ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಹಾನ್‌ ಮಿಷನೆರಿಯನ್ನು ಅನುಕರಿಸಿರಿ

ಮಹಾನ್‌ ಮಿಷನೆರಿಯನ್ನು ಅನುಕರಿಸಿರಿ

ಮಹಾನ್‌ ಮಿಷನೆರಿಯನ್ನು ಅನುಕರಿಸಿರಿ

“ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.”—1 ಕೊರಿಂ. 11:1.

ಅಪೊಸ್ತಲ ಪೌಲನು ಮಹಾನ್‌ ಮಿಷನೆರಿಯಾದ ಯೇಸು ಕ್ರಿಸ್ತನನ್ನು ಅನುಕರಿಸಿದನು. “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ” ಎಂದು ಪೌಲನು ತನ್ನ ಜೊತೆಕ್ರೈಸ್ತರನ್ನೂ ಪ್ರೋತ್ಸಾಹಿಸಿದನು. (1 ಕೊರಿಂ. 11:1) ಯೇಸು ದೀನಭಾವದಿಂದ ತನ್ನ ಅಪೊಸ್ತಲರ ಪಾದಗಳನ್ನು ತೊಳೆಯುವ ಮೂಲಕ ದೈನ್ಯದ ವಿಷಯದಲ್ಲಿ ಒಂದು ಮಾದರಿಯನ್ನಿಡುತ್ತಾ ಹೇಳಿದ್ದು: “ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ.” (ಯೋಹಾ. 13:12-15) ಇಂದು ಕ್ರೈಸ್ತರಾದ ನಾವು ನಮ್ಮ ನಡೆನುಡಿಗಳಲ್ಲಿ ಮತ್ತು ನಮ್ಮ ಗುಣಗಳಲ್ಲಿ ಯೇಸು ಕ್ರಿಸ್ತನನ್ನು ಅನುಕರಿಸುವ ಹಂಗಿನಲ್ಲಿದ್ದೇವೆ.—1 ಪೇತ್ರ 2:21.

2 ಹಿಂದಿನ ಲೇಖನದಲ್ಲಿ, ಮಿಷನೆರಿಯೆಂದರೆ ಸೌವಾರ್ತಿಕನಾಗಿ ಕಳುಹಿಸಲ್ಪಟ್ಟವನು ಅಂದರೆ ಇತರರಿಗೆ ಸುವಾರ್ತೆಯನ್ನು ತಲಪಿಸುವವನು ಎಂದು ಕಲಿತುಕೊಂಡೆವು. ಇದರ ಕುರಿತು ಪೌಲನು ಕೆಲವು ಕುತೂಹಲಕರ ಪ್ರಶ್ನೆಗಳನ್ನು ಕೇಳಿದನು. (ರೋಮಾಪುರ 10:11-15ನ್ನು ಓದಿ.) “ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ?” ಎಂದು ಅಪೊಸ್ತಲನು ಕೇಳಿದ್ದನ್ನು ಗಮನಿಸಿ. ಬಳಿಕ ಅವನು ಯೆಶಾಯನ ಪ್ರವಾದನೆಯಿಂದ, “ಶುಭಸಮಾಚಾರವನ್ನು . . . ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ!” ಎಂದು ಉಲ್ಲೇಖಿಸಿದನು. (ಯೆಶಾ. 52:7) ನೀವು ಮಿಷನೆರಿಯಾಗಿ ನೇಮಕಗೊಂಡು ವಿದೇಶಕ್ಕೆ ಕಳುಹಿಸಲ್ಪಡದಿದ್ದರೂ ಹುರುಪಿನ ಸುವಾರ್ತಾಘೋಷಕನಾದ ಯೇಸುವನ್ನು ಅನುಕರಿಸುತ್ತಾ ಸೌವಾರ್ತಿಕ ಮನೋಭಾವವನ್ನು ತೋರಿಸಬಲ್ಲಿರಿ. ಕಳೆದ ವರುಷ, 69,57,852 ಮಂದಿ ರಾಜ್ಯಪ್ರಚಾರಕರು 236 ದೇಶಗಳಲ್ಲಿ ‘ಸೌವಾರ್ತಿಕರ ಕೆಲಸವನ್ನು’ ಮಾಡಿದರು.—2 ತಿಮೊ. 4:5.

“ನಾವು ಎಲ್ಲವನ್ನು ಬಿಟ್ಟುಬಿಟ್ಟು ನಿನ್ನನ್ನು ಹಿಂಬಾಲಿಸಿದೆವು”

3 ಯೇಸು, ಭೂಮಿಯಲ್ಲಿ ನೇಮಿಸಲ್ಪಟ್ಟ ತನ್ನ ಪಾತ್ರವನ್ನು ನೆರವೇರಿಸಲು ಸ್ವರ್ಗೀಯ ಜೀವನ ಮತ್ತು ಮಹಿಮೆಯನ್ನು ಬಿಟ್ಟು ‘ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡನು.’ (ಫಿಲಿ. 2:7) ಹೀಗಿರುವುದರಿಂದ, ಕ್ರಿಸ್ತನನ್ನು ಅನುಕರಿಸುತ್ತ ನಾವೇನೇ ಮಾಡಿದರೂ ಅದು ಯೇಸು ಭೂಮಿಗೆ ಬರಲು ಮಾಡಿದ ತ್ಯಾಗಕ್ಕೆ ಸಮಾನವಾಗಿರದು. ಆದರೂ ನಾವು ಸೈತಾನನ ಲೋಕದಲ್ಲಿ ನಮಗಿದ್ದ ವಿಷಯಗಳನ್ನು ಬಿಟ್ಟುಬಂದದ್ದಕ್ಕಾಗಿ ವಿಷಾದಿಸದೆ ಅವನ ಹಿಂಬಾಲಕರಾಗಿ ಸ್ಥಿರಚಿತ್ತರಾಗಿ ಇರಬಲ್ಲೆವು.—1 ಯೋಹಾ. 5:19.

4 ಒಮ್ಮೆ ಅಪೊಸ್ತಲ ಪೇತ್ರನು ಯೇಸುವಿಗೆ, “ಇಗೋ, ನಾವು ಎಲ್ಲಾ ಬಿಟ್ಟುಬಿಟ್ಟು ನಿನ್ನನ್ನು ಹಿಂಬಾಲಿಸಿದೆವು” ಎಂದು ಹೇಳಿದನು. (ಮತ್ತಾ. 19:27) ಯೇಸು ತನ್ನನ್ನು ಹಿಂಬಾಲಿಸುವಂತೆ ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನರನ್ನು ಆಮಂತ್ರಿಸಿದಾಗ ಅವರು ಒಡನೆ ತಮ್ಮ ಬಲೆಗಳನ್ನು ಬಿಟ್ಟುಬಂದರು. ಅವರು ಮೀನುಗಾರಿಕೆಯನ್ನು ಬಿಟ್ಟುಬಿಟ್ಟು ಶುಶ್ರೂಷೆಯನ್ನು ತಮ್ಮ ಮುಖ್ಯ ವೃತ್ತಿಯನ್ನಾಗಿ ಮಾಡಿದರು. ಲೂಕನ ಸುವಾರ್ತೆಗನುಸಾರ ಪೇತ್ರನು, “ಇಗೋ, ನಾವು ನಮ್ಮ ನಮ್ಮ ಮನೆಮಾರುಗಳನ್ನು ಬಿಟ್ಟು ನಿನ್ನ ಹಿಂದೆ ಬಂದೆವು” ಎಂದು ಹೇಳಿದನು. (ಲೂಕ 18:28) ನಮ್ಮಲ್ಲಿ ಹೆಚ್ಚಿನವರಿಗೆ ಯೇಸುವನ್ನು ಹಿಂಬಾಲಿಸಲು “ನಮ್ಮ ಮನೆಮಾರುಗಳನ್ನು” ಇಲ್ಲವೆ ನಮ್ಮ ಸ್ವಂತವಾಗಿರುವ ಎಲ್ಲವುಗಳನ್ನು ಬಿಡಬೇಕಾಗಿರಲಿಲ್ಲ. ಆದರೂ, ಕ್ರಿಸ್ತನ ಹಿಂಬಾಲಕರೂ ಯೆಹೋವನ ಪೂರ್ಣಹೃದಯದ ಸೇವಕರೂ ಆಗಲಿಕ್ಕಾಗಿ ‘ನಮ್ಮನ್ನೇ ನಿರಾಕರಿಸಿಕೊಳ್ಳುವುದು’ ಆವಶ್ಯಕವಾಗಿತ್ತು. (ಮತ್ತಾ. 16:24) ಇಂಥ ಮಾರ್ಗಕ್ರಮವು ಹೇರಳ ಆಶೀರ್ವಾದಗಳನ್ನು ತಂದಿದೆ. (ಮತ್ತಾಯ 19:29ನ್ನು ಓದಿ.) ಕ್ರಿಸ್ತನಂತೆ ನಮ್ಮಲ್ಲೂ ಹುರುಪಿನ ಸೌವಾರ್ತಿಕ ಮನೋಭಾವ ಇರುವಲ್ಲಿ ನಮ್ಮ ಹೃದಯವು ಸಂತೋಷದಿಂದ ಉಕ್ಕಿಹರಿಯುತ್ತದೆ. ವಿಶೇಷವಾಗಿ, ದೇವರಿಗೂ ಆತನ ಪ್ರಿಯ ಕುಮಾರನಿಗೂ ಆಪ್ತನಾಗುವಂತೆ ಒಬ್ಬನಿಗೆ ನೆರವಾಗಲು ನಾವು ಚಿಕ್ಕ ಪಾತ್ರವನ್ನು ವಹಿಸಿದ್ದರೂ ಇದು ಸತ್ಯವಾಗಿದೆ.

5 ಬ್ರಸಿಲ್‌ನ ವಾಲ್ಮೀರ್‌ ಎಂಬವನು ಸುರಿನಾಮ ದೇಶದ ಒಳನಾಡಿನಲ್ಲಿ ಚಿನ್ನದ ಗಣಿಗಾರನಾಗಿ ಕೆಲಸಮಾಡುತ್ತಿದ್ದನು. ಅವನೊಬ್ಬ ಮದ್ಯವ್ಯಸನಿಯಾಗಿದ್ದು ಅನೈತಿಕ ಜೀವನ ನಡಿಸುತ್ತಿದ್ದನು. ಒಮ್ಮೆ ಅವನು ಪಟ್ಟಣದಲ್ಲಿ ತಂಗಿದ್ದಾಗ ಯೆಹೋವನ ಸಾಕ್ಷಿಗಳು ಅವನೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸಿದರು. ಅವನು ಪ್ರತಿದಿನ ಅಧ್ಯಯನ ಮಾಡಿ, ಅನೇಕ ಬದಲಾವಣೆಗಳನ್ನು ಮಾಡಿ, ಸ್ವಲ್ಪದರಲ್ಲಿ ದೀಕ್ಷಾಸ್ನಾನವನ್ನೂ ಹೊಂದಿದನು. ಹೊಸದಾಗಿ ಕಂಡುಕೊಂಡ ಈ ನಂಬಿಕೆಗೆ ಹೊಂದಿಕೆಯಾಗಿ ಜೀವಿಸುವುದಕ್ಕೆ ತನ್ನ ಕೆಲಸವು ಒಂದು ಅಡ್ಡಿಯಾಗಿದೆ ಎಂದು ತಿಳಿದಾಗ ಅವನು ತನ್ನ ಲಾಭದಾಯಕ ಕೆಲಸವನ್ನು ಬಿಟ್ಟುಬಿಟ್ಟನು. ಅಷ್ಟೇ ಅಲ್ಲ, ತನ್ನ ಕುಟುಂಬ ಸಹ ಆಧ್ಯಾತ್ಮಿಕ ನಿಧಿಗಳನ್ನು ಕಂಡುಕೊಳ್ಳುವಂತೆ ನೆರವಾಗಲು ತನ್ನ ತಾಯ್ನಾಡಾದ ಬ್ರಸಿಲ್‌ಗೆ ಹಿಂದಿರುಗಿ ಹೋದನು. ಇದರಂತೆಯೇ, ಅನೇಕ ವಲಸೆಗಾರರು ಬೈಬಲ್‌ ಸತ್ಯವನ್ನು ಕಲಿತ ಬಳಿಕ ಸಂಪದ್ಭರಿತ ದೇಶಗಳಲ್ಲಿನ ತಮ್ಮ ಉದ್ಯೋಗಗಳನ್ನು ಸ್ವಸಂತೋಷದಿಂದ ಬಿಟ್ಟು ತಮ್ಮ ಬಂಧುಮಿತ್ರರಿಗೂ ಇತರರಿಗೂ ಆಧ್ಯಾತ್ಮಿಕವಾಗಿ ಸಹಾಯಮಾಡಲೆಂದು ಸ್ವದೇಶಗಳಿಗೆ ಹಿಂದಿರುಗುತ್ತಾರೆ. ಇಂಥ ರಾಜ್ಯ ಪ್ರಚಾರಕರು ನಿಜವಾದ ಸೌವಾರ್ತಿಕ ಮನೋಭಾವವನ್ನು ಪ್ರದರ್ಶಿಸುತ್ತಾರೆ.

6 ಅನೇಕ ಮಂದಿ ಸಾಕ್ಷಿಗಳು, ರಾಜ್ಯ ಸಾರುವವರ ಅಗತ್ಯ ಎಲ್ಲಿ ಹೆಚ್ಚಾಗಿದೆಯೊ ಅಂಥ ಪ್ರದೇಶಗಳಿಗೆ ಹೋಗಿ ನೆಲೆಸಿದ್ದಾರೆ. ಕೆಲವರು ಹೊರದೇಶಗಳಲ್ಲಿಯೂ ನೆಲೆಸಿ ಸೇವೆಮಾಡುತ್ತಾರೆ. ಹೀಗೆ ಸ್ಥಳಾಂತರಿಸಲು ನಮ್ಮಿಂದ ಆಗದಿರಬಹುದಾದರೂ, ಶುಶ್ರೂಷೆಯಲ್ಲಿ ನಮ್ಮ ಕೈಲಾದದ್ದೆಲ್ಲವನ್ನು ಮಾಡುತ್ತಾ ಇರುವ ಮೂಲಕ ನಾವು ಯೇಸುವನ್ನು ಅನುಕರಿಸಬಲ್ಲೆವು.

ಯೆಹೋವನು ಅವಶ್ಯವಾದ ತರಬೇತಿಯನ್ನು ಒದಗಿಸುತ್ತಾನೆ

7 ಯೇಸು ತನ್ನ ತಂದೆಯಿಂದ ತರಬೇತಿಯನ್ನು ಪಡೆದಂತೆಯೇ, ಯೆಹೋವನು ಈಗ ಒದಗಿಸುತ್ತಿರುವ ಶಿಕ್ಷಣದಿಂದ ನಾವು ಪ್ರಯೋಜನ ಪಡೆಯಬಲ್ಲೆವು. ಯೇಸು ತಾನೇ ಹೇಳಿದ್ದು: “ಅವರೆಲ್ಲರು ದೇವರಿಂದ ಶಿಕ್ಷಿತರಾಗಿರುವರು ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದದೆ.” (ಯೋಹಾ. 6:45; ಯೆಶಾ. 54:13) ಇಂದು ನಮ್ಮನ್ನು ರಾಜ್ಯಘೋಷಕರಾಗಿ ಸನ್ನದ್ಧರಾಗುವಂತೆ ಮಾಡಲಿಕ್ಕೆಂದೇ ಅನೇಕ ಶಾಲೆಗಳಿವೆ. ನಮ್ಮ ಸ್ಥಳಿಕ ಸಭೆಗಳಲ್ಲಿರುವ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗಳಿಂದ ನಾವೆಲ್ಲರೂ ಒಂದಲ್ಲ ಒಂದು ವಿಧದಲ್ಲಿ ಪ್ರಯೋಜನ ಹೊಂದಿದ್ದೇವೆಂಬುದು ಖಂಡಿತ. ಪಯನೀಯರರಿಗೆ ಪಯನೀಯರ್‌ ಸೇವಾ ಶಾಲೆಗೆ ಹೋಗುವ ಅವಕಾಶವಿದೆ. ಅನುಭವಿಗಳಾದ ಅನೇಕ ಮಂದಿ ಪಯನೀಯರರಿಗೆ ಈ ಶಾಲೆಗೆ ಎರಡನೆಯ ಬಾರಿ ಹಾಜರಾಗುವ ಅವಕಾಶ ದೊರಕಿದೆ. ಹಿರಿಯರೂ ಶುಶ್ರೂಷಾ ಸೇವಕರೂ ತಮ್ಮ ಬೋಧನಾ ಸಾಮರ್ಥ್ಯವನ್ನು ಮತ್ತು ಜೊತೆ ವಿಶ್ವಾಸಿಗಳಿಗೆ ಸಲ್ಲಿಸುವ ಸೇವೆಯನ್ನು ಉತ್ತಮಗೊಳಿಸಲಿಕ್ಕಾಗಿ ರಾಜ್ಯ ಶುಶ್ರೂಷಾ ಶಾಲೆಗೆ ಹಾಜರಾಗಿದ್ದಾರೆ. ಅನೇಕ ಮಂದಿ ಅವಿವಾಹಿತ ಹಿರಿಯರೂ ಶುಶ್ರೂಷಾ ಸೇವಕರೂ, ಸಾರುವ ಕೆಲಸದಲ್ಲಿ ಇತರರಿಗೆ ಸಹಾಯಮಾಡಲು ಸಜ್ಜುಗೊಳ್ಳುವಂತೆ ಶುಶ್ರೂಷಾ ತರಬೇತಿ ಶಾಲೆಯಿಂದ (ಮಿನಿಸ್ಟೀರಿಯಲ್‌ ಟ್ರೇನಿಂಗ್‌ ಸ್ಕೂಲ್‌) ತರಬೇತಿಯನ್ನು ಪಡೆದಿರುತ್ತಾರೆ. ಅಲ್ಲದೆ, ವಿದೇಶಗಳಲ್ಲಿ ನೇಮಕವನ್ನು ಪಡೆದಿರುವ ಅನೇಕ ಮಂದಿ ಮಿಷನೆರಿ ಸೋದರಸೋದರಿಯರು ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಿಂದ ತರಬೇತಿಯನ್ನು ಪಡೆದಿದ್ದಾರೆ.

8 ಈ ಶಾಲೆಗಳಿಗೆ ಹಾಜರಾಗಲು ಅನೇಕ ಯೆಹೋವನ ಸಾಕ್ಷಿಗಳು ಹೊಂದಾಣಿಕೆಗಳನ್ನು ಮಾಡಿರುತ್ತಾರೆ. ಕೆನಡದಲ್ಲಿ ಯೂಗೂ ಎಂಬವನು ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾಗಲು ತನ್ನ ಮಾಲೀಕನ ಬಳಿ ರಜೆ ಕೇಳಿದನು. ಆದರೆ ಮಾಲೀಕನು ನಿರಾಕರಿಸಿದಾಗ ಅವನು ಕೆಲಸಕ್ಕೆ ರಾಜೀನಾಮೆ ಕೊಟ್ಟನು. ಯೂಗೂ ಹೇಳಿದ್ದು: “ನಾನು ಅದಕ್ಕಾಗಿ ವಿಷಾದಿಸುವುದಿಲ್ಲ. ಏಕೆಂದರೆ ಅವರು ನನಗೆ ದಯೆ ತೋರಿಸಿ ರಜೆ ಕೊಡುತ್ತಿದ್ದರೆ ನಾನು ನಿಷ್ಠೆಯಿಂದ ಅದೇ ಕಂಪೆನಿಯಲ್ಲಿ ಕಾಯಂ ಆಗಿ ಕೆಲಸಮಾಡಬೇಕಾಗಿತ್ತು. ಆದರೆ ನಾನೀಗ ಯೆಹೋವನಿಂದ ಪಡೆಯಬಹುದಾದ ಯಾವುದೇ ನೇಮಕಕ್ಕೂ ಸಿದ್ಧನಿದ್ದೇನೆ.” ದೇವರು ಒದಗಿಸುವ ತರಬೇತಿಯಿಂದ ಪ್ರಯೋಜನ ಪಡೆಯಲಿಕ್ಕಾಗಿ ಅನೇಕರು ತಾವು ಹಿಂದೆ ಪ್ರಾಮುಖ್ಯವೆಂದು ಎಣಿಸಿದ್ದನ್ನು ಸ್ವಸಂತೋಷದಿಂದ ತ್ಯಾಗ ಮಾಡಿದ್ದಾರೆ.—ಲೂಕ 5:28.

9 ಶಾಸ್ತ್ರಾಧಾರಿತ ಬೋಧನೆ ಮತ್ತು ಶ್ರದ್ಧಾಪೂರ್ವಕ ಪ್ರಯತ್ನಗಳು ಅತಿ ಪರಿಣಾಮಕಾರಿಯಾಗಿವೆ. (2 ತಿಮೊ. 3:16, 17) ಗ್ವಾಟೆಮಾಲದಲ್ಲಿರುವ ಸಾವ್ಲೋ ಎಂಬವನನ್ನು ಪರಿಗಣಿಸಿರಿ. ಅವನಿಗೆ ಹುಟ್ಟಿನಿಂದಲೇ ಸ್ವಲ್ಪ ಮಾನಸಿಕ ವೈಕಲ್ಯವಿತ್ತು. ಅವನ ಟೀಚರ್‌ ಒಬ್ಬಳು ಅವನ ತಾಯಿಗೆ, ಈ ಹುಡುಗನನ್ನು ಓದು ಕಲಿಯಬೇಕೆಂದು ಒತ್ತಾಯಿಸಬೇಡಿ ಏಕೆಂದರೆ ಅದು ಅವನಿಗೆ ಹತಾಶೆ ಉಂಟುಮಾಡುವುದು ಎಂದು ಹೇಳಿದ್ದಳು. ಆದಕಾರಣ ಸಾವ್ಲೋ ಓದುಕಲಿಯುವ ಮುಂಚೆಯೇ ಶಾಲೆಯನ್ನು ಬಿಟ್ಟನು. ಆದರೆ ಸಾಕ್ಷಿಯೊಬ್ಬನು, ಅಪ್ಲೈ ಯುವರ್‌ಸೆಲ್ಫ್‌ ಟು ರೀಡಿಂಗ್‌ ಆ್ಯಂಡ್‌ ರೈಟಿಂಗ್‌ (ಓದು ಬರಹಕ್ಕೆ ಶ್ರದ್ಧೆಯಿಂದ ಗಮನಕೊಡಿ) ಎಂಬ ಬ್ರೋಷರನ್ನು ಬಳಸಿ ಸಾವ್ಲೋಗೆ ಓದು ಕಲಿಸಿದನು. ಕ್ರಮೇಣ, ಸಾವ್ಲೋ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಭಾಷಣಗಳನ್ನು ಕೊಡುವಷ್ಟು ಪ್ರಗತಿಮಾಡಿದನು. ಒಮ್ಮೆ, ಮನೆಮನೆಯ ಶುಶ್ರೂಷೆಯಲ್ಲಿ ಸಾವ್ಲೋನ ತಾಯಿ ಆ ಟೀಚರನ್ನು ಭೇಟಿಯಾದಳು. ಸಾವ್ಲೋ ಓದಲು ಕಲಿತಿದ್ದಾನೆ ಎಂದು ಕೇಳಿದೊಡನೆ ಅವನನ್ನು ಮನೆಗೆ ಕರೆತರುವಂತೆ ಆ ಟೀಚರ್‌ ಹೇಳಿದಳು. ಮುಂದಿನ ವಾರ ಸಾವ್ಲೋ ಬಂದಾಗ ಆ ಟೀಚರ್‌, “ನನಗೆ ಏನು ಕಲಿಸಿಕೊಡುತ್ತೀ?” ಎಂದು ಅವನನ್ನು ಕೇಳಿದಳು. ಆಗ ಸಾವ್ಲೋ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದಿಂದ ಪ್ಯಾರವೊಂದನ್ನು ಓದಲಾರಂಭಿಸಿದನು. “ನೀನು ನನಗೆ ಕಲಿಸುತ್ತಿದ್ದಿ ಎಂದು ನಂಬಲಿಕ್ಕೇ ಆಗುತ್ತಿಲ್ಲ!” ಎಂದು ಆ ಟೀಚರ್‌ ಉದ್ಗರಿಸಿದಳು. ಆಕೆ ಆನಂದಬಾಷ್ಪವನ್ನು ತಡೆಯಲಾರದೆ ಸಾವ್ಲೋನನ್ನು ಅಪ್ಪಿಕೊಂಡಳು.

ಹೃದಯಪ್ರೇರಕ ಬೋಧನೆ

10 ಯೇಸು, ತನಗೆ ಯೆಹೋವನು ನೇರವಾಗಿ ಕಲಿಸಿದ ವಿಷಯದ ಮೇಲೆ ಮತ್ತು ದೇವರ ಲಿಖಿತ ವಾಕ್ಯದಲ್ಲಿರುವ ಬೋಧನೆಯ ಮೇಲೆ ಆಧಾರಿತವಾಗಿ ಬೋಧಿಸಿದನು. (ಲೂಕ 4:16-21; ಯೋಹಾ. 8:28) ನಾವು ಯೇಸುವಿನ ಸಲಹೆಯನ್ನು ಅನ್ವಯಿಸಿಕೊಳ್ಳುವ ಮೂಲಕ ಮತ್ತು ಬೈಬಲಿನ ಬೋಧನೆಗೆ ಆಧಾರವಾಗಿ ಕಲಿಸುವ ಮೂಲಕ ಅವನನ್ನು ಅನುಕರಿಸುತ್ತೇವೆ. ಹೀಗೆ ನಾವೆಲ್ಲರೂ ಒಮ್ಮತದಿಂದ ಮಾತಾಡುತ್ತೇವೆ ಮತ್ತು ಯೋಚಿಸುತ್ತೇವೆ. ಇದು ನಮ್ಮ ಐಕ್ಯವನ್ನು ವರ್ಧಿಸುತ್ತದೆ. (1 ಕೊರಿಂ. 1:10) ನಾವು ನಮ್ಮ ಬೋಧನೆಯಲ್ಲಿ ಐಕ್ಯವನ್ನು ಕಾಪಾಡಿಕೊಳ್ಳಲು ಮತ್ತು ಸೌವಾರ್ತಿಕ ಕಾರ್ಯವನ್ನು ಪೂರೈಸಲು ನೆರವಾಗುವಂತೆ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಬೈಬಲ್‌ ಆಧರಿತ ಸಾಹಿತ್ಯಗಳನ್ನು ಒದಗಿಸುತ್ತಿರುವುದಕ್ಕಾಗಿ ನಾವೆಷ್ಟು ಕೃತಜ್ಞರು! (ಮತ್ತಾ. 24:45; 28:19, 20) ಇವುಗಳಲ್ಲಿ ಒಂದು, ಈಗ 179 ಭಾಷೆಗಳಲ್ಲಿ ಲಭ್ಯವಾಗುವ ಬೈಬಲ್‌ ಬೋಧಿಸುತ್ತದೆ ಪುಸ್ತಕವಾಗಿದೆ.

11ಬೈಬಲ್‌ ಬೋಧಿಸುತ್ತದೆ ಪುಸ್ತಕದಿಂದ ಬೈಬಲ್‌ ಅಧ್ಯಯನ ನಡೆಸುವುದು ವಿರೋಧಿಗಳ ಹೃದಯವನ್ನೂ ಮಾರ್ಪಡಿಸಬಲ್ಲದು. ಇಥಿಯೋಪ್ಯದ ಲೂಲ ಎಂಬ ಪಯನೀಯರ್‌ ಸಹೋದರಿ ಒಮ್ಮೆ ಬೈಬಲ್‌ ಅಧ್ಯಯನ ನಡೆಸುತ್ತಿದ್ದಾಗ ವಿದ್ಯಾರ್ಥಿಯ ಸಂಬಂಧಿಕಳೊಬ್ಬಳು ಕೋಪದಿಂದ ಮಧ್ಯೆ ಪ್ರವೇಶಿಸಿ ಇಂಥ ಅಧ್ಯಯನ ನಡೆಸುವ ಅಗತ್ಯವಿಲ್ಲ ಎಂದು ಒರಟಾಗಿ ಹೇಳಿದಳು. ಅದಕ್ಕೆ ಲೂಲ ಶಾಂತಭಾವದಿಂದ, ಬೈಬಲ್‌ ಬೋಧಿಸುತ್ತದೆ ಪುಸ್ತಕದ 15ನೆಯ ಅಧ್ಯಾಯದಲ್ಲಿರುವ ಖೋಟಾ ನೋಟುಗಳ ದೃಷ್ಟಾಂತವನ್ನು ಉಪಯೋಗಿಸುತ್ತ ಆಕೆಯೊಂದಿಗೆ ಮಾತಾಡಿದಳು. ಇದರಿಂದ ಆ ಸ್ತ್ರೀಯ ಕೋಪ ತಣ್ಣಗಾಗಿ ಅಧ್ಯಯನವನ್ನು ಮುಂದುವರಿಸುವಂತೆ ಬಿಟ್ಟಳು. ಅಲ್ಲದೆ, ಮುಂದಿನ ಅಧ್ಯಯನಕ್ಕೆ ಹಾಜರಾಗಿ ತನ್ನೊಂದಿಗೂ ಒಂದು ಬೈಬಲ್‌ ಅಧ್ಯಯನ ನಡೆಸಬೇಕೆಂದು ಕೇಳಿಕೊಂಡಳು. ಅಷ್ಟೇಕೆ, ಅದಕ್ಕಾಗಿ ಹಣ ತೆರಲು ಸಹ ಸಿದ್ಧಳಿದ್ದಳು! ಸ್ವಲ್ಪದರಲ್ಲೇ, ಆಕೆ ವಾರಕ್ಕೆ ಮೂರಾವರ್ತಿ ಅಧ್ಯಯನ ಮಾಡುತ್ತ ಆಧ್ಯಾತ್ಮಿಕವಾಗಿ ಉತ್ತಮ ಪ್ರಗತಿಯನ್ನು ಮಾಡಿದಳು.

12ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸುತ್ತ ಯುವಜನರು ಇತರರಿಗೆ ಸಹಾಯ ಮಾಡಬಲ್ಲರು. ಹವಾಯೀಯ 11 ವಯಸ್ಸಿನ ಕೀಯೇನು ಎಂಬವನು ಶಾಲೆಯಲ್ಲಿ ಈ ಪುಸ್ತಕವನ್ನು ಓದುತ್ತಿದ್ದಾಗ ಸಹಪಾಠಿಯೊಬ್ಬನು “ನೀವೇಕೆ ಹಬ್ಬ, ಉತ್ಸವಗಳನ್ನು ಆಚರಿಸುವುದಿಲ್ಲ?” ಎಂದು ಕೇಳಿದನು. ಅದಕ್ಕೆ ಉತ್ತರವಾಗಿ ಕೀಯೇನು ಆ ಪುಸ್ತಕದ ಪರಿಶಿಷ್ಟದಿಂದಲೇ, “ನಾವು ಹಬ್ಬ, ಉತ್ಸವಗಳನ್ನು ಆಚರಿಸಬೇಕೊ?” ಎಂಬ ವಿಷಯವನ್ನು ಓದಿ ಹೇಳಿದನು. ಬಳಿಕ ಪುಸ್ತಕದ ಪರಿವಿಡಿಯನ್ನು ತೆರೆದು ತೋರಿಸುತ್ತಾ, ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಇದೆ ಎಂದು ಆ ಹುಡುಗನನ್ನು ಕೇಳಿದನು. ಹೀಗೆ ಒಂದು ಬೈಬಲ್‌ ಅಧ್ಯಯನ ಆರಂಭಗೊಂಡಿತು. ಕಳೆದ ಸೇವಾವರ್ಷದಲ್ಲಿ ಯೆಹೋವನ ಸಾಕ್ಷಿಗಳು 65,61,426 ಬೈಬಲ್‌ ಅಧ್ಯಯನಗಳನ್ನು ನಡೆಸಿದರು. ಇವುಗಳಲ್ಲಿ ಅನೇಕ ಅಧ್ಯಯನಗಳು ಬೈಬಲ್‌ ಬೋಧಿಸುತ್ತದೆ ಪುಸ್ತಕದಿಂದಾಗಿದ್ದವು. ನೀವು ಬೈಬಲ್‌ ಅಧ್ಯಯನಗಳಲ್ಲಿ ಈ ಸಾಧನವನ್ನು ಉಪಯೋಗಿಸುತ್ತಿದ್ದೀರೋ?

13ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸಿ ಅಧ್ಯಯನ ಮಾಡುವುದು ದೇವರ ಚಿತ್ತವನ್ನು ಮಾಡಬಯಸುವವರ ಮೇಲೆ ಬಲವಾದ ಪ್ರಭಾವ ಬೀರಬಲ್ಲದು. ನಾರ್ವೆ ದೇಶದಲ್ಲಿ ವಿಶೇಷ ಪಯನೀಯರ್‌ ದಂಪತಿಯೊಂದು ಸಾಂಬಿಯ ದೇಶದಿಂದ ಬಂದಿದ್ದ ಒಂದು ಕುಟುಂಬದೊಂದಿಗೆ ಬೈಬಲ್‌ ಅಧ್ಯಯನ ಪ್ರಾರಂಭಿಸಿದರು. ಸಾಂಬಿಯದ ದಂಪತಿಗಳಿಗೆ ಆಗಲೇ ಮೂವರು ಹೆಣ್ಣು ಮಕ್ಕಳಿದ್ದುದರಿಂದ ಇನ್ನೊಂದು ಮಗು ಬೇಡವಾಗಿತ್ತು. ಹಾಗಾಗಿ ಆ ಸ್ತ್ರೀ ಪುನಃ ಗರ್ಭಿಣಿಯಾದಾಗ ಅವರು ಗರ್ಭಪಾತ ಮಾಡಲು ನಿರ್ಧರಿಸಿದರು. ವೈದ್ಯರನ್ನು ಕಾಣುವ ಕೆಲವು ದಿನಗಳ ಮುಂಚೆ ಅವರು “ಜೀವದ ಬಗ್ಗೆ ದೇವರಿಗಿರುವ ನೋಟವನ್ನು ಹೊಂದಿರುವುದು” ಎಂಬ ಅಧ್ಯಾಯವನ್ನು ಅಭ್ಯಾಸಿಸಿದರು. ಆ ಅಧ್ಯಾಯದಲ್ಲಿರುವ ಅಜಾತ ಮಗುವಿನ ಚಿತ್ರವು ಆ ದಂಪತಿಗಳನ್ನು ಎಷ್ಟು ಮನಸ್ಪರ್ಷಿಸಿತ್ತೆಂದರೆ ಅವರು ಗರ್ಭಪಾತ ಮಾಡಿಸಬಾರದೆಂದು ನಿರ್ಧರಿಸಿದರು. ಅವರು ಆಧ್ಯಾತ್ಮಿಕವಾಗಿ ಉತ್ತಮ ಪ್ರಗತಿ ಮಾಡಿದರು. ತಮ್ಮ ನವಜಾತ ಗಂಡುಮಗುವಿಗೆ ತಮಗೆ ಅಧ್ಯಯನ ಮಾಡುತ್ತಿದ್ದ ಸಹೋದರನ ಹೆಸರನ್ನಿಟ್ಟರು.

14 ಯೇಸುವಿನ ಬೋಧನಾ ವಿಧಾನವು ಪರಿಣಾಮಕಾರಿಯಾಗಿದುದ್ದಕ್ಕೆ ಪ್ರಮುಖ ಕಾರಣವು, ಅವನು ತನ್ನ ಬೋಧನೆಗೆ ಅನುಸಾರವಾಗಿ ಜೀವಿಸಿದ್ದೇ. ಈ ವಿಷಯದಲ್ಲಿ ಯೇಸುವನ್ನು ಅನುಕರಿಸುವ ಯೆಹೋವನ ಸಾಕ್ಷಿಗಳ ಉತ್ತಮ ನಡತೆಯನ್ನು ಅನೇಕರು ಗಣ್ಯಮಾಡುತ್ತಾರೆ. ನ್ಯೂಸೀಲೆಂಡ್‌ ದೇಶದ ವ್ಯಾಪಾರಿಯೊಬ್ಬನ ಕಾರಿನಲ್ಲಿದ್ದ ಬ್ರೀಫ್‌ಕೇಸ್‌ ಕಳವಾಗಿತ್ತು. ಅವನು ಪೊಲೀಸರಿಗೆ ವರದಿಸಿದಾಗ ಅವರು ಹೇಳಿದ್ದು: “ಕಳವಾದ ನಿಮ್ಮ ಬ್ರೀಫ್‌ಕೇಸ್‌ ಕೇವಲ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಿಗೆ ಸಿಕ್ಕಿದರೆ ಮಾತ್ರ ಅದು ನಿಮ್ಮ ಕೈಸೇರುತ್ತೆ.” ವಾರ್ತಾಪತ್ರಗಳನ್ನು ಮನೆಗಳಿಗೆ ವಿತರಣೆ ಮಾಡುತ್ತಿದ್ದ ಸಾಕ್ಷಿಯೊಬ್ಬಳಿಗೆ ಆ ಬ್ರೀಫ್‌ಕೇಸ್‌ ಸಿಕ್ಕಿತು. ತನ್ನ ಬ್ರೀಫ್‌ಕೇಸ್‌ ಸಿಕ್ಕಿದ್ದನ್ನು ತಿಳಿದ ವ್ಯಾಪಾರಿಯು ಆ ಸಹೋದರಿಯ ಮನೆಗೆ ಬಂದನು. ಅತಿ ಪ್ರಾಮುಖ್ಯ ಕಾಗದಪತ್ರ ಅದರಲ್ಲಿ ಹಾಗೇ ಇದ್ದದನ್ನು ಕಂಡು ಅವನಿಗೆ ನೆಮ್ಮದಿಯಾಯಿತು. ಆ ಸಹೋದರಿ, “ನಾನು ಯೆಹೋವನ ಸಾಕ್ಷಿಯಾಗಿರುವುದರಿಂದ ಈ ಬ್ರೀಫ್‌ಕೇಸನ್ನು ನಿಮಗೆ ಕೊಡುವುದೇ ಸೂಕ್ತವಾಗಿದೆ” ಎಂದು ಅವನಿಗೆ ಹೇಳಿದಾಗ ಆ ವ್ಯಾಪಾರಿ ಆಶ್ಚರ್ಯಪಟ್ಟನು. ಬೆಳಿಗಷ್ಟೇ ಆ ಪೊಲೀಸ್‌ ಹೇಳಿದ ಮಾತನ್ನು ಅವನು ಜ್ಞಾಪಿಸಿಕೊಂಡನು. ಹೌದು, ನಿಜ ಕ್ರೈಸ್ತರು ಬೈಬಲಿನಲ್ಲಿರುವ ಬೋಧನೆಗಳಿಗನುಸಾರ ಜೀವಿಸುತ್ತಿದ್ದಾರೆ ಮತ್ತು ಯೇಸುವನ್ನು ಅನುಕರಿಸುತ್ತಿದ್ದಾರೆ.—ಇಬ್ರಿ. 13:18.

ಜನರೆಡೆಗೆ ಯೇಸುವಿಗಿದ್ದ ಮನೋಭಾವವನ್ನು ಅನುಕರಿಸಿರಿ

15 ಜನರೆಡೆಗೆ ಯೇಸುವಿಗಿದ್ದ ಮನೋಭಾವವು ಅವರನ್ನು ಅವನ ಸಂದೇಶಕ್ಕೆ ಕಿವಿಗೊಡುವಂತೆ ಮಾಡಿತು. ಉದಾಹರಣೆಗೆ, ಪ್ರೀತಿ ಮತ್ತು ದೈನ್ಯಭಾವ ಕುಗ್ಗಿಹೋದವರನ್ನು ಅವನ ಬಳಿಗೆ ಸೆಳೆಯಿತು. ತನ್ನ ಬಳಿ ಬಂದವರಿಗೆ ಕನಿಕರ ತೋರಿಸಿ, ದಯಾಪೂರ್ಣ ಮಾತುಗಳಿಂದ ಸಾಂತ್ವನ ಕೊಟ್ಟು, ಅನೇಕರನ್ನು ಅವನು ಶಾರೀರಿಕವಾಗಿ ವಾಸಿಮಾಡಿದನು. (ಮಾರ್ಕ 2:1-5ನ್ನು ಓದಿ.) ನಮಗೆ ಅದ್ಭುತಗಳನ್ನು ಮಾಡಸಾಧ್ಯವಿಲ್ಲವಾದರೂ ಪ್ರೀತಿ, ದೈನ್ಯಭಾವ ಮತ್ತು ಕನಿಕರವನ್ನು ನಾವು ತೋರಿಸಬಲ್ಲೆವು. ಈ ಗುಣಗಳು ಜನರನ್ನು ಸತ್ಯದ ಕಡೆಗೆ ಆಕರ್ಷಿಸಲು ಸಹಾಯಮಾಡುತ್ತವೆ.

16 ಕನಿಕರವು ವಹಿಸುವ ಪಾತ್ರವನ್ನು ಈ ಉದಾಹರಣೆಯಲ್ಲಿ ಗಮನಿಸಿರಿ. ದಕ್ಷಿಣ ಪೆಸಿಫಿಕ್‌ನ ಕಿರಬಾಟಿ ದ್ವೀಪ ಸಮುದಾಯದ ದೂರದ ದ್ವೀಪವೊಂದರಲ್ಲಿ ವಾಸಿಸುವ ಬೆಈರೇ ಎಂಬ ವೃದ್ಧನ ಮನೆಯನ್ನು ಟಾರೀಊಆ ಎಂಬ ವಿಶೇಷ ಪಯನೀಯರಳೊಬ್ಬಳು ಭೇಟಿಯಾದಳು. ಆ ಮನುಷ್ಯನು ತನಗೆ ಕೇಳಲು ಮನಸ್ಸಿಲ್ಲವೆಂದು ವ್ಯಕ್ತಪಡಿಸಿದರೂ, ಅವನ ಶರೀರದ ಒಂದು ಭಾಗಕ್ಕೆ ಲಕ್ವ ಹೊಡೆದದ್ದನ್ನು ನೋಡಿ ಟಾರೀಊಆ ತುಂಬ ಕನಿಕರಪಟ್ಟಳು. “ದೇವರು ಅಸ್ವಸ್ಥರಿಗೆ ಮತ್ತು ವೃದ್ಧರಿಗೆ ಯಾವ ವಾಗ್ದಾನ ಮಾಡಿದ್ದಾನೆಂದು ನೀವು ಈ ಮೊದಲು ಕೇಳಿದ್ದೀರಾ?” ಎಂದು ಅವಳು ಕೇಳಿದಳು. ಬಳಿಕ ಯೆಶಾಯನ ಪ್ರವಾದನೆಯಿಂದ ಎರಡು ವಚನಗಳನ್ನು ಓದಿದಳು. (ಯೆಶಾಯ 35:5, 6ನ್ನು ಓದಿ.) ಕುತೂಹಲಗೊಂಡ ಅವನು ಹೇಳಿದ್ದು: “ವರುಷಗಳಿಂದ ನಾನು ಬೈಬಲ್‌ ಓದುತ್ತಿದ್ದೇನೆ. ನನ್ನ ಧರ್ಮದ ಮಿಷನೆರಿಯೊಬ್ಬರು ಸಹ ನನ್ನನ್ನು ಅನೇಕ ವರುಷಗಳಿಂದ ಭೇಟಿ ಮಾಡುತ್ತಿದ್ದಾರೆ. ಆದರೆ ನಾನಿದನ್ನು ಬೈಬಲಿನಲ್ಲಿ ನೋಡಿದ್ದೇ ಇಲ್ಲ.” ಬೆಈರೇಯ ಸಂಗಡ ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಲಾಯಿತು ಮತ್ತು ಅವನು ಆಧ್ಯಾತ್ಮಿಕವಾಗಿ ಉತ್ತಮ ಪ್ರಗತಿಯನ್ನು ಮಾಡಿದನು. ಹೌದು, ಅವನು ತೀರ ದುರ್ಬಲನಾಗಿದ್ದರೂ ಈಗ ದೀಕ್ಷಾಸ್ನಾನ ಹೊಂದಿದ್ದಾನೆ. ಮಾತ್ರವಲ್ಲ, ದೂರದಲ್ಲಿರುವ ಒಂದು ಗುಂಪಿನ ಮುಂದಾಳತ್ವ ವಹಿಸುತ್ತ, ದ್ವೀಪದಲ್ಲೆಲ್ಲ ನಡೆದಾಡಿ ಸುವಾರ್ತೆ ಸಾರಲು ಶಕ್ತನಾಗಿದ್ದಾನೆ.

ಕ್ರಿಸ್ತನನ್ನು ಅನುಕರಿಸುತ್ತ ಇರಿ

17 ಶುಶ್ರೂಷೆಯಲ್ಲಿನ ಹರ್ಷಕರ ಅನುಭವಗಳು ಪದೇ ಪದೇ ನಿರೂಪಿಸಿರುವಂತೆ, ನಾವು ಯೇಸುವಿನಲ್ಲಿದ್ದ ಗುಣಗಳನ್ನು ಬೆಳೆಸಿಕೊಂಡು ಅವನ್ನು ತೋರಿಸಿದರೆ ಪರಿಣಾಮಕಾರಿ ಸೌವಾರ್ತಿಕರಾಗಿರಬಲ್ಲೆವು. ಹಾಗಾದರೆ, ಹುರುಪಿನ ಸೌವಾರ್ತಿಕರಾಗಿ ನಾವು ಕ್ರಿಸ್ತನನ್ನು ಅನುಕರಿಸುವುದು ಎಷ್ಟೊಂದು ಯೋಗ್ಯ!

18 ಒಂದನೆಯ ಶತಮಾನದಲ್ಲಿ ಕೆಲವರು ಯೇಸುವಿನ ಶಿಷ್ಯರಾದಾಗ, “ನಮಗೆ ಏನು ದೊರಕುವದು” ಎಂದು ಪೇತ್ರನು ಕೇಳಿದನು. ಯೇಸು ಉತ್ತರಿಸಿದ್ದು: “ನನ್ನ ಹೆಸರಿನ ನಿಮಿತ್ತ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಂದೆಯನ್ನಾಗಲಿ ತಾಯಿಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟುಬಿಟ್ಟಿರುವವರೆಲ್ಲರಿಗೆ ಅನೇಕ ಪಾಲು ಹೆಚ್ಚಾಗಿ ಸಿಕ್ಕುವದು; ಮತ್ತು ಅವರು ನಿತ್ಯಜೀವಕ್ಕೆ ಬಾಧ್ಯರಾಗುವರು.” (ಮತ್ತಾ. 19:27-29) ನಾವು ಮಹಾನ್‌ ಮಿಷನೆರಿಯಾದ ಯೇಸುವನ್ನು ಅನುಕರಿಸುತ್ತ ಇರುವಲ್ಲಿ ಈ ಆಶೀರ್ವಾದಗಳನ್ನೆಲ್ಲಾ ನಾವೂ ಅನುಭವಿಸುವೆವು.

ನೀವು ಹೇಗೆ ಉತ್ತರಿಸುವಿರಿ?

• ಸೌವಾರ್ತಿಕರಾಗಿರುವಂತೆ ಯೆಹೋವನು ನಮ್ಮನ್ನು ಹೇಗೆ ತರಬೇತುಗೊಳಿಸುತ್ತಿದ್ದಾನೆ?

• ನಮ್ಮ ಶುಶ್ರೂಷೆಯಲ್ಲಿ ಬೈಬಲ್‌ ಬೋಧಿಸುತ್ತದೆ ಪುಸ್ತಕ ಏಕೆ ಪರಿಣಾಮಕಾರಿಯಾಗಿದೆ?

• ನಮಗೆ ಜನರ ಕಡೆಗಿರಬೇಕಾದ ಮನೋಭಾವದಲ್ಲಿ ನಾವು ಯೇಸುವನ್ನು ಹೇಗೆ ಅನುಕರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1. ನಾವು ಯೇಸು ಕ್ರಿಸ್ತನನ್ನು ಏಕೆ ಅನುಕರಿಸಬೇಕು?

2. ಆಡಳಿತ ಮಂಡಳಿಯಿಂದ ನೀವು ಮಿಷನೆರಿಯಾಗಿ ನೇಮಿಸಲ್ಪಡದಿದ್ದರೂ ಯಾವ ಮನೋಭಾವವನ್ನು ಬೆಳಸಿಕೊಳ್ಳಬಲ್ಲಿರಿ?

3, 4. ಯೇಸು ಸ್ವರ್ಗದಲ್ಲಿ ಏನನ್ನು ಬಿಟ್ಟು ಬಂದನು ಮತ್ತು ನಾವು ಅವನ ಹಿಂಬಾಲಕರಾಗಿರಲು ಏನು ಮಾಡತಕ್ಕದ್ದು?

5. ಬೈಬಲ್‌ ಸತ್ಯವನ್ನು ಕಲಿತ ಬಳಿಕ ವಲಸೆಗಾರನೊಬ್ಬನು ಯಾವ ನಿರ್ಣಯವನ್ನು ಮಾಡಬಹುದೆಂಬುದನ್ನು ತೋರಿಸುವ ಒಂದು ಅನುಭವವನ್ನು ಹೇಳಿರಿ.

6. ರಾಜ್ಯಘೋಷಕರ ಆವಶ್ಯಕತೆ ಹೆಚ್ಚಾಗಿರುವಲ್ಲಿಗೆ ಹೋಗಲು ನಮಗೆ ಸಾಧ್ಯವಾಗದಿರುವಲ್ಲಿ ನಾವೇನು ಮಾಡಬಲ್ಲೆವು?

7. ರಾಜ್ಯ ಘೋಷಕರಾಗಿ ತಮ್ಮ ಸಾಮರ್ಥ್ಯವನ್ನು ಬೆಳೆಸ ಬಯಸುವವರಿಗೆ ತರಬೇತಿಗಾಗಿ ಯಾವ ಶಾಲೆಗಳು ಲಭ್ಯವಿವೆ?

8. ಯೆಹೋವನು ಒದಗಿಸುವ ತರಬೇತಿಯನ್ನು ಕೆಲವು ಸಹೋದರರು ಎಷ್ಟು ಮೌಲ್ಯದ್ದೆಂದು ಎಣಿಸುತ್ತಾರೆ?

9. ಶಾಸ್ತ್ರಾಧಾರಿತವಾದ ಬೋಧನೆ ಮತ್ತು ಶ್ರದ್ಧಾಪೂರ್ವಕ ಪ್ರಯತ್ನಗಳು ಎಷ್ಟು ಪರಿಣಾಮಕಾರಿ ಎಂಬುದಕ್ಕೆ ಒಂದು ಉದಾಹರಣೆ ಕೊಡಿ.

10. ಬೈಬಲ್‌ ಸತ್ಯವನ್ನು ಕಲಿಸಲು ಯಾವ ಅತ್ಯುತ್ತಮ ಪುಸ್ತಕ ನಮಗೀಗ ಲಭ್ಯವಿದೆ?

11. ಇಥಿಯೋಪ್ಯದ ಒಬ್ಬ ಸಹೋದರಿ ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸಿ ವಿರೋಧವನ್ನು ಹೇಗೆ ಜಯಿಸಿದಳು?

12. ಯುವಜನರು ಬೈಬಲ್‌ ಸತ್ಯಗಳನ್ನು ಯಶಸ್ವಿಕರವಾಗಿ ಕಲಿಸಬಲ್ಲರೆಂಬುದಕ್ಕೆ ಒಂದು ಉದಾಹರಣೆ ಕೊಡಿ.

13. ಬೈಬಲ್‌ ಅಧ್ಯಯನವು ಜನರ ಮೇಲೆ ಯಾವ ವಿಧದಲ್ಲಿ ಬಲವಾದ ಪ್ರಭಾವ ಬೀರಬಲ್ಲದು?

14. ನಾವು ಬೋಧಿಸುವುದಕ್ಕೆ ಹೊಂದಿಕೆಯಾಗಿ ಜೀವಿಸುವುದು ಹೇಗೆ ಉತ್ತಮ ಫಲಿತಾಂಶಗಳನ್ನು ತರಬಲ್ಲದೆಂಬುದಕ್ಕೆ ಉದಾಹರಣೆ ಕೊಡಿ.

15, 16. ನಾವು ಸಾರುವ ಸುವಾರ್ತೆಯ ಕಡೆಗೆ ಜನರನ್ನು ಹೇಗೆ ಆಕರ್ಷಿಸಬಲ್ಲೆವು?

17, 18. (ಎ) ನೀವು ಹೇಗೆ ಪರಿಣಾಮಕಾರಿಯಾದ ಸೌವಾರ್ತಿಕರಾಗಬಲ್ಲಿರಿ? (ಬಿ) ತಮ್ಮ ಶುಶ್ರೂಷೆಯನ್ನು ಗಂಭೀರವಾಗಿ ತೆಗೆದುಕೊಳ್ಳುವವರಿಗೆ ಏನು ಕಾದಿರುತ್ತದೆ?

[ಪುಟ 17ರಲ್ಲಿರುವ ಚಿತ್ರ]

ಯೇಸು ತನ್ನನ್ನು ಹಿಂಬಾಲಿಸುವಂತೆ ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನರನ್ನು ಆಮಂತ್ರಿಸಿದಾಗ ಅವರು ಒಡನೆ ಪ್ರತಿಕ್ರಿಯಿಸಿದರು

[ಪುಟ 19ರಲ್ಲಿರುವ ಚಿತ್ರ]

“ಬೈಬಲ್‌ ಬೋಧಿಸುತ್ತದೆ” ಪುಸ್ತಕದಂಥ ಪ್ರಕಾಶನಗಳು ನಮ್ಮ ಬೋಧನೆಯಲ್ಲಿ ಐಕ್ಯವನ್ನು ಕಾಪಾಡಲು ಸಹಾಯಮಾಡುತ್ತವೆ