ಲಿ ನಮಗೆ ಪೂರ್ಣ ಭರವಸೆ ಇರುವಲ್ಲಿ, ವಿವೇಕಕ್ಕಾಗಿ ಮತ್ತು ತಾಳಿಕೊಳ್ಳುವಂತೆ ಧೈರ್ಯಕ್ಕಾಗಿ ಶ್ರದ್ಧೆಯಿಂದ ಪ್ರಾರ್ಥಿಸುವಲ್ಲಿ ಮತ್ತು ಆತನ ಮಾರ್ಗದರ್ಶನಕ್ಕೆ ಸಂಪೂರ್ಣವಾಗಿ ಅಂಟಿಕೊಳ್ಳುವಲ್ಲಿ ಸೈತಾನನ ಆಕ್ರಮಣಗಳನ್ನು ಎದುರಿಸಲು ಆತನು ನಮ್ಮನ್ನು ಬಲಪಡಿಸುವನು.—ಕೀರ್ತ. 25:4, 5.

ಪರೀಕ್ಷೆಯ ಕೆಳಗಿರುವಾಗ ಸೈತಾನನ ಸಂಚುಗಳಿಂದ ತಪ್ಪುದಾರಿಗೆ ಎಳೆಯಲ್ಪಡದಂತೆ, “ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ಗ್ರಹಿಸುವ ಸಾಮರ್ಥ್ಯ ನಮಗಿರಬೇಕು. (ಇಬ್ರಿ. 5:13, 14) ಆ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಯೆಹೋವನು ನಮಗೆ ಸಹಾಯ ನೀಡಬಲ್ಲನು. ಆಮೇಲೆ ಏನೇ ಸಂಭವಿಸಲಿ ನಾವು ಸರಿಯಾದ ಮಾರ್ಗಕ್ಕೆ ಅಂಟಿಕೊಂಡಿರಬೇಕು. ಒಂದು ವೇಳೆ ನಾವು ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವುದಾದರೆ, ಒಳ್ಳೇದನ್ನು ಮಾಡಬೇಕೆಂಬ ನಮ್ಮ ಧೀರ ನಿರ್ಧಾರವನ್ನು ಆತನು ತಪ್ಪದೇ ಬೆಂಬಲಿಸುವನು.—ಎಫೆ. 6:10.

ಸೈತಾನನು ನಮ್ಮನ್ನು ಗೋದಿಯಂತೆ ತೂರಲು ಪ್ರಯತ್ನಿಸಿಯಾನು. ಆದರೆ ನಾವು ಯೆಹೋವನ ಬಲದಿಂದ ನಂಬಿಕೆಯಲ್ಲಿ ದೃಢರಾಗಿದ್ದು ಅವನನ್ನು ಎದುರಿಸಬಹುದು. (1 ಪೇತ್ರ 5:9) ಹೌದು, ಯೆಹೋವನ ವಾಕ್ಯವು ನಮಗೆ ಭರವಸೆಯನ್ನೀಯುವುದು: “ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.”—ಯಾಕೋ. 4:7.