“ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು” ಬೆನ್ನಟ್ಟಿರಿ
“ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು” ಬೆನ್ನಟ್ಟಿರಿ
ಯೆಹೋವ ದೇವರ ಅತ್ಯುತ್ಕೃಷ್ಟ ಮಟ್ಟದ ಪರಿಶುದ್ಧತೆಗೆ ಸೂಚಿಸುತ್ತಾ ಬೈಬಲ್ ಹೀಗೆ ತಿಳಿಸುತ್ತದೆ: “ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು.” (ಯೆಶಾ. 6:3; ಪ್ರಕ. 4:8) ಪರಿಶುದ್ಧತೆ ಇಲ್ಲವೇ “ಪವಿತ್ರತ್ವ” ಎಂಬುದಕ್ಕಿರುವ ಹೀಬ್ರು ಮತ್ತು ಗ್ರೀಕ್ ಪದಗಳ ಅರ್ಥ ನೈರ್ಮಲ್ಯ ಅಥವಾ ಧಾರ್ಮಿಕ ಶುದ್ಧತೆ, ಮಲಿನತೆಯಿಂದ ಪ್ರತ್ಯೇಕಿಸಿಕೊಳ್ಳುವುದು ಎಂದಾಗಿದೆ. ದೇವರ ಪವಿತ್ರತೆಯು ಆತನ ನೈತಿಕ ಪರಿಪೂರ್ಣತೆಯನ್ನು ಸೂಚಿಸುತ್ತದೆ.
ಪರಿಶುದ್ಧ ದೇವರಾದ ಯೆಹೋವನು ತನ್ನ ಆರಾಧಕರು ಕೂಡ ಶಾರೀರಿಕವಾಗಿ, ನೈತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿಯೂ ಶುದ್ಧರಾಗಿರುವಂತೆ ಅಪೇಕ್ಷಿಸುವನಲ್ಲವೇ? ಯೆಹೋವನು ತನ್ನ ಜನರು ಪರಿಶುದ್ಧರಾಗಿರುವಂತೆ ಬಯಸುತ್ತಾನೆ ಎಂಬುದನ್ನು ಬೈಬಲ್ ಸ್ಪಷ್ಟ ಮಾತುಗಳಲ್ಲಿ ತೋರಿಸುತ್ತದೆ. 1 ಪೇತ್ರ 1:16ರಲ್ಲಿ ನಾವು ಓದುವುದು: “ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.” ಅಪರಿಪೂರ್ಣ ಮಾನವರು ಯೆಹೋವನ ಪವಿತ್ರತ್ವವನ್ನು ನಿಜವಾಗಿಯೂ ಅನುಕರಿಸಸಾಧ್ಯವಿದೆಯೋ? ಹೌದು ಸಾಧ್ಯವಿದೆ, ಆದರೆ ಪರಿಪೂರ್ಣವಾಗಿ ಅಲ್ಲ. ನಾವು ಶುದ್ಧ ಆಧ್ಯಾತ್ಮಿಕ ಸ್ಥಿತಿಯಲ್ಲಿದ್ದು ದೇವರನ್ನು ಆರಾಧಿಸುವಲ್ಲಿ ಮತ್ತು ಆತನೊಂದಿಗೆ ಹತ್ತಿರದ ಸಂಬಂಧವನ್ನು ಹೊಂದಿರುವಲ್ಲಿ ಆತನು ನಮ್ಮನ್ನು ಪರಿಶುದ್ಧರೆಂದು ಪರಿಗಣಿಸುತ್ತಾನೆ.
ನೈತಿಕವಾಗಿ ಅಶುದ್ಧವಾಗಿರುವ ಈ ಲೋಕದಲ್ಲಿ ನಾವು ಹೇಗೆ ಶುದ್ಧರಾಗಿರಬಹುದು? ಎಂತಹ ಅಭ್ಯಾಸಗಳನ್ನು ನಾವು ದೂರವಿಡಬೇಕು? ನಮ್ಮ ನಡೆನುಡಿಯಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕಾದೀತು? ಈ ಕುರಿತು, ಸಾ.ಶ.ಪೂ. 537ರಲ್ಲಿ ಬಾಬೆಲಿನಿಂದ ಹಿಂದಿರುಗುತ್ತಿದ್ದ ಯೆಹೂದ್ಯರಿಗೆ ದೇವರು ಕೊಟ್ಟ ನಿರ್ದೇಶನಗಳಿಂದ ನಾವೇನನ್ನು ಕಲಿಯಬಹುದೆಂಬುದನ್ನು ಈಗ ಪರಿಗಣಿಸೋಣ.
‘ಅಲ್ಲಿ ಪರಿಶುದ್ಧ ಮಾರ್ಗವಿರುವದು’
ಬಾಬೆಲಿನ ಬಂಧಿವಾಸದಲ್ಲಿದ್ದ ತನ್ನ ಜನರು ಸ್ವದೇಶಕ್ಕೆ ಪುನಃಸ್ಥಾಪಿಸಲ್ಪಡುವರೆಂದು ಯೆಹೋವನು ಮುಂತಿಳಿಸಿದ್ದನು. ಪುನಃಸ್ಥಾಪನೆಯ ಪ್ರವಾದನೆಯಲ್ಲಿ ಈ ಆಶ್ವಾಸನೆಯಿತ್ತು: “ಅಲ್ಲಿ ರಾಜಮಾರ್ಗವಿರುವದು, ಹೌದು [ಹೋಗಿಬರುವ] ದಾರಿ; ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವದು.” (ಯೆಶಾ. 35:8ಎ) ಈ ಮಾತುಗಳು ತೋರಿಸುವಂತೆಯೇ ಯೆಹೋವನು ಯೆಹೂದ್ಯರಿಗೆ ಸ್ವದೇಶಕ್ಕೆ ಹಿಂದಿರುಗುವ ಅವಕಾಶವನ್ನು ತೆರೆದನು ಮಾತ್ರವಲ್ಲ ಅವರ ದಾರಿಯುದ್ದಕ್ಕೂ ಸಂರಕ್ಷಣೆಯನ್ನೂ ಒದಗಿಸಿದನು.
ಯೆಹೋವನು ಭೂಮಿಯಲ್ಲಿರುವ ತನ್ನ ಆಧುನಿಕ ದಿನದ ಸೇವಕರಿಗೂ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲ್‌ನಿಂದ ದೂರಕ್ಕೆ ಕರೆದೊಯ್ಯುವ “ಪರಿಶುದ್ಧ ಮಾರ್ಗ” ಸಿದ್ಧಪಡಿಸಿದ್ದಾನೆ. 1919ರಲ್ಲಿ ಆತನು ಅಭಿಷಿಕ್ತ ಕ್ರೈಸ್ತರನ್ನು ಸುಳ್ಳು ಧರ್ಮದ ಆಧ್ಯಾತ್ಮಿಕ ಬಂಧನದಿಂದ ಬಿಡಿಸಿದನು. ಅವರು ಎಲ್ಲಾ ಸುಳ್ಳು ಬೋಧನೆಗಳನ್ನು ತೆಗೆದು ತಮ್ಮ ಆರಾಧನೆಯನ್ನು ಪ್ರಗತಿಪರವಾಗಿ ಶುದ್ಧಗೊಳಿಸಿದರು. ಇಂದು ಯೆಹೋವನ ಆರಾಧಕರಾಗಿರುವ ನಾವು, ಶುದ್ಧ ಹಾಗೂ ನೆಮ್ಮದಿಯ ಆಧ್ಯಾತ್ಮಿಕ ಪರಿಸ್ಥಿತಿಯಲ್ಲಿ ಯೆಹೋವನನ್ನು ಆರಾಧಿಸಬಹುದು ಮತ್ತು ಆತನೊಂದಿಗೂ ಜೊತೆ ಮಾನವರೊಂದಿಗೂ ಸಮಾಧಾನಭರಿತ ಸಂಬಂಧದಲ್ಲಿ ಆನಂದಿಸಬಹುದು.
‘ಚಿಕ್ಕ ಹಿಂಡಿನ’ ಸದಸ್ಯರಾದ ಅಭಿಷಿಕ್ತ ಕ್ರೈಸ್ತರು ಮತ್ತು ವೃದ್ಧಿಯಾಗುತ್ತಿರುವ “ಬೇರೆ ಕುರಿಗಳ” “ಮಹಾ ಸಮೂಹ”ದವರು ಲೂಕ 12:32; ಪ್ರಕ. 7:9; ಯೋಹಾ. 10:16) ‘ತಮ್ಮ ದೇಹಗಳನ್ನು ದೇವರಿಗೆ ಪರಿಶುದ್ಧವೂ ಮೆಚ್ಚುಗೆಯೂ ಆಗಿರುವ ಸಜೀವ ಯಜ್ಞವಾಗಿ ಸಮರ್ಪಿಸಲು’ ಸಿದ್ಧರಿರುವವರೆಲ್ಲರಿಗೆ “ಪರಿಶುದ್ಧ ಮಾರ್ಗ” ತೆರೆದೇ ಇದೆ.—ರೋಮಾ. 12:1, NIBV.
ಪರಿಶುದ್ಧ ಮಾರ್ಗದಲ್ಲಿ ನಡೆಯುವ ಆಯ್ಕೆಮಾಡಿದ್ದಾರೆ ಅಲ್ಲದೇ ತಮ್ಮನ್ನು ಜೊತೆಗೂಡುವಂತೆ ಇತರರನ್ನೂ ಆಮಂತ್ರಿಸುತ್ತಿದ್ದಾರೆ. (“ಯಾವ ಅಶುದ್ಧನೂ ಅಲ್ಲಿ ನಡೆಯನು”
ಸಾ.ಶ.ಪೂ. 537ರಲ್ಲಿ ಹಿಂದಿರುಗುತ್ತಿದ್ದ ಯೆಹೂದ್ಯರು ಒಂದು ಪ್ರಾಮುಖ್ಯ ಆವಶ್ಯಕತೆಯನ್ನು ಪೂರೈಸಬೇಕಿತ್ತು. ‘ಪರಿಶುದ್ಧ ಮಾರ್ಗದಲ್ಲಿ’ ನಡೆಯಲು ಅರ್ಹರಾಗುವುದರ ಬಗ್ಗೆ ಯೆಶಾಯ 35:8ಬಿ ತಿಳಿಸುವುದು: “ಯಾವ ಅಶುದ್ಧನೂ ಅಲ್ಲಿ ನಡೆಯನು, ಅದು ದೇವಜನರಿಗಾಗಿಯೇ ಇರುವದು, ಅಲ್ಲಿ ಹೋಗುವ ಮೂಢನೂ ದಾರಿತಪ್ಪನು.” ಯೆಹೂದ್ಯರು ಯೆರೂಸಲೇಮಿಗೆ ಹಿಂದಿರುಗುವುದರ ಉದ್ದೇಶ ಶುದ್ಧಾರಾಧನೆಯನ್ನು ಪುನಃಸ್ಥಾಪಿಸುವುದಾಗಿತ್ತು. ಆದುದರಿಂದ ಸ್ವಾರ್ಥ ಬಯಕೆಗಳಿದ್ದ, ಪವಿತ್ರ ವಿಷಯಗಳ ಕಡೆಗೆ ಅಗೌರವವಿದ್ದ ಅಥವಾ ಆಧ್ಯಾತ್ಮಿಕವಾಗಿ ಅಶುದ್ಧರಾಗಿದ್ದ ಜನರಿಗೆ ಅಲ್ಲಿ ಯಾವುದೇ ಎಡೆ ಇರಲಿಲ್ಲ. ಹಿಂದಿರುಗಿದವರು ಯೆಹೋವನ ಉಚ್ಚ ನೈತಿಕ ಮಟ್ಟಗಳನ್ನು ಕಾಪಾಡಿಕೊಳ್ಳಬೇಕಿತ್ತು. ಇಂದು ದೇವರ ಅನುಗ್ರಹವನ್ನು ಬಯಸುವವರೂ ಇದೇ ಅವಶ್ಯಕತೆಗಳನ್ನು ಪೂರೈಸಬೇಕು. ಅವರು “ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು” ಬೆನ್ನಟ್ಟಬೇಕು. (2 ಕೊರಿಂ. 7:1) ಹಾಗಾದರೆ ನಾವು ಯಾವ ಅಶುದ್ಧ ಅಭ್ಯಾಸಗಳನ್ನು ದೂರವಿಡಬೇಕು?
ಅಪೊಸ್ತಲ ಪೌಲನು ಬರೆದದ್ದು: “ಶರೀರಭಾವದ ಕರ್ಮಗಳು ಪ್ರಸಿದ್ಧವಾಗಿಯೇ ಅವೆ; ಯಾವವಂದರೆ—ಜಾರತ್ವ ಬಂಡುತನ [“ಅಶುದ್ಧತ್ವ,” NIBV] ನಾಚಿಕೆಗೇಡಿತನ.” (ಗಲಾ. 5:19) ಜಾರತ್ವವು ವಿವಾಹ ಬಂಧದ ಹೊರಗೆ, ಜನನಾಂಗಗಳ ಉಪಯೋಗದಿಂದ ನಡೆಸಲಾಗುವ ಎಲ್ಲ ನಿಷಿದ್ಧ ಲೈಂಗಿಕ ಕ್ರಿಯೆಗಳಿಗೆ ಸೂಚಿಸುತ್ತದೆ. ನಾಚಿಕೆಗೇಡಿತನದಲ್ಲಿ “ವಿಷಯಲಂಪಟತೆ; ಸ್ವೇಚ್ಛಾಚಾರ; ಮರ್ಯಾದೆಗೆಟ್ಟ ನಡತೆ; ಅಶ್ಲೀಲತೆ” ಒಳಗೂಡಿದೆ. ಜಾರತ್ವ ಮತ್ತು ನಾಚಿಕೆಗೇಡಿತನಗಳೆರಡೂ ಯೆಹೋವನ ಪವಿತ್ರತ್ವಕ್ಕೆ ವಿರುದ್ಧವಾಗಿವೆ ಎಂಬುದು ಸ್ಪಷ್ಟ. ಆದ್ದರಿಂದ ಅಂಥ ಅಭ್ಯಾಸಗಳನ್ನು ಮುಂದುವರಿಸುವವರಿಗೆ ಕ್ರೈಸ್ತ ಸಭೆಯ ಭಾಗವಾಗಲು ಅನುಮತಿಸಲಾಗುವುದಿಲ್ಲ ಅಥವಾ ಅಂಥವರನ್ನು ಸಭೆಯಿಂದ ಬಹಿಷ್ಕರಿಸಲಾಗುತ್ತದೆ. ಇದು ನಿರ್ಲಜ್ಜೆಯಿಂದ ಅಶುದ್ಧತ್ವವನ್ನು ಆಚರಿಸುವವರಿಗೂ ಅಂದರೆ, “ಎಲ್ಲಾ ವಿಧವಾದ ಅಶುದ್ಧಕೃತ್ಯಗಳನ್ನು ಅತ್ಯಾಶೆಯಿಂದ” ನಡೆಸುವವರಿಗೂ ಅನ್ವಯಿಸುತ್ತದೆ.—ಎಫೆ. 4:19.
“ಅಶುದ್ಧತ್ವ” ಎಂಬ ಪದವು ಅನೇಕ ವಿಧದ ಪಾಪಗಳನ್ನು ಆವರಿಸುತ್ತದೆ. ಇದಕ್ಕಾಗಿರುವ ಗ್ರೀಕ್ ಪದವು ಮಾತು, ನಡತೆ ಮತ್ತು ಆಧ್ಯಾತ್ಮಿಕ ಸಂಬಂಧಗಳಲ್ಲಿನ ಯಾವುದೇ ಅಶುದ್ಧತೆಗೆ ಸೂಚಿಸುತ್ತದೆ. ಯಾವುದೇ ನ್ಯಾಯನಿರ್ಣಾಯಕ ಕ್ರಮವನ್ನು ಅವಶ್ಯಪಡಿಸದಂಥ ಪ್ರಮಾಣದ ಅಶುದ್ಧತ್ವವುಳ್ಳ ರೂಢಿಗಳೂ ಇದರಲ್ಲಿ ಒಳಗೂಡಿವೆ. * ಇಂತಹ ಅಶುದ್ಧತ್ವವನ್ನು ರೂಢಿಸಿಕೊಂಡವರು ಪವಿತ್ರತ್ವವನ್ನು ಬೆನ್ನಟ್ಟುತ್ತಿದ್ದಾರೋ?
ಕ್ರೈಸ್ತನೊಬ್ಬನು ಕದ್ದುಮುಚ್ಚಿ ಅಶ್ಲೀಲ ಚಿತ್ರಣಗಳನ್ನು ನೋಡಲಾರಂಭಿಸುತ್ತಾನೆ ಎಂದೆಣಿಸಿ. ಮೆಲ್ಲಮೆಲ್ಲನೆ ಅಶುದ್ಧ ಬಯಕೆಗಳು ಹುಟ್ಟಿ ಯೆಹೋವನ ಮುಂದೆ ಶುದ್ಧನಾಗಿ ಉಳಿಯಬೇಕೆಂಬ ಅವನ ದೃಢಸಂಕಲ್ಪ ಒಳಗೊಳಗೇ ಶಿಥಿಲಗೊಳ್ಳುತ್ತದೆ. ಬಹುಶಃ ಅವನ ನಡತೆ ನಿರ್ಲಜ್ಜ ಅಶುದ್ಧತ್ವದ ಹಂತವನ್ನು ಮುಟ್ಟಿರಲಿಕ್ಕಿಲ್ಲವಾದರೂ ಅವನು, ‘ಯಾವಾವದು ಶುದ್ಧವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ’ ಅವೆಲ್ಲವುಗಳನ್ನು ಖಂಡಿತವಾಗಿ ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇಲ್ಲ. (ಫಿಲಿ. 4:8) ಅಶ್ಲೀಲ ಚಿತ್ರಣಗಳು ಅಶುದ್ಧವಾಗಿವೆ ಮತ್ತು ದೇವರೊಂದಿಗಿನ ಒಬ್ಬನ ಸಂಬಂಧವನ್ನು ಖಂಡಿತ ಕೆಡಿಸುತ್ತವೆ. ಯಾವುದೇ ವಿಧದ ಅಶುದ್ಧತ್ವದ ಸುದ್ದಿಯಾದರೂ ನಮ್ಮಲ್ಲಿ ಇರಬಾರದು.—ಎಫೆ. 5:3.
ಇನ್ನೊಂದು ಉದಾಹರಣೆ ಪರಿಗಣಿಸಿ. ಒಬ್ಬ ಕ್ರೈಸ್ತನಿಗೆ ಹಸ್ತಮೈಥುನದ ಅಂದರೆ ತನ್ನನ್ನೇ ಲೈಂಗಿಕವಾಗಿ ಉದ್ರೇಕಿಸಲು 2 ಕೊರಿಂ. 7:1; ಕೊಲೊ. 3:5.
ಉದ್ದೇಶಪೂರ್ವಕವಾಗಿ ಕೆರಳಿಸಿಕೊಳ್ಳುವ ದುರಭ್ಯಾಸವಿರಬಹುದು. “ಹಸ್ತಮೈಥುನ” ಎಂಬ ಪದ ಬೈಬಲಿನಲ್ಲಿ ಕಂಡುಬರುವುದಿಲ್ಲ ನಿಜ. ಆದರೆ ಇದು ಒಬ್ಬ ವ್ಯಕ್ತಿಯನ್ನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಮಲಿನಗೊಳಿಸುವ ಅಭ್ಯಾಸವಾಗಿದೆ ಎನ್ನುವುದರಲ್ಲಿ ಏನಾದರೂ ಸಂದೇಹವಿದೆಯೋ? ಇಂತಹ ಮಲಿನತೆಯು ಮುಂದುವರಿಯುವಲ್ಲಿ ಯೆಹೋವನೊಂದಿಗಿನ ಒಬ್ಬನ ಸಂಬಂಧಕ್ಕೆ ಗುರುತರ ಹಾನಿಯಾಗಿ ಅವನನ್ನು ದೇವರ ದೃಷ್ಟಿಯಲ್ಲಿ ಅಶುದ್ಧನನ್ನಾಗಿ ಮಾಡುವುದಲ್ಲವೋ? ಆದ್ದರಿಂದ “ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು” ‘ನಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿ, ಜಾರತ್ವ ಬಂಡುತನ [“ಅಶುದ್ಧತ್ವ,” NIBV] ಕಾಮಾಭಿಲಾಷೆ ದುರಾಶೆ ಲೋಭ ಇವುಗಳನ್ನು ವಿಸರ್ಜಿಸಿಬಿಡುವಂತೆ’ ಅಪೊಸ್ತಲ ಪೌಲನು ನೀಡಿದ ಬುದ್ಧಿವಾದವನ್ನು ಗಂಭೀರವಾಗಿ ತೆಗೆದುಕೊಳ್ಳೋಣ.—ಸೈತಾನನು ಆಳುತ್ತಿರುವ ಈ ಲೋಕವು ಅಶುದ್ಧ ನಡತೆಯನ್ನು ಸಹಿಸುತ್ತದೆ ಮಾತ್ರವಲ್ಲ ಅದನ್ನು ಉತ್ತೇಜಿಸುತ್ತದೆ ಕೂಡ. ಅಶುದ್ಧ ನಡವಳಿಕೆಯಲ್ಲಿ ತೊಡಗುವ ಪ್ರಲೋಭನೆಯನ್ನು ನಿಗ್ರಹಿಸುವುದು ದೊಡ್ಡ ಸವಾಲೇ ಸರಿ. ಆದರೆ ನಿಜ ಕ್ರೈಸ್ತರು, ‘ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುವ ಅನ್ಯಜನರ ಪ್ರಕಾರ ನಡೆದುಕೊಳ್ಳಬಾರದು.’ (ಎಫೆ. 4:17, 18) ಗುಪ್ತ ಹಾಗೂ ಬಹಿರಂಗವಾದ ಅಶುದ್ಧ ನಡವಳಿಕೆಯಿಂದ ದೂರವಿರುವಲ್ಲಿ ಮಾತ್ರ ‘ಪರಿಶುದ್ಧ ಮಾರ್ಗದಲ್ಲಿ’ ನಡೆಯುತ್ತಾ ಮುಂದುವರಿಯಲು ಯೆಹೋವನು ನಮ್ಮನ್ನು ಅನುಮತಿಸುವನು.
“ಸಿಂಹವು ಅಲ್ಲಿರದು”
ಪರಿಶುದ್ಧ ದೇವರಾದ ಯೆಹೋವನ ಅನುಗ್ರಹ ಪಡೆಯಲು ಕೆಲವರಿಗೆ ತಮ್ಮ ನಡೆನುಡಿಯಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಬೇಕಾದೀತು. ಯೆಶಾಯ 35:9 ಹೇಳುವುದು: “ಸಿಂಹವು ಅಲ್ಲಿರದು, ಕ್ರೂರಜಂತು ಅಲ್ಲಿ ಸೇರದು,” ಅಂದರೆ “ಪರಿಶುದ್ಧ ಮಾರ್ಗ”ದಲ್ಲಿ ಇರದು. ನಡೆನುಡಿಯಲ್ಲಿ ಆಕ್ರಮಣಶೀಲರೂ ಹಿಂಸಾತ್ಮಕರೂ ಆಗಿರುವ ಜನರು ಸಾಂಕೇತಿಕ ರೀತಿಯಲ್ಲಿ ಕ್ರೂರಜಂತುಗಳಂತಿದ್ದಾರೆ. ದೇವರ ನೀತಿಯ ಹೊಸ ಲೋಕದಲ್ಲಿ ಇಂತಹ ಜನರಿಗೆ ಖಂಡಿತ ಸ್ಥಳವಿರದು. (ಯೆಶಾ. 11:6; 65:25) ಆದ್ದರಿಂದ ದೇವರ ಒಪ್ಪಿಗೆಯನ್ನು ಪಡೆಯಲಿಚ್ಛಿಸುವವರು ತಮ್ಮಲ್ಲಿರುವ ಮೃಗೀಯ ಗುಣಲಕ್ಷಣಗಳನ್ನು ಬಿಟ್ಟು ಪವಿತ್ರತ್ವದ ಹಾದಿಯನ್ನು ಬೆನ್ನಟ್ಟುವುದು ಅತ್ಯಗತ್ಯ.
ಬೈಬಲ್ ನಮಗೆ ಬುದ್ಧಿ ಹೇಳುವುದು: “ಎಲ್ಲಾ ಕಹಿತನ, ಕೋಪ, ಕ್ರೋಧ, ಕಲಹ, ದುರ್ಭಾಷೆ ಇವುಗಳನ್ನೂ ಎಲ್ಲಾ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.” (ಎಫೆ. 4:31, NIBV) ಕೊಲೊಸ್ಸೆ 3:8 ತಿಳಿಸುವುದು: “ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ.” ಈ ಎರಡು ವಚನಗಳಲ್ಲಿ ಬಳಸಲಾಗಿರುವ “ದುರ್ಭಾಷೆ” ಎಂಬ ಪದ ಹಾನಿಕರ, ಕೀಳ್ಮಟ್ಟದ ಅಥವಾ ದೂಷಣೆಯ ಮಾತುಗಳನ್ನು ಒಳಗೊಂಡಿದೆ.
ಮನನೋಯಿಸುವ ಹಾಗೂ ಅಶ್ಲೀಲ ಮಾತುಗಳ ಬಳಕೆ ಇಂದು ಎಷ್ಟು ಸರ್ವಸಾಮಾನ್ಯ ಆಗಿಬಿಟ್ಟಿದೆಯೆಂದರೆ ಅದು ಕುಟುಂಬವೃತ್ತದಲ್ಲೂ ನುಸುಳಿದೆ. ದಂಪತಿಗಳು ಪರಸ್ಪರರೊಂದಿಗೆ ಅಥವಾ ಮಕ್ಕಳೊಂದಿಗೆ ಕಟುವಾಗಿ, ನಿಷ್ಠುರವಾಗಿ ಇಲ್ಲವೇ ಹೀನಾಯವಾಗಿ ಮಾತಾಡುತ್ತಾರೆ. ಕ್ರೈಸ್ತರ ಮನೆಗಳಲ್ಲಿ ಇಂತಹ ವಾಗ್ದಾಳಿಗಳು ನಡೆಯಲೇಬಾರದು.—1 ಕೊರಿಂ. 5:11.
“ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು” ಬೆನ್ನಟ್ಟುವುದು ಆಶೀರ್ವಾದದಾಯಕ!
ಪರಿಶುದ್ಧ ದೇವರಾದ ಯೆಹೋವನನ್ನು ಸೇವಿಸುವುದು ಎಂಥ ಸುಯೋಗ! (ಯೆಹೋ. 24:19) ಯೆಹೋವನು ನಮ್ಮನ್ನು ಬಹುಮೂಲ್ಯವಾದ ಆಧ್ಯಾತ್ಮಿಕ ಪರದೈಸಿನೊಳಗೆ ತಂದಿದ್ದಾನೆ. ಯೆಹೋವನ ದೃಷ್ಟಿಯಲ್ಲಿ ನಮ್ಮ ನಡತೆಯನ್ನು ಪರಿಶುದ್ಧವಾಗಿ ಇಟ್ಟುಕೊಳ್ಳುವುದು ನಿಸ್ಸಂದೇಹವಾಗಿ ಅತ್ಯುತ್ತಮ ಜೀವನ ಮಾರ್ಗವಾಗಿದೆ.
ದೇವರು ವಾಗ್ದಾನಿಸಿರುವ ಭೂಪರದೈಸ್ ಬೇಗನೆ ವಾಸ್ತವಿಕತೆ ಆಗಲಿದೆ. (ಯೆಶಾ. 35:1, 2, 5-7) ಇದಕ್ಕಾಗಿ ಹಾತೊರೆದು ದೈವಭಕ್ತಿಯ ಮಾರ್ಗಕ್ರಮವನ್ನು ಬೆನ್ನಟ್ಟುವವರು ಅಲ್ಲಿ ಸ್ಥಳಾವಕಾಶವನ್ನು ಪಡೆದು ಆಶೀರ್ವದಿತರಾಗುವರು. (ಯೆಶಾ. 65:17, 21) ಆದ್ದರಿಂದ ಶುದ್ಧವಾದ ಆಧ್ಯಾತ್ಮಿಕ ಸ್ಥಿತಿಯಲ್ಲಿದ್ದು ಯೆಹೋವನನ್ನು ಆರಾಧಿಸುವುದನ್ನು ಮುಂದುವರಿಸೋಣ ಮತ್ತು ಆತನೊಂದಿಗೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳೋಣ.
[ಪಾದಟಿಪ್ಪಣಿ]
^ ಪ್ಯಾರ. 12 “ಅಶುದ್ಧಕೃತ್ಯಗಳನ್ನು ಅತ್ಯಾಶೆಯಿಂದ” ನಡೆಸುವದಕ್ಕೂ ‘ಅಶುದ್ಧತ್ವಕ್ಕೂ’ ವ್ಯತ್ಯಾಸ ಏನೆಂಬುದರ ವಿವರಣೆಗಾಗಿ 2006, ಜುಲೈ 15ರ ಕಾವಲಿನಬುರುಜು (ಇಂಗ್ಲಿಷ್) ಪುಟ 29-31ನ್ನು ನೋಡಿ.
[ಪುಟ 26ರಲ್ಲಿರುವ ಚಿತ್ರ]
‘ಪರಿಶುದ್ಧ ಮಾರ್ಗದಲ್ಲಿ’ ನಡೆಯಲು ಯೆಹೂದ್ಯರು ಏನು ಮಾಡಬೇಕಿತ್ತು?
[ಪುಟ 27ರಲ್ಲಿರುವ ಚಿತ್ರ]
ಅಶ್ಲೀಲ ಚಿತ್ರಣಗಳು ದೇವರೊಂದಿಗಿನ ಒಬ್ಬನ ಸಂಬಂಧವನ್ನು ಕೆಡಿಸುತ್ತವೆ
[ಪುಟ 28ರಲ್ಲಿರುವ ಚಿತ್ರ]
‘ಎಲ್ಲಾ ಕಲಹ, ದುರ್ಭಾಷೆಯನ್ನು ನಿಮ್ಮಿಂದ ದೂರಮಾಡಿರಿ’