ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಕ ಪುಸ್ತಕದ ಮುಖ್ಯಾಂಶಗಳು

ಮಾರ್ಕ ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಮಾರ್ಕ ಪುಸ್ತಕದ ಮುಖ್ಯಾಂಶಗಳು

ಮಾರ್ಕನ ಸುವಾರ್ತೆಯು ನಾಲ್ಕು ಸುವಾರ್ತಾ ವೃತ್ತಾಂತಗಳಲ್ಲಿ ಅತಿ ಚಿಕ್ಕದು. ಯೋಹಾನ-ಮಾರ್ಕನು ಅದನ್ನು ಯೇಸು ಮರಣಹೊಂದಿ ಪುನರುತ್ಥಾನಗೊಂಡು ಸುಮಾರು 30 ವರ್ಷಗಳ ಬಳಿಕ ಬರೆದನು. ಈ ಸುವಾರ್ತೆಯು ಯೇಸುವಿನ ಮೂರುವರೆ ವರ್ಷ ಶುಶ್ರೂಷೆಯಲ್ಲಾದ ಮೈನವಿರೇಳಿಸುವ ಘಟನೆಗಳ ಒಂದು ಸಂಕ್ಷಿಪ್ತ ವೃತ್ತಾಂತವಾಗಿದೆ.

ಮಾರ್ಕನ ಪುಸ್ತಕವು ಯೆಹೂದ್ಯರಲ್ಲದವರಿಗೆ, ಮುಖ್ಯವಾಗಿ ರೋಮ್‌ನವರಿಗೆ ಬರೆಯಲಾಯಿತು ಎಂಬುದು ಸುಸ್ಪಷ್ಟ. ಅದು ಯೇಸುವನ್ನು, ಸಾರುವ ಕಾರ್ಯಚರಣೆಯಲ್ಲಿ ಉತ್ಸುಕತೆ ತೋರಿಸಿದ, ಅದ್ಭುತ-ನಡೆಸಿದ ದೇವಪುತ್ರನಾಗಿ ವಿವರಿಸುತ್ತದೆ. ಈ ಸುವಾರ್ತೆಯಲ್ಲಿ ಯೇಸುವಿನ ಬೋಧನೆಗಿಂತ ಅವನ ಕಾರ್ಯಗಳಿಗೆ ಹೆಚ್ಚು ಒತ್ತುಕೊಡಲಾಗಿದೆ. ಮಾರ್ಕನ ಸುವಾರ್ತೆಗೆ ಗಮನಕೊಡುವುದು ಮೆಸ್ಸೀಯನಲ್ಲಿರುವ ನಮ್ಮ ನಂಬಿಕೆಯನ್ನು ಪುಷ್ಟೀಕರಿಸುತ್ತದೆ. ಅಲ್ಲದೆ, ಕ್ರೈಸ್ತ ಶುಶ್ರೂಷೆಯಲ್ಲಿ ದೇವರ ಸಂದೇಶವನ್ನು ಹುರುಪಿನಿಂದ ಪ್ರಚುರಪಡಿಸುವಂತೆ ನಮ್ಮನ್ನು ಹುರಿದುಂಬಿಸುತ್ತದೆ.—ಇಬ್ರಿ. 4:12.

ಗಲಿಲಾಯದಲ್ಲಿ ಭಾರಿ ಶುಶ್ರೂಷೆ

(ಮಾರ್ಕ 1:1-9:50)

ಮಾರ್ಕನು, ಸ್ನಾನಿಕನಾದ ಯೋಹಾನನ ಚಟುವಟಿಕೆಗಳನ್ನು ಹಾಗೂ ಯೇಸು ಅಡವಿಯಲ್ಲಿ ಕಳೆದ 40 ದಿವಸಗಳ ಕುರಿತ ಮಾಹಿತಿಯನ್ನು ಮೊದಲ 14 ವಚನಗಳಲ್ಲೇ ಹೇಳಿಮುಗಿಸುತ್ತಾನೆ. ತದನಂತರ, ಗಲಿಲಾಯದಲ್ಲಿನ ಯೇಸುವಿನ ಶುಶ್ರೂಷೆಯ ಸ್ವಾರಸ್ಯಕರ ವರದಿಯನ್ನು ತಿಳಿಸಲಾರಂಭಿಸುತ್ತಾನೆ. ಅವನು “ಕೂಡಲೆ” ಎಂಬ ಪದವನ್ನು ಪದೇ ಪದೇ ಉಪಯೋಗಿಸಿದ್ದು ಆ ವೃತ್ತಾಂತವನ್ನು ಓದುವವರ ಮನಸ್ಸಿನಲ್ಲಿ ತುರ್ತಿನ ಅರಿವನ್ನು ಮೂಡಿಸುತ್ತದೆ.—ಮಾರ್ಕ 1:10, 12.

ಮೂರು ವರ್ಷಗಳೊಳಗೆ ಯೇಸು ಗಲಿಲಾಯದಲ್ಲಿ ಮೂರು ಬಾರಿ ಸಾರುವ ಚಟುವಟಿಕೆಯನ್ನು ನಡೆಸುತ್ತಾನೆ. ಮಾರ್ಕನು ವೃತ್ತಾಂತವನ್ನು ಘಟನೆಗಳು ಸಂಭವಿಸಿದ ಕ್ರಮಾನುಗತಿಯಲ್ಲಿ ಪ್ರಸ್ತುತಪಡಿಸುತ್ತಾನೆ. ಅದರಲ್ಲಿ ಪರ್ವತ ಪ್ರಸಂಗ ಹಾಗೂ ಯೇಸು ಕೊಟ್ಟ ಅನೇಕ ದೀರ್ಘ ಪ್ರಸಂಗಗಳನ್ನು ಸೇರಿಸಲಾಗಿಲ್ಲ.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:15—ಯಾವುದಕ್ಕೆ ‘ಕಾಲ ಪರಿಪೂರ್ಣವಾಗಿತ್ತು?’ ತನ್ನ ಶುಶ್ರೂಷೆಯನ್ನು ಆರಂಭಿಸಲು ಕಾಲ ಪರಿಪೂರ್ಣವಾಗಿತ್ತೆಂದು ಅಥವಾ ಸಮಯ ಬಂದಿತ್ತೆಂದು ಯೇಸು ಹೇಳುತ್ತಿದ್ದನು. ನೇಮಿತ ಅರಸನಾದ ಅವನೇ ಅಲ್ಲಿ ಇದ್ದದ್ದರಿಂದ ದೇವರ ರಾಜ್ಯವು ಸಮೀಪಿಸಿತ್ತು. ಸಹೃದಯಿಗಳು ಇನ್ನು ಮುಂದೆ ಅವನ ಸಾರುವಿಕೆಗೆ ಪ್ರತಿಕ್ರಿಯೆ ತೋರಿಸಿ ದೇವರ ಮೆಚ್ಚುಗೆ ಪಡೆಯಲು ಬೇಕಾದ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದಾಗಿತ್ತು.

1:44; 3:12; 7:36—ಯೇಸು ತನ್ನ ಮಹತ್ಕಾರ್ಯಗಳನ್ನು ಜಾಹೀರುಪಡಿಸಲು ಏಕೆ ಬಯಸಲಿಲ್ಲ? ಭಾವೋದ್ರೇಕ ಅಥವಾ ಪ್ರಾಯಶಃ ಅತಿಶಯಿಸಿದ ವರದಿಗಳನ್ನು ಜನರು ಕೇಳಿಸಿಕೊಂಡು ಅದರ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಯೇಸು ಬಯಸಲಿಲ್ಲ. ಬದಲಿಗೆ ತಾನು ಕ್ರಿಸ್ತನಾಗಿದ್ದೇನೆಂಬ ಪುರಾವೆಗಳನ್ನು ಜನರು ಸ್ವತಃ ಪರಿಗಣಿಸಿ ಅವುಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಯೇಸು ಬಯಸಿದನು. (ಯೆಶಾ. 42:1-4; ಮತ್ತಾ. 8:4; 9:30; 12:15-21; 16:20; ಲೂಕ 5:14) ಆದರೆ ಗೆರಸೇನ ಸೀಮೆಯ ದೆವ್ವಪೀಡಿತ ಮನುಷ್ಯನೊಬ್ಬನ ವೃತ್ತಾಂತದಲ್ಲಿ ಮಾತ್ರ ವಿಷಯ ಬೇರೆಯಾಗಿತ್ತು. ಆ ಮನುಷ್ಯನನ್ನು ಸ್ವಸ್ಥಮಾಡಿದ ಬಳಿಕ, ಮನೆಗೆ ಹೋಗಿ ನಡೆದದ್ದನ್ನು ತನ್ನ ಸಂಬಂಧಿಕರಿಗೆ ತಿಳಿಸುವಂತೆ ಯೇಸು ತಾನೇ ಅವನಿಗೆ ಹೇಳಿದನು. ಸುತ್ತಮುತ್ತಲಿನ ಸೀಮೆಯವರು ಯೇಸುವನ್ನು ಅಲ್ಲಿಂದ ಹೊರಟುಹೋಗಬೇಕೆಂದು ವಿನಂತಿಸಿದ್ದರಿಂದ ಅಲ್ಲಿನ ಜನರಿಗೆ ಸಾಕ್ಷಿ ನೀಡಲು ಅವನಿಗೆ ಸಂದರ್ಭವಿರಲಿಲ್ಲ. ಹಾಗಾಗಿ, ದೆವ್ವದ ಕಾಟದಿಂದ ಮುಕ್ತನಾದ ವ್ಯಕ್ತಿ ಅಲ್ಲಿದ್ದು ಪುರಾವೆ ಕೊಡುವುದು ಹಂದಿಗಳ ನಷ್ಟದಿಂದಾಗಿ ಹರಡಬಹುದಾಗಿದ್ದ ಕೆಟ್ಟ ವರದಿಯ ತೀವ್ರತೆಯನ್ನು ಕಡಿಮೆಗೊಳಿಸಲು ಸಹಾಯಮಾಡುತ್ತಿತ್ತು.—ಮಾರ್ಕ 5:1-20; ಲೂಕ 8:26-39.

2:28—ಯೇಸುವನ್ನು ‘ಸಬ್ಬತ್‌ದಿನಕ್ಕೂ ಒಡೆಯನು’ ಎಂದು ಏಕೆ ಕರೆಯಲಾಗಿದೆ? “ಧರ್ಮಶಾಸ್ತ್ರದಲ್ಲಿ ಮುಂದೆ ಬರಬೇಕಾಗಿದ್ದ ಮೇಲುಗಳ ಛಾಯೆ” ಇದೆ ಎಂದು ಅಪೊಸ್ತಲ ಪೌಲನು ಬರೆದನು. (ಇಬ್ರಿ. 10:1) ಧರ್ಮಶಾಸ್ತ್ರವು ನಮೂದಿಸಿದಂತೆ ಸಬ್ಬತ್‌, ಕೆಲಸಮಾಡುವ ಆರು ದಿನಗಳ ನಂತರದ ದಿನವಾಗಿತ್ತು. ಯೇಸು ಆ ದಿನದಲ್ಲಿ ಹೆಚ್ಚಿನ ಜನರನ್ನು ಗುಣಪಡಿಸಿದ್ದನು. ಇದು, ಸೈತಾನನ ಕ್ರೂರ ದಬ್ಬಾಳಿಕೆ ಕೊನೆಗೊಂಡು ಕ್ರಿಸ್ತನ ಸಹಸ್ರ ವರ್ಷಗಳ ಆಳ್ವಿಕೆಯ ಸಮಯದಲ್ಲಿ ಮಾನವರು ಅನುಭವಿಸುವ ವಿಶ್ರಾಂತಿ ಹಾಗೂ ಇತರ ಆಶೀರ್ವಾದಗಳನ್ನು ಮುನ್‌ಚಿತ್ರಿಸಿತು. ಹಾಗಾಗಿ ಆ ರಾಜ್ಯದ ಅರಸನು ‘ಸಬ್ಬತ್‌ದಿನಕ್ಕೂ ಒಡೆಯನಾಗಿದ್ದಾನೆ.’—ಮತ್ತಾ. 12:8; ಲೂಕ 6:5.

3:5; 7:34; 8:12—ಯೇಸುವಿನ ಭಾವನೆಗಳ ಕುರಿತು ಮಾರ್ಕನಿಗೆ ಹೇಗೆ ಗೊತ್ತಾಗಿದ್ದಿರಬೇಕು? ಮಾರ್ಕನು 12 ಅಪೊಸ್ತಲರಲ್ಲಿ ಒಬ್ಬನಾಗಿರಲೂ ಇಲ್ಲ, ಯೇಸುವಿನ ಆಪ್ತ ಸ್ನೇಹಿತನೂ ಆಗಿರಲಿಲ್ಲ. ಪ್ರಾಚೀನ ಪರಂಪರೆಯ ಆಧಾರಗಳ ಪ್ರಕಾರ, ಮಾರ್ಕನ ಆಪ್ತ ಸ್ನೇಹಿತನಾದ ಅಪೊಸ್ತಲ ಪೇತ್ರನು ಅವನಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಿದ್ದನು.—1 ಪೇತ್ರ 5:14.

6:51, 52—ಶಿಷ್ಯರು ಗ್ರಹಿಸದೆ ಹೋದ, ‘ರೊಟ್ಟಿಯ ವಿಷಯವಾದ ಮಹತ್ಕಾರ್ಯದ’ ಅರ್ಥ ಏನಾಗಿತ್ತು? ಯೇಸು ಕೆಲವೇ ತಾಸುಗಳ ಹಿಂದೆ ಕೇವಲ ಐದು ರೊಟ್ಟಿ ಮತ್ತು ಎರಡು ಮೀನುಗಳಿಂದ ಹೆಂಗಸರ ಮತ್ತು ಮಕ್ಕಳ ಹೊರತಾಗಿ 5,000 ಗಂಡಸರಿಗೆ ಉಣಿಸಿದ್ದನು. ಈ ಘಟನೆಯಿಂದ ಯೇಸುವಿನ ಶಿಷ್ಯರು ಗ್ರಹಿಸಬೇಕಾಗಿದ್ದ ‘ರೊಟ್ಟಿಯ ವಿಷಯವಾದ ಮಹತ್ಕಾರ್ಯದ’ ಅರ್ಥವೇನೆಂದರೆ ಯೇಸು ಅದ್ಭುತಗಳನ್ನು ಮಾಡಲು ಯೆಹೋವನಿಂದ ಶಕ್ತಿ ಪಡೆದಿದ್ದನು ಎಂಬದೇ. (ಮಾರ್ಕ 6:41-44) ಯೇಸುವಿಗೆ ಕೊಡಲಾದ ಶಕ್ತಿಯ ಮಹತ್ತನ್ನು ಅವರು ಗ್ರಹಿಸಿದ್ದರೆ, ಅವನು ಅದ್ಭುತಕರವಾಗಿ ನೀರಿನ ಮೇಲೆ ನಡೆಯುವಾಗ ಅವರು ಅಷ್ಟು ಬೆರಗಾಗುತ್ತಿರಲಿಲ್ಲ.

8:22-26—ಯೇಸು ಕುರುಡನನ್ನು ಎರಡು ಹಂತಗಳಲ್ಲಿ ಗುಣಪಡಿಸಿದ್ದು ಏಕೆ? ಯೇಸು ಆ ಮನುಷ್ಯನ ಮೇಲೆ ಕನಿಕರಪಟ್ಟು ಹಾಗೆ ಮಾಡಿದ್ದಿರಬೇಕು. ಯೇಸು ಹಂತಹಂತವಾಗಿ ಗುಣಪಡಿಸಿದ್ದು, ಬಹಳ ಸಮಯದಿಂದ ಅಂಧನಾಗಿದ್ದ ಆ ವ್ಯಕ್ತಿ ತನ್ನ ದೃಷ್ಟಿಯನ್ನು ಸೂರ್ಯನ ಕಣ್ಣು ಕೋರೈಸುವ ಪ್ರಕಾಶಕ್ಕೆ ಹೊಂದಿಸಿಕೊಳ್ಳಲು ಸ್ವಲ್ಪ ಸಮಯವನ್ನು ಕೊಟ್ಟಿರಬಹುದು.

ನಮಗಾಗಿರುವ ಪಾಠಗಳು:

2:18; 7:11; 12:18; 13:3. ಯೆಹೂದ್ಯೇತ ಓದುಗರಿಗೆ ಹೆಚ್ಚು ಪರಿಚಿತವಾಗಿರದ ಪದ್ಧತಿ, ಅಭಿವ್ಯಕ್ತಿ, ನಂಬಿಕೆ ಹಾಗೂ ಸ್ಥಳಗಳ ಕುರಿತು ಮಾರ್ಕನು ವಿವರಣೆ ಕೊಡುತ್ತಾನೆ. ಅವನು ಸ್ಪಷ್ಟವಾಗಿ ಹೇಳಿದ ಕೆಲವು ವಿಷಯಗಳೆಂದರೆ: ಫರಿಸಾಯರು ‘ಉಪವಾಸಮಾಡುತ್ತಿದ್ದರು,’ ಕೊರ್ಬಾನ್‌ ಅಂದರೆ ‘ದೇವರಿಗಾಗಿ ಇಟ್ಟಿರುವ ಕೊಡುಗೆ,’ ಸದ್ದುಕಾಯರು “ಪುನರುತ್ಥಾನವಿಲ್ಲ ಅನ್ನುವವರು” ಮತ್ತು ದೇವಾಲಯವು “ಎಣ್ಣೇಮರಗಳ ಗುಡ್ಡದ . . . ಎದುರಾಗಿ” ಇತ್ತು. ಹೆಚ್ಚಾಗಿ ಯೆಹೂದ್ಯರು ಮಾತ್ರ ಮೆಸ್ಸೀಯನ ವಂಶಾವಳಿಯ ಕುರಿತು ಆಸಕ್ತರಾಗಿದ್ದರಿಂದ ಮಾರ್ಕನು ಅದನ್ನು ತನ್ನ ಸುವಾರ್ತೆಯಲ್ಲಿ ಸೇರಿಸುವುದಿಲ್ಲ. ಹೀಗೆ ಮಾರ್ಕನು ನಮಗೆಲ್ಲರಿಗೆ ಒಂದು ಮಾದರಿಯನ್ನಿಡುತ್ತಾನೆ. ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸುವಾಗ ಅಥವಾ ಸಭಾ ಕೂಟಗಳಲ್ಲಿ ಭಾಷಣಗಳನ್ನು ನೀಡುವಾಗ ನಮ್ಮ ಕೇಳುಗರ ಹಿನ್ನೆಲೆಯನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕು.

3:21. ಯೇಸುವಿನ ಸಂಬಂಧಿಕರು ಅವಿಶ್ವಾಸಿಗಳಾಗಿದ್ದರು. ಹಾಗಾಗಿ ಯಾರು ತಮ್ಮ ನಂಬಿಕೆಗಾಗಿ ಕುಟುಂಬದ ಅವಿಶ್ವಾಸಿ ಸದಸ್ಯರಿಂದ ವಿರೋಧ ಹಾಗೂ ಪರಿಹಾಸ್ಯವನ್ನು ಅನುಭವಿಸುತ್ತಾರೋ ಅಂಥವರ ಕಡೆಗೆ ಯೇಸುವಿಗೆ ಪರಾನುಭೂತಿಯಿದೆ.

3:31-35. ಯೇಸು ತನ್ನ ದೀಕ್ಷಾಸ್ನಾನದ ಸಮಯದಲ್ಲಿ ದೇವರ ಆಧ್ಯಾತ್ಮಿಕ ಪುತ್ರನಾದನು ಮತ್ತು “ಮೇಲಣ ಯೆರೂಸಲೇಮ್‌” ಅವನ ತಾಯಿಯಾದಳು. (ಗಲಾ. 4:26) ಅಂದಿನಿಂದ ಯೇಸುವಿಗೆ ಸಂಬಂಧಿಕರಿಗಿಂತ ತನ್ನ ಶಿಷ್ಯರು ಹೆಚ್ಚು ಆಪ್ತರೂ ಹೆಚ್ಚು ಅಮೂಲ್ಯರೂ ಆದರು. ಇದರಿಂದ ನಮ್ಮ ಜೀವನದಲ್ಲಿ ಆಧ್ಯಾತ್ಮಿಕ ಅಭಿರುಚಿಗಳನ್ನು ಪ್ರಥಮ ಸ್ಥಾನದಲ್ಲಿಡಬೇಕು ಎಂಬದನ್ನು ನಾವು ಸಹ ಕಲಿಯುತ್ತೇವೆ.—ಮತ್ತಾ. 12:46-50; ಲೂಕ 8:19-21.

8:32-34. ಸ್ವತ್ಯಾಗ ಮಾಡಬೇಕಾದ ಸಂದರ್ಭಗಳಲ್ಲಿ, ಶ್ರಮಪಡದೆ ಹಾಯಾಗಿರುವಂತೆ ಯಾರಾದರೂ ಸಲಹೆ ನೀಡುತ್ತಾ ತಪ್ಪಾದ ದಯೆಯನ್ನು ತೋರಿಸುವಾಗ ನಾವದನ್ನು ತಕ್ಷಣ ನಿರಾಕರಿಸಬೇಕು. ಕ್ರಿಸ್ತನ ಹಿಂಬಾಲಕನು ‘ತನ್ನನ್ನು ನಿರಾಕರಿಸಲು” ಅಂದರೆ ತನ್ನ ಸ್ವಾರ್ಥಪರ ಆಶೆ-ಅಭಿಲಾಷೆಗಳನ್ನು ತೊರೆಯಲು ಸಿದ್ಧನಾಗಿರಬೇಕು. ಅವನು ‘ತನ್ನ ಶಿಲುಬೆಯನ್ನು ಹೊತ್ತುಕೊಳ್ಳಲು’ ಅಂದರೆ ಅವನು ಕ್ರೈಸ್ತನಾಗಿರುವ ಕಾರಣ ಸನ್ನಿವೇಶ ಬಂದಲ್ಲಿ ಕಷ್ಟ, ಅವಮಾನ, ಹಿಂಸೆ ಅಥವಾ ಮರಣವನ್ನು ಸಹ ಎದುರಿಸಲು ಸಿದ್ಧನಿರಬೇಕು. ಅಲ್ಲದೆ ಯೇಸುವಿನ ಜೀವನಕ್ರಮದ ನಮೂನೆಗೆ ಅನುಗುಣವಾಗಿ ಜೀವಿಸಿ ಆತನ “ಹಿಂದೆ” ಹೋಗುತ್ತಲೇ ಇರಬೇಕು. ಕ್ರಿಸ್ತ ಯೇಸುವಿನ ಶಿಷ್ಯರಾಗಿ ಜೀವಿಸಬೇಕಾದರೆ ನಾವು ಅವನಂತೆ ಸ್ವ-ತ್ಯಾಗದ ಮನೋಭಾವವನ್ನು ಬೆಳೆಸಿಕೊಂಡು ಸದಾ ಅದನ್ನು ತೋರಿಸಬೇಕು.—ಮತ್ತಾ. 16:21-25; ಲೂಕ 9:22, 23.

9:24. ನಮ್ಮ ನಂಬಿಕೆಯನ್ನು ಇತರರಿಗೆ ತಿಳಿಸಲು ಅಥವಾ ಹೆಚ್ಚಿನ ನಂಬಿಕೆಗಾಗಿ ಪ್ರಾರ್ಥಿಸಲು ನಾವೆಂದೂ ಸಂಕೋಚಪಡಬಾರದು.—ಲೂಕ 17:5.

ಕೊನೆಯ ತಿಂಗಳು

(ಮಾರ್ಕ 10:1-16:8)

ಸಾ.ಶ. 32ರ ಕೊನೆಯಲ್ಲಿ ಯೇಸು, “ಯೂದಾಯ ಪ್ರಾಂತ್ಯಕ್ಕೂ ಯೊರ್ದನ್‌ ಹೊಳೆಯ ಆಚೆಯ ಸೀಮೆಗೂ” ಬರುತ್ತಾನೆ. ಆಗಲೂ ಜನರು ಗುಂಪುಗುಂಪಾಗಿ ಅವನ ಬಳಿ ಬರುತ್ತಾರೆ. (ಮಾರ್ಕ 10:1) ಅಲ್ಲಿ ಸುವಾರ್ತೆ ಸಾರಿದ ಬಳಿಕ ಅವನು ಯೆರೂಸಲೇಮಿನ ಕಡೆ ಹೋಗುತ್ತಾನೆ.

ನೈಸಾನ್‌ 8ರಂದು ಯೇಸು ಬೇಥಾನ್ಯದಲ್ಲಿದ್ದಾನೆ. ಊಟಕ್ಕೆ ಕುಳಿತ್ತಿದ್ದಾಗ ಸ್ತ್ರೀಯೊಬ್ಬಳು ಒಳಗೆ ಬಂದು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲವನ್ನು ಆತನ ತಲೆಯ ಮೇಲೆ ಹೊಯ್ಯುತ್ತಾಳೆ. ಯೇಸು ಯೆರೂಸಲೇಮನ್ನು ವಿಜಯೋತ್ಸವದಿಂದ ಪ್ರವೇಶಿಸಿದಂದಿನಿಂದ ಅವನ ಪುನರುತ್ಥಾನದ ವರೆಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ವರ್ಣಿಸಲಾಗಿದೆ.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

10:17, 18—ತನ್ನನ್ನು “ಒಳ್ಳೇ ಬೋಧಕನೇ” ಎಂದು ಸಂಬೋಧಿಸಿದ ವ್ಯಕ್ತಿಯನ್ನು ಯೇಸು ಏಕೆ ತಿದ್ದಿದನು? ಮುಖಸ್ತುತಿಮಾಡುವ ಈ ಬಿರುದನ್ನು ನಿರಾಕರಿಸುವ ಮೂಲಕ ಯೇಸು ಮಹಿಮೆಯನ್ನು ಯೆಹೋವನೆಡೆಗೆ ನಿರ್ದೇಶಿಸಿದನು ಮತ್ತು ಎಲ್ಲ ಒಳ್ಳೇ ವಿಷಯಗಳ ಮೂಲನು ಸತ್ಯ ದೇವರಾಗಿದ್ದಾನೆ ಎಂಬದನ್ನು ತೋರಿಸಿಕೊಟ್ಟನು. ಇನ್ನೂ ಹೆಚ್ಚಾಗಿ, ಒಳ್ಳೇದರ ಮತ್ತು ಕೆಟ್ಟದ್ದರ ಮಟ್ಟಗಳನ್ನಿಡುವ ಹಕ್ಕು, ಸಕಲ ವಸ್ತುಗಳ ನಿರ್ಮಾಣಿಕನಾದ ಯೆಹೋವನೊಬ್ಬನಿಗೆ ಮಾತ್ರ ಇದೆ ಎಂಬ ಮೂಲಭೂತ ಸತ್ಯದ ಕಡೆಗೆ ಯೇಸು ಗಮನಸೆಳೆದನು.—ಮತ್ತಾ. 19:16, 17; ಲೂಕ 18:18, 19.

14:25—ಯೇಸು ತನ್ನ ನಂಬಿಗಸ್ತ ಅಪೊಸ್ತಲರಿಗೆ, “ನಾನು ದೇವರ ರಾಜ್ಯದಲ್ಲಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ದಿನದ ವರೆಗೂ ಅದನ್ನು ಇನ್ನು ಕುಡಿಯುವದೇ ಇಲ್ಲ” ಎಂದು ಹೇಳುವಾಗ ಏನು ಸೂಚಿಸಿದನು? ಪರಲೋಕದಲ್ಲಿ ಅಕ್ಷರಶಃ ದ್ರಾಕ್ಷಾರಸವಿದೆ ಎಂದು ಯೇಸು ಹೇಳುತ್ತಿರಲಿಲ್ಲ. ಕೆಲವೊಮ್ಮೆ ದ್ರಾಕ್ಷಾರಸವನ್ನು ಆನಂದಕ್ಕೆ ಸೂಚಿಸಲಾಗಿರುವುದರಿಂದ, ತನ್ನ ರಾಜ್ಯದಲ್ಲಿ ತನ್ನ ಪುನರುತ್ಥಿತ ಹಿಂಬಾಲಕರೊಂದಿಗೆ ಜೊತೆಸೇರಿದಾಗ ಆಗುವ ಆನಂದಕ್ಕೆ ಯೇಸು ಸೂಚಿಸುತ್ತಿದ್ದನು.—ಕೀರ್ತ. 104:15; ಮತ್ತಾ. 26:29.

14:51, 52—“ಬರೀ ಮೈಲಿ ಓಡಿಹೋದ” ಯೌವನಸ್ಥನು ಯಾರು? ಮಾರ್ಕನೊಬ್ಬನನ್ನು ಬಿಟ್ಟರೆ ಮತ್ತಾರೂ ಈ ಘಟನೆಯ ಕುರಿತು ತಿಳಿಸಿಲ್ಲ, ಹಾಗಾಗಿ ಅವನು ತನ್ನ ಕುರಿತೇ ಹೇಳುತ್ತಿದ್ದನೆಂಬುದು ತರ್ಕಬದ್ಧವಾಗಿದೆ.

15:34—“ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ” ಎಂಬ ಮಾತುಗಳು ಯೇಸುವಿನಲ್ಲಿ ನಂಬಿಕೆ ಕಡಿಮೆಯಾಗಿತ್ತೆಂದು ಸೂಚಿಸಿತೋ? ಇಲ್ಲ. ಯೇಸು ಯಾವ ಹೇತುಗಳಿಂದ ಇದನ್ನು ಹೇಳಿದನೆಂಬದನ್ನು ನಿಖರವಾಗಿ ಹೇಳಲಾಗುವುದಿಲ್ಲ. ಆದರೂ, ತನ್ನ ಸಮಗ್ರತೆಯನ್ನು ಸಂಪೂರ್ಣವಾಗಿ ಪರೀಕ್ಷೆಗೊಡ್ಡಲು ಯೆಹೋವನು ತನ್ನ ಮೇಲಿದ್ದ ಸಂರಕ್ಷಣಾ ಹಸ್ತವನ್ನು ಹಿಂತೆಗಿದಿದ್ದನು ಎಂದು ಯೇಸು ಮನಗಂಡನೆಂಬುದನ್ನು ಅವನ ಮಾತುಗಳು ಸೂಚಿಸುತ್ತವೆ. ತನ್ನ ಕುರಿತು ಕೀರ್ತನೆ 22:1ರಲ್ಲಿ ಮುಂತಿಳಿಸಲ್ಪಟ್ಟ ಮಾತುಗಳು ನೆರವೇರಲಿಕ್ಕಾಗಿ ಸಹ ಅವನು ಇದನ್ನು ಹೇಳಿರಸಾಧ್ಯವಿದೆ.—ಮತ್ತಾ. 27:46.

ನಮಗಾಗಿರುವ ಪಾಠಗಳು:

10:6-9. ವಿವಾಹ ಸಂಗಾತಿಗಳು ಒಂದಾಗಿರಬೇಕೆಂಬದು ದೇವರ ಉದ್ದೇಶ. ಆದುದರಿಂದ ಚಿಕ್ಕಪುಟ್ಟ ವಿಷಯಗಳಿಗೆ ವಿಚ್ಛೇದನದ ಪ್ರಸ್ತಾಪವೆತ್ತುವ ಬದಲು ಪತಿಪತ್ನಿಯರು ತಮ್ಮ ಸಂಸಾರದಲ್ಲಿ ತಲೆದೋರುವ ಯಾವುದೇ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಲು ಶ್ರಮಿಸಬೇಕು.—ಮತ್ತಾ. 19:4-6.

12:41-44. ಸತ್ಯಾರಾಧನೆಗೆ ನಾವು ನಿಸ್ವಾರ್ಥಭಾವದಿಂದ ಆರ್ಥಿಕ ಬೆಂಬಲ ನೀಡಬೇಕೆಂಬ ಪಾಠವನ್ನು ಬಡ ವಿಧವೆಯ ಉದಾಹರಣೆಯು ನಮಗೆ ಕಲಿಸುತ್ತದೆ.

[ಪುಟ 29ರಲ್ಲಿರುವ ಚಿತ್ರ]

ನಡೆದದ್ದೆಲ್ಲವನ್ನು ತನ್ನ ಸಂಬಂಧಿಕರಿಗೆ ಹೋಗಿ ತಿಳಿಸುವಂತೆ ಯೇಸು ಈ ಮನುಷ್ಯನಿಗೆ ಏಕೆ ಹೇಳಿದನು?