ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜರೂರಿಯಾದ ಒಂದು ಭೇಟಿ

ಜರೂರಿಯಾದ ಒಂದು ಭೇಟಿ

ಜರೂರಿಯಾದ ಒಂದು ಭೇಟಿ

ನಾನೊಬ್ಬರನ್ನು ಜರೂರಿಯಾಗಿ ಭೇಟಿಯಾಗಲು ಕಾಯುತ್ತಿದ್ದೇನೆ. ಯುವ ಸ್ಪ್ಯಾನಿಷ್‌ ತಾಯಿಯಾಗಿರುವ ನಾನು ಈ ಭೇಟಿಯನ್ನು ಏಕೆ ಏರ್ಪಡಿಸಿದೆ ಎಂಬದನ್ನು ನಿಮಗೆ ಮೊದಲು ವಿವರಿಸುವೆ.

ನಾನು ಹುಟ್ಟಿ ಬೆಳೆದ ಮನೆಯಲ್ಲಿ ಶಾಂತಿ ಸಮಾಧಾನವು ಕೇವಲ ಒಂದು ಮರೀಚಿಕೆಯಾಗಿತ್ತು. ನಾಲ್ಕು ವರ್ಷದ ನನ್ನ ಪುಟ್ಟ ತಮ್ಮ ಅಪಘಾತಕ್ಕೆ ಬಲಿಯಾದಾಗ ನಮ್ಮ ಕುಟುಂಬವು ದುಃಖದ ಮಡುವಿನಲ್ಲಿ ಮುಳುಗಿತು. ಇದು ಸಾಲದೆಂದು, ನನ್ನ ತಂದೆಗಿದ್ದ ಅನೇಕ ದುಶ್ಚಟಗಳು ತಾಯಿಯು ತನ್ನ ದಾಂಪತ್ಯ ಜೀವನದಲ್ಲಿ ಬೇಸತ್ತುಹೋಗುವಂತೆ ಮಾಡಿತು. ಇಷ್ಟೆಲ್ಲಾ ಕಷ್ಟಗಳಿದ್ದರೂ ಆಕೆ ನನ್ನಲ್ಲಿ ಹಾಗೂ ನನ್ನ ಅಣ್ಣನಲ್ಲಿ ನೈತಿಕ ಮೌಲ್ಯಗಳನ್ನು ಬೇರೂರಿಸಿದಳು.

ಸಮಯಾನಂತರ ಅಣ್ಣನ ಮದುವೆಯ ಬಳಿಕ ನನಗೂ ಮದುವೆಯಾಯಿತು. ಅದಾದ ಸ್ವಲ್ಪದರಲ್ಲಿ ನನ್ನ ತಾಯಿಗೆ ಕ್ಯಾನ್ಸರ್‌ ಇದೆ ಎಂದು ತಿಳಿದುಬಂತು. ಮತ್ತು ಕೊನೆಗೆ ಆಕೆ ಅದರಿಂದಲೇ ತೀರಿಕೊಂಡಳು. ಆದರೆ ಸಾಯುವ ಮುನ್ನ ನಮಗಾಗಿ ಒಂದು ಸೊತ್ತನ್ನು ಬಿಟ್ಟುಹೋದಳು.

ಪರಿಚಿತಳೊಬ್ಬಳು ತಾಯಿಗೆ ಪುನರುತ್ಥಾನದ ಕುರಿತ ಬೈಬಲ್‌ ನಿರೀಕ್ಷೆಯ ಬಗ್ಗೆ ಮಾತಾಡಿದಾಗ ಆಕೆ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡಿದ್ದಳು. ಬೈಬಲ್‌ ಸಂದೇಶವು ಬದುಕಿನ ಕೊನೆಕಾಲದಲ್ಲೂ ಆಕೆಗೆ ಜೀವಿಸಲು ಒಂದು ಕಾರಣಕೊಟ್ಟು ಸಂತೋಷ ಕಂಡುಕೊಳ್ಳುವಂತೆ ಸಹಾಯಮಾಡಿತು.

ಬೈಬಲ್‌ ಸಂದೇಶ ನನ್ನ ತಾಯಿಯ ಮೇಲೆ ಬೀರಿದ ಒಳ್ಳೇ ಪರಿಣಾಮವನ್ನು ಕಂಡು ನಾನು ಮತ್ತು ನನ್ನ ಅಣ್ಣ, ಇಬ್ಬರೂ ದೇವರ ವಾಕ್ಯವನ್ನು ಅಧ್ಯಯನಮಾಡಲು ಆರಂಭಿಸಿದೆವು. ನನ್ನ ಎರಡನೆಯ ಮಗು ಹುಟ್ಟುವುದಕ್ಕೆ ಒಂದು ತಿಂಗಳ ಮುಂಚೆ ನಾನು ದೀಕ್ಷಾಸ್ನಾನಪಡೆದು ಯೆಹೋವನ ಸಾಕ್ಷಿಯಾದೆ. ನಮ್ಮ ಮುದ್ದಾದ ಹೆಣ್ಣುಮಗಳಿಗೆ ನಾವು ಲೂಸಿಯಾ ಎಂದು ಹೆಸರಿಟ್ಟೆವು.

ನನ್ನ ದೀಕ್ಷಾಸ್ನಾನದ ದಿನವು ನನಗೆ ತುಂಬ ಮಹತ್ತ್ವದ್ದಾಗಿತ್ತು. ಒಂದು ಕಾರಣ, ಸದಾ ಯೆಹೋವನ ಸೇವೆ ಮಾಡಲು ಸಮರ್ಪಿಸಿಕೊಂಡಿದ್ದರಿಂದ ನಾನು ಇನ್ನು ಮುಂದೆ ಆತನಿಗೆ ಸೇರಿದವಳಾಗಿದ್ದೆ. ಇನ್ನೊಂದು ಕಾರಣ, ಮಗ ಹಾಗೂ ಮಗಳೊಂದಿಗೆ ನನ್ನ ನಂಬಿಕೆಯನ್ನು ನಾನು ಹಂಚಿಕೊಳ್ಳಶಕ್ತಳಾಗಿದ್ದೆ.

ಆದರೆ ನನ್ನ ಹರ್ಷಕ್ಕಿದ್ದ ಎರಡನೆಯ ಕಾರಣಕ್ಕೆ ಸ್ವಲ್ಪದರಲ್ಲೇ ಅಡ್ಡಿ ಬಂತು. ಲೂಸಿಯಾ ನಾಲ್ಕು ವರ್ಷದವಳಾಗಿದ್ದಾಗ ಅವಳ ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿತು. ಹಲವಾರು ಪರೀಕ್ಷೆಗಳ ತರುವಾಯ ಅವಳ ಪಿತ್ತಜನಕಾಂಗದ ಬಳಿ ಕಿತ್ತಳೆ ಗಾತ್ರದ ಒಂದು ಗೆಡ್ಡೆಯಿರುವುದಾಗಿ ರೇಡಿಯಾಲಜಿ ಶಾಸ್ತ್ರಜ್ಞರು ಪತ್ತೆಹಚ್ಚಿದರು. ಲೂಸಿಯಾಗೆ ನ್ಯೂರೊಬ್ಲಾಸ್ಟೋಮಾ ಅಂದರೆ, ಶೀಘ್ರಗತಿಯಲ್ಲಿ ಬೆಳೆಯುವ ಕ್ಯಾನ್ಸರ್‌ ಗೆಡ್ಡೆಯೊಂದಿದೆ ಎಂದು ತಜ್ಞರು ವಿವರಿಸಿದರು. ಹೀಗೆ ಲೂಸಿಯಾ, ಕ್ಯಾನ್ಸರ್‌ ರೋಗದೊಂದಿಗಿನ ತನ್ನ ಏಳು ವರ್ಷದ ಹೋರಾಟವನ್ನು ಆರಂಭಿಸಿದಳು. ಈ ಕಾಲಾವಧಿಯಲ್ಲಿ ಹಲವು ದಿನಗಳ ವರೆಗೆ ಅವಳು ಆಸ್ಪತ್ರೆಯಲ್ಲೇ ಇರಬೇಕಾದ ಸಂದರ್ಭವಿತ್ತು.

ಸ್ವತ್ಯಾಗದ ಮನೋಭಾವ

ಆ ವೇದನೆಭರಿತ ಸಮಯದಲ್ಲಿ ಲೂಸಿಯಾ ನನ್ನನ್ನು ಅಕ್ಕರೆಯಿಂದ ಅಪ್ಪಿ ಮುದ್ದಿಡುತ್ತಿದ್ದದ್ದೇ ನನ್ನ ಮನಸ್ಸಿನ ಅಳಲನ್ನು ಕಡಿಮೆಮಾಡಿತು. ಅವಳು ತನ್ನ ರೋಗವನ್ನು ನಿಭಾಯಿಸಿದ ರೀತಿ ಆಸ್ಪತ್ರೆಯ ಸಿಬ್ಬಂದಿಗಳ ಮನತಟ್ಟಿತು. ಅವಳು ಉತ್ಸಾಹದಿಂದ ನರ್ಸುಗಳಿಗೆ ನೆರವಾಗುತ್ತಿದ್ದಳು. ಪಕ್ಕದ ವಾರ್ಡ್‌ಗಳಲ್ಲಿದ್ದ ಮಕ್ಕಳಿಗೆ ಮೊಸರು, ಹಣ್ಣಿನ ರಸ ಮತ್ತು ಇನ್ನಿತರ ವಸ್ತುಗಳನ್ನು ಕೊಟ್ಟು ಬರುವ ಮೂಲಕ ಅವರಿಗೆ ಸಹಾಯಮಾಡುತ್ತಿದ್ದಳು. ಆ ನರ್ಸುಗಳು ಅವಳಿಗೆ ಒಂದು ಬಿಳಿ ಕೋಟ್‌, ಮಾತ್ರವಲ್ಲ “ನರ್ಸ್‌ನ ಸಹಾಯಕಿ” ಎಂಬ ಬ್ಯಾಡ್ಜ್‌ ಸಹ ಕೊಟ್ಟರು.

ಆಸ್ಪತ್ರೆಯಲ್ಲಿ ಕೆಲಸಮಾಡುವ ಒಬ್ಬ ಸ್ತ್ರೀ ಜ್ಞಾಪಿಸಿಕೊಳ್ಳುವುದು: “ಲೂಸಿಯಾ ನನ್ನ ಮನಸ್ಪರ್ಷಿಸಿದ ಹುಡುಗಿಯಾಗಿದ್ದಳು. ಅವಳು ತುಂಬ ಚುರುಕಾಗಿದ್ದು ಸೃಜನಶೀಲಳಾಗಿದ್ದಳು. ಅಲ್ಲದೆ ಅವಳಿಗೆ ಚಿತ್ರ ಬಿಡಿಸಿ ಅದಕ್ಕೆ ಬಣ್ಣಹಚ್ಚುವುದೆಂದರೆ ಬಲು ಇಷ್ಟವಾಗಿತ್ತು. ಅವಳು ಲವಲವಿಕೆಯಿಂದ ಮಾತಾಡುತ್ತಿದ್ದಳು ಮತ್ತು ತನ್ನ ಪ್ರಾಯಕ್ಕಿಂತ ತುಂಬಾನೇ ಪ್ರೌಢಳಾಗಿ ನಡಕೊಳ್ಳುತ್ತಿದ್ದಳು.”

ಲೂಸಿಯಾ, ಬೇಕಾದ ಬಲ ಹಾಗೂ ಸ್ಥೈರ್ಯವನ್ನು ದೇವರ ವಾಕ್ಯದಿಂದ ಪಡೆದಳು. (ಇಬ್ರಿ. 4:12) ದೇವರ ವಾಕ್ಯ ವಾಗ್ದಾನಿಸುವಂತೆ ನೂತನ ಲೋಕದಲ್ಲಿ “ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ” ಎಂಬದು ಅವಳಿಗೆ ಮನದಟ್ಟಾಗಿತ್ತು. (ಪ್ರಕ. 21:4) ಇತರರಲ್ಲಿ ಆಸಕ್ತಿ ವಹಿಸುತ್ತಾ ತನಗೆ ಸಿಕ್ಕಿದ ಪ್ರತಿಯೊಂದು ಸಂದರ್ಭದಲ್ಲಿ ಬೈಬಲ್‌ ಸಂದೇಶದ ಕುರಿತು ಮಾತಾಡಿದಳು. ಲೂಸಿಯಾಳಿಗೆ ಪುನರುತ್ಥಾನದಲ್ಲಿದ್ದ ದೃಢವಿಶ್ವಾಸವು ತನ್ನ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಮತ್ತು ತನ್ನ ಆರೋಗ್ಯ ಸುಧಾರಣೆಯಾಗುವ ನಿರೀಕ್ಷೆಯಿಲ್ಲದಿದ್ದರೂ ನಗುನಗುತ್ತಾ ಇರುವಂತೆ ಸಹಾಯಮಾಡಿತು. (ಯೆಶಾ. 25:8) ಕ್ಯಾನ್ಸರ್‌ ರೋಗವು ಅವಳ ಜೀವವನ್ನು ಬಲಿತೆಗೆದುಕೊಳ್ಳುವವರೆಗೂ ಅವಳಿಗೆ ಅದೇ ಮನೋಭಾವವಿತ್ತು.

ಅದು ನಾನು ಜರೂರಿಯಾದ ಭೇಟಿಯನ್ನು ಗೊತ್ತುಪಡಿಸಿದ ದಿನವಾಗಿತ್ತು. ಅಂದು ಲೂಸಿಯಾಗೆ ಕಣ್ಣು ತೆರೆಯುವುದೂ ಕಷ್ಟಕರವಾಗಿತ್ತು. ಅವಳ ಒಂದು ಕೈಯನ್ನು ನಾನು ಹಿಡಿದಿದ್ದೆ ಮತ್ತೊಂದನ್ನು ಅವಳ ತಂದೆ ಹಿಡಿದಿದ್ದರು. “ಹೆದರಬೇಡ, ನಾನು ಇಲ್ಲೇ ಇದ್ದೇನೆ. ನಿಧಾನವಾಗಿ ಉಸಿರಾಡು. ನೀನು ಕಣ್ತೆರೆದಾಗ ವಾಸಿಯಾಗಿರುವಿ. ಮತ್ತೆ ನಿನಗೆ ನೋವೇ ಇರದು, ನಾನು ನಿನ್ನೊಂದಿಗಿರುವೆ” ಎಂದು ಮೆಲುಧ್ವನಿಯಲ್ಲಿ ಹೇಳಿದೆ.

ಭೇಟಿಯಾಗುವೆ ಎಂದು ಅವಳಿಗೆ ಕೊಟ್ಟ ಮಾತನ್ನು ನಾನು ಉಳಿಸಿಕೊಳ್ಳಲೇಬೇಕು. ಅವಳ ಪುನರುತ್ಥಾನಕ್ಕಾಗಿ ಕಾಯುವುದು ಅಷ್ಟೇನು ಸುಲಭವಲ್ಲ ಎಂದು ನನಗೆ ಗೊತ್ತು. ಆದರೆ ತಾಳ್ಮೆಯಿಂದ ಯೆಹೋವನಲ್ಲಿ ಭರವಸೆಯಿಟ್ಟು ನನ್ನ ಸಮಗ್ರತೆಯನ್ನು ಕಾಪಾಡಿಕೊಂಡರೆ ಮಗಳು ಪುನರುತ್ಥಾನಗೊಂಡು ಬರುವಾಗ ನಾನಲ್ಲಿ ಇರುವೆನೆಂಬುದೂ ನನಗೆ ತಿಳಿದಿದೆ.

ಲೂಸಿಯಾ ಬಿಟ್ಟುಹೋದ ಆಸ್ತಿ

ಲೂಸಿಯಾ ತೋರಿಸಿದ ಧೈರ್ಯ ಹಾಗೂ ಸಭೆಯಲ್ಲಿರುವವರು ನೀಡಿದ ಉತ್ತಮ ಬೆಂಬಲವು ಯೆಹೋವನ ಸಾಕ್ಷಿಯಾಗಿರದ ನನ್ನ ಗಂಡನನ್ನು ತುಂಬ ಪ್ರಭಾವಿಸಿತು. ಲೂಸಿಯಾ ಅಸುನೀಗಿದ ದಿನ, ಯೋಚಿಸಿ ಅವರೊಂದು ನಿರ್ಧಾರ ತೆಗೆದುಕೊಳ್ಳುವುದಾಗಿ ನನಗೆ ಹೇಳಿದರು. ಕೆಲವು ವಾರಗಳ ತರುವಾಯ ತಮಗೊಂದು ಬೈಬಲ್‌ ಅಧ್ಯಯನ ಬೇಕೆಂದು ಅವರು ಸಭಾ ಹಿರಿಯನೊಬ್ಬನಿಗೆ ಕೇಳಿಕೊಂಡರು. ಶೀಘ್ರದಲ್ಲೇ ನನ್ನ ಪತಿ ಎಲ್ಲಾ ಕೂಟಗಳಿಗೆ ಹಾಜರಾಗಲು ಆರಂಭಿಸಿದರು. ಸಿಗರೇಟ್‌ ಸೇದುವ ಚಟವನ್ನು ಬಿಟ್ಟುಬಿಡಲು ಅವರು ಈ ಹಿಂದೆ ತುಂಬ ಪ್ರಯತ್ನಿಸಿದ್ದರಾದರೂ ಅವರು ವಿಫಲರಾಗಿದ್ದರು. ಆದರೆ ಈಗ ಯೆಹೋವನ ಸಹಾಯದಿಂದ ಅದನ್ನು ಬಿಟ್ಟುಬಿಟ್ಟಿದ್ದಾರೆ.

ಲೂಸಿಯಾ ಅಗಲಿದ ದುಃಖದ ಛಾಯೆಯು ಇನ್ನೂ ಸಂಪೂರ್ಣವಾಗಿ ಮಾಸಿಲ್ಲ. ಆದರೆ ಲೂಸಿಯಾ ಬಿಟ್ಟುಹೋದ ಆಸ್ತಿಗಾಗಿ ನಾನು ಯೆಹೋವನಿಗೆ ಚಿರಋಣಿ. ನಾನು ಮತ್ತು ನನ್ನ ಗಂಡ ಪುನರುತ್ಥಾನದ ಉಜ್ವಲ ನಿರೀಕ್ಷೆಯಿಂದ ಪರಸ್ಪರರನ್ನು ಸಮಾಧಾನಪಡಿಸಿಕೊಳ್ಳುತ್ತೇವೆ. ಲವಲವಿಕೆಯ, ಬಟ್ಟಲು ಕಣ್ಗಳ, ನಕ್ಕರೆ ಕುಳಿ ಬೀಳುವ ಲೂಸಿಯಾಳನ್ನು ಮತ್ತೆ ನೋಡುವ ಸಮಯದ ಕುರಿತೂ ನಾವು ಚಿತ್ರಿಸಿಕೊಳ್ಳುತ್ತೇವೆ.

ನನ್ನ ಮಗಳ ದುರಂತ ಕಥೆಯು ವಿಶೇಷವಾಗಿ ಒಬ್ಬಾಕೆ ನೆರೆಯವಳ ಮನಕಲಕಿತು. ಅವಳ ಮಗನು ಲೂಸಿಯಾ ಹೋಗುತ್ತಿದ್ದ ಶಾಲೆಗೇ ಹೋಗುತ್ತಿದ್ದನು. ಮಳೆಸುರಿಯುತ್ತಿದ್ದ ಒಂದು ಶನಿವಾರ ಬೆಳಗ್ಗೆ ಅವಳು ನಮ್ಮ ಮನೆಗೆ ಬಂದಳು. ಅವಳ ಹನ್ನೊಂದು ವರ್ಷದ ಇನ್ನೊಬ್ಬ ಮಗನು ಕ್ಯಾನ್ಸರ್‌ನಿಂದಲೇ ತೀರಿಹೋಗಿದ್ದನು. ಲೂಸಿಯಾಳ ಕಥೆ ಕೇಳಿಸಿಕೊಂಡ ಆಕೆ ನಮ್ಮನ್ನು ನೋಡಲೆಂದು ಮನೆ ಹುಡುಕಿಕೊಂಡು ಬಂದಿದ್ದಳು. ಲೂಸಿಯಾಳ ಅಗಲುವಿಕೆಯ ದುಃಖವನ್ನು ಹೇಗೆ ತಾಳಿಕೊಳ್ಳುತ್ತಿದ್ದೇನೆ ಎಂದು ವಿಚಾರಿಸಿದಳು. ಮಕ್ಕಳನ್ನು ಕಳೆದುಕೊಂಡಿರುವ ತಮ್ಮಂಥ ತಾಯಂದಿರಿಗೆ ಸಾಂತ್ವನ ನೀಡುವ ಸ್ವ-ಸಹಾಯ ಗುಂಪನ್ನು ರಚಿಸೋಣವೆಂದು ಸಲಹೆಕೊಟ್ಟಳು.

ನಾನು ಅವಳಿಗೆ, ಬೈಬಲ್‌ ವಾಗ್ದಾನವೊಂದರಿಂದ ನಿಜ ಸಾಂತ್ವನ ಪಡೆದುಕೊಂಡಿದ್ದೇನೆಂದೂ ಅದು ಯಾವುದೇ ಮಾನವನು ಕೊಡಸಾಧ್ಯವಿರುವುದಕ್ಕಿಂತಲೂ ಎಷ್ಟೋ ಶ್ರೇಷ್ಠವಾಗಿದೆಯೆಂದೂ ವಿವರಿಸಿದೆ. ಯೋಹಾನ 5:28, 29ರಲ್ಲಿರುವ ಯೇಸುವಿನ ಮಾತುಗಳನ್ನು ನಾನು ಓದಿಹೇಳಿದಾಗ ಆಕೆಯ ಕಣ್ಣುಗಳು ಕಳೆತುಂಬಿ ಅರಳಿದವು. ಅವಳು ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದಳು ಮತ್ತು ಸ್ವಲ್ಪದರಲ್ಲೇ ‘ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯನ್ನು’ ಅನುಭವಿಸಿದಳು. (ಫಿಲಿ. 4:7) ನಾವಿಬ್ಬರೂ ಬೈಬಲ್‌ ಅಧ್ಯಯನಮಾಡುವಾಗ, ನೂತನ ಲೋಕದಲ್ಲಿ ಪುನರುತ್ಥಾನವಾಗಿ ಬರುವ ನಮ್ಮ ಪ್ರಿಯರನ್ನು ಸ್ವಾಗತಿಸುವ ದೃಶ್ಯವನ್ನು ಅನೇಕ ಬಾರಿ ಕಲ್ಪಿಸಿಕೊಳ್ಳುತ್ತೇವೆ.

ಹೌದು ಲೂಸಿಯಾ ತನ್ನ ಅಲ್ಪಾವಧಿಯ ಜೀವನದಲ್ಲಿ ಶಾಶ್ವತವಾಗಿರುವ ಒಂದು ಆಸ್ತಿಯನ್ನು ಬಿಟ್ಟುಹೋಗಿದ್ದಾಳೆ. ಅವಳ ನಂಬಿಕೆಯಿಂದಾಗಿ ನಮ್ಮ ಕುಟುಂಬವು ದೇವರ ಸೇವೆಯಲ್ಲಿ ಐಕ್ಯಗೊಂಡಿದೆ. ಅಲ್ಲದೆ ನಂಬಿಕೆಯಲ್ಲಿ ದೃಢವಾಗಿ ಉಳಿಯುವ ನನ್ನ ಛಲವನ್ನು ಇನ್ನೂ ಪುಷ್ಟೀಕರಿಸಿದೆ. ಮರಣಹೊಂದಿರುವ ನಮ್ಮ ಪ್ರಿಯ ಜನರು ಪುನರುತ್ಥಾನಗೊಳ್ಳುವಾಗ ಅವರನ್ನು ಭೇಟಿಮಾಡುವುದು ಜರೂರಿಯಾಗಿದೆ ಅಲ್ಲವೇ?

[ಪುಟ 20ರಲ್ಲಿರುವ ಚಿತ್ರ]

ಲೂಸಿಯಾ ಬಿಡಿಸಿದ ಪರದೈಸಿನ ಚಿತ್ರ