ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜುವಿನ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಆನಂದಿಸಿದ್ದೀರೋ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

• ಜೋಯಿಸರು ಯೇಸುವನ್ನು ಸಂದರ್ಶಿಸಿದ್ದು ಯಾವಾಗ?

ಒಂದು ಬೈಬಲ್‌ ಮುದ್ರಣವು ಹೇಳುವುದು: “ಯೇಸು ಜನಿಸಿದ ರಾತ್ರಿಯಂದು ಕುರುಬರು ಗೋದಲಿಯಲ್ಲಿದ್ದ ಅವನನ್ನು ನೋಡಲು ಹೋದಂತೆ ಜೋಯಿಸರು ಅವನನ್ನು ನೋಡಲು ಹೋಗಿರಲಿಲ್ಲ. ಅವರು . . . ಭೇಟಿಯಾದದ್ದು ಕೆಲವು ತಿಂಗಳ ನಂತರವೇ.” ಆ ಸಮಯದೊಳಗಾಗಿ ‘ಮಗು’ವಾಗಿದ್ದ ಯೇಸು ಮನೆಯಲ್ಲಿ ವಾಸಿಸುತ್ತಿದ್ದನು. (ಮತ್ತಾ. 2:7-11) ಒಂದುವೇಳೆ ಯೇಸು ಜನಿಸಿದ ರಾತ್ರಿಯಂದೇ ಜೋಯಿಸರು ಅವನಿಗೆ ಚಿನ್ನ ಮತ್ತಿತರ ಬೆಲೆಬಾಳುವ ಕೊಡುಗೆಗಳನ್ನು ಕೊಟ್ಟಿದ್ದಲ್ಲಿ, ಮರಿಯಳು 40 ದಿನಗಳಾದ ಮೇಲೆ ದೇವಾಲಯದಲ್ಲಿ ಕೇವಲ ಎರಡೇ ಹಕ್ಕಿಗಳನ್ನು ಅರ್ಪಿಸುತ್ತಿದ್ದಳೇ?—1/1, ಪುಟ 31.

• ಅನೇಕರು ತಮ್ಮ ಬದುಕನ್ನು ಸಮೃದ್ಧಗೊಳಿಸಲು ಏನು ಮಾಡಬಲ್ಲರು?

ಒಬ್ಬನು ಹೀಗೆ ಕೇಳಿಕೊಳ್ಳಬಹುದು: ‘ನಾನು ನನ್ನ ಪರಿಸ್ಥಿತಿಗಳನ್ನು ಹೊಂದಿಸಿಕೊಂಡು ಜೀವನವನ್ನು ಸರಳಗೊಳಿಸಲು ಸಾಧ್ಯವೋ?’ ಏಮೀ ಅದನ್ನು ಮಾಡಿದಳು. ಅವಳಿಗೆ ಹಣ ಬೇಕಾದಷ್ಟಿತ್ತು ಆದರೆ ನೆಮ್ಮದಿಯಿರಲಿಲ್ಲ. ಈ ಲೋಕದಲ್ಲಿ ವೃತ್ತಿಯೊಂದನ್ನು ಬೆನ್ನಟ್ಟಲು ಹೋಗಿ ಕ್ರಿಸ್ತನಂಬಿಕೆಯನ್ನು ಬಿಟ್ಟುಬಿಡುವಷ್ಟು ದುಸ್ಥಿತಿಗೆ ತಲಪಿದ್ದನ್ನು ಅವಳು ಗ್ರಹಿಸಿಕೊಂಡಳು. ಆದುದರಿಂದ ಅವಳು ರಾಜ್ಯಾಭಿರುಚಿಗಳನ್ನು ಪ್ರಥಮ ಸ್ಥಾನದಲ್ಲಿಡಲು ನಿರ್ಧರಿಸಿದಳು. ಹೀಗೆ ಕೆಲವು ಸಮಯ ಪಯನೀಯರ್‌ ಸೇವೆ ಮಾಡಿದಳು. ಏಮೀ ಹೇಳುವುದು: “ನನಗೆ ನೆಮ್ಮದಿಯಿದೆ. ಆದರೆ ಈ ಲೋಕದಲ್ಲಿ ಹೆಚ್ಚಿನ ಸಮಯವನ್ನು ಕೆಲಸಮಾಡಲು ಕಳೆಯುತ್ತಿದ್ದಾಗ ಎಂದೂ ಇಂಥ ನೆಮ್ಮದಿಯನ್ನು ಅನುಭವಿಸಿರಲಿಲ್ಲ.”—1/15, ಪುಟ 19.

• ಸಂತೃಪ್ತಿಯನ್ನು ಕಂಡುಕೊಳ್ಳಲು ಕೆಲವು ತಾಯಂದಿರಿಗೆ ಯಾವುದು ಸಹಾಯಮಾಡಬಲ್ಲದು?

ಅನೇಕ ತಾಯಂದಿರು ಮನೆಯ ಹೊರಗೆ ದುಡಿಯುತ್ತಾರೆ. ಕೆಲವರು ಕುಟುಂಬದ ಮೂಲಭೂತ ಅಗತ್ಯಗಳನ್ನು ಪೂರೈಸಲಿಕ್ಕಾಗಿ ದುಡಿಯುತ್ತಾರೆ. ಇತರರು, ಇಷ್ಟ ಬಂದ ಹಾಗೆ ಹಣ ಖರ್ಚುಮಾಡಲಿಕ್ಕಾಗಿಯೋ ಸುಖ-ಸವಲತ್ತುಗಳನ್ನು ಪಡೆಯಲಿಕ್ಕಾಗಿಯೋ ಕೆಲಸಮಾಡುತ್ತಾರೆ. ಇನ್ನೂ ಅನೇಕರಿಗೆ ದುಡಿಮೆಯೆಂದರೆ ಇಷ್ಟ. ಆದರೆ ಕ್ರೈಸ್ತ ಜೀವನಕ್ರಮವನ್ನು ಅನುಸರಿಸುವ ತಾಯಂದಿರಾದರೋ ಮನೆಯಲ್ಲಿ ಪ್ರಾಮುಖ್ಯ ಪಾತ್ರ ವಹಿಸುತ್ತಾರೆ. ಅದರಲ್ಲೂ ಮಗು ಶೈಶವಾವಸ್ಥೆಯಲ್ಲಿರುವಾಗ ತಮ್ಮ ಆ ಪಾತ್ರಕ್ಕೆ ಮಹತ್ವ ಕೊಡುತ್ತಾರೆ. ಅವರಲ್ಲಿ ಕೆಲವರು ಕುಟುಂಬಕ್ಕೆ ಹೆಚ್ಚು ಗಮನ ನೀಡಲಿಕ್ಕಾಗಿ ಉದ್ಯೋಗವನ್ನು ಬಿಡಲು ಅಥವಾ ಕೇವಲ ಪಾರ್ಟ್‌-ಟೈಮ್‌ ಕೆಲಸ ಮಾಡಲು ಆಯ್ಕೆಮಾಡಿದ್ದಾರೆ. ಸಂತೃಪ್ತಿಯನ್ನೂ ಕಂಡುಕೊಂಡಿದ್ದಾರೆ.—4/1, ಪುಟ 18-21.

ಮತ್ತಾಯ 24:34ರಲ್ಲಿ, ಯೇಸು ‘ಸಂತತಿಗೆ’ ಎಂದು ತಿಳಿಸಿದಾಗ ಯಾರಿಗೆ ಸೂಚಿಸಿದನು?

ಯೇಸು ದುಷ್ಟರೊಂದಿಗೆ ಅಥವಾ ಅವರ ವಿಷಯವಾಗಿ ಮಾತಾಡುತ್ತಿದ್ದಾಗ “ಸಂತತಿ” ಎಂಬ ಪದವನ್ನು ಅನೇಕವೇಳೆ ನಕಾರಾತ್ಮಕವಾಗಿ ಬಳಸಿದನು. ಆದರೆ, ಸ್ವಲ್ಪದರಲ್ಲಿ ಪವಿತ್ರಾತ್ಮದಿಂದ ಅಭಿಷಿಕ್ತರಾಗಲಿದ್ದ ತನ್ನ ಶಿಷ್ಯರೊಂದಿಗೆ ಮಾತಾಡುತ್ತಿದ್ದ ಈ ಸಂದರ್ಭದಲ್ಲಿ ಹಾಗೆ ಬಳಸಲಿಲ್ಲ. ಮತ್ತಾಯ 24:32, 33ರಲ್ಲಿರುವ ಅರ್ಥವನ್ನು ತನ್ನ ಶಿಷ್ಯರೇ ಸ್ಪಷ್ಟವಾಗಿ ತಿಳಿದುಕೊಳ್ಳಲಿದ್ದರು. ಆದುದರಿಂದ ಒಂದನೇ ಶತಮಾನದಲ್ಲಿ ಯೇಸು ಹೇಳಿದಾಗ ಮತ್ತು ಅವನ ಮಾತುಗಳನ್ನು ಆಧುನಿಕ ದಿನಕ್ಕೆ ಅನ್ವಯಿಸುವಾಗ ಅವನು ತನ್ನ ಅಭಿಷಿಕ್ತ ಹಿಂಬಾಲಕರಿಗೇ ಸೂಚಿಸುತ್ತಿದ್ದನೆಂದು ನಾವು ನಿರ್ಣಯಿಸಸಾಧ್ಯವಿದೆ.—2/15, ಪುಟ 23-4.

ಯಾಕೋಬ 3:17ಕ್ಕನುಸಾರ ನಾವು ಯಾವ ಗುಣಗಳನ್ನು ತೋರಿಸಬೇಕು?

ಪರಿಶುದ್ಧರಾಗಿರಲು ನಾವು ಕೆಟ್ಟ ವಿಷಯಗಳನ್ನು ಕೂಡಲೇ ತ್ಯಜಿಸಿಬಿಡುವ ಅಗತ್ಯವಿದೆ. (ಆದಿ. 39:7-9) ನಾವು ಸಮಾಧಾನಪ್ರಿಯರೂ ಆಗಿರಬೇಕು. ಆಕ್ರಮಣಶೀಲತೆ ಅಥವಾ ಶಾಂತಿಭಂಗಗೊಳಿಸುವ ಕೃತ್ಯಗಳನ್ನು ತೊರೆಯಬೇಕು. ಆದುದರಿಂದ ನಾವು ಪ್ರತಿಯೊಬ್ಬರು ಹೀಗೆ ಕೇಳಿಕೊಳ್ಳತಕ್ಕದ್ದು: ‘ನಾನು ಯಾವುದಕ್ಕೆ ಪ್ರಖ್ಯಾತನಾಗಿದ್ದೇನೆ, ಸಮಾಧಾನಪಡಿಸುವುದಕ್ಕೋ ಯಾ ಸಮಾಧಾನ ಕೆಡಿಸುವುದಕ್ಕೋ? ನಾನು ಆಗಾಗ ಇತರರೊಂದಿಗೆ ಜಗಳವಾಡುತ್ತೇನೋ? ನಾನು ಮುಂಗೋಪಿಯೂ ಇತರರನ್ನು ಸಿಟ್ಟಿಗೆಬ್ಬಿಸುವವನೂ ಆಗಿದ್ದೇನೋ? ಅಥವಾ ಕ್ಷಮಿಸಲು ಸಿದ್ಧನಿದ್ದೇನೋ ಮತ್ತು ತರಾತುರಿಯಿಂದ ನನ್ನ ಸ್ವಂತ ವೈಯಕ್ತಿಕ ಮಟ್ಟಗಳನ್ನೇ ಅನುಸರಿಸಬೇಕೆಂದು ಹಟಹಿಡಿಯದಿರುತ್ತೇನೋ?’—3/15, ಪುಟ 24-5