ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಲಹೀನತೆಗಳಿದ್ದರೂ ಬಲಿಷ್ಠರು

ಬಲಹೀನತೆಗಳಿದ್ದರೂ ಬಲಿಷ್ಠರು

ಬಲಹೀನತೆಗಳಿದ್ದರೂ ಬಲಿಷ್ಠರು

ನಿಮ್ಮ ಬಲಹೀನತೆಗಳು ನಿಮ್ಮನ್ನು ಜಜ್ಜಿಹಾಕಬಲ್ಲವು. ಅವು ಜಿಗಣೆಗಳಂತೆ ಅಂಟಿಕೊಳ್ಳುತ್ತವೆ. ಅವುಗಳನ್ನು ಜಯಿಸಲು ಸಾಧ್ಯವೇ ಇಲ್ಲ ಎಂದು ನೀವು ನೆನಸಬಹುದು. ಇಲ್ಲವೇ ಇತರರು ನಿಮಗಿಂತ ಉತ್ತಮರು, ನೀವು ಅಯೋಗ್ಯರೆಂಬ ಭಾವನೆ ಹುಟ್ಟಬಹುದು. ಅಥವಾ ನಿಮ್ಮ ಶಕ್ತಿ ಮತ್ತು ಜೀವನದ ಸಂತೋಷವನ್ನು ಕಬಳಿಸುತ್ತಾ ದೇಹಾರೋಗ್ಯವನ್ನು ಕುಗ್ಗಿಸುವಂಥ ಅಸ್ವಸ್ಥತೆ ನಿಮಗಿರಬಹುದು. ಕಾರಣ ಏನೇ ಇರಲಿ ಇಂಥ ಯೋಚನೆಗಳು ನಿಮ್ಮನ್ನು ಕಂಗೆಡಿಸಬಲ್ಲವು. ನಿಮಗೂ ಯೋಬನಂತೆ ಅನಿಸಬಹುದು. ಅವನು ದೇವರಿಗಂದದ್ದು: “ನೀನು ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟು ನಿನ್ನ ಕೋಪವು ಇಳಿಯುವ ಪರ್ಯಂತ ನನ್ನನ್ನು ಮರೆಮಾಡಿ ನನಗೆ ಅವಧಿಯನ್ನು ಗೊತ್ತುಮಾಡಿ [ಕಡೆಯಲ್ಲಿ] ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು!”—ಯೋಬ 14:13.

ಇಂತಹ ಹತಾಶೆಯಿಂದ ನೀವು ಹೇಗೆ ಹೊರಬರಬಲ್ಲಿರಿ? ನಿಮ್ಮ ಸಮಸ್ಯೆಗಳನ್ನು ಬದಿಗೆ ತಳ್ಳುವುದು ಕಷ್ಟಕರವೇನೋ ನಿಜ. ಆದರೂ ಸ್ವಲ್ಪ ಸಮಯದ ಮಟ್ಟಿಗೆ ಅವನ್ನು ಬದಿಗಿರಿಸಿ, ಯೆಹೋವನು ತನ್ನ ನಂಬಿಗಸ್ತ ಸೇವಕನಾದ ಯೋಬನಿಗೆ ಕೇಳಿದ ಇಂಥ ಪ್ರೇರಿತ ಪ್ರಶ್ನೆಗಳನ್ನು ಪರಿಗಣಿಸಿರಿ: “ನಾನು ಲೋಕಕ್ಕೆ ಅಸ್ತಿವಾರಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು. ಅದರ ಅಳತೆಗಳನ್ನು ಯಾರು ಗೊತ್ತುಮಾಡಿದರು? ನೀನೇ ಬಲ್ಲೆ. ಅದರ ಮೇಲೆ ನೂಲುಹಿಡಿದವರು ಯಾರು?” (ಯೋಬ 38:4, 5) ಈ ಪ್ರಶ್ನೆಗಳ ಒಳಾರ್ಥದ ಕುರಿತು ಯೋಚಿಸುವಾಗ ಯೆಹೋವನಿಗೆ ಸರ್ವೋತ್ಕೃಷ್ಟ ವಿವೇಕ ಮತ್ತು ಶಕ್ತಿ ಇದೆಯೆಂದೂ, ಸಕಾರಣದಿಂದಲೇ ಆತನು ಲೋಕದ ಪ್ರಚಲಿತ ಪರಿಸ್ಥಿತಿಗಳು ಮುಂದುವರಿಯುವಂತೆ ಬಿಟ್ಟಿದ್ದಾನೆಂಬುದನ್ನೂ ನಾವು ಗ್ರಹಿಸುವೆವು.

‘ಶರೀರದಲ್ಲಿ ನಾಟಿರುವ ಶೂಲ’

ಇನ್ನೊಬ್ಬ ನಂಬಿಗಸ್ತ ಸೇವಕನಾದ ಅಪೊಸ್ತಲ ಪೌಲನ ‘ಶರೀರದಲ್ಲಿ ಒಂದು ಶೂಲ ನಾಟಿತ್ತು,’ ಅಂದರೆ ಬೆಂಬಿಡದೆ ಕಾಡುತ್ತಿದ್ದ ಒಂದು ಸಮಸ್ಯೆ ಅವನಿಗಿತ್ತು. ಈ ಸಮಸ್ಯೆಯನ್ನು ಹೋಗಲಾಡಿಸುವಂತೆ ಅವನು ಯೆಹೋವನಲ್ಲಿ ಮೂರು ಬಾರಿ ಬೇಡಿಕೊಂಡನು. ಆ ಸಮಸ್ಯೆ ಏನೇ ಆಗಿದ್ದಿರಲಿ ಅದು ಚುಚ್ಚುತ್ತಿರುವ ಶೂಲ ಅಥವಾ ಮುಳ್ಳಿನಂತಿದ್ದು ಯೆಹೋವನ ಸೇವೆಯಲ್ಲಿ ಪೌಲನಿಗೆ ಸಿಗುತ್ತಿದ್ದ ಆನಂದವನ್ನು ಕಸಿದುಕೊಳ್ಳುವ ಸಾಧ್ಯತೆಯಿತ್ತು. ಅದು ತನ್ನನ್ನು ಸತತವಾಗಿ ಗುದ್ದುತ್ತಿದೆಯೋ ಎಂಬಂತೆ ಪೌಲನಿಗೆ ಭಾಸವಾಯಿತು. ಆದರೆ ಪೌಲನ ಬೇಡಿಕೆಗೆ ಯೆಹೋವನ ಉತ್ತರ ಹೀಗಿತ್ತು: “ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ.” ಶರೀರದಲ್ಲಿ ನಾಟಿದ್ದ ಆ ಶೂಲವನ್ನು ಯೆಹೋವನು ತೆಗೆದುಹಾಕಲಿಲ್ಲ. ಪೌಲನು ಅದನ್ನು ಸಹಿಸಬೇಕಿತ್ತು. ಆದರೂ ಅವನು ಕೂಡಿಸಿ ಹೇಳಿದ್ದು: “ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.” (2 ಕೊರಿಂ. 12:7-10) ಅವನ ಮಾತಿನ ಅರ್ಥವೇನು?

ಪೌಲನ ಸಮಸ್ಯೆ ಮಾಯವಾಗಲಿಲ್ಲ ನಿಜ. ಆದರೂ ಯೆಹೋವನ ಸೇವೆಯಲ್ಲಿ ಮಹತ್ತ್ವಪೂರ್ಣ ಕೆಲಸಗಳನ್ನು ಮಾಡುವುದರಿಂದ ಇದು ಅವನನ್ನು ತಡೆಯಲಿಲ್ಲ. ಪೌಲನು ಆಸರೆಗಾಗಿ ಯೆಹೋವನ ಮೇಲೆ ಅವಲಂಬಿಸಿ ಸಹಾಯಕ್ಕಾಗಿ ನಿರಂತರವಾಗಿ ಕೇಳಿಕೊಂಡನು. (ಫಿಲಿ. 4:6, 7) ಆದುದರಿಂದಲೇ ಅವನು ತನ್ನ ಭೂಜೀವಿತದ ಕೊನೆಯಷ್ಟಕ್ಕೆ ಹೀಗನ್ನಸಾಧ್ಯವಿತ್ತು: “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.”—2 ತಿಮೊ. 4:7.

ಯೆಹೋವನು ತನ್ನ ಚಿತ್ತವನ್ನು ಪೂರೈಸಲಿಕ್ಕಾಗಿ ಕುಂದುಕೊರತೆಗಳು ಮತ್ತು ಸಮಸ್ಯೆಗಳಿರುವ ಅಪರಿಪೂರ್ಣ ಮಾನವರನ್ನು ಉಪಯೋಗಿಸುತ್ತಾನೆ. ಇದಕ್ಕೆ ಮಾನ ಆತನಿಗೆ ಸಲ್ಲತಕ್ಕದ್ದು. ಯಾಕೆಂದರೆ ಸಂಕಷ್ಟಗಳನ್ನು ನಿಭಾಯಿಸಲು ಮತ್ತು ಆತನ ಸೇವೆಯಲ್ಲಿ ತಮ್ಮ ಆನಂದವನ್ನು ಕಾಪಾಡಿಕೊಳ್ಳಲು ಬೇಕಾದ ಮಾರ್ಗದರ್ಶನ ಹಾಗೂ ವಿವೇಕವನ್ನು ಆತನು ಕೊಡಶಕ್ತನು. ಹೌದು, ಅಪರಿಪೂರ್ಣ ಮಾನವರಿಗೆ ಬಲಹೀನತೆಗಳಿದ್ದರೂ ಅವರಿಂದ ಮಹಾನ್‌ ಕೆಲಸಗಳನ್ನು ಆತನು ಪೂರೈಸಬಲ್ಲನು.

ಪೌಲನು, ತನ್ನ ಶರೀರದಲ್ಲಿ ನಾಟಿದ್ದ ಶೂಲವನ್ನು ದೇವರು ಏಕೆ ತೆಗೆದುಬಿಡಲಿಲ್ಲ ಎಂಬುದನ್ನು ತಿಳಿಸುತ್ತಾ ಅಂದದ್ದು: “ನಾನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂತಲೇ ಇದಾಯಿತು.” (2 ಕೊರಿಂ. 12:7) ಆ “ಶೂಲ,” ಅವನಿಗೆ ಇತಿಮಿತಿಗಳಿವೆ ಎಂಬುದನ್ನು ನೆನಪು ಹುಟ್ಟಿಸುತ್ತಿತ್ತು ಮತ್ತು ದೀನನಾಗಿ ಉಳಿಯುವಂತೆ ಸಹಾಯಮಾಡಿತು. ಇದು ಯೇಸು ಕಲಿಸಿದ ವಿಷಯಕ್ಕೆ ಹೊಂದಿಕೆಯಲ್ಲಿದೆ: “ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.” (ಮತ್ತಾ. 23:12) ಸಂಕಷ್ಟಗಳು ದೇವರ ಸೇವಕರಿಗೆ ದೀನತೆಯನ್ನು ಕಲಿಸಬಲ್ಲವು ಮತ್ತು ನಂಬಿಗಸ್ತಿಕೆಯಿಂದ ತಾಳಿಕೊಳ್ಳಲು ತಾವು ಯೆಹೋವನ ಮೇಲೆ ಆತುಕೊಳ್ಳಬೇಕು ಎಂಬುದನ್ನು ತಿಳಿಯಲು ಸಹಾಯಮಾಡಬಲ್ಲವು. ಹೀಗೆ ಅಪೊಸ್ತಲ ಪೌಲನಂತೆ ಅವರು ಕೂಡ ‘ಯೆಹೋವನಲ್ಲಿ ಹೆಚ್ಚಳಪಡಬಹುದು.’—1 ಕೊರಿಂ. 1:31.

ಮರೆಯಲ್ಲಿರುವ ಬಲಹೀನತೆಗಳು

ಕೆಲವರಿಗೆ ತಮ್ಮಲ್ಲಿರುವ ಬಲಹೀನತೆಗಳ ಬಗ್ಗೆ ತಿಳಿದಿರಲಿಕ್ಕಿಲ್ಲ ಅಥವಾ ತಿಳಿದಿದ್ದರೂ ಅವುಗಳನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಕ್ಕಿಲ್ಲ. ಉದಾಹರಣೆಗೆ ವ್ಯಕ್ತಿಯೊಬ್ಬನು ಅತಿಯಾದ ಆತ್ಮವಿಶ್ವಾಸವುಳ್ಳವನಾಗಿರಬಹುದು ಅಂದರೆ ತನ್ನ ಮೇಲೆಯೇ ಭರವಸೆಯಿಡಬಹುದು. (1 ಕೊರಿಂ. 10:12) ಅಪರಿಪೂರ್ಣ ಮಾನವರಲ್ಲಿ ಸರ್ವಸಾಮಾನ್ಯವಾಗಿರುವ ಇನ್ನೊಂದು ಬಲಹೀನತೆಯು ಪ್ರಖ್ಯಾತಿಯನ್ನು ಗಳಿಸಬೇಕೆಂಬ ಆಸೆಯಾಗಿದೆ.

ರಾಜ ದಾವೀದನ ಸೇನಾಪತಿಯಾಗಿದ್ದ ಯೋವಾಬನು ಧೀರನೂ ದೃಢ ಸ್ವಭಾವದವನೂ ವ್ಯವಹಾರ ಕುಶಲನೂ ಆಗಿದ್ದನು. ಆದಾಗ್ಯೂ ಅವನು ನಡೆಸಿದ ಗಂಭೀರ ದುಷ್ಕೃತ್ಯಗಳು ಅವನಲ್ಲಿದ್ದ ದುರಹಂಕಾರ ಮತ್ತು ಹೆಬ್ಬಯಕೆಯನ್ನು ಬಯಲುಪಡಿಸಿದವು. ಅವನು ಇಬ್ಬರು ಸೇನಾಪತಿಗಳನ್ನು ಬರ್ಬರವಾಗಿ ಕೊಂದುಹಾಕಿದನು. ಮೊದಲು ಅಬ್ನೇರನನ್ನು ಕೊಲ್ಲುವ ಮೂಲಕ ಸೇಡು ತೀರಿಸಿಕೊಂಡನು. ಅನಂತರ ತನ್ನ ಚಿಕ್ಕಮ್ಮನ ಮಗನಾದ ಅಮಾಸನನ್ನು ಮುದ್ದಿಟ್ಟು ವಂದಿಸುವ ನೆಪದಲ್ಲಿ ಬಲಗೈಯಿಂದ ಅವನ ಗಡ್ಡ ಹಿಡಿದು ಎಡಗೈಯಲ್ಲಿದ್ದ ಕತ್ತಿಯಿಂದ ತಿವಿದು ಕೊಂದನು. (2 ಸಮು. 17:25; 20:8-10) ಯೋವಾಬನು ಅಮಾಸನನ್ನು ಕೊಂದದ್ದೇಕೆ? ಏಕೆಂದರೆ ಅವನಿಗೆ ಬದಲಾಗಿ ಅಮಾಸನನ್ನು ಸೇನಾಪತಿಯಾಗಿ ನೇಮಿಸಲಾಗಿತ್ತು. ಈ ಪ್ರತಿಸ್ಪರ್ಧಿಯನ್ನು ಮುಗಿಸಿಬಿಟ್ಟರೆ ತನ್ನ ಸ್ಥಾನವನ್ನು ಪುನಃ ಗಿಟ್ಟಿಸಿಕೊಳ್ಳಬಹುದೆಂಬುದು ಅವನ ಎಣಿಕೆಯಾಗಿತ್ತು. ಸ್ವಾರ್ಥಪರ ಹೆಬ್ಬಯಕೆಯಂಥ ಪ್ರವೃತ್ತಿಗಳನ್ನು ಯೋವಾಬನು ಹತೋಟಿಯಲ್ಲಿಡಲಿಲ್ಲ ಎಂಬುದನ್ನು ನೀವು ಗಮನಿಸಬಹುದು. ತನ್ನ ಅಮಾನುಷ ಕೃತ್ಯಗಳಿಗೆ ಅವನು ಸ್ವಲ್ಪವೂ ಮರುಕಪಡಲಿಲ್ಲ. ರಾಜ ದಾವೀದನ ಅವಸಾನಕಾಲ ಸಮೀಪಿಸಿದಾಗ, ಯೋವಾಬನು ಮಾಡಿದ ದುಷ್ಕೃತ್ಯಗಳಿಗೆ ತಕ್ಕ ಶಾಸ್ತಿ ಮಾಡುವಂತೆ ಅವನು ತನ್ನ ಮಗನಾದ ಸೊಲೊಮೋನನಿಗೆ ಹೇಳಿದನು.—1 ಅರ. 2:5, 6, 29-35.

ತಪ್ಪಾದ ಬಯಕೆಗಳಿಗೆ ನಾವು ಮಣಿಯಲೇಬಾರದು. ನಮ್ಮ ಬಲಹೀನತೆಗಳ ಮೇಲೆ ನಾವು ಹತೋಟಿ ಸಾಧಿಸಬಲ್ಲೆವು. ಹೀಗೆ ಮಾಡಲು ನಾವು ಮೊದಲು ನಮ್ಮ ಬಲಹೀನತೆಗಳನ್ನು ಗುರುತಿಸಿ ಒಪ್ಪಿಕೊಳ್ಳಬೇಕು. ನಂತರ ಅವುಗಳನ್ನು ಜಯಿಸಲು ಕ್ರಮಗೈಯಬೇಕು. ಹೀಗೆ ಮಾಡಲು ಸಹಾಯ ಒದಗಿಸುವಂತೆ ಕ್ರಮವಾಗಿ ಯೆಹೋವನಿಗೆ ಪ್ರಾರ್ಥಿಸಬೇಕು ಮತ್ತು ಆ ಪ್ರವೃತ್ತಿಗಳೊಂದಿಗೆ ಹೋರಾಡುವ ಮಾರ್ಗಗಳನ್ನು ಹುಡುಕಲು ಆತನ ವಾಕ್ಯದ ಶ್ರದ್ಧಾಪೂರ್ವಕ ಅಧ್ಯಯನ ಮಾಡಬೇಕು. (ಇಬ್ರಿ. 4:12) ನಾವು ನಮ್ಮ ಬಲಹೀನತೆಗಳನ್ನು ಜಯಿಸಲು ಪ್ರಯತ್ನಿಸುತ್ತಾ ಇದ್ದು, ಎಂದಿಗೂ ಎದೆಗುಂದಬಾರದು. ನಾವು ಅಪರಿಪೂರ್ಣರಾಗಿರುವಷ್ಟು ಸಮಯ ಈ ಹೋರಾಟ ಮುಗಿಯುವುದಿಲ್ಲ. ಈ ಮಾತು ತನ್ನ ವಿಷಯದಲ್ಲೂ ಸತ್ಯವಾಗಿದೆ ಎನ್ನುತ್ತಾ ಪೌಲನು ಬರೆದದ್ದು: “ಯಾವದನ್ನು ಮಾಡಬೇಕೆಂದು ನಾನು ಇಚ್ಛೈಸುತ್ತೇನೋ ಅದನ್ನು ನಡಿಸದೆ ನನಗೆ ಅಸಹ್ಯವಾದದ್ದನ್ನು ಮಾಡುತ್ತೇನೆ.” ತಾನೇನು ಮಾಡುತ್ತಿದ್ದೇನೋ ಅದು ತನ್ನ ಹತೋಟಿಯಲ್ಲಿಲ್ಲ ಎಂಬ ನೆಪ ಕೊಟ್ಟು ಪೌಲನು ತನ್ನ ಬಲಹೀನತೆಗಳಿಗೆ ಮಣಿಯಲಿಲ್ಲ ಎಂಬುದು ನಿಮಗೆ ತಿಳಿದಿದೆ. ಅದಕ್ಕೆ ಬದಲಾಗಿ ಅವನು, ಯೇಸು ಕ್ರಿಸ್ತನ ಮುಖಾಂತರ ಸಿಗುವ ದೇವರ ಸಹಾಯದ ಮೇಲೆ ಅವಲಂಬಿಸಿ ತನ್ನ ಬಲಹೀನತೆಗಳ ವಿರುದ್ಧ ಹೋರಾಡುತ್ತಾ ಇದ್ದನು. (ರೋಮಾ. 7:15-25) ಇನ್ನೊಂದು ಕಡೆ ಪೌಲನು ಹೇಳಿದ್ದು: “ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.”—1 ಕೊರಿಂ. 9:27.

ಮಾನವರಿಗೆ ತಮ್ಮನ್ನೇ ಸಮರ್ಥಿಸಿಕೊಳ್ಳುವ ಪ್ರವೃತ್ತಿಯಿದೆ. ಅದರ ವಿರುದ್ಧ ಕ್ರಮಗೈಯಲು ನಾವು ಯೆಹೋವನ ನೋಟವನ್ನು ಬೆಳೆಸಿಕೊಂಡು, ಪೌಲನು ಕ್ರೈಸ್ತರಿಗೆ ಹೇಳಿದ ಬುದ್ಧಿವಾದದಂತೆ ‘ಕೆಟ್ಟತನಕ್ಕೆ ಹೇಸಿಕೊಂಡು ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು.’ (ರೋಮಾ. 12:9) ಬಲಹೀನತೆಗಳನ್ನು ಜಯಿಸುವ ಹೋರಾಟದಲ್ಲಿ ನಮಗೆ ಪ್ರಾಮಾಣಿಕತೆ, ಪಟ್ಟುಹಿಡಿಯುವಿಕೆ ಮತ್ತು ಸ್ವಶಿಸ್ತು ಅಗತ್ಯ. ದಾವೀದನು ದೇವರಲ್ಲಿ ಕೇಳಿದ್ದು: “ನನ್ನ ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸು.” (ಕೀರ್ತ. 26:2) ದೇವರು ನಮ್ಮ ಅಂತರಾಳದ ಅನಿಸಿಕೆಗಳನ್ನು ನಿಖರವಾಗಿ ಅಳೆಯಬಲ್ಲನು ಮತ್ತು ಅಗತ್ಯವಿರುವಾಗ ಸಹಾಯವನ್ನೂ ಒದಗಿಸಬಲ್ಲನು. ಯೆಹೋವನು ತನ್ನ ವಾಕ್ಯ ಮತ್ತು ಪವಿತ್ರಾತ್ಮದ ಮೂಲಕ ಒದಗಿಸುವ ಮಾರ್ಗದರ್ಶನವನ್ನು ಅನುಸರಿಸುವಲ್ಲಿ ನಮ್ಮ ಕುಂದುಕೊರತೆಗಳನ್ನು ಜಯಿಸುವ ನಿಟ್ಟಿನಲ್ಲಿ ಪ್ರಗತಿ ಮಾಡಬಲ್ಲೆವು.

ಕೆಲವರು ಸಮಸ್ಯೆಗಳನ್ನು ಸ್ವತಃ ನಿಭಾಯಿಸಲು ಅಶಕ್ತರಾದಾಗ ಚಿಂತಾಕ್ರಾಂತರಾಗಬಹುದು. ಅಂಥವರಿಗೆ ಸಭೆಯ ಹಿರಿಯರು ಪ್ರೀತಿಪೂರ್ವಕ ಸಹಾಯ ಮತ್ತು ಉತ್ತೇಜನ ಕೊಡಶಕ್ತರು ನಿಜ. (ಯೆಶಾ. 32:1, 2) ಆದರೆ ವಾಸ್ತವಿಕ ನಿರೀಕ್ಷಣೆಗಳನ್ನಿಡುವುದು ವಿವೇಕಯುತ. ಕೆಲವೊಂದು ಸಮಸ್ಯೆಗಳಿಗೆ ಈ ವಿಷಯಗಳ ವ್ಯವಸ್ಥೆಯಲ್ಲಿ ಶಾಶ್ವತ ಪರಿಹಾರ ದೊರೆಯಲಾರದು. ಆದಾಗ್ಯೂ ಅನೇಕರು ಸಮಸ್ಯೆಗಳನ್ನು ನಿಭಾಯಿಸಲು ಕಲಿತಿದ್ದಾರೆ ಮತ್ತು ಸಂತೃಪ್ತ ಜೀವನವನ್ನು ನಡೆಸುವಂತೆ ಇದು ಅವರಿಗೆ ಸಹಾಯಮಾಡಿದೆ.

ಯೆಹೋವನ ಬೆಂಬಲದ ಖಾತ್ರಿ

ಈ ಕಷ್ಟಕರ ಸಮಯಗಳಲ್ಲಿ ಯಾವುದೇ ಸಮಸ್ಯೆಗಳು ಬರಲಿ ಯೆಹೋವನು ನಮಗೆ ಮಾರ್ಗದರ್ಶನವನ್ನೂ ಶಕ್ತಿಯನ್ನೂ ಕೊಡುವನೆಂಬ ನಿಶ್ಚಯ ನಮಗಿರಬಲ್ಲದು. ಬೈಬಲ್‌ ನಮ್ಮನ್ನು ಪ್ರೇರಿಸುವುದು: “ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು. ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:6, 7.

ಹಲವಾರು ವರ್ಷಗಳಿಂದ ಬೆತೆಲ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಕ್ಯಾಥಿಗೆ ತನ್ನ ಗಂಡನಿಗೆ ಅಲ್ಜೈಮರ್ಸ್‌ ರೋಗವಿದೆ ಎಂದು ತಿಳಿದುಬಂದಾಗ ಎದುರಾಗಲಿದ್ದ ಸಂಕಷ್ಟಗಳನ್ನು ತಾನು ತಾಳಿಕೊಳ್ಳಲಾರೆ ಎಂದನಿಸಿತು. ವಿವೇಕ ಮತ್ತು ಭಾವನಾತ್ಮಕ ಬಲ ಕೊಡುವಂತೆ ಯೆಹೋವನಲ್ಲಿ ಬೇಡಿಕೊಳ್ಳುವುದು ದಿನನಿತ್ಯದ ಅವಶ್ಯಕತೆಯಾಗಿ ಬಿಟ್ಟಿತ್ತು. ಅವಳ ಗಂಡನ ಸ್ಥಿತಿ ಕ್ರಮೇಣ ಕ್ಷೀಣಿಸುತ್ತಾ ಹೋದಂತೆ ಪ್ರೀತಿಭರಿತ ಸಹೋದರರು ಆ ರೋಗವನ್ನು ನಿಭಾಯಿಸುವುದು ಹೇಗೆಂಬುದರ ಬಗ್ಗೆ ಮಾಹಿತಿ ಕಲೆಹಾಕಿ ಅವರಿಗೆ ಸಹಾಯ ಮಾಡಲು ಸಮಯ ವ್ಯಯಿಸಿದರು. ಕಾಳಜಿಭರಿತ ಸಹೋದರಿಯರು ಭಾವನಾತ್ಮಕ ಬೆಂಬಲ ಕೊಟ್ಟರು. ಈ ಕ್ರೈಸ್ತರು ಯೆಹೋವನು ಒದಗಿಸಿದ ಬಲವರ್ಧಕ ಬೆಂಬಲದ ಭಾಗವಾಗಿದ್ದರು. ಹೀಗೆ ಕ್ಯಾಥಿ 11 ವರ್ಷಗಳ ವರೆಗೆ ಅಂದರೆ ತನ್ನ ಗಂಡ ಕೊನೆಯುಸಿರೆಳೆಯುವ ತನಕ ಅವನ ಆರೈಕೆ ಮಾಡಲು ಶಕ್ತಳಾದಳು. ಅವಳನ್ನುವುದು: “ಯೆಹೋವನು ಕೊಟ್ಟ ಸಹಾಯಕ್ಕಾಗಿ ನಾನು ಕಂಬನಿಗರೆಯುತ್ತಾ ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸಿದೆ; ಮುಂದೆ ಸಾಗಲು ಇದು ನನಗೆ ತ್ರಾಣ ಕೊಟ್ಟಿತು. ನಾನು ದಣಿದು ಬಲಹೀನಳಾಗಿದ್ದರೂ, ನನ್ನ ಜವಾಬ್ದಾರಿಗಳನ್ನು ಇಷ್ಟೊಂದು ದೀರ್ಘ ಸಮಯ ಪೂರೈಸಲು ಶಕ್ತಳಾಗುವೆನೆಂದು ನೆನಸಲೇ ಇಲ್ಲ!”

ಮರೆಯಲ್ಲಿರುವ ಬಲಹೀನತೆಗಳನ್ನು ಜಯಿಸಲು ಸಹಾಯ

ಅಯೋಗ್ಯರೆಂಬ ಅನಿಸಿಕೆಯುಳ್ಳವರು, ಆಪತ್ಕಾಲದಲ್ಲಿ ಯೆಹೋವನಿಗೆ ಮೊರೆಯಿಟ್ಟರೆ ಆತನು ತಮಗೆ ಕಿವಿಗೊಡನು ಎಂದು ನೆನಸುತ್ತಾರೆ. ಅಂಥ ಸಂದರ್ಭಗಳಲ್ಲಿ, ದಾವೀದನು ಬತ್ಷೆಬಳೊಂದಿಗೆ ಎಸಗಿದ ಗಂಭೀರ ಪಾಪಕ್ಕಾಗಿ ಮರುಗಿದಾಗ ಹೇಳಿದ ಈ ಮಾತುಗಳನ್ನು ಪರಿಗಣಿಸುವುದು ಒಳ್ಳೇದು: “ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.” (ಕೀರ್ತ. 51:17) ದಾವೀದನು ಯಥಾರ್ಥ ಮನಸ್ಸಿನಿಂದ ಪಶ್ಚಾತ್ತಾಪಪಟ್ಟನು. ಅಲ್ಲದೆ ತಾನು ದೇವರನ್ನು ಸಮೀಪಿಸಸಾಧ್ಯವಿದೆ ಮತ್ತು ಆತನು ಖಂಡಿತ ಕರುಣೆ ತೋರಿಸುವನೆಂಬ ಭರವಸೆ ಅವನಿಗಿತ್ತು. ಯೆಹೋವನ ಕಾಳಜಿಭರಿತ ಮನೋಭಾವವನ್ನು ಯೇಸು ಪ್ರತಿಫಲಿಸಿದನು. ಸುವಾರ್ತಾ ಲೇಖಕನಾದ ಮತ್ತಾಯನು ಯೆಶಾಯನ ಈ ಮಾತುಗಳನ್ನು ಯೇಸುವಿಗೆ ಅನ್ವಯಿಸಿದನು: ‘ಜಜ್ಜಿದ ದಂಟನ್ನು ಮುರಿದುಹಾಕನು ಮತ್ತು ಆರಿಹೋಗುತ್ತಿರುವ ದೀಪವನ್ನು ನಂದಿಸದಿರುವನು.’ (ಮತ್ತಾ. 12:20; ಯೆಶಾ. 42:3) ಭೂಮಿಯಲ್ಲಿರುವಾಗ ಯೇಸು ದೀನದಲಿತರಿಗೆ ಕನಿಕರ ತೋರಿಸಿದನು. ಇನ್ನೇನು ಆರಿಹೋಗಲಿದ್ದ ಎಣ್ಣೇ ದೀಪದಂತಿದ್ದ ವ್ಯಕ್ತಿಗಳ ಜೀವದ ಕಿಡಿಯನ್ನು ಅವನು ನಂದಿಸಲಿಲ್ಲ. ಅದಕ್ಕೆ ಬದಲಾಗಿ ಕಷ್ಟದಿಂದ ಬಳಲಿ ಬೆಂಡಾದವರಲ್ಲಿ ಜೀವದ ಜ್ವಾಲೆ ಪುನಃ ಹೊತ್ತಿ ಉರಿಯುವಂತೆ ಕೋಮಲತೆಯಿಂದ ಪರಾಮರಿಸಿದನು. ಭೂಮಿಯಲ್ಲಿದ್ದಾಗ ಯೇಸು ಹಾಗಿದ್ದನು. ಆತನು ಈಗಲೂ ಹಾಗೆಯೇ ಇದ್ದಾನೆ ಮತ್ತು ನಿಮ್ಮ ಬಲಹೀನತೆಗಳನ್ನು ಅರ್ಥಮಾಡಿಕೊಳ್ಳಶಕ್ತನೆಂದು ನೀವು ನಂಬುವುದಿಲ್ಲವೋ? ಆತನು “ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ” ಎಂದು ಇಬ್ರಿಯ 4:15 ಹೇಳುವುದನ್ನು ಗಮನಿಸಿ.

ಪೌಲನು ತನ್ನ ‘ಶರೀರದಲ್ಲಿ ನಾಟಿದ್ದ ಶೂಲದ’ ಬಗ್ಗೆ ಬರೆಯುವಾಗ ಕ್ರಿಸ್ತನ ಬಲವು ತನ್ನಲ್ಲಿ ‘ನೆಲೆಸಿಕೊಂಡಿದೆ’ ಅಥವಾ ಮೂಲಭಾಷೆಯಲ್ಲಿ ತಿಳಿಸಿರುವ ಹಾಗೆ ಒಂದು ಗುಡಾರದೋಪಾದಿ ತನ್ನನ್ನು ಆವರಿಸಿಕೊಂಡಿದೆ ಎಂದು ಹೇಳಿದನು. (2 ಕೊರಿಂ. 12:7-9) ಗುಡಾರದೊಳಗಿರುವ ಒಬ್ಬ ವ್ಯಕ್ತಿ ಗಾಳಿ ಮಳೆ ಮುಂತಾದವುಗಳಿಂದ ಸುರಕ್ಷಿತನಾಗಿರುವಂತೆ ಪೌಲನು ಕ್ರಿಸ್ತನ ಮುಖಾಂತರ ದೇವರ ಸಂರಕ್ಷಣೆಯನ್ನು ಅನುಭವಿಸಿದನು. ಪೌಲನಂತೆ ನಾವು ಕೂಡ ಬಲಹೀನತೆಗಳು ಮತ್ತು ಸಮಸ್ಯೆಗಳಿಗೆ ಮಣಿಯಬಾರದು. ಯೆಹೋವನು ತನ್ನ ಭೌಮಿಕ ಸಭೆಯ ಮೂಲಕ ಮಾಡುವ ಎಲ್ಲಾ ಏರ್ಪಾಡುಗಳನ್ನು ಸದುಪಯೋಗಿಸುತ್ತಾ ನಾವು ಆಧ್ಯಾತ್ಮಿಕವಾಗಿ ಬಲವಾಗಿರಬಹುದು. ನಮ್ಮಿಂದಾದದ್ದೆಲ್ಲವನ್ನು ಮಾಡಿದ ನಂತರ ನಮ್ಮ ಹೆಜ್ಜೆಗಳನ್ನು ಯೆಹೋವನು ಮಾರ್ಗದರ್ಶಿಸುವನೆಂಬ ಪೂರ್ಣ ಭರವಸೆಯಿಂದ ಆತನೆಡೆಗೆ ನೋಡಬಲ್ಲೆವು. ಯೆಹೋವನ ಬಲವು ನಮ್ಮ ಬಲಹೀನತೆಗಳನ್ನು ಹೇಗೆ ಸರಿದೂಗಿಸುತ್ತದೆಂಬುದನ್ನು ನಾವು ಸ್ವತಃ ನೋಡುವಾಗ ಪೌಲನಂತೆ ನಾವೂ ಹೀಗೆ ಹೇಳಶಕ್ತರಾಗುವೆವು: “ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.”—2 ಕೊರಿಂ. 12:10.

[ಪುಟ 3ರಲ್ಲಿರುವ ಚಿತ್ರ]

ಪೌಲನು ತನ್ನ ಶುಶ್ರೂಷೆಯನ್ನು ಪೂರೈಸಲು ಮಾರ್ಗದರ್ಶನಕ್ಕಾಗಿ ಸತತವಾಗಿ ಯೆಹೋವನಿಗೆ ಪ್ರಾರ್ಥಿಸಿದನು

[ಪುಟ 5ರಲ್ಲಿರುವ ಚಿತ್ರ]

ರಾಜ ದಾವೀದನು ಯೋವಾಬನನ್ನು ಸೇನಾಪತಿಯಾಗಿ ನೇಮಿಸಿದನು

[ಪುಟ 5ರಲ್ಲಿರುವ ಚಿತ್ರ]

ಯೋವಾಬನು ತನ್ನ ಪ್ರತಿಸ್ಪರ್ಧಿಯಾದ ಆಮಾಸನನ್ನು ಮುಗಿಸಿಬಿಟ್ಟನು

[ಪುಟ 6ರಲ್ಲಿರುವ ಚಿತ್ರ]

ನಮ್ಮ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುವ ಶಾಸ್ತ್ರಾಧಾರಿತ ಮಾರ್ಗದರ್ಶನವನ್ನು ಹಿರಿಯರು ಪ್ರೀತಿಯಿಂದ ಕೊಡುತ್ತಾರೆ