ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೆಯದನ್ನು ಮಾಡುತ್ತಾ ಇರಿ

ಒಳ್ಳೆಯದನ್ನು ಮಾಡುತ್ತಾ ಇರಿ

ಒಳ್ಳೆಯದನ್ನು ಮಾಡುತ್ತಾ ಇರಿ

“ಒಳ್ಳೆಯದನ್ನು ಮಾಡಿರಿ.”—ಲೂಕ 6:35, NIBV.

ಇತರರಿಗೆ ಒಳ್ಳೆಯದನ್ನು ಮಾಡುವುದು ಸುಲಭವೇನಲ್ಲ. ನಾವು ಯಾರಿಗೆ ಪ್ರೀತಿ ತೋರಿಸುತ್ತೇವೋ ಅವರು ನಮಗೆ ಪ್ರೀತಿ ತೋರಿಸಲಿಕ್ಕಿಲ್ಲ. ಭಾಗ್ಯಕರ ಇಲ್ಲವೇ ಸಂತೋಷದ ದೇವರ ಹಾಗೂ ಆತನ ಮಗನ “ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆ”ಯನ್ನು ತಿಳಿಸುವ ಮೂಲಕ ನಾವು ಜನರಿಗೆ ಆಧ್ಯಾತ್ಮಿಕ ಸಹಾಯ ಕೊಡಲು ಪ್ರಯತ್ನಿಸುತ್ತಿದ್ದರೂ ಅವರು ಉದಾಸೀನರೂ ಕೃತಘ್ನರೂ ಆಗಿರಬಹುದು. (1 ತಿಮೊ. 1:11) ಇನ್ನಿತರರು, ‘ಕ್ರಿಸ್ತನ ಶಿಲುಬೆ’ ಅಥವಾ ಯಾತನಾ ಕಂಬದ ‘ವಿರೋಧಿಗಳಾಗಿ’ ನಮ್ಮ ಮೇಲೆ ದ್ವೇಷಕಾರುತ್ತಿರಬಹುದು. (ಫಿಲಿ. 3:18) ಕ್ರೈಸ್ತರಾಗಿರುವ ನಾವು ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು?

2 ಯೇಸು ಕ್ರಿಸ್ತನು ತನ್ನ ಶಿಷ್ಯರಿಗಂದದ್ದು: “ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ [“ಒಳ್ಳೆಯದನ್ನು ಮಾಡಿರಿ,” NIBV].” (ಲೂಕ 6:35) ಈ ಬುದ್ಧಿವಾದವನ್ನು ನಾವೀಗ ಸೂಕ್ಷ್ಮವಾಗಿ ಪರಿಶೀಲಿಸೋಣ. ಇತರರಿಗೆ ಒಳ್ಳೆಯದನ್ನು ಮಾಡುವುದರ ಕುರಿತು ಯೇಸು ಹೇಳಿದ ಇತರ ಅಂಶಗಳನ್ನು ಪರಿಶೀಲಿಸುವುದರಿಂದಲೂ ನಮಗೆ ಪ್ರಯೋಜನವಾಗಲಿದೆ.

“ನಿಮ್ಮ ವೈರಿಗಳನ್ನು ಪ್ರೀತಿಸಿ”

3 ಯೇಸು ಸುಪ್ರಸಿದ್ಧ ಪರ್ವತ ಪ್ರಸಂಗದಲ್ಲಿ, ವೈರಿಗಳನ್ನು ಪ್ರೀತಿಸುವಂತೆಯೂ ಹಿಂಸಿಸುವವರಿಗೋಸ್ಕರ ಪ್ರಾರ್ಥಿಸುವಂತೆಯೂ ಹೇಳಿದನು. (ಮತ್ತಾಯ 5:43-45 ಓದಿ.) ಅವನ ಸಭಿಕರು ಯೆಹೂದ್ಯರಾಗಿದ್ದರು. ಇವರಿಗೆ, “ನಿಮ್ಮ ಸ್ವಜನರಲ್ಲಿ ಯಾರಿಗಾದರೂ ಕೇಡಿಗೆ ಕೇಡನ್ನು ಮಾಡದೆ ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳದೆ ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು” ಎಂಬ ದೇವರ ಆಜ್ಞೆ ಈ ಮುಂಚೆಯೇ ತಿಳಿದಿತ್ತು. (ಯಾಜ. 19:18) ಆದರೆ “ನಿಮ್ಮ ಸ್ವಜನ” ಮತ್ತು ‘ನಿಮ್ಮ ನೆರೆಯವರು’ ಕೇವಲ ಜೊತೆ ಯೆಹೂದ್ಯರಾಗಿದ್ದಾರೆ ಎಂಬುದು ಪ್ರಥಮ ಶತಮಾನದ ಯೆಹೂದಿ ಧಾರ್ಮಿಕ ಮುಖಂಡರ ಧೋರಣೆ ಆಗಿತ್ತು. ಇಸ್ರಾಯೇಲ್ಯರು ಇತರ ಜನಾಂಗಗಳವರಿಂದ ಪ್ರತ್ಯೇಕರಾಗಿರಬೇಕೆಂದು ಮೋಶೆಯ ಧರ್ಮಶಾಸ್ತ್ರ ಅವಶ್ಯಪಡಿಸಿದ್ದು ನಿಜ. ಆದರೆ, ಯೆಹೂದ್ಯರನ್ನು ಬಿಟ್ಟು ಉಳಿದವರೆಲ್ಲರೂ ವೈರಿಗಳು ಮತ್ತು ಅವರನ್ನು ದ್ವೇಷಿಸಬೇಕು ಎಂಬ ಅಭಿಪ್ರಾಯ ಕ್ರಮೇಣ ಬೆಳೆದುಬಂತು.

4 ಇದಕ್ಕೆ ತದ್ವಿರುದ್ಧವಾದ ಮಾತನ್ನು ಯೇಸು ಘೋಷಿಸಿದನು: “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ.” (ಮತ್ತಾ. 5:44) ಆತನ ಶಿಷ್ಯರು, ತಮ್ಮನ್ನು ದ್ವೇಷಿಸುತ್ತಿದ್ದ ಎಲ್ಲರೊಂದಿಗೂ ಪ್ರೀತಿಯಿಂದ ವರ್ತಿಸಬೇಕಿತ್ತು. ಲೂಕನ ಸುವಾರ್ತೆಯಲ್ಲಿ ತಿಳಿಸಲಾಗಿರುವಂತೆ ಯೇಸು ಹೀಗಂದನು: “ಕೇಳುವವರಾದ ನಿಮಗೆ ನಾನು ಹೇಳುವದೇನಂದರೆ—ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ [“ಒಳ್ಳೆಯದನ್ನು ಮಾಡಿರಿ,” NIBV]; ನಿಮ್ಮನ್ನು ಶಪಿಸುವವರಿಗೆ ಆಶೀರ್ವಾದಮಾಡಿರಿ; ನಿಮ್ಮನ್ನು ಬಯ್ಯುವವರಿಗೋಸ್ಕರ [“ಅವಮಾನಪಡಿಸುವವರಿಗೋಸ್ಕರ,” NIBV] ದೇವರನ್ನು ಪ್ರಾರ್ಥಿಸಿರಿ.” (ಲೂಕ 6:27, 28) ಯೇಸುವಿನ ಮಾತುಗಳನ್ನು ಕಾರ್ಯಗತಗೊಳಿಸಿದ ಪ್ರಥಮ ಶತಮಾನದವರಂತೆ, ನಾವು ಸಹ ‘ನಮ್ಮನ್ನು ಹಗೆಮಾಡುವವರೊಂದಿಗೆ’ ಸೌಜನ್ಯದಿಂದ ವರ್ತಿಸುತ್ತೇವೆ. ನಮ್ಮನ್ನು ‘ಶಪಿಸುವವರೊಂದಿಗೆ’ ದಯೆಯಿಂದ ಮಾತಾಡುವ ಮೂಲಕ ಅವರನ್ನು ‘ಆಶೀರ್ವದಿಸುತ್ತೇವೆ.’ ಮತ್ತು ನಮ್ಮನ್ನು ಶಾರೀರಿಕವಾಗಿ “ಹಿಂಸೆಪಡಿಸುವವರಿಗೋಸ್ಕರ” ಇಲ್ಲವೇ ಇತರ ರೀತಿಗಳಲ್ಲಿ ‘ಅವಮಾನಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸುತ್ತೇವೆ.’ ಈ ಬಿನ್ನಹಗಳು, ನಮ್ಮನ್ನು ಹಿಂಸಿಸುವವರ ಮನಸ್ಸು ಪರಿವರ್ತನೆಯಾಗಿ ಅವರು ಯೆಹೋವನ ಅನುಗ್ರಹಕ್ಕೆ ಪಾತ್ರರಾಗುವ ಕ್ರಿಯೆಗೈಯಲಿ ಎಂದು ನಾವು ಪ್ರೀತಿಯಿಂದ ಯೆಹೋವನಿಗೆ ಮಾಡುವ ವಿನಂತಿಗಳಾಗಿವೆ.

5 ನಮ್ಮ ವೈರಿಗಳನ್ನು ಏಕೆ ಪ್ರೀತಿಸಬೇಕು? “ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ” ಎಂದು ಯೇಸು ಹೇಳಿದನು. (ಮತ್ತಾ. 5:45) ಈ ಸಲಹೆಯನ್ನು ಪಾಲಿಸುವಲ್ಲಿ ನಾವು ದೇವರ ‘ಮಕ್ಕಳಾಗುತ್ತೇವೆ’ ಅಂದರೆ ಯೆಹೋವನನ್ನು ಅನುಕರಿಸುತ್ತೇವೆ. ಆತನು “ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” ಲೂಕನ ವೃತ್ತಾಂತದಲ್ಲಿ ತಿಳಿಸಲಾಗಿರುವಂತೆ ದೇವರು, “ಉಪಕಾರನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ.”—ಲೂಕ 6:35.

6 ಶಿಷ್ಯರು ‘ತಮ್ಮ ವೈರಿಗಳನ್ನು ಪ್ರೀತಿಸುವುದು’ ಎಷ್ಟು ಪ್ರಾಮುಖ್ಯ ಎಂಬುದಕ್ಕೆ ಒತ್ತುಕೊಡಲು ಯೇಸು ಹೀಗಂದನು: “ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ಫಲವೇನು? ಭ್ರಷ್ಟರೂ [“ಸುಂಕದವರೂ,” BSI ಪಾದಟಿಪ್ಪಣಿ] ಹಾಗೆ ಮಾಡುವದಿಲ್ಲವೇ. ನಿಮ್ಮ ಸಹೋದರರಿಗೆ ಮಾತ್ರ ನೀವು ಮರ್ಯಾದೆಕೊಟ್ಟರೆ [“ವಂದಿಸಿದರೆ,” NIBV] ಏನು ಹೆಚ್ಚು ಮಾಡಿದ ಹಾಗಾಯಿತು? ಅನ್ಯಜನಗಳು ಸಹ ಹಾಗೆ ಮಾಡುವದಿಲ್ಲವೇ.” (ಮತ್ತಾ. 5:46, 47) ನಮ್ಮ ಪ್ರೀತಿ ನಮ್ಮನ್ನು ಪ್ರೀತಿಸುವವರಿಗೆ ಮಾತ್ರ ಸೀಮಿತವಾಗಿದ್ದರೆ, ದೇವರಿಂದ ಯಾವುದೇ “ಫಲ” ಅಥವಾ ಅನುಗ್ರಹ ಪಡೆಯಲು ನಾವು ಯೋಗ್ಯರಲ್ಲ. ಸಾಮಾನ್ಯವಾಗಿ ಜನರು ತುಚ್ಛವಾಗಿ ಕಾಣುತ್ತಿದ್ದ ಸುಂಕದವರು ಸಹ ತಮಗೆ ಪ್ರೀತಿ ತೋರಿಸುತ್ತಿದ್ದವರನ್ನು ಪ್ರೀತಿಸುತ್ತಿದ್ದರು.—ಲೂಕ 5:30; 7:34.

7 ಯೆಹೂದ್ಯರ ಸಾಮಾನ್ಯ ವಂದನೆಯಲ್ಲಿ “ಸಮಾಧಾನ” ಎಂಬ ಪದ ಒಳಗೂಡಿತ್ತು. (ಯೋಹಾ. 20:19) ಇದು ವಂದಿಸಲಾಗುತ್ತಿದ್ದ ವ್ಯಕ್ತಿಗೆ ಉತ್ತಮ ಆರೋಗ್ಯ, ನೆಮ್ಮದಿ ಹಾಗೂ ಸಮೃದ್ಧಿ ಸಿಗಲಿ ಎಂಬ ಹಾರೈಕೆಯಾಗಿತ್ತು. ನಾವು ‘ಸಹೋದರರೆಂದು’ ಪರಿಗಣಿಸುವವರನ್ನು ಮಾತ್ರ ವಂದಿಸುವಲ್ಲಿ ಅದೇನೂ ‘ಹೆಚ್ಚು ಮಾಡಿದ’ ಹಾಗಾಗುವುದಿಲ್ಲ. ಏಕೆಂದರೆ ಯೇಸು ತಿಳಿಸಿದಂತೆ ಅದನ್ನು “ಅನ್ಯಜನಗಳೂ” ಮಾಡುತ್ತಾರೆ.

8 ಕ್ರಿಸ್ತನ ಶಿಷ್ಯರಲ್ಲೂ ಬಾಧ್ಯತೆಯಾಗಿ ಬಂದ ಪಾಪ ಇದ್ದ ಕಾರಣ, ಅವರು ಯಾವುದೇ ದೋಷವಿಲ್ಲದವರೂ ಪರಿಪೂರ್ಣರೂ ಆಗಿರುವುದು ಅಸಾಧ್ಯವಾಗಿತ್ತು. (ರೋಮಾ. 5:12) ಆದರೂ, ಯೇಸು ತನ್ನ ಪ್ರಸಂಗದ ಈ ಭಾಗವನ್ನು “ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆ ನೀವೂ ಪರಿಪೂರ್ಣರಾಗಿರಿ” ಎಂದು ಹೇಳಿ ಕೊನೆಗೊಳಿಸಿದನು. (ಮತ್ತಾ. 5:48, NIBV) ಹೀಗೆ ತನ್ನ ಕೇಳುಗರು, ತಮ್ಮ ಪ್ರೀತಿಯನ್ನು ಪರಿಪೂರ್ಣಗೊಳಿಸುವಂತೆ ಅಂದರೆ ತಮ್ಮ ವೈರಿಗಳನ್ನು ಪ್ರೀತಿಸುವ ಮೂಲಕ ‘ಪರಲೋಕದಲ್ಲಿರುವ ತಂದೆಯನ್ನು’ ಅನುಕರಿಸುವಂತೆ ಉತ್ತೇಜಿಸುತ್ತಿದ್ದನು. ನಮ್ಮಿಂದಲೂ ಇದನ್ನೇ ನಿರೀಕ್ಷಿಸಲಾಗಿದೆ.

ಕ್ಷಮಿಸುವವರಾಗಿರಬೇಕು ಏಕೆ?

9 ನಮ್ಮ ವಿರುದ್ಧ ಪಾಪಮಾಡುವವರನ್ನು ನಾವು ಕರುಣೆಯಿಂದ ಕ್ಷಮಿಸುವಾಗ ಒಳ್ಳೆಯದನ್ನು ಮಾಡುತ್ತಿದ್ದೇವೆ. ವಾಸ್ತವದಲ್ಲಿ ಯೇಸು ಕಲಿಸಿದ ಮಾದರಿ ಪ್ರಾರ್ಥನೆಯಲ್ಲಿ ಈ ಮಾತುಗಳಿವೆ: “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು.”—ಮತ್ತಾ. 6:12.

10 ಪಶ್ಚಾತ್ತಾಪಪಡುವ ಪಾಪಿಗಳನ್ನು ಉದಾರವಾಗಿ ಕ್ಷಮಿಸುವ ದೇವರನ್ನು ನಾವು ಅನುಕರಿಸಬೇಕು. ಅಪೊಸ್ತಲ ಪೌಲನು ಬರೆದದ್ದು: “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ.” (ಎಫೆ. 4:32; 5:1) ಕೀರ್ತನೆಗಾರ ದಾವೀದನು ಹಾಡಿದ್ದು: “ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು. . . . ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ. . . . ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ. ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.”—ಕೀರ್ತ. 103:8-14.

11 ಮನುಷ್ಯರು, ತಮ್ಮ ವಿರುದ್ಧ ಪಾಪಮಾಡಿದವರನ್ನು ಕ್ಷಮಿಸಿದರೆ ಮಾತ್ರ ದೇವರು ಅವರನ್ನು ಕ್ಷಮಿಸುವನು. (ಮಾರ್ಕ 11:25) ಈ ಅಂಶಕ್ಕೆ ಒತ್ತುಕೊಡುತ್ತಾ ಯೇಸು ಕೂಡಿಸಿ ಹೇಳಿದ್ದು: “ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವದಿಲ್ಲ.” (ಮತ್ತಾ. 6:14, 15) ಹೌದು, ಯಾರು ಇತರರನ್ನು ಉದಾರವಾಗಿ ಕ್ಷಮಿಸುತ್ತಾರೋ ಅಂಥವರಿಗೆ ಮಾತ್ರ ದೇವರು ಕ್ಷಮೆ ದಯಪಾಲಿಸುತ್ತಾನೆ. ಅಲ್ಲದೆ, ‘ಯೆಹೋವನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ’ ಎಂಬ ಪೌಲನ ಸಲಹೆಯನ್ನು ಅನ್ವಯಿಸುವುದು ಒಳ್ಳೆಯದನ್ನು ಮಾಡುತ್ತಾ ಇರುವ ಒಂದು ವಿಧಾನವೂ ಆಗಿದೆ.—ಕೊಲೊ. 3:13.

“ತೀರ್ಪುಮಾಡುವುದನ್ನು ನಿಲ್ಲಿಸಿ”

12 ಒಳ್ಳೆಯದನ್ನು ಮಾಡುವ ಇನ್ನೊಂದು ವಿಧ, “ನಿಮಗೆ ತೀರ್ಪಾಗದಂತೆ ನೀವು ತೀರ್ಪುಮಾಡುವುದನ್ನು ನಿಲ್ಲಿಸಿ” ಎಂದು ಪರ್ವತ ಪ್ರಸಂಗದಲ್ಲಿ ಯೇಸು ತನ್ನ ಕೇಳುಗರಿಗೆ ಹೇಳಿದ ಮಾತಿನಿಂದ ತಿಳಿದುಬರುತ್ತದೆ. (ಮತ್ತಾಯ 7:1, NW) ಅದಕ್ಕೆ ಒತ್ತುನೀಡಲು ಆತನೊಂದು ಪ್ರಬಲ ದೃಷ್ಟಾಂತ ಬಳಸಿದನು. (ಮತ್ತಾಯ 7:2-5 ಓದಿ.) “ತೀರ್ಪುಮಾಡುವುದನ್ನು ನಿಲ್ಲಿಸಿ” ಎಂದು ಯೇಸು ಹೇಳಿದಾಗ ಅದರರ್ಥ ಏನಾಗಿತ್ತು ಎಂಬುದನ್ನು ಪರಿಗಣಿಸೋಣ.

13 ಮತ್ತಾಯನಂತೆಯೇ, ಲೂಕನು ಸಹ ಯೇಸು ಹೀಗೆ ಹೇಳಿದ್ದನ್ನು ಉಲ್ಲೇಖಿಸುತ್ತಾನೆ: “ತೀರ್ಪುಮಾಡಬೇಡಿರಿ [“ತೀರ್ಪುಮಾಡುವುದನ್ನು ನಿಲ್ಲಿಸಿರಿ,” NW] ಆಗ ನಿಮಗೂ ತೀರ್ಪಾಗುವದಿಲ್ಲ; ಅಪರಾಧಿಯೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವದಿಲ್ಲ; ಬಿಡಿಸಿರಿ, ಆಗ ನಿಮ್ಮನ್ನು ಬಿಡಿಸುವರು.” (ಲೂಕ 6:37) ಪ್ರಥಮ ಶತಮಾನದ ಫರಿಸಾಯರು ಇತರರನ್ನು ಶಾಸ್ತ್ರಾಧಾರವಿಲ್ಲದ ಸಂಪ್ರದಾಯಗಳ ಆಧಾರದ ಮೇಲೆ ಕಠೋರವಾಗಿ ತೀರ್ಪುಮಾಡಿದರು. ಯೇಸುವಿನ ಕೇಳುಗರಲ್ಲಿ ಯಾರಾದರೂ ಹೀಗೆ ಮಾಡುತ್ತಿದ್ದಲ್ಲಿ ಅದನ್ನು ‘ನಿಲ್ಲಿಸುವಂತೆ’ ಆತನು ಸೂಚಿಸುತ್ತಿದ್ದನು. ಅದಕ್ಕೆ ಬದಲಾಗಿ ಅವರು ‘ಬಿಡಿಸಬೇಕಿತ್ತು’ ಅಂದರೆ ಇತರರ ಕುಂದುಕೊರತೆಗಳನ್ನು ಕ್ಷಮಿಸಬೇಕಿತ್ತು. ಅಪೊಸ್ತಲ ಪೌಲನು ಸಹ ಕ್ಷಮಿಸುವುದರ ಬಗ್ಗೆ ಈ ಮೇಲೆ ತೋರಿಸಲಾಗಿರುವ ಸಲಹೆ ಕೊಟ್ಟನು.

14 ಯೇಸುವಿನ ಶಿಷ್ಯರು ಕ್ಷಮಿಸುವ ಮೂಲಕ ಇತರರು ಸಹ ಕ್ಷಮಿಸುವವರಾಗುವಂತೆ ಪ್ರಚೋದಿಸಬಹುದಿತ್ತು. “ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು” ಎಂದು ಯೇಸು ಹೇಳಿದನು. (ಮತ್ತಾ. 7:2) ಇತರರೊಂದಿಗಿನ ನಮ್ಮ ನಡತೆಯ ವಿಷಯದಲ್ಲಿ ನಾವೇನನ್ನು ಬಿತ್ತುತ್ತೇವೋ ಅದನ್ನೇ ಕೊಯ್ಯುವೆವು.—ಗಲಾ. 6:7.

15 ಟೀಕಾತ್ಮಕರಾಗಿರುವುದು ಎಷ್ಟು ತಪ್ಪೆಂಬುದನ್ನು ತೋರಿಸಲಿಕ್ಕಾಗಿ ಯೇಸು ಹೀಗೆ ಕೇಳಿದ್ದನ್ನು ನೆನಪಿಗೆ ತನ್ನಿರಿ: “ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ? ನೀನು ನಿನ್ನ ಸಹೋದರನಿಗೆ—ನಿನ್ನ ಕಣ್ಣಿನೊಳಗಿಂದ ರವೆಯನ್ನು ತೆಗೆಯುತ್ತೇನೆ ಬಾ ಎಂದು ಹೇಳುವದು ಹೇಗೆ? ನಿನ್ನ ಕಣ್ಣಿನಲ್ಲಿ ತೊಲೆಯದೆಯಲ್ಲಾ.” (ಮತ್ತಾ. 7:3, 4) ಟೀಕಿಸುವ ಸ್ವಭಾವವುಳ್ಳ ವ್ಯಕ್ತಿಗೆ ಅವನ ಸಹೋದರನ “ಕಣ್ಣಿನಲ್ಲಿರುವ” ಅತಿ ಕ್ಷುಲ್ಲಕ ದೋಷವೂ ಕಾಣುತ್ತದೆ. ತನ್ನ ಸಹೋದರನಿಗೆ ವಿಷಯಗಳನ್ನು ಸರಿಯಾಗಿ ಗ್ರಹಿಸುವ ಸಾಮರ್ಥ್ಯವಿಲ್ಲ ಎಂದು ಈ ಟೀಕಾಕಾರನು ಸೂಚಿಸುತ್ತಿದ್ದಾನೆ. ಆ ಸಹೋದರನ ದೋಷ ರವೆಯಷ್ಟು ಕ್ಷುಲ್ಲಕವಾಗಿದ್ದರೂ ಇವನು, ‘ರವೆಯನ್ನು ತೆಗೆಯುತ್ತೇನೆ ಬಾ’ ಎಂದು ಹೇಳುತ್ತಾನೆ. ಹೀಗೆ, ವಿಷಯಗಳನ್ನು ಹೆಚ್ಚು ಸ್ಪಷ್ಟವಾಗಿ ಗ್ರಹಿಸುವಂತೆ ಆ ಸಹೋದರನಿಗೆ ಸಹಾಯ ಮಾಡುವೆ ಎಂದು ಇವನು ಕಪಟತನದಿಂದ ಮುಂದೆಬರುತ್ತಾನೆ.

16 ವಿಶೇಷವಾಗಿ ಯೆಹೂದಿ ಧಾರ್ಮಿಕ ಮುಖಂಡರು ಇತರರ ಬಗ್ಗೆ ತುಂಬ ಟೀಕಾತ್ಮಕರಾಗಿದ್ದರು. ದೃಷ್ಟಾಂತಕ್ಕಾಗಿ: ಕ್ರಿಸ್ತನು ವಾಸಿಮಾಡಿದ ಕುರುಡ ವ್ಯಕ್ತಿಯೊಬ್ಬನು, ಯೇಸು ದೇವರಿಂದ ಬಂದವನೆಂದು ಹೇಳಿದಾಗ ಫರಿಸಾಯರು ಸಿಟ್ಟಿನಿಂದ ಹೇಳಿದ್ದು: “ನೀನು ಕೇವಲ ಪಾಪದಲ್ಲಿ ಹುಟ್ಟಿದವನು, ನಮಗೆ ಉಪದೇಶಮಾಡುತ್ತೀಯೋ.” (ಯೋಹಾ. 9:30-34) ಸ್ಪಷ್ಟ ಆಧ್ಯಾತ್ಮಿಕ ದೃಷ್ಟಿ ಹಾಗೂ ಸರಿಯಾಗಿ ವಿಮರ್ಶೆಮಾಡುವ ಸಾಮರ್ಥ್ಯದ ವಿಷಯದಲ್ಲಿ ಆ ಫರಿಸಾಯರ ಕಣ್ಣಲ್ಲೇ ಒಂದು “ತೊಲೆ” ಇದ್ದು, ಅವರು ಪೂರ್ತಿ ಕುರುಡರಾಗಿದ್ದರು. ಆದುದರಿಂದಲೇ ಯೇಸು ಉದ್ಗರಿಸಿದ್ದು: “ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದುಹಾಕಿಕೋ; ಆ ಮೇಲೆ ನಿನ್ನ ಸಹೋದರನ ಕಣ್ಣಿನೊಳಗಿಂದ ರವೆಯನ್ನು ತೆಗೆಯುವದಕ್ಕೆ ಚೆನ್ನಾಗಿ ಕಾಣಿಸುವದು.” (ಮತ್ತಾ. 7:5; ಲೂಕ 6:42) ಒಳ್ಳೆಯದನ್ನು ಮಾಡಬೇಕು ಮತ್ತು ಇತರರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕೆಂಬ ದೃಢನಿರ್ಣಯ ಮಾಡಿರುವಲ್ಲಿ ನಮ್ಮ ಸಹೋದರನ ಕಣ್ಣಿನಲ್ಲಿ ಒಂದು ಸಾಂಕೇತಿಕ ರವೆಗಾಗಿ ಯಾವಾಗಲೂ ಹುಡುಕುತ್ತಲೇ ಇರುವ ನಿರ್ದಯಿ ಟೀಕಾಕಾರರು ನಾವಾಗಿರುವುದಿಲ್ಲ. ಅದಕ್ಕೆ ಬದಲಾಗಿ, ನಾವೆಲ್ಲರೂ ಅಪರಿಪೂರ್ಣರಾಗಿರುವುದರಿಂದ ನಮ್ಮ ಜೊತೆ ವಿಶ್ವಾಸಿಗಳ ಬಗ್ಗೆ ಟೀಕಾತ್ಮಕರಾಗಿರಬಾರದೆಂದು ಒಪ್ಪಿಕೊಳ್ಳುವೆವು.

ನಾವು ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು?

17 ಪರ್ವತ ಪ್ರಸಂಗದಲ್ಲಿ ಯೇಸು ಸೂಚಿಸಿದ್ದೇನೆಂದರೆ, ದೇವರು ತನ್ನ ಸೇವಕರ ಪ್ರಾರ್ಥನೆಗಳನ್ನು ಉತ್ತರಿಸುವಾಗ ತಂದೆಯಂಥ ಮನೋಭಾವವನ್ನು ತೋರಿಸುತ್ತಿದ್ದಾನೆ. (ಮತ್ತಾಯ 7:7-12 ಓದಿ.) ಯೇಸು ನಡತೆಯ ವಿಷಯದಲ್ಲಿ ಈ ಗಮನಾರ್ಹ ನಿಯಮವನ್ನಿಟ್ಟನು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾ. 7:12) ಜೊತೆ ಮಾನವರೊಂದಿಗೆ ಈ ರೀತಿಯಲ್ಲಿ ನಡೆದುಕೊಂಡರೆ ಮಾತ್ರ ನಾವು ಯೇಸು ಕ್ರಿಸ್ತನ ನಿಜ ಹಿಂಬಾಲಕರೆಂದು ಸಾಬೀತುಪಡಿಸಬಲ್ಲೆವು.

18 ಇತರರು ನಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ಅಪೇಕ್ಷಿಸುತ್ತೇವೋ ನಾವು ಅವರೊಂದಿಗೆ ಹಾಗೆಯೇ ನಡೆದುಕೊಳ್ಳಬೇಕೆಂದು ಹೇಳಿದ ನಂತರ ಯೇಸು ಕೂಡಿಸಿದ್ದು: “ಇದೇ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ.” ಯೇಸು ಹೇಳಿದಂಥ ರೀತಿಯಲ್ಲಿ ನಾವು ಇತರರೊಂದಿಗೆ ನಡೆದುಕೊಳ್ಳುವಾಗ, “ಧರ್ಮಶಾಸ್ತ್ರ” ಅಂದರೆ ಆದಿಕಾಂಡದಿಂದ ಹಿಡಿದು ಧರ್ಮೋಪದೇಶಕಾಂಡದ ವರೆಗಿನ ಬೈಬಲ್‌ ಪುಸ್ತಕಗಳ ಇಂಗಿತಕ್ಕನುಸಾರ ನಾವು ಕ್ರಿಯೆಗೈಯುತ್ತಿದ್ದೇವೆ. ಈ ಪುಸ್ತಕಗಳು, ಕೇಡನ್ನು ಅಳಿಸಿಹಾಕುವ ಒಂದು ಸಂತಾನವನ್ನು ಎಬ್ಬಿಸುವ ಯೆಹೋವನ ಉದ್ದೇಶವನ್ನು ಪ್ರಕಟಪಡಿಸುತ್ತವೆ. ಅಲ್ಲದೆ, ಸಾ.ಶ.ಪೂ. 1513ರಲ್ಲಿ ಮೋಶೆಯ ಮುಖಾಂತರ ಇಸ್ರಾಯೇಲ್‌ ಜನಾಂಗಕ್ಕೆ ದೇವರು ಕೊಟ್ಟ ಧರ್ಮಶಾಸ್ತ್ರವೂ ಅವುಗಳಲ್ಲಿದೆ. (ಆದಿ. 3:15) ಬೇರೆ ವಿಷಯಗಳನ್ನಲ್ಲದೆ, ಇಸ್ರಾಯೇಲ್ಯರು ನ್ಯಾಯವಂತರು, ನಿಷ್ಪಕ್ಷಪಾತಿಗಳು ಆಗಿರಬೇಕೆಂದು ಮತ್ತು ಆ ಜನಾಂಗದಲ್ಲಿದ್ದ ಬಡವರಿಗೂ ಅನ್ಯದೇಶೀಯರಿಗೂ ಒಳ್ಳೆಯದನ್ನು ಮಾಡಬೇಕೆಂದು ಧರ್ಮಶಾಸ್ತ್ರವು ಸ್ಪಷ್ಟವಾಗಿ ತಿಳಿಸಿತು.—ಯಾಜ. 19:9, 10, 14, 34.

19 ‘ಪ್ರವಾದಿಗಳು’ ಎಂದು ಯೇಸು ಹೇಳಿದಾಗ, ಹೀಬ್ರು ಶಾಸ್ತ್ರಗಳಲ್ಲಿರುವ ಪ್ರವಾದನಾತ್ಮಕ ಪುಸ್ತಕಗಳಿಗೆ ಸೂಚಿಸುತ್ತಿದ್ದನು. ಈ ಪುಸ್ತಕಗಳಲ್ಲಿ ಸ್ವತಃ ಕ್ರಿಸ್ತನಲ್ಲಿ ನೆರವೇರಿದ ಮೆಸ್ಸೀಯನ ಕುರಿತಾದ ಪ್ರವಾದನೆಗಳಿವೆ. ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ, ಇತರರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವ ತನ್ನ ಜನರನ್ನು ಆತನು ಆಶೀರ್ವದಿಸುತ್ತಾನೆಂದೂ ಆ ಬರಹಗಳು ತೋರಿಸುತ್ತವೆ. ದೃಷ್ಟಾಂತಕ್ಕಾಗಿ, ಯೆಶಾಯನ ಪ್ರವಾದನೆಯು ಇಸ್ರಾಯೇಲ್ಯರಿಗೆ ಈ ಸಲಹೆ ಕೊಟ್ಟಿತ್ತು: “ಯೆಹೋವನು ಹೀಗನ್ನುತ್ತಾನೆ—ನ್ಯಾಯವನ್ನು ಅನುಸರಿಸಿರಿ, ಧರ್ಮವನ್ನು ಆಚರಿಸಿರಿ; . . . ಈ ವಿಧಿಯನ್ನು ಕೈಕೊಳ್ಳುವ ಮನುಷ್ಯನು ಧನ್ಯನು; ಇದನ್ನೇ ಭದ್ರವಾಗಿ ಹಿಡಿದು . . . ಯಾವ ಕೇಡಿಗೂ ಕೈಹಾಕದ ಮಾನವನು ಭಾಗ್ಯವಂತನು.” (ಯೆಶಾ. 56:1, 2) ಹೌದು, ತನ್ನ ಜನರು ಒಳ್ಳೆಯದನ್ನು ಮಾಡುತ್ತಾ ಇರಬೇಕೆಂದು ದೇವರು ನಿರೀಕ್ಷಿಸುತ್ತಾನೆ.

ಯಾವಾಗಲೂ ಇತರರಿಗೆ ಒಳ್ಳೆಯದನ್ನು ಮಾಡಿರಿ

20 ಯೇಸು ತನ್ನ ಅಪೂರ್ವವಾದ ಪರ್ವತ ಪ್ರಸಂಗದಲ್ಲಿ ಹೇಳಿದಂಥ ಅನೇಕ ಪ್ರಮುಖ ಅಂಶಗಳಲ್ಲಿ ಕೇವಲ ಕೆಲವನ್ನೇ ನಾವು ಪರಿಗಣಿಸಿದ್ದೇವೆ. ಹಾಗಿದ್ದರೂ, ಆ ಸಂದರ್ಭದಲ್ಲಿ ಆತನ ಮಾತುಗಳನ್ನು ನೇರವಾಗಿ ಕೇಳಿಸಿಕೊಂಡವರ ಪ್ರತಿಕ್ರಿಯೆ ಹೇಗಿದ್ದಿರಬೇಕೆಂದು ನಾವು ಅರ್ಥಮಾಡಿಕೊಳ್ಳಬಹುದು. ಪ್ರೇರಿತ ದಾಖಲೆ ಹೀಗನ್ನುತ್ತದೆ: “ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ ಆ ಜನರ ಗುಂಪುಗಳು ಆತನ ಉಪದೇಶಕ್ಕೆ ಆತ್ಯಾಶ್ಚರ್ಯಪಟ್ಟವು. ಯಾಕಂದರೆ ಆತನು ಅವರ ಶಾಸ್ತ್ರಿಗಳಂತೆ ಉಪದೇಶಮಾಡದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶಮಾಡುತ್ತಿದ್ದನು.”—ಮತ್ತಾ. 7:28, 29.

21 ಯೇಸು ಕ್ರಿಸ್ತನೇ ಮುಂತಿಳಿಸಲಾದ “ಅದ್ಭುತಸ್ವರೂಪನಾದ ಆಲೋಚನಾಕರ್ತನು” ಎಂಬುದು ನಿಸ್ಸಂದೇಹವಾಗಿ ರುಜುವಾಯಿತು. (ಯೆಶಾ. 9:6, BSI ಪಾದಟಿಪ್ಪಣಿ) ತನ್ನ ಸ್ವರ್ಗೀಯ ತಂದೆಯ ದೃಷ್ಟಿಕೋನಗಳ ಬಗ್ಗೆ ಯೇಸುವಿಗಿದ್ದ ಜ್ಞಾನಕ್ಕೆ ಈ ಪರ್ವತ ಪ್ರಸಂಗವು ಒಂದು ಪ್ರಮುಖ ಉದಾಹರಣೆ. ನಾವು ಈಗಾಗಲೇ ಚರ್ಚಿಸಿದಂಥ ಅಂಶಗಳಲ್ಲದೆ ನಿಜ ಸಂತೋಷವನ್ನು ಕಂಡುಕೊಳ್ಳುವುದು ಹೇಗೆ, ಅನೈತಿಕತೆಯಿಂದ ದೂರವಿರುವುದು ಹೇಗೆ, ನೀತಿಯನ್ನು ಹೇಗೆ ಆಚರಣೆಗೆ ತರಬೇಕು, ಭದ್ರವಾದ ಆನಂದಭರಿತ ಭವಿಷ್ಯತ್ತನ್ನು ಪಡೆಯಲು ಏನು ಮಾಡಬೇಕು ಮೊದಲಾದ ಹಲವಾರು ವಿಷಯಗಳ ಬಗ್ಗೆ ಆ ಪ್ರಸಂಗದಲ್ಲಿ ಬಹಳಷ್ಟನ್ನು ಹೇಳಲಾಗಿದೆ. ಆದುದರಿಂದ, ಮತ್ತಾಯ ಅಧ್ಯಾಯ 5-7ನ್ನು ಪುನಃ ಒಮ್ಮೆ ಜಾಗ್ರತೆಯಿಂದ ಹಾಗೂ ಪ್ರಾರ್ಥನಾಪೂರ್ವಕವಾಗಿ ಏಕೆ ಓದಬಾರದು? ಅಲ್ಲಿ ದಾಖಲಾಗಿರುವ ಯೇಸುವಿನ ಅದ್ಭುತ ಆಲೋಚನೆಗಳು ಅಥವಾ ಸಲಹೆಗಳ ಕುರಿತು ಧ್ಯಾನಿಸಿರಿ. ಕ್ರಿಸ್ತನು ತನ್ನ ಪರ್ವತ ಪ್ರಸಂಗದಲ್ಲಿ ಹೇಳಿದ ಮಾತುಗಳನ್ನು ನಿಮ್ಮ ಜೀವನದಲ್ಲಿ ಅನ್ವಯಿಸಿರಿ. ಆಗ ನೀವು ಯೆಹೋವನನ್ನು ಮೆಚ್ಚಿಸಲು, ಇತರರೊಂದಿಗೆ ಹೆಚ್ಚು ಉತ್ತಮವಾಗಿ ನಡೆದುಕೊಳ್ಳಲು ಮತ್ತು ಒಳ್ಳೆಯದನ್ನು ಮಾಡುತ್ತಾ ಇರಲು ಸಶಕ್ತರಾಗುವಿರಿ.

ನಿಮ್ಮ ಉತ್ತರವೇನು?

• ನಮ್ಮ ವೈರಿಗಳೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು?

• ನಾವೇಕೆ ಕ್ಷಮಿಸುವವರಾಗಿರಬೇಕು?

• ಜನರಿಗೆ ತೀರ್ಪುಮಾಡುವುದರ ಬಗ್ಗೆ ಯೇಸು ಏನು ಹೇಳಿದನು?

ಮತ್ತಾಯ 7:12ಕ್ಕನುಸಾರ ನಾವು ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು?

[ಅಧ್ಯಯನ ಪ್ರಶ್ನೆಗಳು]

1, 2. ಇತರರಿಗೆ ಒಳ್ಳೆಯದನ್ನು ಮಾಡುವುದು ಸುಲಭವೇನಲ್ಲ ಏಕೆ?

3. (ಎ) ಮತ್ತಾಯ 5:43-45ರಲ್ಲಿ ದಾಖಲಾಗಿರುವ ಯೇಸುವಿನ ಹೇಳಿಕೆಯನ್ನು ಸ್ವಂತ ಮಾತಿನಲ್ಲಿ ಸಾರಾಂಶಿಸಿರಿ. (ಬಿ) ಯೆಹೂದ್ಯರು ಹಾಗೂ ಯೆಹೂದ್ಯರಲ್ಲದವರ ಕುರಿತು, ಪ್ರಥಮ ಶತಮಾನದ ಧಾರ್ಮಿಕ ಮುಖಂಡರಲ್ಲಿ ಯಾವ ಅಭಿಪ್ರಾಯ ಬೆಳೆದುಬಂತು?

4. ಯೇಸುವಿನ ಶಿಷ್ಯರು ತಮ್ಮ ವೈರಿಗಳೊಂದಿಗೆ ಹೇಗೆ ವರ್ತಿಸಬೇಕಿತ್ತು?

5, 6. ನಮ್ಮ ವೈರಿಗಳನ್ನು ನಾವೇಕೆ ಪ್ರೀತಿಸಬೇಕು?

7. ನಾವು ಕೇವಲ ನಮ್ಮ ‘ಸಹೋದರರನ್ನು’ ಮಾತ್ರ ವಂದಿಸಿದರೆ, ಹೆಚ್ಚೇನು ಮಾಡಿದಂತೆ ಆಗದು ಏಕೆ?

8. ‘ನೀವು ಪರಿಪೂರ್ಣರಾಗಿರಿ’ ಎಂದು ಹೇಳುವ ಮೂಲಕ ಯೇಸು ತನ್ನ ಕೇಳುಗರಿಗೆ ಏನು ಮಾಡುವಂತೆ ಉತ್ತೇಜಿಸುತ್ತಿದ್ದನು?

9. ಯೇಸುವಿನ ಮಾದರಿ ಪ್ರಾರ್ಥನೆಗನುಸಾರ ಒಳ್ಳೆಯದನ್ನು ಮಾಡುವುದರಲ್ಲಿ ಏನು ಒಳಗೂಡಿದೆ?

10. ಕ್ಷಮಿಸುವ ವಿಷಯದಲ್ಲಿ ನಾವು ದೇವರನ್ನು ಹೇಗೆ ಅನುಕರಿಸಬಲ್ಲೆವು?

11. ದೇವರು ಯಾರನ್ನು ಕ್ಷಮಿಸುತ್ತಾನೆ?

12. ಇತರರ ತೀರ್ಪುಮಾಡುವುದರ ವಿರುದ್ಧ ಯೇಸು ಯಾವ ಸಲಹೆ ಕೊಟ್ಟನು?

13. “ಬಿಡಿಸಿರಿ” ಎಂಬ ಯೇಸುವಿನ ಮಾತುಗಳನ್ನು ಆತನ ಕೇಳುಗರು ಹೇಗೆ ಅನ್ವಯಿಸಬಹುದಿತ್ತು?

14. ಯೇಸುವಿನ ಶಿಷ್ಯರು ಕ್ಷಮಿಸುವ ಮೂಲಕ ಏನು ಮಾಡುವಂತೆ ಇತರರನ್ನೂ ಪ್ರಚೋದಿಸುವರು?

15. ಟೀಕಾತ್ಮಕರಾಗಿರುವುದು ತಪ್ಪೆಂದು ಯೇಸು ತೋರಿಸಿದ್ದು ಹೇಗೆ?

16. ಫರಿಸಾಯರ ಕಣ್ಣಿನಲ್ಲಿ ಒಂದು “ತೊಲೆ” ಇತ್ತೆಂದು ಏಕೆ ಹೇಳಬಹುದಿತ್ತು?

17. ಮತ್ತಾಯ 7:12ನ್ನು ಮನಸ್ಸಿನಲ್ಲಿಟ್ಟು ನಾವು ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು?

18. ಬೇರೆಯವರು ನಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ಅಪೇಕ್ಷಿಸುತ್ತೇವೋ ನಾವು ಅವರೊಂದಿಗೆ ಹಾಗೆಯೇ ನಡೆದುಕೊಳ್ಳಬೇಕೆಂದು “ಧರ್ಮಶಾಸ್ತ್ರವು” ಹೇಗೆ ತೋರಿಸಿತು?

19. ನಾವು ಒಳ್ಳೆಯದನ್ನು ಮಾಡಬೇಕೆಂದು ‘ಪ್ರವಾದಿಗಳು’ ಹೇಗೆ ತೋರಿಸುತ್ತಾರೆ?

20, 21. ಯೇಸುವಿನ ಪರ್ವತ ಪ್ರಸಂಗಕ್ಕೆ ಜನರ ಗುಂಪುಗಳು ಹೇಗೆ ಪ್ರತಿಕ್ರಿಯಿಸಿದವು, ಮತ್ತು ನೀವು ಅದರ ಕುರಿತು ಏಕೆ ಧ್ಯಾನಿಸಬೇಕು?

[ಪುಟ 10ರಲ್ಲಿರುವ ಸಂಕ್ಷಿಪ್ತ ವಿವರಣೆ]

“ತೀರ್ಪುಮಾಡುವುದನ್ನು ನಿಲ್ಲಿಸಿರಿ” ಎಂದು ಯೇಸು ಹೇಳಿದ್ದೇಕೆಂದು ನಿಮಗೆ ಗೊತ್ತೋ?

[ಪುಟ 8ರಲ್ಲಿರುವ ಚಿತ್ರ]

ನಮ್ಮನ್ನು ಹಿಂಸಿಸುವವರಿಗಾಗಿ ನಾವೇಕೆ ಪ್ರಾರ್ಥಿಸಬೇಕು?

[ಪುಟ 10ರಲ್ಲಿರುವ ಚಿತ್ರ]

ಇತರರು ನಿಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ಅಪೇಕ್ಷಿಸುತ್ತೀರೋ ಹಾಗೆಯೇ ನೀವು ಅವರೊಂದಿಗೆ ನಡೆದುಕೊಳ್ಳುತ್ತೀರೋ?