ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತರರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು?

ಇತರರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು?

ಇತರರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು?

“ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ.”—ಲೂಕ 6:31.

ಯೇಸು ಕ್ರಿಸ್ತನು ನಿಜವಾಗಿಯೂ ಮಹಾ ಬೋಧಕನಾಗಿದ್ದನು. ಅವನನ್ನು ದಸ್ತಗಿರಿಮಾಡಲು ಧಾರ್ಮಿಕ ವೈರಿಗಳು ಸೈನಿಕರನ್ನು ಕಳುಹಿಸಿದಾಗ, ಅವರು ಬರೀಗೈಲಿ ಹಿಂದಿರುಗಿ ಬಂದು ಹೇಳಿದ್ದು: “ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ.” (ಯೋಹಾ. 7:32, 45, 46) ಯೇಸುವಿನ ಕೌಶಲಭರಿತ ಪ್ರಸಂಗಗಳಲ್ಲಿ ಪರ್ವತ ಪ್ರಸಂಗವು ಒಂದು. ಅದನ್ನು ಮತ್ತಾಯನ ಸುವಾರ್ತಾ ಪುಸ್ತಕದ 5ರಿಂದ 7ನೇ ಅಧ್ಯಾಯಗಳಲ್ಲಿ ದಾಖಲಿಸಲಾಗಿದೆ ಮತ್ತು ಅದಕ್ಕೆ ಹೋಲುವ ಮಾಹಿತಿಯು ಲೂಕ 6:20-49ರಲ್ಲಿದೆ. *

2 ಆ ಪ್ರಸಂಗದಲ್ಲಿ, ‘ಸುವರ್ಣ ನಿಯಮ’ ಎಂದು ಕರೆಯಲಾಗುವ ಹೇಳಿಕೆ ಬಹುಶಃ ಅತಿ ಪ್ರಸಿದ್ಧ. ನಾವು ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ವಿಷಯಕ್ಕೆ ಅದು ಸಂಬಂಧಿಸಿದೆ. “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ” ಎಂದನು ಯೇಸು. (ಲೂಕ 6:31) ಸ್ವತಃ ಆತನೇ ಜನರಿಗಾಗಿ ಎಷ್ಟೊಂದು ಒಳಿತನ್ನು ಮಾಡಿದನು! ಆತನು ಅಸ್ವಸ್ಥರನ್ನು ಗುಣಪಡಿಸಿದನು ಮತ್ತು ಸತ್ತವರನ್ನು ಜೀವಕ್ಕೆ ತಂದನು. ಆದರೆ ಜನರು ವಿಶೇಷವಾಗಿ ಆಶೀರ್ವದಿತರಾದದ್ದು, ಆತನು ಬೋಧಿಸಿದ ಸುವಾರ್ತೆಯನ್ನು ಸ್ವೀಕರಿಸಿದಾಗಲೇ. (ಲೂಕ 7:20-22 ಓದಿ.) ಯೆಹೋವನ ಸಾಕ್ಷಿಗಳಾಗಿರುವ ನಾವು ಅದೇ ರೀತಿಯ ರಾಜ್ಯ ಸಾರುವಿಕೆಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಹರ್ಷಿಸುತ್ತೇವೆ. (ಮತ್ತಾ. 24:14; 28:19, 20) ಈ ಕೆಲಸದ ಬಗ್ಗೆ ಹಾಗೂ ಇತರರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕೆಂಬುದರ ಬಗ್ಗೆ ಪರ್ವತ ಪ್ರಸಂಗದ ಇತರ ಅಂಶಗಳನ್ನು ಈ ಲೇಖನ ಹಾಗೂ ಮುಂದಿನ ಲೇಖನದಲ್ಲಿ ಪರಿಗಣಿಸುವೆವು.

ಸೌಮ್ಯ ಸ್ವಭಾವದವರಾಗಿರಿ

3 ಯೇಸು ಹೇಳಿದ್ದು: “ಶಾಂತರು [“ಸೌಮ್ಯ ಸ್ವಭಾವದವರು,” NW] ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” * (ಮತ್ತಾ. 5:5) ಸೌಮ್ಯ ಸ್ವಭಾವ ಬಲಹೀನತೆಯ ಒಂದು ಲಕ್ಷಣವಲ್ಲವೆಂದು ಬೈಬಲ್‌ ತೋರಿಸುತ್ತದೆ. ಅದು, ದೇವರ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ನಾವು ತೋರಿಸುವ ಮೃದು ಸ್ವಭಾವವೇ ಆಗಿದೆ. ಈ ಸ್ವಭಾವವನ್ನು ನಮ್ಮ ಜೊತೆ ಮಾನವರೊಂದಿಗಿನ ನಡತೆಯಲ್ಲಿ ತೋರಿಸುತ್ತೇವೆ. ಉದಾಹರಣೆಗೆ, ನಾವು ‘ಯಾರಿಗೂ ಅಪಕಾರಕ್ಕೆ ಅಪಕಾರ ಮಾಡುವುದಿಲ್ಲ.’—ರೋಮಾ. 12:17-19.

4 ಸೌಮ್ಯ ಸ್ವಭಾವದವರು ಸಂತೋಷಿತರು ಯಾಕೆಂದರೆ “ಅವರು ಭೂಮಿಗೆ ಬಾಧ್ಯರಾಗುವರು.” “ಸೌಮ್ಯ ಸ್ವಭಾವದವನೂ ದೀನಮನಸ್ಸಿನವನೂ” ಆಗಿದ್ದ ಯೇಸುವನ್ನು ‘ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಲಾಗಿದೆ’ ಮತ್ತು ಈ ಕಾರಣದಿಂದ ಆತನು ಭೂಮಿಯ ಪ್ರಧಾನ ಬಾಧ್ಯಸ್ಥನು. (ಮತ್ತಾ. 11:29, NW; ಇಬ್ರಿ. 1:2; ಕೀರ್ತ. 2:8) ಮೆಸ್ಸೀಯನಾದ “ಮನುಷ್ಯಕುಮಾರ”ನಿಗೆ ಸ್ವರ್ಗೀಯ ರಾಜ್ಯದಲ್ಲಿ ಜೊತೆ ಅರಸರಿರುವರೆಂದು ಮುಂತಿಳಿಸಲಾಗಿತ್ತು. (ದಾನಿ. 7:13, 14, 21, 22, 27) “ಕ್ರಿಸ್ತನೊಂದಿಗೆ ಬಾಧ್ಯ”ರಾಗಿರುವ ಈ 1,44,000 ಮಂದಿ ಸೌಮ್ಯ ಸ್ವಭಾವದ ಅಭಿಷಿಕ್ತರು ಯೇಸುವಿನೊಂದಿಗೆ ಭೂಮಿಯನ್ನು ಬಾಧ್ಯತೆಯಾಗಿ ಪಡೆಯುವರು. (ರೋಮಾ. 8:16, 17; ಪ್ರಕ. 14:1) ಸೌಮ್ಯ ಸ್ವಭಾವವುಳ್ಳ ಉಳಿದ ಮಾನವರಿಗಾದರೋ, ಆ ರಾಜ್ಯದಾಳಿಕೆಯಡಿ ಭೂಮಿಯಲ್ಲಿ ನಿತ್ಯಜೀವದ ಆಶೀರ್ವಾದ ಸಿಗುವುದು.—ಕೀರ್ತ. 37:11.

5 ಇತರರೊಂದಿಗಿನ ನಮ್ಮ ನಡೆನುಡಿ ಒರಟಾಗಿರುವಲ್ಲಿ ಅವರು ತಾಳ್ಮೆಗೆಟ್ಟು, ನಮ್ಮಿಂದ ದೂರವಿರಲು ಬಯಸುವರು. ಆದರೆ ನಾವು ಕ್ರಿಸ್ತಸದೃಶ ಸೌಮ್ಯ ಸ್ವಭಾವದವರಾಗಿದ್ದರೆ, ಸ್ನೇಹಪರರೂ ಆಧ್ಯಾತ್ಮಿಕವಾಗಿ ಭಕ್ತಿವೃದ್ಧಿ ಮಾಡುವವರೂ ಆದ ಸಭಾ ಸದಸ್ಯರಾಗಿರುವೆವು. ನಾವು ‘ಪವಿತ್ರಾತ್ಮಕ್ಕನುಸಾರ ಜೀವಿಸಿ ನಡೆಯುವುದಾದರೆ’ ಅದು ನಮ್ಮಲ್ಲಿ ಹುಟ್ಟಿಸುವ ಫಲಗಳಲ್ಲಿ ಸೌಮ್ಯ ಸ್ವಭಾವ (ಸಾಧುತ್ವ) ಒಂದಾಗಿರುತ್ತದೆ. (ಗಲಾತ್ಯ 5:22-25 ಓದಿ.) ಯೆಹೋವನ ಪವಿತ್ರಾತ್ಮದಿಂದ ನಡೆಸಲ್ಪಡುವ ಸೌಮ್ಯ ಸ್ವಭಾವದ ವ್ಯಕ್ತಿಗಳಲ್ಲಿ ನಾವೂ ಒಬ್ಬರಾಗಿರಲು ಅಪೇಕ್ಷಿಸುತ್ತೇವೆ ಖಂಡಿತ!

ಕರುಣೆಯುಳ್ಳವರು ಸಂತೋಷಿತರು!

6 ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಹೀಗೂ ಹೇಳಿದನು: “ಕರುಣೆಯುಳ್ಳವರು ಧನ್ಯರು; ಅವರು ಕರುಣೆ ಹೊಂದುವರು.” (ಮತ್ತಾ. 5:7) ‘ಕರುಣೆಯುಳ್ಳವರಿಗೆ’ ಕೋಮಲ ಅನುಕಂಪವಿರುತ್ತದೆ ಮತ್ತು ಅನನುಕೂಲ ಸ್ಥಿತಿಯಲ್ಲಿರುವವರಿಗಾಗಿ ಅವರು ದಯಾಪರ ಪರಿಗಣನೆ ಮತ್ತು ಕನಿಕರವನ್ನು ತೋರಿಸುತ್ತಾರೆ. ಯೇಸು ಜನರ ಕಷ್ಟಗಳನ್ನು ಅದ್ಭುತಕರವಾಗಿ ನಿವಾರಿಸಿದನು ಏಕೆಂದರೆ ಅವನು ಅವರ ಬಗ್ಗೆ ‘ಕನಿಕರಪಟ್ಟನು.’ (ಮತ್ತಾ. 14:14; 20:34) ಹಾಗಾಗಿ, ನಮಗೆ ಇತರರ ಕಡೆಗೆ ಕನಿಕರ ಹಾಗೂ ಪರಿಗಣನೆ ಇರುವಲ್ಲಿ ನಾವು ಸಹ ಕರುಣೆಯುಳ್ಳವರಾಗಿರುವೆವು.—ಯಾಕೋ. 2:13.

7 ಯೇಸು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕೆಂದಿದ್ದಾಗ ಜನರ ಒಂದು ಗುಂಪು ಆತನನ್ನು ಭೇಟಿಮಾಡಲು ಬಂತು. ಅವರನ್ನು ಕಂಡು ಆತನು, “ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಬಹಳ ಉಪದೇಶ” ಮಾಡಲಾರಂಭಿಸಿದನು. (ಮಾರ್ಕ 6:34) ಅದೇ ರೀತಿಯಲ್ಲಿ ನಾವು ಇತರರೊಂದಿಗೆ ರಾಜ್ಯ ಸಂದೇಶವನ್ನು ಹಂಚಿಕೊಳ್ಳುವಾಗ ಹಾಗೂ ದೇವರ ಮಹಾ ಕರುಣೆಯ ಕುರಿತಾಗಿ ಅವರಿಗೆ ಹೇಳುವಾಗ ನಮಗೆಷ್ಟು ಆನಂದವಾಗುತ್ತದೆ!

8 ಕರುಣೆಯುಳ್ಳವರು ಸಂತೋಷಿತರು ಯಾಕೆಂದರೆ ಅವರು “ಕರುಣೆ ಹೊಂದುವರು.” ನಾವು ಜನರೊಂದಿಗೆ ಕರುಣೆಯಿಂದ ನಡೆದುಕೊಳ್ಳುವಾಗ ಸಾಮಾನ್ಯವಾಗಿ ಅವರು ಸಹ ನಮ್ಮೊಂದಿಗೆ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. (ಲೂಕ 6:38) ಅಷ್ಟುಮಾತ್ರವಲ್ಲದೆ, ಯೇಸು ಹೇಳಿದ್ದು: “ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು.” (ಮತ್ತಾ. 6:14) ಪಾಪಗಳ ಕ್ಷಮೆ ಹಾಗೂ ದೈವಿಕ ಅನುಗ್ರಹವನ್ನು ಪಡೆಯುವುದರಿಂದ ಸಿಗುವ ಸಂತೋಷವೇನೆಂಬುದು ಕರುಣೆಯುಳ್ಳವರಿಗೇ ಗೊತ್ತು.

“ಶಾಂತಿಶೀಲರು” ಸಂತೋಷಿತರೇಕೆ?

9 ಸಂತೋಷಕ್ಕೆ ಕಾರಣವಾಗಿರುವ ಇನ್ನೊಂದು ವಿಷಯದ ಬಗ್ಗೆ ಯೇಸು ಹೇಳಿದ್ದು: “ಸಮಾಧಾನ ಪಡಿಸುವವರು ಧನ್ಯರು; ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು.” (ಮತ್ತಾ. 5:9) ಇಲ್ಲಿ “ಸಮಾಧಾನ ಪಡಿಸುವವರು” ಅಥವಾ “ಶಾಂತಿಶೀಲರು” (NW) ಎಂದು ಭಾಷಾಂತರಿಸಲಾಗಿರುವ ಗ್ರೀಕ್‌ ಪದದ ಅಕ್ಷರಾರ್ಥ, “ಶಾಂತಿ ಮಾಡಿಸುವವರು” ಎಂದಾಗಿದೆ. ನಾವು ಶಾಂತಿ ಮಾಡಿಸುವವರು ಆಗಿರುವಲ್ಲಿ ‘ಮಿತ್ರರನ್ನು ಅಗಲಿಸುವ’ ಯಾವುದನ್ನೂ, ಉದಾಹರಣೆಗೆ ಚಾಡಿಮಾತನ್ನು ಸಹಿಸುವುದಿಲ್ಲ ಅಥವಾ ಸ್ವತಃ ಅದರಲ್ಲಿ ಪಾಲ್ಗೊಳ್ಳುವುದಿಲ್ಲ. (ಜ್ಞಾನೋ. 16:28) ನಡೆನುಡಿಯಲ್ಲಿ ನಾವು ಕ್ರೈಸ್ತ ಸಭೆಯ ಒಳಗೂ ಹೊರಗೂ ಇರುವ ಜನರೊಂದಿಗೆ ಸಮಾಧಾನದಿಂದಿರುವೆವು. (ಇಬ್ರಿ. 12:14) ವಿಶೇಷವಾಗಿ ಯೆಹೋವ ದೇವರೊಂದಿಗೆ ಸಮಾಧಾನದಿಂದಿರಲು ನಮ್ಮಿಂದಾದುದೆಲ್ಲವನ್ನು ಮಾಡುವೆವು.—1 ಪೇತ್ರ 3:10-12 ಓದಿ.

10 “ಸಮಾಧಾನ ಪಡಿಸುವವರು” ಅಥವಾ ಶಾಂತಿಶೀಲರು ಸಂತೋಷಿತರು ಎಂದು ಯೇಸು ಹೇಳಿದನು. ಏಕೆಂದರೆ ಅವರು “ದೇವರ ಮಕ್ಕಳು ಅನ್ನಿಸಿಕೊಳ್ಳುವರು.” ಅಭಿಷಿಕ್ತ ಕ್ರೈಸ್ತರು ಯೇಸುವೇ ಮೆಸ್ಸೀಯನೆಂದು ನಂಬಿಕೆ ಇಟ್ಟಿರುವುದರಿಂದ ಅವರಿಗೆ “ದೇವರ ಮಕ್ಕಳಾಗುವ ಅಧಿಕಾರ” ಸಿಗುತ್ತದೆ. (ಯೋಹಾ. 1:12; 1 ಪೇತ್ರ 2:24) ಶಾಂತಿಶೀಲರಾದ “ಬೇರೆ ಕುರಿಗಳ” ವಿಷಯದಲ್ಲೇನು? ಯೇಸು, ಸ್ವರ್ಗೀಯ ಜೊತೆ ಬಾಧ್ಯಸ್ಥರೊಂದಿಗೆ ನಡೆಸುವ ಸಾವಿರ ವರ್ಷಗಳ ಆಳ್ವಿಕೆಯ ಸಮಯದಲ್ಲಿ ಈ ಬೇರೆ ಕುರಿಗಳಿಗೆ “ನಿತ್ಯನಾದ ತಂದೆ” ಆಗುವನು. (ಯೋಹಾ. 10:14-16; ಯೆಶಾ. 9:6; ಪ್ರಕ. 20:6) ಆ ಸಹಸ್ರ ವರ್ಷದಾಳಿಕೆಯ ಕೊನೆಯಲ್ಲಿ, ಅಂಥ ಶಾಂತಿಶೀಲರು ಪೂರ್ಣ ಅರ್ಥದಲ್ಲಿ ದೇವರ ಭೂಮಕ್ಕಳಾಗುವರು.—1 ಕೊರಿಂ. 15:27, 28.

11 ‘ಶಾಂತಿದಾಯಕ ದೇವರಾದ’ ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳಲು ನಾವಾತನ ಗುಣಗಳನ್ನು ಅನುಕರಿಸಬೇಕು. ಇದರಲ್ಲಿ ಶಾಂತಿಶೀಲತೆ ಒಳಗೂಡಿದೆ. (ಫಿಲಿ. 4:9) “ಮೇಲಣಿಂದ ಬರುವ ಜ್ಞಾನವು” ನಮ್ಮನ್ನು ಮಾರ್ಗದರ್ಶಿಸುವಂತೆ ಬಿಡುವಲ್ಲಿ ನಾವು ಇತರರೊಂದಿಗೆ ಶಾಂತಿಶೀಲ ರೀತಿಯಲ್ಲಿ ನಡೆದುಕೊಳ್ಳುವೆವು. (ಯಾಕೋ. 3:17) ಹೌದು, ನಾವು ಶಾಂತಿ ಮಾಡಿಸುವವರಾಗಿದ್ದು ಸಂತೋಷಿತರಾಗಿರುವೆವು.

“ನಿಮ್ಮ ಬೆಳಕು ಪ್ರಕಾಶಿಸಲಿ”

12 ದೇವರ ಆಧ್ಯಾತ್ಮಿಕ ‘ಬೆಳಕನ್ನು’ ಪಡೆದುಕೊಳ್ಳಲು ಜನರಿಗೆ ಸಹಾಯ ನೀಡುವ ಮೂಲಕ ನಾವು ಅವರೊಂದಿಗೆ ಅತ್ಯುತ್ತಮ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ. (ಕೀರ್ತ. 43:3, NIBV) ಯೇಸು ತನ್ನ ಶಿಷ್ಯರಿಗೆ “ನೀವು ಲೋಕಕ್ಕೆ ಬೆಳಕಾಗಿದ್ದೀರಿ” ಎಂದು ಹೇಳಿ, ಅವರು ತಮ್ಮ ಬೆಳಕನ್ನು ಪ್ರಕಾಶಿಸುವಂತೆ ಉತ್ತೇಜಿಸಿದನು. ಹೀಗೆ ಜನರು ಅವರ “ಒಳ್ಳೇ ಕ್ರಿಯೆಗಳನ್ನು” ನೋಡಲು ಸಾಧ್ಯವಾಗುತ್ತಿತ್ತು. ಈ ಆಧ್ಯಾತ್ಮಿಕ ಬೆಳಕಿನ ಮೂಲಕ ‘ಜನರಿಗೆ’ ಅಂದರೆ ಮಾನವಕುಲಕ್ಕೆ ಪ್ರಯೋಜನಗಳು ಸಿಗಲಿದ್ದವು. (ಮತ್ತಾಯ 5:14-16 ಓದಿ.) ನಾವಿಂದು ನಮ್ಮ ನೆರೆಯವರಿಗೆ ಒಳ್ಳೇದನ್ನು ಮಾಡುವ ಮೂಲಕ ಮತ್ತು “ಸರ್ವಲೋಕದಲ್ಲಿ” ಅಂದರೆ “ಎಲ್ಲ ಜನಾಂಗಗಳಿಗೆ” ಸುವಾರ್ತೆ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಬೆಳಕನ್ನು ಪ್ರಕಾಶಿಸುತ್ತೇವೆ. (ಮತ್ತಾ. 26:13; ಮಾರ್ಕ 13:10) ನಮಗಿದು ಎಂಥ ಸದವಕಾಶ!

13 “ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು” ಎಂದನು ಯೇಸು. ಒಂದು ಬೆಟ್ಟದ ಮೇಲಿರುವ ಯಾವುದೇ ಊರು ಸುಲಭವಾಗಿ ಕಣ್ಣಿಗೆ ಬೀಳುತ್ತದೆ. ಹಾಗೆಯೇ, ರಾಜ್ಯ ಘೋಷಕರಾಗಿರುವ ನಮ್ಮ ಸತ್ಕ್ರಿಯೆಗಳನ್ನೂ, ಗೌರವಭರಿತ ನಡತೆ ಹಾಗೂ ಸುಶೀಲತೆಯಂಥ ಗುಣಗಳನ್ನೂ ಜನರು ಗಮನಿಸುತ್ತಾರೆ.—ತೀತ 2:1-14.

14 ದೀಪ ಹಚ್ಚಿ ಅದನ್ನು ಕೊಳಗದ ಒಳಗಲ್ಲ, ಮನೆಯಲ್ಲಿದ್ದವರಿಗೆಲ್ಲ ಬೆಳಕುಕೊಡುವಂತೆ ದೀಪಸ್ತಂಭದ ಮೇಲಿರಿಸಲಾಗುತ್ತದೆಂದು ಯೇಸು ಹೇಳಿದನು. ಪ್ರಥಮ ಶತಮಾನದ ದೀಪಗಳು ಸಾಮಾನ್ಯವಾಗಿ ಮಣ್ಣಿನದ್ದಾಗಿದ್ದು, ಅದರಲ್ಲಿರುತ್ತಿದ್ದ ಬತ್ತಿಯು ಎಣ್ಣೆ (ಸಾಮಾನ್ಯವಾಗಿ ಆಲಿವ್‌ ಎಣ್ಣೆ)ಯನ್ನು ಹೀರಿಕೊಳ್ಳುತ್ತಿತ್ತು. ಇಂಥ ದೀಪವನ್ನು ಹೆಚ್ಚಾಗಿ ಮರದ ಇಲ್ಲವೇ ಲೋಹಸ್ತಂಭದ ಮೇಲಿಡಲಾಗುತ್ತಿತ್ತು. ಹೀಗೆ ಅದು “ಮನೆಯಲ್ಲಿರುವವರೆಲ್ಲರಿಗೆ” ಬೆಳಕು ಕೊಡುತ್ತಿತ್ತು. ಜನರು ದೀಪ ಹಚ್ಚಿ ಅದನ್ನೊಂದು “ಕೊಳಗದೊಳಗೆ” ಇಡುತ್ತಿರಲಿಲ್ಲ. ಕೊಳಗ ಅಂದರೆ ಸುಮಾರು 9 ಲೀಟರಿನ ಅಳತೆ ಪಾತ್ರೆಯಾಗಿತ್ತು. ಯೇಸು, ಶಿಷ್ಯರು ತಮ್ಮ ಆಧ್ಯಾತ್ಮಿಕ ಬೆಳಕನ್ನು ಒಂದು ಸಾಂಕೇತಿಕ ಕೊಳಗದೊಳಗೆ ಇಡಬೇಕೆಂದು ಬಯಸಲಿಲ್ಲ. ಆದುದರಿಂದಲೇ ನಾವು ನಮ್ಮ ಬೆಳಕು ಪ್ರಕಾಶಿಸುವಂತೆ ಬಿಡಬೇಕು. ವಿರೋಧವಾಗಲಿ, ಹಿಂಸೆಯಾಗಲಿ ನಾವು ಶಾಸ್ತ್ರಾಧಾರಿತ ಸತ್ಯವನ್ನು ಮುಚ್ಚಿಡುವಂತೆ ಅಥವಾ ನಮ್ಮ ಬಳಿಯೇ ಇಟ್ಟುಕೊಳ್ಳುವಂತೆ ಎಂದಿಗೂ ಬಿಡಬಾರದು.

15 ಬೆಳಕುಕೊಡುತ್ತಿರುವ ಒಂದು ದೀಪದ ಬಗ್ಗೆ ಹೇಳಿದ ನಂತರವೇ ಯೇಸು ತನ್ನ ಶಿಷ್ಯರಿಗೆ ಅಂದದ್ದು: “ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” ನಮ್ಮ “ಒಳ್ಳೇ ಕ್ರಿಯೆಗಳ” ಕಾರಣ ಕೆಲವರು ದೇವರ ಸೇವಕರಾಗುವ ಮೂಲಕ ಆತನನ್ನು “ಕೊಂಡಾಡುವರು.” ಇದು, ನಾವು “ಲೋಕದೊಳಗೆ ಹೊಳೆಯುವ ಜ್ಯೋತಿರ್ಮಂಡಲಗಳಂತೆ” ಇರಲು ಎಂಥ ಸ್ಫೂರ್ತಿ ಕೊಡುತ್ತದೆ!—ಫಿಲಿ. 2:14-16.

16 ‘ಲೋಕಕ್ಕೆ ಬೆಳಕಾಗಿರಲು’ ನಾವು ರಾಜ್ಯ ಸಾರುವಿಕೆ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಒಳಗೂಡಬೇಕು. ಇನ್ನೊಂದು ಸಂಗತಿಯೂ ಅವಶ್ಯ. “ಬೆಳಕಿನವರಂತೆ ನಡೆದುಕೊಳ್ಳಿರಿ. ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ” ಎಂದು ಅಪೊಸ್ತಲ ಪೌಲನು ಬರೆದನು. (ಎಫೆ. 5:8, 9) ನಮ್ಮ ನಡತೆಯೂ ಆದರ್ಶಪ್ರಾಯವಾಗಿರಬೇಕು. ಹೌದು, ಅಪೊಸ್ತಲ ಪೇತ್ರನ ಈ ಸಲಹೆಯನ್ನು ನಾವು ಪಾಲಿಸತಕ್ಕದ್ದು: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.” (1 ಪೇತ್ರ 2:12) ಆದರೆ ಜೊತೆ ವಿಶ್ವಾಸಿಗಳ ನಡುವಿನ ಸಂಬಂಧ ಕೆಟ್ಟುಹೋದರೆ ಏನು ಮಾಡತಕ್ಕದ್ದು?

“ನಿನ್ನ ಸಹೋದರನ ಸಂಗಡ ಒಂದಾಗು”

17 ಯೇಸು ಪರ್ವತ ಪ್ರಸಂಗದಲ್ಲಿ ತನ್ನ ಶಿಷ್ಯರು ಒಬ್ಬ ಸಹೋದರನ ಮೇಲೆ ಸಿಟ್ಟನ್ನಾಗಲಿ ದ್ವೇಷವನ್ನಾಗಲಿ ಇಟ್ಟುಕೊಳ್ಳುವುದರ ಬಗ್ಗೆ ಎಚ್ಚರಿಸಿದನು. ಅವರು ಮುನಿಸಿಕೊಂಡಿರುವ ಸಹೋದರನೊಂದಿಗೆ ಸಮಾಧಾನ ಮಾಡಿಕೊಳ್ಳಲು ತ್ವರೆಪಡಬೇಕಾಗಿತ್ತು. (ಮತ್ತಾಯ 5:21-25 ಓದಿ.) ಯೇಸುವಿನ ಈ ಸಲಹೆಗೆ ಜಾಗರೂಕತೆಯಿಂದ ಗಮನಕೊಡಿ. ನಿಮ್ಮ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ, ನಿಮ್ಮ ಸಹೋದರನ ಮನಸ್ಸಿನಲ್ಲಿ ನಿಮ್ಮ ಮೇಲೆ ಏನೋ ವಿರೋಧವದೆ ಎಂಬದು ನೆನಪಿಗೆ ಬಂದರೆ ನೀವೇನು ಮಾಡಬೇಕಿತ್ತು? ನಿಮ್ಮ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ನಿಮ್ಮ ಸಹೋದರನ ಸಂಗಡ ಒಂದಾಗಬೇಕಾಗಿತ್ತು. ಆ ಮೇಲೆ ಬಂದು ನಿಮ್ಮ ಕಾಣಿಕೆ ಅರ್ಪಿಸಬೇಕಿತ್ತು.

18 ಹೆಚ್ಚಾಗಿ ಆ ‘ಕಾಣಿಕೆಯು,’ ಒಬ್ಬ ವ್ಯಕ್ತಿ ಯೆಹೋವನ ಆಲಯದಲ್ಲಿ ಅರ್ಪಿಸುವ ಯಜ್ಞವಾಗಿತ್ತು. ಪ್ರಾಣಿ ಯಜ್ಞಗಳು ತುಂಬ ಮಹತ್ವದ್ದಾಗಿದ್ದವು ಯಾಕೆಂದರೆ, ಅವು ಮೋಶೆಯ ಧರ್ಮಶಾಸ್ತ್ರಕ್ಕನುಸಾರವಾದ ಇಸ್ರಾಯೇಲ್ಯರ ಆರಾಧನೆಯ ಭಾಗವಾಗಿರಬೇಕೆಂದು ದೇವರೇ ಆಜ್ಞಾಪಿಸಿದ್ದನು. ಆದರೆ ನಿಮ್ಮ ಸಹೋದರನ ಮನಸ್ಸಿನಲ್ಲಿ ನಿಮ್ಮ ಮೇಲೆ ಏನೋ ವಿರೋಧವಿದೆ ಎಂದು ನಿಮ್ಮ ನೆನಪಿಗೆ ಬಂದರೆ, ನೀವು ಆ ವಿಷಯವನ್ನು ಇತ್ಯರ್ಥಗೊಳಿಸುವುದು ಕಾಣಿಕೆ ಕೊಡುವುದಕ್ಕಿಂತಲೂ ಹೆಚ್ಚು ತುರ್ತಿನದ್ದಾಗಿತ್ತು. “ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು” ಎಂದನು ಯೇಸು. ಒಬ್ಬ ಸಹೋದರನೊಂದಿಗೆ ರಾಜಿಮಾಡಿಕೊಳ್ಳುವುದು, ಧರ್ಮಶಾಸ್ತ್ರದ ಅಪ್ಪಣೆ ಪಾಲಿಸುವುದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿರಬೇಕಿತ್ತು.

19 ಇಂಥಿಂಥ ಯಜ್ಞಗಳು ಇಲ್ಲವೇ ಇಂಥಿಂಥ ತಪ್ಪುಗಳಿಗೆ ಮಾತ್ರ ಈ ಮಾತು ಅನ್ವಯವಾಗುತ್ತದೆಂದು ಯೇಸು ಹೇಳಲಿಲ್ಲ. ಹಾಗಾದರೆ ಇದರರ್ಥ, ಸಹೋದರನ ಮನಸ್ಸಿನಲ್ಲಿ ತನ್ನ ಮೇಲೆ ಏನೋ ವಿರೋಧವಿದೆಯೆಂದು ಒಬ್ಬ ವ್ಯಕ್ತಿಗೆ ನೆನಪಾಗುವಲ್ಲಿ, ಅವನು ಅರ್ಪಿಸಲಿದ್ದ ಯಜ್ಞ ಏನೇ ಆಗಿರಲಿ ಆ ಅರ್ಪಣೆಯನ್ನು ಮುಂದೂಡಬೇಕಿತ್ತು. ಒಂದುವೇಳೆ ಅದೊಂದು ಜೀವಂತ ಪ್ರಾಣಿಯಾಗಿದ್ದಲ್ಲಿ ಅದನ್ನು ಅಲ್ಲೇ, ಅಂದರೆ ಯಾಜಕರ ಅಂಗಣದಲ್ಲಿರುವ ಸರ್ವಾಂಗಹೋಮಗಳ “ವೇದಿಯ ಮುಂದೆಯೇ” ಬಿಟ್ಟುಹೋಗಬೇಕಾಗಿತ್ತು. ಸಮಸ್ಯೆ ಇತ್ಯರ್ಥವಾದ ಬಳಿಕ, ತಪ್ಪುಗೈದಿರುವ ವ್ಯಕ್ತಿ ವಾಪಸ್‌ ಬಂದು ಆ ಯಜ್ಞಾರ್ಪಣೆ ಮಾಡಬಹುದಿತ್ತು.

20 ದೇವರ ದೃಷ್ಟಿಯಲ್ಲಿ, ಸಹೋದರರೊಂದಿಗಿನ ನಮ್ಮ ಸಂಬಂಧವು ಸತ್ಯಾರಾಧನೆಯ ಒಂದು ಪ್ರಮುಖ ಭಾಗವಾಗಿದೆ. ಪ್ರಾಣಿ ಯಜ್ಞಗಳನ್ನು ಅರ್ಪಿಸುತ್ತಿರುವವರು ತಮ್ಮ ಜೊತೆಮಾನವರೊಂದಿಗೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳದಿರುತ್ತಿದ್ದಲ್ಲಿ ಅವೆಲ್ಲವೂ ಯೆಹೋವನಿಗೆ ಅರ್ಥಹೀನವಾಗಿರುತ್ತಿದ್ದವು. (ಮೀಕ 6:6-8) ಆದುದರಿಂದಲೇ, ಯೇಸು ತನ್ನ ಶಿಷ್ಯರಿಗೆ ‘ಬೇಗ ಸಮಾಧಾನ ಮಾಡಿಕೊಳ್ಳಿ’ ಎಂದು ಉತ್ತೇಜಿಸಿದನು. (ಮತ್ತಾ. 5:25) ಸಾಧಾರಣ ಇದೇ ವಿಷಯದ ಬಗ್ಗೆ ಪೌಲನು ಬರೆದದ್ದು: “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಸೈತಾನನಿಗೆ ಅವಕಾಶಕೊಡಬೇಡಿರಿ.” (ಎಫೆ. 4:26, 27) ಸಿಟ್ಟುಗೊಳ್ಳಲು ನ್ಯಾಯವಾದ ಕಾರಣಗಳಿದ್ದರೂ, ನಾವು ಸಿಟ್ಟನ್ನಿಟ್ಟುಕೊಂಡು, ಪಿಶಾಚನು ಈ ಸನ್ನಿವೇಶದ ಲಾಭಪಡೆಯುವಂತೆ ಬಿಡಬಾರದು.—ಲೂಕ 17:3, 4.

ಇತರರೊಂದಿಗೆ ಯಾವಾಗಲೂ ಗೌರವದಿಂದ ನಡೆದುಕೊಳ್ಳಿರಿ

21 ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಮಾಡಿದ ಕೆಲವೊಂದು ಹೇಳಿಕೆಗಳ ಕುರಿತು ಈ ವರೆಗಿನ ಪರಿಶೀಲನೆಯು, ಇತರರೊಂದಿಗೆ ದಯೆಯಿಂದಲೂ ಗೌರವದಿಂದಲೂ ನಡೆದುಕೊಳ್ಳುವಂತೆ ನಮಗೆ ಸಹಾಯಮಾಡಬೇಕು. ನಾವೆಲ್ಲರೂ ಅಪರಿಪೂರ್ಣರಾಗಿದ್ದರೂ ಯೇಸುವಿನ ಸಲಹೆಯನ್ನು ಖಂಡಿತ ಅನ್ವಯಿಸಬಲ್ಲೆವು. ಏಕೆಂದರೆ ನಮ್ಮಿಂದ ಸಾಧ್ಯವಿಲ್ಲದ್ದನ್ನು ಆತನಾಗಲಿ ನಮ್ಮ ಸ್ವರ್ಗೀಯ ಪಿತನಾಗಲಿ ನಿರೀಕ್ಷಿಸುವುದಿಲ್ಲ. ಪ್ರಾರ್ಥನೆ, ಯಥಾರ್ಥ ಪ್ರಯತ್ನ ಹಾಗೂ ಯೆಹೋವ ದೇವರ ಆಶೀರ್ವಾದದಿಂದ ನಾವು ಖಂಡಿತವಾಗಿಯೂ ಸೌಮ್ಯ ಸ್ವಭಾವದವರೂ, ಕರುಣಾಭರಿತರೂ, ಶಾಂತಿಶೀಲರೂ ಆಗಿರಬಲ್ಲೆವು. ನಾವು ಆಧ್ಯಾತ್ಮಿಕ ಬೆಳಕನ್ನು ಪ್ರತಿಬಿಂಬಿಸಿ ಯೆಹೋವನಿಗೆ ಮಹಿಮೆ ತರಬಲ್ಲೆವು. ಅಷ್ಟುಮಾತ್ರವಲ್ಲದೆ, ನಮ್ಮ ಸಹೋದರನೊಂದಿಗಿನ ಸಂಬಂಧ ಕೆಟ್ಟುಹೋದಾಗ ನಾವು ಅವನ ಸಂಗಡ ಒಂದಾಗಸಾಧ್ಯವಿದೆ.

22 ನಾವು ನಮ್ಮ ನೆರೆಯವರೊಂದಿಗೆ ಉತ್ತಮವಾಗಿ ನಡೆದುಕೊಳ್ಳುವುದು, ಯೆಹೋವನಿಗೆ ಸ್ವೀಕಾರಯೋಗ್ಯವಾದ ಆರಾಧನೆಯ ಒಂದು ಭಾಗ ಆಗಿದೆ. (ಮಾರ್ಕ 12:31) ನಾವು ಇತರರಿಗೆ ಒಳ್ಳೇದನ್ನು ಮಾಡುತ್ತಾ ಇರುವಂತೆ ಸಹಾಯಮಾಡುವ, ಪರ್ವತ ಪ್ರಸಂಗದ ಇತರ ಹೇಳಿಕೆಗಳನ್ನು ಮುಂದಿನ ಲೇಖನದಲ್ಲಿ ಪರಿಗಣಿಸುವೆವು. ಆದರೆ ಯೇಸುವಿನ ಸರಿಸಾಟಿಯಿಲ್ಲದ ಪ್ರಸಂಗದ ಈ ಎಲ್ಲ ಅಂಶಗಳನ್ನು ಧ್ಯಾನಿಸಿದ ನಂತರ ಈಗ ಹೀಗೆ ಕೇಳಿಕೊಳ್ಳಬಲ್ಲೆವು: ‘ನಾನು ಇತರರೊಂದಿಗೆ ಎಷ್ಟು ಉತ್ತಮವಾಗಿ ನಡೆದುಕೊಳ್ಳುತ್ತೇನೆ?’

[ಪಾದಟಿಪ್ಪಣಿಗಳು]

^ ಪ್ಯಾರ. 3 ಈ ಲೇಖನ ಮತ್ತು ಮುಂದಿನ ಲೇಖನದ ವೈಯಕ್ತಿಕ ಅಧ್ಯಯನದ ಆರಂಭದಲ್ಲೇ ಈ ವಚನಗಳನ್ನು ಓದುವುದು ತುಂಬ ಉಪಯುಕ್ತ.

^ ಪ್ಯಾರ. 6 ಮತ್ತಾಯ 5:3-11ರಲ್ಲಿ ಬಳಸಲಾಗಿರುವ ಮಕಾರೀಐ ಎಂಬ ಗ್ರೀಕ್‌ ಪದವನ್ನು ಕನ್ನಡ ಬೈಬಲ್‌ಗಳಲ್ಲಿ ‘ಧನ್ಯ’ ಎಂದು ಭಾಷಾಂತರಿಸಲಾಗಿದೆ. ಆದರೆ ನೂತನ ಲೋಕ ಭಾಷಾಂತರ ಇದನ್ನು “ಸಂತೋಷಿತರು” ಎಂದು ಹೆಚ್ಚು ನಿಖರವಾಗಿ ಭಾಷಾಂತರಿಸಿದೆ. ಇದನ್ನೇ ನಾವು ಈ ಲೇಖನ ಹಾಗೂ ಮುಂದಿನ ಲೇಖನದಲ್ಲಿ ಉಪಯೋಗಿಸುತ್ತೇವೆ.

ನಿಮ್ಮ ಉತ್ತರವೇನು?

• ಸೌಮ್ಯ ಸ್ವಭಾವದವರಾಗಿರುವುದರ ಅರ್ಥವೇನು?

• ‘ಕರುಣೆಯುಳ್ಳವರು’ ಸಂತೋಷಿತರೇಕೆ?

• ನಮ್ಮ ಬೆಳಕನ್ನು ನಾವು ಹೇಗೆ ಪ್ರಕಾಶಿಸಬಹುದು?

• ‘ನಮ್ಮ ಸಹೋದರನೊಂದಿಗೆ ಒಂದಾಗಲು’ ನಾವೇಕೆ ತ್ವರೆಪಡಬೇಕು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಪರ್ವತ ಪ್ರಸಂಗ ಏನಾಗಿದೆ? (ಬಿ) ಈ ಲೇಖನ ಹಾಗೂ ಮುಂದಿನ ಲೇಖನದಲ್ಲಿ ನಾವೇನನ್ನು ಚರ್ಚಿಸಲಿರುವೆವು?

3. ಸೌಮ್ಯ ಸ್ವಭಾವವನ್ನು ನೀವು ಹೇಗೆ ನಿರೂಪಿಸುವಿರಿ?

4. ಸೌಮ್ಯ ಸ್ವಭಾವದವರು ಸಂತೋಷಿತರು ಏಕೆ?

5. ಕ್ರಿಸ್ತಸದೃಶ ಸೌಮ್ಯ ಸ್ವಭಾವ ನಮ್ಮ ನಡವಳಿಕೆಯನ್ನು ಹೇಗೆ ಪ್ರಭಾವಿಸುತ್ತದೆ?

6. ‘ಕರುಣೆಯುಳ್ಳವರಿಗೆ’ ಯಾವ ಗಮನಾರ್ಹ ಗುಣಗಳಿವೆ?

7. ಯೇಸು ಕನಿಕರದಿಂದ ಏನು ಮಾಡಲು ಪ್ರಚೋದಿತನಾದನು?

8. ಕರುಣೆಯುಳ್ಳವರು ಸಂತೋಷಿತರು ಏಕೆ?

9. ನಾವು ಶಾಂತಿಶೀಲರು ಆಗಿರುವಲ್ಲಿ ಹೇಗೆ ನಡೆದುಕೊಳ್ಳುವೆವು?

10. ಶಾಂತಿಶೀಲರು ಸಂತೋಷಿತರೇಕೆ?

11. “ಮೇಲಣಿಂದ ಬರುವ ಜ್ಞಾನವು” ನಮ್ಮನ್ನು ಮಾರ್ಗದರ್ಶಿಸುತ್ತಿರುವಲ್ಲಿ ನಾವು ಇತರರೊಂದಿಗೆ ಹೇಗೆ ನಡೆದುಕೊಳ್ಳುವೆವು?

12. (ಎ) ಆಧ್ಯಾತ್ಮಿಕ ಬೆಳಕಿನ ಕುರಿತು ಯೇಸು ಏನು ಹೇಳಿದನು? (ಬಿ) ನಮ್ಮ ಬೆಳಕನ್ನು ಹೇಗೆ ಪ್ರಕಾಶಿಸಬಲ್ಲೆವು?

13. ಜನರು ನಮ್ಮಲ್ಲಿ ಏನನ್ನು ಗಮನಿಸುತ್ತಾರೆ?

14. (ಎ) ಪ್ರಥಮ ಶತಮಾನದ ದೀಪಗಳು ಹೇಗಿದ್ದವು? (ಬಿ) ನಾವು ಆಧ್ಯಾತ್ಮಿಕ ಬೆಳಕನ್ನು “ಕೊಳಗದೊಳಗೆ” ಇಡಬಾರದೆಂಬುದರ ಅರ್ಥವೇನು?

15. ನಮ್ಮ “ಒಳ್ಳೇ ಕ್ರಿಯೆಗಳು” ಕೆಲವರ ಮೇಲೆ ಹೇಗೆ ಪರಿಣಾಮಬೀರುತ್ತವೆ?

16. ನಾವು ‘ಲೋಕಕ್ಕೆ ಬೆಳಕಾಗಿರಲು’ ಏನು ಆವಶ್ಯಕ?

17-19. (ಎ) ಮತ್ತಾಯ 5:23, 24ರಲ್ಲಿ ತಿಳಿಸಲಾಗಿರುವ “ಕಾಣಿಕೆ” ಏನಾಗಿತ್ತು? (ಬಿ) ಒಬ್ಬ ಸಹೋದರನೊಂದಿಗೆ ರಾಜಿಮಾಡಿಕೊಳ್ಳುವುದು ಎಷ್ಟು ಪ್ರಾಮುಖ್ಯ, ಮತ್ತು ಯೇಸು ಇದನ್ನು ಹೇಗೆ ತೋರಿಸಿದನು?

20. ಒಬ್ಬ ಸಹೋದರನೊಂದಿಗೆ ನಮಗೆ ಸಿಟ್ಟಿರುವಲ್ಲಿ, ವಿಷಯವನ್ನು ಕೂಡಲೇ ಇತ್ಯರ್ಥಗೊಳಿಸಲು ನಾವೇಕೆ ಕ್ರಮಗೈಯಬೇಕು?

21, 22. (ಎ) ನಾವೀಗ ಚರ್ಚಿಸಿರುವ ಯೇಸುವಿನ ಸಲಹೆಯನ್ನು ಹೇಗೆ ಅನ್ವಯಿಸಿಕೊಳ್ಳಬಹುದು? (ಬಿ) ಮುಂದಿನ ಲೇಖನದಲ್ಲಿ ನಾವೇನನ್ನು ಪರಿಗಣಿಸುವೆವು?

[ಪುಟ 4ರಲ್ಲಿರುವ ಚಿತ್ರ]

ನಮ್ಮ ಬೆಳಕನ್ನು ಪ್ರಕಾಶಿಸುವ ಪ್ರಮುಖ ವಿಧಾನ ರಾಜ್ಯ ಸಂದೇಶವನ್ನು ಘೋಷಿಸುವುದು ಆಗಿದೆ

[ಪುಟ 5ರಲ್ಲಿರುವ ಚಿತ್ರ]

ಕ್ರೈಸ್ತರ ನಡತೆ ಆದರ್ಶಪ್ರಾಯವಾಗಿರಬೇಕು

[ಪುಟ 6ರಲ್ಲಿರುವ ಚಿತ್ರ]

ನಿಮ್ಮ ಸಹೋದರನೊಂದಿಗೆ ಒಂದಾಗಲು ಕೈಲಾದದ್ದೆಲ್ಲವನ್ನೂ ಮಾಡಿ