ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ತಪ್ಪಿಸಿಕೊಳ್ಳಬೇಕಾದ ವಿಷಯಗಳು

ನಾವು ತಪ್ಪಿಸಿಕೊಳ್ಳಬೇಕಾದ ವಿಷಯಗಳು

ನಾವು ತಪ್ಪಿಸಿಕೊಳ್ಳಬೇಕಾದ ವಿಷಯಗಳು

“ಎಲೈ ಸರ್ಪಜಾತಿಯವರೇ, ಮುಂದೆ ಕಾಣಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮಗೆ ಉಪದೇಶ ಮಾಡಿದವರಾರು?”—ಮತ್ತಾ. 3:7.

‘ತಪ್ಪಿಸಿಕೊಳ್ಳು’ ಎಂಬ ಪದವನ್ನು ಕೇಳಿದೊಡನೆ ನಿಮಗೆ ಯಾವುದರ ನೆನಪಾಗುತ್ತದೆ? ಪೋಟೀಫರನ ಹೆಂಡತಿ ಬೀಸಿದ ಅನೈತಿಕತೆಯ ಬಲೆಯಿಂದ ಸ್ಫುರದ್ರೂಪಿ ಯೋಸೇಫನು ತಪ್ಪಿಸಿಕೊಂಡು ಓಡಿಹೋಗುತ್ತಿರುವ ದೃಶ್ಯ ಕೆಲವರ ಮನಃಪಟಲದಲ್ಲಿ ಹಾದುಹೋಗಬಹುದು. (ಆದಿ. 39:7-12) ಇನ್ನಿತರರಿಗೆ, “ದಂಡುಗಳು ಯೆರೂಸಲೇಮ್‌ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ . . . ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿ ಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ” ಎಂದು ಯೇಸು ಕೊಟ್ಟ ಎಚ್ಚರಿಕೆಗೆ ಪ್ರತಿಕ್ರಿಯಿಸುತ್ತಾ, ಸಾ.ಶ. 66ರಲ್ಲಿ ಯೆರೂಸಲೇಮಿನಲ್ಲಿದ್ದ ಕ್ರೈಸ್ತರು ತಪ್ಪಿಸಿಕೊಂಡು ಓಡಿಹೋದ ನೆನಪಾಗಬಹುದು.—ಲೂಕ 21:20, 21.

2 ಮೇಲೆ ತಿಳಿಸಲಾಗಿರುವ ಉದಾಹರಣೆಗಳಲ್ಲಿ ಅಕ್ಷರಶಃವಾಗಿ ಓಡಿ ತಪ್ಪಿಸಿಕೊಳ್ಳುವುದು ಸೇರಿತ್ತು. ಇಂದು ಜಗತ್ತಿನಾದ್ಯಂತ ಬಹುಮಟ್ಟಿಗೆ ಪ್ರತಿಯೊಂದು ದೇಶದಲ್ಲಿರುವ ಸತ್ಯ ಕ್ರೈಸ್ತರು ಸಾಂಕೇತಿಕ ಅರ್ಥದಲ್ಲಿ ತಪ್ಪಿಸಿಕೊಂಡು ಓಡಿಹೋಗುವುದು ತುರ್ತಿನದ್ದಾಗಿದೆ. “ತಪ್ಪಿಸಿಕೊಳ್ಳು” ಎಂಬ ಪದವನ್ನು ಸ್ನಾನಿಕನಾದ ಯೋಹಾನನು ಬಳಸಿದ್ದು ಇದೇ ಅರ್ಥದಲ್ಲಿ. ಯೋಹಾನನನ್ನು ಕಾಣಲು ಬರುತ್ತಿದ್ದವರಲ್ಲಿ, ತಾವು ಪಶ್ಚಾತ್ತಾಪಪಡುವ ಅಗತ್ಯವಿಲ್ಲವೆಂದು ಭಾವಿಸುತ್ತಿದ್ದ ಸ್ವನೀತಿವಂತ ಯೆಹೂದಿ ಮುಖಂಡರೂ ಇದ್ದರು. ಇವರು, ಪಶ್ಚಾತ್ತಾಪಪಟ್ಟು ದೀಕ್ಷಾಸ್ನಾನ ಹೊಂದುತ್ತಿದ್ದ ಜನಸಾಮಾನ್ಯರನ್ನು ತುಚ್ಛವಾಗಿ ಕಾಣುತ್ತಿದ್ದರು. ಯೋಹಾನನು ನಿರ್ಭೀತಿಯಿಂದ ಈ ಧಾರ್ಮಿಕ ಮುಖಂಡರ ಬಣ್ಣ ಬಯಲುಮಾಡುತ್ತಾ ಅಂದದ್ದು: “ಎಲೈ ಸರ್ಪಜಾತಿಯವರೇ, ಮುಂದೆ ಕಾಣಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮಗೆ ಉಪದೇಶ ಮಾಡಿದವರಾರು? ಹಾಗಾದರೆ ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿತೆಂಬದನ್ನು ತಕ್ಕ ಫಲದಿಂದ ತೋರಿಸಿರಿ.”—ಮತ್ತಾ. 3:7, 8.

3 ಯೋಹಾನನು ಇಲ್ಲಿ ಅಕ್ಷರಶಃವಾಗಿ ಓಡಿ ತಪ್ಪಿಸಿಕೊಳ್ಳುವುದರ ಕುರಿತು ಮಾತಾಡುತ್ತಿರಲಿಲ್ಲ. ಮುಂದೆ ಬರಲಿದ್ದ ಒಂದು ನ್ಯಾಯತೀರ್ಪು, ಅಂದರೆ ದೈವಕೋಪದ ದಿನದ ಕುರಿತು ಅವನು ಎಚ್ಚರಿಸುತ್ತಿದ್ದನು. ಧಾರ್ಮಿಕ ಮುಖಂಡರು ಆ ದಿನದಂದು ಪಾರಾಗಬೇಕಾದರೆ, ಪಶ್ಚಾತ್ತಾಪವನ್ನು ಸೂಚಿಸುವ ಫಲವನ್ನು ಉತ್ಪಾದಿಸಬೇಕೆಂದು ಅವರಿಗೆ ಹೇಳುತ್ತಿದ್ದನು. ಕಾಲಾನಂತರ, ಯೇಸು ಸಹ ಆ ಧಾರ್ಮಿಕ ಮುಖಂಡರನ್ನು ನಿರ್ಭಯದಿಂದ ಖಂಡಿಸಿದನು. ಅವರಿಗಿದ್ದ ಕೊಲೆಗಡುಕ ಮನೋಭಾವವು, ಪಿಶಾಚನು ಅವರ ನಿಜವಾದ ತಂದೆ ಆಗಿದ್ದಾನೆಂಬುದನ್ನು ಹೊರಗೆಡಹಿತು. (ಯೋಹಾ. 8:44) ಯೋಹಾನನು ಈ ಹಿಂದೆ ಕೊಟ್ಟಿದ್ದ ಎಚ್ಚರಿಕೆಯನ್ನು ದೃಢೀಕರಿಸುತ್ತಾ ಯೇಸು ಅವರನ್ನು “ಸರ್ಪಜಾತಿಯವರೇ” ಎಂದು ಕರೆದು, “ನರಕದಂಡನೆಗೆ ಹೇಗೆ ತಪ್ಪಿಸಿಕೊಂಡೀರಿ?” ಎಂದು ಕೇಳಿದನು. (ಮತ್ತಾ. 23:33) “ನರಕ” ಅಥವಾ ಮೂಲಭಾಷೆಯಲ್ಲಿ “ಗೆಹೆನ್ನ” ಎಂದು ಯೇಸು ಬಳಸಿದ ಪದದ ಅರ್ಥವೇನಾಗಿತ್ತು?

4 ಗೆಹೆನ್ನ ಎಂಬುದು, ಯೆರೂಸಲೇಮ್‌ ಪಟ್ಟಣದ ಗೋಡೆಗಳಾಚೆಗಿನ ಕಣಿವೆ ಪ್ರದೇಶವಾಗಿತ್ತು. ಅಲ್ಲಿ ಹೊಲಸನ್ನೂ ಮೃತ ಪ್ರಾಣಿಗಳ ಕಳೇಬರಗಳನ್ನೂ ಸುಡಲಾಗುತ್ತಿತ್ತು. ಆದುದರಿಂದ ಯೇಸು ಗೆಹೆನ್ನವನ್ನು ನಿತ್ಯ ಮರಣದ ಸಂಕೇತವಾಗಿ ಬಳಸಿದನು. (ಪುಟ 27 ನೋಡಿ.) ಗೆಹೆನ್ನದಿಂದ ತಪ್ಪಿಸಿಕೊಳ್ಳುವುದರ ಕುರಿತ ಆತನ ಪ್ರಶ್ನೆಯು, ಆ ಧಾರ್ಮಿಕ ಮುಖಂಡರು ಇಡೀ ಗುಂಪಾಗಿ ನಿತ್ಯ ನಾಶನಕ್ಕೆ ಅರ್ಹರಾಗಿದ್ದರೆಂದು ತೋರಿಸುತ್ತದೆ.—ಮತ್ತಾ. 5:22, 29.

5 ಯೇಸು ಕ್ರಿಸ್ತನನ್ನೂ ಆತನ ಹಿಂಬಾಲಕರನ್ನೂ ಹಿಂಸಿಸುವ ಮೂಲಕ ಆ ಯೆಹೂದಿ ಮುಖಂಡರ ಪಾಪಗಳು ಹೆಚ್ಚಾದವು. ಯೋಹಾನ ಹಾಗೂ ಯೇಸು ಎಚ್ಚರಿಸಿದಂತೆ ಕಾಲಾನಂತರ ದೇವರ ಕೋಪದ ದಿನ ಬಂದೇ ಬಿಟ್ಟಿತು. ಆಗ ‘ದೈವಕೋಪಕ್ಕೆ’ ಕೇವಲ ನಿರ್ದಿಷ್ಟ ಸ್ಥಳ ಅಂದರೆ ಯೆರೂಸಲೇಮ್‌ ಹಾಗೂ ಯೂದಾಯವು ಪಾತ್ರವಾಯಿತು. ಆದುದರಿಂದ ಅಲ್ಲಿಂದ ಅಕ್ಷರಶಃವಾಗಿ ಓಡಿ ತಪ್ಪಿಸಿಕೊಳ್ಳಲು ಸಾಧ್ಯವಿತ್ತು. ರೋಮನ್‌ ಸೈನ್ಯವು ಸಾ.ಶ. 70ರಲ್ಲಿ ಯೆರೂಸಲೇಮನ್ನೂ ಅದರಲ್ಲಿದ್ದ ಆಲಯವನ್ನೂ ಧ್ವಂಸಗೊಳಿಸಿದಾಗ ಆ ದೈವಕೋಪ ಪ್ರಕಟವಾಯಿತು. ಆ “ಸಂಕಟವು” ಯೆರೂಸಲೇಮ್‌ ಪಟ್ಟಣವು ಹಿಂದೆಂದೂ ಅನುಭವಿಸಿರದಷ್ಟು ತೀಕ್ಷ್ಣವಾಗಿತ್ತು. ಅನೇಕರನ್ನು ಕೊಲ್ಲಲಾಯಿತು ಇಲ್ಲವೇ ಸೆರೆಗೊಯ್ಯಲಾಯಿತು. ಇದೆಲ್ಲವೂ, ನಾಮಮಾತ್ರದ ಕ್ರೈಸ್ತರಿಗೂ ಇತರ ಧರ್ಮದವರಿಗೂ ಕಾದಿರುವ ಹೆಚ್ಚು ಭೀಕರ ನಾಶನದ ಮುನ್ಸೂಚನೆಯಾಗಿತ್ತು.—ಮತ್ತಾ. 24:21.

ಭವಿಷ್ಯತ್ತಿನ ದೈವಕೋಪದಿಂದ ತಪ್ಪಿಸಿಕೊಳ್ಳುವುದು

6 ಆದಿ ಕ್ರೈಸ್ತರಲ್ಲಿ ಕೆಲವರು ಧರ್ಮಭ್ರಷ್ಟರಾದರು ಮತ್ತು ಕೆಲವರು ಅವರನ್ನು ಹಿಂಬಾಲಿಸಿದರು. (ಅ. ಕೃ. 20:29, 30) ಯೇಸುವಿನ ಶಿಷ್ಯರು ಬದುಕಿದ್ದಷ್ಟು ಸಮಯ ಧರ್ಮಭ್ರಷ್ಟತೆ ಸಭೆಯೊಳಗೆ ನುಸುಳದಂತೆ “ಅಡ್ಡಿ” ಮಾಡಿದರು. ಆದರೆ ಅವರು ಮೃತಪಟ್ಟ ಬಳಿಕ ಹಲವಾರು ಸುಳ್ಳು ಕ್ರೈಸ್ತ ಪಂಗಡಗಳು ಆರಂಭವಾದವು. ಇಂದು ಕ್ರೈಸ್ತಪ್ರಪಂಚದೊಳಗೇ ಪರಸ್ಪರ ಹೊಂದಿಕೆಯಲ್ಲಿರದ ನೂರಾರು ಧರ್ಮಗಳಿವೆ. ಕ್ರೈಸ್ತಪ್ರಪಂಚದ ಪಾದ್ರಿವರ್ಗದ ಉದಯಿಸುವಿಕೆಯ ಬಗ್ಗೆ ಬೈಬಲ್‌ ಮುಂತಿಳಿಸಿತ್ತು. ಅದು ಆ ಗುಂಪನ್ನು “ಅಧರ್ಮಸ್ವರೂಪನು” ಎಂದು ವರ್ಣಿಸುತ್ತದೆ ಮತ್ತು ‘ಅವನನ್ನು ಯೇಸು ಕರ್ತನು ಕೊಲ್ಲುವನು’ ಹಾಗೂ “ತನ್ನ ಪ್ರತ್ಯಕ್ಷತೆಯ ಪ್ರಕಾಶದಿಂದ ಸಂಹರಿಸುವನು” ಎಂದು ಹೇಳುತ್ತದೆ.—2 ಥೆಸ. 2:3, 6-8.

7 ಕ್ರೈಸ್ತಪ್ರಪಂಚದ ಪಾದ್ರಿವರ್ಗವು ಬೈಬಲಿಗೆ ವಿರುದ್ಧವಾದ ಬೋಧನೆಗಳು, ಹಬ್ಬಗಳು ಹಾಗೂ ನಡವಳಿಕೆಯನ್ನು ಪ್ರವರ್ಧಿಸಿ ಕೋಟ್ಯಂತರ ಜನರನ್ನು ತಪ್ಪುದಾರಿಗೆಳೆಯುವ ಮೂಲಕ ಅಧರ್ಮವನ್ನು ನಡೆಸಿದೆ. ಯೇಸು ಖಂಡಿಸಿದಂಥ ಧಾರ್ಮಿಕ ಮುಖಂಡರಂತೆಯೇ ಆಧುನಿಕ ಕಾಲದ ಈ ‘ಅಧರ್ಮಸ್ವರೂಪನ’ ಭಾಗವಾಗಿರುವವರಿಗೆ ಪುನರುತ್ಥಾನವೇ ಇಲ್ಲದ ನಾಶನ ಕಾದಿದೆ. (2 ಥೆಸ. 1:6-10) ಆದರೆ ಕ್ರೈಸ್ತಪ್ರಪಂಚದ ಪಾದ್ರಿವರ್ಗ ಹಾಗೂ ಇತರ ಧರ್ಮಗಳ ಮುಖಂಡರು ತಪ್ಪುದಾರಿಗೆಳೆದಿರುವ ಜನರಿಗೆ ಏನು ಕಾದಿದೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು, ಸಾ.ಶ.ಪೂ. 607ರಲ್ಲಾದ ಯೆರೂಸಲೇಮಿನ ನಾಶನಕ್ಕೆ ನಡೆಸಿದಂಥ ಘಟನೆಗಳನ್ನು ಪರಿಗಣಿಸೋಣ.

“ಬಾಬೆಲಿನೊಳಗಿಂದ ಓಡಿಹೋಗಿ”

8 ಸಾ.ಶ.ಪೂ. 607ರಲ್ಲಾದ ಯೆರೂಸಲೇಮಿನ ನಾಶನವನ್ನು ಪ್ರವಾದಿ ಯೆರೆಮೀಯನು ಮುಂತಿಳಿಸಿದ್ದನು. ದೇವಜನರನ್ನು ಸೆರೆಗೆ ಒಯ್ಯಲಾಗುವುದಾದರೂ ‘ಎಪ್ಪತ್ತು ವರುಷಗಳ’ ಬಳಿಕ ಅವರು ಸ್ವದೇಶಕ್ಕೆ ಹಿಂದಿರುಗುವರೆಂದು ಅವನು ಹೇಳಿದ್ದನು. (ಯೆರೆ. 29:4, 10) ಬಾಬೆಲಿನಲ್ಲಿ ಬಂದಿಗಳಾಗಿದ್ದ ಯೆಹೂದ್ಯರಿಗೆ ಯೆರೆಮೀಯನು ಒಂದು ಪ್ರಮುಖ ಸಂದೇಶವನ್ನು ಕೊಟ್ಟನು. ಅದೇನೆಂದರೆ, ಅವರು ಬಾಬೆಲಿನ ಸುಳ್ಳು ಧರ್ಮದಿಂದ ಕಳಂಕಿತರಾಗದೆ ಉಳಿಯಬೇಕಿತ್ತು. ಹೀಗೆ ಸಮಯ ಬಂದಾಗ, ಅವರು ಯೆರೂಸಲೇಮಿಗೆ ಹಿಂದಿರುಗಿ ಸತ್ಯಾರಾಧನೆಯನ್ನು ಪುನಃಸ್ಥಾಪಿಸಲು ಸಿದ್ಧರಾಗಿರಬಹುದಿತ್ತು. ಆ ಸಮಯವು, ಮೇದ್ಯಪಾರಸಿಯರು ಬಾಬೆಲನ್ನು ಸಾ.ಶ.ಪೂ. 539ರಲ್ಲಿ ವಶಪಡಿಸಿದ ಸ್ವಲ್ಪದರಲ್ಲೇ ಬಂತು. ಆಗ ಪಾರಸಿಯ ರಾಜನಾದ IIನೇ ಕೋರೆಷನು, ಯೆಹೂದ್ಯರು ಯೆರೂಸಲೇಮಿಗೆ ಹಿಂದಿರುಗಿ ಆಲಯ ಕಟ್ಟುವಂತೆ ಅಪ್ಪಣೆ ಹೊರಡಿಸಿದನು.—ಎಜ್ರ 1:1-4.

9 ಈ ಅವಕಾಶ ಸಿಕ್ಕಿದೊಡನೆ ಸಾವಿರಾರು ಮಂದಿ ಯೆಹೂದ್ಯರು ಯೆರೂಸಲೇಮಿಗೆ ಹಿಂದಿರುಗಿದರು. (ಎಜ್ರ 2:64-67) ಹೀಗೆ ಮಾಡುವ ಮೂಲಕ ಅವರು ಯೆರೆಮೀಯನ ಪ್ರವಾದನಾತ್ಮಕ ಅಪ್ಪಣೆಗೆ ವಿಧೇಯರಾದರು. ಆ ಅಪ್ಪಣೆಗೆ ವಿಧೇಯರಾಗಲು ಅವರು ಆ ಸಮಯದಲ್ಲಿ ಅಕ್ಷರಶಃವಾಗಿ ಇನ್ನೊಂದು ಸ್ಥಳಕ್ಕೆ ಓಡಿಹೋಗಬೇಕಾಗಿತ್ತು. (ಯೆರೆಮೀಯ 51:6, 45, 50 ಓದಿ.) ಆದರೆ ಕಾರಣಾಂತರಗಳಿಂದ ಎಲ್ಲ ಯೆಹೂದ್ಯರಿಗೆ, ಯೆರೂಸಲೇಮ್‌ ಹಾಗೂ ಯೂದಾಯಕ್ಕೆ ಹಿಂದಿರುಗುವ ಆ ದೀರ್ಘ ಪ್ರಯಾಣ ಮಾಡಲಾಗಲಿಲ್ಲ. ವೃದ್ಧ ಪ್ರವಾದಿಯಾದ ದಾನಿಯೇಲನಂತೆ ಬಾಬೆಲಿನಲ್ಲೇ ಹಿಂದುಳಿದವರಿಗೆ ಯೆಹೋವನ ಆಶೀರ್ವಾದ ಸಿಗಬೇಕಿದ್ದರೆ ಅವರು ಯೆರೂಸಲೇಮಿನಲ್ಲಿ ಕೇಂದ್ರಿತವಾಗಿದ್ದ ಸತ್ಯಾರಾಧನೆಯನ್ನು ಹೃತ್ಪೂರ್ವಕವಾಗಿ ಬೆಂಬಲಿಸಬೇಕಿತ್ತು ಮತ್ತು ಬಾಬೆಲಿನ ಸುಳ್ಳಾರಾಧನೆಯಿಂದ ದೂರವಿರಬೇಕಿತ್ತು.

10 ಇಂದು ಕೋಟಿಗಟ್ಟಲೆ ಜನರು ಸುಳ್ಳು ಧರ್ಮದ ವಿವಿಧ ರೂಪಗಳಲ್ಲಿ ಒಳಗೂಡಿದ್ದಾರೆ ಮತ್ತು ಇವೆಲ್ಲವು ಪುರಾತನ ಬಾಬೆಲಿನಲ್ಲಿ ಹುಟ್ಟಿಕೊಂಡವು. (ಆದಿ. 11:6-9) ಈ ಎಲ್ಲ ಧರ್ಮಗಳನ್ನು ಒಟ್ಟಾಗಿ “ಬಾಬೆಲೆಂಬ ಮಹಾ ನಗರಿ, ಭೂಮಿಯಲ್ಲಿರುವ ಜಾರಸ್ತ್ರೀಯರಿಗೂ ಅಸಹ್ಯವಾದ ಕಾರ್ಯಗಳಿಗೂ ತಾಯಿ” ಎಂದು ಕರೆಯಲಾಗಿದೆ. (ಪ್ರಕ. 17:5) ಸುಳ್ಳು ಧರ್ಮವು ಈ ಲೋಕದ ರಾಜಕೀಯ ಧುರೀಣರನ್ನು ಹಲವಾರು ಶತಮಾನಗಳಿಂದ ಬೆಂಬಲಿಸುತ್ತಾ ಇದೆ. ಅವಳು ನಡೆಸಿರುವ ‘ಅಸಹ್ಯ ಕಾರ್ಯಗಳಲ್ಲಿ’ ಹಲವಾರು ಯುದ್ಧಗಳು ಒಳಗೂಡಿವೆ ಮತ್ತು ಇದರಿಂದಾಗಿ ಕೋಟ್ಯಾನುಕೋಟಿ ಮಂದಿ ‘ಭೂಮಿ ಮೇಲೆ ಕೊಲ್ಲಲ್ಪಟ್ಟಿದ್ದಾರೆ.’ (ಪ್ರಕ. 18:24) ಅವಳ ಇತರ ‘ಅಸಹ್ಯ ಕಾರ್ಯಗಳಲ್ಲಿ,’ ಪಾದ್ರಿವರ್ಗದವರು ಮಾಡಿರುವ ಮತ್ತು ಚರ್ಚ್‌ ಅಧಿಕಾರಿಗಳು ಸಹಿಸಿಕೊಂಡಿರುವ ಶಿಶುಕಾಮಿ ಕೃತ್ಯಗಳು ಹಾಗೂ ಇನ್ನಿತರ ಅನೈತಿಕ ಕೃತ್ಯಗಳು ಸೇರಿವೆ. ಹೀಗಿರುವುದರಿಂದ ಯೆಹೋವ ದೇವರು ಬಲು ಬೇಗನೆ ಈ ಲೋಕದಿಂದ ಸುಳ್ಳು ಧರ್ಮವನ್ನು ಅಳಿಸಿಹಾಕುವದು ಅಚ್ಚರಿಯ ಸಂಗತಿಯೇನಲ್ಲ.—ಪ್ರಕ. 18:8.

11 ಇದನ್ನು ತಿಳಿದಿರುವ ಸತ್ಕ್ರೈಸ್ತರಿಗೆ, ಮಹಾ ಬಾಬೆಲಿನ ಸದಸ್ಯರನ್ನು ಎಚ್ಚರಿಸುವ ಕರ್ತವ್ಯವಿದೆ. ಅದನ್ನು ಪೂರೈಸುವ ಒಂದು ವಿಧವು, ಬೈಬಲ್‌ಗಳನ್ನು ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳು’ ಪ್ರಕಟಿಸಿರುವ ಬೈಬಲ್‌ ಪ್ರಕಾಶನಗಳನ್ನು ವಿತರಿಸುವುದೇ ಆಗಿದೆ. ಆಧ್ಯಾತ್ಮಿಕ ‘ಆಹಾರವನ್ನು ಹೊತ್ತುಹೊತ್ತಿಗೆ’ ಒದಗಿಸುವಂತೆ ಯೇಸು ಆ ಆಳನ್ನು ನೇಮಿಸಿದ್ದಾನೆ. (ಮತ್ತಾ. 24:45) ಬೈಬಲಿನ ಸಂದೇಶದಲ್ಲಿ ಆಸಕ್ತಿ ತೋರಿಸುವವರಿಗೆ ಬೈಬಲ್‌ ಅಧ್ಯಯನದ ಮೂಲಕ ಸಹಾಯಮಾಡಲು ಏರ್ಪಾಡುಗಳನ್ನು ಮಾಡಲಾಗುತ್ತದೆ. ಇಂಥವರು, ಕಾಲ ಮಿಂಚಿ ಹೋಗುವ ಮುಂಚೆ ‘ಮಹಾ ಬಾಬೆಲನ್ನು ಬಿಟ್ಟುಬರುವ’ ಆವಶ್ಯಕತೆಯನ್ನು ಗ್ರಹಿಸುವರೆಂದು ನಾವು ನಿರೀಕ್ಷಿಸುತ್ತೇವೆ.—ಪ್ರಕ. 18:4.

ವಿಗ್ರಹಾರಾಧನೆಯಿಂದ ಓಡಿಹೋಗಿ

12 ಮಹಾ ಬಾಬೆಲಿನಲ್ಲಿ ಅಸಹ್ಯಕರವಾಗಿರುವ ಇನ್ನೊಂದು ಆಚರಣೆಯು, ವಿಗ್ರಹ ಹಾಗೂ ಪ್ರತಿಮೆಗಳ ಆರಾಧನೆ ಆಗಿದೆ. ಇಂಥ ವಿಗ್ರಹಗಳನ್ನು ದೇವರು “ಹೇಯ”ವೆಂದೆಣಿಸುತ್ತಾನೆ. (ಧರ್ಮೋ. 29:17) ದೇವರನ್ನು ಮೆಚ್ಚಿಸಲು ಬಯಸುವವರೆಲ್ಲರೂ ವಿಗ್ರಹಾರಾಧನೆಯಿಂದ ದೂರವಿರಬೇಕು. ಇದು, “ನಾನೇ ಯೆಹೋವನು; ಇದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲು ಮಾಡೆನು” ಎಂಬ ಆತನ ಹೇಳಿಕೆಗೆ ಹೊಂದಿಕೆಯಲ್ಲಿರುವುದು.—ಯೆಶಾ. 42:8.

13 ಮೇಲ್ನೋಟಕ್ಕೆ ವಿಗ್ರಹಾರಾಧನೆಯಂತೆ ತೋರದ ವಿಷಯಗಳ ಬಗ್ಗೆಯೂ ದೇವರ ವಾಕ್ಯ ತಿಳಿಸುತ್ತದೆ. ಉದಾಹರಣೆಗೆ ಅದು, ಲೋಭವನ್ನು “ವಿಗ್ರಹಾರಾಧನೆ” ಎಂದು ಕರೆಯುತ್ತದೆ. (ಕೊಲೊ. 3:5) ಲೋಭ ಅಂದರೆ ನಿಷಿದ್ಧವಾದದ್ದನ್ನು, ಬಹುಶಃ ಬೇರೊಬ್ಬನ ಸ್ವತ್ತನ್ನು ಆಶಿಸುವುದೇ ಆಗಿದೆ. (ವಿಮೋ. 20:17) ದೇವದೂತನೊಬ್ಬನು ಪಿಶಾಚನಾದ ಸೈತಾನನಾದದ್ದು, ತಾನು ಸರ್ವೋನ್ನತನಾಗಬೇಕು ಮತ್ತು ಆರಾಧನೆ ತನಗೆ ಸಲ್ಲಬೇಕು ಎಂಬ ಲೋಭದಿಂದಲೇ. (ಲೂಕ 4:5-7) ಆ ಲೋಭದಿಂದಾಗಿಯೇ ಅವನು ಯೆಹೋವನ ವಿರುದ್ಧ ದಂಗೆಯೆದ್ದನು ಮತ್ತು ದೇವರು ನಿಷೇಧಿಸಿದ್ದನ್ನು ಆಶಿಸುವಂತೆ ಹವ್ವಳನ್ನು ಮೋಸಗೊಳಿಸಿದನು. ಒಂದರ್ಥದಲ್ಲಿ ಆದಾಮನು ಸಹ ವಿಗ್ರಹಾರಾಧನೆ ಮಾಡಿದನು. ಹೇಗೆಂದರೆ, ತನ್ನ ಪ್ರೀತಿಪರ ಸ್ವರ್ಗೀಯ ತಂದೆಗೆ ತೋರಿಸಬೇಕಾದ ವಿಧೇಯತೆಗಿಂತ ತನ್ನ ಹೆಂಡತಿಯನ್ನು ಮೆಚ್ಚಿಸಬೇಕೆಂಬ ಅವನ ಸ್ವಾರ್ಥ ಆಸೆಗೆ ಹೆಚ್ಚು ಮಹತ್ತ್ವ ಕೊಟ್ಟನು. ಆದುದರಿಂದ, ದೈವಕೋಪದಿಂದ ತಪ್ಪಿಸಿಕೊಳ್ಳಲು ಬಯಸುವವರೆಲ್ಲರೂ ಯೆಹೋವನಿಗೆ ಮಾತ್ರ ಭಕ್ತಿಯನ್ನು ಸಲ್ಲಿಸಿ, ಎಲ್ಲ ರೀತಿಯ ಲೋಭವನ್ನು ಪ್ರತಿರೋಧಿಸಬೇಕು.

“ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ”

14ಒಂದನೇ ಕೊರಿಂಥ 6:18 ಓದಿ. ಪೋಟೀಫರನ ಹೆಂಡತಿಯು ಯೋಸೇಫನನ್ನು ತನ್ನ ಮೋಹಪಾಶಕ್ಕೆ ಸಿಕ್ಕಿಸಲು ಪ್ರಯತ್ನಿಸಿದಾಗ ಅವನು ಅಕ್ಷರಶಃವಾಗಿ ಓಡಿಹೋದನು. ವಿವಾಹಿತ ಹಾಗೂ ಅವಿವಾಹಿತ ಕ್ರೈಸ್ತರಿಗೆ ಅವನೆಂಥ ಉತ್ತಮ ಮಾದರಿ! ಅನೈತಿಕತೆಯ ಕುರಿತು ದೇವರ ನೋಟವೇನೆಂಬುದನ್ನು ತೋರಿಸಿದ್ದ ಹಿಂದಿನ ಘಟನೆಗಳು ಯೋಸೇಫನ ಮನಸ್ಸಾಕ್ಷಿಯನ್ನು ಪ್ರಭಾವಿಸಿದ್ದವೆಂಬುದು ಸ್ಪಷ್ಟ. “ಜಾರತ್ವದಿಂದ ದೂರವಾಗಿ ಓಡಿಹೋಗಿರಿ” ಎಂಬ ಅಪ್ಪಣೆಗೆ ನಾವು ವಿಧೇಯರಾಗಲು ಬಯಸುವುದಾದರೆ, ನಮ್ಮ ವಿವಾಹಿತ ಸಂಗಾತಿಯಲ್ಲದ ಒಬ್ಬ ವ್ಯಕ್ತಿಯ ಬಗ್ಗೆ ನಮ್ಮಲ್ಲಿ ಲೈಂಗಿಕ ಆಸಕ್ತಿ ಕೆರಳಿಸಬಹುದಾದ ವಿಷಯಗಳಿಂದ ದೂರವಿರುವೆವು. ನಮಗೆ ಹೀಗೆ ತಿಳಿಸಲಾಗಿದೆ: “ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ; ಇವುಗಳ ನಿಮಿತ್ತ ದೇವರ ಕೋಪವು ಉಂಟಾಗುತ್ತದೆ.”—ಕೊಲೊ. 3:5, 6.

15 “ದೇವರ ಕೋಪವು ಉಂಟಾಗುತ್ತದೆ” ಎಂಬ ಮಾತುಗಳನ್ನು ಗಮನಿಸಿರಿ. ಲೋಕದಲ್ಲಿ ಅನೇಕರು ಅಯೋಗ್ಯ ಲೈಂಗಿಕ ಆಸೆಗಳನ್ನು ಬೆಳೆಸಿಕೊಂಡು, ತದನಂತರ ಅವುಗಳಿಗೆ ಶರಣಾಗುತ್ತಾರೆ. ಆದುದರಿಂದ ಕ್ರೈಸ್ತರಾದ ನಮ್ಮನ್ನು ಅಶುದ್ಧ ಲೈಂಗಿಕ ಆಸೆಗಳು ನಿಯಂತ್ರಿಸದಂತೆ ನಾವು ದೇವರ ಸಹಾಯಕ್ಕಾಗಿ ಮತ್ತು ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಬೇಕು. ಅಷ್ಟುಮಾತ್ರವಲ್ಲದೆ, ಬೈಬಲ್‌ ಅಧ್ಯಯನ ಮಾಡುವುದು, ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಮತ್ತು ಸುವಾರ್ತೆ ಸಾರುವುದರಿಂದ ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯಲು’ ನಮಗೆ ಸಹಾಯ ಸಿಗುವುದು. ಹೀಗೆ ನಾವು “ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ.”—ಗಲಾ. 5:16.

16 ನಾವು ಅಶ್ಲೀಲ ಚಿತ್ರಗಳನ್ನು ನೋಡುತ್ತೇವಾದರೆ ಖಂಡಿತವಾಗಿಯೂ ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದಿಲ್ಲ.’ ಲೈಂಗಿಕವಾಗಿ ಕೆರಳಿಸುವಂಥ ವಿಷಯಗಳನ್ನು ಓದುವುದು, ನೋಡುವುದು ಮತ್ತು ಆಲಿಸುವುದರಿಂದಲೂ ಪ್ರತಿಯೊಬ್ಬ ಕ್ರೈಸ್ತನು ದೂರವಿರಬೇಕು. ಹಾಗೆಯೇ ಪವಿತ್ರರಾದ ‘ದೇವಜನರು,’ ಲೈಂಗಿಕ ಅನೈತಿಕತೆಯ ಕುರಿತ ಜೋಕ್ಸ್‌ ಆಡುವುದರಿಂದ ಅಥವಾ ಅನೈತಿಕತೆಯ ಬಗ್ಗೆ ಅನುಚಿತವಾಗಿ ಮಾತಾಡಿಕೊಳ್ಳುವುದರಿಂದ ಸಂತೋಷಪಡೆಯುವುದು ತಪ್ಪು. (ಎಫೆ. 5:3, 4) ಇವುಗಳಿಂದ ದೂರವಿರುವ ಮೂಲಕ, ನಾವು ದೈವಕೋಪದಿಂದ ತಪ್ಪಿಸಿಕೊಂಡು ನೀತಿಯ ಹೊಸ ಲೋಕದಲ್ಲಿ ಜೀವಿಸಲು ನಿಜವಾಗಿಯೂ ಬಯಸುತ್ತೇವೆಂದು ನಮ್ಮ ಪ್ರೀತಿಯ ತಂದೆಗೆ ತೋರಿಸುತ್ತೇವೆ.

“ಹಣದಾಸೆ”ಯಿಂದ ದೂರ ಓಡಿಹೋಗಿ

17 ಪೌಲನು ತಿಮೊಥೆಯನಿಗೆ ಬರೆದ ಪ್ರಥಮ ಪತ್ರದಲ್ಲಿ, ಕ್ರೈಸ್ತರಲ್ಲಿ ದಾಸರಾಗಿದ್ದವರು ಪಾಲಿಸಬೇಕಾದ ಮೂಲತತ್ತ್ವಗಳನ್ನು ಎತ್ತಿಹೇಳಿದನು. ಇವರಲ್ಲಿ ಕೆಲವರು ತಮ್ಮ ಧಣಿಗಳು ಕ್ರೈಸ್ತರಾಗಿದ್ದ ಕಾರಣ ಅವರಿಂದ ಆರ್ಥಿಕ ಲಾಭವನ್ನು ನಿರೀಕ್ಷಿಸುತ್ತಿದ್ದಿರಬೇಕು. ಇನ್ನಿತರರು, ಪವಿತ್ರವಾದ ವಿಷಯಗಳನ್ನು ಸ್ವಾರ್ಥ ಗಳಿಕೆಗಾಗಿ ಉಪಯೋಗಿಸಲು ಪ್ರಯತ್ನಿಸಿರಬಹುದು. ‘ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವುದರ’ ಕುರಿತು ಪೌಲನು ಎಚ್ಚರಿಸಿದನು. ಈ ಸಮಸ್ಯೆಯ ಮೂಲ “ಹಣದಾಸೆ” ಆಗಿದ್ದಿರಬಹುದು. ಇದು, ಶ್ರೀಮಂತರಾಗಲಿ ಬಡವರಾಗಲಿ ಎಲ್ಲರ ಮೇಲೂ ಕೆಟ್ಟ ಪರಿಣಾಮ ಬೀರಬಲ್ಲದು.—1 ತಿಮೊ. 6:1, 2, 5, 9, 10.

18 ಹಣದಾಸೆ, ಇಲ್ಲವೇ ಹಣ ಕೊಟ್ಟು ಖರೀದಿಸಬಲ್ಲ ಅನಗತ್ಯ ವಸ್ತುಗಳ ಆಸೆಯಿಂದಾಗಿ ದೇವರೊಂದಿಗಿನ ಸಂಬಂಧವನ್ನು ಕಳೆದುಕೊಂಡ ಕೆಲವು ಬೈಬಲ್‌ ಉದಾಹರಣೆಗಳು ನಿಮಗೆ ನೆನಪಾಗುತ್ತವೋ? (ಯೆಹೋ. 7:11, 20, 21; 2 ಅರ. 5:20, 25-27) ಪೌಲನು ತಿಮೊಥೆಯನಿಗೆ ಉತ್ತೇಜಿಸಿದ್ದು: “ಎಲೈ, ದೇವರ ಮನುಷ್ಯನೇ, ನೀನಾದರೋ ಇವುಗಳಿಗೆ ದೂರವಾಗಿರು; ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರಚಿತ್ತ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವದಕ್ಕೆ ಪ್ರಯಾಸಪಡು.” (1 ತಿಮೊ. 6:11) ಬರಲಿರುವ ದೈವಕೋಪದಿಂದ ಪಾರಾಗಲು ಬಯಸುವವರೆಲ್ಲರು ಈ ಬುದ್ಧಿವಾದವನ್ನು ಪಾಲಿಸುವುದು ಅತ್ಯಾವಶ್ಯಕ.

“ಯೌವನದ ಇಚ್ಛೆಗಳಿಗೆ ದೂರವಾಗಿ” ಓಡಿಹೋಗಿ

19ಜ್ಞಾನೋಕ್ತಿ 22:15 ಓದಿ. ಯುವ ಜನರಲ್ಲಿ ಸಹಜವಾಗಿರುವ ಮೂರ್ಖತನವು ಅವರನ್ನು ಸುಲಭವಾಗಿ ದಾರಿತಪ್ಪಿಸಿಬಿಡಬಹುದು. ಇದನ್ನು ತಡೆಯಲು, ಬೈಬಲಾಧರಿತ ಶಿಸ್ತು ಒಂದು ಸಹಾಯಕವಾಗಿದೆ. ಯೆಹೋವನ ಸಾಕ್ಷಿಗಳಲ್ಲದ ಹೆತ್ತವರಿರುವ ಅನೇಕ ಯುವ ಜನರು ಬೈಬಲಿನಲ್ಲಿ ಮೂಲತತ್ತ್ವಗಳನ್ನು ಹುಡುಕಿ ಅವುಗಳನ್ನು ಅನ್ವಯಿಸಲು ಪ್ರಯತ್ನಿಸುತ್ತಾರೆ. ಇನ್ನಿತರರು, ಸಭೆಯಲ್ಲಿ ಅಧ್ಯಾತ್ಮಿಕವಾಗಿ ಪ್ರೌಢರಾಗಿರುವವರು ಕೊಡುವ ವಿವೇಕಯುತ ಸಲಹೆಯಿಂದ ಪ್ರಯೋಜನಪಡೆಯುತ್ತಾರೆ. ಬೈಬಲಾಧರಿತ ಸಲಹೆಯನ್ನು ಕೊಡುವವರು ಯಾರೇ ಆಗಿರಲಿ, ಅದನ್ನು ಅನ್ವಯಿಸುವುದು ನಮಗೆ ಇಂದೂ ಮುಂದೂ ಸಂತೋಷ ತರಬಲ್ಲದು.—ಇಬ್ರಿ. 12:8-11.

20ಎರಡನೇ ತಿಮೊಥೆಯ 2:20-22 ಓದಿ. ಉಪಯುಕ್ತ ಶಿಸ್ತಿನ ಕೊರತೆಯಿಂದಾಗಿ ಅನೇಕ ಯುವ ಜನರು ಸ್ಪರ್ಧಾತ್ಮಕ ಮನೋಭಾವ, ಲೋಭ, ಜಾರತ್ವ, ಹಣದಾಸೆ ಹಾಗೂ ಸುಖಭೋಗದ ಬೆನ್ನಟ್ಟುವಿಕೆಯಂಥ ಮೂರ್ಖ ವಿಷಯಗಳಿಗೆ ಬಲಿಬಿದ್ದಿದ್ದಾರೆ. ಇವು “ಯೌವನದ ಇಚ್ಛೆ”ಗಳನ್ನು ಪ್ರತಿಬಿಂಬಿಸುತ್ತವೆ ಮತ್ತು ಇವುಗಳಿಂದ ದೂರ ಓಡಿಹೋಗುವಂತೆ ಬೈಬಲ್‌ ನಮ್ಮನ್ನು ಪ್ರೇರಿಸುತ್ತದೆ. ಒಬ್ಬ ಯುವ ವ್ಯಕ್ತಿ ಆ ಇಚ್ಛೆಗಳಿಗೆ ದೂರವಾಗಿ ಓಡಿಹೋಗಬೇಕಾದರೆ, ಯಾವುದೇ ಮೂಲದಿಂದ ಬರುವ ಹಾನಿಕರ ಪ್ರಭಾವದ ವಿಷಯದಲ್ಲಿ ಎಚ್ಚರದಿಂದಿರಬೇಕು. “ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ” ದೈವಿಕ ಗುಣಗಳನ್ನು ಸಂಪಾದಿಸಲು ಪ್ರಯತ್ನಿಸಬೇಕೆಂಬ ದೇವರ ಸಲಹೆ ವಿಶೇಷವಾಗಿ ಸಹಾಯಕರವಾಗಿರುತ್ತದೆ.

21 ನಾವು ಯುವ ಪ್ರಾಯದವರಾಗಿರಲಿ, ವೃದ್ಧರಾಗಿರಲಿ ನಮ್ಮನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಿರುವ ಜನರಿಗೆ ಕಿವಿಗೊಡದೆ ಇರುವಾಗ, ನಾವು ‘ಅನ್ಯರ ಬಳಿಯಿಂದ ಓಡಿಹೋಗುವ’ ಯೇಸುವಿನ ಕುರಿಸದೃಶ ಹಿಂಬಾಲಕರಾಗಿರಲು ಬಯಸುತ್ತೇವೆಂದು ತೋರಿಸುತ್ತೇವೆ. (ಯೋಹಾ. 10:5) ಆದರೆ ದೈವಕೋಪದಿಂದ ಪಾರಾಗಲಿಕ್ಕಾಗಿ ನಾವು ಕೇವಲ ಹಾನಿಕರ ವಿಷಯಗಳಿಂದ ತಪ್ಪಿಸಿಕೊಂಡು ಓಡಿಹೋಗುವುದು ಮಾತ್ರ ಸಾಲದು. ನಾವು ಸದ್ಗುಣಗಳನ್ನು ಸಂಪಾದಿಸಲೂ ಪ್ರಯಾಸಪಡಬೇಕು. ಮುಂದಿನ ಲೇಖನವು, ಅವುಗಳಲ್ಲಿ ಏಳು ಗುಣಗಳನ್ನು ಚರ್ಚಿಸಲಿದೆ. ಅವುಗಳನ್ನು ಸವಿಸ್ತಾರವಾಗಿ ಪರಿಗಣಿಸಲು ನಮಗೆ ಸಕಾರಣಗಳಿವೆ ಏಕೆಂದರೆ ಯೇಸು ವಾಗ್ದಾನಿಸಿದ್ದು: “ನಾನು ಅವುಗಳಿಗೆ [ನನ್ನ ಕುರಿಗಳಿಗೆ] ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವದೇ ಇಲ್ಲ; ಅವುಗಳನ್ನು ಯಾರೂ ನನ್ನ ಕೈಯೊಳಗಿಂದ ಕಸಕೊಳ್ಳರು.”—ಯೋಹಾ. 10:28.

ನಿಮ್ಮ ಉತ್ತರವೇನು?

• ಯೇಸು ಧಾರ್ಮಿಕ ಮುಖಂಡರಿಗೆ ಯಾವ ಎಚ್ಚರಿಕೆ ಕೊಟ್ಟನು?

• ಇಂದು ಲಕ್ಷಾಂತರ ಜನರು ಯಾವ ಅಪಾಯಕರ ಸನ್ನಿವೇಶದಲ್ಲಿದ್ದಾರೆ?

• ಮೇಲ್ನೋಟಕ್ಕೆ ವಿಗ್ರಹಾರಾಧನೆಯಂತೆ ತೋರದ ಯಾವ ವಿಷಯಗಳಿಂದ ನಾವು ಓಡಿಹೋಗಬೇಕು?

[ಅಧ್ಯಯನ ಪ್ರಶ್ನೆಗಳು]

1. ತಪ್ಪಿಸಿಕೊಂಡು ಓಡಿಹೋಗುವ ಕುರಿತ ಬೈಬಲಿನ ಕೆಲವು ಉದಾಹರಣೆಗಳು ಯಾವುವು?

2, 3. (ಎ) ಸ್ನಾನಿಕನಾದ ಯೋಹಾನನು ಧಾರ್ಮಿಕ ಮುಖಂಡರನ್ನು ಟೀಕಿಸಿದ್ದರ ಅರ್ಥವೇನು? (ಬಿ) ಯೋಹಾನನು ಕೊಟ್ಟಿದ್ದ ಎಚ್ಚರಿಕೆಯನ್ನು ಯೇಸು ಹೇಗೆ ದೃಢೀಕರಿಸಿದನು?

4. ‘ಗೆಹೆನ್ನ’ ಎಂದು ಹೇಳಿದಾಗ ಯೇಸು ಯಾವುದಕ್ಕೆ ಸೂಚಿಸಿದನು?

5. ಯೋಹಾನ ಹಾಗೂ ಯೇಸು ಕೊಟ್ಟ ಎಚ್ಚರಿಕೆಯಂತೆಯೇ ಸಂಭವಿಸಿತೆಂದು ಇತಿಹಾಸ ಹೇಗೆ ದೃಢೀಕರಿಸುತ್ತದೆ?

6. ಆದಿ ಕ್ರೈಸ್ತ ಸಭೆಯಲ್ಲಿ ಯಾವುದು ಆರಂಭವಾಯಿತು?

7. ‘ಅಧರ್ಮಸ್ವರೂಪನು’ ಎಂಬ ಹೆಸರು ಕ್ರೈಸ್ತಪ್ರಪಂಚದ ಪಾದ್ರಿವರ್ಗಕ್ಕೆ ತಕ್ಕದ್ದಾಗಿದೆ ಏಕೆ?

8, 9. (ಎ) ಯೆರೆಮೀಯನು, ಬಾಬೆಲಿನಲ್ಲಿ ಬಂದಿಗಳಾಗಿದ್ದ ಯೆಹೂದ್ಯರಿಗೆ ಯಾವ ಪ್ರವಾದನಾತ್ಮಕ ಸಂದೇಶ ಕೊಟ್ಟನು? (ಬಿ) ಮೇದ್ಯಪಾರಸಿಯರು ಬಾಬೆಲನ್ನು ವಶಪಡಿಸಿಕೊಂಡ ಬಳಿಕ ‘ಓಡಿಹೋಗಲು’ ಯಾವ ರೀತಿಯಲ್ಲಿ ದಾರಿತೆರೆಯಿತು?

10. ‘ಮಹಾ ಬಾಬೆಲ್‌’ ಯಾವ ‘ಅಸಹ್ಯ ಕಾರ್ಯಗಳನ್ನು’ ನಡೆಸಿದ್ದಾಳೆ?

11. ಮಹಾ ಬಾಬೆಲ್‌ ನಾಶವಾಗುವ ವರೆಗೆ ಸತ್ಕ್ರೈಸ್ತರಿಗೆ ಯಾವ ಕರ್ತವ್ಯವಿದೆ?

12. ವಿಗ್ರಹ ಹಾಗೂ ಪ್ರತಿಮೆಗಳನ್ನು ಆರಾಧಿಸುವುದರ ಬಗ್ಗೆ ದೇವರ ನೋಟವೇನು?

13. ಮೇಲ್ನೋಟಕ್ಕೆ ವಿಗ್ರಹಾರಾಧನೆಯಂತೆ ತೋರದ ಯಾವ ವಿಷಯಗಳಿಂದ ನಾವು ಓಡಿಹೋಗಬೇಕು?

14-16. (ಎ) ಯೋಸೇಫನು ನೈತಿಕತೆಯ ವಿಷಯದಲ್ಲಿ ಅತ್ಯುತ್ತಮ ಮಾದರಿಯಾದದ್ದು ಹೇಗೆ? (ಬಿ) ನಮ್ಮಲ್ಲಿ ಅಶುದ್ಧ ಲೈಂಗಿಕ ಆಸೆಗಳಿರುವಲ್ಲಿ ನಾವೇನು ಮಾಡಬೇಕು? (ಸಿ) ಜಾರತ್ವದಿಂದ ದೂರವಾಗಿ ಓಡಿಹೋಗುವುದರಲ್ಲಿ ನಾವು ಹೇಗೆ ಯಶಸ್ವಿಗಳಾಗಬಲ್ಲೆವು?

17, 18. ಹಣದಾಸೆಯಿಂದ ನಾವೇಕೆ ದೂರ ಓಡಿಹೋಗಬೇಕು?

19. ಎಲ್ಲ ಯುವ ಜನರಿಗೆ ಯಾವುದರ ಅಗತ್ಯವಿದೆ?

20. ತಪ್ಪಾದ ಇಚ್ಛೆಗಳಿಂದ ದೂರ ಓಡಿಹೋಗಲು ಯುವ ಜನರು ಯಾವ ಸಹಾಯ ಪಡೆಯಬಲ್ಲರು?

21. ಯೇಸು ತನ್ನ ಕುರಿಸದೃಶ ಹಿಂಬಾಲಕರ ಕುರಿತು ಯಾವ ಅದ್ಭುತಕರ ವಾಗ್ದಾನ ಮಾಡಿದನು?

[ಪುಟ 8, 9ರಲ್ಲಿರುವ ಚಿತ್ರಗಳು]

“ತಪ್ಪಿಸಿಕೊಳ್ಳು” ಎಂಬ ಪದ ಕೇಳಿದೊಡನೆ ನಿಮಗೆ ಯಾವುದರ ನೆನಪಾಗುತ್ತದೆ?