ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮತ್ತಾಯ ಪುಸ್ತಕದ ಮುಖ್ಯಾಂಶಗಳು

ಮತ್ತಾಯ ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಮತ್ತಾಯ ಪುಸ್ತಕದ ಮುಖ್ಯಾಂಶಗಳು

ಯೇಸುವಿನ ಜೀವನ ಹಾಗೂ ಶುಶ್ರೂಷೆಯ ಕುರಿತ ರೋಮಾಂಚಕ ವೃತ್ತಾಂತವನ್ನು ದಾಖಲಿಸಿದ ಮೊತ್ತಮೊದಲ ವ್ಯಕ್ತಿ ಮತ್ತಾಯನಾಗಿದ್ದಾನೆ. ಯೇಸು ಕ್ರಿಸ್ತನ ನಿಕಟ ಒಡನಾಡಿಗಳಲ್ಲಿ ಒಬ್ಬನಾಗಿದ್ದ ಅವನು ಹಿಂದೆ ಒಬ್ಬ ಸುಂಕ ವಸೂಲಿಗಾರನಾಗಿದ್ದನು. ಸುಮಾರು ಸಾ.ಶ. 41ರಲ್ಲಿ ಬರೆದು ಮುಗಿಸಿದ ಮತ್ತಾಯನ ಸುವಾರ್ತೆಯನ್ನು ಮೂಲತಃ ಹೀಬ್ರು ಭಾಷೆಯಲ್ಲಿ ಬರೆಯಲಾಯಿತು. ಅನಂತರ ಅದನ್ನು ಗ್ರೀಕ್‌ ಭಾಷೆಗೆ ಅನುವಾದಿಸಲಾಯಿತು. ಇದು ಹೀಬ್ರು ಮತ್ತು ಗ್ರೀಕ್‌ ಶಾಸ್ತ್ರಗಳ ನಡುವಿನ ಕೊಂಡಿಯಂತಿದೆ.

ಮತ್ತಾಯನ ಸುವಾರ್ತೆಯನ್ನು ಪ್ರಧಾನವಾಗಿ ಯೆಹೂದ್ಯರಿಗಾಗಿ ಬರೆಯಲಾಯಿತು ಎಂಬುದು ವ್ಯಕ್ತ. ಹೃದಯಸ್ಪರ್ಷಿಸುವ ಹಾಗೂ ಅರ್ಥಭರಿತವಾದ ಈ ಸುವಾರ್ತೆ, ಯೇಸುವೇ ವಾಗ್ದತ್ತ ಮೆಸ್ಸೀಯನೂ ದೇವಪುತ್ರನೂ ಆಗಿದ್ದಾನೆಂದು ಸೂಚಿಸುತ್ತದೆ. ಅದರ ಸಂದೇಶಕ್ಕೆ ನಿಕಟ ಗಮನಕೊಡುವುದರಿಂದ ಸತ್ಯ ದೇವರಲ್ಲಿ, ಆತನ ಪುತ್ರನಲ್ಲಿ ಮತ್ತು ಆತನ ವಾಗ್ದಾನಗಳಲ್ಲಿನ ನಮ್ಮ ನಂಬಿಕೆಯು ಬಲಗೊಳ್ಳುತ್ತದೆ.—ಇಬ್ರಿ. 4:12.

“ಪರಲೋಕರಾಜ್ಯವು ಸಮೀಪಿಸಿತು”

(ಮತ್ತಾ. 1:1-20:34)

ಮತ್ತಾಯನು ವಿಷಯಗಳನ್ನು ಕಾಲಾನುಕ್ರಮದಲ್ಲಿ ಸಾದರಪಡಿಸದಿದ್ದರೂ ರಾಜ್ಯದ ಮುಖ್ಯವಿಷಯವನ್ನೂ ಯೇಸುವಿನ ಬೋಧನೆಗಳನ್ನೂ ಒತ್ತಿಹೇಳುತ್ತಾನೆ. ಉದಾಹರಣೆಗೆ ಯೇಸು ಪರ್ವತ ಪ್ರಸಂಗವನ್ನು ತನ್ನ ಶುಶ್ರೂಷೆಯ ಮಧ್ಯ ಭಾಗದಲ್ಲಿ ಕೊಟ್ಟನಾದರೂ ಮತ್ತಾಯನು ಅದನ್ನು ತನ್ನ ವೃತ್ತಾಂತದ ಆರಂಭದ ಭಾಗದಲ್ಲೇ ದಾಖಲಿಸುತ್ತಾನೆ.

ಯೇಸು ಗಲಿಲಾಯದಲ್ಲಿ ಶುಶ್ರೂಷೆ ಮಾಡುತ್ತಿರುವಾಗ ಮಹತ್ಕಾರ್ಯಗಳನ್ನು ನಡೆಸುತ್ತಾನೆ, 12 ಮಂದಿ ಅಪೊಸ್ತಲರಿಗೆ ಶುಶ್ರೂಷೆಯ ಕುರಿತು ನಿರ್ದೇಶನಗಳನ್ನು ಕೊಡುತ್ತಾನೆ, ಫರಿಸಾಯರನ್ನು ಖಂಡಿಸುತ್ತಾನೆ ಮತ್ತು ಪರಲೋಕರಾಜ್ಯದ ಕುರಿತು ಸಾಮ್ಯಗಳನ್ನು ಹೇಳುತ್ತಾನೆ. ತದನಂತರ ಗಲಿಲಾಯವನ್ನು ಬಿಟ್ಟು “ಯೊರ್ದನ್‌ ಹೊಳೆಯ ಆಚೆ” ಇರುವ ‘ಯೂದಾಯ ಪ್ರಾಂತ್ಯಕ್ಕೆ ಬರುತ್ತಾನೆ.’ (ಮತ್ತಾ. 19:1) ದಾರಿಯಲ್ಲಿ ಹೋಗುತ್ತಿರುವಾಗ ಯೇಸು ತನ್ನ ಶಿಷ್ಯರಿಗೆ ಹೀಗನ್ನುತ್ತಾನೆ: ‘ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ; ಮತ್ತು ಮನುಷ್ಯಕುಮಾರನಿಗೆ ಮರಣದಂಡನೆ ವಿಧಿಸಲಾಗುವುದು, ಅವನು ಸತ್ತ ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡುವನು.’—ಮತ್ತಾ. 20:17-19.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

3:16—ಯೇಸುವಿನ ದೀಕ್ಷಾಸ್ನಾನದ ವೇಳೆ ‘ಆಕಾಶವು ತೆರೆದದ್ದರ’ ಅರ್ಥವೇನು? ಯೇಸು ಮಾನವನಾಗಿ ಹುಟ್ಟುವ ಮೊದಲು ಪರಲೋಕದಲ್ಲಿ ಜೀವಿಸಿದ್ದ ಜ್ಞಾಪಕವು ಅವನಿಗೆ ಮರಳಿ ಬಂದದ್ದನ್ನು ಇದು ಸೂಚಿಸಿದ್ದಿರಬೇಕು.

5:21, 22—ಸಿಟ್ಟನ್ನು ವ್ಯಕ್ತಪಡಿಸುವುದು ಸಿಟ್ಟನ್ನಿಟ್ಟುಕೊಳ್ಳುವುದಕ್ಕಿಂತ ಹೆಚ್ಚು ಗಂಭೀರವಾಗಿದೆಯೇ? ತನ್ನ ಸಹೋದರನ ವಿರುದ್ಧ ಮನಸ್ಸಿನಲ್ಲಿ ಸಿಟ್ಟನ್ನಿಟ್ಟುಕೊಳ್ಳುವ ಒಬ್ಬ ವ್ಯಕ್ತಿ ಗಂಭೀರ ಪಾಪ ಮಾಡುತ್ತಿದ್ದಾನೆಂದು ಯೇಸು ಎಚ್ಚರಿಸಿದನು. ಹಾಗಿದ್ದರೂ ನಿಂದಾತ್ಮಕ ಮಾತುಗಳಿಂದ ಸಿಟ್ಟನ್ನು ವ್ಯಕ್ತಪಡಿಸುವುದು ಇನ್ನಷ್ಟು ಹೆಚ್ಚು ಗಂಭೀರವಾಗಿದೆ. ಇದು ವ್ಯಕ್ತಿಯೊಬ್ಬನನ್ನು ಸ್ಥಳಿಕ ನ್ಯಾಯಾಲಯಕ್ಕಿಂತ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುತ್ತಿತ್ತು.

5:48—‘ಪರಲೋಕದಲ್ಲಿರುವ ನಮ್ಮ ತಂದೆಯಂತೆ ಯಾವ ದೋಷವೂ ಇಲ್ಲದವರಾಗಿರಲು’ ನಿಜವಾಗಿಯೂ ನಮ್ಮಿಂದ ಸಾಧ್ಯವೇ? ಹೌದು, ಒಂದು ತುಲನಾತ್ಮಕ ವಿಧದಲ್ಲಿ ಇದು ಸಾಧ್ಯ. ಯೇಸು ಇಲ್ಲಿ ಪ್ರೀತಿಯ ಕುರಿತು ಚರ್ಚಿಸುತ್ತಿದ್ದನು ಮತ್ತು ದೇವರನ್ನು ಅನುಕರಿಸುತ್ತಾ ದೋಷವಿಲ್ಲದ ಪ್ರೀತಿಯನ್ನು ತೋರಿಸಬೇಕೆಂದು ತನ್ನ ಕೇಳುಗರಿಗೆ ಹೇಳಿದನು. (ಮತ್ತಾ. 5:43-47) ಅದು ಹೇಗೆ ಸಾಧ್ಯ? ತಮ್ಮ ವೈರಿಗಳನ್ನೂ ಪ್ರೀತಿಸುವ ಮೂಲಕವೇ.

7:16—ಸತ್ಯ ಧರ್ಮವನ್ನು ಯಾವ “ಫಲಗಳಿಂದ” ಗುರುತಿಸಬಹುದು? ಈ ಫಲಗಳಲ್ಲಿ ನಮ್ಮ ನಡತೆಯಲ್ಲದೆ ನಮ್ಮ ನಂಬಿಕೆಗಳೂ ಸೇರಿವೆ, ಅಂದರೆ ನಾವು ನಿಕಟವಾಗಿ ಪಾಲಿಸುವ ಬೋಧನೆಗಳು ಸೇರಿವೆ.

10:34-38—ಕುಟುಂಬದೊಡೆತಕ್ಕೆ ಬೈಬಲ್‌ ಸಂದೇಶವು ಕಾರಣವಾಗಿದೆ ಎಂದು ಹೇಳಬಹುದೇ? ಖಂಡಿತವಾಗಿಯೂ ಇಲ್ಲ. ನಂಬಿಕೆಯಲ್ಲಿಲ್ಲದ ಕುಟುಂಬ ಸದಸ್ಯರ ನಿಲುವೇ ಒಡೆತಕ್ಕೆ ಕಾರಣವಾಗಿದೆ. ಕ್ರೈಸ್ತತ್ತ್ವವನ್ನು ಅವರು ತಿರಸ್ಕರಿಸುವಾಗ ಅಥವಾ ವಿರೋಧಿಸುವಾಗ ಅದು ಕುಟುಂಬದಲ್ಲಿ ಭೇದಗಳನ್ನುಂಟುಮಾಡುತ್ತದೆ.—ಲೂಕ 12:51-53.

11:2-6—ದೇವರ ವಾಣಿಯನ್ನು ಕೇಳಿ ಯೇಸುವೇ ಮೆಸ್ಸೀಯನೆಂದು ಯೋಹಾನನಿಗೆ ತಿಳಿದಿತ್ತಾದರೂ ಅವನು ಯೇಸುವನ್ನು, “ಬರಬೇಕಾದವನು ನೀನೋ” ಎಂದು ಏಕೆ ಕೇಳಿದನು? ಯೇಸುವಿನ ಬಾಯಿಂದಲೇ ಅದನ್ನು ದೃಢೀಕರಿಸಬೇಕೆಂಬ ಉದ್ದೇಶದಿಂದ ಅವನು ಹೀಗೆ ಕೇಳಿದ್ದಿರಬೇಕು. ಅದಕ್ಕಿಂತ ಮುಖ್ಯವಾಗಿ, ರಾಜ್ಯಾಧಿಕಾರದಲ್ಲಿ ಬಂದು ಯೆಹೂದ್ಯರ ಎಲ್ಲ ನಿರೀಕ್ಷೆಗಳನ್ನು ಈಡೇರಿಸುವ ‘ಬೇರೊಬ್ಬನು’ ಬರಲಿದ್ದಾನೋ ಎಂದು ಯೋಹಾನನಿಗೆ ಗೊತ್ತಾಗಬೇಕಿತ್ತು. ಯೇಸುವಿನ ಉತ್ತರವು ಬೇರೊಬ್ಬನು ಬರುವುದಿಲ್ಲ ಎಂಬದನ್ನು ಸ್ಥಿರೀಕರಿಸಿತು.

19:28—ನ್ಯಾಯತೀರ್ಪಿಗೆ ಒಳಗಾಗುವ ‘ಇಸ್ರಾಯೇಲಿನ ಹನ್ನೆರಡು ಕುಲಗಳು’ ಯಾರನ್ನು ಪ್ರತಿನಿಧಿಸುತ್ತವೆ? ಇವು ಆಧ್ಯಾತ್ಮಿಕ ಇಸ್ರಾಯೇಲಿನ ಹನ್ನೆರಡು ಕುಲಗಳನ್ನು ಸೂಚಿಸುವುದಿಲ್ಲ. (ಗಲಾ. 6:16; ಪ್ರಕ. 7:4-8) ಯೇಸು ಯಾರೊಂದಿಗೆ ಮಾತಾಡುತ್ತಿದ್ದನೋ ಆ ಅಪೊಸ್ತಲರು ಆಧ್ಯಾತ್ಮಿಕ ಇಸ್ರಾಯೇಲಿನ ಭಾಗವಾಗಲಿದ್ದರೇ ಹೊರತು ಅದರ ಸದಸ್ಯರಿಗೆ ನ್ಯಾಯಾಧಿಪತಿಗಳಲ್ಲ. ಯೇಸು ಅವರೊಂದಿಗೆ ‘ರಾಜ್ಯದ’ ಒಡಂಬಡಿಕೆಯನ್ನು ಮಾಡಿದನು ಮತ್ತು ಅವರು ‘ದೇವರಿಗೋಸ್ಕರ ರಾಜ್ಯವೂ ಯಾಜಕರೂ’ ಆಗಲಿದ್ದರು. (ಲೂಕ 22:28-30; ಪ್ರಕ. 5:10) ಆ ಆಧ್ಯಾತ್ಮಿಕ ಇಸ್ರಾಯೇಲಿಗೆ ಸೇರಿದವರು ‘ಲೋಕಕ್ಕೆ ತೀರ್ಪುಮಾಡಲಿದ್ದಾರೆ.’ (1 ಕೊರಿಂ. 6:2) ಹಾಗಾಗಿ ಸ್ವರ್ಗೀಯ ಸಿಂಹಾಸನದಲ್ಲಿರುವವರು ನ್ಯಾಯತೀರಿಸುವ ‘ಇಸ್ರಾಯೇಲಿನ ಹನ್ನೆರಡು ಕುಲಗಳು,’ ಆ ರಾಜ ಮತ್ತು ಯಾಜಕ ವರ್ಗಕ್ಕೆ ಸೇರದ ಮಾನವಕುಲದವರನ್ನು ಸೂಚಿಸುತ್ತವೆ. ದೋಷಪರಿಹಾರಕ ದಿನದಂದು ಕೂಡಿಬಂದ ಯಾಜಕೇತರ ಹನ್ನೆರಡು ಕುಲಗಳು ಇವರನ್ನೇ ಪ್ರತಿನಿಧಿಸಿದ್ದವು.—ಯಾಜ., ಅಧ್ಯಾಯ 16.

ನಮಗಾಗಿರುವ ಪಾಠಗಳು:

4:1-10. ಈ ವೃತ್ತಾಂತದಿಂದ ಸೈತಾನನು ಒಬ್ಬ ನೈಜ ವ್ಯಕ್ತಿಯಾಗಿದ್ದಾನೆಯೇ ಹೊರತು ಒಂದು ಕೆಟ್ಟ ಗುಣವಲ್ಲ ಎಂಬದನ್ನು ನಾವು ಕಲಿಯುತ್ತೇವೆ. ಅವನು “ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ” ಇವುಗಳ ಮೂಲಕ ನಮಗೆ ಶೋಧನೆಗಳನ್ನು ತರುತ್ತಾನೆ. ಹಾಗಿದ್ದರೂ, ಶಾಸ್ತ್ರೀಯ ಮೂಲತತ್ತ್ವಗಳನ್ನು ಅನ್ವಯಿಸುವುದು ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಲು ನಮಗೆ ಸಹಾಯಮಾಡುತ್ತದೆ.—1 ಯೋಹಾ. 2:16.

5:1–7:29. ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರಾಗಿರಿ. ಶಾಂತ ಸ್ವಭಾವದವರಾಗಿರಿ. ಅನೈತಿಕ ಯೋಚನೆಗಳನ್ನು ತೊರೆಯಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಿರಿ. ಪ್ರಾರ್ಥಿಸುವಾಗ ಭೌತಿಕ ಅಭಿರುಚಿಗಳಿಗಿಂತ ಆಧ್ಯಾತ್ಮಿಕ ವಿಚಾರಗಳಿಗೆ ಆದ್ಯತೆ ಕೊಡಿ. ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗಿರಿ. ಮೊದಲು ರಾಜ್ಯಕ್ಕಾಗಿಯೂ ದೇವರ ನೀತಿಗಾಗಿಯೂ ತವಕಪಡಿರಿ. ಇತರರ ವಿಷಯದಲ್ಲಿ ತೀರ್ಪುಮಾಡಬೇಡಿರಿ. ದೇವರ ಚಿತ್ತವನ್ನು ಮಾಡಿರಿ. ಪರ್ವತ ಪ್ರಸಂಗದಲ್ಲಿ ಎಂಥ ಅಮೂಲ್ಯ ವ್ಯಾವಹಾರಿಕ ಪಾಠಗಳು ಹುದುಗಿವೆ!

9:37, 38. ‘ಬೆಳೆಗೆ ಕೆಲಸದವರನ್ನು ಕಳುಹಿಸು’ ಎಂದು ಯಜಮಾನನಿಗೆ ನಾವು ಮಾಡುವ ಬೇಡಿಕೆಗೆ ಅನುಗುಣವಾಗಿ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಹುರುಪಿನಿಂದ ಭಾಗವಹಿಸಬೇಕು.—ಮತ್ತಾ. 28:19, 20.

10:32, 33. ನಮ್ಮ ನಂಬಿಕೆಯ ಕುರಿತು ಮಾತಾಡಲು ನಾವು ಎಂದಿಗೂ ಅಂಜಬಾರದು.

13:51, 52. ರಾಜ್ಯ ಸತ್ಯಗಳ ಅರ್ಥವನ್ನು ನಾವು ತಿಳಿದುಕೊಳ್ಳುವಾಗ ಬೇರೆಯವರಿಗೆ ಅವನ್ನು ಕಲಿಸುವ ಮತ್ತು ಈ ಪ್ರಾಮುಖ್ಯ ಸತ್ಯಗಳನ್ನು ಅವರು ಸಹ ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವ ಜವಾಬ್ದಾರಿ ನಮ್ಮ ಮೇಲೆ ಬರುತ್ತದೆ.

14:12, 13, 23. ಅರ್ಥಪೂರ್ಣವಾದ ಮನನಕ್ಕೆ ಏಕಾಂತತೆ ಅತ್ಯಗತ್ಯ.—ಮಾರ್ಕ 6:46; ಲೂಕ 6:12.

17:20. ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಬರುವ ಬೆಟ್ಟದಂಥ ಎಡರುತೊಡರುಗಳನ್ನು ದಾಟಲು ಮತ್ತು ಕಷ್ಟಗಳನ್ನು ನಿಭಾಯಿಸಲು ನಂಬಿಕೆಯು ಬೇಕೇ ಬೇಕು. ಯೆಹೋವನಲ್ಲಿ ಮತ್ತು ಆತನ ವಾಗ್ದಾನಗಳಲ್ಲಿ ನಮ್ಮ ನಂಬಿಕೆಯನ್ನು ಕಟ್ಟುವುದನ್ನು ಹಾಗೂ ಬಲಪಡಿಸುವುದನ್ನು ನಾವು ಎಂದಿಗೂ ಕಡೆಗಣಿಸಬಾರದು.—ಮಾರ್ಕ 11:23; ಲೂಕ 17:6.

18:1-4; 20:20-28. ಸ್ಥಾನಮಾನಕ್ಕೆ ಹೆಚ್ಚು ಒತ್ತುಕೊಟ್ಟ ಧಾರ್ಮಿಕ ಹಿನ್ನೆಲೆ ಮತ್ತು ಅಪರಿಪೂರ್ಣತೆಯ ಕಾರಣ ಯೇಸುವಿನ ಶಿಷ್ಯರು ದೊಡ್ಡತನಕ್ಕೆ ಆದ್ಯತೆ ಕೊಟ್ಟರು. ಪಾಪಪೂರ್ಣ ಪ್ರವೃತ್ತಿಗಳ ವಿರುದ್ಧ ಜಾಗ್ರತೆ ವಹಿಸಲು ಮತ್ತು ನಮ್ಮ ನೇಮಕಗಳ ಹಾಗೂ ಜವಾಬ್ದಾರಿಗಳ ಕುರಿತು ಸರಿಯಾದ ನೋಟವನ್ನಿಡಲು ದೀನತೆಯನ್ನು ಬೆಳೆಸಿಕೊಳ್ಳಬೇಕು.

‘ಮನುಷ್ಯಕುಮಾರನನ್ನು ಒಪ್ಪಿಸಿ ಕೊಡೋಣವಾಗುವುದು’

(ಮತ್ತಾ. 21:1-28:20)

ಸಾ.ಶ. 33ರ ನೈಸಾನ್‌ 9ರಂದು ಯೇಸು “ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿ” ಯೆರೂಸಲೇಮಿಗೆ ಬರುತ್ತಾನೆ. (ಮತ್ತಾ. 21:5) ಮರುದಿನ ಅವನು ದೇವಾಲಯಕ್ಕೆ ಬಂದು ಅದನ್ನು ಶುದ್ಧಗೊಳಿಸುತ್ತಾನೆ. ನೈಸಾನ್‌ 11ರಂದು ಅವನು ದೇವಾಲಯದಲ್ಲಿ ಬೋಧಿಸುತ್ತಾನೆ, ಶಾಸ್ತ್ರಿಗಳನ್ನೂ ಫರಿಸಾಯರನ್ನೂ ಖಂಡಿಸುತ್ತಾನೆ ಮತ್ತು ತರುವಾಯ ತನ್ನ ಶಿಷ್ಯರಿಗೆ “[ತಾನು] ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು” ಎಂದು ತಿಳಿಸುತ್ತಾನೆ. (ಮತ್ತಾ. 24:3) ಮರುದಿನ ಅವನು ಅವರಿಗೆ ಹೇಳುವುದು: “ಎರಡು ದಿವಸಗಳಾದ ಮೇಲೆ ಪಸ್ಕಹಬ್ಬ ಬರುತ್ತದೆಂದು ಬಲ್ಲಿರಿ; ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿಕೊಡೋಣವಾಗುವದು.”—ಮತ್ತಾ. 26:1, 2.

ಅದು ನೈಸಾನ್‌ ತಿಂಗಳ 14ನೇ ದಿನ. ಸಮೀಪಿಸುತ್ತಿರುವ ತನ್ನ ಮರಣದ ಜ್ಞಾಪಕಾಚರಣೆಯನ್ನು ಸ್ಥಾಪಿಸಿದ ಬಳಿಕ ಯೇಸುವಿಗೆ ದ್ರೋಹಬಗೆದು, ಬಂಧಿಸಿ, ವಿಚಾರಣೆಗೊಳಪಡಿಸಿ, ಶೂಲಕ್ಕೇರಿಸಲಾಗುತ್ತದೆ. ಮೂರನೆಯ ದಿನ ಅವನು ಸತ್ತವರಿಂದ ಎಬ್ಬಿಸಲ್ಪಡುತ್ತಾನೆ. ಪುನರುತ್ಥಿತ ಯೇಸು ಸ್ವರ್ಗಕ್ಕೆ ಏರಿಹೋಗುವ ಮುಂಚೆ ತನ್ನ ಹಿಂಬಾಲಕರಿಗೆ ಹೀಗೆ ಆಜ್ಞಾಪಿಸುತ್ತಾನೆ: “ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ”—ಮತ್ತಾ. 28:19.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

22:3, 4, 9—ಮದುವೆಯ ಕರೆ ಮೂರು ಸಲ ಕೊಡಲಾದದ್ದು ಯಾವಾಗೆಲ್ಲಾ? ಯೇಸು ಮತ್ತು ಅವನ ಹಿಂಬಾಲಕರು ಸಾ.ಶ. 29ರಲ್ಲಿ ಸಾರುವಿಕೆಯನ್ನು ಆರಂಭಿಸಿದಾಗ ವಧು ವರ್ಗದವರನ್ನು ಒಟ್ಟುಗೂಡಿಸಲು ಮೊದಲ ಕರೆ ಕೊಡಲಾಯಿತು. ಅದು ಸಾ.ಶ. 33ರ ವರೆಗೆ ಮುಂದುವರಿಯಿತು. ಎರಡನೆಯ ಕರೆಯು ಸಾ.ಶ. 33ರ ಪಂಚಾಶತ್ತಮದಂದು ಪವಿತ್ರಾತ್ಮವು ಸುರಿಸಲ್ಪಟ್ಟಂದಿನಿಂದ ಆರಂಭಿಸಿ ಸಾ.ಶ. 36ರ ತನಕ ಇತ್ತು. ಎರಡೂ ಸಲ ಕೊಡಲ್ಪಟ್ಟ ಕರೆಯು ಯೆಹೂದ್ಯರಿಗೆ, ಯೆಹೂದಿ ಮತಾವಲಂಬಿಗಳಿಗೆ ಮತ್ತು ಸಮಾರ್ಯದವರಿಗೆ ಮಾತ್ರವೇ ಆಗಿತ್ತು. ಆದರೆ ಮೂರನೆಯ ಕರೆಯನ್ನು ಪಟ್ಟಣದ ಹೊರಗಿನ ಹಾದಿಗಳಲ್ಲಿದ್ದ ಜನರಿಗೆ ಅಂದರೆ ಯೆಹೂದ್ಯರಲ್ಲದವರಿಗೆ ಕೊಡಲಾಯಿತು. ಈ ಕರೆಯೂ ರೋಮನ್‌ ಶತಾಧಿಪತಿಯಾದ ಕೊರ್ನೇಲ್ಯನು ಮತಾಂತರಗೊಂಡ ಸಾ.ಶ 36ರಿಂದ ಆರಂಭಿಸಿ ಇಂದಿಗೂ ಕೊಡಲಾಗುತ್ತಿದೆ.

23:15—ಒಬ್ಬ ಮತಾವಲಂಬಿ ಅಥವಾ ಮತಾಂತರಗೊಂಡ ಫರಿಸಾಯನು ಯೆಹೂದಿ ಫರಿಸಾಯರಿಗಿಂತ ‘ಎರಡರಷ್ಟಾಗಿ ನರಕಪಾತ್ರನಾಗುವುದು’ ಏಕೆ? ಮತಾವಲಂಬಿಗಳಾಗಿದ್ದ ಫರಿಸಾಯರು ಈ ಹಿಂದೆ ಕಡು ಪಾಪಿಗಳಾಗಿದ್ದಿರಬಹುದು. ಆದರೆ ಫರಿಸಾಯರ ಅತಿರೇಕತನಕ್ಕೆ ಮತಾಂತರಿಸುವ ಮೂಲಕ ಅವರು ತಮ್ಮ ಖಂಡನಾತ್ಮಕ ಬೋಧಕರಿಗಿಂತ ಹೆಚ್ಚು ಕೆಟ್ಟವರೆನಿಸಿಕೊಂಡರು. ಆದ್ದರಿಂದ ಯೆಹೂದಿ ಫರಿಸಾಯರೊಂದಿಗೆ ಹೋಲಿಸುವಾಗ ಇವರು ‘ಎರಡರಷ್ಟಾಗಿ ನರಕಪಾತ್ರರಾಗಿದ್ದರು.’

27:3-5—ಯೂದನು ಯಾವ ಅರ್ಥದಲ್ಲಿ ಪಶ್ಚಾತ್ತಾಪಪಟ್ಟನು? ಯೂದನು ನಿಜವಾದ ಪಶ್ಚಾತ್ತಾಪಪಟ್ಟದ್ದರ ಕುರಿತು ಯಾವ ಸೂಚನೆಯೂ ಇಲ್ಲ. ದೇವರೊಂದಿಗೆ ಕ್ಷಮೆಯಾಚಿಸುವ ಬದಲು ಅವನು ತನ್ನ ತಪ್ಪನ್ನು ಮಹಾಯಾಜಕರಿಗೂ ಹಿರಿಯರಿಗೂ ಅರಿಕೆಮಾಡಿದನು. “ಮರಣಕರವಾದ ಪಾಪ” ಮಾಡಿದ್ದಕ್ಕಾಗಿಯೇ ಯೂದನು ಹತಾಶೆ ಮತ್ತು ತಪ್ಪಿತಸ್ಥ ಭಾವನೆಯಲ್ಲಿ ಮುಳುಗಿಹೋದನು. (1 ಯೋಹಾ. 5:16) ಯೂದನು ದಿಕ್ಕುತೋಚದಿರುವಾಗ ಮನಸ್ಸಿನಲ್ಲಿ ಕೊರಗಿದನೇ ಹೊರತು ಮಾಡಿದ ಪಾಪಕ್ಕೆ ನಿಜವಾಗಿ ದುಃಖ ವ್ಯಕ್ತಪಡಿಸಿ ಪಶ್ಚಾತ್ತಾಪಪಡಲಿಲ್ಲ.

ನಮಗಾಗಿರುವ ಪಾಠಗಳು:

21:28-31. ನಾವು ಯೆಹೋವನ ಚಿತ್ತವನ್ನು ಮಾಡುವುದನ್ನೇ ಆತನು ಪ್ರಾಮುಖ್ಯವೆಂದು ಪರಿಗಣಿಸುತ್ತಾನೆ. ಉದಾಹರಣೆಗಾಗಿ ರಾಜ್ಯದ ಕುರಿತು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಹುರುಪಿನಿಂದ ಭಾಗವಹಿಸಬೇಕು.—ಮತ್ತಾ. 24:14; 28:19, 20.

22:37-39. ದೇವರು ತನ್ನ ಆರಾಧಕರಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದು ಅತಿಪ್ರಾಮುಖ್ಯವಾಗಿರುವ ಈ ಎರಡು ಆಜ್ಞೆಗಳಲ್ಲಿ ಹೇಗೆ ಸಂಕ್ಷೇಪವಾಗಿ ಹೇಳಲಾಗಿದೆ!

[ಪುಟ 31ರಲ್ಲಿರುವ ಚಿತ್ರ]

ಕೊಯ್ಲಿನ ಕೆಲಸದಲ್ಲಿ ನೀವು ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದೀರೋ?

[ಕೃಪೆ]

© 2003 BiblePlaces.com

[ಪುಟ 31ರಲ್ಲಿರುವ ಚಿತ್ರ]

ಮತ್ತಾಯನು ರಾಜ್ಯದ ಮುಖ್ಯವಿಷಯವನ್ನು ಒತ್ತಿಹೇಳುತ್ತಾನೆ