ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೌಲನ ಮಾದರಿಯನ್ನು ಅನುಸರಿಸಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿರಿ

ಪೌಲನ ಮಾದರಿಯನ್ನು ಅನುಸರಿಸಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿರಿ

ಪೌಲನ ಮಾದರಿಯನ್ನು ಅನುಸರಿಸಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿರಿ

“ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.”—2 ತಿಮೊ. 4:7.

ಆ ಮನುಷ್ಯನು ಜಾಣನೂ ದೃಢ ಸ್ವಭಾವದವನೂ ಆಗಿದ್ದನು. ಆದರೆ ಅವನು ‘ಶರೀರಭಾವದ ಆಶೆಗಳಿಗೆ ಅಧೀನನಾಗಿ ನಡೆದನು.’ (ಎಫೆ. 2:3) ಆದುದರಿಂದಲೇ ತಾನು “ದೂಷಕನೂ ಹಿಂಸಕನೂ ಬಲಾತ್ಕಾರಿಯೂ ಆಗಿದ್ದ” ಮನುಷ್ಯನೆಂದು ಅನಂತರ ಅವನು ತನ್ನನ್ನು ತಾನೇ ವರ್ಣಿಸಿದನು. (1 ತಿಮೊ. 1:12) ಆ ಮನುಷ್ಯನು ಬೇರಾರೂ ಅಲ್ಲ ತಾರ್ಸದ ಸೌಲನೇ.

2 ಸಕಾಲದಲ್ಲಿ ಸೌಲನು ತನ್ನ ಜೀವನದಲ್ಲಿ ಅತಿ ದೊಡ್ಡ ಬದಲಾವಣೆಗಳನ್ನು ಮಾಡಿದನು. ತನ್ನ ಹಳೆಯ ಜೀವನರೀತಿಯನ್ನು ಬಿಟ್ಟುಬಿಟ್ಟು, ‘ಸ್ವಪ್ರಯೋಜನವನ್ನು ಚಿಂತಿಸದೆ ಮನುಷ್ಯರೆಲ್ಲರ ಪ್ರಯೋಜನವನ್ನು ಚಿಂತಿಸಲು’ ಕಠಿನ ಪರಿಶ್ರಮಪಟ್ಟನು. (1 ಕೊರಿಂ. 10:33) ಅವನು ಸೌಮ್ಯಭಾವದವನಾದನು ಮತ್ತು ತನ್ನ ದ್ವೇಷಕ್ಕೆ ಗುರಿಯಾಗಿದ್ದಿರಬಹುದಾದ ಜನರ ಕಡೆಗೆ ಕೋಮಲ ಮಮತೆಯನ್ನು ತೋರಿಸಿದನು. (1 ಥೆಸಲೊನೀಕ 2:7, 8 ಓದಿ.) ‘ನಾನು ಸುವಾರ್ತೆಗೆ ಸೇವಕನಾದೆನು. ನಾನು ಕ್ರಿಸ್ತನ ಅಪ್ರಮೇಯವಾದ ಐಶ್ವರ್ಯದ ವಿಷಯವಾದ ಶುಭಸಮಾಚಾರವನ್ನು ಅನ್ಯಜನರಿಗೆ ಪ್ರಸಿದ್ಧಿಪಡಿಸುವ ಹಾಗೆ ದೇವಜನರೊಳಗೆ ಅತ್ಯಲ್ಪನಾದ ನನಗೆ [ಈ ಅಪಾತ್ರ ದಯೆಯು] ಅನುಗ್ರಹಿಸೋಣವಾಯಿತು’ ಎಂದು ಅವನು ಬರೆದನು.—ಎಫೆ. 3:7, 8.

3 ಪೌಲ ಎಂದೂ ಖ್ಯಾತನಾಗಿರುವ ಸೌಲನು ಗಮನಾರ್ಹ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿದನು. (ಅ. ಕೃ. 13:9) ಸತ್ಯದಲ್ಲಿನ ನಮ್ಮ ವೈಯಕ್ತಿಕ ಪ್ರಗತಿಯನ್ನು ಹೆಚ್ಚಿಸುವ ಯಶಸ್ವಿಕರವಾದ ಒಂದು ವಿಧವು ಪೌಲನ ಪತ್ರಗಳನ್ನು ಮತ್ತು ಅವನ ಶುಶ್ರೂಷೆಯ ದಾಖಲೆಯನ್ನು ಅಧ್ಯಯನಮಾಡಿ, ಅನಂತರ ಅವನ ನಂಬಿಕೆಯ ಮಾದರಿಯನ್ನು ಅನುಕರಿಸುವುದೇ ಆಗಿದೆ. (1 ಕೊರಿಂಥ 11:1; ಇಬ್ರಿಯ 13:7 ಓದಿ.) ಹೀಗೆ ಮಾಡುವುದು ಕ್ರಮದ ವೈಯಕ್ತಿಕ ಅಧ್ಯಯನವನ್ನು ಮಾಡುವಂತೆ, ಜನರ ಕಡೆಗೆ ನಿಜವಾದ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಮತ್ತು ನಮ್ಮ ಕುರಿತಾಗಿ ಸರಿಯಾದ ದೃಷ್ಟಿಕೋನವನ್ನು ಹೊಂದಿರುವಂತೆ ನಮ್ಮನ್ನು ಪ್ರೇರೇಪಿಸಬಲ್ಲದು. ಇದು ಹೇಗೆಂಬುದನ್ನು ನಾವೀಗ ಪರಿಗಣಿಸೋಣ.

ಪೌಲನ ಅಧ್ಯಯನ ರೂಢಿ

4 ‘ಗಮಲಿಯೇಲನ ಪಾದಸನ್ನಿಧಿಯಲ್ಲಿ ಪಿತೃಗಳ ಧರ್ಮಶಾಸ್ತ್ರದಲ್ಲಿ ಪೂರ್ಣ ಶಿಕ್ಷಿತನು’ ಮತ್ತು ಒಬ್ಬ ಫರಿಸಾಯನು ಆಗಿದ್ದ ಪೌಲನಿಗೆ ಈಗಾಗಲೇ ಶಾಸ್ತ್ರಗ್ರಂಥದ ತಕ್ಕಮಟ್ಟಿನ ಜ್ಞಾನವಿತ್ತು. (ಅ. ಕೃ. 22:1-3; ಫಿಲಿ. 3:4-6) ಅವನು ದೀಕ್ಷಾಸ್ನಾನ ಪಡೆದುಕೊಂಡ ಕೂಡಲೆ ‘ಅರಬಸ್ಥಾನಕ್ಕೆ ಹೋದನು.’ ಅದು ಮನನಮಾಡಲು ಸೂಕ್ತವಾಗಿದ್ದ ಸಿರಿಯದ ಮರುಭೂಮಿ ಅಥವಾ ಅರೇಬಿಯನ್‌ ದ್ವೀಪಕಲ್ಪದ ಯಾವುದೋ ಒಂದು ನಿಶ್ಶಬ್ದ ಸ್ಥಳವಾಗಿದ್ದಿರಬಹುದು. (ಗಲಾ. 1:17) ಯೇಸುವೇ ಮೆಸ್ಸೀಯನಾಗಿದ್ದಾನೆಂದು ರುಜುಪಡಿಸುವ ಶಾಸ್ತ್ರವಚನಗಳನ್ನು ಪರೀಕ್ಷಿಸಲು ಪೌಲನು ಬಯಸಿದ್ದಿರಬೇಕು. ಮಾತ್ರವಲ್ಲದೆ, ತನ್ನ ಮುಂದಿದ್ದ ಕೆಲಸಕ್ಕಾಗಿ ತನ್ನನ್ನು ಸಿದ್ಧಪಡಿಸಿಕೊಳ್ಳಲು ಅವನು ಬಯಸಿದನು. (ಅ. ಕೃತ್ಯಗಳು 9:15, 16, 20, 22 ಓದಿ.) ಆಧ್ಯಾತ್ಮಿಕ ವಿಷಯಗಳನ್ನು ಮನನಮಾಡಲು ಪೌಲನು ಸಮಯವನ್ನು ತೆಗೆದುಕೊಂಡನು.

5 ವೈಯಕ್ತಿಕ ಅಧ್ಯಯನದಿಂದ ಪೌಲನು ಗಳಿಸಿದ ಶಾಸ್ತ್ರಗ್ರಂಥದ ಜ್ಞಾನ ಮತ್ತು ಒಳನೋಟವು ಸತ್ಯವನ್ನು ಪರಿಣಾಮಕಾರಿಯಾಗಿ ಕಲಿಸಲು ಅವನನ್ನು ಶಕ್ತನನ್ನಾಗಿ ಮಾಡಿತು. ಉದಾಹರಣೆಗೆ, ಯೇಸುವೇ ಮೆಸ್ಸೀಯನೆಂದು ರುಜುಪಡಿಸಲು ಪಿಸಿದ್ಯ ಸೀಮೆಯ ಅಂತಿಯೋಕ್ಯದಲ್ಲಿನ ಸಭಾಮಂದಿರದಲ್ಲಿ ಪೌಲನು ಇಬ್ರಿಯ ಶಾಸ್ತ್ರಗ್ರಂಥದ ಕಡಿಮೆಪಕ್ಷ ಐದು ನೇರ ಉಲ್ಲೇಖಗಳನ್ನು ಮಾಡಿದನು. ಇದಲ್ಲದೆ, ಪವಿತ್ರ ಬರಹಗಳಿಗೆ ಸೂಚಿಸಿ ಪೌಲನು ಅನೇಕ ಬಾರಿ ಮಾತಾಡಿದನು. ಅವನ ಬೈಬಲ್‌ ಚರ್ಚೆಗಳು ಎಷ್ಟು ಒಡಂಬಡಿಸುವಂಥವುಗಳು ಆಗಿದ್ದವೆಂದರೆ ಹೆಚ್ಚನ್ನು ಕಲಿಯಲಿಕ್ಕಾಗಿ “ಯೆಹೂದ್ಯರಲ್ಲಿಯೂ ದೈವಭಕ್ತರಾಗಿದ್ದ ಯೆಹೂದ್ಯ ಮತಾವಲಂಭಿಗಳಲ್ಲಿಯೂ ಅನೇಕರು ಪೌಲ ಬಾರ್ನಬರನ್ನು ಹಿಂಬಾಲಿಸಿದರು.” (ಅ. ಕೃ. 13:14-44) ವರುಷಗಳ ಅನಂತರ ರೋಮಿನಲ್ಲಿದ್ದ ಯೆಹೂದ್ಯರ ಒಂದು ಗುಂಪು ಪೌಲನು ತಂಗಿದ್ದ ಸ್ಥಳಕ್ಕೆ ಬಂದಾಗ, ಅವನು “ದೇವರ ರಾಜ್ಯವನ್ನು ಕುರಿತು ಪ್ರಮಾಣವಾಗಿ ಸಾಕ್ಷಿಹೇಳುತ್ತಾ ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಗ್ರಂಥಗಳನ್ನೂ ಆಧಾರಮಾಡಿಕೊಂಡು ಯೇಸುವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಇದ್ದನು.”—ಅ. ಕೃ. 28:17, 22, 23.

6 ಕಷ್ಟಗಳನ್ನು ಎದುರಿಸಿದ ಸಮಯಗಳಲ್ಲಿ ಪೌಲನು ಶಾಸ್ತ್ರವಚನಗಳನ್ನು ಪರೀಕ್ಷಿಸುತ್ತಾ ಅದರ ಪ್ರೇರಿತ ಸಂದೇಶದಿಂದ ಬಲವನ್ನು ಹೊಂದುತ್ತಾ ಇದ್ದನು. (ಇಬ್ರಿ. 4:12) ಪೌಲನು ತನ್ನ ವಧೆಗಿಂತ ಮುಂಚೆ ರೋಮಿನಲ್ಲಿ ಬಂಧಿವಾಸಿಯಾಗಿದ್ದಾಗ ತನಗಾಗಿ “ಪುಸ್ತಕಗಳನ್ನೂ . . . ಚರ್ಮದ ಕಾಗದಗಳನ್ನೂ” ತರುವಂತೆ ತಿಮೊಥೆಯನನ್ನು ಕೇಳಿಕೊಂಡನು. (2 ತಿಮೊ. 4:13) ಅವು ಪೌಲನು ತನ್ನ ಆಳವಾದ ಅಧ್ಯಯನಕ್ಕಾಗಿ ಉಪಯೋಗಿಸಿದ ಹೀಬ್ರು ಶಾಸ್ತ್ರಗ್ರಂಥದ ಭಾಗಗಳಾಗಿದ್ದಿರಬಹುದು. ಕ್ರಮವಾಗಿ ಬೈಬಲ್‌ ಅಧ್ಯಯನಮಾಡುತ್ತಾ ಶಾಸ್ತ್ರಗ್ರಂಥದ ಜ್ಞಾನವನ್ನು ಗಳಿಸುವುದು ಪೌಲನಿಗೆ ಆಧ್ಯಾತ್ಮಿಕವಾಗಿ ಸ್ಥಿರವಾಗಿ ಉಳಿಯಲು ಅತಿ ಪ್ರಾಮುಖ್ಯ ಸಂಗತಿಯಾಗಿತ್ತು.

7 ಕ್ರಮವಾದ ಬೈಬಲ್‌ ಅಧ್ಯಯನ ಮತ್ತು ಉದ್ದೇಶಪೂರ್ಣ ಧ್ಯಾನವು ಆಧ್ಯಾತ್ಮಿಕ ಪ್ರಗತಿಮಾಡಲು ಸಹಾಯಮಾಡುತ್ತದೆ. (ಇಬ್ರಿ. 5:12-14) “ನೀನು ಉಸಿರಿದ ಧರ್ಮಶಾಸ್ತ್ರವು ಸಾವಿರಾರು ಚಿನ್ನಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ. ನಿನ್ನ ಆಜ್ಞೆಗಳ ಮೂಲಕ ನನ್ನ ವೈರಿಗಳಿಗಿಂತ ಬುದ್ಧಿವಂತನಾಗಿದ್ದೇನೆ; ಸದಾಕಾಲವೂ ಅವೇ ನನಗಿವೆ. ನಿನ್ನ ವಾಕ್ಯವನ್ನೇ ಅನುಸರಿಸಬೇಕೆಂದು ನನ್ನ ಕಾಲುಗಳನ್ನು ಯಾವ ಕೆಟ್ಟ ದಾರಿಗೂ ಹೋಗದಂತೆ ಕಾದಿದ್ದೇನೆ” ಎಂದು ದೇವರ ವಾಕ್ಯದ ಮೌಲ್ಯದ ಕುರಿತು ಕೀರ್ತನೆಗಾರನು ಹಾಡಿದನು. (ಕೀರ್ತ. 119:72, 98, 101) ನಿಮಗೆ ಒಂದು ವೈಯಕ್ತಿಕ ಬೈಬಲ್‌ ಅಧ್ಯಯನದ ರೂಢಿ ಇದೆಯೊ? ಪ್ರತಿ ದಿನ ಬೈಬಲನ್ನು ಓದುವ ಮತ್ತು ಓದಿದ ವಿಷಯವನ್ನು ಧ್ಯಾನಿಸುವ ಮೂಲಕ ದೇವರ ಸೇವೆಯಲ್ಲಿ ನಿಮಗೆ ಮುಂದಕ್ಕೆ ಸಿಗಲಿರುವ ನೇಮಕಗಳಿಗೆ ನಿಮ್ಮನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೀರೊ?

ಜನರನ್ನು ಪ್ರೀತಿಸಲು ಸೌಲನು ಕಲಿತನು

8 ಕ್ರೈಸ್ತನಾಗುವ ಮುಂಚೆ ಸೌಲನು ತನ್ನ ಧರ್ಮದ ಕುರಿತು ಹುರುಪುಳ್ಳವನಾಗಿದ್ದನು. ಆದರೆ ಯೆಹೂದಿ ಮತದವರಲ್ಲದ ಜನರ ಕುರಿತು ಅವನಿಗೆ ಸ್ವಲ್ಪವೂ ಕಾಳಜಿಯಿರಲಿಲ್ಲ. (ಅ. ಕೃ. 26:4, 5) ಕೆಲವು ಯೆಹೂದ್ಯರು ಸ್ತೆಫನನನ್ನು ಕಲ್ಲೆಸೆದು ಕೊಲ್ಲುವಾಗ ಅವನು ಸಮ್ಮತಿ ಸೂಚಿಸುವವನಾಗಿ ಅದನ್ನು ನೋಡುತ್ತಾ ನಿಂತಿದ್ದನು. ಈ ಮರಣ ಶಿಕ್ಷೆಯು ಸ್ತೆಫನನಿಗೆ ತಕ್ಕದ್ದಾಗಿತ್ತೆಂದು ಅವನು ಭಾವಿಸಿದ್ದಿರಬಹುದು. ಈ ಘಟನೆಯು ಇಂಥ ಕೆಲಸಗಳನ್ನು ಮತ್ತಷ್ಟು ಮಾಡಲು ಅವನನ್ನು ಹುರಿದುಂಬಿಸಿರಬೇಕು. (ಅ. ಕೃ. 6:8-14; 7:54–8:1) “ಸೌಲನು ಮನೆಮನೆಗಳಲ್ಲಿ ಹೊಕ್ಕು ಗಂಡಸರನ್ನೂ ಹೆಂಗಸರನ್ನೂ ಎಳಕೊಂಡು ಬಂದು ಸೆರೆಮನೆಗೆ ಹಾಕಿಸಿ ಸಭೆಯನ್ನು ಹಾಳುಮಾಡುತ್ತಿದ್ದನು” ಎಂದು ಪ್ರೇರಿತ ವೃತ್ತಾಂತವು ತಿಳಿಸುತ್ತದೆ. (ಅ. ಕೃ. 8:3) ಅವನು ‘ಪರಪಟ್ಟಣಗಳ ತನಕ ಅವರನ್ನು ಹಿಂಸೆಪಡಿಸುತ್ತಾ’ ಹೋದನು.—ಅ. ಕೃ. 26:11.

9 ಸೌಲನು ಕ್ರಿಸ್ತನ ಶಿಷ್ಯರನ್ನು ಹಿಂಸಿಸಲು ದಮಸ್ಕಕ್ಕೆ ಹೋಗುತ್ತಿದ್ದಾಗ ಕರ್ತನಾದ ಯೇಸು ಕಾಣಿಸಿಕೊಂಡನು. ದೇವರ ಮಗನ ಅದ್ಭುತಕರ ಪ್ರಕಾಶದಿಂದ ಸೌಲನು ಕುರುಡನಾದನು ಮತ್ತು ಬೇರೆಯವರ ಮೇಲೆ ಅವಲಂಬಿಸಬೇಕಾಗಿ ಬಂತು. ಸೌಲನಿಗೆ ಪುನಃ ದೃಷ್ಟಿ ಕೊಡುವಂತೆ ಯೆಹೋವನು ಅನನೀಯನನ್ನು ಉಪಯೋಗಿಸಿದ ಸಮಯದೊಳಗಾಗಿ ಜನರ ಕಡೆಗಿನ ಸೌಲನ ಮನೋಭಾವವು ಬದಲಾಗಿತ್ತು. (ಅ. ಕೃ. 9:1-30) ಅವನು ಕ್ರಿಸ್ತನ ಹಿಂಬಾಲಕನಾದ ಬಳಿಕ ಜನರೆಲ್ಲರೊಂದಿಗೆ ವ್ಯವಹರಿಸುವಾಗ ಯೇಸುವಿನಂತೆಯೇ ವ್ಯವಹರಿಸಲು ಕಠಿನ ಪರಿಶ್ರಮಪಟ್ಟನು. ಇದಕ್ಕಾಗಿ ಅವನು ಹಿಂಸಾಚಾರದ ಮನೋಭಾವವನ್ನು ತೆಗೆದುಹಾಕಿ “ಎಲ್ಲರ ಸಂಗಡ ಸಮಾಧಾನದಿಂದ” ಇರಬೇಕಾಗಿತ್ತು.—ರೋಮಾಪುರ 12:17-21 ಓದಿ.

10 ಇತರರೊಂದಿಗೆ ಕೇವಲ ಸಮಾಧಾನದಿಂದಿರುವುದರಲ್ಲಿ ಮಾತ್ರವೇ ಪೌಲನು ತೃಪ್ತನಾಗಲಿಲ್ಲ. ಅವರಿಗೆ ನಿಜವಾದ ಪ್ರೀತಿಯನ್ನು ತೋರಿಸಲು ಬಯಸಿದನು ಮತ್ತು ಇದನ್ನು ಮಾಡಲು ಕ್ರೈಸ್ತ ಶುಶ್ರೂಷೆಯು ಅವನಿಗೆ ಸಂದರ್ಭವನ್ನು ಒದಗಿಸಿತು. ತನ್ನ ಮೊದಲ ಮಿಷನೆರಿ ಪ್ರಯಾಣದಲ್ಲಿ ಅವನು ಏಷ್ಯಾ ಮೈನರ್‌ನಲ್ಲಿ ಸುವಾರ್ತೆಯನ್ನು ಸಾರಿದನು. ತೀಕ್ಷ್ಣ ವಿರೋಧದ ಹೊರತಾಗಿಯೂ ದೀನ ಜನರು ಕ್ರೈಸ್ತತ್ವವನ್ನು ತಮ್ಮದಾಗಿಸಿಕೊಳ್ಳುವಂತೆ ಸಹಾಯಮಾಡುವುದರಲ್ಲಿ ಪೌಲನೂ ಅವನ ಸಂಗಡಿಗರೂ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಲುಸ್ತ್ರ ಮತ್ತು ಇಕೋನ್ಯ ಪಟ್ಟಣದಲ್ಲಿ ಪೌಲನನ್ನು ವಿರೋಧಿಗಳು ಕೊಲ್ಲಲು ಪ್ರಯತ್ನಿಸಿದ್ದರೂ ಅದೇ ಪಟ್ಟಣಕ್ಕೆ ಅವರು ಪುನಃ ಭೇಟಿನೀಡಿದರು.—ಅ. ಕೃ. 13:1-3; 14:1-7, 19-23.

11 ಅನಂತರ ಯೋಗ್ಯರಾದ ಜನರನ್ನು ಹುಡುಕಲು ಪೌಲನೂ ಅವನ ಸಂಗಡಿಗರೂ ಮಕೆದೋನ್ಯದ ಫಿಲಿಪ್ಪಿ ಪಟ್ಟಣಕ್ಕೆ ಹೋದರು. ಯೆಹೂದಿ ಮತಾವಲಂಬಿಯಾದ ಲುದ್ಯಳು ಸುವಾರ್ತೆಗೆ ಕಿವಿಗೊಟ್ಟು ಕ್ರೈಸ್ತಳಾದಳು. ಅಧಿಪತಿಗಳು ಪೌಲ ಮತ್ತು ಸೀಲರಿಗೆ ಚಡಿಗಳಿಂದ ಹೊಡೆಸಿ ಸೆರೆಮನೆಯೊಳಗೆ ಹಾಕಿಸಿದರು. ಅಂಥ ಪರಿಸ್ಥಿತಿಯಲ್ಲಿಯೂ ಪೌಲನು ಸೆರೆಯ ಯಜಮಾನನಿಗೆ ಸಾರಿದನು ಮತ್ತು ಇದರ ಫಲಿತಾಂಶವಾಗಿ ಅವನೂ ಅವನ ಕುಟುಂಬ ಸದಸ್ಯರೂ ದೀಕ್ಷಾಸ್ನಾನ ಪಡೆದುಕೊಂಡು ಯೆಹೋವನ ಆರಾಧಕರಾದರು.—ಅ. ಕೃ. 16:11-34.

12 ಈ ಹಿಂದೆ ಹಿಂಸಕನಾಗಿದ್ದ ಸೌಲನು ತಾನು ಹಿಂಸಿಸುತ್ತಿದ್ದವರ ನಂಬಿಕೆಯನ್ನು ತನ್ನದಾಗಿಸಿಕೊಂಡದ್ದು ಏಕೆ? ಕ್ರೂರಿಯಾಗಿದ್ದ ಆ ಮನುಷ್ಯನು ಅನಂತರ ದಯಾಭರಿತನೂ ಪ್ರೀತಿಭರಿತನೂ ಆದ ಅಪೊಸ್ತಲನಾಗುವಂತೆ ಯಾವುದು ಪ್ರೇರೇಪಿಸಿತು? ಇತರರು ದೇವರ ಮತ್ತು ಕ್ರಿಸ್ತನ ಕುರಿತು ಕಲಿಯಶಕ್ತರಾಗುವಂತೆ ತನ್ನ ಜೀವವನ್ನೇ ಗಂಡಾಂತರಕ್ಕೆ ಒಡ್ಡುವಷ್ಟು ಸಿದ್ಧನಿರಲು ಅವನನ್ನು ಯಾವುದು ಪ್ರಚೋದಿಸಿತು? ಪೌಲನು ತಾನೇ ವಿವರಿಸುವುದು: ‘ತನ್ನ ಕೃಪೆಯಿಂದ [ನನ್ನನ್ನು] ಕರೆದ ದೇವರು ತನ್ನ ಮಗನನ್ನು ನನ್ನೊಳಗೆ ಪ್ರಕಟಿಸುವದಕ್ಕೆ ಇಚ್ಛೈಸಿದನು.’ (ಗಲಾ. 1:15, 16) ಇದಲ್ಲದೆ, ಪೌಲನು ತಿಮೊಥೆಯನಿಗೆ ಬರೆದದ್ದು: “ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸು ಮುಖ್ಯಪಾಪಿಯಾದ ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು.” (1 ತಿಮೊ. 1:16) ಯೆಹೋವನು ಪೌಲನನ್ನು ಕ್ಷಮಿಸಿದನು. ಇಂಥ ಅಪಾತ್ರ ದಯೆಯನ್ನೂ ಕರುಣೆಯನ್ನೂ ಹೊಂದಿದ ಕಾರಣ ಪೌಲನು ಸುವಾರ್ತೆಯನ್ನು ಸಾರುವ ಮೂಲಕ ಇತರರಿಗೂ ಪ್ರೀತಿಯನ್ನು ತೋರಿಸುವಂತೆ ಪ್ರೇರೇಪಿಸಲ್ಪಟ್ಟನು.

13 ಅದರಂತೆ, ಯೆಹೋವನು ನಮ್ಮ ಪಾಪಗಳನ್ನೂ ಅಪರಾಧಗಳನ್ನೂ ಕ್ಷಮಿಸುತ್ತಾನೆ. (ಕೀರ್ತ. 103:8-14) “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” ಎಂದು ಕೀರ್ತನೆಗಾರನು ಕೇಳಿದನು. (ಕೀರ್ತ. 130:3) ದೇವರ ಕರುಣೆಯನ್ನು ಹೊಂದದಿದ್ದರೆ ನಮ್ಮಲ್ಲಿ ಯಾರೂ ಪವಿತ್ರ ಸೇವೆಯಲ್ಲಿ ಆನಂದಿಸಲಾರೆವು ಇಲ್ಲವೆ ನಿತ್ಯಜೀವ ಪಡೆಯುವುದನ್ನು ಸಹ ಮುನ್ನೋಡಲಾರೆವು. ನಮ್ಮೆಲ್ಲರಿಗೂ ದೇವರ ಅಪಾತ್ರ ದಯೆಯು ಹೇರಳವಾಗಿ ತೋರಿಸಲ್ಪಟ್ಟಿದೆ. ಆದುದರಿಂದ ಪೌಲನಂತೆ ನಾವು ಇತರರಿಗೆ ಸಾರುವ, ಸತ್ಯವನ್ನು ಕಲಿಸುವ ಮತ್ತು ನಮ್ಮ ಜೊತೆ ವಿಶ್ವಾಸಿಗಳನ್ನು ಬಲಪಡಿಸುವ ಮೂಲಕ ನಮ್ಮ ಪ್ರೀತಿಯನ್ನು ವಿಸ್ತರಿಸಬೇಕು.—ಅ.  ಕೃತ್ಯಗಳು 14:21-23 ಓದಿ.

14 ಸುವಾರ್ತೆಯ ಶುಶ್ರೂಷಕನಾಗಿ ಪ್ರಗತಿಮಾಡಲು ಪೌಲನು ಬಯಸಿದನು ಮತ್ತು ಯೇಸುವಿನ ಮಾದರಿಯು ಅವನ ಹೃದಯವನ್ನು ಸ್ಪರ್ಶಿಸಿತು. ದೇವರ ಮಗನು ಜನರಿಗೆ ಎಣೆಯಿಲ್ಲದ ಪ್ರೀತಿಯನ್ನು ತೋರಿಸಿದ ಒಂದು ವಿಧವು ಸಾರ್ವಜನಿಕ ಶುಶ್ರೂಷೆಯ ಮೂಲಕವೇ ಆಗಿತ್ತು. “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ” ಎಂದು ಯೇಸು ಹೇಳಿದನು. (ಮತ್ತಾ. 9:35-38) ಹೆಚ್ಚಿನ ಕೆಲಸಗಾರರಿಗಾಗಿ ತಾನು ಮಾಡಿರಬಹುದಾದ ಬಿನ್ನಹಕ್ಕೆ ಹೊಂದಿಕೆಯಲ್ಲಿ ಪೌಲನು ಹುರುಪಿನಿಂದ ಕೆಲಸಮಾಡಿದನು. ನಿಮ್ಮ ಕುರಿತಾಗಿ ಏನು? ನೀವು ನಿಮ್ಮ ಶುಶ್ರೂಷೆಯ ಗುಣಮಟ್ಟವನ್ನು ಹೆಚ್ಚಿಸಬಲ್ಲಿರೊ? ರಾಜ್ಯ ಸಾರುವ ಕೆಲಸದಲ್ಲಿನ ನಿಮ್ಮ ಭಾಗವಹಿಸುವಿಕೆಯನ್ನು ಹೆಚ್ಚಿಸಬಲ್ಲಿರೊ? ಅಥವಾ ಒಂದುವೇಳೆ ನಿಮ್ಮ ಜೀವನದಲ್ಲಿ ಹೊಂದಾಣಿಕೆ ಮಾಡುವ ಮೂಲಕ ಪಯನೀಯರ್‌ ಸೇವೆಯನ್ನು ಮಾಡಬಲ್ಲಿರೊ? “ಜೀವದ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳುವಂತೆ” ಇತರರಿಗೆ ಸಹಾಯಮಾಡುವ ಮೂಲಕ ನಾವು ಅವರಿಗೆ ನಿಜವಾದ ಪ್ರೀತಿಯನ್ನು ತೋರಿಸೋಣ.—ಫಿಲಿ. 2:16, NW.

ತನ್ನ ಕುರಿತು ಪೌಲನಿಗಿದ್ದ ದೃಷ್ಟಿಕೋನ

15 ಕ್ರೈಸ್ತ ಶುಶ್ರೂಷಕನಾಗಿ ಪೌಲನು ಇನ್ನೊಂದು ರೀತಿಯಲ್ಲಿಯೂ ನಮಗೆ ಎದ್ದುಕಾಣುವ ಮಾದರಿಯಾಗಿದ್ದಾನೆ. ಅವನಿಗೆ ಕ್ರೈಸ್ತ ಸಭೆಯಲ್ಲಿ ಅನೇಕ ನೇಮಕಗಳು ದೊರೆತವಾದರೂ, ಆ ಆಶೀರ್ವಾದಗಳು ತಾನು ಗಳಿಸಿಕೊಂಡವುಗಳಲ್ಲ ಮತ್ತು ತನ್ನ ಸಾಮರ್ಥ್ಯಗಳಿಂದಾಗಿ ದೊರೆತವುಗಳಲ್ಲ ಎಂಬುದನ್ನು ಪೌಲನು ತಿಳಿದಿದ್ದನು. ಅವು ದೇವರ ಅಪಾತ್ರ ದಯೆಯ ಅಭಿವ್ಯಕ್ತಿಗಳೇ ಎಂದು ಅವನು ಅರಿತಿದ್ದನು. ಇತರ ಕ್ರೈಸ್ತರು ಸಹ ಸುವಾರ್ತೆಯ ಪರಿಣಾಮಕಾರಿ ಶುಶ್ರೂಷಕರಾಗಿದ್ದಾರೆ ಎಂಬುದನ್ನು ಪೌಲನು ಗಣ್ಯಮಾಡಿದನು. ದೇವಜನರ ಮಧ್ಯೆ ಅವನಿಗಿದ್ದ ಅಧಿಕಾರದ ಹೊರತಾಗಿಯೂ ಅವನು ದೀನನಾಗಿಯೇ ಉಳಿದನು.—1 ಕೊರಿಂಥ 15:9-11 ಓದಿ.

16 ಸಿರಿಯ ಪಟ್ಟಣವಾದ ಅಂತಿಯೋಕ್ಯದಲ್ಲಿ ಎದ್ದ ಸಮಸ್ಯೆಯನ್ನು ಪೌಲನು ಹೇಗೆ ನಿರ್ವಹಿಸಿದನೆಂದು ಪರಿಗಣಿಸಿರಿ. ಸುನ್ನತಿಯ ವಿಷಯದಲ್ಲಿ ಅಲ್ಲಿನ ಸಭೆಯು ಎರಡು ಗುಂಪಾಗಿ ವಿಭಜಿತವಾಗಿತ್ತು. (ಅ. ಕೃ. 14:26–15:2) ಸುನ್ನತಿಯಾಗದ ಅನ್ಯಜನರಿಗೆ ಸಾರುವುದರಲ್ಲಿ ಮುಂದಾಳುತ್ವವನ್ನು ವಹಿಸುವಂತೆ ಪೌಲನು ನೇಮಿಸಲ್ಪಟ್ಟಿದ್ದ ಕಾರಣ, ಯೆಹೂದ್ಯರಲ್ಲದ ಜನರೊಂದಿಗೆ ವ್ಯವಹರಿಸಲು ತಾನು ಪ್ರವೀಣನು ಮತ್ತು ಸಮಸ್ಯೆಯನ್ನು ಬಗೆಹರಿಸಲು ತಾನು ಅರ್ಹನು ಎಂಬುದಾಗಿ ಅವನು ನೆನಸಿದ್ದಿರಬಹುದು. (ಗಲಾತ್ಯ 2:8, 9 ಓದಿ) ಆದರೆ ತನ್ನ ಪ್ರಯತ್ನಗಳಿಂದಾಗಿ ವಿವಾದವು ಇತ್ಯರ್ಥವಾಗದಿದ್ದಾಗ, ಅದನ್ನು ಚರ್ಚಿಸಲು ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಲಿಯನ್ನು ಸಂಪರ್ಕಿಸುವ ಏರ್ಪಾಡಿಗೆ ಅವನು ದೀನತೆಯಿಂದಲೂ ನಮ್ರತೆಯಿಂದಲೂ ವಿಧೇಯನಾದನು. ಆಡಳಿತ ಮಂಡಲಿಯ ಸದಸ್ಯರು ವಿಷಯಕ್ಕೆ ಕಿವಿಗೊಟ್ಟು, ನಿರ್ಣಯವನ್ನು ಮಾಡಿ, ಅವನನ್ನು ತಮ್ಮ ಸಂದೇಶವಾಹಕರಲ್ಲಿ ಒಬ್ಬನನ್ನಾಗಿ ನೇಮಿಸಿದಾಗ ಅವನು ಅದಕ್ಕೆ ಸಂಪೂರ್ಣವಾಗಿ ಸಹಕರಿಸಿದನು. (ಅ. ಕೃ. 15:22-31) ಹೀಗೆ ಪೌಲನು ತನ್ನ ಜೊತೆ ಸೇವಕರಿಗೆ ‘ಮರ್ಯಾದೆಯನ್ನು ತೋರಿಸುವುದರಲ್ಲಿ ಮುಂದಾಗಿದ್ದನು.’—ರೋಮಾ. 12:10ಬಿ.

17 ದೀನನಾಗಿದ್ದ ಪೌಲನು ತನ್ನನ್ನು ಸಭೆಯ ಸಹೋದರ ಸಹೋದರಿಯರಿಂದ ಪ್ರತ್ಯೇಕಿಸಿಕೊಳ್ಳಲಿಲ್ಲ. ಬದಲಾಗಿ, ಅವನು ಅವರಿಗೆ ಆಪ್ತನಾಗಿದ್ದನು. ರೋಮಾಪುರದವರಿಗೆ ಬರೆದ ತನ್ನ ಪತ್ರದ ಕೊನೆಯಲ್ಲಿ ಅವನು 20 ಜನರನ್ನು ಹೆಸರು ಹೆಸರಾಗಿ ವಂದಿಸಿದನು. ಅವರಲ್ಲಿ ಹೆಚ್ಚಿನವರ ಹೆಸರು ಶಾಸ್ತ್ರಗ್ರಂಥದಲ್ಲಿ ಬೇರೆ ಎಲ್ಲಿಯೂ ಕಂಡುಬರುವುದಿಲ್ಲ. ಅವರಲ್ಲಿ ಕೆಲವರಿಗೆ ಮಾತ್ರ ವಿಶೇಷ ನೇಮಕಗಳಿದ್ದವು. ಆದರೆ ಅವರೆಲ್ಲರು ಯೆಹೋವನ ನಿಷ್ಠಾವಂತ ಸೇವಕರಾಗಿದ್ದರು ಮತ್ತು ಪೌಲನು ಅವರನ್ನು ಬಹಳವಾಗಿ ಪ್ರೀತಿಸಿದನು.—ರೋಮಾ. 16:1-16.

18 ಪೌಲನ ದೀನ ಮತ್ತು ಸ್ನೇಹಪರ ಸ್ವಭಾವದಿಂದಾಗಿ ಸಭೆಗಳು ಬಲಗೊಂಡವು. ಕೊನೆಯ ಬಾರಿ ಎಫೆಸದಲ್ಲಿನ ಹಿರಿಯರನ್ನು ಭೇಟಿಯಾಗಿ, “ನೀವು ಇನ್ನು ಮೇಲೆ ನನ್ನ ಮುಖವನ್ನು ಕಾಣುವದಿಲ್ಲವೆಂದು ಪೌಲನು ಹೇಳಿದ ಮಾತಿಗೆ ಅವರು ವಿಶೇಷವಾಗಿ ವ್ಯಥೆಪಟ್ಟು ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು.” ಹೆಮ್ಮೆಯ ಅಥವಾ ಯಾರೊಂದಿಗೂ ಸೇರದ ವ್ಯಕ್ತಿಯಿಂದ ಅಗಲುವುದು ಈ ಪ್ರತಿಕ್ರಿಯೆಯನ್ನು ತರಲಾರದು.—ಅ. ಕೃ. 20:37, 38.

19 ಆಧ್ಯಾತ್ಮಿಕವಾಗಿ ಪ್ರಗತಿಮಾಡಲು ಬಯಸುವವರೆಲ್ಲರು ಪೌಲನಂತೆ ದೀನ ಮನೋಭಾವವನ್ನು ತೋರಿಸಬೇಕು. “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ” ಎಂದು ಅವನು ಜೊತೆ ಕ್ರೈಸ್ತರಿಗೆ ಬುದ್ಧಿಹೇಳಿದನು. (ಫಿಲಿ. 2:3) ಆ ಸಲಹೆಯನ್ನು ನಾವು ಹೇಗೆ ಅನುಸರಿಸಬಲ್ಲೆವು? ಒಂದು ವಿಧವು, ನಮ್ಮ ಸಭೆಯಲ್ಲಿರುವ ಹಿರಿಯರ ಮಾರ್ಗದರ್ಶನವನ್ನು ಅನುಸರಿಸುವ ಮತ್ತು ಅವರು ಮಾಡುವ ನ್ಯಾಯವಿಧಾಯಕ ತೀರ್ಮಾನಗಳನ್ನು ಬೆಂಬಲಿಸುವ ಮೂಲಕ ಅವರೊಂದಿಗೆ ಸಹಕರಿಸುವುದೇ ಆಗಿದೆ. (ಇಬ್ರಿಯ 13:17 ಓದಿ.) ಇನ್ನೊಂದು ವಿಧವು ನಂಬಿಕೆಯಲ್ಲಿರುವ ನಮ್ಮ ಸಹೋದರ ಸಹೋದರಿಯರನ್ನು ಬಹಳ ಗೌರವದಿಂದ ಕಾಣುವ ಮೂಲಕವೇ. ಯೆಹೋವನ ಜನರ ಸಭೆಗಳಲ್ಲಿ ವಿಭಿನ್ನ ರಾಷ್ಟ್ರ, ಸಂಸ್ಕೃತಿ, ಕುಲ ಮತ್ತು ಹಿನ್ನಲೆಯಿಂದ ಬಂದ ವ್ಯಕ್ತಿಗಳಿದ್ದಾರೆ. ಹಾಗಿದ್ದರೂ ಪೌಲನಂತೆ ನಾವು ಸಹ ಎಲ್ಲರೊಂದಿಗೆ ನಿಷ್ಪಕ್ಷಪಾತದಿಂದಲೂ ಮಮತೆಯಿಂದಲೂ ವ್ಯವಹರಿಸಲು ಕಲಿಯಬೇಕಲ್ಲವೆ? (ಅ. ಕೃ. 17:26; ರೋಮಾ. 12:10ಎ) “ಕ್ರಿಸ್ತನು ನಿಮ್ಮನ್ನು ಸೇರಿಸಿಕೊಂಡಂತೆ ನೀವು ಸಹ ಒಬ್ಬರನ್ನೊಬ್ಬರು ಸೇರಿಸಿಕೊಂಡು ದೇವರ ಮಹಿಮೆಯನ್ನು ಪ್ರಕಾಶಪಡಿಸಿರಿ” ಎಂದು ನಮ್ಮನ್ನು ಉತ್ತೇಜಿಸಲಾಗಿದೆ.—ರೋಮಾ. 15:7.

ಜೀವದ ಓಟವನ್ನು “ಸ್ಥಿರಚಿತ್ತದಿಂದ ಓಡೋಣ”

20 ಕ್ರೈಸ್ತರ ಜೀವನವನ್ನು ಸುದೀರ್ಘ ಓಟಕ್ಕೆ ಹೋಲಿಸಬಹುದು. ಪೌಲನು ಬರೆದದ್ದು: “ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ; ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗೆ ಸಿದ್ಧವಾಗಿದೆ; ಅದನ್ನು ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು; ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.”—2 ತಿಮೊ. 4:7, 8.

21 ಪೌಲನ ಮಾದರಿಯನ್ನು ಅನುಸರಿಸುವುದು ನಿತ್ಯಜೀವಕ್ಕಾಗಿರುವ ಓಟವನ್ನು ಯಶಸ್ವಿಕರವಾಗಿ ಓಡುವಂತೆ ನಮಗೆ ಸಹಾಯಮಾಡುವುದು. (ಇಬ್ರಿ. 12:2) ಆದುದರಿಂದ ನಾವು ವೈಯಕ್ತಿಕ ಅಧ್ಯಯನದ ರೂಢಿಯನ್ನು ಮತ್ತು ಜನರ ಕಡೆಗೆ ಆಳವಾದ ಪ್ರೀತಿಯನ್ನು ಬೆಳೆಸಿಕೊಳ್ಳೋಣ ಹಾಗೂ ದೀನ ಮನೋಭಾವವನ್ನು ಕಾಪಾಡಿಕೊಳ್ಳುವ ಮೂಲಕ ಆಧ್ಯಾತ್ಮಿಕ ಪ್ರಗತಿಯನ್ನು ಮಾಡುತ್ತಾ ಮುಂದುವರಿಯೋಣ.

ನೀವು ಹೇಗೆ ಉತ್ತರಿಸುವಿರಿ?

• ಶಾಸ್ತ್ರಗ್ರಂಥದ ಕ್ರಮದ ವೈಯಕ್ತಿಕ ಅಧ್ಯಯನದಿಂದ ಪೌಲನು ಹೇಗೆ ಪ್ರಯೋಜನ ಪಡೆದುಕೊಂಡನು?

• ಜನರ ಕಡೆಗೆ ಆಳವಾದ ಪ್ರೀತಿಯನ್ನು ತೋರಿಸುವುದು ಸತ್ಕ್ರೈಸ್ತರಿಗೆ ಏಕೆ ಪ್ರಾಮುಖ್ಯ?

• ಇತರರೊಂದಿಗೆ ನಿಷ್ಪಕ್ಷಪಾತದಿಂದ ವ್ಯವಹರಿಸುವಂತೆ ಯಾವ ಗುಣಗಳು ನಿಮಗೆ ಸಹಾಯಮಾಡುತ್ತವೆ?

• ನಿಮ್ಮ ಸಭೆಯಲ್ಲಿರುವ ಹಿರಿಯರೊಂದಿಗೆ ಸಹಕರಿಸುವಂತೆ ಪೌಲನ ಮಾದರಿಯು ನಿಮಗೆ ಹೇಗೆ ಸಹಾಯಮಾಡಬಲ್ಲದು?

[ಅಧ್ಯಯನ ಪ್ರಶ್ನೆಗಳು]

1, 2. ತಾರ್ಸದ ಸೌಲನು ತನ್ನ ಜೀವನದಲ್ಲಿ ಯಾವ ಬದಲಾವಣೆಗಳನ್ನು ಮಾಡಿದನು ಮತ್ತು ಯಾವ ಪ್ರಾಮುಖ್ಯ ಕೆಲಸವನ್ನು ಆರಂಭಿಸಿದನು?

3. ಪೌಲನ ಪತ್ರಗಳನ್ನು ಮತ್ತು ಅವನ ಶುಶ್ರೂಷೆಯ ದಾಖಲೆಯನ್ನು ಅಧ್ಯಯನಮಾಡುವುದು ಯಾವ ರೀತಿಯಲ್ಲಿ ನಮಗೆ ಸಹಾಯಮಾಡಬಲ್ಲದು?

4, 5. ವೈಯಕ್ತಿಕ ಅಧ್ಯಯನವು ಪೌಲನಿಗೆ ಹೇಗೆ ಪ್ರಯೋಜನಕರವಾಗಿತ್ತು?

6. ಕಷ್ಟಗಳನ್ನು ಎದುರಿಸಿದ ಸಮಯಗಳಲ್ಲಿ ಆಧ್ಯಾತ್ಮಿಕವಾಗಿ ಬಲವಾಗಿ ಉಳಿಯಲು ಪೌಲನಿಗೆ ಯಾವುದು ಸಹಾಯಮಾಡಿತು?

7. ಕ್ರಮವಾದ ಬೈಬಲ್‌ ಅಧ್ಯಯನದಿಂದ ನೀವು ಗಳಿಸಬಲ್ಲ ಪ್ರಯೋಜನಗಳನ್ನು ತಿಳಿಸಿರಿ.

8. ಯೆಹೂದಿ ಮತದವರಲ್ಲದ ಜನರೊಂದಿಗೆ ಸೌಲನು ಹೇಗೆ ನಡೆದುಕೊಂಡನು?

9. ಜನರೊಂದಿಗೆ ತಾನು ನಡೆದುಕೊಳ್ಳುತ್ತಿದ್ದ ರೀತಿಯನ್ನು ಪುನಃ ಪರಿಶೀಲಿಸುವಂತೆ ಯಾವ ಅನುಭವವು ಸೌಲನನ್ನು ಪ್ರೇರೇಪಿಸಿತು?

10, 11. ಜನರಿಗೆ ಪೌಲನು ಹೇಗೆ ನಿಜವಾದ ಪ್ರೀತಿಯನ್ನು ತೋರಿಸಿದನು?

12. ಯೇಸು ಕ್ರಿಸ್ತನ ಒಬ್ಬ ಪ್ರೀತಿಭರಿತ ಅಪೊಸ್ತಲನಾಗುವಂತೆ ಕ್ರೂರಿಯಾಗಿದ್ದ ಸೌಲನನ್ನು ಯಾವುದು ಪ್ರೇರೇಪಿಸಿತು?

13. ಇತರರಿಗೆ ಪ್ರೀತಿಯನ್ನು ತೋರಿಸುವಂತೆ ನಮ್ಮನ್ನು ಯಾವುದು ಪ್ರೇರೇಪಿಸಬೇಕು ಮತ್ತು ಇದನ್ನು ನಾವು ಹೇಗೆ ಮಾಡಬಲ್ಲೆವು?

14. ನಮ್ಮ ಶುಶ್ರೂಷೆಯನ್ನು ನಾವು ಹೇಗೆ ವಿಸ್ತರಿಸಬಲ್ಲೆವು?

15. ಪೌಲನು ಜೊತೆ ಕ್ರೈಸ್ತರೊಂದಿಗೆ ತನ್ನನ್ನು ಹೇಗೆ ವೀಕ್ಷಿಸಿಕೊಂಡನು?

16. ಸುನ್ನತಿಯ ವಿವಾದಕ್ಕೆ ಸಂಬಂಧಿಸಿದ ವಿಷಯದಲ್ಲಿ ಪೌಲನು ದೀನತೆಯನ್ನೂ ನಮ್ರತೆಯನ್ನೂ ಹೇಗೆ ತೋರಿಸಿದನು?

17, 18. (ಎ) ಸಭೆಗಳಲ್ಲಿದ್ದವರ ಕಡೆಗೆ ಪೌಲನು ಯಾವ ಭಾವನೆಯನ್ನು ಬೆಳೆಸಿಕೊಂಡನು? (ಬಿ) ಪೌಲನ ಅಗಲುವಿಕೆಯ ಕುರಿತು ಎಫೆಸದಲ್ಲಿನ ಹಿರಿಯರ ಪ್ರತಿಕ್ರಿಯೆಯು ಅವನ ಕುರಿತು ನಮಗೆ ಏನನ್ನು ತಿಳಿಸುತ್ತದೆ?

19. ನಮ್ಮ ಜೊತೆ ಕ್ರೈಸ್ತರೊಂದಿಗಿನ ವ್ಯವಹಾರದಲ್ಲಿ ನಾವು “ದೀನಭಾವ”ವನ್ನು ಹೇಗೆ ತೋರಿಸಬಲ್ಲೆವು?

20, 21. ಜೀವದ ಓಟವನ್ನು ಯಶಸ್ವಿಕರವಾಗಿ ಓಡುವಂತೆ ನಮಗೆ ಯಾವುದು ಸಹಾಯಮಾಡುವುದು?

[ಪುಟ 23ರಲ್ಲಿರುವ ಚಿತ್ರ]

ಪೌಲನಂತೆ ಶಾಸ್ತ್ರಗ್ರಂಥದಿಂದ ಬಲವನ್ನು ಪಡೆದುಕೊಳ್ಳಿರಿ

[ಪುಟ 24ರಲ್ಲಿರುವ ಚಿತ್ರ]

ಇತರರಿಗೆ ಸುವಾರ್ತೆಯನ್ನು ಹಂಚುವ ಮೂಲಕ ಪ್ರೀತಿಯನ್ನು ತೋರಿಸಿರಿ

[ಪುಟ 25ರಲ್ಲಿರುವ ಚಿತ್ರ]

ಪೌಲನನ್ನು ಅವನ ಸಹೋದರರಿಗೆ ಅತಿ ಪ್ರಿಯನನ್ನಾಗಿ ಮಾಡಿದ್ದು ಯಾವುದೆಂದು ನಿಮಗೆ ತಿಳಿದಿದೆಯೊ?