ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪೊಸ್ತಲರ ಕೃತ್ಯಗಳು ಪುಸ್ತಕದ ಮುಖ್ಯಾಂಶಗಳು

ಅಪೊಸ್ತಲರ ಕೃತ್ಯಗಳು ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಅಪೊಸ್ತಲರ ಕೃತ್ಯಗಳು ಪುಸ್ತಕದ ಮುಖ್ಯಾಂಶಗಳು

ಅಪೊಸ್ತಲರ ಕೃತ್ಯಗಳು ಪುಸ್ತಕವು ಕ್ರೈಸ್ತ ಸಭೆಯ ಸ್ಥಾಪನೆ ಮತ್ತು ಅದರ ವಿಸ್ತರಣೆಯ ಕುರಿತು ವ್ಯಾಪಕ ಚರಿತ್ರೆಯನ್ನು ನೀಡುತ್ತದೆ. ವೈದ್ಯನಾದ ಲೂಕನು ಬರೆದ ಈ ಪುಸ್ತಕವು 28 ವರ್ಷಗಳ ಅಂದರೆ ಸಾ.ಶ. 33 ರಿಂದ ಸಾ.ಶ. 61ರ ವರೆಗೆ ನಡೆದ ಕ್ರೈಸ್ತ ಚಟುವಟಿಕೆಯ ರೋಮಾಂಚನಕಾರಿ ದಾಖಲೆಯನ್ನು ಒದಗಿಸುತ್ತದೆ.

ಈ ಪುಸ್ತಕದ ಆರಂಭದ ಭಾಗವು ಹೆಚ್ಚಾಗಿ ಅಪೊಸ್ತಲ ಪೇತ್ರನ ಚಟುವಟಿಕೆಗಳ ಕುರಿತು ತಿಳಿಸುವುದಾದರೆ, ಕೊನೆಯ ಭಾಗವು ಅಪೊಸ್ತಲ ಪೌಲನ ಚಟುವಟಿಕೆಗಳ ಕುರಿತು ತಿಳಿಸುತ್ತದೆ. “ನಾವು,” “ನಮಗೆ” ಎಂಬಂಥ ಸರ್ವನಾಮ ಪದಗಳನ್ನು ಉಪಯೋಗಿಸುವ ಮೂಲಕ ಲೂಕನು ಕೆಲವೊಂದು ಘಟನೆಗಳು ಸಂಭವಿಸಿದಾಗ ತಾನಲ್ಲಿದ್ದೆನೆಂದು ಸೂಚಿಸುತ್ತಾನೆ. ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿರುವ ಸಂದೇಶಕ್ಕೆ ಗಮನಕೊಡುವುದು, ಪವಿತ್ರಾತ್ಮ ಮತ್ತು ದೇವರ ಲಿಖಿತ ವಾಕ್ಯಕ್ಕಿರುವ ಶಕ್ತಿಯ ಕಡೆಗೆ ನಮ್ಮ ಗಣ್ಯತೆಯನ್ನು ಇನ್ನಷ್ಟು ಗಾಢಗೊಳಿಸುತ್ತದೆ. (ಇಬ್ರಿ. 4:12) ಮಾತ್ರವಲ್ಲದೆ ಇದು ನಮ್ಮನ್ನು ಸ್ವತ್ಯಾಗಿಗಳಾಗಿರುವಂತೆ ಪ್ರಚೋದಿಸುತ್ತದೆ ಹಾಗೂ ರಾಜ್ಯ ನಿರೀಕ್ಷೆಯಲ್ಲಿ ನಮ್ಮ ನಂಬಿಕೆಯನ್ನು ಕಟ್ಟುತ್ತದೆ.

“ಪರಲೋಕರಾಜ್ಯದ ಬೀಗದ ಕೈಗಳನ್ನು” ಪೇತ್ರನು ಉಪಯೋಗಿಸುತ್ತಾನೆ

(ಅ. ಕೃತ್ಯಗಳು 1:1-11:18)

ಅಪೊಸ್ತಲರು ಪವಿತ್ರಾತ್ಮವನ್ನು ಪಡೆದುಕೊಂಡ ಬಳಿಕ ಧೈರ್ಯದಿಂದ ಸಾಕ್ಷಿ ನೀಡುತ್ತಾರೆ. ಪೇತ್ರನು ‘ಪರಲೋಕರಾಜ್ಯದ ಬೀಗದ ಕೈಗಳಲ್ಲಿ’ ಮೊದಲನೆಯದ್ದನ್ನು ಉಪಯೋಗಿಸಿ, “ಅವನ ಮಾತಿಗೆ ಒಪ್ಪಿಕೊಂಡ” ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳು ರಾಜ್ಯವನ್ನು ಪ್ರವೇಶಿಸಲು ಸಾಧ್ಯವಾಗುವಂತೆ ಜ್ಞಾನ ಮತ್ತು ಅವಕಾಶದ ಬಾಗಿಲನ್ನು ತೆರೆಯುತ್ತಾನೆ. (ಮತ್ತಾ. 16:19; ಅ. ಕೃ. 2:5, 41) ಹಿಂಸೆಯ ಅಲೆಯು ಶಿಷ್ಯರನ್ನು ಚದರಿಸುತ್ತದೆ. ಆದರೆ ಇದರ ಫಲಿತಾಂಶವಾಗಿ ಸುವಾರ್ತೆಯು ಎಲ್ಲೆಲ್ಲೂ ಹಬ್ಬುತ್ತದೆ.

ಸಮಾರ್ಯದವರು ದೇವರ ವಾಕ್ಯವನ್ನು ಸ್ವೀಕರಿಸಿದರೆಂಬ ವರ್ತಮಾನವನ್ನು ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಕೇಳಿದಾಗ ಪೇತ್ರ ಯೋಹಾನರನ್ನು ಅವರ ಬಳಿಗೆ ಕಳುಹಿಸುತ್ತಾರೆ. ರಾಜ್ಯವನ್ನು ಪ್ರವೇಶಿಸುವ ಅವಕಾಶವನ್ನು ಸಮಾರ್ಯದವರಿಗೆ ನೀಡುವ ಮೂಲಕ ಪೇತ್ರನು ಎರಡನೆಯ ಬೀಗದ ಕೈಯನ್ನು ಉಪಯೋಗಿಸುತ್ತಾನೆ. (ಅ. ಕೃ. 8:14-17) ಯೇಸುವಿನ ಪುನರುತ್ಥಾನವಾಗಿ ಪ್ರಾಯಶಃ ಒಂದು ವರ್ಷದೊಳಗೆ ತಾರ್ಸದ ಸೌಲನಲ್ಲಿ ವಿಸ್ಮಯಕರ ಪರಿವರ್ತನೆಯಾಗುತ್ತದೆ. ಸಾ.ಶ. 36ರಲ್ಲಿ ಪೇತ್ರನು ಮೂರನೆಯ ಬೀಗದ ಕೈಯನ್ನು ಉಪಯೋಗಿಸುತ್ತಾನೆ ಮತ್ತು ಸುನ್ನತಿಯಿಲ್ಲದ ಅನ್ಯಜನರಿಗೂ ಪವಿತ್ರಾತ್ಮದಾನ ಮಾಡಲ್ಪಡುತ್ತದೆ.—ಅ. ಕೃ. 10:45.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

2:44-47; 4:34, 35—ನಂಬಿದವರು ಅಥವಾ ವಿಶ್ವಾಸಿಗಳಾದವರು ತಮ್ಮ ಸೊತ್ತುಗಳನ್ನು ಮಾರಿ ಬಂದ ಹಣವನ್ನು ಎಲ್ಲರಿಗೂ ಹಂಚಿಕೊಟ್ಟದ್ದೇಕೆ? ವಿಶ್ವಾಸಿಗಳಾದ ಅನೇಕ ಜನರು ದೂರದೂರದ ಸ್ಥಳಗಳಿಂದ ಬಂದವರಾಗಿದ್ದರು ಮತ್ತು ಯೆರೂಸಲೇಮಿನಲ್ಲಿ ಇನ್ನೂ ಹೆಚ್ಚು ದಿನ ತಂಗಲು ಬೇಕಾಗುವಷ್ಟು ಆಹಾರ ಅವರ ಬಳಿ ಇರಲಿಲ್ಲ. ಆದಾಗ್ಯೂ, ತಮ್ಮ ಹೊಸ ನಂಬಿಕೆಯ ಕುರಿತು ಹೆಚ್ಚನ್ನು ಕಲಿಯುವ ಮತ್ತು ಅದರ ಕುರಿತು ಇತರರಿಗೆ ಸಾಕ್ಷಿ ನೀಡುವ ಸಲುವಾಗಿ ಇನ್ನೂ ಹೆಚ್ಚು ಸಮಯ ಅವರು ಅಲ್ಲಿರಲು ಬಯಸಿದರು. ಇಂಥವರಿಗೆ ಸಹಾಯಮಾಡಲು ಬಯಸಿದ ಕೆಲವು ಕ್ರೈಸ್ತರು ತಮ್ಮ ಸೊತ್ತುಗಳನ್ನು ಮಾರಿ, ಅಗತ್ಯವಿದ್ದವರಿಗೆ ಹಣವನ್ನು ಹಂಚಿಕೊಡುತ್ತಿದ್ದರು.

4:13—ಪೇತ್ರ ಯೋಹಾನರು ಅನಕ್ಷರಸ್ಥರು ಅಥವಾ ಅವಿದ್ಯಾವಂತರು ಆಗಿದ್ದರೋ? ಖಂಡಿತ ಇಲ್ಲ. ಆದರೆ ಅವರು ಧಾರ್ಮಿಕ ತರಬೇತಿಯನ್ನು ಪಡೆಯಲಿಕ್ಕಾಗಿ ರಬ್ಬಿಗಳ ಶಾಲೆಗಳಿಗೆ ಹೋಗಿರಲಿಲ್ಲ. ಈ ಕಾರಣದಿಂದಲೇ ಅವರನ್ನು “ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು” ಕರೆಯಲಾಯಿತು.

5:34-39—ಸಾರ್ವಜನಿಕರಿಗೆ ಮುಕ್ತವಲ್ಲದ ಹಿರೀಸಭೆಯಲ್ಲಿ ಗಮಲಿಯೇಲನು ಹೇಳಿದ ಮಾತುಗಳು ಲೂಕನಿಗೆ ಹೇಗೆ ತಿಳಿದಿರಸಾಧ್ಯವಿದೆ? ಕಡಿಮೆಪಕ್ಷ ಮೂರು ಸಂಭಾವ್ಯತೆಗಳಿವೆ: (1) ಗಮಲಿಯೇಲನ ವಿದ್ಯಾರ್ಥಿಯಾಗಿದ್ದ ಪೌಲನು ಇದನ್ನು ಲೂಕನಿಗೆ ತಿಳಿಸಿದ್ದಿರಬಹುದು; (2) ಹಿರೀಸಭೆಯಲ್ಲಿದ್ದ ನಿಕೋದೇಮನಂಥ ಒಬ್ಬ ಸ್ನೇಹಪರ ಸದಸ್ಯನನ್ನು ಲೂಕನು ಕೇಳಿದ್ದಿರಬಹುದು; (3) ದೈವಿಕ ಪ್ರೇರಣೆಯಿಂದ ಈ ಮಾಹಿತಿ ಲೂಕನಿಗೆ ದೊರಕಿದ್ದಿರಬಹುದು.

7:59, 60—ಸ್ತೆಫನನು ಯೇಸುವಿಗೆ ಪ್ರಾರ್ಥಿಸುತ್ತಿದ್ದನೊ? ಇಲ್ಲ, ಅವನು ಯೇಸುವಿಗೆ ಪ್ರಾರ್ಥಿಸುತ್ತಿರಲಿಲ್ಲ. ಆರಾಧನೆಯು ಯೆಹೋವನೊಬ್ಬನಿಗೆ ಸಲ್ಲತಕ್ಕದ್ದು ಎಂದಿರುವಾಗ, ಪ್ರಾರ್ಥನೆಯನ್ನು ಕೂಡ ಆತನಿಗೇ ಮಾಡಬೇಕು. (ಲೂಕ 4:8; 6:12) ಸಾಮಾನ್ಯ ಪರಿಸ್ಥಿತಿಯಲ್ಲಿ ಸ್ತೆಫನನು ಯೇಸುವಿನ ಹೆಸರಿನಲ್ಲಿ ಯೆಹೋವನಿಗೇ ಪ್ರಾರ್ಥನೆ ಮಾಡಿರುತ್ತಿದ್ದನು. (ಯೋಹಾ. 15:16) ಆದರೆ ಈ ಸಂದರ್ಭದಲ್ಲಿ ಅವನು ದರ್ಶನದಲ್ಲಿ ‘ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವದನ್ನು’ ಕಾಣುತ್ತಾನೆ. (ಅ. ಕೃ. 7:56) ಮೃತರನ್ನು ಪುನರುತ್ಥಾನಗೊಳಿಸುವ ಅಧಿಕಾರವು ಯೇಸುವಿಗೆ ಕೊಡಲ್ಪಟ್ಟಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದಿದ್ದ ಸ್ತೆಫನನು ಆತನೊಂದಿಗೆ ಮಾತನಾಡಿದನೇ ಹೊರತು ತನ್ನ ಆತ್ಮವನ್ನು ರಕ್ಷಿಸುವಂತೆ ನೇರವಾಗಿ ಬೇಡಿಕೊಳ್ಳಲಿಲ್ಲ.—ಯೋಹಾ. 5:27-29.

ನಮಗಾಗಿರುವ ಪಾಠಗಳು:

1:8. ಯೆಹೋವನ ಆರಾಧಕರಿಂದ ಮಾಡಲ್ಪಟ್ಟ ಲೋಕವ್ಯಾಪಕ ಸಾಕ್ಷಿಕಾರ್ಯವು ಪವಿತ್ರಾತ್ಮದ ನೆರವಿಲ್ಲದೆ ಪೂರೈಸಲ್ಪಡಲು ಸಾಧ್ಯವಿರಲಿಲ್ಲ.

4:36–5:11. ಕುಪ್ರ ದ್ವೀಪದ ಯೋಸೇಫನನ್ನು ಬಾರ್ನಬನೆಂದು ಕರೆಯುತ್ತಿದ್ದರು. ಬಾರ್ನಬ ಎಂಬ ಹೆಸರಿನ ಅರ್ಥ “ಆದರಣೆಯ ಪುತ್ರ” (NIBV) ಎಂದಾಗಿದೆ. ಬಾರ್ನಬನು ಸ್ನೇಹಪರ, ದಯಾಳು, ಪರೋಪಕಾರಿ ಆಗಿದ್ದರಿಂದಲೇ ಅಪೊಸ್ತಲರು ಅವನಿಗೆ ಆ ಹೆಸರನ್ನು ಇಟ್ಟಿದ್ದಿರಬಹುದು. ನಾವು ಸಹ ಅವನಂತೆ ಇರಬೇಕು. ಸೋಗುಹಾಕುವವರೂ ಕಪಟಿಗಳೂ ಅಪ್ರಾಮಾಣಿಕರೂ ಆಗಿದ್ದ ಅನನೀಯ ಮತ್ತು ಸಪ್ಫೈರಳಂತೆ ಇರಬಾರದು.

9:23-25. ಸುವಾರ್ತೆ ಸಾರುವುದನ್ನು ಮುಂದುವರಿಸುವ ಸಲುವಾಗಿ ವಿರೋಧಿಗಳಿಂದ ತಪ್ಪಿಸಿಕೊಳ್ಳುವುದು ಹೇಡಿತನವಲ್ಲ.

9:28-30. ಕೆಲವೊಂದು ಸ್ಥಳಗಳಲ್ಲಿ ಅಥವಾ ವ್ಯಕ್ತಿಗಳಿಗೆ ಸುವಾರ್ತೆ ಸಾರುವುದು ಶಾರೀರಿಕವಾಗಿ, ನೈತಿಕವಾಗಿ ಅಥವಾ ಆಧ್ಯಾತ್ಮಿಕವಾಗಿ ಅಪಾಯಕಾರಿಯಾಗಿರಬಹುದು. ಹಾಗಿರುವಲ್ಲಿ, ಎಲ್ಲಿ ಮತ್ತು ಯಾವಾಗ ಸಾರಬೇಕೆಂದು ನಾವು ವಿವೇಚನೆಯಿಂದ ಆಯ್ಕೆ ಮಾಡಬೇಕು.

9:31. ಪರಿಸ್ಥಿತಿಯು ಸ್ಪಲ್ಪಮಟ್ಟಿಗೆ ಸಮಾಧಾನಕರವಾಗಿ ಇರುವಾಗಲೇ ಅಧ್ಯಯನ ಹಾಗೂ ಧ್ಯಾನದ ಮೂಲಕ ನಮ್ಮ ನಂಬಿಕೆಯನ್ನು ಬಲಪಡಿಸಲು ಶ್ರಮಿಸಬೇಕು. ಇದು, ಕಲಿತ ವಿಷಯಗಳನ್ನು ಅನ್ವಯಿಸುವ ಮೂಲಕ ಯೆಹೋವನ ಭಯದಲ್ಲಿ ನಡೆಯಲು ಮತ್ತು ಶುಶ್ರೂಷೆಯಲ್ಲಿ ಹುರುಪಿನಿಂದ ಭಾಗವಹಿಸಲು ಸಹಾಯಮಾಡುತ್ತದೆ.

ಪೌಲನ ಹುರುಪಿನ ಶುಶ್ರೂಷೆ

(ಅ. ಕೃತ್ಯಗಳು 11:19-28:31)

ಸಾ.ಶ. 44ರಲ್ಲಿ ಅಗಬನು ಅಂತಿಯೋಕ್ಯಕ್ಕೆ ಬರುತ್ತಾನೆ. ಅಲ್ಲಿ ಈಗಾಗಲೇ ಬಾರ್ನಬ ಸೌಲರು “ಪೂರಾ ಒಂದು ವರುಷ”ದಿಂದ ಸಾರುತ್ತಿದ್ದಾರೆ. ಅಲ್ಲಿಗೆ ಬಂದ ಅಗಬನು “ದೊಡ್ಡ ಕ್ಷಾಮ” ಬರುವುದೆಂದು ಮುಂತಿಳಿಸುತ್ತಾನೆ. ಈ ಕ್ಷಾಮವು ಎರಡು ವರ್ಷಗಳ ಅನಂತರ ಬರುತ್ತದೆ. (ಅ. ಕೃ. 11:26-28) ಬಾರ್ನಬ ಸೌಲರು ಯೆರೂಸಲೇಮಿನಲ್ಲಿ “ಮಾಡಬೇಕಾದ ಧರ್ಮಕಾರ್ಯವನ್ನು ತೀರಿಸಿ” ಮತ್ತೆ ಅಂತಿಯೋಕ್ಯಕ್ಕೆ ಹಿಂದಿರುಗುತ್ತಾರೆ. (ಅ. ಕೃ. 12:25) ಸೌಲನ ಪರಿವರ್ತನೆಯಾಗಿ ಸುಮಾರು 12 ವರ್ಷಗಳ ಬಳಿಕ ಅಂದರೆ ಸಾ.ಶ. 47ರಲ್ಲಿ ಬಾರ್ನಬ ಸೌಲರು ಪವಿತ್ರಾತ್ಮದ ಮೂಲಕ ಕಳುಹಿಸಲ್ಪಟ್ಟು ಮಿಷನೆರಿ ಪ್ರಯಾಣವನ್ನು ಕೈಗೊಳ್ಳುತ್ತಾರೆ. (ಅ. ಕೃ. 13:1-4) ಅನಂತರ, ಅವರು “ದೇವರ ಕೃಪಾಶಯಕ್ಕೆ ಒಪ್ಪಿಸಲ್ಪಟ್ಟವರಾಗಿ” ಎಲ್ಲಿಂದ ಹೊರಟಿದ್ದರೋ ಆ ಅಂತಿಯೋಕ್ಯಕ್ಕೆ ಸಾ.ಶ. 48ರಲ್ಲಿ ಹಿಂತೆರಳುತ್ತಾರೆ.—ಅ. ಕೃ. 14:26.

ಸುಮಾರು ಒಂಬತ್ತು ತಿಂಗಳುಗಳ ಅನಂತರ, ಪೌಲನು (ಸೌಲನೆಂದು ಕೂಡ ಕರೆಯಲ್ಪಟ್ಟಿದ್ದಾನೆ) ಸೀಲನನ್ನು ತನ್ನ ಸಂಗಡಿಗನಾಗಿ ಆರಿಸಿಕೊಂಡು ತನ್ನ ಎರಡನೆಯ ಮಿಷನೆರಿ ಪ್ರಯಾಣವನ್ನು ಪ್ರಾರಂಭಿಸುತ್ತಾನೆ. (ಅ. ಕೃ. 15:40) ಕ್ರಮೇಣ ತಿಮೊಥಿ ಮತ್ತು ಲೂಕನು ಕೂಡ ಅವನನ್ನು ಜೊತೆಗೂಡುತ್ತಾರೆ. ಲೂಕನು ಫಿಲಿಪ್ಪಿಯಲ್ಲಿ ತಂಗುತ್ತಾನೆ, ಪೌಲನು ಅಥೇನೆಗೆ, ನಂತರ ಕೊರಿಂಥಕ್ಕೆ ಹೋಗುತ್ತಾನೆ. ಅಲ್ಲಿ ಅವನು ಅಕ್ವಿಲ ಮತ್ತು ಪ್ರಿಸ್ಕಿಲ್ಲರನ್ನು ಭೇಟಿಯಾಗುತ್ತಾನೆ ಮತ್ತು ಒಂದು ವರುಷ ಆರು ತಿಂಗಳು ಕೊರಿಂಥದಲ್ಲೇ ಉಳಿಯುತ್ತಾನೆ. (ಅ. ಕೃ. 18:11) ತಿಮೊಥಿ ಮತ್ತು ಸೀಲರನ್ನು ಕೊರಿಂಥದಲ್ಲೇ ಬಿಟ್ಟು ಪೌಲನು ಸಾ.ಶ. 52ರ ಆರಂಭದಲ್ಲಿ ಅಕ್ವಿಲ ಪ್ರಿಸ್ಕಿಲ್ಲರೊಂದಿಗೆ ಸಿರಿಯಕ್ಕೆ ಹೊರಡುತ್ತಾನೆ. (ಅ. ಕೃ. 18:18) ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಎಫೆಸದ ವರೆಗೆ ಅವನೊಂದಿಗೆ ಪ್ರಯಾಣಿಸಿ ಅಲ್ಲೇ ಉಳಿಯುತ್ತಾರೆ.

ಸಿರಿಯದ ಅಂತಿಯೋಕ್ಯದಲ್ಲಿ ಸ್ವಲ್ಪ ಸಮಯ ಕಳೆದ ಅನಂತರ ಸಾ.ಶ. 52ರಲ್ಲಿ ಪೌಲನು ತನ್ನ ಮೂರನೆಯ ಮಿಷನೆರಿ ಪ್ರಯಾಣವನ್ನು ಕೈಗೊಳ್ಳುತ್ತಾನೆ. (ಅ. ಕೃ. 18:23) ಎಫೆಸದಲ್ಲಿ ‘ಕರ್ತನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಗುತ್ತದೆ.’ (ಅ. ಕೃ. 19:20) ಅಲ್ಲಿ ಪೌಲನು ಸುಮಾರು ಮೂರು ವರ್ಷಗಳನ್ನು ಕಳೆಯುತ್ತಾನೆ. (ಅ. ಕೃ. 20:31) ಸಾ.ಶ. 56ರ ಪಂಚಾಶತ್ತಮದಷ್ಟರಲ್ಲಿ ಪೌಲನು ಯೆರೂಸಲೇಮಿನಲ್ಲಿರುತ್ತಾನೆ. ಅವನನ್ನು ದಸ್ತಗಿರಿ ಮಾಡಿದ ಬಳಿಕ ಪೌಲನು ಅಧಿಕಾರಿಗಳ ಮುಂದೆ ಧೀರ ಸಾಕ್ಷಿಯನ್ನು ಕೊಡುತ್ತಾನೆ. ರೋಮ್‌ನಲ್ಲಿ ಅಪೊಸ್ತಲ ಪೌಲನನ್ನು ಎರಡು ವರ್ಷಕಾಲ (ಸಾ.ಶ. 59-61) ಗೃಹ ಬಂಧನದಲ್ಲಿಡಲಾಗುತ್ತದೆ. ಅಲ್ಲಿ ಕೂಡ ಅವನು ರಾಜ್ಯದ ಕುರಿತು ಸಾರಲು ಮತ್ತು “ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ” ಬೋಧಿಸಲು ಮಾರ್ಗಗಳನ್ನು ಕಂಡುಕೊಳ್ಳುತ್ತಾನೆ.—ಅ. ಕೃ. 28:30, 31.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

14:8-13—ಲುಸ್ತ್ರದ ಜನರು ‘ಬಾರ್ನಬನನ್ನು ದ್ಯೌಸ್‌ದೇವರೆಂತಲೂ ಪೌಲನನ್ನು ಹೆರ್ಮೆದೇವರೆಂತಲೂ’ ಕರೆದದ್ದೇಕೆ? ಗ್ರೀಕ್‌ ದಂತಕಥೆಗನುಸಾರ, ದೇವರುಗಳಲ್ಲೇ ದ್ಯೌಸ್‌ ಅಗ್ರಜನು ಹಾಗೂ ಅವನ ಮಗನಾದ ಹೆರ್ಮೆ ವಾಗ್ವೈಖರಿ ಉಳ್ಳವನು. ಪೌಲನು ಮುಂದಾಳುತ್ವ ವಹಿಸಿ ಮಾತಾಡಿದ್ದರಿಂದ ಲುಸ್ತ್ರದ ಜನರು ಅವನನ್ನು ಹೆರ್ಮೆದೇವರೆಂದು ಮತ್ತು ಬಾರ್ನಬನನ್ನು ದ್ಯೌಸ್‌ದೇವರೆಂದು ಕರೆದರು.

16:6, 7—ಪೌಲ ಮತ್ತು ಅವನ ಸಂಗಡಿಗರನ್ನು ಆಸ್ಯಸೀಮೆ ಮತ್ತು ಬಿಥೂನ್ಯದಲ್ಲಿ ಸಾರದಂತೆ ಪವಿತ್ರಾತ್ಮವು ತಡೆದದ್ದೇಕೆ? ಆ ಸಮಯದಲ್ಲಿ ಸುವಾರ್ತಾ ಕೆಲಸಗಾರರು ಸ್ವಲ್ಪವೇ ಇದ್ದದರಿಂದ ಪವಿತ್ರಾತ್ಮವು ಅವರನ್ನು ಹೆಚ್ಚು ಫಲಪ್ರದ ಸ್ಥಳಗಳಿಗೆ ಹೋಗುವಂತೆ ನಿರ್ದೇಶಿಸಿತು.

18:12-17—ಜನರೆಲ್ಲರು ಸೋಸ್ಥೆನನನ್ನು ಹೊಡೆಯಲು ಪ್ರಾರಂಭಿಸಿದಾಗ ಅಧಿಪತಿಯಾದ ಗಲ್ಲಿಯೋನನು ಯಾಕೆ ಅವರನ್ನು ತಡೆಯಲಿಲ್ಲ? ಪೌಲನ ವಿರುದ್ಧ ದೊಂಬಿ ಉಂಟುಮಾಡುವುದರಲ್ಲಿ ಪ್ರಮುಖನಾಗಿದ್ದಿರಬಹುದಾದ ಆ ವ್ಯಕ್ತಿಗೆ ಇದು ತಕ್ಕ ಶಾಸ್ತಿ ಎಂದು ಗಲ್ಲಿಯೋನನು ಯೋಚಿಸಿದ್ದಿರಬಹುದು. ಏನೇ ಆದರೂ ಈ ಘಟನೆಯು ಉತ್ತಮ ಫಲಿತಾಂಶ ತಂದಿತು ಎಂಬುದು ಸುವ್ಯಕ್ತ. ಇದರಿಂದ ಸೋಸ್ಥೆನನು ಕ್ರೈಸ್ತನಾದನು. ಅನಂತರ ಪೌಲನು ಅವನನ್ನು “ಸಹೋದರನಾದ ಸೊಸ್ಥೆನ” ಎಂದು ಸಂಬೋಧಿಸುತ್ತಾನೆ.—1 ಕೊರಿಂ. 1:1.

18:18—ಪೌಲನು ಯಾವ ದೀಕ್ಷೆ ಅಥವಾ ಹರಕೆಯನ್ನು ಮಾಡಿದ್ದನು? ಪೌಲನು ನಾಜೀರರ ಹರಕೆಯನ್ನು ಮಾಡಿದ್ದನೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. (ಅರ. 6:1-21) ಆದರೆ ಪೌಲನು ಯಾವ ಹರಕೆಯನ್ನು ಮಾಡಿದ್ದನೆಂದು ಬೈಬಲ್‌ ತಿಳಿಸುವುದಿಲ್ಲ. ಅಷ್ಟೇ ಅಲ್ಲದೆ, ಅವನು ಇದನ್ನು ತನ್ನ ಪರಿವರ್ತನೆಯ ಮೊದಲು ಮಾಡಿದ್ದನೋ ಅಥವಾ ನಂತರವೋ ಮತ್ತು ಇದು ಹರಕೆಯ ಪ್ರಾರಂಭವಾಗಿತ್ತೋ ಅಥವಾ ಮುಕ್ತಾಯವೋ ಎಂಬ ವಿಚಾರವನ್ನೂ ಬೈಬಲ್‌ ತಿಳಿಸುವುದಿಲ್ಲ. ವಿಷಯವು ಏನೇ ಆಗಿದ್ದರೂ, ಅಂಥ ಹರಕೆಯನ್ನು ಮಾಡುವುದು ತಪ್ಪಾಗಿರಲಿಲ್ಲ.

ನಮಗಾಗಿರುವ ಪಾಠಗಳು:

12:5-11. ನಮ್ಮ ಸಹೋದರರಿಗಾಗಿ ನಾವು ಪ್ರಾರ್ಥಿಸಸಾಧ್ಯವಿದೆ ಮತ್ತು ಪ್ರಾರ್ಥಿಸಬೇಕು.

12:21-23; 14:14-18. ದೇವರಿಗೆ ಮಾತ್ರ ಸಲ್ಲಬೇಕಾದ ಘನಮಾನವನ್ನು ಹೆರೋದನು ಕೂಡಲೆ ಸ್ವೀಕರಿಸಿದನು. ತಮಗೆ ಯುಕ್ತವಲ್ಲದ ಸ್ತುತಿ ಮತ್ತು ಘನಮಾನವನ್ನು ತತ್‌ಕ್ಷಣ ದೃಢತೆಯಿಂದ ತಿರಸ್ಕರಿಸಿದ್ದ ಪೌಲ ಬಾರ್ನಬರಿಗಿಂಥ ಇದೆಷ್ಟು ಭಿನ್ನವಾಗಿತ್ತು! ಯೆಹೋವನ ಸೇವೆಯಲ್ಲಿ ನಾವು ಸಾಧಿಸಿರಬಹುದಾದ ಯಾವುದೇ ವಿಷಯಕ್ಕಾಗಿ ಘನಮಾನವನ್ನು ಎಂದೂ ಅಪೇಕ್ಷಿಸಬಾರದು.

14:5-7. ಜಾಣರಾಗಿರುವ ಮೂಲಕ ನಾವು ಯೆಹೋವನ ಸೇವೆಯಲ್ಲಿ ಕ್ರಿಯಾಶೀಲರಾಗಿ ಉಳಿಯಸಾಧ್ಯವಿದೆ.—ಮತ್ತಾ. 10:23.

14:22. ಕ್ರೈಸ್ತರು ಸಂಕಟಗಳನ್ನು ನಿರೀಕ್ಷಿಸುತ್ತಾರೆ. ತಮ್ಮ ನಂಬಿಕೆಗಳೊಂದಿಗೆ ರಾಜಿಮಾಡಿಕೊಳ್ಳುವ ಮೂಲಕ ಅವುಗಳಿಂದ ತಪ್ಪಿಸಿಕೊಳ್ಳಲು ಅವರು ಪ್ರಯತ್ನಿಸುವುದಿಲ್ಲ.—2 ತಿಮೊ. 3:12.

16:1, 2. ಯುವ ಕ್ರೈಸ್ತರು ಸಭೆಯಲ್ಲಿ ದೇವರ ಸೇವೆ ಮಾಡುವುದಕ್ಕಾಗಿ ಶ್ರಮಪಡಬೇಕು ಮತ್ತು ಉತ್ತಮ ಹೆಸರನ್ನು ಪಡೆಯಲು ಯೆಹೋವನ ಸಹಾಯವನ್ನು ಕೋರಬೇಕು.

16:3. ಇತರರು ಸುವಾರ್ತೆಯನ್ನು ಸ್ವೀಕರಿಸಸಾಧ್ಯವಾಗುವಂತೆ, ನಾವು ಬೈಬಲಿನ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡತಕ್ಕದ್ದು.—1 ಕೊರಿಂ. 9:19-23.

20:20, 21. ಮನೆಯಿಂದ ಮನೆಯ ಸೇವೆಯು ನಮ್ಮ ಶುಶ್ರೂಷೆಯ ಅತಿ ಪ್ರಾಮುಖ್ಯ ಭಾಗವಾಗಿದೆ.

20:24; 21:13. ನಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಿಂತ ಯೆಹೋವನ ಕಡೆಗಿನ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವುದೇ ಪ್ರಾಮುಖ್ಯವಾಗಿದೆ.

21:21-26. ಒಳ್ಳೆಯ ಸಲಹೆಗಳನ್ನು ಪಡೆಯಲು ನಾವು ಆತುರವುಳ್ಳವರಾಗಿರಬೇಕು.

25:8-12. ಇಂದು ಕ್ರೈಸ್ತರು ‘ಸುವಾರ್ತೆಯ ವಿಷಯದಲ್ಲಿ ಉತ್ತರ ಹೇಳಿ [ನ್ಯಾಯಯುತವಾಗಿ] ಸ್ಥಾಪಿಸಲಿಕ್ಕಾಗಿ’ ಲಭ್ಯವಿರುವ ಎಲ್ಲ ನ್ಯಾಯಾಂಗ ಒದಗಿಸುವಿಕೆಗಳ ಉಪಯೋಗ ಮಾಡಸಾಧ್ಯವಿದೆ ಮತ್ತು ಮಾಡಬೇಕು.—ಫಿಲಿ. 1:7.

26:24, 25. ‘ಸ್ವಸ್ಥಬುದ್ಧಿಯ ಸತ್ಯವಾದ ಮಾತುಗಳು’ ‘ಪ್ರಾಕೃತಮನುಷ್ಯನಿಗೆ’ ಹುಚ್ಚುಮಾತಾಗಿ ತೋರುವುದಾದರೂ ಅವುಗಳನ್ನು ನಾವು ಪ್ರಚುರಪಡಿಸಬೇಕು.—1 ಕೊರಿಂ. 2:14.

[ಪುಟ 30ರಲ್ಲಿರುವ ಚಿತ್ರ]

ಪೇತ್ರನು “ಪರಲೋಕರಾಜ್ಯದ ಬೀಗದ ಕೈಗಳನ್ನು” ಯಾವಾಗ ಉಪಯೋಗಿಸಿದನು?

[ಪುಟ 31ರಲ್ಲಿರುವ ಚಿತ್ರ]

ಪವಿತ್ರಾತ್ಮದ ಸಹಾಯವಿಲ್ಲದೆ ಲೋಕವ್ಯಾಪಕ ಸಾಕ್ಷಿಕಾರ್ಯವನ್ನು ಮಾಡಲು ಸಾಧ್ಯವಿಲ್ಲ