ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಸಂಪಾದಿಸಲು ಪ್ರಯಾಸಪಡಬೇಕಾದ ಗುಣಗಳು

ನಾವು ಸಂಪಾದಿಸಲು ಪ್ರಯಾಸಪಡಬೇಕಾದ ಗುಣಗಳು

ನಾವು ಸಂಪಾದಿಸಲು ಪ್ರಯಾಸಪಡಬೇಕಾದ ಗುಣಗಳು

“ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರಚಿತ್ತ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವದಕ್ಕೆ ಪ್ರಯಾಸಪಡು.”—1 ತಿಮೊ. 6:11.

ಇಂದು ಜನರು ಯಾವುದಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿರಿಸುತ್ತಾರೆ? ಬೈಬಲ್‌ ತೋರಿಸುವಂತೆ, ಅನೇಕರು ವ್ಯರ್ಥ ಗುರಿಗಳಿಗಾಗಿ ಪ್ರಯಾಸಪಡುತ್ತಾರೆ. ಕೆಲವರು “ಹಣದಾಸೆ”ಯವರಾಗಿದ್ದು, ಸ್ವತ್ತುಗಳಿಂದಲೇ ಸಂತೋಷ ಸಿಗುತ್ತದೆಂದು ಎಣಿಸುತ್ತಾರೆ. ಇನ್ನೂ ಕೆಲವರು ‘ಭೋಗಗಳನ್ನು ಪ್ರೀತಿಸುತ್ತಾ,’ ಜೀವನದಲ್ಲಿ ಸುಖಭೋಗ ಹಾಗೂ ಮನೋರಂಜನೆಗೆ ಪ್ರಥಮ ಸ್ಥಾನ ಕೊಡುತ್ತಾರೆ. (2 ತಿಮೊ. 3:2, 4) ಇವೆಲ್ಲವುಗಳಿಗಾಗಿ ಜನರು ಬಹಳಷ್ಟು ಪ್ರಯಾಸಪಡುತ್ತಿದ್ದರೂ ವಾಸ್ತವದಲ್ಲಿ ಅವರು ‘ಗಾಳಿಯನ್ನು ಹಿಂದಟ್ಟುತ್ತಿದ್ದಾರೆ.’​—⁠ಪ್ರಸಂ. 1:14.

2 ಇದಕ್ಕೆ ವ್ಯತಿರಿಕ್ತವಾಗಿ, ಕ್ರೈಸ್ತರು ಬೆನ್ನಟ್ಟಬೇಕಾದ ಒಂದು ಸಾರ್ಥಕ ಗುರಿಯ ಕುರಿತು ಅಪೊಸ್ತಲ ಪೌಲನು ಬರೆದದ್ದು: “ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.” (ಫಿಲಿ. 3:14) 1,44,000 ಮಂದಿ ಅಭಿಷಿಕ್ತ ಕ್ರೈಸ್ತರು ಸ್ವರ್ಗೀಯ ಜೀವನದ ಆ ಬಿರುದು ಅಥವಾ ಬಹುಮಾನವನ್ನು ಪಡೆಯುವರೆಂದು ಬೈಬಲ್‌ ತಿಳಿಸುತ್ತದೆ. ಪೌಲನೂ ಇವರಲ್ಲಿ ಒಬ್ಬನು. ಇವರು, ಯೇಸು ಕ್ರಿಸ್ತನು ಭೂಮಿಯ ಮೇಲೆ ಸಾವಿರ ವರ್ಷ ಕಾಲ ಆಳುವಾಗ ಆತನೊಂದಿಗೆ ಜೊತೆಗೂಡುವರು. ಅವರ ಮುಂದಿರುವ ಇಂಥ ಅದ್ಭುತ ಗುರಿಯನ್ನು ಮುಟ್ಟಲು ಪ್ರಯಾಸಪಡುವಂತೆ ದೇವರು ಅವರನ್ನು ಆಮಂತ್ರಿಸಿದ್ದಾನೆ! ಆದರೆ ಇಂದಿರುವ ಅಧಿಕಾಂಶ ಸತ್ಕ್ರೈಸ್ತರಿಗೆ ಒಂದು ಭಿನ್ನ ಗುರಿ ಇಲ್ಲವೇ ನಿರೀಕ್ಷೆಯಿದೆ. ಆದಾಮಹವ್ವರು ಏನನ್ನು ಕಳೆದುಕೊಂಡರೋ ಅದನ್ನು, ಅಂದರೆ ಭೂಪರದೈಸಿನಲ್ಲಿ ಪರಿಪೂರ್ಣ ಆರೋಗ್ಯದೊಂದಿಗೆ ನಿತ್ಯಜೀವದ ನಿರೀಕ್ಷೆಯನ್ನು ಯೆಹೋವನು ಪ್ರೀತಿಯಿಂದ ಅವರ ಮುಂದಿಟ್ಟಿದ್ದಾನೆ.​—⁠ಪ್ರಕ. 7:4, 9; 21:1-4.

3 ಪಾಪಪೂರ್ಣ ಮಾನವರು ಸರಿಯಾದದ್ದನ್ನು ಮಾಡಲು ಎಷ್ಟೇ ಪ್ರಯತ್ನಪಡಲಿ, ನಿತ್ಯಜೀವವನ್ನು ಸಂಪಾದಿಸಲಾರರು. (ಯೆಶಾ. 64:6) ಇದನ್ನು, ಯೇಸು ಕ್ರಿಸ್ತನ ಮೂಲಕ ರಕ್ಷಣೆಗಾಗಿ ಯೆಹೋವನು ಮಾಡಿರುವ ಪ್ರೀತಿಪೂರ್ವಕ ಏರ್ಪಾಡಲ್ಲಿ ನಂಬಿಕೆಯನ್ನಿಡುವುದರ ಮೂಲಕ ಮಾತ್ರ ಪಡೆಯಸಾಧ್ಯವಿದೆ. ದೇವರ ಈ ಅಪಾತ್ರ ಕೃಪೆಗಾಗಿ ನಾವು ಹೇಗೆ ಕೃತಜ್ಞತೆ ತೋರಿಸಬಹುದು? ಒಂದು ವಿಧ, “ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರಚಿತ್ತ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವದಕ್ಕೆ ಪ್ರಯಾಸಪಡು” ಎಂಬ ಆಜ್ಞೆಗೆ ವಿಧೇಯತೆ ತೋರಿಸುವ ಮೂಲಕವೇ. (1 ತಿಮೊ. 6:11) “ಇನ್ನೂ ಹೆಚ್ಚಾಗಿ” ಪ್ರಯಾಸಪಟ್ಟು ಈ ಗುಣಗಳನ್ನು ಸಂಪಾದಿಸಬೇಕೆಂಬ ನಮ್ಮ ನಿರ್ಧಾರವನ್ನು ಮುಂದಿನ ಚರ್ಚೆಯು ಬಲಗೊಳಿಸುವುದು.​—⁠1 ಥೆಸ. 4:2.

‘ನೀತಿಯನ್ನು ಸಂಪಾದಿಸಲು ಪ್ರಯಾಸಪಡು’

4 ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದ ಎರಡೂ ಪತ್ರಗಳಲ್ಲಿ, ಸಂಪಾದಿಸಲು ಪ್ರಯಾಸಪಡಬೇಕಾದ ಗುಣಗಳ ಪಟ್ಟಿಮಾಡಿದನು. ಈ ಎರಡೂ ಪಟ್ಟಿಗಳಲ್ಲಿ “ನೀತಿ” ಎಂಬ ಗುಣ ಮೊದಲು ಕಂಡುಬರುತ್ತದೆ. (1 ತಿಮೊ. 6:11; 2 ತಿಮೊ. 2:22) ಅಲ್ಲದೆ, ಬೈಬಲಿನ ಇತರ ಭಾಗಗಳಲ್ಲಿ ನೀತಿ ಇಲ್ಲವೇ ಸದ್ಧರ್ಮವನ್ನು ಸಂಪಾದಿಸುವಂತೆ ನಮ್ಮನ್ನು ಪದೇಪದೇ ಉತ್ತೇಜಿಸಲಾಗಿದೆ. (ಜ್ಞಾನೋ. 15:9; 21:21; ಯೆಶಾ. 51:1) ನೀತಿಯನ್ನು ಸಂಪಾದಿಸುವ ಒಂದು ವಿಧಾನವು, ‘ಒಬ್ಬನೇ ಸತ್ಯದೇವರ ಮತ್ತು ಆತನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ’ ಕುರಿತ ಜ್ಞಾನವನ್ನು ಪಡೆಯುವುದೇ ಆಗಿದೆ. (ಯೋಹಾ. 17:3) ನೀತಿಯನ್ನು ಸಂಪಾದಿಸಲು ಪ್ರಯಾಸಪಡುವ ವ್ಯಕ್ತಿ ಕ್ರಿಯೆಗೈಯುವನು. ಅವನು ತನ್ನ ಹಿಂದಿನ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ದೇವರ ಚಿತ್ತವನ್ನು ಮಾಡಲು ‘ತಿರುಗಿಕೊಳ್ಳುವನು.’—ಅ. ಕೃ. 3:19.

5 ನೀತಿಯನ್ನು ಸಂಪಾದಿಸಲು ಪ್ರಯಾಸಪಡುತ್ತಿರುವ ಲಕ್ಷಗಟ್ಟಲೆ ಜನರು ಯೆಹೋವನಿಗೆ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ಈ ಸಮರ್ಪಣೆಯನ್ನು ಅವರು ನೀರಿನ ದೀಕ್ಷಾಸ್ನಾನದ ಮೂಲಕ ಬಹಿರಂಗಗೊಳಿಸಿದ್ದಾರೆ. ನೀವು ಈಗಾಗಲೇ ದೀಕ್ಷಾಸ್ನಾನ ಪಡೆದ ಕ್ರೈಸ್ತರಾಗಿರುವಲ್ಲಿ, ನೀತಿಯನ್ನು ಸಂಪಾದಿಸಲು ಸತತವಾಗಿ ಪ್ರಯಾಸಪಡುತ್ತಾ ಇದ್ದೀರೆಂಬುದು ನಿಮ್ಮ ಜೀವನರೀತಿಯಲ್ಲಿ ತೋರಿಬರುತ್ತಿದೆಯೋ? ಅದು ತೋರಿಬರಲೇಬೇಕು. ಇದನ್ನು ಮಾಡುವ ಒಂದು ವಿಧ, ನಿಮ್ಮ ಜೀವನ ರೀತಿಯ ಕುರಿತ ಪ್ರಮುಖ ನಿರ್ಣಯಗಳನ್ನು ಮಾಡಬೇಕಾಗುವಾಗ “ಇದು ಒಳ್ಳೇದು ಅದು ಕೆಟ್ಟದ್ದು” ಎಂಬುದನ್ನು ಬೈಬಲಿನಿಂದ ವಿವೇಚಿಸಿ ತಿಳಿದುಕೊಳ್ಳುವುದಾಗಿದೆ. (ಇಬ್ರಿಯ 5:14 ಓದಿ.) ಉದಾಹರಣೆಗೆ ನೀವು ಮದುವೆ ವಯಸ್ಸಿನವರಾಗಿರುವಲ್ಲಿ, ದೀಕ್ಷಾಸ್ನಾನ ಪಡೆದಿರದ ಕ್ರೈಸ್ತ ವ್ಯಕ್ತಿಯೊಂದಿಗೆ ಪ್ರಣಯಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳಬಾರದೆಂಬ ದೃಢಸಂಕಲ್ಪ ಮಾಡಿದ್ದೀರೋ? ನೀವು ನೀತಿಯನ್ನು ಸಂಪಾದಿಸಲು ಪ್ರಯಾಸಪಡುತ್ತಿರುವಲ್ಲಿ, ಹಾಗೆ ಮಾಡಿರುವಿರಿ.​—⁠2 ಕೊರಿಂ. 6:14.

6 ನೀತಿವಂತರಾಗಿರುವುದರ ಅರ್ಥ, ಸ್ವನೀತಿವಂತರಾಗಿರುವುದು ಅಥವಾ ‘ಧರ್ಮವನ್ನು ಅತಿಯಾಗಿ ಆಚರಿಸುವುದು’ ಎಂದಲ್ಲ. (ಪ್ರಸಂ. 7:16) ಇತರರಿಗಿಂತ ಉತ್ತಮರೆಂದು ತೋರಿಸಲಿಕ್ಕಾಗಿ ನೀತಿಯ ಪ್ರದರ್ಶನ ಮಾಡದಂತೆ ಯೇಸು ಎಚ್ಚರಿಸಿದನು. (ಮತ್ತಾ. 6:1) ನೀತಿಯನ್ನು ಸಂಪಾದಿಸಲು ಪ್ರಯಾಸಪಡುವುದರಲ್ಲಿ ಹೃದಯವೂ ಒಳಗೂಡಿದೆ. ಇದರರ್ಥ ತಪ್ಪಾದ ಆಲೋಚನೆಗಳು, ಮನೋಭಾವಗಳು, ಉದ್ದೇಶಗಳು ಮತ್ತು ಆಸೆಗಳನ್ನು ನಾವು ತಿದ್ದಬೇಕು. ನಾವು ಹೀಗೆ ಮಾಡುತ್ತಾ ಇರುವಲ್ಲಿ, ಗಂಭೀರ ಪಾಪಗಳನ್ನು ಮಾಡದಿರುವೆವು. (ಜ್ಞಾನೋಕ್ತಿ 4:23 ಓದಿ; ಯಾಕೋಬ 1:14, 15 ಹೋಲಿಸಿ.) ಅಷ್ಟುಮಾತ್ರವಲ್ಲ, ಇತರ ಪ್ರಮುಖ ಕ್ರೈಸ್ತ ಗುಣಗಳನ್ನು ಸಂಪಾದಿಸಲು ನಾವು ಪ್ರಯಾಸಪಡುವಾಗ ಯೆಹೋವನು ನಮ್ಮನ್ನು ಹರಸಿ ನಮಗೆ ಸಹಾಯ ಮಾಡುವನು.

‘ಭಕ್ತಿಯನ್ನು ಸಂಪಾದಿಸಲು ಪ್ರಯಾಸಪಡು’

7 ಭಕ್ತಿ ಎಂದರೆ, ಮನಃಪೂರ್ವಕವಾಗಿ ಸಮರ್ಪಿತರೂ ನಿಷ್ಠರೂ ಆಗಿರುವುದೆಂದರ್ಥ. ‘ದೇವಭಕ್ತಿ’ ಎಂದು ಭಾಷಾಂತರಿಸಲಾದ ಗ್ರೀಕ್‌ ಪದವನ್ನು, “ವ್ಯಕ್ತಿಯೊಬ್ಬನಲ್ಲಿ ದೇವಭಯ ಕಡಿಮೆಗೊಳ್ಳದಂತೆ ನೋಡಿಕೊಳ್ಳುವ ಸ್ವಸ್ಥ ಮನೋಭಾವ” ಎಂದು ಬೈಬಲ್‌ ಶಬ್ದಕೋಶವೊಂದು ವರ್ಣಿಸುತ್ತದೆ. ಇಸ್ರಾಯೇಲ್ಯರು ಇಂಥ ಭಕ್ತಿ ತೋರಿಸಲು ಅನೇಕಸಲ ತಪ್ಪಿಬಿದ್ದರು. ದೇವರು ಅವರನ್ನು ಐಗುಪ್ತದಿಂದ ಬಿಡಿಸಿದ ನಂತರವೂ ಅವರು ತೋರಿಸಿದ ಅವಿಧೇಯತೆಯಿಂದ ಇದು ವ್ಯಕ್ತವಾಗುತ್ತದೆ.

8 ‘ಒಬ್ಬ ಪರಿಪೂರ್ಣ ಮಾನವನು ಪರಿಪೂರ್ಣ ಭಕ್ತಿಯನ್ನು ತೋರಿಸಬಲ್ಲನೋ?’ ಎಂಬ ಪ್ರಶ್ನೆಗೆ ಉತ್ತರ, ಪರಿಪೂರ್ಣ ಮನುಷ್ಯನಾದ ಆದಾಮನು ಪಾಪಮಾಡಿ ಸಾವಿರಾರು ವರ್ಷಗಳು ಕಳೆದರೂ ಸಿಕ್ಕಿರಲಿಲ್ಲ. ಆ ಸಮಯದಾದ್ಯಂತ ಯಾವ ಮಾನವನಿಗೂ ಪರಿಪೂರ್ಣ ಭಕ್ತಿಯ ಜೀವನವನ್ನು ನಡೆಸಲಾಗಲಿಲ್ಲ. ಆದರೆ ತಕ್ಕ ಸಮಯದಲ್ಲಿ ಯೆಹೋವನು ಪರಿಪೂರ್ಣ ಭಕ್ತಿಗೆ ಸಂಬಂಧಪಟ್ಟ ಈ “ಪವಿತ್ರ ರಹಸ್ಯದ” ಉತ್ತರವನ್ನು ಬಯಲುಪಡಿಸಿದನು. ಯೆಹೋವನು, ಸ್ವರ್ಗದಲ್ಲಿದ್ದ ತನ್ನ ಏಕಜಾತ ಪುತ್ರನು ಭೂಮಿಯಲ್ಲಿ ಪರಿಪೂರ್ಣ ಮಾನವನಾಗಿ ಹುಟ್ಟುವಂತೆ ಅವನ ಜೀವವನ್ನು ಮರಿಯಳ ಗರ್ಭಕ್ಕೆ ಸ್ಥಳಾಂತರಿಸಿದನು. ಸತ್ಯ ದೇವರಿಗೆ ಮನಃಪೂರ್ವಕವಾಗಿ ಸಮರ್ಪಿತರೂ ನಿಷ್ಠರೂ ಆಗಿರುವುದರ ಅರ್ಥವೇನೆಂಬುದನ್ನು ಯೇಸು ಭೂಮಿಯಲ್ಲಿದ್ದಾಗ ತೋರಿಸಿದನು. ಇದನ್ನು ತನ್ನ ಜೀವನದಾದ್ಯಂತ ಮತ್ತು ಹೀನಾಯ ಮರಣದ ಸಮಯದಲ್ಲೂ ತೋರಿಸಿದನು. ಅವನ ಪ್ರಾರ್ಥನೆಗಳಲ್ಲಿ, ಪ್ರೀತಿಪರ ಸ್ವರ್ಗೀಯ ತಂದೆಗಾಗಿ ಅವನಲ್ಲಿದ್ದ ಪೂಜ್ಯ ಭಕ್ತಿಯು ವ್ಯಕ್ತವಾಯಿತು. (ಮತ್ತಾ. 11:25; ಯೋಹಾ. 12:27, 28) ಈ ಕಾರಣದಿಂದಲೇ, ಯೇಸುವಿನ ಆದರ್ಶಪ್ರಾಯ ಜೀವನ ಮಾರ್ಗವನ್ನು ವರ್ಣಿಸುವಾಗ “ದೇವಭಕ್ತಿಯ” ಕುರಿತು ತಿಳಿಸುವಂತೆ ಯೆಹೋವನು ಪೌಲನನ್ನು ಪ್ರೇರಿಸಿದನು.​—⁠1 ತಿಮೊಥೆಯ 3:16 ಓದಿ. *

9 ನಾವು ಪಾಪಪೂರ್ಣ ಸ್ಥಿತಿಯಲ್ಲಿರುವುದರಿಂದ ಪರಿಪೂರ್ಣ ದೇವಭಕ್ತಿಯನ್ನು ತೋರಿಸಲಾರೆವು ನಿಜ. ಆದರೆ ಅದನ್ನು ಸಂಪಾದಿಸಲು ಕಡಿಮೆಪಕ್ಷ ಪ್ರಯಾಸಪಡಬಹುದು. ಅದಕ್ಕಾಗಿ ನಾವು ಯೇಸುವಿನ ಮಾದರಿಯನ್ನು ಸಾಧ್ಯವಾದಷ್ಟು ನಿಕಟವಾಗಿ ಅನುಸರಿಸಬೇಕು. (1 ಪೇತ್ರ 2:21) ಹೀಗೆ ಮಾಡಿದರೆ, ನಾವು ಕಪಟಿಗಳಂತೆ ‘ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರು’ ಆಗಿರುವುದಿಲ್ಲ. (2 ತಿಮೊ. 3:5) ಹಾಗಾದರೆ, ನಿಜವಾದ ದೇವಭಕ್ತಿಗೂ ನಮ್ಮ ಹೊರತೋರಿಕೆಗೂ ಏನೂ ಸಂಬಂಧವಿಲ್ಲವೆಂದು ಇದರರ್ಥವೋ? ಇಲ್ಲ, ಖಂಡಿತ ಸಂಬಂಧವಿದೆ. ದೃಷ್ಟಾಂತಕ್ಕಾಗಿ, ನಾವು ನಮ್ಮ ಮದುವೆ ಉಡುಪನ್ನು ಆಯ್ಕೆಮಾಡುತ್ತಿರಲಿ ಇಲ್ಲವೇ ಮಾರುಕಟ್ಟೆಗೆ ಹೋಗುವಾಗ ಹಾಕಬೇಕಾದ ಉಡುಪನ್ನು ಆಯ್ಕೆಮಾಡುತ್ತಿರಲಿ, ನಮ್ಮ ತೋರಿಕೆಯು ನಾವು ‘ದೇವಭಕ್ತರು’ ಎಂಬುದನ್ನು ಯಾವಾಗಲೂ ತೋರಿಸಿಕೊಡಬೇಕು. (1 ತಿಮೊ. 2:9, 10) ಹೌದು, ದೇವಭಕ್ತಿಯನ್ನು ಸಂಪಾದಿಸಲು ಪ್ರಯಾಸಪಡುವಾಗ ನಾವು ದೇವರ ನೀತಿಯ ಮಟ್ಟಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅನ್ವಯಿಸಬೇಕು.

‘ನಂಬಿಕೆಯನ್ನು ಸಂಪಾದಿಸಲು ಪ್ರಯಾಸಪಡು’

10ರೋಮಾಪುರ 10:17 ಓದಿ. ಬಲವಾದ ನಂಬಿಕೆಯನ್ನು ಪಡೆಯಲು ಮತ್ತು ಅದನ್ನು ಕಾಪಾಡಿಕೊಳ್ಳಲು ಕ್ರೈಸ್ತನೊಬ್ಬನು ದೇವರ ವಾಕ್ಯದಲ್ಲಿರುವ ಅಮೂಲ್ಯ ಸತ್ಯಗಳ ಕುರಿತು ಧ್ಯಾನಿಸುತ್ತಾ ಇರಬೇಕು. ಇದನ್ನು ಮಾಡಲು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ನಮಗೆ ಅನೇಕ ಉತ್ತಮ ಪ್ರಕಾಶನಗಳನ್ನು ಕೊಟ್ಟಿದೆ. ಇವುಗಳಲ್ಲಿ, ಜೀವಿಸಿರುವವರಲ್ಲೇ ಅತ್ಯಂತ ಮಹಾನ್‌ ಪುರುಷ ಮತ್ತು ಮಹಾ ಬೋಧಕನಿಂದ ಕಲಿಯಿರಿ * ಎಂಬ ಪುಸ್ತಕಗಳು ಅಪೂರ್ವವಾಗಿವೆ. ಇವು, ನಾವು ಕ್ರಿಸ್ತನನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ಮತ್ತು ಆತನನ್ನು ಅನುಕರಿಸಲು ಸಹಾಯಮಾಡುವವು. (ಮತ್ತಾ. 24:45-47) ಅಲ್ಲದೆ, ಈ ಆಳು ವರ್ಗವು ಏರ್ಪಡಿಸುವ ಅನೇಕ ಕೂಟಗಳು, ಸಮ್ಮೇಳನಗಳು ಹಾಗೂ ಅಧಿವೇಶನಗಳು “ಕ್ರಿಸ್ತನ ವಾಕ್ಯ”ವನ್ನು ಎತ್ತಿತಿಳಿಸುತ್ತವೆ. ದೇವರ ಈ ಏರ್ಪಾಡುಗಳಿಗೆ ನೀವು ‘ಲಕ್ಷ್ಯಕೊಟ್ಟು’ ಅವುಗಳಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದಾದ ಯಾವುದಾದರೂ ವಿಧಗಳಿವೆಯೆಂದು ನಿಮಗೆ ವೈಯಕ್ತಿಕವಾಗಿ ಅನಿಸುತ್ತದೋ?​—⁠ಇಬ್ರಿ. 2:1.

11 ಬಲವಾದ ನಂಬಿಕೆಯನ್ನು ಬೆಳೆಸಲು ಸಹಾಯಮಾಡುವ ಇನ್ನೊಂದು ಅಂಶ ಪ್ರಾರ್ಥನೆ ಆಗಿದೆ. ಯೇಸುವಿನ ಹಿಂಬಾಲಕರು ಒಮ್ಮೆ ಆತನಿಗೆ ಕೇಳಿದ್ದು: “ನಮ್ಮ ನಂಬಿಕೆಯನ್ನು ಹೆಚ್ಚಿಸು.” ನಾವು ಸಹ ದೇವರ ಬಳಿ ಹಾಗೆಯೇ ದೀನಭಾವದಿಂದ ಬೇಡಿಕೊಳ್ಳಬಹುದು. (ಲೂಕ 17:5) ಹೆಚ್ಚಿನ ನಂಬಿಕೆಯನ್ನು ಪಡೆಯಲು ನಾವು ಪವಿತ್ರಾತ್ಮದ ಸಹಾಯಕ್ಕಾಗಿ ಪ್ರಾರ್ಥಿಸಬೇಕು. ಏಕೆಂದರೆ “ದೇವರಾತ್ಮನಿಂದ ಉಂಟಾಗುವ ಫಲ”ಗಳಲ್ಲಿ “ನಂಬಿಕೆ” ಒಂದಾಗಿದೆ. (ಗಲಾ. 5:22) ಅಷ್ಟುಮಾತ್ರವಲ್ಲದೆ ದೇವರ ಆಜ್ಞೆಗಳಿಗೆ ವಿಧೇಯರಾಗುವಾಗ ನಮ್ಮ ನಂಬಿಕೆ ಬಲಗೊಳ್ಳುತ್ತದೆ. ದೃಷ್ಟಾಂತಕ್ಕಾಗಿ, ಕ್ಷೇತ್ರ ಸೇವೆಯಲ್ಲಿ ನಾವು ಹೆಚ್ಚನ್ನು ಮಾಡುತ್ತಿರಬಹುದು. ಇದು, ನಮಗೆ ಗಾಢವಾದ ಸಂತೋಷವನ್ನು ತರುತ್ತದೆ. ಹೀಗೆ ನಾವು “ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ”ಪಡುವುದರಿಂದ ಸಿಗುವ ಪ್ರಯೋಜನಗಳ ಕುರಿತು ಯೋಚಿಸುವಾಗ ನಮ್ಮ ನಂಬಿಕೆ ಹೆಚ್ಚುತ್ತದೆ.​—⁠ಮತ್ತಾ. 6:33.

‘ಪ್ರೀತಿಯನ್ನು ಸಂಪಾದಿಸಲು ಪ್ರಯಾಸಪಡು’

12ಒಂದನೇ ತಿಮೊಥೆಯ 5:1, 2 ಓದಿ. ಕ್ರೈಸ್ತರು ಪರಸ್ಪರ ಪ್ರೀತಿಯನ್ನು ತೋರಿಸಬಹುದಾದ ಪ್ರಾಯೋಗಿಕ ವಿಧವನ್ನು ಪೌಲನು ತಿಳಿಸಿದನು. ದೇವಭಕ್ತಿಯಲ್ಲಿ, ಯೇಸು ನಮ್ಮನ್ನು ಪ್ರೀತಿಸಿದಂತೆಯೇ ‘ಒಬ್ಬರನ್ನೊಬ್ಬರು ಪ್ರೀತಿಸಿರಿ’ ಎಂಬ ಆತನ ಹೊಸ ಆಜ್ಞೆಗೆ ವಿಧೇಯರಾಗಿರುವುದು ಸೇರಿರಬೇಕು. (ಯೋಹಾ. 13:34) ಅಪೊಸ್ತಲ ಯೋಹಾನನು ನೇರವಾಗಿ ಹೇಳಿದ್ದು: “ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿ ಬಿದ್ದಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದುಂಟೇ?” (1 ಯೋಹಾ. 3:17) ಇಂಥ ಪ್ರೀತಿಯನ್ನು ನೀವು ಪ್ರಾಯೋಗಿಕವಾಗಿ ತೋರಿಸಿದ ಸಂದರ್ಭಗಳನ್ನು ನೆನಪಿಸಬಲ್ಲಿರೋ?

13 ಪ್ರೀತಿಯನ್ನು ತೋರಿಸುವ ಇನ್ನೊಂದು ವಿಧವು, ಕ್ಷಮಾಶೀಲರಾಗಿದ್ದು ನಮ್ಮ ಸಹೋದರರ ಬಗ್ಗೆ ಮನಸ್ಸಿನಲ್ಲಿ ಅಸಮಾಧಾನವನ್ನು ಇಟ್ಟುಕೊಳ್ಳದಿರುವುದಾಗಿದೆ. (1 ಯೋಹಾನ 4:20 ಓದಿ.) ನಾವು ಈ ಪ್ರೇರಿತ ಸಲಹೆಯನ್ನು ಪಾಲಿಸಬೇಕು: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.” (ಕೊಲೊ. 3:13) ಈ ಮಾತನ್ನು ಸಭೆಯಲ್ಲಿ ಸ್ವತಃ ನೀವು ಅನ್ವಯಿಸಿಕೊಳ್ಳುವ ಅಗತ್ಯವಿದೆಯೋ? ನೀವು ನಿಮ್ಮ ಸಹೋದರನನ್ನು ಕ್ಷಮಿಸುವಿರೋ?

ತಾಳ್ಮೆ ಇಲ್ಲವೇ ‘ಸ್ಥಿರಚಿತ್ತವನ್ನು ಸಂಪಾದಿಸಲು ಪ್ರಯಾಸಪಡು’

14 ಕೂಡಲೇ ತಲಪಬಹುದಾದ ಗುರಿಯನ್ನು ಬೆನ್ನಟ್ಟಲು ಪ್ರಯಾಸಪಡುವುದು ಸುಲಭ. ಆದರೆ ಗುರಿ ತಲಪಲು ನಾವೆಣಿಸಿದ್ದಕ್ಕಿಂತ ಹೆಚ್ಚು ಅವಧಿ ತಗಲುವಲ್ಲಿ ಇಲ್ಲವೇ ತೊಡಕುಗಳಿರುವಲ್ಲಿ ಅದನ್ನು ಬೆನ್ನಟ್ಟುವುದು ಕಷ್ಟಕರ. ನಿತ್ಯಜೀವದ ಗುರಿಯನ್ನು ಬೆನ್ನಟ್ಟಲು ಸ್ಥಿರಚಿತ್ತ ಇಲ್ಲವೇ ತಾಳ್ಮೆ ಅಗತ್ಯ. ಫಿಲದೆಲ್ಫಿಯದಲ್ಲಿದ್ದ ಸಭೆಗೆ ಕರ್ತನಾದ ಯೇಸು ಹೇಳಿದ್ದು: “ನೀನು ನನ್ನ ಸಹನವಾಕ್ಯವನ್ನು [“ತಾಳ್ಮೆಯನ್ನು,” NW] ಕಾಪಾಡಿದ್ದರಿಂದ ... ಬರುವದಕ್ಕಿರುವ ಶೋಧನೆಯ ಸಮಯದಲ್ಲಿ ನಿನ್ನನ್ನು ತಪ್ಪಿಸಿ ಕಾಪಾಡುವೆನು.” (ಪ್ರಕ. 3:10) ಹೌದು, ತಾಳ್ಮೆಯಿಂದಿರುವ ಅಗತ್ಯದ ಕುರಿತಾಗಿ ಯೇಸು ಕಲಿಸಿದನು. ಈ ಗುಣವು, ನಾವು ಕಷ್ಟಪರೀಕ್ಷೆಗಳನ್ನೂ ಶೋಧನೆಗಳನ್ನೂ ಎದುರಿಸುವಾಗ ಬಿಟ್ಟುಕೊಡದಿರಲು ಸಹಾಯ ಮಾಡುತ್ತದೆ. ಪ್ರಥಮ ಶತಮಾನದ ಫಿಲದೆಲ್ಫಿಯದಲ್ಲಿದ್ದ ಸಭೆಯ ಸಹೋದರರು, ನಂಬಿಕೆಯ ಅನೇಕಾನೇಕ ಪರೀಕ್ಷೆಗಳ ಮಧ್ಯೆಯೂ ಅಸಾಧಾರಣವಾದ ತಾಳ್ಮೆಯನ್ನು ತೋರಿಸಿದ್ದಿರಬೇಕು. ಆದುದರಿಂದಲೇ ಯೇಸು ಅವರಿಗೆ, ಮುಂದೆ ಬರಲಿದ್ದ ಒಂದು ಮಹಾ ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಸಹಾಯವನ್ನು ಕೊಡುವನೆಂಬ ಆಶ್ವಾಸನೆಯನ್ನಿತ್ತನು.​—⁠ಲೂಕ 16:10.

15 ಅವಿಶ್ವಾಸಿ ಸಂಬಂಧಿಕರು ಮತ್ತು ಲೋಕದ ಜನರು ತನ್ನ ಹಿಂಬಾಲಕರನ್ನು ದ್ವೇಷಿಸುವರೆಂದು ಯೇಸುವಿಗೆ ತಿಳಿದಿತ್ತು. ಆದುದರಿಂದಲೇ ಕಡಿಮೆಪಕ್ಷ ಎರಡು ಸಂದರ್ಭಗಳಲ್ಲಿ ಆತನು ಅವರನ್ನು ಹೀಗೆ ಉತ್ತೇಜಿಸಿದನು: “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾ. 10:22; 24:13) ಈ ರೀತಿ ತಾಳಿಕೊಳ್ಳಬೇಕಾದರೆ ಬಲ ಹೇಗೆ ಸಿಗುವುದೆಂಬುದನ್ನೂ ಯೇಸು ತನ್ನ ಶಿಷ್ಯರಿಗೆ ತಿಳಿಸಿದನು. ಆತನು ಒಂದು ದೃಷ್ಟಾಂತದಲ್ಲಿ, ದೇವರ ‘ವಾಕ್ಯವನ್ನು ಕೇಳಿದಾಗಲೇ ಅದನ್ನು ಸಂತೋಷದಿಂದ ಅಂಗೀಕರಿಸುವ’ ಜನರನ್ನು ಬಂಡೆಯ ನೆಲಕ್ಕೆ ಹೋಲಿಸಿದನು. ಇಂಥವರು ಆರಂಭದಲ್ಲಿ ಒಳ್ಳೇ ಪ್ರತಿಕ್ರಿಯೆ ತೋರಿಸಿದರೂ ನಂಬಿಕೆಯ ಪರೀಕ್ಷೆಗಳು ಬಂದಾಗ ಬಿದ್ದುಹೋಗುತ್ತಾರೆಂದು ಹೇಳಿದನು. ಆದರೆ ತನ್ನ ನಂಬಿಗಸ್ತ ಹಿಂಬಾಲಕರನ್ನು ಒಳ್ಳೆಯ ನೆಲಕ್ಕೆ ಹೋಲಿಸಿದನು. ಇವರು ದೇವರ ವಾಕ್ಯವನ್ನು “ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ.”​—⁠ಲೂಕ 8:13, 15.

16 ತಾಳ್ಮೆಯ ಗುಟ್ಟು ನಿಮಗೆ ತಿಳಿಯಿತೋ? ನಾವು ದೇವರ ವಾಕ್ಯವನ್ನು ‘ಇಟ್ಟುಕೊಳ್ಳಬೇಕು’ ಅಂದರೆ ಅದನ್ನು ನಮ್ಮ ಹೃದಮನಗಳಲ್ಲಿ ಸಜೀವವಾಗಿರಿಸಬೇಕು. ಇದನ್ನು ಮಾಡಲು ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ ನೆರವು ನೀಡುತ್ತದೆ. ಈ ಬೈಬಲ್‌ ಭಾಷಾಂತರ ಹೆಚ್ಚೆಚ್ಚು ಭಾಷೆಗಳಲ್ಲಿ ಲಭ್ಯವಾಗುತ್ತಿದ್ದು, ನಿಖರವೂ, ಓದಲು ಸುಲಭವೂ ಆಗಿದೆ. ಪ್ರತಿದಿನ ದೇವರ ವಾಕ್ಯವನ್ನು ಓದಿ ಧ್ಯಾನಿಸುವುದರಿಂದ, ‘ತಾಳ್ಮೆಯಿಂದ ಫಲಕೊಡಲು’ ನಮಗೆ ಬೇಕಾದ ಬಲ ಸಿಗುವುದು.​—⁠ಕೀರ್ತ. 1:1, 2.

‘ಸಾತ್ವಿಕತ್ವ’ ಮತ್ತು ಸಮಾಧಾನವನ್ನು ‘ಸಂಪಾದಿಸಲು ಪ್ರಯಾಸಪಡು’

17 ನಾವು ಮಾಡಿರದ ಅಥವಾ ಹೇಳಿರದ ವಿಷಯದ ಕುರಿತು ಯಾರಾದರೂ ಅಪವಾದ ಹೊರಿಸಿದರೆ ನಮಗೆ ಖಂಡಿತ ಖುಷಿಯೆನಿಸುವುದಿಲ್ಲ. ಅನ್ಯಾಯವಾಗಿ ಯಾರಾದರೂ ಆರೋಪ ಹೊರಿಸಿದರೆ, “ನಾನದನ್ನು ಮಾಡಲಿಲ್ಲ” ಎಂದು ಸಿಟ್ಟಿನಿಂದ ಪ್ರತಿಕ್ರಿಯಿಸುವುದು ಸಾಮಾನ್ಯ. ಆದರೆ ಹೀಗೆ ಮಾಡುವ ಬದಲು “ಸಾತ್ವಿಕತ್ವ”ದಿಂದ ಮೃದುವಾಗಿ ಮಾತಾಡುವುದು ಎಷ್ಟೋ ಲೇಸು. (ಜ್ಞಾನೋಕ್ತಿ 15:1 ಓದಿ.) ಅನ್ಯಾಯವಾದಾಗ ಸಾತ್ವಿಕತ್ವ ತೋರಿಸಲು ಮನೋಬಲ ತುಂಬ ಅಗತ್ಯ. ಈ ವಿಷಯದಲ್ಲಿ ಯೇಸು ಕ್ರಿಸ್ತನು ಪರಿಪೂರ್ಣ ಮಾದರಿಯನ್ನಿಟ್ಟನು. “ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.” (1 ಪೇತ್ರ 2:23) ನಾವು ಯೇಸುವಿನಷ್ಟು ಪರಿಪೂರ್ಣವಾಗಿ ಸಾತ್ವಿಕತ್ವವನ್ನು ತೋರಿಸಲಾರೆವು ನಿಜ, ಆದರೆ ಅದನ್ನು ಇನ್ನಷ್ಟು ಹೆಚ್ಚಾಗಿ ತೋರಿಸಲಿಕ್ಕಾದರೂ ಪ್ರಯಾಸಪಡಬಹುದಲ್ಲವೋ?

18 ಯೇಸುವನ್ನು ಅನುಕರಿಸುತ್ತಾ ನಮ್ಮ ನಂಬಿಕೆಗಳಿಗೆ ‘ಆಧಾರವೇನೆಂದು ಕೇಳುವವರೆಲ್ಲರಿಗೆ ಸಾತ್ವಿಕತ್ವದಿಂದಲೂ ಗೌರವದಿಂದಲೂ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರೋಣ.’ (1 ಪೇತ್ರ 3:15, NIBV) ಹೌದು, ನಾವು ಸಾತ್ವಿಕರಾಗಿರುವುದು, ಕ್ಷೇತ್ರ ಸೇವೆಯಲ್ಲಿ ಮಾತ್ರವಲ್ಲ ಜೊತೆ ವಿಶ್ವಾಸಿಗಳೊಂದಿಗಿನ ಭಿನ್ನಾಭಿಪ್ರಾಯಗಳು ಕೂಡ ಬಿರುಸಾದ ವಾಗ್ವಾದಗಳಾಗದಂತೆ ತಡೆಯುವುದು. (2 ತಿಮೊ. 2:24, 25) ಸಾತ್ವಿಕತ್ವ ನಮಗೆ ಸಮಾಧಾನದಿಂದಿರಲು ನೆರವು ನೀಡುತ್ತದೆ. ಬಹುಶಃ ಈ ಕಾರಣದಿಂದಲೇ ಪೌಲನು ತಿಮೊಥೆಯನಿಗೆ ಬರೆದ ಎರಡನೇ ಪತ್ರದಲ್ಲಿ, ಸಂಪಾದಿಸಲು ಪ್ರಯಾಸಪಡಬೇಕಾದ ಗುಣಗಳ ಪಟ್ಟಿಯಲ್ಲಿ “ಸಮಾಧಾನ”ವನ್ನೂ ಸೇರಿಸುತ್ತಾನೆ. (2 ತಿಮೊ. 2:22; 1 ತಿಮೊಥೆಯ 6:11 ಹೋಲಿಸಿ.) ಹೌದು, ನಾವು ಸಂಪಾದಿಸಲು ಪ್ರಯಾಸಪಡಬೇಕೆಂದು ಬೈಬಲ್‌ ಪ್ರೋತ್ಸಾಹಿಸುವ ಇನ್ನೊಂದು ಗುಣ “ಸಮಾಧಾನ” ಆಗಿದೆ.​—⁠ಕೀರ್ತ. 34:14; ಇಬ್ರಿ. 12:14.

19 ನಾವು ಸಂಪಾದಿಸಲು ಪ್ರಯಾಸಪಡುವಂತೆ ಪ್ರೋತ್ಸಾಹಿಸಲಾಗಿರುವ ಏಳು ಗುಣಗಳ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿದ್ದೇವೆ. ಅವು ನೀತಿ, ಭಕ್ತಿ, ನಂಬಿಕೆ, ಪ್ರೀತಿ, ಸ್ಥಿರಚಿತ್ತ [ತಾಳ್ಮೆ], ಸಾತ್ವಿಕತ್ವ ಮತ್ತು ಸಮಾಧಾನ ಆಗಿವೆ. ಎಲ್ಲ ಸಭೆಗಳಲ್ಲಿ ಸಹೋದರ ಸಹೋದರಿಯರು ಈ ಅಮೂಲ್ಯ ಗುಣಗಳನ್ನು ತೋರಿಸಲು ಹೆಚ್ಚೆಚ್ಚು ಪ್ರಯಾಸಪಡುವಾಗ ಅದೆಷ್ಟು ಚೆನ್ನ! ಇದರಿಂದ ಯೆಹೋವನಿಗೆ ಮಹಿಮೆಯಾಗುವುದು ಮತ್ತು ಆತನು ನಮ್ಮಲ್ಲಿ ಪ್ರತಿಯೊಬ್ಬರನ್ನೂ ರೂಪಿಸಲು ಸಾಧ್ಯವಾಗುವುದು. ಇದು ಸಹ ಆತನಿಗೆ ಸ್ತುತಿ ತರುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 12 ಒಂದನೇ ತಿಮೊಥೆಯ 3:16 (NW): “ಈ ದೇವಭಕ್ತಿಯ ಪವಿತ್ರ ರಹಸ್ಯವು ಮಹತ್ತರವಾದದ್ದು ಎಂಬುದು ಒಪ್ಪಿಕೊಳ್ಳತಕ್ಕದ್ದೇ. ಅದೇನೆಂದರೆ, ‘ಅವನು ಶರೀರದಲ್ಲಿ ಪ್ರತ್ಯಕ್ಷನಾದನು, ಆತ್ಮದಲ್ಲಿ ನೀತಿವಂತನೆಂದು ನಿರ್ಣಯಿಸಲ್ಪಟ್ಟನು, ದೇವದೂತರಿಗೆ ಕಾಣಿಸಿಕೊಂಡನು, ಅನ್ಯಜನಾಂಗಗಳ ಮಧ್ಯೆ ಸಾರಲ್ಪಟ್ಟನು, ಲೋಕದಲ್ಲಿ ನಂಬಲ್ಪಟ್ಟನು, ಮಹಿಮೆಯೊಂದಿಗೆ ಮೇಲೆ ಅಂಗೀಕರಿಸಲ್ಪಟ್ಟನು.’”

^ ಪ್ಯಾರ. 15 ಈ ಪುಸ್ತಕ ಕನ್ನಡದಲ್ಲಿ ಲಭ್ಯವಿಲ್ಲ.

ಧ್ಯಾನಕ್ಕಾಗಿ ಅಂಶಗಳು

• ನೀತಿ ಹಾಗೂ ಭಕ್ತಿಯನ್ನು ಸಂಪಾದಿಸಲು ಪ್ರಯಾಸಪಡುವುದರಲ್ಲಿ ಏನೆಲ್ಲ ಒಳಗೂಡಿದೆ?

• ನಂಬಿಕೆ ಮತ್ತು ತಾಳ್ಮೆಯನ್ನು ಸಂಪಾದಿಸಲು ಪ್ರಯಾಸಪಡುವಂತೆ ನಮಗೆ ಯಾವುದು ಸಹಾಯ ಮಾಡುವುದು?

• ಪರಸ್ಪರರೊಂದಿಗಿನ ವ್ಯವಹಾರದಲ್ಲಿ ಪ್ರೀತಿ ಯಾವ ಪರಿಣಾಮಬೀರಬೇಕು?

• ನಾವು ಸಾತ್ವಿಕತ್ವ ಹಾಗೂ ಸಮಾಧಾನವನ್ನು ಸಂಪಾದಿಸಲು ಪ್ರಯಾಸಪಡಬೇಕು ಏಕೆ?

[ಅಧ್ಯಯನ ಪ್ರಶ್ನೆಗಳು]

1. ಜನರು ತಮ್ಮ ಜೀವನವನ್ನು ಯಾವುದಕ್ಕಾಗಿ ಮುಡಿಪಾಗಿರಿಸುತ್ತಾರೆ?

2. (ಎ) ಯಾವ ಬಹುಮಾನಕ್ಕಾಗಿ ಪ್ರಯಾಸಪಡುವಂತೆ ದೇವರು ಕೆಲವು ಕ್ರೈಸ್ತರನ್ನು ಆಮಂತ್ರಿಸಿದ್ದಾನೆ? (ಬಿ) ಇಂದಿನ ಅಧಿಕಾಂಶ ಸತ್ಯ ಕ್ರೈಸ್ತರ ಮುಂದೆ ಆತನು ಯಾವ ನಿರೀಕ್ಷೆಯನ್ನಿಟ್ಟಿದ್ದಾನೆ?

3. ದೇವರ ಅಪಾತ್ರ ಕೃಪೆಗಾಗಿ ನಾವು ಹೇಗೆ ಕೃತಜ್ಞತೆ ತೋರಿಸಬಹುದು?

4. ನೀತಿಯನ್ನು ಸಂಪಾದಿಸಲು ಪ್ರಯತ್ನಿಸುವುದು ಮಹತ್ತ್ವದ್ದೆಂದು ನಮಗೆ ಹೇಗೆ ತಿಳಿದುಬರುತ್ತದೆ, ಮತ್ತು ಇದನ್ನು ಮಾಡಲು ಒಬ್ಬ ವ್ಯಕ್ತಿ ತೆಗೆದುಕೊಳ್ಳಬೇಕಾದ ಆರಂಭದ ಹೆಜ್ಜೆಗಳಾವವು?

5. ದೇವರ ಮುಂದೆ ನೀತಿಯ ನಿಲುವನ್ನು ಪಡೆಯಲು ಮತ್ತು ಕಾಪಾಡಿಕೊಳ್ಳಲು ನಾವೇನು ಮಾಡಬೇಕು?

6. ನೀತಿಯನ್ನು ಸಂಪಾದಿಸಲು ಪ್ರಯಾಸಪಡುವುದರಲ್ಲಿ ಏನು ಒಳಗೂಡಿದೆ?

7. ‘ಭಕ್ತಿ’ ಎಂದರೇನು?

8. (ಎ) ಆದಾಮನ ಪಾಪದಿಂದಾಗಿ ಯಾವ ಪ್ರಶ್ನೆ ಎದ್ದಿತು? (ಬಿ) ಈ “ಪವಿತ್ರ ರಹಸ್ಯ” ಹೇಗೆ ಬಯಲಾಯಿತು?

9. ನಾವು ದೇವಭಕ್ತಿಯನ್ನು ಹೇಗೆ ಸಂಪಾದಿಸಲು ಪ್ರಯಾಸಪಡಬಹುದು?

10. ನಮ್ಮ ನಂಬಿಕೆಯನ್ನು ಬಲವಾಗಿರಿಸಲು ನಾವೇನು ಮಾಡಬೇಕು?

11. ನಂಬಿಕೆಯನ್ನು ಸಂಪಾದಿಸಲು ಪ್ರಯಾಸಪಡುವುದರಲ್ಲಿ ಪ್ರಾರ್ಥನೆ ಮತ್ತು ವಿಧೇಯತೆಯ ಪಾತ್ರವೇನು?

12, 13. (ಎ) ಯೇಸುವಿನ ಹೊಸ ಆಜ್ಞೆ ಏನಾಗಿದೆ? (ಬಿ) ನಾವು ಯಾವ ಪ್ರಮುಖ ವಿಧಗಳಲ್ಲಿ ಕ್ರಿಸ್ತನಂಥ ಪ್ರೀತಿಯನ್ನು ಸಂಪಾದಿಸಲು ಪ್ರಯಾಸಪಡಬೇಕು?

14. ಫಿಲದೆಲ್ಫಿಯದಲ್ಲಿದ್ದ ಸಭೆಯವರಿಂದ ನಾವೇನು ಕಲಿಯಬಹುದು?

15. ತಾಳ್ಮೆಯ ಕುರಿತು ಯೇಸು ಏನು ಕಲಿಸಿದನು?

16. ಯಾವ ಪ್ರೀತಿಪೂರ್ವಕ ಒದಗಿಸುವಿಕೆ ಲಕ್ಷಗಟ್ಟಲೆ ಜನರಿಗೆ ತಾಳಿಕೊಳ್ಳಲು ನೆರವುನೀಡಿದೆ?

17. (ಎ) “ಸಾತ್ವಿಕತ್ವ” ತುಂಬ ಪ್ರಾಮುಖ್ಯವೇಕೆ? (ಬಿ) ಯೇಸು ಸಾತ್ವಿಕತ್ವವನ್ನು ಹೇಗೆ ತೋರಿಸಿದನು?

18. (ಎ) ಸಾತ್ವಿಕತ್ವ ಯಾವ ಒಳಿತನ್ನು ಸಾಧಿಸುತ್ತದೆ? (ಬಿ) ಇನ್ಯಾವ ಗುಣವನ್ನು ಸಂಪಾದಿಸಲು ಪ್ರಯಾಸಪಡುವಂತೆ ನಮ್ಮನ್ನು ಪ್ರೋತ್ಸಾಹಿಸಲಾಗಿದೆ?

19. ಏಳು ಕ್ರೈಸ್ತ ಗುಣಗಳ ಕುರಿತು ಚರ್ಚಿಸಿದ ಬಳಿಕ ಏನನ್ನು ಸಂಪಾದಿಸಲು ಪ್ರಯಾಸಪಡುವಂತೆ ದೃಢನಿರ್ಧಾರಮಾಡಿದ್ದೀರಿ, ಮತ್ತು ಏಕೆ?

[ಪುಟ 12ರಲ್ಲಿರುವ ಚಿತ್ರ]

ಜನರನ್ನು ಮೆಚ್ಚಿಸಲಿಕ್ಕಾಗಿ ನೀತಿಯ ಪ್ರದರ್ಶನ ಮಾಡದಂತೆ ಯೇಸು ಎಚ್ಚರಿಸಿದನು

[ಪುಟ 13ರಲ್ಲಿರುವ ಚಿತ್ರ]

ದೇವರ ವಾಕ್ಯದಲ್ಲಿರುವ ಸತ್ಯದ ಕುರಿತು ಧ್ಯಾನಿಸುವ ಮೂಲಕ ನಂಬಿಕೆಯನ್ನು ಸಂಪಾದಿಸಲು ಪ್ರಯಾಸಪಡಬಲ್ಲೆವು

[ಪುಟ 15ರಲ್ಲಿರುವ ಚಿತ್ರ]

ಪ್ರೀತಿ ಮತ್ತು ಸಾತ್ವಿಕತ್ವವನ್ನು ಸಂಪಾದಿಸಲು ನಾವು ಪ್ರಯಾಸಪಡಬಲ್ಲೆವು