ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಚತುರೋಪಾಯ

ಒಂದು ಚತುರೋಪಾಯ

ಒಂದು ಚತುರೋಪಾಯ

ಮಧ್ಯ ಆಫ್ರಿಕದಲ್ಲಿರುವ ಮೂವರು ಯುವಕರು ಜಿಲ್ಲಾ ಅಧಿವೇಶನಕ್ಕೆ ಹೋಗಲು ಬಯಸಿದರು. ಆದರೆ, ಅವರು ಅಲ್ಲಿಗೆ ತಲಪುವುದಾದರೂ ಹೇಗೆ? ಅಧಿವೇಶನದ ಸ್ಥಳಕ್ಕೆ ತಲಪಬೇಕಾದರೆ, ಧೂಳು ತುಂಬಿರುವ ಏರುಪೇರಿನ 90 ಕಿಲೊಮೀಟರ್‌ ಉದ್ದದ ಮಣ್ಣಿನ ರಸ್ತೆಯಲ್ಲಿ ಪ್ರಯಾಣಿಸಬೇಕಾಗಿತ್ತು. ಅದಕ್ಕಾಗಿ ಅವರ ಬಳಿ ಯಾವುದೇ ವಾಹನ ಇರಲಿಲ್ಲ. ಆದುದರಿಂದ ಯಾರಿಂದಾದರೂ ಮೂರು ಸೈಕಲ್‌ಗಳನ್ನು ಎರವಲಾಗಿ ಪಡೆಯಲು ನಿರ್ಧರಿಸಿದರು, ಆದರೆ ತಕ್ಕದಾದ ಸೈಕಲ್‌ ದೊರಕಲಿಲ್ಲ.

ಆಗ ಸ್ಥಳಿಕ ಸಭೆಯ ಒಬ್ಬ ಹಿರಿಯನು ಅವರ ಕಷ್ಟವನ್ನು ಗಮನಿಸಿ, ಹಳೆಯದಾಗಿದ್ದರೂ ಉಪಯೋಗದಲ್ಲಿದ್ದ ತನ್ನ ಸೈಕಲನ್ನು ನೀಡಿದನು. ಮಾತ್ರವಲ್ಲದೆ, ಈ ಮುಂಚೆ ತಾನೂ ತನ್ನೊಂದಿಗಿದ್ದ ಇತರರೂ ಅಧಿವೇಶನಕ್ಕೆ ಹೋಗಲು ಯಾವ ಉಪಾಯಮಾಡಿದ್ದರೆಂದು ತಿಳಿಸಿದನು. ಮೂವರೂ ಒಂದು ಸೈಕಲಿನಲ್ಲಿಯೇ ಪ್ರಯಾಣಿಸುವಂತೆ ಆ ಹಿರಿಯನು ತಿಳಿಸಿದನು. ಈ ಉಪಾಯ ಸರಳವಾಗಿದ್ದರೂ ಕಠಿನವಾಗಿತ್ತು. ಮೂರು ಜನರು ಒಂದು ಸೈಕಲಲ್ಲಿ ಹೇಗೆ ತಾನೇ ಹೋಗಸಾಧ್ಯವಿತ್ತು?

ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಲು ಆ ಯುವ ಸಹೋದರರು ಮುಂಜಾನೆ ಒಟ್ಟುಸೇರಿ ತಮ್ಮ ಸಾಮಾನುಗಳನ್ನು ಸೈಕಲಿಗೆ ಕಟ್ಟಿದರು. ಒಬ್ಬನು ಸೈಕಲ್‌ ಏರಿ ಪ್ರಯಾಣಿಸುತ್ತಾ ಮುಂದೆ ಹೋದನು, ಇನ್ನಿಬ್ಬರು ವೇಗವಾಗಿ ನಡೆಯುತ್ತಾ ಅವನನ್ನು ಹಿಂಬಾಲಿಸಿದರು. ಸೈಕಲ್‌ ಓಡಿಸುತ್ತಿದ್ದವನು ಸುಮಾರು ಅರ್ಧ ಕಿ.ಮೀ. ದಾಟಿದ ಬಳಿಕ ಸೈಕಲನ್ನು ಒಂದು ಮರಕ್ಕೆ ಒರಗಿಸಿ ಮುಂದೆ ಕಾಲ್ನಡಿಗೆಯಾಗಿ ಹೋದನು. ಸೈಕಲನ್ನು ಬೇರೆಯವರು ತೆಗೆದುಕೊಂಡು ಹೋಗದಂತೆ, ಅದನ್ನು ಹಿಂದೆ ಬರುತ್ತಿದ್ದ ಇಬ್ಬರಿಗೆ ಕಾಣುವ ರೀತಿಯಲ್ಲಿ ನಿಲ್ಲಿಸುತ್ತಿದ್ದನು.

ಆ ಇಬ್ಬರು ಸೈಕಲಿನ ಬಳಿಗೆ ಬಂದಾಗ, ಅವರಲ್ಲಿ ಒಬ್ಬನು ಅದನ್ನು ಹತ್ತಿ ಪ್ರಯಾಣ ಮುಂದುವರಿಸಿದನು. ಇನ್ನೊಬ್ಬನು ತನ್ನ ಸರದಿ ಬರುವ ತನಕ ಇನ್ನೂ ಅರ್ಧ ಕಿ.ಮೀ. ದೂರ ನಡೆಯುತ್ತಾ ಹೋದನು. ಹೀಗೆ ಒಳ್ಳೇ ಯೋಜನೆ ಮತ್ತು ದೃಢನಿಶ್ಚಯದಿಂದಾಗಿ ಆ ಮೂವರೂ 90 ಕಿಲೊಮೀಟರ್‌ ನಡೆಯುವ ಬದಲಿಗೆ ಸುಮಾರು 60 ಕಿಲೊಮೀಟರ್‌ ನಡೆದರು. ಈ ಪ್ರಯತ್ನವು ಸಾರ್ಥಕವಾಗಿತ್ತು. ಅವರು ಅಧಿವೇಶನದಲ್ಲಿ ತಮ್ಮ ಕ್ರೈಸ್ತ ಸಹೋದರ ಸಹೋದರಿಯರೊಂದಿಗೆ ಸೇರಿ ಆಧ್ಯಾತ್ಮಿಕ ಔತಣವನ್ನು ಆನಂದಿಸಿದರು. (ಧರ್ಮೋ. 31:12) ಈ ವರುಷ ನಿಮ್ಮ ಸ್ಥಳೀಯ ಜಿಲ್ಲಾ ಅಧಿವೇಶನವನ್ನು ಹಾಜರಾಗಲು ನೀವು ನಿಮ್ಮಿಂದಾದ ಎಲ್ಲ ಪ್ರಯತ್ನವನ್ನು ಮಾಡುವಿರೊ?