ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋಗ್ಯವಾಗಿರುವಾಗ ಮಣಿಯಿರಿ

ಯೋಗ್ಯವಾಗಿರುವಾಗ ಮಣಿಯಿರಿ

ಯೋಗ್ಯವಾಗಿರುವಾಗ ಮಣಿಯಿರಿ

“ಮಣಿಯುವವರೂ . . . ಆಗಿರುವಂತೆ ಅವರಿಗೆ ಜ್ಞಾಪಕಹುಟ್ಟಿಸು.”—ತೀತ 3:1, 2, NW, ಪಾದಟಿಪ್ಪಣಿ.

ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯಾದ ಯೆಹೋವನು ಅಪಾರ ವಿವೇಕವುಳ್ಳಾತನು. ನಾವು ಆತನ ಸೃಷ್ಟಿಯಾಗಿರುವುದರಿಂದ ನಮ್ಮ ಜೀವನವನ್ನು ಮಾರ್ಗದರ್ಶಿಸಿ ನಡೆಸುವಂತೆ ನಾವು ಆತನ ಕಡೆಗೆ ನೋಡುತ್ತೇವೆ. (ಕೀರ್ತ. 48:14) ಕ್ರೈಸ್ತ ಶಿಷ್ಯ ಯಾಕೋಬನು ಬರೆದದ್ದು: “ಆದರೆ ಮೇಲಣಿಂದ ಬರುವ ವಿವೇಕವು ಮೊದಲು ಶುದ್ಧವಾದದ್ದು, ತರುವಾಯ ಶಾಂತಿಶೀಲದ್ದು, ನ್ಯಾಯಸಮ್ಮತವಾದದ್ದು [“ಮಣಿಯುವಂಥದ್ದು,” ಪಾದಟಿಪ್ಪಣಿ.], ವಿಧೇಯತೆ ತೋರಿಸಲು ಸಿದ್ಧವಾದದ್ದು, ಕರುಣೆ ಮತ್ತು ಒಳ್ಳೇ ಫಲಗಳಿಂದ ತುಂಬಿರುವಂಥದ್ದು ಆಗಿದೆ; ಅದು ಪಕ್ಷಭೇದಗಳನ್ನು ಮಾಡುವುದಿಲ್ಲ, ಅದರಲ್ಲಿ ಕಪಟವೂ ಇಲ್ಲ.”—ಯಾಕೋ. 3:17, NW.

2 “ನಿಮ್ಮ ನ್ಯಾಯಸಮ್ಮತತೆಯು [“ಮಣಿಯುವ ಸ್ವಭಾವವು,” ಪಾದಟಿಪ್ಪಣಿ.] ಎಲ್ಲ ಮನುಷ್ಯರಿಗೆ ತಿಳಿದುಬರಲಿ” ಎಂದು ಅಪೊಸ್ತಲ ಪೌಲನು ಬುದ್ಧಿಹೇಳುತ್ತಾನೆ. * (ಫಿಲಿ. 4:5, NW) ಕ್ರಿಸ್ತ ಯೇಸು, ಕ್ರೈಸ್ತ ಸಭೆಯ ಯಜಮಾನನೂ ಶಿರಸ್ಸೂ ಆಗಿದ್ದಾನೆ. (ಎಫೆ. 5:23) ಆದುದರಿಂದ, ನಮ್ಮಲ್ಲಿ ಪ್ರತಿಯೊಬ್ಬರು ನ್ಯಾಯಸಮ್ಮತತೆಯಿಂದ ಕ್ರಿಸ್ತನ ನಿರ್ದೇಶನಕ್ಕೆ ಮಣಿಯುವುದು ಮತ್ತು ಇತರರೊಂದಿಗೆ ವ್ಯವಹರಿಸುವಾಗ ಸಹ ಮಣಿಯುವ ಸ್ವಭಾವವನ್ನು ತೋರಿಸುವುದು ಬಹಳ ಪ್ರಾಮುಖ್ಯ.

3 ಯೋಗ್ಯವಾಗಿರುವಾಗೆಲ್ಲಾ ಮಣಿಯುವುದರಿಂದ ನಮಗೆ ಪ್ರಯೋಜನಗಳು ಲಭಿಸುತ್ತವೆ. ದೃಷ್ಟಾಂತಕ್ಕೆ, ಬ್ರಿಟನ್‌ನಲ್ಲಿ ಉಗ್ರರ ಒಳಸಂಚು ಬಯಲಾದ ಮೇಲೆ ಭದ್ರತೆಯ ಸಲುವಾಗಿ ಜಾರಿಗೆತಂದ ಹೊಸ ನಿಯಮಗಳನ್ನು ಹೆಚ್ಚಿನ ವಿಮಾನ ಪ್ರಯಾಣಿಕರು ಅನುಸರಿಸಲು ಒಪ್ಪಿಕೊಂಡರು. ಅಂದರೆ ಅವರು ಈ ಹಿಂದೆ ವಿಮಾನದಲ್ಲಿ ಒಯ್ಯಬಹುದಾಗಿದ್ದ ಸಾಮಾನುಗಳನ್ನು ಈಗ ಒಯ್ಯದಿರಲು ಒಪ್ಪಿಕೊಂಡರು. ನಾವು ಸಹ ವಾಹನ ಚಲಾಯಿಸುವಾಗ ಇತರ ಚಾಲಕರಿಗೆ ಮಣಿಯಬೇಕಾಗುತ್ತದೆ. ಉದಾಹರಣೆಗೆ ಸರ್ಕಲ್‌ಗಳಲ್ಲಿ ತಿರುಗುವಾಗ ಇತರ ವಾಹನಗಳಿಗೆ ಅಡಚಣೆಯಾಗದೆ ಎಲ್ಲರೂ ಸುರಕ್ಷಿತವಾಗಿ ಸಾಗಲು ನಾವು ಮಣಿಯುತ್ತೇವೆ.

4 ಆದರೂ ನಮ್ಮಲ್ಲಿ ಅನೇಕರಿಗೆ ಮಣಿಯುವುದು ಸುಲಭವಲ್ಲ. ಮಣಿಯುವುದರಲ್ಲಿ ಒಳಗೂಡಿರುವ ಮೂರು ಅಂಶಗಳನ್ನು ನಾವೀಗ ಪರಿಗಣಿಸೋಣ. ಅವು ಯಾವುವೆಂದರೆ, ಮಣಿಯುವ ಉದ್ದೇಶ, ಅಧಿಕಾರದ ಕಡೆಗಿರುವ ನಮ್ಮ ಮನೋಭಾವ ಮತ್ತು ನಾವು ಎಷ್ಟರ ಮಟ್ಟಿಗೆ ಮಣಿಯಬೇಕು.

ಏಕೆ ಮಣಿಯಬೇಕು?

5 ಪುರಾತನ ಇಸ್ರಾಯೇಲಿನ ಒಂದು ದೃಷ್ಟಾಂತವು, ಮಣಿಯುವ ಯೋಗ್ಯ ಉದ್ದೇಶವನ್ನು ತೋರಿಸಿಕೊಡುತ್ತದೆ. ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಇಬ್ರಿಯ ದಾಸರನ್ನು ಅವರ ದಾಸತ್ವದ ಏಳನೆಯ ವರುಷ ಇಲ್ಲವೆ ಜೂಬಿಲೀ ವರುಷ, ಇವೆರಡರಲ್ಲಿ ಯಾವುದು ಮೊದಲು ಬರುತ್ತದೋ ಆ ವರ್ಷದಲ್ಲಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಒಬ್ಬ ದಾಸನು ದಾಸನಾಗಿಯೇ ಇರಲು ನಿರ್ಣಯಿಸಬಹುದಾಗಿತ್ತು. (ವಿಮೋಚನಕಾಂಡ 21:5, 6 ಓದಿ.) ಇಂಥ ಒಂದು ನಿರ್ಧಾರ ತೆಗೆದುಕೊಳ್ಳಲು ಅವನನ್ನು ಯಾವುದು ಪ್ರೇರಿಸಿತು? ಪ್ರೀತಿಯೇ ಅವನು ತನ್ನ ದಯಾಪರ ಯಜಮಾನನ ಅಧಿಕಾರದ ಕೆಳಗೆ ದಾಸನಾಗಿ ಉಳಿಯಲು ಪ್ರೇರಿಸಿತು.

6 ಅದೇ ರೀತಿಯಲ್ಲಿ, ಯೆಹೋವನ ಮೇಲೆ ನಮಗಿರುವ ಪ್ರೀತಿಯು ನಮ್ಮ ಜೀವನವನ್ನು ಆತನಿಗೆ ಸಮರ್ಪಿಸಿ, ಆ ಸಮರ್ಪಣೆಗನುಸಾರ ಜೀವಿಸಲು ನಮ್ಮನ್ನು ಪ್ರೇರಿಸುತ್ತದೆ. (ರೋಮಾ. 14:7, 8) “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ” ಎಂದು ಅಪೊಸ್ತಲ ಯೋಹಾನನು ಬರೆದನು. (1 ಯೋಹಾ. 5:3) ಈ ಪ್ರೀತಿ ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ. (1 ಕೊರಿಂ. 13:4, 5) ಇತರರೊಂದಿಗೆ ವ್ಯವಹರಿಸುವಾಗ ನೆರೆಯವರ ಮೇಲಿನ ಪ್ರೀತಿಯು, ಅವರ ಅಭಿರುಚಿಗಳನ್ನು ನಾವು ಮೊದಲು ಪರಿಗಣಿಸಿ ಹೀಗೆ ಮಣಿಯುವಂತೆ ನಮ್ಮನ್ನು ಪ್ರೇರಿಸುತ್ತದೆ. ಆದುದರಿಂದ ನಾವು ಸ್ವಾರ್ಥಿಗಳಾಗಿರದೆ ಪರರ ಹಿತಚಿಂತನೆಗಳನ್ನು ಪರಿಗಣಿಸುತ್ತೇವೆ.—ಫಿಲಿ. 2:2, 3.

7 ನಮ್ಮ ನುಡಿಯಾಗಲಿ ವರ್ತನೆಯಾಗಲಿ ಇತರರನ್ನು ಎಡವಿಸಬಾರದು. (ಎಫೆ. 4:29) ಹೌದು, ವಿವಿಧ ಹಿನ್ನೆಲೆ ಮತ್ತು ಸಂಸ್ಕೃತಿಗಳ ಜನರು ಯೆಹೋವನ ಸೇವೆಯಲ್ಲಿ ಮಾಡುವ ಪ್ರಗತಿಯನ್ನು ತಡೆಯುವಂಥ ಯಾವುದೇ ವಿಷಯವನ್ನು ಮಾಡದಿರುವಂತೆ ಪ್ರೀತಿಯು ನಮ್ಮನ್ನು ಪ್ರೇರಿಸುವುದು. ಇದಕ್ಕಾಗಿ ನಾವು ಅನೇಕ ವೇಳೆ ಮಣಿಯಬೇಕಾಗುತ್ತದೆ. ಉದಾಹರಣೆಗೆ, ಮಿಷನೆರಿ ಸಹೋದರಿಯರು ಸೌಂದರ್ಯವರ್ಧಕಗಳನ್ನು ಮತ್ತು ಉದ್ದವಾದ ನೈಲಾನ್‌ ಕಾಲುಚೀಲಗಳನ್ನು (ಸ್ಟಾಕಿಂಗ್‌) ಉಪಯೋಗಿಸುತ್ತಿರಬಹುದು. ಆದರೆ ತಮ್ಮ ನೈತಿಕ ಸ್ವಭಾವಗಳು ಸಂಶಯಿಸಲ್ಪಟ್ಟು ಇತರರನ್ನು ಮುಗ್ಗರಿಸಿ ಬೀಳುವಂತೆ ಮಾಡುವ ಸ್ಥಳಗಳಲ್ಲಿ ಅವನ್ನು ಉಪಯೋಗಿಸಲು ಅವರು ಹಟಹಿಡಿಯುವುದಿಲ್ಲ.—1 ಕೊರಿಂ. 10:31-33.

8 ಯೆಹೋವನ ಮೇಲಿರುವ ಪ್ರೀತಿ ಹೆಮ್ಮೆಯನ್ನು ಜಯಿಸಲು ನಮಗೆ ಸಹಾಯಮಾಡುತ್ತದೆ. ಶಿಷ್ಯರ ಮಧ್ಯೆ ಅತಿ ಶ್ರೇಷ್ಠನು ಯಾರೆಂದು ವಾಗ್ವಾದ ನಡೆದ ಬಳಿಕ ಯೇಸು ಒಂದು ಚಿಕ್ಕ ಮಗುವನ್ನು ಅವರ ನಡುವೆ ನಿಲ್ಲಿಸಿದನು. ಅವನು ಹೇಳಿದ್ದು: “ಯಾವನಾದರೂ ನನ್ನ ಹೆಸರಿನಲ್ಲಿ ಈ ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು; ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು; ಯಾಕಂದರೆ ನಿಮ್ಮೆಲ್ಲರಲ್ಲಿ ಯಾವನು ಚಿಕ್ಕವನೋ ಅವನೇ ದೊಡ್ಡವನು.” (ಲೂಕ 9:48; ಮಾರ್ಕ 9:36) ‘ಚಿಕ್ಕವರಂತೆ’ ನಡೆಯುವುದು ನಮಗೆ ಬಲು ಕಷ್ಟವಾಗಿರಬಹುದು. ನಮ್ಮಲ್ಲಿರುವ ಪಿತ್ರಾರ್ಜಿತ ಅಪರಿಪೂರ್ಣತೆ ಮತ್ತು ಹೆಮ್ಮೆಯು ಪ್ರಸಿದ್ಧಿಗಾಗಿ ಹಾತೊರೆಯುವಂತೆ ಪ್ರೇರಿಸಬಹುದು. ಆದರೆ, ದೀನಭಾವವು ನಾವು ಇತರರಿಗೆ ಬಿಟ್ಟುಕೊಟ್ಟು ಮಣಿಯುವಂತೆ ಮತ್ತು ಮಾನಮರ್ಯಾದೆ ತೋರಿಸುವಂತೆ ಸಹಾಯಮಾಡುವುದು.—ರೋಮಾ. 12:10.

9 ನಾವು ಮಣಿಯುವವರು ಆಗಿರಬೇಕಾದರೆ, ದೇವರಿಂದ ನೇಮಿಸಲ್ಪಟ್ಟವರ ಅಧಿಕಾರವನ್ನು ಅಂಗೀಕರಿಸಬೇಕು. ನಿಜ ಕ್ರೈಸ್ತರೆಲ್ಲರೂ ತಲೆತನದ ಪ್ರಾಮುಖ್ಯ ಮೂಲತತ್ತ್ವವನ್ನು ಒಪ್ಪಿಕೊಳ್ಳುತ್ತಾರೆ. ಅದನ್ನು ಅಪೊಸ್ತಲ ಪೌಲನು ಕೊರಿಂಥದವರಿಗೆ ಸ್ಪಷ್ಟವಾಗಿ ತಿಳಿಯಪಡಿಸಿದನು: “ಒಂದು ಸಂಗತಿಯನ್ನು ನೀವು ತಿಳಿಯಬೇಕೆಂದು ನನ್ನ ಇಷ್ಟ; ಅದೇನಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.”—1 ಕೊರಿಂ. 11:3.

10 ದೇವರ ಅಧಿಕಾರಕ್ಕೆ ಮಣಿಯುವ ಮೂಲಕ ನಮ್ಮ ಪ್ರೀತಿಯ ತಂದೆಯಲ್ಲಿ ನಮಗೆ ವಿಶ್ವಾಸ ಮತ್ತು ಭರವಸೆಯಿದೆ ಎಂದು ತೋರಿಸಿಕೊಡುತ್ತೇವೆ. ನಾವು ಮಾಡುವುದೆಲ್ಲವೂ ಆತನಿಗೆ ತಿಳಿದಿದೆ ಮತ್ತು ಅದಕ್ಕೆ ತಕ್ಕಂತೆ ಖಂಡಿತ ಪ್ರತಿಫಲ ಕೊಡುವನು. ಇದನ್ನು ಮನಸ್ಸಿನಲ್ಲಿಡುವುದು, ಇತರರು ನಮ್ಮನ್ನು ಗೌರವದಿಂದ ಕಾಣದಿರುವಾಗ ಅಥವಾ ತಾಳ್ಮೆಗೆಟ್ಟು ರೇಗುವಾಗ ಮಣಿಯಲು ಸಹಾಯಮಾಡುತ್ತದೆ. ಪೌಲನು ಬರೆದದ್ದು: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” ಈ ಸಲಹೆಗೆ ಒತ್ತುನೀಡುತ್ತಾ ಪೌಲನು ಈ ನಿರ್ದೇಶನವನ್ನು ಕೊಟ್ಟನು: “ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆಂಬದಾಗಿ ಬರೆದದೆ.”—ರೋಮಾ. 12:18, 19.

11 ಕ್ರೈಸ್ತ ಸಭೆಯಲ್ಲಿನ ದೇವನೇಮಿತ ಅಧಿಕಾರಕ್ಕೂ ನಾವು ಮಣಿಯಬೇಕಾಗಿದೆ. ಪ್ರಕಟನೆ 1ನೆಯ ಅಧ್ಯಾಯವು ಕ್ರಿಸ್ತ ಯೇಸು ಸಭೆಯ ‘ನಕ್ಷತ್ರಗಳನ್ನು’ ತನ್ನ ಬಲಗೈಯಲ್ಲಿ ಹಿಡಿದಿರುವುದನ್ನು ಚಿತ್ರಿಸುತ್ತದೆ. (ಪ್ರಕ. 1:16, 20) ವಿಶಾಲಾರ್ಥದಲ್ಲಿ, ಈ “ನಕ್ಷತ್ರಗಳು” ಸಭೆಗಳಲ್ಲಿರುವ ಹಿರಿಯರ ಮಂಡಲಿಗಳನ್ನು ಅಥವಾ ಮೇಲ್ವಿಚಾರಕರನ್ನು ಪ್ರತಿನಿಧಿಸುತ್ತವೆ. ಇಂಥ ನೇಮಿತ ಮೇಲ್ವಿಚಾರಕರು ಕ್ರಿಸ್ತನ ನಾಯಕತ್ವಕ್ಕೆ ಮಣಿಯುತ್ತಾರೆ ಮತ್ತು ಇತರರೊಂದಿಗೆ ವ್ಯವಹರಿಸುವಾಗ ಅವನ ದಯಾಪೂರ್ಣ ರೀತಿಯನ್ನು ಅನುಕರಿಸುತ್ತಾರೆ. ಸಭೆಯಲ್ಲಿರುವ ಎಲ್ಲರೂ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಹೊತ್ತು ಹೊತ್ತಿಗೆ ಆಧ್ಯಾತ್ಮಿಕ ಆಹಾರವನ್ನು ಒದಗಿಸುವಂತೆ ಯೇಸು ಮಾಡಿದ ಏರ್ಪಾಡಿಗೆ ಅಧೀನರಾಗುತ್ತಾರೆ. (ಮತ್ತಾ. 24:45-47) ಇಂದು, ಆ ಆಳು ಒದಗಿಸುವ ವಿಷಯಗಳನ್ನು ಅಧ್ಯಯನ ಮಾಡಿ, ಅನ್ವಯಿಸಿಕೊಳ್ಳಲು ನಮಗಿರುವ ಸಿದ್ಧಮನಸ್ಸು ನಾವು ಕ್ರಿಸ್ತನ ತಲೆತನಕ್ಕೆ ಮಣಿಯುತ್ತಿದ್ದೇವೆಂದು ತೋರಿಸಿಕೊಡುತ್ತದೆ. ಇದು ಶಾಂತಿ ಮತ್ತು ಐಕ್ಯವನ್ನು ಪ್ರವರ್ಧಿಸುತ್ತದೆ.—ರೋಮಾ. 14:13, 19.

ಎಷ್ಟರ ಮಟ್ಟಿಗೆ ಮಣಿಯಬೇಕು?

12 ಮಣಿಯುವುದೆಂದರೆ ನಾವು ನಮ್ಮ ನಂಬಿಕೆ ಅಥವಾ ದೈವಿಕ ಮೂಲತತ್ತ್ವಗಳನ್ನು ರಾಜಿಮಾಡಿಕೊಳ್ಳುತ್ತೇವೆ ಎಂದಲ್ಲ. ಆದಿ ಕ್ರೈಸ್ತರಿಗೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು ಧಾರ್ಮಿಕ ನಾಯಕರು ಆಜ್ಞಾಪಿಸಿದಾಗ ಆ ಕ್ರೈಸ್ತರು ಯಾವ ನಿಲುವು ತೆಗೆದುಕೊಂಡರು? ಪೇತ್ರನೂ ಇತರ ಅಪೊಸ್ತಲರೂ, “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ” ಎಂದು ಧೈರ್ಯದಿಂದ ಹೇಳಿದರು. (ಅ. ಕೃ. 4:18-20; 5:28, 29) ಅಂತೆಯೇ ಇಂದು ಸರಕಾರೀ ಅಧಿಕಾರಿಗಳು ಸುವಾರ್ತೆ ಸಾರುವುದನ್ನು ನಿಲ್ಲಿಸಲು ಪ್ರಯತ್ನಿಸುವಾಗ, ನಾವು ಆ ಸನ್ನಿವೇಶವನ್ನು ಜಾಣ್ಮೆಯಿಂದ ನಿಭಾಯಿಸಲು ಸಾರುವ ವಿಧಾನಗಳನ್ನು ಹೊಂದಿಸಿಕೊಳ್ಳುತ್ತೇವಾದರೂ ಸಾರುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಮನೆಮನೆಯ ಶುಶ್ರೂಷೆಗೆ ನಿರ್ಬಂಧವಿರುವಲ್ಲಿ, ಮನೆಯವರನ್ನು ಸಂಪರ್ಕಿಸಲು ಬೇರೆ ವಿಧಾನಗಳನ್ನು ಕಂಡುಹಿಡಿಯುತ್ತೇವೆ. ಹೀಗೆ ನಮ್ಮ ದೇವದತ್ತ ಆಜ್ಞೆಯನ್ನು ಪಾಲಿಸುತ್ತಾ ಮುಂದುವರಿಯುತ್ತೇವೆ. ಅದೇ ರೀತಿ, ‘ಮೇಲಧಿಕಾರಿಗಳು’ ನಮ್ಮ ಕೂಟಗಳನ್ನು ನಿಷೇಧಿಸುವಲ್ಲಿ ನಾವು ಗಮನ ಸೆಳೆಯದ ಹಾಗೆ ಚಿಕ್ಕ ಚಿಕ್ಕ ಗುಂಪುಗಳಾಗಿ ಕೂಡಿಬರುತ್ತೇವೆ.—ರೋಮಾ. 13:1; ಇಬ್ರಿ. 10:24, 25.

13 ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಅಧಿಕಾರಕ್ಕೆ ಮಣಿಯುವ ಅಗತ್ಯವನ್ನು ಜನರಿಗೆ ತಿಳಿಯಪಡಿಸಿದನು: “ಯಾವನಾದರೂ ನಿಮ್ಮ ಮೇಲಂಗಿಗಾಗಿ ನಿಮ್ಮನ್ನು ನ್ಯಾಯಾಲಯಕ್ಕೆ ಎಳೆದೊಯ್ಯಬೇಕೆಂದಿದ್ದರೆ, ನಿಮ್ಮ ಒಳಂಗಿಯನ್ನು ಸಹ ಅವನಿಗೆ ಕೊಟ್ಟುಬಿಡಿರಿ. ಯಾವ ಸೈನಿಕನಾದರೂ ತನ್ನೊಂದಿಗೆ ಒಂದು ಮೈಲಿ ದೂರ ಬರಬೇಕೆಂದು ನಿಮ್ಮನ್ನು ಒತ್ತಾಯಿಸಿದರೆ, ಅವನೊಂದಿಗೆ ಎರಡು ಮೈಲಿ ದೂರಹೋಗಿ.” (ಮತ್ತಾ. 5:40, 41, ಪರಿಶುದ್ಧ ಬೈಬಲ್‌.) * * ಪರರ ಕಡೆಗಿನ ಹಿತಚಿಂತನೆ ಮತ್ತು ಅವರಿಗೆ ಸಹಾಯಮಾಡುವ ಬಯಕೆಯು ಸಹ ನಾವು ಆ ಹೆಚ್ಚಿಗೆಯ ಮೈಲು ನಡೆಯುವಂತೆ ಅಂದರೆ ಅವರು ಕೇಳಿಕೊಳ್ಳುವುದಕ್ಕಿಂತ ಹೆಚ್ಚಿನದ್ದನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ.—1 ಕೊರಿಂ. 13:5; ತೀತ 3:1, 2.

14 ಆದರೆ ನಾವು ಮಣಿಯಲು ಬಯಸುವುದಾದರೂ ಧರ್ಮಭ್ರಷ್ಟರೊಂದಿಗೆ ಎಂದಿಗೂ ಒಪ್ಪಂದ ಮಾಡಿಕೊಳ್ಳಬಾರದು. ಈ ವಿಷಯದಲ್ಲಿ ನಮ್ಮ ಸ್ಪಷ್ಟ ಮತ್ತು ಸ್ಥಿರವಾದ ನಿಲುವು, ಸತ್ಯದ ಶುದ್ಧತೆ ಮತ್ತು ಸಭೆಯ ಐಕ್ಯವನ್ನು ಕಾಪಾಡಲು ಅತ್ಯಗತ್ಯವಾಗಿದೆ. “ಸುಳ್ಳು ಸಹೋದರರ” ಬಗ್ಗೆ ಪೌಲನು ಬರೆದುದು: “ಸುವಾರ್ತೆಯ ಸತ್ಯಾರ್ಥವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂದು ನಾವು ಅವರಿಗೆ ವಶವಾಗುವದಕ್ಕೆ [“ಮಣಿಯುವುದಕ್ಕೆ,” NW] ಒಂದು ಗಳಿಗೆ ಹೊತ್ತಾದರೂ ಸಮ್ಮತಿಪಡಲಿಲ್ಲ.” (ಗಲಾ. 2:4, 5) ಧರ್ಮಭ್ರಷ್ಟತೆಯು ತೀರ ವಿರಳವಾಗಿ ತೋರಿಬಂದರೂ ನಿಷ್ಠಾವಂತ ಕ್ರೈಸ್ತರು ಯಾವುದು ಸರಿಯೋ ಅದರ ಪರ ಸ್ಥಿರವಾಗಿ ನಿಲ್ಲುವರು.

ಮೇಲ್ವಿಚಾರಕರು ಮಣಿಯುವುದು ಅಗತ್ಯ

15 ಮಣಿಯುವುದು ಮೇಲ್ವಿಚಾರಕರಾಗಿ ನೇಮಕ ಹೊಂದುವವರಿಗೆ ಇರಬೇಕಾದ ಒಂದು ಅರ್ಹತೆಯಾಗಿದೆ. ಪೌಲನು ಬರೆದುದು: “ಮೇಲ್ವಿಚಾರಕನು . . . ನ್ಯಾಯಸಮ್ಮತನು [“ಮಣಿಯುವವನು,” ಪಾದಟಿಪ್ಪಣಿ.] . . . ಆಗಿರಬೇಕು.” (1 ತಿಮೊ. 3:2, 3, NW) ಇದು, ಸಭಾವಿಚಾರಗಳನ್ನು ಚರ್ಚಿಸಲು ನೇಮಿತ ಪುರುಷರು ಕೂಡಿಬರುವಾಗಲಂತೂ ವಿಶೇಷವಾಗಿ ಪ್ರಾಮುಖ್ಯ. ಒಂದು ನಿರ್ಣಯಕ್ಕೆ ಬರುವ ಮೊದಲು ಅಲ್ಲಿ ಹಾಜರಿರುವ ಪ್ರತಿಯೊಬ್ಬ ಹಿರಿಯನು ಏನಾದರೂ ಹೇಳಲೇಬೇಕೆಂಬ ಕಟ್ಟುನಿಟ್ಟು ಇಲ್ಲದಿದ್ದರೂ ಅವರಿಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮತ್ತು ಸ್ಪಷ್ಟವಾಗಿ ತಿಳಿಯಪಡಿಸುವ ಅವಕಾಶವಿದೆ. ಚರ್ಚೆಯ ಸಮಯದಲ್ಲಿ, ಅನ್ವಯವಾಗುವ ಬೈಬಲ್‌ ಮೂಲತತ್ತ್ವಗಳ ಕುರಿತು ಇತರ ಹಿರಿಯರು ಹೇಳುವುದನ್ನು ಕೇಳಿಸಿಕೊಳ್ಳುವಾಗ ಒಬ್ಬನಿಗಿದ್ದ ಅಭಿಪ್ರಾಯವು ಬದಲಾಗಬಹುದು. ಒಬ್ಬ ಪ್ರೌಢ ಹಿರಿಯನು ಇತರರ ದೃಷ್ಟಿಕೋನಗಳನ್ನು ಪ್ರತಿಭಟಿಸಿ, ತನ್ನ ಅಭಿಪ್ರಾಯಗಳೇ ಸರಿ ಎಂದು ಹೇಳದೆ ಮಣಿಯುತ್ತಾನೆ. ಚರ್ಚೆಯ ಆರಂಭದಲ್ಲಿ ವಿಭಿನ್ನ ಅಭಿಪ್ರಾಯಗಳಿದ್ದಿರಬಹುದಾದರೂ, ಪ್ರಾರ್ಥನಾಪೂರ್ವಕವಾಗಿ ಪುನರಾಲೋಚಿಸುವುದು ನಮ್ರರೂ ಮಣಿಯುವವರೂ ಆದ ಹಿರಿಯರ ಮಧ್ಯೆ ಐಕ್ಯವನ್ನು ವರ್ಧಿಸುತ್ತದೆ.—1 ಕೊರಿಂ. 1:10; ಎಫೆಸ 4:1-3 ಓದಿ.

16 ಒಬ್ಬ ಕ್ರೈಸ್ತ ಹಿರಿಯನು ತನ್ನ ಎಲ್ಲ ಕಾರ್ಯಕಲಾಪಗಳನ್ನು ದೇವಪ್ರಭುತ್ವಾತ್ಮಕ ಕ್ರಮಕ್ಕೆ ಹೊಂದಿಕೆಯಲ್ಲಿ ಮಾಡಲು ಪ್ರಯತ್ನಿಸಬೇಕು. ಅದೇ ಮನೋಭಾವವು ಅವನ ಕುರಿಪಾಲನೆಯಲ್ಲಿಯೂ ತೋರಿಬರಬೇಕು. ಇದು ಅವನು ಇತರರಿಗೆ ಪರಿಗಣನೆ ಮತ್ತು ಸೌಮ್ಯತೆಯನ್ನು ತೋರಿಸಲು ಸಹಾಯಮಾಡುತ್ತದೆ. “ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ ದೇವರ ಚಿತ್ತದ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ ಸಿದ್ಧಮನಸ್ಸಿನಿಂದಲೂ ಮೇಲ್ವಿಚಾರಣೆಮಾಡಿರಿ” ಎಂದು ಪೇತ್ರನು ಬರೆದನು.—1 ಪೇತ್ರ 5:2.

17 ಸಭೆಯಲ್ಲಿರುವ ವೃದ್ಧ ಸದಸ್ಯರು ತಮಗಿಂತ ಚಿಕ್ಕ ಪ್ರಾಯದವರು ಕೊಡುವ ಬೆಲೆಬಾಳುವ ಸಹಾಯಕ್ಕೆ ಕೃತಜ್ಞರಾಗಿದ್ದು ಅವರನ್ನು ಗೌರವದಿಂದ ಕಾಣುತ್ತಾರೆ. ಅದೇ ರೀತಿ, ಯೆಹೋವನ ಸೇವೆಯಲ್ಲಿ ಅನೇಕ ವರ್ಷಗಳ ಅನುಭವವಿರುವ ವೃದ್ಧರನ್ನು ಯೌವನಸ್ಥರು ಗೌರವಿಸುತ್ತಾರೆ. (1 ತಿಮೊ. 5:1, 2) ಕ್ರೈಸ್ತ ಹಿರಿಯರು ಕೆಲವು ಜವಾಬ್ದಾರಿಗಳನ್ನು ವಹಿಸಿಕೊಡಬಹುದಾದ ಅರ್ಹ ಪುರುಷರನ್ನು ಹುಡುಕಿ, ದೇವರ ಹಿಂಡನ್ನು ಪರಾಮರಿಸಲು ಸಹಾಯಮಾಡುವಂತೆ ಅವರಿಗೆ ತರಬೇತಿ ನೀಡುತ್ತಾರೆ. (2 ತಿಮೊ. 2:1, 2) ಪ್ರತಿಯೊಬ್ಬ ಕ್ರೈಸ್ತನು ಪೌಲನ ಪ್ರೇರಿತ ಸಲಹೆಯನ್ನು ಬೆಲೆಯುಳ್ಳದ್ದೆಂದು ಎಣಿಸಬೇಕು: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ [“ಮಣಿಯಿರಿ,” NW ಪಾದಟಿಪ್ಪಣಿ.]. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.”—ಇಬ್ರಿ. 13:17.

ಕುಟುಂಬದಲ್ಲಿ ಮಣಿಯುವುದು

18 ಕುಟುಂಬ ವೃತ್ತದಲ್ಲಿಯೂ ಮಣಿಯುವುದು ಆವಶ್ಯಕ. (ಕೊಲೊಸ್ಸೆ 3:18-21 ಓದಿ.) ಕ್ರೈಸ್ತ ಕುಟುಂಬದ ಪ್ರತಿಯೊಬ್ಬ ಸದಸ್ಯರ ನಿರ್ದಿಷ್ಟ ಪಾತ್ರಗಳನ್ನು ಬೈಬಲ್‌ ತಿಳಿಯಪಡಿಸುತ್ತದೆ. ತಂದೆಯಾಗಿರುವವನು ತನ್ನ ಪತ್ನಿಗೆ ಶಿರಸ್ಸಾಗಿದ್ದಾನೆ, ಮಾತ್ರವಲ್ಲ ಮಕ್ಕಳನ್ನು ನಿರ್ದೇಶಿಸುವುದರಲ್ಲಿ ಪ್ರಧಾನ ಜವಾಬ್ದಾರಿಯನ್ನೂ ಹೊಂದಿದ್ದಾನೆ. ಹೆಂಡತಿಯು ತನ್ನ ಗಂಡನ ಅಧಿಕಾರವನ್ನು ಮಾನ್ಯ ಮಾಡಬೇಕು ಮತ್ತು ಮಕ್ಕಳು ಸಹ ಕರ್ತನಲ್ಲಿರುವವರಿಗೆ ತಕ್ಕ ಹಾಗೆ ವಿಧೇಯತೆ ತೋರಿಸಲು ಆದಷ್ಟು ಪ್ರಯಾಸಪಡಬೇಕು. ಕುಟುಂಬದ ಪ್ರತಿಯೊಬ್ಬ ಸದಸ್ಯರು ಯೋಗ್ಯ ರೀತಿಯಲ್ಲಿ ಪರಸ್ಪರ ಮಣಿಯುವ ಮೂಲಕ ಕುಟುಂಬದ ಐಕ್ಯ ಮತ್ತು ಶಾಂತಿಯನ್ನು ವರ್ಧಿಸಬಲ್ಲರು. ಈ ಅಂಶವನ್ನು ಸ್ಪಷ್ಟೀಕರಿಸುವ ಕೆಲವು ಮಾದರಿಗಳು ಬೈಬಲಿನಲ್ಲಿವೆ.

19 ಪುರಾತನ ಇಸ್ರಾಯೇಲಿನಲ್ಲಿ ಮಹಾಯಾಜಕನಾಗಿದ್ದ ಏಲಿಯ ಉದಾಹರಣೆಯನ್ನು ತೆಗೆದುಕೊಳ್ಳಿ. ಏಲಿಯ ಪುತ್ರರಾದ ಹೊಫ್ನಿ ಮತ್ತು ಫೀನೆಹಾಸ್‌ ‘ಬಹುದುಷ್ಟರಾಗಿದ್ದು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ.’ ಅವರು ದೇವದರ್ಶನದ ಗುಡಾರದ ಬಾಗಲಿನಲ್ಲಿ ಸೇವೆಮಾಡುತ್ತಿದ್ದ ಸ್ತ್ರೀಯರೊಂದಿಗೆ ಜಾರತ್ವ ಮಾಡುತ್ತಿದ್ದರು. ಈ ಕೆಟ್ಟ ವರದಿಗಳು ಏಲಿಯ ಕಿವಿಗೆ ಬಿದ್ದಾಗ ಅವನ ಪ್ರತಿಕ್ರಿಯೆ ಏನಾಗಿತ್ತು? ಅವರು ಯೆಹೋವನ ವಿರುದ್ಧ ಪಾಪಮಾಡಿದ್ದಲ್ಲಿ, ಅವರಿಗಾಗಿ ಪ್ರಾರ್ಥಿಸಿ ಮಧ್ಯಸ್ಥಿಕೆ ವಹಿಸಲು ಯಾರೂ ಇಲ್ಲವೆಂದು ಅವರಿಗೆ ಹೇಳಿದನೇ ಹೊರತು ಅವರನ್ನು ತಿದ್ದಿ ಶಿಸ್ತಿಗೊಳಪಡಿಸಲಿಲ್ಲ. ಇದರಿಂದಾಗಿ ಏಲಿಯ ಪುತ್ರರು ತಮ್ಮ ಪಾಪ ಕೃತ್ಯಗಳಲ್ಲೇ ಮುಂದುವರಿದರು. ಕೊನೆಗೆ, ಅವರು ಮರಣಯೋಗ್ಯರೆಂದು ಯೆಹೋವನು ನ್ಯಾಯಬದ್ಧವಾಗಿಯೇ ನಿರ್ಣಯಿಸಿದನು. ಅವರ ಮರಣವಾರ್ತೆಯನ್ನು ಕೇಳಿಸಿಕೊಂಡಾಗ ಏಲಿ ಸಹ ಮೃತಪಟ್ಟನು. ಎಂಥ ಶೋಚನೀಯ ಅಂತ್ಯಫಲ! ಏಲಿಯು ಅವರ ದುಷ್ಕೃತ್ಯಗಳಿಗೆ ಅಯೋಗ್ಯ ರೀತಿಯಲ್ಲಿ ಮಣಿದನು. ಅಂದರೆ ಅವರನ್ನು ತಿದ್ದದೆ ಹಾಗೇ ಬಿಟ್ಟುಬಿಟ್ಟನು. ಅದು ಸರಿಯಾಗಿರಲಿಲ್ಲ.—1 ಸಮು. 2:12-17, 22-25, 34, 35; 4:17, 18.

20 ಇದಕ್ಕೆ ವ್ಯತಿರಿಕ್ತವಾಗಿ, ದೇವರು ತನ್ನ ದೂತಪುತ್ರರೊಂದಿಗೆ ವ್ಯವಹರಿಸಿದ ರೀತಿಯನ್ನು ಪರಿಗಣಿಸಿರಿ. ಯೆಹೋವನು ತನ್ನ ದೂತರೊಂದಿಗೆ ಕೂಡಿಬಂದ ಒಂದು ಗಮನಾರ್ಹ ದರ್ಶನವನ್ನು ಪ್ರವಾದಿ ಮೀಕಾಯೆಹು ಕಂಡನು. ಆ ದರ್ಶನದಲ್ಲಿ, ಇಸ್ರಾಯೇಲಿನ ದುಷ್ಟ ಅರಸ ಆಹಾಬನು ಪತನಗೊಳ್ಳುವಂತೆ ಯಾರು ಅವನನ್ನು ಪ್ರೇರಿಸುವಿರೆಂದು ಯೆಹೋವನು ದೇವದೂತರನ್ನು ಕೇಳಿದನು. ಅದಕ್ಕೆ ಉತ್ತರವಾಗಿ ವಿವಿಧ ಆತ್ಮಪುತ್ರರು ತಮ್ಮ ತಮ್ಮ ಸಲಹೆಗಳನ್ನು ನೀಡಿದಾಗ ಯೆಹೋವನು ಕಿವಿಗೊಟ್ಟನು. ಆಗ ಒಬ್ಬ ದೇವದೂತನು ತಾನದನ್ನು ಮಾಡುವೆನೆಂದು ಮುಂದೆ ಬಂದನು. ಯೆಹೋವನು ಅವನಿಗೆ, ಅದನ್ನು ಹೇಗೆ ಮಾಡುವಿಯೆಂದು ಕೇಳಿದನು. ಅವನ ಉತ್ತರದಿಂದ ತೃಪ್ತನಾದ ಯೆಹೋವನು ಹಾಗೆಯೇ ಮಾಡಲು ಆಜ್ಞಾಪಿಸಿದನು. (1 ಅರ. 22:19-23) ಇದನ್ನು ಮಾನವರ ವಿಷಯದಲ್ಲಿ ಹೋಲಿಸುವಾಗ, ಈ ವೃತ್ತಾಂತದಿಂದ ಕುಟುಂಬ ಸದಸ್ಯರು ಮಣಿಯುವ ಕುರಿತು ಪಾಠಗಳನ್ನು ಕಲಿತುಕೊಳ್ಳಸಾಧ್ಯವಿದೆ ಅಲ್ಲವೆ? ಪತಿ ಮತ್ತು ತಂದೆಯಾಗಿರುವ ಒಬ್ಬ ಕ್ರೈಸ್ತನು ತನ್ನ ಪತ್ನಿ ಮತ್ತು ಮಕ್ಕಳ ಅಭಿಪ್ರಾಯ ಹಾಗೂ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅದೇ ಸಮಯದಲ್ಲಿ, ತಮ್ಮ ಅಭಿಪ್ರಾಯ ಮತ್ತು ಮೆಚ್ಚಿಕೆಗಳನ್ನು ತಿಳಿಸುವ ಹೆಂಡತಿ-ಮಕ್ಕಳು ಕುಟುಂಬದ ತಲೆಯ ತೀರ್ಮಾನಕ್ಕೆ ಮಣಿಯುತ್ತಾ ಗೌರವವನ್ನು ತೋರಿಸಬೇಕು. ಏಕೆಂದರೆ ನಿರ್ಣಯ ಮಾಡುವಂಥ ಶಾಸ್ತ್ರೀಯ ಅಧಿಕಾರ ಅವನಿಗಿದೆ.

21 ಮಣಿಯುವ ವಿಷಯದಲ್ಲಿ ಯೆಹೋವನ ಪ್ರೀತಿಯ ಮತ್ತು ವಿವೇಕದ ಮರುಜ್ಞಾಪನಗಳಿಗಾಗಿ ನಾವೆಷ್ಟು ಕೃತಜ್ಞರಾಗಿದ್ದೇವೆ! (ಕೀರ್ತ. 119:99) ಯೋಗ್ಯವಾಗಿರುವಾಗ ಮಣಿಯುವುದು ದಾಂಪತ್ಯದಲ್ಲಿ ಆನಂದವನ್ನು ಕಂಡುಕೊಳ್ಳಲು ಹೇಗೆ ಸಹಾಯಮಾಡುತ್ತದೆ? ಇದನ್ನು ಮುಂದಿನ ಲೇಖನವು ಚರ್ಚಿಸುತ್ತದೆ.

[ಪಾದಟಿಪ್ಪಣಿಗಳು]

^ ಪ್ಯಾರ. 4 ಅಪೊಸ್ತಲ ಪೌಲನು ಬಳಸಿದ ಪದವನ್ನು ಕೇವಲ ಒಂದೇ ಪದದಿಂದ ಭಾಷಾಂತರಿಸಲು ಕಷ್ಟ. ಒಂದು ಪರಾಮರ್ಶನ ಗ್ರಂಥವು ಹೇಳುವುದು: “ನ್ಯಾಯಸಮ್ಮತತೆಯಲ್ಲಿ, ಒಬ್ಬನು ಮಣಿದು ತನಗಿರುವ ಹಕ್ಕುಗಳನ್ನು ಬಿಟ್ಟುಕೊಡಲು ಮತ್ತು ಇತರರಿಗೆ ಪರಿಗಣನೆ ಹಾಗೂ ಸೌಮ್ಯತೆಯನ್ನು ತೋರಿಸಲು ಮನಸ್ಸುಳ್ಳವನಾಗಿರುವುದು ಒಳಗೂಡಿದೆ.” ಅಂದರೆ ಆ ಪದವು ಮಣಿಯುವುದು ಮತ್ತು ನ್ಯಾಯಸಮ್ಮತರಾಗಿರುವುದನ್ನು ಅರ್ಥೈಸುತ್ತದೆಯೇ ಹೊರತು, ಧರ್ಮಶಾಸ್ತ್ರವನ್ನು ಎಳೆಯಷ್ಟೂ ಬಿಡದೆ ಪಾಲಿಸಬೇಕೆಂದು ಒತ್ತಾಯಿಸುವುದನ್ನು ಅಥವಾ ತನಗೆ ಹಕ್ಕಿರುವುದರಿಂದ ಮಾಡೇತೀರುವನೆಂದು ಹಠಹಿಡಿಯುವುದನ್ನು ಅರ್ಥೈಸುವುದಿಲ್ಲ.

^ ಪ್ಯಾರ. 17 2005, ಫೆಬ್ರವರಿ 15ರ ಕಾವಲಿನಬುರುಜು, ಪುಟ 23-6ರಲ್ಲಿರುವ ‘ನಿನ್ನನ್ನು ಬಿಟ್ಟೀ ಹಿಡಿದರೆ’ ಎಂಬ ಲೇಖನ ನೋಡಿ.

^ ಪ್ಯಾರ. 17 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ನೀವು ಹೇಗೆ ಉತ್ತರಿಸುವಿರಿ?

• ಮಣಿಯುವುದರಿಂದ ಸಿಗುವ ಒಳ್ಳೆಯ ಫಲಗಳಾವುವು?

• ಮೇಲ್ವಿಚಾರಕರು ಮಣಿಯುವ ಸ್ವಭಾವವನ್ನು ಹೇಗೆ ಪ್ರದರ್ಶಿಸಬಲ್ಲರು?

• ಕುಟುಂಬ ವೃತ್ತದಲ್ಲೂ ಮಣಿಯುವ ಸ್ವಭಾವವು ಪ್ರಾಮುಖ್ಯವೇಕೆ?

[ಅಧ್ಯಯನ ಪ್ರಶ್ನೆಗಳು]

1, 2. ಮಣಿಯುವುದರ ಬಗ್ಗೆ ಬೈಬಲ್‌ ಏನನ್ನುತ್ತದೆ ಮತ್ತು ಅದು ಏಕೆ ಯೋಗ್ಯವಾಗಿದೆ?

3, 4. (ಎ) ನಾವು ಮಣಿಯುವಾಗ ಸಿಗುವ ಪ್ರಯೋಜನಗಳನ್ನು ದೃಷ್ಟಾಂತದ ಮೂಲಕ ತಿಳಿಸಿ. (ಬಿ) ನಾವು ಏನನ್ನು ಪರಿಗಣಿಸುವೆವು?

5. ಮೋಶೆಯ ಧರ್ಮಶಾಸ್ತ್ರದ ಪ್ರಕಾರ, ಒಬ್ಬ ದಾಸನು ತನ್ನ ಯಜಮಾನನೊಂದಿಗೇ ಉಳಿಯುವಂತೆ ನಿರ್ಣಯಿಸಲು ಯಾವುದು ಪ್ರೇರಿಸಿತು?

6. ನಾವು ಮಣಿಯುವುದರಲ್ಲಿ ಪ್ರೀತಿ ಹೇಗೆ ಒಳಗೊಂಡಿದೆ?

7. ಮಣಿಯುವುದು, ಶುಶ್ರೂಷೆಯಲ್ಲಿ ಯಾವ ಪಾತ್ರ ವಹಿಸುತ್ತದೆ?

8. ‘ಚಿಕ್ಕವರಂತೆ’ ನಡೆಯಲು ದೇವರ ಮೇಲಿರುವ ಪ್ರೀತಿ ನಮಗೆ ಹೇಗೆ ಸಹಾಯ ಮಾಡಬಲ್ಲದು?

9. ನಾವು ಮಣಿಯುವವರು ಆಗಿರಬೇಕಾದರೆ ಏನನ್ನು ಗಣನೆಗೆ ತೆಗೆದುಕೊಳ್ಳಬೇಕು?

10. ಯೆಹೋವನ ಅಧಿಕಾರಕ್ಕೆ ನಾವು ಮಣಿಯುವುದು ಏನನ್ನು ತೋರಿಸಿಕೊಡುತ್ತದೆ?

11. ನಾವು ಕ್ರಿಸ್ತನ ತಲೆತನಕ್ಕೆ ಮಣಿಯುತ್ತಿದ್ದೇವೆಂದು ಹೇಗೆ ತೋರಿಸಬಲ್ಲೆವು?

12. ಮಣಿಯುವುದಕ್ಕೆ ಪರಿಮಿತಿಗಳಿರುವುದೇಕೆ?

13. ಅಧಿಕಾರದಲ್ಲಿರುವವರಿಗೆ ಮಣಿಯುವ ವಿಷಯದಲ್ಲಿ ಯೇಸು ಏನು ಹೇಳಿದನು?

14. ನಾವು ಧರ್ಮಭ್ರಷ್ಟತೆಗೆ ಎಂದಿಗೂ ಮಣಿಯಬಾರದೇಕೆ?

15. ಕ್ರೈಸ್ತ ಮೇಲ್ವಿಚಾರಕರು ಕೂಡಿಬರುವಾಗ ಯಾವ ವಿಧದಲ್ಲಿ ಮಣಿಯುವವರಾಗಿರುತ್ತಾರೆ?

16. ಕ್ರೈಸ್ತ ಮೇಲ್ವಿಚಾರಕನೊಬ್ಬನು ಯಾವ ಮನೋಭಾವವನ್ನು ಪ್ರದರ್ಶಿಸಬೇಕು?

17. ಇತರರೊಂದಿಗೆ ವ್ಯವಹರಿಸುವಾಗ ಸಭೆಯಲ್ಲಿರುವ ಎಲ್ಲರೂ ಮಣಿಯುವ ಸ್ವಭಾವವನ್ನು ಹೇಗೆ ತೋರಿಸಬಲ್ಲರು?

18. ಕುಟುಂಬದಲ್ಲಿ ಮಣಿಯುವ ಸ್ವಭಾವವು ಯೋಗ್ಯವಾಗಿರುವುದೇಕೆ?

19, 20 (ಎ) ಮಣಿಯುವ ವಿಷಯದಲ್ಲಿ ಏಲಿ ಮತ್ತು ಯೆಹೋವನ ಮಾದರಿಯಲ್ಲಿದ್ದ ವ್ಯತ್ಯಾಸವನ್ನು ತಿಳಿಸಿರಿ. (ಬಿ) ಈ ಮಾದರಿಗಳಿಂದ ಹೆತ್ತವರು ಯಾವ ಪಾಠಗಳನ್ನು ಕಲಿಯಬಲ್ಲರು?

21. ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

[ಪುಟ 4ರಲ್ಲಿರುವ ಚಿತ್ರ]

ಹಿರಿಯರು ಇತರರೊಂದಿಗೆ ವ್ಯವಹರಿಸುವಾಗ ಕ್ರಿಸ್ತನ ದಯಾಭಾವವನ್ನು ಅನುಕರಿಸುತ್ತಾರೆ

[ಪುಟ 6ರಲ್ಲಿರುವ ಚಿತ್ರ]

ಸಭಾ ಹಿರಿಯರ ಕೂಟದಲ್ಲಿ, ಪ್ರಾರ್ಥನಾಪೂರ್ವಕ ಪುನರಾಲೋಚನೆ ಮತ್ತು ಮಣಿಯುವ ಸ್ವಭಾವ ಐಕ್ಯವನ್ನು ಪ್ರವರ್ಧಿಸುತ್ತದೆ