“ನಿಮ್ಮಲ್ಲಿ ವಿವೇಕಿಯೂ ತಿಳಿವಳಿಕೆಯುಳ್ಳವನೂ ಯಾರು?”
“ನಿಮ್ಮಲ್ಲಿ ವಿವೇಕಿಯೂ ತಿಳಿವಳಿಕೆಯುಳ್ಳವನೂ ಯಾರು?”
“ನಿಮ್ಮಲ್ಲಿ ವಿವೇಕಿಯೂ ತಿಳಿವಳಿಕೆಯುಳ್ಳವನೂ ಯಾರು? ಅವನು ತನ್ನ ಉತ್ತಮ ನಡತೆಯಿಂದ ತನ್ನ ಕಾರ್ಯಗಳನ್ನು ವಿವೇಕಕ್ಕೆ ಹೊಂದಿಕೊಂಡಿರುವ ಸೌಮ್ಯಭಾವದಿಂದ ತೋರಿಸಲಿ.”—ಯಾಕೋ. 3:13, NW.
ನಿಜ ವಿವೇಕಿಯಾದ ವ್ಯಕ್ತಿಯು ಯಾರೆಂಬುದಾಗಿ ನೀವು ನೆನಸುತ್ತೀರಿ? ನಿಮ್ಮ ಹೆತ್ತವರೋ, ಒಬ್ಬ ವೃದ್ಧ ಪುರುಷನೋ ಅಥವಾ ಕಾಲೇಜ್ ಪ್ರೊಫೆಸರರೋ? ವಿವೇಕಿಯು ಯಾರೆಂಬ ನಿಮ್ಮ ವೀಕ್ಷಣೆಯು ನಿಮ್ಮ ಹಿನ್ನೆಲೆ ಮತ್ತು ಸನ್ನಿವೇಶಗಳಿಂದ ಪ್ರಭಾವಿಸಲ್ಪಡಬಹುದು. ಆದರೆ ದೇವರ ಸೇವಕರು ಪ್ರಾಮುಖ್ಯವಾಗಿ ದೇವರ ದೃಷ್ಟಿಯಲ್ಲಿ ಒಬ್ಬನನ್ನು ವಿವೇಕಿಯನ್ನಾಗಿ ಮಾಡುವುದು ಯಾವುದು ಎಂಬದರಲ್ಲಿ ಆಸಕ್ತರಾಗಿದ್ದಾರೆ.
2 ಲೋಕವು ಯಾರನ್ನು ವಿವೇಕಿಗಳೆಂದು ಎಣಿಸುತ್ತದೋ ಅವರೆಲ್ಲರು ದೇವರ ದೃಷ್ಟಿಯಲ್ಲಿ ನಿಜವಾಗಿ ವಿವೇಕಿಗಳಲ್ಲ. ದೃಷ್ಟಾಂತಕ್ಕಾಗಿ, ತಮ್ಮನ್ನು ವಿವೇಕಿಗಳೆಂದು ನೆನಸಿದ್ದ ಮನುಷ್ಯರೊಂದಿಗೆ ಯೋಬನು ಮಾತಾಡಿದನಾದರೂ ಕೊನೆಗೆ ಹೇಳಿದ್ದು: “ನಿಮ್ಮಲ್ಲಿ ಒಬ್ಬ ಜ್ಞಾನಿ [“ವಿವೇಕಿ,” NW]ಯನ್ನಾದರೂ ಕಾಣೆ.” (ಯೋಬ 17:10) ದೇವರ ಜ್ಞಾನವನ್ನು ತಿರಸ್ಕರಿಸಿದ ಕೆಲವರ ವಿಷಯದಲ್ಲಾದರೋ ಅಪೊಸ್ತಲ ಪೌಲನು ಬರೆದದ್ದು: “ತಾವು ಜ್ಞಾನಿ [“ವಿವೇಕಿ,” NW]ಗಳೆಂದು ಹೇಳಿಕೊಂಡು ಹುಚ್ಚರಾದರು.” (ರೋಮಾ. 1:22) ಯೆಹೋವನು ತಾನೇ ಪ್ರವಾದಿ ಯೆಶಾಯನ ಮೂಲಕ ಒತ್ತಿಹೇಳಿದ್ದು: “ಅಯ್ಯೋ, ತಮ್ಮಲ್ಲಿ ತಾವೇ ಜ್ಞಾನಿ [“ವಿವೇಕಿ,” NW]ಗಳೆಂದೂ . . . ಭಾವಿಸಿಕೊಳ್ಳುವವರ ಪಾಡು ಏನು ಹೇಳಲಿ!”—ಯೆಶಾ. 5:21.
3 ಹೀಗೆ ಒಬ್ಬನನ್ನು ನಿಜ ವಿವೇಕಿಯನ್ನಾಗಿ ಮಾಡುವಂಥದ್ದು ಮತ್ತು ಫಲಿತಾಂಶವಾಗಿ ದೇವರ ಮೆಚ್ಚಿಕೆಯನ್ನು ಪಡೆದುಕೊಳ್ಳುವಂತೆ ಮಾಡುವಂಥದ್ದು ಯಾವುದೆಂಬುದನ್ನು ತಿಳಿದುಕೊಳ್ಳುವ ಅಗತ್ಯ ನಮಗಿದೆ. ಜ್ಞಾನೋಕ್ತಿ 9:10 (NW) ನಮಗೆ ಈ ಒಳನೋಟವನ್ನು ಕೊಡುತ್ತದೆ: “ಯೆಹೋವನ ಭಯವೇ ವಿವೇಕಕ್ಕೆ ಮೂಲವು, ಪರಿಶುದ್ಧನ ಜ್ಞಾನವೇ ತಿಳಿವಳಿಕೆಯು.” ವಿವೇಕಿಗಳಿಗೆ ದೇವರ ಯೋಗ್ಯವಾದ ಭಯವೂ ಆತನ ನೀತಿಯ ಮಟ್ಟಗಳ ಕಡೆಗೆ ಗೌರವವೂ ಇರಬೇಕು. ಆದರೂ ದೇವರು ಅಸ್ತಿತ್ವದಲ್ಲಿದ್ದಾನೆ ಮತ್ತು ಆತನಿಗೆ ನೀತಿಯ ಮಟ್ಟಗಳಿವೆ ಎಂದು ಕೇವಲ ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚಿನದ್ದು ಬೇಕಾಗಿದೆ. ಇದರ ಕುರಿತು ಶಿಷ್ಯ ಯಾಕೋಬನು ನಮ್ಮ ಯೋಚನಾಶಕ್ತಿಯನ್ನು ಚೇತರಿಸುತ್ತಾನೆ. (ಯಾಕೋಬ 3:13 ಓದಿ.) “ಅವನು ತನ್ನ ಉತ್ತಮ ನಡತೆಯಿಂದ ತನ್ನ ಕಾರ್ಯಗಳನ್ನು . . . ತೋರಿಸಲಿ,” ಎಂಬ ಅಭಿವ್ಯಕ್ತಿಯನ್ನು ಗಮನಿಸಿರಿ. ನಿಜ ವಿವೇಕವು ನಿಮ್ಮ ದಿನನಿತ್ಯದ ನಡವಳಿಕೆ ಮತ್ತು ಮಾತುಗಳಲ್ಲಿ ತೋರಿಬರಬೇಕೆಂದು ಅದು ಹೇಳುತ್ತದೆ.
4 ನಿಜ ವಿವೇಕದಲ್ಲಿ, ಯೋಗ್ಯ ತೀರ್ಮಾನ ಮಾಡುವುದು ಹಾಗೂ ಜ್ಞಾನ ಮತ್ತು ತಿಳಿವಳಿಕೆಯನ್ನು ಯಶಸ್ವಿಕರ ರೀತಿಯಲ್ಲಿ ಅನ್ವಯಿಸುವುದು ಒಳಗೊಂಡಿದೆ. ಅಂಥ ವಿವೇಕವು ನಮ್ಮಲ್ಲಿದೆ ಎಂಬುದನ್ನು ಯಾವ ಕಾರ್ಯಗಳು ಪ್ರಕಟಪಡಿಸುತ್ತವೆ? ವಿವೇಕಿಗಳಾಗಿರುವವರ ಕ್ರಿಯೆಗಳಲ್ಲಿ ತೋರಿಬರುವ ಹಲವಾರು ಸಂಗತಿಗಳನ್ನು ಯಾಕೋಬನು ಪಟ್ಟಿಮಾಡುತ್ತಾನೆ. * ನಮ್ಮ ಜೊತೆ ವಿಶ್ವಾಸಿಗಳೊಂದಿಗೆ ಹಾಗೂ ಸಭೆಯ ಹೊರಗಣ ಜನರೊಂದಿಗೆ ಸುಸಂಬಂಧಗಳನ್ನು ಇಡಲಿಕ್ಕಾಗಿ ಯಾವುದು ನೆರವಾಗಬಲ್ಲದೆಂದು ಅವನು ಹೇಳಿದನು?
ಕ್ರಿಯೆಗಳು ನಿಜ ವಿವೇಕಿಯನ್ನು ಗುರುತಿಸುತ್ತವೆ
5 ಯಾಕೋಬನು ವಿವೇಕವನ್ನು ಒಳ್ಳೆಯ ನಡತೆಗೆ ಜೋಡಿಸಿರುವ ಈ ಸಂಗತಿಯು ಪುನರಾವರ್ತನೆಗೆ ಅರ್ಹವಾಗಿದೆ. ಯೆಹೋವನ ಭಯವೇ ವಿವೇಕದ ಆರಂಭವಾಗಿರುವುದರಿಂದ, ವಿವೇಕಿಯಾದ ವ್ಯಕ್ತಿಯು ದೇವರ ಮಾರ್ಗಗಳಿಗೆ ಹಾಗೂ ಮಟ್ಟಗಳಿಗೆ ಹೊಂದಿಕೆಯಲ್ಲಿ ನಡೆಯಲು ಪರಿಶ್ರಮಪಡುತ್ತಾನೆ. ನಾವು ನಿಜ ವಿವೇಕದೊಂದಿಗೆ ಹುಟ್ಟಿಬಂದಿಲ್ಲ. ಆದರೂ ನಾವದನ್ನು ಕ್ರಮದ ಬೈಬಲ್ ಅಧ್ಯಯನ ಮತ್ತು ಧ್ಯಾನದ ಮೂಲಕ ಗಳಿಸಬಲ್ಲೆವು. ಅವು ನಮಗೆ ‘ದೇವರನ್ನು ಅನುಸರಿಸುವವರಾಗಿರಿ’ ಎಂಬ ಎಫೆಸ 5:1ರ ಬುದ್ಧಿವಾದವನ್ನು ಪಾಲಿಸಲು ಸಹಾಯಮಾಡುವವು. ಎಷ್ಟು ಹೆಚ್ಚಾಗಿ ನಾವು ಯೆಹೋವನ ವ್ಯಕ್ತಿತ್ವಕ್ಕೆ ಅನುಸಾರವಾಗಿ ನಡೆಯಲು ಪ್ರಯತ್ನಿಸುತ್ತೇವೋ ಅಷ್ಟು ಹೆಚ್ಚಾಗಿ ನಮ್ಮ ಕಾರ್ಯಗಳಲ್ಲಿ ವಿವೇಕವನ್ನು ಪ್ರದರ್ಶಿಸುವೆವು. ಯೆಹೋವನ ಮಾರ್ಗಗಳು ಮಾನವ ಮಾರ್ಗಗಳಿಗಿಂತ ಎಷ್ಟೋ ಉನ್ನತವಾಗಿವೆ. (ಯೆಶಾ. 55:8, 9) ಆದುದರಿಂದ ಯೆಹೋವನು ಮಾಡುವ ರೀತಿಯಲ್ಲಿ ನಾವು ವಿಷಯಗಳನ್ನು ಮಾಡುವಾಗ ಕ್ರೈಸ್ತ ಸಭೆಯ ಹೊರಗಿನವರು ನಮ್ಮ ನಡತೆಯಲ್ಲಿ ಏನೋ ವ್ಯತ್ಯಾಸವಿದೆ ಎಂಬುದನ್ನು ಖಂಡಿತ ಕಾಣುತ್ತಾರೆ.
6 ನಾವು ಯೆಹೋವನಂತೆ ಇರುವ ಒಂದು ವಿಧಾನವು ‘ವಿವೇಕಕ್ಕೆ ಹೊಂದಿಕೊಂಡಿರುವ ಸೌಮ್ಯಭಾವವನ್ನು’ ತೋರಿಸುವ ಮೂಲಕವೇ ಎಂದು ಯಾಕೋಬನು ಹೇಳುತ್ತಾನೆ. ಸೌಮ್ಯತೆಯಲ್ಲಿ ಕೋಮಲಭಾವ ಒಳಗೂಡಿದೆಯಾದರೂ ಕ್ರೈಸ್ತರಿಗೆ ಸಮಚಿತ್ತರಾಗಿ ವರ್ತಿಸಲು ಬೈಬಲ್ ಮಟ್ಟಗಳಲ್ಲಿ ಮತ್ತು ಮೂಲತತ್ತ್ವಗಳಲ್ಲಿ ಅವರ ನೈತಿಕ ಗುಣಾಧಿಕ್ಯ ಹಾಗೂ ದೃಢತೆಯು ಬಲವನ್ನು ಕೊಡಬಲ್ಲದು. ದೇವರ ಶಕ್ತಿ ಅಪರಿಮಿತವಾಗಿದ್ದರೂ ಆತನು ಸೌಮ್ಯನು, ಆತನನ್ನು ಸಮೀಪಿಸಲು ನಾವು ಭಯಪಡುವುದಿಲ್ಲ. ದೇವರ ಕುಮಾರನು ತನ್ನ ತಂದೆಯ ಸೌಮ್ಯತೆಯನ್ನು ಎಷ್ಟು ಚೆನ್ನಾಗಿ ಪ್ರತಿಬಿಂಬಿಸಿದನೆಂದರೆ ಅವನು ಹೀಗೆ ಹೇಳಶಕ್ತನಾದನು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ [“ಸೌಮ್ಯಸ್ವಭಾವದವನೂ,” NW] ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ.”—ಮತ್ತಾ. 11:28, 29; ಫಿಲಿ. 2:5-8.
7 ಸೌಮ್ಯತೆ ಅಥವಾ ದೀನತೆಯಲ್ಲಿ ಆದರ್ಶರಾಗಿದ್ದ ಇತರರ ಕುರಿತೂ ಬೈಬಲು ತಿಳಿಸುತ್ತದೆ. ಅವರಲ್ಲಿ ಮೋಶೆಯು ಒಬ್ಬನು. ಅವನಿಗೆ ಮಹತ್ತಾದ ಜವಾಬ್ದಾರಿಗಳಿದ್ದವು ಆದರೂ ಅವನನ್ನು “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು” ಅಥವಾ ದೀನನು ಎಂದು ವರ್ಣಿಸಲಾಗಿದೆ. (ಅರಣ್ಯ. 11:29; 12:3) ದೇವರ ಚಿತ್ತವನ್ನು ನಿರ್ವಹಿಸಲು ಯೆಹೋವನು ಮೋಶೆಗೆ ಕೊಟ್ಟ ಬಲವನ್ನು ನೆನಪಿಸಿಕೊಳ್ಳಿರಿ. ತನ್ನ ಉದ್ದೇಶವನ್ನು ಪೂರೈಸಲು ದೀನರಾದ ವ್ಯಕ್ತಿಗಳನ್ನು ಉಪಯೋಗಿಸಲು ಯೆಹೋವನು ಸಂತೋಷಪಟ್ಟನು.
8 ಹೀಗೆ ಅಪರಿಪೂರ್ಣ ಮಾನವರು ಸಹ ‘ವಿವೇಕಕ್ಕೆ ಹೊಂದಿಕೊಂಡಿರುವ ಸೌಮ್ಯಭಾವವನ್ನು’ ತೋರಿಸಲು ಸಾಧ್ಯವಿದೆ ಎಂಬುದು ಸ್ಪಷ್ಟ. ನಮ್ಮ ಕುರಿತಾಗಿ ಏನು? ಈ ಗುಣವನ್ನು ತೋರಿಸುವುದರಲ್ಲಿ ನಾವು ಹೇಗೆ ಪ್ರಗತಿ ಮಾಡಬಲ್ಲೆವು? ಸೌಮ್ಯಭಾವ ಅಥವಾ ಸಾಧುತ್ವ ದೇವರ ಪವಿತ್ರಾತ್ಮದ ಒಂದು ಫಲವಾಗಿದೆ. (ಗಲಾ. 5:22, 23) ನಾವು ದೇವರ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುತ್ತಾ ಅದರ ಫಲವನ್ನು ತೋರಿಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಬಲ್ಲೆವು. ಸೌಮ್ಯಭಾವ ತೋರಿಸುವುದರಲ್ಲಿ ಪ್ರಗತಿಮಾಡಲು ದೇವರಲ್ಲಿ ಭರವಸೆ ನಮಗೆ ನೆರವಾಗುವುದು. ಹಾಗೆ ಮಾಡಲು ಬಲವಾದ ಪ್ರಚೋದನೆಯನ್ನು ಕೀರ್ತನೆಗಾರನ ಈ ಆಶ್ವಾಸನೆಯಲ್ಲಿ ನಾವು ಕಾಣುತ್ತೇವೆ: “[ದೇವರು] ದೀನರಿಗೆ ತನ್ನ ಮಾರ್ಗವನ್ನು ಬೋಧಿಸುವನು.”—ಕೀರ್ತ. 25:9, NIBV.
9 ಆದರೂ ಈ ಕ್ಷೇತ್ರದಲ್ಲಿ ಪ್ರಗತಿ ಮಾಡಲು ಯಥಾರ್ಥ ಪ್ರಯತ್ನವು ಅತ್ಯಾವಶ್ಯಕ. ನಾವು ಹುಟ್ಟಿಬೆಳೆದ ಹಿನ್ನೆಲೆಯ ಕಾರಣದಿಂದಾಗಿ ನಮ್ಮಲ್ಲಿ ಕೆಲವರು ಸೌಮ್ಯರಾಗಿರದೆ ಇದ್ದೇವು. ಅದಲ್ಲದೆ ನಮ್ಮ ಸುತ್ತಲಿರುವ ಜನರು ನಾವು ಸೌಮ್ಯರಾಗಿರದಂತೆ ಉತ್ತೇಜಿಸುತ್ತಾ ‘ಏಟಿಗೆ ಪ್ರತಿಯೇಟು ಕೊಡಬೇಕು’ ಎಂದು ಹೇಳಾರು. ಆದರೆ ಇದು ನಿಜವಾಗಿಯೂ ವಿವೇಕದ ಮಾರ್ಗವೋ? ನಿಮ್ಮ ಮನೆಯಲ್ಲಿ ಒಂದು ಚಿಕ್ಕ ಬೆಂಕಿ ತಗಲಿದರೆ ನೀವದನ್ನು ಎಣ್ಣೆಯಿಂದ ಆರಿಸಲು ಪ್ರಯತ್ನಿಸುವಿರೋ ಇಲ್ಲವೇ ತಣ್ಣೀರಿನಿಂದಲೋ? ಉರಿಯುವ ಬೆಂಕಿಗೆ ಎಣ್ಣೆ ಸುರಿದರೆ ಉರಿಯು ಉಕ್ಕೇರದೇ? ತಣ್ಣೀರು ಮಾತ್ರವೇ ಅದನ್ನು ಆರಿಸುತ್ತದಲ್ಲಾ. ಅದೇ ರೀತಿ ಬೈಬಲು ಅನ್ನುವುದು: “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು.” (ಜ್ಞಾನೋ. 15:1, 18) ಸಭೆಯ ಒಳಗಾಗಲಿ ಹೊರಗಾಗಲಿ, ಮುಂದೆ ಯಾವಾಗಲಾದರೂ ನಮಗೆ ಸಿಟ್ಟು ಬಂದಲ್ಲಿ ಸೌಮ್ಯತೆಯಿಂದ ಪ್ರತಿವರ್ತಿಸುವ ಮೂಲಕ ನಮ್ಮಲ್ಲಿ ನಿಜ ವಿವೇಕವು ಇದೆಯೆಂದು ನಾವು ತೋರಿಸಬಲ್ಲೆವು.—2 ತಿಮೊ. 2:24.
10 ಮೇಲೆ ಗಮನಿಸಿದ ಪ್ರಕಾರ, ಲೋಕದ ಆತ್ಮದಿಂದ ಪ್ರಭಾವಿತರಾದ ಅನೇಕರು ಮೃದು ಸ್ವಭಾವಿಗಳೂ ಸಮಾಧಾನಿಗಳೂ ಶಾಂತರೂ ಆಗಿರುವುದಿಲ್ಲ. ಬದಲಾಗಿ ಒರಟರೂ ಅಹಂಕಾರಿಗಳೂ ಆಗಿರುವ ಜನರೇ ಹೆಚ್ಚಾಗಿರುವುದನ್ನು ನಾವು ಕಾಣುತ್ತೇವೆ. ಶಿಷ್ಯ ಯಾಕೋಬನಿಗೆ ಇದರ ಅರಿವಿತ್ತು. ಆದುದರಿಂದಲೇ ಅಂಥ ಆತ್ಮದಿಂದ ಭ್ರಷ್ಟರಾಗುವುದನ್ನು ತಪ್ಪಿಸಲು ಅವನು ಸಭೆಯ ಸದಸ್ಯರನ್ನು ಎಚ್ಚರಿಸಿದನು. ಅವನು ಕೊಟ್ಟ ಬುದ್ಧಿವಾದದಿಂದ ನಾವು ಹೆಚ್ಚೇನನ್ನು ಕಲಿಯಸಾಧ್ಯವಿದೆ?
ಅವಿವೇಕಿಗಳ ಗುಣಲಕ್ಷಣಗ
11 ದೈವಿಕ ವಿವೇಕಕ್ಕೆ ನೇರ ವಿರುದ್ಧವಾಗಿರುವ ಗುಣಲಕ್ಷಣಗಳ ಕುರಿತು ಯಾಕೋಬನು ಮುಚ್ಚುಮರೆಯಿಲ್ಲದೆ ಬರೆದಿದ್ದಾನೆ. (ಯಾಕೋಬ 3:14 ಓದಿ.) ಮತ್ಸರವೂ ಪಕ್ಷಬೇಧವೂ ಶರೀರಾಧೀನ ಪ್ರವೃತ್ತಿಗಳಾಗಿವೆಯೇ ಹೊರತು ಆಧ್ಯಾತ್ಮಿಕವಾದವುಗಳಲ್ಲ. ಈ ಶರೀರಾಧೀನ ಸ್ವಭಾವಗಳು ಸಭೆಯಲ್ಲಿರುವಾಗ ಏನಾಗುತ್ತದೆಂದು ಗಮನಿಸಿರಿ: ಯೆರೂಸಲೇಮಿನಲ್ಲಿರುವ ಹೋಲಿ ಸೆಪುಲ್ಕರ್ ಚರ್ಚನ್ನು ಯೇಸು ಮರಣಪಟ್ಟು ಹೂಣಲಾಗಿದ್ದ ಸ್ಥಳದಲ್ಲಿ ಕಟ್ಟಲಾಗಿದೆ ಎನ್ನುತ್ತಾರೆ. ಆದರೆ ಆ ಚರ್ಚಿನ ಭಾಗಗಳನ್ನು ಆರು ವಿಭಿನ್ನ “ಕ್ರೈಸ್ತ” ಗುಂಪುಗಳು ಹತೋಟಿಯಲ್ಲಿಟ್ಟುಕೊಂಡಿದ್ದು ಅಲ್ಲಿ ಸದಾ ಜಗಳ ನಡೆಯುತ್ತಿರುತ್ತದೆ. ಇಸವಿ 2006ರಲ್ಲಿ ಟೈಮ್ ಪತ್ರಿಕೆಯು ಮುಂಚಿನ ಒಂದು ಸನ್ನಿವೇಶದ ಕುರಿತು ತಿಳಿಸುತ್ತಾ, ಅಲ್ಲಿನ ಮಠೀಯ ಸನ್ಯಾಸಿಗಳು “ದೊಡ್ಡ ದೊಡ್ಡ ಮೋಂಬತ್ತಿ ಕೈದಂಡಗಳಿಂದ ಒಬ್ಬರನ್ನೊಬ್ಬರು ಗುದ್ದಿ ಬಡಿಯುತ್ತಾ . . . ಗಂಟೆಗಟ್ಟಲೆ ಪರಸ್ಪರ ಕಚ್ಚಾಡುತ್ತಿದ್ದರು” ಎಂದು ಹೇಳಿದೆ. ಅವರ ಮಧ್ಯೆ ಎಷ್ಟೊಂದು ಅಪನಂಬಿಕೆ ಇದೆಯೆಂದರೆ ಆ ಚರ್ಚಿನ ಕೀಲಿಕೈಯನ್ನು ಸಹ ಒಬ್ಬ ಮುಸಲ್ಮಾನ ವ್ಯಕ್ತಿಯ ವಶದಲ್ಲಿಡಲಾಗಿದೆ.
12 ಇಂಥ ಅತಿರೇಕ ಪಕ್ಷಬೇಧದ ಕಚ್ಚಾಟಗಳು ನಿಜ ಕ್ರೈಸ್ತ ಸಭೆಯಲ್ಲಿ ಖಂಡಿತವಾಗಿ ಇರಬಾರದು. ಆದಾಗ್ಯೂ, ಅಪರಿಪೂರ್ಣತೆಯಿಂದಾಗಿ ಕೆಲವರು ತಮ್ಮ ಸ್ವಂತ ಅಭಿಪ್ರಾಯಗಳ ವಿಷಯದಲ್ಲಿ ಕೆಲವೊಮ್ಮೆ ಹಟಮಾರಿಗಳಾಗಿ ವರ್ತಿಸಿದ್ದಾರೆ. ಇದು ಕೆಲವು ಸಾರಿ ಒಂದಿಷ್ಟು ಜಗಳ ಮತ್ತು ಕಲಹಗಳಿಗೆ ನಡಿಸಸಾಧ್ಯವಿದೆ. ಇದನ್ನು ಅಪೊಸ್ತಲ ಪೌಲನು ಕೊರಿಂಥದ ಸಭೆಯಲ್ಲಿ ಗಮನಿಸಿದನು. ಆದುದರಿಂದ ಅವನು ಬರೆದದ್ದು: “ನಿಮ್ಮೊಳಗೆ ಹೊಟ್ಟೇಕಿಚ್ಚು ಜಗಳಗಳು ಇರುವಲ್ಲಿ ನೀವು ಶರೀರಾಧೀನಸ್ವಭಾವವುಳ್ಳವರಾಗಿದ್ದು ಕೇವಲ ನರಪ್ರಾಣಿಗಳಂತೆ ನಡೆಯುತ್ತೀರಲ್ಲವೇ.” (1 ಕೊರಿಂ. 3:3) ಈ ವಿಷಾದಕರ ಸನ್ನಿವೇಶವು ಒಂದನೇ ಶತಮಾನದ ಈ ಸಭೆಯಲ್ಲಿ ಸ್ವಲ್ಪ ಸಮಯದ ತನಕ ಅಸ್ತಿತ್ವದಲ್ಲಿತ್ತು. ಆದುದರಿಂದ ಅಂಥ ಪ್ರವೃತ್ತಿಯು ಇಂದು ಸಭೆಯನ್ನು ಪ್ರವೇಶಿಸದಂತೆ ನಾವು ಜಾಗ್ರತೆ ವಹಿಸುವ ಅಗತ್ಯವಿದೆ.
13 ಅಂಥ ಪ್ರವೃತ್ತಿಯು ಸಭೆಯೊಳಗೆ ನುಸುಳುವುದು ಹೇಗೆ ಸಾಧ್ಯ? ಅದು ಚಿಕ್ಕಚಿಕ್ಕ ವಿಷಯಗಳಲ್ಲಿ ಆರಂಭಿಸಬಹುದು. ಉದಾಹರಣೆಗೆ, ರಾಜ್ಯ ಸಭಾಗೃಹವೊಂದು ಕಟ್ಟಲ್ಪಡುತ್ತಿರುವಾಗ ವಿಷಯಗಳನ್ನು ಹೇಗೆ ನಿರ್ವಹಿಸಬೇಕೆಂಬುದರ ಬಗ್ಗೆ ಭಿನ್ನಾಭಿಪ್ರಾಯಗಳು ಏಳಬಹುದು. ಒಬ್ಬ ಸಹೋದರನು ತನ್ನ ಸಲಹೆಯು ಸ್ವೀಕರಿಸಲ್ಪಡದಿದ್ದಲ್ಲಿ ಕಲಹವೆಬ್ಬಿಸಲು ತೊಡಗಾನು. ಮಾಡಲಾದ ನಿರ್ಣಯಗಳನ್ನು ಟೀಕಿಸುತ್ತಾ ಅಸಮ್ಮತಿಯನ್ನು ಸೂಚಿಸ್ಯಾನು. ರಾಜ್ಯ ಸಭಾಗೃಹದ ಕಟ್ಟುವಿಕೆಯಲ್ಲಿ ಮುಂದೆ ಯಾವುದೇ ಕೆಲಸ ಮಾಡಲು ಅವನು ನಿರಾಕರಿಸಲೂಬಹುದು! ಈ ರೀತಿಯಲ್ಲಿ ವರ್ತಿಸುವ ವ್ಯಕ್ತಿಯು ಒಂದು ವಿಷಯನ್ನು ಮರೆಯುತ್ತಾನೆ ಏನಂದರೆ, ಸಭೆಯು ಮಾಡುವ ಒಂದು ಕೆಲಸದ ಪೂರೈಸುವಿಕೆಯು ಹೆಚ್ಚಾಗಿ ಸಭೆಯ ಶಾಂತಿಭರಿತ ಸ್ಥಿತಿಯ ಮೇಲೆ ಹೊಂದಿಕೊಂಡಿದೆ, ಬಳಸಲಾಗುವ ಒಂದು ನಿರ್ದಿಷ್ಟ ವಿಧಾನದ ಮೇಲಲ್ಲ ಎಂಬದನ್ನೇ. ಯೆಹೋವನು ಆಶೀರ್ವದಿಸುವುದು ಸೌಮ್ಯ ಸ್ವಭಾವವನ್ನೇ, ಕಚ್ಚಾಟಗಳನ್ನಲ್ಲ.—1 ತಿಮೊ. 6:4, 5.
14 ಇನ್ನೊಂದು ಉದಾಹರಣೆಯು ಹೀಗಿರಬಹುದು. ಒಬ್ಬನು ಕೆಲವು ವರ್ಷಗಳಿಂದ ಹಿರಿಯನಾಗಿ ಸೇವೆಮಾಡುತ್ತಿದ್ದರೂ ಈಗ ಶಾಸ್ತ್ರಾಧಾರಿತ ಅರ್ಹತೆಗಳನ್ನು ಮುಟ್ಟುವುದಿಲ್ಲ ಎಂದು ಸಭೆಯ ಹಿರಿಯರಿಗೆ ಕಂಡುಬರುತ್ತದೆ. ಆ ಸಹೋದರನಿಗೆ ನಿರ್ದಿಷ್ಟ ಸಲಹೆ ಸೂಚನೆಗಳು ಹಿಂದೆ ದೊರೆತಿತ್ತಾದರೂ ಅವನು ಪ್ರಗತಿ ಮಾಡದೆ ಇರುವುದನ್ನು ಸರ್ಕಿಟ್ ಮೇಲ್ವಿಚಾರಕನು ಗಮನಿಸುತ್ತಾ ಅವನನ್ನು ಹಿರಿಯ ಸ್ಥಾನದಿಂದ ತೆಗೆದುಬಿಡುವ ಶಿಫಾರಸ್ಸಿಗೆ ಸಮ್ಮತಿಸುತ್ತಾನೆ. ಹಿರಿಯ ಸ್ಥಾನದಿಂದ ತೆಗೆಯಲ್ಪಟ್ಟವನು ಅದನ್ನು ಹೇಗೆ ವೀಕ್ಷಿಸುತ್ತಾನೆ? ಹಿರಿಯರ ಸರ್ವಾನುಮತದ ತೀರ್ಮಾನವನ್ನು ಹಾಗೂ ಶಾಸ್ತ್ರಾಧಾರಿತ ಬುದ್ಧಿವಾದವನ್ನು ದೀನತೆ ಮತ್ತು ಸೌಮ್ಯತೆಯಿಂದ ಸ್ವೀಕರಿಸಿ, ಇನ್ನೊಂದು ಸಲ ಆ ಸೇವೆ ಮಾಡಲಾಗುವಂತೆ ಶಾಸ್ತ್ರಾಧಾರಿತ ಅರ್ಹತೆಗಳನ್ನು ಮುಟ್ಟುವ ದೃಢನಿಶ್ಚಯ ಮಾಡುತ್ತಾನೋ? ಇಲ್ಲವೇ ತಾನು ಕಳಕೊಂಡ ಸೇವಾ ಸುಯೋಗಕ್ಕಾಗಿ ಸಿಟ್ಟನ್ನೂ ಅಸೂಯೆಯನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳುವನೋ? ಬೇರೆ ಹಿರಿಯರೆಲ್ಲರು ಅವನು ಅರ್ಹನಲ್ಲವೆಂದು ತೀರ್ಮಾನಿಸಿರಲಾಗಿ ತಾನು ಹಿರಿಯನಾಗಿರಲು ಅರ್ಹನಾಗಿದ್ದೇನೆಂದು ಸಹೋದರನೊಬ್ಬನು ಪಟ್ಟುಹಿಡಿಯುವುದೇಕೆ? ಬದಲಿಗೆ ಅವನು ದೀನನೂ ತಿಳಿವಳಿಕೆಯುಳ್ಳವನಾಗಿರುವುದೂ ಎಷ್ಟೊಂದು ವಿವೇಕತನ!
15 ಬೇರೆ ಸನ್ನಿವೇಶಗಳೂ ಒಬ್ಬನನ್ನು ತದ್ರೀತಿಯ ಮನೋಭಾವಕ್ಕೆ ನಡಿಸುತ್ತವೆಂಬುದು ಗ್ರಾಹ್ಯ. ಆದರೆ ಯಾವುದೇ ಸನ್ನಿವೇಶವು ತಲೆದೋರಲಿ ಅಂಥ ಪ್ರವೃತ್ತಿಗಳಿಂದ ದೂರವಿರಲು ನಾವು ಶ್ರಮಿಸಬೇಕು. (ಯಾಕೋಬ 3:15, 16 ಓದಿ.) ಅಂಥ ಪ್ರವೃತ್ತಿಗಳನ್ನು ಶಿಷ್ಯ ಯಾಕೋಬನು “ಭೂಸಂಬಂಧವಾದದ್ದು” ಎಂದು ಕರೆದನು ಏಕೆಂದರೆ ಅವು ಶರೀರಾಧೀನವಾದವುಗಳೂ ಆಧ್ಯಾತ್ಮಿಕವಲ್ಲದವುಗಳೂ ಆಗಿವೆ. ಅವು “ಪ್ರಾಕೃತಭಾವವಾದದ್ದು” ಎಂದು ವರ್ಣಿಸಲಾಗಿರುವುದು ಏಕೆಂದರೆ ಅವು ವಿವೇಚನೆಯನ್ನರಿಯದ ಪಶು ಸ್ವಭಾವಕ್ಕೆ ಸಮಾನವಾಗಿವೆ. ಅಂಥ ಮನೋಭಾವಗಳು “ದೆವ್ವಗಳಿಗೆ ಸಂಬಂಧಪಟ್ಟದ್ದು” ಸಹ ಆಗಿವೆ ಏಕೆಂದರೆ ದೇವರ ಆತ್ಮ-ಜೀವಿ ಶತ್ರುಗಳ ಪ್ರವೃತ್ತಿಗಳನ್ನು ಅವು ಪ್ರತಿಬಿಂಬಿಸುತ್ತವೆ. ಆ ಗುಣಲಕ್ಷಣಗಳನ್ನು ಕ್ರೈಸ್ತನು ಪ್ರದರ್ಶಿಸುವುದು ಅದೆಷ್ಟು ಅಯೋಗ್ಯ!
16 ಸಭೆಯ ಪ್ರತಿಯೊಬ್ಬ ಸದಸ್ಯನು ತನ್ನನ್ನು ತಾನೇ ಪರೀಕ್ಷಿಸಿಕೊಂಡು ಅಂಥ ಪ್ರವೃತ್ತಿಗಳನ್ನು ವರ್ಜಿಸಲು ಕಾರ್ಯನಡಿಸುವುದು ಒಳ್ಳೆಯದು. ಸಭೆಯಲ್ಲಿ ಬೋಧಕರಾಗಿರುವ ಮೇಲ್ವಿಚಾರಕರು ನಕಾರಾತ್ಮಕ ಮನೋಭಾವಗಳನ್ನು ತಮ್ಮಿಂದ ತೊಲಗಿಸಿಬಿಡುವ ಅಗತ್ಯದ ಪ್ರಜ್ಞೆಯುಳ್ಳವರಾಗಿರಬೇಕು. ನಮ್ಮ ಅಪರಿಪೂರ್ಣತೆ ಮತ್ತು ಈ ದುಷ್ಟ ಲೋಕದ ಪ್ರಭಾವದ ಕಾರಣ ಅಂಥ ಸ್ವಭಾವಗಳನ್ನು ವರ್ಜಿಸುವುದು ಅಷ್ಟೇನು ಸುಲಭವಲ್ಲ. ಕೆಸರಿನಿಂದ ತುಂಬಿದ್ದು ಜಾರುವ ನೆಲವಿರುವ ಒಂದು ಗುಡ್ಡವನ್ನು ಹತ್ತುವುದಕ್ಕೆ ಅದನ್ನು ಹೋಲಿಸಬಹುದು. ಆಸರೆಗಾಗಿ ಏನನ್ನಾದರೂ ಭದ್ರವಾಗಿ ಹಿಡಿಯದ ಹೊರತು ನಾವು ಹಿಂದೆ ಜಾರಿಬೀಳುವುದು ಖಂಡಿತ. ಹಾಗೆಯೇ ದೇವರ ವಾಕ್ಯದ ಬುದ್ಧಿವಾದವನ್ನು ಒತ್ತಾಗಿ ಪಾಲಿಸುವುದರಿಂದ ಮತ್ತು ದೇವರ ಭೂವ್ಯಾಪಕ ಸಭೆಯಿಂದ ನೀಡಲಾಗುವ ಸಹಾಯದಿಂದ ನಾವು ಮುಂದೆ ಸಾಗಬಲ್ಲೆವು.—ಕೀರ್ತ. 73:23, 24.
ವಿವೇಕಿಗಳು ಪ್ರದರ್ಶಿಸಲು ಯತ್ನಿಸುವ ಗುಣಗಳು
17ಯಾಕೋಬ 3:17 ಓದಿ. “ಮೇಲಣಿಂದ ಬರುವ ಜ್ಞಾನ” ಅಥವಾ ವಿವೇಕವನ್ನು ಪ್ರದರ್ಶಿಸುವುದರಿಂದ ಬರುವ ಕೆಲವು ಗುಣಗಳನ್ನು ಗಮನಿಸುವ ಮೂಲಕ ನಾವು ಪ್ರಯೋಜನ ಹೊಂದಬಲ್ಲೆವು. ಪರಿಶುದ್ಧರಾಗಿರುವುದು ಎಂದರೆ ನಮ್ಮ ಕ್ರಿಯೆಗಳಲ್ಲಿ ಮತ್ತು ಹೇತುಗಳಲ್ಲಿ ಶುದ್ಧರೂ ನಿಷ್ಕಳಂಕರೂ ಆಗಿರುವುದೇ. ಕೆಟ್ಟ ವಿಷಯಗಳನ್ನು ಕೂಡಲೇ ತ್ಯಜಿಸಿಬಿಡುವ ಅಗತ್ಯ ನಮಗಿದೆ. ಹಾಗೆ ಮಾಡುವುದು ಒಂದು ಸ್ವಯಂಚಾಲಿಕ ಪ್ರತಿಕ್ರಿಯೆಯಾಗಿರಬೇಕು. ನಮ್ಮ ಕಣ್ಣಿಗೆ ಯಾರಾದರೂ ಬೆರಳು ಹಾಕುವಂತಿದ್ದರೆ ಕೂಡಲೇ ಕಣ್ಣು ಮುಚ್ಚುತ್ತೇವೆ. ಅದು ಸ್ವಯಂಚಾಲಿಕ; ಅದಕ್ಕಾಗಿ ಯೋಚಿಸಬೇಕೆಂತಿಲ್ಲ. ಕೆಟ್ಟದ್ದನ್ನು ಮಾಡುವ ಪ್ರಲೋಭನೆ ಬಂದಾಗ ನಮ್ಮ ಪ್ರತಿಕ್ರಿಯೆ ಸಹ ಹಾಗೆಯೇ ಇರಬೇಕು. ಪರಿಶುದ್ಧತೆ ಮತ್ತು ಬೈಬಲ್ ಶಿಕ್ಷಿತ ಮನಸ್ಸಾಕ್ಷಿ ಕೆಟ್ಟದ್ದನ್ನು ತಿರಸ್ಕರಿಸಲು ಸ್ವಯಂಚಾಲಿಕವಾಗಿಯೇ ನಮ್ಮನ್ನು ಪ್ರೇರಿಸಬೇಕು. (ರೋಮಾ. 12:9) ಈ ರೀತಿಯಲ್ಲಿ ಪ್ರತಿವರ್ತಿಸಿದ ಯೋಸೇಫ ಮತ್ತು ಯೇಸುವಿನಂಥ ಮಾದರಿಗಳ ಕುರಿತು ಬೈಬಲು ತಿಳಿಸುತ್ತದೆ.—ಆದಿ. 39:7-9; ಮತ್ತಾ. 4:8-10.
18 ಮೇಲಣಿಂದ ಬರುವ ವಿವೇಕವು ನಾವು ಸಮಾಧಾನಪ್ರಿಯರಾಗಿ ಇರುವಂತೆಯೂ ಅವಶ್ಯಪಡಿಸುತ್ತದೆ. ಇದರಲ್ಲಿ ಆಕ್ರಮಣಶೀಲತೆ, ಕಲಹಪ್ರಿಯ ಮನೋಭಾವ ಅಥವಾ ಶಾಂತಿಭಂಗಗೊಳಿಸುವ ಕೃತ್ಯಗಳಿಂದ ದೂರವಿರುವುದೂ ಸೇರಿದೆ. ಯಾಕೋಬನು ಈ ವಿಷಯದ ಕುರಿತು ಅಧಿಕ ವಿವರವನ್ನು ಕೊಡುತ್ತಾ ಅಂದದ್ದು: “ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು.” (ಯಾಕೋ. 3:18) “ಸಮಾಧಾನಪಡಿಸುವವರು” ಎಂಬ ಅಭಿವ್ಯಕ್ತಿಯನ್ನು ಇಲ್ಲಿ ಗಮನಿಸಿರಿ. ಸಭೆಯಲ್ಲಿ ನಾವು ಯಾವುದಕ್ಕೆ ಪ್ರಖ್ಯಾತರು? ಸಮಾಧಾನಪಡಿಸುವುದಕ್ಕೋ ಯಾ ಸಮಾಧಾನ ಕೆಡಿಸುವುದಕ್ಕೋ? ಮುಂಗೋಪಿಗಳೂ ಇತರರನ್ನು ಸಿಟ್ಟಿಗೆಬ್ಬಿಸುವವರೂ ಆಗಿದ್ದು ಆಗಿಂದಾಗ್ಗೆ ಕಲಹಗಳನ್ನೂ ಕಚ್ಚಾಟಗಳನ್ನೂ ನಾವು ನಡಿಸುತ್ತೇವೋ? ‘ನಾನಿರುವುದೇ ಹೀಗೆ! ನೀವು ನನ್ನನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಹಟಹಿಡಿಯುತ್ತೇವೋ ಇಲ್ಲವೇ ಇತರರು ನ್ಯಾಯವಾಗಿ ಇಷ್ಟಪಡದ ನಮ್ಮ ಕೆಟ್ಟ ಸ್ವಭಾವಗಳನ್ನು ತೊರೆದುಬಿಡಲು ದೀನಭಾವದಿಂದ ಪ್ರಯತ್ನಿಸುತ್ತೇವೋ? ಇತರರ ತಪ್ಪುಗಳನ್ನು ಕ್ಷಮಿಸಿ ಮರೆತುಬಿಡಲು ಸಿದ್ಧರಾಗಿರುವ ಮೂಲಕ ಇತರರೊಂದಿಗೆ ಸಮಾಧಾನವನ್ನು ಪ್ರವರ್ಧಿಸುವುದಕ್ಕೆ ನಾವು ಜ್ಞಾತರೋ? ಈ ವಿಷಯದಲ್ಲಿ ದೈವಿಕ ವಿವೇಕವನ್ನು ತೋರಿಸುವುದರಲ್ಲಿ ಪ್ರಗತಿ ಮಾಡುವ ಅಗತ್ಯವಿದೆಯೋ ಎಂದು ನೋಡಲು ಯಥಾರ್ಥ ಸ್ವಪರೀಕ್ಷೆಯು ನಮಗೆ ನೆರವಾಗಬಲ್ಲದು.
19 ಮೇಲಣಿಂದ ಬರುವ ವಿವೇಕದಲ್ಲಿ ವಿವೇಚನಾಶೀಲತೆ ಸಹ ಸೇರಿರುತ್ತದೆ ಎಂದು ಯಾಕೋಬನು ಹೇಳಿದ್ದಾನೆ. ಶಾಸ್ತ್ರಾಧಾರಿತವಾದ ಯಾವುದೇ ಮೂಲತತ್ತ್ವಗಳು ಒಳಗೂಡಿರದೇ ಇದ್ದಾಗ ಬೇರೊಬ್ಬರ ಅಭಿಪ್ರಾಯಕ್ಕೆ ಗೌರವಕೊಡಲು ನಾವು ಸಿದ್ಧರೋ ಇಲ್ಲವೆ ನಮ್ಮ ಸ್ವಂತ ವೈಯಕ್ತಿಕ ಮಟ್ಟಗಳನ್ನೇ ಅನುಸರಿಸಬೇಕೆಂದು ತರಾತುರಿಯಿಂದ ಪಟ್ಟುಹಿಡಿಯುತ್ತೇವೋ? ನಾವು ಮೃದು ಸ್ವಭಾವದವರೋ ಹಾಗೂ ಇತರರು ನಮ್ಮೊಂದಿಗೆ ಸುಲಭವಾಗಿ ಮಾತಾಡಬಲ್ಲರೋ? ಇವೆಲ್ಲವು ನಮ್ಮನ್ನು ವಿವೇಚನಾಶೀಲತೆಯನ್ನು ಕಲಿತ ವ್ಯಕ್ತಿಗಳೆಂದು ಗುರುತಿಸುತ್ತವೆ.
20 ಯಾಕೋಬನು ಬರೆದ ದೈವಿಕ ಗುಣಗಳನ್ನು ಸಹೋದರ ಸಹೋದರಿಯರು ಹೆಚ್ಚೆಚ್ಚಾಗಿ ತೋರಿಸುತ್ತಾ ಹೋಗುವಾಗ ಸಭೆಯಲ್ಲಿ ಎಷ್ಟೊಂದು ಉಲ್ಲಾಸಕರ ಪರಿಸ್ಥಿತಿಯು ನೆಲೆಸಬಲ್ಲದು! (ಕೀರ್ತ. 133:1-3) ಒಬ್ಬರೊಂದಿಗೊಬ್ಬರು ಸೌಮ್ಯಭಾವದಿಂದ, ಸಮಾಧಾನದಿಂದ ಮತ್ತು ವಿವೇಚನಾಶೀಲತೆಯಿಂದ ವರ್ತಿಸುವುದಾದರೆ ನಿಶ್ಚಯವಾಗಿ ನಮ್ಮ ಪರಸ್ಪರ ಸಂಬಂಧ ಉತ್ತಮಗೊಳ್ಳುವುದು ಮತ್ತು ನಮ್ಮಲ್ಲಿ ‘ಮೇಲಣಿಂದ ಬರುವ ವಿವೇಕ’ ಇದೆ ಎಂಬದನ್ನು ಅದು ತೋರಿಸುವುದು. ಈ ವಿಷಯದಲ್ಲಿ, ಯೆಹೋವನು ಇತರರನ್ನು ವೀಕ್ಷಿಸುವ ವಿಧವನ್ನು ಕಲಿಯುವುದು ಹೇಗೆ ನೆರವಾಗಬಲ್ಲದೆಂದು ನಾವು ಮುಂದೆ ನೋಡಲಿದ್ದೇವೆ.
[ಪಾದಟಿಪ್ಪಣಿ]
^ ಪ್ಯಾರ. 6 ಯಾಕೋಬನು ಮೊದಲು ಇದನ್ನು ಸಭೆಯ ಹಿರೀ ಪುರುಷರಿಗಾಗಿ ಅಂದರೆ ‘ಬೋಧಕರಿಗಾಗಿ’ ಬರೆದನೆಂದು ಪೂರ್ವಾಪರ ವಚನಗಳು ತೋರಿಸುತ್ತವೆ. (ಯಾಕೋ. 3:1) ಈ ಪುರುಷರು ನಿಜ ವಿವೇಕವನ್ನು ಪ್ರದರ್ಶಿಸುವುದರಲ್ಲಿ ನಿಶ್ಚಯವಾಗಿ ಮಾದರಿಗಳಾಗಿರತಕ್ಕದ್ದು. ಆದರೂ, ನಾವೆಲ್ಲರೂ ಯಾಕೋಬನ ಬುದ್ಧಿವಾದದಿಂದ ಪ್ರಯೋಜನ ಹೊಂದಬಲ್ಲೆವು.
ವಿವರಿಸಬಲ್ಲಿರೋ?
• ಕ್ರೈಸ್ತನನ್ನು ನಿಜ ವಿವೇಕಿಯನ್ನಾಗಿ ಮಾಡುವುದು ಯಾವುದು?
• ನಿಜ ವಿವೇಕವನ್ನು ತೋರಿಸುವುದರಲ್ಲಿ ನಾವು ಹೇಗೆ ಪ್ರಗತಿಮಾಡಬಲ್ಲೆವು?
• ‘ಮೇಲಣಿಂದ ಬರುವ ವಿವೇಕವನ್ನು’ ತೋರಿಸದವರಲ್ಲಿ ಯಾವ ಗುಣಲಕ್ಷಣಗಳು ಕಂಡುಬರುತ್ತವೆ?
• ಯಾವ ಗುಣಗಳನ್ನು ಹೆಚ್ಚೆಚ್ಚಾಗಿ ಬೆಳೆಸಿಕೊಳ್ಳಲು ನೀವು ದೃಢನಿರ್ಧಾರ ಮಾಡಿದ್ದೀರಿ?
[ಅಧ್ಯಯನ ಪ್ರಶ್ನೆಗಳು]
1, 2. ವಿವೇಕಿಗಳೆಂದು ಪರಿಗಣಿಸಲಾದ ಅನೇಕರ ಕುರಿತು ಏನನ್ನು ಹೇಳಸಾಧ್ಯವಿದೆ?
3, 4. ಒಬ್ಬನು ನಿಜ ವಿವೇಕಿಯಾಗಿರಬೇಕಾದರೆ ಏನು ಅವಶ್ಯ?
5. ನಿಜ ವಿವೇಕಿಯಾದ ವ್ಯಕ್ತಿಯೊಬ್ಬನು ಹೇಗೆ ನಡೆದುಕೊಳ್ಳುತ್ತಾನೆ?
6. ಸೌಮ್ಯತೆಯು ದೈವಭಕ್ತಿಯ ನಿದರ್ಶನವಾಗಿದೆಯೇಕೆ, ಮತ್ತು ಈ ಗುಣವು ತನ್ನಲ್ಲಿದೆ ಎಂದು ಒಬ್ಬನು ಹೇಗೆ ತೋರಿಸಬಹುದು?
7. ಮೋಶೆಯು ಸೌಮ್ಯತೆಯ ಒಳ್ಳೇ ಮಾದರಿಯೆಂದು ನಾವು ಪರಿಗಣಿಸುವುದೇಕೆ?
8. ಅಪರಿಪೂರ್ಣ ಜನರು “ವಿವೇಕಕ್ಕೆ ಹೊಂದಿಕೊಂಡಿರುವ ಸೌಮ್ಯಭಾವ”ವನ್ನು ತೋರಿಸಲು ಹೇಗೆ ಸಾಧ್ಯ?
9, 10. ದೈವಿಕ ಸೌಮ್ಯತೆಯನ್ನು ತೋರಿಸಲು ನಾವು ಯಾವ ಪ್ರಯತ್ನವನ್ನು ಮಾಡಬೇಕು, ಮತ್ತು ಏಕೆ?
11. ಯಾವ ಗುಣಲಕ್ಷಣಗಳು ದೈವಿಕ ವಿವೇಕಕ್ಕೆ ವಿರುದ್ಧವಾಗಿವೆ?
12. ವಿವೇಕದ ಕೊರತೆಯಿರುವಾಗ ಏನು ಸಂಭವಿಸಬಹುದು?
13, 14. ಶರೀರಾಧೀನ ಸ್ವಭಾವವು ಹೇಗೆ ತೋರಿಸಲ್ಪಡಬಹುದೆಂಬುದಕ್ಕೆ ಉದಾಹರಣೆಗಳನ್ನು ಕೊಡಿರಿ.
15. ಯಾಕೋಬ 3:15, 16ರ ಪ್ರೇರಿತ ಬುದ್ಧಿವಾದವು ಏಕೆ ಅಷ್ಟು ಮಹತ್ವವಾದುದೆಂದು ನಿಮಗನಿಸುತ್ತದೆ?
16. ನಾವು ಯಾವ ಹೊಂದಾಣಿಕೆಗಳನ್ನು ಮಾಡುವ ಅಗತ್ಯವಿರಬಹುದು ಮತ್ತು ಹಾಗೆ ಮಾಡುವುದರಲ್ಲಿ ನಾವು ಹೇಗೆ ಯಶಸ್ವಿಗಳಾಗಬಲ್ಲೆವು?
17. ಕೆಟ್ಟತನವು ಎದುರಾದಾಗ ವಿವೇಕಿಗಳು ಸಾಮಾನ್ಯವಾಗಿ ಹೇಗೆ ಪ್ರತಿವರ್ತಿಸುತ್ತಾರೆ?
18. (ಎ) ಸಮಾಧಾನಪ್ರಿಯರು ಎಂಬುದರ ಅರ್ಥವೇನು? (ಬಿ) ಸಮಾಧಾನಪಡಿಸುವವರು ಎಂದರೇನು?
19. ಒಬ್ಬನು ವಿವೇಚನಾಶೀಲ ವ್ಯಕ್ತಿಯೆಂದು ಜ್ಞಾತನಾಗಿರುವುದು ಹೇಗೆ?
20. ನಾವೀಗ ಚರ್ಚಿಸಿದ ದೈವಿಕ ಗುಣಗಳನ್ನು ತೋರಿಸುವಾಗ ಏನು ಪರಿಣಮಿಸುವುದು?
[ಪುಟ 23ರಲ್ಲಿರುವ ಚಿತ್ರ]
ಇಂದು ಕಲಹಗಳು ಹೇಗೆ ನುಸುಳಬಲ್ಲವು?
[ಪುಟ 24ರಲ್ಲಿರುವ ಚಿತ್ರ]
ಕೆಟ್ಟತನವನ್ನು ತಿರಸ್ಕರಿಸುವುದು ನಿಮ್ಮ ಸ್ವಯಂಚಾಲಿಕ ಪ್ರತಿಕ್ರಿಯೆಯೋ?