ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ನಂಬಿಕೆಯನ್ನು ಸಮರ್ಥಿಸಲು ತಯಾರಿದ್ದೀರೋ?

ನಿಮ್ಮ ನಂಬಿಕೆಯನ್ನು ಸಮರ್ಥಿಸಲು ತಯಾರಿದ್ದೀರೋ?

ನಿಮ್ಮ ನಂಬಿಕೆಯನ್ನು ಸಮರ್ಥಿಸಲು ತಯಾರಿದ್ದೀರೋ?

ನಿಮ್ಮ ನಂಬಿಕೆಯನ್ನು ಸಮರ್ಥಿಸಲೇಬೇಕೆಂದು ಅನಿಸಿದ ಸನ್ನಿವೇಶ ನಿಮಗೆಂದಾದರೂ ಎದುರಾಗಿದೆಯೋ? ಪ್ಯಾರಗ್ವೈ ದೇಶದ ಸೂಸನ್ನಾ ಎಂಬ 16 ವರ್ಷದ ಯುವತಿ ಎದುರಿಸಿದ ಸನ್ನಿವೇಶವನ್ನು ಪರಿಗಣಿಸಿ. ಅವಳಿದ್ದ ಪ್ರೌಢಶಾಲೆಯಲ್ಲಿ ನೀತಿಶಾಸ್ತ್ರದ ಪಾಠ ನಡೆಯುತ್ತಿದ್ದಾಗ, ಯೆಹೋವನ ಸಾಕ್ಷಿಗಳಿಗೆ “ಹಳೇ ಒಡಂಬಡಿಕೆ,” ಯೇಸು ಕ್ರಿಸ್ತ ಮತ್ತು ಮರಿಯಳಲ್ಲಿ ನಂಬಿಕೆಯಿಲ್ಲವೆಂಬ ಮಾತು ಬಂತು. ಅಲ್ಲದೇ, ಸಾಕ್ಷಿಗಳು ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನು ಸ್ವೀಕರಿಸದೆ ಸಾಯಲು ಸಿದ್ಧರಿರುವ ಧರ್ಮಾಂಧರೆಂದು ಹೇಳಲಾಯಿತು. ನೀವು ಅಲ್ಲಿರುತ್ತಿದ್ದಲ್ಲಿ ನಿಮ್ಮ ಪ್ರತಿಕ್ರಿಯೆ ಏನಾಗಿರುತ್ತಿತ್ತು?

ಸೂಸನ್ನಾ ಕೂಡಲೇ ಯೆಹೋವನಿಗೆ ಪ್ರಾರ್ಥಿಸಿ, ತನ್ನ ಕೈಯೆತ್ತಿದಳು. ತರಗತಿಯು ಇನ್ನೇನು ಮುಗಿಯಲಿದ್ದರಿಂದ ಯೆಹೋವನ ಸಾಕ್ಷಿಯಾಗಿರುವ ತನಗೆ ತನ್ನ ನಂಬಿಕೆಗಳನ್ನು ವಿವರಿಸಲು ಮುಂದೆಂದಾದರೂ ಅವಕಾಶ ನೀಡುವಂತೆ ಶಿಕ್ಷಕಿಗೆ ವಿನಂತಿಸಿದಳು. ಇದಕ್ಕೆ ಶಿಕ್ಷಕಿ ಒಪ್ಪಿದಳು. ನಂತರದ ಎರಡು ವಾರಗಳಲ್ಲಿ ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ? ಎಂಬ ಬ್ರೋಷರಿನ ಸಹಾಯದಿಂದ ಸೂಸನ್ನಾ ಒಂದು ಭಾಷಣ ತಯಾರಿಸಿದಳು.

ಭಾಷಣ ಪ್ರಸ್ತುತಪಡಿಸುವ ದಿನ ಬಂದೇ ಬಿಟ್ಟಿತು. ತರಗತಿಯಲ್ಲಿ ಸೂಸನ್ನಾ, ಯೆಹೋವನ ಸಾಕ್ಷಿಗಳೆಂಬ ಹೆಸರು ಹೇಗೆ ಬಂತೆಂಬುದನ್ನು ವಿವರಿಸಿದಳು. ಭವಿಷ್ಯತ್ತಿನ ಕುರಿತು ನಮ್ಮ ನಿರೀಕ್ಷೆ ಏನು ಮತ್ತು ರಕ್ತ ಪೂರಣಗಳನ್ನು ನಾವೇಕೆ ಸ್ವೀಕರಿಸುವುದಿಲ್ಲ ಎಂಬುದನ್ನೂ ಆಕೆ ವಿವರಿಸಿ ಹೇಳಿದಳು. ಅನಂತರ ಯಾರಿಗಾದರೂ ಪ್ರಶ್ನೆಗಳಿದ್ದರೆ ಕೇಳುವಂತೆ ಹೇಳಿದಳು. ಅನೇಕ ವಿದ್ಯಾರ್ಥಿಗಳು ಕೈಯೆತ್ತಿದರು. ಈ ಯುವತಿ ಬೈಬಲ್‌ನಿಂದ ಪ್ರಶ್ನೆಗಳಿಗೆ ಉತ್ತರಿಸುವುದನ್ನು ನೋಡಿ ಶಿಕ್ಷಕಿ ಮೂಕವಿಸ್ಮಿತಳಾದಳು.

“ನಾನೊಮ್ಮೆ ರಾಜ್ಯ ಸಭಾಗೃಹಕ್ಕೆ ಹೋಗಿದ್ದೆ, ಅಲ್ಲಿ ಒಂದೂ ವಿಗ್ರಹ ಕಣ್ಣಿಗೆ ಬೀಳಲಿಲ್ಲ” ಎಂದು ಒಬ್ಬ ವಿದ್ಯಾರ್ಥಿ ಹೇಳಿದಾಗ ಏಕೆಂದು ಆ ಶಿಕ್ಷಕಿ ತಿಳಿಯಲು ಬಯಸಿದಳು. ಸೂಸನ್ನಾ ಕೀರ್ತನೆ 115:4-8 ಮತ್ತು ವಿಮೋಚನಕಾಂಡ 20:4ನ್ನು ಓದಿ ಹೇಳಿದಳು. ಚಕಿತಗೊಂಡ ಶಿಕ್ಷಕಿ ಹೇಳಿದ್ದು: “ಬೈಬಲು ವಿಗ್ರಹಗಳನ್ನು ನಿಷೇಧಿಸುವಾಗ ನಮ್ಮ ಚರ್ಚುಗಳಲ್ಲಂತೂ ವಿಗ್ರಹಗಳೇ ತುಂಬಿಕೊಂಡಿವೆಯಲ್ಲಾ!”

ಈ ಪ್ರಶ್ನೋತ್ತರ ಚರ್ಚೆ 40 ನಿಮಿಷಗಳ ತನಕ ಮುಂದುವರಿಯಿತು. ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ * ಎಂಬ ವಿಡಿಯೋ ನೋಡಲು ಇಷ್ಟವಿದೆಯೋ ಎಂದು ಸೂಸನ್ನಾ ವಿದ್ಯಾರ್ಥಿಗಳಿಗೆ ಕೇಳಿದಾಗ ಎಲ್ಲರೂ ಹೌದೆಂದು ಉತ್ತರಿಸಿದರು. ಮರುದಿನವೇ ಅದನ್ನು ನೋಡಲಿಕ್ಕಾಗಿ ಶಿಕ್ಷಕಿ ಏರ್ಪಾಡು ಮಾಡಿದಳು. ವಿಡಿಯೋವನ್ನು ತೋರಿಸಿದ ಬಳಿಕ, ಯೆಹೋವನ ಸಾಕ್ಷಿಗಳು ಸ್ವೀಕರಿಸುವ ಬದಲಿ ಚಿಕಿತ್ಸೆಗಳ ಬಗ್ಗೆ ಸೂಸನ್ನಾ ವಿವರಿಸಿದಳು. ಈ ಕುರಿತು ಶಿಕ್ಷಕಿ ಹೇಳಿದ್ದು: “ಇಷ್ಟೊಂದು ಬದಲಿ ಚಿಕಿತ್ಸೆಗಳಿವೆಯೋ? ನನಗೆ ಗೊತ್ತೇ ಇರಲಿಲ್ಲ. ರಕ್ತರಹಿತ ಚಿಕಿತ್ಸೆಯ ಪ್ರಯೋಜನಗಳ ಕುರಿತೂ ತಿಳಿದಿರಲಿಲ್ಲ. ಯೆಹೋವನ ಸಾಕ್ಷಿಗಳಿಗೆ ಮಾತ್ರ ಇಂಥ ಚಿಕಿತ್ಸೆಗಳನ್ನು ಮಾಡಲಾಗುತ್ತದೋ?” ಅವು ಎಲ್ಲರಿಗೆ ಲಭ್ಯವಿವೆ ಎಂದು ತಿಳಿದುಬಂದಾಗ ಆಕೆಯಂದದ್ದು: “ಮುಂದಿನ ಬಾರಿ ಯೆಹೋವನ ಸಾಕ್ಷಿಗಳು ಮನೆಗೆ ಬಂದಾಗ ಅವರೊಂದಿಗೆ ಖಂಡಿತ ಮಾತಾಡುವೆ.”

ಸೂಸನ್ನಾ 20 ನಿಮಿಷಗಳಿಗೆಂದು ತಯಾರಿ ಮಾಡಿದ ಚರ್ಚೆ ಒಟ್ಟಿನಲ್ಲಿ ಮೂರು ತಾಸು ನಡೆಯಿತು. ಒಂದು ವಾರದ ಬಳಿಕ, ಚರ್ಚ್‌ ಸದಸ್ಯರಾದ ಇತರ ವಿದ್ಯಾರ್ಥಿಗಳು ತಮ್ಮ ನಂಬಿಕೆಗಳ ಬಗ್ಗೆ ಭಾಷಣ ಕೊಟ್ಟರು. ಭಾಷಣದ ಅಂತ್ಯದಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಲಾಯಿತಾದರೂ ಆ ವಿದ್ಯಾರ್ಥಿಗಳಿಗೆ ತಮ್ಮ ನಂಬಿಕೆಯನ್ನು ಸಮರ್ಥಿಸಲು ಆಗಲಿಲ್ಲ. ಶಿಕ್ಷಕಿ ಅವರನ್ನು ಕೇಳಿದ್ದು: “ಯೆಹೋವನ ಸಾಕ್ಷಿಯಾಗಿರುವ ನಿಮ್ಮ ಸಹಪಾಠಿಯಂತೆ ನಿಮಗೇಕೆ ನಿಮ್ಮ ನಿಮ್ಮ ನಂಬಿಕೆಗಳನ್ನು ಸಮರ್ಥಿಸಲಾಗಲಿಲ್ಲ?”

ಆ ವಿದ್ಯಾರ್ಥಿಗಳು ಉತ್ತರಿಸಿದ್ದು: “ಅವರು ನಿಜವಾಗಿ ಬೈಬಲನ್ನು ಅಧ್ಯಯನ ಮಾಡುತ್ತಾರೆ. ಆದರೆ ನಾವು ಮಾಡುವುದಿಲ್ಲ.”

ಸೂಸನ್ನಾಳ ಕಡೆಗೆ ತಿರುಗಿ ಶಿಕ್ಷಕಿ ಹೇಳಿದ್ದು: “ನೀನು ನಿಜವಾಗಿಯೂ ಬೈಬಲನ್ನು ಅಧ್ಯಯನ ಮಾಡುತ್ತೀ ಮತ್ತು ಅದು ಹೇಳುವಂತೆ ಮಾಡಲು ಪ್ರಯತ್ನಿಸುತ್ತೀ. ಇದಕ್ಕಾಗಿ ನಿನ್ನನ್ನು ಪ್ರಶಂಸಿಸಲೇಬೇಕು.”

ತರಗತಿಯಲ್ಲಿ ಯೆಹೋವನ ಸಾಕ್ಷಿಗಳ ಬಗ್ಗೆ ತಪ್ಪಭಿಪ್ರಾಯ ವ್ಯಕ್ತಪಡಿಸಲಾದಾಗ ಸೂಸನ್ನಾ ಸುಮ್ಮನಿರಬಹುದಿತ್ತು. ಆದಾಗ್ಯೂ ಅದನ್ನು ಸರಿಪಡಿಸಲು ಧೈರ್ಯದಿಂದ ಮಾತಾಡುವ ಮೂಲಕ ಅನಾಮಧೇಯಳಾದ ಪುಟ್ಟ ಇಸ್ರಾಯೇಲ್ಯ ಹುಡುಗಿಯ ಉತ್ತಮ ಮಾದರಿಯನ್ನು ಅವಳು ಅನುಸರಿಸಿದಳು. ಈ ಹುಡುಗಿಯನ್ನು ಸಿರಿಯದವರು ಸೆರೆಗೊಯ್ದಿದ್ದರು. ಅಸಹ್ಯಕರವಾದ ಚರ್ಮರೋಗವಿದ್ದ ಸಿರಿಯದ ಸೇನಾಪತಿ ನಾಮಾನನ ಮನೆಯಲ್ಲಿ ಆಕೆ ದಾಸಿಯಾಗಿದ್ದಳು. ಆಕೆ ಧೈರ್ಯದಿಂದ ತನ್ನ ಯಜಮಾನಿಗೆ ಹೇಳಿದ್ದು: “ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇರುತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅವನು ಇವನನ್ನು ಕುಷ್ಠರೋಗದಿಂದ ವಾಸಿ ಮಾಡುತ್ತಿದ್ದನು.” ಸತ್ಯದೇವರ ಕುರಿತು ಸಾಕ್ಷಿಕೊಡದೆ ಸುಮ್ಮನಿರಲು ಆಕೆಗೆ ಸಾಧ್ಯವಿರಲಿಲ್ಲ. ಇದು ಆಕೆಯ ದಣಿ ನಾಮಾನನು ಯೆಹೋವನ ಆರಾಧಕನಾಗುವಂತೆ ನಡೆಸಿತು.—2 ಅರ. 5:3, 17.

ಅಂತೆಯೇ ಸೂಸನ್ನಾಳಿಗೆ, ಯೆಹೋವನ ಮತ್ತು ಆತನ ಜನರ ಕುರಿತು ಸಾಕ್ಷಿಹೇಳದೆ ಸುಮ್ಮನಿರಲು ಸಾಧ್ಯವಾಗಲಿಲ್ಲ. ತನ್ನ ನಂಬಿಕೆಗಳು ಪ್ರಶ್ನಿಸಲ್ಪಟ್ಟಾಗ ಅವುಗಳನ್ನು ಸಮರ್ಥಿಸಲು ಧೈರ್ಯದಿಂದ ಮಾತಾಡುವ ಮೂಲಕ ಸೂಸನ್ನಾ ಈ ಶಾಸ್ತ್ರಾಧಾರಿತ ಸಲಹೆಗೆ ವಿಧೇಯಳಾದಳು: “ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ; ಆದರೆ ಅದನ್ನು ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ ಹೇಳಿರಿ.” (1 ಪೇತ್ರ 3:15) ನೀವು ನಿಮ್ಮ ನಂಬಿಕೆಯನ್ನು ಸಮರ್ಥಿಸಲು ಸಿದ್ಧರಿದ್ದು, ಸಂದರ್ಭ ಒದಗಿಬಂದಾಗ ಮುಂದೆಬಂದು ಧೈರ್ಯದಿಂದ ಮಾತಾಡುವಿರೋ?

[ಪಾದಟಿಪ್ಪಣಿ]

^ ಪ್ಯಾರ. 6 ಕನ್ನಡದಲ್ಲಿ ಲಭ್ಯವಿಲ್ಲ.

[ಪುಟ 17ರಲ್ಲಿರುವ ಚಿತ್ರ]

ನಿಮ್ಮ ನಂಬಿಕೆಯನ್ನು ಸಮರ್ಥಿಸಲು ಸಹಾಯಕಗಳು