ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವ ಜನರೇ, ನಿಮ್ಮ ಸೃಷ್ಟಿಕರ್ತನನ್ನು ಈಗಲೇ ಸ್ಮರಿಸಿ

ಯುವ ಜನರೇ, ನಿಮ್ಮ ಸೃಷ್ಟಿಕರ್ತನನ್ನು ಈಗಲೇ ಸ್ಮರಿಸಿ

ಯುವ ಜನರೇ, ನಿಮ್ಮ ಸೃಷ್ಟಿಕರ್ತನನ್ನು ಈಗಲೇ ಸ್ಮರಿಸಿ

“ಈಗ ನಿನ್ನ ಯೌವನದ ದಿನಗಳಲ್ಲಿ ಸೃಷ್ಟಿಕರ್ತನನ್ನು ಸ್ಮರಿಸಿಕೋ.”—ಪ್ರಸಂ. 12:1, NIBV.

ಕ್ರೈಸ್ತ ಯುವ ಜನರು ಯೆಹೋವನ ದೃಷ್ಟಿಯಲ್ಲಿ ಅಮೂಲ್ಯರೂ ಇಬ್ಬನಿಯಂತೆ ಚೈತನ್ಯದಾಯಕರೂ ಆಗಿದ್ದಾರೆ. ತನ್ನ ಪುತ್ರನಾದ ಕ್ರಿಸ್ತನು “ಸೈನ್ಯವನ್ನು” ಕೂಡಿಸುವ ದಿನದಲ್ಲಿ ಯೌವನಸ್ಥ ಯೌವನಸ್ಥೆಯರು ಅವನ ಸೇವೆಗಾಗಿ “ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು” ಎಂದು ಯೆಹೋವನು ಮುಂತಿಳಿಸಿದನು. (ಕೀರ್ತ. 110:3) ಈ ಪ್ರವಾದನೆ ನಮ್ಮೀ ದಿನಗಳ ಕುರಿತಾಗಿತ್ತು. ಇಂದು ಹೆಚ್ಚಿನ ಜನರು ಭಕ್ತಿಹೀನರೂ, ತಮ್ಮ ಸ್ವಂತ ಇಚ್ಛೆಗಳನ್ನೇ ಪೂರೈಸುವುದರಲ್ಲಿ ಮತ್ತು ಹಣಮಾಡುವುದರಲ್ಲಿ ಮಗ್ನರೂ, ಅವಿಧೇಯರೂ ಆಗಿದ್ದಾರೆ. ಆದರೆ ತನ್ನನ್ನು ಆರಾಧಿಸುವ ಯುವ ಜನರು ಇವರಿಗಿಂತ ಭಿನ್ನರಾಗಿರುವರೆಂದು ಯೆಹೋವನಿಗೆ ತಿಳಿದಿತ್ತು. ಯುವ ಸಹೋದರ ಸಹೋದರಿಯರೇ, ಆತನಿಗೆ ನಿಮ್ಮ ಬಗ್ಗೆ ಎಷ್ಟೊಂದು ಭರವಸೆಯಿದೆ!

2 ಯುವ ಜನರು ದೇವರನ್ನು ಸೃಷ್ಟಿಕರ್ತನೆಂದು ಸ್ಮರಿಸಿಕೊಳ್ಳುವಾಗ ಆತನಿಗೆಷ್ಟು ಆನಂದವಾಗುತ್ತಿರಬೇಕು! (ಪ್ರಸಂ. 12:1) ಯೆಹೋವನನ್ನು ಸ್ಮರಿಸಿಕೊಳ್ಳಬೇಕು ಎನ್ನುವಾಗ, ನಾವಾತನನ್ನು ನೆನಸಿದರೆ ಮಾತ್ರ ಸಾಲದು, ಕ್ರಿಯೆಗೈಯಲೂ ಬೇಕು. ಈ ಕ್ರಿಯೆಯಲ್ಲಿ, ನಮ್ಮ ದೈನಂದಿನ ಜೀವನವನ್ನು ಆತನ ನಿಯಮಗಳು ಹಾಗೂ ಮೂಲತತ್ತ್ವಗಳಿಗನುಸಾರ ನಡೆಸುತ್ತಾ ಆತನು ಮೆಚ್ಚುವಂಥ ವಿಷಯಗಳನ್ನು ಮಾಡುವುದು ಮತ್ತು ಆತನು ನಮ್ಮ ಕ್ಷೇಮ ಬಯಸುತ್ತಾನೆಂದು ತಿಳಿದು ಆತನಲ್ಲಿ ಭರವಸೆಯನ್ನು ಇಡುವುದು ಒಳಗೂಡಿದೆ. (ಕೀರ್ತ. 37:3; ಯೆಶಾ. 48:17, 18) ನಿಮಗೆ ಸೃಷ್ಟಿಕರ್ತನಲ್ಲಿ ಇಂಥದ್ದೇ ಭರವಸೆ ಇದೆಯೋ?

“ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು”

3 ದೇವರಲ್ಲಿ ಭರವಸೆಯಿಡುವುದರ ಅತ್ಯುತ್ತಮ ಮಾದರಿ ಖಂಡಿತವಾಗಿ ಯೇಸು ಕ್ರಿಸ್ತನದ್ದೇ. ಆತನು ಜ್ಞಾನೋಕ್ತಿ 3:5, 6ರ ಮಾತುಗಳಿಗೆ ಹೊಂದಿಕೆಯಲ್ಲಿ ಜೀವಿಸಿದನು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ಯೇಸುವಿನ ದೀಕ್ಷಾಸ್ನಾನವಾದ ಬಳಿಕ ಸೈತಾನನು ಬಂದು ಅವನಿಗೆ ಈ ಲೋಕದ ವೈಭವ ಅಧಿಕಾರಗಳ ಆಮಿಷವೊಡ್ಡಿದನು. (ಲೂಕ 4:3-13) ಆದರೆ ಯೇಸು ಮೋಸಹೋಗಲಿಲ್ಲ. ನಿಜವಾದ “ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ” ಎಂದು ಅವನಿಗೆ ತಿಳಿದಿತ್ತು.—ಜ್ಞಾನೋ. 22:4.

4 ಇಂದಿನ ಲೋಕದಲ್ಲಿ ಅತ್ಯಾಸೆ ಹಾಗೂ ಸ್ವಾರ್ಥವು ತಾಂಡವವಾಡುತ್ತಿದೆ. ಇಂಥ ಪರಿಸ್ಥಿತಿಗಳಲ್ಲಿ ಯೇಸುವಿನ ಮಾದರಿಯನ್ನು ಅನುಸರಿಸುವುದು ವಿವೇಕದ ಸಂಗತಿ. ಅಲ್ಲದೆ ಇದನ್ನೂ ನೆನಪಿಡಿ: ನಿತ್ಯಜೀವಕ್ಕೆ ನಡೆಸುವ ಇಕ್ಕಟ್ಟಾದ ದಾರಿಯಿಂದ ಯೆಹೋವನ ಸೇವಕರನ್ನು ಹೊರಗೆಳೆಯಲು ಸೈತಾನನು ಏನು ಮಾಡಲೂ ಸಿದ್ಧನು. ಎಲ್ಲರೂ ನಾಶನಕ್ಕೆ ನಡೆಸುವ ಅಗಲವಾದ ದಾರಿಯಲ್ಲಿರಬೇಕೆಂಬುದು ಅವನ ಆಸೆ. ಅವನಿಂದ ಮೋಸಹೋಗಬೇಡಿ! ಬದಲಿಗೆ, ನಿಮ್ಮ ಸೃಷ್ಟಿಕರ್ತನನ್ನು ಸ್ಮರಿಸುವ ದೃಢನಿರ್ಧಾರಮಾಡಿ. ಆತನಲ್ಲಿ ಸಂಪೂರ್ಣ ಭರವಸೆಯಿಟ್ಟು, “ವಾಸ್ತವವಾದ ಜೀವವನ್ನು” ಭದ್ರವಾಗಿ ಹಿಡಿಯಿರಿ. ಈ ಜೀವನವು ನಿಶ್ಚಿತವೂ ಸನ್ನಿಹಿತವೂ ಆಗಿದೆ.—1 ತಿಮೊ. 6:18.

ಯುವ ಜನರೇ, ವಿವೇಕಿಗಳಾಗಿರಿ!

5 ಸೃಷ್ಟಿಕರ್ತನನ್ನು ಸ್ಮರಿಸುವ ಯುವ ಜನರು ತಮ್ಮ ಸಮಪ್ರಾಯದವರಿಗಿಂತ ಹೆಚ್ಚು ವಿವೇಕಿಗಳು. (ಕೀರ್ತನೆ 119:99, 100 ಓದಿ.) ಈ ಲೋಕಕ್ಕೇನೂ ನಿರೀಕ್ಷೆಯಿಲ್ಲ ಎಂಬುದನ್ನು ಅವರು ದೇವರ ದೃಷ್ಟಿಕೋನವನ್ನು ಸ್ವೀಕರಿಸಿರುವುದರಿಂದ ಚೆನ್ನಾಗಿ ಅರ್ಥಮಾಡಿಕೊಳ್ಳಲು ಶಕ್ತರಾಗಿದ್ದಾರೆ. ಯುವ ಜನರಾದ ನೀವು ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ, ಭಯ ಆತಂಕಗಳು ದಿನೇ ದಿನೇ ಹೆಚ್ಚುತ್ತಿರುವುದನ್ನು ಖಂಡಿತ ನೋಡಿದ್ದೀರಿ. ಒಂದುವೇಳೆ ನೀವು ಶಾಲೆಯಲ್ಲಿದ್ದರೂ ಮಾಲಿನ್ಯ, ಭೂಮಿಯ ಕಾವೇರುವಿಕೆ, ಅರಣ್ಯನಾಶ ಮುಂತಾದ ಸಮಸ್ಯೆಗಳ ಬಗ್ಗೆ ಕೇಳಿದ್ದೀರಿ. ಜನರು ಈ ಸಮಸ್ಯೆಗಳ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಆದರೆ ಇದೆಲ್ಲವೂ ಸೈತಾನನ ಲೋಕದ ಅಂತ್ಯಕ್ಕೆ ಬೊಟ್ಟುಮಾಡುತ್ತಿರುವ ಸೂಚನೆಯ ಭಾಗವಾಗಿದೆ ಎಂದು ಚೆನ್ನಾಗಿ ತಿಳಿದಿರುವವರು ಯೆಹೋವನ ಸಾಕ್ಷಿಗಳು ಮಾತ್ರ.—ಪ್ರಕ. 11:18.

6 ದುಃಖದ ಸಂಗತಿಯೇನೆಂದರೆ ದೇವರ ಯುವ ಸೇವಕರಲ್ಲಿ ಕೆಲವರು ಎಚ್ಚರದಿಂದಿರುವ ಪ್ರಜ್ಞೆಯನ್ನು ಕಳೆದುಕೊಂಡು, ಲೋಕಕ್ಕೆ ಕೊಂಚವೇ ಸಮಯ ಉಳಿದಿದೆ ಎಂಬ ಸಂಗತಿಯನ್ನು ಅಲಕ್ಷಿಸಿದ್ದಾರೆ. (2 ಪೇತ್ರ 3:3, 4) ಇನ್ನಿತರರು ದುಸ್ಸಹವಾಸ ಮತ್ತು ಅಶ್ಲೀಲ ಸಾಹಿತ್ಯದಿಂದಾಗಿ ಗಂಭೀರ ಪಾಪದ ಬಲೆಗೆ ಬಿದ್ದಿದ್ದಾರೆ. (ಜ್ಞಾನೋ. 13:20) ಅಂತ್ಯವು ಇಷ್ಟೊಂದು ಹತ್ತಿರವಿರುವಾಗ ದೇವರ ಅನುಗ್ರಹವನ್ನು ಕಳೆದುಕೊಳ್ಳುವುದು ಎಷ್ಟು ದುಃಖಕರ! ಆದುದರಿಂದಲೇ, ಸಾ.ಶ.ಪೂ. 1473ರಲ್ಲಿ ಇಸ್ರಾಯೇಲ್ಯರು ವಾಗ್ದತ್ತ ದೇಶದ ಹೊಸ್ತಿಲಲ್ಲಿ ನಿಂತಿದ್ದಾಗ ಅಂದರೆ ಮೋವಾಬಿನ ಬಯಲಿನಲ್ಲಿ ಪಾಳೆಯಹೂಡಿದ್ದಾಗ ಏನು ನಡೆಯಿತೋ ಅದರಿಂದ ಪಾಠಕಲಿಯಿರಿ. ಅಲ್ಲಿ ಏನು ನಡೆಯಿತು?

ಇನ್ನೇನು ಗುರಿ ಮುಟ್ಟಲಿದ್ದಾಗ ಬಿದ್ದುಹೋದರು

7 ಆ ಕಾಲದಲ್ಲಿ, ಇಸ್ರಾಯೇಲ್ಯರಿಗೆ ತಮ್ಮ ವಾಗ್ದತ್ತ ಆಸ್ತಿ ಸಿಗದಂತೆ ಮಾಡುವುದು ಸೈತಾನನ ಬಯಕೆ ಆಗಿತ್ತು. ಅವನು ಪ್ರವಾದಿ ಬಿಳಾಮನ ಮುಖಾಂತರ ಅವರನ್ನು ಶಪಿಸಲು ಮಾಡಿದ ಪ್ರಯತ್ನವು ನೆಲಕಚ್ಚಿದಾಗ ಇನ್ನೊಂದು ಕುತಂತ್ರವನ್ನು ಬಳಸಿದನು. ಇಸ್ರಾಯೇಲ್ಯರು ಯೆಹೋವನ ಆಶೀರ್ವಾದಕ್ಕೆ ಅನರ್ಹರಾಗುವಂತೆ ಮಾಡಲು ಅವನು ಪ್ರಯತ್ನಿಸಿದನು. ಇಸ್ರಾಯೇಲ್ಯ ಪುರುಷರ ಮೇಲೆ ಬಲೆಬೀಸಲು ಮೋವಾಬಿನ ಸ್ತ್ರೀಯರನ್ನು ಬಳಸಿದನು. ಈ ಸಲ ಪಿಶಾಚನ ಯೋಜನೆ ಸ್ವಲ್ಪಮಟ್ಟಿಗೆ ಸಫಲವಾಯಿತು. ಇಸ್ರಾಯೇಲ್ಯ ಪುರುಷರು ಮೋವಾಬಿನ ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟರು ಮತ್ತು ಪೆಗೋರದ ಬಾಳನಿಗೂ ಅಡ್ಡಬಿದ್ದರು! ಅವರ ಅಮೂಲ್ಯ ಆಸ್ತಿಯಾಗಿದ್ದ ವಾಗ್ದತ್ತ ದೇಶವು ಅಲ್ಲೇ ಹತ್ತಿರದಲ್ಲಿದ್ದರೂ 24,000 ಮಂದಿ ಇಸ್ರಾಯೇಲ್ಯರು ತಮ್ಮ ಜೀವ ಕಳೆದುಕೊಂಡದ್ದು ಎಂಥ ದುರಂತ!—ಅರಣ್ಯ. 25:1-3, 9.

8 ಇಂದು ನಾವು, ಅದಕ್ಕಿಂತಲೂ ಉತ್ತಮವಾದ ವಾಗ್ದತ್ತ ದೇಶ ಅಂದರೆ ಹೊಸ ವಿಷಯಗಳ ವ್ಯವಸ್ಥೆಯ ಹೊಸ್ತಿಲಲ್ಲಿ ನಿಂತಿದ್ದೇವೆ. ಸೈತಾನನು ದೇವಜನರನ್ನು ಭ್ರಷ್ಟಗೊಳಿಸಲಿಕ್ಕಾಗಿ ಎಂದಿನಂತೆ ಲೈಂಗಿಕ ಅನೈತಿಕತೆಯನ್ನು ಬಳಸುತ್ತಿದ್ದಾನೆ. ಲೋಕದ ನೈತಿಕ ಮಟ್ಟಗಳು ಎಷ್ಟು ಕೀಳ್ಮಟ್ಟಕ್ಕೆ ಇಳಿದಿವೆಯೆಂದರೆ ವ್ಯಭಿಚಾರವನ್ನು ಮಾಮೂಲು ಸಂಗತಿಯೆಂದೂ ಸಲಿಂಗಕಾಮವು ವೈಯಕ್ತಿಕ ಆಯ್ಕೆಗೆ ಬಿಟ್ಟ ವಿಷಯವೆಂದೂ ಎಣಿಸಲಾಗುತ್ತಿದೆ. ಒಬ್ಬ ಕ್ರೈಸ್ತ ಸಹೋದರಿ ಅಂದದ್ದು: “ಸಲಿಂಗಕಾಮ ಮತ್ತು ವಿವಾಹಬಾಹಿರ ಲೈಂಗಿಕತೆಯು ದೇವರ ದೃಷ್ಟಿಯಲ್ಲಿ ಕೆಟ್ಟದ್ದೆಂದು ನನ್ನ ಮಕ್ಕಳಿಗೆ ಕೇವಲ ಮನೆಯಲ್ಲಿ ಮತ್ತು ರಾಜ್ಯ ಸಭಾಗೃಹದಲ್ಲಿ ಕಲಿಯಲು ಸಿಗುತ್ತದೆ.”

9 ಲೈಂಗಿಕ ಸಂಬಂಧಗಳು ಒಂದು ಪವಿತ್ರ ಕೊಡುಗೆ ಆಗಿದ್ದು ಜೀವ ಮತ್ತು ಸಂತಾನೋತ್ಪತ್ತಿಗೆ ಕಾರಣವಾಗುತ್ತದೆಂದು ಸೃಷ್ಟಿಕರ್ತನನ್ನು ಸ್ಮರಿಸುವ ಯುವ ಜನರು ತಿಳಿದಿದ್ದಾರೆ. ಆದುದರಿಂದ ದೇವರು ನಿರ್ದೇಶಿಸಿರುವಂತೆ ಲೈಂಗಿಕ ಸಂಬಂಧವನ್ನು ವಿವಾಹದ ಚೌಕಟ್ಟಿನೊಳಗೇ ಅನುಭವಿಸಬೇಕೆಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. (ಇಬ್ರಿ. 13:4) ಆದರೆ ಯೌವನ ‘ಪ್ರಾಯದಲ್ಲಿ,’ ಅಂದರೆ ಲೈಂಗಿಕ ಭಾವನೆಗಳು ಪ್ರಬಲವಾಗಿದ್ದು ಅವು ಒಬ್ಬನ ತೀರ್ಮಾನಶಕ್ತಿಯನ್ನು ವಕ್ರಗೊಳಿಸಬಲ್ಲ ಸಮಯಾವಧಿಯಲ್ಲಿ ಲೈಂಗಿಕವಾಗಿ ಶುದ್ಧರಾಗಿರಲು ಸಂಘರ್ಷಿಸಬೇಕು. (1 ಕೊರಿಂ. 7:36) ಅಯೋಗ್ಯ ವಿಚಾರಗಳು ಮನಸ್ಸಿನೊಳಗೆ ನುಸುಳುವಾಗ ಏನು ಮಾಡಬಲ್ಲಿರಿ? ಒಳ್ಳೇ ವಿಷಯಗಳ ಕುರಿತು ಯೋಚಿಸುವಂತೆ ಸಹಾಯಮಾಡಲು ಶ್ರದ್ಧೆಯಿಂದ ಯೆಹೋವನಿಗೆ ಪ್ರಾರ್ಥಿಸಿರಿ. ಯಥಾರ್ಥ ಮನಸ್ಸಿನಿಂದ ಸಹಾಯಕೋರುವವರ ಪ್ರಾರ್ಥನೆಗಳಿಗೆ ಯೆಹೋವನು ಯಾವಾಗಲೂ ಉತ್ತರಕೊಡುತ್ತಾನೆ. (ಲೂಕ 11:9-13 ಓದಿ.) ಭಕ್ತಿವರ್ಧಕ ಸಂಭಾಷಣೆ ಸಹ, ಮನಸ್ಸನ್ನು ಪುನಃ ಸರಿದಾರಿಗೆ ತರಲು ಸಹಾಯಮಾಡುತ್ತದೆ.

ನಿಮ್ಮ ಗುರಿಗಳನ್ನು ವಿವೇಕದಿಂದ ಆಯ್ಕೆಮಾಡಿ!

10 ಲೋಕದ ಅನೇಕ ಯುವ ಜನರು ಲಂಗುಲಗಾಮಿಲ್ಲದೆ ಶಾರೀರಿಕ ಭೋಗಕ್ಕಾಗಿಯೇ ಜೀವಿಸುತ್ತಿರಲು ಒಂದು ಕಾರಣವೇನೆಂದರೆ, ಅವರಿಗೆ ದೈವಿಕ ಮಾರ್ಗದರ್ಶನವಿಲ್ಲ ಅಥವಾ ಭವಿಷ್ಯತ್ತಿಗಾಗಿ ಯಾವುದೇ ನಿರೀಕ್ಷೆಯಿಲ್ಲ. ಅವರು “ಉಲ್ಲಾಸ, ಹರ್ಷ, . . . ಮಾಂಸತಿನ್ನುವದು, ದ್ರಾಕ್ಷಾರಸ ಕುಡಿಯುವದು” ಇವುಗಳಿಗೋಸ್ಕರವೇ ಜೀವಿಸುತ್ತಿದ್ದ ಯೆಶಾಯನ ದಿನದ ಭಕ್ತಿಹೀನ ಇಸ್ರಾಯೇಲ್ಯರಂತಿದ್ದಾರೆ. (ಯೆಶಾ. 22:13) ಅಂಥವರನ್ನು ಆಸೆಗಣ್ಣಿನಿಂದ ನೋಡುತ್ತಾ ಅಸೂಯೆಪಡುವ ಬದಲು, ಯೆಹೋವನು ತನ್ನ ನಿಷ್ಠಾವಂತ ಜನರಿಗಾಗಿ ಇಟ್ಟಿರುವ ಅಮೂಲ್ಯ ನಿರೀಕ್ಷೆಯ ಕುರಿತಾಗಿ ನೀವೇಕೆ ಮನನಮಾಡಬಾರದು? ನೀವು ದೇವರ ಯುವ ಸೇವಕರಾಗಿರುವಲ್ಲಿ ಆ ಹೊಸ ಲೋಕವನ್ನು ತೀವ್ರ ಉತ್ಸುಕತೆಯಿಂದ ಎದುರುನೋಡುತ್ತಿದ್ದೀರೋ? ಯೆಹೋವನು ನಿಮ್ಮ ಮುಂದಿಟ್ಟಿರುವ “ಭಾಗ್ಯಕರವಾದ ನಿರೀಕ್ಷೆಯನ್ನು . . . ಎದುರುನೋಡುತ್ತಾ . . . ಸ್ವಸ್ಥ ಚಿತ್ತರಾಗಿ” ಬದುಕಲು ನಿಮ್ಮಿಂದಾಗುವ ಎಲ್ಲ ಪ್ರಯತ್ನ ಮಾಡುತ್ತಿದ್ದೀರೋ? (ತೀತ 2:12, 13) ನಿಮ್ಮ ಉತ್ತರವು, ನೀವಿಡುವ ಗುರಿಗಳನ್ನು ಮತ್ತು ಆದ್ಯತೆಗಳನ್ನು ಪ್ರಭಾವಿಸುವುದು.

11 ಯುವ ಜನರು ತಮ್ಮ ಎಲ್ಲ ಶಕ್ತಿಸಾಮರ್ಥ್ಯಗಳನ್ನು ಐಹಿಕ ಗುರಿಗಳ ಸಾಧನೆಗೆ ವ್ಯಯಿಸಬೇಕೆಂದು ಈ ಲೋಕ ಬಯಸುತ್ತದೆ. ಆದುದರಿಂದ ಶಾಲೆಯಲ್ಲಿರುವವರು ಒಳ್ಳೆಯ ಮೂಲ ಶಿಕ್ಷಣ ಪಡೆಯಲಿಕ್ಕಾಗಿ ಶ್ರದ್ಧೆಯಿಂದ ಓದಬೇಕಾಗುತ್ತದೆ. ಹಾಗಿದ್ದರೂ ನಿಮ್ಮ ಗುರಿಯು ಸೂಕ್ತ ಉದ್ಯೋಗ ಪಡೆಯುವುದು ಮಾತ್ರವಲ್ಲ ಸಭೆಯಲ್ಲೂ ಉಪಯುಕ್ತರಾಗಿದ್ದು, ಫಲಭರಿತ ರಾಜ್ಯ ಘೋಷಕರಾಗಿರುವುದೇ ಆಗಿದೆ. ಈ ಗುರಿ ಮುಟ್ಟಲಿಕ್ಕಾಗಿ ನೀವು ವಿಚಾರಗಳನ್ನು ಸ್ಪಷ್ಟವಾಗಿ ತಿಳಿಸಲು, ತರ್ಕಬದ್ಧವಾಗಿ ಯೋಚಿಸಲು, ಶಾಂತ ಹಾಗೂ ಗೌರವಪೂರ್ವಕ ರೀತಿಯಲ್ಲಿ ಇತರರೊಂದಿಗೆ ಚರ್ಚಿಸಲು ಶಕ್ತರಾಗಿರಬೇಕು. ಅದಾಗ್ಯೂ ಇಂದು ಲಭ್ಯವಿರುವುದರಲ್ಲೇ ಅತ್ಯುತ್ತಮ ಶಿಕ್ಷಣವು ಬೈಬಲ್‌ ಅಧ್ಯಯನ ಮಾಡುತ್ತಾ ಅದರ ಮೂಲತತ್ತ್ವಗಳನ್ನು ತಮ್ಮ ಬದುಕಿನಲ್ಲಿ ಅನ್ವಯಿಸಿಕೊಳ್ಳುವ ಯುವ ಜನರಿಗೆ ಸಿಗುತ್ತಿದೆ. ಇವರು ಯಶಸ್ವಿ ಹಾಗೂ ನಿತ್ಯ ಭವಿಷ್ಯತ್ತಿಗಾಗಿ ಒಳ್ಳೇ ಅಸ್ತಿವಾರವನ್ನು ಹಾಕುತ್ತಿದ್ದಾರೆ.—ಕೀರ್ತನೆ 1:1-3 ಓದಿ. *

12 ಇಸ್ರಾಯೇಲಿನಲ್ಲಿ ಹೆತ್ತವರು ಮಕ್ಕಳಿಗೆ ನೀಡುವ ಶಿಕ್ಷಣಕ್ಕೆ ಆದ್ಯತೆ ಕೊಡಲಾಗುತ್ತಿತ್ತು. ಈ ಶಿಕ್ಷಣವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ ಆಧ್ಯಾತ್ಮಿಕ ವಿಷಯಗಳನ್ನು ಪ್ರಭಾವಿಸುತ್ತಿತ್ತು. (ಧರ್ಮೋ. 6:6, 7) ಆದುದರಿಂದ ದೇವಭಕ್ತ ಹೆತ್ತವರ ಹಾಗೂ ಇತರರ ಮಾತುಗಳಿಗೆ ಕಿವಿಗೊಡುತ್ತಿದ್ದ ಯುವ ಇಸ್ರಾಯೇಲ್ಯರು “ಜ್ಞಾನ”ವನ್ನಲ್ಲದೆ, ಕೇವಲ ದೈವಿಕ ಶಿಕ್ಷಣದಿಂದ ಸಿಗಬಲ್ಲ “ವಿವೇಕ,” “ಒಳನೋಟ,” “ತಿಳುವಳಿಕೆ” ಮತ್ತು “ಯೋಚನಾ ಸಾಮರ್ಥ್ಯ” ಎಂಬ ಅಸಾಧಾರಣ ಗುಣಗಳನ್ನು ಪಡೆದುಕೊಂಡರು. (ಜ್ಞಾನೋ. 1:2-4; 2:1-5, 11-15, NW) ಇಂದು ಕ್ರೈಸ್ತ ಕುಟುಂಬಗಳು ಶಿಕ್ಷಣಕ್ಕೆ ಅದೇ ರೀತಿಯ ಗಮನಕೊಡಬೇಕು.

ನಿಮ್ಮನ್ನು ಪ್ರೀತಿಸುವವರ ಮಾತುಕೇಳಿ

13 ಯುವ ಜನರಿಗೆ ಬೇರೆ ಬೇರೆ ರೀತಿಯ ಜನರು ಸಲಹೆಗಳನ್ನು ಕೊಡುತ್ತಾರೆ. ಇವರಲ್ಲಿ, ಶಾಲಾ ಕೌನ್ಸಲರ್ಸ್‌ (ಸಲಹೆಗಾರರು) ಸೇರಿದ್ದಾರೆ. ಇವರು, ಐಹಿಕ ಲೋಕದಲ್ಲಿ ಯಶಸ್ಸನ್ನು ಗಿಟ್ಟಿಸಿಕೊಳ್ಳುವುದರ ಕುರಿತು ಮಾತ್ರ ಯೋಚಿಸುತ್ತಾರೆ. ಇವರು ಕೊಡುವ ಸಲಹೆಯನ್ನು, ದೇವರ ವಾಕ್ಯ ಹಾಗೂ ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗ ಕೊಡುವ ಆಧ್ಯಾತ್ಮಿಕ ಆಹಾರದ ಸಹಾಯದಿಂದ ದಯವಿಟ್ಟು ಪ್ರಾರ್ಥನಾಪೂರ್ವಕವಾಗಿ ತೂಗಿನೋಡಿರಿ. ಯುವಪ್ರಾಯದವರೂ ಅನನುಭವಿಗಳೂ ಆದವರು ಸೈತಾನನ ಮುಖ್ಯ ಗುರಿಹಲಗೆ ಆಗಿದ್ದಾರೆಂದು ನಿಮ್ಮ ಬೈಬಲ್‌ ಅಧ್ಯಯನದಿಂದ ತಿಳಿದಿದ್ದೀರಿ. ಉದಾಹರಣೆಗಾಗಿ ಏದೆನ್‌ ತೋಟದಲ್ಲಿದ್ದ ಅನನುಭವಿ ಹವ್ವಳು, ಹಿಂದೆಂದೂ ತನಗೆ ಪ್ರೀತಿ ತೋರಿಸಿರದ ಅಪರಿಚಿತನಾದ ಸೈತಾನನ ಮಾತುಕೇಳಿದಳು. ಒಂದುವೇಳೆ ಆಕೆ, ತನಗಾಗಿ ಹಲವಾರು ವಿಧಗಳಲ್ಲಿ ಪ್ರೀತಿ ತೋರಿಸಿದ್ದ ಯೆಹೋವನ ಮಾತುಕೇಳುತ್ತಿದ್ದಲ್ಲಿ ಪರಿಸ್ಥಿತಿ ಎಷ್ಟು ಭಿನ್ನವಾಗಿರುತ್ತಿತ್ತು!—ಆದಿ. 3:1-6.

14 ಸೃಷ್ಟಿಕರ್ತನು ನಿಮ್ಮನ್ನೂ ಪ್ರೀತಿಸುತ್ತಾನೆ ಮತ್ತು ಆತನ ಪ್ರೀತಿಯು ಅಪ್ಪಟ. ನೀವು ಈಗ ಮಾತ್ರವಲ್ಲ ಸದಾಕಾಲಕ್ಕೂ ಸಂತೋಷವಾಗಿರಬೇಕೆಂಬುದೇ ಆತನ ಅಪೇಕ್ಷೆ! ಆದುದರಿಂದ ಕಾಳಜಿಯಿರುವ ತಂದೆಯೊಬ್ಬನ ಕೋಮಲತೆಯಿಂದ ಆತನು ನಿಮಗೂ ತನ್ನ ಆರಾಧಕರೆಲ್ಲರಿಗೂ ಹೀಗನ್ನುತ್ತಾನೆ: “ಇದೇ ಮಾರ್ಗ, ಇದರಲ್ಲೇ ನಡೆಯಿರಿ.” (ಯೆಶಾ. 30:21) ನಿಮ್ಮ ಹೆತ್ತವರು ಯೆಹೋವನನ್ನು ನಿಜವಾಗಿಯೂ ಪ್ರೀತಿಸುವ ವಿಶ್ವಾಸಿಗಳಾಗಿದ್ದರೆ ಅದೊಂದು ಆಶೀರ್ವಾದ. ಆದ್ಯತೆಗಳನ್ನು ಮತ್ತು ಗುರಿಗಳನ್ನು ಇಡುವಾಗ ಗೌರವದಿಂದ ಅವರ ಸಲಹೆಗೆ ಕಿವಿಗೊಡಿರಿ. (ಜ್ಞಾನೋ. 1:8, 9) ಎಷ್ಟೆಂದರೂ ನೀವು ಜೀವ ಪಡೆಯಬೇಕೆಂಬುದೇ ಅವರ ಆಸೆ. ಆ ಜೀವನವು ಲೋಕದ ಯಾವುದೇ ಐಶ್ವರ್ಯ ಅಥವಾ ಅಂತಸ್ತಿಗಿಂತ ಎಷ್ಟೋ ಹೆಚ್ಚು ಅಮೂಲ್ಯ!—ಮತ್ತಾ. 16:26.

15 ಸೃಷ್ಟಿಕರ್ತನನ್ನು ಸ್ಮರಿಸುವವರು ತಮ್ಮ ಜೀವನವನ್ನು ಸರಳವಾಗಿಡುತ್ತಾರೆ. ಏಕೆಂದರೆ ಯೆಹೋವನು ತಮ್ಮನ್ನು “ಎಂದಿಗೂ ಕೈಬಿಡುವದಿಲ್ಲ,” “ಎಂದಿಗೂ ತೊರೆಯುವದಿಲ್ಲ” ಎಂಬ ಭರವಸೆ ಅವರಿಗಿದೆ. (ಇಬ್ರಿಯ 13:5 ಓದಿ.) ಆದರೆ ಈ ಉತ್ತಮ ಮನೋಭಾವವು ಲೋಕದ ವಿಚಾರಧಾಟಿಗೆ ವಿರುದ್ಧವಾಗಿದೆ. ಆದುದರಿಂದ ಲೋಕದ ಆತ್ಮವು ನಮಗೆ ಸೋಂಕದಂತೆ ನಾವು ಜಾಗ್ರತೆವಹಿಸಬೇಕು. (ಎಫೆ. 2:2) ಈ ವಿಷಯದಲ್ಲಿ ಯೆರೆಮೀಯನ ಕಾರ್ಯದರ್ಶಿ ಬಾರೂಕನ ಮಾದರಿಯನ್ನು ಪರಿಗಣಿಸಿರಿ. ಇವನು, ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ನಾಶನಕ್ಕೆ ಮುಂಚೆ ಇದ್ದ ಕಷ್ಟಕರವಾದ ದಿನಗಳಲ್ಲಿ ಆ ಪಟ್ಟಣದಲ್ಲಿ ಜೀವಿಸುತ್ತಿದ್ದನು.

16 ಬಾರೂಕನು ತನ್ನ ಬದುಕನ್ನು ಭೌತಿಕ ರೀತಿಯಲ್ಲಿ ಉತ್ತಮಗೊಳಿಸಲು ಬಯಸಿದ್ದಿರಬಹುದು. ಯೆಹೋವನು ಇದನ್ನು ಗಮನಿಸಿ, ಅವನು “ಮಹಾ ಪದವಿಯನ್ನು” ಅಥವಾ ದೊಡ್ಡ ದೊಡ್ಡ ಸಂಗತಿಗಳನ್ನು ಆಶಿಸದಂತೆ ದಯೆಯಿಂದ ಎಚ್ಚರಿಸಿದನು. ನಮ್ರನೂ ವಿವೇಕಿಯೂ ಆದ ಬಾರೂಕನು ಯೆಹೋವನ ಮಾತುಕೇಳಿ ಯೆರೂಸಲೇಮಿನ ನಾಶನದಿಂದ ಪಾರಾದನು. (ಯೆರೆ. 45:2-5) ಇನ್ನೊಂದು ಕಡೆ, ಯೆಹೋವನನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿ, ದೊಡ್ಡ ದೊಡ್ಡ ಸಂಗತಿಗಳನ್ನು ಸಂಪಾದಿಸಿದ್ದ ಬಾರೂಕನ ಸಮಕಾಲೀನರು ಸ್ವಲ್ಪ ಸಮಯದೊಳಗೆ ಕಸ್ದೀಯರ (ಬಾಬೆಲಿನವರು) ಆಕ್ರಮಣದ ಸಮಯದಲ್ಲಿ ಎಲ್ಲವನ್ನೂ ಕಳೆದುಕೊಂಡರು. ಅನೇಕರು ತಮ್ಮ ಜೀವವನ್ನೂ ಕಳೆದುಕೊಂಡರು. (2 ಪೂರ್ವ. 36:15-18) ಬಾರೂಕನ ಅನುಭವವು, ಈ ಲೋಕದ ಐಶ್ವರ್ಯ ಮತ್ತು ಪ್ರಖ್ಯಾತಿಗಿಂತ ದೇವರೊಂದಿಗಿನ ಸಂಬಂಧವೇ ಹೆಚ್ಚು ಪ್ರಾಮುಖ್ಯ ಎಂಬುದನ್ನು ತಿಳಿದುಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ.

ಅತ್ಯುತ್ತಮ ಮಾದರಿಗಳ ಮೇಲೆ ಕಣ್ಣಿಡಿ

17 ಜೀವದ ಹಾದಿಯಲ್ಲಿ ನಡೆಯುವಂತೆ ಸಹಾಯಮಾಡಲು, ದೇವರ ವಾಕ್ಯವು ನಮಗೆ ಹಲವಾರು ಆದರ್ಶ ವ್ಯಕ್ತಿಗಳ ಬಗ್ಗೆ ತಿಳಿಸುತ್ತದೆ. ಉದಾಹರಣೆಗಾಗಿ ಯೇಸುವನ್ನು ತೆಗೆದುಕೊಳ್ಳಿ. ಅವನು ಜೀವಿಸಿರುವವರಲ್ಲೇ ಅತಿ ಪ್ರತಿಭಾವಂತ ವ್ಯಕ್ತಿ ಆಗಿದ್ದನು. ಆದರೆ ಆತನು ತನ್ನ ಗಮನವನ್ನು ಕೇಂದ್ರೀಕರಿಸಿದ್ದು, ಜನರಿಗೆ ಶಾಶ್ವತವಾದ ಸಹಾಯ ಕೊಡುವ “ರಾಜ್ಯದ ಸುವಾರ್ತೆಯ” ಮೇಲೆಯೇ. (ಲೂಕ 4:43) ಅಪೊಸ್ತಲ ಪೌಲನು ಯೆಹೋವನಿಗೆ ತನ್ನ ಸರ್ವೋತ್ತಮವಾದುದನ್ನು ಕೊಡಲಿಕ್ಕೋಸ್ಕರ ಒಂದು ಲಾಭದಾಯಕ ವೃತ್ತಿಯನ್ನು ಬಿಟ್ಟು, ತನ್ನ ಸಮಯ ಮತ್ತು ಶಕ್ತಿಯನ್ನು ಸುವಾರ್ತೆ ಸಾರುವುದಕ್ಕಾಗಿ ಬಳಸಿದನು. “ನಂಬಿಕೆಯ ವಿಷಯದಲ್ಲಿ ನಿಜಕುಮಾರ”ನಾಗಿದ್ದ ತಿಮೊಥೆಯನು ಪೌಲನ ಉತ್ತಮ ಮಾದರಿಯನ್ನು ಅನುಕರಿಸಿದನು. (1 ತಿಮೊ. 1:2) ಯೇಸು, ಪೌಲ ಹಾಗೂ ತಿಮೊಥೆಯರು ತಾವು ಆಯ್ದುಕೊಂಡ ಜೀವನಕ್ರಮದ ಬಗ್ಗೆ ವಿಷಾದಿಸಿದರೋ? ಖಂಡಿತ ಇಲ್ಲ! ವಾಸ್ತವದಲ್ಲಿ, ದೇವರ ಸೇವೆಮಾಡುವ ಸದವಕಾಶದೊಂದಿಗೆ ಹೋಲಿಸುವಾಗ ಈ ಲೋಕವು ನೀಡುವ ಸಂಗತಿಗಳು “ಕಸ” ಸಮಾನವೆಂದು ಪೌಲನು ಹೇಳಿದನು.—ಫಿಲಿ. 3:8-11.

18 ಇಂದು ಅನೇಕ ಕ್ರೈಸ್ತ ಯುವ ಜನರು ಯೇಸು, ಪೌಲ ಹಾಗೂ ತಿಮೊಥೆಯರ ನಂಬಿಕೆಯನ್ನು ಅನುಕರಿಸುತ್ತಾರೆ. ಉದಾಹರಣೆಗೆ, ಕೈತುಂಬ ಸಂಬಳ ತರುವ ಉದ್ಯೋಗದಲ್ಲಿದ್ದ ಒಬ್ಬ ಯುವ ಸಹೋದರನು ಬರೆದುದು: “ನಾನು ಬೈಬಲ್‌ ಮೂಲತತ್ತ್ವಗಳನ್ನು ಪಾಲಿಸುವ ಕಾರಣ ನನಗೆ ಬೇಗಬೇಗನೆ ಬಡತಿ ಸಿಗುತ್ತಿತ್ತು. ನನಗೆ ಆರ್ಥಿಕ ಲಾಭವಾಗುತ್ತಿದ್ದರೂ ಗಾಳಿಯನ್ನು ಹಿಂದಟ್ಟುತ್ತಿದ್ದೇನೆಂದು ನನಗನಿಸಿತು. ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸುವ ನನ್ನ ಇಚ್ಛೆಯನ್ನು ಕಂಪೆನಿಯ ಕಾರ್ಯನಿರ್ವಾಹಕ ಮಂಡಳಿಗೆ ತಿಳಿಸಿದಾಗ, ಅವರು ಆತುರಾತುರದಿಂದ ಬಹಳಷ್ಟು ಹಣ ನೀಡಲು ಮುಂದಾದರು. ಹೀಗಾದರೂ ನಾನು ಮನಸ್ಸು ಬದಲಾಯಿಸಿ ಕೆಲಸ ಮುಂದುವರಿಸುವೆನೆಂದು ಅವರು ನಿರೀಕ್ಷಿಸಿದರು. ಆದರೆ ನಾನಾಗಲೇ ಗಟ್ಟಿಮನಸ್ಸು ಮಾಡಿದ್ದೆ. ಪೂರ್ಣ ಸಮಯದ ಸೇವೆಯನ್ನು ಆರಂಭಿಸಲಿಕ್ಕಾಗಿ ಇಷ್ಟೊಂದು ಲಾಭಕರ ವೃತ್ತಿಯನ್ನು ಏಕೆ ಬಿಟ್ಟುಬಿಟ್ಟೆನೆಂಬುದನ್ನು ಹೆಚ್ಚಿನವರಿಗೆ ಅರ್ಥಮಾಡಿಕೊಳ್ಳಲು ಆಗಲಿಲ್ಲ. ನಾನು ದೇವರಿಗೆ ಮಾಡಿದ ಸಮರ್ಪಣೆಗೆ ತಕ್ಕಂತೆ ನಿಜವಾಗಿ ಜೀವಿಸಲು ಬಯಸುವುದರಿಂದಲೇ ಹೀಗೆ ಮಾಡಿದೆ ಎಂಬುದೇ ನನ್ನ ಉತ್ತರ. ಈಗ ನನ್ನ ಜೀವನದ ಮುಖ್ಯ ಬಿಂದು ಆಧ್ಯಾತ್ಮಿಕ ವಿಷಯಗಳೇ ಆಗಿರುವುದರಿಂದ ನನಗೀಗ ಸಂತೋಷವೂ ಸಂತೃಪ್ತಿಯೂ ಇದೆ. ಇದನ್ನು ಎಷ್ಟೇ ಹಣವಾಗಲಿ ಯಾವುದೇ ಅಂತಸ್ತಾಗಲಿ ಕೊಡಲಾರದು.”

19 ಲೋಕವ್ಯಾಪಕವಾಗಿ ಸಾವಿರಾರು ಯುವ ಜನರು ಇದೇ ರೀತಿಯ ವಿವೇಕಯುತ ಆಯ್ಕೆಗಳನ್ನು ಮಾಡಿದ್ದಾರೆ. ಆದುದರಿಂದ ಯುವ ಜನರೇ ನಿಮ್ಮ ಭವಿಷ್ಯತ್ತಿನ ಬಗ್ಗೆ ಯೋಚಿಸುತ್ತಿರುವಾಗ ಯೆಹೋವನ ದಿನವನ್ನು ಮನಸ್ಸಿನಲ್ಲಿಡಿರಿ. (2 ಪೇತ್ರ 3:11, 12) ಈ ಲೋಕವನ್ನು ಪೂರ್ಣವಾಗಿ ಅನುಭೋಗಿಸುವವರ ಬಗ್ಗೆ ಅಸೂಯೆಪಡಬೇಡಿರಿ. ಬದಲಿಗೆ ನಿಮ್ಮನ್ನು ನಿಜವಾಗಿ ಪ್ರೀತಿಸುವವರ ಮಾತುಕೇಳಿ. “ಪರಲೋಕದಲ್ಲಿ ಗಂಟುಮಾಡಿ”ಕೊಳ್ಳುವುದೇ ನೀವು ಹೂಡಬಲ್ಲ ಅತ್ಯಂತ ಭದ್ರವಾದ ಬಂಡವಾಳವಾಗಿದೆ. ಕೇವಲ ಇದರಿಂದ ನಿಮಗೆ ನಿತ್ಯ ಪ್ರಯೋಜನಗಳು ದೊರೆಯುವವು. (ಮತ್ತಾ. 6:19, 20; 1 ಯೋಹಾನ 2:15-17 ಓದಿ.) ಆದುದರಿಂದ ನಿಮ್ಮ ಸೃಷ್ಟಿಕರ್ತನನ್ನು ಸ್ಮರಿಸಿರಿ. ಹೀಗೆ ಮಾಡಿದರೆ ಆತನು ಖಂಡಿತವಾಗಿಯೂ ನಿಮ್ಮನ್ನು ಆಶೀರ್ವದಿಸುವನು.

[ಪಾದಟಿಪ್ಪಣಿ]

^ ಪ್ಯಾರ. 17 ಉನ್ನತ ಶಿಕ್ಷಣ ಹಾಗೂ ಉದ್ಯೋಗದ ವಿಷಯಕ್ಕಾಗಿ 2005, ಅಕ್ಟೋಬರ್‌ 1ರ ಕಾವಲಿನಬುರುಜು, ಪುಟ 26-31 ನೋಡಿ.

ನಿಮಗೆ ನೆನಪಿದೆಯೋ?

• ದೇವರಲ್ಲಿನ ಭರವಸೆಯನ್ನು ನಾವು ಹೇಗೆ ತೋರಿಸುತ್ತೇವೆ?

• ಅತ್ಯುತ್ತಮ ಶಿಕ್ಷಣ ಯಾವುದು?

• ಬಾರೂಕನಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು?

• ಯಾರು ಆದರ್ಶ ವ್ಯಕ್ತಿಗಳಾಗಿದ್ದಾರೆ, ಮತ್ತು ಏಕೆ?

[ಅಧ್ಯಯನ ಪ್ರಶ್ನೆಗಳು]

1. ಯೆಹೋವನು ತನ್ನ ಯುವ ಆರಾಧಕರಲ್ಲಿ ತನಗಿರುವ ಭರವಸೆಯನ್ನು ಹೇಗೆ ವ್ಯಕ್ತಪಡಿಸುತ್ತಾನೆ?

2. ಯೆಹೋವನನ್ನು ಸ್ಮರಿಸಿಕೊಳ್ಳುವುದರಲ್ಲಿ ಏನು ಸೇರಿದೆ?

3, 4. ಯೆಹೋವನಲ್ಲಿದ್ದ ಭರವಸೆಯನ್ನು ಯೇಸು ಹೇಗೆ ತೋರಿಸಿದನು, ಮತ್ತು ಇಂದು ಯೆಹೋವನಲ್ಲಿ ಭರವಸೆಯಿಡುವುದು ಏಕೆ ಮಹತ್ವದ್ದಾಗಿದೆ?

5. ಈ ಲೋಕದ ಭವಿಷ್ಯತ್ತಿನ ಕುರಿತು ನಿಮಗೆ ಏನನಿಸುತ್ತದೆ?

6. ಕೆಲವು ಯುವ ಜನರು ಹೇಗೆ ಮೋಸಹೋಗಿದ್ದಾರೆ?

7, 8. (ಎ) ಮೋವಾಬಿನ ಬಯಲಿನಲ್ಲಿ ಸೈತಾನನು ಯಾವ ಕುತಂತ್ರ ಬಳಸಿದನು? (ಬಿ) ಇಂದು ಸೈತಾನನು ಯಾವ ಕುತಂತ್ರ ಬಳಸುತ್ತಿದ್ದಾನೆ?

9. ಯೌವನ ‘ಪ್ರಾಯದಲ್ಲಿ’ ಏನಾಗಬಲ್ಲದು, ಮತ್ತು ಯುವ ಜನರು ಇದನ್ನು ಹೇಗೆ ನಿಭಾಯಿಸಬಲ್ಲರು?

10. ಯಾವ ನಕಾರಾತ್ಮಕ ಮನಸ್ಥಿತಿಯನ್ನು ನಾವು ದೂರವಿಡಬೇಕು, ಮತ್ತು ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು?

11. ಶಾಲೆಗೆ ಹೋಗುತ್ತಿರುವ ಯುವ ಕ್ರೈಸ್ತರು ಏಕೆ ಶ್ರದ್ಧೆಯಿಂದ ಓದಬೇಕು?

12. ಕ್ರೈಸ್ತ ಕುಟುಂಬಗಳು ಯಾವ ಮಾದರಿಯನ್ನು ಅನುಕರಿಸತಕ್ಕದ್ದು?

13. ಕೆಲ ಯುವ ಜನರಿಗೆ ಯಾವ ರೀತಿಯ ಸಲಹೆಗಳು ಸಿಗುತ್ತವೆ, ಮತ್ತು ಅವರೇಕೆ ಎಚ್ಚರಿಕೆಯಿಂದಿರಬೇಕು?

14. ನಾವು ಯೆಹೋವನ ಹಾಗೂ ವಿಶ್ವಾಸಿ ಹೆತ್ತವರ ಮಾತುಕೇಳಬೇಕು ಏಕೆ?

15, 16. (ಎ) ಯೆಹೋವನ ಕುರಿತು ನಮಗೆ ಯಾವ ಭರವಸೆಯಿರಬಲ್ಲದು? (ಬಿ) ಬಾರೂಕನ ಅನುಭವದಿಂದ ನಾವು ಯಾವ ಪ್ರಮುಖ ಪಾಠವನ್ನು ಕಲಿಯುತ್ತೇವೆ?

17. ಯೇಸು, ಪೌಲ ಹಾಗೂ ತಿಮೊಥೆಯರು ಇಂದು ಯೆಹೋವನ ಸೇವಕರಿಗಾಗಿ ಆದರ್ಶ ವ್ಯಕ್ತಿಗಳಾಗಿದ್ದಾರೆ ಏಕೆ?

18. ಒಬ್ಬ ಯುವ ಸಹೋದರನು ಯಾವ ದೊಡ್ಡ ಬದಲಾವಣೆಗಳನ್ನು ಮಾಡಿದನು, ಮತ್ತು ಆ ಬಗ್ಗೆ ಅವನೇಕೆ ವಿಷಾದಿಸುವುದಿಲ್ಲ?

19. ಯುವ ಜನರು ಯಾವ ವಿವೇಕಯುತ ಆಯ್ಕೆಮಾಡುವಂತೆ ಉತ್ತೇಜಿಸಲಾಗಿದೆ?

[ಪುಟ 13ರಲ್ಲಿರುವ ಚಿತ್ರಗಳು]

ಯೆಹೋವನು ಅತ್ಯುತ್ತಮ ಶಿಕ್ಷಣ ಕೊಡುತ್ತಾನೆ

[ಪುಟ 15ರಲ್ಲಿರುವ ಚಿತ್ರ]

ಬಾರೂಕನು ಯೆಹೋವನ ಮಾತುಕೇಳಿದನು ಮತ್ತು ಯೆರೂಸಲೇಮಿನ ನಾಶನದಿಂದ ಪಾರಾದನು. ಇದರಿಂದ ನೀವೇನು ಕಲಿಯಬಲ್ಲಿರಿ?