ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಲ್ಲ ವಿಷಯಗಳಲ್ಲೂ ದೇವರ ಮಾರ್ಗದರ್ಶನವನ್ನು ಅನುಸರಿಸಿ

ಎಲ್ಲ ವಿಷಯಗಳಲ್ಲೂ ದೇವರ ಮಾರ್ಗದರ್ಶನವನ್ನು ಅನುಸರಿಸಿ

ಎಲ್ಲ ವಿಷಯಗಳಲ್ಲೂ ದೇವರ ಮಾರ್ಗದರ್ಶನವನ್ನು ಅನುಸರಿಸಿ

“ದೇವರು ಇಂಥವನು; ಆತನು ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು, ನಿರಂತರವೂ ನಮ್ಮನ್ನು ನಡಿಸುವವನಾಗಿದ್ದಾನೆ [“ಮಾರ್ಗದರ್ಶಿಸುವವನಾಗಿದ್ದಾನೆ,” NW].”—ಕೀರ್ತ. 48:14.

ವ್ಯರ್ಥವಾಗಿರುವ ಇಲ್ಲವೆ ಅಪಾಯಕಾರಿಯಾಗಿರುವ ವಿಷಯಗಳು ಪ್ರಯೋಜನಕರವಾಗಿವೆ ಎಂದು ನಾವೆಣಿಸಿ ಸುಲಭವಾಗಿ ಮೋಸಹೋಗಬಹುದು. (ಜ್ಞಾನೋ. 12:11) ಕ್ರೈಸ್ತರಿಗೆ ಯೋಗ್ಯವಲ್ಲದ ಯಾವುದಾದರೂ ಒಂದು ವಿಷಯವನ್ನು ನಾವು ನಿಜಕ್ಕೂ ಮಾಡಬಯಸುವುದಾದರೆ, ಅದನ್ನು ಮಾಡುವಂತೆ ಅನೇಕವೇಳೆ ನಮ್ಮ ಹೃದಯ ಕಾರಣಗಳನ್ನು ಕೊಟ್ಟು ಪ್ರಚೋದಿಸುವುದು. (ಯೆರೆ. 17:5, 9) ಆದುದರಿಂದಲೇ ಕೀರ್ತನೆಗಾರನು, ‘ನಿನ್ನ ಬೆಳಕನ್ನೂ ನಿನ್ನ ಸತ್ಯವನ್ನೂ ಕಳುಹಿಸು; ಅವು ನನ್ನನ್ನು ನಡೆಸಲಿ’ ಎಂದು ಯೆಹೋವನಿಗೆ ಪ್ರಾರ್ಥಿಸಿದಾಗ ತನ್ನ ವಿವೇಕವನ್ನು ತೋರಿಸಿದನು. (ಕೀರ್ತ. 43:3, NIBV) ಅವನು ಯೆಹೋವನಲ್ಲಿ ಭರವಸೆಯಿಟ್ಟನು, ತನ್ನ ಸೀಮಿತ ವಿವೇಕದ ಮೇಲೆ ಇಡಲಿಲ್ಲ. ಅವನು ಹೆಚ್ಚು ಉತ್ತಮವಾದ ಮಾರ್ಗದರ್ಶನಕ್ಕಾಗಿ ಬೇರೆ ಎಲ್ಲಿ ತಾನೇ ನೋಡಸಾಧ್ಯವಿತ್ತು? ನಾವು ಕೂಡ ಕೀರ್ತನೆಗಾರನಂತೆ ಮಾರ್ಗದರ್ಶನಕ್ಕಾಗಿ ದೇವರ ಕಡೆಗೆ ನೋಡಬೇಕು.

2 ಆದರೆ, ನಾವೇಕೆ ಬೇರೆ ಎಲ್ಲದಕ್ಕಿಂತಲೂ ಹೆಚ್ಚಾಗಿ ಯೆಹೋವನ ಮಾರ್ಗದರ್ಶನದಲ್ಲಿಯೇ ಭರವಸೆಯಿಡಬೇಕು? ಅದನ್ನು ನಾವು ಯಾವಾಗ ಅನುಸರಿಸಬೇಕು? ಅದರಿಂದ ಪ್ರಯೋಜನ ಪಡೆಯಬೇಕಾದರೆ ಯಾವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು ಮತ್ತು ಇಂದು ಯೆಹೋವನು ನಮ್ಮನ್ನು ಹೇಗೆ ಮಾರ್ಗದರ್ಶಿಸುತ್ತಾನೆ? ಈ ಎಲ್ಲ ಪ್ರಾಮುಖ್ಯ ಪ್ರಶ್ನೆಗಳನ್ನು ನಾವು ಈ ಲೇಖನದಲ್ಲಿ ಚರ್ಚಿಸಲಿರುವೆವು.

ಯೆಹೋವನ ಮಾರ್ಗದರ್ಶನದಲ್ಲಿ ಯಾಕೆ ಭರವಸೆಯಿಡಬೇಕು?

3 ಯೆಹೋವನು ನಮ್ಮ ಸ್ವರ್ಗೀಯ ತಂದೆಯಾಗಿದ್ದಾನೆ. (1 ಕೊರಿಂ. 8:6) ನಮ್ಮಲ್ಲಿ ಒಬ್ಬೊಬ್ಬರ ಬಗ್ಗೆ ಎಲ್ಲಾ ವಿವರಗಳು ಆತನಿಗೆ ಗೊತ್ತು. ಅಲ್ಲದೆ ಆತನು ನಮ್ಮ ಹೃದಯಗಳನ್ನೂ ಓದಬಲ್ಲನು. (1 ಸಮು. 16:7; ಜ್ಞಾನೋ. 21:2) ರಾಜ ದಾವೀದನು ದೇವರಿಗೆ ಹೇಳಿದ್ದು: “ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ; ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ; ಯೆಹೋವನೇ, ನನ್ನ ನಾಲಿಗೆಯ ಮಾತುಗಳಲ್ಲಿ ನೀನು ಅರಿಯದೆ ಇರುವಂಥದು ಒಂದೂ ಇಲ್ಲ.” (ಕೀರ್ತ. 139:2, 4) ಯೆಹೋವನು ನಮ್ಮನ್ನು ಚೆನ್ನಾಗಿ ಬಲ್ಲವನಾಗಿರುವುದರಿಂದ ನಮಗೇನು ಪ್ರಯೋಜನಕರವಾಗಿದೆಯೆಂದು ಸಹ ಆತನಿಗೆ ತಿಳಿದಿರುತ್ತದೆ ಎಂಬುದರ ಬಗ್ಗೆ ನಾವು ಸಂಶಯಪಡಬೇಕೋ? ಅಷ್ಟೇ ಅಲ್ಲ, ಯೆಹೋವನು ಸಕಲ ವಿವೇಕಸಂಪನ್ನನೂ ಆಗಿದ್ದಾನೆ. ಎಲ್ಲವನ್ನು ನೋಡುತ್ತಾನೆ, ಯಾವನೇ ಮಾನವನಿಗಿಂತಲೂ ಆಳವಾಗಿ ವಿಷಯಗಳನ್ನು ಪರಿಶೀಲಿಸುತ್ತಾನೆ ಮತ್ತು ಆರಂಭದಲ್ಲೇ ಅಂತ್ಯವನ್ನು ಬಲ್ಲವನಾಗಿದ್ದಾನೆ. (ಯೆಶಾ. 46:9-11; ರೋಮಾ. 11:33) ಆತನು ‘ಜ್ಞಾನನಿಧಿಯಾದ ಒಬ್ಬನೇ ದೇವರಾಗಿದ್ದಾನೆ.’—ರೋಮಾ. 16:27.

4 ಇದಕ್ಕೆ ಕೂಡಿಸಿ, ಯೆಹೋವನು ನಮ್ಮನ್ನು ತುಂಬಾ ಪ್ರೀತಿಸುತ್ತಾನೆ ಮತ್ತು ಸದಾ ನಮಗೆ ಒಳ್ಳೇದಾಗುವುದನ್ನೇ ಬಯಸುತ್ತಾನೆ. (ಯೋಹಾ. 3:16; 1 ಯೋಹಾ. 4:8) ಪ್ರೀತಿಯ ದೇವರಾಗಿರುವ ಆತನು ನಮಗೆ ಎಲ್ಲವನ್ನೂ ಧಾರಾಳವಾಗಿ ಕೊಡುತ್ತಾನೆ. ಶಿಷ್ಯ ಯಾಕೋಬನು ಬರೆದುದು: “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ.” (ಯಾಕೋ. 1:17) ದೇವರ ಮಾರ್ಗದರ್ಶನಕ್ಕೆ ಅನುಸಾರವಾಗಿ ನಡೆಯುವವರು ಆತನ ಉದಾರತೆಯಿಂದ ಬಲು ಪ್ರಯೋಜನ ಹೊಂದುತ್ತಾರೆ.

5 ಕೊನೆಯಲ್ಲಿ, ಯೆಹೋವನು ಸರ್ವಶಕ್ತನಾಗಿದ್ದಾನೆ. ಈ ವಿಷಯದಲ್ಲಿ ಕೀರ್ತನೆಗಾರನು ಹೇಳಿದ್ದು: “ಪರಾತ್ಪರನ ಮರೆಹೊಕ್ಕಿರುವವನು ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು. ನಾನು ಯೆಹೋವನಿಗೆ—ನೀನೇ ನನ್ನ ಶರಣನು ನನ್ನ ದುರ್ಗವು ನಾನು ಭರವಸವಿಟ್ಟಿರುವ ನನ್ನ ದೇವರು ಎಂದು ಹೇಳುವೆನು.” (ಕೀರ್ತ. 91:1, 2) ನಾವು ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವಾಗ ವಿಫಲನಾಗದ ದೇವರಲ್ಲಿ ಆಶ್ರಯವನ್ನು ಪಡೆದುಕೊಳ್ಳುತ್ತಿದ್ದೇವೆ. ನಮಗೆ ವಿರೋಧ ಬಂದರೂ ಯೆಹೋವನು ನಮ್ಮನ್ನು ಬೆಂಬಲಿಸುತ್ತಾನೆ. ಆತನು ನಮ್ಮನ್ನು ನಿರಾಶೆಗೊಳಿಸುವುದಿಲ್ಲ. (ಕೀರ್ತ. 71:4, 5; ಜ್ಞಾನೋಕ್ತಿ 3:19-26 ಓದಿ.) ಹೌದು, ನಮಗೆ ಯಾವುದು ಅತ್ಯುತ್ತಮವಾಗಿರುತ್ತದೆ ಎಂದು ಯೆಹೋವನಿಗೆ ಗೊತ್ತಿದೆ, ಅತ್ಯುತ್ತಮವಾದದ್ದೇ ನಮಗೆ ಸಿಗಬೇಕೆಂದು ಆತನು ಬಯಸುತ್ತಾನೆ. ಮಾತ್ರವಲ್ಲ, ನಮಗೆ ಅತ್ಯುತ್ತಮವಾದದ್ದನ್ನು ಕೊಡಲು ಆತನು ಶಕ್ತನೂ ಆಗಿದ್ದಾನೆ. ಆತನ ಮಾರ್ಗದರ್ಶನವನ್ನು ನಾವು ಅಲಕ್ಷ್ಯಮಾಡುವುದು ಎಂಥ ಬುದ್ಧಿಗೇಡಿತನವಾಗಿರುವುದು! ಹಾಗಾದರೆ, ಆ ಮಾರ್ಗದರ್ಶನವು ನಮಗೆ ಯಾವಾಗ ಅಗತ್ಯವಾಗಿರುತ್ತದೆ?

ನಮಗೆ ಮಾರ್ಗದರ್ಶನ ಯಾವಾಗ ಅಗತ್ಯ?

6 ವಾಸ್ತವದಲ್ಲಿ, ಎಳೆವಯಸ್ಸಿನಿಂದ ಇಳಿವಯಸ್ಸಿನವರೆಗೆ ನಮಗೆ ಜೀವನದುದ್ದಕ್ಕೂ ದೇವರ ಮಾರ್ಗದರ್ಶನದ ಅಗತ್ಯವಿದೆ. ಕೀರ್ತನೆಗಾರನು ಹೇಳಿದ್ದು: “ದೇವರು ಇಂಥವನು; ಆತನು ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು, ನಿರಂತರವೂ [“ಸಾಯುವವರೆಗೂ,” NW] ನಮ್ಮನ್ನು ನಡಿಸುವವನಾಗಿದ್ದಾನೆ [“ಮಾರ್ಗದರ್ಶಿಸುವವನಾಗಿದ್ದಾನೆ,” NW].” (ಕೀರ್ತ. 48:14) ಕೀರ್ತನೆಗಾರನಂತೆ, ವಿವೇಕವುಳ್ಳ ಕ್ರೈಸ್ತರು ದೇವರ ಮಾರ್ಗದರ್ಶನವನ್ನು ಅನುಸರಿಸುವುದನ್ನು ಎಂದಿಗೂ ಬಿಟ್ಟುಬಿಡುವುದಿಲ್ಲ.

7 ನಮ್ಮ ಜೀವನದಲ್ಲಿ ಜರೂರಾಗಿ ಸಹಾಯಬೇಕೆಂದು ನಾವು ಭಾವಿಸುವ ಸಂದರ್ಭಗಳು ಇವೆಯೆಂಬುದು ನಿಶ್ಚಯ. ಕೆಲವೊಮ್ಮೆ ನಾವು “ಇಕ್ಕಟ್ಟಿನಲ್ಲಿ” ಸಿಕ್ಕಿಕೊಳ್ಳುತ್ತೇವೆ. ನಾವು ಹಿಂಸೆಗೊಳಗಾಗಬಹುದು, ಗಂಭೀರ ಕಾಯಿಲೆಗೆ ತುತ್ತಾಗಬಹುದು ಅಥವಾ ಇದಕ್ಕಿದ್ದಂತೆ ಕೆಲಸ ಕಳೆದುಕೊಳ್ಳಬಹುದು. (ಕೀರ್ತ. 69:16, 17) ಅಂಥ ಸಂದರ್ಭಗಳಲ್ಲಿ, ಯೆಹೋವನು ನಮಗೆ ತಾಳಿಕೊಳ್ಳಲು ಬಲ ಒದಗಿಸುವನು ಮತ್ತು ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶಿಸುವನು ಎಂಬ ಭರವಸೆಯಿಂದ ಆತನಿಗೆ ಪ್ರಾರ್ಥಿಸುವುದು ನಮಗೆ ಸಾಂತ್ವನವನ್ನು ತರುತ್ತದೆ. ಬೈಬಲ್‌ ಹೇಳುವುದು: “ಆತನು ದಿಕ್ಕಿಲ್ಲದವರ ಪ್ರಾರ್ಥನೆಗೆ ಕಿವಿಗೊಡುತ್ತಾನೆ. ಆತನು ಅವರ ಪ್ರಾರ್ಥನೆಯನ್ನು ತಿರಸ್ಕರಿಸುವುದಿಲ್ಲ.” (ಕೀರ್ತನೆ 102:17, NIBV) ಇತರ ಸಮಯಗಳಲ್ಲೂ ನಮಗೆ ಆತನ ಸಹಾಯ ಬೇಕಾಗಿದೆ. ಉದಾಹರಣೆಗೆ, ನಾವು ರಾಜ್ಯದ ಸುವಾರ್ತೆಯನ್ನು ಇತರರಿಗೆ ಸಾರುವಾಗ ನಮ್ಮ ಸಾಕ್ಷಿಕಾರ್ಯವು ಪರಿಣಾಮಕಾರಿಯಾಗಿರಬೇಕಾದರೆ ನಮಗೆ ಯೆಹೋವನ ಮಾರ್ಗದರ್ಶನ ಬೇಕೇಬೇಕು. ಅಲ್ಲದೆ, ನಾವು ನಿರ್ಣಯ ಮಾಡಬೇಕಾಗಿರುವಾಗೆಲ್ಲ ದೇವರ ಮಾರ್ಗದರ್ಶನದ ಆವಶ್ಯಕತೆಯಿದೆ. ಮನೋರಂಜನೆ, ಉಡುಪು ಮತ್ತು ಕೇಶಾಲಂಕಾರ, ಸಹವಾಸ, ಉದ್ಯೋಗ, ಶಿಕ್ಷಣ ಅಥವಾ ಬೇರೆ ಯಾವುದೇ ವಿಷಯವಾಗಿರಲಿ ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವಲ್ಲಿ ಮಾತ್ರ ನಾವು ವಿವೇಕಿಗಳಾಗಿ ಕ್ರಿಯೆಗೈಯುತ್ತೇವೆ. ನಿಜ ಹೇಳುವುದಾದರೆ, ನಮ್ಮ ಜೀವನದ ಎಲ್ಲ ಆಗುಹೋಗುಗಳಲ್ಲಿಯೂ ಯೆಹೋವನ ಮಾರ್ಗದರ್ಶನ ಅತ್ಯಗತ್ಯ.

ದೇವರ ಮಾರ್ಗದರ್ಶನವನ್ನು ಅನುಸರಿಸದಿರುವಾಗ ಬರುವ ಅಪಾಯಗಳು

8 ಯೆಹೋವನ ಮಾರ್ಗದರ್ಶನವನ್ನು ಅನುಸರಿಸಲು ನಮಗೆ ಇಷ್ಟವಿರಬೇಕೆಂಬುದನ್ನು ನೆನಪಿನಲ್ಲಿಡಿರಿ. ನಮಗೆ ಇಷ್ಟವಿಲ್ಲದಿದ್ದರೆ ದೇವರು ನಮ್ಮನ್ನು ಒತ್ತಾಯಪಡಿಸುವುದಿಲ್ಲ. ಯೆಹೋವನ ಮಾರ್ಗದರ್ಶನವನ್ನು ಅನುಸರಿಸದಿರಲು ಆಯ್ಕೆಮಾಡಿದವರಲ್ಲಿ ಪ್ರಥಮಳು ಹವ್ವಳಾಗಿದ್ದಳು. ಅಂಥ ತಪ್ಪಾದ ನಿರ್ಣಯ ಎಷ್ಟು ಅಪಾಯಕಾರಿಯೆಂದು ಅವಳ ಉದಾಹರಣೆ ತೋರಿಸುತ್ತದೆ. ಅವಳ ಕೃತ್ಯ ಏನನ್ನು ತೋರಿಸಿಕೊಟ್ಟಿತು ಎಂಬುದರ ಕುರಿತೂ ಯೋಚಿಸಿ. ಹವ್ವಳು ‘ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತುಕೊಳ್ಳುವ’ ಸಲುವಾಗಿ ಆ ನಿಷಿದ್ಧ ಹಣ್ಣನ್ನು ತಿಂದಳು. (ಆದಿ. 3:5) ಆ ಮೂಲಕ ಅವಳು ತನ್ನನ್ನು ದೇವರ ಸ್ಥಾನಕ್ಕೆ ಏರಿಸಿಕೊಂಡಳು. ಯೆಹೋವನ ಮಾರ್ಗದರ್ಶನಗಳನ್ನು ಅನುಸರಿಸದೆ ಒಳ್ಳೇದು ಮತ್ತು ಕೆಟ್ಟದ್ದರ ಕುರಿತು ತಾನೇ ನಿರ್ಣಯ ತೆಗೆದುಕೊಂಡಳು. ಹೀಗೆ, ಯೆಹೋವನ ಪರಮಾಧಿಕಾರವನ್ನೇ ತಿರಸ್ಕರಿಸಿದಳು. ತಾನೇ ಯಜಮಾನಿಯಾಗಿರಬೇಕೆಂದು ಬಯಸಿದಳು. ಅವಳ ಗಂಡನಾದ ಆದಾಮನು ಸಹ ಅದೇ ದಂಗೆಕೋರ ಮಾರ್ಗವನ್ನು ಬೆನ್ನಟ್ಟಿದನು.—ರೋಮಾ. 5:12.

9 ಇಂದು ನಾವು ಯೆಹೋವನ ಮಾರ್ಗದರ್ಶನವನ್ನು ಅನುಸರಿಸದಿದ್ದರೆ ನಾವು ಆಕೆಯಂತೆಯೇ ಆತನ ಪರಮಾಧಿಕಾರವನ್ನು ಅಂಗೀಕರಿಸಲು ನಿರಾಕರಿಸುತ್ತೇವೆ. ಅಶ್ಲೀಲ ವಿಷಯಗಳನ್ನು ವೀಕ್ಷಿಸುವ ಚಾಳಿಯನ್ನು ಬೆಳೆಸಿಕೊಳ್ಳುವ ಒಬ್ಬನ ಉದಾಹರಣೆಯ ಕುರಿತು ಯೋಚಿಸಿ. ಅವನು ಕ್ರೈಸ್ತ ಸಭೆಯೊಂದಿಗೆ ಸಹವಸಿಸುತ್ತಿರುವುದಾದರೆ, ಈ ವಿಷಯದಲ್ಲಿ ಯೆಹೋವನ ಮಾರ್ಗದರ್ಶನವೇನಿದೆ ಎಂಬುದು ಅವನಿಗೆ ಗೊತ್ತು. ಅಶುದ್ಧ ವಿಷಯಗಳ ಸುದ್ದಿಯೇ ಇರಬಾರದೆಂದಿರುವಾಗ, ಖಂಡಿತವಾಗಿಯೂ ಅದನ್ನು ಕಾಮಾಸಕ್ತಿಯಿಂದ ವೀಕ್ಷಿಸಲೇಬಾರದು. (ಎಫೆ. 5:3) ಯೆಹೋವನ ಈ ಮಾರ್ಗದರ್ಶನಗಳನ್ನು ಧಿಕ್ಕರಿಸುವ ಮೂಲಕ ಅಂಥ ವ್ಯಕ್ತಿ ಯೆಹೋವನ ಪರಾಮಾಧಿಕಾರವನ್ನೇ ಅಂದರೆ ತಲೆತನವನ್ನೇ ತಿರಸ್ಕರಿಸುತ್ತಿದ್ದಾನೆ. (1 ಕೊರಿಂ. 11:3) ಅದಕ್ಕಿಂತಲೂ ಹೆಚ್ಚಿನ ಅವಿವೇಕ ಮತ್ತೊಂದಿಲ್ಲ. ಏಕೆಂದರೆ, ಯೆರೆಮೀಯನು ಹೇಳಿದ್ದು: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ . . . ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆ. 10:23.

10 ಕೆಲವರು ಯೆರೆಮೀಯನ ಮಾತುಗಳನ್ನು ಒಪ್ಪದಿರಬಹುದು. ಯೆಹೋವನು ನಮಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟಿರುವುದರಿಂದ ಅದನ್ನು ಬೇಕಾದ ಹಾಗೇ ಉಪಯೋಗಿಸುವುದರಲ್ಲಿ ಆತನು ತಪ್ಪು ಹುಡುಕುವುದೇಕೆ ಎಂದು ಅವರು ಪ್ರಶ್ನಿಸಬಹುದು. ಇಚ್ಛಾಸ್ವಾತಂತ್ರ್ಯವು ಒಂದು ಉಡುಗೊರೆ ನಿಜ, ಅದೇ ಸಮಯದಲ್ಲಿ ಅದು ಜವಾಬ್ದಾರಿಯನ್ನೂ ತರುತ್ತದೆ ಎಂಬುದನ್ನು ಮರೆಯಬೇಡಿ. ಏನು ಹೇಳುತ್ತೇವೋ ಏನು ಮಾಡುತ್ತೇವೋ ಅದಕ್ಕೆ ನಾವು ದೇವರಿಗೆ ಉತ್ತರಕೊಡಲೇಬೇಕು. (ರೋಮಾ. 14:10) ಯೇಸು ಹೇಳಿದ್ದು: “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.” ಅಷ್ಟು ಮಾತ್ರವಲ್ಲ, ಅವನು ಮತ್ತೂ ಹೇಳಿದ್ದು: “ಹೇಗಂದರೆ ಮನಸ್ಸಿನೊಳಗಿಂದ ಕೆಟ್ಟ ಆಲೋಚನೆ ಕೊಲೆ ಹಾದರ ಸೂಳೆಗಾರಿಕೆ ಕಳ್ಳತನ ಸುಳ್ಳುಸಾಕ್ಷಿ ಬೈಗಳು ಹೊರಟು ಬರುತ್ತವೆ.” (ಮತ್ತಾ. 12:34; 15:19) ಅಂದರೆ, ನಮ್ಮ ನಡೆನುಡಿಗಳು ನಮ್ಮ ಹೃದಯದೊಳಗಿರುವುದನ್ನು ಬಹಿರಂಗಗೊಳಿಸುತ್ತವೆ. ಅವು, ನಾವು ನಿಜವಾಗಿಯೂ ಯಾವ ರೀತಿಯ ವ್ಯಕ್ತಿಗಳಾಗಿದ್ದೇವೆ ಎಂಬುದನ್ನು ತೋರಿಸಿಕೊಡುತ್ತವೆ. ಆದುದರಿಂದಲೇ, ವಿವೇಕವುಳ್ಳ ಕ್ರೈಸ್ತನೊಬ್ಬನು ಎಲ್ಲಾ ವಿಷಯಗಳಲ್ಲೂ ಯೆಹೋವನ ಮಾರ್ಗದರ್ಶನವನ್ನು ಅನುಸರಿಸುತ್ತಾನೆ. ಈ ರೀತಿಯಲ್ಲಿ ಅವನೊಬ್ಬ “ಯಥಾರ್ಥ” ವ್ಯಕ್ತಿಯೆಂದು ಯೆಹೋವನು ತಿಳಿದುಕೊಂಡು ಅವನಿಗೆ “ಉಪಕಾರ” ಅಂದರೆ ಒಳ್ಳೇದನ್ನು ಮಾಡುವನು.—ಕೀರ್ತ. 125:4.

11 ಇಸ್ರಾಯೇಲ್ಯರ ಇತಿಹಾಸವನ್ನು ನೆನಪಿಸಿಕೊಳ್ಳಿ. ಆ ಜನಾಂಗವು ಯೆಹೋವನ ಆಜ್ಞೆಗಳನ್ನು ಪಾಲಿಸಿ ಸರಿಯಾದ ಆಯ್ಕೆಗಳನ್ನು ಮಾಡಿದಾಗ ಆತನು ಅವರನ್ನು ಸಂರಕ್ಷಿಸಿದನು. (ಯೆಹೋ. 24:15, 21, 31) ಆದರೆ ಅವರು ತಮ್ಮ ಇಚ್ಛಾಸ್ವಾತಂತ್ರ್ಯವನ್ನು ಪದೇಪದೇ ದುರುಪಯೋಗಿಸಿದರು. ಯೆರೆಮೀಯನ ದಿನಗಳಲ್ಲಿ ಯೆಹೋವನು ಅವರ ಕುರಿತು ಹೇಳಿದ್ದು: “ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಸ್ವಂತ ಆಲೋಚನೆಗಳನ್ನು ಅನುಸರಿಸಿ ತಮ್ಮ ದುಷ್ಟಹೃದಯದ ಹಟದಂತೆ ನಡೆದು ಹಿಂದಿರುಗಿಯೇ ಹೋದರು, ಮುಂದರಿಯಲಿಲ್ಲ.” (ಯೆರೆ. 7:24-26) ಎಷ್ಟು ವಿಷಾದಕರ! ನಾವೆಂದಿಗೂ ಹಟಮಾರಿತನ ಅಥವಾ ಭೋಗಾಸಕ್ತಿಯಿಂದಾಗಿ ಯೆಹೋವನ ಮಾರ್ಗದರ್ಶನವನ್ನು ತಿರಸ್ಕರಿಸಿ ನಮ್ಮ ಸ್ವಂತ ಸಲಹೆಗಳಿಗನುಸಾರ ನಡೆಯದಿರೋಣ. ಹೀಗೆ, ‘ಹಿಂದಿರುಗಿ ಹೋಗಿ, ಮುಂದರಿಯದೆ ಇರುವುದನ್ನು’ ತಪ್ಪಿಸೋಣ!

ದೇವರ ಸಲಹೆಯನ್ನು ಅನುಸರಿಸಲು ಏನು ಆವಶ್ಯಕ?

12 ಯೆಹೋವನ ಮೇಲೆ ನಮಗಿರುವ ಪ್ರೀತಿಯ ಕಾರಣದಿಂದಲೇ ನಾವು ಆತನ ಮಾರ್ಗದರ್ಶನವನ್ನು ಅನುಸರಿಸುತ್ತೇವೆ. (1 ಯೋಹಾ. 5:3) ಆದರೂ ಪೌಲನು ಮತ್ತೊಂದು ಕಾರಣವನ್ನು ನೀಡುತ್ತಾನೆ. ಅವನು ಹೇಳಿದ್ದು: ‘ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯುತ್ತೇವೆ.’ (2 ಕೊರಿಂ. 5:6, 7) ನಂಬಿಕೆ ಏಕೆ ಪ್ರಾಮುಖ್ಯವಾಗಿದೆ? ಏಕೆಂದರೆ, ಯೆಹೋವನು ನಮ್ಮನ್ನು “ನೀತಿಮಾರ್ಗದಲ್ಲಿ” ನಡೆಸುತ್ತಾನೆ. ಆದರೆ, ಆ ಮಾರ್ಗವು ಈ ಲೋಕದ ಐಶ್ವರ್ಯ ಮತ್ತು ಸ್ಥಾನಮಾನಕ್ಕೆ ನಡೆಸುವುದಿಲ್ಲ. (ಕೀರ್ತ. 23:3) ಈ ಕಾರಣದಿಂದಲೇ, ನಮ್ಮ ನಂಬಿಕೆಯ ಕಣ್ಣುಗಳು ಯೆಹೋವನ ಸೇವೆಯಲ್ಲಿ ಸಿಗುವ ಹೋಲಿಸಲಸಾಧ್ಯವಾದ ಆಧ್ಯಾತ್ಮಿಕ ಆಶೀರ್ವಾದಗಳ ಮೇಲೆ ನೆಟ್ಟಿರಬೇಕು. (2 ಕೊರಿಂಥ 4:17, 18 ಓದಿ.) ಮಾತ್ರವಲ್ಲ, ನಂಬಿಕೆಯು ಸೀಮಿತವಾದ ಮೂಲಭೂತ ಅಗತ್ಯಗಳಲ್ಲಿ ತೃಪ್ತರಾಗಿರುವಂತೆ ನಮಗೆ ಸಹಾಯಮಾಡುತ್ತದೆ.—1 ತಿಮೊ. 6:8.

13 ಸತ್ಯಾರಾಧನೆಯು ಸ್ವತ್ಯಾಗವನ್ನು ಒಳಗೊಂಡಿದೆ ಎಂದು ಯೇಸು ಸೂಚಿಸಿದನು ಮತ್ತು ಸ್ವತ್ಯಾಗಕ್ಕೆ ನಂಬಿಕೆ ಆವಶ್ಯಕ. (ಲೂಕ 9:23, 24) ಕೆಲವು ನಂಬಿಗಸ್ತ ಆರಾಧಕರು ಮಹಾ ತ್ಯಾಗಗಳನ್ನು ಮಾಡಿದ್ದಾರೆ. ಬಡತನ, ದಬ್ಬಾಳಿಕೆ, ಪೂರ್ವಾಗ್ರಹ ಮತ್ತು ಕಠಿನವಾದ ಹಿಂಸೆಯನ್ನು ಸಹ ಸಹಿಸಿಕೊಂಡಿದ್ದಾರೆ. (2 ಕೊರಿಂ. 11:23-27; ಪ್ರಕ. 3:8-10) ಬಲವಾದ ನಂಬಿಕೆಯಿದ್ದುದರಿಂದಲೇ ಅವರು ಆನಂದದಿಂದ ಅಂಥ ತ್ಯಾಗಗಳನ್ನು ಮಾಡಿದರು. (ಯಾಕೋ. 1:2, 3) ಬಲವಾದ ನಂಬಿಕೆಯು, ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವುದು ಸದಾ ಅತ್ಯುತ್ತಮವಾಗಿರುವುದು ಎಂಬ ಸಂಪೂರ್ಣ ಭರವಸೆಯನ್ನು ನಮಗೆ ನೀಡುತ್ತದೆ. ಅದು ಯಾವಾಗಲೂ ನಮ್ಮ ಪ್ರಯೋಜನಕ್ಕಾಗಿರುವುದು. ನಿಷ್ಠೆಯಿಂದ ತಾಳಿಕೊಳ್ಳುವವರಿಗೆ ದೊರೆಯುವ ಪ್ರತಿಫಲ ಅವರು ಅನುಭವಿಸುವ ಯಾವುದೇ ತಾತ್ಕಾಲಿಕ ಕಷ್ಟಗಳಿಗಿಂತಲೂ ಬಹು ದೊಡ್ಡದಾಗಿರುವುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.—ಇಬ್ರಿ. 11:6.

14 ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವುದರಲ್ಲಿ ದೀನತೆ ಹೇಗೆ ಪಾತ್ರವಹಿಸುತ್ತದೆ ಎಂಬುದನ್ನು ಸಹ ಪರಿಗಣಿಸಿ. ಸಾರಳ ದಾಸಿಯಾಗಿದ್ದ ಹಾಗರಳ ಮಾದರಿಯು ಇದನ್ನು ತೋರಿಸಿಕೊಡುತ್ತದೆ. ಸಾರಳಿಗೆ ಮಕ್ಕಳಿಲ್ಲದಾಗ ಅವಳು ಹಾಗರಳನ್ನು ಅಬ್ರಹಾಮ ಬಳಿ ಕಳುಹಿಸಿಕೊಟ್ಟಳು ಮತ್ತು ಹಾಗರಳು ಗರ್ಭಿಣಿಯಾದಳು. ತಾನೀಗ ಅಬ್ರಹಾಮನ ಮಗುವಿಗೆ ತಾಯಿಯಾಗಲಿದ್ದೇನೆಂದು ತಿಳಿದ ಹಾಗರಳು ಬಂಜೆಯಾದ ತನ್ನ ಯಜಮಾನಿಯೊಡನೆ ಅಹಂಕಾರದಿಂದ ವರ್ತಿಸಿದಳು. ಇದರಿಂದಾಗಿ, ಸಾರಳು ಅವಳನ್ನು “ಬಾಧಿಸ” ತೊಡಗಿದಳು ಮತ್ತು ಹಾಗರಳು ಅಲ್ಲಿಂದ ಓಡಿಹೋದಳು. ಆಗ ಯೆಹೋವನ ದೂತನು ಹಾಗರಳನ್ನು ಭೇಟಿಯಾಗಿ “ನೀನು ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಅವಳಿಗೆ ತಗ್ಗಿ ನಡೆದುಕೋ ಅಂದನು.” (ಆದಿ. 16:2, 6, 8, 9) ಪ್ರಾಯಶಃ ಹಾಗರಳು ಬೇರೆ ಯಾವುದಾದರೂ ಒಂದು ಮಾರ್ಗದರ್ಶನವನ್ನು ಹೆಚ್ಚು ಇಷ್ಟಪಟ್ಟಿದ್ದಿರಬಹುದು. ಅವಳು ಈಗ ದೇವದೂತನ ಸಲಹೆಗನುಸಾರ ಕ್ರಿಯೆಗೈಯಬೇಕಾದರೆ ತನ್ನ ಅಹಂಭಾವವನ್ನು ಬಿಡಬೇಕಾಗಿತ್ತು. ಹಾಗಿದ್ದರೂ, ಹಾಗರಳು ದೇವದೂತನು ಹೇಳಿದಂತೆ ಮಾಡಿದಳು ಮತ್ತು ಆಕೆಯ ಪುತ್ರ ಇಷ್ಮಾಯೇಲ್‌ ತನ್ನ ತಂದೆಯ ಪಾಳೆಯದಲ್ಲಿ ಸುರಕ್ಷಿತವಾಗಿ ಜನಿಸಿದನು.

15 ಯೆಹೋವನ ಮಾರ್ಗದರ್ಶನವನ್ನು ಅನುಸರಿಸಲಿಕ್ಕಾಗಿ ನಾವು ಸಹ ದೀನರಾಗಿರಬೇಕಾಗಿದೆ. ಕೆಲವರಿಗೆ, ತಮ್ಮ ಅಚ್ಚುಮೆಚ್ಚಿನ ಮನೋರಂಜನೆಯು ಯೆಹೋವನನ್ನು ಅಪ್ರಿಯಗೊಳಿಸುತ್ತದೆ ಎಂಬ ದೃಷ್ಟಿಕೋನವನ್ನು ಒಪ್ಪಿಕೊಳ್ಳಬೇಕಾಗಬಹುದು. ಕ್ರೈಸ್ತನೊಬ್ಬನು ಯಾರ ಮನಸ್ಸನ್ನಾದರೂ ನೋಯಿಸಿರುವಲ್ಲಿ ಕ್ಷಮೆಯಾಚಿಸಬೇಕಾಗಿ ಬರಬಹುದು. ಅಥವಾ ಅವನು ತಪ್ಪನ್ನು ಮಾಡಿದ್ದು ಅದನ್ನು ಒಪ್ಪಿಕೊಳ್ಳುವ ಅಗತ್ಯವಿರಬಹುದು. ಯಾರಾದರೊಬ್ಬರು ಗಂಭೀರ ಪಾಪ ಮಾಡಿರುವಲ್ಲಿ ಆಗೇನು? ಅವನು ದೀನನಾಗಿ ಆ ಪಾಪವನ್ನು ಹಿರಿಯರ ಬಳಿ ಒಪ್ಪಿಕೊಳ್ಳಬೇಕಾಗುತ್ತದೆ. ವ್ಯಕ್ತಿಯೊಬ್ಬನು ಬಹಿಷ್ಕೃತನಾಗಲೂಬಹುದು. ಅವನು ಸಭೆಯಲ್ಲಿ ಪುನಸ್ಸ್ಥಾಪಿಸಲ್ಪಡಬೇಕಾದರೆ, ದೀನಭಾವದಿಂದ ಪಶ್ಚಾತ್ತಾಪಪಟ್ಟು ಪರಿವರ್ತನೆ ಹೊಂದಬೇಕು. ಈ ಸಮಯದಲ್ಲಿ ಮತ್ತು ಇಂಥ ಇತರ ಸಂದರ್ಭಗಳಲ್ಲಿ ಜ್ಞಾನೋಕ್ತಿ 29:23ರ ಮಾತುಗಳು ಸಾಂತ್ವನವನ್ನು ಒದಗಿಸುತ್ತವೆ: “ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ತರುವದು; ದೀನಮನಸ್ಸುಳ್ಳವನು ಮಾನವನ್ನು ಪಡೆಯುವನು.”

ಯೆಹೋವನು ನಮ್ಮನ್ನು ಹೇಗೆ ಮಾರ್ಗದರ್ಶಿಸುತ್ತಾನೆ?

16 ದೈವಿಕ ಮಾರ್ಗದರ್ಶನದ ಪ್ರಮುಖ ಮೂಲವು ದೇವರ ಪ್ರೇರಿತ ವಾಕ್ಯವಾದ ಬೈಬಲ್‌ ಆಗಿದೆ. (2 ತಿಮೊಥೆಯ 3:16, 17 ಓದಿ.) ಆ ವಾಕ್ಯದಿಂದ ಹೆಚ್ಚಿನ ಪ್ರಯೋಜನ ಪಡೆಯುವ ಸಲುವಾಗಿ ವಿವೇಕಿಗಳಾದ ನಾವು ಒಂದು ಕಷ್ಟದ ಪರಿಸ್ಥಿತಿ ಬರಲಿ ಆಮೇಲೆ ಅದರಿಂದ ಸಹಾಯಕರ ಸಲಹೆಗಳನ್ನು ಕಂಡುಕೊಳ್ಳುತ್ತೇವೆ ಎಂದು ಕಾಯುವುದಿಲ್ಲ. ಬದಲಿಗೆ, ನಾವು ಬೈಬಲ್‌ ಓದುವಿಕೆಯನ್ನು ನಮ್ಮ ದಿನನಿತ್ಯದ ರೂಢಿಯಾಗಿ ಮಾಡಿಕೊಳ್ಳುತ್ತೇವೆ. (ಕೀರ್ತ. 1:1-3) ಆ ಮೂಲಕ ಪ್ರೇರಿತ ವಾಕ್ಯಗಳ ಸುಪರಿಚಯವನ್ನು ಮಾಡಿಕೊಳ್ಳುತ್ತೇವೆ. ಹೀಗೆ, ನಮ್ಮ ಆಲೋಚನೆಗಳನ್ನು ದೇವರ ಆಲೋಚನೆಗಳಿಗೆ ಹೊಂದಿಕೆಯಲ್ಲಿ ತರುತ್ತೇವೆ ಮತ್ತು ಮುಂಗಾಣದ ಸಮಸ್ಯೆಗಳನ್ನು ಸಹ ಎದುರಿಸಲು ನಾವು ಸಿದ್ಧರಾಗಿರುತ್ತೇವೆ.

17 ಅಷ್ಟಲ್ಲದೆ, ಬೈಬಲಿನಿಂದ ಓದಿದ್ದನ್ನು ನಾವು ಧ್ಯಾನಿಸುವುದು ಮತ್ತು ಅದರ ಕುರಿತು ಪ್ರಾರ್ಥಿಸುವುದು ಪ್ರಾಮುಖ್ಯವಾಗಿದೆ. ನಾವು ಬೈಬಲ್‌ ವಚನಗಳ ಕುರಿತು ಧ್ಯಾನಿಸುವಾಗ, ಅವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಹೇಗೆ ಅನ್ವಯವಾಗುವವು ಎಂಬುದನ್ನು ಪರಿಗಣಿಸುತ್ತೇವೆ. (ಕೀರ್ತ. 77:12) ಗಂಭೀರ ಸಮಸ್ಯೆಗಳನ್ನು ಎದುರಿಸುವಾಗ ನಮಗೆ ಬೇಕಾದ ಮಾರ್ಗದರ್ಶನವನ್ನು ಕಂಡುಕೊಳ್ಳಲು ಸಹಾಯಮಾಡುವಂತೆ ನಾವು ಯೆಹೋವನಿಗೆ ಪ್ರಾರ್ಥಿಸುತ್ತೇವೆ. ನಾವು ಬೈಬಲಿನಲ್ಲಿ ಅಥವಾ ಬೈಬಲ್‌ ಆಧಾರಿತ ಸಾಹಿತ್ಯಗಳಲ್ಲಿ ಓದಿರುವ ಸಹಾಯಕಾರಿಯಾದ ಶಾಸ್ತ್ರೀಯ ಮೂಲತತ್ತ್ವಗಳನ್ನು ನೆನಪಿಸಿಕೊಳ್ಳಲು ಯೆಹೋವನ ಆತ್ಮವು ನಮಗೆ ನೆರವು ನೀಡುತ್ತದೆ.—ಕೀರ್ತನೆ 25:4, 5 ಓದಿ.

18 ಯೆಹೋವನ ಮಾರ್ಗದರ್ಶನವನ್ನು ಪಡೆದುಕೊಳ್ಳಲಿಕ್ಕಾಗಿರುವ ಇನ್ನೊಂದು ಸಹಾಯವು ನಮ್ಮ ಕ್ರೈಸ್ತ ಸಹೋದರತ್ವವಾಗಿದೆ. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ತನ್ನನ್ನು ಪ್ರತಿನಿಧಿಸುವ ಆಡಳಿತ ಮಂಡಲಿಯೊಂದಿಗೆ ಆ ಸಹೋದರತ್ವದ ಕೇಂದ್ರ ಭಾಗವಾಗಿದೆ. ಅದು ಆಧ್ಯಾತ್ಮಿಕ ಆಹಾರವನ್ನು ಸಾಹಿತ್ಯಗಳು ಮತ್ತು ಸಭಾಕೂಟ ಹಾಗೂ ಸಮ್ಮೇಳನ ಕಾರ್ಯಕ್ರಮಗಳ ಮೂಲಕ ಸತತವಾಗಿ ಒದಗಿಸುತ್ತದೆ. (ಮತ್ತಾ. 24:45-47; ಅ. ಕೃ. 15:6, 22-31 ಹೋಲಿಸಿ.) ಇದರೊಂದಿಗೆ, ಕ್ರೈಸ್ತ ಸಹೋದರತ್ವದಲ್ಲಿ ಪ್ರೌಢ ವ್ಯಕ್ತಿಗಳು, ಅದರಲ್ಲೂ ವಿಶೇಷವಾಗಿ ವೈಯಕ್ತಿಕ ನೆರವು ನೀಡಲು ಮತ್ತು ಶಾಸ್ತ್ರೀಯ ಸಲಹೆ ನೀಡಲು ಅರ್ಹರಾಗಿರುವ ಹಿರಿಯರಿದ್ದಾರೆ. (ಯೆಶಾ. 32:1) ಕ್ರೈಸ್ತ ಕುಟುಂಬಗಳಲ್ಲಿರುವ ಎಳೆಯರಿಗೆ ಮಾರ್ಗದರ್ಶನಕ್ಕಾಗಿ ಮತ್ತೊಂದು ಅಮೂಲ್ಯ ಆಸ್ತಿಯಿದೆ. ವಿಶ್ವಾಸದಲ್ಲಿರುವ ಹೆತ್ತವರು ತಮ್ಮ ಮಕ್ಕಳಿಗೆ ಮಾರ್ಗದರ್ಶನ ಒದಗಿಸಲು ದೇವರಿಂದ ಅಧಿಕಾರ ಹೊಂದಿದವರಾಗಿರುವುದರಿಂದ, ಎಳೆಯರು ಯಾವಾಗಲೂ ಅವರಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು.—ಎಫೆ. 6:1-3.

19 ಹೌದು, ಯೆಹೋವನು ಅನೇಕ ವಿಧಗಳಲ್ಲಿ ನಮ್ಮನ್ನು ಮಾರ್ಗದರ್ಶಿಸುತ್ತಾನೆ ಮತ್ತು ಅದರ ಸಂಪೂರ್ಣ ಪ್ರಯೋಜನವನ್ನು ನಾವು ಪಡೆದುಕೊಳ್ಳತಕ್ಕದ್ದು. ಇಸ್ರಾಯೇಲ್ಯರು ನಂಬಿಗಸ್ತರಾಗಿದ್ದ ಸಮಯದ ಕುರಿತು ರಾಜ ದಾವೀದನು ಮಾತಾಡುತ್ತಾ ಹೇಳಿದ್ದು: “ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟರು; ನಿನ್ನನ್ನು ನಂಬಿ ಉದ್ಧಾರವಾದರು. ನಿನಗೆ ಮೊರೆಯಿಟ್ಟು ವಿಮುಕ್ತರಾದರು; ನಿನ್ನಲ್ಲಿ ವಿಶ್ವಾಸವಿಟ್ಟು ಆಶಾಭಂಗಪಡಲಿಲ್ಲ.” (ಕೀರ್ತ. 22:3-5) ಭರವಸೆಯಿಂದ ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವಲ್ಲಿ ನಾವು ಸಹ ‘ಆಶಾಭಂಗಪಡುವುದಿಲ್ಲ.’ ನಮಗಿರುವ ನಿರೀಕ್ಷೆಯಲ್ಲಿ ನಾವೆಂದು ನಿರಾಶೆಪಡೆವು. ನಮ್ಮ ಸ್ವಂತ ವಿವೇಕವನ್ನು ಆಧಾರಮಾಡಿಕೊಳ್ಳದೆ ‘ಯೆಹೋವನಲ್ಲಿ ಭರವಸೆಯಿಡುವುದಾದರೆ’ ಈಗಲೂ ಸಹ ಹೇರಳವಾದ ಪ್ರತಿಫಲ ಸಿಗುವುದು. (ಕೀರ್ತ. 37:5) ಮಾತ್ರವಲ್ಲ, ಆ ಮಾರ್ಗದಲ್ಲಿಯೇ ನಿಷ್ಠೆಯಿಂದ ಮುನ್ನಡೆಯುವುದಾದರೆ ಆ ಪ್ರತಿಫಲ ಮುಂದೆಯೂ ಶಾಶ್ವತವಾಗಿರುವುದು. ರಾಜ ದಾವೀದನು ಬರೆದದ್ದು: “ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು. . . . ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತ. 37:28, 29.

ವಿವರಿಸಬಲ್ಲಿರೋ?

• ನಾವು ಯೆಹೋವನ ಮಾರ್ಗದರ್ಶನದಲ್ಲಿ ಯಾಕೆ ಭರವಸೆಯಿಡುತ್ತೇವೆ?

• ನಾವು ಯೆಹೋವನ ಮಾರ್ಗದರ್ಶನವನ್ನು ಧಿಕ್ಕರಿಸುವುದು ಏನನ್ನು ವ್ಯಕ್ತಪಡಿಸುತ್ತದೆ?

• ಕ್ರೈಸ್ತನೊಬ್ಬನು ದೀನತೆಯನ್ನು ತೋರಿಸಬೇಕಾದ ಕೆಲವು ಸನ್ನಿವೇಶಗಳಾವುವು?

• ಇಂದು ಯೆಹೋವನು ನಮ್ಮನ್ನು ಹೇಗೆ ಮಾರ್ಗದರ್ಶಿಸುತ್ತಾನೆ?

[ಅಧ್ಯಯನ ಪ್ರಶ್ನೆಗಳು]

1, 2. ನಾವೇಕೆ ನಮ್ಮ ಸ್ವಂತ ವಿವೇಕಕ್ಕೆ ಬದಲಾಗಿ ಯೆಹೋವನ ಮಾರ್ಗದರ್ಶನದಲ್ಲಿ ಭರವಸೆಯಿಡಬೇಕು ಮತ್ತು ಯಾವ ಪ್ರಶ್ನೆಗಳು ಏಳುತ್ತವೆ?

3-5. ಯಾವ ಕಾರಣಗಳಿಗಾಗಿ ನಾವು ಯೆಹೋವನ ಮಾರ್ಗದರ್ಶನದಲ್ಲಿ ಸಂಪೂರ್ಣ ಭರವಸೆಯಿಡಸಾಧ್ಯವಿದೆ?

6, 7. ನಮಗೆ ಯೆಹೋವನ ಮಾರ್ಗದರ್ಶನ ಯಾವಾಗ ಅಗತ್ಯ?

8. ಹವ್ವಳು ನಿಷಿದ್ಧ ಹಣ್ಣನ್ನು ತಿಂದದ್ದು ಏನನ್ನು ತೋರಿಸಿಕೊಟ್ಟಿತು?

9. ನಾವು ಯೆಹೋವನ ಮಾರ್ಗದರ್ಶನವನ್ನು ತಿರಸ್ಕರಿಸುವುದಾದರೆ ವಾಸ್ತವದಲ್ಲಿ ಏನನ್ನು ಮಾಡುತ್ತಿದ್ದೇವೆ ಮತ್ತು ಅದು ಅತಿ ಅವಿವೇಕವಾಗಿದೆ ಏಕೆ?

10. ಯಾಕೆ ನಾವು ನಮ್ಮ ಇಚ್ಛಾಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಉಪಯೋಗಿಸಬೇಕು?

11. ಇಸ್ರಾಯೇಲ್ಯರ ಇತಿಹಾಸದಿಂದ ನಾವೇನನ್ನು ಕಲಿಯುತ್ತೇವೆ?

12, 13. (ಎ) ಯೆಹೋವನ ಮಾರ್ಗದರ್ಶನವನ್ನು ಅನುಸರಿಸಲು ನಮಗೆ ಯಾವ ಗುಣ ಸಹಾಯಮಾಡುತ್ತದೆ? (ಬಿ) ನಂಬಿಕೆ ಏಕೆ ಆವಶ್ಯ?

14. ಹಾಗರಳು ಏಕೆ ದೀನತೆಯನ್ನು ತೋರಿಸಬೇಕಾಗಿತ್ತು?

15. ನಾವಿಂದು ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವಾಗ ದೀನಭಾವವನ್ನು ತೋರಿಸಬೇಕಾದ ಕೆಲವೊಂದು ಸನ್ನಿವೇಶಗಳನ್ನು ವಿವರಿಸಿ.

16, 17. ದೈವಿಕ ಮಾರ್ಗದರ್ಶನದ ಮೂಲವಾಗಿರುವ ಬೈಬಲಿನಿಂದ ಹೆಚ್ಚು ಪ್ರಯೋಜನ ಪಡೆಯಲು ನಾವು ಏನು ಮಾಡಬೇಕು?

18. ನಮ್ಮನ್ನು ಮಾರ್ಗದರ್ಶಿಸಲಿಕ್ಕಾಗಿ ಯೆಹೋವನು ಕ್ರೈಸ್ತ ಸಹೋದರತ್ವವನ್ನು ಯಾವ ವಿಧಗಳಲ್ಲಿ ಉಪಯೋಗಿಸುತ್ತಾನೆ?

19. ಯೆಹೋವನ ಮಾರ್ಗದರ್ಶನವನ್ನು ಸದಾ ಅನುಸರಿಸುವುದಾದರೆ ಯಾವ ಆಶೀರ್ವಾದಗಳನ್ನು ನಾವು ಸವಿಯುತ್ತೇವೆ?

[ಪುಟ 8ರಲ್ಲಿರುವ ಚಿತ್ರಗಳು]

ನಿಮ್ಮ ಜೀವನದ ಎಲ್ಲ ಆಗುಹೋಗುಗಳಲ್ಲೂ ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ನೋಡುತ್ತೀರೋ?

[ಪುಟ 9ರಲ್ಲಿರುವ ಚಿತ್ರ]

ಹವ್ವಳು ಯೆಹೋವನ ಪರಮಾಧಿಕಾರಕ್ಕೆ ಬೆನ್ನುಹಾಕಿದಳು

[ಪುಟ 10ರಲ್ಲಿರುವ ಚಿತ್ರ]

ದೇವದೂತನ ಸಲಹೆಯನ್ನು ಪಾಲಿಸಲು ಹಾಗರಳು ಯಾವ ಗುಣವನ್ನು ತೋರಿಸಬೇಕಿತ್ತು?