ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವಜಲದ ಒರತೆಗಳ ಬಳಿಗೆ ನಡೆಸಲು ಯೋಗ್ಯರಾಗಿ ಎಣಿಸಲ್ಪಟ್ಟವರು

ಜೀವಜಲದ ಒರತೆಗಳ ಬಳಿಗೆ ನಡೆಸಲು ಯೋಗ್ಯರಾಗಿ ಎಣಿಸಲ್ಪಟ್ಟವರು

ಜೀವಜಲದ ಒರತೆಗಳ ಬಳಿಗೆ ನಡೆಸಲು ಯೋಗ್ಯರಾಗಿ ಎಣಿಸಲ್ಪಟ್ಟವರು

“ಕುರಿಯಾದಾತನು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ.” —ಪ್ರಕ. 7:17.

ಭೂಮಿಯ ಮೇಲೆ ಕ್ರಿಸ್ತನ ಅಭಿರುಚಿಗಳನ್ನು ನೋಡಿಕೊಳ್ಳುತ್ತಿರುವ ಅಭಿಷಿಕ್ತ ಕ್ರೈಸ್ತರನ್ನು ದೇವರ ವಾಕ್ಯವು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳು’ ಎಂದು ಗುರುತಿಸುತ್ತದೆ. ಕ್ರಿಸ್ತನು 1918ರಲ್ಲಿ ಅಭಿಷಿಕ್ತರಾದ ಈ ‘ಆಳನ್ನು’ ಪರೀಕ್ಷಿಸಿದಾಗ, ಭೂಮಿಯ ಮೇಲಿದ್ದ ಇವರು ನಂಬಿಗಸ್ತಿಕೆಯಿಂದ ‘ಹೊತ್ತುಹೊತ್ತಿಗೆ [ಆಧ್ಯಾತ್ಮಿಕ] ಆಹಾರ’ ಕೊಡುವುದನ್ನು ಕಂಡುಕೊಂಡನು. ಹೀಗಿರಲಾಗಿ ಯಜಮಾನನಾದ ಯೇಸು ತದನಂತರ ಅವರನ್ನು ‘ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸಲು’ ಸಂತೋಷಪಟ್ಟನು. (ಮತ್ತಾಯ 24:45-47ನ್ನು ಓದಿ.) ಈ ರೀತಿಯಲ್ಲಿ ಅಭಿಷಿಕ್ತರು ತಮ್ಮ ಸ್ವರ್ಗೀಯ ಸ್ವಾಸ್ತ್ಯವನ್ನು ಪಡೆಯುವ ಮುಂಚೆ ಇಲ್ಲಿ ಭೂಮಿಯ ಮೇಲೆ ಯೆಹೋವನ ಇತರ ಆರಾಧಕರಿಗೆ ನೆರವಾಗುತ್ತಾರೆ.

2 ಒಬ್ಬ ಯಜಮಾನನಿಗೆ ತನ್ನ ಆಸ್ತಿ ಇಲ್ಲವೇ ಸ್ವತ್ತುಗಳ ಮೇಲೆಅಧಿಕಾರವಿದೆ. ಅವುಗಳನ್ನು ಆತನು ತನ್ನ ಇಷ್ಟದ ಪ್ರಕಾರ ಬಳಸಬಹುದು. ಯೆಹೋವನು ಪಟ್ಟಕ್ಕೇರಿಸಿದ ರಾಜನಾದ ಯೇಸು ಕ್ರಿಸ್ತನ ಆಸ್ತಿಯೆಂದರೆ, ಭೂಮಿಯಲ್ಲಿ ದೇವರ ರಾಜ್ಯಕ್ಕೆ ಸಂಬಂಧಿಸಿದ ಎಲ್ಲ ಅಭಿರುಚಿಗಳೇ. ಇದರಲ್ಲಿ, ಅಪೊಸ್ತಲ ಯೋಹಾನನು ದರ್ಶನದಲ್ಲಿ ನೋಡಿದ ‘ಮಹಾ ಸಮೂಹವು’ ಸಹ ಒಳಗೂಡಿದೆ. ಈ ಮಹಾ ಸಮೂಹವನ್ನು ಯೋಹಾನನು ಈ ರೀತಿ ವರ್ಣಿಸುತ್ತಾನೆ: “ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು ಕಂಡೆನು. ಅವರು ಸಕಲ ಜನಾಂಗಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದರು. ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು.”—ಪ್ರಕ. 7:9.

3 ಆ ಮಹಾ ಸಮೂಹದ ಸದಸ್ಯರು, ಯಾರನ್ನು ಯೇಸು ‘ಬೇರೆ ಕುರಿಗಳು’ ಎಂದು ಕರೆದನೊ ಆ ಗುಂಪಿನ ಭಾಗವಾಗಿದ್ದಾರೆ. (ಯೋಹಾ. 10:16) ಈ ಮಹಾ ಸಮೂಹದವರಿಗೆ ಪರದೈಸ್‌ ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯಿದೆ. ಯೇಸು ತಮ್ಮನ್ನು ‘ಜೀವಜಲದ ಒರತೆಗಳ ಬಳಿಗೆ ನಡಿಸುವನು ಮತ್ತು ದೇವರು ತಮ್ಮ ಕಣ್ಣೀರನ್ನೆಲ್ಲಾ ಒರಸಿಬಿಡುವನು’ ಎಂಬ ದೃಢಭರವಸೆ ಅವರಿಗಿದೆ. ಇದನ್ನು ಮನಸ್ಸಿನಲ್ಲಿಟ್ಟವರಾಗಿ ಅವರು ‘ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.’ (ಪ್ರಕ. 7:14, 17) ಅವರು ಯೇಸುವಿನ ಯಜ್ಞದಲ್ಲಿ ನಂಬಿಕೆಯಿಟ್ಟಿದ್ದಾರೆ ಮತ್ತು ಹೀಗೆ ದೇವರ ದೃಷ್ಟಿಯಲ್ಲಿ ಅವರಿಗೆ ‘ಶುಭ್ರವಾದ ನಿಲುವಂಗಿಗಳಿವೆ.’ ಅಬ್ರಹಾಮನಂತೆಯೇ ಅವರನ್ನು ದೇವರ ಸ್ನೇಹಿತರಾಗಿ ನೀತಿವಂತರೆಂದು ನಿರ್ಣಯಿಸಲಾಗುತ್ತದೆ.

4 ಅಲ್ಲದೆ, ಹೆಚ್ಚುತ್ತಿರುವ ಸಂಖ್ಯೆಯ ಬೇರೆ ಕುರಿಗಳ ಮಹಾ ಸಮೂಹವನ್ನು ದೇವರು ನೀತಿವಂತರೆಂದು ಎಣಿಸುವುದರಿಂದ ಅವರು ಮಹಾ ಸಂಕಟದಲ್ಲಿ ಈ ವ್ಯವಸ್ಥೆಯ ನಾಶನದಿಂದ ಪಾರಾಗಲು ನಿರೀಕ್ಷಿಸಬಲ್ಲರು. (ಯಾಕೋ. 2:23-26) ಅವರು ಯೆಹೋವನಿಗೆ ಸಮೀಪವಾಗಬಲ್ಲರು ಮತ್ತು ಒಂದು ಗುಂಪಿನೋಪಾದಿ ಹರ್ಮಗೆದೋನ್‌ನಿಂದ ಬಚಾವಾಗುವ ಅದ್ಭುತ ಪ್ರತೀಕ್ಷೆ ಅವರಿಗಿದೆ. (ಯಾಕೋ. 4:8; ಪ್ರಕ. 7:15) ಅವರು ಒಂದು ಪ್ರತ್ಯೇಕ ಗುಂಪಾಗಿರುವುದಿಲ್ಲ ಬದಲಾಗಿ ಸ್ವರ್ಗೀಯ ರಾಜನ ಹಾಗೂ ಭೂಮಿಯಲ್ಲಿರುವ ಆತನ ಅಭಿಷಿಕ್ತ ಸಹೋದರರ ನಿರ್ದೇಶನದ ಕೆಳಗೆ ಸೇವೆಮಾಡಲು ಸಿದ್ಧರಿದ್ದಾರೆ.

5 ಅಭಿಷಿಕ್ತ ಕ್ರೈಸ್ತರು ಸೈತಾನನ ಲೋಕದಿಂದ ತೀವ್ರ ವಿರೋಧವನ್ನು ಎದುರಿಸಿದ್ದಾರೆ ಮತ್ತು ಮುಂದಕ್ಕೂ ಎದುರಿಸುವರು. ಆದರೆ ಅವರು ತಮ್ಮ ಸಂಗಡಿಗರಾದ ಮಹಾ ಸಮೂಹದವರ ಬೆಂಬಲದ ಮೇಲೆ ಆತುಕೊಳ್ಳಬಲ್ಲರು. ಅಭಿಷಿಕ್ತ ಕ್ರೈಸ್ತರ ಸಂಖ್ಯೆ ಈಗ ಕಡಿಮೆ ಆಗುತ್ತಿರುವಾಗ ಮಹಾ ಸಮೂಹವಾದರೊ ವರ್ಷವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಹೀಗಿರುವುದರಿಂದ ಲೋಕದಾದ್ಯಂತವಿರುವ ಸುಮಾರು 1,00,000 ಕ್ರೈಸ್ತ ಸಭೆಗಳ ಮೇಲೆ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಅಭಿಷಿಕ್ತರಿಗೆ ಸಾಧ್ಯವಿಲ್ಲ. ಆದುದರಿಂದ ಅಭಿಷಿಕ್ತರಿಗೆ ಬೇರೆ ಕುರಿಗಳು ಬೆಂಬಲ ಕೊಡುವ ಒಂದು ವಿಧವು, ಮಹಾ ಸಮೂಹದ ಅರ್ಹ ಪುರುಷರು ಸಭಾ ಹಿರಿಯರಾಗಿ ಸೇವೆಸಲ್ಲಿಸುವ ಮೂಲಕವೇ. ಇವರು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಕೈಗೆ ಒಪ್ಪಿಸಲಾಗಿರುವ ಲಕ್ಷಾಂತರ ಮಂದಿ ಕ್ರೈಸ್ತರನ್ನು ನೋಡಿಕೊಳ್ಳಲು ಸಹಾಯ ಮಾಡುತ್ತಾರೆ.

6 ಅಭಿಷಿಕ್ತ ಕ್ರೈಸ್ತರು ತಮ್ಮ ಸಂಗಡಿಗರಾದ ಬೇರೆ ಕುರಿಗಳಿಗೆ ಕೊಡುವ ಸಿದ್ಧಮನಸ್ಸಿನ ಬೆಂಬಲವನ್ನು ಪ್ರವಾದಿ ಯೆಶಾಯನು ಮುಂತಿಳಿಸಿದ್ದನು. ಅವನು ಬರೆದುದು: “ಯೆಹೋವನ ಈ ಮಾತನ್ನು ಕೇಳಿರಿ—ಐಗುಪ್ತದ ಆದಾಯವೂ [“ಕೂಲಿಯಿಲ್ಲದ ಕೆಲಸದವರು,” NW] ಕೂಷಿನ ವ್ಯಾಪಾರವೂ [“ವ್ಯಾಪಾರಸ್ಥರೂ,” NW] ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವರಾಗಿ ನಿಮ್ಮನ್ನು ಅನುಸರಿಸುವರು.” (ಯೆಶಾ. 45:14) ಇಂದು ಭೂನಿರೀಕ್ಷೆಯುಳ್ಳ ಕ್ರೈಸ್ತರು ಅಭಿಷಿಕ್ತ ಆಳು ವರ್ಗ ಮತ್ತು ಅದರ ಆಡಳಿತ ಮಂಡಲಿಯನ್ನು ಸಾಂಕೇತಿಕ ರೀತಿಯಲ್ಲಿ ಅನುಸರಿಸುತ್ತಿದ್ದಾರೆ ಅಂದರೆ ಅವರ ನೇತೃತ್ವದ ಕೆಳಗೆ ನಡೆಯುತ್ತಿದ್ದಾರೆ. ಭೂಮಿಯಲ್ಲಿರುವ ತನ್ನ ಅಭಿಷಿಕ್ತ ಹಿಂಬಾಲಕರಿಗೆ ಕ್ರಿಸ್ತನು ನೇಮಿಸಿದ ಲೋಕವ್ಯಾಪಕ ಸಾರುವ ಕೆಲಸವನ್ನು ಬೇರೆ ಕುರಿಗಳು “ಕೂಲಿಯಿಲ್ಲದ ಕೆಲಸದವ”ರಾಗಿ ಬೆಂಬಲಿಸುತ್ತಾರೆ. ಅಂದರೆ ಅವರು ಸಿದ್ಧಮನಸ್ಸು ಹಾಗೂ ಪೂರ್ಣಹೃದಯದಿಂದ ತಮ್ಮ ಶಕ್ತಿಸಂಪತ್ತನ್ನು ಅದಕ್ಕಾಗಿ ಬಳಸುತ್ತಾರೆ.—ಅ. ಕೃ. 1:8; ಪ್ರಕ. 12:17.

7 ಮಹಾ ಸಮೂಹದ ಸದಸ್ಯರು ತಮ್ಮ ಅಭಿಷಿಕ್ತ ಸಹೋದರರಿಗೆ ಹೀಗೆ ಬೆಂಬಲ ಕೊಡುವಾಗ, ಹರ್ಮಗೆದೋನಿನ ಬಳಿಕ ಇರುವ ಹೊಸ ಮಾನವ ಸಮಾಜದ ಅಸ್ತಿವಾರವಾಗಲು ಅವರಿಗೆ ತರಬೇತಿ ಸಿಗುತ್ತದೆ. ಆ ಅಸ್ತಿವಾರವು ಗಟ್ಟಿಮುಟ್ಟು ಮತ್ತು ಸ್ಥಿರವಾಗಿರಬೇಕು. ಅದರ ಸದಸ್ಯರು ಯಜಮಾನನ ನಿರ್ದೇಶನವನ್ನು ಪಾಲಿಸಲಿಕ್ಕಾಗಿ ಸಿದ್ಧಮನಸ್ಸುಳ್ಳವರೂ ಶಕ್ತರೂ ಆಗಿರಬೇಕು. ತಾನು ರಾಜ ಯೇಸು ಕ್ರಿಸ್ತನಿಂದ ಉಪಯೋಗಿಸಲ್ಪಡಸಾಧ್ಯವಿದೆ ಎಂದು ತೋರಿಸಲು ಪ್ರತಿಯೊಬ್ಬ ಕ್ರೈಸ್ತನಿಗೆ ಅವಕಾಶ ಕೊಡಲಾಗುತ್ತಿದೆ. ಈಗಲೇ ನಂಬಿಕೆ ಮತ್ತು ನಿಷ್ಠೆಯನ್ನು ತೋರಿಸುವ ಮೂಲಕ, ಹೊಸ ಲೋಕದಲ್ಲಿ ರಾಜನು ಕೊಡುವ ನಿರ್ದೇಶನಗಳಿಗೆ ಅವನು ಸಿದ್ಧಮನಸ್ಸಿನಿಂದ ಪ್ರತಿಕ್ರಿಯಿಸುವನೆಂದು ತೋರಿಸುತ್ತಾನೆ.

ಮಹಾ ಸಮೂಹದವರು ತಮ್ಮ ನಂಬಿಕೆಯನ್ನು ರುಜುಪಡಿಸುತ್ತಾರೆ

8 ಅಭಿಷಿಕ್ತ ಕ್ರೈಸ್ತ ಗುಂಪಿನ ಒಡನಾಡಿಗಳಾದ ಬೇರೆ ಕುರಿಗಳು ತಮ್ಮ ನಂಬಿಕೆಯನ್ನು ವಿಭಿನ್ನ ರೀತಿಗಳಲ್ಲಿ ರುಜುಪಡಿಸುತ್ತಾರೆ. ಮೊದಲನೆಯದಾಗಿ, ಅವರು ದೇವರ ರಾಜ್ಯದ ಸುವಾರ್ತೆಯನ್ನು ಘೋಷಿಸುವ ಮೂಲಕ ಅಭಿಷಿಕ್ತರನ್ನು ಬೆಂಬಲಿಸುತ್ತಾರೆ. (ಮತ್ತಾ. 24:14; 28:19, 20) ಎರಡನೆಯದಾಗಿ, ಆಡಳಿತ ಮಂಡಲಿ ಕೊಡುವ ನಿರ್ದೇಶನಕ್ಕೆ ಅವರು ಸಿದ್ಧಮನಸ್ಸಿನಿಂದ ಅಧೀನರಾಗುತ್ತಾರೆ.—ಇಬ್ರಿ. 13:17; ಜೆಕರ್ಯ 8:23ನ್ನು ಓದಿ.

9 ಮಹಾ ಸಮೂಹದ ಸದಸ್ಯರು ತಮ್ಮ ಅಭಿಷಿಕ್ತ ಸಹೋದರರನ್ನು ಬೆಂಬಲಿಸುವ ಮೂರನೆಯ ವಿಧ, ಯೆಹೋವನ ನೀತಿಯ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ಜೀವಿಸುವುದರ ಮೂಲಕವೇ. “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ” ಎಂಬ ಗುಣಗಳನ್ನು ವಿಕಸಿಸಲು ಅವರು ಶ್ರಮಿಸುತ್ತಾರೆ. (ಗಲಾ. 5:22, 23) ಇಂದು ಇಂಥ ಗುಣಗಳನ್ನು ಪ್ರದರ್ಶಿಸಿಕೊಳ್ಳುವುದು ಜನಪ್ರಿಯವಲ್ಲ. ಅದಕ್ಕೆ ಬದಲಾಗಿ ‘ಶರೀರ ಭಾವದ ಕರ್ಮಗಳನ್ನು’ ನಡೆಸುವುದೇ ಎಲ್ಲರಿಗೂ ಇಷ್ಟ. ಹಾಗಿದ್ದರೂ ಮಹಾ ಸಮೂಹದ ಸದಸ್ಯರು, “ಜಾರತ್ವ ಬಂಡುತನ ನಾಚಿಕೆಗೇಡಿತನ ವಿಗ್ರಹಾರಾಧನೆ ಮಾಟ ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟು ಕಕ್ಷಭೇದ ಭಿನ್ನಮತ ಮತ್ಸರ ಕುಡಿಕತನ ದುಂದೌತಣ ಇಂಥವು”ಗಳಿಂದ ದೂರವಿರಲು ದೃಢಸಂಕಲ್ಪದಿಂದಿದ್ದಾರೆ.—ಗಲಾ. 5:19-21.

10 ನಾವು ಅಪರಿಪೂರ್ಣರಾಗಿರುವುದರಿಂದ ಆತ್ಮದ ಫಲಗಳನ್ನು ಪ್ರದರ್ಶಿಸುವುದು, ಶರೀರಭಾವದ ಕರ್ಮಗಳಿಂದ ದೂರವಿರುವುದು ಮತ್ತು ಸೈತಾನನ ಲೋಕದ ಒತ್ತಡವನ್ನು ಪ್ರತಿರೋಧಿಸುವುದು ಒಂದು ದೊಡ್ಡ ಸವಾಲಾಗಿರಬಲ್ಲದು. ಹಾಗಿದ್ದರೂ, ವೈಯಕ್ತಿಕ ಬಲಹೀನತೆಗಳು, ತಾತ್ಕಾಲಿಕ ವೈಫಲ್ಯಗಳು ಇಲ್ಲವೇ ಶಾರೀರಿಕ ಇತಿಮಿತಿಗಳಿಂದಾಗಿ ಉಂಟಾಗುವ ನಿರುತ್ತೇಜನವು ನಮ್ಮ ನಂಬಿಕೆಯ ಶಕ್ತಿಯನ್ನು ಕ್ಷೀಣಿಸದಂತೆ ಇಲ್ಲವೇ ಯೆಹೋವನ ಮೇಲಣ ನಮ್ಮ ಪ್ರೀತಿಯನ್ನು ಕುಂದಿಸದಂತೆ ನಾವು ದೃಢಸಂಕಲ್ಪದಿಂದಿದ್ದೇವೆ. ಯೆಹೋವನು ಮಾತುಕೊಟ್ಟಂತೆಯೇ, ಮಹಾ ಸಮೂಹವನ್ನು ಆತನು ಮಹಾ ಸಂಕಟದಿಂದ ಜೀವಂತವಾಗಿ ಪಾರುಗೊಳಿಸುವನೆಂದು ನಮಗೆ ತಿಳಿದಿದೆ.

11 ಹಾಗಿದ್ದರೂ, ನಮ್ಮ ನಿಜವಾದ ಶತ್ರು ಪಿಶಾಚನಾಗಿದ್ದಾನೆ ಎಂದು ನಮಗೆ ತಿಳಿದಿರುವುದರಿಂದ ನಾವು ಸತತವಾಗಿ ಎಚ್ಚರದಿಂದಿರುತ್ತೇವೆ. ಏಕೆಂದರೆ ಅವನು ಸುಲಭವಾಗಿ ಬಿಟ್ಟುಕೊಡುವವನಲ್ಲ. (1 ಪೇತ್ರ 5:8ನ್ನು ಓದಿ.) ಅವನು ಧರ್ಮಭ್ರಷ್ಟರನ್ನು ಹಾಗೂ ಇತರರನ್ನು ಬಳಸಿ, ನಾವು ಅನುಸರಿಸುವಂಥ ಬೋಧನೆಗಳು ಸುಳ್ಳೆಂದು ನಂಬಿಸಲು ಪ್ರಯತ್ನಿಸಿದ್ದಾನೆ. ಆದರೆ ಸಾಮಾನ್ಯವಾಗಿ ಅವನ ಆ ತಂತ್ರೋಪಾಯವು ಸೋತುಹೋಗಿದೆ. ಅದೇ ರೀತಿಯಲ್ಲಿ, ಹಿಂಸೆಯು ಕೆಲವೊಮ್ಮೆ ನಮ್ಮ ಸಾರುವ ಕೆಲಸವನ್ನು ನಿಧಾನಿಸಿದೆಯಾದರೂ, ಹಿಂಸಿಸಲ್ಪಟ್ಟವರ ನಂಬಿಕೆಯನ್ನು ಅದು ನಿಜವಾಗಿ ಹೆಚ್ಚಿಸಿದೆ. ಆದುದರಿಂದ ಸೈತಾನನು ಇನ್ನೊಂದು ವಿಧಾನವನ್ನು ಹೆಚ್ಚೆಚ್ಚಾಗಿ ಬಳಸುತ್ತಾನೆ. ಅದಾವುದೆಂದರೆ ನಮಗಾಗುವ ನಿರುತ್ತೇಜನದ ಭಾವನೆಗಳನ್ನು ತನ್ನ ಪ್ರಯೋಜನಕ್ಕಾಗಿ ಬಳಸುವುದೇ. ನಿರುತ್ತೇಜನಕ್ಕೆ ನಮ್ಮ ನಂಬಿಕೆಯನ್ನು ದುರ್ಬಲಗೊಳಿಸುವ ಹೆಚ್ಚಿನ ಸಾಧ್ಯತೆಯಿದೆ ಎಂದು ಬಹುಶಃ ಅವನಿಗನಿಸುತ್ತದೆ. ಪ್ರಥಮ ಶತಮಾನದ ಕ್ರೈಸ್ತರಿಗೆ ಈ ಅಪಾಯದ ಕುರಿತು ಎಚ್ಚರಿಸುತ್ತಾ ಹೀಗನ್ನಲಾಗಿತ್ತು: “ಆತನನ್ನು [ಯೇಸು] ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.” ಯಾಕೆ? “ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ” ಇರಲಿಕ್ಕಾಗಿಯೇ.—ಇಬ್ರಿ. 12:3.

12 ಯೆಹೋವನ ಸೇವೆಯನ್ನು ನಿಲ್ಲಿಸಬೇಕೆಂದು ನಿಮಗೆಂದಾದರೂ ಅನಿಸಿದೆಯೋ? ನೀವು ನಿಷ್ಪ್ರಯೋಜಕರೆಂದು ಆಗಾಗ್ಗೆ ಅನಿಸುತ್ತದೋ? ಹಾಗಿರುವಲ್ಲಿ ಯೆಹೋವನ ಸೇವೆಮಾಡುವುದರಿಂದ ನಿಮ್ಮನ್ನು ತಡೆಗಟ್ಟಲು ಸೈತಾನನು ಆ ಭಾವನೆಗಳನ್ನು ಬಳಸುವಂತೆ ಬಿಡಬೇಡಿ. ಬೈಬಲಿನ ಗಾಢ ಅಧ್ಯಯನ, ಕಟ್ಟಾಸಕ್ತಿಯ ಪ್ರಾರ್ಥನೆ, ಕೂಟಗಳಿಗೆ ಕ್ರಮವಾದ ಹಾಜರಿ ಮತ್ತು ನಿಮ್ಮ ಜೊತೆ ವಿಶ್ವಾಸಿಗಳೊಂದಿಗೆ ಸಹವಾಸವು ನಿಮ್ಮನ್ನು ಬಲಪಡಿಸಿ ನೀವು ‘ಮನಗುಂದಿ ಬೇಸರಗೊಳ್ಳದಂತೆ’ ಮಾಡುವುದು. ಯೆಹೋವನು ತನ್ನ ಸೇವೆಮಾಡುವವರಿಗೆ ಹೊಸ ಬಲ ಹೊಂದುವಂತೆ ಸಹಾಯ ಮಾಡುವನೆಂದು ಮಾತುಕೊಟ್ಟಿದ್ದಾನೆ, ಮತ್ತು ಆತನು ಅದನ್ನು ಖಂಡಿತವಾಗಿ ಮಾಡುವನು. (ಯೆಶಾಯ 40:30, 31ನ್ನು ಓದಿ.) ರಾಜ್ಯ ಸೇವೆಯ ಮೇಲೆ ನೆಟ್ಟ ದೃಷ್ಟಿಯನ್ನಿಡಿರಿ. ಸಮಯ ಕಬಳಿಸುವಂಥ ಅಪಕರ್ಷಣೆಗಳಿಂದ ದೂರವಿರಿ ಮತ್ತು ಇತರರಿಗೆ ಸಹಾಯ ಮಾಡುವುದರ ಮೇಲೆ ಗಮನ ಕೇಂದ್ರೀಕರಿಸಿ. ಆಗ ನೀವು ನಿರುತ್ತೇಜನದ ಮಧ್ಯೆಯೂ ತಾಳಿಕೊಳ್ಳಲು ಬಲಹೊಂದುವಿರಿ.—ಗಲಾ. 6:1, 2.

ಮಹಾ ಸಂಕಟದಿಂದ ಪಾರಾಗಿ ಹೊಸ ಲೋಕಕ್ಕೆ!

13 ಹರ್ಮಗೆದೋನಿನ ಬಳಿಕ, ಪುನರುತ್ಥಿತರಾದ ಲಕ್ಷಾಂತರ ಮಂದಿ ಅನೀತಿವಂತರಿಗೆ ಯೆಹೋವನ ಮಾರ್ಗಗಳ ಕುರಿತು ಶಿಕ್ಷಣದ ಅಗತ್ಯವಿರುವುದು. (ಅ. ಕೃ. 24:15) ಯೇಸುವಿನ ವಿಮೋಚನಾ ಮೌಲ್ಯ ಯಜ್ಞದ ಕುರಿತಾಗಿ ಅವರು ಕಲಿಯಬೇಕಾಗಿರುವುದು. ಅದಕ್ಕಿಂತಲೂ ಹೆಚ್ಚಾಗಿ ಅವರು ಆ ಯಜ್ಞದಿಂದ ಪ್ರಯೋಜನಹೊಂದಲು ಅದರಲ್ಲಿ ನಂಬಿಕೆಯಿಡಬೇಕೆಂದು ಅವರಿಗೆ ಕಲಿಸುವುದು ಆವಶ್ಯ. ಅವರು ತಮ್ಮ ಹಿಂದಿನ ಸುಳ್ಳು ಧಾರ್ಮಿಕ ವಿಚಾರಗಳನ್ನೂ ಹಿಂದಿನ ಜೀವನಶೈಲಿಯನ್ನೂ ತಿರಸ್ಕರಿಸುವ ಅಗತ್ಯವಿರುವುದು. ಸತ್ಯ ಕ್ರೈಸ್ತರನ್ನು ಗುರುತಿಸುವ ಹೊಸ ಸ್ವಭಾವವನ್ನು ಧರಿಸಲು ಅವರು ಕಲಿಯಲೇಬೇಕಾಗುವುದು. (ಎಫೆ. 4:22-24; ಕೊಲೊ. 3:9, 10) ಹರ್ಮಗೆದೋನನ್ನು ಪಾರಾಗುವ ಬೇರೆ ಕುರಿಗಳಿಗೆ ಆಗ ಬಹಳಷ್ಟು ಕೆಲಸ ಮಾಡಲಿಕ್ಕಿರುವುದು. ಯೆಹೋವನಿಗಾಗಿ ಅಂಥ ಸೇವೆಮಾಡುವುದು ಎಷ್ಟು ಆನಂದಕರ! ಈ ಸದ್ಯದ ದುಷ್ಟ ಲೋಕದ ಒತ್ತಡಗಳೂ ಅಪಕರ್ಷಣೆಗಳೂ ಆಗ ಇರಲಾರವು!

14 ಯೇಸುವಿನ ಭೂಶುಶ್ರೂಷೆಯ ಮುಂಚೆ ಮರಣಪಟ್ಟಿರುವ ನಂಬಿಗಸ್ತ ಯೆಹೋವನ ಸೇವಕರಿಗೂ ಆ ಸಮಯದಲ್ಲಿ ಕಲಿಯಲು ಬಹಳಷ್ಟಿದೆ. ಅವರು ನಿರೀಕ್ಷಿಸಿಕೊಂಡಿದ್ದ ಆದರೆ ಎಂದೂ ನೋಡದಿದ್ದ ವಾಗ್ದತ್ತ ಮೆಸ್ಸೀಯನು ಯಾರೆಂಬುದನ್ನು ಕಲಿಯುವರು. ಈ ವ್ಯಕ್ತಿಗಳು ಬದುಕಿದ್ದಾಗ ಯೆಹೋವನಿಂದ ಉಪದೇಶ ಹೊಂದಲು ಸಿದ್ಧಮನಸ್ಸನ್ನು ಈ ಮೊದಲೇ ತೋರಿಸಿದ್ದರು. ಇಂಥವರಿಗೆ ಸಹಾಯ ಮಾಡುವುದು, ಉದಾಹರಣೆಗೆ ದಾನಿಯೇಲನು ಬರೆದಂಥ ಆದರೆ ಸ್ವತಃ ಅರ್ಥಮಾಡಿಕೊಳ್ಳಲಾಗದಿದ್ದ ಪ್ರವಾದನೆಗಳ ನೆರವೇರಿಕೆಯನ್ನು ಅವನಿಗೆ ವಿವರಿಸುವುದು ಎಂಥ ಆನಂದ ಹಾಗೂ ಸನ್ಮಾನ ಆಗಿರುವುದು!—ದಾನಿ. 12:8, 9.

15 ಪುನರುತ್ಥಿತ ಜನರಿಗೆ ನಮ್ಮಿಂದ ಹಲವಾರು ವಿಷಯಗಳನ್ನು ಕಲಿಯಲಿಕ್ಕಿರುವುದು ನಿಜ, ಆದರೆ ನಮಗೂ ಅವರ ಹತ್ತಿರ ಕೇಳಲು ಬಹಳಷ್ಟು ಪ್ರಶ್ನೆಗಳಿರುವವು. ಬೈಬಲಿನಲ್ಲಿ ತಿಳಿಸಲಾದ ಘಟನೆಗಳ ಕುರಿತು ಅವರು ನಮಗೆ ಸವಿಸ್ತಾರವಾಗಿ ಹೇಳಬಲ್ಲರು. ಸ್ವಲ್ಪ ಯೋಚಿಸಿ: ಯೇಸುವಿನ ಸೋದರಸಂಬಂಧಿಯಾದ ಸ್ನಾನಿಕನಾದ ಯೋಹಾನನಿಂದ ಯೇಸುವಿನ ಕುರಿತ ವೈಯಕ್ತಿಕ ವಿವರಗಳನ್ನು ತಿಳಿದುಕೊಳ್ಳುವುದು ಎಷ್ಟು ರೋಮಾಂಚಕಾರಿ ಆಗಿರುವುದು! ಇಂಥ ನಂಬಿಗಸ್ತ ಸಾಕ್ಷಿಗಳಿಂದ ನಾವು ಕಲಿಯುವ ಸಂಗತಿಗಳು, ದೇವರ ವಾಕ್ಯದ ಕುರಿತು ನಮಗೆ ಈಗ ಇರುವ ತಿಳುವಳಿಕೆಯನ್ನು ಇನ್ನಷ್ಟು ಹೆಚ್ಚಿಸುವುದು ಎಂಬುದರಲ್ಲಿ ಸಂಶಯವೇ ಇಲ್ಲ. ಯೆಹೋವನ ಪೂರ್ವದ ನಂಬಿಗಸ್ತ ಸೇವಕರು ‘ಶ್ರೇಷ್ಠ ಪುನರುತ್ಥಾನ’ ಹೊಂದುವರು. ಇವರಲ್ಲಿ, ಅಂತ್ಯಕಾಲದಲ್ಲಿ ಮಹಾ ಸಮೂಹದವರೊಳಗಿಂದ ಯಾರು ಮೃತಪಟ್ಟಿದ್ದಾರೊ ಅವರೂ ಸೇರಿರುವರು. ಇವರೆಲ್ಲರೂ ಸೈತಾನನ ವಶದಲ್ಲಿದ್ದ ಲೋಕದಲ್ಲಿ ಯೆಹೋವನ ಸೇವೆಯನ್ನು ಆರಂಭಿಸಿದವರು. ಅವರು ಹೊಸ ಲೋಕದಲ್ಲಿ ಹೆಚ್ಚು ಅನುಕೂಲಕರ ಪರಿಸ್ಥಿತಿಗಳಲ್ಲಿ ತಮ್ಮ ಸೇವೆಯನ್ನು ಮುಂದುವರಿಸುವುದು ಅವರಿಗೆ ಎಷ್ಟು ಆನಂದಕರವಾಗಿರುವುದು!—ಇಬ್ರಿ. 11:35; 1 ಯೋಹಾ. 5:19.

16 ನ್ಯಾಯವಿಚಾರಣೆಯ ದಿನದ ಒಂದು ಹಂತದಲ್ಲಿ ‘ಸುರುಳಿಗಳನ್ನು’ (NW) ತೆರೆಯಲಾಗುವುದು. ಬೈಬಲು ಮತ್ತು ಈ ಸುರುಳಿಗಳ ಆಧಾರದ ಮೇಲೆ, ಜೀವಿಸುತ್ತಿರುವವರಿಗೆ ನಿತ್ಯಜೀವ ಪಡೆಯುವ ಅರ್ಹತೆ ಇದೆಯೊ ಎಂದು ನಿರ್ಧರಿಸಲಾಗುವುದು. (ಪ್ರಕಟನೆ 20:12, 13ನ್ನು ಓದಿ.) ನ್ಯಾಯವಿಚಾರಣೆಯ ದಿನದ ಕೊನೆಯಾಗುವಷ್ಟರಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ, ತಾನು ವಿಶ್ವ ಪರಮಾಧಿಕಾರದ ವಿವಾದಾಂಶದಲ್ಲಿ ಯಾರ ಪಕ್ಷದಲ್ಲಿದ್ದೇನೆಂದು ತೋರಿಸಲು ಸಾಕಷ್ಟು ಅವಕಾಶ ಸಿಕ್ಕಿರುವುದು. ರಾಜ್ಯ ಏರ್ಪಾಡನ್ನು ಅವನು ಎತ್ತಿಹಿಡಿದು, ಕುರಿಮರಿಯು ಅವನನ್ನು ‘ಜೀವಜಲದ ಒರತೆಗಳ’ ಬಳಿ ನಡೆಸುವಂತೆ ಬಿಡುವನೋ? ಅಥವಾ ಪ್ರತಿಭಟಿಸಿ ದೇವರ ರಾಜ್ಯಕ್ಕೆ ತನ್ನನ್ನು ಅಧೀನಪಡಿಸಲು ನಿರಾಕರಿಸುವನೋ? (ಪ್ರಕ. 7:17; ಯೆಶಾ. 65:20) ಅಷ್ಟರೊಳಗೆ ಭೂಮಿ ಮೇಲಿರುವ ಎಲ್ಲರಿಗೂ, ಬಾಧ್ಯತೆಯಾಗಿ ಬಂದ ಪಾಪ ಇಲ್ಲವೇ ದುಷ್ಟ ಪರಿಸರದ ಪ್ರಭಾವವಿಲ್ಲದೇ ಒಂದು ವೈಯಕ್ತಿಕ ನಿರ್ಣಯ ಮಾಡುವ ಅವಕಾಶ ಸಿಕ್ಕಿರುವುದು. ಯಾರಿಗೂ ಯೆಹೋವನ ಕೊನೆಯ ತೀರ್ಪಿನ ಔಚಿತ್ಯದ ಬಗ್ಗೆ ಸವಾಲೆಬ್ಬಿಸಲು ಸಾಧ್ಯವಾಗಲಾರದು. ದುಷ್ಟರನ್ನು ಮಾತ್ರ ನಿತ್ಯಕ್ಕೂ ನಾಶಮಾಡಲಾಗುವುದು.—ಪ್ರಕ. 20:14, 15.

17 ರಾಜ್ಯವನ್ನು ಪಡೆಯಲು ಯೋಗ್ಯರೆಂದು ಎಣಿಸಲ್ಪಟ್ಟಿರುವ ಅಭಿಷಿಕ್ತ ಕ್ರೈಸ್ತರು ಇಂದು, ನ್ಯಾಯವಿಚಾರಣೆಯ ದಿನದಲ್ಲಿ ಆಳಲಿಕ್ಕಾಗಿ ಕಾತುರದಿಂದ ಎದುರುನೋಡುತ್ತಾರೆ. ಅವರಿಗೆ ಎಂಥ ಭವ್ಯ ಸದವಕಾಶವಿದೆ! ಈ ಪ್ರತೀಕ್ಷೆಯು ಅವರು ಪೇತ್ರನ ಸಲಹೆಯನ್ನು ಅನುಸರಿಸುವಂತೆ ಪ್ರಚೋದಿಸುತ್ತದೆ. ಅವನು ತನ್ನ ಪ್ರಥಮ ಶತಮಾನದ ಸಹೋದರರಿಗೆ ಹೀಗಂದಿದ್ದನು: “ದೇವರು ನಿಮ್ಮನ್ನು ಕರೆದದ್ದನ್ನೂ ಆದುಕೊಂಡದ್ದನ್ನೂ ದೃಢಪಡಿಸಿಕೊಳ್ಳುವದಕ್ಕೆ ಮತ್ತಷ್ಟು ಪ್ರಯಾಸಪಡಿರಿ. ಹೀಗೆ ನೀವು ಮಾಡಿದರೆ ಎಂದಿಗೂ ಎಡಹುವದಿಲ್ಲ. ಮತ್ತು ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ನಿತ್ಯರಾಜ್ಯದಲ್ಲಿ ಪ್ರವೇಶಿಸುವ ಹಾಗೆ ದೇವರು ನಿಮಗೆ ಧಾರಾಳವಾಗಿ ಅನುಗ್ರಹಿಸುವನು.”—2 ಪೇತ್ರ 1:10, 11.

18 ಬೇರೆ ಕುರಿಗಳು ತಮ್ಮ ಅಭಿಷಿಕ್ತ ಸಹೋದರರೊಂದಿಗೆ ಉಲ್ಲಾಸಿಸುತ್ತಾರೆ. ಅವರಿಗೆ ಬೆಂಬಲ ಕೊಡಲು ದೃಢಸಂಕಲ್ಪದಿಂದಿದ್ದಾರೆ. ಇಂದು ದೇವರ ಸ್ನೇಹಿತರಾಗಿರುವ ಅವರು ಆತನ ಸೇವೆಯಲ್ಲಿ ತಮ್ಮಿಂದಾದುದೆಲ್ಲವನ್ನೂ ಮಾಡಲು ಪ್ರಚೋದಿತರಾಗಿದ್ದಾರೆ. ನ್ಯಾಯವಿಚಾರಣೆಯ ದಿನದಲ್ಲಿ ಅವರು ದೇವರ ಏರ್ಪಾಡುಗಳಿಗೆ ಪೂರ್ಣಹೃದಯದ ಬೆಂಬಲಕೊಡಲು ಹರ್ಷಿಸುತ್ತಾರೆ. ಆ ಸಮಯದಲ್ಲಿ ಯೇಸು ಅವರನ್ನು ಜೀವಜಲದ ಒರತೆಗಳ ಬಳಿಗೂ ನಡೆಸುವನು. ಆಗ ಅವರನ್ನು ನಿತ್ಯತೆಗೂ ಯೆಹೋವನ ಭೂಸೇವಕರಾಗಿರಲು ಯೋಗ್ಯರೆಂದು ಎಣಿಸಲಾಗುವುದು!—ರೋಮಾ. 8:20, 21; ಪ್ರಕ. 21:1-7.

ನಿಮಗೆ ನೆನಪಿದೆಯೋ?

• ಯೇಸುವಿನ ಆಸ್ತಿಯಲ್ಲಿ ಏನೆಲ್ಲ ಸೇರಿದೆ?

• ಮಹಾ ಸಮೂಹದವರು ತಮ್ಮ ಅಭಿಷಿಕ್ತ ಸಹೋದರರನ್ನು ಹೇಗೆ ಬೆಂಬಲಿಸುತ್ತಾರೆ?

• ಮಹಾ ಸಮೂಹದವರಿಗೆ ಯಾವ ಸದವಕಾಶಗಳು ಮತ್ತು ಪ್ರತೀಕ್ಷೆ ಇದೆ?

• ನ್ಯಾಯವಿಚಾರಣೆಯ ದಿನದ ಬಗ್ಗೆ ನಿಮ್ಮ ನೋಟವೇನು?

[ಅಧ್ಯಯನ ಪ್ರಶ್ನೆಗಳು]

1. ದೇವರ ವಾಕ್ಯವು ಅಭಿಷಿಕ್ತ ಕ್ರೈಸ್ತರನ್ನು ಏನೆಂದು ಗುರುತಿಸುತ್ತದೆ, ಮತ್ತು ಯೇಸು ಅವರಿಗೆ ಯಾವ ಜವಾಬ್ದಾರಿಯನ್ನು ಕೊಟ್ಟನು?

2. ಯೇಸುವಿನ ಆಸ್ತಿ ಏನೆಂಬುದನ್ನು ವರ್ಣಿಸಿರಿ.

3, 4. ಮಹಾ ಸಮೂಹದವರಿಗೆ ಯಾವ ವಿಶೇಷ ಸದವಕಾಶಗಳಿವೆ?

5. ಮಹಾ ಸಮೂಹದವರು ಕ್ರಿಸ್ತನ ಅಭಿಷಿಕ್ತ ಸಹೋದರರನ್ನು ಹೇಗೆ ಬೆಂಬಲಿಸುತ್ತಾರೆ?

6. ಅಭಿಷಿಕ್ತ ಕ್ರೈಸ್ತರನ್ನು ಅವರ ಸಂಗಡಿಗರಾದ ಬೇರೆ ಕುರಿಗಳು ಬೆಂಬಲಿಸುವರೆಂದು ಹೇಗೆ ಪ್ರವಾದಿಸಲಾಗಿತ್ತು?

7. ಮಹಾ ಸಮೂಹವು ಯಾವುದಕ್ಕಾಗಿ ತರಬೇತಿ ಪಡೆಯುತ್ತಾ ಇದೆ?

8, 9. ಮಹಾ ಸಮೂಹದವರು ತಮ್ಮ ನಂಬಿಕೆಯನ್ನು ಹೇಗೆ ರುಜುಪಡಿಸುತ್ತಿದ್ದಾರೆ?

10. ಮಹಾ ಸಮೂಹದ ಸದಸ್ಯರ ದೃಢಸಂಕಲ್ಪವೇನು?

11. ಕ್ರೈಸ್ತರ ನಂಬಿಕೆಯನ್ನು ದುರ್ಬಲಗೊಳಿಸುವ ಪ್ರಯತ್ನದಲ್ಲಿ ಸೈತಾನನು ಯಾವ ತಂತ್ರೋಪಾಯಗಳನ್ನು ಬಳಸಿದ್ದಾನೆ?

12. ನಿರುತ್ತೇಜಿತರನ್ನು ಬೈಬಲಿನ ಸಲಹೆಯು ಹೇಗೆ ಬಲಪಡಿಸುತ್ತದೆ?

13. ಹರ್ಮಗೆದೋನನ್ನು ಪಾರಾಗುವವರಿಗೆ ಯಾವ ಕೆಲಸವು ಕಾದಿದೆ?

14, 15. ಮಹಾ ಸಂಕಟದಿಂದ ಪಾರಾಗುವವರು ಮತ್ತು ಪುನರುತ್ಥಾನವಾಗುವ ನೀತಿವಂತರ ನಡುವೆ ಯಾವ ರೀತಿಯ ಮಾತುಕತೆ ಇರುವುದೆಂದು ವರ್ಣಿಸಿರಿ.

16. ಪ್ರವಾದನೆಗನುಸಾರ ನ್ಯಾಯವಿಚಾರಣೆಯ ದಿನ ಹೇಗೆ ಮುಂದೆ ಸಾಗುವುದು?

17, 18. ಅಭಿಷಿಕ್ತ ಕ್ರೈಸ್ತರು ಮತ್ತು ಬೇರೆ ಕುರಿಗಳು ನ್ಯಾಯವಿಚಾರಣೆಯ ದಿನವನ್ನು ಯಾವ ಆನಂದದಾಯಕ ನಿರೀಕ್ಷೆಯಿಂದ ಎದುರುನೋಡುತ್ತಾರೆ?

[ಪುಟ 25ರಲ್ಲಿರುವ ಚಿತ್ರ]

ಮಹಾ ಸಮೂಹದವರು ತಮ್ಮ ನಿಲುವಂಗಿಗಳನ್ನು ಕುರಿಮರಿಯ ರಕ್ತದಲ್ಲಿ ತೊಳೆದು ಶುಭ್ರಮಾಡಿದ್ದಾರೆ

[ಪುಟ 27ರಲ್ಲಿರುವ ಚಿತ್ರ]

ಪುನರುತ್ಥಿತ ನಂಬಿಗಸ್ತರಿಂದ ನೀವೇನನ್ನು ಕಲಿಯಲು ಎದುರುನೋಡುತ್ತೀರಿ?