ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಸ್ರಾಯೇಲ್ಯರ ತಪ್ಪುಗಳಿಂದ ಪಾಠಕಲಿಯಿರಿ

ಇಸ್ರಾಯೇಲ್ಯರ ತಪ್ಪುಗಳಿಂದ ಪಾಠಕಲಿಯಿರಿ

ಇಸ್ರಾಯೇಲ್ಯರ ತಪ್ಪುಗಳಿಂದ ಪಾಠಕಲಿಯಿರಿ

ಯೆಹೋವನು ಇಸ್ರಾಯೇಲ್ಯರಿಂದ ಏನನ್ನು ಅಪೇಕ್ಷಿಸಿದ್ದನೆಂದು ವಾಗ್ದತ್ತ ದೇಶವನ್ನು ಪ್ರವೇಶಿಸಿದಾಗಲೇ ಅವರಿಗೆ ತಿಳಿದಿತ್ತು. “ಆ ದೇಶದ ನಿವಾಸಿಗಳನ್ನೆಲ್ಲಾ ಹೊರಡಿಸಿಬಿಟ್ಟು ಅವರ ವಿಚಿತ್ರವಾದ ಕಲ್ಲುಗಳನ್ನೂ ಲೋಹವಿಗ್ರಹಗಳನ್ನೂ ನಾಶಮಾಡಿ ಅವರ ಪೂಜಾಸ್ಥಳಗಳನ್ನು ಹಾಳುಮಾಡಬೇಕು” ಎಂದು ಮೋಶೆಯ ಮೂಲಕ ದೇವರು ಆಜ್ಞಾಪಿಸಿದ್ದನು.—ಅರಣ್ಯ. 33:52.

ಆ ದೇಶದ ಜನರೊಂದಿಗೆ ಇಸ್ರಾಯೇಲಿನ ಜನರು ಯಾವ ಶಾಂತಿ ಸಂಧಾನವನ್ನಾಗಲಿ ವೈವಾಹಿಕ ಬೀಗತನವನ್ನಾಗಲಿ ಮಾಡಿಕೊಳ್ಳಬಾರದಿತ್ತು. (ಧರ್ಮೋ. 7:2, 3) “ನೀವು ಸೇರುವ ದೇಶದ ನಿವಾಸಿಗಳ ಸಂಗಡ ಯಾವ ಒಡಂಬಡಿಕೆಯನ್ನೂ ಮಾಡಿಕೊಳ್ಳಬಾರದು ನೋಡಿಕೊಳ್ಳಿರಿ; ಮಾಡಿಕೊಂಡರೆ ಅದು ನಿಮ್ಮ ಮಧ್ಯದಲ್ಲಿ ಉರುಲಿನಂತಿರುವದು” ಎಂಬ ಖಂಡಿತವಾದ ಎಚ್ಚರಿಕೆಯನ್ನು ದೇವರಾದುಕೊಂಡ ಆ ಜನರಿಗೆ ನೀಡಲಾಗಿತ್ತು. (ವಿಮೋ. 34:12) ಆದರೂ ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾದರು ಮತ್ತು ಆ ಉರುಲಿನೊಳಗೆ ಸಿಕ್ಕಿಬಿದ್ದರು. ಅವರನ್ನು ಅಧೋಗತಿಗೆ ನಡಿಸಿದ್ದು ಯಾವುದು? ಅವರಿಗಾದ ಅನುಭವದಿಂದ ನಾವು ಯಾವ ಎಚ್ಚರಿಕೆಯ ಪಾಠಗಳನ್ನು ಕಲಿಯಬಲ್ಲೆವು?—1 ಕೊರಿಂ. 10:11.

ಅನ್ಯಜನರ ಸಹವಾಸದಿಂದ ವಿಗ್ರಹಾರಾಧನೆಗೆ

ವಾಗ್ದತ್ತ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವುದರಲ್ಲಿ ತೊಡಗಿದ ಇಸ್ರಾಯೇಲ್ಯರು ಅಲ್ಲಿನ ನಿವಾಸಿಗಳ ಮೇಲೆ ಬೇಗನೆ ಜಯಗಳಿಸಿದರು. ಆದರೆ ದೇವರಾಜ್ಞೆಗಳಿಗೆ ಪೂರ್ಣ ವಿಧೇಯರಾಗಲು ಅವರು ತಪ್ಪಿದರು. ಅಲ್ಲಿದ್ದ ತಮ್ಮ ಶತ್ರುಗಳನ್ನು ಅವರು ಸಂಪೂರ್ಣವಾಗಿ ಹೊರಗಟ್ಟಿಬಿಡಲಿಲ್ಲ. (ನ್ಯಾಯ. 1:1-2:10) ಬದಲಾಗಿ, ದೇಶದಲ್ಲಿ ನಿವಾಸಿಸಿದ್ದ “ಏಳು ಜನಾಂಗಗಳ” ಸಂಗಡ ಇಸ್ರಾಯೇಲ್ಯರು ವಾಸಮಾಡತೊಡಗಿದರು. ಆ ಜನಾಂಗಗಳ ಜನರೊಂದಿಗೆ ಅವರ ಕ್ರಮದ ಸಂಪರ್ಕವು ಅವರೊಂದಿಗೆ ಸ್ನೇಹ ಸಂಬಂಧಗಳಿಗೆ ನಡೆಸಿತು. (ಧರ್ಮೋ. 7:1) ಇದು ಇಸ್ರಾಯೇಲ್ಯರ ಮೇಲೆ ಹೇಗೆ ಪರಿಣಾಮಬೀರಿತು? ಇಸ್ರಾಯೇಲ್ಯರು “ಅವರ ಕನ್ಯೆಯರನ್ನು ತಾವು ತಂದು ತಮ್ಮ ಕನ್ಯೆಯರನ್ನು ಅವರ ಕುಮಾರರಿಗೆ ಕೊಟ್ಟು ಅವರ ದೇವತೆಗಳನ್ನು ಸೇವಿಸಿದರು. ಇಸ್ರಾಯೇಲ್ಯರು ಬಾಳ್‌, ಅಶೇರ ಎಂಬ ದೇವತೆಗಳನ್ನು ಪೂಜಿಸಿ ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟು ಆತನ ದೃಷ್ಟಿಯಲ್ಲಿ ದ್ರೋಹಿಗಳಾದರು” ಎಂದು ಬೈಬಲ್‌ ಹೇಳುತ್ತದೆ. (ನ್ಯಾಯ. 3:5-7) ದೇಶದ ಅನ್ಯಜನರೊಂದಿಗಿನ ಸಹವಾಸವು ಇಸ್ರಾಯೇಲ್ಯರನ್ನು ಅಂತರ್ವಿವಾಹಕ್ಕೆ ಮತ್ತು ವಿಗ್ರಹಾರಾಧನೆಗೆ ನಡಿಸಿತು. ಒಮ್ಮೆ ವಿವಾಹ ಸಂಬಂಧಗಳು ಮಾಡಲ್ಪಟ್ಟವೆಂದಾದ ಮೇಲೆ, ಇಸ್ರಾಯೇಲ್ಯರು ಅನ್ಯಜನರನ್ನು ಆ ದೇಶದಿಂದ ಹೊರಗಟ್ಟಿಬಿಡುವ ಸಂಭಾವ್ಯತೆಯು ಕುಂದಿಹೋಯಿತು. ಸತ್ಯಾರಾಧನೆಯು ಭ್ರಷ್ಟಗೊಂಡಿತು ಮತ್ತು ಇಸ್ರಾಯೇಲ್ಯರು ತಾವೇ ಸುಳ್ಳು ದೇವರುಗಳನ್ನು ಸೇವಿಸತೊಡಗಿದರು.

ವಾಗ್ದತ್ತ ದೇಶದ ನಿವಾಸಿಗಳು ಈಗ ಇಸ್ರಾಯೇಲ್ಯರಿಗೆ ಮಿತ್ರರಾದ ಕಾರಣ, ಅವರು ಶತ್ರುಗಳಾಗಿದ್ದ ಸಮಯಕ್ಕಿಂತಲೂ ಹೆಚ್ಚಿನ ಆಧ್ಯಾತ್ಮಿಕ ಅಪಾಯವನ್ನು ತರುವವರಾದರು. ಧಾರ್ಮಿಕ ಭ್ರಷ್ಟತೆಯು ಸಂಭವಿಸಿದ್ದಿರಬಹುದಾದ ಇನ್ನೊಂದು ವಿಧಾನವನ್ನೂ ಗಮನಿಸಿರಿ.

ವ್ಯವಸಾಯದಿಂದ ಬಾಳನ ಆರಾಧನೆಗೆ

ವಾಗ್ದತ್ತ ದೇಶವನ್ನು ಪ್ರವೇಶಿಸಿದಾಗ ಇಸ್ರಾಯೇಲ್ಯರು ಅಲೆಮಾರಿಗಳಾಗಿರದೇ ಅನೇಕರು ವ್ಯವಸಾಯಗಾರರಾದರು. ಅವರು ಬಳಸಿದ್ದ ವ್ಯವಸಾಯ ವಿಧಾನಗಳು ಅವರಿಗಿಂತ ಮುಂಚೆ ಅಲ್ಲಿ ಜಮೀನನ್ನು ಸಾಗುವಳಿಮಾಡಿದ್ದ ಜನರು ಬಳಸಿದ್ದ ವಿಧಾನಗಳಂತೆಯೇ ಇದ್ದಿರಬಹುದು. ಈ ಬದಲಾವಣೆ ಮಾಡಿದಾಗ ಇಸ್ರಾಯೇಲ್ಯರು ಕಾನಾನ್ಯರ ವ್ಯವಸಾಯ ವಿಧಾನಗಳನ್ನು ಮಾತ್ರವೇ ಅನುಕರಿಸಲಿಲ್ಲವೆಂಬುದು ವ್ಯಕ್ತ. ಸ್ಥಳಿಕ ಜನರೊಂದಿಗಿನ ಸಹವಾಸದಿಂದಾಗಿ ವ್ಯವಸಾಯಕ್ಕೆ ಜಂಟಿಸಿದ ಅವರ ನಂಬಿಕೆಗಳನ್ನೂ ಅನುಸರಿಸುವಂತೆ ಇಸ್ರಾಯೇಲ್ಯರು ಸೆಳೆಯಲ್ಪಟ್ಟರು.

ಭೂಮಿಯನ್ನು ಫಲವತ್ತಾಗಿ ಮಾಡುವ ದೇವರುಗಳೆಂದು ನಂಬಲಾಗಿದ್ದ ಅನೇಕ ಬಾಳರನ್ನು ಕಾನಾನ್ಯರು ಪೂಜಿಸುತ್ತಿದ್ದರು. ಇಸ್ರಾಯೇಲ್ಯರು ಭೂಮಿಯನ್ನು ಸಾಗುವಳಿಮಾಡಿ ಕೊಯ್ಲನ್ನು ಕೊಯ್ಯುವುದಲ್ಲದೆ ಹೇರಳ ಸಮೃದ್ಧಿಯ ದಾತರೆಂದು ನಂಬಲಾದ ಕಾನಾನ್ಯ ದೇವರುಗಳ ಆರಾಧನೆಯಲ್ಲೂ ಸೇರಿಕೊಂಡರು. ಹೀಗೆ ಇಸ್ರಾಯೇಲಿನಲ್ಲಿ ಅನೇಕರು ಯೆಹೋವನನ್ನು ಆರಾಧಿಸುತ್ತೇವೆಂಬ ಸೋಗನ್ನು ಹಾಕಿಕೊಂಡರೂ ವಾಸ್ತವದಲ್ಲಿ ಅವರು ಪೂರ್ತಿಯಾದ ಧರ್ಮಭ್ರಷ್ಟತೆಯಲ್ಲಿ ಪಾಲಿಗರಾದರು.

ಈಗಿರುವ ನಮಗೆ ಬಲವಾದ ಎಚ್ಚರಿಕೆ

ಆ ವಾಗ್ದತ್ತ ದೇಶದ ಜನರೊಂದಿಗೆ ಇಸ್ರಾಯೇಲ್ಯರು ಮೊದಲಾಗಿ ಸಂಪರ್ಕಕ್ಕೆ ಬಂದಾಗ, ಬಾಳನ ಆರಾಧನೆಯಲ್ಲಿ ಮತ್ತು ಅದರ ದುರ್ನಡತೆಯಲ್ಲಿ ಭಾಗಿಗಳಾಗುವ ಹೇತು ಅವರಲ್ಲಿತ್ತೆಂಬುದು ಅಸಂಭಾವ್ಯ. ಆದರೂ ಅವರ ಸಹವಾಸವು ಅವರನ್ನು ಅಲ್ಲಿಗೇ ನಡಿಸಿತು. ಸ್ನೇಹಪರರಾಗಿದ್ದರೂ ನಮ್ಮ ಕ್ರೈಸ್ತ ನಂಬಿಕೆಗಳಲ್ಲಿ, ಮೌಲ್ಯಗಳಲ್ಲಿ ಮತ್ತು ಮೂಲತತ್ತ್ವಗಳಲ್ಲಿ ಪಾಲ್ಗೊಳ್ಳದ ಜನರೊಂದಿಗೆ ಸಹವಾಸ ಮಾಡುವುದಾದರೆ, ಅಂಥ ಹಾನಿಕರ ಪರಿಣಾಮಗಳನ್ನು ನಾವು ನಿರೀಕ್ಷಿಸಬೇಡವೇ? ನಿರೀಕ್ಷಿಸಲೇಬೇಕು! ಅವಿಶ್ವಾಸಿಗಳೊಂದಿಗೆ ಉದ್ಯೋಗದ ಸ್ಥಳದಲ್ಲಿ, ಶಾಲೆಯಲ್ಲಿ ಮತ್ತು ಪ್ರಾಯಶಃ ಮನೆಯಲ್ಲಿ ಸಹ ಸ್ವಲ್ಪಮಟ್ಟಿಗಿನ ಸಹವಾಸ ಮಾಡಬೇಕಾದೀತು. ಆದರೂ ಅಂಥ ಸಹವಾಸ ಹುಡುಕುವಿಕೆಯು ತೊಂದರೆಗೆ ನಿಮಂತ್ರಣವೇ ಸರಿ. ಬೈಬಲ್‌ ಈ ಅನಿವಾರ್ಯ ಸತ್ಯವನ್ನು ತಿಳಿಸುತ್ತದೆ: “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.”—1 ಕೊರಿಂ. 15:33.

ಇಸ್ರಾಯೇಲ್ಯರು ಎದುರಿಸಿದ್ದಕ್ಕೆ ಸಮಾನವಾದ ಅನೇಕ ಪರೀಕ್ಷೆಗಳನ್ನು ಇಂದು ನಾವು ಸಹ ಎದುರಿಸುತ್ತೇವೆ. ಇಂದಿನ ಆಧುನಿಕ ಸಮಾಜದಲ್ಲಿ ಅನೇಕ ವಸ್ತುಗಳನ್ನು ಮತ್ತು ವ್ಯಕ್ತಿಗಳನ್ನು ದೇವರುಗಳೋ ಎಂಬಂತೆ ವೀಕ್ಷಿಸುವ ಜನರಿದ್ದಾರೆ. ಅದರಲ್ಲಿ ಹಣ, ಮನೋರಂಜನಾ ಜಗತ್ತಿನ ತಾರೆಗಳು, ಕ್ರೀಡಾಪಟುಗಳು, ರಾಜಕೀಯ ವ್ಯವಸ್ಥೆಗಳು, ನಿರ್ದಿಷ್ಟ ಧಾರ್ಮಿಕ ಮುಖಂಡರು ಮತ್ತು ಕುಟುಂಬ ಸದಸ್ಯರು ಸಹ ಸೇರಿರುತ್ತಾರೆ. ಇವರಲ್ಲಿ ಯಾರಾದರೂ ನಮ್ಮ ಜೀವನದ ಕೇಂದ್ರಬಿಂದು ಆಗುವ ಸಂಭಾವ್ಯತೆ ಇದೆ. ಯೆಹೋವನನ್ನು ಪ್ರೀತಿಸದಿರುವ ಜನರೊಂದಿಗೆ ಆಪ್ತ ಸ್ನೇಹವನ್ನು ಬೆಳೆಸುವುದು ನಮ್ಮ ಆಧ್ಯಾತ್ಮಿಕ ಧ್ವಂಸಕ್ಕೆ ನಡಿಸಬಲ್ಲದು.

ಅನೇಕ ಇಸ್ರಾಯೇಲ್ಯರನ್ನು ಆಕರ್ಷಿಸಿ ಪಾಶಕ್ಕೆ ಸೆಳೆದದ್ದು ಬಾಳನ ಆರಾಧನೆಯ ಮೂಲಭೂತ ಭಾಗವಾಗಿದ್ದ ನಿಷಿದ್ಧ ಲೈಂಗಿಕತೆಯೇ. ತದ್ರೀತಿಯ ಪಾಶಗಳಿಗೆ ದೇವಜನರು ಇನ್ನೂ ಬಲಿಪಶುಗಳಾಗುತ್ತಿದ್ದಾರೆ. ದೃಷ್ಟಾಂತಕ್ಕಾಗಿ, ಕುತೂಹಲಿಯೂ ಅಜಾಗರೂಕನೂ ಆಗಿರುವ ವ್ಯಕ್ತಿಗೆ ಈಗಿನ ಕಾಲದಲ್ಲಿ ತನ್ನ ಶುದ್ಧ ಮನಸ್ಸಾಕ್ಷಿಯನ್ನು ಧ್ವಂಸಗೊಳಿಸಿಕೊಳ್ಳುವುದು ಅತಿ ಸುಲಭ; ಕೇವಲ ತನ್ನ ಮನೆಯ ಏಕಾಂತದಲ್ಲಿ ಕೂತುಕೊಂಡು ಕಂಪ್ಯೂಟರ್‌ ಇಂಟರ್‌ನೆಟ್‌ ಮೂಲಕ ಕಾಮಪ್ರಚೋದಕ ಕೃತ್ಯಗಳನ್ನು ನೋಡುವುದಷ್ಟೇ ಸಾಕು. ಈ ರೀತಿ ಇಂಟರ್‌ನೆಟ್‌ನ ಅಶ್ಲೀಲ ಚಿತ್ರಗಳ ಮೂಲಕ ಕ್ರೈಸ್ತರು ಪ್ರಲೋಭನೆಗೆ ಸೆಳೆಯಲ್ಪಡುವುದು ಅದೆಷ್ಟು ಶೋಚನೀಯ!

‘ಆತನ ಕಟ್ಟಳೆಗಳನ್ನು ಕೈಕೊಳ್ಳುವವರು ಸಂತೋಷಿತರು’

ನಮ್ಮ ಸಹವಾಸಿಗಳನ್ನು ಆರಿಸಿಕೊಳ್ಳುವುದರಲ್ಲಿ ಯೆಹೋವನಿಗೆ ವಿಧೇಯರಾಗುವುದು ಅಥವಾ ವಿಧೇಯರಾಗದಿರುವುದು ನಮ್ಮ ವೈಯಕ್ತಿಕ ಆಯ್ಕೆ. (ಧರ್ಮೋ. 30:19, 20) ಆದುದರಿಂದ ನಾವು ನಮ್ಮನ್ನು ಹೀಗೆ ಕೇಳಿಕೊಳ್ಳಬೇಕು: ‘ವಿರಾಮ-ಮಜಾಗಳಲ್ಲಿ ನಾನು ಯಾರೊಂದಿಗೆ ಜತೆಗೂಡುತ್ತೇನೆ? ಅವರ ಮೌಲ್ಯಗಳೂ ನೀತಿನಡತೆಗಳೂ ಹೇಗಿವೆ? ಅವರು ಯೆಹೋವನ ಆರಾಧಕರೋ? ಅವರೊಂದಿಗಿನ ಸಹವಾಸವು ನನ್ನನ್ನು ಒಳ್ಳೆಯ ಕ್ರೈಸ್ತನನ್ನಾಗಿ ಮಾಡುವುದೋ?’

ಕೀರ್ತನೆಗಾರನು ಹಾಡಿದ್ದು: “ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ ಸದಾಚಾರಿಗಳಾಗಿ ನಡೆಯುವವರು ಧನ್ಯರು. ಆತನ ಕಟ್ಟಳೆಗಳನ್ನು ಕೈಕೊಂಡು ಸಂಪೂರ್ಣಮನಸ್ಸಿನಿಂದ ಆತನನ್ನು ಹುಡುಕುವವರು ಭಾಗ್ಯವಂತರು [“ಸಂತೋಷಿತರು,” NW].” (ಕೀರ್ತ. 119:1, 2) ನಿಶ್ಚಯವಾಗಿಯೂ “ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು.” (ಕೀರ್ತ. 128:1) ನಮ್ಮ ಸಹವಾಸಿಗಳನ್ನು ಆಯ್ದುಕೊಳ್ಳುವ ವಿಷಯದಲ್ಲಿ, ಇಸ್ರಾಯೇಲ್ಯರು ಗೈದ ತಪ್ಪುಗಳಿಂದ ನಾವು ಪಾಠ ಕಲಿಯೋಣ ಮತ್ತು ಯೆಹೋವನಿಗೆ ಸಂಪೂರ್ಣ ವಿಧೇಯತೆ ತೋರಿಸೋಣ.—ಜ್ಞಾನೋ. 13:20.

[ಪುಟ 26ರಲ್ಲಿರುವ ಚಿತ್ರ]

ಯೆಹೋವನನ್ನು ಪ್ರೀತಿಸದವರೊಂದಿಗೆ ಸಹವಾಸ ಮಾಡುವುದು ನಮ್ಮನ್ನು ವಿಗ್ರಹಾರಾಧನೆಗೆ ನಡಿಸಬಲ್ಲದು