ಯೋಹಾನ ಪುಸ್ತಕದ ಮುಖ್ಯಾಂಶಗಳು
ಯೆಹೋವನ ವಾಕ್ಯವು ಸಜೀವವಾದದ್ದು
ಯೋಹಾನ ಪುಸ್ತಕದ ಮುಖ್ಯಾಂಶಗಳು
ಯೇಸುವಿನ ಜೀವನ ಮತ್ತು ಶುಶ್ರೂಷೆಯ ಕುರಿತ ಪ್ರೇರಿತ ವೃತ್ತಾಂತವನ್ನು ಬರೆದ ಕೊನೆಯ ವ್ಯಕ್ತಿ “ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯ” ಯೋಹಾನನೇ. (ಯೋಹಾ. 21:20) ಸುಮಾರು ಸಾ.ಶ. 98ರಲ್ಲಿ ಬರೆಯಲಾದ ಯೋಹಾನನ ಸುವಾರ್ತಾ ಪುಸ್ತಕದಲ್ಲಿರುವ ಬಹುತೇಕ ವಿವರಗಳು ಉಳಿದ ಮೂರು ಸುವಾರ್ತಾ ವೃತ್ತಾಂತಗಳಲ್ಲಿ ಕಂಡುಬರುವುದಿಲ್ಲ.
ಅಪೊಸ್ತಲ ಯೋಹಾನನು ಒಂದು ನಿಶ್ಚಿತ ಉದ್ದೇಶವನ್ನಿಟ್ಟುಕೊಂಡೇ ಈ ಸುವಾರ್ತಾ ಪುಸ್ತಕವನ್ನು ಬರೆದನು. ಆ ಕುರಿತು ಅವನು ಹೇಳುವುದು: “ಯೇಸು ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ.” (ಯೋಹಾ. 20:31) ನಿಶ್ಚಯವಾಗಿ ಅದರಲ್ಲಿರುವ ಸಂದೇಶವು ನಮಗೆ ಅತ್ಯಧಿಕ ಮಹತ್ವವುಳ್ಳದ್ದಾಗಿದೆ.—ಇಬ್ರಿ. 4:12.
“ಅಗೋ ದೇವರು ನೇಮಿಸಿದ ಕುರಿ”
ಯೇಸುವನ್ನು ಕಂಡೊಡನೆ ಸ್ನಾನಿಕನಾದ ಯೋಹಾನನು ದೃಢಭರವಸೆಯಿಂದ ಹೇಳುವುದು: “ಅಗೋ [ಯಜ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆಮಾಡುವವನು.” (ಯೋಹಾ. 1:29) ಸಮಾರ್ಯ, ಗಲಿಲಾಯ, ಯೂದಾಯ ಮತ್ತು ಯೋರ್ದನ್ ನದಿಯ ಪೂರ್ವಕ್ಕಿರುವ ಪ್ರದೇಶಗಳಲ್ಲಿ ಸಂಚರಿಸಿ ಸಾರುತ್ತಾ, ಬೋಧಿಸುತ್ತಾ ಮಹತ್ಕಾರ್ಯಗಳನ್ನು ಮಾಡುವಾಗ “ಅನೇಕರು ಆತನ ಬಳಿಗೆ ಬಂದು . . . ಆತನನ್ನು ನಂಬಿದರು.”—ಯೋಹಾ. 10:41, 42.
ಯೇಸುವಿನ ಅಸಾಧಾರಣ ಅದ್ಭುತಗಳಲ್ಲೊಂದು ಲಾಜರನ ಪುನರುತ್ಥಾನವಾಗಿದೆ. ಸತ್ತು ನಾಲ್ಕು ದಿನಗಳಾದ ಮೇಲೂ ಪುನಃ ಜೀವಿತನಾದ ಈ ವ್ಯಕ್ತಿಯನ್ನು ನೋಡಿ ಅನೇಕರು ಯೇಸುವಿನಲ್ಲಿ ನಂಬಿಕೆಯಿಡುತ್ತಾರೆ. ಆದರೆ ಮಹಾಯಾಜಕರು ಮತ್ತು ಫರಿಸಾಯರು ಯೇಸುವನ್ನು ಹೇಗಾದರೂ ಮಾಡಿ ಕೊಲ್ಲಬೇಕೆಂದು ಸಂಚು ಹೂಡುತ್ತಾರೆ. ಆದುದರಿಂದ ಯೇಸು “ಅಲ್ಲಿಂದ ಅಡವಿಯ ಹತ್ತಿರದ ಪ್ರದೇಶಕ್ಕೆ” ಅಂದರೆ ‘ಎಫ್ರಾಯಿಮ್ ಎಂಬ ಊರಿಗೆ’ ಹೋಗುತ್ತಾನೆ.—ಯೋಹಾ. 11:53, 54.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
1:35, 40—ಸ್ನಾನಿಕನಾದ ಯೋಹಾನನ ಜೊತೆ ಆಂದ್ರೆಯನಲ್ಲದೆ ಬೇರಾವ ಶಿಷ್ಯನು ನಿಂತುಕೊಂಡಿದ್ದನು? ಈ ಪುಸ್ತಕದ ಬರಹಗಾರನು ಪ್ರತಿಯೊಂದು ಬಾರಿ ಸ್ನಾನಿಕನಾದ ಯೋಹಾನನನ್ನು ಸೂಚಿಸುವಾಗ “ಯೋಹಾನ” ಎಂಬದಾಗಿ ಹೇಳುತ್ತಾನೆ ಮತ್ತು ಇಡೀ ಸುವಾರ್ತೆಯಲ್ಲಿ ತನ್ನನ್ನು ಹೆಸರಿನಿಂದ ಗುರುತಿಸಿಕೊಳ್ಳುವುದಿಲ್ಲ. ಆದ್ದರಿಂದ ಹೆಸರಿಸಲ್ಪಡದ ಆ ಶಿಷ್ಯನು ನಿಶ್ಚಯವಾಗಿ ಸುವಾರ್ತಾ ಲೇಖಕನಾದ ಯೋಹಾನನೇ ಆಗಿದ್ದಿರಬೇಕು.
2:20—ಯಾವ ದೇವಾಲಯವನ್ನು “ಕಟ್ಟುವದಕ್ಕೆ ನಾಲ್ವತ್ತಾರು ವರುಷ ಹಿಡಿಯಿತು”? ಯೂದಾಯದ ರಾಜ ಹೆರೋದನು ಪುನರ್‌ನಿರ್ಮಿಸಿದ ಜೆರುಬಾಬ್ಬೆಲನ ಆಲಯದ ಕುರಿತು ಯೆಹೂದ್ಯರು ಮಾತಾಡುತ್ತಿದ್ದರು. ಇತಿಹಾಸಕಾರನಾದ ಜೋಸೀಫಸನಿಗನುಸಾರ ಅದರ ಕೆಲಸವು ಹೆರೋದನ ಆಳ್ವಿಕೆಯ 18ನೇ ವರ್ಷದಲ್ಲಿ ಅಂದರೆ ಸಾ.ಶ.ಪೂ. 18/17ರಲ್ಲಿ ಆರಂಭವಾಯಿತು. ದೇವಾಲಯ ಮತ್ತು ಇತರ ಮುಖ್ಯ ಕಟ್ಟಡಗಳನ್ನು ಎಂಟು ವರ್ಷಗಳಲ್ಲಿ ಕಟ್ಟಲಾಯಿತು. ಆದರೆ ಆಲಯದ ಸುತ್ತಲಿನ ಸಂಕೀರ್ಣದ ಕೆಲಸವು ಸಾ.ಶ. 30ರ ಪಸ್ಕಹಬ್ಬದ ನಂತರವೂ ಮುಂದುವರಿಯಿತು. ಆದ್ದರಿಂದ ದೇವಾಲಯವನ್ನು ಕಟ್ಟಲು 46 ವರ್ಷಗಳು ಹಿಡಿಯಿತು ಎಂದು ಯೆಹೂದ್ಯರು ಹೇಳಿದರು.
5:14—ಪಾಪದ ಫಲಿತಾಂಶವಾಗಿ ಅಸ್ವಸ್ಥತೆ ಬರುತ್ತದೋ? ಯಾವಾಗಲೂ ಹಾಗಿರುವುದಿಲ್ಲ. ಯೇಸು ಸ್ವಸ್ಥಪಡಿಸಿದ ವ್ಯಕ್ತಿಯು ಬಾಧ್ಯತೆಯಾಗಿ ಬಂದಿರುವ ಅಪರಿಪೂರ್ಣತೆಯಿಂದಾಗಿ 38 ವರ್ಷಗಳಿಂದ ಅಸ್ವಸ್ಥನಾಗಿದ್ದನು. (ಯೋಹಾ. 5:1-9) ಆ ವ್ಯಕ್ತಿಯನ್ನು ಗುಣಪಡಿಸುವ ಮೂಲಕ ಅವನಿಗೆ ಈಗಾಗಲೇ ಕರುಣೆ ತೋರಿಸಲಾಗಿದ್ದ ಕಾರಣ ಇನ್ನು ಮುಂದೆ ಅವನು ರಕ್ಷಣೆಯ ಮಾರ್ಗವನ್ನು ಅನುಸರಿಸಬೇಕಿತ್ತು. ಇಲ್ಲವಾದಲ್ಲಿ ಅಸ್ವಸ್ಥತೆಗಿಂತ ಹೆಚ್ಚಿನ ಕೆಡುಕು ಅವನಿಗಾದೀತು ಎನ್ನುವುದು ಯೇಸುವಿನ ಮಾತುಗಳ ಅರ್ಥವಾಗಿತ್ತು. ಆ ವ್ಯಕ್ತಿ ಅಕ್ಷಮ್ಯ ಪಾಪವನ್ನು ಮಾಡಿ ಪುನರುತ್ಥಾನವೇ ಇಲ್ಲದ ಮರಣಕ್ಕೆ ಪಾತ್ರನಾಗಸಾಧ್ಯವಿತ್ತು.—ಮತ್ತಾ. 12:31, 32; ಲೂಕ 12:10; ಇಬ್ರಿ. 10:26, 27.
5:24, 25—‘ಮರಣದಿಂದ ಪಾರಾಗಿ ಜೀವಕ್ಕೆ ಸೇರುವವರು’ ಯಾರು? ಒಮ್ಮೆ ಆಧ್ಯಾತ್ಮಿಕವಾಗಿ ಸತ್ತವರಾಗಿದ್ದ ಆದರೆ ತನ್ನ ಮಾತುಗಳನ್ನು ಕೇಳಿ ತನ್ನಲ್ಲಿ ನಂಬಿಕೆಯಿಟ್ಟು ಪಾಪಪೂರ್ಣ ಮಾರ್ಗವನ್ನು ಬಿಟ್ಟವರ ಬಗ್ಗೆ ಯೇಸು ಮಾತಾಡುತ್ತಿದ್ದನು. ದೇವರಲ್ಲಿನ ಅವರ ನಂಬಿಕೆಯ ಕಾರಣ ಮರಣದ ಶಾಪವನ್ನು ತೊಡೆದುಹಾಕಿ ಅವರಿಗೆ ನಿತ್ಯಜೀವದ ನಿರೀಕ್ಷೆಯನ್ನು ದಯಪಾಲಿಸಲಾಗುವುದು. ಹೀಗೆ ಅವರು ‘ಮರಣದಿಂದ ಪಾರಾಗಿ ಜೀವಕ್ಕೆ ಸೇರುವರು.’—1 ಪೇತ್ರ 4:3-6.
1 ಕೊರಿಂ. 15:52, 53; ಪ್ರಕ. 20:5, 7-10.
5:26; 6:53—‘ಜೀವವುಳ್ಳವನಾಗಿರುವುದರ’ ಅರ್ಥವೇನು? ಇದು ಯೇಸು ಕ್ರಿಸ್ತನ ಸಂಬಂಧದಲ್ಲಿ ಆತನು ದೇವರಿಂದ ಎರಡು ನಿರ್ದಿಷ್ಟ ಸಾಮರ್ಥ್ಯಗಳನ್ನು ಪಡೆಯುವುದನ್ನು ಸೂಚಿಸುತ್ತದೆ. ಅವು, ಮನುಷ್ಯರಿಗೆ ದೇವರ ಮುಂದೆ ಉತ್ತಮ ನಿಲುವನ್ನು ಕೊಡುವ ಮತ್ತು ಸತ್ತವರನ್ನು ಪುನರುತ್ಥಾನಗೊಳಿಸಿ ಅವರಿಗೆ ಜೀವ ನೀಡುವ ಸಾಮರ್ಥ್ಯಗಳಾಗಿವೆ. ಯೇಸುವಿನ ಹಿಂಬಾಲಕರು ‘ಜೀವವುಳ್ಳವರಾಗಿರುವುದು’ ಎಂದರೆ, ನಿತ್ಯಜೀವ ಪಡೆಯುವುದು ಆಗಿದೆ. ಅಭಿಷಿಕ್ತ ಕ್ರೈಸ್ತರಿಗೆ ಈ ಜೀವವು ಅವರು ಸ್ವರ್ಗೀಯ ಜೀವನಕ್ಕೆ ಪುನರುತ್ಥಾನ ಹೊಂದುವಾಗ ಸಿಗುತ್ತದೆ. ಭೂನಿರೀಕ್ಷೆಯುಳ್ಳ ನಂಬಿಗಸ್ತರು, ಕ್ರಿಸ್ತನ ಸಹಸ್ರ ವರ್ಷದಾಳ್ವಿಕೆಯ ಅಂತ್ಯದಲ್ಲಿನ ಕೊನೆಯ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರವೇ ನಿತ್ಯಜೀವವನ್ನು ಅನುಭವಿಸಶಕ್ತರಾಗುವರು.—6:64—ಇಸ್ಕರಿಯೋತ ಯೂದನು ತನ್ನನ್ನು ಹಿಡುಕೊಡುವನೆಂದು ಅವನನ್ನು ಆರಿಸಿಕೊಳ್ಳುವಾಗಲೇ ಯೇಸುವಿಗೆ ತಿಳಿದಿತ್ತೋ? ಆತನಿಗೆ ತಿಳಿದಿರಲಿಲ್ಲ ಎಂಬುದು ಸುವ್ಯಕ್ತ. ಆದರೂ ಸಾ.ಶ. 32ರ ಒಂದು ಸಂದರ್ಭದಲ್ಲಿ ಯೇಸು ತನ್ನ ಅಪೊಸ್ತಲರಿಗೆ ಹೇಳಿದ್ದು: “ನಿಮ್ಮಲ್ಲಿಯೂ ಒಬ್ಬನು ಸೈತಾನನ ಮಗನಾಗಿದ್ದಾನೆ.” ಈ ಸಂದರ್ಭದಲ್ಲಿ ಇಸ್ಕರಿಯೋತ ಯೂದನು ತಪ್ಪು ದಾರಿಯಲ್ಲಿ ನಡೆಯಲು ಆರಂಭಿಸಿದ್ದನ್ನು ಯೇಸು ಗಮನಿಸಿದ್ದಿರಬಹುದು ಮತ್ತು ಈ ಅರ್ಥದಲ್ಲಿ ಆತನಿಗದು ‘ಮೊದಲಿನಿಂದಲೇ’ ತಿಳಿದಿತ್ತು.—ಯೋಹಾ. 6:66-71.
ನಮಗಾಗಿರುವ ಪಾಠಗಳು:
2:4. ದೀಕ್ಷಾಸ್ನಾನಿತನೂ ಅಭಿಷಿಕ್ತನೂ ಆಗಿರುವ ದೇವಪುತ್ರನಾದ ತನಗೆ ನಿರ್ದೇಶನ ಕೊಡಬೇಕಾದವನು ತನ್ನ ಸ್ವರ್ಗೀಯ ತಂದೆ ಎನ್ನುವುದನ್ನು ಯೇಸು ಮರಿಯಳಿಗೆ ಸೂಚಿಸುತ್ತಿದ್ದನು. ಯೇಸು ತನ್ನ ಶುಶ್ರೂಷೆಯನ್ನು ಆಗ ತಾನೇ ಆರಂಭಿಸಿದ್ದನಾದರೂ ತನ್ನ ಯಜ್ಞಾರ್ಪಿತ ಮರಣವನ್ನೂ ಸೇರಿಸಿ ತನಗೆ ನೇಮಿಸಿದ ಕೆಲಸಗಳನ್ನು ಪೂರೈಸುವ ಸಮಯದ ಕುರಿತು ಆತನಿಗೆ ಪೂರ್ತಿ ತಿಳಿದಿತ್ತು. ಮರಿಯಳಷ್ಟು ಹತ್ತಿರದ ಕುಟುಂಬ ಸದಸ್ಯರು ಕೂಡ ತಾನು ದೈವಿಕ ಚಿತ್ತವನ್ನು ಪೂರೈಸುವಾಗ ಹಸ್ತಕ್ಷೇಪ ಮಾಡುವಂತೆ ಆತನು ಅನುಮತಿಸಲಿಲ್ಲ. ನಾವೂ ತದ್ರೀತಿಯ ದೃಢಸಂಕಲ್ಪದೊಂದಿಗೆ ಯೆಹೋವ ದೇವರನ್ನು ಸೇವಿಸಬೇಕು.
3:1-9. ಯೆಹೂದ್ಯರ ಹಿರೀಸಭೆಯವನಾದ ನಿಕೊದೇಮನ ಮಾದರಿಯು ನಮಗೆ ಎರಡು ಪಾಠಗಳನ್ನು ಕಲಿಸುತ್ತದೆ. ಮೊದಲನೆಯದು, ಒಬ್ಬ ಬಡಗಿಯ ಮಗನನ್ನು ದೇವರ ಕಡೆಯಿಂದ ಬಂದ ಬೋಧಕನೆಂದು ಅಂಗೀಕರಿಸುವ ಮೂಲಕ ನಿಕೊದೇಮನು ನಮ್ರಭಾವ, ಒಳನೋಟ ಮತ್ತು ಆಧ್ಯಾತ್ಮಿಕ ಅಗತ್ಯತೆಯ ಪ್ರಜ್ಞೆಯನ್ನು ತೋರಿಸಿದನು. ಇಂದು ನಿಜ ಕ್ರೈಸ್ತರಲ್ಲೂ ನಮ್ರಭಾವವಿರಬೇಕು. ಎರಡನೆಯದು, ಯೇಸು ಭೂಮಿಯಲ್ಲಿದ್ದಾಗ ನಿಕೊದೇಮನು ಆತನ ಶಿಷ್ಯನಾಗಲು ಹಿಂದೆ ಸರಿದನು. ಇದು ಪ್ರಾಯಶಃ ಮನುಷ್ಯರ ಭಯ, ಹಿರೀಸಭೆಯಲ್ಲಿ ತನಗಿದ್ದ ಸ್ಥಾನಮಾನದ ಕುರಿತ ಚಿಂತೆ ಅಥವಾ ಹಣದಾಸೆಯಿಂದಾಗಿರಬಹುದು. ನಾವಿದರಿಂದ ಬಹುಮೂಲ್ಯ ಪಾಠವೊಂದನ್ನು ಕಲಿಯಬಹುದು: ಅಂತಹ ಪ್ರವೃತ್ತಿಗಳು ನಾವು ‘ನಮ್ಮ ಯಾತನಾ ಕಂಬವನ್ನು ಹೊತ್ತುಕೊಂಡು ಯೇಸು ಕ್ರಿಸ್ತನ ಹಿಂದೆ ನಿರಂತರವಾಗಿ ಹೋಗುವುದನ್ನು’ ತಡೆಯುವಂತೆ ನಾವು ಬಿಡಬಾರದು.—ಲೂಕ 9:23, NW.
4:23, 24. ದೇವರು ನಮ್ಮ ಆರಾಧನೆಯನ್ನು ಸ್ವೀಕರಿಸಬೇಕಾದರೆ ಅದು ಬೈಬಲಿನ ಪುಟಗಳಲ್ಲಿ ಪ್ರಕಟಿಸಲಾದ ಸತ್ಯಕ್ಕೆ ಹೊಂದಿಕೆಯಲ್ಲಿದ್ದು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟಿರಬೇಕು.
6:27. “ನಿತ್ಯಜೀವಕ್ಕೆ ಉಳಿಯುವ ಆಹಾರಕ್ಕಾಗಿ” ದುಡಿಯುವುದೆಂದರೆ ನಮ್ಮ ‘ಆಧ್ಯಾತ್ಮಿಕ ಅಗತ್ಯಗಳನ್ನು’ ಪೂರೈಸಿಕೊಳ್ಳಲು ಶ್ರಮಿಸುವುದೆಂದಾಗಿದೆ. ಹೀಗೆ ಮಾಡುವಾಗ ನಾವು ‘ಸಂತೋಷಿತರಾಗಿರುತ್ತೇವೆ.’—ಮತ್ತಾ. 5:3, NW.
6:44. ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರ ಕಾಳಜಿವಹಿಸುತ್ತಾನೆ. ಸಾರುವ ಕೆಲಸದ ಮೂಲಕ ಮತ್ತು ಆಧ್ಯಾತ್ಮಿಕ ಸತ್ಯಗಳನ್ನು ಗ್ರಹಿಸಿ ಅನ್ವಯಿಸಲು ಪವಿತ್ರಾತ್ಮದ ಸಹಾಯವನ್ನೊದಗಿಸುವ ಮೂಲಕ ಆತನು ನಮ್ಮಲ್ಲಿ ಒಬ್ಬೊಬ್ಬರನ್ನೂ ತನ್ನ ಮಗನ ಬಳಿಗೆ ಎಳೆಯುತ್ತಾನೆ.
11:33-36. ನಮ್ಮ ಭಾವನೆಗಳನ್ನು ತೋರ್ಪಡಿಸುವುದು ದೌರ್ಬಲ್ಯದ ಸಂಕೇತವಲ್ಲ.
‘ನಿರಂತರವಾಗಿ ಆತನನ್ನು ಹಿಂಬಾಲಿಸಿ’
ಸಾ.ಶ 33ರ ಪಸ್ಕವು ಹತ್ತಿರವಾಗುತ್ತಿರುವುದರಿಂದ ಯೇಸು ಬೇಥಾನ್ಯಕ್ಕೆ ಹಿಂದಿರುಗುತ್ತಾನೆ. ನೈಸಾನ್ 9ರಂದು ಕತ್ತೇಮರಿಯ ಮೇಲೆ ಕುಳಿತುಕೊಂಡು ಯೆರೂಸಲೇಮಿಗೆ ಬರುತ್ತಾನೆ. ನೈಸಾನ್ 10ರಂದು ಯೇಸು ಪುನಃ ದೇವಾಲಯಕ್ಕೆ ಬರುತ್ತಾನೆ. ತನ್ನ ತಂದೆಯ ನಾಮವು ಮಹಿಮೆಗೇರಿಸಲ್ಪಡುವಂತೆ ಆತನು ಪ್ರಾರ್ಥಿಸಿದಾಗ ಸ್ವರ್ಗದಿಂದ ಬಂದ ಒಂದು ಶಬ್ದವು ಹೀಗನ್ನುತ್ತದೆ: “ಮಹಿಮೆಪಡಿಸಿದ್ದೇನೆ, ತಿರಿಗಿ ಮಹಿಮೆಪಡಿಸುವೆನು.”—ಯೋಹಾ. 12:28.
ಯೇಸು ಸ್ವಲ್ಪದರಲ್ಲೇ ತನ್ನ ಶಿಷ್ಯರನ್ನು ಅಗಲಿ ಹೋಗಲಿದ್ದರಿಂದ ಪಸ್ಕದ ಊಟವನ್ನು ಮಾಡುತ್ತಿರುವಾಗ ಅವರಿಗೆ ಮಹತ್ವದ ಸಲಹೆಗಳನ್ನು ಕೊಟ್ಟು ಅವರ ಪರವಾಗಿ ಪ್ರಾರ್ಥಿಸುತ್ತಾನೆ. ಯೇಸುವಿನ ದಸ್ತಗಿರಿ, ವಿಚಾರಣೆ, ಶೂಲಕ್ಕೇರಿಸುವಿಕೆಯ ನಂತರ ಆತನ ಪುನರುತ್ಥಾನವಾಗುತ್ತದೆ.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
14:2—ಯೇಸು ತನ್ನ ನಂಬಿಗಸ್ತ ಹಿಂಬಾಲಕರಿಗೆ ಪರಲೋಕದಲ್ಲಿ ಹೇಗೆ ‘ಸ್ಥಳವನ್ನು ಸಿದ್ಧಮಾಡಲಿದ್ದನು’? ಈ ಸಿದ್ಧತೆಯಲ್ಲಿ, ಯೇಸು ದೇವರ ಮುಂದೆ ಕಾಣಿಸಿಕೊಂಡು ತನ್ನ ರಕ್ತದ ಮೌಲ್ಯವನ್ನು ಆತನಿಗೆ ಅರ್ಪಿಸುವ ಮೂಲಕ ಹೊಸ ಒಡಂಬಡಿಕೆಯನ್ನು ಊರ್ಜಿತಗೊಳಿಸುವುದು ಸೇರಿದೆ. ಅಲ್ಲದೆ, ಯೇಸು ರಾಜ್ಯಾಧಿಕಾರವನ್ನು ಪಡೆಯುವುದೂ ಇದರಲ್ಲಿ ಒಳಗೂಡಿದೆ. ನಂತರವೇ ಆತನ ಅಭಿಷಿಕ್ತ ಹಿಂಬಾಲಕರ ಸ್ವರ್ಗೀಯ ಪುನರುತ್ಥಾನ ಆರಂಭಗೊಳ್ಳಲಿತ್ತು.—1 ಥೆಸ. 4:14-17; ಇಬ್ರಿ. 9:12, 24-28; 1 ಪೇತ್ರ 1:19; ಪ್ರಕ. 11:15.
19:11—ಯೇಸು ಪಿಲಾತನಿಗೆ, “ನನ್ನನ್ನು ನಿನಗೆ ಒಪ್ಪಿಸಿದವನಿಗೆ” ಎಂದು ಹೇಳಿದಾಗ ಇಸ್ಕರಿಯೋತ ಯೂದನನ್ನು ಸೂಚಿಸುತ್ತಿದ್ದನೋ? ಯೂದನನ್ನು ಅಥವಾ ನಿರ್ದಿಷ್ಟ ವ್ಯಕ್ತಿಯನ್ನು ಸೂಚಿಸುವ ಬದಲು, ತನ್ನನ್ನು ಕೊಲ್ಲುವ ಪಾಪದಲ್ಲಿ ಸೇರಿದ್ದ ಎಲ್ಲರನ್ನು ಸೂಚಿಸಿ ಯೇಸು ಈ ಮಾತುಗಳನ್ನು ಹೇಳಿರಬೇಕು. ಇದರಲ್ಲಿ ಯೂದ, “ಮಹಾಯಾಜಕರೂ ಹಿರಿಯ ಸಭೆಯವರೆಲ್ಲರೂ,” ಬರಬ್ಬನನ್ನು ಬಿಟ್ಟುಕೊಡಲು ಬೇಡಿಕೊಳ್ಳುವಂತೆ ಒಡಂಬಡಿಸಲ್ಪಟ್ಟ ‘ಜನರೂ’ ಒಳಗೂಡಿದ್ದರು.—ಮತ್ತಾ. 26:59-65; 27:1, 2, 20-22.
20:17—ಯೇಸು ಮಗ್ದಲದ ಮರಿಯಳಿಗೆ “ನನ್ನನ್ನು ಹಿಡಿಯಬೇಡ” ಅಥವಾ ಅಂಟಿಕೊಂಡಿರಬೇಡ ಎಂದು ಹೇಳಿದ್ದೇಕೆ? ಯೇಸು ಇನ್ನೇನು ಪರಲೋಕಕ್ಕೆ ಏರಿಹೋಗಲಿರುವುದರಿಂದ ಆತನನ್ನು ಪುನಃ ನೋಡಲು ಸಾಧ್ಯವಿಲ್ಲ ಎಂದೆಣಿಸಿ ಮರಿಯಳಿಗೆ ಆತನನ್ನು ಬಿಟ್ಟು ಹೋಗಲು ಮನಸ್ಸಾಗಿರಲಿಕ್ಕಿಲ್ಲ. ಆದರೆ ತಾನು ಈಗಲೇ ಹೊರಟು ಹೋಗುವುದಿಲ್ಲ ಎನ್ನುವುದನ್ನು ಆಕೆಗೆ ಮನಗಾಣಿಸಲಿಕ್ಕಾಗಿ, ತನಗೆ ಅಂಟಿಕೊಂಡು ಅಲ್ಲೇ ಇರುವ ಬದಲು ತನ್ನ ಪುನರುತ್ಥಾನದ ವಿಷಯವನ್ನು ಶಿಷ್ಯರಿಗೆ ಹೋಗಿ ತಿಳಿಸುವಂತೆ ಯೇಸು ಆಕೆಗೆ ಹೇಳಿದನು.
ನಮಗಾಗಿರುವ ಪಾಠಗಳು:
12:36. ನಾವು ‘ಬೆಳಕಿನವರಾಗಲು’ ಅಥವಾ ಬೆಳಕಿನ ವಾಹಕರಾಗಲು ದೇವರ ವಾಕ್ಯವಾದ ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆಯಬೇಕು. ನಂತರ ಇತರರನ್ನು ಆಧ್ಯಾತ್ಮಿಕ ಕತ್ತಲೆಯಿಂದ ದೇವರ ಬೆಳಕಿನೆಡೆಗೆ ಕರೆತರಲು ಆ ಜ್ಞಾನವನ್ನು ಉಪಯೋಗಿಸಬೇಕು.
14:6. ಯೇಸು ಕ್ರಿಸ್ತನ ಮುಖಾಂತರವಲ್ಲದೆ ಬೇರಾವ ಮಾರ್ಗದಿಂದಲೂ ದೇವರ ಸಮ್ಮತಿಯನ್ನು ಪಡೆಯಲು ಸಾಧ್ಯವಿಲ್ಲ. ಕೇವಲ ಯೇಸುವಿನಲ್ಲಿ ನಂಬಿಕೆಯಿಡುವ ಮತ್ತು ಆತನ ಮಾದರಿಯನ್ನು ಅನುಸರಿಸುವ ಮೂಲಕ ನಾವು ಯೆಹೋವನ ಸಮೀಪಕ್ಕೆ ಬರಬಲ್ಲೆವು.—1 ಪೇತ್ರ 2:21.
14:15, 21, 23, 24; 15:10. ದೈವಿಕ ಚಿತ್ತಕ್ಕೆ ವಿಧೇಯತೆಯು ದೇವರ ಮತ್ತು ಆತನ ಪುತ್ರನ ಪ್ರೀತಿಯಲ್ಲಿ ನೆಲೆಗೊಂಡಿರುವಂತೆ ನಮಗೆ ಸಹಾಯಮಾಡುತ್ತದೆ.—1 ಯೋಹಾ. 5:3.
14:26; 16:13. ಯೆಹೋವನ ಪವಿತ್ರಾತ್ಮವು, ಒಬ್ಬ ಶಿಕ್ಷಕನಂತೆ ಮತ್ತು ನೆನಪು ಹುಟ್ಟಿಸುವವನಂತೆ ಕೆಲಸಮಾಡುತ್ತದೆ. ಅದು ಬೈಬಲ್ ಸತ್ಯಗಳನ್ನು ಪ್ರಕಟಗೊಳಿಸುವ ಕಾರ್ಯವನ್ನೂ ನಡೆಸುತ್ತದೆ. ಅಲ್ಲದೆ ಜ್ಞಾನ, ವಿವೇಕ, ಒಳನೋಟ, ವಿವೇಚನಾ ಶಕ್ತಿ ಮತ್ತು ಯೋಚನಾ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ. ಆದ್ದರಿಂದ ನಾವು ಪ್ರಾರ್ಥಿಸುವಾಗ ಪಟ್ಟುಹಿಡಿದು, ವಿಶೇಷವಾಗಿ ಪವಿತ್ರಾತ್ಮಕ್ಕಾಗಿ ಬೇಡೋಣ.—ಲೂಕ 11:5-13.
21:15, 19. ಈಗಾಗಲೇ ಹಿಡಿಯಲಾಗಿದ್ದ ಮೀನಿನ ರಾಶಿಯನ್ನು ನೋಡುತ್ತಾ, “ಇವರಿಗಿಂತ (ಮೂಲಭಾಷೆಯಲ್ಲಿ “ಇವುಗಳಿಗಿಂತ”) ಹೆಚ್ಚಾಗಿ ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ” ಎಂದು ಯೇಸು ಪೇತ್ರನಿಗೆ ಕೇಳಿದನು. ಹೀಗೆ ಮೀನುಗಾರಿಕೆಯ ಕಸುಬನ್ನು ಬೆನ್ನಟ್ಟುವ ಬದಲು ಪೂರ್ಣಸಮಯ ತನ್ನನ್ನು ಹಿಂಬಾಲಿಸುವ ಆಯ್ಕೆ ಮಾಡುವ ಅಗತ್ಯತೆಯನ್ನು ಯೇಸು ಪೇತ್ರನಿಗೆ ಒತ್ತಿಹೇಳಿದನು. ಸುವಾರ್ತಾ ವೃತ್ತಾಂತಗಳನ್ನು ಪರಿಗಣಿಸುವುದರಿಂದ, ನಮ್ಮನ್ನು ಸೆಳೆಯಬಹುದಾದ ಯಾವುದೇ ವಿಚಾರಗಳಿಗಿಂತ ಹೆಚ್ಚಾಗಿ ಯೇಸುವನ್ನು ಪ್ರೀತಿಸುವ ನಮ್ಮ ದೃಢನಿರ್ಧಾರವು ಬಲಗೊಳ್ಳಲಿ. ಹೌದು, ಪೂರ್ಣಮನಸ್ಸಿನಿಂದ ಆತನನ್ನು ಹಿಂಬಾಲಿಸುವುದನ್ನು ಮುಂದುವರಿಸೋಣ.
[ಪುಟ 31ರಲ್ಲಿರುವ ಚಿತ್ರ]
ನಿಕೊದೇಮನ ಮಾದರಿಯಿಂದ ನಾವೇನು ಕಲಿಯಬಹುದು?