ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆ್ಯಂಡೀಸ್‌ನ ತುತ್ತತುದಿಯಲ್ಲಿ ಸುವಾರ್ತೆ ಹಬ್ಬಿಸುವುದು

ಆ್ಯಂಡೀಸ್‌ನ ತುತ್ತತುದಿಯಲ್ಲಿ ಸುವಾರ್ತೆ ಹಬ್ಬಿಸುವುದು

ಆ್ಯಂಡೀಸ್‌ನ ತುತ್ತತುದಿಯಲ್ಲಿ ಸುವಾರ್ತೆ ಹಬ್ಬಿಸುವುದು

ಅಲ್ಲಿ ನಾವು 18 ಜನರು ಮಣ್ಣಿನ ನೆಲದ ಮೇಲೆ ಬಿದ್ದುಕೊಂಡಿದ್ದೆವು. ಮಲಗುವ ಚೀಲದೊಳಗೆ (ಸ್ಲೀಪಿಂಗ್‌ಬ್ಯಾಗ್‌) ನಡಗುತ್ತಾ ಮುದುರಿಕೊಂಡಿದ್ದ ನಮಗೆ, ಧಾರಕಾರವಾಗಿ ಸುರಿಯುತ್ತಿದ್ದ ಮಳೆಯು ಜಿಂಕ್‌ ಷೀಟ್‌ನ ಮೇಲೆ ಬಿದ್ದು ಮಾಡುತ್ತಿದ್ದ ಪಟಪಟ ಶಬ್ದವು ಕೇಳಿಸುತ್ತಿತ್ತು. ನಾವಿದ್ದ ಸಣ್ಣ ಗುಡಿಸಲಿನ ಸ್ಥಿತಿಯನ್ನು ನೋಡುವಾಗ ಅದರಲ್ಲಿ ಒಕ್ಕಲಿದ್ದ ಮೊದಲ ಮನುಷ್ಯರು ನಾವೇ ಏನೋ ಎಂದೆಣಿಸಿತು.

ನಾವು 18 ಜನ ಈ ಸ್ಥಳಕ್ಕೆ ಬಂದದ್ದಾದರೂ ಯಾಕೆ? ಈ ಪ್ರಶ್ನೆಗೆ ಉತ್ತರವು, ಯೇಸು ಕೊಟ್ಟ ಆಜ್ಞೆಯ ಮೇಲೆ ಆಧರಿತವಾಗಿತ್ತು. ಸುವಾರ್ತೆಯನ್ನು “ಭೂಲೋಕದ ಕಟ್ಟಕಡೆಯವರೆಗೂ” ಸಾರುವಂತೆ ಅವನಿತ್ತ ಆಜ್ಞೆಯನ್ನು ಪಾಲಿಸುವ ನಮ್ಮ ಮನದಿಚ್ಛೆಯೇ ನಮ್ಮನ್ನಲ್ಲಿಗೆ ಕರೆತಂದಿತ್ತು. (ಅ. ಕೃ. 1:8; ಮತ್ತಾ. 24:14) ಇದಕ್ಕಾಗಿಯೇ ನಾವು ಬೊಲಿವಿಯಾದ ಆ್ಯಂಡೀಸ್‌ ಪರ್ವತದ ಏಕಾಂತ ಪ್ರದೇಶದಲ್ಲಿ ಸಾರಲಿಕ್ಕಾಗಿ ಹೋಗಿದ್ದೆವು.

ಪ್ರಯಾಸದ ಪಯಣ

ಅಲ್ಲಿಗೆ ತಲಪುವುದೇ ನಮ್ಮ ಮುಂದಿದ್ದ ಮೊದಲ ಸವಾಲಾಗಿತ್ತು. ಅಂಥ ಏಕಾಂತ ಪ್ರದೇಶಗಳಿಗೆ ವೇಳೆಗೆ ಸರಿಯಾಗಿ ಹೊರಡುವ ಸಾರ್ವಜನಿಕ ವಾಹನಗಳ ವ್ಯವಸ್ಥೆಯಿರಲಿಲ್ಲ ಎಂದು ನಮಗೆ ತಿಳಿದು ಬಂತು. ನಮ್ಮ ಬಸ್ಸು ಬಂದಾಗ ಅದು ನಾವೆಣಿಸಿದಷ್ಟು ದೊಡ್ಡದಾಗಿರಲಿಲ್ಲ. ನಮ್ಮಲ್ಲಿ ಕೆಲವರು ನಿಂತುಕೊಂಡೇ ಪ್ರಯಾಣಿಸಬೇಕಾಯಿತು. ಅಂತೂ ಹೇಗೂ ತಲಪಬೇಕಾದ ಸ್ಥಳವನ್ನು ನಾವು ಬಂದು ಮುಟ್ಟಿದೆವು.

ನಮ್ಮ ಉದ್ದೇಶ ಬೊಲಿವಿಯಾದ ಆ್ಯಂಡೀಸ್‌ನ ತುತ್ತತುದಿಯಲ್ಲಿದ್ದ ಹಳ್ಳಿಗಳಲ್ಲಿ ಸುವಾರ್ತೆ ಸಾರುವುದಾಗಿತ್ತು. ಹಾಗಾಗಿ ಬಸ್ಸು ಪ್ರಯಾಣದ ಬಳಿಕ, ನಾವು ಬೆನ್ನ ಮೇಲೆ ಲಗ್ಗೇಜುಗಳನ್ನು ಹೊತ್ತುಕೊಂಡು ಒಬ್ಬರ ಹಿಂದೆ ಇನ್ನೊಬ್ಬರಂತೆ ಪರ್ವತದ ಕಡಿದಾದ ದಾರಿಯಲ್ಲಿ ಹೆಜ್ಜೆ ಹಾಕಿದೆವು.

ಹಳ್ಳಿಗಳು ಚಿಕ್ಕದಾಗಿ ಕಂಡರೂ ಮನೆಗಳು ತುಂಬಾ ದೂರ ದೂರದಲ್ಲಿದ್ದವು. ಆದುದರಿಂದ, ಪ್ರತಿಯೊಂದು ಹಳ್ಳಿಗೆ ಭೇಟಿನೀಡಲು ಹಲವಾರು ತಾಸುಗಳೇ ಬೇಕಾಯಿತು. ನಾವು ಎಷ್ಟೇ ದೂರ ನಡೆಯಲಿ, ದೂರದಲ್ಲಿ ಇನ್ನೊಂದು ಮನೆ ಸದಾ ಕಾಣಸಿಗುತ್ತಿತ್ತು. ಅನೇಕ ವೇಳೆ, ಹೊಲಗದ್ದೆಗಳ ಮಧ್ಯೆ ಅಡ್ಡಾದಿಡ್ಡಿಯಾದ ಕಾಲುದಾರಿಗಳಲ್ಲಿ ನಾವು ದಿಕ್ಕು ತಪ್ಪಿಹೋಗುತ್ತಿದ್ದೆವು.

“ನೀವು ಈ ಮುಂಚೆ ಯಾಕೆ ಬರಲಿಲ್ಲ?”

ನಾವು ಬಹಳ ದೂರದಿಂದ ನಡೆದು ಬಂದಿದ್ದನ್ನು ತಿಳಿದ ಸ್ತ್ರೀಯೊಬ್ಬಳು ಎಷ್ಟೊಂದು ಪ್ರಭಾವಿತಳಾದಳೆಂದರೆ, ನಮ್ಮ ಮಧ್ಯಾಹ್ನದ ಆಹಾರವನ್ನು ತಯಾರಿಸಲಿಕ್ಕಾಗಿ ಅಡುಗೆ ಕೋಣೆಯನ್ನು ಬಿಟ್ಟುಕೊಟ್ಟಳಲ್ಲದೆ ಕಟ್ಟಿಗೆಯನ್ನೂ ಒದಗಿಸಿದಳು. ಮೃತ ವ್ಯಕ್ತಿಗಳ ಕುರಿತು ಬೈಬಲ್‌ ಏನನ್ನು ಬೋಧಿಸುತ್ತದೆ ಎಂಬುದನ್ನು ತಿಳಿದ ಬಳಿಕ ಒಬ್ಬ ವ್ಯಕ್ತಿ, “ನೀವು ಈ ಮುಂಚೆ ಯಾಕೆ ಬರಲಿಲ್ಲ?” ಎಂದು ಪ್ರಶ್ನಿಸಿದನು. ಅವನೆಷ್ಟು ಆಸಕ್ತನಾಗಿದ್ದನೆಂದರೆ, ನಾವು ಅವನ ಹಳ್ಳಿಯನ್ನು ಬಿಟ್ಟು ಹೊರಟಾಗ ಪ್ರಶ್ನೆಗಳನ್ನು ಕೇಳುತ್ತ ನಮ್ಮೊಂದಿಗೆ ಬಲುದೂರದವರೆಗೆ ನಡೆದುಕೊಂಡು ಬಂದನು. ಇನ್ನೊಬ್ಬನು ಯೆಹೋವನ ಸಾಕ್ಷಿಗಳ ಬಗ್ಗೆ ಹಿಂದೆ ಕೇಳಿರಲೇ ಇಲ್ಲ. ಅವನು ನಮ್ಮ ಸಾಹಿತ್ಯಗಳನ್ನು ಬಹಳವಾಗಿ ಮೆಚ್ಚಿದನು. ನಮಗೆ ಪದೇಪದೇ ಧನ್ಯವಾದಗಳನ್ನು ತಿಳಿಸಿದನು ಮತ್ತು ರಾತ್ರಿ ಮಲಗಲಿಕ್ಕಾಗಿ ಒಂದು ಗುಡಿಸಲಿನ ಬೀಗದ ಕೈಯನ್ನು ಕೊಟ್ಟನು.

ಒಂದು ಕಗ್ಗತ್ತಲಿನ ರಾತ್ರಿ ನಾವು ಗೊತ್ತಿಲ್ಲದೆ ದೊಡ್ಡ ಕಟ್ಟಿರುವೆಗಳು ಬೀಡುಬಿಟ್ಟಿದ್ದ ಜಾಗದಲ್ಲಿ ನಮ್ಮ ಡೇರೆಗಳನ್ನು ಹಾಕಿಬಿಟ್ಟೆವು. ಇರಿಸುಮುರಿಸುಗೊಂಡ ಅವುಗಳು ತಕ್ಷಣವೇ ನಮ್ಮನ್ನು ಕಚ್ಚುತ್ತಾ ತಮ್ಮ ಕೋಪವನ್ನು ತೋರಿಸಿದವು. ಆದರೆ ತುಂಬಾ ದಣಿದಿದ್ದದರಿಂದ ನಮಗೆ ಅಲ್ಲಿಂದ ಕದಲಲೂ ಆಗಲಿಲ್ಲ. ಸ್ವಲ್ಪ ಸಮಯದಲ್ಲೇ ಇರುವೆಗಳು ನಮ್ಮನ್ನು ಮರೆತುಬಿಟ್ಟವು.

ಮೊದಮೊದಲು ರಾತ್ರಿ ನಾವು ನೆಲದ ಮೇಲೆ ಮಲಗಿದಾಗ ನಮ್ಮ ಬೆನ್ನು ಮತ್ತು ಪಕ್ಕೆಲುಬುಗಳು ನೋವಾಗುತ್ತಿದ್ದವು. ಆದರೆ ಕ್ರಮೇಣ ಅದು ನಮಗೆ ಒಗ್ಗಿ ಹೋಯಿತು. ಬೆಳಿಗ್ಗೆದ್ದು ಸ್ವಚ್ಛಂದವಾದ ಕಣಿವೆಗಳಲ್ಲಿ ಮೋಡಗಳು ನಿಧಾನವಾಗಿ ಸಾಗುತ್ತಿರುವುದನ್ನು ನೋಡುವಾಗ ಮತ್ತು ದೂರದಲ್ಲಿನ ಹಿಮಾವೃತ ಬೆಟ್ಟಗಳ ಮನೋಹರ ದೃಶ್ಯ ಕಣ್ಣ್‌ತುಂಬುವಾಗ ನಮ್ಮ ನೋವು-ಬೇನೆ ಎಲ್ಲವನ್ನು ಮರೆತುಬಿಡುತ್ತಿದ್ದೆವು. ಅಲ್ಲಿನ ನೀರವತೆಯನ್ನು ತೊರೆಗಳ ಜುಳುಜುಳು ನಾದ ಮತ್ತು ಹಕ್ಕಿಗಳ ಚಿಲಿಪಿಲಿ ಕಲರವ ಮಾತ್ರವೇ ಭಂಗಪಡಿಸುತ್ತಿತ್ತು.

ಹೊಳೆಯಲ್ಲಿ ಸ್ನಾನಮಾಡಿದ ಬಳಿಕ ನಾವು ಒಟ್ಟಾಗಿ ಬೈಬಲ್‌ ವಚನವನ್ನು ಚರ್ಚಿಸಿದೆವು. ಅನಂತರ ತಿಂಡಿಯನ್ನು ಮುಗಿಸಿಕೊಂಡು ದೂರದ ಇತರ ಹಳ್ಳಿಗಳಿಗೆ ಹೋಗಲು ಬೆಟ್ಟವನ್ನು ಏರತೊಡಗಿದೆವು. ನಾವು ಅಷ್ಟು ದೂರ ಮೇಲೇರಿದ್ದು ಸಾರ್ಥಕವಾಯಿತು. ಅಲ್ಲಿ ನಾವು ಒಬ್ಬಾಕೆ ಅಜ್ಜಿಯನ್ನು ಭೇಟಿಯಾದೆವು. ಯೆಹೋವ ಎಂಬುದು ದೇವರ ನಾಮವಾಗಿದೆ ಮತ್ತು ಅದು ಬೈಬಲಿನಲ್ಲಿದೆ ಎಂದು ತಿಳಿದುಕೊಂಡಾಗ ಆಕೆಗೆ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ. ತಾನೀಗ ದೇವರ ಹೆಸರನ್ನು ಹೇಳಿ ಪ್ರಾರ್ಥಿಸಸಾಧ್ಯವಿದೆ ಎಂಬುದನ್ನು ತಿಳಿದಾಗ ಆಕೆಗೆ ತನ್ನ ಭಾವನೆಗಳನ್ನು ಅದುಮಿಡಲಾಗಲಿಲ್ಲ!

ಇನ್ನೊಬ್ಬ ವೃದ್ಧನು ದೇವರು ತನ್ನನ್ನು ನೆನಪಿಸಿಕೊಂಡಿರಲೇ ಬೇಕು ಎಂದು ಹೇಳುತ್ತಾ, ನಮ್ಮನ್ನು ದೇವದೂತರು ಕಳುಹಿಸಿದರು ಎಂಬ ಪದಗಳಿರುವ ಹಾಡನ್ನು ಹಾಡಲು ಶುರುಮಾಡಿಬಿಟ್ಟನು. ಅನಾರೋಗ್ಯದಿಂದ ಹಾಸಿಗೆಹಿಡಿದಿದ್ದ ಮತ್ತೊಬ್ಬನು, ಅವನ ಹಳ್ಳಿಯ ಯಾರೊಬ್ಬರೂ ಅವನನ್ನು ನೋಡಲಿಕ್ಕೆ ಬರಲಿಲ್ಲ ಎಂದು ತಿಳಿಸಿದನು. ಲಾ ಪಾಜ್‌ನಷ್ಟು ದೂರದಿಂದ ನಾವು ಬಂದಿದ್ದೇವೆ ಎಂಬುದನ್ನು ಅವನಿಗೆ ನಂಬಲಾಗಲಿಲ್ಲ. ಅಷ್ಟೇ ಅಲ್ಲ, ಇನ್ನೊಬ್ಬ ಮನುಷ್ಯನು ನಮ್ಮ ಸೇವೆಯನ್ನು ಕಂಡು ಮೂಕವಿಸ್ಮಿತನಾದನು. ಇತರ ಧರ್ಮಗಳು, ಜನರು ಕೂಡಿ ಬರಲೆಂದು ಕೇವಲ ತಮ್ಮ ಚರ್ಚಿನ ಗಂಟೆ ಬಾರಿಸುವಾಗ ಯೆಹೋವನ ಸಾಕ್ಷಿಗಳಾದರೋ ಜನರನ್ನು ಭೇಟಿಯಾಗಲಿಕ್ಕಾಗಿ ಮನೆಮನೆಗಳಿಗೆ ಹೋಗಲು ಪ್ರಯಾಸಪಡುವ ವಿಷಯ ಅವನನ್ನು ಬೆರಗಾಗಿಸಿತು.

ಆ ಪ್ರದೇಶದ ಯಾವ ಮನೆಯಲ್ಲಿಯೂ ವಿದ್ಯುತ್‌ ಇರಲಿಲ್ಲ. ಕತ್ತಲಾಗುತ್ತಿದ್ದಂತೆ ಜನರು ಮಲಗುತ್ತಿದ್ದರು ಮತ್ತು ಇನ್ನೂ ನಸುಕಿರುವಾಗಲೇ ಎದ್ದೇಳುತ್ತಿದ್ದರು. ಹೀಗಾಗಿ ಜನರನ್ನು ಮನೆಯಲ್ಲಿ ಭೇಟಿಮಾಡಬೇಕಾದರೆ ನಾವು ಬೆಳಿಗ್ಗೆ ಆರು ಗಂಟೆಗೆಲ್ಲ ಸೇವೆಯನ್ನು ಆರಂಭಿಸಬೇಕಿತ್ತು. ಇಲ್ಲವಾದಲ್ಲಿ ಹೆಚ್ಚಿನ ಜನರು ಗದ್ದೆಕೆಲಸಕ್ಕೆ ಹೋಗಿಬಿಡುತ್ತಿದ್ದರು. ಹೊಲಗಳಲ್ಲಿ ಕೆಲಸಮಾಡುತ್ತಿದ್ದವರು ತಮ್ಮ ಕೆಲಸವನ್ನು ನಿಲ್ಲಿಸಿ ದೇವರ ವಾಕ್ಯದಿಂದ ನಾವು ತಿಳಿಸುತ್ತಿದ್ದ ಸಂದೇಶಕ್ಕೆ ಕಿವಿಗೊಡುತ್ತಿದ್ದರು. ಹೀಗೆ, ಕೆಲವೊಮ್ಮೆ ನೇಗಿಲು ಎಳೆಯುತ್ತಿದ್ದ ಎತ್ತುಗಳಿಗೂ ಅನಿರೀಕ್ಷಿತ ಬಿಡುವು ಸಿಗುತ್ತಿತ್ತು. ಮನೆಗಳಲ್ಲಿದ್ದ ಅನೇಕ ಜನರು ನಮ್ಮನ್ನು ಬರಮಾಡಿ ಕುಳಿತುಕೊಳ್ಳಲು ಕುರಿಯ ತೊಗಲನ್ನು ಹಾಸಿದರು. ಮಾತ್ರವಲ್ಲ, ನಮ್ಮ ವಿಷಯವನ್ನು ಆಲಿಸಲಿಕ್ಕಾಗಿ ಇಡೀ ಕುಟುಂಬವನ್ನೇ ಒಟ್ಟುಸೇರಿಸಿದರು. ಕೆಲವು ರೈತರು ನಾವು ಕೊಟ್ಟ ಬೈಬಲ್‌ ಸಾಹಿತ್ಯಗಳಿಗೆ ಕೃತಜ್ಞತೆಯನ್ನು ಸೂಚಿಸುತ್ತಾ ಮೆಕ್ಕೆ-ಜೋಳವನ್ನು ದೊಡ್ಡ ದೊಡ್ಡ ಚೀಲಗಳಲ್ಲಿ ತುಂಬಿಸಿ ಕೊಟ್ಟರು.

“ನನ್ನನ್ನು ಮರೆತಿಲ್ಲ”

ಜನರು ಹೆಚ್ಚೆಚ್ಚಾಗಿ ಬೈಬಲ್‌ ಜ್ಞಾನವನ್ನು ಪಡೆದುಕೊಂಡು ಪ್ರಗತಿಯಾಗಬೇಕಾದರೆ ಅವರನ್ನು ಒಮ್ಮೆ ಭೇಟಿಯಾದರೆ ಸಾಲದು ನಿಜ. ಅನೇಕರು ತಮ್ಮನ್ನು ಮತ್ತೆ ಭೇಟಿಯಾಗಿ ಹೆಚ್ಚಿನ ವಿಷಯಗಳನ್ನು ಕಲಿಸಿಕೊಡುವಂತೆ ಬೇಡಿಕೊಂಡರು. ಆದಕಾರಣ ಬೊಲಿವಿಯ ದೇಶದ ಈ ಭಾಗಕ್ಕೆ ನಾವು ಅನೇಕ ಸಲ ಪ್ರಯಾಣಿಸಿದೆವು.

ಹೀಗೆ, ನಾವು ಒಮ್ಮೆ ಹಿಂದಿರುಗಿ ಹೋದಾಗ ಅಜ್ಜಿಯೊಬ್ಬಳು ನಮ್ಮನ್ನು ನೋಡಿ ಖುಷಿಯಿಂದ ಹೇಳಿದ್ದು: “ನೀವು ನನಗೆ ಮಕ್ಕಳ ಹಾಗೆ ಇದ್ದೀರಿ. ನನ್ನನ್ನು ಮರೆತಿಲ್ಲ.” ಒಬ್ಬ ಮನುಷ್ಯನು ನಾವು ಮಾಡುತ್ತಿರುವ ಕೆಲಸವನ್ನು ನೋಡಿ ತುಂಬಾ ಧನ್ಯವಾದ ತಿಳಿಸಿದನು. ಮುಂದಿನ ಬಾರಿ ಬಂದಾಗ ತನ್ನ ಮನೆಯಲ್ಲಿಯೇ ಉಳಿದುಕೊಳ್ಳಬೇಕೆಂದು ಕಳಕಳಿಯಿಂದ ವಿನಂತಿಸಿಕೊಂಡನು. ನಾವು ಈ ಹಿಂದೆ ಭೇಟಿಯಾದ ಸ್ತ್ರೀಯೊಬ್ಬಳು ಹಳ್ಳಿಯಿಂದ ಪಟ್ಟಣಕ್ಕೆ ಹೋಗಿ ನೆಲೆಸಿದ್ದಳು ಮತ್ತು ಈಗ ಸುವಾರ್ತೆಯನ್ನು ಸಾರುತ್ತಿದ್ದಾಳೆ. ಇದು ನಮ್ಮ ಪ್ರಯತ್ನಕ್ಕೆ ಸಿಕ್ಕಿದ ಬಲು ದೊಡ್ಡ ಬಹುಮಾನವೆಂದೇ ಹೇಳಬಹುದು.

ಮೊದಲ ಪ್ರಯಾಣದ ಕೊನೆಯ ದಿನದಲ್ಲಿ ನಮ್ಮ ಸ್ಟೋವ್‌ನಲ್ಲಿ ಸೀಮೆಣ್ಣೆ ಖಾಲಿಯಾಗಿತ್ತು. ಆಹಾರವೂ ಸ್ವಲ್ಪವೇ ಉಳಿದಿತ್ತು. ನಾವು ಸೌದೆ ಕೂಡಿಸಿ ಒಲೆ ಉರಿಸಿ ನಮ್ಮ ಕೊನೆಯ ಆಹಾರವನ್ನು ಬೇಯಿಸಿದೆವು. ಅನಂತರ ಕಾಲುನಡಿಗೆಯಲ್ಲಿ ಹಿಂದಕ್ಕೆ ಹೊರೆಟೆವು. ಬಸ್ಸು ಹಿಡಿಯಲಿಕ್ಕಾಗಿ ಅನೇಕ ಕಿಲೋಮೀಟರ್‌ ದೂರದಲ್ಲಿದ್ದ ಪಟ್ಟಣಕ್ಕೆ ನಡಿಯಬೇಕಿತ್ತು. ಕೊನೆಗೂ ನಾವಲ್ಲಿಗೆ ಬಂದು ತಲಪಿದಾಗ ಕತ್ತಲಾಗಿತ್ತು.

ವಾಪಾಸ್ಸು ಮನೆಗೆ

ನಾವು ವಾಪಾಸ್ಸಾಗುತ್ತಿದ್ದಾಗ ಮಧ್ಯೆ ದಾರಿಯಲ್ಲಿ ಬಸ್ಸು ಹಾಳಾಗಿ ನಿಂತುಬಿಟ್ಟಿತು. ಕೊನೆಗೆ ಒಂದು ಟ್ರಕ್‌ನ ಹಿಂಭಾಗದಲ್ಲಿ ಕಿಕ್ಕಿರಿದ ಜನರೊಂದಿಗೆ ನಾವು ಪ್ರಯಾಣ ಬೆಳೆಸಿದೆವು.

ನಮ್ಮೊಂದಿಗೆ ಪ್ರಯಾಣಿಸುತ್ತಿದ್ದ ಜನರಿಗೆ ನಾವು ಅಲ್ಲಿಗೆ ಏಕೆ ಹೋಗಿದ್ದೆವು ಎಂದು ತಿಳಿಯುವ ಕುತೂಹಲವಿತ್ತು ಮತ್ತು ಇದರಿಂದ ಅವರಿಗೂ ಸಾರುವ ಅವಕಾಶ ನಮಗೆ ಸಿಕ್ಕಿತು. ಅವರು ಸ್ವಲ್ಪ ನಾಚಿಕೆ ಸ್ವಭಾವದ ಜನರಾಗಿದ್ದರೂ ಸ್ನೇಹಮಯಿಯಾಗಿದ್ದರು.

ಆ ಟ್ರಕ್ಕಿನ ಹಿಂದೆ ಕುಳಿತು ಒಂಬತ್ತು ಗಂಟೆಕಾಲ ಪ್ರಯಾಣಿಸಿದ ಮೇಲೆ ನಾವು ಮನೆ ತಲಪಿದೆವು. ತಲಪುವಷ್ಟರಲ್ಲಿ ನಾವು ಪೂರ್ತಿ ಒದ್ದೆಯಾಗಿದ್ದೆವು ಮತ್ತು ಚಳಿಯು ಮೂಳೆಗಿಳಿದು ಕೊರೆಯುವಷ್ಟಿತ್ತು. ಆದರೂ ನಮ್ಮ ಪ್ರಯಾಣ ನಿಷ್ಫಲವಾಗಲಿಲ್ಲ. ಟ್ರಕ್ಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಟ್ಟಣದಲ್ಲಿ ನೆಲೆಸಿದ್ದ ಸ್ತ್ರೀಯೊಬ್ಬಳೊಂದಿಗೆ ಬೈಬಲ್‌ ಅಧ್ಯಯನವನ್ನು ಏರ್ಪಡಿಸಲು ನಮ್ಮಿಂದ ಸಾಧ್ಯವಾಯಿತು.

ಅಂಥ ಏಕಾಂತ ಪ್ರದೇಶಗಳಲ್ಲಿ ಜೀವಿಸುತ್ತಿರುವ ಜನರಿಗೆ ಸುವಾರ್ತೆಯನ್ನು ತಲಪಿಸುವುದು ನಿಜಕ್ಕೂ ಒಂದು ವಿಶೇಷ ಸುಯೋಗವೇ ಸರಿ. ನಾವು ನಾಲ್ಕು ಗ್ರಾಮಗಳಲ್ಲೂ ಹಲವಾರು ಸಣ್ಣಪುಟ್ಟ ಹಳ್ಳಿಗಳಲ್ಲೂ ಸುವಾರ್ತೆ ಸಾರಿದೆವು. ‘ಪರ್ವತಗಳ ಮೇಲೆ ತ್ವರೆಪಡುತ್ತಾ ಶುಭಸಮಾಚಾರವನ್ನು ತಂದು ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ! ಒಳ್ಳೆಯ ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು ರಕ್ಷಣೆಯನ್ನು ಪ್ರಕಟಿಸುತ್ತಿದ್ದಾನೆ’ ಎಂಬ ಮಾತುಗಳು ಅಲ್ಲಿ ಸಾರುತ್ತಿದ್ದಾಗ ನಮ್ಮ ನೆನಪಿಗೆ ಬಾರದಿರಲಿಲ್ಲ.—ಯೆಶಾ. 52:7; ರೋಮಾ. 10:15.

[ಪುಟ 17ರಲ್ಲಿರುವ ಚಿತ್ರ]

ಸುವಾರ್ತೆ ಸಾರಲು ಸಿದ್ಧ