ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಇತರರನ್ನು ಯೆಹೋವನಂತೆಯೇ ವೀಕ್ಷಿಸುತ್ತೀರೋ?

ನೀವು ಇತರರನ್ನು ಯೆಹೋವನಂತೆಯೇ ವೀಕ್ಷಿಸುತ್ತೀರೋ?

ನೀವು ಇತರರನ್ನು ಯೆಹೋವನಂತೆಯೇ ವೀಕ್ಷಿಸುತ್ತೀರೋ?

‘ದೇಹದಲ್ಲಿ ಭೇದವೇನೂ ಇರದೆ ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸಬೇಕು.’—1 ಕೊರಿಂ. 12:25.

ನಾವು ಈ ದುಷ್ಟ ಲೋಕದಿಂದ ಮೊತ್ತ ಮೊದಲಾಗಿ ನಮ್ಮನ್ನು ಪ್ರತ್ಯೇಕಿಸಿಕೊಂಡು ಯೆಹೋವನ ಜನರೊಂದಿಗೆ ಸಹವಾಸ ಮಾಡಲಾರಂಭಿಸಿದಾಗ, ಅವರ ನಡುವೆ ಇರುವ ಪ್ರೀತಿ ಮತ್ತು ವ್ಯಕ್ತಿಪರ ಆಸಕ್ತಿಯನ್ನು ಅನುಭವಿಸುವುದರಲ್ಲಿ ಎಷ್ಟೊಂದು ಹರ್ಷೋಲ್ಲಾಸಪಟ್ಟೆವು. ಸೈತಾನನ ಹತೋಟಿಯ ಕೆಳಗಿರುವ ಒರಟರೂ ದ್ವೇಷಪರರೂ ಜಗಳಗಂಟರೂ ಆಗಿರುವ ಜನರಿಗಿಂತ ಎಷ್ಟೊಂದು ವ್ಯತ್ಯಾಸ! ಆಗ ನಾವು ಶಾಂತಿ ಮತ್ತು ಐಕ್ಯದಿಂದ ತುಂಬಿದ ಆಧ್ಯಾತ್ಮಿಕ ಪರದೈಸನ್ನು ಪ್ರವೇಶಿಸಿದೆವಲ್ಲಾ.—ಯೆಶಾ. 48:17, 18; 60:18; 65:25.

2 ಆದರೂ ಸಮಯ ದಾಟಿದಷ್ಟಕ್ಕೆ ನಮ್ಮ ಅಪರಿಪೂರ್ಣತೆಯ ಕಾರಣ ನಾವು ನಮ್ಮ ಸಹೋದರರನ್ನು ಸೊಟ್ಟಾದ ನೋಟದಲ್ಲಿ ನೋಡಲಾರಂಭಿಸಬಹುದು. ನಮ್ಮ ಸಹೋದರರಲ್ಲಿ ಇರುವ ಆಧ್ಯಾತ್ಮಿಕ ಗುಣಗಳನ್ನು ನೋಡುವ ಬದಲಿಗೆ ಅವರ ತಪ್ಪುಗಳನ್ನು ಅತಿ ದೊಡ್ಡದು ಮಾಡಿ ನೋಡಲು ನಮ್ಮ ಅಪರಿಪೂರ್ಣತೆ ಕಾರಣಮಾಡೀತು. ಸರಳವಾಗಿ ಹೇಳುವುದಾದರೆ, ಯೆಹೋವನು ಅವರನ್ನು ವೀಕ್ಷಿಸುವ ರೀತಿಯಲ್ಲಿ ಅವರನ್ನು ನೋಡಲು ನಾವು ಮರೆತುಬಿಡುತ್ತೇವೆ. ಇದು ನಮಗೆ ಸಂಭವಿಸುವುದಾದರೆ, ನಮ್ಮ ವೀಕ್ಷಣೆಗೆ ಗಮನಕೊಡುವುದಕ್ಕೆ ಹಾಗೂ ಅದನ್ನು ಯೆಹೋವನ ಸ್ಪಷ್ಟ ವೀಕ್ಷಣೆಗೆ ಹೊಂದಿಕೆಯಲ್ಲಿ ತರುವುದಕ್ಕೆ ಇದು ಸೂಕ್ತ ಸಮಯ.—ವಿಮೋ. 33:13.

ನಮ್ಮ ಸಹೋದರರನ್ನು ಯೆಹೋವನು ವೀಕ್ಷಿಸುವ ವಿಧ

3 ಒಂದನೆಯ ಕೊರಿಂಥ 12:2-26ರಲ್ಲಿ ದಾಖಲೆಯಾಗಿರುವ ಪ್ರಕಾರ, ಅಪೊಸ್ತಲ ಪೌಲನು ಅಭಿಷಿಕ್ತ ಕ್ರೈಸ್ತರ ಸಭೆಯನ್ನು ‘ಅನೇಕ ಅಂಗಗಳು ಇರುವ’ ಒಂದು ದೇಹಕ್ಕೆ ಹೋಲಿಸಿದನು. ದೇಹದ ಅಂಗಗಳು ಒಂದರಿಂದೊಂದು ಬೇರೆಯಾಗಿರುವ ಪ್ರಕಾರವೇ ಸಭೆಯ ಸದಸ್ಯರು ತಮ್ಮ ಗುಣಲಕ್ಷಣಗಳಲ್ಲಿ ಮತ್ತು ಸಾಮರ್ಥ್ಯಗಳಲ್ಲಿ ಗಮನಾರ್ಹವಾಗಿ ಬೇರೆ ಬೇರೆಯಾಗಿ ಇರುತ್ತಾರೆ. ಆದರೂ ಯೆಹೋವನು ಸಭೆಯ ಈ ವಿವಿಧ ಸದಸ್ಯರನ್ನು ಸ್ವೀಕರಿಸುತ್ತಾನೆ. ಪ್ರತಿಯೊಬ್ಬ ಸದಸ್ಯನನ್ನು ಆತನು ಪ್ರೀತಿಸುತ್ತಾನೆ ಮತ್ತು ಮಾನ್ಯಮಾಡುತ್ತಾನೆ. ಅಂತೆಯೇ ಸಭೆಯ ಸದಸ್ಯರು ‘ಒಬ್ಬರು ಇನ್ನೊಬ್ಬರ ಹಿತವನ್ನು ಚಿಂತಿಸಬೇಕೆಂದು’ ಪೌಲನು ನಮಗೆ ಸಲಹೆ ನೀಡುತ್ತಾನೆ. ಹೀಗೆ ಮಾಡುವುದು ಸುಲಭವಾಗಿರಲಿಕ್ಕಿಲ್ಲ. ಏಕೆಂದರೆ ಇತರರ ವ್ಯಕ್ತಿತ್ವಗಳು ನಮ್ಮದಕ್ಕಿಂತ ಬೇರೆಯಾಗಿರಬಹುದು.

4 ನಮ್ಮ ಸಹೋದರರ ಬಲಹೀನ ಸ್ವಭಾವಗಳ ಮೇಲೆ ನಮ್ಮ ಗಮನವನ್ನು ತೀರಾ ಕೇಂದ್ರೀಕರಿಸುವ ಪ್ರವೃತ್ತಿಯೂ ನಮಗಿದ್ದೀತು. ಹಾಗೆ ಮಾಡುವಾಗ ನಾವು ಕಾರ್ಯತಃ ಕ್ಯಾಮರಾದ ಲೆನ್ಸ್‌ ಅನ್ನು ಒಂದು ಚಿಕ್ಕ ಕ್ಷೇತ್ರಕ್ಕೆ ಮಾತ್ರ ಕೇಂದ್ರೀಕರಿಸಿದಂತಿರುತ್ತದೆ. ಯೆಹೋವನಾದರೋ ಸಹೋದರರನ್ನು ಒಂದು ವಿಶಾಲಕೋನದ ಲೆನ್ಸ್‌ ಮೂಲಕವೋ ಎಂಬಂತೆ ವೀಕ್ಷಿಸುತ್ತಾನೆ. ಅದು ವ್ಯಕ್ತಿಯನ್ನು ಮಾತ್ರವಲ್ಲ ಅವನ ಸುತ್ತಮುತ್ತಲಿನ ವಿಶಾಲ ಕ್ಷೇತ್ರವನ್ನೂ ಆವರಿಸುತ್ತದೆ. ಒಬ್ಬ ವ್ಯಕ್ತಿಯಲ್ಲಿ ನಮಗೆ ಇಷ್ಟವಾಗದ ಒಂದು ತಪ್ಪಿನ ಮೇಲೆ ಮಾತ್ರ ಗುರಿಯಿಟ್ಟು ನೋಡುವ ಪ್ರವೃತ್ತಿ ನಮಗಿದ್ದೀತು. ಆದರೆ ಯೆಹೋವನಾದರೋ ಇಡೀ ವ್ಯಕ್ತಿಯನ್ನು, ಅವನ ಎಲ್ಲಾ ಒಳ್ಳೇ ಗುಣಗಳ ಸಹಿತವಾಗಿ ನೋಡುತ್ತಾನೆ. ನಾವು ಎಷ್ಟು ಹೆಚ್ಚಾಗಿ ಯೆಹೋವನನ್ನು ಅನುಕರಿಸಲು ಪರಿಶ್ರಮಿಸುತ್ತೇವೋ ಅಷ್ಟು ಹೆಚ್ಚಾಗಿ ಸಭೆಯಲ್ಲಿ ಪ್ರೀತಿ ಮತ್ತು ಐಕ್ಯದ ಆತ್ಮವನ್ನು ವರ್ಧಿಸಲು ನೆರವಾಗಬಲ್ಲೆವು.—ಎಫೆ. 4:1-3; 5:1, 2.

5 ಅಪರಿಪೂರ್ಣ ಮಾನವರಲ್ಲಿ ಬೇರೆಯವರನ್ನು ಟೀಕಿಸಿ ತೀರ್ಪುಮಾಡುವ ಪ್ರವೃತ್ತಿ ಹೆಚ್ಚಾಗಿ ಇರುವುದನ್ನು ಯೇಸು ತೀವ್ರವಾಗಿ ಗಮನಿಸಿದ್ದನು. ಅವನು ಸಲಹೆನೀಡಿದ್ದು: “ತೀರ್ಪುಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ.” (ಮತ್ತಾ. 7:1) “ತೀರ್ಪು ಮಾಡಬೇಡಿರಿ” ಎಂದು ಯೇಸು ಹೇಳಿರುವುದನ್ನು ಗಮನಿಸಿರಿ. ಅವನಿಗೆ ಕಿವಿಗೊಡುತ್ತಿದ್ದ ಅನೇಕರು ಇತರರನ್ನು ಟೀಕೆಮಾಡುವ ಹವ್ಯಾಸ ಉಳ್ಳವರಾಗಿದ್ದರು ಎಂದು ಆತನಿಗೆ ತಿಳಿದಿತ್ತು. ಅಂಥ ಹವ್ಯಾಸವನ್ನು ನಾವು ಸಹ ಬೆಳೆಸಿಕೊಂಡಿದ್ದೇವೋ? ನಮ್ಮಲ್ಲಿ ಆ ಸ್ವಭಾವ ಇರುವುದಾದರೆ ಅದನ್ನು ಬದಲಾಯಿಸಲು ನಾವು ಪರಿಶ್ರಮಪಡಬೇಕು. ಇಲ್ಲವಾದರೆ ನಾವು ಪ್ರತಿಕೂಲವಾದ ತೀರ್ಪನ್ನು ಹೊಂದುವೆವು. ನಿಜವಾಗಿಯೂ, ನೇಮಿತ ಸ್ಥಾನದಲ್ಲಿ ಯೆಹೋವನು ಉಪಯೋಗಿಸುವ ಒಬ್ಬನನ್ನು ಟೀಕಿಸಲು ಅಥವಾ ಅವನು ಸಭೆಯ ಭಾಗವಾಗಿರಬಾರದು ಎಂದು ತೀರ್ಪುಮಾಡಲು ನಾವ್ಯಾರು? ಒಬ್ಬ ಸಹೋದರನಲ್ಲಿ ಕೆಲವು ಕುಂದು ಕೊರತೆಗಳು ಇರಬಹುದು. ಆದರೆ ಯೆಹೋವನು ಅವನನ್ನು ಅಂಗೀಕರಿಸುತ್ತಾ ಇರುವಾಗ ನಾವು ಅವನನ್ನು ತಿರಸ್ಕರಿಸುವುದು ಯೋಗ್ಯವೋ? (ಯೋಹಾ. 6:44) ಯೆಹೋವನು ತನ್ನ ಸಂಘಟನೆಯನ್ನು ಮಾರ್ಗದರ್ಶಿಸುತ್ತಿದ್ದಾನೆಂದೂ ಮತ್ತು ಹೊಂದಾಣಿಕೆಗಳನ್ನು ಮಾಡುವ ಅಗತ್ಯವಿದ್ದಲ್ಲಿ ತನ್ನ ಸ್ವಂತ ಸಮಯದಲ್ಲಿ ಅತನು ಕ್ರಿಯೆ ಕೈಕೊಳ್ಳುವನೆಂದೂ ನಾವು ನಿಜವಾಗಿ ನಂಬುತ್ತೇವೋ?—ರೋಮಾಪುರ 14:1-4 ಓದಿ.

6 ಹೊಸ ಲೋಕದಲ್ಲಿ ಕ್ರೈಸ್ತರಲ್ಲಿ ಪ್ರತಿಯೊಬ್ಬರೂ ಪರಿಪೂರ್ಣತೆಯನ್ನು ಮುಟ್ಟಿದಾಗ ಅವರಲ್ಲಿ ಯಾವೆಲ್ಲಾ ಸಾಮರ್ಥ್ಯಗಳು ಇರಸಾಧ್ಯವೆಂದು ಮುನ್ನೋಡುವ ಮಹೋನ್ನತ ಗುಣ ಯೆಹೋವನಲ್ಲಿದೆ. ಈವಾಗಲೇ ಅವರು ಎಷ್ಟು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿರುತ್ತಾರೆಂದು ಸಹ ಆತನಿಗೆ ತಿಳಿದದೆ. ಆದುದರಿಂದ ಅವರ ಪ್ರತಿಯೊಂದು ಕುಂದುಕೊರತೆಯ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯ ಆತನಿಗಿಲ್ಲ. ಕೀರ್ತನೆ 103:12ರಲ್ಲಿ ನಾವು ಓದುವುದು: “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.” ಅದಕ್ಕಾಗಿ ನಾವು ವೈಯಕ್ತಿಕವಾಗಿ ಎಷ್ಟು ಕೃತಜ್ಞರಾಗಿರಬಲ್ಲೆವು!—ಕೀರ್ತ. 130:3.

7 ವ್ಯಕ್ತಿಯೊಬ್ಬನಲ್ಲಿರುವ ಸ್ತುತ್ಯಾರ್ಹ ಗುಣಗಳ ಮೇಲೆ ಕೇಂದ್ರೀಕರಿಸಲು ಯೆಹೋವನಿಗೆ ಮಹತ್ತಾದ ಸಾಮರ್ಥ್ಯವಿದೆಯೆಂಬ ಪುರಾವೆಯನ್ನು ಶಾಸ್ತ್ರಗ್ರಂಥದಲ್ಲಿ ನಾವು ಕಾಣುತ್ತೇವೆ. ದೇವರು ದಾವೀದನನ್ನು “ನನ್ನ ಆಜ್ಞೆಗಳನ್ನು ಕೈಕೊಂಡು ಪೂರ್ಣಮನಸ್ಸಿನಿಂದ ನನ್ನನ್ನು ಹಿಂಬಾಲಿಸಿ ಮೆಚ್ಚಿಸಿದಂಥ ನನ್ನ ಸೇವಕನಾದ ದಾವೀದ” ಎಂದು ವರ್ಣಿಸಿದ್ದಾನೆ. (1 ಅರ. 14:8) ದಾವೀದನು ಕೆಲವು ಕೆಟ್ಟ ಸಂಗತಿಗಳನ್ನು ನಡಿಸಿದ್ದನೆಂದು ನಮಗೆ ತಿಳಿದಿದೆ ನಿಶ್ಚಯ. ಆದರೂ ಯೆಹೋವನು ದಾವೀದನ ಒಳ್ಳೆಯ ಗುಣಗಳ ಕಡೆಗೆ ತನ್ನ ಗಮನವನ್ನು ಕೇಂದ್ರೀಕರಿಸಲು ಆರಿಸಿಕೊಂಡನು. ಯಾಕಂದರೆ ದಾವೀದನ ಹೃದಯದ ಯಥಾರ್ಥತೆಯನ್ನು ಆತನು ಬಲ್ಲವನಾಗಿದ್ದನು.—1 ಪೂರ್ವ. 29:17.

ಯೆಹೋವನಂತೆ ನಿಮ್ಮ ಸಹೋದರರನ್ನು ವೀಕ್ಷಿಸಿರಿ

8 ಯೆಹೋವನು ಹೃದಯದ ಆಲೋಚನೆಗಳನ್ನೂ ಹೇತುಗಳನ್ನೂ ಬಲ್ಲವನಾಗಿದ್ದಾನೆ. ನಮಗಾದರೋ ಅದು ತಿಳಿಯಲಾಗದು. ಇದು, ನಾವು ಇತರರಿಗೆ ತೀರ್ಪು ಮಾಡದೆ ಇರಲು ಒಂದು ಸಕಾರಣ. ಇನ್ನೊಬ್ಬ ವ್ಯಕ್ತಿಯ ಹೇತುಗಳೆಲ್ಲವನ್ನು ನಾವು ತಿಳಿದಿರುವುದಿಲ್ಲ. ಕಟ್ಟಕಡೆಗೆ ದಾಟಿಹೋಗಲಿರುವಂಥ ಮಾನವ ಅಪರಿಪೂರ್ಣತೆಗಳ ಮೇಲೆ ಗಮನವನ್ನು ಕೇಂದ್ರೀಕರಿಸದೆ ಇರುವ ಮೂಲಕ ನಾವು ಯೆಹೋವನನ್ನು ಅನುಕರಿಸಲು ಪ್ರಯತ್ನಿಸಬೇಕು. ಈ ವಿಷಯದಲ್ಲಿ ಆತನಂತೆ ಇರುವ ಗುರಿಯನ್ನಿಡುವುದು ಅತ್ಯುತ್ತಮ ಗುರಿಯಾಗಿರದೇ? ಹಾಗೆ ಮಾಡುವುದರಿಂದ ನಮ್ಮ ಸಹೋದರ ಸಹೋದರಿಯರ ಸಂಗಡ ಶಾಂತಿಭರಿತ ಸಂಬಂಧವನ್ನಿಡಲು ಹೆಚ್ಚು ಸಹಾಯವಾಗುವುದು.—ಎಫೆ. 4:23, 24.

9 ದೃಷ್ಟಾಂತಕ್ಕಾಗಿ, ಹಾಳುಪಾಳಾಗಿ ಬಿದ್ದಿರುವ ಒಂದು ಮನೆಯಿದೆ ಎಂದು ನೆನಸಿರಿ. ಅದರ ಕೊಳವೆಗಳು ಬಿದ್ದುಹೋಗಿವೆ. ಕಿಟಿಕಿಗಳು ಒಡೆದುಹೋಗಿವೆ. ಛಾವಣಿಯು ಸೋರುತ್ತಿದೆ. ಹೆಚ್ಚಿನ ಜನರು ಆ ಮನೆಯನ್ನು ನೋಡಿ ಅದೊಂದು ಅಂದಗೆಟ್ಟ ನೋಟವೆಂದು ತೀರ್ಮಾನಿಸಿ ಅದನ್ನು ಕೆಡವಿಹಾಕಬೇಕೆಂದು ನೆನಸ್ಯಾರು. ಆದರೆ ಅಲ್ಲಿಗೆ ಬಂದ ಇನ್ನೊಬ್ಬ ವ್ಯಕ್ತಿಯು ಅದನ್ನು ಪೂರಾ ಬೇರೆಯೇ ಆದ ನೋಟದಿಂದ ನೋಡುತ್ತಾನೆ. ಕಟ್ಟಡದ ಮೇಲ್ಮೈಯಲ್ಲಿ ತೋರುವ ಹಾಳುಪಾಳಿನಿಂದ ಅವನು ಅಪಕರ್ಷಿತನಾಗುವುದಿಲ್ಲ. ಕಟ್ಟಡವು ಇನ್ನೂ ಗಟ್ಟಿಮುಟ್ಟಾಗಿದೆ, ಅದನ್ನು ದುರಸ್ತಿಮಾಡಸಾಧ್ಯವಿದೆ ಎನ್ನುತ್ತಾನೆ ಅವನು. ಹಾಗಾಗಿ ಆ ಮನೆಯನ್ನು ಅವನು ಖರೀದಿಸಿ, ಹಾಳಾದ ಮೇಲ್ಮೈಯನ್ನು ಅಲ್ಪಸ್ವಲ್ಪ ದುರಸ್ತಿ ಮಾಡಿ, ಅದಕ್ಕೊಂದು ಹೊಸ ತೋರಿಕೆಯನ್ನು ಕೊಡುತ್ತಾನೆ. ಎಷ್ಟೊಂದು ಚೆಂದದ ಮನೆ ಎನ್ನುತ್ತಾರೆ ಆಮೇಲೆ ಅದನ್ನು ನೋಡಿದ ದಾರಿಹೋಕರು. ಆ ಮನೆಯನ್ನು ದುರಸ್ತಿಮಾಡಲು ಶ್ರಮಿಸಿದ ಅಥವಾ ಪುನಃಸ್ಥಾಪಿಸಿದ ಆ ವ್ಯಕ್ತಿಯಂತೆ ನಾವಿರಬಲ್ಲೆವೋ? ನಮ್ಮ ಸಹೋದರರಲ್ಲಿ ಹೊರಗೆ ತೋರುವ ಕುಂದು ಕೊರತೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಬದಲಿಗೆ ಅವರ ಒಳ್ಳೆಯ ಗುಣಗಳನ್ನು ಹಾಗೂ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲು ಅವರಿಗಿರುವ ಸಾಧ್ಯತೆಗಳನ್ನು ನಾವು ಕಾಣಬಲ್ಲೆವೋ? ಹೀಗೆ ಮಾಡುವಲ್ಲಿ ಯೆಹೋವನಂತೆ ನಾವು ನಮ್ಮ ಸಹೋದರರನ್ನು ಅವರ ಆಧ್ಯಾತ್ಮಿಕ ಸೌಂದರ್ಯಕ್ಕಾಗಿ ಪ್ರೀತಿಸುವವರಾಗಿರುವೆವು.—ಇಬ್ರಿಯ 6:10 ಓದಿ.

10 ಸಭೆಯಲ್ಲಿರುವ ಎಲ್ಲರೊಂದಿಗೆ ಸುಸಂಬಂಧವನ್ನಿಡಲು ನಮಗೆ ಸಹಾಯ ಮಾಡಬಲ್ಲ ಕೆಲವು ಸಲಹೆಗಳನ್ನು ಅಪೊಸ್ತಲ ಪೌಲನು ಕೊಟ್ಟನು. ಅವನು ಕ್ರೈಸ್ತರನ್ನು ಉತ್ತೇಜಿಸಿದ್ದು: “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.” (ಫಿಲಿ. 2:3, 4) ಇತರರನ್ನು ಯೋಗ್ಯ ರೀತಿಯಲ್ಲಿ ವೀಕ್ಷಿಸಲು ದೀನತೆಯು ನಮಗೆ ಸಹಾಯ ಮಾಡುವುದು. ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವುದು ಹಾಗೂ ಅವರಲ್ಲಿರುವ ಒಳ್ಳೇ ಗುಣಗಳನ್ನು ಹುಡುಕುವುದು ಸಹ ಯೆಹೋವನಂತೆ ಅವರನ್ನು ವೀಕ್ಷಿಸಲು ನಮಗೆ ನೆರವಾಗುವುದು.

11 ಇತ್ತೀಚಿನ ಸಮಯಗಳಲ್ಲಿನ ಭೌಗೋಳಿಕ ಬದಲಾವಣೆಗಳು ಜನರನ್ನು ಬೇರೆ ದೇಶಗಳಿಗೆ ಸ್ಥಳಾಂತರಿಸುವಂತೆ ಮಾಡಿದೆ. ಇಂದು ಕೆಲವು ನಗರಗಳಲ್ಲಿ ವಿವಿಧ ದೇಶಗಳ ಅನೇಕಾನೇಕ ಜನರು ನಿವಾಸ ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರಕ್ಕೆ ಹೊಸಬರಾಗಿರುವ ಕೆಲವು ಜನರು ಬೈಬಲ್‌ ಸತ್ಯದಲ್ಲಿ ಆಸಕ್ತಿಯನ್ನು ತೋರಿಸಿ ಈಗ ನಮ್ಮೊಂದಿಗೆ ಯೆಹೋವನ ಆರಾಧನೆಯಲ್ಲಿ ಜೊತೆಗೂಡಿದ್ದಾರೆ. ಇವರು “ಸಕಲ ಜನಾಂಗಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ” ಆಗಿದ್ದಾರೆ. (ಪ್ರಕ. 7:9) ಫಲಿತಾಂಶವಾಗಿ, ಈಗ ನಮ್ಮ ಸಭೆಗಳಲ್ಲಿ ಹೆಚ್ಚಿನವು ಒಂದರ್ಥದಲ್ಲಿ ಹೆಚ್ಚು ಅಂತರಾಷ್ಟ್ರೀಯ ಸಭೆಗಳಾಗಿ ಪರಿಣಮಿಸಿವೆ.

12 ನಮ್ಮ ಸಭೆಯಲ್ಲಿ, ನಾವು ಒಬ್ಬರನ್ನೊಬ್ಬರು ಯೋಗ್ಯ ರೀತಿಯಲ್ಲಿ ವೀಕ್ಷಿಸುವುದಕ್ಕೆ ಹೆಚ್ಚು ಗಮನ ಕೊಡುವ ಅಗತ್ಯವಿದ್ದೀತು. ಇದು ನಮಗೆ, ‘ನಿಷ್ಕಪಟವಾದ ಸಹೋದರಸ್ನೇಹವುಳ್ಳವರಾಗಿದ್ದು ಒಬ್ಬರನ್ನೊಬ್ಬರು ಹೃದಯಪೂರ್ವಕವಾಗಿಯೂ ಯಥಾರ್ಥವಾಗಿಯೂ ಪ್ರೀತಿಸುವಂತೆ’ ಅಪೊಸ್ತಲ ಪೇತ್ರನು ಕೊಟ್ಟ ಸಲಹೆಯನ್ನು ನೆನಪಿಗೆ ತರುತ್ತದೆ. (1 ಪೇತ್ರ 1:22) ಒಂದು ಸಭೆಯಲ್ಲಿ ಲೋಕದ ವಿವಿಧ ಭಾಗಗಳ ಅನೇಕ ಜನರು ಕೂಡಿರುವಾಗ ಯಥಾರ್ಥವಾದ ಪ್ರೀತಿ ಮತ್ತು ಒಲುಮೆಯನ್ನು ತೋರಿಸುವುದೇನೂ ಸುಲಭಸಾಧ್ಯವಲ್ಲ. ನಮ್ಮ ಜೊತೆ ಆರಾಧಕರ ಸಂಸ್ಕೃತಿಯು ನಮ್ಮದಕ್ಕಿಂತ ಗಮನಾರ್ಹವಾಗಿ ಭಿನ್ನವಾಗಿದ್ದೀತು. ಅವರ ಶೈಕ್ಷಣಿಕ, ಆರ್ಥಿಕ ಮತ್ತು ಜನಾಂಗೀಯ ಹಿನ್ನೆಲೆಗಳು ಸಹ ನಮ್ಮದಕ್ಕಿಂತ ಬೇರೆಯಾಗಿದ್ದಾವು. ಅಂಥ ಕೆಲವು ಜೊತೆ ಆರಾಧಕರ ಆಲೋಚನೆ ಮತ್ತು ಪ್ರತಿಕ್ರಿಯೆಗಳನ್ನು ಅರ್ಥಮಾಡುವುದು ನಿಮಗೆ ಕಷ್ಟಕರವಾಗಿ ಕಾಣುತ್ತದೋ? ನಿಮ್ಮ ವಿಷಯದಲ್ಲೂ ಅವರಿಗೆ ಅದೇ ರೀತಿ ಅನಿಸಬಹುದು. ಆದಾಗ್ಯೂ ನಮಗೆಲ್ಲರಿಗೆ ಈ ಬುದ್ಧಿವಾದ ಕೊಡಲಾಗಿದೆ: “ಸಹೋದರರ ಇಡಿ ಬಳಗವನ್ನು ಪ್ರೀತಿಸಿರಿ.”—1 ಪೇತ್ರ 2:17, NW.

13 ನಮ್ಮೆಲ್ಲಾ ಸಹೋದರರ ಕಡೆಗೆ ನಮ್ಮ ಪ್ರೀತಿಯನ್ನು ವಿಶಾಲಗೊಳಿಸಲಿಕ್ಕಾಗಿ ನಮ್ಮ ಆಲೋಚನೆಯಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡುವುದು ಅವಶ್ಯಕವಾಗಿರಬಹುದು. (2 ಕೊರಿಂಥ 6:12, 13 ಓದಿ.) ಕೆಲವು ಸಾರಿ “ನನಗೇನೂ ಪೂರ್ವಾಗ್ರಹವಿಲ್ಲ . . . ” ಎಂದು ಹೇಳುತ್ತಾ, ಅನಂತರ ನಿರ್ದಿಷ್ಟ ಜನಾಂಗೀಯ ಗುಂಪಿನವರ ಬಗ್ಗೆ ಸಾಮಾನ್ಯವೆಂದು ನಾವೆಣಿಸುವ ನಕಾರಾತ್ಮಕ ಲಕ್ಷಣಗಳನ್ನು ಎತ್ತಿಹೇಳುತ್ತೇವೋ? ಅಂಥ ಭಾವನೆಗಳು, ಅಂತರ್ಯದಲ್ಲಿ ಇನ್ನೂ ಹುದುಗಿರುವ ಒಂದಿಷ್ಟು ಪೂರ್ವಾಗ್ರಹವನ್ನು ತೋರಿಸುವುದರಿಂದ ಅವನ್ನು ತೊಡೆದು ಹಾಕುವ ಅಗತ್ಯ ನಮಗಿದೆ. ಆದ್ದರಿಂದ ನಮ್ಮನ್ನು ಹೀಗೆ ಕೇಳಿಕೊಳ್ಳೋಣ: ‘ನನಗಿಂತ ಬೇರೆಯಾದ ಸಂಸ್ಕೃತಿಯ ಜನರನ್ನು ಅರ್ಥಮಾಡಿಕೊಳ್ಳಲು ನಾನು ಕ್ರಮವಾಗಿ ಪ್ರಯತ್ನಮಾಡುತ್ತೇನೋ?’ ಈ ರೀತಿಯ ಸ್ವಪರೀಕ್ಷೆಯು ನಮ್ಮ ಅಂತರಾಷ್ಟ್ರೀಯ ಸಹೋದರತ್ವವನ್ನು ಸ್ವೀಕರಿಸುವ ಮತ್ತು ಗಣ್ಯಮಾಡುವ ವಿಷಯದಲ್ಲಿ ಪ್ರಗತಿಮಾಡಲು ನಮಗೆ ನೆರವಾಗಬಲ್ಲದು.

14 ತಮ್ಮ ದೃಷ್ಟಿಕೋನಗಳಲ್ಲಿ ಹೊಂದಿಕೆಗಳನ್ನು ಮಾಡಿದ ಕೆಲವರ ಉತ್ತಮ ಉದಾಹರಣೆಗಳನ್ನು ಬೈಬಲು ನಮಗೆ ಕೊಡುತ್ತದೆ. ಅಪೊಸ್ತಲ ಪೇತ್ರನು ಅವರಲ್ಲೊಬ್ಬನು. ಯೆಹೂದ್ಯನಾದ ಪೇತ್ರನು ಅನ್ಯ ಜನಾಂಗದವನೊಬ್ಬನ ಮನೆಯನ್ನು ಪ್ರವೇಶಿಸುತ್ತಿರಲಿಲ್ಲ. ಹೀಗಿರುವಾಗ ಸುನ್ನತಿಯಾಗದ ಅನ್ಯನಾದ ಕೊರ್ನೇಲ್ಯನ ಮನೆಗೆ ಹೋಗುವಂತೆ ಪೇತ್ರನಿಗೆ ಹೇಳಲಾದಾಗ ಅವನಿಗೆ ಹೇಗನಿಸಿತ್ತೆಂಬುದನ್ನು ಊಹಿಸಿರಿ! ಆದರೂ ಎಲ್ಲಾ ಜನಾಂಗಗಳ ಜನರು ಕ್ರೈಸ್ತ ಸಭೆಯ ಭಾಗವಾಗುವುದು ದೇವರ ಅಪೇಕ್ಷೆಯಾಗಿದೆ ಎಂಬುದನ್ನು ಗ್ರಹಿಸಿಕೊಂಡು ಪೇತ್ರನು ಹೊಂದಾಣಿಕೆಗಳನ್ನು ಮಾಡಿಕೊಂಡನು. (ಅ. ಕೃ. 10:9-35) ಮೊದಲು ಸೌಲನಾಗಿದ್ದ ಅಪೊಸ್ತಲ ಪೌಲನಿಗೆ ಸಹ ತನ್ನ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ತನ್ನಲ್ಲಿದ್ದ ಪೂರ್ವಾಗ್ರಹವನ್ನು ವರ್ಜಿಸಬೇಕಾಯಿತು. ಆತನು ಕ್ರೈಸ್ತರನ್ನು ಎಷ್ಟು ದ್ವೇಷಿಸಿದ್ದನೆಂದರೆ “ದೇವರ ಸಭೆಯನ್ನು ಅತ್ಯಂತವಾಗಿ ಹಿಂಸೆಪಡಿಸಿ ಹಾಳು ಮಾಡುತ್ತಿದ್ದೆನು” ಎಂದು ಸ್ವತಃ ಒಪ್ಪಿಕೊಂಡನು. ಆದರೂ, ಕರ್ತನಾದ ಯೇಸುವು ಅವನಿಗೆ ತಿದ್ದುಪಾಟನ್ನು ಕೊಟ್ಟಾಗ ಅವನು ಬಹಳ ದೊಡ್ಡ ಬದಲಾವಣೆಗಳನ್ನು ಮಾಡಿ ತಾನು ಹಿಂದೆ ಹಿಂಸೆಪಡಿಸಿದ್ದವರಿಂದ ಮಾರ್ಗದರ್ಶನವನ್ನು ಸ್ವೀಕರಿಸಲು ಸಹ ಸಿದ್ಧನಾದನು.—ಗಲಾ. 1:13-20.

15 ಯೆಹೋವನ ಆತ್ಮದ ಸಹಾಯದಿಂದ ನಾವೆಲ್ಲರೂ ನಮ್ಮ ಮನೋಭಾವದಲ್ಲಿ ಹೊಂದಾಣಿಕೆಗಳನ್ನು ಮಾಡಬಲ್ಲೆವೆಂಬುದರಲ್ಲಿ ಸಂದೇಹವಿಲ್ಲ. ನಮ್ಮಲ್ಲಿ ಪೂರ್ವಾಗ್ರಹದ ಸುಳಿವುಗಳು ಇನ್ನೂ ಅವಿತಿವೆಯೆಂದು ಕಂಡುಬಂದಲ್ಲಿ, ಅವನ್ನು ಬೇರುಸಹಿತ ಕಿತ್ತುಹಾಕೋಣ ಮತ್ತು “ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮದಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ” ಕಾರ್ಯನಡಿಸೋಣ. (ಎಫೆ. 4:3-6) “ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ,” ಎಂದು ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ.—ಕೊಲೊ. 3:14.

ನಮ್ಮ ಶುಶ್ರೂಷೆಯಲ್ಲಿ ಯೆಹೋವನನ್ನು ಅನುಕರಿಸುವುದು

16 “ದೇವರಿಗೆ ಪಕ್ಷಪಾತವಿಲ್ಲ,” ಎಂದು ಬರೆದನು ಅಪೊಸ್ತಲ ಪೌಲನು. (ರೋಮಾ. 2:11) ತನ್ನ ಆರಾಧನಾ ಏರ್ಪಾಡಿನಲ್ಲಿ ಎಲ್ಲಾ ಜನಾಂಗಗಳ ಜನರನ್ನು ಒಳಸೇರಿಸಿಕೊಳ್ಳುವುದು ಯೆಹೋವನ ಉದ್ದೇಶವಾಗಿದೆ. (1 ತಿಮೊಥೆಯ 2:3, 4 ಓದಿ.) ಆ ಉದ್ದೇಶವನ್ನು ನೆರವೇರಿಸಲಿಕ್ಕಾಗಿ, ‘ಸಕಲ ಜನಾಂಗಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ನಿತ್ಯವಾದ ಶುಭವರ್ತಮಾನವು’ ಸಾರಲ್ಪಡುವಂತೆ ಆತನು ಏರ್ಪಡಿಸಿದ್ದಾನೆ. (ಪ್ರಕ. 14:6) ಯೇಸು ಅಂದದ್ದು: “ಹೊಲವಂದರೆ ಈ ಲೋಕ.” (ಮತ್ತಾ. 13:38) ಅದು ನಿಮಗೂ ನಿಮ್ಮ ಆಪ್ತ ಕುಟುಂಬಕ್ಕೂ ಏನನ್ನು ಸೂಚಿಸುತ್ತದೆ?

17 ಲೋಕದ ದೂರ ದೂರದ ಭಾಗಗಳಿಗೆ ಹೋಗಿ ರಾಜ್ಯದ ಸಂದೇಶವನ್ನು ಇತರರಿಗೆ ಸಾರಲು ಎಲ್ಲರೂ ಶಕ್ತರಲ್ಲ ನಿಜ. ಆದರೆ ನಮ್ಮ ಟೆರಿಟೊರಿಗಳಲ್ಲೇ ವಾಸಿಸುವ ಭೂಮಿಯ ಬೇರೆ ಬೇರೆ ಭಾಗಗಳ ಜನರಿಗೆ ನಾವು ಈ ಸಂದೇಶವನ್ನು ನೀಡಬಲ್ಲೆವು. ಅನೇಕ ವರ್ಷಗಳಿಂದ ನಾವು ಸಾರುತ್ತಿರುವ ಜನರಿಗೆ ಮಾತ್ರವಲ್ಲ, ಎಲ್ಲಾ ಜನಾಂಗಗಳ ಜನರಿಗೆ ಸಾಕ್ಷಿನೀಡುವ ಸಂದರ್ಭಗಳಿಗೆ ನಾವು ಎಚ್ಚರವಾಗಿದ್ದೇವೋ? ಸಂಪೂರ್ಣವಾದ ಸಾಕ್ಷಿಯು ಇನ್ನೂ ದೊರೆಯದ ಇತರರಿಗೆ ಸಾರಲು ಮುಂದಡಿ ಇಡುವುದನ್ನು ನಿಮ್ಮ ನಿರ್ಧಾರವನ್ನಾಗಿ ಮಾಡಿರಿ.—ರೋಮಾ. 15:20, 21.

18 ಎಲ್ಲರಿಗೂ ಸಹಾಯ ನೀಡುವ ಅಗತ್ಯವನ್ನು ಯೇಸು ಆಳವಾಗಿ ಅರಿತುಕೊಂಡನು. ಅವನು ಕೇವಲ ಒಂದೇ ಕ್ಷೇತ್ರದಲ್ಲಿ ಸಾರಲಿಲ್ಲ. “ಯೇಸು ಎಲ್ಲಾ ಊರುಗಳನ್ನೂ ಹಳ್ಳಿಪಳ್ಳಿಗಳನ್ನೂ ಸುತ್ತಿಕೊಂಡು” ಸಾರಿದನು ಎಂದು ಬೈಬಲ್‌ ವೃತ್ತಾಂತವೊಂದು ನಮಗೆ ತಿಳಿಸುತ್ತದೆ. ನಂತರ “ಜನರ ಗುಂಪುಗಳನ್ನು ನೋಡಿ . . . ಅವರ ಮೇಲೆ ಕನಿಕರಪಟ್ಟನು,” ಮತ್ತು ಅವರಿಗೆ ಸಹಾಯನೀಡುವ ಅಗತ್ಯವಿದೆಯೆಂದು ಹೇಳಿದನು.—ಮತ್ತಾ. 9:35-37.

19 ಅದೇ ರೀತಿಯ ಮನೋಭಾವವನ್ನು ನೀವು ತೋರಿಸಬಲ್ಲ ಕೆಲವು ವಿಧಾನಗಳು ಯಾವುವು? ಕೆಲವರು ಆಗಿಂದಾಗ್ಗೆ ಸೇವೆಯಾಗದ ತಮ್ಮ ಟೆರಿಟೊರಿಯ ಭಾಗಗಳನ್ನು ಆವರಿಸಿ ಅಧಿಕ ಸಾಕ್ಷಿನೀಡುವ ಪ್ರಯತ್ನವನ್ನು ಮಾಡಿರುತ್ತಾರೆ. ಇದರಲ್ಲಿ ವ್ಯಾಪಾರ ಕ್ಷೇತ್ರಗಳು, ಸಾರ್ವಜನಿಕ ಉದ್ಯಾನಗಳು, ವಾಹನಾದಿಗಳ ತಂಗುದಾಣಗಳು ಹಾಗೂ ಪ್ರವೇಶ ನಿಷೇಧವಿರುವ ಕಟ್ಟಡಗಳ ಎದುರಲ್ಲಿ ಸಾಕ್ಷಿಕೊಡುವುದು ಸೇರಿದೆ. ಇನ್ನು ಕೆಲವರು ತಮ್ಮ ಕ್ಷೇತ್ರದಲ್ಲಿ ವಾಸಿಸುವ ನಿರ್ದಿಷ್ಟ ಜನಾಂಗೀಯ ಗುಂಪಿಗೆ ಸಾರುವುದಕ್ಕಾಗಿ ಹೊಸ ಭಾಷೆಯನ್ನು ಕಲಿಯಲು ಅಥವಾ ಹಿಂದೆ ಸಾಕ್ಷಿಕೊಡಲ್ಪಟ್ಟಿರದ ಗುಂಪಿನ ಜನರಿಗೆ ಸಾಕ್ಷಿಕೊಡಲು ಪ್ರಯತ್ನಿಸಿದ್ದಾರೆ. ಅವರ ನಾಡ ಭಾಷೆಯಲ್ಲಿ ಅವರನ್ನು ವಂದಿಸುವುದು ಹೇಗೆಂದು ಕಲಿಯುವ ಮೂಲಕ ನೀವು ಅವರ ಹಿತಚಿಂತನೆಯಲ್ಲಿ ಎಷ್ಟು ಆಸಕ್ತರಿದ್ದೀರೆಂದು ತೋರಿಸಿಕೊಡಬಹುದು. ಒಂದುವೇಳೆ ಇನ್ನೊಂದು ಭಾಷೆ ಕಲಿಯಲು ನಮಗಾಗದಿದ್ದರೆ, ಯಾರು ಅದನ್ನು ಕಲಿಯುತ್ತಾರೋ ಅವರಿಗೆ ನಾವು ಉತ್ತೇಜನ ಕೊಡಬಲ್ಲೆವೋ? ಇನ್ನೊಂದು ದೇಶದ ಜನರಿಗೆ ಸಾರುವುದಕ್ಕಾಗಿ ಅಂಥ ಪ್ರಯತ್ನವನ್ನು ಮಾಡುತ್ತಿರುವ ಸಹೋದರರನ್ನು ನಿರುತ್ತೇಜಿಸಲು ಅಥವಾ ಹೇತುಗಳನ್ನು ಪ್ರಶ್ನಿಸಲು ಬಯಸಲಾರೆವು ನಿಶ್ಚಯ. ಸಕಲ ಜೀವಗಳು ಯೆಹೋವನ ದೃಷ್ಟಿಯಲ್ಲಿ ಅಮೂಲ್ಯವು ಮತ್ತು ನಾವೂ ಅದೇ ರೀತಿಯಲ್ಲಿ ಅವನ್ನು ವೀಕ್ಷಿಸಬೇಕು.—ಕೊಲೊ. 3:10, 11.

20 ದೇವರು ವೀಕ್ಷಿಸುವಂತೆ ಜನರನ್ನು ವೀಕ್ಷಿಸುವುದೆಂದರೆ ಜನರ ಪರಿಸ್ಥಿತಿ ಹೇಗೆಯೇ ಇರಲಿ ಅವರೆಲ್ಲರಿಗೂ ಸಾರುವುದೆಂದರ್ಥ. ಅವರಲ್ಲಿ ಕೆಲವರು ಮನೆಮಠವಿಲ್ಲದವರೂ ಕೊಳಕರೂ ಅನೈತಿಕ ಜೀವನ ನಡಿಸುವವರೂ ಆಗಿರಬಹುದು. ಕೆಲವು ನಿರ್ದಿಷ್ಟ ಜನರು ನಮ್ಮನ್ನು ನಿರ್ದಯೆಯಿಂದ ಉಪಚರಿಸಿದಲ್ಲಿ, ಅವರ ಇಡೀ ಜನಾಂಗ ಅಥವಾ ಬುಡಕಟ್ಟಿನ ಕುರಿತು ಕೆಟ್ಟ ಅಭಿಪ್ರಾಯವನ್ನು ನಾವು ತಾಳುವಂತೆ ಮಾಡಬಾರದು. ಪೌಲನನ್ನು ಕೆಲವರು ಬಹು ಕೆಟ್ಟದಾಗಿ ಉಪಚರಿಸಿದರು. ಆದರೆ ಅದು ಅವನನ್ನು ಆ ಹಿನ್ನೆಲೆಯ ಜನರಿಗೆ ಸಾರುವುದನ್ನು ನಿಲ್ಲಿಸುವಂತೆ ಮಾಡಲಿಲ್ಲ. (ಅ. ಕೃ. 14:5-7, 19-22) ಅವರಲ್ಲಿ ಕೆಲವರಾದರೂ ಸುವಾರ್ತೆಗೆ ಒಳ್ಳೆಯ ಪ್ರತಿಕ್ರಿಯೆ ತೋರಿಸುವರು ಎಂದವನು ನಿರೀಕ್ಷಿಸಿದನು.

21 ಆದುದರಿಂದ ನಮ್ಮ ಸ್ಥಳೀಯ ಸಹೋದರರೊಂದಿಗೆ, ನಮ್ಮ ಅಂತರಾಷ್ಟ್ರೀಯ ಸಹೋದರತ್ವದೊಂದಿಗೆ ಮತ್ತು ನಮ್ಮ ಕ್ಷೇತ್ರದ ಜನರೊಂದಿಗೆ ನಾವು ವ್ಯವಹರಿಸುವಾಗ ಯೆಹೋವನು ಜನರನ್ನು ವೀಕ್ಷಿಸುವಂತೆ ನಾವೂ ಅವರನ್ನು ಯೋಗ್ಯ ರೀತಿಯಲ್ಲಿ ವೀಕ್ಷಿಸುವ ಅಗತ್ಯವು ನಮಗೀಗ ಹೆಚ್ಚು ಸ್ಪಷ್ಟವಾಯಿತು. ಯೆಹೋವನ ನೋಟವನ್ನು ನಾವು ಎಷ್ಟು ಹೆಚ್ಚಾಗಿ ಪ್ರತಿಬಿಂಬಿಸುತ್ತೇವೋ ಅಷ್ಟು ಹೆಚ್ಚಾಗಿ ಶಾಂತಿ ಮತ್ತು ಐಕ್ಯವನ್ನು ವರ್ಧಿಸುವೆವು. ಹೀಗೆ, “ಭೇದವನ್ನು ಮಾಡದೆ” ತನ್ನ “ಸೃಷ್ಟಿಯಾಗಿ”ರುವ ಸಕಲ ಜನರಲ್ಲೂ ಪ್ರೀತಿಪರ ಆಸಕ್ತಿಯನ್ನು ತೋರಿಸುವ ಯೆಹೋವ ದೇವರನ್ನು ಇತರರು ಪ್ರೀತಿಸುವವರಾಗುವಂತೆ ನೆರವಾಗಲು ನಾವು ಹೆಚ್ಚು ಅರ್ಹತೆ ಪಡೆಯುವೆವು.—ಯೋಬ 34:19.

ಉತ್ತರಿಸಬಲ್ಲಿರೋ?

• ನಮ್ಮ ಸಹೋದರರನ್ನು ಯಾವ ರೀತಿಯಲ್ಲಿ ವೀಕ್ಷಿಸುವುದರಿಂದ ದೂರವಿರಬೇಕು?

• ಸಹೋದರರನ್ನು ನಾವು ವೀಕ್ಷಿಸುವ ರೀತಿಯಲ್ಲಿ ಯೆಹೋವನನ್ನು ಹೇಗೆ ಅನುಕರಿಸಬಲ್ಲೆವು?

• ಅಂತರಾಷ್ಟ್ರೀಯ ಸಹೋದರತ್ವದ ನಮ್ಮ ವೀಕ್ಷಣೆಯ ಕುರಿತು ನೀವು ಯಾವ ಪಾಠ ಕಲಿತಿರಿ?

• ಜನರ ಕಡೆಗಿನ ಯೆಹೋವನ ನೋಟವನ್ನು ನಾವು ಶುಶ್ರೂಷೆಯಲ್ಲಿ ಹೇಗೆ ಅನುಕರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1. ಆಧ್ಯಾತ್ಮಿಕ ಪರದೈಸನ್ನು ನೀವು ಮೊತ್ತಮೊದಲಾಗಿ ಪ್ರವೇಶಿಸಿದಾಗ ನಿಮಗೆ ಹೇಗನಿಸಿತು?

2. (ಎ) ಇತರರನ್ನು ನಾವು ವೀಕ್ಷಿಸುವ ರೀತಿಯನ್ನು ಯಾವುದು ಪ್ರಭಾವಿಸಬಹುದು? (ಬಿ) ಹಾಗಿದ್ದರೆ ನಾವೇನು ಮಾಡುವ ಅಗತ್ಯವಿದ್ದೀತು?

3. ಬೈಬಲು ಕ್ರೈಸ್ತ ಸಭೆಯನ್ನು ಯಾವುದಕ್ಕೆ ಹೋಲಿಸುತ್ತದೆ?

4. ನಮ್ಮ ಸಹೋದರರನ್ನು ನಾವು ವೀಕ್ಷಿಸುವ ವಿಧಾನದಲ್ಲಿ ಹೊಂದಾಣಿಕೆ ಮಾಡುವ ಅಗತ್ಯವಿದ್ದೀತು ಏಕೆ?

5. ಇತರರನ್ನು ಟೀಕಿಸುತ್ತಾ ತೀರ್ಪು ಮಾಡುವುದು ಯೋಗ್ಯವಲ್ಲವೇಕೆ?

6. ಯೆಹೋವನು ತನ್ನ ಸೇವಕರನ್ನು ಹೇಗೆ ವೀಕ್ಷಿಸುತ್ತಾನೆ?

7. ಯೆಹೋವನು ದಾವೀದನನ್ನು ವೀಕ್ಷಿಸಿದ ವಿಧದಿಂದ ನಾವೇನನ್ನು ಕಲಿಯುತ್ತೇವೆ?

8, 9. (ಎ) ಯಾವ ರೀತಿಯಲ್ಲಿ ನಾವು ಯೆಹೋವನಂತೆ ಇರಬಲ್ಲೆವು? (ಬಿ) ಇದನ್ನು ಹೇಗೆ ದೃಷ್ಟಾಂತಿಸಬಹುದು, ಮತ್ತು ಇದರಲ್ಲಿ ನಮಗಿರುವ ಪಾಠವೇನು?

10. ಫಿಲಿಪ್ಪಿ 2:3, 4ರಲ್ಲಿ ಕಂಡುಬರುವ ಸಲಹೆಯು ನಮಗೆ ಹೇಗೆ ಸಹಾಯಮಾಡಬಲ್ಲದು?

11. ಕೆಲವು ಸಭೆಗಳ ಮೇಲೆ ಯಾವ ಬದಲಾವಣೆಗಳು ಪ್ರಭಾವಬೀರಿವೆ?

12. ನಾವು ಒಬ್ಬರನ್ನೊಬ್ಬರು ಯಾವ ರೀತಿಯಲ್ಲಿ ವೀಕ್ಷಿಸುವುದನ್ನು ಮುಂದುವರಿಸುವ ಅಗತ್ಯವಿದೆ ಮತ್ತು ಕೆಲವೊಮ್ಮೆ ಇದು ಸುಲಭಸಾಧ್ಯವಲ್ಲವೇಕೆ?

13. ನಮ್ಮ ಆಲೋಚನೆಗಳಲ್ಲಿ ಯಾವ ಹೊಂದಾಣಿಕೆಗಳನ್ನು ಮಾಡುವ ಅಗತ್ಯ ನಮಗಿರಬಹುದು?

14, 15. (ಎ) ಇತರ ಜನರ ಕಡೆಗಿನ ತಮ್ಮ ವೀಕ್ಷಣೆಗಳನ್ನು ಬದಲಾಯಿಸಿಕೊಂಡವರ ಉದಾಹರಣೆಗಳನ್ನು ಕೊಡಿರಿ? (ಬಿ) ನಾವು ಅವರನ್ನು ಹೇಗೆ ಅನುಕರಿಸಬಹುದು?

16. ಎಲ್ಲಾ ಜನರ ಸಂಬಂಧದಲ್ಲಿ ದೇವರ ಉದ್ದೇಶ ಏನಾಗಿದೆ?

17. ಎಲ್ಲಾ ವಿಧದ ಜನರಿಗೆ ನಾವು ಹೇಗೆ ಸಹಾಯಮಾಡಬಲ್ಲೆವು?

18. ಜನರ ಕಡೆಗೆ ಯೇಸು ಯಾವ ಚಿಂತೆಯನ್ನು ತೋರಿಸಿದನು?

19, 20. ಎಲ್ಲಾ ವಿಧದ ಜನರಿಗೆ ಯೆಹೋವನು ಮತ್ತು ಯೇಸು ತೋರಿಸಿದ ಪರಿಗಣನೆಯನ್ನು ನಾವು ತೋರಿಸಬಲ್ಲ ಕೆಲವು ವಿಧಾನಗಳು ಯಾವುವು?

21. ನೀವು ಇತರರನ್ನು ಯೆಹೋವನಂತೆ ವೀಕ್ಷಿಸುವುದು ಹೇಗೆ ಸಹಾಯಕರ?

[ಪುಟ 26ರಲ್ಲಿರುವ ಚಿತ್ರ]

ಬೇರೆ ಸಂಸ್ಕೃತಿಗಳ ಜನರನ್ನು ನೀವು ಹೇಗೆ ಅರ್ಥಮಾಡಿಕೊಳ್ಳಬಹುದು?

[ಪುಟ 28ರಲ್ಲಿರುವ ಚಿತ್ರಗಳು]

ನೀವು ಯಾವ ವಿಧಗಳಲ್ಲಿ ಸುವಾರ್ತೆಯನ್ನು ಹೆಚ್ಚು ಜನರಿಗೆ ತಲಪಿಸಬಹುದು?