ಎಳೆಯ ಪ್ರಾಯದಲ್ಲೇ ಯೆಹೋವನ ಸೇವೆಯನ್ನು ಆರಿಸಿಕೊಳ್ಳಿ
ಎಳೆಯ ಪ್ರಾಯದಲ್ಲೇ ಯೆಹೋವನ ಸೇವೆಯನ್ನು ಆರಿಸಿಕೊಳ್ಳಿ
“ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು.”—2 ತಿಮೊ. 3:14.
ಯುವಜನರು ಸಲ್ಲಿಸುವ ಪವಿತ್ರಸೇವೆಯನ್ನು ಯೆಹೋವನು ಎಷ್ಟು ಅಮೂಲ್ಯವೆಂದೆಣಿಸುತ್ತಾನೆಂದರೆ ಅವರ ಕುರಿತು ಆತನು ಒಂದು ಪ್ರವಾದನೆಯನ್ನೇ ತಿಳಿಸಿದನು. ಕೀರ್ತನೆಗಾರನು ಹಾಡಿದ್ದು: “ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಪರಿಶುದ್ಧವಸ್ತ್ರಭೂಷಿತರಾದ ನಿನ್ನ ಯುವಕಸೈನಿಕರು ಉದಯಕಾಲದ ಇಬ್ಬನಿಯಂತಿರುವರು.” (ಕೀರ್ತ. 110:3) ಹೌದು, ತಾವಾಗಿಯೇ ಮುಂದೆ ಬಂದು ಸೇವೆಸಲ್ಲಿಸುವ ಯುವಜನರನ್ನು ಯೆಹೋವನು ತುಂಬ ಮಾನ್ಯಮಾಡುತ್ತಾನೆ.
2 ಕ್ರೈಸ್ತ ಸಭೆಯಲ್ಲಿರುವ ಎಳೆಯ ಮಕ್ಕಳೇ, ನೀವು ನಿಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡಿದ್ದೀರೋ? ಸತ್ಯದೇವರಿಗೆ ಸೇವೆಸಲ್ಲಿಸುವ ಆಯ್ಕೆಯನ್ನು ಮಾಡುವುದು ಅನೇಕ ಯುವಜನರಿಗೆ ತುಸು ಕಷ್ಟವಾಗಿರಬಹುದು. ವ್ಯಾಪಾರೋದ್ಯಮಿಗಳು, ಶಿಕ್ಷಕರು, ಕೆಲವೊಮ್ಮೆ ಮನೆಯವರು ಹಾಗೂ ಸ್ನೇಹಿತರು ಪ್ರಾಪಂಚಿಕ ಗುರಿಗಳನ್ನಿಡುವಂತೆ ಯುವಜನರನ್ನು ಪ್ರೋತ್ಸಾಹಿಸುತ್ತಾರೆ. ಯುವಜನರು ಆಧ್ಯಾತ್ಮಿಕ ಗುರಿಗಳನ್ನು ಆಯ್ಕೆಮಾಡುವಾಗ ಈ ಲೋಕವು ಅವರನ್ನು ಅನೇಕ ವೇಳೆ ಗೇಲಿಮಾಡುತ್ತದೆ. ಆದರೆ ನಿಜವೇನೆಂದರೆ, ಸತ್ಯದೇವರಿಗೆ ಸೇವೆಸಲ್ಲಿಸುವುದೇ ಜೀವನದಲ್ಲಿ ನೀವು ಮಾಡಸಾಧ್ಯವಿರುವ ಅತ್ಯುತ್ತಮ ಆಯ್ಕೆಯಾಗಿದೆ. (ಕೀರ್ತ. 27:4) ಈ ವಿಷಯದ ಕುರಿತು ಮೂರು ಪ್ರಶ್ನೆಗಳನ್ನು ಪರಿಗಣಿಸಿ: ನೀವೇಕೆ ದೇವರಿಗೆ ಸೇವೆಸಲ್ಲಿಸಬೇಕು? ಇತರರು ಏನೇ ಹೇಳಲಿ ಅಥವಾ ಏನೇ ಮಾಡಲಿ ಯೆಹೋವನಿಗೆ ಸಮರ್ಪಿಸಿಕೊಂಡು ನೀವು ಹೇಗೆ ಯಶಸ್ಸನ್ನು ಕಾಣಬಲ್ಲಿರಿ? ಪವಿತ್ರಸೇವೆಯ ಯಾವೆಲ್ಲ ಸದವಕಾಶಗಳು ನಿಮ್ಮ ಮುಂದಿವೆ?
ಯೆಹೋವನಿಗೆ ಸೇವೆಸಲ್ಲಿಸುವುದೇ ಸರಿಯಾದ ಆಯ್ಕೆ
3 ಸತ್ಯವಂತನೂ ಜೀವಸ್ವರೂಪನೂ ಆಗಿರುವ ದೇವರಿಗೆ ನೀವೇಕೆ ಸೇವೆಸಲ್ಲಿಸಬೇಕು? ಇದಕ್ಕಿರುವ ಮುಖ್ಯ ಕಾರಣವನ್ನು ಪ್ರಕಟನೆ 4:11 ಕೊಡುತ್ತದೆ: “[ಯೆಹೋವನೇ,] ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” ಅಸ್ತಿತ್ವದಲ್ಲಿರುವ ಸಕಲ ವಿಷಯಗಳ ಅದ್ಭುತಕರ ಸೃಷ್ಟಿಕರ್ತನು ಯೆಹೋವನಾಗಿದ್ದಾನೆ. ಈ ಭೂಮಿಯನ್ನೇ ತೆಗೆದುಕೊಳ್ಳಿ. ಇದು ಎಷ್ಟು ಸುಂದರವಾಗಿದೆ! ಇಲ್ಲಿರುವ ಮರಗಳು, ಹೂವುಗಳು, ಪ್ರಾಣಿಗಳು, ಸಾಗರಗಳು, ಬೆಟ್ಟಗುಡ್ಡಗಳು ಮತ್ತು ಜಲಪಾತಗಳ ಕುರಿತು ಯೋಚಿಸಿ. ಇವೆಲ್ಲವನ್ನು ಯೆಹೋವನೇ ನಿರ್ಮಿಸಿದನು. “ಭೂಲೋಕವು [ದೇವರ] ಆಸ್ತಿಯಿಂದ ತುಂಬಿರುತ್ತದೆ” ಎಂದು ಕೀರ್ತನೆ 104:24 ನಮಗೆ ತಿಳಿಸುತ್ತದೆ. ಈ ಭೂಮಿ ಮತ್ತು ಅದರಲ್ಲಿನ ಒಳ್ಳೆಯ ವಿಷಯಗಳನ್ನು ನಾವು ಸವಿದು ಆನಂದಿಸುವಂತೆ ಯೆಹೋವನು ನಮಗೆ ಪ್ರೀತಿಯಿಂದ ಶರೀರ ಮತ್ತು ಬುದ್ಧಿಶಕ್ತಿಯನ್ನು ಸಹ ಕೊಟ್ಟಿದ್ದಾನೆ. ಈ ಬೆರಗುಗೊಳಿಸುವ ಸೃಷ್ಟಿಗಾಗಿ ನಮ್ಮ ಹೃದಯದಲ್ಲಿ ಉಕ್ಕುವ ಗಣ್ಯತಾಭಾವವು ನಾವಾತನಿಗೆ ಸೇವೆಸಲ್ಲಿಸುವಂತೆ ನಮ್ಮನ್ನು ಪ್ರೇರೇಪಿಸುವುದಿಲ್ಲವೋ?
4 ಯೆಹೋವನಿಗೆ ಏಕೆ ಸೇವೆ ಸಲ್ಲಿಸಬೇಕೆಂಬುದಕ್ಕೆ ಇನ್ನೊಂದು ಕಾರಣವನ್ನು ಇಸ್ರಾಯೇಲ್ಯರ ನಾಯಕನಾಗಿದ್ದ ಯೆಹೋಶುವನ ಮಾತುಗಳಲ್ಲಿ ಕಾಣುತ್ತೇವೆ. ಅವನು ತನ್ನ ಆಯುಷ್ಕಾಲದ ಕೊನೆಯಲ್ಲಿ ದೇವಜನರಿಗೆ ಹೇಳಿದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.” ಯೆಹೋಶುವನು ಈ ಮಾತನ್ನು ಹೇಳಲು ಕಾರಣವೇನಾಗಿತ್ತೆಂದು ನಿಮಗೆ ಗೊತ್ತೋ?—ಯೆಹೋ. 23:14.
5 ಬಾಲ್ಯದಿಂದಲೇ ಐಗುಪ್ತ ದೇಶದಲ್ಲಿ ಬೆಳೆದ ಯೆಹೋಶುವನಿಗೆ, ಯೆಹೋವನು ಇಸ್ರಾಯೇಲ್ಯರಿಗೆ ಒಂದು ಸ್ವಂತ ದೇಶವನ್ನು ಕೊಡುತ್ತಾನೆಂದು ಮಾಡಿದ ವಾಗ್ದಾನದ ಕುರಿತು ತಿಳಿದಿದ್ದಿರಲೇಬೇಕು. (ಆದಿ. 12:7; 50:24, 25; ವಿಮೋ. 3:8) ಅನಂತರ, ಯೆಹೋವನು ತನ್ನ ಆ ವಾಗ್ದಾನವನ್ನು ನೆರವೇರಿಸಲು ಮಾಡಿದ ಒಂದೊಂದು ಕಾರ್ಯವನ್ನೂ ಅವನು ನೋಡಿದನು. ಯೆಹೋವನು ಐಗುಪ್ತದ ಮೇಲೆ ಹತ್ತು ಬಾಧೆಗಳನ್ನು ತರುವ ಮೂಲಕ ಇಸ್ರಾಯೇಲ್ಯರನ್ನು ಅಲ್ಲಿಂದ ಕಳುಹಿಸಿಬಿಡುವಂತೆ ಹಟಮಾರಿ ಫರೋಹನ ಮೇಲೆ ಒತ್ತಡ ಹೇರಿದ್ದನ್ನು ಯೆಹೋಶುವನು ಗಮನಿಸಿದನು. ಕೆಂಪು ಸಮುದ್ರದ ಮೂಲಕ ಹಾದುಹೋಗಿ ಬಿಡುಗಡೆ ಹೊಂದಿದ ಜನರಲ್ಲಿ ಅವನು ಕೂಡ ಒಬ್ಬನಾಗಿದ್ದನು. ಕೆಂಪು ಸಮುದ್ರವು ಫರೋಹ ಹಾಗೂ ಅವನ ಸೈನ್ಯವನ್ನು ನಾಶಪಡಿಸಿದಾಗ ಅವನು ದಡದಲ್ಲಿಯೇ ನಿಂತುಕೊಂಡಿದ್ದನು. ಸೀನಾಯಿ ಮರುಭೂಮಿಯ ‘ಆ ಘೋರವಾದ ಮಹಾರಣ್ಯದಲ್ಲಿ’ ಕೈಗೊಂಡ ದೀರ್ಘ ಪ್ರಯಾಣದ ಸಮಯದಲ್ಲಿ ಇಸ್ರಾಯೇಲ್ಯರಿಗೆ ಬೇಕಾದ ಎಲ್ಲವನ್ನೂ ಯೆಹೋವನು ಒದಗಿಸಿದ್ದನ್ನು ಅವನು ಕಣ್ಣಾರೆ ನೋಡಿದವನಾಗಿದ್ದನು. ಅವರಲ್ಲಿ ಒಬ್ಬನು ಸಹ ಹಸಿವೆಯಿಂದಾಗಲಿ ಬಾಯಾರಿಕೆಯಿಂದಾಗಲಿ ಸಾಯಲಿಲ್ಲ. (ಧರ್ಮೋ. 8:3-5, 14-16; ಯೆಹೋ. 24:5-7) ಮುಂದೆ, ಇಸ್ರಾಯೇಲ್ಯರು ಬಲಿಷ್ಠವಾಗಿದ್ದ ಕಾನಾನ್ಯ ದೇಶವನ್ನು ಆಕ್ರಮಿಸಿ ವಾಗ್ದತ್ತ ದೇಶವನ್ನು ವಶಪಡಿಸಿಕೊಳ್ಳಬೇಕಾದ ಸಮಯ ಬಂತು. ಆಗಲೂ, ತಾನು ಮತ್ತು ಇತರ ಇಸ್ರಾಯೇಲ್ಯರು ಆರಾಧಿಸುತ್ತಿದ್ದ ದೇವರು ನೀಡಿದ ಬೆಂಬಲವನ್ನು ಯೆಹೋಶುವನು ಸ್ವಂತ ಕಣ್ಣಿಂದ ನೋಡಿದ್ದನು.—ಯೆಹೋ. 10:14, 42.
6 ಯೆಹೋವನು ತಾನು ಮಾತುಕೊಟ್ಟ ಪ್ರಕಾರವೇ ನಡೆದುಕೊಂಡನೆಂದು ಯೆಹೋಶುವನಿಗೆ ಮನದಟ್ಟಾಗಿತ್ತು. ಆದುದರಿಂದ ಅವನು ತಿಳಿಯಪಡಿಸಿದ್ದು: “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು.” (ಯೆಹೋ. 24:15) ನಿಮ್ಮ ಕುರಿತೇನು? ಸತ್ಯದೇವರು ಈಗಾಗಲೇ ನೆರವೇರಿಸಿರುವ ಮತ್ತು ಮುಂದೆ ನೆರವೇರಿಸಲಿರುವ ವಾಗ್ದಾನಗಳ ಕುರಿತು ಯೋಚಿಸುವಾಗ, ಯೆಹೋಶುವನಂತೆ ಸತ್ಯದೇವರಿಗೆ ಸೇವೆಸಲ್ಲಿಸಬೇಕೆಂದು ನಿಮಗೂ ಅನಿಸುವುದಿಲ್ಲವೋ?
7 ಯೆಹೋವನ ಸೃಷ್ಟಿಕಾರ್ಯಗಳ ಕುರಿತು ಮತ್ತು ಸಂಪೂರ್ಣವಾಗಿ ಭರವಸಾರ್ಹವಾಗಿರುವ ಆತನ ಅದ್ಭುತಕರ ವಾಗ್ದಾನಗಳ ಕುರಿತು ಧ್ಯಾನಿಸುವುದು ನಿಮ್ಮನ್ನು ಕ್ರಿಯೆ ಕೈಗೊಳ್ಳುವಂತೆ ಪ್ರೇರಿಸಬೇಕು. ಅಂದರೆ ಯೆಹೋವನಿಗೆ ಸಮರ್ಪಿಸಿಕೊಳ್ಳುವಂತೆ ಮಾತ್ರವಲ್ಲ ನಿಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ತೋರಿಸಿಕೊಡುವಂತೆಯೂ ಪ್ರಚೋದಿಸಬೇಕು. ಏಕೆಂದರೆ, ದೇವರಿಗೆ ಸೇವೆಸಲ್ಲಿಸಲು ಇಷ್ಟಪಡುವ ಪ್ರತಿಯೊಬ್ಬರಿಗೂ ದೀಕ್ಷಾಸ್ನಾನವು ಒಂದು ಪ್ರಾಮುಖ್ಯ ಹೆಜ್ಜೆಯಾಗಿದೆ. ನಮ್ಮ ಆದರ್ಶವ್ಯಕ್ತಿಯಾಗಿರುವ ಯೇಸು ಇದನ್ನು ಸ್ಪಷ್ಟವಾಗಿ ತೋರಿಸಿದನು. ಅವನು ಮೆಸ್ಸೀಯನಾಗಿ ತನ್ನ ಕೆಲಸವನ್ನು ಆರಂಭಿಸುವ ಮೊದಲು ದೀಕ್ಷಾಸ್ನಾನ ಪಡೆದುಕೊಳ್ಳುವುದಕ್ಕಾಗಿ ಸ್ನಾನಿಕ ಯೋಹಾನನ ಬಳಿ ಹೋದನು. ಆ ಹೆಜ್ಜೆಯನ್ನು ಯೇಸು ತೆಗೆದುಕೊಂಡದ್ದೇಕೆ? ಅವನು ಹೇಳಿದ್ದು: “ನನ್ನ ಚಿತ್ತದಂತೆ ನಡೆಯುವದಕ್ಕಾಗಿ ನಾನು ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವದಕ್ಕೆ ಪರಲೋಕದಿಂದ ಬಂದೆನು.” (ಯೋಹಾ. 6:38) ತಂದೆಯ ಚಿತ್ತವನ್ನು ಮಾಡಲಿಕ್ಕಾಗಿ ತನ್ನನ್ನು ನೀಡಿಕೊಳ್ಳುತ್ತಿದ್ದೇನೆಂದು ತೋರಿಸಿಕೊಡಲು ಯೇಸು ದೀಕ್ಷಾಸ್ನಾನ ಪಡೆದುಕೊಂಡನು.—ಮತ್ತಾ. 3:13-17.
8 ತಿಮೊಥೆಯನ ಮಾದರಿಯನ್ನು ಸಹ ತೆಗೆದುಕೊಳ್ಳಿರಿ. ಯುವ ಕ್ರೈಸ್ತನಾಗಿದ್ದ ಅವನಿಗೆ ತರುವಾಯ ಯೆಹೋವನು ಅನೇಕ ಕೆಲಸಗಳನ್ನೂ ನೇಮಕಗಳನ್ನೂ ಕೊಟ್ಟನು. ತಿಮೊಥೆಯನು ಸತ್ಯದೇವರಿಗೆ ಸೇವೆಸಲ್ಲಿಸುವ ಆಯ್ಕೆಯನ್ನು ಏಕೆ ಮಾಡಿದನು? ಏಕೆಂದರೆ, ‘ಅವನು ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿದ್ದನು’ ಎಂದು ಬೈಬಲ್ ತಿಳಿಸುತ್ತದೆ. (2 ತಿಮೊ. 3:14) ದೇವರ ವಾಕ್ಯವನ್ನು ನೀವು ಅಧ್ಯಯನ ಮಾಡಿರುವಲ್ಲಿ ಮತ್ತು ಅದರ ಬೋಧನೆಗಳು ಸತ್ಯವಾಗಿವೆಯೆಂದು ದೃಢವಾಗಿ ನಂಬಿರುವಲ್ಲಿ ನೀವು ಸಹ ತಿಮೊಥೆಯನ ಅದೇ ಸ್ಥಾನದಲ್ಲಿದ್ದೀರಿ. ಈಗ ನೀವು ಒಂದು ನಿರ್ಣಯವನ್ನು ಮಾಡಬೇಕಾಗಿದೆ. ನೀವೇನು ಮಾಡಲು ಇಷ್ಟಪಡುತ್ತೀರಿ ಎಂಬುದರ ಕುರಿತು ನಿಮ್ಮ ತಂದೆತಾಯಿಯೊಂದಿಗೆ ಮಾತಾಡಬಾರದೇಕೆ? ದೀಕ್ಷಾಸ್ನಾನ ಪಡೆದುಕೊಳ್ಳಲು ಬೇಕಾದ ಶಾಸ್ತ್ರೀಯ ಆವಶ್ಯಕತೆಗಳೇನಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಸಭೆಯಲ್ಲಿರುವ ಹಿರಿಯರ ನೆರವಿನೊಂದಿಗೆ ಅವರು ನಿಮಗೆ ಸಹಾಯಮಾಡುವರು.—ಅ. ಕೃತ್ಯಗಳು 8:12 ಓದಿ.
9 ನೀವು ದೀಕ್ಷಾಸ್ನಾನವನ್ನು ಪಡೆದುಕೊಳ್ಳುವುದಾದರೆ, ಇದು ದೇವರಿಗೆ ಸೇವೆಸಲ್ಲಿಸಲಿಕ್ಕಾಗಿ ತೆಗೆದುಕೊಳ್ಳುವ ಒಂದು ಅತ್ಯುತ್ತಮವಾದ ಆರಂಭದ ಹೆಜ್ಜೆಯಾಗಿರುತ್ತದೆ. ಆ ಹೆಜ್ಜೆಯನ್ನಿಡುವ ಮೂಲಕ ಬಲುದೂರದ ಓಟದ ಪಂದ್ಯವೊಂದಕ್ಕೆ ನೀವು ಸೇರುತ್ತೀರಿ. ಆ ಪಂದ್ಯದ ಬಹುಮಾನಗಳೆಂದರೆ ನಿತ್ಯಜೀವ ಹಾಗೂ ದೇವರ ಚಿತ್ತವನ್ನು ಮಾಡುವಾಗ ನಿಮಗೆ ದೊರೆಯುವ ಆನಂದವಾಗಿದೆ. (ಇಬ್ರಿ. 12:2, 3) ನೀವು ಆ ಹೆಜ್ಜೆಯನ್ನು ತೆಗೆದುಕೊಳ್ಳುವ ಮೂಲಕ ಈಗಾಗಲೇ ಆ ಪಂದ್ಯದಲ್ಲಿ ಓಡುತ್ತಿರುವ ನಿಮ್ಮ ಕುಟುಂಬದವರಿಗೂ ಕ್ರೈಸ್ತ ಸಭೆಯಲ್ಲಿರುವ ನಿಮ್ಮ ಸ್ನೇಹಿತರಿಗೂ ಸಂತೋಷವನ್ನು ಉಂಟುಮಾಡುವಿರಿ. ಎಲ್ಲಕ್ಕಿಂತಲೂ ಮಿಗಿಲಾಗಿ ಯೆಹೋವನ ಹೃದಯವನ್ನು ಉಲ್ಲಾಸಪಡಿಸುತ್ತೀರಿ. (ಜ್ಞಾನೋಕ್ತಿ 23:15 ಓದಿ.) ನೀವೇಕೆ ಯೆಹೋವನನ್ನು ಆರಾಧಿಸಲು ಆಯ್ಕೆಮಾಡಿದ್ದೀರಿ ಎಂದು ಇತರರಿಗೆ ಅರ್ಥವಾಗದಿರಬಹುದು ನಿಜ. ಆ ಕುರಿತು ಅವರು ನಿಮ್ಮನ್ನು ಪ್ರಶ್ನಿಸಲೂಬಹುದು. ಅಷ್ಟೇಕೆ, ಅವರು ನಿಮ್ಮ ಆಯ್ಕೆಯನ್ನು ವಿರೋಧಿಸಲೂಬಹುದು. ಆದರೆ, ಆ ಎಲ್ಲ ಸವಾಲುಗಳನ್ನು ನೀವು ಯಶಸ್ವಿಯಾಗಿ ನಿಭಾಯಿಸಬಲ್ಲಿರಿ.
ಇತರರು ನಿಮ್ಮನ್ನು ಪ್ರಶ್ನಿಸುವಾಗ ಇಲ್ಲವೆ ವಿರೋಧಿಸುವಾಗ
10 ಯೆಹೋವನಿಗೆ ಸೇವೆಸಲ್ಲಿಸುವ ನಿಮ್ಮ ನಿರ್ಧಾರವು ನಿಮ್ಮ ಸಹಪಾಠಿಗಳನ್ನು, ನೆರೆಹೊರೆಯವರನ್ನು ಮತ್ತು ಬಂಧುಗಳನ್ನು ತಬ್ಬಿಬ್ಬುಗೊಳಿಸಬಹುದು. ಈ ಜೀವನಮಾರ್ಗವನ್ನೇಕೆ ಆರಿಸಿಕೊಂಡಿದ್ದೀರಿ ಎಂದು ಅವರು ಕೇಳಬಹುದು. ನಿಮ್ಮ ನಂಬಿಕೆಯ ಕುರಿತು ಸಹ ಪ್ರಶ್ನೆಗಳನ್ನು ಕೇಳಬಹುದು. ಅಂಥ ಸಂದರ್ಭಗಳಲ್ಲಿ ನೀವು ಹೇಗೆ ಪ್ರತಿಕ್ರಿಯಿಸಬೇಕು? ಖಂಡಿತವಾಗಿಯೂ, ನಿಮ್ಮ ನಿರ್ಧಾರಕ್ಕೆ ಕಾರಣಗಳನ್ನು ವಿವರಿಸಬೇಕಾದರೆ, ಏನೆಲ್ಲಾ ಯೋಚಿಸಿದ್ದೀರಿ ಮತ್ತು ಯಾವೆಲ್ಲಾ ಅನಿಸಿಕೆಗಳು ನಿಮಗುಂಟಾಯಿತು ಎಂಬುದನ್ನು ನೀವು ವಿಮರ್ಶಿಸಿ ನೋಡಬೇಕಾಗುತ್ತದೆ. ಮಾತ್ರವಲ್ಲ, ನಿಮ್ಮ ನಂಬಿಕೆಯ ಕುರಿತು ಉತ್ತರಿಸುವಾಗ ಯೇಸುವಿನ ಮಾದರಿಯನ್ನು ಅನುಸರಿಸುವುದಕ್ಕಿಂತ ಉತ್ತಮವಾದ ಇನ್ನೊಂದು ಮಾದರಿ ಯಾವುದಿದೆ?
11 ಯೆಹೂದಿ ಧಾರ್ಮಿಕ ಮುಖಂಡರು ಪುನರುತ್ಥಾನದ ಕುರಿತು ಯೇಸುವನ್ನು ಪ್ರಶ್ನಿಸಿದಾಗ ಅವರು ಪರಿಗಣಿಸದಿದ್ದ ಶಾಸ್ತ್ರವಚನದ ಕಡೆಗೆ ಅವರ ಗಮನವನ್ನು ಅವನು ನಿರ್ದೇಶಿಸಿದನು. (ವಿಮೋ. 3:6; ಮತ್ತಾ. 22:23, 31-33) ಶಾಸ್ತ್ರಿಯೊಬ್ಬನು ಎಲ್ಲಾ ಆಜ್ಞೆಗಳಲ್ಲಿ ಯಾವುದು ಮೊದಲನೆಯದು ಎಂದು ಯೇಸುವನ್ನು ಕೇಳಿದಾಗ ಅದಕ್ಕೆ ಉತ್ತರವಾಗಿ ಅವನು ಬೈಬಲಿನಿಂದ ಸೂಕ್ತವಾದ ವಚನಗಳನ್ನು ಉದ್ಧರಿಸಿದನು. ಆ ಮನುಷ್ಯನು ಯೇಸುವಿನ ಉತ್ತರಕ್ಕೆ ಕೃತಜ್ಞತೆಯನ್ನು ಸೂಚಿಸಿದನು. (ಯಾಜ. 19:18; ಧರ್ಮೋ. 6:5; ಮಾರ್ಕ 12:28-34) ಯೇಸು ಶಾಸ್ತ್ರವಚನಗಳನ್ನು ಉಪಯೋಗಿಸಿದ ವಿಧದಿಂದ ಮತ್ತು ಮಾತಾಡಿದ ವಿಧದಿಂದ “ಜನರಲ್ಲಿ . . . ಭೇದ ಉಂಟಾಯಿತು” ಮತ್ತು ಅವನ ವಿರೋಧಿಗಳು ಅವನಿಗೆ ಹಾನಿಮಾಡಲಾರದೆ ಹೋದರು. (ಯೋಹಾ. 7:32-46) ನಿಮ್ಮ ನಂಬಿಕೆಯ ಕುರಿತು ನೀವು ಉತ್ತರಿಸುವಾಗ ಬೈಬಲನ್ನು ಉಪಯೋಗಿಸಿ ಮತ್ತು “ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ” ಅಂದರೆ ಗೌರವದಿಂದಲೂ ಮಾತಾಡಿರಿ. (1 ಪೇತ್ರ 3:15) ಯಾವುದಾದರೂ ಒಂದು ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿರುವಲ್ಲಿ ಅದನ್ನು ಒಪ್ಪಿಕೊಳ್ಳಿ ಮತ್ತು ಸಂಶೋಧನೆ ಮಾಡಿ ತಿಳಿಸುವುದಾಗಿ ಹೇಳಿ. ಅನಂತರ ನೀವು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ ಅಥವಾ ವಾಚ್ಟವರ್ ಲೈಬ್ರರಿ ಆನ್ ಸಿಡಿ-ರಾಮ್ನಲ್ಲಿ ಆ ವಿಷಯದ ಕುರಿತು ಹುಡುಕಿ. ಒಳ್ಳೆಯ ತಯಾರಿಮಾಡುವುದಾದರೆ, ನೀವು “ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.”—ಕೊಲೊ. 4:6.
12 ನಿಮ್ಮ ನಿರ್ಧಾರ ಮತ್ತು ನಂಬಿಕೆಯ ಕುರಿತು ಕೇವಲ ಜನರು ಕೇಳುವ ಪ್ರಶ್ನೆಗಳಿಗಿಂತ ಹೆಚ್ಚಿನದನ್ನು ನೀವು ಎದುರಿಸಬೇಕಾಗಬಹುದು. ಯಾಕೆಂದರೆ, ಈ ಲೋಕವು ದೇವರ ವೈರಿಯಾಗಿರುವ ಪಿಶಾಚನಾದ ಸೈತಾನನ ಕೈಯಲ್ಲಿದೆ. (1 ಯೋಹಾನ 5:19 ಓದಿ.) ಪ್ರತಿಯೊಬ್ಬರು ನಿಮ್ಮನ್ನು ಶ್ಲಾಘಿಸುತ್ತಾರೆ ಮತ್ತು ನೀವು ಮಾಡಿದ್ದು ಸರಿಯೆಂದು ಹೇಳುತ್ತಾರೆಂದು ನಿರೀಕ್ಷಿಸಿದರೆ ಅದು ಬರಿಯ ಕಲ್ಪನೆಯಾಗಿರುವುದಷ್ಟೆ. ಅಲ್ಲದೆ, ನೀವು ವಿರೋಧವನ್ನೂ ಎದುರಿಸಬೇಕಾಗಬಹುದು. ಕೆಲವರು ‘ನಿಮ್ಮನ್ನು ದೂಷಿಸಬಹುದು,’ ಅವರ ದೂಷಣೆ ಒಂದೆರಡು ಸಲಕ್ಕೆ ನಿಲ್ಲದೆ ಮುಂದುವರಿಯಲೂಬಹುದು. (1 ಪೇತ್ರ 4:4) ಆದರೆ, ಇಂಥ ಪರಿಸ್ಥಿತಿಯನ್ನು ಎದುರಿಸುತ್ತಿರುವವರು ನೀವೊಬ್ಬರೇ ಅಲ್ಲವೆಂದು ನೆನಪಿನಲ್ಲಿಡಿ. ಯೇಸು ಸಹ ಹಿಂಸೆಗೊಳಗಾಗಿದ್ದನು. ಅಪೊಸ್ತಲ ಪೇತ್ರನೂ ಹಿಂಸೆಗೊಳಗಾಗಿದ್ದನು. ಅವನು ಬರೆದುದು: “ಪ್ರಿಯರೇ, ನೀವು ಪರಿಶೋಧನೆಗಾಗಿ ಪುಟಕ್ಕೆ ಹಾಕಲ್ಪಟ್ಟದ್ದಕ್ಕೆ ಆಶ್ಚರ್ಯಪಡಬೇಡಿರಿ; ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ. ಆದರೆ ನೀವು ಎಷ್ಟರ ಮಟ್ಟಿಗೂ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷವುಳ್ಳವರಾಗಿರ್ರಿ; ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ.”—1 ಪೇತ್ರ 4:12, 13.
ಲೂಕ 6:26) ನೀವು ಎದುರಿಸುವ ಹಿಂಸೆಯು ಸೈತಾನನಿಗೂ ಅವನ ಲೋಕಕ್ಕೂ ನಿಮ್ಮ ಮೇಲೆ ಸಿಟ್ಟಿದೆ ಎಂಬುದನ್ನು ತೋರಿಸುತ್ತದೆ. ಏಕೆಂದರೆ, ನೀವು ಸೇವೆಸಲ್ಲಿಸುತ್ತಿರುವುದು ಯೆಹೋವನಿಗಾಗಿದೆ. (ಮತ್ತಾಯ 5:11, 12 ಓದಿ.) ‘ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾಗುವುದು’ ಸಂತೋಷದ ವಿಷಯವೇ.—1 ಪೇತ್ರ 4:14.
13 ಕ್ರೈಸ್ತರಾಗಿರುವ ಕಾರಣ ಹಿಂಸೆ ಅಥವಾ ವಿರೋಧವನ್ನು ನೀವು ಸಹಿಸಿಕೊಳ್ಳಬೇಕಾದರೆ, ಅದಕ್ಕಾಗಿ ಸಂತೋಷಪಡಿರಿ. ಏಕೆ? ಏಕೆಂದರೆ, ಲೋಕ ನಿಮ್ಮನ್ನು ಮೆಚ್ಚಿದರೆ ನೀವು ಸೈತಾನನ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸುತ್ತಿದ್ದೀರಿ, ದೇವರ ಮಟ್ಟಗಳಿಗೆ ಅನುಗುಣವಾಗಿ ಅಲ್ಲವೆಂದು ಅದು ಸೂಚಿಸುತ್ತದೆ. ಯೇಸು ಎಚ್ಚರಿಸಿದ್ದು: “ಜನರೆಲ್ಲಾ ನಿಮ್ಮನ್ನು ಹೊಗಳಿದರೆ ನಿಮ್ಮ ಗತಿಯನ್ನು ಏನು ಹೇಳಲಿ! ಅವರ ಪಿತೃಗಳು ಸುಳ್ಳುಪ್ರವಾದಿಗಳನ್ನು ಹಾಗೆಯೇ ಹೊಗಳಿದರು.” (14 ವಿರೋಧದ ಮಧ್ಯೆಯೂ ನೀವು ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವಾಗ ಕಡಿಮೆಯೆಂದರೆ ನಾಲ್ಕು ಪ್ರಯೋಜನಗಳನ್ನು ಪಡೆಯುವಿರಿ. ನೀವು ದೇವರ ಹಾಗೂ ಆತನ ಮಗನ ಕುರಿತು ಸಾಕ್ಷಿಯನ್ನು ಕೊಡುತ್ತೀರಿ. ನೀವು ನಂಬಿಗಸ್ತಿಕೆಯಿಂದ ತಾಳಿಕೊಳ್ಳುವುದು ನಿಮ್ಮ ಕ್ರೈಸ್ತ ಸಹೋದರ ಸಹೋದರಿಯರನ್ನು ಪ್ರೋತ್ಸಾಹಿಸುತ್ತದೆ. ಯೆಹೋವನ ಕುರಿತು ಏನೂ ತಿಳಿಯದೆ ಇರುವ ಕೆಲವು ಜನರು ನಿಮ್ಮನ್ನು ಗಮನಿಸಿ ಆತನನ್ನು ಹುಡುಕಲು ಪ್ರಚೋದಿಸಲ್ಪಡಬಹುದು. (ಫಿಲಿಪ್ಪಿ 1:12-14 ಓದಿ.) ಕಷ್ಟಗಳನ್ನು ಸಹಿಸಿಕೊಳ್ಳಲು ಯೆಹೋವನು ಬಲ ಒದಗಿಸುವುದನ್ನು ನೀವು ಅನುಭವದಿಂದ ಕಂಡುಕೊಳ್ಳುವಾಗ, ಆತನ ಮೇಲಿರುವ ನಿಮ್ಮ ಪ್ರೀತಿಯು ಇನ್ನಷ್ಟು ಅಧಿಕವಾಗುತ್ತದೆ.
“ಮಹಾಸಂದರ್ಭವು” ನಿಮ್ಮ ಮುಂದಿದೆ
15 ಎಫೆಸದಲ್ಲಿನ ತನ್ನ ಶುಶ್ರೂಷೆಯ ಕುರಿತು ಅಪೊಸ್ತಲ ಪೌಲನು ಬರೆದುದು: “ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭವು ನನಗುಂಟು.” (1 ಕೊರಿಂ. 16:8, 9) ಅದು ಆ ಪಟ್ಟಣದಲ್ಲಿ ಸುವಾರ್ತೆ ಸಾರಲಿಕ್ಕಾಗಿ ಮತ್ತು ಶಿಷ್ಯರನ್ನು ಮಾಡಲಿಕ್ಕಾಗಿದ್ದ ಅವಕಾಶವಾಗಿತ್ತು. ಆ ಮಹಾಸಂದರ್ಭವನ್ನು ಸದುಪಯೋಗಿಸಿಕೊಳ್ಳುವ ಮೂಲಕ, ಅನೇಕರು ಯೆಹೋವನ ಕುರಿತು ಕಲಿತುಕೊಳ್ಳುವಂತೆ ಮತ್ತು ಆತನನ್ನು ಆರಾಧಿಸುವಂತೆ ಪೌಲನು ಸಹಾಯಮಾಡಿದನು.
16 ಮಹಿಮಾನ್ವಿತನಾದ ಯೇಸು ಕ್ರಿಸ್ತನು 1919ರಲ್ಲಿ ಅಭಿಷಿಕ್ತ ಉಳಿಕೆಯವರ ಮುಂದೆ ಅವಕಾಶದ ‘ಒಂದು ಬಾಗಿಲನ್ನು ತೆರೆದಿಟ್ಟನು.’ (ಪ್ರಕ. 3:8) ಅವರು ಆ ಬಾಗಿಲನ್ನು ಪ್ರವೇಶಿಸಿ, ಹಿಂದೆಂದಿಗಿಂತಲೂ ಹೆಚ್ಚಾದ ಹುರುಪಿನಿಂದ ಸುವಾರ್ತೆಯನ್ನು ಸಾರಿ ಬೈಬಲ್ ಸತ್ಯಗಳನ್ನು ಬೋಧಿಸಲು ಆರಂಭಿಸಿದರು. ಅವರ ಶುಶ್ರೂಷೆಯ ಫಲಿತಾಂಶವೇನಾಗಿದೆ? ಇಂದು ಸುವಾರ್ತೆಯು ಭೂಮಿಯ ಮೂಲೆಮೂಲೆಗೂ ತಲಪಿದೆ. ಮಾತ್ರವಲ್ಲ, ಸುಮಾರು ಎಪ್ಪತ್ತು ಲಕ್ಷದಷ್ಟು ಜನರು ದೇವರ ನೂತನ ಲೋಕದಲ್ಲಿ ನಿತ್ಯಜೀವವನ್ನು ಪಡೆಯುವ ನಿರೀಕ್ಷೆಯುಳ್ಳವರಾಗಿದ್ದಾರೆ.
17 “ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭವು” ಇನ್ನು ಸಹ ಯೆಹೋವನ ಸೇವಕರೆಲ್ಲರ ಮುಂದಿದೆ. ಆ ಸಂದರ್ಭವನ್ನು ಸದುಪಯೋಗಿಸಿ ಸುವಾರ್ತೆ ಸಾರುವ ಕೆಲಸದಲ್ಲಿ ಅಧಿಕವಾಗಿ ಪಾಲ್ಗೊಳ್ಳುವವರು ಸಂತೋಷ ಹಾಗೂ ಸಂತೃಪ್ತಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಯೆಹೋವನ ಎಳೆಯ ಸೇವಕರೇ, ‘ಸುವಾರ್ತೆಯನ್ನು ನಂಬುವಂತೆ’ ಇತರರಿಗೆ ಸಹಾಯಮಾಡುವ ಈ ಸುವರ್ಣಾವಕಾಶವನ್ನು ನೀವೆಷ್ಟು ಮಾನ್ಯಮಾಡುತ್ತೀರಿ? (ಮಾರ್ಕ 1:14, 15) ರೆಗ್ಯುಲರ್ ಪಯನೀಯರ್ ಅಥವಾ ಆಕ್ಸಿಲಿಯರಿ ಪಯನಿಯರ್ ಸೇವೆಯನ್ನು ಮಾಡುವುದರ ಬಗ್ಗೆ ನೀವು ಆಲೋಚಿಸಿದ್ದೀರೋ? ನಿಮ್ಮಲ್ಲಿ ಅನೇಕರಿಗೆ, ರಾಜ್ಯ ಸಭಾಗೃಹ ನಿರ್ಮಾಣ, ಬೆತೆಲ್ ಸೇವೆ ಮತ್ತು ಮಿಷನೆರಿ ಸೇವೆ ಮುಂತಾದ ಇತರ ಸದವಕಾಶಗಳು ಸಹ ತೆರೆದಿಡಲ್ಪಟ್ಟಿವೆ. ಸೈತಾನನ ಈ ದುಷ್ಟಲೋಕಕ್ಕೆ ನಾಶನದ ಸಮಯವು ಹತ್ತಿರವಿರುವುದರಿಂದ, ರಾಜ್ಯದ ಸೇವೆಯ ಈ ಕ್ಷೇತ್ರಗಳನ್ನು ಪ್ರವೇಶಿಸುವುದು ದಿನದಿನಕ್ಕೂ ಅತಿ ತುರ್ತಿನದ್ದಾಗಿದೆ. ಕಾಲವು ಇನ್ನೂ ಮಿಂಚಿಲ್ಲದಿರುವಾಗ ಈ “ಮಹಾಸಂದರ್ಭ”ವನ್ನು ನೀವು ಸದುಪಯೋಗಿಸಿಕೊಳ್ಳುವಿರೋ?
“ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ”
18 “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ಕೀರ್ತ. 34:8) ಪುರಾತನ ಇಸ್ರಾಯೇಲಿನ ರಾಜ ದಾವೀದನು ಬಾಲ್ಯದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ಯೆಹೋವನು ಅವನನ್ನು ಕ್ರೂರ ಪ್ರಾಣಿಗಳಿಂದ ಸಂರಕ್ಷಿಸಿದನು. ಗೊಲ್ಯಾತನೊಂದಿಗಿನ ಯುದ್ಧದಲ್ಲಿ ದೇವರು ಅವನಿಗೆ ಬೆಂಬಲ ನೀಡಿದನು ಮತ್ತು ಇತರ ಕಷ್ಟಗಳ ಸಮಯಗಳಲ್ಲಿಯೂ ಅವನನ್ನು ಕಾಪಾಡಿದನು. (1 ಸಮು. 17:32-51; ಕೀರ್ತ. 18, ಮೇಲ್ಬರಹ) ದೇವರ ಮಹಾ ಪ್ರೀತಿಪೂರ್ವಕ ದಯೆಯಿಂದಾಗಿ ದಾವೀದನು ಹೀಗೆ ಬರೆಯುವಂತೆ ಪ್ರೇರಿತನಾದನು: “ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ.”—ಕೀರ್ತ. 40:5.
ನೋಡಿರಿ” ಎಂದು ಪ್ರೇರಿತ ಕೀರ್ತನೆಗಾರನು ಇತರರನ್ನು ಆಮಂತ್ರಿಸಿದನು. (19 ದಾವೀದನು ಯೆಹೋವನನ್ನು ಗಾಢವಾಗಿ ಪ್ರೀತಿಸಿದನು. ತನ್ನ ಪೂರ್ಣಹೃದಯದಿಂದಲೂ ಮನಸ್ಸಿನಿಂದಲೂ ಆತನನ್ನು ಸ್ತುತಿಸಲು ಇಷ್ಟಪಟ್ಟನು. (ಕೀರ್ತನೆ 40:8-10 ಓದಿ.) ವರ್ಷಗಳು ದಾಟಿದರೂ ಸತ್ಯದೇವರನ್ನು ಆರಾಧನೆ ಮಾಡಿದ್ದಕ್ಕಾಗಿ ದಾವೀದನು ಎಂದಿಗೂ ವಿಷಾದಿಸಲಿಲ್ಲ. ದೇವಭಕ್ತಿಯೊಂದಿಗೆ ಜೀವಿಸುವುದೇ ಅವನ ದೊಡ್ಡ ಆಸ್ತಿಯಾಗಿತ್ತು. ಅದರಿಂದ ದೊರೆತ ಸಂತೋಷಕ್ಕೆ ಯಾವುದೂ ಸರಿಸಾಟಿಯಾಗಿರಲಿಲ್ಲ. ತನ್ನ ಮುದಿಪ್ರಾಯದಲ್ಲಿ ಅವನು ಹೇಳಿದ್ದು: “ಕರ್ತನಾದ ಯೆಹೋವನೇ, ಬಾಲ್ಯಾರಭ್ಯ ನನ್ನ ನಿರೀಕ್ಷೆಯೂ ಭರವಸವೂ ನೀನಲ್ಲವೋ? ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ.” (ಕೀರ್ತ. 71:5, 18) ದಾವೀದನ ಶಾರೀರಿಕ ಬಲವು ಕುಂದಿ ಹೋಗಿದ್ದರೂ, ಯೆಹೋವನಲ್ಲಿ ಅವನಿಟ್ಟಿದ್ದ ಭರವಸೆ ಮತ್ತು ಸ್ನೇಹ ಅತಿ ಬಲವುಳ್ಳದ್ದಾಗಿತ್ತು.
20 ನಿಮ್ಮ ಜೀವನವನ್ನು ಅತ್ಯುತ್ತಮವಾಗಿ ಉಪಯೋಗಿಸುವ ವಿಧ ಯೆಹೋವನಿಗೆ ಸೇವೆಸಲ್ಲಿಸುವುದಾಗಿದೆ ಎಂಬುದಕ್ಕೆ ಇನ್ನಷ್ಟು ರುಜುವಾತನ್ನು ಯೆಹೋಶುವ, ದಾವೀದ ಮತ್ತು ತಿಮೊಥೆಯರ ಜೀವನಚರಿತ್ರೆಯು ತೋರಿಸಿಕೊಟ್ಟಿತು. ‘ಯೆಹೋವನನ್ನು ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ಸೇವಿಸುವುದರಿಂದ’ ದೊರೆಯುವ ಬಹುಕಾಲದ ಪ್ರಯೋಜನಗಳ ಮುಂದೆ ಈ ಲೋಕದ ಐಹಿಕ ಉದ್ಯೋಗಗಳಿಂದ ಸಿಗುವ ಅಲ್ಪಕಾಲಿಕ ಪ್ರಯೋಜನಗಳು ಏನೂ ಅಲ್ಲ. (ಯೆಹೋ. 22:5) ನೀವು ಇನ್ನೂ ಯೆಹೋವನಿಗೆ ಪ್ರಾರ್ಥನೆಯ ಮೂಲಕ ಸಮರ್ಪಣೆಯನ್ನು ಮಾಡಿಕೊಂಡಿರದಿರುವಲ್ಲಿ ಹೀಗೆ ಕೇಳಿಕೊಳ್ಳಿ: ‘ಒಬ್ಬ ಯೆಹೋವನ ಸಾಕ್ಷಿಯಾಗದಂತೆ ನನ್ನನ್ನು ಯಾವುದು ತಡೆಯುತ್ತಿದೆ?’ ನೀವು ಈಗಾಗಲೇ ಯೆಹೋವನ ಸ್ನಾನಿತ ಆರಾಧಕರಾಗಿರುವಲ್ಲಿ, ಇನ್ನಷ್ಟು ಸಂತೋಷದಿಂದ ಜೀವಿಸಲು ಬಯಸುತ್ತೀರೋ? ಹಾಗಿರುವಲ್ಲಿ, ನಿಮ್ಮ ಶುಶ್ರೂಷೆಯನ್ನು ಹೆಚ್ಚಿಸಿ ಮತ್ತು ಸತತವಾಗಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿ. ಪೌಲನ ಮಾದರಿಯನ್ನು ಅನುಸರಿಸುವ ಮೂಲಕ ನೀವು ಹೇಗೆ ಆಧ್ಯಾತ್ಮಿಕವಾಗಿ ಪ್ರಗತಿಮಾಡಸಾಧ್ಯವಿದೆ ಎಂಬುದನ್ನು ಮುಂದಿನ ಲೇಖನವು ಚರ್ಚಿಸುತ್ತದೆ.
ನೀವು ಹೇಗೆ ಉತ್ತರಿಸುವಿರಿ?
• ನಾವೇಕೆ ದೇವರಿಗೆ ಸೇವೆಸಲ್ಲಿಸಬೇಕು ಎಂಬುದಕ್ಕೆ ಎರಡು ಕಾರಣ ಕೊಡಿ.
• ದೇವರಿಗೆ ಸೇವೆಸಲ್ಲಿಸುವ ನಿರ್ಧಾರವನ್ನು ಮಾಡಲು ತಿಮೊಥೆಯನಿಗೆ ಯಾವುದು ನೆರವಾಯಿತು?
• ಹಿಂಸೆಯನ್ನು ಎದುರಿಸುವಾಗಲೂ ನೀವು ದೃಢವಾಗಿ ನಿಲ್ಲಬೇಕು ಯಾಕೆ?
• ಯಾವ ಸೇವಾವಕಾಶಗಳನ್ನು ನೀವು ಸದುಪಯೋಗಿಸಬಹುದು?
[ಅಧ್ಯಯನ ಪ್ರಶ್ನೆಗಳು]
1. ತನ್ನ ಯುವಸಾಕ್ಷಿಗಳ ಸೇವೆಯನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ?
2. ಇಂದಿನ ಯುವಜನರು ತಮ್ಮ ಭವಿಷ್ಯತ್ತಿನ ಕುರಿತು ಯಾವ ಒತ್ತಡಗಳನ್ನು ಎದುರಿಸುತ್ತಾರೆ?
3. ಯೆಹೋವನ ಸೃಷ್ಟಿಯು ಏನು ಮಾಡುವಂತೆ ನಮ್ಮನ್ನು ಪ್ರೇರೇಪಿಸಬೇಕು?
4, 5. ಯಾವ ದೈವಿಕ ಕಾರ್ಯಗಳು ಯೆಹೋಶುವನನ್ನು ಯೆಹೋವನ ಸಮೀಪಕ್ಕೆ ಬರಮಾಡಿದವು?
6. ದೇವರಿಗೆ ಸೇವೆಸಲ್ಲಿಸುವ ಹಂಬಲವನ್ನು ಬೆಳೆಸಿಕೊಳ್ಳುವಂತೆ ನಿಮಗೆ ಯಾವುದು ಸಹಾಯಮಾಡುವುದು?
7. ನೀರಿನ ದೀಕ್ಷಾಸ್ನಾನ ಪಡೆದುಕೊಳ್ಳುವುದು ಏಕೆ ಒಂದು ಪ್ರಾಮುಖ್ಯ ಹೆಜ್ಜೆಯಾಗಿದೆ?
8. ತಿಮೊಥೆಯನು ದೇವರನ್ನು ಆರಾಧಿಸುವ ಆಯ್ಕೆಯನ್ನು ಮಾಡಿದ್ದೇಕೆ ಮತ್ತು ಅಂತಹ ಒಂದು ನಿರ್ಣಯ ತೆಗೆದುಕೊಳ್ಳಲು ನೀವೇನು ಮಾಡಬೇಕಾಗಬಹುದು?
9. ನೀವು ದೀಕ್ಷಾಸ್ನಾನ ಪಡೆದುಕೊಂಡಾಗ ಬೇರೆಯವರು ಹೇಗೆ ಪ್ರತಿಕ್ರಿಯಿಸಬಹುದು?
10, 11. (ಎ) ದೇವರಿಗೆ ಸೇವೆಸಲ್ಲಿಸುವ ನಿಮ್ಮ ನಿರ್ಧಾರದ ಕುರಿತು ಜನರು ಯಾವ ಪ್ರಶ್ನೆಗಳನ್ನು ಕೇಳಬಹುದು? (ಬಿ) ಸತ್ಯಾರಾಧನೆಯ ಕುರಿತು ಕೇಳಲ್ಪಟ್ಟ ಪ್ರಶ್ನೆಗಳಿಗೆ ಯೇಸು ಉತ್ತರಿಸಿದ ವಿಧದಿಂದ ನೀವೇನನ್ನು ಕಲಿಯಬಲ್ಲಿರಿ?
12. ಹಿಂಸೆ ಬಂದಾಗ ನೀವು ನಿರುತ್ತೇಜನಗೊಳ್ಳಬಾರದೇಕೆ?
13. ಕ್ರೈಸ್ತರು ಹಿಂಸೆಗೊಳಗಾದಾಗ ಸಂತೋಷದಿಂದಿರಬಲ್ಲರು ಏಕೆ?
14. ಹಿಂಸೆಯ ಮಧ್ಯೆಯೂ ಒಬ್ಬನು ಯೆಹೋವನಿಗೆ ನಂಬಿಗಸ್ತನಾಗಿ ಉಳಿಯುವುದಾದರೆ ಯಾವ ಒಳ್ಳೆಯ ಪ್ರಯೋಜನ ದೊರೆಯುತ್ತದೆ?
15. ಅಪೊಸ್ತಲ ಪೌಲನಿಗೆ ಯಾವ “ಮಹಾಸಂದರ್ಭವು” ದೊರಕಿತ್ತು?
16. ಇಸವಿ 1919ರಲ್ಲಿ ಅವಕಾಶದ ‘ಬಾಗಿಲು ತೆರೆದಿಡಲ್ಪಟ್ಟಾಗ’ ಅಭಿಷಿಕ್ತ ಉಳಿಕೆಯವರು ಅದನ್ನು ಪ್ರವೇಶಿಸಿದ್ದು ಹೇಗೆ?
17. “ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭ”ವನ್ನು ನೀವು ಹೇಗೆ ಸದುಪಯೋಗಿಸಿಕೊಳ್ಳುವಿರಿ?
18, 19. (ಎ) ಯೆಹೋವನಿಗೆ ಸೇವೆಸಲ್ಲಿಸುವ ಬಲವಾದ ಇಚ್ಛೆಯನ್ನು ಬೆಳೆಸಿಕೊಳ್ಳುವಂತೆ ದಾವೀದನಿಗೆ ಯಾವುದು ಸಹಾಯಮಾಡಿತು? (ಬಿ) ದೇವರಿಗೆ ಸೇವೆಸಲ್ಲಿಸಿದ್ದಕ್ಕಾಗಿ ದಾವೀದನು ಎಂದಿಗೂ ವಿಷಾದಿಸಲಿಲ್ಲವೆಂದು ಯಾವುದು ತೋರಿಸಿಕೊಡುತ್ತದೆ?
20. ನಿಮ್ಮ ಜೀವನವನ್ನು ದೇವರಿಗೆ ಸೇವೆಸಲ್ಲಿಸಲಿಕ್ಕಾಗಿ ಉಪಯೋಗಿಸುವುದೇ ಅತ್ಯುತ್ತಮವೇಕೆ?
[ಪುಟ 18ರಲ್ಲಿರುವ ಚಿತ್ರ]
ಯೆಹೋವನಿಗೆ ಸೇವೆಸಲ್ಲಿಸುವುದೇ ಜೀವನದ ಅತ್ಯುತ್ತಮ ಆಯ್ಕೆಯಾಗಿದೆ
[ಪುಟ 19ರಲ್ಲಿರುವ ಚಿತ್ರ]
ನಿಮ್ಮ ನಂಬಿಕೆಯ ಕುರಿತು ಯಾರಾದರೂ ಪ್ರಶ್ನೆ ಕೇಳುವಲ್ಲಿ ನೀವು ಉತ್ತರಿಸಬಲ್ಲಿರೋ?